ಬ್ರಾಹ್ಮಣರ ಅವನತಸ್ಥಿತಿ ಕುರಿತು ಆಗಾಗ ಕೇಳುತ್ತೇವೆ. ಇದು ಉಂಟಾದದ್ದು ಹೇಗೆ? ಪಾಶ್ಚಾತ್ಯ ಜೀವನದ ಆಡಂಬರದಿಂದ ಆಕರ್ಷಿತರಾಗಿ ಅವರು ಶಾಸ್ತ್ರೋಕ್ತಮಾರ್ಗದಿಂದ ದೂರ ಸರಿಯದಿದ್ದಿದ್ದರೆ ಹೀಗೆ ಆಗುತ್ತಿತ್ತೆ? ಅವರು ಬೇರೆಯವರಿಂದ ಪರಿತ್ಯಕ್ತರಾಗಲಿಲ್ಲ; ಅವರೇ ಸಹಜಮಾರ್ಗ ಬಿಟ್ಟು ಹೊರಕ್ಕೆ ಹೋಗಿದ್ದಾರೆ. ಆಗಿಹೋದ ಪೀಳಿಗೆಯವರು ಹೇಗೆ ನಡೆದುಕೊಳ್ಳಬೇಕಾಗಿತ್ತೆಂದು ಯೋಚಿಸಿ ಪ್ರಯೋಜನವಿಲ್ಲ. ಈಗಿನ ಪೀಳಿಗೆಯವರು ತಮ್ಮ ವಿಹಿತ ಕರ್ತವ್ಯಾಚರಣೆಗಳಿಗೆ ಗಮನ ಕೊಡಲಿ. ಧನಮೋಹಾದಿಗಳಿಗೆ ಬಲಿಯಾದರೆ ಇತರರ ಅಸೂಯೆಗೆ ಗುರಿಯಾಗಿ ನಾವು ಧರ್ಮಚ್ಯುತರಾಗುವುದಷ್ಟೆ ಪ್ರಯೋಜನ. ನಮ್ಮ ಧರ್ಮದ ಬಗೆಗೆ ನಾವು ನಿಷ್ಠೆಯನ್ನೂ ಹೆಮ್ಮೆಯನ್ನೂ ಬೆಳೆಸಿಕೊಳ್ಳಬೇಕು, ಅಲ್ಲವೆ? ಬೇರೆಯವರು ನಮ್ಮನ್ನು ಹೊಗಳಲಿ ಅಥವಾ ತೆಗಳಲಿ, ಅದನ್ನು ನಾವೇಕೆ ಮನಸ್ಸಿಗೆ ಹಚ್ಚಿಕೊಳ್ಳಬೇಕು? ಎಲ್ಲಿಯವರೆಗೆ ನಾವು ಅವರ ವಿರುದ್ಧ ನೌಕರಿಗಾಗಿಯೊ ಬೇರಾವುದಕ್ಕೊ ಸ್ಪರ್ಧಿಸುವುದಿಲ್ಲವೋ ಅಲ್ಲಿಯವರೆಗೆ ನಮಗೆ ಸಮಸ್ಯೆಯಾಗದು. ನಾವು ಹಿಂದುಳಿದವರೆಂದೊ ದಡ್ಡರೆಂದೊ ಬೇರೆಯವರು ಕರೆದರೆ ಕರೆಯಲಿ. ಉದರಪೋಷಣೆಗಾಗಿ ಧರ್ಮವನ್ನು ಬಿಡುವುದಕ್ಕಿಂತ ಬೇರೆಯವರಿಂದ ಅವಹೇಳನವನ್ನು ಸಹಿಸಿಕೊಳ್ಳುವುದೇ ಉತ್ತಮಪಕ್ಷ. ನಾವು ಸತ್ತರೂ ಪರವಾಗಿಲ್ಲ, ಆದರೆ ನಮ್ಮ ಧರ್ಮವನ್ನು ಬಿಡೆವು ಎಂಬ ದಾರ್ಢ್ಯವನ್ನು ತೋರದಿದ್ದುದರಿಂದಲೇ ಬ್ರಿಟಿಷರು ನಮ್ಮ ಮೇಲೆ ಸವಾರಿ ಮಾಡಿದುದು. ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ನಾವು ನಮ್ಮ ಜೀವನರೀತಿಯನ್ನು ವಿಕಾರಗೊಳಿಸಲಿಲ್ಲ. ಆದರೆ ಬ್ರಿಟಿಷರು ಬಂದ ಮೇಲೆ ನಮ್ಮ ದೃಢ ಮಾನಸಿಕತೆ ಉಳಿಯಲಿಲ್ಲ. ಏಕೆ? ಹೊಸ ವಿಜ್ಞಾನಾವಿಷ್ಕರಣಗಳ ಮತ್ತು ಯಂತ್ರವೈಭವದ ಆಕರ್ಷಣೆ ಅಷ್ಟು ಬಲವಾಗಿದ್ದಿತು. ಮೋಟರ್ ಕಾರು, ವಿದ್ಯುತ್ತು – ಇವೆಲ್ಲ ನಮ್ಮಲ್ಲಿ ಲೋಲುಪತೆಯನ್ನು ಬೆಳೆಸಿದವು. ಇವುಗಳ ಪ್ರಭಾವಕ್ಕೆ ನಾವು ಸಿಲುಕಿದುದು ಸ್ವಾಭಾವಿಕವಾದರೂ ಸಮರ್ಥನೀಯವಲ್ಲ. ವೇದಗಳನ್ನೂ ವೇದೋಕ್ತ ಜೀವನಮಾರ್ಗವನ್ನೂ ಇಡೀ ಜಗತ್ತಿನ ಕಲ್ಯಾಣಕ್ಕಾಗಿ ರಕ್ಷಿಸಬೇಕೆಂಬ ಶ್ರದ್ಧೆಯನ್ನು ತಳೆಯುವುದು ಉದಾತ್ತವೆನಿಸೀತೇ ವಿನಾ ಭೌತಸುಖಕ್ಕೆ ದಾಸರಾಗುವುದಲ್ಲ.
ನಾವು ನಾವಾಗಿರಬೇಕು
Month : October-2015 Episode : Author : ಶ್ರೀ ಚಂದ್ರಶೇಖರೇಂದ್ರಸರಸ್ವತೀ ಸ್ವಾಮಿಗಳು ಕಾಂಚಿ
Comments are closed.