ಹಿಂದೆ ಔರಂಗಜೇಬನ ಹೆಸರನ್ನಿರಿಸಿದ್ದ ರಸ್ತೆಗೆ ದೆಹಲಿಯ ನಗರಸಭೆ ಈಗ ಡಾ|| ಎ.ಪಿ.ಜೆ. ಅಬ್ದುಲ್ ಕಲಾಮ್ ರಸ್ತೆ ಎಂದು ಪುನರ್ನಾಮಕರಣ ಮಾಡಿದುದಕ್ಕೆ ಆಕ್ಷೇಪಿಸಿ ಹುಯಿಲೆಬ್ಬಿಸಿರುವ ಪಡೆಯವರು ಎಂದೂ ಯಾವುದೇ ಸಂದರ್ಭದಲ್ಲಿಯೂ ಮುಸ್ಲಿಮರ ಭಾವನೆಗಳಿಗೆ ಕೂದಲಷ್ಟೂ ಧಕ್ಕೆಯಾಗಬಾರದೆಂಬ ಧೋರಣೆಗೆ ಬದ್ಧರಾದವರಾದುದರಿಂದ ಅವರ ಅಭಿಪ್ರಾಯಗಳು ಎಂದೋ ಕಿಮ್ಮತ್ತನ್ನು ಕಳೆದುಕೊಂಡಿವೆ; ಅವನ್ನು ಈಗ ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ರಸ್ತೆಗಳ ಹೆಸರುಗಳು ವ್ಯವಹಾರಸೌಕರ್ಯಸಾಧನಗಳೇ ವಿನಾ ಅವು ಯಾರನ್ನೂ ಅಮರರನ್ನಾಗಿಸಲಾರವು ಮತ್ತು ಪ್ರಭುತ್ವ ನೀಡುವ ಹೆಸರುಗಳನ್ನೇ ಸಾಮಾನ್ಯ ಜನತೆ ಬಳಸುತ್ತಾರೆಂಬ ಖಾತರಿಯೂ ಇಲ್ಲ. ಹೇಗೂ ಹೆಸರನ್ನು ಬದಲಾಯಿಸುವ ದೀರ್ಘಕಾಲದ ರೂಢಿಯೇ ಇದ್ದು ಅದು ಮಾಮೂಲೆನಿಸುವಷ್ಟು ಯಾಂತ್ರಿಕವೆನಿಸಿಬಿಟ್ಟಿದೆಯೆಂಬ ವಾಸ್ತವ ಹಾಗಿರಲಿ. ಹೆಸರನ್ನು ಬದಲಾಯಿಸುವುದು ಚರಿತ್ರೆಗೆ ದ್ರೋಹ ಬಗೆದಂತೆ ಎಂದು ಸೆಕ್ಯುಲರ್ ಪ್ರಭೃತಿಗಳು ವಾದಿಸಿರುವುದೂ ಇದಕ್ಕೆ ಪೂರಕವಾಗಿ ಔರಂಗಜೇಬನ ಗುಣಗಾನ ಮಾಡುತ್ತಿರುವುದೂ ಹಾಸ್ಯಾಸ್ಪದವಾಗಿದೆ. ಇನ್ನೂ ಹತ್ತು ರಸ್ತೆಗಳಿಗೆ ಔರಂಗಜೇಬನ ಹೆಸರನ್ನಿರಿಸಿದರೂ ಅವನ ಜನವಿರೋಧಿ ದಮನಾಚರಣಸರಣಿಯ ಕರಾಳ ಇತಿಹಾಸವನ್ನು ಅಳಿಸಲಾಗಲಿ ತಿರುಚಲಾಗಲಿ ಸಾಧ್ಯವಿಲ್ಲ; ಹಾಗೆ ಮಾಡುವುದರ ಆವಶ್ಯಕತೆಯೂ ಇಲ್ಲ. ರಾಮ-ಸೀತೆಯರ ಉದಾತ್ತತೆ, ರಾವಣನ ನೈಚ್ಯ, ಪಾಂಡವರ ಧರ್ಮಭೀರುತೆ, ಕೌರವರ ನ್ಯಾಯೋಲ್ಲಂಘನೆ – ಎಲ್ಲವನ್ನೂ ಇದ್ದುದು ಇದ್ದಂತೆ ಈಗಲೂ ಮಕ್ಕಳಿಗೆ ತಿಳಿಸಿಕೊಡುವುದಾಗುತ್ತದೆಯೇ ಹೊರತು ಅದನ್ನೆಲ್ಲ ಏನೇ ಟೀಕೆ ಬಂದರೂ ತಿರುಚಲು ಹೋಗುವುದಿಲ್ಲ. ಹೀಗಿರುವುದರಿಂದ ಈ ಸೆಕ್ಯುಲರಿಸ್ಟ್ ಬಣದ ಕಾತಳ ಏಕೆಂದೇ ಅರ್ಥವಾಗುವುದಿಲ್ಲ. ಮತ್ತು ಈಗಲೂ ೧೭೭ ಹಳ್ಳಿಗಳು ಊರುಗಳು ಮೊದಲಾದವುಗಳೊಡನೆ ಔರಂಗಜೇಬನ ಹೆಸರು ವಿರಾಜಮಾನವಾಗಿ ಉಳಿದಿದೆಯಲ್ಲ!
ಕಣ್ಣೀರೇಕೆ, ಬಿಸಿಯುಸಿರೇಕೆ?
Month : December-2015 Episode : Author :