ಪ್ರಜಾಪ್ರಭುತ್ವಾನುಗುಣ ಸಂಸ್ಥೆಗಳನ್ನು ಗೌರವಿಸದೆ ಅಗ್ಗವಾಗಿಸುವವರು – ಲೇಖಕರೇ ಆಗಲಿ ಅನ್ಯರೇ ಆಗಲಿ – ಕ್ಷಮಾರ್ಹರಲ್ಲ.
ಇದು ನಿಜವಾಗಿ ಬೀದಿಗಳಲ್ಲಿ ನಡೆಯದಿದ್ದಿದ್ದರೆ ಇದನ್ನು ಒಂದು ಪ್ರಹಸನ ಎನ್ನುಬಹುದಾಗಿತ್ತು. ಕೈಗೆ ಎಟುಕಿದ ಒಂದು ವ್ಯಾಜವನ್ನು ಬಳಸಿಕೊಂಡು ಮೋದಿ ಸರ್ಕಾರದ ಮೇಲೆ ಆರೋಪಗಳನ್ನು ಹೇರಲು ಮುಂದಾಗಿ ಒಂದಷ್ಟು ಮಂದಿ ತಥಾಕಥಿತ ಲೇಖಕರು ಸಾಹಿತ್ಯ ಅಕಾಡೆಮಿಯಿಂದ ತಮಗೆ ದೊರೆತಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸಹೊರಟರು. (ದಭೋಲ್ಕರ್ ಮತ್ತು ಪನ್ಸಾರೆ ಕೊಲೆಗಳು ನಡೆದದ್ದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ!)
ಸಮೂಹಸನ್ನಿ
ಈ ಸಮೂಹಸನ್ನಿಯ ಔಚಿತ್ಯದ ವಿಷಯ ಹಾಗಿರಲಿ. ಈ ಒರಗುಕುರ್ಚಿಯ ಲೇಖಕರ ಪೈಕಿ ಪ್ರಶಸ್ತಿಯೊಡಗೂಡಿದ ಹಣವನ್ನೂ ಪ್ರಶಸ್ತಿಯ ಹಿನ್ನೆಲೆಯಲ್ಲಿ ಅವರು ವರ್ಷಗಳಿಂದ ಅನುಭವಿಸುತ್ತಿರುವ ಸವಲತ್ತುಗಳನ್ನೂ ಅವರು ಅಕಾಡೆಮಿಯಿಂದ ಪಡೆದಿರುವ ರಾಯಧನವನ್ನೂ ಹಿಂದಿರುಗಿಸಿರುವವರು ಎಷ್ಟು ಮಂದಿ ಎಂಬ ಪ್ರಶ್ನೆಯನ್ನು ಕೇಳದಿರುವುದೇ ಮರ್ಯಾದೆಯೆನಿಸೀತು. ಅವರಲ್ಲಿ ಹೆಚ್ಚಿನವರು ಯಾವ ಘನಾಮದಾರಿ ಸಾಹಿತ್ಯಸರ್ಜನೆಗಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರೆಂಬುದು ಒಂದು ಬಹಿರಂಗ ರಹಸ್ಯ. ಅವರು ಈಗ ಪ್ರಶಸ್ತಿಗಳನ್ನು ಹಿಂದಿರುಗಿಸಿ ತಮ್ಮ ಅನರ್ಹತೆಯನ್ನು ತಾವೇ ಘೋಷಿಸಿಕೊಂಡಂತೆ ಆಗಿದೆ ಎಂದು ಸಾರ್ವಜನಿಕರು ಸಮಾಧಾನಪಟ್ಟಾರು. ವಿವರಗಳು ಹಾಗಿರಲಿ; ಸಾಹಿತಿಗಳೆಂದರೆ ಅವರೊಂದು ಪ್ರತ್ಯೇಕ ಮತ್ತು ವಿಶಿಷ್ಟ ಸೃಷ್ಟಿಜಾತಿ ಎಂದು ಅವರೆಲ್ಲ ಭಾವಿಸಿದಂತಿದೆ. ಇದನ್ನು ಪೂರ್ತಿ ನಿರಾಧಾರವೆನ್ನಬೇಕಾಗಿದೆ. ಒಬ್ಬ ವ್ಯಕ್ತಿಗೆ ಮಹತಿಯು ಲಭಿಸುವುದು ಅಸಾಮಾನ್ಯ ಸಾಧನೆಯಿಂದಲೇ ಹೊರತು ಸರ್ಟಿಫಿಕೇಟುಗಳಿಂದ ಅಲ್ಲ. ಈ ಪ್ರತಿಭಟನಕಾರ ಮಹಾಶಯರಲ್ಲನೇಕರಿಗೆ ಪ್ರಶಸ್ತಿ ಬಂದಿದ್ದುದೇ ಸಾರ್ವಜನಿಕರಿಗೆ ತಿಳಿದಿರಲಿಲ್ಲ ಎಂಬಷ್ಟುಮಟ್ಟಿಗೆ ಅವರು ಯಃಕಶ್ಚಿತರು.
`ಪ್ರಶಸ್ತಿ ವಾಪಸಾತಿ ಸರಣಿ’ಯನ್ನು ಉದ್ಘಾಟಿಸಿದ ನಯನತಾರಾ ಸಹಗಲ್
ಇದು ಹೇಗಾದರಿರಲಿ. ಒಬ್ಬ ಅತಿಸಾಮಾನ್ಯ ವ್ಯಕ್ತಿಗೂ ಪ್ರತಿಭಟಿಸುವ ಹಕ್ಕು ಇದೆಯೆಂಬುದನ್ನು ಅಲ್ಲಗಳೆಯಲಾಗದು. ಆದುದರಿಂದ ಇಲ್ಲಿ ಸಂಗತವಾದ ಅಂಶವೆಂದರೆ – ಈ ಧೀಮಂತರ ವೈಯಕ್ತಿಕ ಋಜುತೆ ಯಾವ ಪ್ರಮಾಣದ್ದು – ಎಂಬುದು. ಆಯ್ದ ಕೆಲವು ಸಂದರ್ಭಗಳಲ್ಲಷ್ಟೆ ಇವರ ನ್ಯಾಯಪ್ರೀತಿಯು ಜಾಗೃತಗೊಳ್ಳುವುದು ಹಾಸ್ಯಾಸ್ಪದವಲ್ಲವೆ? ಯಾರದೋ ಹತ್ಯೆಯಾಯಿತೆಂಬುದಕ್ಕೆ ಇದೆಲ್ಲ ಪ್ರತಿಕ್ರಿಯೆಯೆ? ಒಬ್ಬ ಅಪ್ರಸಿದ್ಧ ಸಾಮಾನ್ಯ ಪ್ರಜೆಯ ಕೊಲೆಯೂ ಖೇದಕರವೇ ಅಲ್ಲವೆ? ಇಡೀ ಸಮಾಜವನ್ನು ಕಲಕಿದ ಲೆಕ್ಕವಿಲ್ಲದಷ್ಟು ಸಂದರ್ಭಗಳಲ್ಲಿ ಮೌನ ತಾಳಿದ್ದ ಈ ಮಹನೀಯರ ಬುದ್ಧಿಗೆ ರಾವು ಬಡಿದಿದ್ದುದು ಹೇಗೆ?
ಜಾಣಕುರುಡು
ಮೂವತ್ತು ವರ್ಷ ಹಿಂದೆ ರಾಜಧಾನಿಯ ಬೀದಿಗಳಲ್ಲಿಯೆ ಕಾಂಗ್ರೆಸ್ – ಯೋಜಿತ ಪಡೆಗಳಿಂದ ನೂರಾರು ಸಿಖ್ಖರ ಮಾರಣಹೋಮವಾದುದನ್ನು ಹಳೆಯ ಕಥೆ ಎನ್ನೋಣ. ತೀರಾ ಇತ್ತೀಚಿನ ಕೆಲವೇ ದಿನಗಳಲ್ಲಿ ನ್ಯಾಯಬಾಹಿರವಾಗಿ ದನಗಳನ್ನು ಸಾಗಿಸುತ್ತಿದ್ದುದನ್ನು ತಡೆಯಲು ಯತ್ನಿಸಿದ ಪೊಲೀಸನನ್ನು ಮುಸ್ಲಿಮರು ಕೊಂದದ್ದು, ತಮ್ಮೊಡನೆ ಬೆರೆಯದಿದ್ದುದಕ್ಕಾಗಿ ಹದಿವಯಸ್ಸಿನ ತರುಣಿಯನ್ನು ಮಾವೋಯಿಸ್ಟರು ಝಾರ್ಖಂಡ್ನಲ್ಲಿ ಕೊಲೆ ಮಾಡಿದುದು, ಈಚಿನ ಗಣೇಶೋತ್ಸವ ಸಂದರ್ಭದಲ್ಲಿ ವಾರಾಣಸಿಯಲ್ಲಿ ಕಾಂಗ್ರೆಸ್ ಶಾಸಕನೇ ಗಲಭೆಯನ್ನು ಪ್ರಚೋದಿಸಿದುದು, ಬರಿಯ ಸಂಚಾರಕ್ಕೆ ಆಸ್ಪದ ಕೊಡುವಂತೆ ಹಾರ್ನ್ ಮಾಡಿದ ‘ಅಪರಾಧ’ಕ್ಕಾಗಿ ತರುಣನೊಬ್ಬನನ್ನು ಮುಸ್ಲಿಮರು ದೆಹಲಿಯ ರಾಜಬೀದಿಯಲ್ಲಿಯೆ ಕೊಲೆ ಮಾಡಿದುದು – ಎಷ್ಟು ಬೇಕಾದರೂ ವಿಸ್ತರಿಸಬಹುದಾದ ಇಂತಹ ಅತಿಹೇಯ ಘಟನೆಗಳು ನಡೆದಾಗಲೂ ಪ್ರಶಸ್ತಿಪಡೆಗಳ ನ್ಯಾಯಪ್ರೀತಿಯು ಮರೆವಿಗೀಡಾಗುವುದು ಏಕೆ? ಇಂತಹವರು ನ್ಯಾಯಾನುಸರಣೆಯನ್ನು ಕುರಿತು ಮಾತನಾಡುವುದಕ್ಕಿಂತ ಹಾಸ್ಯಾಸ್ಪದವಾದುದು ಏನಿದ್ದೀತು?
ಸಲ್ಮಾನ್ ರುಶ್ದೀ ೧೯೮೯ರಲ್ಲಿ ಫತ್ವಾ ಎದುರಿಸಿದಾಗ ದೆಹಲಿಯಲ್ಲಿದ್ದ ಪ್ರಾಜ್ಞರದು ಘನವಾದ ಮೌನ. ಕಾರಣ – ಅದು ಇಸ್ಲಾಂ ವಿಷಯವಾಗಿದ್ದು ಅದಕ್ಕೆ ನಮ್ಮ ಪ್ರತಿಭಟನನಿಯಮಗಳು ಅನ್ವಯಿಸವು! ಇದೇ ಕಾರಣಕ್ಕೆ ಚಾರ್ಲ್ಸ್ ಹೆಬ್ಡೋ ವ್ಯಂಗ್ಯಚಿತ್ರಕಾರರೂ ಈ ಭಾರತೀಯ ಬುದ್ಧಿಜೀವಿಗಳ ಸಹಾನುಭೂತಿಗೆ ಅರ್ಹರಾಗಲಿಲ್ಲ. ಇನ್ನು ಬಂಗ್ಲಾದೇಶದ ಬ್ಲಾಗಿಗರ ಸರಣಿಕೊಲೆಗಳು ಯಾವ ಲೆಕ್ಕ!
ಹೈದರಾಬಾದಿನಲ್ಲಿ ತಸ್ಲಿಮಾ ನಾಸರೀನ್ಳ ಕೊಠಡಿಯನ್ನು ಮುಸ್ಲಿಮ್ ಗೂಂಡಾಗಳು ವಿಧ್ವಂಸಗೊಳಿಸಿ ಆಕೆಯ ಮೇಲೆ ಕೈಮಾಡಿದಾಗ – ಇಂತಹ ಸಂದರ್ಭಗಳಲ್ಲೆಲ್ಲ ನಿಮ್ಮ ಮನಸ್ಸಾಕ್ಷಿಯೂ ನ್ಯಾಯಪ್ರಜ್ಞೆಯೂ ಏಕೆ ನಿಶ್ಚೇಷ್ಟವಾಗಿದ್ದವು? – ಎಂದುದಕ್ಕೆ ಪ್ರಶಸ್ತಿ ವಾಪಸಾತಿ ಪಡೆಯ ಮಹಾಶಯರೊಬ್ಬರು ಹೇಳಿದರು: ನಮ್ಮ ಓರಗೆಯವರು – ಸಹಲೇಖಕರು – ಕೊಲೆಯಾದುದರಿಂದ ಈಗ ಪ್ರತಿಕ್ರಿಯಿಸುತ್ತಿದ್ದೇವೆ ಎಂದು. ಹೀಗೆಂದರೆ ತಮ್ಮ ಪೈಕಿಯವರೊಬ್ಬರು ಹತ್ಯೆಗೊಳಗಾದಾಗ ಮಾತ್ರ ಅದು ಪ್ರತಿಭಟನೆಗೆ ಅರ್ಹವಾಗುತ್ತದೆ ಎಂದಂತಾಯಿತು. ಇತರರಿಗೆ ಹಾನಿಯಾದರೆ ಅಥವಾ ಮುಸ್ಲಿಮರಿಂದ ದಾಳಿ-ಕೊಲೆ ನಡೆದಾಗ ಅದು ಉಪೇಕ್ಷಿಸಬೇಕಾದದ್ದು.
ಪ್ರವಾದಿ ಮಹಮ್ಮದ್ ಬಗೆಗೆ ಉದ್ರೇಕಕಾರಿ ಪ್ರಶ್ನೆಗಳನ್ನು ಕೇಳಿದ ಕ್ರೈಸ್ತ ಬೋಧಕನ ಕೈಗಳನ್ನು ಛೇದ ಮಾಡಿದುದೂ ಈ ಧೀಮಂತ ‘ಲೇಖಕ’ರಿಗೆ ಆಕ್ಷೇಪಣೀಯವೆನಿಸಲಿಲ್ಲ.
ಅಂದು ಮೌನ, ಇಂದು ಬೊಬ್ಬೆ
ಪ್ರಶಸ್ತಿ ವಾಪಸಾತಿ ಸರಣಿಯನ್ನು ಉದ್ಘಾಟಿಸಿದ ನಯನತಾರಾ ಸಹಗಲ್ ಅವರ ಅಮೋಘ ಸಾಹಿತ್ಯಿಕ ಸಾಧನೆಯನ್ನಾಗಲಿ ತಮ್ಮೆದುರಿಗೇ ಸಿಖ್ಖರ ಸಂಹಾರವಾಗುತ್ತಿದ್ದಾಗ ಅವರೇಕೆ ಪಕ್ಷಾಘಾತವಾದಂತೆ ಮೌನವಾಗಿದ್ದರು ಎಂಬುದನ್ನಾಗಲಿ ಯಾರೂ ಅರಿಯರು.
ನಯನತಾರಾ ಅವರೊಡನೆ ದನಿಗೂಡಿಸಿದ ಇನ್ನೋರ್ವ ಅಶೋಕ ವಾಜಪೇಯಿ ಅವರು ‘ಪವರ್ ಬ್ರೋಕರ್’ ಎಂದು ಪ್ರಸಿದ್ಧರಾದವರೇ ಹೊರತು ಸಾಹಿತ್ಯಸಾಧನೆಗಾಗಿ ಅಲ್ಲ ಎಂಬುದು ಹಾಗಿರಲಿ; ಸಮಾಜದೊಡನೆ ಅವರ ತಾದಾತ್ಮ್ಯದ ಬಗೆಗೆ ನೋಡೋಣ. ಮಧ್ಯಪ್ರದೇಶದಲ್ಲಿ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳ ಗುತ್ತಿಗೆ ಪಡೆದಂತೆ ಇದ್ದವರು ಅವರು. ೧೯೮೪ ಡಿಸೆಂಬರ್ನಲ್ಲಿ ಅಶೋಕ ವಾಜಪೇಯಿಯವರ ಕಣ್ಣೆದುರಿಗೇ ಜಗತ್ತಿನ ಔದ್ಯಮಿಕ ಇತಿಹಾಸದಲ್ಲಿಯೆ ಅತಿ ಭೀಕರವೆನಿಸಿದ ಭೋಪಾಲ್ ವಿಷಾನಿಲ ದುರಂತ ನಡೆದು ಇಡೀ ಜಗತ್ತನ್ನೇ ದಿಙ್ಮೂಢವಾಗಿಸಿತ್ತು. ಅಲ್ಲಿ ಹೆಣಗಳ ಮತ್ತು ನೂರಾರು ಗಾಯಾಳುಗಳ ಯಾತಾಯಾತ ನಡೆದಿದ್ದಾಗಲೇ ಅಶೋಕ ವಾಜಪೇಯಿ ಮಹಾಶಯರು ಅದೇ ಊರಿನಲ್ಲಿ ಒಂದು ಕವಿಸಮ್ಮೇಳನ ನಡೆಸುವುದರಲ್ಲಿ ಉದ್ಯುಕ್ತರಾಗಿದ್ದರು. ವ್ಯಾಖ್ಯಾನ ಅನಾವಶ್ಯಕ.
ಇಂತಹ ಚಾರಿತ್ರವಂತರ ಪ್ರಶಸ್ತಿ ವಾಪಸಾತಿಗೋ ವೀರೋದಾತ್ತ ಹೇಳಿಕೆಗಳಿಗೋ ಕುರುಡು ಕಾಸಿನಷ್ಟಾದರೂ ಬೆಲೆ ಇದ್ದೀತೆ?
ಸೆಕ್ಯುಲರ್ ಅಜೆಂಡಾಕ್ಕೂ ಮೋದಿ ಬಗೆಗಿನ ಅಸಹನೆಗೂ ಕೈಗೆ ಸಿಕ್ಕಿದ್ದನ್ನೆಲ್ಲ ತಳಕುಹಾಕುವ ಈ ಕಸರತ್ತುಗಳು ಜನರಿಗೆ ಆಯಾಸ ತಂದಿವೆ.
‘ಪವರ್ ಬ್ರೋಕರ್ ಅಶೋಕ ವಾಜಪೇಯಿ
ನಯನತಾರಾ ಸಹಗಲ್, ಅಶೋಕ ವಾಜಪೇಯಿ – ಇಬ್ಬರೂ ಕಾಂಗ್ರೆಸ್ ಸರ್ಕಾರ ಕೃಪಾಪೋಷಿತರಾಗಿದ್ದವರೆಂಬುದು ಆಕಸ್ಮಿಕವಲ್ಲ.
‘ಅಭದ್ರತೆ‘
ಲೇಖಕರಿಗೆ ರಾಜಕೀಯ ಅಜೆಂಡಾ ಇದ್ದಲ್ಲಿ ಅದಕ್ಕೂ ಸಾಹಿತ್ಯ ಅಕಾಡೆಮಿಗೂ ಸಂಬಂಧ ಕಲ್ಪಿಸಬಾರದು.
ಭಾರತ ಒಂದು ಅಸಹಿಷ್ಣು ದೇಶ ಎಂಬ ಪ್ರತಿಮೆಯನ್ನು ಈ ಕ್ಷುದ್ರಮನಸ್ಕರ ಪಡೆ ಬೆಳೆಸುತ್ತಿದೆ.
ಬೆಂಗಳೂರಿನ ವಾಪಸಾತಿ ಪಡೆಯ ಶಶಿ ದೇಶಪಾಂಡೆ ಅವರಿಗೆ ಎಂದಾದರೂ ಅಭದ್ರತೆಯ ಸನ್ನಿವೇಶ ಎದುರಾಗಿತ್ತೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದಾಗ ಅವರು ಹಾಗೆ ಎಂದೂ ಆಗಿಲ್ಲ ಎಂದು ಒಪ್ಪಿಕೊಂಡರು. ಕವಿ ಕೇಕಿ ದರೂವಾಲಾ ಅವರೂ ನನಗೆ ಎಂದೂ ಬೆದರಿಕೆ ಎದುರಾಗಿಲ್ಲ ಎಂದರು. ಹಿಂದೆ ರಿಸರ್ಚ್ ಅಂಡ್ ಅನ್ಯಾಲಿಸಿಸ್ ವಿಂಗ್ (‘ರಾ’)ದ ಹೆಚ್ಚುವರಿ ನಿರ್ದೇಶಕರಾಗಿದ್ದರು ಅವರು.
ಈ ಅರಚಾಟಗಳ ನಿರರ್ಥಕತೆ ಒತ್ತಟ್ಟಿಗಿರಲಿ. ಅದಕ್ಕಿಂತ ಆತಂಕಕಾರಿ ಅಂಶವೆಂದರೆ ಸಾತ್ತ್ವಿಕ ಪ್ರತಿಭಟನೆಯಂತಹ ವರ್ತನೆಯ ಗಾಂಭೀರ್ಯವನ್ನೆ ಕಳೆದು ಈ ಕಪಟಮಾರ್ಗಿಗಳು ಪ್ರಜಾಪ್ರಭುತ್ವಾನುಗುಣ ಸಭ್ಯತೆಯನ್ನು ಭಂಗಗೊಳಿಸುತ್ತಿದ್ದಾರೆ. ಇದು ವಿಷಾದನೀಯ.
ಡಾ|| ಕಲಬುರ್ಗಿ ಅವರ ಬಗೆಗೆ ಅಭಿಪ್ರಾಯಾತೀತವಾಗಿ ಕನ್ನಡಿಗ ರಿಗೆಲ್ಲ ಗೌರವವಿದೆ. ಅದನ್ನು ಪ್ರಶಸ್ತಿಪಡೆಯ ಅನಾಮಧೇಯರಿಂದ ಕಲಿಯಬೇಕಾದುದೇನಿಲ್ಲ. ನ್ಯಾಯವ್ಯವಸ್ಥೆಯು – ಮೇಲಿನಂತಹ ವಿಚಾರಶೂನ್ಯ ಪ್ರವೃತ್ತಿಗಳ ನಡುವೆಯೂ – ಈ ದೇಶದಲ್ಲಿ ಜೀವಂತವಿದೆ. ಮಾನವದೌರ್ಬಲ್ಯಗಳಿಗೆ ಸರ್ಕಾರಗಳನ್ನೋ ಅಕಾಡೆಮಿಗಳನ್ನೋ ಆಪಾದಿತರನ್ನಾಗಿಸುವುದು ಒಂದು ದೊಡ್ಡ ವಿಕೃತಿ.
ಸಾಹಿತ್ಯಕ್ಷೇತ್ರಕ್ಕೆ ದ್ರೋಹ
ಒತ್ತಿಹೇಳಬೇಕಾದ ಅಂಶವೆಂದರೆ – ತಮ್ಮ ಹಾಸ್ಯಾಸ್ಪದ ವರ್ತನೆಯಿಂದ ಈ ತಥಾಕಥಿತ ಲೇಖಕರು ಸಾಹಿತ್ಯಕ್ಷೇತ್ರವನ್ನೇ ಅಪಮೌಲ್ಯಗೊಳಿಸುತ್ತಿದ್ದಾರೆ.
ಇನ್ನು ಸಾಹಿತ್ಯ ಅಕಾಡೆಮಿಯ ಬಗೆಗೆ ಹೇಳುವುದಾದರೆ: ಸರ್ಕಾರದಿಂದ ಅನುದಾನ ಪಡೆದಿದ್ದರೂ ಅಕಾಡೆಮಿ ಒಂದು ಸ್ವಾಯತ್ತ ಸಂಸ್ಥೆ. ಹೀಗೆ ಸರ್ಕಾರದ ಮೇಲಿನ ಆಕ್ರೋಶವನ್ನು ಅಕಾಡೆಮಿಯ ಹೆಗಲಿಗೇರಿಸುವುದು ಹೇಗೆ ಯುಕ್ತವಾದೀತು? ಜುಜುಬಿ ಪ್ರವೃತ್ತಿಯ ಲೇಖಕರಿಗೆ ಪ್ರಶಸ್ತಿಗಳನ್ನೂ ಬಹುಮಾನಗಳನ್ನೂ ಕೊಡುವಷ್ಟು ‘ಅಪರಾಧ’ ಅಕಾಡೆಮಿಯಿಂದ ಆಗಿದೆ. ಆದರೆ ಪ್ರಶಸ್ತಿ ನೀಡಿಕೆಯೂ ಅಕಾಡೆಮಿಯ ಅಥವಾ ಅದರ ಆಡಳಿತ ಮಂಡಳಿಯ ಯಾದೃಚ್ಛಿಕ ನಡೆ ಎನ್ನುವಂತಿಲ್ಲ. ಏಕೆಂದರೆ ಪ್ರಶಸ್ತಿಪಾತ್ರರನ್ನು ನಿರ್ಣಯಿಸಿ ಅಕಾಡೆಮಿಗೆ ಶಿಫಾರಸು ಮಾಡುವವರು ಸಂಬಂಧಿಸಿದ ವಿಷಯಕ್ಷೇತ್ರದ ತಜ್ಞ ವಿದ್ವಾಂಸರು. ಹೀಗೆ ಪ್ರಶಸ್ತಿಗಳ ವಾಪಸಾತಿಯು ವಿವಿಧ ಕ್ಷೇತ್ರಗಳ ವಿದ್ವಾಂಸರನ್ನೂ ಅವಹೇಳನ ಮಾಡಿದಂತೆ ಆಗಿದೆ.
ಪ್ರಶಸ್ತಿಗಳನ್ನು ಹೇಗಾದರೂ ಗಿಟ್ಟಿಸಲು ಶತಾಯಗತಾಯ ಲಾಬಿ ಮಾಡಿದ್ದ ಪ್ರಭೃತಿಗಳೇ ಈಗ ಪುಕಸಟ್ಟೆ ಪ್ರಚಾರಕ್ಕಾಗಿ ಪ್ರಶಸ್ತಿಗಳನ್ನು ಹಿಂದಿರುಗಿಸುವ ನಾಟಕ ಮಾಡುತ್ತಿರುವುದನ್ನು ಡಾ|| ನರೇಂದ್ರ ಕೋಹಲಿ ಮೊದಲಾದ ಪ್ರತಿಷ್ಠಿತ ಲೇಖಕರೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಭಾಷಾ ಸಂಗಮ್ (ತಮಿಳುನಾಡು), ಆಂಚಲಿಕ ಸಾಹಿತ್ಯ ಪರಿಷದ್ (ಜಬ್ಜಲ್ಪುರ), ಪ್ರಾಂತೀಯ ಸಾಹಿತ್ಯ ಪರಿಷದ್ (ಆಂಧ್ರಪ್ರದೇಶ) ಮೊದಲಾದ ನಾಲ್ಕಾರು ವೇದಿಕೆಗಳ ಪ್ರಮುಖರೂ ಖಂಡಿಸಿದ್ದಾರೆ.
ಲೇಖಕಸಮುದಾಯದ ಅತಾರ್ಕಿಕ ವರ್ತನೆ ಮುಂದುವರಿದಲ್ಲಿ ಸಾಹಿತ್ಯ ಅಕಾಡೆಮಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲೂಬಹುದು.
ಇಂತಹ ಕ್ಷುದ್ರ ವರ್ತನೆಯಲ್ಲಿ ತೊಡಗುವವರಿಂದ ಅವರು ಇದುವರೆಗೆ ನೇರವಾಗಿಯೂ ಅನ್ಯಮಾರ್ಗಗಳಿಂದಲೂ ಪಡೆ ದಿರುವ ಹಣವನ್ನು ಹಿಂದಿರುಗಿಸುವಂತೆ ಆಗ್ರಹಿಸಿದರೆ ತಪ್ಪಾದೀತೆ?
ಇವರಲ್ಲಿ ಯಾರಿಗಾದರೂ ಅಕಾಡೆಮಿಯದಲ್ಲದ ಅನ್ಯ ಪ್ರಶಸ್ತಿಗಳು ಸಂದಿದ್ದಲ್ಲಿ ಅವುಗಳ ವಾಪಸಾತಿಗಾಗಿಯೂ ಆಗ್ರಹಿಸಬಹುದು.
ಪ್ರಜಾಪ್ರಭುತ್ವಾನುಗುಣ ಸಂಸ್ಥೆಗಳನ್ನು ಗೌರವಿಸದೆ ಅಗ್ಗವಾಗಿ ಸುವವರು – ಲೇಖಕರೇ ಆಗಲಿ ಅನ್ಯರೇ ಆಗಲಿ – ಕ್ಷಮಾರ್ಹರಲ್ಲ.