ನೆಹರೂ ನಂತರದ ಭಾರತದಲ್ಲಿ ಒಂದು ಹಿಂದೂ ಸರ್ಕಾರದ ಮುಂದಿರುವ ಸವಾಲುಗಳು ಗಂಭೀರ ಆದಂಥವು. ಹಿಂದೂವಿರೋಧಿ ವಿಧಿಗಳನ್ನು ತಿದ್ದುವ ಮೂಲಕ ಸಂವಿಧಾನವನ್ನು ಸರಿಪಡಿಸುವ ಕೆಲಸಕ್ಕೆ ಹೆಚ್ಚಿನ ಕೌಶಲ ಬೇಕಾಗಬಹುದು; ಮೊದಲನೆಯದಾಗಿ ಅದಕ್ಕೆ ಇಚ್ಛಾಶಕ್ತಿ ಬೇಕು….
ಇಂಗ್ಲಿಷ್ನಲ್ಲಿ: ಡಾ| ಕೋನ್ರಾಡ್ ಎಲ್ಸ್ಟ್ ಕನ್ನಡಕ್ಕೆ: ಎಚ್. ಮಂಜುನಾಥ ಭಟ್
ಅಲ್ಪಸಂಖ್ಯಾತರ ಸಂಯುಕ್ತ ಗುಂಪು (United Minorities) ನರೇಂದ್ರ ಮೋದಿ ಅಥವಾ ಹಿಂದೂಪರ ಅಧಿಕಾರ ಚಲಾಯಿಸಬಲ್ಲವರೆಂದು ಕಾಣುವ ಯಾರೇ ಇರಲಿ, ಅವರ ವಿರುದ್ಧ ಅನಿಯಂತ್ರಿತವಾದ ಪೂರ್ಣಪ್ರಮಾಣದ ಹೋರಾಟವನ್ನು ನಡೆಸುತ್ತಲೇ ಇದೆ. ಅವರ ದಾಳಿಯ ಒಂದು ಭಾಗವೆಂದರೆ, ಸಾರ್ವಜನಿಕರು ಹಾಗೂ ಜಗತ್ತಿನ ದೃಷ್ಟಿಯಲ್ಲಿ ಆಳುವ ಪಕ್ಷವಾದ ಬಿಜೆಪಿಯನ್ನು ಕಳಂಕಿತವನ್ನಾಗಿಸುವುದು. ಹಿಂದೂಪರ ಕಾರ್ಯಕರ್ತರು ಅಲ್ಪಸಂಖ್ಯಾತರನ್ನು ನಿರ್ದಯವಾಗಿ ದಮನ ಮಾಡುತ್ತಿದ್ದಾರೆ; ಸ್ವಲ್ಪಮಟ್ಟಿಗೆ ಈಗಾಗಲೆ ಅದನ್ನು ಮಾಡಿ ಮುಗಿಸಲಾಗಿದೆ ಎನ್ನುವ ಅಭಿಪ್ರಾಯವನ್ನು ಮೂಡಿಸುವುದು ಆ ಗುಂಪಿನ ಉದ್ದೇಶ.
ಆದ್ದರಿಂದ ಪಾಕಿಸ್ತಾನ ಮತ್ತು ಬಂಗ್ಲಾದೇಶಗಳಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರಗಳು ಆಗಾಗ ನಡೆಯುತ್ತಿದ್ದರೂ ಕೂಡ ಅವು ವರದಿಯಾಗುವುದಿಲ್ಲ; ಅದೇ ವೇಳೆ ಭಾರತದಲ್ಲಿ ಕ್ರೈಸ್ತ ಸಂನ್ಯಾಸಿನಿಯೊಬ್ಬರ ಮೇಲೆ ನಡೆಯಿತೆನ್ನಲಾದ ಒಂದು ಅತ್ಯಾಚಾರದ ಬಗೆಗಿನ ಸುದ್ದಿ ಕಾರ್ಯಕ್ರಮವನ್ನು ದೂರದ ಬೆಲ್ಜಿಯಮ್ನಲ್ಲಿ ಸರ್ಕಾರಿ ಟೆಲಿವಿಷನ್ನಲ್ಲಿ ಪ್ರಸಾರವಾದುದನ್ನು ನೋಡಲು ನನಗೆ ಸಾಧ್ಯವಾಯಿತು. ಒಂದು ಪತ್ರಿಕೆಯಲ್ಲಿ ನೂರಾರು ಸಾಲು ಸುದ್ದಿಗಳಿರಬಹುದು; ಆದರೆ ಒಂದು ಟಿವಿ ಸುದ್ದಿಯಲ್ಲಿ ಕೆಲವೇ ಸಾಲುಗಳಿರಲು ಸಾಧ್ಯ. ಅದಕ್ಕಾಗಿ ಅತ್ಯಂತ ಮುಖ್ಯವಾದುದನ್ನು ಆರಿಸಬೇಕಾಗುತ್ತದೆ. ಪತ್ರಕರ್ತರು ಸಾಮಾನ್ಯವಾಗಿ ‘ಸತ್ತ ವ್ಯಕ್ತಿಯೊಂದಿಗೆ ನಮಗಿರುವ ದೂರ’ (dead man per mile) ನಿಯಮವನ್ನು ಅನುಸರಿಸುತ್ತಾರೆ; ನಡೆದ ಘಟನೆ ಸಮೀಪವಾಗಿದ್ದರೆ ಆ ಸುದ್ದಿ ಮುಖ್ಯವೆನಿಸುತ್ತದೆ; ನಡೆದ ಹಿಂಸಾಚಾರ ಅಥವಾ ದುರ್ಘಟನೆ ಹೆಚ್ಚು ನಾಟಕೀಯವಾಗಿದ್ದಾಗ ಕೂಡ ಅದರ ಸುದ್ದಿಮೌಲ್ಯ ಹೆಚ್ಚಾಗುತ್ತದೆ. ಆದ್ದರಿಂದ ‘ದೂರದ’ ಭಾರತದಲ್ಲಿ ನಡೆದ ಒಂದು ಅತ್ಯಾಚಾರದ ಘಟನೆ ಬೆಲ್ಜಿಯಮ್ನಲ್ಲಿ ಪ್ರಮುಖ ಸುದ್ದಿಯಾಗಿ ಪ್ರಕಟವಾಗಬೇಕಿದ್ದರೆ ಸುದ್ದಿಯನ್ನು ನಿರ್ವಹಿಸಿದವರು ಅದನ್ನು ತೀರಾ ಮುಖ್ಯವೆಂದು ಪರಿಗಣಿಸಿರಲೇಬೇಕು. ಒಟ್ಟಿನಲ್ಲಿ ಭಾರತದಲ್ಲಿನ ಹಿಂದೂವಿರೋಧಿ ಶಕ್ತಿಗಳು ಅತ್ಯಂತ ಪ್ರಬಲವಾಗಿದ್ದು, ಇಲ್ಲಿನ ಸುದ್ದಿಯನ್ನು ಅಲ್ಲಿನ ಮಾಧ್ಯಮದಲ್ಲಿ ‘ದಮನಕಾರಿ ಬಹುಸಂಖ್ಯಾತತೆಯ ವಿರುದ್ಧ ತೋರಿದ ಪ್ರತಿರೋಧ’ ಎಂಬ ರೀತಿಯಲ್ಲಿ ಪ್ರಕಟಿಸುವಲ್ಲಿ ಯಶಸ್ವಿಯಾಗಿವೆ ಎಂದರ್ಥ.
ಕ್ರೈಸ್ತ ಮಿಷನರಿಗಳು ಮತ್ತು ದೇಶದ ಜಾತ್ಯತೀತವಾದಿಗಳು ಮೇಲಿನ ಅತ್ಯಾಚಾರದ ಘಟನೆಯನ್ನು ಬಳಸಿಕೊಂಡು, `ಹಿಂದುಗಳು ಅಲ್ಪಸಂಖ್ಯಾತರನ್ನು ಭಯದ ವಾತಾವರಣದಲ್ಲಿಟ್ಟಿದ್ದಾರೆ; ಮೋದಿಸರ್ಕಾರ ರಾಕ್ಷಸಪ್ರವೃತ್ತಿಯ ಸರ್ಕಾರ’ ಎಂದು ಜಗತ್ತಿನಾದ್ಯಂತ ಬಿಂಬಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಿದರು. ಆದರೆ ಆರಂಭದಿಂದಲೇ ಅದು ನಿಜವಾಗಿಯೂ ಅತ್ಯಾಚಾರವಲ್ಲ; (ಕಾನ್ವೆಂಟಿಗೆ ನುಗ್ಗಿ) ದರೋಡೆ ನಡೆಸುವ ವೇಳೆ ಅಲ್ಲಿದ್ದ ವೃದ್ಧ ಸಂನ್ಯಾಸಿನಿಯ ಮೈಮೇಲೆ ಕೈಹಾಕಿರಬಹುದು; ದ್ವೇಷದಿಂದ ನಡೆಸಿದ ಅಪರಾಧ ಎಂಬುದು ಸಂಶಯಾಸ್ಪದ; ಹಿಂದೂ ಸಂಘಟನೆಗಳ ಕಾರ್ಯಕರ್ತರಂತೂ ಅಲ್ಲಿ ಇದ್ದದ್ದೇ ಇಲ್ಲ ಎನ್ನುವ ವಿವರಣೆ ಸಿಕ್ಕಿತ್ತು. ತನಿಖೆ ಮುಂದುವರಿದಾಗ ‘ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ’ ಕೆಲವು ಬಂಗ್ಲಾದೇಶಿ ಅಕ್ರಮ ವಲಸಿಗರ ಬಂಧನವಾಯಿತು; ಅಷ್ಟಾಗುವಾಗ ಹಿಂದೆ ಗದ್ದಲ ಮಾಡಿದ್ದ ಹೆಚ್ಚಿನವರು ಮೌನಕ್ಕೆ ಶರಣಾದರು. ಅದೇಕೆ ಮೌನವಾದಿರಿ ಎಂದು ಕೇಳಿದಾಗ, `ಇದೊಂದು ಸಾಮಾನ್ಯವಾದ ಮಾನವ ಅಪರಾಧವಾಗಿದ್ದು, ಮತಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ’ ಎಂಬ ಉತ್ತರ ಕೂಡ ಅವರಿಂದ ಬಂತು.
ಹಿಂದೂ ರಾಷ್ಟ್ರೀಯತೆಯ ವಿರುದ್ಧ ಮಾಡಲಾಗುತ್ತಿರುವ ಸರಣಿ ಸುಳ್ಳು ಆರೋಪಗಳಲ್ಲಿ ಇದು ಒಂದು ಉದಾಹರಣೆ ಮಾತ್ರ. ನಡೆಸಲಾಗುತ್ತಿರುವ ಬಹುಮುಖೀ ಸಮರದಲ್ಲಿ ಈ ವಿಷಯುಕ್ತ ತಪ್ಪು ಮಾಹಿತಿಯು ಒಂದು ರಣರಂಗವಷ್ಟೇ ಆಗಿದೆ. ಪರಿಸ್ಥಿತಿ ಹೀಗಿರುವಾಗ ಅಲ್ಪಸಂಖ್ಯಾತರ ವಿಷಯದಲ್ಲಿ ಆಳುವ ಬಿಜೆಪಿ ಪಕ್ಷ ಶುದ್ಧವಾಗಿರುವುದು ಅನಿವಾರ್ಯವೆನಿಸಿದೆ.
ಮೊತ್ತಮೊದಲನೆಯದಾಗಿ, ಈ ವಿಷಯದಲ್ಲಿ ತನ್ನ ನಿಲವೇನು ಎಂಬುದನ್ನು ಅದು ತನಗೇ ಸ್ಪಷ್ಟಪಡಿಸಿಕೊಳ್ಳಬೇಕು. ಅಲ್ಪಸಂಖ್ಯಾತರ ಬಗೆಗೆ ಹಿಂದೂ ರಾಷ್ಟ್ರೀಯವಾದಿ ನೀತಿ ಏನೆಂಬುದು ಸ್ಛಟಿಕಸ್ಪಷ್ಟವಾಗಬೇಕು; ಅದರಲ್ಲೂ ಮೊದಲಿಗೆ ಅದು ಹಿಂದೂ ರಾಷ್ಟ್ರೀಯವಾದಿಗಳಿಗೆ ಸ್ಪಷ್ಟವಿರಬೇಕು. ಯಾವ ಬಗೆಯಲ್ಲಿ ಚಿಂತಿಸಬೇಕು ಎಂಬುದು ಅವರಿಗೆ ಸ್ಪಷ್ಟವಾಯಿತೆಂದರೆ, ಒಟ್ಟಾರೆ ಭಾರತೀಯ ಅಭಿಪ್ರಾಯವೇನು ಎಂಬುದನ್ನು ಹೇಳಲು ಮತ್ತು ಏನು ಮಾಡಬೇಕೆಂದು ನಿರ್ಧರಿಸಲು ಸುಲಭವಾಗುತ್ತದೆ.
ಜಾತ್ಯತೀತವಾದಿ ಮೈತ್ರಿ
ಕ್ರೈಸ್ತಮತ ಮತ್ತು ಇಸ್ಲಾಮ್ಗಳು ಈಗಾಗಲೆ ಜಗತ್ತಿನಾದ್ಯಂತ ತಮ್ಮ ‘ವಜ್ರಮುಷ್ಟಿ’ (ಜರ್ಬ್-ಎ-ಮೋಮಿನ್ ಅಂದರೆ ಅನ್ಯವಿಶ್ವಾಸಿಗಳನ್ನು ಬಡಿಯುವುದು, ಇದು ಪಾಕಿಸ್ತಾನಿ ಸೇನೆ ತನ್ನ ಒಂದು ಕಾರ್ಯಚರಣೆಗೆ ಇಟ್ಟುಕೊಂಡ ಹೆಸರು)ಯನ್ನು ಪ್ರಯೋಗಿಸುತ್ತಿವೆ; ಜಗತ್ತಿನ ಇತರ ಎಲ್ಲ ಮತಗಳನ್ನು ನಾಶಗೊಳಿಸುವುದು ಅವುಗಳ ಉದ್ದೇಶವಾಗಿದೆ. ಅವರ ಮಟ್ಟಿಗೆ ಅದು ಗುಣಾತ್ಮಕವಾದ ಗುರಿ; ತಮ್ಮ ಮತವನ್ನು ಬೆಳೆಸುವುದು; ಪರಿಣಾಮ ನಕಾರಾತ್ಮಕ ಗುರಿ; ಅಂದರೆ ಹಿಂದೂಧರ್ಮದ ನಾಶ. ವಿನಾಶದ ಈ ಕಾರ್ಯದಲ್ಲಿ ಅವರ ಪ್ರಜ್ಞೆ ಸರಿಯಾಗಿಯೇ ಇದೆ: ತಮ್ಮ ಮತದ ಹಾದಿಯನ್ನು ಸುಗಮಗೊಳಿಸುವುದು.
ಈ ರೀತಿಯಲ್ಲಿ ಅವರಿಗೆ ಆಂತರಿಕ ಬಲವಿದೆ; ಬಾಹ್ಯ ಶಕ್ತಿಯಂತೂ ಇದ್ದೇ ಇದೆ; ಗಾತ್ರ ದೊಡ್ಡದು, ಭಾರೀ ಶ್ರೀಮಂತಿಕೆಯೂ ಇದೆ. ಅವರು ಎರಡು ವಿಶ್ವವ್ಯಾಪಿ ಚಳವಳಿಗಳ ಭಾರತೀಯ ಕೈಯಾಗಿದ್ದಾರೆ. ಅವರನ್ನು ‘ಅಲ್ಪಸಂಖ್ಯಾತ’ರೆಂದು ಕರೆಯುವುದೇ ಹಾಸ್ಯಾಸ್ಪದ; ಆದರೂ ಅವರು ಬಹಳ ಎಚ್ಚರದಿಂದ ಆ ಸ್ಥಾನಮಾನವನ್ನು ಕಾಪಾಡಿಕೊಳ್ಳುತ್ತಾರೆ; ಏಕೆಂದರೆ `ಬಹುಸಂಖ್ಯಾತರು ಯಾರೇ ಇರಲಿ, ಅವರು ದಮನಕಾರಿಗಳು, ತಮ್ಮ ಅಭಿಪ್ರಾಯವನ್ನು ಇತರರ ಮೇಲೆ ಹೇರುವವರು’ ಎಂಬುದು ಇಂದಿನ ಮಾನಸಿಕತೆಯಾಗಿದೆ. ವಿದೇಶೀ ಬೇರುಗಳು ಇರುವ ಕಾರಣದಿಂದಾಗಿ ಅವರು (ಮುಸ್ಲಿಮರು ಮತ್ತು ಕ್ರೈಸ್ತರು) ಬಹಳಷ್ಟು ಆರ್ಥಿಕ ಸಮೃದ್ಧಿಯನ್ನು ಹೊಂದಿದ್ದಾರೆ ಮತ್ತು ಒಂದು ದೀರ್ಘಾವಧಿ ಗುರಿಯತ್ತ ಹೋಗುವುದಕ್ಕೆ ಬೇಕಾದ ಕಾರ್ಯತಂತ್ರವನ್ನು ರೂಪಿಸಲು ಅವರಿಗೆ ತುಂಬ ಅನುಕೂಲವಿದೆ.
ಆದರೆ ಈ ‘ವಜ್ರಮುಷ್ಟಿ’ಗೆ ವೆಲ್ವೆಟ್ನ ಕವಚವಿದೆ; ಅದೇ `ಜಾತ್ಯತೀತತೆ’. ಈ ಜಾತ್ಯತೀತತೆ ಎಂಬುದು ಪಶ್ಚಿಮದಲ್ಲಿ ಆರಂಭವಾಗಿ ವಿಶ್ವವ್ಯಾಪಿಯಾಗಿ ಹಬ್ಬಿದ ಒಂದು ವಿಷಯದ ಭಾರತೀಯ ಮಾದರಿ ಎನ್ನುವವರು ದಗಾಕೋರರಾದರೆ ನಂಬುವವರು ಮೂರ್ಖರು; ಮತ ಮತ್ತು ರಾಜಕೀಯಗಳು ಬೇರೆ ಬೇರೆ ಇರಬೇಕೆನ್ನುವುದು ಈ ಜಾತ್ಯತೀತತೆ. ಅರೇಬಿಯದ ಇಸ್ಲಾಮೀ ಉಗ್ರಗಾಮಿಗಳು ಅಂತಹ ಜಾತ್ಯತೀತತೆ (ಇಸ್ಲಾಮ್ ಹೇಳುವುದಕ್ಕೆ ಭಿನ್ನವಾದ ಪ್ರಜಾಸತ್ತಾತ್ಮಕ ಕಾನೂನು ರಚನೆ)ಯನ್ನು ಇಷ್ಟಪಡುವುದಿಲ್ಲ. ಆದರೆ ಅವರು ಭಾರತದಲ್ಲಿ ತಮ್ಮನ್ನು ‘ಜಾತ್ಯತೀತ’ರೆಂದೇ ಕರೆದುಕೊಳ್ಳುತ್ತಾರೆ. ಕಾರಣವೆಂದರೆ ಭಾರತದಲ್ಲಿ ಈ ಪದ (Secularism)ಕ್ಕೆ ಪೂರ್ತಿ ಭಿನ್ನವಾದ ಅರ್ಥವಿದೆ; ಇಲ್ಲಿ ಹಿಂದೂವಿರೋಧಿಯಾದದ್ದೆಲ್ಲ ಜಾತ್ಯತೀತ. ಇಸ್ಲಾಮಿಕ್ ಉಗ್ರಗಾಮಿಗಳು ಹಿಂದೂವಿರೋಧಿಗಳು; ಆದ್ದರಿಂದ ಅವರು ಜಾತ್ಯತೀತರೆನಿಸಲು ಅತ್ಯಂತ ಅರ್ಹರು. ಆದರೆ ಅವರ ಬದ್ಧತೆ ಇರುವುದು ಜಾತ್ಯತೀತತೆಗಲ್ಲ; ಇಸ್ಲಾಮಿಗೆ. ಈ ಮಾತು ಕ್ರೈಸ್ತ ಪಾದ್ರಿಗಳಿಗೆ ಕೂಡ ಅನ್ವಯಿಸುತ್ತದೆ; ಭಾರತೀಯ ವ್ಯಾಖ್ಯೆಗನುಗುಣವಾಗಿ ಅವರು ತಮ್ಮನ್ನು ಜಾತ್ಯತೀತರೆಂದು ಕರೆದುಕೊಳ್ಳುತ್ತಾರೆ; ಆದರೆ ಅವರ ನಿಜವಾದ ಬದ್ಧತೆ ಇರುವುದು ಕ್ರೈಸ್ತಮತಕ್ಕೆ.
ಒಂದು ಕಾಲದಲ್ಲಿ ಮಾರ್ಕ್ಸ್ವಾದಿಗಳು ಭಾರತೀಯ ಜಾತ್ಯತೀತತೆಯ ಬೆನ್ನೆಲುಬಾಗಿದ್ದರು; ಈಗ ಮಾರ್ಕ್ಸ್ವಾದ ಅವನತಿಯ ಹಾದಿಯಲ್ಲಿರುವಾಗಲೂ ಜಾತ್ಯತೀತತೆಯ ಪರಿಕಲ್ಪನೆಯ ಚೌಕಟ್ಟಿನ ಮೇಲೆ ಅದರ ಪ್ರಭಾವವೇ ಕಾಣಿಸುತ್ತದೆ. ಏನಿದ್ದರೂ ಈಗ ವಾಣಿಜ್ಯೀಕರಣ ಮತ್ತು ಕೊಳ್ಳುಬಾಕತನಗಳೇ ಮೇಲುಗೈ ಸಾಧಿಸುತ್ತಿವೆ. ಮಾರ್ಕ್ಸ್ವಾದದಿಂದ ಕೊಳ್ಳುಬಾಕತನಕ್ಕೆ ಜಾರುವ ಈ ಪ್ರಕ್ರಿಯೆ ಸುಲಭವೆನಿಸಲು ಭಾರತದಲ್ಲಿ ಜಾತ್ಯತೀತತೆಗಿರುವ ವ್ಯಾಖ್ಯೆಯೇ ಕಾರಣ; ಮಾರ್ಕ್ಸ್ವಾದ ಮತ್ತು ಕೊಳ್ಳುಬಾಕತನಗಳೆರಡೂ ಹಿಂದೂವಿರೋಧಿಯಾಗಿದ್ದು, ಅವು ಹಿಂದುಗಳನ್ನು ಅವರ ಧರ್ಮದಿಂದ ದೂರಕ್ಕೆ ಒಯ್ಯುತ್ತವೆ; ಅದು ಇಲ್ಲಿ ಮುಖ್ಯವೆನಿಸುತ್ತದೆ.
ಅಂತಿಮವಾಗಿ, ಹಿಂದೂವಿರೋಧಿ ಮೈತ್ರಿಕೂಟಕ್ಕೆ ಹಲವು ಅವಿವೇಕಿಗಳ ಸೇವೆ ಕೂಡ ಲಭ್ಯವಾಗುತ್ತದೆ; ಅದರಲ್ಲಿ ಮುಖ್ಯರಾದವರು ಹಿಂದುಗಳಾಗಿ ಜನಿಸಿಯೂ ಹಿಂದುತ್ವಕ್ಕೆ ವಿರುದ್ಧವಾದವರು. ಅವರಲ್ಲಿ ಪರಿಶಿಷ್ಟ ಜಾತಿಯಲ್ಲಿನ ಅಂಬೇಡ್ಕರ್ವಾದಿಗಳು, ‘ಬುಡಕಟ್ಟು ಜನರು ಹಿಂದುಗಳಲ್ಲ’ ಎನ್ನುವ ಪಾದ್ರಿಗಳ ಗಿಳಪಾಠದ ಮಾತನ್ನು ಒಪ್ಪಿಸುವ ಪರಿಶಿಷ್ಟ ಪಂಗಡಗಳ ಒಂದು ಚಿಕ್ಕ ವರ್ಗ, ಒಂದು ಕಾಲದಲ್ಲಿ ಎಲ್ಲ ಮತಧರ್ಮಗಳಿಗೆ ವಿರುದ್ಧವಾಗಿದ್ದು ಈಗ ಕೇವಲ ಹಿಂದೂ ವಿರೋಧಿಯಾಗಿ ಉಳಿದುಕೊಂಡಿರುವ ದ್ರಾವಿಡ ಚಳವಳಿ, ಸ್ವಂತ ಹಿತಾಸಕ್ತಿ ಅಥವಾ ಬೇರೆ ಯಾವುದೋ ಕಾರಣದಿಂದಾಗಿ ಹಿಂದುತ್ವದಿಂದ ದೂರ ಇರಬಯಸುವ ‘ಪ್ರಗತಿಶೀಲ’ ಹಾಗೂ ‘ವಿದ್ಯಾವಂತ’ ವರ್ಗಗಳು – ಇವರೆಲ್ಲ ಸೇರುತ್ತಾರೆ.
ಅಲ್ಪಸಂಖ್ಯಾತವಾದಕ್ಕೆ ಮಣಿತ?
ಬಿಜೆಪಿ ಮತ್ತು ಅದರ ಹಿಂದಿರುವ ಹಿಂದುತ್ವದ ಶಕ್ತಿಗಳದ್ದೊಂದು ‘ಪ್ರತಿಕ್ರಿಯೆ’ ಎನಿಸುತ್ತಿದೆ. ಹಿಂದೆ ಅವರಲ್ಲಿ ಹಿಂದೂಧರ್ಮಕ್ಕೆ ಸಾಮಾನ್ಯವಾದ ಬದ್ಧತೆ ಎನ್ನುವ ಸಣ್ಣಮಟ್ಟಿನ ಸಿದ್ಧಾಂತವಾದರೂ ಇತ್ತೋ ಏನೋ. ಈಗ ಅದು ಬದಲಾಗಿ ಜನಾಭಿಪ್ರಾಯ ರೂಪಿಸುವ ಶಕ್ತಿಶಾಲಿ ಗುಂಪಾದ ಜಾತ್ಯತೀತವಾದಿಗಳ ಅಂಗೀಕಾರ ಮುದ್ರೆ ಗಳಿಸುವುದೇ ಮುಖ್ಯವಾದಂತೆ ತೋರುತ್ತಿದೆ. ಅಂತಿಮವಾಗಿ ಈಗ ಬಿಜೆಪಿ ಸುಭದ್ರವಾಗಿ ಅಧಿಕಾರದಲ್ಲಿದೆ ಎಂದು ನಿಮಗೆ ತೋರಬಹುದು; ಆದರೆ ಅದು ಔಪಚಾರಿಕತೆ ಮಾತ್ರ. ಸೈದ್ಧಾಂತಿಕವಾಗಿ, ಬಿಜೆಪಿ ಈಗಲೂ ನೈಜ ಅಧಿಕಾರ ಇರುವುದು ಜಾತ್ಯತೀತವಾದಿಗಳಲ್ಲಿ ಎಂದು ಭಾವಿಸಿದಂತೆ ತೋರುತ್ತಿದೆ. ಜಾತ್ಯತೀತವಾದಿಗಳ ವಿಚಾರಸರಣಿಯನ್ನು ಅದು ತನ್ನದಾದ ದೃಷ್ಟಿಕೋನ ಅಥವಾ ಹಿಂದುಪರ ಬದಲಿ ಲೋಕದೃಷ್ಟಿಯಿಂದ ಪುನರ್ವಿಮರ್ಶೆ ಮಾಡುವಂತೆ ಕಾಣಿಸುತ್ತಿಲ್ಲ. ಜಾತ್ಯತೀತವಾದಿ ದೃಷ್ಟಿಕೋನವು ಅನುಲ್ಲಂಘನೀಯ ಮತ್ತು ಸರ್ವವ್ಯಾಪಿ ಎಂದು ಒಪ್ಪಿಕೊಂಡು ಅದಕ್ಕೆ ಪ್ರತಿಕ್ರಿಯೆ ನೀಡುವುದನ್ನಷ್ಟೇ ಅದು ಮಾಡುತ್ತಿದೆ ಎನಿಸುತ್ತದೆ.
ಘರ್ವಾಪಸಿ (ಮರಳಿ ಮಾತ್ರಧರ್ಮಕ್ಕೆ) ವಿರುದ್ಧ ಜಾತ್ಯತೀತವಾದಿಗಳು ಗದ್ದಲ ಎಬ್ಬಿಸಿದಾಗ ಕೆಲವು ಕೇಂದ್ರ ಬಿಜೆಪಿ ಮಂತ್ರಿಗಳು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದರು ಎಂಬುದರಲ್ಲಿ ಇದನ್ನು ಗುರುತಿಸಬಹುದು; ಏನೋ ಅನಾಹುತವಾಗಿದೆ ಎಂಬಂತೆ ಅವರು ಘರ್ವಾಪಸಿಯ ‘ವಿಭಜನಕಾರಿ’ ಪರಿಣಾಮವನ್ನು ತಾವು ಕೂಡ ವಿರೋಧಿಸುತ್ತೇವೆ ಎಂದು ಜನತೆಗೆ ಭರವಸೆ ನೀಡಿದರು. ನೀವು ಮುಂದಿನ ಚುನಾವಣೆಗಿಂತ ಹೆಚ್ಚಿನದರ ಬಗ್ಗೆ ಯೋಚಿಸುವುದಾದರೆ, ಹಿಂದೂಧರ್ಮದ ಉಳಿವಿನ ದೃಷ್ಟಿಯಿಂದ ಮತ್ತು ದೇಶವನ್ನು ವಿರೋಧಿಗಳು ಸ್ವಾಧೀನಪಡಿಸಿಕೊಳ್ಳುವುದರಿಂದ ತಡೆಯುವ ನಿಟ್ಟಿನಲ್ಲಿ ಘರ್ವಾಪಸಿ ಒಂದು ಉತ್ತಮ ಅವಕಾಶವಾಗಿತ್ತು. ‘ಹಿಂದೂ ರಾಷ್ಟ್ರೀಯವಾದಿ’ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಗೆ ಅದೇನೂ ಚೌಕಾಸಿ ವ್ಯವಹಾರವಾಗಿರಲಿಲ್ಲ; ಬದಲಾಗಿ ಮೂಲಭೂತ ಕಾಳಜಿಗೆ ಸಂಬಂಧಿಸಿದ ವಿಷಯವಾಗಿತ್ತು. ಏನೋ ತಪ್ಪಾಯಿತೆಂದು ತಿಳಿಯುವುದಕ್ಕಂತೂ ಯಾವುದೇ ಕಾರಣವಿರಲಲ್ಲ. ಈ ದೇಶದಲ್ಲಿ ಮತಾಂತರವು ಕಾನೂನು ಬದ್ಧ ಮತ್ತು ಜಾತ್ಯತೀತವಾದಿಗಳು ಅದನ್ನು ಸದಾ ಸಮರ್ಥಿಸಿಕೊಂಡು ಬಂದಿದ್ದಾರೆ ಎಂಬುದರಿಂದ ಅದು ಇನ್ನಷ್ಟು ಸತ್ಯ.
ಹಿಂದೂ ಉಗ್ರವಾದಿಗಳು ಚರ್ಚ್ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ, ಹಾನಿ ಎಸಗುತ್ತಿದ್ದಾರೆ, ದರೋಡೆ ನಡೆಸುತ್ತಿದ್ದಾರೆ ಎಂದು ಮಿಷನರಿ(ಪಾದ್ರಿ)ಗಳು ಜಗತ್ತಿಗೆ ತಪ್ಪು ಮಾಹಿತಿ ನೀಡಿ ಬೊಬ್ಬೆಹೊಡೆದಾಗ ಸರ್ಕಾರ `ಅಂತಹ ಘಟನೆಗಳೇ ನಡೆದಿಲ್ಲ; ಈ ನಿಟ್ಟಿನಲ್ಲಿ ಕೋಮುವಾದವಂತೂ ಇಲ್ಲವೇ ಇಲ್ಲ’ ಎಂದು ತಪ್ಪು ಅಭಿಪ್ರಾಯವನ್ನು ಸರಿಪಡಿಸುವ ಬದಲು ‘ಚರ್ಚ್ದಾಳಿ’ಗಳನ್ನು ಹತ್ತಿಕ್ಕಲಾಗುವುದು ಎನ್ನುವ ಹೇಳಿಕೆ ನೀಡಿತು. ಪಾಕಿಸ್ತಾನ, ಬಂಗ್ಲಾದೇಶಗಳಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆಯುವ ದಾಳಿ, ವಿನಾಶಗಳಿಗೆ ಹೋಲಿಸಿದರೆ ಇಲ್ಲಿ ಅಂಥದೇನೂ ನಡೆಯುತ್ತಿಲ್ಲ; ಘಟನೆಗಳು ಇದ್ದರೂ ಸೈದ್ಧಾಂತಿಕ ವಿದ್ವೇಷವಿಲ್ಲದ ಸಣ್ಣಪುಟ್ಟ ಘಟನೆಗಳು. ಆದರೆ ಬಿಜೆಪಿ ತನ್ನ ವಿರೋಧಿಗಳು ಮಾಡುವ ಆರೋಪವನ್ನು ಪೂರ್ತಿ ಸತ್ಯವೆಂಬಂತೆ ಸ್ವೀಕರಿಸಿ, ಸರಿಪಡಿಸುವುದಾಗಿ ಭರವಸೆ ನೀಡುತ್ತಿದೆ.
ಆದರೂ ಈ ಕಾರ್ಮೋಡದ ನಡುವೆ ಬೆಳ್ಳಿರೇಖೆಯೊಂದನ್ನು ಗುರುತಿಸಬಹುದು ಎನಿಸುತ್ತದೆ. ಹಿಂದೂ ವೋಟ್ಬ್ಯಾಂಕನ್ನು ಖುಷಿಯಾಗಿಡಬೇಕೆನ್ನುವ ಉದ್ದೇಶದಿಂದಲೋ ಅಥವಾ ಬೇರೆ ಯಾವುದಾದರೂ ಕಾರಣದಿಂದಲೋ, ಖಾಲಿತನದ್ದಾದರೂ ಹಿಂದೂಪರ ಭಾವನೆಗಳು ಅದರಿಂದ ಪ್ರಕಟವಾಗುತ್ತಿವೆ. ಇದೇ ಕ್ರಮೇಣ ಹಿಂದೂ ಹಿತಾಸಕ್ತಿಗಳ ಬಗೆಗಿನ ನೈಜ ಕಾಳಜಿಯಾಗಲೂಬಹುದು. ಅವರ ಪಕ್ಷವನ್ನು ಮೇಲೆತ್ತಿದ್ದು ಹಿಂದೂಪರ ಧೋರಣೆ. ಆದರೆ ಪಕ್ಷದಲ್ಲಿರುವ ಕೆಲವು ಜಾತ್ಯತೀತವಾದಿಗಳು ತಾವು ಹಿಂದೂಪರ ಧೋರಣೆಯನ್ನು ಮೀರಿದವರು ಎಂಬಂತೆ ಬಿಂಬಿಸುತ್ತಿದ್ದಾರೆ. ೨೦೦೪ರ ಲೋಕಸಭಾ ಚುನಾವಣೆಯ ಹೊತ್ತಿಗೆ ಅಟಲ್ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಭಾರೀ ಆರ್ಥಿಕ ಯಶಸ್ಸನ್ನು ಗಳಿಸಿತ್ತು; ಆದರೆ ಹಿಂದೂ ಕಾರ್ಯಸೂಚಿಯ ಬಗ್ಗೆ ಯಾವುದೇ ಆಸಕ್ತಿ ತೋರಿಸದಿರುವ ಕಾರಣ ಹಿಂದೂ ಮನೋಭಾವದ ಮತದಾರರ ಅವಕೃಪೆಗೆ ಗುರಿಯಾಗಿ ಚುನಾವಣೆಯಲ್ಲಿ ಸೋತುಹೋಯಿತು. ತಾವು ಇಂದು ಯಾವ ಅಧಿಕಾರವನ್ನು ಅನುಭವಿಸುತ್ತಿದ್ದೇವೋ ಅದಕ್ಕೆ ಪಕ್ಷದ ಹಿಂದೂ ಮನೋಭಾವದ ಕಾರ್ಯಕರ್ತರು ಮತ್ತು ಪ್ರಚಾರದಲ್ಲಿ ಭಾಗಿಯಾದ ಸ್ವಯಂಸೇವಕರೇ ಕಾರಣವೆಂದು ಪಕ್ಷದ ನಾಯಕರು ಅರ್ಥೈಸಿಕೊಳ್ಳಬೇಕು.
ಗೋಹತ್ಯೆಯ ನಿಷೇಧ.
ಹಿಂದಿನ ಅನುಭವದಿಂದ ಏನೋ ಸ್ವಲ್ಪ ಕಲಿತವರಂತೆ ನಡೆಸುತ್ತಿರುವ ಕೆಲವು ಕಾರ್ಯಕ್ರಮಗಳು ಕೂಡ ಕಾಣಿಸುತ್ತಿವೆ; ಭಾರತ ಮತ್ತು ವಿದೇಶಗಳಲ್ಲಿ (ಪ್ರಧಾನಿಯ) ದೇವಾಲಯ ಭೇಟಿಗಳ ಟಿವಿ ಪ್ರಸಾರ ಹಾಗೂ ವಾಜಪೇಯಿ, ಎಲ್.ಕೆ. ಆಡ್ವಾಣಿ, ವಾಮದೇವಶಾಸ್ತ್ರಿ ಹಾಗೂ ಸ್ವಪನ್ ದಾಸಗುಪ್ತ ಅವರ ಪ್ರಶಸ್ತಿಪ್ರದಾನ ಸಮಾರಂಭಗಳನ್ನು ಇಲ್ಲಿ ಉದಾಹರಿಸಬಹುದು. ಗೋಹತ್ಯೆ ನಿಷೇಧ ಕೈಗೊಳ್ಳುವ ರಾಜ್ಯ ಶಾಸನಗಳಿಗೆ ಬೆಂಬಲ ನೀಡಿದ್ದಂತೂ ಒಂದು ಉತ್ತಮ ಕ್ರಮವಾಗಿದೆ; ಏಕೆಂದರೆ ಸಾಮಾನ್ಯ ಹಿಂದುಗಳಿಗೆ ಕಾನೂನಿನ ಸೂಕ್ಷ್ಮಗಳು ಅರ್ಥವಾಗದಿದ್ದರೂ ಗೋಮಾತೆಯ ಬಗೆಗೆ ಭಕ್ತಿ ಇದ್ದೇ ಇದೆ; ಅವರು ಇದನ್ನು ಮೆಚ್ಚಿಯೇ ಮೆಚ್ಚುತ್ತಾರೆ. ಸರ್ಕಾರದ ಈ ಕ್ರಮ ಪರಿಣಾಮಕಾರಿ ಎಂಬುದು ಬಂಗ್ಲಾದೇಶದಲ್ಲಿ ಗೋಮಾಂಸದ ಬೆಲೆ ಏರಿದುದರಿಂದ ಸಾಬೀತಾಯಿತು.
ಬಿಜೆಪಿಯ ಕೆಲವು ಸಡಿಲು ಮಾತಿನ ನಾಯಕರು ಅಲ್ಪಸಂಖ್ಯಾತರ ವಿರೋಧಿ ಎನಿಸುವ ಹೇಳಿಕೆಗಳನ್ನು ನೀಡಿದಾಗ ಯಾವುದೋ ಕಾರ್ಯತಂತ್ರದ ಲೆಕ್ಕಾಚಾರದಿಂದ ಅಥವಾ ನೈಜ ಜಾತ್ಯತೀತಪರ ಧೋರಣೆಯಿಂದ ಪಕ್ಷದ ಇತರರು ಆಕ್ಷೇಪಿಸಿದ್ದಿದೆ; ಬಿಸಿರಕ್ತದ ಹಿಂದೂ ಮತದಾರರನ್ನು ಖುಷಿಪಡಿಸುವ ಉದ್ದೇಶದಿಂದ ಅಂತಹ ಮಾತುಗಳು ಬಂದವೆಂಬ ವ್ಯಾಖ್ಯಾನವೂ ಇದೆ. ಹಿಂದೂಪರ ಎನಿಸುವ ಯಾವುದೇ ಹೇಳಿಕೆಯಿಂದ ಸಂತೋಷಪಡುವ ಒಂದು ವರ್ಗ ಕೂಡ ಹಿಂದೂ ಸಮಾಜದಲ್ಲಿದೆ. ಅಂತಹ ವರ್ಗವನ್ನು ತಮ್ಮ ಬಳಿ ಇರಿಸಿಕೊಳ್ಳಬೇಕಿದ್ದರೆ ಹೆಚ್ಚು ಗುಣಾತ್ಮಕವಾದ ಹಿಂದೂಪರ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು ಅವಶ್ಯ.
ಇದು ಹೆಚ್ಚು ಆಳವೂ ಅರ್ಥಪೂರ್ಣವೂ ಆಗಿಲ್ಲದೆ ಇರಬಹುದು; ಆದರೆ ಆಳುವ ಪಕ್ಷದ ರಾಜಕಾರಣಿಗಳಿಗೆ ಅವರ ಹಿಂದೂ ಬೇರನ್ನು ನೆನಪಿಸದೆ ಇರಲಾರದು. ಅವರಿಗೆ ಹನುಮಂತನ ಸಮಸ್ಯೆ ಇರಲೂಬಹುದು. ತನ್ನ ಶಕ್ತಿಯನ್ನು ಬೇರೆಯವರು ನೆನಪಿಸುವ ತನಕ ಹನುಮಂತನಿಗೆ ತಾನು ಏನೆಂದು ತಿಳಿದಿರಲಿಲ್ಲ. ಧರ್ಮಕ್ಕೆ ಬದ್ಧರಾಗಿದ್ದಾಗ ನಮ್ಮಲ್ಲಿ ಎಂತಹ ಅಪೂರ್ವ ಶಕ್ತಿ ಬರುತ್ತದೆ ಎಂಬುದನ್ನು ಅವರಿಗೆ ನೆನಪಿಸಬೇಕಾಗಿದೆ. ಜಾತ್ಯತೀತವಾದಿಗಳು ಒಡ್ಡಬಹುದಾದ ತಡೆಗಳ ಭಯಹುಟ್ಟಿಸಿ, ‘ಅಭಿವೃದ್ಧಿ’ ಎಂಬ ಸುರಕ್ಷಿತ ಕ್ಷೇತ್ರದಲ್ಲೇ ಅವರನ್ನು ನೆಲೆಗೊಳಿಸುವ ಬದಲು ಒಂದು ಕಾಲದಲ್ಲಿ ಅವರು ಹೇಳುತ್ತಿದ್ದ ‘ಧರ್ಮೋ ರಕ್ಷತಿ ರಕ್ಷಿತಃ’ (ರಕ್ಷಿಸಲ್ಪಟ್ಟ ಧರ್ಮ ನಮ್ಮನ್ನು ರಕ್ಷಿಸುತ್ತದೆ) ಎಂಬ ಫೋಷಣೆಯನ್ನು ಅವರಿಗೆ ನೆನಪಿಸಬೇಕು. ಧರ್ಮದ ಪರವಾಗಿ ನಿಲ್ಲಲು ಇದು ಸಕಾಲ; ಆಗ ಎಲ್ಲವೂ ಸರಿಯಾಗುವುದು. ಹಿಂದೂ ಕಾರ್ಯಕರ್ತರು ದುಡಿದ ಒಂದು ಪಕ್ಷ ಹಿಂದೂಧರ್ಮಕ್ಕೆ ಸೇವೆ ಸಲ್ಲಿಸುವುದಿಲ್ಲವೆಂದರೆ ಅದು ನಿಷ್ಟ್ರಯೋಜಕವೇ ಸರಿ.
ಉಗ್ರವಾದಿ ಅಲ್ಪಸಂಖ್ಯಾತತೆಯ ನಿಯಂತ್ರಣ
ಅಲ್ಪಸಂಖ್ಯಾತರಿಗೆ ವಿವಿಧ ಸವಲತ್ತುಗಳನ್ನು ಮೊಗೆದು ಕೊಡುವ ಕಾನೂನುಗಳನ್ನು ಗಮನಿಸುತ್ತಾ ಹೋದಾಗ, ಹಿಂದುಗಳು ಇವುಗಳನ್ನು ಎತ್ತಿಕೊಂಡು ಹೋರಾಟ ನಡೆಸಿ ಪ್ರಯೋಜನ ಪಡೆಯುತ್ತಿಲ್ಲವಲ್ಲಾ ಎನಿಸದಿರದು. ನಿಜವೆಂದರೆ, ಈ ಕಾನೂನುಗಳು ಜಾತ್ಯತೀತತೆಯನ್ನು ಉಲ್ಲಂಘಿಸುತ್ತವೆ ಮತ್ತು ಸಮರ್ಥನೀಯವಲ್ಲ; ಆದ್ದರಿಂದ ಹಿಂದುಗಳು ಅವುಗಳನ್ನು ಧಾರಾಳ ಬಳಸಿಕೊಳ್ಳಬೇಕು. ದೇಶದ ಕೆಲವು ರಾಜ್ಯಗಳಲ್ಲಿ ಮತ್ತು ಹಲವು ಜಿಲ್ಲೆಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಅದಲ್ಲದೆ ಈ ಶಾಸನ ಭಾಷಾ ಅಲ್ಪಸಂಖ್ಯಾತತೆಯನ್ನು ಕೂಡ ಗುರುತಿಸುತ್ತದೆ; ತಮಿಳುನಾಡಿನಲ್ಲಿ ಗುಜರಾತಿಗಳು, ಆಂಧ್ರದಲ್ಲಿ ಮಲೆಯಾಳಿಗಳು – ಮುಂತಾಗಿ ಅಲ್ಪಸಂಖ್ಯಾತರ ಸವಲತ್ತುಗಳನ್ನು ಕೇಳಬಹುದು.
ಕೆಲವರು ಹಿಂದೂಧರ್ಮವನ್ನು ತೊರೆದು, ತಾವು ಹಿಂದುಯೇತರ ಅಲ್ಪಸಂಖ್ಯಾತರೆಂದು ಘೋಷಿಸಿಕೊಂಡು ಯಾವುದೋ ಲಾಭ ಪಡೆಯಲು ಹವಣಿಸುತ್ತಾರೆ. ಇದು ಇಡೀ ಸಮುದಾಯಕ್ಕೆ ಹಾನಿ ಎಸಗಿ ತಮ್ಮ ಸಣ್ಣ ಸಮುದಾಯಕ್ಕೆ ಲಾಭ ಮಾಡಿಕೊಳ್ಳುವ ಹಿಂದುಗಳ ಒಂದು ಮಾಮೂಲು ಕಾಯಿಲೆ. ಆ ‘ಮಾಜಿ ಹಿಂದು’ಗಳ ಬಳಿಗೆ ಹೋಗಿ ಅವರ ವರ್ತನೆ ಸರಿಯಲ್ಲ ಮುಂತಾಗಿ ಉಪದೇಶಿಸುತ್ತಾ ಹೋಗುವ ಬದಲು ಮೂಲತಃ ಹಿಂದುಗಳಾದ ಎಲ್ಲರಿಗೂ ಸಮಾನತೆ ತರುವುದು ಪರಿಣಾಮಕಾರಿಯಾಗುತ್ತದೆ.
ಸಂವಿಧಾನದ ಸಂಬಂಧಪಟ್ಟ ವಿಧಿಗಳನ್ನು ತಿದ್ದುವ ಬದಲು ಹಿಂದೂ ಚಿಂತಕರು ಈ ‘ಅಲ್ಪಸಂಖ್ಯಾತ’ ಎಂಬ ಪರಿಕಲ್ಪನೆಯನ್ನೇ ಪ್ರಶ್ನಿಸಬಹುದು. ಭಾರತವೆಂದರೆ ಅಲ್ಪಸಂಖ್ಯಾತ ಸಮುದಾಯಗಳ ಮೊತ್ತ. ಹಿಂದೂಧರ್ಮ ಹಲವು ಸಮುದಾಯಗಳ ಒಂದು ಕೂಟವಾಗಿದ್ದು, ಅವೆಲ್ಲವೂ ಅಲ್ಪಸಂಖ್ಯಾತ ಎನಿಸುತ್ತವೆ. ಈ ‘ಅಲ್ಪಸಂಖ್ಯಾತ’ ಎಂಬ ಪರಿಕಲ್ಪನೆಯನ್ನು ಅದರಂತೆ ಸವಲತ್ತುಗಳನ್ನು ನೀಡುತ್ತಾ ಹೋಗುವುದು ಬೆಪ್ಪುತನವೇ ಸರಿ. ಈಗಿನ ಸರ್ಕಾರ ಹೇಳುವ ‘ಅಭಿವೃದ್ಧಿ’ಯಿಂದ ಈ ಸಮಸ್ಯೆಯಲ್ಲಿ ಹೆಚ್ಚೇನೂ ಬದಲಾವಣೆ ಆಗದು.
ಈ ‘ಅಲ್ಪಸಂಖ್ಯಾತ’ ಎಂಬುದನ್ನು ಸರಿಯಾಗಿ ಅರ್ಥೈಸಿಕೊಂಡ ಬಳಿಕ ಹಿಂಭಾಗದಲ್ಲಿರುವ ಗಂಭೀರ ಹಿಂದೂ (ನೈಜ ಜಾತ್ಯತೀತ) ಚಿಂತಕರು ಮತ್ತು ಸರ್ಕಾರದ ಒಳಗಿರುವ ಮಂತ್ರಿಗಳು ಕಾನೂನು ಮತ್ತು ಸಂವಿಧಾನದಿಂದ ಅದನ್ನು ಕಿತ್ತುಹಾಕಲು ಶ್ರಮಿಸಬೇಕು. ಆ ಪ್ರಕ್ರಿಯೆ ಒಂದು ತಾರ್ಕಿಕ ಅಂತ್ಯವನ್ನು ಕಾಣಬೇಕು. ಅಲ್ಪಸಂಖ್ಯಾತರ ಆಯೋಗದಿಂದ ಆರಂಭಿಸಿ, ಬಹುಸಂಖ್ಯಾತರ ವಿರೋಧಿಗಳಾದ ಅಂತಹ ಎಲ್ಲ ಒತ್ತಡ ಗುಂಪುಗಳು ಇಲ್ಲವಾಗಬೇಕು; ಅಲ್ಪಸಂಖ್ಯಾತರೆಂಬ ಪರಿಕಲ್ಪನೆಯೇ ಇಲ್ಲವಾಗಬೇಕು.
ಅದೇ ವೇಳೆ ಸರ್ಕಾರದ ಪೋಷಣೆ ಮತ್ತು ಸವಲತ್ತುಗಳನ್ನು ಪಡೆಯುತ್ತಾ ಬಂದ ಸಮುದಾಯಗಳಿಗೆ ಸಮಾನತೆಯು ಬಹುದೊಡ್ಡ ಅನ್ಯಾಯವೆಂದು ಅನ್ನಿಸದೆ ಇರುವುದಿಲ್ಲ. ಈಗ ಅವರು ಎಷ್ಟೊಂದು ಪ್ರಭಾವಶಾಲಿಗಳಾಗಿದ್ದಾರೆಂದರೆ, ದೇಶದ ಜನತೆಯಲ್ಲಿ ಹಾಗೂ ಜಾಗತಿಕ ಮಟ್ಟದಲ್ಲಿ ಅವರ ಮಾತುಗಳು ಸ್ವೀಕೃತವಾಗುತ್ತವೆಯೇ ಹೊರತು ಹಿಂದುಗಳದ್ದಲ್ಲ ಎನ್ನಬಹುದು. ಆದ್ದರಿಂದ ಅವರು, ಅಲ್ಪಸಂಖ್ಯಾತರನ್ನು ದಮನಿಸಲಾಗುತ್ತಿದೆ’. ಬಹುಸಂಖ್ಯಾತ ಹಿಂದುಗಳು ದಬ್ಬಾಳಿಕೆ ನಡೆಸಿ ತಮ್ಮ ‘ಹಕ್ಕು’ಗಳನ್ನು ಕಸಿಯುತ್ತಿದ್ದಾರೆ ಎಂದೆಲ್ಲ ಬೊಬ್ಬೆ ಹೊಡೆಯದೆ ಇರುವುದಿಲ್ಲ. ಈ ವಿಷಯವನ್ನು ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರವೇ ಮಂಡಿಸಬೇಕಾಗುತ್ತದೆ. ಏಕೆಂದರೆ ಅವು ಸಮಾನತೆಗೆ ಬೇಕಾದ ನೆಲೆಯನ್ನು ಒದಗಿಸುತ್ತವೆ; ಹಿಂದೂ ಹಿತಾಸಕ್ತಿಯ ಸ್ವಾಥ ಎಂಬ ಆರೋಪ ಬಾರದಂತೆ ತಡೆಯುತ್ತವೆ. ಆಗ ಕೂಡ ಎದುರಿನವರು ಸುಳ್ಳು ಹೇಳಿ ದಾರಿ ತಪ್ಪಿಸಬಹುದು; ಅದಕ್ಕಾಗಿ ಹಿಂದುಗಳು ಮಕ್ಕಳಂತೆ ಮುಗ್ಧರೂ ಹಾವಿನಂತೆ ಬುದ್ಧಿವಂತರೂ ಆಗಿರಬೇಕು.
ಅಲ್ಪಸಂಖ್ಯಾತ ಮತಗಳ ಬಗೆಗಿನ ಸತ್ಯ
ಅಲ್ಪಸಂಖ್ಯಾತರ ಬಗೆಗೆ ಗಾಂಧೀವಾದದಿಂದ ಪ್ರೇರಿತ ಎಂದು ಕರೆಯಬಹುದಾದ ಒಂದು ನೀತಿ ಇಂದು ಬೇಕಾಗಿದೆ. ಅಂದರೆ ದೇಶವಿಭಜನೆಯ ವೇಳೆ ಗಾಂಧಿಯವರು ಮಾಡಿದಂತೆ ಒರಟುತನದ್ದು ಅಥವಾ ಸಾಮರಸ್ಯ ಇಲ್ಲದ್ದಲ್ಲ. ಗಾಂಧಿಯವರು ಹೇಳಿದ ತತ್ತ್ವಗಳನ್ನು ಗಂಭೀರವಾಗಿ ಅಳವಡಿಸಬೇಕು; ಸತ್ಯ ಮತ್ತು ಅಹಿಂಸೆಗಳೇ ಆ ತತ್ತ್ವ.
ಇಲ್ಲಿ ಸತ್ಯವೆಂದರೆ ಇಸ್ಲಾಂ ಮತ್ತು ಕ್ರೈಸ್ತಮತಗಳಿಗೆ ಸಂಬಂಧಿಸಿದ ಸತ್ಯವನ್ನು ಎದುರಿಸುವುದು. ಇದು ಹಿಂದುಗಳ ಮಟ್ಟಿಗೆ ದೊಡ್ಡ ಮಾನಸಿಕ ಜಿಗಿತವೇ ಎನಿಸಬಹುದು; ಏಕೆಂದರೆ ಅವರಿಗೆ ಇನೊಬ್ಬರ ಮತದ ಹಿಂದಿರುವ ಸತ್ಯವನ್ನು ಪ್ರಶ್ನಿಸುವ ಅಭ್ಯಾಸವಿಲ್ಲ. ಕೇರಳದಲ್ಲಿ ಒಂದು ಕ್ರೈಸ್ತ ಸಮುದಾಯಕ್ಕೆ ಆಶ್ರಯ ನೀಡಿದಾಗ ಹಿಂದೂ ಆತಿಥೇಯರು ಅವರ ಮತದಲ್ಲೇನಿದೆ ಎಂಬುದನ್ನೇ ಕೇಳಲಿಲ್ಲ; ಸತ್ಯ ಎಷ್ಟಿದೆ ಎಂಬುದು ದೂರವೇ ಉಳಿಯಿತು. ಆ ಮತಗಳ ಹಿಂದಿರುವ ಸತ್ಯ ಯಾರಿಗೂ ಗೊತ್ತಿಲ್ಲ; ಬಹಳಷ್ಟು ಜನರಿಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಆ ಜನ ಶಾಂತಿಯಲ್ಲಿ ನೆಲೆಸಿದರೆ ಸಾಕು; ಗೋವು ಮತ್ತು ಬ್ರಾಹ್ಮಣರನ್ನು ಕೊಲ್ಲದಿರುವುದು ಮುಂತಾದ ಕೆಲವು ಮೂಲಭೂತ ನಿಯಮಗಳನ್ನು ಪಾಲಿಸಿದರೆ ಸಾಕು ಎಂಬುದಷ್ಟೇ ಹಿಂದುಗಳ ನಿರೀಕ್ಷೆಯಾಗಿತ್ತು; ಅನ್ಯಮತಗಳ ತತ್ತ್ವಗಳನ್ನು ಪರೀಕ್ಷೆಗೊಳಪಡಿಸುವುದು ಹಿಂದುಗಳ ಸ್ವಭಾವದಲ್ಲೇ ಇಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಬುದ್ಧಿಪೂರ್ವಕವಾದ ಈ ಅಜ್ಞಾನದಿಂದಾಗಿ ಆ ಮತಗಳು ಏನನ್ನು ಹೇಳುತ್ತವೆ ಎಂಬುದೇ ಗೊತ್ತಾಗದೆ ಹೋಯಿತು. ಸ್ವತಃ ಮತಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸದಿದ್ದ ಗಾಂಧಿಯವರು ಎಲ್ಲ ಮತಗಳೂ ಸಮಾನವಾದ ಗೌರವಕ್ಕೆ ಅರ್ಹವೆಂದು ಘೋಷಿಸಿದರು. ಯಾವ ಅಭಿಪ್ರಾಯದಿಂದ ಅವರು ಹಾಗೆ ಹೇಳಿದರೆಂಬುದು ಗೊತ್ತಿಲ್ಲ. ಇಂದಿನ ಜಾತ್ಯತೀತವಾದಿಗಳು ಅದರ ವ್ಯಾಖ್ಯಾನ ಮಾಡಿ, ‘ಎಲ್ಲ ಮತಗಳು ಸಮಾನವಾದ ಸತ್ಯವನ್ನು ಹೇಳುತ್ತವೆ’ ಮತ್ತು ‘ಎಲ್ಲ ಮತಧರ್ಮಗಳು ಒಂದೇ ಗುರಿಯನ್ನು ತಲಪುತ್ತವೆ’ ಎಂಬುದು ಗಾಂಧಿಯವರ ಅಭಿಪ್ರಾಯವೆಂದು ವಾದಿಸುತ್ತಿದ್ದಾರೆ. ಆದರೆ ಅದು ಪೂರ್ತಿಯಾಗಿ ಸುಳ್ಳು. ಒಂದು ಮತದ ಸತ್ಯವನ್ನು ನಾವು ವಿಮರ್ಶಿಸದೆ ಇರಬಹುದು; ಆದರೆ ಒಂದು ಮತವನ್ನು ಕುರಿತು ಸುಳ್ಳನ್ನು ಹೇಳಬಾರದು, ಚಿಂತಿಸಲೂಬಾರದು.
ಪ್ರಾಯಪ್ರಬುದ್ಧರಾಗಿ ವಿವೇಚನೆಯ ಸಾಮರ್ಥ್ಯವನ್ನು ಹೊಂದಿರುವವರಿಗೆ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ತಿಳಿದಿರುತ್ತದೆ. ೧+೧=೨ ಎಂಬುದು ಹೇಗೆ ಸತ್ಯವೋ ಆ ರೀತಿಯಲ್ಲಿ ೧+೧=೪ ಎಂಬುದು ಸತ್ಯವಲ್ಲ ಮತ್ತು ಗೌರವಕ್ಕೆ ಅರ್ಹವಲ್ಲ ಎಂಬುದು ತಿಳಿದಿರುತ್ತದೆ. ಒಬ್ಬಾತ ಸುಳ್ಳು ಹೇಳುವವ ಹಾಗೂ ಇನ್ನೊಬ್ಬ ಸತ್ಯ ಹೇಳುವವನಿಗೆ ನಾವು ಸಮಾನ ಗೌರವವನ್ನು ಕೊಡಬಹುದು; ಆದರೆ ಅವರ ಮಾತುಗಳಿಗೆ ಸಮಾನ ಗೌರವ ನೀಡಲು ಅಸಾಧ್ಯ. ತಾತ್ಪರ್ಯವೆಂದರೆ, ಕ್ರೈಸ್ತಮತದ ಕೆಲವು ಪ್ರಮುಖ ತತ್ತ್ವಗಳು ಸ್ವೀಕಾರಾರ್ಹವಲ್ಲ ಎಂಬುದನ್ನು ಗುರುತಿಸಬೇಕಾಗುತ್ತದೆ. ಇಂದು ಅವು ವಿಪರೀತ ಜಾಗತೀಕರಣ ಆಗಿರಬಹುದು; ಆದರೂ ತಪ್ಪು ತಪ್ಪೇ.
ಮಿಲಿಯಗಟ್ಟಲೆ ಜನರಿಗೆ ಶಿರೋಧಾರ್ಯವಾದ ಒಂದು ನಂಬಿಕೆಯನ್ನು ಟೀಕಿಸುವುದು ಅಥವಾ ವಿಮರ್ಶಿಸುವುದು ಆಕ್ಷೇಪಾರ್ಹ ಅಪರಾಧವೆಂದು ಕುತಂತ್ರಿ ಜಾತ್ಯತೀತವಾದಿ ಅಥವಾ ಓರ್ವ ಭಾವುಕ ಹಿಂದೂ ಹೇಳಬಹುದು. ಒಬ್ಬ ವಂಚಕ ಹಾಗೆ ಹೇಳಿ, ಮೂರ್ಖ ಅದನ್ನು ನಂಬಬಹುದಷ್ಟೆ. ತನ್ನನ್ನು ಪಾಪಿ ಎಂದು ತೀರ್ಮಾನಿಸುತ್ತಾರೆ; ಶಾಶ್ವತ ನರಕದಲ್ಲಿ ತಾನು ನರಳಬೇಕು ಎಂದು ಯಾವೊಬ್ಬ ಹಿಂದುವೂ ಅಳುವುದಿಲ್ಲ. ಆದರೆ ಇಸ್ಲಾಂ ಮತ್ತು ಕ್ರೈಸ್ತಮತದಲ್ಲಿ ಅಂತಹ ನಂಬಿಕೆ ಇದೆ. ಮುಸ್ಲಿಮರು ಮತ್ತು ಕ್ರೈಸ್ತರು ಪರಸ್ಪರ ತಮ್ಮೊಳಗೆ ಕೂಡ ಹಾಗೆ ಭಾವಿಸುತ್ತಾರೆ. ಮುಸ್ಲಿಂ ಅಥವಾ ಕ್ರೈಸ್ತ ಮತೀಯ ತತ್ತ್ವಗಳು ಅಂಧಶ್ರದ್ಧೆ ಇರುವಂಥವೆಂದು ಹಿಂದುಗಳು ಒಂದು ವೇಳೆ ಪ್ರತ್ಯೇಕ ಉಳಿದರೆ ಅದರಲ್ಲಿ ವಿಶೇಷವೇನೂ ಇಲ್ಲ.
ರಾಜಕೀಯದಲ್ಲಿ ನಷ್ಟ
ರಾಜಕಾರಣಿಗಳು ಎತ್ತಬಹುದಾದ ಇನ್ನೊಂದು ಆಕ್ಷೇಪವೆಂದರೆ, ಇಸ್ಲಾಂ ಅಥವಾ ಕ್ರೈಸ್ತ ಮತಗಳನ್ನು ಹೊಗಳದೆ ಇರುವುದು ರಾಜತಾಂತ್ರಿಕವಾಗಿ ಕೆಟ್ಟ ನಡೆ ಎನಿಸುತ್ತದೆ ಎಂಬುದು. ಬಹಳಷ್ಟು ಜನ ಸತ್ಯದ ಪ್ರಶ್ನೆಯನ್ನು ಎದುರಿಸುವುದೇ ಇಲ್ಲ. ಅಂತಹ ಪ್ರಶ್ನೆ ಬರಬಹುದು ಎನ್ನಿಸುವಾಗ ಅವರು ಜಾಗ ಖಾಲಿಮಾಡುತ್ತಾರೆ ಅಥವಾ ಆ ಪ್ರಶ್ನೆಗೆ ಉತ್ತರಿಸಿದರೆ ತಾವು ಗುಂಪಿಗೆ ಸೇರಿದಂತಾಗುತ್ತದೆ ಎಂಬ ಲೆಕ್ಕಾಚಾರ ಹಾಕುತ್ತಾರೆ. ಅವರಿಗೆ ಸತ್ಯವೆಂದರೆ ಒಂದು ದಂತಗೋಪುರದ ಕಾಳಜಿ. ಸರಿ, ಚಿಂತಿಸುವುದೊಂದು, ಹೇಳುವುದು ಇನ್ನೊಂದು. ತಿಳಿವಳಿಕೆಯಿಂದ ಕೂಡಿರುವ ಒಂದು ಅಭಿಪ್ರಾಯವನ್ನು ಹೊಂದಿರುವುದು ಮತ್ತು ಅದನ್ನು ಹೇಳಿ ಅದರ ಸಾಮಾಜಿಕ ಪರಿಣಾಮವನ್ನು ಎದುರಿಸುವುದು ಬೇರೆಯೇ ವಿಷಯವಾಗಿದೆ. ರಾಜಕಾರಣಿಗಳು ಯಾವಾಗಲೂ ಜನರ ನಡುವೆ ಬಲಾಬಲದ ಲೆಕ್ಕಾಚಾರಗಳನ್ನು ಮರೆಯುವಂತಿಲ್ಲ, ಆದ್ದರಿಂದ ಸಾಮಾಜಿಕವಾಗಿ ಸ್ವೀಕಾರಾರ್ಹವಾದ ಮಾತುಗಳನ್ನೇ ಹೇಳುತ್ತಿರಬೇಕಾಗುತ್ತದೆ ಎಂಬುದು ನನಗೆ ಗೊತ್ತು. ವಿಭಿನ್ನ ಗುಂಪುಗಳಿಗೆ ವಿಭಿನ್ನ ಕಸುಬುಗಳನ್ನು ಗುರುತಿಸಿರುವುದು ಹಿಂದೂಧರ್ಮದ ಹೆಚ್ಚುಗಾರಿಕೆ ಎಂಬುದು ನಿಜ. ಸತ್ಯವನ್ನು ಒಪ್ಪಿಕೊಳ್ಳದ ಬುದ್ಧಿಜೀವಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂದು ಹೇಳಬೇಕಾಗುತ್ತದೆ; ರಾಜಕಾರಣಿಗಳಿಗಾದರೆ ಬೇರೆ ಹಿತಾಸಕ್ತಿಗಳನ್ನು ಗಮನಿಸುವ ಅಗತ್ಯವಿರುತ್ತದೆ.
ಹಾಗಿದ್ದರೆ ರಾಜಕಾರಣಿಗಳು ಸಾರ್ವಜನಿಕವಾಗಿ ಕಟುಸತ್ಯದ ಬದಲು ಜನರಿಗೆ ಇಷ್ಟವಾಗುವ ವಿಷಯ ಹೇಳಲಿ; ಆದರೆ ತಮ್ಮೊಳಗೆ ಸತ್ಯ ಏನೆಂಬುದನ್ನು ಅರ್ಥೈಸಿಕೊಂಡಿರಲಿ. ಸುಳ್ಳುಗಾರರಲ್ಲಿ ಎರಡು ರೀತಿಯವರಿರುತ್ತಾರೆ: ಸಿನಿಕರು ಅಥವಾ ನಾಚಿಕೆಯಿಲ್ಲದೆ ತಮ್ಮ ಲೆಕ್ಕಾಚಾರದ ಪ್ರಕಾರ ಸುಳ್ಳು ಹೇಳುತ್ತಿರುವವರು; ಬಹುತೇಕ ಸಾಮಾನ್ಯರಾದ ಇನ್ನೊಂದು ಬಗೆಯವರಿಗೆ ಸುಳ್ಳು ಹೇಳುವಾಗ ಪಾಪಪ್ರಜ್ಞೆ ಕಾಡುತ್ತಿರುತ್ತದೆ; ಸುಳ್ಳು ಹೇಳಬಾರದಿತ್ತು ಅನ್ನಿಸುತ್ತಿರುತ್ತದೆ. ಅವರು ತಮ್ಮ ಸುಳ್ಳನ್ನು ಸ್ವತಃ ನಂಬುತ್ತಾ ತಮ್ಮ ಆಪ್ತ ನಂಬಿಕೆಗಳನ್ನು ಉಳಿಸಿಕೊಂಡಿರುತ್ತಾರೆ. ಹಿಂದುತ್ವದ ನಾಯಕರು ಹಾಗೂ ಬಿಜೆಪಿಯ ದಿಗ್ಗಜರಲ್ಲಿ ಈ ಎರಡನೇ ಪ್ರವೃತ್ತಿಯನ್ನು ನಾನು ಹೆಚ್ಚಾಗಿ ಕಾಣುತ್ತಿದ್ದೇನೆ; ಜಾತ್ಯತೀತವಾದಿಗಳು ತಮ್ಮ ಬೆನ್ನುತಟ್ಟಬೇಕು, ಅದಕ್ಕೆ ಪೂರಕವಾದ ನಂಬಿಕೆಗಳನ್ನು ತಮ್ಮದಾಗಿಸಿಕೊಂಡು ಅವುಗಳನ್ನು ಹೇಳುತ್ತಿರಬೇಕು ಎಂದವರು ಬಯಸುತ್ತಿರುತ್ತಾರೆ.
ಆ ರೀತಿಯಲ್ಲಿ ಅವರು ‘ಜಾತ್ಯತೀತವಾದಿ ಸುಳ್ಳುಗಾರ’ರ ಗುಂಪಿಗೆ ಸೇರಿಕೊಳ್ಳುತ್ತಾರೆ. ಕ್ರಿ.ಶ. ೫೨ರಲ್ಲಿ ಸಂತ ಥಾಮಸ್ ಭಾರತಕ್ಕೆ ಕ್ರೈಸ್ತಮತವನ್ನು ತಂದನೆಂದು ಭಾರತೀಯ ಕ್ರೈಸ್ತರು ಏನು ಹೇಳುತ್ತಾರೋ ಅದನ್ನು ಇವರು ಕೂಡ ನಂಬುತ್ತಾರೆ (ಗಂಭೀರವಾದ ಕ್ರೈಸ್ತ ಇತಿಹಾಸಕಾರರು ಮತ್ತು ಹಿಂದಿನ ಪೋಪ್ ೧೬ನೇ ಬೆನೆಡಿಕ್ಟ್ ಕೂಡ ಇದನ್ನು ತಿರಸ್ಕರಿಸಿ ಆಗಿದೆ); ಅದು ಕ್ರೈಸ್ತ ಮತದಾರರಿಗೆ ಇಷ್ಟವಾಗಿ ಅವರು ತಮ್ಮ ಕಡೆಗೆ ಬರಬಹುದು ಎಂಬುದಷ್ಟೇ ಯೋಚನೆ. ಈ ಕಟ್ಟುಕಥೆಯನ್ನು ಹೇಳುತ್ತಾ ಹೋಗಿ ಅದನ್ನು ನಂಬುವುದಕ್ಕೂ ತೊಡಗುತ್ತಾರೆ. ಆದರೆ ಕ್ರೈಸ್ತರು ‘ಮುಸ್ಲಿಮರು ಮತ್ತು ಸೆಕ್ಯುಲರ್ವಾದಿ’ಗಳ ಹಾಗೆಯೇ ಹಿಂದುಗಳ ಭಾವನೆಗಳಿಗೆ ಕಿಲುಬುಕಾಸಿನ ಬೆಲೆಯನ್ನೂ ಕೊಡುವುದಿಲ್ಲ. ರಾಮಜನ್ಮಭೂಮಿ ಅಲ್ಲಿನ ದೇವಾಲಯಗಳ ವಿಷಯ ‘ಕೋಟ್ಯಂತರ ಭಾರತೀಯರ ಹೃದಯ’ಗಳಿಗೆ ಅತ್ಯಂತ ಆಪ್ತವಾದುದಾದರೂ ಯಾವುದೇ ಮುಲಾಜಿಲ್ಲದೆ ಅವರದನ್ನು ನಿರಾಕರಿಸುತ್ತಾರೆ.
ಈ ಅಂಶವನ್ನು ಗಮನಿಸಿ: ಅಲ್ಪಸಂಖ್ಯಾತರ ಹೃದಯಗಳಿಗೆ ಪ್ರಿಯವಾದ ಕಟುಸತ್ಯಗಳನ್ನು ಹಿಂದೂ ರಾಜಕಾರಣಿಗಳು ಏಕೆ ಹೇಳಬಾರದು? ತಮಗೆ ಅಲ್ಪಸಂಖ್ಯಾತರ ವೋಟುಗಳು ಬರಬಹುದೆಂದು ಅವರು ನಂಬಿದ್ದರೆ (ಕೆಲವರು ಹಾಗೆ ನಂಬಿದ್ದಾರೆ ಕೂಡ) ಅದು ವಿವೇಕವೆನಿಸದು. ಅವರ ಬಳಿ ಇದಕ್ಕಿಂತ ಗಂಭೀರವಾದ ಒಂದು ಲೆಕ್ಕಾಚಾರ ಕೂಡ ಇದೆ; ಗಾಂಧೀವಾದದ ಪ್ರಭಾವದಿಂದ ಬೆಳೆದವರು ಅಥವಾ ಸೆಕ್ಯುಲರ್ವಾದಿ ಪ್ರಚಾರಕ್ಕೆ ಮನಸೋತ ಮತದಾರರು ‘ಕೋಮುವಾದಿ’ ಎಂದು ಮಾಧ್ಯಮಗಳು ಚಿತ್ರಿಸಿದ ಅಭ್ಯರ್ಥಿಗಳಿಗೆ ಮತ ಹಾಕುವುದಿಲ್ಲ ಎಂಬುದೇ ಆ ಲೆಕ್ಕಾಚಾರ. ಈ ಮನೋಭಾವಕ್ಕೆ ದೀರ್ಘಾವಧಿಯ ಹಾಗೂ ಸಮಗ್ರ ಪರಿಹಾರ ಬೇಕಾಗುತ್ತದೆ; ಮಾಧ್ಯಮದ ಪಕ್ಷಪಾತದಿಂದ ದೂರನಿಂತು ಸ್ವತಂತ್ರ ನಿರ್ಧಾರ ಕೈಗೊಳ್ಳುವಂತೆ ಹಿಂದೂ ಜನಸಮುದಾಯವನ್ನು ಅಣಿಗೊಳಿಸಬೇಕು. ಅನ್ಯಮತೀಯರ ಬಗ್ಗೆ ಮುಸಲ್ಮಾನರು ಮತ್ತು ಕ್ರೈಸ್ತರು ಕನಿಷ್ಠ ತಮ್ಮ ನಡುವೆ ಯಾವ ಬಗೆಯ ನಿಂದೆ, ಅಪಪ್ರಚಾರಗಳನ್ನು ನಡೆಸುತ್ತಾರೆ ಅದಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ.
ಇನ್ನು ಹಿಂದೂ ಹಿತಾಸಕ್ತಿಗಳ ಮೇಲೆ ಕಣ್ಣಿಟ್ಟು ಅವುಗಳನ್ನು ಹೇಗೆ ಸಾಧಿಸಬಹುದು ಎಂದು ಚಿಂತಿಸುತ್ತಿರುವ ವ್ಯೂಹಾತ್ಮಕ (Strategies) ಕೇಂದ್ರ ಯಾವುದಾದರೂ ಇದೆಯೆ? ಹೆಚ್ಚು ಆಳವಾಗಿ ಯೋಜನೆಗಳನ್ನು ಹಾಕಿಕೊಳ್ಳುವ ಮತ್ತು ಮುಂದಿನ ಚುನಾವಣೆಯನ್ನು ಗೆಲ್ಲುವುದಕ್ಕಿಂತ ಹೆಚ್ಚಿನ ಗುರಿ ಇರಿಸಿಕೊಂಡ ಕೇಂದ್ರ ಇದೆಯೆ? ಆರೆಸ್ಸೆಸ್ ಅಂತಹ ಒಂದು ಕೇಂದ್ರ ಎನ್ನಬಹುದು. ಆದರೆ ವಿರೋಧ ಪಕ್ಷದಲ್ಲಿದ್ದಾಗ ಸುದೀರ್ಘಕಾಲದಿಂದ ಹಿಂದೂ ಮನೋಭಾವವನ್ನು ರೂಢಿಸಿಕೊಂಡಿದ್ದ ಒಂದು ಪಕ್ಷ ಸರ್ಕಾರ ರಚಿಸುತ್ತಲೇ ತನ್ನ ಹಳೆಯ ಹಿಂದೂಬೇರಿನಿಂದ ದೂರವಿರಲು ಪ್ರಯತ್ನಿಸುತ್ತಿದೆಯೇ ಎನ್ನುವ ಸಂಶಯ ಬರುವಂತಾಗಿದೆ; ಇದರಲ್ಲಿ ಪ್ರಸ್ತುತ ಕೇಂದ್ರದ ಪ್ರಭಾವ ನಡೆಯಬಹುದೆ?
ಅಲ್ಪಸಂಖ್ಯಾತರಿಗೆ ಅಹಿಂಸೆ
ಕ್ರೈಸ್ತ ಮತ್ತು ಇಸ್ಲಾಂ ಮತಗಳ ಮೂಲಭೂತ ನಂಬಿಕೆಗಳು ಅಸತ್ಯವಿರಬಹುದು; ಆದರೆ ಅವರು ತಮ್ಮದು ಸತ್ಯ ಹಾಗೂ ಇತರ ಮತಗಳದ್ದು ಅಸತ್ಯ ಎಂದು ನಂಬಿರುತ್ತಾರೆ. ಈ ನಂಬಿಕೆಯ ಕಾರಣದಿಂದ ತಮ್ಮದೇ ಸರಿ ಎನ್ನುವ ಮನೋಭಾವದಿಂದ ಇತರ ಮತಗಳವರನ್ನು ಹಿಂಸಿಸುತ್ತಾರೆ; ಇಂದು ಅವರು ತಮ್ಮ ತತ್ತ್ವದ ಅನುಷ್ಠಾನದಲ್ಲಿ ಅತ್ಯುತ್ಸಾಹ ತೋರುತ್ತಿಲ್ಲ ಎನ್ನುವುದು ಅದೃಷ್ಟವೆನ್ನಬೇಕು.
ಆಧುನಿಕ ಭಾರತದಲ್ಲಿ ಅವರನ್ನು ಬಹಳಷ್ಟು ಪಳಗಿಸಲಾಗಿದೆ; ಅವರ ಸ್ವಹಿತಾಸಕ್ತಿಗಳು ಸಂಸ್ಥೆಗಳ ಮೂಲಕ ಸಾಧಿತವಾಗುತ್ತಿವೆ; ಶಾಸನ ಮತ್ತು ದೈನಂದಿನ ರಾಜಕೀಯದಲ್ಲಿ ಸಂವಿಧಾನದತ್ತ ಹಕ್ಕು-ಸವಲತ್ತುಗಳ ರಕ್ಷಣೆಗೆ ಅವರು ಒತ್ತುನೀಡುತ್ತಿದ್ದಾರೆ.
ದೇಶದ ಅಲ್ಪಸಂಖ್ಯಾತರ ವರ್ತನೆಯಲ್ಲಿ ಹಿಂದೂ ದೃಷ್ಟಿಕೋನದಿಂದ ಟೀಕಿಸಬಹುದಾದ ಅಂಶಗಳಿಗೆ ಕೊರತೆಯಿಲ್ಲ; ಆದರೆ ಇಲ್ಲಿ ನಮ್ಮ ಉದ್ದೇಶ ಅದಲ್ಲ. ಅವರ ಸವಾಲಿಗೆ ಹಿಂದುಗಳ ಉತ್ತರ ಏನು? ಮುಖ್ಯವಾಗಿ ಕಾನೂನನ್ನು ಕೈಗೆತ್ತಿಕೊಳ್ಳುವಂತಹ ಸಿಟ್ಟು ಬರುವಾಗ ಹಿಂದುಗಳು ಏನು ಮಾಡಬೇಕು ಎಂಬುದು ಪ್ರಶ್ನೆ. ಕೆಲವು ಸಲ ಸಂಘರ್ಷ ಅನಿವಾರ್ಯವಾಗಿರುತ್ತದೆ; ಆದರೆ ಏನೋ ಅನ್ನಿಸಿತೆಂದು ಸುಲಭದಲ್ಲಿ ಘರ್ಷಣೆಗೆ ಇಳಿಯಬಾರದು. ಹಾಗೆ ಒಂದು ಕಡೆಯವರು ಇಳಿದಲ್ಲಿ ಅದನ್ನು ರಾಜತಾಂತ್ರಿಕ ವಿಧಾನದ ಮೂಲಕ ಸರಿಪಡಿಸಬಹುದು. ಬೇರೆ ಎಲ್ಲ ವಿಧಾನಗಳು ವಿಫಲವಾದಾಗ ಮಾತ್ರ ಘರ್ಷಣೆಯ ಮಾರ್ಗವನ್ನು ಒಪ್ಪಿಕೊಳ್ಳಬೇಕು. ಮಹಾಭಾರತ ಯುದ್ಧಕ್ಕೆ ಮುನ್ನ ಶ್ರೀಕೃಷ್ಣ ಅದೇ ಮಾರ್ಗವನ್ನು ಅನುಸರಿಸಿದ; ಅದು ಹಿಂದೂ ವಿಧಾನವಾಗಿದೆ.
‘ಒಂದು ಕೆನ್ನೆಗೆ ಹೊಡೆದಾಗ ಇನ್ನೊಂದನ್ನು ತೋರಿಸುವಂತಹ’ ಗಾಂಧೀವಾದದ ಅಹಿಂಸೆಯ ಅತಿರೇಕ ನಮಗೆ ಬೇಡ (ವಿಭಜನೆಯ ವೇಳೆ ಜೀವ ಉಳಿಸಿಕೊಳ್ಳಲು ಪಾಕಿಸ್ತಾನದ ಭಾಗದಿಂದ ಭಾರತಕ್ಕೆ ಬಂದಿದ್ದ ಹಿಂದೂ ನಿರಾಶ್ರಿತರಿಗೆ ಗಾಂಧಿಜೀ `ವಾಪಸು ಹೋಗಿ ಹಂತಕರಿಗೆ ಬಲಿಯಾಗಿ’ ಎಂದು ಸಲಹೆ ನೀಡಿದ್ದರು); ಆದರೆ ಘರ್ಷಣೆಗೆ ಇಳಿಯುವ ಉಮೇದು ಬೇಡ. ಅಲ್ಪಸಂಖ್ಯಾತರ ನಂಬಿಕೆಗಳು ನಮ್ಮದು ಅಲ್ಲದಿರಬಹುದು; ಅವು ನಮಗೆ ಇಷ್ಟವಾಗದಿರಬಹುದು; ಆದರೂ ಮೌನವಾಗಿರುವ ಘನತೆಯನ್ನು ನಾವು ತೋರಿಸಬೇಕು. ವಿಘ್ನಸಂತೋಷಿಗಳಾದ ಜಾತ್ಯತೀತವಾದಿಗಳು ಏನೇ ಹೇಳಿಕೊಳ್ಳಲಿ; ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿರುವಂತೆ ಹಿಂದುಗಳು ನೋಡಿಕೊಳ್ಳಬೇಕು; ಸೆಕ್ಯುಲರ್ವಾದಿಗಳ ಉಪದೇಶ ಇಲ್ಲಿ ಅನಗತ್ಯ; ಏಕೆಂದರೆ ಹಾಗೆ ನಡೆದುಕೊಳ್ಳುವುದು ಹಿಂದುಗಳ ಜೀವನ ವಿಧಾನ.
ಅಲ್ಪಸಂಖ್ಯಾತರಿಗೇನೋ ರಿಯಾಯಿತಿ ತೋರಿಸುತ್ತಿದ್ದೇವೆ ಎಂಬಂತೆ ಕೂಡ ಹಿಂದುಗಳು ಹಾಗೆ ನಡೆದುಕೊಳ್ಳುವುದು ಬೇಡ. ಈ ಸಹನೆ ಮತ್ತು ಬಹುಮುಖೀ ಸಂಸ್ಕೃತಿಗಳು ಅಲ್ಪಸಂಖ್ಯಾತರಂತೆಯೇ ಬಹುಸಂಖ್ಯಾತರಿಗೆ ಕೂಡ ಅನುಕೂಲಕರವಾಗಬಹುದು. ಎಲ್ಲ ಸಮುದಾಯಗಳಿಗೆ ಸುರಕ್ಷತೆ ಇರಬೇಕು. ಇದಕ್ಕೆ ಅಲ್ಪಸಂಖ್ಯಾತರು (ಈ ಪದವನ್ನು ನಾವು ಬಳಸಬಹುದಾದರೆ) ಕೂಡ ಅಷ್ಟೇ ಜವಾಬ್ದಾರರಾಗಿರುತ್ತಾರೆ.
ಒಟ್ಟಿನಲ್ಲಿ ಒಂದು ಹಿಂದೂ ಸರ್ಕಾರವೆಂದರೆ ಅಲ್ಪಸಂಖ್ಯಾತರಿಗೆ ಅಪಾಯಕಾರಿಯಲ್ಲ, ಹಾಗೆ ಆಗಬಾರದು. ವಿಶ್ವ ಹಿಂದೂ ಪರಿಷತ್ತಿನ ಒಂದು ಹಳೆಯ ಘೋಷಣೆ ಹೀಗಿತ್ತು: ‘ಹಿಂದೂ ಭಾರತ, ಜಾತ್ಯತೀತ ಭಾರತ’. ಹಿಂದೂ ಜಾಗೃತಿ ಎಂದರೆ ಅಲ್ಪಸಂಖ್ಯಾತರಿಗೆ ತೊಂದರೆ; ಹಿಂದುತ್ವ ಹೆಚ್ಚಿದಷ್ಟು ಅಲ್ಪಸಂಖ್ಯಾತರ ದಮನ ಅಧಿಕ ಎನ್ನುವುದು ಸೆಕ್ಯುಲರ್ವಾದಿಗಳ ಒಂದು (ಅಪ)ಪ್ರಚಾರ ಮಾತ್ರ. ಇದು ಪಾಕಿಸ್ತಾನದ ಪರಿಸ್ಥಿತಿಯ ಚಿತ್ರಣ; ಅಲ್ಲಿ ಪ್ರಮುಖ ಮತ ಪ್ರಬಲವಾದಷ್ಟೂ ಹಿಂದೂ ಅಲ್ಪಸಂಖ್ಯಾತರು ಕಷ್ಟಕ್ಕೀಡಾಗುತ್ತಿದ್ದಾರೆ.
ಅದೇ ಕಾರಣದಿಂದ ‘ಅಲ್ಪಸಂಖ್ಯಾತ’ ಎನ್ನುವ ಪದ ದಾರಿ ತಪ್ಪಿಸುವಂಥದ್ದಾಗಿದೆ. ಕೆಥೊಲಿಕ್ ಫ್ರಾನ್ಸಿನ ಪ್ರೊಟೆಸ್ಟೆಂಟರಿಗೆ ಅಥವಾ ಆಂಗ್ಲಿಕನ್ ಇಂಗ್ಲೆಂಡಿನ ಕೆಥೊಲಿಕರಿಗೆ ಅದು ಅನ್ವಯವಾಗಬಹುದು; ಏಕೆಂದರೆ ಅವರು ಅಲ್ಲಿ ಒಂದು ಕಾಲದಲ್ಲಿ ದ್ವಿತೀಯದರ್ಜೆ ನಾಗರಿಕರಾಗಿದ್ದರು. ಗುಲಾಮಗಿರಿಯ ಇತಿಹಾಸವಿರುವ ಅಮೆರಿಕದ ಕರಿಯರಿಗೆ ಕೂಡ ಅದು ಅನ್ವಯಿಸೀತು; ‘ಅಲ್ಪಸಂಖ್ಯಾತ’ ಎಂದೊಡನೆ ಆತ ದುಃಖ, ಅವಮಾನಗಳಿಗೆ ಗುರಿಯಾದವ ಎನ್ನುವ ಪರಿಸ್ಥಿತಿಯಿರುವ ಎಲ್ಲ ಸಮುದಾಯಗಳಿಗೆ ಅದು ಹೊಂದಬಹುದು. ಹಿಂದುಗಳು ಯಾವುದೇ ಕಾಲದಲ್ಲಿ ತಮ್ಮಲ್ಲಿನ ಅಲ್ಪಸಂಖ್ಯಾತರನ್ನು ಆ ರೀತಿ ಕಂಡದ್ದಿಲ್ಲ. ಪಾರ್ಸಿಗಳು, ಯಹೂದ್ಯರು, ಸಿರಿಯನ್ ಕ್ರೈಸ್ತರು, ಆರ್ಮೇನಿಯನರು, ಟಿಬೆಟಿಯನ್ ಬೌದ್ಧರು ಮತ್ತು ಮೋಪ್ಳಾ ಮುಸ್ಲಿಮರು ಕೂಡ ಈ ನಿಟ್ಟಿನಲ್ಲಿ ಹಿಂದೂ ಸಮಾಜ ತೋರಿದ ಔದಾರ್ಯಕ್ಕಾಗಿ ಕೃತಜ್ಞರಾಗಿರಬೇಕು.
ಸಾಚಾರ್ ವರದಿ
‘ಅಲ್ಪಸಂಖ್ಯಾತ’ರೆಂಬ ಕಾರಣಕ್ಕಾಗಿ ಮುಸ್ಲಿಮರು ಭಾರೀ ಪ್ರಮಾಣದ ಸರ್ಕಾರಿ ಸವಲತ್ತುಗಳಿಗೆ ಅರ್ಹರಾಗಿದ್ದಾರೆ (ಅವರಿಗಾದ ಎಲ್ಲ ನಷ್ಟವನ್ನೂ ಹಿಂದುಗಳೇ ತುಂಬಿಕೊಡಬೇಕು ಎಂಬಂತೆ) ಎಂದು (ಪ್ರಧಾನಿ ಮನಮೋಹನಸಿಂಗ್ ಅವರ ಕಾಲದ) ರಾಜಿಂದರ್ ಸಾಚಾರ್ ಸಮಿತಿ ಶಿಫಾರಸು ಮಾಡಿತ್ತು. ಸವಲತ್ತುಗಳನ್ನು ನೀಡಿದಾಗ ಮುಸ್ಲಿಮರು ಪ್ರತ್ಯೇಕವಾಗಿರುವುದು (exclusion) ತಪ್ಪುತ್ತದೆ; ಏಕೆಂದರೆ ಮುಸ್ಲಿಮರು ಸಮಾಜದಲ್ಲಿ ಬೆರೆಯದೆ ಇರುವುದಕ್ಕೆ ಅವರ ಪ್ರತ್ಯೇಕತಾಪರ ಮತಶಾಸ್ತ್ರ ಕಾರಣವಲ್ಲ, ಹಿಂದುಗಳೇ ಕಾರಣ ಎಂಬುದು ಸಾಚಾರ್ ಅಭಿಪ್ರಾಯ. ಐತಿಹಾಸಿಕ ಕಾರಣ ನೀಡಿ, ಈ ರೀತಿ ಪರಿಹಾರ ಸವಲತ್ತುಗಳನ್ನು ಗಿಟ್ಟಿಸಿಕೊಳ್ಳುವುದಕ್ಕೆ ನನ್ನ ವಿರೋಧವಿದೆ; ಅಜ್ಜ ಕಷ್ಟಪಟ್ಟನೆಂದು ಮೊಮ್ಮಗನಿಗೆ ಪರಿಹಾರ ನೀಡುವುದಲ್ಲ. (ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಇದೇ ಸೆಕ್ಯುಲರ್ವಾದಿಗಳು, ಅವರ ಪೂರ್ವಿಕರು ಮಾಡಿದ ತಪ್ಪಿಗೆ ಇವತ್ತಿನ ಮುಸ್ಲಿಮರು ನಷ್ಟಕ್ಕೊಳಗಾಗಬೇಕಿಲ್ಲ ಎಂದು ವಾದಿಸಿದ್ದರಲ್ಲವೆ?) ಒಂದು ವೇಳೆ ಪರಿಹಾರ ಕೊಡುವುದಾದರೂ ಕೂಡ ಹಿಂದೂ ಸಮುದಾಯಕ್ಕೆ ನಷ್ಟ ಉಂಟುಮಾಡಿ ಪರಿಹಾರ ನೀಡುವುದು ಯಾವ ನ್ಯಾಯ?
ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ತಮಗೆ ಅನ್ಯಾಯವಾಗುತ್ತಿದೆ ಎಂದು ಭಾವಿಸಲು ಕಾರಣವೆಂದರೆ, ಅವರು ‘ಅಲ್ಪಸಂಖ್ಯಾತ’ರಾಗಿರುವುದು. ತಾವು ಬಹುಸಂಖ್ಯಾತರಾಗಿರುವ ಒಂದು ದೇಶ ಬೇಕೆನ್ನುವ ಅಭಿಪ್ರಾಯದಿಂದ ಕೇಳಿ ಅವರು ಪಾಕಿಸ್ತಾನವನ್ನು ಪಡೆದುಕೊಂಡರು; ಆದರೂ ಅವರು ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವುದನ್ನು ಇಷ್ಟಪಡುವುದಿಲ್ಲ. ಭಾರತದಲ್ಲಿ ‘ಮುಸ್ಲಿಮ್’ ಆಗಿರುವುದು ಒಂದು ಸಮಸ್ಯೆ ಎನ್ನುವುದಾದರೆ ಭಾರತದಲ್ಲಿ ‘ಭಾರತೀಯ’ ಆಗಿರುವುದೇ ಅದಕ್ಕಿರುವ ಪರಿಹಾರ; ಶೇ. ೧೪ರ ಭಾಗ ಆಗಿರುವುದಲ್ಲ; ಶೇ. ೧೦೦ರ ಭಾಗವಾಗಿರಬೇಕು. ಅದೇ ನಿಜವಾದ ಜಾತ್ಯತೀತತೆ; ಮತ್ತು ಅದರಿಂದ ‘ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ’ ಎನ್ನುವ ಭಯ (ಬಹುತೇಕ ಕಾಲ್ಪನಿಕ) ಪೂರ್ತಿಯಾಗಿ ಇಲ್ಲವಾಗುವುದು. ನಿಜವಾದ ಮತ್ತು ಆಳವಾದ ಅಹಿಂಸೆ ಎಂದರೆ – ಅಲ್ಪಸಂಖ್ಯಾತರು ಎನ್ನುವ ಭಾವನೆಯನ್ನು ಪೂರ್ತಿಯಾಗಿ ಕೈಬಿಡುವುದು, ಮುಸ್ಲಿಮರನ್ನು ಕೇವಲ ಭಾರತೀಯರೆಂದು ಪರಿಗಣಿಸುವುದು ಮತ್ತು ಅವರಿಗೆ ಹಿಂದುಗಳಿಗೆ ಇರುವಂಥದೇ ಹಕ್ಕುಗಳು (ಸವಲತ್ತುಗಳು) ಮತ್ತು ಕರ್ತವ್ಯಗಳನ್ನು ನೀಡುವುದು.
‘ಅಲ್ಪಸಂಖ್ಯಾತರು’ ಎನ್ನುವ ಜಾತ್ಯತೀತವಾದಿಗಳ ಅಬ್ಬರದ ಬೊಬ್ಬೆ ಏಳುವುದು ನಿಶ್ಚಿತ. ಹಿಂದುಗಳು ತಪ್ಪು ಮಾಡುತ್ತಿದ್ದಾರೆಂದು ಸಾಧ್ಯವಾದ ಎಲ್ಲ ಕಡೆ ಅವರು ಪ್ರಸ್ತಾವಿಸದೆ ಇರುವುದಿಲ್ಲ. ಅಷ್ಟೊಂದು ನಿರೀಕ್ಷಿತವಲ್ಲದ ಅಂಶವೆಂದರೆ, ಬಿಜೆಪಿಯ ಬಹಳಷ್ಟು ಜನ ಕೂಡ ‘ಅಲ್ಪಸಂಖ್ಯಾತರು’ ಎನ್ನುವ ಗುಮ್ಮವನ್ನು ಅದೇ ರೀತಿ ಒಪ್ಪಿಕೊಳ್ಳುತ್ತಾರೆ ಮತ್ತು ಎಲ್ಲ ಸವಲತ್ತುಗಳಿಗೆ ಅವರು ಅರ್ಹರೆಂದು ವಾದಿಸಲೂಬಹುದು. ಅದೇ ಕಾರಣದಿಂದ ಅವರು ಹಿಂದುಗಳ ಬೇಡಿಕೆಯನ್ನು ‘ವಿಚಿತ್ರ’ ಎನ್ನುತ್ತಾರೆ ಮತ್ತು ತಮ್ಮ ಹಿಂದೂ ಬೇರುಗಳನ್ನು ನೆನಪಿಟ್ಟುಕೊಂಡಿರುವ ಪಕ್ಷದ ಇತರ ಸದಸ್ಯರನ್ನು ‘ಪಳೆಯುಳಿಕೆಗಳು’ ಎನ್ನುತ್ತಾರೆ. ಅದೇ ಕಾರಣದಿಂದ ಅವರು ಹಿಂದುಗಳ ವಿರುದ್ಧ ತಾರತಮ್ಯವನ್ನು ನಿಲ್ಲಿಸುವುದೆಂದರೆ ‘ಅಭಿವೃದ್ಧಿ’ಗೆ ತೊಡರುಗಾಲು ಹಾಕಿದಂತೆ ಎಂದು ವಾದಿಸುತ್ತಾರೆ.
ವಾಸ್ತವವೆಂದರೆ, ತಾರತಮ್ಯದ ನಿವಾರಣೆಯು ಭ್ರಷ್ಟಾಚಾರ ಮತ್ತು ವಿಳಂಬನೀತಿಗಳ ನಿರ್ಮೂಲನದಲ್ಲಿಯೂ ಒಂದು ದಿಟ್ಟ ಕ್ರಮವಾಗುತ್ತದೆ. ಅದು ಸಾರ್ವಜನಿಕ ರಂಗವನ್ನು ಮುಕ್ತ ಗೊಳಿಸಿದಂತೆ ಮತ್ತು ಕೃತಕ ಜಟಿಲತೆಗಳನ್ನು ತೆರವುಗೊಳಿಸಿದಂತೆ. ಅದರಿಂದ ಜೀವನ ತುಂಬ ಸುಲಭವಾಗುತ್ತದೆ ಮತ್ತು ಆರ್ಥಿಕತೆ ಹಾಗೂ ಸಮಾಜದ ಇತರ ಆಯಾಮಗಳು ಅರಳಿಕೊಳ್ಳುತ್ತವೆ. ಸಮತಟ್ಟಾದ ಆಟದಬಯಲು ನಿರ್ಮಾಣವಾದಾಗ ಘರ್ಷಣೆಗೆ ಅವಕಾಶ ಇರುವುದಿಲ್ಲ. ಈ ಬಗೆಯ ಸರಳ ಸಮಾನತೆಯು ಸಾಮಾಜಿಕ ಶಾಂತಿಗೆ ದಾರಿಯಾಗುತ್ತದೆ.
ಇದೇ ಸರಿಯಾದ ಕಾಲ
ನೆಹರೂ ನಂತರದ ಭಾರತದಲ್ಲಿ ಒಂದು ಹಿಂದೂ ಸರ್ಕಾರದ ಮುಂದಿರುವ ಸವಾಲುಗಳು ಗಂಭೀರ ಆದಂಥವು. ಹಿಂದೂ ವಿರೋಧಿ ವಿಧಿಗಳನ್ನು ತಿದ್ದುವ ಮೂಲಕ ಸಂವಿಧಾನವನ್ನು ಸರಿಪಡಿಸುವ ಕೆಲಸಕ್ಕೆ ಹೆಚ್ಚಿನ ಕೌಶಲ ಬೇಕಾಗಬಹುದು. ಮೊದಲನೆಯದಾಗಿ ಅದಕ್ಕೆ ಇಚ್ಛಾಶಕ್ತಿ ಬೇಕು; ಅದು ಈಗ ಅಷ್ಟಾಗಿ ಕಂಡುಬರುತ್ತಿಲ್ಲ. ಸರಿಯಾದ ಪ್ರೇರಣೆ ದೊರೆತಾಗ ಮಾತ್ರ ಕೆಲಸ ಆರಂಭವಾಗಬಹುದು.
ಕಾದುಕೂರುವ ಕಾಲ ಈಗ ಮುಗಿದಿದೆ. ಹೊಸ ಸರ್ಕಾರವು ಅಭಿವೃದ್ಧಿ, ಹೂಡಿಕೆ ಮತ್ತು ಉದ್ಯಮಶೀಲತೆಗೆ ಅವಕಾಶ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂತಾದ ಕ್ಷೇತ್ರಗಳಲ್ಲಿ ಈಗಾಗಲೆ ಕಾರ್ಯರಂಭ ಮಾಡಿದೆ. ಹಿಂದೂ ಕಾರ್ಯಕರ್ತರು ಸರ್ಕಾರವನ್ನು ಸರಿಯಾಗಿ ನಡೆಸಬಲ್ಲರು ಎಂಬುದಕ್ಕೆ ಇದು ನಿದರ್ಶನ. ಹಿಂದೂ ಕಾರ್ಯಸೂಚಿಯ ವಿಷಯದಲ್ಲಿ ಬಿಜೆಪಿಯ ಕೆಲವು ಮಂತ್ರಿಗಳ ನಡವಳಿಕೆಯನ್ನು ಗಮನಿಸಿದರೆ ಇದು ಸಡಿಲಾಗಬಹುದು ಎನಿಸುತ್ತದೆ; ಅದಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಗಬಹುದು. ಒಂದು ಹಳೆಯ ಮಾತಿನಲ್ಲಿ ಹೇಳುವಂತೆ, ಮನೆಯೊಳಗೇ ಕುಳಿತರೆ ಪಶ್ಚಾತ್ತಾಪ ಪಡಬೇಕಾದೀತು; ನದಿಯನ್ನು ದಾಟಿದರೆ ಭಾರೀ ಅದೃಷ್ಟ ನಮ್ಮದಾಗಬಹುದು. ‘ಅಲ್ಪಸಂಖ್ಯಾತರ’ ಸವಾಲಿನ ವಿಷಯದಲ್ಲಿ ಪರಿಶುದ್ಧ ಮತ್ತು ದಿಟ್ಟ ಕೆಲಸಕ್ಕೆ ಇದು ಸಕಾಲ.