ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ೧೯೧೫ರಲ್ಲಿ ಹುಟ್ಟಿಕೊಂಡ ‘ಕನ್ನಡ ಸಾಹಿತ್ಯ ಪರಿಷತ್’ಗೆ ಇದೀಗ ನೂರರ ಸಂಭ್ರಮ. ಇದು ನುಡಿಗುಡಿಯ ಕುರಿತು ಒಂದು ಸಾಂದರ್ಭಿಕ ಲೇಖನ.
“ಮನುಷ್ಯನಿಗೆ ಆಯಾಸ ಅನಿವಾರ್ಯ. ಉತ್ಕೃಷ್ಟ ಸಂಸ್ಥೆಗಾದರೊ ದಣಿವೆಂಬುದೇ ಇಲ್ಲ, ಇರಕೂಡದು. ಸಂಕಲ್ಪಗಳು ಸಿದ್ಧಿಸಿದಷ್ಟೂ ಹೊಸ ಹೊಸ ಸಂಕಲ್ಪಗಳ ಉತ್ಪತ್ತಿ, ಕಾರ್ಯಕ್ಷೇತ್ರ ಇನ್ನೊಂದು ಮತ್ತೊಂದು ಮಗದೊಂದು ಎಂಬ ಕ್ರಮದ ವ್ಯಾಪ್ತಿ ವಿಸ್ತರಣೆ, ಯೋಜನೆಯ ಮೇಲೆ ಪುನರ್ ಯೋಜನೆ – ಹೀಗೆ ಅದು ಉಲ್ಲಾಸದಿಂದ ವರ್ಧಿಸುತ್ತದೆ, ವರ್ಧಿಸಬೇಕು.” – ಎಸ್.ವಿ. ರಂಗಣ್ಣ
ರಾಷ್ಟ್ರಕವಿ ಕುವೆಂಪು ಅವರಿಗೆ ಆಗ ಹದಿನೆಂಟರ ತಾರುಣ್ಯ. ಪ್ರಸಿದ್ಧ ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ ಮೈಸೂರಿಗೆ ಆಗಮಿಸಿದ್ದರು. ಹಲವು ಇಂಗ್ಲಿಷ್ ಕವಿತೆಗಳನ್ನು ಬರೆದು ತಮ್ಮ ಉಪನ್ಯಾಸಕರಿಂದ ಮೆಚ್ಚುಗೆ ಪಡೆದಿದ್ದ ಕುವೆಂಪು ಅವರಿಗೆ ತಮ್ಮ ಕವಿತೆಗಳನ್ನು ಕಸಿನ್ಸ್ರಿಗೆ ತೋರಿಸುವ ಬಯಕೆಯಾಗಿ ಅವರನ್ನು ಭೇಟಿಮಾಡಿ ತಮ್ಮ ಹಸ್ತಪ್ರತಿಗಳನ್ನು ಅವರ ಕೈಗೆ ನೀಡಿದರು. ಸ್ವಲ್ಪಹೊತ್ತು ಹಾಳೆ ಮಗುಚಿಹಾಕಿ ನೋಡಿದ ಕಸಿನ್ಸ್ ಅಸಮಾಧಾನದ ಧ್ವನಿಯಲ್ಲಿಯೇ ಏನಿದೆಲ್ಲ ಕಗ್ಗ? What is all this stuff? …ನಿಮ್ಮ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತುಗಳೇ ಕಾಣುತ್ತಿವೆ. ಇದು ಮಾತ್ರ ಸ್ವದೇಶಿಯಲ್ಲ. ನಿಮ್ಮ ಭಾಷೆಯಲ್ಲಿ ನೀವು ಏನಾದರೂ ಬರೆದಿದ್ದೀರಾ? ಎಂದು ಕೇಳಿದರು. ಕುವೆಂಪು ಇಲ್ಲ, ಇಂಗ್ಲಿಷ್ನಲ್ಲಿ ಸಾಧ್ಯವಾಗುವಂತೆ ಉದಾತ್ತ ಭಾವಗಳನ್ನು ಉನ್ನತ ಆಲೋಚನೆಗಳನ್ನು ಹೇಳಲು ಕನ್ನಡದಲ್ಲಿ ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟ ಬಹಳ ಕೀಳು. ಅಲ್ಲದೆ ಅದರಲ್ಲಿರುವ ಛಂದಸ್ಸೂ ಹಳೆಯ ಕಂದಾಚಾರದ ಛಂದಸ್ಸು; ವೃತ್ತ, ಕಂದ ಇತ್ಯಾದಿ. ಇಂಗ್ಲಿಷ್ನಲ್ಲಿರುವ ಛಂದೋವೈವಿಧ್ಯ ಅದರಲ್ಲಿ ಇಲ್ಲವೇ ಇಲ್ಲ ಎಂದು ಅದಕ್ಕೆ ಪ್ರತಿಕ್ರಿಯಿಸಿದರು. ಕೊನೆಗೆ ಕಸಿನ್ಸ್ರೇ ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸರ್ಜನಸಾಹಿತ್ಯ ಸೃಷ್ಟಿಯಾಗಬಲ್ಲದು ಎಂದು ವಿವೇಕದ ಮಾತನಾಡಿ ಕಳುಹಿಸಿದ್ದರಂತೆ. (‘ನೆನಪಿನ ದೋಣಿಯಲ್ಲಿ’.)
ಇದು ಕೇವಲ ಕುವೆಂಪು ಅವರ ಕತೆಯಲ್ಲ. ಇಂಗ್ಲಿಷ್ ವ್ಯಾಮೋಹ ಹಾಗೂ ಕನ್ನಡವನ್ನು ತಾತ್ಸಾರಭಾವನೆಯಿಂದ ಕಾಣುವ ಈ ಮನೋಭಾವ ಕನ್ನಡದ ಕಣ್ವರೆಂದೇ ಖ್ಯಾತರಾದ ಬಿ.ಎಂ. ಶ್ರೀಯಂತಹ ಆ ಕಾಲಖಂಡದಲ್ಲಿದ್ದ ಅನೇಕ ವಿದ್ವಾಂಸರದ್ದೂ ಇದೇ ಸ್ಥಿತಿಯಾಗಿತ್ತು. ಈ ಉದಾಹರಣೆಯನ್ನು ಉಲ್ಲೇಖಿಸಿದುದು, ೨೦ನೇ ಶತಮಾನದ ಆರಂಭದ ದಶಕಗಳಲ್ಲಿ ಕನ್ನಡ ಭಾಷೆಯ ಕುರಿತಾಗಿ ಎಂತಹ ವಾತಾವರಣವಿತ್ತು ಎಂಬುದನ್ನು ಸೂಚಿಸಲಷ್ಟೇ.
ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ ಹುಟ್ಟಿಕೊಂಡದ್ದು ‘ಕನ್ನಡ ಸಾಹಿತ್ಯ ಪರಿಷತ್’ – ೧೯೧೫ರಲ್ಲಿ. ಇದೀಗ ನೂರರ ಸಂಭ್ರಮದಲ್ಲಿರುವ ಈ ಸಂಸ್ಥೆಯ ರೂಪರಚನೆ ಹೇಗಿರಬೇಕೆಂಬ ಆಲೋಚನೆ ಪ್ರಾರಂಭವಾದದ್ದು, ‘ಮೈಸೂರು ಇಕನಾಮಿಕ್ ಕಾನ್ಫರೆನ್ಸ್’ ಎಂಬ ಸಂಸ್ಥೆಯಲ್ಲಿ.
ಪರಿಷತ್ತಿನ ಉದಯಕ್ಕೆ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಿ ನಡೆಯುತ್ತಿದ್ದ ರಾಷ್ಟ್ರೀಯ ಚಳವಳಿಗಳ ಪ್ರಭಾವವೂ ಇಲ್ಲದಿರಲಿಲ್ಲ. ೧೯೦೫ರಲ್ಲಿ ನಡೆದ ಬಂಗಾಳ ವಿಭಜನೆ (ವಂಗಭಂಗ ಚಳವಳಿ) ಭಾಷಾ ಸ್ವಾತಂತ್ರ್ಯ ಮತ್ತು ಪ್ರಾಂತಾಭಿಮಾನಗಳಿಗೆ ಹೊಸ ಸ್ಫೂರ್ತಿಯನ್ನು ಹುಟ್ಟುಹಾಕಿತ್ತು. ಇದೇ ವೇಳೆ ಉತ್ಕಲ ಐಕ್ಯ ಪರಿಷತ್, ವಂಗೀಯ ಸಾಹಿತ್ಯ ಪರಿಷತ್ಗಳೂ ಉದಯವಾದವು; ಮಾತ್ರವಲ್ಲ ಒರಿಸ್ಸಾ, ಬಿಹಾರ, ಬಂಗಾಳ ಮುಂತಾದ ಪ್ರಾಂತಗಳು ಭಾಷೆಗಳ ಆಧಾರದಲ್ಲಿ ರೂಪುಗೊಂಡವು. ಈ ಘಟನೆಗಳಿಂದ ಪ್ರೇರಿತರಾದ ಮುಂಬಯಿ ಕನ್ನಡಿಗರು ಕನ್ನಡ ಮಾತನಾಡುವ ಪ್ರದೇಶಗಳನ್ನು ಅಖಂಡವಾಗಿಸಲು ಪ್ರಯತ್ನಿಸಿದುದು ಕನ್ನಡ ಭಾಷೆ-ಸಂಸ್ಕೃತಿಗಳ ಸಂರಕ್ಷಣೆಯೊಂದಿಗೆ ಸಂಘಟಿಸುವ ಅನಿವಾರ್ಯತೆಯನ್ನು ಮನಗಾಣಿಸಿಕೊಟ್ಟಿತು. ಈ ಹಿನ್ನೆಲೆಯಲ್ಲಿ ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ವಿವಿಧ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲು, ಕನ್ನಡ ಭಾಷೆ-ಸಂಸ್ಕೃತಿಗಳನ್ನು ಸಂರಕ್ಷಿಸಲು ನಾಡಿನ ಕನ್ನಡಾಭಿಮಾನಿಗಳು ಸಂಘಟಿತ ಪ್ರಯತ್ನ ಆರಂಭಿಸಿದರು.
ಮುಂಬಯಿ ಸರ್ಕಾರದ ಸೇವೆಯಿಂದ ಬಿಡುಗಡೆ ಹೊಂದಿದ ಸರ್ ಎಂ. ವಿಶ್ವೇಶ್ವರಯ್ಯನವರು ಹೈದರಾಬಾದ್ ಸಂಸ್ಥಾನದ ಆಮಂತ್ರಣವನ್ನು ಸ್ವೀಕರಿಸದೆ ರಾಜ್ಯಪ್ರಗತಿ ಕಾರ್ಯಗಳಿಗೆ ಚಾಲನೆ ನೀಡುವ ಮೈಸೂರು ಸರ್ಕಾರದ ಚೀಫ್ ಇಂಜಿನಿಯರ್ರಾಗಿ ನಿಯುಕ್ತಿಗೊಂಡರು – ೧೯೦೯ರಲ್ಲಿ. ನಿಯುಕ್ತರಾದ ಪ್ರಾರಂಭದ ದಿನಗಳಲ್ಲಿಯೇ ಮೈಸೂರಿನ ಅಭಿವೃದ್ಧಿಯ ದೃಷ್ಟಿಯಿಂದ ಇಕನಾಮಿಕ್ ಕಾನ್ಫರೆನ್ಸ್ (ಸಂಪದಭ್ಯುದಯ ಸಭಾ) ಎಂಬ ಸಂಪದಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸುವಂತೆ ಮಹಾರಾಜರಿಗೆ ಸಲಹೆ ನೀಡಿದರು. ಅದರ ಅಂಗವಾಗಿ, ಕಾರ್ಖಾನೆ ಕೈಗಾರಿಕೆಗಳ ಸಮಿತಿ; ವಿದ್ಯಾಸಮಿತಿ; ಭೂವ್ಯವಸಾಯ ಸಮಿತಿ – ಎಂಬ ಮೂರು ಸಮಿತಿಗಳು ರಚನೆಯಾದವು. ಇದರಲ್ಲಿ ವಿದ್ಯಾಸಮಿತಿಯಲ್ಲಿ ಪರ್ಯಾಲೋಚನೆಗೆ ಬಂದ ಎರಡು ಯೋಜನೆಗಳು – ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ಸಾಹಿತ್ಯ ಪರಿಷತ್.
೧೯೧೪ರಲ್ಲಿ ‘ಸಂಪದಭ್ಯುದಯ ಸಭಾ’ದ ವಾರ್ಷಿಕ ಸಮ್ಮೇಳನವು ಕರ್ನಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ, ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರಕಾರ ಅದನ್ನು ಅಂಗೀಕರಿಸಿ ವಿಶೇಷ ಸಹಾಯಗಳನ್ನು ಮಾಡುವುದು ಉಚಿತ ಎಂಬ ಸರ್ವಾನುಮತ ನಿರ್ಣಯವನ್ನು ಕೈಗೊಂಡಿತು. ಈ ಕುರಿತು ವಿಶೇಷ ಆಸಕ್ತಿ ವಹಿಸಿದ ಮೈಸೂರಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರು ಈ ನಿರ್ಣಯದ ಸಾಕಾರಕ್ಕಾಗಿ ಚಾಲಕ ಸಮಿತಿಯನ್ನು ರಚಿಸಿದರು. ಈ ಸಮಿತಿಯು ನಾಡಿನೆಲ್ಲೆಡೆಯ ವಿದ್ವಾಂಸರುಗಳ ಸಲಹೆ-ಸಹಕಾರ ಪಡೆದು ಬೆಂಗಳೂರಿನಲ್ಲಿ ಸಮ್ಮೇಳನವೊಂದನ್ನು ಏರ್ಪಡಿಸಿತು – ಬೆಂಗಳೂರಿನ ಸರ್ಕಾರಿ ಪ್ರೌಢಶಾಲೆ(ಪ್ರಸ್ತುತ ಇದು ಕೋಟೆ ಪ್ರೌಢಶಾಲೆ)ಯ ಪರಿಸರದಲ್ಲಿ ೧೯೧೫ರ ಮೇ ೩ರಿಂದ ನಾಲ್ಕು ದಿನಗಳ ಕಾಲ. ಕರ್ನಾಟಕದ ಎಲ್ಲಾ ಭಾಗಗಳಿಂದ ಮಾತ್ರವಲ್ಲದೆ ಮುಂಬಯಿ-ಮದ್ರಾಸ್ ನಗರಗಳಿಂದಲೂ ಕನ್ನಡದ ಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಸಾಂಸ್ಕೃತಿಕ ಚಿಂತಕರು, ಅಧ್ಯಾಪಕರು ಪಾಲ್ಗೊಂಡಿದ್ದ ಈ ಸಮ್ಮೇಳನದಲ್ಲಿ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಕ್ಷಣೆ-ಸಂವರ್ಧನೆಗಾಗಿ ಕನ್ನಡ ಮಾತನಾಡುವ ಎಲ್ಲ ಭೂಪ್ರದೇಶಗಳ ಪ್ರತಿನಿಧಿಯಾಗಿ ‘ಕನ್ನಡ ಸಾಹಿತ್ಯ ಪರಿಷತ್’ನ್ನು ಪ್ರಾರಂಭಿಸಲಾಯಿತು.
ಮಹತ್ತ್ವದ ಸಂಗತಿಯೆಂದರೆ, ಒಂದೇ ದಿನದಲ್ಲಿ ಎಂ. ವೆಂಕಟಕೃಷ್ಣಯ್ಯ, ಆರ್.ಎಚ್. ದೇಶಪಾಂಡೆ, ಸೆಟ್ಲೂರ್, ಎಚ್. ಲಿಂಗರಾಜೇ ಅರಸು, ಎನ್.ಜಿ. ಕರಿಗುದರಿ, ಬಿ. ರಾಮರಾವ್, ಪಂಡಿತ ರಾಘವೇಂದ್ರಾಚಾರ್ಯರು – ಇವರೆಲ್ಲ ಒಟ್ಟಿಗೆ ಸೇರಿ ಪರಿಷತ್ತಿನ ರಚನಾಕ್ರಮ ಮತ್ತು ನಿಯಮಗಳ ಮಸೂದೆಯನ್ನು ಸಿದ್ಧಪಡಿಸಿದ್ದು. ಸಮ್ಮೇಳನದ ಎರಡನೇ ದಿನದಲ್ಲಿ ಕೈಗೊಂಡ ನಿರ್ಣಯದಂತೆ ಮರುದಿನ (ಮೇ ೫ರಂದು) ೩೧ ಕಲಮುಗಳು, ೫ ನಿಬಂಧನೆಗಳನ್ನು ಒಳಗೊಂಡಿದ್ದ ಪರಿಷತ್ನ ಸಂವಿಧಾನವು ಮಂಡಿಸಲ್ಪಟ್ಟು ಸರ್ವಾನುಮತದಿಂದ ಅಂಗೀಕೃತಗೊಂಡಿತು. ಹೀಗೆ ವಿಧಿವತ್ತಾಗಿ ೧೯೧೫ ಮೇ ೫ರಂದು ಒಟ್ಟು ೧೧೩ ಮಂದಿ ಸದಸ್ಯರೊಡನೆ ಕರ್ಣಾಟಕ ಸಾಹಿತ್ಯ ಪರಿಷತ್ತು (ಇಂದಿನ ಕನ್ನಡ ಸಾಹಿತ್ಯ ಪರಿಷತ್ತು) ಸ್ಥಾಪನೆಗೊಂಡಿತು.
ಪರಿಷತ್ತಿನ ಗುರಿ, ಉದ್ದೇಶಗಳನ್ನು, ಕಾರ್ಯನಿರ್ವಹಣಾ ವಿಧಾನಗಳನ್ನು ಒಳಗೊಂಡ ಸಮಗ್ರವಾದ ಈ ಅಂಗೀಕೃತ ಸಂವಿಧಾನದಲ್ಲಿರುವ ಪ್ರಮುಖ ಅಂಶಗಳು ಹೀಗಿವೆ:
- ಕನ್ನಡ ಭಾಷೆಯಲ್ಲಿ ಪಂಡಿತಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು – ಈ ಮೂರನ್ನೂ ಬರೆಯಿಸುವುದು ಅಥವಾ ಬರೆಯುವುದಕ್ಕೆ ಸಹಾಯ ಮಾಡುವುದು.
- ನವೀನ ಶಾಸ್ತ್ರಗಳಿಗೆ ಸಂಬಂಧಪಟ್ಟ, ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
- ತತ್ತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
- ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನು ವಿಚಾರಮಾಡಿ ನಿರ್ಣಯಿಸುವುದು.
- ಕನ್ನಡವನ್ನುಳಿದು ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
- ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅವನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡ ನಾಡಿನ ಪರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು, ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನು ಏರ್ಪಡಿಸುವುದು.
- ಭಾಷಾ ಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನು ಒಳಗೊಂಡ ಕನ್ನಡದ ಪತ್ರ್ರಿಕೆಗಳನ್ನು ಪ್ರಕಟಿಸುವುದು.
- ಕರ್ನಾಟಕ ಗ್ರಂಥಕರ್ತರು ಬರೆದಿರುವ ಪಸ್ತಕಗಳನ್ನು ಖರೀದಿಸುವ, ಬರೆದಿರುವ ಪಸ್ತಕಗಳನ್ನು ಅಚ್ಚುಹಾಕಿಸುವುದಕ್ಕಾಗಿ ಮುಂಗಡವಾಗಿ ಹಣವನ್ನು ನೀಡುವ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (ಅoಠಿಥಿಡಿighಣ) ಹಣಕೊಟ್ಟು ತೆಗೆದುಕೊಳ್ಳುವ ಮೂಲಕ ಗ್ರಂಥಕರ್ತರನ್ನು ಪ್ರೋತ್ಸಾಹಿಸುವುದು ಹಾಗೂ ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣವ್ಯಯಿಸಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದು-ಸಂಭಾವನೆಗಳನ್ನು ನೀಡುವುದು.
- ಕರ್ನಾಟಕದ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತ ವೇತನಗಳನ್ನು ಕೊಡುವುದು.
- ಕರ್ನಾಟಕ(ಕನ್ನಡ) ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದ ಪರಾಮರ್ಶನಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆ ಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಟುಗಳನ್ನು ಮಾಡುವುದು.
- ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪಸ್ತಕಭಂಡಾರ ಗಳನ್ನೂ ಸ್ಥಾಪಿಸುವುದು.
- ಕನ್ನಡ ನಾಡಿನಲ್ಲಿರುವ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.
ಶ್ರೀಕೃಷ್ಣರಾಜ ಪರಿಷನ್ಮಂದಿರ
ಚಾಮರಾಜಪೇಟೆಯ ನಾಲ್ಕನೇ ಮುಖ್ಯರಸ್ತೆಯ ನಾನಾರಾಯರ ಮನೆಯ ಕೊಠಡಿಯಲ್ಲಿ ಕಾರ್ಯಾರಂಭ ಮಾಡಿದ ಪರಿಷತ್ ತನ್ನ ಆರಂಭದ ೧೮ ವರ್ಷಗಳ ಕಾಲ ಬಾಡಿಗೆ ಕಟ್ಟಡಗಳಲ್ಲಿಯೇ ಕಾರ್ಯನಿರ್ವಹಿಸಿತು. ೧೯೨೩ರ ಸುಮಾರಿಗೆ ಶಂಕರಪುರದ ವಾಜಪೇಯಂ ಸೂರಪ್ಪ ಅವರ ಮನೆಯನ್ನು ಬಾಡಿಗೆಗೆ ಪಡೆದು (ಮಾಸಿಕ ೩೦ ರೂಪಾಯಿ) ಪರಿಷತ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲಾಯಿತು. ಆಗ ಪರಿಷತ್ತಿನ ನೇತೃತ್ವ ವಹಿಸಿದ್ದ ಕರ್ಪೂರ ಶ್ರೀನಿವಾಸರಾಯರಿಗೆ (ಮೈಸೂರು ಸಂಸ್ಥಾನದ ನಿವೃತ್ತ ಚೀಫ್ ಇಂಜಿನಿಯರ್ರಾಗಿದ್ದ ಅವರು ೧೯೨೦ರಿಂದ ೧೩ ವರ್ಷಗಳ ಕಾಲ ಪರಿಷತ್ತಿನ ಉಪಾಧ್ಯಕ್ಷರಾಗಿದ್ದರು) ಶಂಕರಪುರದ ಸಮೀಪದಲ್ಲಿಯೇ ನಿವೇಶನವೊಂದನ್ನು ಖರೀದಿಸಿ ಪರಿಷತ್ತಿಗೆ ಸ್ವಂತ ಕಟ್ಟಡ ನಿರ್ಮಿಸುವ ಯೋಚನೆ ಹೊಳೆಯಿತು. ಕಾರ್ಯಪ್ರವೃತ್ತರಾದ ರಾಯರು ಶಂಕರಮಠದ ರಸ್ತೆಯಲ್ಲಿದ್ದ ಸರ್ಕಾರಿ ಶಾಲೆಯೊಂದರ ಸ್ವಲ್ಪ ಭಾಗವನ್ನು ಪಡೆಯುವ ಯೋಜನೆಯನ್ನೂ ಸಿದ್ಧಪಡಿಸಿದರು. ಇದಕ್ಕಾಗಿ ಅಂದು ಮೈಸೂರು ಸರ್ಕಾರದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಗುರುಗಳೂ ಪರಿಷತ್ತಿನ ಕಾರ್ಯದರ್ಶಿಗಳೂ ಆಗಿದ್ದ ಬೆಳ್ಳಾವೆ ವೆಂಕಟನಾರಣಪ್ಪನವರು ಈ ವಿಷಯವನ್ನು ಮೈಸೂರಿನ ದಿವಾನರಲ್ಲಿ (ಮಿರ್ಜಾ ಇಸ್ಮಾಯಿಲ್) ಪ್ರಸ್ತಾವಿಸುವ ವ್ಯವಸ್ಥೆ ಮಾಡಿದರು.
ಕೊನೆಗೆ ಶಾಲೆಯ ಒಂದು ಭಾಗವನ್ನು ಪರಿಷತ್ತಿಗೆ ನೀಡಬಹುದೆಂದು ಮೈಸೂರು ಸರ್ಕಾರದ ಅಧಿಕಾರಿಗಳು ಸಮ್ಮತಿಸಿದರು. ಆದರೆ, ಮಿರ್ಜಾ ಇಸ್ಮಾಯಿಲ್ ಅವರ ಯೋಚನೆಯೇ ಬೇರೆಯಾಗಿತ್ತು. ರಾಷ್ಟ್ರೀಯ ಚಳವಳಿ ಬಿರುಸಿನಿಂದ ಸಾಗಿದ್ದ ಸಮಯ ಅದು. ಬೆಂಗಳೂರಿನಲ್ಲಿಯೂ ಸ್ವಾತಂತ್ರ್ಯಹೋರಾಟದ ಕಾವು ಏರುತ್ತಿತ್ತು. ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಆಗಾಗ ಆಗಮಿಸಿ ಸ್ಥಳೀಯ ಜನತೆಗೆ ಉತ್ಸಾಹ ತುಂಬುತ್ತಿದ್ದರು. ಬೆಂಗಳೂರು ಕೋಟೆ ಪ್ರದೇಶಕ್ಕೆ ಹತ್ತಿರದಲ್ಲಿರುವ ಹಾರ್ಡಿಂಗ್ ರಸ್ತೆ (ಈಗಿನ ಪಂಪ ಮಹಾಕವಿ ರಸ್ತೆ)ಯ ಬದಿಯಲ್ಲೊಂದು ಮೈದಾನವಿತ್ತು. ಒಂದಿಷ್ಟು ಹೊಂಗೆಮರಗಳನ್ನು ಹೊರತುಪಡಿಸಿದರೆ ಅದೊಂದು ಬಟಾಬಯಲು ಪ್ರದೇಶ. ಇಲ್ಲಿ ಸ್ವಾತಂತ್ರ್ಯಪ್ರೇಮಿಗಳ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದವು. ಅನೇಕ ರಾಷ್ಟ್ರೀಯ ಸ್ವಾತಂತ್ರ್ಯಹೋರಾಟದ ಮುಖಂಡರು ಭಾಷಣ ಮಾಡಲು ಬರುತ್ತಿದ್ದರು. ಅಕ್ಕಪಕ್ಕದ ಪೇಟೆ ಮತ್ತು ಬಡಾವಣೆಗಳಿಂದ ಬಂದ ಜನರ ಸಂಖ್ಯೆಯೂ ಅಲ್ಲಿರುತ್ತಿತ್ತು. ಕಾಲಕ್ರಮೇಣ ಆ ಖಾಲಿ ಜಾಗ ‘ಗಾಂಧೀ ಮೈದಾನ’ ಎಂಬ ಹೆಸರನ್ನು ಕೂಡ ಪಡೆಯಿತು. ಈ ಖಾಲಿ ಜಮೀನು ಆಡಳಿತದಲ್ಲಿದ್ದವರಿಗೆ ತಲೆನೋವಾಗಿತ್ತು. ಸದಾ ಚಟುವಟಿಕೆಗಳ ಬುಗ್ಗೆಯಾಗಿದ್ದ ಈ ಬಯಲುಪ್ರದೇಶದಿಂದ ಸ್ವಾತಂತ್ರ್ಯ ಚಳವಳಿಯನ್ನು ದೂರ ತಳ್ಳುವ ಪ್ರಯತ್ನಕ್ಕಾಗಿ ಸರ್ಕಾರ ಕಾದು ಕುಳಿತಿತ್ತು. ದಿವಾನ್ ಮಿರ್ಜಾ ಇಸ್ಮಾಯಿಲ್ರು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಕೆಡವಿದರು. ಆ ಬಯಲು ಪ್ರದೇಶವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಉಚಿತವಾಗಿ ನೀಡುವ ಔದಾರ್ಯ ತೋರಿದರು. ಹೀಗಾಗಿ ಸಾಹಿತ್ಯ ಪರಿಷತ್ತಿನ ಕಟ್ಟಡಕ್ಕೆ ಅನಾಯಾಸವಾಗಿ ದೊಡ್ಡದೊಂದು ಜಾಗ ಸಿಕ್ಕಿತು. ಸ್ವಾತಂತ್ರ್ಯಹೋರಾಟದ ಅನೇಕ ಕಾರ್ಯಕ್ರಮಗಳಿಗೆ ಸ್ಥಳವಾಗಿದ್ದ ಆ ಪ್ರದೇಶದಲ್ಲಿ ಸಾಹಿತ್ಯ ಪರಿಷತ್ತಿನ ಕಟ್ಟಡ ಎದ್ದುನಿಂತಿತು. ಸಾಹಿತ್ಯ ಪರಿಷತ್ತಿನ ನಿವೇಶನ ಬೇಡಿಕೆಯನ್ನೂ ಈಡೇರಿಸಿದ್ದರ ಜೊತೆಗೆ ಆ ಸ್ಥಳದಲ್ಲಿ ಆವರೆಗೆ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯ ಸಭೆಗಳನ್ನು ನಡೆಯದಂತೆ ಮಿರ್ಜಾ ಇಸ್ಮಾಯಿಲ್ ಜಾಣತನ ತೋರಿದರು.
೧೯೩೧ರ ಏಪ್ರಿಲ್ ೧೨ರಂದು ಶಂಕುಸ್ಥಾಪನೆಗೊಂಡ ಈ ಕಟ್ಟಡವು ೧೯೩೩ರಲ್ಲಿ ಲೋಕಾರ್ಪಣೆಗೊಂಡಿತು. ಇದಕ್ಕೆ ಶ್ರೀಕೃಷ್ಣರಾಜ ಪರಿಷನ್ಮಂದಿರವೆಂದು ನಾಮಕರಣ ಮಾಡಲಾಯಿತು. ಪಂಪಮಹಾಕವಿ ರಸ್ತೆಯಲ್ಲಿರುವ ಈ ಕಟ್ಟಡದಲ್ಲಿಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿ, ಸಭಾಂಗಣ, ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಾರಂಭದಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್ ಎಂದಿದ್ದ ಸಂಸ್ಥೆಯ ಹೆಸರು ೧೯೩೮ರಲ್ಲಿ ಬಳ್ಳಾರಿಯಲ್ಲಿ ನಡೆದ ೨೩ನೇ ಸಾಹಿತ್ಯ ಸಮ್ಮೇಳನದ ನಿರ್ಣಯದ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತು ಎಂದು ಮಾರ್ಪಾಡುಗೊಂಡಿತು.
ಪತ್ರಿಕೆಗಳು ಮತ್ತು ಪುಸ್ತಕಗಳು
ಮೊದಲ ೧೯ ವರ್ಷಗಳ ಕಾಲ ಪರಿಷತ್ ವಿಶೇಷ ಪರಿಮಿತಿಗೆ ಒಳಪಟ್ಟು ಕೆಲಸ ಮಾಡಬೇಕಾಗಿತ್ತು. ಆ ಕಾಲಮಾನದಲ್ಲಿ ಅದು ಮುಖ್ಯವಾಗಿ ಪಾಂಡಿತ್ಯಪ್ರಧಾನ ಚಟುವಟಿಕೆಗಳಿಗೆ ಹಾಗೂ ಅಮೂಲ್ಯ ಗ್ರಂಥಗಳನ್ನು ಪ್ರಕಟಿಸುವ ಸ್ತುತ್ಯರ್ಹ ಕಾರ್ಯಕ್ಕೆ ಮುಂದಡಿಯಿಟ್ಟಿತು. ಪಂಪಭಾರತ, ಪಂಪರಾಮಾಯಣ, ಶಬ್ದಮಣಿದರ್ಪಣ, ಸೋಮೇಶ್ವರ ಶತಕ, ಚಾವುಂಡರಾಯಪುರಾಣ ಮೊದಲಾದ ಪ್ರಾಚೀನ ಕನ್ನಡ ಗ್ರಂಥಗಳ ಸಂಪಾದನೆ ಮತ್ತು ಪ್ರಕಟಣೆ ಅಂದಿದ್ದ ಸೌಕರ್ಯಗಳ ಹಿನ್ನೆಲೆಯಲ್ಲಿ ಮಹಾಸಾಧನೆಯೇ ಸರಿ. ಇವುಗಳ ಜೊತೆಗೆ ಪಂಪಭಾರತ, ಪಂಪರಾಮಾಯಣ, ಸಂಸ್ಕೃತ ಜೈಮಿನಿ ಭಾರತ ಮುಂತಾದವುಗಳ ಗದ್ಯಾನುವಾದ, ಕುಸುಮಾವಳೀ ಕಾವ್ಯ, ಪಂಪಭಾರತ ನಿಘಂಟು, ಪಂಪರಾಮಾಯಣ ನಿಘಂಟುಗಳು ಹಾಗೂ ಜ್ಯೋತಿರ್ವಿನೋದಿನಿ, ಜೇಮ್ಸ್ ಏಬ್ರಹಾಂ ಗಾರ್ಫೀಲ್ಡ್ನ ಚರಿತ್ರೆ, ವೊಡ್ಡಾರಾಧಣಂ ಮುಂತಾದವುಗಳು ಇದೇ ಸಮಯದಲ್ಲಿ ಪ್ರಕಟಗೊಂಡವು. ಈ ಕೃತಿಗಳ ರಚನೆಯಲ್ಲಿ ೧೨-೧೩ ವರ್ಷಗಳ ಕಾಲ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಹಾಗೂ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬೆಳ್ಳಾವೆ ವೆಂಕಟನಾರಣಪ್ಪನವರು ಪ್ರಮುಖ ಪಾತ್ರವಹಿಸಿದ್ದರು. ಇಷ್ಟು ಮಾತ್ರವಲ್ಲದೆ ೧೯೧೯ರಿಂದ ೧೯೨೩ರ ತನಕ ಮೈಸೂರು ವಿದ್ಯಾಇಲಾಖೆಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪಠ್ಯಪುಸ್ತಕಗಳನ್ನು ಟಿಪ್ಪಣಿಗಳೊಂದಿಗೆ ಪರಿಷತ್ ಸಿದ್ಧಪಡಿಸಿಕೊಟ್ಟಿತು. ಈವರೆಗೆ(೨೦೧೫) ೧೫೦೦ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದ ಹೆಮ್ಮೆ ಪರಿಷತ್ನದ್ದು. ಕನ್ನಡ ಗದ್ಯಾನುವಾದ ಮಾಲೆ, ಅಮೃತೋತ್ಸವ ಮಾಲೆ, ಬೆಳ್ಳಿ ಬಿಟ್ಟ ಮಾಲೆ, ಮಹಿಳಾ ಮಾಲಿಕೆ, ನವಸಾಕ್ಷರ ಮಾಲೆ, ಜೀವನಚರಿತ್ರೆಗಳು, ಸಾಹಿತ್ಯ ಸಮ್ಮೇಳನ ಸಂಪುಟಗಳು, ವಿಚಾರ ಸಂಕಿರಣ ಸಂಪುಟಗಳು, ಸಮ್ಮೇಳನಾಧ್ಯಕ್ಷರುಗಳ ಭಾಷಣಗಳು, ಕತೆ-ನಾಟಕ-ಹಾಸ್ಯ-ಮಕ್ಕಳ ಸಾಹಿತ್ಯ, ಸಂಗೀತ-ಗಮಕ-ವಿಜ್ಞಾನ-ಆರೋಗ್ಯ ಇನ್ನಿತರ ಸಂಕೀರ್ಣ ಕೃತಿಗಳು, ಜಾನಪದ ಸಂಗ್ರಹಗಳು, ಇಂಗ್ಲಿಷ್ ಪುಸ್ತಕಗಳು, ಸ್ಮರಣ ಸಂಚಿಕೆಗಳು – ಹೀಗೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರದ ಪುಸ್ತಕಗಳನ್ನೂ ಪರಿಷತ್ ಪ್ರಕಟಿಸಿದೆ.
ಪರಿಷತ್ ಪ್ರಕಟಿಸುತ್ತಾ ಬಂದಿರುವ ಎರಡು ಪ್ರಮುಖ ಮುಖಪತ್ರಿಕೆಗಳೆಂದರೆ ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ ಮತ್ತು ‘ಕನ್ನಡ ನುಡಿ’. ಕನ್ನಡ ನಾಡು-ನುಡಿಗಳಿಗೆ ಸಂಬಂಧಿಸಿದ ಮುಖ್ಯ ಘಟನೆಗಳು, ನಿರ್ಣಯಗಳು, ಸಾಧನೆ ಮೊದಲಾದವುಗಳ ಅಧಿಕೃತ ಮಾಹಿತಿಯ ದಾಖಲೀಕರಣದ ದೃಷ್ಟಿಯಿಂದ ಅಮೂಲ್ಯವಾದವು ಮತ್ತು ಆಕರಮೂಲಗಳಾಗಿವೆ. ೧೯೧೬ರಲ್ಲಿ ಪ್ರಾರಂಭಗೊಂಡ ‘ಕರ್ಣಾಟಕ ಸಾಹಿತ್ಯ ಪರಿಷತ್ ಪತ್ರಿಕೆ’ ಸಂಸ್ಥೆಯ ಹೆಸರು ಬದಲಾವಣೆಯ ಜೊತೆಜೊತೆಗೆ ೧೯೩೮ರಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’ಯಾಗಿ ಮರುನಾಮಕರಣಗೊಂಡು, ಇಂದಿಗೂ ಪ್ರಕಟಗೊಳ್ಳುತ್ತಿದೆ. ಇದೀಗ ಷಣ್ಮಾಸಿಕವಾಗಿ ಹೊರಬರುತ್ತಿದೆ. ಈ ಪತ್ರಿಕೆಯು ಪ್ರೌಢಲೇಖನಗಳಿಗೆ ಮೀಸಲಾಗಿದ್ದುದರಿಂದ ಅದು ಪರಿಷತ್ತಿನ ಕಾರ್ಯಚಟುವಟಿಕೆಗಳ ಪ್ರಸಾರಸಾಧನವಾಗಲು ಸಾಧ್ಯವಿರಲಿಲ್ಲ. ಹೀಗಾಗಿ ಪರಿಷತ್ತಿನ ಮುಖವಾಣಿಯನ್ನಾಗಿ ಹಾಗೂ ಕನ್ನಡ ಚಟುವಟಿಕೆಗಳಿಗೆ ಮೀಸಲಾದ ಪತ್ರಿಕೆಯಾಗಿ ೧೯೩೮ರಲ್ಲಿ (ವಿಜಯದಶಮಿ, ಅಕ್ಟೋಬರ್ ೪) ‘ಕನ್ನಡ ನುಡಿ’ ಎಂಬ ವಾರಪತ್ರಿಕೆಯನ್ನು ಪರಿಷತ್ ಪ್ರಾರಂಭಿಸಿತು. ಅ.ನ. ಕೃಷ್ಣರಾಯರ ಪ್ರಾರಂಭಿಕ ಸಂಪಾದಕತ್ವದಲ್ಲಿ ಮನೆಮನೆಗೆ ಪರಿಷತ್ತಿನ ಹಾಗೂ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ಈ ಪತ್ರಿಕೆಯ ಮೂಲಕ ತಲಪಿಸಲಾಗುತ್ತಿತ್ತು. ಇಂದು ಪಾಕ್ಷಿಕ ಪತ್ರಿಕೆಯಾಗಿ ‘ಕನ್ನಡ ನುಡಿ’ ಹೊರಬರುತ್ತಿದೆ.
ಪರಿಷತ್ತನ್ನು ಕಟ್ಟಿ ಬೆಳೆಸಿದವರು
ಪರಿಷತ್ತಿನ ಪ್ರಾರಂಭವೂ ಸೇರಿದಂತೆ ಅದರ ಬೆಳವಣಿಗೆಯಲ್ಲಿ ಮೈಸೂರು ಸಂಸ್ಥಾನದ ಮಹಾರಾಜರ ಪಾತ್ರ ಮಹತ್ತ್ವದ್ದು. ಪ್ರಾರಂಭದಿಂದಲೂ ಕಛೇರಿ, ನೌಕರರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನೂ ಸಂಸ್ಥಾನವೇ ಮುಂದೆ ನಿಂತು ನಡೆಸುತ್ತಿತ್ತು. ಎಚ್.ವಿ. ನಂಜುಂಡಯ್ಯನವರ ಅಧ್ಯಕ್ಷತೆಯಲ್ಲಿ (೧೯೧೫ರಿಂದ ೨೦ರ ತನಕ ಅಧ್ಯಕ್ಷರಾಗಿದ್ದರು) ಪ್ರಾರಂಭಗೊಂಡ ಪರಿಷತ್ ೧೯೨೦ರ ನಂತರ ಅಧ್ಯಕ್ಷಸ್ಥಾನ ಗೌರವಸ್ಥಾನವಾಗಿ ಚುನಾಯಿತ ಉಪಾಧ್ಯಕ್ಷರೇ ಎಲ್ಲ ಕೆಲಸಕಾರ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊರಬೇಕಾಗಿತ್ತು (ಸ್ವಾತಂತ್ರ್ಯಪ್ರಾಪ್ತಿಯ ತನಕ). ರಾವ್ ಬಹಾದ್ದೂರ್ ಎಂ. ಶಾಮರಾವ್, ಬೆಳ್ಳಾವೆ ವೆಂಕಟನಾರಣಪ್ಪ, ಡಿ.ವಿ. ಗುಂಡಪ್ಪ, ಎ.ಆರ್. ಕೃಷ್ಣಶಾಸ್ತ್ರೀ, ತಿ.ತಾ. ಶರ್ಮ, ಮಾಸ್ತಿ ಸೇರಿದಂತೆ ಅನೇಕ ಮೇಧಾವಿಗಳು ಕಾಲಕಾಲಕ್ಕೆ ಪರಿಷತ್ತಿನ ಬೆಳವಣಿಗೆಗೆ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ.
ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಿ.ವಿ. ಗುಂಡಪ್ಪನವರು (ಮೈಸೂರಿನ ರಾಜಮನೆತನಕ್ಕೆ ಅಧ್ಯಕ್ಷಸ್ಥಾನ ಗೌರವ ಹುದ್ದೆಯಾಗಿ ಮೀಸಲಾಗಿತ್ತು) ಸಂಸ್ಥೆಯ ಕಾರ್ಯವಿಧಾನಕ್ಕೆ ಒಂದು ಸ್ಪಷ್ಟವಾದ ಸ್ವರೂಪ ಕೊಟ್ಟರು. ಪದವೀಧರರೂ ಸಾಹಿತ್ಯಪ್ರಿಯರೂ ಆದ ತರುಣರನ್ನು ಸಿಬ್ಬಂದಿ ವರ್ಗದಲ್ಲಿ ನಿಯಮಿಸಿ, ಪರಿಷತ್ತಿನ ಕಾರ್ಯಾಲಯಕ್ಕೆ ಹೊಸ ಚೈತನ್ಯವನ್ನು ತಂದುಕೊಟ್ಟರು. ಗುಂಡಪ್ಪನವರ ಕಾಲದಲ್ಲಿ ‘ಪರಿಷತ್ತಿನ ತೇರು’ ರಾಜಬೀದಿಗೆ ಬಂದಿತು ಎಂದು ಹಲವು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಸಾಹಿತ್ಯೋತ್ಸವದ ಹೆಸರಿನಲ್ಲಿ ಅವರು ನಡೆಸುತ್ತಿದ್ದ ಉತ್ಸವದಲ್ಲಿ ವಿಜ್ಞಾನ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳ, ಭಾಷೆ, ಸಾಹಿತ್ಯ, ಶಿಲ್ಪಕಲೆ, ದರ್ಶನಶಾಸ್ತ್ರ – ಮೊದಲಾದ ಶಾಸ್ತ್ರಗಳ ಪರಿಣತರನ್ನು ರಾಜ್ಯದೆಲ್ಲೆಡೆಯಿಂದ ಕರೆಯಿಸಿ, ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ೧೯೩೪ರಲ್ಲಿ ಮೊತ್ತಮೊದಲ ಬಾರಿಗೆ ಕನ್ನಡ ಗ್ರಂಥಪ್ರದರ್ಶನವನ್ನು ಏರ್ಪಡಿಸಿದರು. (೧೯೦೧ ರಿಂದ ೧೯೩೪ರ ತನಕ ಪ್ರಕಟವಾದ ಎಲ್ಲ ಕನ್ನಡ ಪುಸ್ತಕಗಳನ್ನು ಶೋಧಿಸಿ, ವಿಷಯಾನುಕ್ರಮದಲ್ಲಿ ವಿಂಗಡಿಸಿ ಗ್ರಂಥಪ್ರದರ್ಶನವನ್ನು ಯಶಸ್ವಿಗೊಳಿಸಿದರು.)
ಡಿ.ವಿ.ಜಿ. ಅವರ ನಂತರ ಉಪಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಿ.ಎಂ. ಶ್ರೀಕಂಠಯ್ಯನವರ ಕಾಲದಲ್ಲಿ ಪರಿಷತ್ತಿನ ಚಟುವಟಿಕೆ ಇನ್ನಷ್ಟು ವಿಸ್ತರಿಸಿತು. ಕನ್ನಡ ಬಾವುಟವನ್ನು ಏರಿಸಿ ಹಾರಿಸಿದ್ದು; ಅನೇಕ ಯುವಕರನ್ನು ಅದರಲ್ಲಿಯೂ ಸಾಹಿತ್ಯ ನಾಟಕಗಳಲ್ಲಿ ಆಸಕ್ತರನ್ನು ತಮ್ಮ ಬಳಿಗೆ ಸೆಳೆದು ಪರಿಷತ್ತಿನ ಚಟುವಟಿಕೆಗಳಿಗೆ ಜೋಡಿಸಿಕೊಂಡಿದ್ದು; ನಾಡಿನಾದ್ಯಂತ ಸಂಚರಿಸಿ ಜನರ ಒಲವನ್ನು ಪರಿಷತ್ತಿನತ್ತ ಆಕರ್ಷಿಸಿದ್ದು; ಕೇವಲ ನಿಃಸ್ವಾರ್ಥ ಸೇವೆಯಷ್ಟೇ ಅಲ್ಲದೆ ದೂರದೃಷ್ಟಿಯ ಯೋಚನೆ-ಯೋಜನೆಗಳನ್ನು ರೂಪಿಸಿ ಅದಕ್ಕೆ ಆರ್ಥಿಕ ದೃಷ್ಟಿಯಿಂದಲೂ ನೆರವಿತ್ತವರು ಬಿ.ಎಂ.ಶ್ರೀ. ಗಮಕ ಪ್ರೋತ್ಸಾಹಕ್ಕೆಂದು ಒಂದು ಸಾವಿರ ರೂಪಾಯಿ ನೀಡಿದ ಅವರು, ಪರಿಷತ್ತಿನ ಚಟುವಟಿಕೆ ಚೆನ್ನಾಗಿ ಪ್ರಸಾರವಾಗಬೇಕೆಂಬ ಉದ್ದೇಶದಿಂದ ಅಚ್ಚುಕೂಟವನ್ನು ಪ್ರಾರಂಭಿಸಿ, ಅದಕ್ಕೆ ಸ್ವತಃ ಆರು ಸಾವಿರ ರೂಪಾಯಿಗಳನ್ನು ದಾನವಾಗಿ ನೀಡಿದರು; ಜನರಲ್ಲಿ ಕನ್ನಡ ಕಲಿಕೆಯ ಆವಶ್ಯಕತೆ ಮತ್ತು ಅಭಿರುಚಿ ಮೂಡಿಸುವ ಸಲುವಾಗಿ ‘ಅಣಗು’, ‘ಕಾವ’ ಮತ್ತು ‘ಜಾಣ’ ಎಂಬ ಮೂರು ಹಂತದ ಕನ್ನಡ ಪರೀಕ್ಷೆಯನ್ನು ಆರಂಭಿಸಿದರು; ತ್ರೈಮಾಸಿಕವಾಗಿ ಪ್ರಕಟಗೊಳ್ಳುತ್ತಿದ್ದ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’ಯ ಜೊತೆಗೆ ‘ಕನ್ನಡ ನುಡಿ’ ಪತ್ರಿಕೆಯ ಹುಟ್ಟಿನಲ್ಲಿಯೂ ಬಿ.ಎಂ.ಶ್ರೀ. ಅವರ ಕೊಡುಗೆ ಮಹತ್ತ್ವದ್ದು. ಪರಿಷತ್ನ ಕಾರ್ಯಭಾರದ ರಥವನ್ನು ಎಳೆದ ಪ್ರತಿಯೋರ್ವರೂ ತಮ್ಮ ಕಾಲಾವಧಿಯಲ್ಲಿ ತಮ್ಮದೇ ಆದ ಚಿಂತನೆ, ಕಾರ್ಯಶೈಲಿಯಲ್ಲಿ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ.
ನಿಘಂಟುಗಳ ಪ್ರಕಟಣೆ
ಸಾಹಿತ್ಯ ಪರಿಷತ್ತಿಗೆ ಶಾಶ್ವತವಾದ ಕೀರ್ತಿಯನ್ನು ತಂದುಕೊಟ್ಟಿರುವ ಯೋಜನೆಗಳಲ್ಲಿ ಕನ್ನಡ ನಿಘಂಟು ಪ್ರಕಟಣೆ ಪ್ರಮುಖವಾದುದು ಮತ್ತು ಪರಿಷತ್ತಿನ ಇತಿಹಾಸದಲ್ಲೊಂದು ಮೈಲಿಗಲ್ಲು ಎಂದರೂ ತಪ್ಪಾಗಲಾರದು. ಪರಿಷತ್ನ ಪ್ರಾರಂಭದ ದಿನಗಳಲ್ಲಿಯೇ ನಿಘಂಟು ರಚನೆಯ ಯೋಚನೆಗಳಿದ್ದರೂ ಈ ಕಾರ್ಯ ಅಧಿಕೃತವಾಗಿ ಪ್ರಾರಂಭಗೊಂಡಿದ್ದು ೧೯೪೩ರಲ್ಲಿ. ೧೯೪೧ರಲ್ಲಿ ಹೈದರಾಬಾದ್ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರೂ ಸೇರಿದಂತೆ ಸಕಲ ಸದಸ್ಯರ ಒತ್ತಡದ ಫಲವಾಗಿ ೧೯೪೪ರಲ್ಲಿ ಜನವರಿ ೨೭ರಂದು ಕನ್ನಡ-ಕನ್ನಡ ಕೋಶ ವಿಭಾಗವನ್ನು ಆರಂಭಿಸಿ, ಎ.ಆರ್. ಕೃಷ್ಣಶಾಸ್ತ್ರಿ ಅವರ ನೇತೃತ್ವದಲ್ಲಿ ಪದಸಂಗ್ರಹ ಯೋಜನೆಯನ್ನು ಜಾರಿಗೆ ತರಲಾಯಿತು – ಒಟ್ಟು ೭೬ ಜನ ಪಂಡಿತರ ತಂಡದಿಂದ ಆರಂಭಗೊಂಡಿದ್ದು. ಆಗ ಇಂತಹ ಪ್ರಯತ್ನ ಇತರ ಯಾವುದೇ ಭಾರತೀಯ ಭಾಷೆಗಳಲ್ಲಿ ನಡೆದಿರಲಿಲ್ಲ ಎಂದು ಹೇಳಲಾಗುತ್ತದೆ.
ಕ್ರಿ.ಶ. ೪೫೦ರ ಹಲ್ಮಿಡಿ ಶಾಸನದಿಂದ ಹಿಡಿದು ಕ್ರಿ.ಶ. ೧೮೦೦ರ ವರೆಗಿನ ಪ್ರಕಟಿತ, ಅಪ್ರಕಟಿತ ಶಾಸನಗಳ ಅವಲೋಕನ; ಕನ್ನಡದಲ್ಲಿ ಅಂದು ಉಪಲಬ್ಧವಾಗಿದ್ದ ಮೊಟ್ಟಮೊದಲ ಗ್ರಂಥ ನೃಪತುಂಗನ ಕವಿರಾಜಮಾರ್ಗದಿಂದ ಹಿಡಿದು ಇಂದಿನ ಕಾಲಪರಿಮಿತಿಯಲ್ಲಿ ಬರುವ ಹಳಗನ್ನಡ, ನಡುಗನ್ನಡ, ಹೊಸಗನ್ನಡದ ಅನೇಕಾನೇಕ ಪ್ರಕಟಿತ, ಅಪ್ರಕಟಿತ ಗ್ರಂಥಗಳು ಸೇರಿದಂತೆ ಕನ್ನಡ ಭಾಷೆಯ ಎಲ್ಲ ರೀತಿಯ ಸಾಹಿತ್ಯಗಳ ಪರಿಶೋಧನೆ, ಪ್ರಯೋಗಗಳ ಸಂಗ್ರಹ; ನಿರ್ದಿಷ್ಟ ಪ್ರಾಚೀನ ಕಾವ್ಯಗಳಿಂದ ಶಬ್ದಗಳನ್ನು ಸಂಗ್ರಹಿಸಿ ಕೊಡಬೇಕೆಂದು ಕನ್ನಡ ನಾಡಿನ ವಿದ್ವಾಂಸರುಗಳಿಗೆ ಪತ್ರಮುಖೇನ ವಿನಂತಿ – ಹೀಗೆ ವಿವಿಧ ರೀತಿಯ ಚಟುವಟಿಕೆಗಳ ಮೂಲಕ ನಿಘಂಟು ತಯಾರಿಯ ಕಾರ್ಯವನ್ನು ಮುನ್ನಡೆಸಲಾಯಿತು. ಆದರೆ ಕನ್ನಡ-ಕನ್ನಡ ಬೃಹತ್ ನಿಘಂಟು ಕಾರ್ಯ ಪೂರ್ಣಗೊಳ್ಳಲು ಬರೋಬ್ಬರಿ ಅರ್ಧಶತಮಾನವೇ ಬೇಕಾಯಿತು – ೧೯೪೪ರಿಂದ ೧೯೯೫ರವರೆಗೆ. ೧೯೭೦ರಲ್ಲಿ ಹೊರಬಂದ ಮೊದಲ ಸಂಪುಟದಿಂದ ಪ್ರಾರಂಭಿಸಿ ೧೯೯೫ರಲ್ಲಿ ಹೊರಬಂದ ೮ನೇ ಸಂಪುಟ ಸೇರಿದಂತೆ ಒಟ್ಟು ೧೦,೦೦೦ಕ್ಕೂ ಹೆಚ್ಚು ಪುಟಗಳನ್ನು ಒಳಗೊಂಡಿರುವ ಈ ಮಹಾನ್ ಸಂಪುಟಗಳ ಪ್ರಧಾನ ಸಂಪಾದಕರುಗಳಾಗಿ ಕಾರ್ಯನಿರ್ವಹಿಸಿದವರು – ಎನ್. ಬಸವಾರಾಧ್ಯ, ಪ್ರೊ. ಜಿ. ವೆಂಕಟಸುಬ್ಬಯ್ಯ. ಜನೋಪಯೋಗಿ ಉದ್ದೇಶದಿಂದ ಈ ಬೃಹತ್ ನಿಘಂಟನ್ನು ‘ಸಂಕ್ಷಿಪ್ತ ನಿಘಂಟು’, ‘ಕನ್ನಡ ರತ್ನಕೋಶ’ (ಕಿಸೆ ನಿಘಂಟು) ಮುಂತಾದ ರೂಪದಲ್ಲಿ ಹೊರತರಲಾಗಿದೆ.
ಸಾಹಿತ್ಯ ಸಮ್ಮೇಳನಗಳು
ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಸಮ್ಮೇಳನಗಳ ಮೂಲಕ ನಾಡಿನ ಜನರಲ್ಲಿ ಭಾವೈಕ್ಯವನ್ನುಂಟುಮಾಡುವಲ್ಲಿ ಯಶಸ್ವಿಯಾಗಿ ಕಾರ್ಯೋನ್ಮುಖವಾಗುತ್ತಿದೆ. ಸಮಗ್ರ ಕನ್ನಡ ನಾಡಿನ ಸಾಹಿತ್ಯೋತ್ಸವವೆಂಬ ಮನೋಭಾವವನ್ನು ಕಳೆದ ೮೧ ಸಾಹಿತ್ಯ ಸಮ್ಮೇಳನಗಳು ಸಮರ್ಥಿಸಿವೆ. ಇಂಥ ಸಮ್ಮೇಳನಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಸ್ಥಿತಿ-ಗತಿಗಳ ಕುರಿತು ಕೂಲಂಕಷವಾದ ವಿಚಾರ-ವಿಮರ್ಶೆ ನಡೆದು ಕನ್ನಡಿಗರಲ್ಲಿ ನಾಡುನುಡಿಯ ಬಗ್ಗೆ ಅಭಿಮಾನ ಮೂಡಿಸುವುದು, ಅದರಂತೆ ಪರಿಷತ್ತು ಹಾಗೂ ಕನ್ನಡಪರ ಸಂಘ-ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವಂತೆ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳುವ ಹಾಗೂ ಕಾರ್ಯೋನ್ಮುಖವಾಗುವ ಪರಂಪರೆ ಬೆಳೆದುಬಂದಿದೆ.
ಇತರ ಸಾಧನೆಗಳು
- ನಾಡಿನ ಉದ್ದಗಲಗಳಲ್ಲಿ ಅನೇಕ ಕನ್ನಡಪರ ಸಂಘ-ಸಂಸ್ಥೆಗಳು ಕನ್ನಡದ ಕೆಲಸವನ್ನು ಸೀಮಿತವಾದ ರೀತಿಯಲ್ಲಿ ಮಾಡುತ್ತಿದ್ದವು. ಅವುಗಳನ್ನು ಸಂಘಟಿಸುವ ಹಾಗೂ ಪರಿಷತ್ತಿನ ವಿವಿಧ ಚಟುವಟಿಕೆಗಳಲ್ಲಿ ಅವುಗಳನ್ನು ಸಹಭಾಗಿಗಳಾಗುವಂತೆ ಮಾಡುವ ಉದ್ದೇಶದಿಂದ ಕನ್ನಡ ಸಂಘ-ಸಂಸ್ಥೆಗಳ ಸಮ್ಮೇಳನಗಳನ್ನೂ ಪರಿಷತ್ ಪ್ರಾರಂಭದ ದಿನಗಳಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿತ್ತು. ತನ್ಮೂಲಕ ನಾಡಿನ ಅನೇಕ ಸಂಘ-ಸಂಸ್ಥೆಗಳಿಗೆ ಸ್ಪಷ್ಟ ದಿಕ್ಕು ತೋರುವ ಹಾಗೂ ಕನ್ನಡ ನಾಡು-ನುಡಿಯ ಸಂರಕ್ಷಣೆಯಲ್ಲಿ ಒಂದಾಗಿ ಕಾರ್ಯೋನ್ಮುಖವಾಗಿಸುವ ಕಾರ್ಯಗಳೂ ನಡೆದಿವೆ.
- ಕರ್ನಾಟಕದ ರಾಜಕೀಯ ಏಕೀಕರಣಕ್ಕೆ ಪರಿಷತ್ತಿನ ಪ್ರಯತ್ನವನ್ನು ಇತಿಹಾಸ ಗುರುತಿಸಿದ್ದು, ಕರ್ನಾಟಕದ ಭೌಗೋಳಿಕ ಎಲ್ಲೆಗಳನ್ನು ಗುರುತಿಸುವಲ್ಲಿ ಪರಿಷತ್ ಆರಂಭಕಾಲದಿಂದಲೂ ಪ್ರಯತ್ನಶೀಲವಾಗಿರುವುದನ್ನು ಕಾಣಬಹುದು.
- ಸಾಹಿತ್ಯಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪರಿಷತ್ ದತ್ತಿನಿಧಿಗಳನ್ನು ಆರಂಭಿಸಿದ್ದು, ಈವರೆಗೆ ೧೬೩೭ ದತ್ತಿನಿಧಿಗಳಿವೆ. ಕನ್ನಡದಲ್ಲಿ ಮೌಲಿಕ ಸಾಹಿತ್ಯ ರಚನೆ ಮಾಡಿರುವ ಹಿರಿಯ ಸಾಹಿತಿಯೊಬ್ಬರನ್ನು ಗೌರವಿಸುವ ಸಲುವಾಗಿ ನೃಪತುಂಗ ಸಾಹಿತ್ಯ ಪ್ರಶಸ್ತಿ (ಮೊತ್ತ ರೂ. ೭ ಲಕ್ಷ), ಶ್ರೀವಿಜಯ ಸಾಹಿತ್ಯ ಪ್ರಶಸ್ತಿ (ಮೊತ್ತ ರೂ. ೧,೧೧,೧೧೧) ಮುಂತಾದ ಪ್ರಶಸ್ತಿಗಳನ್ನು ನೀಡುತ್ತಿದೆ. ದತ್ತಿನಿಧಿಗಳ ಮೂಲಕ ನೀಡಲಾಗುವ ಇತರ ಪ್ರಶಸ್ತಿಗಳೆಂದರೆ, ಪದ್ಮಭೂಷಣ ಡಾ. ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ಶ್ರವಣಬೆಳಗೋಳದ ಚಾವುಂಡರಾಯ ಪ್ರಶಸ್ತಿ, ಪುಸ್ತಕ ಪ್ರಕಟಣೆ ದತ್ತಿ, ಉತ್ತಮ ಪುಸ್ತಕಗಳಿಗೆ ಬಹುಮಾನ ಮುಂತಾದವು.
- ಕನ್ನಡ ಸಾಹಿತ್ಯವನ್ನು ವ್ಯಾಸಂಗಮಾಡಲಪೇಕ್ಷಿಸುವವರಿಗೆ ನೆರವಾಗುವ ಉದ್ದೇಶದಿಂದ ಬಿ.ಎಂ.ಶ್ರೀ ಅವರ ಪ್ರೇರಣೆಯಿಂದ ಪ್ರಾರಂಭಿಸಲಾದ ಕನ್ನಡ ಕಾವ, ಕನ್ನಡ ಜಾಣ ಪರೀಕ್ಷೆಗಳು ಉನ್ನತ ಶಿಕ್ಷಣ ಹೊಂದುವ ಹಂಬಲವುಳ್ಳವರಿಗೆ ಲಾಭಕಾರಿಯಾಗಿವೆ. ಈ ಪರೀಕ್ಷೆಗಳಿಗೆ ಕರ್ನಾಟಕ ಸರ್ಕಾರ, ಬೆಂಗಳೂರು ವಿಶ್ವವಿದ್ಯಾಲಯಗಳು ಮಾನ್ಯತೆ ನೀಡಿವೆ.
- ಕನ್ನಡ ನಾಡು-ನುಡಿಗಳಿಗೆ ದೀರ್ಘಕಾಲ ವಿಶಿಷ್ಟ ಶ್ರೇಷ್ಠ ಸೇವೆ ಸಲ್ಲಿಸಿದ ಹಿರಿಯ ವ್ಯಕ್ತಿಗಳಿಗೆ ಗೌರವ ಸದಸ್ಯತ್ವ ನೀಡುವ ಪರಂಪರೆಯಿದ್ದು, ಈವರೆಗೆ ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಮಾಸ್ತಿ, ಕಾರಂತ, ಸಿಂಪಿ ಲಿಂಗಣ್ಣ, ಪು.ತಿ.ನ., ವಿ.ಕೃ. ಗೋಕಾಕ್, ಪಾಟೀಲ್ ಪುಟ್ಟಪ್ಪ, ಕಯ್ಯಾರ ಕಿಞ್ಞಣ್ಣ ರೈ ಅವರಂತಹ ೧೯ ಅದ್ವಿತೀಯ ಸಾಧಕರಿಗೆ ಈ ಗೌರವ ಸದಸ್ಯತ್ವವನ್ನು ನೀಡಿ ಸನ್ಮಾನಿಸಲಾಗಿದೆ.
ಕನ್ನಡ ಸಂಸ್ಕೃತಿಯನ್ನು ಪೋಷಿಸುವ, ಬೆಳೆಸುವ, ದನಿಯಾಗುವ ಹಂಬಲದಿಂದ ಹುಟ್ಟಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ ತನ್ನ ನೂರು ವರ್ಷಗಳ ಸಾಧನಾ ಪಯಣದಲ್ಲಿ ಮೂಲ ಆಶಯವನ್ನು ಸಾಕಾರಗೊಳಿಸಿದೆಯೇ ಎಂದರೆ ಸ್ಪಷ್ಟ ಉತ್ತರ ಸಿಗದೇ ಇರಬಹುದು. ಆದರೆ ಪ್ರಾರಂಭದ ಆರೇಳು ದಶಕಗಳ ಕಾಲ ಕನ್ನಡ ನಾಡು-ನುಡಿಗಾಗಿ ನಡೆದ ಎಲ್ಲ ಚಟುವಟಿಕೆಗಳಲ್ಲಿ ಪರಿಷತ್ ಮಹತ್ತ್ವದ ಪಾತ್ರ ವಹಿಸಿತ್ತು ಎಂಬುದನ್ನು ಯಾರೂ ಅಲ್ಲಗಳೆಯಲಾರರು.
ಶತಮಾನದ ಸಂಭ್ರಮದಲ್ಲಿರುವ ಪರಿಷತ್ ಇಂದು ಕಳೆಗುಂದಿದೆ ಎಂದು ಕೆಲವರಿಗೆನಿಸಿದರೆ ಆಶ್ಚರ್ಯವಿಲ್ಲ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಸ್ವಾತಂತ್ರ್ಯಾನಂತರದ ೨-೩ ದಶಕಗಳಲ್ಲಿ ಇದೇ ಆಶಯವನ್ನಿಟ್ಟುಕೊಂಡು ಸಂಸ್ಕೃತಿ ಇಲಾಖೆ, ಅಕಾಡೆಮಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾಲಯದ ಕನ್ನಡ ವಿಭಾಗಗಳು, ಕನ್ನಡ ವಿಶ್ವವಿದ್ಯಾಲಯ – ಹೀಗೆ ಕನ್ನಡಕ್ಕಾಗಿ ದುಡಿಯುವ ಸರ್ಕಾರೀ ಕೃಪಾಪೋಷಿತ ಅನೇಕ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವುಗಳ ಜೊತೆಗೆ ಅನೇಕ ಖಾಸಗಿ ಸಂಸ್ಥೆಗಳು, ವ್ಯಕ್ತಿಗಳೂ ತಮ್ಮ ಪಾಡಿಗೆ ತಾವು ಕನ್ನಡ ಸಂಸ್ಕೃತಿಯನ್ನು ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಈ ಖಾಸಗಿ ಸಂಸ್ಥೆಗಳು ಅರ್ಥಪೂರ್ಣ ಕೆಲಸ ಮಾಡುತ್ತಿವೆ ಎಂದೂ ಅನ್ನಿಸುವುದುಂಟು.
ಆದರೆ ಕನ್ನಡದ ಬೆಳವಣಿಗೆಗಾಗಿ ಅನೇಕ ಸಂಘಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದರೂ ಕನ್ನಡ ಸಾಹಿತ್ಯ ಪರಿಷತ್ಗೆ ಇಂದಿಗೂ ತನ್ನದೇ ಆದ ಒಂದು ಮಹತ್ತ್ವದ ಸ್ಥಾನವಿದೆ ಎಂಬುದನ್ನು ಅಲ್ಲಗಳೆಯಲಾಗದು. ಅದರ ಮಹತ್ತ್ವಕ್ಕೆ ಚ್ಯುತಿ ಬಂದಿಲ್ಲ. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಭಿಪ್ರಾಯದಂತೆ ಇದಕ್ಕೆ ಪ್ರಮುಖವಾಗಿ ಎರಡು ಕಾರಣಗಳನ್ನು ಗುರುತಿಸಬಹುದು.
ಮೊದಲನೆಯದು, ಕನ್ನಡ ಸಾಹಿತ್ಯ ಪರಿಷತ್ತು, ಒಂದು ಸ್ವಾಯತ್ತ ಸಂಸ್ಥೆ. ಅದಕ್ಕೆ ಅದರದೇ ಆದ ನೀತಿ ನಿಯಮಾವಳಿ ಇದೆ; ಸಂವಿಧಾನವಿದೆ. ಸರ್ಕಾರದ ಅನುದಾನ ಪಡೆದರೂ ಅದು ಸರ್ಕಾರದ ಅಧೀನ ಸಂಸ್ಥೆಯಲ್ಲ. ತನ್ನದೇ ಆದ ಒಂದು ಅಸ್ತಿತ್ವ ಪರಿಷತ್ತಿಗಿದೆ. ಉಳಿದ ಹಲವು ಸಂಸ್ಥೆಗಳು ಸರ್ಕಾರದ ನೇರ ಆಡಳಿತಕ್ಕೆ ಒಳಪಟ್ಟಂತಹವು; ಅಧೀನ ಸಂಸ್ಥೆಗಳು, ಒಂದು ರೀತಿಯಲ್ಲಿ ಸರ್ಕಾರೀ ಇಲಾಖೆಗಳು. ಇವುಗಳ ನೇತೃತ್ವ ವಹಿಸುವಂಥವರು ಸರ್ಕಾರದಿಂದ ನೇಮಿಸಲ್ಪಡುವವರು.
ಲೋಹಿಯಾ ಹೇಳುವಂತೆ ಸರ್ಜನಶೀಲತೆಯೆಂದರೆ ಯಥಾಸ್ಥಿತಿವಾದವನ್ನು, ಜಡತೆಯನ್ನು, ಪ್ರಭುತ್ವವನ್ನು ವಿರೋಧಿಸುವುದು. ಪ್ರಭುತ್ವವು ಅಧೀನ ಸಂಸ್ಥೆಗಳ ಮೂಲಕ ಸರ್ಜನಶೀಲ ಪ್ರತಿಭೆಯನ್ನು ನಿಯಂತ್ರಿಸುವ, ದಮನ ಮಾಡುವ, ಪ್ರಶ್ನಿಸುವ ಮನೋಭಾವವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುತ್ತದೆ. ನಮ್ಮ ಅನೇಕ ಸ್ವೋಪಜ್ಞ ಪ್ರತಿಭೆಗಳು ಇಂಥ ಸಂಸ್ಥೆಗಳ ಪದವಿ ಆಸೆಗೆ ಬಲಿಯಾಗಿಯೇ ಪ್ರಭುತ್ವವನ್ನು ಓಲೈಸುವ ಹಾದಿ ಹಿಡಿದದ್ದು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಪದವಿ ಇನ್ನೂ ಈ ಹಂಗಿಗೆ ಒಳಗಾಗಿಲ್ಲ. ಅವರ ಸ್ವಾತಂತ್ರ್ಯ ಹರಣಗೊಂಡಿಲ್ಲ. ಅದು ಸರ್ಕಾರೀ ಕೃಪಾಪೋಷಿತ ಪದವಿಯಲ್ಲ. ಅದು ಕನ್ನಡ ಮನಸ್ಸಿನ ಆಯ್ಕೆ. ಸಮರ್ಥ, ಸ್ವಂತ ವ್ಯಕ್ತಿತ್ವದ ಅಧ್ಯಕ್ಷರು ಸಮಸ್ತ ಕನ್ನಡಿಗರ ದನಿಯಾಗಿ, ಜನಸಾಮಾನ್ಯರ ಪ್ರತಿನಿಧಿಯಾಗಿ ಪ್ರಭುತ್ವಕ್ಕೆ, ಸರ್ಕಾರಕ್ಕೆ ಸಮವಾಗಬಲ್ಲ ಶಕ್ತಿ ಈ ಸ್ಥಾನಕ್ಕಿದೆ. ವಾಸ್ತವ ಚಿತ್ರವು ಸ್ವಲ್ಪ ಭಿನ್ನ ಎಂದೆನಿಸಿದರೂ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಈ ಸಾಧ್ಯತಾ ಶಕ್ತಿಯಿದೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು.
ಎರಡನೆಯದು, ಪರಿಷತ್ತು ನಾಡಿನ ಜನಸಾಮಾನ್ಯರೊಡನೆ ಹೊಂದಿರುವ ನೇರ ಸಂಬಂಧ. ಇನ್ನು ಯಾವ ಕನ್ನಡಪರ ಸಂಸ್ಥೆಗೂ ಜನತೆಯೊಡನೆ ಈ ಬಗೆಯ ನೇರ ಸಂಪರ್ಕವಿಲ್ಲ. ಇದರಲ್ಲೂ ಮುಖ್ಯವಾದುದೆಂದರೆ ಪರಿಷತ್ತಿನೊಡನೆ ಕನ್ನಡಿಗರಿಗಿರುವ ಭಾವನಾತ್ಮಕ ಬೆಸುಗೆ. ಕಳೆದ ಒಂದು ಶತಮಾನದಿಂದ ಕನ್ನಡ ಜನತೆ ಪರಿಷತ್ತಿನೊಡನೆ ನಿಕಟ ಸಂಬಂಧವಿರಿಸಿಕೊಂಡಿದೆ. ಪರಿಷತ್ತಿನ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಾಂತರ ಜನ ಸೇರುವುದೇ ಇದಕ್ಕೆ ಅತ್ಯುತ್ತಮ ನಿದರ್ಶನ. ಪರಿಷತ್ತು ನಮ್ಮದು ಎಂಬ ಭಾವ ಕನ್ನಡಿಗರ ಮನಸ್ಸಿಗಿದೆ. ಇನ್ನು ಯಾವ ಸಮ್ಮೇಳನಗಳಿಗೂ ಪರಿಷತ್ತಿನ ಸಮ್ಮೇಳನಕ್ಕಿರುವ ಸಾಂಸ್ಕೃತಿಕ, ಸಾಮಾಜಿಕ ಮಹತ್ತ್ವವಿಲ್ಲ. ಇದರ ಮಹತ್ತ್ವವನ್ನು ಅರಿತೇ ಸರ್ಕಾರ ಸಮ್ಮೇಳನದ ಸ್ವರೂಪದ ಮೇಲೂ ನಿಯಂತ್ರಣ ಸಾಧಿಸಿದೆ. ಪರಿಷತ್ತು ತನ್ನನ್ನು ತಾನು ಇಂತಹ ಅಧಿಕಾರಕೇಂದ್ರಗಳಿಂದ ರಕ್ಷಿಸಿಕೊಳ್ಳಬೇಕಾದುದು ಈಗಿನ ತುರ್ತು ಅಗತ್ಯ. ಕಾಲಚಕ್ರಗತಿಗೆ ಅನುಗುಣವಾಗಿ ಸಮ್ಮೇಳನದ ಸ್ವರೂಪದಲ್ಲಿಯೂ ಮಹತ್ತ್ವದ ಬದಲಾವಣೆಗಳು ಆಗಬೇಕಾಗಿದೆ.
ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಶಾಖೆಗಳು ಪ್ರತಿ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ರಾಜ್ಯದಾದ್ಯಂತ ಇವೆ. ಯಾವ ಸಂಸ್ಥೆಗೂ ಈ ಬಗೆಯ ವ್ಯಾಪಕ ಜಾಲವಿಲ್ಲ. ಈ ಎಲ್ಲ ಜಿಲ್ಲಾ ಶಾಖೆಗಳಿಗೂ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ಚುನಾವಣೆ ನಡೆದು ಜಿಲ್ಲಾಧ್ಯಕ್ಷರು ಆಯ್ಕೆಯಾಗುತ್ತಾರೆ. ಆಯ್ಕೆಯಾಗುವ ಜಿಲ್ಲಾ ಅಧ್ಯಕ್ಷರು, ಅವರು ನೇಮಿಸಿಕೊಳ್ಳುವ ತಾಲ್ಲೂಕು ಅಧ್ಯಕ್ಷರು, ಪ್ರತಿ ಜಿಲ್ಲೆ, ತಾಲ್ಲೂಕು ಹಂತದಲ್ಲಿ ಕಾರ್ಯಕಾರಿ ಸಮಿತಿ, ಪದಾಧಿಕಾರಿಗಳು – ಹೀಗೆ ಸಾಹಿತ್ಯ ಪರಿಷತ್ತು ಎನ್ನುವುದು ರಾಜ್ಯದಲ್ಲಿ ಒಂದು ಬೃಹತ್ ವ್ಯವಸ್ಥೆಯಾಗಿ ರೂಪ ತಾಳಿದೆ. ಈ ವ್ಯವಸ್ಥೆ ಕೇವಲ ಒಂದು ರೀತಿಯ ಅಧಿಕಾರಕೇಂದ್ರದ ದ್ಯೋತಕವಾಗಷ್ಟೇ ಉಳಿಯದೆ ಮೂಲ ಆಶಯವಾದ ಕನ್ನಡಿಗರ ಹಿತಕ್ಕಾಗಿ, ನಾಡು-ನುಡಿಯ ಒಳಿತಿಗಾಗಿ ಕಾರ್ಯೋನ್ಮುಖವಾಗಬೇಕಾದ ಅಗತ್ಯವಿದೆ.
ಸರ್ಕಾರೀ ಪೋಷಿತ ಅನೇಕ ಸಂಘ-ಸಂಸ್ಥೆಗಳ ನಡುವೆಯೂ ಪರಿಷತ್ನ ಕಾರ್ಯಚಟುವಟಿಕೆ ಹೇಗಿರಬೇಕು ಎಂಬ ಕುರಿತು ಸಾರ್ವಜನಿಕ ವಲಯದಲ್ಲಿ ಆಗಾಗ ಕೆಲವು ಸಲಹೆ ಸೂಚನೆಗಳು ಕೇಳಿಬರುತ್ತಿರುವುದನ್ನು ಕಾಣಬಹುದು. ಅವುಗಳಲ್ಲಿ ಕೆಲವನ್ನು ಉಲ್ಲೇಖಿಸುವುದಾದರೆ:
- ಈಗಾಗಲೇ ಪ್ರಕಟಗೊಂಡಿರುವ ನಿಘಂಟುಗಳ ಪರಿಷ್ಕರಣೆ ನಿರಂತರವಾಗಿ ನಡೆಯಬೇಕು. ಆಗಾಗ್ಗೆ ಪರಿಷ್ಕೃತ ಆವೃತ್ತಿಯೂ ಹೊರಬರುತ್ತಿರಬೇಕು. ನವೀನ ಶಾಸ್ತ್ರಗಳಿಗೆ ಸಂಬಂಧಪಟ್ಟ, ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ವಿಷಯಾಧಾರಿತ ನಿಘಂಟುಗಳ ರಚನೆಯೂ ನಡೆಯಬೇಕು.
- ಕನ್ನಡದಲ್ಲಿ ಈಗಾಗಲೇ ಪ್ರಕಟಗೊಂಡಿರುವ ಅಲಭ್ಯ ಉತ್ಕೃಷ್ಟ ಗ್ರಂಥಗಳ ಮರುಮುದ್ರಣ ಹಾಗೂ ಅನೇಕ ಕನ್ನಡ ದಿಗ್ಗಜ ಸಾಹಿತಿಗಳ ಅಪ್ರಕಟಿತ ಲೇಖನ-ಬರಹಗಳ ಮುದ್ರಣದ ಕಾರ್ಯವನ್ನು ಪರಿಷತ್ ಕೈಗೆತ್ತಿಕೊಳ್ಳಬೇಕು. (ಈ ಕೆಲಸವನ್ನು ಪುಸ್ತಕ ಪ್ರಾಧಿಕಾರದಂತಹ ಸಂಸ್ಥೆಗಳು ನಡೆಸುತ್ತಿದ್ದರೂ ಅನೇಕ ಕೃತಿಗಳು ನಾಡಿಗೆ ಅಜ್ಞಾತವಾಗಿಯೇ ಉಳಿದಿವೆ.) ಜೊತೆಜೊತೆಗೆ ಕನ್ನಡ ನಾಡು-ನುಡಿ-ಸಂಸ್ಕೃತಿಗೆ ಸಂಬಂಧಿಸಿದ ಅಧ್ಯಯನಶೀಲ ಬರಹಗಳನ್ನೂ ನಾಡಿಗೆ ನೀಡುತ್ತಿರಬೇಕು.
- ರಾಜ್ಯದಾದ್ಯಂತ ಘಟಕಗಳನ್ನು ಹೊಂದಿರುವ ಸಾಹಿತ್ಯ ಪರಿಷತ್ ಕನಿಷ್ಠ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯಕೃತಿಗಳ ಮಾರಾಟಕ್ಕೆ ಸೂಕ್ತ ಯೋಜನೆ-ವ್ಯವಸ್ಥೆ ರೂಪಿಸಬೇಕು. (ಪರಿಷತ್ ಪ್ರಕಟಿತ ಕೃತಿಗಳಾದರೂ ದೊರೆಯುವಂತಾಗಬೇಕು.)
- ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಪುಸ್ತಕಗಳೆಲ್ಲ ಒಂದು ಕಡೆ ಸಿಗುವಂತಹ ಆಕರ ಗ್ರಂಥಾಲಯದ ನಿರ್ಮಾಣವಾಗಬೇಕು. ಅಧ್ಯಯನ ಮಾಡಬಯಸುವವರಿಗೆ ಕನ್ನಡದ ಪ್ರಕಟಿತ ಪುಸ್ತಕಗಳೆಲ್ಲ ಒಂದೇ ಕಡೆ ದೊರೆಯಬೇಕು. ಅದಕ್ಕಾಗಿ ಸಾಹಿತ್ಯ ಪರಿಷತ್ತು ಒಂದು `ಪರಾಮರ್ಶನ ಆಕರ ಗ್ರಂಥಾಲಯ’ ಸ್ಥಾಪಿಸಬೇಕು. ಪುಸ್ತಕಗಳನ್ನು ವಿತರಿಸದೆ, ಅಲ್ಲಿಯೇ ಕುಳಿತು ಅಧ್ಯಯನ ಮಾಡಲು ಅವಕಾಶವಿರಬೇಕು. ಅಗತ್ಯವಿದ್ದರೆ ಜೆರಾಕ್ಸ್ ಪ್ರತಿ ಮಾಡಿಸಿಕೊಳ್ಳಲು ಅವಕಾಶವಿರಬೇಕು.
- ಇಡೀ ಕನ್ನಡನಾಡಿನ ಬಹುಮುಖೀ ಸಂಸ್ಕೃತಿಯನ್ನು ಪ್ರತಿನಿಧಿಸುವಂತಹ `ಸಂಸ್ಕೃತಿ ವಸ್ತು ಪ್ರದರ್ಶನಾಲಯ’ ವೊಂದನ್ನು ಸ್ಥಾಪಿಸಬೇಕು. ಇದಕ್ಕೆ ಸರ್ಕಾರವನ್ನು ಜತೆಗೂಡಿಸಿಕೊಳ್ಳಬೇಕು. ಕನ್ನಡದ ಹೆಮ್ಮೆಯನ್ನು ಅನ್ಯರಿಗೆ ಪರಿಚಯಿಸಲು ಇದು ನೆರವಾಗುವಂತಿರಬೇಕು.
- ಮುಖ್ಯವಾಗಿ ಸಾಹಿತ್ಯ ಸಮ್ಮೇಳನಗಳಿಗೆ ಅಧ್ಯಕ್ಷರ ಆಯ್ಕೆಗೆ ನಾಡಿನ ಸಂಸ್ಕೃತಿ-ನಾಡು-ನುಡಿಗಳಿಗೆ ಗೌರವವಿರುವ ವ್ಯಕ್ತಿಗಳ ಸಮಿತಿಯೊಂದನ್ನು ನೇಮಿಸಬೇಕು. ಹಾಗೂ ಸೂಕ್ತ ಮಾನದಂಡವಿರಬೇಕು. ಲಾಬಿಗಳಿಗೆ ಮಣಿಯಬಾರದು.
- ಸರ್ಕಾರದ ಮಟ್ಟದಲ್ಲಿ ಕನ್ನಡ ಸಮಸ್ಯೆಗಳ ಬಗ್ಗೆ ಆತ್ಮವಿಶ್ವಾಸದಿಂದ ಸಂವಾದ ನಡೆಸುವ ಶಕ್ತಿಯನ್ನು ಪರಿಷತ್ತು ಬೆಳೆಸಿಕೊಳ್ಳಬೇಕು. ಮಾತ್ರವಲ್ಲ, ಶಾಸ್ತ್ರೀಯ ಭಾಷೆ ಮುಂತಾದ ಗೌರವಗಳನ್ನು ಸದ್ಬಳಕೆ ಮಾಡಿಕೊಳ್ಳಲು ಬೇಕಾದ ರಾಜಕೀಯ ದೃಢನಿರ್ಧಾರ ಕೈಗೊಳ್ಳುವಂತೆ ಸರ್ಕಾರಗಳ ಮೇಲೆ ಒತ್ತಡ ತರಬೇಕು. ಇಂತಹ ನಾಡು-ನುಡಿ-ಸಂಸ್ಕೃತಿಯ ರಕ್ಷಣೆ ಹಾಗೂ ಸಂವರ್ಧನೆಗೆ ಗಟ್ಟಿನಿಲವು ಕೈಗೊಳ್ಳಲು ಕನ್ನಡ ಸಾಹಿತ್ಯ ಪರಿಷತ್ ಹಿಂದೆಬೀಳಬಾರದು.
- ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಜನತೆಯನ್ನು ಎಚ್ಚರಿ ಸುವ, ಜನಾಭಿಪ್ರಾಯದ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಪರಿಸ್ಥಿತಿಗನುಗುಣವಾಗಿ ನಿರಂತರವಾಗಿ ಪರಿಷತ್ ನಡೆಸುತ್ತಿರಬೇಕು.
- ಕನ್ನಡ ಎದುರಿಸುತ್ತಿರುವ `ಸಂಕಟ’ಗಳಿಗೆ ತಜ್ಞರ ನೆರವು ಪಡೆದು ಪರಿಹಾರದ ಸಾಧ್ಯತೆಗಳನ್ನು ಕಾಲಕಾಲಕ್ಕೆ ಅನ್ವೇಷಿಸುತ್ತಿರಬೇಕು.
- ಹೊಸ ಶತಮಾನದ ಜಾಗತಿಕ ಸವಾಲುಗಳಿಗೆ ಕನ್ನಡಮನಸ್ಸನ್ನು ಸಜ್ಜುಗೊಳಿಸುವತ್ತ ಪರಿಷತ್ ಸ್ಪಷ್ಟ ಕಾರ್ಯಸೂಚಿಗಳನ್ನು ರೂಪಿಸಬೇಕು.
ಪರಿಷತ್ನ ನೇತೃತ್ವ ವಹಿಸಿರುವವರು ಇಚ್ಛಾಶಕ್ತಿ, ಸಂಕಲ್ಪಬಲ ಪ್ರಕಟಿಸಿದ್ದೇ ಆದಲ್ಲಿ ಪರಿಷತ್ತು ಒಂದು ಪ್ರಬಲ ಜನದನಿಯಾಗಬಲ್ಲದು; ಸಂಸ್ಕೃತಿ, ಸರ್ಜನಶೀಲತೆಯ ಕೇಂದ್ರವಾಗಬಲ್ಲದು.