ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಅಕ್ಟೋಬರ್ 2015 > ಗ್ರಂಥಾಂತರಂಗ

ಗ್ರಂಥಾಂತರಂಗ

ಪಾರಮಾರ್ಥಿಕ ಪದಕೋಶ’

ಸಂಸ್ಕೃತದಲ್ಲಿಯೂ ಕನ್ನಡ ಮೊದಲಾದ ಭಾಷೆಗಳಲ್ಲಿಯೂ ನಿಘಂಟುರಚನೆಗೆ ಹಲವು ಶತಮಾನಗಳ ಇತಿಹಾಸವಿದೆ. ಬಹುಸಂಖ್ಯೆಯ ನಿಘಂಟುಗಳು ಒಂದಾನೊಂದು ಭಾಷೆಯ ಹೆಚ್ಚಿನ ಶಬ್ದಗಳನ್ನು ಒಂದೆಡೆ ಪರಿಚಯ ಮಾಡಿಕೊಡುವ ಉದ್ದೇಶದವು. ಆದರೆ ಒಂದೊಂದು ಜ್ಞಾನಾಂಗವೂ ಅತ್ಯಂತ ವಿಸ್ತಾರವೂ ಸಂಕೀರ್ಣವೂ ಆಗಿರುವುದರಿಂದ ಆಯಾ ಜ್ಞಾನಾಂಗಕ್ಕೇ ವಿಶೇಷವಾದ ಪರಿಭಾಷೆ ಬೆಳೆದಿರುತ್ತದೆ. ಇಂತಹ ಎಲ್ಲ ಪಾರಿಭಾಷಿಕ ಶಬ್ದಗಳನ್ನೂ ಸಾಮಾನ್ಯ ನಿಘಂಟುವಿನಲ್ಲಿ ಅಳವಡಿಸುವುದು ದುಃಸಾಧ್ಯ. ಹಾಗೆ ಮಾಡಿದಲ್ಲಿ ನಿಘಂಟುವಿನ ಮೂಲೋದ್ದೇಶವಾದ ಸಾರ್ವಜನಿಕ ಉಪಯುಕ್ತತೆಗೆ ಭಂಗ ಬರಲೂಬಹುದು. ಹೀಗಾಗಿ ಸಾಮಾನ್ಯವರ್ಗದ ನಿಘಂಟುಗಳಲ್ಲಿ ಪ್ರತ್ಯೇಕ ಜ್ಞಾನಾಂಗಗಳಿಗೆ ಸಂಬಂಧಿಸಿದ ಪ್ರಮುಖವಾದ ಮತ್ತು ವ್ಯಾಪಕ ಬಳಕೆಯಲ್ಲಿರುವ ಪಾರಿಭಾಷಿಕ ಶಬ್ದಗಳನ್ನಷ್ಟೆ ಸೇರ್ಪಡೆಗೊಳಿಸುವುದರ ವ್ಯವಹಾರ್‍ಯತೆಯನ್ನು ಅಲ್ಲಗಳೆಯಲಾಗದು. ಈ ದೃಷ್ಟಿಯಿಂದಲೇ ಪ್ರತ್ಯೇಕ ಶಾಸ್ತ್ರಗಳನ್ನು ಅನುಲಕ್ಷಿಸಿದ ವಿಶಿಷ್ಟ ಕ್ಷೇತ್ರೀಯ ನಿಘಂಟುಗಳ ಆವಶ್ಯಕತೆ ಇರುವುದು. ಕನ್ನಡದಲ್ಲಿಯೆ ತದ್ಭವಗಳ ರೂಪವನ್ನು ನಿರ್ದೇಶಿಸಿರುವವು, ಜೀವಶಾಸ್ತ್ರಶಬ್ದಗಳನ್ನು ತಿಳಿಸುವವು, ವೈದ್ಯಕೀಯಶಾಸ್ತ್ರಸಂಬಂಧಿಯಾದವು, ವಿಜ್ಞಾನಶಬ್ದಗಳ ಅರ್ಥವನ್ನು ನೀಡುವವು – ಇಂತಹವು ರಚಿತವಾಗಿವೆ. ಇವಲ್ಲದೆ ಪುರಾಣನಾಮಚೂಡಾಮಣಿ, ಪುರಾಣಕೋಶ, ಕುಮಾರವ್ಯಾಸ ಭಾರತ ನಿಘಂಟು – ಈ ರೀತಿಯ ವಿಶಿಷ್ಟಸ್ವರೂಪದ ಕೋಶಗಳೂ ರಚಿತವಾಗಿ ಜನಪ್ರಿಯವಾಗಿವೆ.

ಷಡ್‌ದರ್ಶನಗಳಿಗೆ ಸಂಬಂಧಿಸಿದ ವಾಙ್ಮಯವು ಅತ್ಯಂತ ವಿಸ್ತಾರವಾದುದು. ಒಂದೊಂದು ದರ್ಶನವೂ ವಿಸ್ತಾರಗೊಂಡಂತೆಲ್ಲ ಅದರ ಪರಿಭಾಷೆಯೂ ಹೆಚ್ಚುಹೆಚ್ಚು ವಿಸ್ತಾರವೂ ಸಂಕೀರ್ಣವೂ ಆಗುತ್ತಹೋಗುವುದು ಸಹಜ. ವಿಶಿಷ್ಟ ಪದಗಳೂ ಪದಸಮೂಹಗಳೂ ಒಂದೊಂದು ಶಾಸ್ತ್ರದಲ್ಲಿ ವಿಶೇಷ ಅರ್ಥಗಳನ್ನು – ಎಂದರೆ ಕೇವಲ ಶಾಬ್ದಿಕಾರ್ಥದಿಂದ ಭಿನ್ನವಾದ ಪ್ರತ್ಯೇಕ ಅರ್ಥಗಳನ್ನು – ಪಡೆದುಕೊಂಡಿರುತ್ತವೆ. ಆಯಾ ದರ್ಶನದ ಅಭ್ಯಾಸವನ್ನು ಆಗತಾನೇ ಪ್ರವೇಶಿಸಿರುವವರಿಗೆ ಈ ವಿಶಿಷ್ಟಾರ್ಥಗಳ ಗ್ರಹಿಕೆ ಆಗಿರುವುದಿಲ್ಲ. ಈ ಹಂತದಲ್ಲಿ ಆ ಪ್ರತ್ಯೇಕ ಜ್ಞಾನಾಂಗಕ್ಕೇ ಮೀಸಲಾದ ಕೋಶಗಳು ಉಪಕಾರಕವಾಗುತ್ತವೆ. ಈ ಪರಿಗಣನೆಯಿಂದ ಸ್ಫುರಿತವಾಗುವವು ಪ್ರತ್ಯೇಕ ಶಾಸ್ತ್ರಕ್ಷೇತ್ರದ ಪಾರಿಭಾಷಿಕ ಕೋಶಗಳು. ವೇದಾಂತದರ್ಶನವಂತೂ ದರ್ಶನಗಳಲ್ಲಿ ಪ್ರಾಮುಖ್ಯ ಪಡೆದಿರುವುದು. ಹೀಗೆ ಈ ದರ್ಶನದ ಅಭ್ಯಾಸಿಗಳ ಸಂಖ್ಯೆಯು ಉಳಿದ ದರ್ಶನಗಳದ್ದಕ್ಕಿಂತ ಮಿಗಿಲಾಗಿದೆ. ಸಾಮಾನ್ಯ ವಾಚಕಸಮುದಾಯದಲ್ಲಿಯೂ ಅಧ್ಯಾತ್ಮಾಸಕ್ತರ ಪರಿಮಾಣವು ಗಣನೀಯವಾಗಿದೆ. ಹೀಗೆ ಈ ಕ್ಷೇತ್ರಕ್ಕೇ ಸಂಬಂಧಿಸಿದ ಪ್ರತ್ಯೇಕ ಪಾರಿಭಾಷಿಕ ಕೋಶಗಳ ಆವಶ್ಯಕತೆ ಇದೆ.

ಈ ಕೊರತೆಯನ್ನು ತುಂಬುವ ಒಂದು ಶ್ಲಾಘನೀಯ ಕೃತಿ ಇದೀಗ ಪ್ರಕಟಗೊಂಡಿರುವ ‘ಪಾರಮಾರ್ಥಿಕ ಪದಕೋಶ’. ಇದು ತೆಲುಗು ಮೂಲದ ಗ್ರಂಥ. ತೆಲುಗಿನ ಮೂಲಲೇಖಕರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರತಿಷ್ಠಿತರಾದ ಡಾ|| ಪೊತ್ತೂರಿ ವೆಂಕಟೇಶ್ವರರಾವು. ಇದನ್ನು ಕನ್ನಡಕ್ಕೆ ಅನುವಾದಿಸಿರುವವರು ಖ್ಯಾತ ಇತಿಹಾಸಜ್ಞರೂ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರೂ ಆದ ಡಾ|| ಆರ್. ಶೇಷಶಾಸ್ತ್ರೀ ಮತ್ತು ‘ಸಪ್ತಗಿರಿ’ ಮಾಸಪತ್ರಿಕೆಯ ಸಂಪಾದಕೀಯ ವರ್ಗದ ಶ್ರೀ ಬಿ.ಎನ್. ಶ್ರೀನಿವಾಸನ್. ಕನ್ನಡ ಆವೃತ್ತಿಯ ಉಪಯುಕ್ತತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಅನುವಾದಕರು ಹಲವು ಸುಧಾರಣೆಗಳನ್ನು ಅಳವಡಿಸಿದ್ದಾರೆ. ಮೂಲ ತೆಲುಗು ಕೃತಿ ಈಗಾಗಲೇ ಎರಡು ಆವೃತ್ತಿಗಳನ್ನು ಕಂಡಿರುವುದು ಅದರ ಉಪಯುಕ್ತತೆಯನ್ನು ಸಾಕ್ಷ್ಯಪಡಿಸಿದೆ.

ಮೊದಲಿಗೇ ನಿವೇದಿಸಬೇಕಾದ ಸಂಗತಿಯೆಂದರೆ ಈ ಜಟಿಲವಾದ ಕೃತಿಯನ್ನು ಅನುವಾದಕರು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂಬುದು. ಕನ್ನಡದಲ್ಲಿರುವುದು ಅನುವಾದಿತವೆಂಬ ಭಾವನೆ ಎಲ್ಲಿಯೂ ಉಂಟಾಗದಷ್ಟು ಸಹಜವಾಗಿ ಅನುವಾದಕಾರ್ಯವನ್ನು ಮಾಡಲಾಗಿದೆ. ಇದಕ್ಕಾಗಿ ಡಾ|| ಆರ್. ಶೇಷಶಾಸ್ತ್ರೀ ಮತ್ತು ಶ್ರೀ ಬಿ.ಎನ್. ಶ್ರೀನಿವಾಸನ್ ಸರ್ವಥಾ ಅಭಿನಂದನೀಯರಾಗಿದ್ದಾರೆ.

ಈಗ ಮೂಲಕೃತಿಯನ್ನು ಕುರಿತು ಒಂದೆರಡು ಅನಿಸಿಕೆಗಳನ್ನು ವ್ಯಕ್ತಮಾಡಬಹುದು. ಸಾಮಾನ್ಯವಾಗಿ ಇಂತಹ ಶಬ್ದಕೋಶಗಳಲ್ಲಿ ಇರದ ಹಲವು ಪೂರಕ ಸಾಮಗ್ರಿಗಳಿಂದ ಈ ನಿಘಂಟುವಿನ ಉಪಯುಕ್ತತೆ ಹೆಚ್ಚಿದೆ. ಪದಕೋಶ ಭಾಗಕ್ಕೆ ಪೂರಕವಾಗಿ ವೈದಿಕಧರ್ಮ, ಜೈನಧರ್ಮ, ಬೌದ್ಧಧರ್ಮ, ಸಿಖ್‌ಮತ, ಯಹೂದ್ಯಮತ, ಕ್ರೈಸ್ತಮತ, ಇಸ್ಲಾಂಮತ – ಇವುಗಳ ಸಂಕ್ಷಿಪ್ತ ಪರಿಚಯಗಳನ್ನು ಅನುಬಂಧಗಳಾಗಿ ನೀಡಲಾಗಿದೆ. ಇದು ಅಭ್ಯಾಸಿಗಳಿಗೆ ಅತ್ಯಂತ ಉಪಕಾರಕಗಳಾಗಿವೆ. ಇವುಗಳಲ್ಲದೆ ‘ಮುದ್ರೆಗಳು, ಯಂತ್ರಗಳು, ಚಕ್ರಗಳು, ರಕ್ಷೆಗಳು’ ಎಂಬ ಸಚಿತ್ರ ಅನುಬಂಧವು ವಿಶೇಷ ಗಮನ ಸೆಳೆಯುತ್ತದೆ. ಮೇಲಣ ಪ್ರಮುಖ ಮತಗಳ ಪ್ರಾಕಾರಕ್ಕೆ ಹೊರತಾದ ಅಜ್ಞೇಯತಾವಾದ, ಪ್ರಕೃತ್ಯಾರಾಧನೆ, ಚೀನೀ ಮೂಲದ ತಾವೋಯಿಸಂ ಮೊದಲಾದ ಪ್ರಸ್ಥಾನಗಳನ್ನು ಪರಿಚಯಿಸುವ ಪ್ರತ್ಯೇಕ ಅನುಬಂಧ ಇದೆ. ಇದಲ್ಲದೆ ಸಾಮಾನ್ಯವಾಗಿ ಸಾರ್ವಜನಿಕ ಪ್ರಚಾರದಿಂದ ದೂರ ಉಳಿಯುವ ಇಂದ್ರಿಯಾತೀತ ಸಂವಹನ, ಸ್ಪರ್ಶತಂತ್ರ ಮತ್ತಿತರ ಅಸಾಮಾನ್ಯ ಚಿಕಿತ್ಸಾವಿಧಾನಗಳು, ಸಾಮುದ್ರಿಕ ಜ್ಯೌತಿಷಾದಿಗಳು – ಇವನ್ನು ಕುರಿತ ‘ರಹಸ್ಯ ಜ್ಞಾನ’ ಎಂಬ ಶೀರ್ಷಿಕೆಯ ಉಪಯುಕ್ತ ಅನುಬಂಧವನ್ನೂ ಮೂಲಲೇಖಕರು ನೀಡಿದ್ದಾರೆ.

ಪದಕೋಶ ಭಾಗದಲ್ಲಿ ವಿವಿಧ ದರ್ಶನಗಳ ಮತ್ತು ಉಪಾಸನಾಮಾರ್ಗಗಳ ಸಂದರ್ಭದಲ್ಲಿ ಬಳಕೆಯಾಗುವ ಪ್ರಸಿದ್ಧ ಹಾಗೂ ವಿರಳ ಶಬ್ದಗಳ ವಿವರಣೆಯನ್ನು ನೀಡಲಾಗಿದೆ. ಸಾಮಾನ್ಯ ಬಳಕೆಯ ಗ್ರಂಥಗಳಲ್ಲಿ ಲಭ್ಯವಿರದ ಚತುಷ್ಷಷ್ಟಿ ತಂತ್ರಗಳು, ದಗ್ಧ ತಿಥಿಗಳು ಮೊದಲಾದ ಜ್ಯೌತಿಷ ವಿವರಗಳು, ಗಾಯತ್ರೀ ಮುದ್ರೆಗಳು, ಬೀಜಾಕ್ಷರಗಳು – ಇಂತಹ ಹತ್ತಾರು ಮಾಹಿತಿಗಳು ಈ ಪದಕೋಶದ ವೈಶಿಷ್ಟ್ಯಗಳಾಗಿವೆ. ಅಧ್ಯಾತ್ಮಾಸಕ್ತರಲ್ಲಿಯೂ ಹೆಚ್ಚಿನವರಿಗೆ ಪರಿಚಿತವಲ್ಲದ ‘ಮಹಾಪುರುಷೀಯ ಸಂಪ್ರದಾಯ’ (ಇದು ಈಶಾನ್ಯ ಭಾರತದಲ್ಲಿ ಪ್ರಚಲಿತವಿದೆ) ಮೊದಲಾದವೂ ಸವಿವರವಾಗಿ ಇಲ್ಲಿ ಉಲ್ಲೇಖಗೊಂಡಿವೆ.

ಇಷ್ಟು ಶ್ರಮಪೂರ್ವಕ ಸಿದ್ಧಗೊಂಡಿರುವ ಕೋಶವು ಇನ್ನಷ್ಟು ಪಾಂಕ್ತವಾಗಲೆಂದು ಅನಿಸುವುದು ಸಹಜ. ಪಾರಮಾರ್ಥಿಕ ಕ್ಷೇತ್ರಕ್ಕೇ ಮೀಸಲಾದ ಅನ್ಯಕೋಶಗಳು ಕನ್ನಡದಲ್ಲಿ ಲಭ್ಯವಿಲ್ಲದಿರುವ ಹಿನ್ನೆಲೆಯಲ್ಲಿ ಈಗಾಗಲೆ ಹೊರಬಂದಿರುವ ಈ ಕೋಶವು ಇನ್ನಷ್ಟು ಪುಷ್ಟಿಗೊಳ್ಳಲೆಂಬ ಅಪೇಕ್ಷೆ ಮೂಡುವುದು ಸಹಜವಾಗಿದೆ. ಈ ದೃಷ್ಟಿಯಿಂದ ಒಂದೆರಡು ಪರಿಷ್ಕರಣಸಾಧ್ಯತೆಗಳನ್ನು ಇಲ್ಲಿ ಸೂಚಿಸಬಹುದು.

ಪಾರಿಭಾಷಿಕವಲ್ಲದ ಅನೇಕ ಶಬ್ದಗಳ ಪ್ರಸ್ತಾವ ಬಂದಿದೆ: ಕದಳೀಫಲ, ಆಚಂದ್ರತಾರಕ, ಇತಿಕರ್ತವ್ಯ ಮೂಢ, ಪ್ರಾತಃಸ್ಮರಣೀಯರು, ಇತ್ಯಾದಿ. ವಿಶೇಷಾರ್ಥವಿಲ್ಲದ ಇಂತಹ ಶಬ್ದಗಳು ಸಾಮಾನ್ಯ ನಿಘಂಟುಗಳಲ್ಲಿ ಇರುತ್ತವೆ; ಪಾರಮಾರ್ಥಿಕ ಕೋಶದಲ್ಲಿ ಪಾರಿಭಾಷಿಕವಲ್ಲದ ಇಂತಹ ಶಬ್ದಗಳ ಆವಶ್ಯಕತೆ ಇಲ್ಲ.

ಹಲವು ಶಬ್ದಗಳಲ್ಲಿ ಸ್ಕಾಲಿತ್ಯವಿದೆ: ‘ಪ್ರಾಗ್ಭಾವ’ (ಪ್ರಾಗಭಾವ ಎಂದಿರಬೇಕು); ‘ವರಿವಸ್ಯ’ (ವರಿವಸ್ಯಾ ಎಂದಿರಬೇಕು); ‘ಪಾಟಿಮೋಕ್ಖ’ (ಪಾತಿಮೋಕ್ಖ ಎಂದಿರಬೇಕು).

‘ಅಂತಃಶತ್ರುಗಳು’; ‘ಅಂತಶ್ಶತ್ರುಗಳು’ – ಇದು ಒಂದೇ ಶಬ್ದವಾಗಿದ್ದು, ಶಬ್ದರೂಪಾಂತರವನ್ನು ಪ್ರತ್ಯೇಕವಾಗಿ ಕೊಡುವ ಆವಶ್ಯಕತೆ ಇಲ್ಲ.

ಕೆಲವು ಶಬ್ದಗಳಡಿಯಲ್ಲಿ ಮೂಲ ಅರ್ಥವಿಲ್ಲದೆ ನಿಷ್ಪನ್ನ ಅರ್ಥಗಳನ್ನಷ್ಟೆ ಕೊಟ್ಟಿದೆ. ಉದಾಹರಣೆ: ‘ಮೈತ್ರಾವರುಣ’. ಇದರ ಮೂಲದ ಯಮಳದೇವತೆಗಳ ಪ್ರಸ್ತಾವ ಬಂದಿಲ್ಲ; ಅಗಸ್ತ್ಯ ಇತ್ಯಾದಿ ವಿಸ್ತೃತಾರ್ಥವನ್ನು ಮಾತ್ರ ಕೊಟ್ಟಿದೆ. ಅಂತೆಯೇ ‘ಅಕ್ಷಯತೃತೀಯಾ’ ಅಡಿಯಲ್ಲಿ ಕೃತಯುಗಾರಂಭ ಮೊದಲಾದ ಮೂಲ ಅರ್ಥದ ಪ್ರಸ್ತಾವವಿಲ್ಲ; ಈಗಿನ ಜನಬಳಕೆಯನ್ನಷ್ಟೆ ಸೂಚಿಸಲಾಗಿದೆ. ಹಲವಾರೆಡೆ ಹೀಗೆ ಇದೆ. ಇನ್ನೊಂದು ನಿದರ್ಶನ: ‘ಅಪವಾದ’ ಎಂಬುದಕ್ಕೆ ‘ತಪ್ಪು ಮಾಡದೆ ಬರುವ ನಿಂದೆ’ ಎಂಬ ಸಾಮಾನ್ಯಾರ್ಥವನ್ನು ಮಾತ್ರ ಕೊಡಲಾಗಿದೆ. ವಾಸ್ತವವಾಗಿ ವೇದಾಂತಶಾಸ್ತ್ರದಲ್ಲಿ ‘ಅಧ್ಯಾರೋಪ’ ಎಂಬುದರೊಡಗೂಡಿ ಬರುವ ಪಾರಿಭಾಷಿಕ ಶಬ್ದ ‘ಅಪವಾದ’. ಕಲ್ಪಿತ ಅಧಿಷ್ಠಾನದ ಭ್ರಾಂತಿಯಿಂದ ಇರುವಂತೆ ತೋರಿ, ಅಂತಹ ಅಧಿಷ್ಠಾನವು ಇಲ್ಲವೆಂಬ ನಿಶ್ಚಯ ಹೊಮ್ಮಿದಾಗ ಹಿಂದೆ ತೋರಿದ್ದ ವಸ್ತು ಇಲ್ಲವೆಂಬ ಅಭಾವಸ್ಥಾಪನೆ – ಎಂಬುದು ‘ಅಪವಾದ’ ಶಬ್ದದ ಪಾರಿಭಾಷಿಕ ಅರ್ಥವಿವರ. ಇಂತಹ ಮತ್ತೊಂದು ಉದಾಹರಣೆ: ‘ಬ್ರಹ್ಮಾನಂದಗ್ರಂಥ’ ಎಂದರೆ ವಿದ್ಯಾರಣ್ಯರಚಿತ ಪಂಚದಶೀ ಎಂದು ವಿವರಣೆ ಕೊಡಲಾಗಿದೆ. ಆದರೆ ಇಡೀ ವೇದಾಂತವಲಯದಲ್ಲಿ ‘ಬ್ರಹ್ಮಾನಂದೀಯ’ ಎಂಬ ಹೆಸರಿನಿಂದ ಕರೆಯಲ್ಪಡುವುದು ಗೌಡದೇಶೀಯ ಬ್ರಹ್ಮಾನಂದರಿಂದ ೧೯ನೇ ಶತಮಾನದ ಪೂರ್ವಾರ್ಧದಲ್ಲಿ ಮಧುಸೂದನಸರಸ್ವತಿಗಳ ‘ಅದ್ವೈತಸಿದ್ಧಿ’ಗೆ ವ್ಯಾಖ್ಯಾನರೂಪದ್ದಾಗಿ ರಚಿತವಾಗಿರುವ ‘ಲಘುಚಂದ್ರಿಕಾ’ ಎಂಬ ಗ್ರಂಥ ಮಾತ್ರವೇ.

ಕೆಲವು ಲೋಪಗಳು ಎದ್ದುಕಾಣುತ್ತವೆ. ನಿದರ್ಶನಕ್ಕೆ: ‘ಜೈನ ಪಾರಮಾರ್ಥಿಕ ಪದಾವಳಿ’ ಭಾಗದಲ್ಲಿ ಜೈನಧರ್ಮದ ಪ್ರಮುಖ ವೈಶಿಷ್ಟ್ಯವೆಂದೇ ಪರಿಗಣಿತವಾಗಿರುವ ‘ಸ್ಯಾದ್ವಾದ’-ಸಪ್ತಭಂಗೀನ್ಯಾಯದ ಉಲ್ಲೇಖವೂ ವಿವರಣೆಯೂ ಇಲ್ಲದಿರುವುದು ಒಂದು ಕೊರತೆ. ‘ಯಹೂದಿ ಪಾರಮಾರ್ಥಿಕ ಪದಗಳು’ ಭಾಗದಲ್ಲಿ ಯಹೂದ್ಯರ ಬಾಲಕರ ತಾರುಣ್ಯಪ್ರವೇಶದ ಅತಿಮುಖ್ಯ ಸಂಸ್ಕಾರವಾದ ‘ಬಾರ್ – ಮಿಟ್‌ಜ್ವಾ’ದ ಪ್ರತ್ಯೇಕ ಉಲ್ಲೇಖ ಅಪೇಕ್ಷಣೀಯ. ಈ ಕೋಶವನ್ನು ಇನ್ನಷ್ಟು ಹೇಗೆ ಪರಿಷ್ಕರಿಸಬಹುದು ಎಂದು ಸೂಚಿಸುವುದಕ್ಕಾಗಿಯಷ್ಟೆ ಉದಾಹರಣಾರ್ಥ ಮೇಲಣ ಅಂಶಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ.

ಆರಂಭದಲ್ಲಿಯೆ ನಿವೇದಿಸಿದಂತೆ ಕನ್ನಡದಲ್ಲಿ ಇದ್ದ ದೊಡ್ಡ ಕೊರತೆಯನ್ನು ಈ ‘ಪಾರಮಾರ್ಥಿಕ ಪದಕೋಶ’ ಒಂದಷ್ಟುಮಟ್ಟಿಗೆ ತುಂಬಿದೆ. ಈ ಶ್ಲಾಘ್ಯ ಪ್ರಯತ್ನಕ್ಕೆ ಧಾರ್ಮಿಕಸಾಹಿತ್ಯಾಸಕ್ತರಿಂದ ಪ್ರೋತ್ಸಾಹನ ದೊರೆಯಲೆಂದು ಆಶಿಸುತ್ತೇವೆ. ?

diaryಪಾರಮಾರ್ಥಿಕ ಪದಕೋಶ.’

ತೆಲುಗು ಮೂಲ:

ಡಾ|| ಪೊತ್ತೂರಿ ವೆಂಕಟೇಶ್ವರರಾವು.

ಕನ್ನಡ ಅನುವಾದ:

ಡಾ|| ಆರ್. ಶೇಷಶಾಸ್ತ್ರೀ ಮತ್ತು ಬಿ.ಎನ್. ಶ್ರೀನಿವಾಸನ್.

ಪ್ರಕಾಶಕರು:

ಡಾ|| ಆರ್. ಶೇಷಶಾಸ್ತ್ರೀ, ಅನಂತಪುರ.

ವಿತರಕರು:

ಕಾಮಧೇನು ಪುಸ್ತಕ ಭವನ, /, ನಾಗಪ್ಪ ಬೀದಿ, ಶೇಷಾದ್ರಿಪುರ, ಬೆಂಗಳೂರು೫೬೦ ೦೨೦.

ಪುಟಗಳು:

(ಕ್ರೌನ್ ಚತುರ್ಥ) ೩೨೪.

ಬೆಲೆ:

ರೂ. ೪೫೦.

   – ಎಸ್.ಆರ್.ಆರ್.

ಸಂಗ್ರಾಹ್ಯ ಕೃತಿ

‘ಪತ್ರಿಕಾರಂಗದ ಭೀಷ್ಮ’ ಎಂದು ತಮ್ಮ ಜೀವಿತಕಾಲದಲ್ಲಿಯೇ ಕರೆಯಿಸಿಕೊಂಡ ಕಡಲಬಾಳು ಶಾಮರಾಯರ ಕತೆಯೆಂದರೆ, ಆರು ದಶಕಗಳ ‘ಸಂಯುಕ್ತ ಕರ್ನಾಟಕ’ದ ಕತೆಯೂ ಹೌದು, ಕನ್ನಡ ಪತ್ರಿಕೋದ್ಯಮದ ಕತೆಯೂ ಹೌದು. ‘ಸಂಯುಕ್ತ ಕರ್ನಾಟಕ’ದೊಂದಿಗೆ ಬೆಳೆಯುತ್ತಾ, ಆ ಪತ್ರಿಕೆಯನ್ನು ಬೆಳೆಸಿದವರು ಅವರು. ಪರಭಾರೆಯಾಗಿ ದಿವಾಳಿಯೆದ್ದು ಹೋಗಿದ್ದ ಪತ್ರಿಕಾಸಂಸ್ಥೆಯನ್ನು ಸತತ ಹೋರಾಟ, ಅವಿರತ ಶ್ರಮಗಳ ಫಲವಾಗಿ ಮೇಲೆತ್ತಿದ ಧೀಮಂತ. ಸಂಯುಕ್ತ ಕರ್ನಾಟಕ ಅಂದ್ರೆ ಶಾಮರಾಯರು, ಶಾಮರಾಯರೆಂದರೆ ಸಂಯುಕ್ತ ಕರ್ನಾಟಕ ಎನ್ನುವ ರೀತಿಯಲ್ಲಿ ಕರುಳ ಸಂಬಂಧಿಗಳಂತೆ ಬೆಳೆದವರು, ಸಂಸ್ಥೆಯನ್ನು ಬೆಳೆಸಿದವರು. ಈ ಅವಧಿಯಲ್ಲಿ ಕರ್ನಾಟಕದ ರಾಜಕಾರಣ ಹಾಗೂ ಸಮಾಜಕಾರಣವನ್ನು ತಮ್ಮ ನೆಲೆಯಲ್ಲಿ ಪರಿಣಾಮಕಾರಿಯಾಗಿ ಪ್ರಭಾವಯುತವಾಗಿ ರೂಪಿಸಲು ಶ್ರಮಿಸಿದ ಅಪರೂಪದ ಸಾಹಸಿ ಪತ್ರಕರ್ತರು. ಅಲ್ಲದೇ ಒಂದೆರಡು ತಲೆಮಾರಿನ ಪತ್ರಕರ್ತರನ್ನು ರೂಪಿಸಿದ ವೃತ್ತಿಶ್ರೇಷ್ಠರು. ‘ಸಂಜಯ’ ಎಂಬ ಹೆಸರಿನಿಂದ ಬರೆಯುತ್ತಿದ್ದ ಸುದೀರ್ಘ ಪಯಣದಲ್ಲಿ ಮಹತ್ತ್ವದ ದೀಪಗಂಬವಾಗಿ ಕಂಗೊಳಿಸುವ ಶಾಮರಾಯರು, ಪೂರ್ಣಗೊಳಿಸದ ಅರ್ಧಕ್ಕೇ ನಿಲ್ಲಿಸಿದ ಆತ್ಮಕತೆಯನ್ನು ಅಪರೂಪದ ಚಿತ್ರಗಳೊಂದಿಗೆ ಸಂಗ್ರಹಿಸಿ ಹಿರಿಯ ಪರ್ತಕರ್ತ ವಿಶ್ವೇಶ್ವರ ಭಟ್ ಇದೀಗ ಪುಸ್ತಕರೂಪದಲ್ಲಿ ನೀಡಿದ್ದಾರೆ. ಹುಬ್ಬಳ್ಳಿ ಸಾಹಿತ್ಯ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ – ‘ಸಂಜಯ ಉವಾಚ’ ಒಂದು ಸಂಗ್ರಾಹ್ಯ ಕೃತಿ.

Untitled-2_1ಪುಸ್ತಕ: ಸಂಜಯ ಉವಾಚ

ಸಂಗ್ರಹಸಂಪಾದನೆ: ವಿಶ್ವೇಶ್ವರ ಭಟ್

ಪ್ರಕಾಶಕರು: ಸಾಹಿತ್ಯ ಪ್ರಕಾಶನ

ಕೊಪ್ಪೀಕರ್ ಬೀದಿ

ಹುಬ್ಬಳ್ಳಿ೫೮೦ ೦೨೦

ಪುಟಗಳು: ೨೭೨

ಗಾತ್ರ: ರಾಯಲ್ /

ಬೆಲೆ: ರೂ. ೨೫೦

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat