೧೯೫೮ರಿಂದ ೧೯೯೬ರವರೆಗೆ ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿ, ಸೇನೆಯ ಸದರ್ನ್ ಕಮಾಂಡ್ ಪುಣೆ ವಿಭಾಗದ `ಚೀಫ್ ಆಫ್ ಸ್ಟಾಫ್’ ಆಗಿ ಸೇವೆಯಿಂದ ನಿವೃತ್ತಿ ಹೊಂದಿದರು. ಈಗ ಅವರು ಎರಡು ದಶಕಗಳಿಂದ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಮಾಜಿ ಸೈನಿಕರ ಸಂಘಟನೆ – `ಅಖಿಲ ಭಾರತೀಯ ಪೂರ್ವಸೈನಿಕ್ ಸೇವಾ ಪರಿಷದ್’ನ ಅಧ್ಯಕ್ಷರಾಗಿ ಸೇವಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಲೆ||ಜ|| ವಿ.ಎಂ. ಪಾಟೀಲರು ೧೯೬೫ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ೧೧ನೇ ಫೀಲ್ಡ್ ರೆಜಿಮೆಂಟಿನಲ್ಲಿದ್ದು ಸಮರಾಂಗಣದಲ್ಲಿ ಸ್ವತಃ ಶತ್ರುಗಳ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದವರು. ಪಾಟೀಲರು `ಉತ್ಥಾನ’ಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿ ಕೊಟ್ಟ ಈ ಲೇಖನದಲ್ಲಿ ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಕಾರಣಗಳು ಮತ್ತು ಪರಿಣಾಮಗಳನ್ನು ನಮ್ಮ ಸೈನಿಕರ ಶೌರ್ಯಗಾಥೆಯ ಜತೆಜತೆಗೆ ಎಳೆಎಳೆಯಾಗಿ ಚಿತ್ರಿಸಿದ್ದಾರೆ
ಅದು ಸೆಪ್ಟೆಂಬರ್ ೩, ೧೯೬೫ರ ರಾತ್ರಿ ೯.೦೦ ಗಂಟೆ. ಭಾರತದ ಪ್ರಧಾನಮಂತ್ರಿಯವರು ದೇಶವನ್ನು ಉದ್ದೇಶಿಸಿ ಬಾನುಲಿಯಲ್ಲಿ ಪ್ರಸಾರಭಾಷಣವನ್ನು ಮಾಡಿದರು: “ನನ್ನ ದೇಶಬಾಂಧವರೇ, ಪಾಕಿಸ್ತಾನ ನಮ್ಮ ವಿರುದ್ಧ ನಡೆಸಿರುವ ಆಕ್ರಮಣದಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ವಿವರಿಸುವುದಕ್ಕಾಗಿ ಈ ರಾತ್ರಿ ನಾನು ನಿಮ್ಮೊಂದಿಗೆ ಮಾತನಾಡುವೆ. ಸೆಪ್ಟೆಂಬರ್ ೧ರಂದು ಪಾಕಿಸ್ತಾನವು ಜಮ್ಮುವಿನ ಛಾಂಬ್ ವಿಭಾಗದಲ್ಲಿ ಪೂರ್ಣಪ್ರಮಾಣದ ಆಕ್ರಮಣವನ್ನು ಕೈಗೊಂಡಿದೆ…… ಪಾಕಿಸ್ತಾನದ ಆರಂಭಿಕ ಉದ್ದೇಶವನ್ನು ವಿಫಲಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಾಂಧವರು ತಾಳ್ಮೆ, ಸ್ಥೈರ್ಯಗಳಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಾನು ನಮ್ಮ ಸಶಸ್ತ್ರ ಸೇನಾದಳಕ್ಕೆ ಅಂತಾರಾಷ್ಟ್ರೀಯ ಗಡಿಗುಂಟ ಆಯ್ದಭಾಗಗಳಲ್ಲಿ ತಕ್ಕ ಪ್ರತ್ಯುತ್ತರ ನೀಡುವಂತೆ ಅಧಿಕಾರವನ್ನು ನೀಡಿದ್ದೇನೆ.”
ಈ ರೀತಿಯಾಗಿ ೨೨ ದಿನಗಳ ಕಾಲ (೧೯೬೫ರ ಸೆಪ್ಟೆಂಬರ್ ೧ರಿಂದ ೨೨ರವರೆಗೆ) ನಡೆದ, ಭಾರತ-ಪಾಕಿಸ್ತಾನದ ನಡುವಣ ಎರಡನೇ ಪೂರ್ಣಪ್ರಮಾಣದ ಯುದ್ಧ ಪ್ರಾರಂಭವಾಯಿತು. ಈ ಯುದ್ಧದಲ್ಲಿ ಭಾರತ ಪಾಕಿಸ್ತಾನದ ೧೯೨೦ ಚದರ ಕಿ.ಮೀ.ನಷ್ಟು ಭೂಭಾಗವನ್ನು ವಶಪಡಿಸಿಕೊಂಡಿತ್ತು; ಅದಕ್ಕಾಗಿ ನಮ್ಮ ೧೧,೫೦೦ ಮಂದಿ ಸೈನಿಕರು ಆಪತ್ತಿಗೆ ತುತ್ತಾದರು ಮತ್ತು ೫೫೦ ಚದರ ಕಿ.ಮೀ.ನಷ್ಟು ಭೂಭಾಗವನ್ನು (ಬಹುತೇಕ ಗುಜರಾತಿನ ಕಛ್ ರಾಣದ ಭಾಗಗಳು ಮತ್ತು ಪಂಜಾಬ್ ಹಾಗೂ ಜಮ್ಮುವಿನ ಸಣ್ಣಸಣ್ಣ ತುಣುಕುಗಳು) ನಾವು ಕಳೆದುಕೊಳ್ಳಬೇಕಾಯಿತು.
ಯುದ್ಧಕ್ಕೆ ಕಾರಣಗಳೇನು?
ಜಮ್ಮು ಮತ್ತು ಕಾಶ್ಮೀರಕ್ಕಾಗಿ, ೧೯೪೭-೪೮ರಲ್ಲಿ ನಡೆದ ಮೊದಲ ಭಾರತ-ಪಾಕಿಸ್ತಾನ ಯುದ್ಧದಲ್ಲಿ, ವಿಶ್ವಸಂಸ್ಥೆಯ ಮಧ್ಯಪ್ರವೇಶವನ್ನು ಬಯಸಿದ್ದರ ಪರಿಣಾಮವಾಗಿ, ಭಾರತ ತಾನಾಗಿಯೇ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಕೊಂಡಿತಲ್ಲದೆ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಎರಡು ಹೋಳಾಗಿ ಬಹುದೊಡ್ಡ ಭಾಗವು ಪಾಕಿಸ್ತಾನದ ವಶದಲ್ಲಿ ಉಳಿಯಿತು. ಮಾತ್ರವಲ್ಲ, ಅಂದಿನಿಂದ ಕಾಶ್ಮೀರವು ಒಂದು ಜ್ವಲಂತ ಸಮಸ್ಯೆಯಾಗಿಯೇ ಉಳಿಯಿತು. ೧೯೪೮ರ ಡಿಸೆಂಬರ್ ವೇಳೆಗೆ ಪಾಕ್ ಆಕ್ರಮಣಕ್ಕೆ ತುತ್ತಾಗಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ೭೦%ದಷ್ಟು ಭಾಗವನ್ನು ಭಾರತೀಯ ಸೇನೆ ಮುಕ್ತಗೊಳಿಸಿದ್ದರೂ ಕೂಡ, ಬ್ರಿಟಿಷರು ಮನವೊಲಿಸಿದ್ದರಿಂದಾಗಿ, ಭಾರತ ಸರ್ಕಾರವು ಡಿಸೆಂಬರ್ ೧೯೪೮ರಲ್ಲಿ ಕದನವಿರಾಮಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಸಂಪರ್ಕಿಸಿತು. ಅದಾಗಲೇ, ಜಮ್ಮು ಮತ್ತು ಕಾಶ್ಮೀರದ ಉಳಿದ ಭಾಗವನ್ನೂ ಕೂಡ, ಅಂದರೆ ಗಿಲ್ಗಿಟ್ ಬಾಲ್ಟಿಸ್ತಾನವನ್ನೂ ಕೂಡ, ವಿಮೋಚನೆಗೊಳಿಸುವುದಕ್ಕಾಗಿ ಭಾರತೀಯ ಸೇನೆ ೧೯೪೯ರ ವಸಂತಕಾಲದ ವರೆಗಿನ ಆರು ತಿಂಗಳ ಅವಧಿಗಾಗಿ ಮನವಿಮಾಡಿಕೊಂಡಿತ್ತು. ದುರದೃಷ್ಟಕರ ಸಂಗತಿಯೆಂದರೆ ನಮ್ಮ ರಾಜಕೀಯ ನಾಯಕತ್ವವು ಸೇನೆಯ ಈ ಸಲಹೆಯನ್ನು ಪುರಸ್ಕರಿಸಲೇ ಇಲ್ಲ! ಪರಿಣಾಮವಾಗಿ ನಮ್ಮ ರಾಷ್ಟ್ರ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಇಂದಿಗೂ ಬಹುದೊಡ್ಡ ಬೆಲೆಯನ್ನು ತೆರುತ್ತಲೇ ಇದೆ; ೧೯೬೫ರಿಂದ ಇಂದಿನ ವರೆಗೆ ನಮ್ಮ ರಕ್ಷಣಾಪಡೆಗಳ ೨೨,೦೦೦ ಸೈನಿಕರು ಮತ್ತು ೭೦,೦೦೦ ನಾಗರಿಕರ ಬಲಿದಾನವಾಗಿದೆ.
ಎಲ್ಲಿಯವರೆಗೆ ಕಾಶ್ಮೀರ ಕಣಿವೆಯ ಜನರು ತಾವು ಮೊದಲಿಗೆ ಭಾರತೀಯರು ಹಾಗೂ ತಮ್ಮ ಉಜ್ಜ್ವಲ ಭವಿಷ್ಯವು ಭಾರತದ ಜತೆಗೆ, ಮತ್ತು ಕೇವಲ ಭಾರತದ ಜತೆಗೆ, ಹಾಸುಹೊಕ್ಕಾಗಿದೆ ಎಂದು ಅರಿಯುವುದಿಲ್ಲವೋ ಅಲ್ಲಿಯವರೆಗೆ ನಾವು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶಾಂತಿ, ಸುಸ್ಥಿರತೆ ಮತ್ತು ಅಭಿವೃದ್ಧಿಯನ್ನು ಹೊಂದಲಾರೆವು; ಇದು ಕಟು ಸತ್ಯ.
೧೯೬೪-೬೫ರಲ್ಲಿ ಉಪಖಂಡದಲ್ಲಿ ಉದ್ಭವಿಸಿದ ಪರಿಸ್ಥಿತಿ
೧೯೬೫ರ ಯುದ್ಧದ ಪ್ರಾಮುಖ್ಯವನ್ನು ಅರ್ಥಮಾಡಿಕೊಳ್ಳಬೇ ಕಾದರೆ ೧೯೬೨ರಲ್ಲಿ ನಡೆದ ಭಾರತ-ಚೀನಾ ಯುದ್ಧದ ಸೋಲಿನ ಹಿನ್ನೆಲೆಯಲ್ಲಿ ಭಾರತದ ರಾಜಕೀಯದಲ್ಲಿ, ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ, ಮಿಲಿಟರಿ ಮತ್ತು ಇತರ ವ್ಯೂಹಾತ್ಮಕ ತಾಂತ್ರಿಕ ಚಿಂತನೆಗಳಲ್ಲಿ ಉಂಟಾಗಿದ್ದ ತೀವ್ರ ಪರಿಣಾಮಗಳ ಕಾರಣದಿಂದಾಗಿ ಭಾರತೀಯ ಉಪಖಂಡದಲ್ಲಿ ಉದ್ಭವಿಸಿದ ಪರಿಸ್ಥಿತಿಯನ್ನು ಪರಾಮರ್ಶಿಸುವುದು ಅಗತ್ಯವೆನಿಸುತ್ತದೆ. ಆ ಕಾಲಕ್ಕೆ –
- ನೆಹರು ಅವರ ಉತ್ತರಾಧಿಕಾರಿಯಾಗಿ ಲಾಲ್ಬಹಾದುರ್ ಶಾಸ್ತ್ರಿ ಅವರು ಜೂನ್ ೧೯೬೪ರಲ್ಲಿ ನಿಯುಕ್ತರಾದರು. ಕಾಂಗ್ರೆಸ್ ಪಕ್ಷದಲ್ಲಿದ್ದ ಒಡಕಿನಿಂದಾಗಿ, ಸರ್ಕಾರ ಹಾಗೂ ಆಡಳಿತಪಕ್ಷದ ಮೇಲೆ ಹಿಡಿತ ಸಾಧಿಸಲು ಶಾಸ್ತ್ರಿಯವರಿಗೆ ಇನ್ನೂ ಸಾಧ್ಯವಾಗಿರಲಿಲ್ಲ;
- ಆದರೆ, ಆಂತರಿಕ ರಾಜಕೀಯಸ್ಥಿತಿಯನ್ನು ನಿಭಾಯಿಸುವುದಕ್ಕಿಂತ ಪ್ರಮುಖವಾಗಿ, ಅಂತಾರಾಷ್ಟ್ರೀಯ ನೀತಿಯನ್ನು ಸರಿಯಾಗಿ ನಿಭಾಯಿಸದೇ ಹೋದರೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ ಎಂಬ ಎಚ್ಚರ ಶಾಸ್ತ್ರಿಯವರಿಗಿತ್ತು;
- ದೇಶದ ಆಹಾರ ಪರಿಸ್ಥಿತಿ ಹದಗೆಟ್ಟಿತ್ತು, ಆರ್ಥಿಕತೆ ಡೋಲಾಯಮಾನ ಸ್ಥಿತಿಯಲ್ಲಿತ್ತು ಮತ್ತು ಮೂರನೆಯ ಪಂಚವಾರ್ಷಿಕ ಯೋಜನೆಯೂ ನರಳುತ್ತಿತ್ತು;
- ಪ್ರಾದೇಶಿಕ ಹಾಗೂ ಭಾಷಿಕ ಗಲಭೆಗಳ ತೀವ್ರತೆಯು ದೇಶದ ಏಕತೆಗೆ ಬೆದರಿಕೆಯನ್ನು ಒಡ್ಡುತ್ತಿತ್ತು;
- ಸಶಸ್ತ್ರಪಡೆಗಳು, ಪಾಶ್ಚಿಮಾತ್ಯ ದೇಶಗಳನ್ನು – ಅಂದರೆ ಬ್ರಿಟನ್ ಮತ್ತು ಅಮೆರಿಕಗಳಿಂದ ಆಮದುಮಾಡಿಕೊಂಡು, ತಮ್ಮ ಶಸ್ತ್ರಬಲವನ್ನು ವೃದ್ಧಿಸಿಕೊಳ್ಳುವ ಮತ್ತು ಆಧುನಿಕಗೊಳಿಸುವ ನಿಟ್ಟಿನಲ್ಲಿ ತೊಡಗಿದ್ದವು;
- ವಾರ್ಷಿಕ ೧೦.೪% ವೃದ್ಧಿದರದಲ್ಲಿ, ಒಟ್ಟಾರೆ ದೇಶೀಯ ಉತ್ಪನ್ನ(ಜಿಡಿಪಿ)ವನ್ನು ಹೊಂದಿದ್ದ ಪಾಕಿಸ್ತಾನದ ಆರ್ಥಿಕತೆ ೧೯೫೩-೫೪ರಿಂದ ಉತ್ತಮ ಸ್ಥಿತಿಯಲ್ಲಿತ್ತು;
- ಅಮೆರಿಕ ನೇತೃತ್ವದ ಮಧ್ಯಪ್ರಾಚ್ಯ ಒಕ್ಕೂಟ (CENTO) ಹಾಗೂ ಉತ್ತರ ಅಟ್ಲಾಂಟಿಕ್ ಒಕ್ಕೂಟ ((NATO)ಗಳನ್ನು ಪಾಕಿಸ್ತಾನ ಸೇರಿಕೊಂಡಮೇಲೆ ಅದಕ್ಕೆ ಸಾಕಷ್ಟು ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಲಭಿಸಿದ್ದವು. ಕಮ್ಯುನಿಸ್ಟ್ ಆಕ್ರಾಮಕತ್ವದ ವಿರುದ್ಧ ಅಮೆರಿಕ ಮತ್ತು ಪಾಕಿಸ್ತಾನ ಪರಸ್ಪರ ರಕ್ಷಣಾ ಒಡಂಬಡಿಕೆಗೆ ಸಹಿಹಾಕಿದ್ದವು.
೧೯೬೪ರ ನವೆಂಬರ್ ಹೊತ್ತಿಗೆ, ಅದಮ್ಯ ಉತ್ಸಾಹ ಹೊಂದಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಜುಲ್ಫಿಕರ್ ಅಲಿ ಭುಟ್ಟೋ, ಮಹತ್ತ್ವಾಕಾಂಕ್ಷಿ ದಂಡನಾಯಕರ ಬೆಂಬಲದೊಂದಿಗೆ, ಕೆಳಗಿನಂತೆ ನಿಷ್ಕರ್ಷೆಗೆ ಬಂದಿದ್ದರು:
- ಭಾರತದ ರಾಜಕೀಯ ನಾಯಕತ್ವ ಒಡೆದುಹೋಗಿ ದುರ್ಬಲವಾಗಿದೆ. ಅಮೆರಿಕದ ಪ್ರಸಿದ್ಧ ರಾಜಕೀಯ ವಿಶ್ಲೇಷಕ ವೆಲ್ಲಿಸ್ ಹಾಂಜೆನ್ ಬರೆದು ಪ್ರಕಟಿಸಿದ – `ನೆಹರು ನಂತರ ಯಾರು?’ (ಆಫ್ಟರ್ ನೆಹರು ಹೂ?) ಎಂಬ ಪುಸ್ತಕದ ಹೂರಣವನ್ನು ಪಾಕ್ನ ನಾಯಕರು ಅಕ್ಷರಶಃ ಪೂರ್ಣವಾಗಿ ನಂಬಿದ್ದರು; ಅದರಲ್ಲಿ ಆತ – `ನೆಹರು ನಂತರ ಭಾರತದಲ್ಲಿ ಪ್ರಳಯವೇ ಗತಿ’ ಎಂದು ಭವಿಷ್ಯ ನುಡಿದಿದ್ದ.
- ನಿಧಾನಗತಿಯಿಂದಾಗಿ ಭಾರತದ ಸಶಸ್ತ್ರಪಡೆಗಳಿಗೆ ತಮ್ಮ ಶಸ್ತ್ರಬಲವನ್ನು ವೃದ್ಧಿಸಿಕೊಳ್ಳಲು ಮತ್ತು ಆಧುನಿಕಗೊಳಿಸಲು ನಾಲ್ಕೈದು ವರ್ಷಗಳೇ, ೧೯೬೯-೭೦ರವರೆಗೂ ಹಿಡಿದಾವು;
- ಆದ್ದರಿಂದ ಕಾಶ್ಮೀರದಲ್ಲಿ ತ್ವರಿತ ಮತ್ತು ಪ್ರಬಲ ಹೊಡೆತದ ಸೈನಿಕಕಾರ್ಯಾಚರಣೆಯೊಂದರ ವಿರುದ್ಧ ಹೋರಾಡಲು ಭಾರತ ಬಯಸಲಾರದು ಮತ್ತು ಅದು ಅಸಮರ್ಥವಾಗಿದೆ ಎಂಬ ತೀರ್ಮಾನಕ್ಕೆ ಪಾಕಿಸ್ತಾನದ ಸೇನಾನಾಯಕರು ಬಂದಿದ್ದರು;
- ೧೯೬೩ರ ಡಿಸೆಂಬರ್ನಲ್ಲಿ ಹಜರತ್ಬಾಲ್ ಮಸೀದಿಯಿಂದ ಪ್ರವಾದಿ ಮಹಮ್ಮದರ ಸ್ಮಾರಕ ಕೂದಲು ನಿಗೂಢವಾಗಿ ಕಾಣೆಯಾದಾಗ (೧೯೬೪ರಲ್ಲಿ) ಕಾಶ್ಮೀರಿಗಳು ಆಕ್ರೋಶಗೊಂಡಿದ್ದು, ಕಾಶ್ಮೀರದಲ್ಲಿ ಈಗ ಒಂದು ಸಶಸ್ತ್ರದಂಗೆಯನ್ನು ಪ್ರಚೋದಿಸಲು ಕಾಲ ಪಕ್ವವಾಗಿದೆ.
`ಆಗಾಮಿ ಬೇಸಗೆಯಲ್ಲೇ ಕಾಶ್ಮೀರ ಕಣಿವೆಯಲ್ಲಿ ಒಂದು ದಂಗೆಯನ್ನು ಪ್ರಚೋದಿಸಿ, ಅಲ್ಲಿ ಕ್ಷಿಪ್ರ ಸೈನಿಕಕಾರ್ಯಾಚರಣೆ ನಡೆಸಲು’ ಭುಟ್ಟೋ ಮತ್ತವರ ದಂಡನಾಯಕರು ಅಧ್ಯಕ್ಷ ಆಯೂಬ್ ಖಾನರಿಗೆ ಮನವರಿಕೆ ಮಾಡಿಕೊಡಲು ಸಮರ್ಥರಾಗಿದ್ದರು. ಈ ವಾಮಮಾರ್ಗದ ಮೂಲಕ ಭಾರತವನ್ನು ಪಾಶ್ಚಿಮಾತ್ಯ ದೇಶಗಳಿಂದ ಮತ್ತು ಮೂರನೇ ಜಗತ್ತಿನ ರಾಷ್ಟ್ರಗಳಿಂದ ಪ್ರತ್ಯೇಕಿಸುವುದು ಪಾಕಿಸ್ತಾನದ ರಾಜಕೀಯ ತಂತ್ರಗಾರಿಕೆಯಾಗಿತ್ತು. ಈ ರೀತಿಯಾಗಿ, ಅಧ್ಯಕ್ಷ ಆಯೂಬ್ – ಮೂರು ಹಂತಗಳ ಕಾರ್ಯಾಚರಣೆಯ ಮೂಲಕ ೧೯೬೫ರಲ್ಲಿ ನಡೆಸಲು ಉದ್ದೇಶಿಸಿದ – ಕಾಶ್ಮೀರವನ್ನು ಕಬಳಿಸುವ ಮಹತ್ತ್ವಾಕಾಂಕ್ಷೆಯ ಹೂಟವೊಂದಕ್ಕೆ ೧೯೬೪ರ ಡಿಸೆಂಬರ್ನಲ್ಲಿ ಒಪ್ಪಿಗೆ ನೀಡಿದರು. ಆ ಮೂರು ಹಂತಗಳು ಹೀಗಿವೆ:
- ಮೊದಲನೇ ಹಂತ – ಭಾರತದ ಪ್ರತಿಕ್ರಿಯೆಯನ್ನು ಪರೀಕ್ಷಿಸಲು ದಿಕ್ಕುತಪ್ಪಿಸುವ ನಡೆಯಾಗಿ ಕಾಶ್ಮೀರದಿಂದ ದೂರದಲ್ಲಿ ಗುಜರಾತಿನ ಕಛ್ ರಾಣದಲ್ಲಿ ಕಾರ್ಯಾಚರಣೆಯನ್ನು ನಡೆಸುವುದು;
- ಎರಡನೇ ಹಂತ – ಗುಪ್ತ ಕಾರ್ಯಾಚರಣೆಗಳ ಮೂಲಕ ೧೯೬೫ರ ಜುಲೈ-ಆಗಸ್ಟ್ ವೇಳೆಗೆ ಭಾರತ ಸರ್ಕಾರದ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಜನರು ದಂಗೆ ನಡೆಸುವಂತೆ ಪ್ರೇರೇಪಿಸುವುದು; ಅದರ ಸಂಕೇತನಾಮ `ಆಪರೇಶನ್ ಗಿಬ್ರಾಲ್ಟರ್.’
- ಮೂರನೇ ಹಂತ – ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಉಳಿದ ಭಾಗದಿಂದ ಪ್ರತ್ಯೇಕಿಸಲು ಸೇನಾಕಾರ್ಯಾಚರಣೆಯ ಮೂಲಕ ಅಂತಿಮ ಪ್ರಹಾರ ನೀಡುವುದು. ಅನಂತರ ಪಾಕಿಸ್ತಾನಕ್ಕೆ ಅನುಕೂಲಕರವಾಗಿರುವ ಸಂದರ್ಭವನ್ನು ನೋಡಿಕೊಂಡು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಸಂಪರ್ಕಿಸಿ ಕದನವಿರಾಮವನ್ನು ಹೇರುವುದಕ್ಕಾಗಿ ಮನವಿಯನ್ನು ಸಲ್ಲಿಸುವುದು. ಈ ಎಲ್ಲ ಕಾರ್ಯಾಚರಣೆಯ ಸಂಕೇತನಾಮ: `ಆಪರೇಷನ್ ಗ್ರಾಂಡ್ ಸ್ಲಾಮ್’.
ಪರೀಕ್ಷಾ ಕಾರ್ಯಾಚರಣೆ
ಪಾಕ್ ಅಧ್ಯಕ್ಷ ಆಯೂಬ್ ಮತ್ತು ವಿದೇಶಾಂಗ ಸಚಿವ ಭುಟ್ಟೋ
ಭಾರತದ ಪ್ರತಿಕ್ರಿಯೆಯನ್ನು ಪರೀಕ್ಷಿಸುವ ಉದ್ದೇಶದಿಂದ ೧೯೫೭ರಲ್ಲಿ ಚೀನಾ ನಡೆಸಿದ ಪರೀಕ್ಷಾ ಕಾರ್ಯಾಚರಣೆಯ ತಂತ್ರವನ್ನೇ ಅನುಸರಿಸಿ, ಕಾಶ್ಮೀರದಿಂದ ದೂರದಲ್ಲಿ ಗುಜರಾತಿನ ಕಛ್ ರಾಣದ ೫೪೫ ಕಿ.ಮೀ. ಉದ್ದ ಹಾಗೂ ೮೦ ಕಿ.ಮೀ. ಅಗಲದ ಪಾಳುಬಿದ್ದ ಜವುಗುಪ್ರದೇಶದಲ್ಲಿ ಪಾಕಿಸ್ತಾನ ಕಾರ್ಯಾಚರಣೆಗೆ ಉದ್ಯಮಿಸಿತು. ೧೯೬೫ರ ಜನವರಿಯಲ್ಲಿ ಭಾರತೀಯ ಗಡಿರಕ್ಷಣಾ ಪೊಲೀಸರು ಗಸ್ತುನಡೆಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯು ಭಾರತದ ಗಡಿಯಿಂದ ೩ ಕಿ.ಮೀ.ನಷ್ಟು ಒಳಗೆ ಕಛ್ ರಾಣದ ಸುರೈಯಿಂದ ಡಿಂಗ್ ವರೆಗೆ ೩೦ ಕಿ.ಮೀ. ಉದ್ದದ ದಾರಿಯನ್ನು ಮಾಡಿಕೊಂಡು ಠಿಕಾಣಿಹೂಡಿರುವುದು ಪತ್ತೆಯಾಯಿತು. ಇದನ್ನು ಪ್ರಶ್ನಿಸಿದಾಗ ಪಾಕಿಸ್ತಾನವು ಈ ಪ್ರದೇಶ ತನಗೇ ಸೇರಿದ್ದುದಾಗಿ ಪ್ರತಿಪಾದಿಸಿತಲ್ಲದೆ, ೧೯೬೫ರ ಫೆಬ್ರುವರಿ-ಮಾರ್ಚ್ನಲ್ಲಿ ತನ್ನ ಪ್ರತಿಪಾದನೆಗೆ ಬೆಂಬಲವಾಗಿ ಸಿಂಧ್-ಕಛ್ನ ಗಡಿಗುಂಟ ಕರಾಚಿಯಿಂದ ಕರೆಸಿಕೊಂಡ ತನ್ನ ೫೧ ಪದಾತಿಪಡೆಯನ್ನು ನಿಯೋಜಿಸಿತು. ಭಾರತೀಯ ಗಡಿರಕ್ಷಣಾ ಪೊಲೀಸರ ಪ್ರತಿಭಟನೆಯನ್ನು ಕಡೆಗಣಿಸಿ, ಏಪ್ರಿಲ್ ೯, ೧೯೬೫ರಂದು ಸರ್ದಾರ್ ಪೋಸ್ಟ್ ಮತ್ತು ಕಂಜಾರ್ಕೋಟ್ನಲ್ಲಿ ದಾಳಿನಡೆಸಿ ಅದನ್ನು ಆಕ್ರಮಿಸಿಕೊಂಡಿತು. ಇದಕ್ಕೆ ಪ್ರತಿಯಾಗಿ ಭಾರತ ೩೦ನೇ ಪದಾತಿಪಡೆಯನ್ನು ಭುಜ್ನಿಂದ ಕರೆಸಿಕೊಂಡಿತು. ಈ ಪಡೆಗಳಿಗೆ ಬೆಂಬಲವಾಗಿದ್ದ ೧೧ನೇ ಫೀಲ್ಡ್ ರೆಜಿಮೆಂಟಿನಲ್ಲಿ ನಾನೂ ಕೂಡ ಭಾಗವಾಗಿದ್ದೆ. ಏಪ್ರಿಲ್ ೧೨, ೧೯೬೫ರಂದು ಲೆಫ್ಟಿನೆಂಟ್-ಕರ್ನಲ್ ಕೆ. ಸುಂದರ್ಜೀ (ಮುಂದೆ ಭಾರತೀಯ ಸೇನೆಯ ಮಹಾದಂಡನಾಯಕರಾದರು) ನೇತೃತ್ವದ ೧ನೇ ಮಹರ್ ಬೆಟಾಲಿಯನ್ ಸರ್ದಾರ್ ಪೋಸ್ಟ್ ಹಾಗೂ ವಿಗೋಕೋಟ್ನ್ನು ಮರಳಿ ವಶಪಡಿಸಿಕೊಂಡಿತು. ನನಗೆ ೧ನೇ ಮೆಹರ್ ಜೊತೆಯಲ್ಲಿ ನಿರೀಕ್ಷಣಾ ಶಿಬಿರದ ಒಬ್ಬ ಅಧಿಕಾರಿಯಾಗಿರುವ ಸುವರ್ಣಾವಕಾಶ ದೊರೆತಿತ್ತು. ಭಾರತದ ನಿಯೋಜನೆಗೆ ಪ್ರತಿಯಾಗಿ, ಪಾಕಿಸ್ತಾನ ಪಡೆಗಳು ಸೆಪ್ಟೆಂಬರ್೨೩-೨೪ರಂದು ಪ್ಯಾಟನ್ ಟ್ಯಾಂಕ್ಗಳು ಮತ್ತು ಸಶಸ್ತ್ರ ವಾಹನಗಳ ಜೊತೆಗೂಡಿ ಸರ್ದಾರ್ ಪೋಸ್ಟ್, ವಿಗೋಕೋಟ್, ಬೀರ್ ಬೆಟ್ ಹಾಗೂ ಪಾಯಿಂಟ್ ೮೪ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿತು. ಪರಿಣಾಮವಾಗಿ ನಡೆದ ಕದನದಲ್ಲಿ, ಪಾಕಿಸ್ತಾನ ೯ ಟ್ಯಾಂಕ್ಗಳನ್ನು ಕಳೆದುಕೊಂಡಿತು ಹಾಗೂ ೨೪೫ ಮಂದಿ ಹತರಾದರು. ಮತ್ತು, ಭಾರತದ ಕಡೆ ೬೫ ಮಂದಿ ವೀರಮರಣವನ್ನಪ್ಪಿದರು. ಈ ರೀತಿಯಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಛ್ ರಾಣದ ಜವುಗುಭೂಮಿಯಲ್ಲಿ ಒಂದು ಅಘೋಷಿತ ಯುದ್ಧವು ಆರಂಭವಾಯಿತು.
ಪ್ರಾರಂಭಿಕವಾಗಿ ಕಛ್ ರಾಣದಲ್ಲಿ ೩೦ ಕಿ.ಮೀ. ಉದ್ದ ಹಾಗೂ ೩-೭ ಕಿ.ಮೀ. ಒಳಭಾಗವನ್ನು ಪ್ರವೇಶಿಸಿದ್ದಲ್ಲದೆ, ಪೂರ್ತಿಯಾಗಿ ಕಛ್ ರಾಣದ ೫,೬೦೦ ಚದರ ಕಿ.ಮೀ. ತನಗೇ ಸೇರಿದ್ದು ಎಂದು ವಾದಿಸುತ್ತ ಪಾಕಿಸ್ತಾನ ಈ ಕುರಿತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸುವ ಸಲಹೆಯನ್ನು ಮುಂದಿಟ್ಟಿತು; ಈ ಜವುಗುಪ್ರದೇಶವು ವರ್ಷದಲ್ಲಿ ೬ ತಿಂಗಳು ನೀರಿನಲ್ಲಿ ಮುಳುಗಡೆಯಾಗುತ್ತಿದ್ದುದರಿಂದ, ಇದೇ ಪ್ರದೇಶವನ್ನು ಪಾಕಿಸ್ತಾನದ ಸಾಹಸಕ್ಕೆ ಸೂಕ್ತವಾದ ಪ್ರತೀಕಾರವನ್ನು ಮಾಡಲು ನಾವು ಆಯ್ದುಕೊಳ್ಳಬೇಕೆಂದು ಭಾರತೀಯ ಸೇನೆ ಸಲಹೆ ನೀಡಿತು. “ಪಾಕಿಸ್ತಾನವು ಕಛ್ ರಾಣದಲ್ಲಿ ತನ್ನ ಆಕ್ರಮಣಕಾರಿ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ ಭಾರತೀಯ ಸೇನೆಯು ೧,೩೦೦ ಕಿ.ಮೀ. ಉದ್ದದ ಪಶ್ಚಿಮ ಪಾಕಿಸ್ತಾನದ ಗಡಿಗುಂಟ ಯಾವುದೇ ಆಯ್ದ ಭಾಗದಲ್ಲಿ ಮೇಲೆರಗಲು ಹಿಂದೇಟು ಹಾಕಲಾರದು” ಎಂದು ಪ್ರಧಾನಿ ಲಾಲ್ಬಹಾದುರ್ ಶಾಸ್ತ್ರಿ ಏಪ್ರಿಲ್ ೨೮, ೧೯೬೫ರಂದು ಪಾಕಿಸ್ತಾನವನ್ನು ಎಚ್ಚರಿಸಿದರು. ೧೯೬೫ರ ಮೇ-ಜೂನ್ನಲ್ಲಿ ಪಾಕಿಸ್ತಾನ ಬೀರ್ಬೆಟ್ ಮತ್ತು ವಿಗೋಕೋಟ್ನ ಮೇಲೆ ದಾಳಿ ನಡೆಸಿ ಅತಿಹೆಚ್ಚು ಸಾವುನೋವಿನಿಂದ ಕೂಡಿದ ಬಲವಾದ ಹೊಡೆತವನ್ನೂ ತಿಂದಿತು. ಜೂನ್ ೧೫ರಂದು ಪಾಕ್ ಪಡೆಯ ಮೇಜರ್ ಎ.ಕೆ. ಅಫ್ರಿದಿ ಅವರನ್ನು ವಿಗೋಕೋಟ್ ಬಳಿ ಭಾರತ ಸೇನೆಯ ೧ನೇ ಮೆಹರ್ ವಿಭಾಗ ಸೆರೆಹಿಡಿಯಿತು. ಅವರನ್ನು ಕಛ್ನಿಂದ ದೆಹಲಿಗೆ ವಿಮಾನದಲ್ಲಿ ಕರೆದೊಯ್ಯಬೇಕಾದರೆ ಮೇಜರ್ ಎ.ಕೆ. ಅಫ್ರಿದಿ ಅಹಮದಾಬಾದ್ನಲ್ಲಿ ರಾಜಕಪೂರರ `ಸಂಗಮ್’ ಸಿನೆಮಾವನ್ನು ವೀಕ್ಷಿಸಲು ಅವಕಾಶಮಾಡಿಕೊಡುವಂತೆ ಕೋರಿಕೊಂಡರು. ಆ ಯುದ್ಧದ ಸಂದರ್ಭದಲ್ಲೂ, ಭಾರತೀಯ ಸೇನೆಯು ಮಾನವೀಯ ಸಂಬಂಧಗಳನ್ನು, ಜತೆಗೆ ಹಾಸ್ಯಪ್ರಜ್ಞೆಯನ್ನೂ ತೋರಲು ಮರೆಯುವುದಿಲ್ಲ; ಸೇನೆ ಅಫ್ರಿದಿಯವರ ಬೇಡಿಕೆಯನ್ನು ಮನ್ನಿಸಿತು!
ಕಾಮನ್ವೆಲ್ತ್ ರಾಷ್ಟ್ರಗಳ ಪ್ರಧಾನಮಂತ್ರಿಗಳ ಸಮಾವೇಶದ ಸಂದರ್ಭದಲ್ಲಿ – ಜೂನ್ ೧೭, ೧೯೬೫ರಂದು, ಲಂಡನ್ನಲ್ಲಿ ಬ್ರಿಟನ್ನ ಪ್ರಧಾನಿ ಹೆರಾಲ್ಡ್ ವಿಲ್ಸನ್ ಅವರ ಮಧ್ಯಸ್ಥಿಕೆಯಂತೆ, ಜೂನ್ ೩೦ರಿಂದ ಕದನವಿರಾಮಕ್ಕೆ ಮತ್ತು ಜನವರಿ ೧೯೬೫ರಲ್ಲಿದ್ದಂತೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದಕ್ಕೆ, ಅಂತೆಯೇ ಕಛ್ ರಾಣ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಅಂತಾರಾಷ್ಟ್ರೀಯ ನ್ಯಾಯಮಂಡಳಿಯನ್ನು ರಚಿಸಿಕೊಳ್ಳುವುದಕ್ಕೆ ಶಾಸ್ತ್ರಿ ಮತ್ತು ಆಯೂಬ್ ಒಪ್ಪಿಕೊಂಡರು. ಈ ವೇಳೆಗೆ ಕಛ್ ರಾಣ ಪ್ರದೇಶವು ಪೂರ್ತಿಯಾಗಿ ಮಳೆಗಾಲದ ನೀರಿನಿಂದ ಆವೃತವಾಗಿತ್ತು. ಈ ರೀತಿಯಾಗಿ ಪಾಕಿಸ್ತಾನ ನಡೆಸಿದ ಪರೀಕ್ಷಾರ್ಥಕಾರ್ಯಾಚರಣೆ ಕೊನೆಗೊಂಡಿತು; ಆದರೆ, ಭಾರತೀಯ ಸೇನೆ ದುರ್ಬಲವಾಗಿದೆ ಹಾಗೂ ಅದಕ್ಕೆ ಹೋರಾಡಲು ಚೈತನ್ಯವಿಲ್ಲ ಮತ್ತು ಭಾರತದ ರಾಜಕೀಯ ಮುಂದಾಳುತ್ವವನ್ನು ಅಂತಾರಾಷ್ಟ್ರೀಯ ಸಮುದಾಯದ ಒತ್ತಡಕ್ಕೆ ಸುಲಭವಾಗಿ ಸಿಲುಕಿಸಬಹುದು – ಎಂಬಂಥ ತಪ್ಪು ನಿರ್ಧಾರಕ್ಕೆ ಆಯೂಬ್ ಬಂದರು.
ಆದ್ದರಿಂದಲೇ, ೩೦ ಜೂನ್, ೧೯೬೫ರಂದು ಮಾಡಿಕೊಂಡ ಒಪ್ಪಂದದ ಮಸಿ ಇನ್ನೂ ಆರುವ ಮೊದಲೇ, ಆಯೂಬರು `ಎರಡನೇ ಹಂತದ ಆಪರೇಷನ್ ಗಿಬ್ರಾಲ್ಟರ್’ಗೆ ಕಾಲ ಪಕ್ವವಾಗಿದೆ ಎಂದು ನಿರ್ದೇಶನ ನೀಡಿದರು. ಮೇ ೧೯೬೫ರಲ್ಲಿ, ಮುನ್ಷಿ ಮಹಮ್ಮದ್ ಇಶಾಕ್ನಂತಹ ಕಾಶ್ಮೀರ ಕಣಿವೆಯ ಪ್ಲೆಬಿಸೈಟ್ ಫ್ರಂಟ್ನ `ಜನಪರ ಮುಖಂಡರು’ ನೀಡಿದ ಸಲಹೆಗಳನ್ನು ಆಧರಿಸಿ, ಅಧ್ಯಕ್ಷ ಆಯೂಬ್, ವಿದೇಶಾಂಗ ಸಚಿವ ಭುಟ್ಟೋ ಮತ್ತು ಸೇನೆಯ ಮಹಾದಂಡನಾಯಕ ಜನರಲ್ ಮೂಸಾ ಒಟ್ಟಾಗಿ – `ಕಾಶ್ಮೀರದಲ್ಲಿ ಒಂದು ಸಶಸ್ತ್ರ ಬಂಡಾಯಕ್ಕೆ ಕಾಲ ಪಕ್ವವಾಗಿದೆ’ ಎಂದು ನಂಬಿದರು. ಆಗಸ್ಟ್ ೧೯೬೫ರಲ್ಲಿ ಅವರು ಕಾಶ್ಮೀರ ಕಣಿವೆಯನ್ನು ಭಾರತದ ಹಿಡಿತದಿಂದ ಮುಕ್ತಗೊಳಿಸುವ ಮಹತ್ತ್ವಾಕಾಂಕ್ಷಿ ಯೋಜನೆ `ಆಪರೇಷನ್ ಗಿಬ್ರಾಲ್ಟರ್’ಗೆ ಅನುಮತಿ ನೀಡಿದರು. ಆಗಸ್ಟ್ ೧೪, ೧೯೬೫ರಂದು – ಪಾಕಿಸ್ತಾನದ ರಾಷ್ಟ್ರೀಯ ದಿನದಂದು – ಪಾಕಿಸ್ತಾನದ ಜನತೆಗೆ ತಾನು ಉಡುಗೊರೆಯಾಗಿ ಕಾಶ್ಮೀರವನ್ನು ನೀಡಬೇಕೆಂಬುದಾಗಿ ಆಯೂಬ್ ಕನಸು ಕಟ್ಟಿಕೊಂಡಿದ್ದರು. ಅದಕ್ಕೆ ತಕ್ಕಂತೆ, ಜೂನ್ನಲ್ಲಿ ಪಾಕಿಸ್ತಾನ ಸೇನೆಯಿಂದ, ಪಾಕ್-ಆಕ್ರಮಿತ ಕಾಶ್ಮೀರದಿಂದ, ಮುಜಾಹಿದ್ಗಳು, ನಾಗರಿಕ ಪಡೆಗಳು, ಮುಂಚೂಣಿ ಬೇಹುಗಾರರು ಸೇರಿ ೩೦,೦೦೦ ಮಂದಿ ಒಂದೆಡೆ ಸೇರಿ ಪಾಕ್-ಆಕ್ರಮಿತ ಕಾಶ್ಮೀರದ ನಾಲ್ಕು ಶಿಬಿರಗಳಲ್ಲಿ ಬಂದೂಕುಗಳ ಬಳಕೆಯ ಕುರಿತು, ಸ್ಫೋಟಕಗಳು ಮತ್ತು ಯಂತ್ರನಾಶಕಗಳ ತಂತ್ರಗಳ ಕುರಿತು ಆರು ವಾರಗಳ ತರಬೇತಿ ಪಡೆದರು. ಪಾಕ್-ಆಕ್ರಮಿತ ಕಾಶ್ಮೀರದ ಜನರಲ್ ಆಫೀಸರ್ ಕಮಾಂಡಿಂಗ್ ಆಗಿದ್ದ ಮೇ||ಜ|| ಅಕ್ತರ್ ಹುಸೇನ್ ಮಲಿಕ್ ಅವರನ್ನೆಲ್ಲ ೩೦೦೦ ಮಂದಿಯಿರುವಂತೆ ೧೦ ಶಸ್ತ್ರಸಜ್ಜಿತ ಕಾರ್ಯಪಡೆಯನ್ನಾಗಿ ವಿಭಾಗಿಸಿದ; ವಿಭಜಿತ ಪಡೆಯ ಸದಸ್ಯರಲ್ಲಿ ಸ್ಫೂರ್ತಿ, ಉತ್ಸಾಹವನ್ನು ತುಂಬುವುದಕ್ಕಾಗಿ ಒಂದೊಂದಕ್ಕೂ ಸಲಾಉದ್ದೀನ್, ಖಿಲ್ಜಿ, ಖಾಸಿಮ್, ಖಾಲಿದ್, ಘಜ್ನವಿ, ತಾರಿಖ್, ಮುರ್ತಾಜ, ಬಾಬರ್, ನಸ್ರತ್ ಮತ್ತು ಸಿಕಂದರ್ – ಎಂದು ಐತಿಹಾಸಿಕ ಆಕರ್ಷಣೆಯುಳ್ಳ ಹೆಸರುಗಳನ್ನು ನೀಡಲಾಯಿತು. ಜುಲೈ ೨೫ರಂದು ಆಯೂಬರು ನೀಡಿದ ಉದ್ರೇಕಕಾರಿ ಭಾಷಣದ ನಂತರ, ಇವರನ್ನೆಲ್ಲ ಬಂಡಾಯ ಮತ್ತು ಕಾಶ್ಮೀರ ಕಣಿವೆಯ ಮುಕ್ತಿಗಾಗಿ ಹುರಿದುಂಬಿಸಿ, ಹಂತಹಂತವಾಗಿ ದಕ್ಷಿಣದಲ್ಲಿ ಜಮ್ಮು ಮತ್ತು ಉತ್ತರದಲ್ಲಿ ಕಾರ್ಗಿಲ್ ನಡುವಣ ೩೭ ನುಸುಳುದಾರಿಗಳ ಮೂಲಕ ಜಮ್ಮು ಮತ್ತು ಕಾಶ್ಮೀರ ರಾಜ್ಯದೊಳಗೆ ಸೇರಿಕೊಳ್ಳುವಂತೆ ಮಾಡಲಾಯಿತು.
ಕಣಿವೆಯಲ್ಲಿದ್ದ ಪ್ಲೆಬಿಸೈಟ್ ಫ್ರಂಟ್ ಮತ್ತು ಇತರ ಪ್ರತ್ಯೇಕತಾವಾದಿ ಗುಂಪುಗಳಿಗೆ ಈ ಕಾರ್ಯಾಚರಣೆಯ ಬಗ್ಗೆ ಸಂಪೂರ್ಣ ಮಾಹಿತಿಯಿತ್ತು; ಮತ್ತು, ಅವರು – ಶ್ರೀನಗರದ ವಿಮಾನನಿಲ್ದಾಣ, ಬಾನುಲಿಕೇಂದ್ರ, ಸದರ್ ಪೊಲೀಸ್ ಠಾಣೆಗಳನ್ನು ವಶಪಡಿಸಿಕೊಂಡು ನೆಲೆನಿಲ್ಲಲು ಹಾಗೂ `ಕಾಶ್ಮೀರೀ ಕ್ರಾಂತಿಕಾರಿ ಮಂಡಳಿ'(ಕಾಶ್ಮೀರ್ ರಿವಲ್ಯೂಷನರಿ ಕೌನ್ಸಿಲ್ – ಕೆ.ಆರ್.ಸಿ.)ಯನ್ನು ಸ್ಥಾಪಿಸಿಕೊಂಡು ಆಗಸ್ಟ್ ೧೪, ೧೯೬೫ರಂದು ಭಾರತದ ವಶದಿಂದ ಕಾಶ್ಮೀರದ ಮುಕ್ತಿಯನ್ನು ಘೋಷಿಸಲು ಮತ್ತು ತದನಂತರ ಪಾಕ್ನ ಅಧಿಕೃತ ಸೈನ್ಯ ನೆಲೆಗೊಳ್ಳಲು ಹಾದಿಯನ್ನು ಸುಗಮಮಾಡಿಕೊಡಲು ಸಹಕರಿಸುವುದಕ್ಕೆ ಒಪ್ಪಿಕೊಂಡಿದ್ದರು.
`ಬಲಗೊಳ್ಳದ ಅಂದಾಜುಗಳು! ಎಳೆದುತಂದ ಕಾರ್ಯಾಚರಣೆ’
ಮಹಮ್ಮದ್ ದಿನ್ ಎಂಬ ಒಬ್ಬ ಕುರಿಕಾಯುವ ಹುಡುಗ ಗುಲ್ಮಾರ್ಗ್ನಲ್ಲಿ ಮತ್ತು ನಾಜಿರ್ ಮಹಮ್ಮದ್ ಎಂಬಾತ ಮೆಂಧಾರ್ನಲ್ಲಿ ಶಸ್ತ್ರಧಾರಿಗಳಾಗಿ ಸುತ್ತಾಡುತ್ತಿರುವ ಅಪರಿಚಿತರನ್ನು ನೋಡಿರುವ ಸುದ್ದಿಯನ್ನು ರಕ್ಷಣಾ ಪಡೆಗಳಿಗೆ ಮಟ್ಟಿಸಿದರು; ಅದರಿಂದ ರಕ್ಷಣಾ ಪಡೆ ೨೪ ಗಂಟೆಗಳ ಒಳಗಾಗಿ ಇಡೀ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಾಗೃತಗೊಳಿಸಿತು. ಅದಾಗಲೇ `ಆಪರೇಷನ್ ಗಿಬ್ರಾಲ್ಟರ್’ ಆರಂಭಗೊಂಡಿತ್ತು. ಮುಂದಿನ ಎರಡು ವಾರಗಳಲ್ಲಿ ಹಲವಾರು ನುಸುಳುಕೋರರು ಸೆರೆಹಿಡಿಯಲ್ಪಟ್ಟರು, ಶಸ್ತ್ರಾಸ್ತ್ರಗಳನ್ನೂ ಸ್ಫೋಟಕಗಳನ್ನೂ ವಶಪಡಿಸಿಕೊಳ್ಳಲಾಯಿತು ಮತ್ತು `ಸಲಾಉದ್ದೀನ್ ಪಡೆ’ ವ್ಯಾಪಿಸಿದ್ದ ಶ್ರೀನಗರದ ಬಾಟಾಮಲ್ಲೂ ಪ್ರದೇಶಕ್ಕೆ ಬೆಂಕಿಹಚ್ಚಲಾಯಿತು; ೫೦೦ಕ್ಕೂ ಹೆಚ್ಚು ಮನೆಗಳನ್ನು ಸುಟ್ಟುಹಾಕಿದ್ದಲ್ಲದೆ ನಾರಾರು ನುಸುಳುಕೋರರನ್ನು ಕೊಂದುಹಾಕಲಾಯಿತು.
`ಆಪರೇಷನ್ ಗಿಬ್ರಾಲ್ಟರ್’ ಕಾರ್ಯಾಚರಣೆ ಯಶಸ್ವಿಯಾಯಿತು ಎಂಬ ಹೆಮ್ಮೆಯಿಂದ, ಪಾಕ್-ಆಕ್ರಮಿತ ಕಾಶ್ಮೀರದಿಂದ, `ಸದರ್-ಎ-ಕಾಶ್ಮೀರ್’ ಎಂಬ ಗುಪ್ತ ಬಾನುಲಿಯೊಂದು ಆಗಸ್ಟ್ ೯ರಿಂದ `ಭಾರತದ ಆಡಳಿತದಿಂದ ಕಾಶ್ಮೀರವನ್ನು ಮುಕ್ತಗೊಳಿಸಲಾಗಿದೆ’ ಎಂದು ಅರಚಲು ಆರಂಭಿಸಿತು. `ಕ್ರಾಂತಿ ಸಮಿತಿ ಶ್ರೀನಗರದಿಂದ ಕಾರ್ಯಪ್ರವೃತ್ತವಾಗಿದೆ; ಸ್ಥಳೀಯ ಹೋರಾಟಗಾರರು ಗಿಬ್ರಾಲ್ಟರ್ ಪಡೆಯೊಂದಿಗೆ ಕೈಜೋಡಿಸಿದ್ದಾರೆ…..’ ಇನ್ನೂ ಮುಂತಾಗಿ. ಈ ಕಪೋಲಕಲ್ಪಿತ ಕಾರ್ಯಾಚರಣೆಯ ಬಾನುಲಿಪ್ರಸಾರ ಸೆಪ್ಟೆಂಬರ್ ೧೪-೧೫ರವರೆಗೂ ಮುಂದುವರಿಯಿತು. ದುರದೃಷ್ಟವಶಾತ್, ಪಾಕಿಸ್ತಾನದ ಜನತೆ ಈ ಬಾನುಲಿಪ್ರಸಾರಗಳು ಪಾಕ್-ಆಕ್ರಮಿತ ಕಾಶ್ಮೀರದ ಫಾಂಟಮ್ ಬಾನುಲಿನಿಲಯದಿಂದ ಆಗುತ್ತಿವೆ ಎಂದು ನಂಬಿದರು ಮತ್ತು ಅದೇ ಭ್ರಮೆಯಲ್ಲೆ ಸೆಪ್ಟೆಂಬರ್ ೨೩, ೧೯೬೫ರವರೆಗೆ – ಕದನವಿರಾಮ ಘೋಷಣೆಯಾಗುವವರೆಗೂ ಇದ್ದರು.
ಆಯ್ದಾಯ್ದ ತಿರುಗೇಟು
೧೯೬೫ರ ಆಗಸ್ಟ್ ತಿಂಗಳ ಮಧ್ಯಭಾಗದ ಹೊತ್ತಿಗೆ ಗಿಬ್ರಾಲ್ಟರ್ ಪಡೆಯ ಶಕ್ತಿ ಕುಂದಿಹೋಯಿತು ಮತ್ತು ದಕ್ಷಿಣೋತ್ತರವಾಗಿ ಛಾಂಬ್ ಮತ್ತು ಉರಿ ಪ್ರದೇಶದ ನಡುವಿನ ಕದನವಿರಾಮರೇಖೆಯ ೧೦-೧೫ ಕಿ.ಮೀ. ವ್ಯಾಪ್ತಿಗೆ ಸೀಮಿತವಾಯಿತು. ಭಾರತೀಯ ಸೇನೆಯು ನುಸುಳುದಾರಿಗಳನ್ನು ಪ್ರತಿಬಂಧಿಸಲು ಮತ್ತು ಪಾಕಿಸ್ತಾನಕ್ಕೆ ತಿರುಗೇಟು ನೀಡಲು ನಿರ್ಧರಿಸಿತು. ಎಲ್ಲ ಕಾರ್ಯಾಚರಣೆಗಳು ಅತ್ಯಂತ ಕ್ಷಿಪ್ರವಾಗಿ ತೀರ್ಮಾನಗೊಳ್ಳುತ್ತಿದ್ದವು.
- ಆಗಸ್ಟ್ ೧೫: ನಮ್ಮ ಪಡೆಗಳು ಕದನವಿರಾಮರೇಖೆಯನ್ನು ದಾಟಿ ಪಾಕಿಸ್ತಾನದ ಒಳಗೆ, ಕಾರ್ಗಿಲ್ನ ವಾಯವ್ಯ ಭಾಗದಲ್ಲಿ, ಮೂರು ಆಯಕಟ್ಟಿನ ಜಾಗದಲ್ಲಿ ನೆಲೆಯನ್ನು ಸ್ಥಾಪಿಸಿಕೊಂಡವು ಮತ್ತು ಶ್ರೀನಗರ – ಲೇಹ್ ನಡುವಿನ ರಕ್ಷಣಾ ಸಂಪರ್ಕದ ಮೇಲೆ ಎಲ್ಲ ರೀತಿಯ ಹಿಡಿತವನ್ನು ಸಾಧಿಸಿಕೊಂಡವು.
- ಆಗಸ್ಟ್ ೨೪: ನಮ್ಮ ಪಡೆಗಳು ತಿಥ್ವಾಲ್ ವಿಭಾಗದಲ್ಲಿ ಕದನವಿರಾಮರೇಖೆಯನ್ನು ದಾಟಿ, ಪೀರ್ ಸಾಹೇಬ್ನ್ನು ವಶಪಡಿಸಿಕೊಂಡು, ಅದೇ ಮಾರ್ಗವಾಗಿ ಮುಜಫರಾಬಾದ್-ಖೇಲ್ ಹೆದ್ದಾರಿಯ ಮೇಲೆ ಹಿಡಿತವನ್ನು ಸಾಧಿಸುವುದಕ್ಕಾಗಿ ಕಿಶನ್ಗಂಗಾ ನದಿಯವರೆಗೂ ಮುಂದುವರಿದವು.
- ಆಗಸ್ಟ್ ೨೫: ಮೇಜರ್ ರಣ್ಜಿತ್ ದಯಾಲ್ (ಮುಂದೆ ಲೆ| ಜ|) ಅವರ ನೇತೃತ್ವದಲ್ಲಿ ನಮ್ಮ ಪ್ಯಾರಾಟ್ರೂಪರ್ಗಳು ಉರಿ ವಿಭಾಗದಲ್ಲಿ ಕದನವಿರಾಮರೇಖೆಯನ್ನು ದಾಟಿ, ಆಗಸ್ಟ್ ೨೬-೨೭ ರಾತ್ರಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ೪೦೦೦ ಅಡಿಗಳ ಎತ್ತರವನ್ನು ಏರಿ, ೧೨ ಕಿ.ಮೀ.ನಷ್ಟು ಪಾಕಿಸ್ತಾನ-ಆಕ್ರಮಿತ ಕಾಶ್ಮೀರದ ಒಳಗೆ ನುಗ್ಗಿ ೮,೬೦೦ ಅಡಿಗಳಷ್ಟು ಎತ್ತರದಲ್ಲಿರುವ ಹಾಜಿ-ಪೀರ್ ಕಣಿವೆಯನ್ನು ವಶಪಡಿಸಿಕೊಂಡರು.
ಮುಂದಿನ ಎರಡು ವಾರಗಳಲ್ಲಿ, ನಮ್ಮ ಸೈನಿಕ ತುಕಡಿಗಳು – ದಕ್ಷಿಣದ ಪೂಂಚ್ನಿಂದ ಮತ್ತು ಉತ್ತರದ ಉರಿಯಿಂದ ಆಗಮಿಸಿ – ಸೆಪ್ಟೆಂಬರ್ ೧೦ರಂದು ಹಾಜಿ-ಪೀರ್ನಲ್ಲಿ ಸಂಪರ್ಕಸಾಧಿಸಿದವು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ೧೯ ಸೇನಾನೆಲೆಗಳನ್ನು ವಶಪಸಿಕೊಳ್ಳಲಾಯಿತು ಮತ್ತು ೨೦೦೦ಕ್ಕೂ ಹೆಚ್ಚು ಆಕ್ರಮಣಕಾರರು ಹತರಾದರು ಅಥವಾ ಸೆರೆಹಿಡಿಯಲ್ಪಟ್ಟರು ಹಾಗೂ ಪಶ್ಚಿಮದ ದಿಕ್ಕಿನಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯದೊಳಕ್ಕೆ ನುಸುಳುವುದಕ್ಕೆ ಸಾಧ್ಯವಿರುವ ಎಲ್ಲಾ ದಾರಿಗಳನ್ನೂ ತಡೆದು, ಹಾಜಿ-ಪೀರ್ ಕಣಿವೆಪ್ರದೇಶದ ೩೭೦ ಚದರ ಕಿ.ಮೀ. ಪ್ರದೇಶದ ಮೇಲೆ ಹಿಡಿತವನ್ನು ಸಾಧಿಸಲಾಯಿತು. ಈ ರೀತಿಯಲ್ಲಿ `ಆಪರೇಶನ್ ಗಿಬ್ರಾಲ್ಟರ್’ ವಿಫಲವಾಯಿತು.
ಅಂತಿಮ ಪಣ – ಅಘೋಷಿತ ಯುದ್ಧ
ಆಪರೇಷನ್ ಗಿಬ್ರಾಲ್ಟರ್ ವಿಫಲವಾಗಿದ್ದರಿಂದ, ಆಯೂಬ್ ತನ್ನ ಅಂತಿಮ ಪಣವಾಗಿ ಜಮ್ಮು ಮತ್ತು ಕಾಶ್ಮೀರವನ್ನು ರಾಜಕೀಯವಾಗಿ ಹಾಗೂ ಸೈನಿಕವಾಗಿ ಭಾರತದ ಸಾರ್ವಭೌಮತ್ವದಿಂದ ಬೇರ್ಪಡಿಸುವ `ಆಪರೇಷನ್ ಗ್ರಾಂಡ್ ಸ್ಲಾಮ್’ನ್ನು ರೂಪಿಸಿದ. ತೀವ್ರವಾಗಿ ಬಾಂಬ್ ದಾಳಿ ನಡೆಸಿದನಂತರ, ಪಾಕಿಸ್ತಾನ ತನ್ನ ಒಂದು ಸೇನಾದಳದ ಮೂಲಕ ಎರಡು ಸಶಸ್ತ್ರ ತುಕಡಿಗಳ (೯೦ ಪ್ಯಾಂಟನ್ ಟ್ಯಾಂಕ್ಗಳು) ಬೆಂಬಲದೊಂದಿಗೆ ಸೆಪ್ಟೆಂಬರ್ ೧ರ ಬೆಳಗಿನಜಾವ ೪ ಗಂಟೆಯ ಹೊತ್ತಿಗೆ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿ/ಯುದ್ಧವಿರಾಮ ರೇಖೆಯನ್ನು ದಾಟಿ ಆಕ್ರಮಣವನ್ನು ನಡೆಸಿತು. ಅದರ ಈ ಆಕ್ರಮಣದ ಉದ್ದೇಶಗಳೇನೆಂದರೆ – ರಾಜೌರಿ ಮತ್ತು ಪೂಂಚ್ನ್ನು ಜಮ್ಮುವಿನಿಂದ ಬೇರ್ಪಡಿಸುವುದಕ್ಕೋಸ್ಕರ ಅಕ್ನೂರನ್ನು ವಶಪಡಿಸಿಕೊಳ್ಳುವುದು; ಹಾಗೂ ಜಮ್ಮುವನ್ನು ವಶಪಡಿಸಿಕೊಂಡು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಭಾರತದಿಂದ ಬೇರ್ಪಡಿಸುವುದಾಗಿದ್ದವು. ಮೊದಲ ಮೂರು ದಾಳಿಗಳಲ್ಲಿ ಹೊಡೆತಗಳನ್ನು ತಿಂದಿದ್ದರೂ, ಪಾಕ್ಗೆ ಭಾರತೀಯ ಪಡೆಗಳಲ್ಲಿ ತೀವ್ರವಾದ ಸಾವುನೋವುಗಳನ್ನು ಉಂಟುಮಾಡಲು ಸಾಧ್ಯವಾಯಿತು ಮತ್ತು ಭಾರತೀಯ ಪಡೆಯನ್ನು ಮುನ್ನಾವರ್ ತಾವಿ ನದಿಗುಂಟ ೧೦ ಕಿ.ಮೀ.ಗಳಷ್ಟು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಮಧ್ಯಾಹ್ನದ ಹೊತ್ತಿಗಂತೂ ಪರಿಸ್ಥಿತಿ ಘನಘೋರವಾಗಿತ್ತು. ಶಸ್ತ್ರಗಳಿಲ್ಲದೆ ಮತ್ತು ವಾಯುದಳದ ನೆರವು ಕೂಡ ದೊರೆಯದೆ ಪಾಕಿಸ್ತಾನದ ತೀವ್ರದಾಳಿಯನ್ನು ಎದುರಿಸುವುದು ಭಾರತೀಯ ಯೋಧರಿಗೆ ಕಷ್ಟಸಾಧ್ಯವಾಗಿತ್ತು. ಈ ಸಂಬಂಧ, ಕೆಳಗಿನ ಘಟನೆಗಳು ದೆಹಲಿಯಲ್ಲಿದ್ದ ರಾಜಕೀಯ-ಸೇನಾ ನಾಯಕತ್ವದ ಅದ್ಭುತ ಪ್ರತಿಕ್ರಿಯೆಯನ್ನು ಹೇಳುತ್ತವೆ:
- ಸಂಜೆ ೪.೩೦ – ಭೂದಾಳಿಗೆ ವಾಯುದಾಳಿಯ ನಿಕಟನೆರವನ್ನು ಒದಗಿಸುವ ಬಗ್ಗೆ ಜ| ಚೌಧರಿ ನಿರ್ಧಾರವನ್ನು ತೆಗೆದುಕೊಂಡರು. ಅವರು ಅದನ್ನು ರಕ್ಷಣಾಮಂತ್ರಿಗಳಿಗೆ ಸಂಜೆ ೪.೪೫ರ ಹೊತ್ತಿಗೆ ವಿವರಿಸಿದರು.
- ಸಂಜೆ ೫.೦೦ – ರಕ್ಷಣಾಸಚಿವರಿಗೆ ಮತ್ತು ಭೂಸೇನಾ ದಂಡನಾಯಕರಿಗೆ ಪ್ರಧಾನಿಯವರಿಂದ ವಾಯುಸೇನೆಯ ಬಳಕೆಗೆ ಅನುಮತಿ ದೊರೆಯಿತು. ಮುಂದಿನ ಹತ್ತು ನಿಮಿಷಗಳ ಒಳಗಾಗಿ ವಾಯುದಳದ ದಂಡನಾಯಕರು ಅಖಾಡಕ್ಕಿಳಿದರು.
- ಸಂಜೆ ೫.೨೦ – ವಾಯುದಳದ ಪ್ರಧಾನ ಕಛೇರಿಯಿಂದ ವಾಯುದಳದ ತುಕಡಿಗೆ ಉಡಾವಣೆಗೆ ಆಜ್ಞೆಯಾಯಿತು.
- ಸಂಜೆ ೫.೪೫ – ೨೮ ವಿಮಾನಗಳು (ವ್ಯಾಂಪೈರ್ಗಳು ಮತ್ತು ಮಿಸ್ಟರಿಗಳು) ಛಾಂಬ್ನ ಕದನವನ್ನು ಬೆಂಬಲಿಸಲು ಆಗಸಕ್ಕೆ ನೆಗೆದವು.
- ಸಂಜೆ ೬.೦೦ – ಛಾಂಬ್ನಲ್ಲಿ ಪಾಕಿಸ್ತಾನದ ಪಡೆಗಳ ಮೇಲೆ ವಾಯುದಾಳಿಗಳು ಆರಂಭವಾದವು. ೨೨ ನಿಮಿಷಗಳ ಒಳಗಾಗಿ ಪಾಕಿಸ್ತಾನದ ೧೪ ಟ್ಯಾಂಕ್ಗಳು ಮತ್ತು ೪೮ ಭಾರೀ ಯುದ್ಧವಾಹನಗಳು ನಾಶಗೊಂಡವು. ಸೆಪ್ಟೆಂಬರ್ ೨, ೧೯೬೫ರಂದು, ಸ್ಕ್ವಾಡ್ರನ್ ಲೀಡರ್ ಟ್ರೇವರ್ ಕೀಲರ್ ಮತ್ತು ಫ್ಲೈಟ್-ಲೆಫ್ಟಿನೆಂಟ್ ಪಥಾನಿಯಾ ತಮ್ಮ ನ್ಯಾಟ್ ಫೈಟರ್ಗಳ ಮೂಲಕ ಪಾಕಿಸ್ತಾನದ ಎರಡು ಎಫ್-೮೬ ಸೇಬರ್ ವಿಮಾನಗಳನ್ನು ಹೊಡೆದುರುಳಿಸುವುದರೊಂದಿಗೆ, ಭೂಯುದ್ಧದ ನೆರವಿಗಾಗಿ ಮುಂದಿನ ನಾಲ್ಕೈದು ದಿನಗಳವರೆಗೆ ವಾಯುದಾಳಿಯನ್ನು ತೀವ್ರಗೊಳಿಸಲಾಯಿತು ಮತ್ತು ಮುನಾವರ್ ತಾವಿಯ ಮೇಲಿನ ಪಾಕಿಸ್ತಾನಿ ದಾಳಿಯ ಶಕ್ತಿಗುಂದಿಸಲಾಯಿತು.
ಸೆಪ್ಟೆಂಬರ್ ೪ರ ವೇಳೆಗೆ, ಅಕ್ನೂರ್ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಅಕ್ನೂರ್ ಪಟ್ಟಣಕ್ಕೆ ಕೇವಲ ೧೦ ಕಿ.ಮೀ. ದೂರದಲ್ಲಿದ್ದುದರಿಂದ ಪರಿಸ್ಥಿತಿ ತೀರಾ ಹದಗೆಡುತ್ತಿತ್ತು. ಜತೆಗೆ ಚೀನಾದ ವಿದೇಶಾಂಗ ಸಚಿವ ಚೆನ್-ಯಿ ಸೆಪ್ಟೆಂಬರ್ ೪ರಂದು ಕರಾಚಿಗೆ ಭೇಟಿನೀಡಿದ್ದು ಮತ್ತು ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆಂಬಲವನ್ನು ಘೋಷಿಸಿದ್ದು ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಯಿತು. ಪ್ರಧಾನ ಮಂತ್ರಿ ಶಾಸ್ತ್ರಿಯವರು ಈಗ ಶಸ್ತ್ರಪಡೆಗಳಿಗೆ ಪಂಜಾಬಿನಲ್ಲೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಆಕ್ರಾಮಕ ಕಾರ್ಯಾಚರಣೆಯನ್ನು ಆರಂಭಿಸಲು ಆದೇಶ ನೀಡಿದರು ಮತ್ತು ಭಾರತ ತಳೆದ ಯುದ್ಧನಿರ್ಧಾರದ ಹಿಂದಿನ ಉದ್ದೇಶವನ್ನು ಈ ರೀತಿಯಾಗಿ ಸ್ಪಷ್ಟಪಡಿಸಿದರು:
“ಮೊದಲನೆಯದಾಗಿ – ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಪಾಕಿಸ್ತಾನದ ಪ್ರಯತ್ನವನ್ನು ಸೋಲಿಸಿರಿ; ಎರಡನೆಯದಾಗಿ – ಪಾಕಿಸ್ತಾನದ ಸಶಸ್ತ್ರಪಡೆಯ ಆಕ್ರಮಣಶಕ್ತಿಯನ್ನು ನಿಸ್ತೇಜಗೊಳಿಸಿರಿ; ಮತ್ತು ಮೂರನೆಯದಾಗಿ – ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತದ ಭೂಭಾಗವನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಚೌಕಾಸಿ ನಡೆಸಲು ಅಗತ್ಯವಾದಷ್ಟು ಮಾತ್ರ ಅದರ ಭೂಭಾಗವನ್ನು ವಶಪಡಿಸಿಕೊಳ್ಳಿ.”
ಲಾಹೋರ್ ವಿಭಾಗದಲ್ಲಿ ಹೋರಾಡುವುದಕ್ಕಾಗಿ ಪಂಜಾಬಿನಲ್ಲಿ ೧೧ ಪ್ರಮುಖ ಪಡೆ ಹಾಗೂ ಸಿಯಾಲ್ಕೋಟ್ ವಿಭಾಗದಲ್ಲಿ ಹೋರಾಡಲು ೧ ಪ್ರಮುಖ ಪಡೆ ಎಂದು ಎರಡು ಮುಂಚೂಣಿ ವಿಭಾಗಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಯುದ್ಧದ ಕುರಿತಾಗಿ ಸ್ಥೂಲವಾದ ನಿರ್ದೇಶನವನ್ನಿತ್ತಮೇಲೆ ಪ್ರಧಾನಮಂತ್ರಿಯವರಾಗಲಿ, ರಕ್ಷಣಾಮಂತ್ರಿಯವರಾಗಲಿ ಕಾರ್ಯಾಚರಣೆ ಕುರಿತಾಗಿ ಮತ್ತೆ ಇನ್ನಾವುದೇ ರೀತಿಯ ಮಧ್ಯಪ್ರವೇಶವನ್ನೆಸಗಲಿಲ್ಲ. ಪ್ರಧಾನಮಂತ್ರಿಯವರು ದೇಶದ ಆಂತರಿಕ ನೀತಿ ಮತ್ತು ರಾಜತಾಂತ್ರಿಕ ನಿಪುಣತೆಯನ್ನು ಪ್ರದರ್ಶಿಸಿದರು. ೧೯೬೨ರ ಕರಾಳ ನೆನಪಿನಲ್ಲಿ ಕ್ರಿಯಾಶಕ್ತಿಯೇ ಉಡುಗುವಂತಿದ್ದರೂ, ಶಾಸ್ತ್ರಿಜೀ ಮತ್ತು ಚೌವ್ಹಾಣರು ಪೌರಾಡಳಿತ ಮತ್ತು ಸೇನಾ ನಾಯಕರ ಮಧ್ಯೆ ಒಂದು ರೀತಿಯ ಅಪ್ರಕಟಿತ ತಿಳಿವಳಿಕೆಯನ್ನು ಸ್ಥಾಪಿಸಿದ್ದರು. ತುರ್ತುಪರಿಸ್ಥಿತಿ ನಿರ್ವಹಣೆಯ ಸಂಪುಟ ಸಮಿತಿ(ಎಮರ್ಜೆನ್ಸಿ ಕ್ಯಾಬಿನೆಟ್ ಕಮಿಟಿ)ಯು ಯುದ್ಧದ ದಿನಗಳಲ್ಲಿ ಉದ್ದಕ್ಕೂ ಕೇವಲ ರಾಜಕೀಯ ಮತ್ತು ರಾಜತಾಂತ್ರಿಕ ವಿಷಯವಾಗಿಯಲ್ಲದೆ ಒಮ್ಮೆಯೂ ಕೂಡ ಯುದ್ಧಕಾರ್ಯಾಚರಣೆಯ ವಿಷಯಗಳಲ್ಲಿ ಚರ್ಚೆಯನ್ನು ನಡೆಸಲೇ ಇಲ್ಲ. ಸಿಯಾಲ್ಕೋಟ್, ಪಂಜಾಬ್ ಮತ್ತು ರಾಜಸ್ಥಾನದ ವಿಶಾಲ ಮುಂಚೂಣಿ ವಲಯದಲ್ಲಿ ಹಲವಾರು ಕಡೆ ಮುನ್ನುಗ್ಗಿ ದಾಳಿಗಳನ್ನು ನಡೆಸುವುದಕ್ಕೆ ಜನರಲ್ ಚೌಧರಿಯವರು ತಾವೇ ಸ್ವತಃ ತೀರ್ಮಾನವನ್ನು ತೆಗೆದುಕೊಂಡರು ಮತ್ತು ಅದರಿಂದ ವೈರಿಗಳನ್ನು ಅಣಗಿಸಲು ಸಾಧ್ಯ ಎಂಬ ನಂಬಿಕೆಯಿಂದ ಅವರು ಕಾರ್ಯೋನ್ಮುಖರಾಗಿದ್ದರು.
ಪ್ರತ್ಯಾಕ್ರಮಣ
ಸೆಪ್ಟೆಂಬರ್ ೬ರಂದು ರಕ್ಷಣಾಮಂತ್ರಿ ವೈ.ಬಿ. ಚವ್ಹಾಣ್ ತುಂಬಿದ ಲೋಕಸಭೆಯಲ್ಲಿ – “ಇಂದು ಬೆಳಗ್ಗೆ ಲಾಹೋರ್ ವಿಭಾಗದಲ್ಲಿ ಮುಂಚೂಣಿ ಪ್ರದೇಶದ ೫೦ ಕಿ.ಮೀ. ಉದ್ದಕ್ಕೂ ನಮ್ಮ ಸೇನೆ ಮೂರು ಕವಲುಗಳಾಗಿ ಪಶ್ಚಿಮ ಪಾಕಿಸ್ತಾನವನ್ನು ಆಕ್ರಮಿಸಿದೆ” – ಎಂದು ಔಪಚಾರಿಕ ಹೇಳಿಕೆಯನ್ನು ನೀಡಿದರು. ಅಂತೂ ನಮ್ಮ ಸರ್ಕಾರ ಕೊನೆಗೂ ಪಾಕಿಸ್ತಾನವನ್ನು ಓಲೈಸುವ ನೀತಿಯನ್ನು ಬಿಟ್ಟುಕೊಟ್ಟಿತಲ್ಲ ಎಂದು ಇಡೀ ದೇಶವೇ ಸಮಾಧಾನ ತಳೆಯಿತು. ಅದುವರೆಗೂ, ೧೮ ವರ್ಷಗಳಷ್ಟು ದೀರ್ಘಕಾಲ, ಗಡಿಯುದ್ದಕ್ಕೂ ಪಾಕಿಸ್ತಾನ ನಡೆಸುತ್ತಿದ್ದ ದುರಹಂಕಾರದ, ನಂಜಿನ, ಪ್ರಚೋದಕ ಪ್ರಚಾರಗಳನ್ನೂ, ನೀಡುತ್ತಿದ್ದ ಕಿರುಕುಳಗಳನ್ನೂ ಅತಿಯಾದ ತಾಳ್ಮೆಯಿಂದ ಸಹಿಸಿಕೊಳ್ಳುವ ಪರಿಸ್ಥಿತಿ ದೇಶಕ್ಕೆ ಒದಗಿತ್ತು.
ಸೈನ್ಯದ ಮೂರು ತುಕಡಿಗಳನ್ನು ೭೫ ಕಿ.ಮೀ. ಉದ್ದದ, ಲಾಹೋರ್ ಬಳಿಯ ಇಚ್ಚೋಗಿಲ್ ಕಾಲುವೆ ಕಡೆಗೆ ಸಾಗುವ ಮೂರು ಹಾದಿಗಳುದ್ದಕ್ಕೂ ಪ್ರತ್ಯೇಕವಾಗಿ ತೊಡಗಿಸಲಾಯಿತು. ಒಂದು ತುಕಡಿ ಖರ್ಲಾ-ಬುರ್ಖಿ-ಲಾಹೋರ್ ದಾರಿಯನ್ನು ಅಪಾಯಮುಕ್ತಗೊಳಿಸುತ್ತಾ ಸೆಪ್ಟೆಂಬರ್ ೮ರಂದು ಬುರ್ಖಿಯನ್ನು ವಶಪಡಿಸಿಕೊಂಡಿತು; ಸೆಪ್ಟೆಂಬರ್ ೧೫ರ ವೇಳೆಗೆ ಪೂರ್ತಿಯಾಗಿ ಕಾಲುವೆಯನ್ನು ಅಪಾಯಮುಕ್ತಗೊಳಿಸಿತಲ್ಲದೆ, ಇಚ್ಚೋಗಿಲ್ ಕಾಲುವೆಯ ಪೂರ್ವಭಾಗದಲ್ಲಿ ಪಾಕಿಸ್ತಾನದ ೨೫೦ ಚದರ ಕಿ.ಮೀ.ಗಳಷ್ಟು ಪ್ರದೇಶವನ್ನು ವಶಪಡಿಸಿಕೊಂಡಿತು.
ಅದರ ಉತ್ತರದಲ್ಲಿ, ವಾಘಾ ವಿಭಾಗದಲ್ಲಿ ಇನ್ನೊಂದು ತುಕಡಿ ಗ್ರಾಂಡ್ ಟ್ರಂಕ್ ರಸ್ತೆಯ ಮೂಲಕ ಮುನ್ನುಗ್ಗಿತು. ಅದರ ಮುಂಚೂಣಿ ಪಡೆ ಸೆಪ್ಟೆಂಬರ್ ೬ರಂದು ಬೆಳಗ್ಗೆ ೧೦.೩೦ಕ್ಕೆ ಇಚ್ಚೋಗಿಲ್ ಕಾಲುವೆಯನ್ನು ದಾಟಿ ಲಾಹೋರ್ನ ಹೊರವಲಯದಲ್ಲಿರುವ ಬಾಟಾ ಫ್ಯಾಕ್ಟರಿಯನ್ನು ತಲಪಿತು. ಆದರೆ ತುಕಡಿಗೆ ಯಾವುದೇ ಬೆಂಬಲ ಲಭ್ಯವಾಗದ್ದರಿಂದ ತೀವ್ರ ಸಾವುನೋವುಗಳನ್ನು ಅನುಭವಿಸಿತು ಮತ್ತು ಪುನಃ ಇಚ್ಚೋಗಿಲ್ ಕಾಲುವೆಯತ್ತ ಹಿಮ್ಮೆಟ್ಟಬೇಕಾಯಿತು. ಸೆಪ್ಟೆಂಬರ್ ೭ರಂದು ಪಾಕಿಸ್ತಾನಿ ಪಡೆಗಳು ಪ್ರತಿದಾಳಿಯನ್ನು ನಡೆಸಿದವು ಮತ್ತು ಮುಂದಿನ ಹದಿನಾಲ್ಕು ದಿವಸಗಳ ಕಾಲ ವಾಘಾ ವಿಭಾಗದಲ್ಲಿ ಘನಘೋರ ಯುದ್ಧವೇ ನಡೆದುಹೋಯಿತು. ಭಾರತೀಯರು ಸೆಪ್ಟೆಂಬರ್ ೨೧/೨೨ರಂದು ಡೋಗ್ರಾಯ್ನ್ನು ವಶಪಡಿಸಿಕೊಂಡರು ಹಾಗೂ ೧೦೮ ಪಾಕಿಸ್ತಾನಿ ಸೈನಿಕರನ್ನು ಸೆರೆಹಿಡಿದರು ಮತ್ತು ೨೧ ಟ್ಯಾಂಕ್ಗಳನ್ನು ವಶಪಡಿಸಿಕೊಂಡರು.
ಮೂರನೇ ತುಕಡಿ ಪಶ್ಚಿಮದತ್ತ ತ್ವರಿತವಾಗಿ ಧಾವಿಸಿ ರೂಹಿವಾಲ್, ಬಂಡ್ ಜಂಕ್ಷನ್ ಮತ್ತು ಬಲ್ಲಿಯನ್ವಾಲಾವನ್ನು ಸೆಪ್ಟೆಂಬರ್ ೬ರಂದು ೧೧.೩೦ರ ಸಮಯಕ್ಕೆ ವಶಪಡಿಸಿಕೊಂಡಿತು. ಆದರೆ ೨.೩೦ರ ಹೊತ್ತಿಗೆ ಪಾಕಿಸ್ತಾನದ ಕಡೆಯಿಂದ ತೀವ್ರ ಪ್ರತಿದಾಳಿಯು ಎದುರಾದದ್ದರಿಂದ ಸೆಪ್ಟೆಂಬರ್ ೬-೭ರ ರಾತ್ರಿಯ ವೇಳೆಗೆ ಅದು ಖೇಮ್ಕರನ್ ಬಳಿಯ ಅಂತಾರಾಷ್ಟ್ರೀಯ ಗಡಿಯವರೆಗೆ ಹಿಮ್ಮೆಟ್ಟಬೇಕಾಯಿತು. ಆದರೆ ಸೆಪ್ಟೆಂಬರ್ ೭ರಂದು ಪಾಕಿಸ್ತಾನ ಯಾಕೆ ಹಿಮ್ಮೆಟ್ಟಿಸುವ ಕಾರ್ಯವನ್ನು ತೀವ್ರಗೊಳಿಸಲಿಲ್ಲ ಹಾಗೂ ಆಕ್ರಮಣವನ್ನು ೨೪ ತಾಸುಗಳವರೆಗೆ ಅದೇಕೆ ನಿಲ್ಲಿಸಿತು ಎಂಬುದಿಂದಿಗೂ ಅರ್ಥವಾಗುತ್ತಿಲ್ಲ. ಆದರೆ ಈ ವಿಳಂಬ (ದೈವೀ ಸಂಕಲ್ಪ) ೪ ಸೇನಾತುಕಡಿಗಳು ಮತ್ತು ೩ ಸಶಸ್ತ್ರ ಪಡೆಗಳನ್ನು ಸೇರಿಸಿಕೊಂಡು ರಕ್ಷಣಾವ್ಯೂಹವನ್ನು ರಚಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಿಸಿತು; ಸ್ಫೋಟಕಗಳನ್ನು ಅಳವಡಿಸಿಕೊಳ್ಳಲು ಹಾಗೂ ರೋಹಿ ನಾಲೆ ಮತ್ತಿತರ ನಾಲೆಗಳನ್ನು ಒಡೆದು ಪೂರ್ತಿ ಪ್ರದೇಶವನ್ನು ಜಲಾವೃತಗೊಳಿಸಲೂ ಸಾಧ್ಯವಾಗಿಸಿತು.
ಸೆಪ್ಟೆಂಬರ್ ೮ರಂದು ಬೆಳಗ್ಗೆ ೮.೩೦ಕ್ಕೆ ಪಾಕಿಸ್ತಾನದ ೧ನೇ ಸಶಸ್ತ್ರ ಪಡೆ ಅನಿರೀಕ್ಷಿತವಾಗಿ ದಾಳಿಯನ್ನು ಆರಂಭಿಸಿದಾಗ ಅವರ ಯುದ್ಧಟ್ಯಾಂಕುಗಳು ನೀರುತುಂಬಿದ್ದ ಯುದ್ಧಭೂಮಿಯಲ್ಲಿ ಹೂತುಹೋದವು. ಫಿರಂಗಿಗಳು ಮತ್ತು ಟ್ಯಾಂಕ್ನಾಶಕ ತಂಡಗಳೊಡನೆ ಇದನ್ನೇ ಕಾಯುತ್ತಿದ್ದ ನಮ್ಮ ಸೇನೆಯ `ಡೆಕ್ಕನ್ ಹಾರ್ಸ್’ನ ಸೈನಿಕರು ಮೊದಲ ಹಂತದಲ್ಲಿ ಪಾಕಿಸ್ತಾನದ ೧೪ ಪ್ಯಾಟನ್ ಟ್ಯಾಂಕ್ಗಳನ್ನು ನಾಶಪಡಿಸಿದರು. ಅನಂತರದ ಆಕ್ರಮಣವನ್ನು ೧/೯ನೇ ಜಿಆರ್ ಮತ್ತು ೪ನೇ ಗ್ರೆನೆಡಿಯರ್ಗಳ ಮೇಲೆ ಪಾಕಿಸ್ತಾನದ ೪ನೇ ಸಶಸ್ತ್ರಪಡೆ ನಡೆಸಿತು. ಮುಂಚೂಣಿ ರಕ್ಷಣೆಯಲ್ಲಿ ಆರಂಭಿಕ ಯಶ ದಕ್ಕಿದರೂ, ಸುಬೇದಾರ್ ಮೂಲ್ಚಂದ್ ನೇತೃತ್ವದ ೪ನೇ ಗ್ರೆನೆಡಿಯರ್ನ ಟ್ಯಾಂಕ್ನಿರೋಧಿ ಯೋಧರು ಮತ್ತು ಕಂಪೆನಿ ಕ್ವಾರ್ಟರ್ ಮಾಸ್ಟರ್ ಹವಾಲ್ದಾರ್ ಅಬ್ದುಲ್ ಹಮೀದ್ ಒಂದರ ನಂತರ ಒಂದರಂತೆ ಪಾಕಿಸ್ತಾನದ ೩ ಪ್ಯಾಟನ್ ಟ್ಯಾಂಕ್ಗಳನ್ನು ನಾಶಪಡಿಸಿದರು. ಹಮೀದರು ನಾಲ್ಕನೇ ಟ್ಯಾಂಕ್ನ ನಾಶಕ್ಕೆ ಉದ್ಯುಕ್ತರಾಗಿದ್ದಾಗ ಶತ್ರುಗಳ ಮತ್ತೊಂದು ಪ್ಯಾಟನ್ ಟ್ಯಾಂಕ್ ಅವರನ್ನು ಹೊಡೆದುರುಳಿಸಿತು. ಆದರೆ ಅದಾಗಲೇ ಅವರು ಯಶಸ್ವಿಯಾಗಿ ತಮ್ಮ ಪಡೆಯಮೇಲೆ ಶತ್ರುಗಳು ನಡೆಸುತ್ತಿದ್ದ ದಾಳಿಯ ಶಕ್ತಿಗುಂದಿಸಿದ್ದರು. (ಅವರು ಈ ಪರಮೋಚ್ಚ ಬಲಿದಾನಕ್ಕಾಗಿ ದೇಶದ ಅತ್ಯುನ್ನತ ಶೌರ್ಯಪ್ರಶಸ್ತಿ – ಪರಮವೀರಚಕ್ರದಿಂದ ಪುರಸ್ಕೃತರಾದರು. ಅವರು ೧೯೬೫ರ ಯುದ್ಧದ ಪ್ರಪ್ರಥಮ ಪರಮವೀರಚಕ್ರ ಪುರಸ್ಕೃತರು ಕೂಡ.) ಇದೇ ಸಮಯಕ್ಕೆ, ಪಾಕಿಸ್ತಾನದ ೪ ಮತ್ತು ೫ನೇ ಸಶಸ್ತ್ರದಳ ನಮ್ಮ ಉತ್ತರ ಮತ್ತು ಆಗ್ನೇಯ ರಕ್ಷಕದಳ ನಮಗೆ ಸಹಕರಿಸುವುದನ್ನು ನಿವಾರಿಸಲು ಯತ್ನಿಸಿತಾದರೂ, ಅಡಗಿ ಕುಳಿತಿದ್ದ ಭಾರತದ ೩ನೇ ಸಶಸ್ತ್ರ ಪಡೆ (೩ ಮತ್ತು ೮ನೇ ಅಶ್ವದಳಗಳು) ಅವರೊಡನೆ ಹೋರಾಟದಲ್ಲಿ ತೊಡಗುವ ಮೂಲಕ ಆ ಯತ್ನವನ್ನು ವಿಫಲಗೊಳಿಸಲಾಯಿತು.
ಸೆಪ್ಟೆಂಬರ್ ೮-೯ರಂದು ಪಾಕ್ನ ೧ನೇ ಸಶಸ್ತ್ರ ಪಡೆಯು ತೀವ್ರವಾದ ಹೋರಾಟವನ್ನು ನಡೆಸಿತು; ಆದರೆ ಭಾರತದ (೨ನೇ ಸಶಸ್ತ್ರ ತುಕಡಿ) ಸಶಸ್ತ್ರ ಪಡೆ ಹಾಗೂ ಫಿರಂಗಿಗಳು ಬಹುಮಂದಿ ಪಾಕಿಸ್ತಾನಿ ಸೈನಿಕರನ್ನು ಕೊಂದುಹಾಕಿದವು. ಈ ತೀಕ್ಷ್ಣವಾದ ಯುದ್ಧಟ್ಯಾಂಕ್ಗಳ ಹೋರಾಟದಲ್ಲಿ ಪಾಕ್ನ ೧ನೇ ಸಶಸ್ತ್ರ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಹಾಗೂ ಫಿರಂಗಿ ತುಕಡಿಯ ಕಮಾಂಡರ್ ಹತರಾದರು ಮತ್ತು ೪ ನೇ ಅಶ್ವಸೇನೆಯ ಕಮಾಂಡಿಂಗ್ ಆಫೀಸರ್ ಸೆರೆಹಿಡಿಯಲ್ಪಟ್ಟರು. ಕೇವಲ ೪೮ ಗಂಟೆಗಳಲ್ಲಿ ಪಾಕಿಸ್ತಾನ ೯೭ ಪ್ಯಾಟನ್ ಯುದ್ಧಟ್ಯಾಂಕ್ಗಳನ್ನು ಕಳೆದುಕೊಂಡಿತು; ಇದರಲ್ಲಿ ೩೨ ಟ್ಯಾಂಕ್ಗಳು ಸುಸ್ಥಿತಿಯಲ್ಲಿದ್ದವು. ಸೆಪ್ಟೆಂಬರ್ ೧೦ರಿಂದ ಚೆಲ್ಲಾಪಿಲ್ಲಿಯಾದ ಪಾಕಿಸ್ತಾನದ ೧ನೇ ಸಶಸ್ತ್ರ ವಿಭಾಗದ ಸೈನಿಕರು ಪಾಕಿಸ್ತಾನದೊಳಕ್ಕೆ ಹಿಮ್ಮೆಟ್ಟತೊಡಗಿದರು. ಖೇಮ್ಕರನ್-ಅಸಲ್ ಉತ್ತರ್ ವಿಭಾಗದಲ್ಲಿ ದಕ್ಕಿದ ಈ ಪ್ರಮುಖ ವಿಜಯದಿಂದಾಗಿ ಕ್ಷಿಪ್ರಕಾರ್ಯಾಚರಣೆಯ ಮೂಲಕ ನಮ್ಮ ಪಡೆಯನ್ನು ಬಿಯಾಸ್ ನದಿಯ ಪಶ್ಚಿಮದಲ್ಲಿ ಕಟ್ಟಿಹಾಕಬೇಕೆಂಬ ಪಾಕಿಸ್ತಾನದ ಉದ್ದೇಶಕ್ಕೆ ಆರಂಭದಲ್ಲೇ ಸೋಲುಂಟಾಯಿತು. ಹಾಗೇನಾದರೂ ಪಾಕಿಸ್ತಾನ ಹಾರಿಕೆ ಮತ್ತು ಬಿಯಾಸ್ ಸೇತುವೆಗಳನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರೆ, ಆಮೇಲೆ ದೆಹಲಿಯವರೆಗೂ ಮುಂದುವರಿದಿದ್ದ ಗ್ರ್ಯಾಂಡ್ ಟ್ರಂಕ್ ರೋಡ್ನ ಗುಂಟ ಶತ್ರುಗಳನ್ನು ಎದುರಿಸಿ ನಿಲ್ಲುವುದು ವಸ್ತುತಃ ಅಸಾಧ್ಯದ ಮಾತಾಗಿತ್ತು. ಇದು ಆಯೂಬರ `ದೆಹಲಿಯ ತನಕ ಅಡ್ಡಾಡುವ’ (Strolling up to Delhi) ಕನಸು ಕೂಡ ಆಗಿತ್ತು. ಪಾಕಿಸ್ತಾನದ ಈ ಕನಸನ್ನು ಭಾರತೀಯ ಸೇನೆಯ ೪ನೇ ವಿಭಾಗ ಮತ್ತು ೩ನೇ ಸಶಸ್ತ್ರಪಡೆಗಳು ಖೇಮ್ ಕರನ್ನಲ್ಲಿ ೧೯೬೫ರ ಯುದ್ಧದ `ಪ್ಯಾಟನ್ ಟ್ಯಾಂಕ್ಗಳ ಗೋರಿ’ಯನ್ನು ಕಟ್ಟುವ ಮೂಲಕ ಅಳಿಸಿಹಾಕಿದರು; ಇದಕ್ಕಾಗಿ ನಾವು ಅವರಿಗೆ ಕೃತಜ್ಞತೆಯನ್ನು ಅರ್ಪಿಸಬೇಕು.
ವಾಯುನೆಲೆಗಳ ವಿರುದ್ಧ ರಹಸ್ಯ ಕಾರ್ಯಾಚರಣೆ
ಸೆಪ್ಟೆಂಬರ್ ೬ರಂದು ಲಾಹೋರ್ ವಿಭಾಗದಲ್ಲಿ ಪಂಜಾಬ್ ಮುಂಚೂಣಿದಳವನ್ನು ಸಿದ್ಧಗೊಳಿಸುತ್ತಿದ್ದಂತೆಯೇ, ಭಾರತದ ಪದಾತಿದಳಗಳಿಗೆ ವಾಯುಸೇನೆಯ ಬೆಂಬಲ ದೊರಕದಂತೆ ಮಾಡಲು ಆಯೂಬ್ ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಾರತೀಯ ವಾಯುಸೇನಾನೆಲೆಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ ತೀರ್ಮಾನಿಸಿದರು. ಅದರಂತೆ, ಸೆಪ್ಟೆಂಬರ್ ೬-೭ರ ರಾತ್ರಿಯಲ್ಲಿ, ಪಟಾನ್ಕೋಟ್ ಮತ್ತು ಅಂಬಾಲಾ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು, ಪಾಕಿಸ್ತಾನ ತನ್ನ `ವಿಶೇಷ ಕಾರ್ಯಪಡೆ’ (ಸ್ಪೆಷಲ್ ಸರ್ವಿಸಸ್ ಗ್ರೂಪ್)ಯ ೪೫೦ಕ್ಕೂ ಹೆಚ್ಚು ಪ್ಯಾರಾಟ್ರೂಪ್ ಕಮಾಂಡೋಗಳನ್ನು ೬೦-೭೦ ಸೈನಿಕರ ತಂಡದಂತೆ, ಪಂಜಾಬ್ನ ಹಲ್ವಾರಾ ಮತ್ತು ಆದಂಪುರದಲ್ಲಿ ರಹಸ್ಯವಾಗಿ ಇಳಿಬಿಟ್ಟಿತು. ಹೀಗೆ ಇಳಿಬಿಟ್ಟ ಸೈನಿಕರು ಲಕ್ಷ್ಯತಾಣಗಳಿಂದ ಬಹುದೂರದಲ್ಲಿದ್ದುದರಿಂದ ಪಾಕಿಸ್ತಾನಕ್ಕೆ ಈ ಸಾಹಸಕಾರ್ಯ ತೀವ್ರ ಮಾರಣಾಂತಿಕವಾಗಿಯೇ ಪರಿಣಮಿಸಿತು. ಯುದ್ಧಭೂಮಿ, ಭಾರತೀಯ ಸೈನ್ಯ ಹಾಗೂ ನಾಗರಿಕರ ನಡುವೆ ಸಂಪರ್ಕವ್ಯವಸ್ಥೆಯ ಕೊರತೆಯಿದ್ದಿತ್ತಾದರೂ, ಪೊಲೀಸರು ತಮ್ಮ `ಹಿಡಿ ಅಥವಾ ಕೊಲ್ಲು’ ಕಾರ್ಯಾಚರಣೆಯ ಮೂಲಕ ಉತ್ತಮ ಸಹಕಾರವನ್ನು ನೀಡಿದರು. ಇದರಿಂದಾಗಿ ಸೆಪ್ಟೆಂಬರ್ ೯ರ ಹೊತ್ತಿಗೆ ಪಾಕ್ನ `ವಿಶೇಷ ಕಾರ್ಯಪಡೆಯ’ ೨೦ ಮಂದಿ ಕೊಲ್ಲಲ್ಪಟ್ಟರು, ೧೯೩ ಕಮಾಂಡೋಗಳನ್ನು ಸೆರೆಹಿಡಿಯಲಾಯಿತು ಮತ್ತು ಉಳಿದವರು ಪರಾರಿಯಾದರು.
ಸಿಯಾಲ್ಕೋಟ್ ವಿಭಾಗದಲ್ಲಿ ಪ್ರತಿದಾಳಿ
ಲಾಹೋರ್ ನಂತರ ಸಿಯಾಲ್ಕೋಟ್ ಪಾಕಿಸ್ತಾನದ ೪ನೇ ಮುಖ್ಯದಳದ ಅತ್ಯಂತ ಸೂಕ್ಷ್ಮ ಕೇಂದ್ರವಾಗಿತ್ತು. ಅದರ ರಕ್ಷಣೆಗೆ ೧೫ನೇ ಮುಂಚೂಣಿ ವಿಭಾಗ ಅಲ್ಲಿತ್ತು. ಭಾರತದ ದಾಳಿಯನ್ನು ಎದುರಿಸಲು ೬ ಮತ್ತು ೭ನೇ ಮುಂಚೂಣಿ ವಿಭಾಗಗಳನ್ನು ೬ನೇ ಫಿರಂಗಿದಳದೊಡನೆ ಸಿಯಾಲ್ಕೋಟ್ನ ಸುತ್ತ ನಿಯೋಜಿಸಲಾಗಿತ್ತು. ಸೆಪ್ಟೆಂಬರ್ ೧ರ ಅಕ್ನೂರ್ ವಿರುದ್ಧದ ದಾಳಿಯಲ್ಲೂ ಕೂಡ ಇದೇ ಸಿಯಾಲ್ಕೋಟ್ ನೆಲೆಯನ್ನು ಒದಗಿಸಿತ್ತು.
ಭಾರತದ ೧೧ನೇ ಮುಖ್ಯದಳ ಪಂಜಾಬ್/ಲಾಹೋರ್ ವಿಭಾಗದ ಮುಂಚೂಣಿಯನ್ನು ತೆರೆದು ಸೆಪ್ಟೆಂಬರ್ ೬ರಂದು ಯುದ್ಧ ಆರಂಭಿಸಿದ ನಂತರ, ೧ನೇ ಮುಖ್ಯದಳ ಸಿಯಾಲ್ಕೋಟ್ ವಿಭಾಗದಲ್ಲಿ ಆಕ್ರಮಣವನ್ನು ಮಾಡಿತು. ೧ನೇ ಸಶಸ್ತ್ರದಳ ವಿಭಾಗದ ಸಹಯೋಗದೊಡನೆ, ಸೆಪ್ಟೆಂಬರ್ ೭ರ ಹೊತ್ತಿಗೆ ಸಿಯಾಲ್ಕೋಟ್ನಲ್ಲಿ ಒಂದುಗೂಡುವಂತೆ, ಉತ್ತರ ಮತ್ತು ದಕ್ಷಿಣ ಹೀಗೆ ಎರಡೂ ಕಡೆಗಳಿಂದ ಅವು ಮುನ್ನುಗ್ಗಿದವು ಮತ್ತು ಪಾಕಿಸ್ತಾನದ ಸಶಸ್ತ್ರಪಡೆಯನ್ನು ಯುದ್ಧದಲ್ಲಿ ತೊಡಗುವಂತೆ ಮಾಡಿದವು. ದಕ್ಷಿಣದ ಕಡೆಯವರು ತೀವ್ರ ಹೋರಾಟದ ನಂತರ ಸೆಪ್ಟೆಂಬರ್ ೧೦-೧೧ರಂದು ಫಿಲೋರಾವನ್ನು ವಶಪಡಿಸಿಕೊಂಡರು. ಮುಂದಿನ ೧೦ ದಿನಗಳ ಕಾಲ ಭಾರತ ಮತ್ತು ಪಾಕಿಸ್ತಾನದ ನಡುವೆ ಘನಘೋರ ಟ್ಯಾಂಕ್ಗಳ ಕಾಳಗವೇ ನಡೆಯಿತು. ಇದರಲ್ಲಿ ಉಭಯದೇಶಗಳ ಸುಮಾರು ೪೦೦ ಟ್ಯಾಂಕ್ಗಳು ಪಾಲ್ಗೊಂಡಿದ್ದು ಭಾರತ ಮತ್ತು ಪಾಕಿಸ್ತಾನದ ಸೈನಿಕರು `ಮಾಡು ಇಲ್ಲವೇ ಮಡಿ’ ಎಂಬ ರೀತಿಯಲ್ಲಿ ಶೌರ್ಯದ ಹೋರಾಟವನ್ನು ನಡೆಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆದ ಟ್ಯಾಂಕ್ಸಮರದ ನಂತರ ಜಗತ್ತಿನಲ್ಲಿ ನಡೆದ ಅತ್ಯಂತ ಭೀಕರ ಟ್ಯಾಂಕ್ಗಳ ಕಾಳಗ ಇದಾಗಿತ್ತು. ಸಿಯಾಲ್ಕೋಟ್ನ ಸುತ್ತ ನಡೆದ ಯುದ್ಧಗಳು ಅಕ್ಷರಶಃ ಪಾಕಿಸ್ತಾನದ ಶಸ್ತ್ರಪಡೆಗಳ ಪಾಲಿಗೆ ನಿರ್ಣಾಯಕವಾಗಿದ್ದವು. ೧೦ ದಿನಗಳಲ್ಲಿ ಅವರು ೩೨೫ಕ್ಕೂ ಹೆಚ್ಚು ಟ್ಯಾಂಕ್ಗಳನ್ನು ಕಳೆದುಕೊಂಡರು. ಈ ಹೋರಾಟದಲ್ಲಿ ೧೭ನೇ ಪೂನಾ ಹಾರ್ಸ್ ಪಡೆಯ ಕಮಾಂಡಿಂಗ್ ಆಫೀಸರ್ ಲೆ| ಕ| ಎ.ಬಿ. ತಾರಾಪೊರೆ ಅವರು ಪಾಕಿಸ್ತಾನದ ೭ ಟ್ಯಾಂಕ್ಗಳನ್ನು ನಾಶಪಡಿಸಿ ಸೆಪ್ಟೆಂಬರ್ ೧೪ರಂದು ಹುತಾತ್ಮರಾದರು. ಉತ್ತರೋತ್ತರ ಅವರಿಗೆ ಪರಮವೀರಚಕ್ರವನ್ನು ನೀಡಿ ಗೌರವಿಸಲಾಯಿತು. ಇದು ೧೯೬೫ರ ಯುದ್ಧದ ಎರಡನೆಯ ಪರಮವೀರಚಕ್ರ ಪುರಸ್ಕಾರ. ಸೆಪ್ಟೆಂಬರ್ ೨೨ರಂದು ಕದನವಿರಾಮ ಘೋಷಣೆಯಾಗುವ ವೇಳೆಗೆ ೬ನೇ ಮುಂಚೂಣಿ ವಿಭಾಗವು ಸಿಯಾಲ್ಕೋಟ್ ಸುತ್ತಲಿನ ೩೦೦ ಹಳ್ಳಿಗಳಿಂದ ಕೂಡಿದ ೩೨೦ ಚದರ ಕಿ.ಮೀ. ಪ್ರದೇಶವನ್ನು ವಶಪಡಿಸಿಕೊಂಡಿತ್ತು.
ವಾಯುದಳ ಹೋರಾಟಗಳು
೧೯೬೫ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾರತೀಯ ವಾಯುಸೇನೆ ಅಪ್ರತಿಮ ಪಾತ್ರವನ್ನೇ ನಿರ್ವಹಿಸಿತು. ಅದು ಎರಡು ರೀತಿಯ ಗುರಿಯನ್ನು ಹೊಂದಿತ್ತು. ಮೊದಲನೆಯದಾಗಿ ಸೆಪ್ಟೆಂಬರ್ ೧ರಂದು ಛಾಂಬ್ನಲ್ಲಿ ಮುನ್ನುಗ್ಗುತ್ತಿದ್ದ ಪಾಕಿಸ್ತಾನದ ಸಶಸ್ತ್ರಪಡೆಯ ಶಕ್ತಿಯನ್ನು ತಗ್ಗಿಸುವುದು; ತದನಂತರ ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಹಾಳುಗೆಡವಿ ಅದರ ಯುದ್ಧಸಾಮರ್ಥ್ಯವನ್ನು ಕುಂದಿಸುವುದು ಮತ್ತು ಸರ್ಗೋದ, ಚಕ್ಲಾ, ಪೇಶಾವರ್, ಕೋಹಟ್ ಮತ್ತು ಅಕ್ವಾಲ್ ಮೇಲೆ ನಿಯಮಿತವಾಗಿ ಬಾಂಬಿನ ಮಳೆಗರೆಯುವುದು.
ಭಾರತೀಯ ವಾಯುಸೇನೆ ಲಾಹೋರ್ ವಿಭಾಗದಲ್ಲಿ ೧೧ನೇ ಮುಖ್ಯದಳಕ್ಕೆ ಅತ್ಯಂತ ಸ್ಮರಣೀಯ ನೆರವನ್ನು ನೀಡಿತು. ಭಾರತ ತಾನು ೭೫ ವಿಮಾನಗಳನ್ನು ಕಳೆದುಕೊಂಡು ಪಾಕಿಸ್ತಾನದ ೭೩ ವಿಮಾನಗಳನ್ನು ನಾಶಪಡಿಸಿದೆ ಎಂದು ಹೇಳಿಕೊಂಡರೆ; ಪಾಕಿಸ್ತಾನ ತಾನು ಕೇವಲ ೧೯ ವಿಮಾನಗಳನ್ನು ಮಾತ್ರ ಕಳೆದುಕೊಂಡು ಭಾರತದ ೧೧೦ ವಿಮಾನಗಳನ್ನು ಹೊಡೆದುರುಳಿಸಿರುವೆ ಎಂದು ಹೇಳಿಕೊಂಡಿದೆ. ೧೯೬೫ರ ಸದೆಬಡಿತದ ನಂತರ ಪಾಕಿಸ್ತಾನದ ವಾಯುಪಡೆ ೧೯೭೧ರ ಯುದ್ಧದಲ್ಲಾಗಲಿ ಅಥವಾ ತದನಂತರವೇ ಆಗಲಿ ಪುನಃ ತನ್ನ ಸಾಮರ್ಥ್ಯವನ್ನು ತೋರುವ ಸಾಹಸವನ್ನೇ ಮಾಡಲಿಲ್ಲ.
ಅಂತಾರಾಷ್ಟ್ರೀಯ ಪ್ರತಿಕ್ರಿಯೆ; ಭಾರತದ ವಿದೇಶನೀತಿಯ ಮೇಲಿನ ಪರಿಣಾಮ
ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನವಿರಾಮ ಜಾರಿಗೆ ಬಂದಾಗ ವಾಷಿಂಗ್ಟನ್ನ ಕಾಲಮಾನ ಸೆಪ್ಟೆಂಬರ್ ೨೨ರಂದು ಬೆಳಗ್ಗೆ ೭ ಗಂಟೆ; ಲಂಡನ್ನಲ್ಲಿ ರಾತ್ರಿ ೧೧ ಗಂಟೆ ಮತ್ತು ಭಾರತದಲ್ಲಿ ಸೆಪ್ಟೆಂಬರ್ ೨೩ರ ಬೆಳಗಿನಜಾವದ ೩.೩೦ ಹಾಗೂ ಪಾಕಿಸ್ತಾನದಲ್ಲಿ ೨.೩೦. ಈ ಸಂದರ್ಭದಲ್ಲಿ ಆಯೂಬ್ ಕುರಿತು ಅಮೆರಿಕದ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅಪಹಾಸ್ಯಕರ ರೀತಿಯಲ್ಲಿ ಹೀಗೆ ಟೀಕೆ ಮಾಡಿದರು – “ಆಯೂಬ್ ಕಾಶ್ಮೀರಿಗಳ ಮೇಲೆ ಇರಿಸಿಕೊಂಡಿದ್ದ ಕುರುಡು ನಂಬಿಕೆಯೇ ಅವನನ್ನು ಇಂತಹ ದುಡುಕಿನ ಸಾಹಸಕ್ಕೆಳಸಿತು ಮತ್ತು ಸರಿಯಾಗಿಯೇ ಹುರಿದು ಮುಕ್ಕಿ ಪಾಠಕಲಿಸಿತು.” ಇದು ಅಮೆರಿಕಕ್ಕೆ ದಕ್ಷಿಣ ಏಶಿಯಾದ ಬಗ್ಗೆ ಆಸಕ್ತಿಯಿಲ್ಲದಿರುವುದನ್ನು ಎತ್ತಿತೋರಿಸಿತು. ಭಾರತ-ಪಾಕ್ ಸಂಘರ್ಷದಲ್ಲಿ ಅಮೆರಿಕದ ಆಸಕ್ತಿಯಿದ್ದದ್ದು ಕೇವಲ ಸೆಪ್ಟೆಂಬರ್ ೧೭ರಂದು ಚೀನಾ ತಾನು ಮಧ್ಯಪ್ರವೇಶಿಸುವ ಬೆದರಿಕೆಯೊಡ್ಡಿದ್ದಕ್ಕಷ್ಟೆ ಸೀಮಿತವಾಗಿತ್ತು; ಅವರ ಪ್ರಮುಖ ಲಕ್ಷ್ಯವಿದ್ದದ್ದು ಅಮೆರಿಕದ ಚರಿತ್ರೆಯ ದಿಕ್ಕನ್ನೇ ಬದಲಿಸಬಲ್ಲ ವಿಯೆಟ್ನಾಂ ಯುದ್ಧದ ಮೇಲಾಗಿತ್ತು.
ಜಾನ್ಸನ್ ೧೯೬೫ರ ಏಪ್ರಿಲ್ನಲ್ಲೇ, ಕಛ್ ರಾಣ ಬಿಕ್ಕಟ್ಟಿನ ಸಂದರ್ಭದಲ್ಲೇ, `ಆಯೂಬ್ ಮತ್ತು ಶಾಸ್ತ್ರಿ ಮಧ್ಯೆ ಮತ್ತು ದಕ್ಷಿಣ ಏಶ್ಯಾ ಬಿಕ್ಕಟ್ಟಿನಲ್ಲಿ ಅಮೆರಿಕ ತಲೆತೂರಿಸದಿರಲು’ ನಿರ್ಧರಿಸಿದ್ದರು. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ, ೧೯೬೫ರ ಆಗಸ್ಟ್ನಲ್ಲಿ, ಸಾಂಪ್ರದಾಯಿಕ ಯುದ್ಧ ನಡೆಯಬಹುದು ಎಂದು ಅಮೆರಿಕ ಎಚ್ಚರಿಸಿದ್ದರೂ ಕೂಡ, ಪಾಕಿಸ್ತಾನ ನಡೆಸಿದ ಆಪರೇಷನ್ ಗಿಬ್ರಾಲ್ಟರ್ನಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡಿದ್ದು, ಸೆಪ್ಟೆಂಬರ್ ೩-೪ರಂದು ಛಾಂಬ್ ಪ್ರದೇಶದುದ್ದಕ್ಕೂ ನಡೆಸಿದ ಆಕ್ರಮಣ ತಡೆಯಲ್ಪಟ್ಟದ್ದು ಮತ್ತು ಸೆಪ್ಟೆಂಬರ್ ೬ರಂದು ಭಾರತ ಲಾಹೋರಿನತ್ತ ಆಕ್ರಮಣವನ್ನು ಆರಂಭಿಸಿದ್ದು – ಇವೆಲ್ಲವನ್ನು ಕಂಡು ಅಮೆರಿಕದ ರಾಯಭಾರಿ ಪಾಕಿಸ್ತಾನದ ಅಧ್ಯಕ್ಷ ಆಯೂಬರತ್ತ ಧಾವಿಸಿ, “ಅಧ್ಯಕ್ಷರೇ, ಭಾರತ ನಿಮ್ಮ ಕುತ್ತಿಗೆಯನ್ನೇ ಅಮುಕಿ ಹಿಡಿದಿದೆ” – ಎಂದು ಅಕ್ಷರಶಃ ಸಿಟ್ಟಿನಿಂದ ಅಬ್ಬರಿಸಿದ್ದರು. ಅಮೆರಿಕದ ಅಧ್ಯಕ್ಷ ಜಾನ್ಸನ್ ಎರಡು ವಿಷಯದ ಬಗ್ಗೆ ಪಾಕಿಸ್ತಾನದತ್ತ ಕೋಪೋದ್ರಿಕ್ತರಾಗಿದ್ದರು; ಮೊದಲನೆಯದಾಗಿ, ಅಮೆರಿಕ ಪಾಕಿಸ್ತಾನಕ್ಕೆ ನೆರವಾಗಿ ನೀಡಿದ್ದ ಶಸ್ತ್ರಗಳನ್ನು ಅದು ಒಂದು ಕಮ್ಯುನಿಸ್ಟೇತರ ದೇಶದ ವಿರುದ್ಧ ಉಪಯೋಗಿಸಿದ್ದು; ಎರಡನೆಯದಾಗಿ ಅದಕ್ಕಿಂತಲೂ ಗಹನವಾದ ವಿಷಯವಾಗಿದ್ದುದೆಂದರೆ, ಸೆಪ್ಟೆಂಬರ್ ೪ರಂದು ಚೀನಾದ ವಿದೇಶಾಂಗ ಸಚಿವ ಕರಾಚಿಗೆ ಭೇಟಿನೀಡಿದ್ದಲ್ಲದೆ ಪಾಕಿಸ್ತಾನಕ್ಕೆ ಮುಕ್ತ ಬೆಂಬಲವನ್ನೂ ಘೋಷಿಸಿ ಭಾರತವನ್ನು ಸಂಧಾನದ ವೇದಿಕೆಗೆ ಬರುವಂತೆ ಒತ್ತಾಯಿಸಿದ್ದು. ಸೆಪ್ಟೆಂಬರ್ ೮ರಂದು ದೃಢನಿರ್ಧಾರ ತಳೆದು ಜಾನ್ಸನ್ ಭಾರತ ಮತ್ತು ಪಾಕಿಸ್ತಾನದ ಮೇಲೆ ಸಂಪೂರ್ಣ ಶಸ್ತ್ರಮಾರಾಟನಿಷೇಧವನ್ನು ಹೇರಿದರು. ಸೆಪ್ಟೆಂಬರ್ ಮಧ್ಯಭಾಗದ ಹೊತ್ತಿಗೆ ಪಾಕಿಸ್ತಾನೀ ಸೈನ್ಯಕ್ಕೆ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗತೊಡಗಿದ್ದರಿಂದ ಮತ್ತು ಅಗತ್ಯ ಸೇನಾಸಾಮಗ್ರಿಗಳನ್ನು ಪೂರೈಸಿಕೊಳ್ಳುವುದೂ ಕಷ್ಟವಾಗತೊಡಗಿದ್ದರಿಂದ ೧೯೬೫ ಸೆಪ್ಟೆಂಬರ್ ೨೨ರಂದು ವಿಶ್ವಸಂಸ್ಥೆ ಹೇರಿದ ಕದನವಿರಾಮವನ್ನು ಒಪ್ಪಿಕೊಳ್ಳುವುದು ಅದಕ್ಕೆ ಅನಿವಾರ್ಯವಾಯಿತು. ಪಾಕಿಸ್ತಾನೀ ದೃಷ್ಟಿಯಿಂದ ಇವೆಲ್ಲ ಅದಕ್ಕೆ ಅಮೆರಿಕದ ಕಡೆಯಿಂದ ಎದುರಾದ ಅನರೀಕ್ಷಿತ ಪ್ರತಿಕ್ರಿಯೆಗಳಾಗಿದ್ದವು; ಮತ್ತು ತತ್ಕಾರಣದಿಂದಾಗಿ ಮುಂದಿನ ೧೫ ವರ್ಷಗಳಷ್ಟು ದೀರ್ಘಕಾಲ, ೧೯೭೯ರಲ್ಲಿ ಸೋವಿಯತ್ ರಶ್ಯಾ ಆಫಘನಿಸ್ತಾನವನ್ನು ಆಕ್ರಮಿಸಿಕೊಳ್ಳುವವರೆಗೆ, ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧ ಹಳಸಿಹೋಯಿತು.
ಸಾವಿರಾರು ಶಸ್ತ್ರಧಾರಿ ಪಾಕಿಸ್ತಾನಿ ನುಸುಳುಕೋರರು ಕಾಶ್ಮೀರದೊಳಕ್ಕೆ ನುಸುಳುವಾಗ ಸುಮ್ಮನಿದ್ದ ಬ್ರಿಟಿಷ್ ಸರ್ಕಾರ ಮಾತ್ರ ಪಾಕಿಸ್ತಾನದ ವಿರುದ್ಧ ಆಕ್ರಮಣ ನಡೆಸಿದ್ದಕ್ಕಾಗಿ ಭಾರತದ ಕ್ರಮವನ್ನು ಅತ್ಯಂತ ಕಟುವಾಗಿ ಟೀಕಿಸಿತು. ಪಾಕಿಸ್ತಾನ ಸೆಪ್ಟೆಂಬರ್ ೧ರಂದು ಅಂತಾರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿದಾಗ ಮತ್ತು ಅಸಂಖ್ಯ ಶಸ್ತ್ರಾಸ್ತ್ರಗಳೊಡನೆ ಛಾಂಬ್ನ್ನು ಆಕ್ರಮಿಸಿಕೊಂಡಾಗ ಅದು ಚಕಾರ ಶಬ್ದವನ್ನೂ ಎತ್ತಿರಲಿಲ್ಲ. ಇದರಿಂದಾಗಿ ಬ್ರಿಟಿಷ್ ಸರ್ಕಾರದೊಂದಿಗೆ ಭಾರತದ ಸಂಬಂಧ ೧೯೬೫ರಿಂದ ೧೯೭೧ರವರೆಗೆ ಎಷ್ಟು ಹದಗೆಟ್ಟಿತೆಂದರೆ ತದನಂತರವೂ ಕೂಡ ಅದು ಪೂರ್ವಸ್ಥಿತಿಗೆ ಮರಳಲೇ ಇಲ್ಲ.
ಸೆಪ್ಟೆಂಬರ್ ೪ರಿಂದಾರಭ್ಯ ವಿಶ್ವಸಂಸ್ಥೆಯ ಭದ್ರತಾಮಂಡಳಿಯು ಯುದ್ಧವಿರಾಮದ ಬಗ್ಗೆ ಉಭಯ ದೇಶಗಳ ಮನವೊಲಿಸುವುದಕ್ಕೋಸ್ಕರ ಸಕ್ರಿಯ ಪ್ರಯತ್ನವನ್ನು ಮಾಡಿತು. ಆದರೂ, ಜಮ್ಮು ಮತ್ತು ಕಾಶ್ಮೀರದೊಳಗೆ ಸಾವಿರಾರು ಶಸ್ತ್ರಧಾರಿ ಆತಂಕವಾದಿಗಳನ್ನು ನುಗ್ಗಿಸಿರುವ ಕುರಿತು ಮತ್ತು ಕದನವಿರಾಮ ಉಲ್ಲಂಘನೆಯ ಹೆಚ್ಚಳವನ್ನು ಕುರಿತು ಪಾಕಿಸ್ತಾನವನ್ನು ಸ್ಪಷ್ಟ ಶಬ್ದಗಳಲ್ಲಿ ಕಟುವಾಗಿ ಖಂಡಿಸಿರುವ ಜ| ನಿಮ್ಮೋ (ಭಾರತದಲ್ಲಿ ವಿಶ್ವಸಂಸ್ಥೆಪರ ಸೇನಾವೀಕ್ಷಕರ ತಂಡದ ಮುಖ್ಯಸ್ಥರು) ಅವರು ೧೯೬೫ರ ಆಗಸ್ಟ್ ೧೬ ಮತ್ತು ೨೧ರಂದು ನೀಡಿದ ವರದಿಗಳನ್ನು ಬಿಡುಗಡೆಗೊಳಿಸಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಾಧ್ಯವಾಗಲಿಲ್ಲ. ಬದಲಿಗೆ, ವಿಶ್ವಸಂಸ್ಥೆಯ ಕೆಲವು ವೀಕ್ಷಕರು ೧೯೬೫ರ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಛಾಂಬ್ ವಲಯದಲ್ಲಿ ಶಸ್ತ್ರಾಸ್ತ್ರಗಳ ಮತ್ತು ಸೈನಿಕರ ಜಮಾವಣೆಯ ವಿರುದ್ಧ ಭಾರತಕ್ಕೆ ಎಚ್ಚರಿಕೆಯನ್ನು ನೀಡಿದರು. ಇವನ್ನೆಲ್ಲ ಅವಲೋಕಿಸಿದರೆ, ವಿಶ್ವಸಂಸ್ಥೆಯ ರಕ್ಷಣಾಮಂಡಳಿಯು ಆಗಸ್ಟ್ ೧೯೬೫ರಲ್ಲೇ ಪಾಕಿಸ್ತಾನಕ್ಕೆ ಅದು ಜಮ್ಮು ಮತ್ತು ಕಾಶ್ಮೀರದ ಗುಂಟ ನಡೆಸಿದ ದುಸ್ಸಾಹಸದಿಂದ ತಲೆದೋರುವ ಮತ್ತು ಪಾರಂಪರಿಕ ಯುದ್ಧದ ಪರಿಣಾಮಗಳ ಬಗ್ಗೆ ಎಚ್ಚರಿಸಿದ್ದರೂ ಕೂಡ ಆಯೂಬರು ಅದನ್ನು ಕೇಳಿ ಸುಮ್ಮನಿರುತ್ತಿದ್ದರೇ ಎಂದು ಯಾರಿಗಾದರೂ ಆಶ್ಚರ್ಯವಾಗದೆ ಇರದು. ಇಂದಿಗೂ ಕೂಡ ಅದೊಂದು ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದಿದೆ!
ಪಾಕಿಸ್ತಾನದ ಕುರಿತಾಗಿ ವಿಶ್ವಸಂಸ್ಥೆಯ ಅಸಹಾಯತೆಯನ್ನು ಕಂಡು, ಅಲಿಪ್ತ ಚಳವಳಿಯಲ್ಲಿ ಭಾರತದ ಅತ್ಯಂತ ನಿಕಟ ರಾಷ್ಟ್ರಗಳಾದ ಈಜಿಪ್ಟ್ ಮತ್ತು ಯುಗೊಸ್ಲಾವಿಯ ಕೂಡ ಭಾರತ-ಪಾಕ್ ಕದನದ ಸಂದರ್ಭದಲ್ಲಿ `ಅಲಿಪ್ತ’ವಾಗಿಯೇ ಉಳಿದವು. ಇರಾನ್ ಮತ್ತು ಇಂಡೊನೇಶಿಯಾ ಬಹಿರಂಗವಾಗಿ ಪಾಕಿಸ್ತಾನವನ್ನು ಬೆಂಬಲಿಸಿದವಲ್ಲದೆ ಶಸ್ತ್ರಾಸ್ತ್ರಗಳನ್ನೂ ಪೂರೈಸಿದವು.
ಕದನವಿರಾಮ ಮತ್ತು ತಾಷ್ಕೆಂಟ್ ಒಪ್ಪಂದ
ಸೆಪ್ಟೆಂಬರ್ ೨೩ರಂದು ೨೨ ದಿನಗಳ ಪಾಕಿಸ್ತಾನ-ಭಾರತದ ನಡುವಿನ ಹೋರಾಟ ಯುದ್ಧವಿರಾಮದ ಮೂಲಕ ಅಂತ್ಯಗೊಂಡಿತು. ಪಾಕಿಸ್ತಾನದ ಅಟಾಟೋಪದ ಯೋಜನೆಗಳಾದ `ಆಪರೇಷನ್ ಗಿಬ್ರಾಲ್ಟರ್’ ಮತ್ತು `ಗ್ರಾಂಡ್ ಸ್ಲಾಮ್’ ಕಾರ್ಯರೂಪಕ್ಕಿಳಿದ ವಾರದೊಳಗೇ ಭಗ್ನಗೊಂಡವಾದರೆ; ತನ್ನ ರಾಜಕೀಯ ಲಕ್ಷ್ಯಗಳನ್ನು ಸಾಧಿಸುವಲ್ಲಿ ಭಾರತೀಯ ಸೇನೆ ಅನುಸರಿಸಿದ, ಹಲವು ದೋಷಯುಕ್ತ ಮತ್ತು ಸ್ಪಷ್ಟತೆಯಿರದ ನಿರ್ಧಾರಗಳು ಸೆಪ್ಟೆಂಬರ್ ೨೨ರ ಹೊತ್ತಿಗೆ ಅದನ್ನು ಎಲ್ಲ ಮುಖಗಳಲ್ಲೂ ಇಕ್ಕಟ್ಟಿನ ಪರಿಸ್ಥಿತಿಗೆ ತಂದು ನಿಲ್ಲಿಸಿದವು. ಸೋವಿಯತ್ ರಶ್ಯಾ ಒಕ್ಕೂಟ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಧ್ಯಸ್ಥಿಕೆ ವಹಿಸಿ ಈ ಕೆಳಗಿನ ತೊಡಕುಗಳನ್ನು ನಿವಾರಿಸಿಕೊಂಡ ನಂತರ ತಾಷ್ಕೆಂಟ್ನಲ್ಲಿ ಜನವರಿ ೪, ೧೯೬೬ರಂದು ಶಾಂತಿಯ ಒಪ್ಪಂದವಾಯಿತು:
- ಪಾಕಿಸ್ತಾನ ಭಾರತದ `ಯುದ್ಧ ಬೇಡ’ ಎಂಬ ಒಪ್ಪಂದದ ಸಲಹೆಯನ್ನು ತಿರಸ್ಕರಿಸಿತು.
- ಕಾಶ್ಮೀರದ ವಿಭಜನೆಗೆ ಪಾಕಿಸ್ತಾನ ಸಮ್ಮತಿಸಲಿಲ್ಲ. ಬದಲಿಗೆ ತನ್ನದೇ ಸೂತ್ರದಂತೆ ಕಾರ್ಯತಂತ್ರವೊಂದರ ಮೂಲಕ, ತನಗೆ ಅನುಕೂಲವಾಗುವಂತೆ, ಸಮಸ್ಯೆಯನ್ನು ಅಂತಾರಾಷ್ಟ್ರೀಯವಾಗಿಸುವುದನ್ನು ಪಾಕಿಸ್ತಾನ ಬಯಸಿತು.
- ಅಂತಿಮವಾಗಿ ೧೯೬೬ ಜನವರಿ ೪ರ ಶಾಂತಿ ಒಪ್ಪಂದ ಉಭಯ ದೇಶಗಳು ೧೯೬೫ರ ಆಗಸ್ಟ್ ೫ರ ಪೂರ್ವಸ್ಥಿತಿಗೆ ಅನುಗುಣವಾಗಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮಾಡಿತು.
ಯುದ್ಧೋತ್ತರದ ೫೦ ವರ್ಷ – ಮುಂದೇನು?
ಕೆಳಗೆ ಹೇಳಲಾದ ವಿಷಯಗಳು ಭಾರತ-ಪಾಕಿಸ್ತಾನ ಬಾಂಧವ್ಯದ ಮೇಲೆ ತೀವ್ರ ಪ್ರಭಾವವನ್ನು ಬೀರಿದವು ಮತ್ತು ಉಲ್ಬಣಿಸಿರುವ ಕಾಶ್ಮೀರ ಸಮಸ್ಯೆ ಉಲ್ಬಣಾವಸ್ಥೆಯಲ್ಲಿ ಹಾಗೆಯೆ ಮುಂದುವರಿದಿದೆ.
- ೧೯೬೨ರ ಚೀನಾ ಯುದ್ಧದ ಹೀನಾಯ ಸೋಲಿನ ನಂತರ ಉಡುಗಿಹೋಗಿದ್ದ ಭಾರತೀಯಸೇನೆಯ ಆತ್ಮವಿಶ್ವಾಸವನ್ನು ೧೯೬೫ರ ಈ ಯುದ್ಧ ಪುನಃಸ್ಥಾಪಿಸಿತು.
- ಭಾರತಕ್ಕೆ ಅಂತಾರಾಷ್ಟ್ರೀಯ ಬಾಂಧವ್ಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ; ಆದರೆ ದೇಶದ ಆರ್ಥಿಕಶಕ್ತಿಯನ್ನು ಮತ್ತು ಸೈನಿಕ ಪ್ರಾಬಲ್ಯವನ್ನು ಕೇವಲ ರಾಷ್ಟ್ರೀಯ ಹಿತಾಸಕ್ತಿಯಿಂದಲಷ್ಟೇ ರಕ್ಷಿಸಿಕೊಳ್ಳಲು ಸಾಧ್ಯವಾದೀತು ಎಂಬ ನಿಜದ ಅರಿವಾಯಿತು.
- ೧೯೬೫ರ ಯುದ್ಧಾನಂತರ ಮುಂದೆ ಯಾವತ್ತೂ ರಾಜತಾಂತ್ರಿಕವಾಗಿ ಪಾಕಿಸ್ತಾನದ ಜತೆಗಿನ ವ್ಯವಹಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಯನ್ನು ಭಾರತ ಒಪ್ಪಿಕೊಳ್ಳಲಿಲ್ಲ.
- ರಾಜಕೀಯವಾಗಿ-ಸೈನಿಕವಾಗಿ `ಕತ್ತುಕೊಯ್ಯುವ’ ಮೇಲಾಟದಲ್ಲಿ ಪಾಕಿಸ್ತಾನ ೧೯೭೧ರಲ್ಲಿ ಎರಡು ಹೋಳಾಗಿ ಬಾಂಗ್ಲಾದೇಶದ ನಿರ್ಮಾಣವಾಯಿತು. ಉಳಿದದ್ದು ಇತಿಹಾಸ.
- ಆರ್ಥಿಕವಾಗಿ ಮತ್ತು ಸೈನಿಕವಾಗಿ ಪಾಕಿಸ್ತಾನ ೧೯೬೫ರ ಪೂರ್ವದ ಸ್ಥಿತಿಗೆ ಮತ್ತೆ ಮರಳಲಿಲ್ಲ.
- ೧೯೬೫ರ ಯುದ್ಧದ ಪರಿಣಾಮವಾಗಿ, ದಕ್ಷಿಣ ಏಶ್ಯಾದಲ್ಲಿ – ಭಾರತದಲ್ಲಿ (ಇಂದಿರಾ)ಗಾಂಧಿ ಹಾಗೂ ಪಾಕಿಸ್ತಾನದಲ್ಲಿ ಭುಟ್ಟೋ – ವಂಶಾಡಳಿತಕ್ಕೆ ನಾಂದಿಯಾಯಿತು.
- ೧೯೮೦ರಲ್ಲಿ ಆಫಘನಿಸ್ತಾನದಲ್ಲಿ ಸೋವಿಯತ್ ರಶ್ಯಾ ವಿರುದ್ಧ ಮತ್ತು ೨೧ನೇ ಶತಮಾನದ ಮೊದಲ ದಶಕದಲ್ಲಿ ಅಲ್-ಖೈದಾ ವಿರುದ್ಧ ಅಮೆರಿಕ ಸಮರ ಸಾರಿದ್ದ ಸಂದರ್ಭದಲ್ಲಿ ಪಾಕಿಸ್ತಾನ ಅಮೆರಿಕದ ಆಪ್ತವಲಯದಲ್ಲಿ ಸ್ಥಾನವನ್ನು ಪಡೆಯಿತಾದರೂ ಮುಂದೆ ಅದು ಜಾಗತಿಕ ಭಯೋತ್ಪಾನೆಯ ಕೇಂದ್ರಸ್ಥಾನವಾಗಿ ಮತ್ತು ದಕ್ಷಿಣ ಏಶ್ಯಾದ ಅಭದ್ರತೆಗೆ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿತು.
- ೧೯೭೧ರ ನಂತರ, ಸಾಂಪ್ರದಾಯಿಕ ಯುದ್ಧದ ಮೂಲಕ ಭಾರತದ ಜತೆ ಹೋರಾಟ ನಡೆಸುವ ತನ್ನ ಅಸಾಮರ್ಥ್ಯದ ಬಗ್ಗೆ ಪಾಕಿಸ್ತಾನದ ಸೇನಾನಾಯಕತ್ವಕ್ಕೆ ಸ್ಪಷ್ಟ ಮನವರಿಕೆಯಾಯಿತು. ತದನಂತರ ೧೯೯೦ರಿಂದ ಇಂದಿನವರೆಗೆ ಅದು ಭಾರತದ ವಿರುದ್ಧ ಯಾವತ್ತೂ ಪರೋಕ್ಷಯುದ್ಧದ ತಂತ್ರವನ್ನೇ ಆಶ್ರಯಿಸಿದೆ.
- ಹಿಂದಿನ ಮೂರು ದಶಕಗಳಲ್ಲಿ ಹಲವಾರು ಪ್ರಧಾನಿ/ಅಧ್ಯಕ್ಷರ ಮಟ್ಟದ ಸಭೆಗಳು, ಮಂತ್ರಿಗಳ ಮಟ್ಟದ ಮಾತುಕತೆಗಳು ನಡೆದುವು. ದುರದೃಷ್ಟವಶಾತ್ ಪ್ರತಿಯೊಂದು ಸಭೆ, ಮಾತುಕತೆಯೂ `ಒಂದು ಹೆಜ್ಜೆ ಮುಂದೆ-ಎರಡು ಹೆಜ್ಜೆ ಹಿಂದೆ’ ಎಂಬಂತಾಗಿ ಉಳಿದವು.
- ರಾಜಕೀಯ-ರಾಜತಾಂತ್ರಿಕ ಮಟ್ಟದ ಮಾತುಕತೆ ನಡೆಯುವ ಸಂದರ್ಭದಲ್ಲಿ, ನಿಜವಾದ ಅಧಿಕಾರ ಇರುತ್ತಿದ್ದದ್ದು ಯಾವಾಗಲೂ ಕಾಶ್ಮೀರ ಸಮಸ್ಯೆಯನ್ನು ಜೀವಂತವಿರಿಸಲು ಬಯಸುವ ಪಾಕಿಸ್ತಾನದ ಸೇನೆಯ ಕೈಯಲ್ಲಿ. ಒಮ್ಮೆ ಯಾವುದಾದರೂ ಕಾರಣದಿಂದ ಮತ್ತು ಯಾವುದಾದರೂ ರೀತಿಯಿಂದ ಕೊಡು-ಕೊಳ್ಳುವ ಮೂಲಕ ಭಾರತ ಮತ್ತು ಪಾಕಿಸ್ತಾನ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಂಡದ್ದೇ ಆದರೆ (ಇಂದಿಗೆ ಪ್ರಸ್ತುತ ಎಂದು ತೋರುವ) ತದನಂತರ ಪಾಕಿಸ್ತಾನ ಸೇನೆಯ ಪ್ರಾಬಲ್ಯ ಅಪ್ರಸ್ತುತವೆನಿಸುತ್ತದೆ. ಜ| ಮುಶರಫ್ ೨೦೦೪ರಿಂದ ಆರಂಭಿಸಿ ತಾನು ಪದಚ್ಯುತಗೊಳ್ಳುವವರೆಗೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕಾಗಿ ಈ ಕೆಳಗಿನ ನಾಲ್ಕು ಸೂತ್ರಗಳನ್ನು ಪರಿಹಾರ ರೂಪದಲ್ಲಿ ಮುಂದಿರಿಸಿದ್ದಿದೆ:
- ಕಾಶ್ಮೀರಿಗಳಿಗೆ ಎರಡೂ ಕಡೆ ಹೋಗಿಬರಲು ಸಾಧ್ಯವಾಗುವಂತೆ ಗಡಿಯನ್ನು ಮತ್ತು ಕದನವಿರಾಮ ರೇಖೆಯನ್ನು ತೆರೆದು ಮುಕ್ತಗೊಳಿಸುವುದು.
- ಸ್ವಯಮಾಡಳಿತ – ಹಾಗಂದರೆ ಏನು ಎಂದು ವಿವರಿಸಿಲ್ಲ.
- ಸೇನಾಮುಕ್ತತೆ – ಮೇಲ್ವಿಚಾರಣೆ ಯಾರದ್ದು ಮತ್ತು ಅಲ್ಲಿನ ಆಡಳಿತ ನಿರ್ವಹಣೆ ಹೇಗೆ ಎಂಬುದು ಅಸ್ಪಷ್ಟ.
- ಜಮ್ಮು ಮತ್ತು ಕಾಶ್ಮೀರದ ವಿಷಯವಾಗಿ ಭಾರತ ಮತ್ತು ಪಾಕಿಸ್ತಾನದ ಜಂಟಿ ಕಾರ್ಯನಿರ್ವಹಣೆ – ಆಡಳಿತ ಸ್ವರೂಪದ ಬಗ್ಗೆ ಏನೂ ಹೇಳಿಲ್ಲ.
ಮೇಲಿನ ಸಲಹೆಗಳನ್ನು ಭಾರತ ಮತ್ತು ಭಾರತದ ರಾಜಕೀಯ ವ್ಯವಸ್ಥೆ ಎಂದಿಗೂ ಒಪ್ಪಿಕೊಳ್ಳಲಾರದು; ಏಕೆಂದರೆ, ಅವುಗಳು ಪಾಕಿಸ್ತಾನದ ಪರವಾಗಿ ಕಾಶ್ಮೀರದ ಸಮಸ್ಯೆಯನ್ನು ಹಿಂಬಾಗಿಲಿನ ಮೂಲಕ ಅಂತಾರಾಷ್ಟ್ರೀಯವಾಗಿಸುವ ಹುನ್ನಾರವಷ್ಟೆ ಆಗಿವೆ.
ಆದರೂ ಭಾರತೀಯ ಪ್ರಜೆಗಳನ್ನು ಮತ್ತು ಸರ್ಕಾರವನ್ನು, ಮಾತುಕತೆಯ ಮೂಲಕ ಕೆಳಗಿನ ಅಂಶಗಳನ್ನು ಒಪ್ಪಿಕೊಳ್ಳುವಂತೆ ಮನವೊಲಿಸಲು ಸಾಧ್ಯವಾಗಬಹುದು:
- ಕದನವಿರಾಮ ರೇಖೆಯನ್ನು ಶಾಶ್ವತ ಅಂತಾರಾಷ್ಟ್ರೀಯ ಗಡಿಯಾಗಿ ಬದಲಾಯಿಸುವುದು.
- ಟ ಪಾಕಿಸ್ತಾನದಲ್ಲಿರುವ ಎಲ್ಲ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸುವುದು.
- ಪರೋಕ್ಷಯುದ್ಧ ಮತ್ತು ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು.
- ಪರಸ್ಪರ ವ್ಯಾಪಾರ ವಹಿವಾಟು ಮತ್ತು ಜನರ ಭೇಟಿಗೆ ಮುಕ್ತ ಅವಕಾಶವನ್ನು ಕಲ್ಪಿಸುವುದು.
- ಉಪರ್ಯುಕ್ತ ವ್ಯವಸ್ಥೆ ಎಂದರೆ ಅದು – ಪರೋಕ್ಷವಾಗಿ ಪಾಕಿಸ್ತಾನ ಅದರ ವಶದಲ್ಲಿರುವ ಕಾಶ್ಮೀರದ ಮೂರನೇ ಒಂದು ಭಾಗವನ್ನೂ, ಭಾರತ ಈಗ ಇರುವಂತೆ ಉಳಿದ ಭಾಗವನ್ನೂ ಜಮ್ಮು ಮತ್ತು ಕಾಶ್ಮೀರ ರಾಜ್ಯವಾಗಿ ಹೊಂದುವುದು – ಎಂದು ಅರ್ಥವಾಗುತ್ತದೆ. ಪಾಕಿಸ್ತಾನದ ಸೇನೆ ಇದನ್ನು ಒಪ್ಪೀತೇ? ಭಾರತದೊಂದಿಗೆ ಶಾಂತಿ ಮತ್ತು ಸೌಹಾರ್ದದಿಂದ ಬದುಕುವಂತೆ ಪಾಕಿಸ್ತಾನದ ಮೇಲೆ ಅಮೆರಿಕ ಮತ್ತು ಚೀನಾ ಒತ್ತಡವನ್ನು ಹೇರದಿದ್ದರೆ ಇದು ಅಸಂಭವವೇ. ಇಡೀ ಏಶ್ಯಾದಲ್ಲಿ ಪ್ರಭಾವವನ್ನು ಹೊಂದುವ ಮಹತ್ತ್ವಾಕಾಂಕ್ಷೆಯುಳ್ಳ ಚೀನಾ ಪಾಕಿಸ್ತಾನದ ಮೇಲೆ ಒತ್ತಡಹೇರುವ ಮಾತಂತೂ ದೂರವೇ ಇದೆ.
- ಆತ್ಯಂತಿಕವಾಗಿ, ಎಲ್ಲಿಯವರೆಗೆ ಪಾಕಿಸ್ತಾನದ ಸೇನಾಶಕ್ತಿಯ ಕೈವಾಡಗಳು, ಪ್ರಭಾವಗಳು ಮುಂದುವರಿಯುತ್ತಿರುತ್ತವೋ ಅಲ್ಲಿಯವರೆಗೆ ಭಾರತ ಈ ಕೆಳಗಿನ ವಿಷಯಗಳ ಕುರಿತಾಗಿ ತನ್ನ ಗಮನವನ್ನು ಕೇಂದ್ರೀಕರಿಸಬೇಕಾಗುತ್ತದೆ:
- ಕಾಶ್ಮೀರ ಸಮಸ್ಯೆಯನ್ನು ಕುರಿತು ಅದು `ಎಲ್ಲಿದೆಯೋ ಹೇಗಿದೆಯೋ ಹಾಗೆ’ ಎಂಬ ಆಧಾರದಲ್ಲಿ ರಾಜಕೀಯ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮುಂದುವರಿಸಬೇಕು.
- ಪಾಕಿಸ್ತಾನದ ಪರೋಕ್ಷಯುದ್ಧದ ಪ್ರಯತ್ನವನ್ನು ಆರಂಭದಲ್ಲೇ ಚಿವುಟಿಹಾಕಲು ಸಾಧ್ಯವಾಗುವಂತೆ ಕದನವಿರಾಮ ರೇಖೆಯ ಮೇಲಿನ ಹಿಡಿತದಲ್ಲಿ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಬೇಕು.
- ಸಾಂಸ್ಥಿಕ ತಂತ್ರಗಾರಿಕೆ ಮತ್ತು ಸರಿಯಾದ ಉಪಾಯ ಗಳಿಂದ ಪಾಕಿಸ್ತಾನೀ ಸೇನೆ ನಡೆಸುತ್ತಿರುವ ಪರೋಕ್ಷ ಸಮರವು ಅದಕ್ಕೆ ಭರಿಸಲಾಗದಷ್ಟು ಆರ್ಥಿಕ ಹೊರೆಯಾಗುವಂತೆ ಮಾಡಬೇಕು.
- ಆಂತರಿಕವಾಗಿ, ಕಾಶ್ಮೀರವು ಆರ್ಥಿಕವಾಗಿ, ಸಾಮಾಜಿಕ ವಾಗಿ, ವಿದ್ಯೆ ಮತ್ತು ರಾಜಕೀಯವಾಗಿ ದೇಶದ ಇತರ ರಾಜ್ಯಗಳ ಜತೆ ಏಕೀಕೃತವಾಗುವುದಕ್ಕೆ ಬೇಕಾದ ಎಲ್ಲರೀತಿಯ ಪ್ರಯತ್ನವನ್ನೂ ಮಾಡಬೇಕು; ಅದಕ್ಕೆ ಅಗತ್ಯವಾದರೆ ಯಥೋಚಿತ ರೀತಿಯಲ್ಲಿ ಸೌಮ್ಯವಾದ ಅಥವಾ ಕಠಿಣವಾದ ಬಲಪ್ರಯೋಗವನ್ನು ಮಾಡಬೇಕಾಗಿ ಬಂದರೆ ಅದಕ್ಕೂ ಹಿಂಜರಿಯಬಾರದು. ಮತ್ತು ಅಲ್ಲಿ ಒಂದು ಜವಾಬ್ದಾರಿಯುತ ಮತ್ತು ಪಾರದರ್ಶಕ ಆಡಳಿತ ಒದಗುವಂತೆ ನೋಡಿಕೊಳ್ಳಬೇಕು.
ಎಲ್ಲಿಯವರೆಗೆ ಕಾಶ್ಮೀರ ಕಣಿವೆಯ ಜನರು ತಾವು ಮೊದಲಿಗೆ ಭಾರತೀಯರು ಹಾಗೂ ತಮ್ಮ ಉಜ್ಜ್ವಲ ಭವಿಷ್ಯವು ಭಾರತದ ಜತೆಗೆ, ಮತ್ತು ಕೇವಲ ಭಾರತದ ಜತೆಗೆ, ಹಾಸುಹೊಕ್ಕಾಗಿದೆ ಎಂದು ಅರಿಯುವುದಿಲ್ಲವೋ ಅಲ್ಲಿಯವರೆಗೆ ನಾವು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಶಾಂತಿ, ಸುಸ್ಥಿರತೆ ಮತ್ತು ಅಭಿವೃದ್ಧಿಯನ್ನು ಹೊಂದಲಾರೆವು; ಇದು ಕಟು ಸತ್ಯ.