ರಾಯರ ಮರ್ಲಾಟಿಕೆ ಕ್ಲೈಮ್ಯಾಕ್ಸ್ ತಲಪಿದ್ದು ಹೇಗೆ?
ಕುದುರೆಬೆಟ್ಟು ಎಂಬ ಊರಿನಲ್ಲಿ `ಸುಗಂಧಿರಾಮ’ ಎಂಬ ಹೆಸರಿನ ಕಟ್ಟಡ ಮೇಲೆದ್ದು ಬಂದದ್ದೇ ಒಂದು ರೋಚಕ ಕಥೆ.
ರಾಮರಾಯರು ಪೂಜೆಮಾಡಿ ತಿಂಡಿ ತಿಂದು ಹಾss…. ಆss…. ಎಂದು ಆಕಳಿಸುತ್ತ ವರಾಂಡದಲ್ಲಿ ಕೂತಿದ್ದರು. ಆವತ್ತು ಏಕಾದಶಿ ಆದದ್ದರಿಂದ ಎಲ್ಲೂ ಪುರೈತಿಕೆ ಇರ್ಲಿಲ್ಲ. ಹಾಗಾಗಿ ಸುಮ್ಮನೆ ಕೂತ್ಕೊಳ್ಳುವುದೇ ಅವರ ಕೆಲಸವಾಗಿತ್ತು. ಆಗ ಅಲ್ಲಿಗೆ ಭುಜಂಗ ಶೆಟ್ರು ಬೊಂಬಾಯಿಯ ಬಿಲ್ಡರ್, ಅವರ ಅಸಿಸ್ಟೆಂಟ್ ಒಬ್ಬರನ್ನು ಕರ್ಕೊಂಡು ಬಂದ್ರು. ಬಂದ ಕಾರಣ ಏನು ಅಂತ ಕೇಳಿದ್ರು. ಭುಜಂಗಶೆಟ್ರು, “ರಾಯರೆ…. ಈ ಕುದುರೆಬೆಟ್ಟು ಅನ್ನೋದು ಸಿಟಿಯಿಂದ ಹತ್ತೇ ಮೈಲು ದೂರದಲ್ಲುಂಟು. ಆದ್ರೆ ಎಂತ ಹೇಳುದು? ಸಿಟಿದ್ದು ಯಾವ ಅನುಕೂಲ ಸಾ ಇಲ್ಲಿ ಇಲ್ಲ. ಅಲ್ಲಿ ನೋಡಿದ್ರೆ ಸಿಟಿಯಲ್ಲಿ ಒಂದು ಮೆಟ್ಟು ಜಾಗ ಸಾ ಇಲ್ಲ. ಸಿಟಿ ಬಿಟ್ಟು ಜನ ಈಚೆ ಈಚೆ ಬರ್ಲಿಕ್ಕೆ ಶುರು ಮಾಡಿದ್ದಾರೆ. ಅದೆಂಥದ್ದೋ ಐಟಿ ಪಾರ್ಕ್ ಅಂತೆ, ಇಂಡಸ್ಟ್ರಿಯಲ್ ಎಸ್ಟೇಟ್ ಅಂತೆ ಅವೆಲ್ಲ ನಮ್ಮ ಕುದುರೆಬೆಟ್ಟಿನ ರೂಟಿಗೇ ಬಂದಿದೆ”.
“ಶೆಟ್ರೇ…. ನೀವೆಲ್ಲ ಎಂತಕ್ಕೆ ಬಂದದ್ದು ಅಂತ ಕೇಳಿದ್ರೆ ನೀವು ಎಂತದ್ದೊ ಪರ್ಕಟ್(ಹಳೇ) ಪುರಾಣ ಹೇಳ್ತಾ ಇದ್ದೀರಿ?”
“ವಾಯ್…. ನಿಲ್ಲಿ ರಾಯರೇ ಪೂರ ಹೇಳ್ತೇನೆ ಕೇಳಿ. ಸಿಟಿಯಲ್ಲಿ ಎಲ್ಲಿ ಸಾ ಜಾಗ ಇಲ್ಲ ಅಂತ ಹೇಳಿದೆ ಅಲ್ವಾ? ಇಲ್ಲಿ ಜಾಗ ಉಂಟು. ನಿಮ್ಮ ಮನೆ, ತೋಟ ಇರುವ ಜಾಗದಲ್ಲಿ ಚೆಂದದ ಒಂದು ಅಪಾರ್ಟ್ಮೆಂಟ್ ಎಬ್ಬಿಸುವ. ಐಟಿ ಪಾರ್ಕಿನ ಜನಕ್ಕೆ ಹಳ್ಳಿಗೆ ಹಳ್ಳಿಯೂ ಸಿಕ್ಕಿದ ಹಾಗೆ ಆಯ್ತು. ಕೆಲಸಕ್ಕೆ ಹೋಗುವವರಿಗೆ ಭಾರಿ ಹತ್ರ ಇದ್ದ ಹಾಗೂ ಆಯ್ತು. ಐಟಿ ಪಾರ್ಕು ಇಲ್ಲಿಯೇ ಅಲ್ವಾ? ಆರೇಳು ಮೈಲಿನ ಒಳಗೆ, ಹೂಸು ಬಿಟ್ರೆ ಕೇಳ್ತದೆ” ಅಂದ್ರು.
“ಅಲ್ಲ ಶೆಟ್ರೇ…. ಅಪಾರ್ಟ್ಮೆಂಟ್ ಎಬ್ಬಿಸೂದಕ್ಕೆ ನನ್ನ ಜಾಗವೇ ಆಗಬೇಕಾ? ಬೇರೆಯವ್ರದ್ದು ಎಂತಾಗಿದೆ?”
“ನೋಡಿ ರಾಯರೇ…. ಸರಿಸುಮಾರು ಎರಡೂವರೆ ಎಕರೆಯಷ್ಟು ಜಾಗ ಹೈವೆಗೆ ಹತ್ತಿರ ಇರೂದು ನಿಮ್ಮದು ಒಬ್ರದ್ದೇ. ಬೇರೆ ಬೇರೆಯವರ ತುಂಡು ತುಂಡು ಜಾಗ ತೆಕ್ಕೊಂಡು ಎಲ್ಲ ಒಟ್ಟುಮಾಡಿ ಅಪಾರ್ಟ್ಮೆಂಟ್ ಎಬ್ಬಿಸೂದಕ್ಕಿಂತ ನಿಮ್ಮದೇ ಜಾಗದಲ್ಲಿ ಕಟ್ಟುವುದು ಒಳ್ಳೇಯದು ಅಂತ ಎಣಿಸಿ ಲೆಕ್ಕಹಾಕಿದ್ದು ನಾವು. ಇವರು ಬೊಂಬಾಯಿಯ ದೊಡ್ಡ ಬಿಲ್ಡರ್. ಊರಿನವರೇ, ಆಚೆ ಹೋಗಿ ತುಂಬ ವರ್ಷ ಆಯ್ತು. ಇವರ ತಂದೆಯ ಕಾಲದಿಂದಲೇ ಅಲ್ಲಿ ಇದ್ದಾರೆ. ಸಿಟಿಯಲ್ಲಿ ತುಂಬಾ ಫ್ಲ್ಯಾಟ್ಗಳು ಏಳ್ತಾ ಉಂಟಲ್ವಾ? ಅವುಗಳಲ್ಲಿ ಸುಮಾರು ಅರ್ಧಕ್ಕಿಂತ ಹೆಚ್ಚು ಇವರೇ ಕಟ್ತಾ ಇರೂದು. `ತೂಲೆ ಪಾತೆರ್ಲೆ (ನೋಡಿ ಮಾತಾಡಿ)” ಅಂತ ಬಿಲ್ಡರ್ನ ಹತ್ರ ಹೇಳಿದ್ರು.
ಅವನು ಗಂಟಲು ಸರಿ ಮಾಡಿಕೊಂಡು, ಸ್ವಲ್ಪ ದೇಶಾವರಿ ನಗೆ ಸೇರಿಸಿಕೊಂಡು ತಾನು ನಿರ್ಮಿಸಲಿಕ್ಕಿರುವ ಅಪಾರ್ಟ್ಮೆಂಟ್ನ ರೀತಿ-ನೀತಿ ಎಲ್ಲ ವಿವರಿಸಿದ್ರು. ಒಟ್ಟು ಜಾಗಕ್ಕೆ ಎರಡೂವರೆ ಕೋಟಿ ಕೊಡ್ತೇವೇಂತಲೂ, ಮಾತ್ರ ಅಲ್ಲ ಒಂದು ಮನೆ ಫ್ರೀ ಕೊಡ್ತೇವೇಂತಲೂ ಹೇಳಿದ. ರಾಯರು ಒಂದು ಸರ್ತಿ ಬಾಯಿ ಆss….ಮಾಡಿ ಕೂತು ಕೇಳ್ತಾ ಇದ್ದವರು ಸ್ಟನ್ ಆದ್ರು.
ರಾಯರು ಬ್ಯಾಂಕ್ನಲ್ಲಿ ಸರ್ವಿಸ್ ಮಾಡಿ ರಿಟೈರ್ ಆದವರು. ಸರ್ವಿಸ್ನಲ್ಲಿದ್ದಾಗ ಊರೂರು ತಿರುಗಿದವರು. ಬೊಂಬಾಯಿ ಕಲ್ಕತ್ತಾ ಎಲ್ಲ ನೋಡಿ ಬಂದವರು. ರಿಟೈರ್ ಆದ್ಮೇಲೆ ಪಿತ್ರಾರ್ಜಿತ ಆಸ್ತಿ ಹಾಳಾಗ್ಬಾರ್ದು ಅಂತ ಕುದುರೆಬೆಟ್ಟಿನಲ್ಲಿ ಇದ್ದು ತೋಟ, ಮನೆ ಎಲ್ಲ ನೋಡಿಕೊಂಡು ಇದ್ರು. ಅವರಿಗೆ ದುಡ್ಡಿನ ಆಂಕ್ (ವಿಪರೀತ ಆಸೆ). ರಿಟೈರ್ ಆದ ಮೇಲೆ ಸುಮ್ಮನೆ ಕುಳಿತ್ಕೊಳ್ಳಿಕ್ಕೆ ಅವರಿಗೆ ಮನಸ್ಸು ಕೇಳ್ಳೇ ಇಲ್ಲ. ಯಾರೋ `ರಾಯರೆ ಗಣಹೋಮ, ಸತ್ಯನಾರಾಣಪೂಜೆ, ಶ್ರಾದ್ಧ ಇದಿಷ್ಟು ಮಾಡ್ಲಿಕ್ಕೆ ಶುರು ಮಾಡಿ, ಕೈ ತುಂಬ ದುಡ್ಡು ಮಾಡಬಹುದು’ ಅಂತ ಹೇಳಿದ್ರು. ಸರಿ, ಅವರು ಶುರು ಮಾಡಿಯೇ ಬಿಟ್ರು, ಪುರೈತಿಕೆ ಕೆಲಸ. ಕೈ ತುಂಬ ದುಡ್ಡು ಆಗ್ತಾ ಇದ್ದದ್ದು ಹೌದು. ಆದ್ರೆ ಒಂದು ದಿವಸ ಸಾ ಪುರ್ಸೊತ್ತು ಇರ್ತಿರ್ಲಿಲ್ಲ. ಅದನ್ನು ನೋಡಿ ಅವರ ಹೆಂಡತಿ ಸುಗಂಧಿಯಕ್ಕನಿಗೆ ಮಂಡೆ ಬಿಸಿ ಆಗ್ತಿತ್ತು. `ಈ ಪ್ರಾಯದಲ್ಲಿ ನಿಮಗೆ ಇದೆಲ್ಲಾ ಬೇಕಾ? ಮಗಳಿಗೆ ಮದುವೆ ಆಗಿದೆ. ಮಗ ಬೆಂಗಳೂರಿನಲ್ಲಿ ಕೆಲಸದಲ್ಲಿ ಸೆಟಲ್ ಆಗಿದ್ದಾನೆ. ಹೀಗಿರುವಾಗ ನಿಮಗೆ ಎಂತಕ್ಕೆ ಇದೆಲ್ಲ ರಗಳೆ? ರಾಮಾ ಕೃಷ್ಣ ಅಂತ ಮನೆಯಲ್ಲಿ ಇರ್ಬಾರ್ದಾ? ನಮಗೆ ಯಾವುದ್ರರಲ್ಲಿ ಕಡಮೆ ಮಾಡಿದ್ದಾನೆ ದೇವರು?’ ಅಂತ ಹೇಳ್ತಿದ್ರು.
`ಸುಗಂಧಿ…. ನಿಂಗೆ ಇದೆಲ್ಲ ಅರ್ಥ ಆಗುವುದಿಲ್ಲ. ನಿಮಗೆ ಹೆಂಗಸರಿಗೆ ಎಂತಕ್ಕೆ ಬೇಕು ಗಂಡಸರ ವಿಚಾರ? ಸುಮ್ಮನೆ ಅಡುಗೆ ಮಾಡಿಕೊಂಡು ಬಿದ್ದಿರ್ಲಿಕ್ಕೆ ಆಗೂದಿಲ್ವಾ?’ ಅಂತ ಸಮಾ ಬೈತಿದ್ರು. ಹಾಗಾಗಿ ಸುಗಂಧಿಯಕ್ಕ ಗಂಡ ಎಂತಾದ್ರೂ ಮಾಡಿಕೊಳ್ಳಿ ಅಂತ ಸುಮ್ಮನೆ ಇರ್ತಿದ್ರು. ತಮ್ಮ ತೋಟದಲ್ಲಿ ಒಂದಿಷ್ಟು ಹೂ, ಹಣ್ಣಿನ ಗಿಡಗಳನ್ನು ಬೆಳೆಸಿಕೊಂಡು; ಅವುಗಳನ್ನು ನೋಡಿಕೊಳ್ತಾ ಬೇಜಾರಾದಾಗ ಮಗಳು, ಮಗ ಇದ್ದಲ್ಲಿ ಹೋಗಿ ಬಂದುಕೊಂಡು ಇರ್ತಿದ್ರು.
ಭುಜಂಗ ಶೆಟ್ರು, ಬಿಲ್ಡರ್ನನ್ನು ಕರ್ಕೊಂಡುಬಂದು ಕೋಟಿಗಟ್ಟಲೆ ರೂಪಾಯಿ ಆಫರ್ ಇಟ್ಟಾಗ ರಾಯರಿಗೆ ಮಂಡೆ ಬಿಂಗ್ರಿ ಆಯ್ತು. ಒಂದೇ ಸರ್ತಿ ಹೂಂ ಅಂದು ಬಿಡುವಾ ಅಂದುಕೊಂಡ್ರೂ ಸುಗಂಧಿಯ ಹತ್ರ ಒಂದು ಮಾತು ಕೇಳುವಾ ಅಂತ ಅನಿಸಿತು. ಮತ್ತೊಂದು ಸರ್ತಿ ಅವಳ ಹತ್ತಿರ ಎಂತ ಕೇಳುವುದು? ಕೋಟಿಗಟ್ಟಲೆ ರೂಪಾಯಿ ವ್ಯವಹಾರ ಅವಳಿಗೆ ಎಂತ ತಿಳೀತದೆ ಘನಂದಾರಿ? ಅಂತ ಸಾ ಎಣಿಸಿದ್ರು. ಕಡೆಗೆ ಏನಾದ್ರಾಗ್ಲಿ ಅಂತ ಎಣಿಸಿ, `ಶೆಟ್ರೆ ಅವರ ರೇಟಿಗೆ ಒಪ್ಪಿದ್ದೇನೆ. ಪೇಪರೆಲ್ಲ ರೆಡಿ ಮಾಡ್ಳಿಕ್ಕೆ ಹೇಳಿ’ ಅಂದ್ರು.
ಇದನ್ನೆಲ್ಲ ಕೇಳ್ತಾ ಇದ್ದ ಸುಗಂಧಿಯಕ್ಕ ಹೊರಗೆ ಬಂದ್ರು. `ಅಲ್ಲಾ…. ನಿಮಗೆ ಎಂತಕ್ಕೆ ಮಂಡೆ ಹಾಳಾಗಿದೆ? ಚಿನ್ನದಂಥ ತೋಟ, ಹಿರಿಯರದ್ದು ಮನೆ ಎಲ್ಲ ಉಂಟು. ಮಕ್ಕಳು ಎಲ್ಲ ಅವರ ಹಾದಿಯಲ್ಲಿದ್ದಾರೆ. ಹೀಗಿರುವಾಗ ಎಂತಕ್ಕೆ ದುಡ್ಡಿನ ಆಂಕ್? ಪುರೈತಿಕೆ ಮಾಡಿ ದುಡ್ಡು ಮಾಡುದು ಬೇಡ ಅಂತ ಹೇಳಿದ್ದೆ, ಕೇಳ್ಳಿಲ್ಲ ನೀವು. ಈಗ ಇದನ್ನಾದ್ರೂ ಬಿಟ್ಟು ಬಿಡಿ ದಮ್ಮಯ್ಯ ಅಂತ ಹೇಳಿ ಕೂಗಿದ್ರು (ಅತ್ತರು).
`ಅಮ್ಮಾ….. ನಿಮ್ಮ ತೋಟಕ್ಕೆ ಇಂಥ ಆಫರ್ ಎಲ್ಲಿ ಬರ್ತದೆ ಹೇಳಿ? ಮಾತ್ರ ಅಲ್ಲ ಒಂದು ಫ್ಲ್ಯಾಟ್ ಫ್ರೀ, ನಿಮಗೂ ಪ್ರಾಯ ಆಯ್ತು. ಎಷ್ಟು ದಿವಸ ಅಂತ ಕೆಲಸ ಮಾಡ್ಳಿಕ್ಕೆ ಆಗ್ತದೆ? ಸಿಟಿಯ ಜನರ ಹಾಗೆ ಆರಾಮವಾಗಿ ಇರಿ’ ಅಂದ ಬಿಲ್ಡರ್.
ಎಲ್ಲಿತ್ತೋ ಏನೋ ಸಿಟ್ಟು; ಸುಗಂಧಿಯಕ್ಕನಿಗೆ ಪಿಸುರು(ಕೋಪ) ಏರಿತು. `ಕರೆಂಟ್ ಇಲ್ಲದೇ ಇದ್ದಾಗ ಬಾವಿಯಿಂದ ಕೊಡಪಾನಗಟ್ಟಲೆ ನೀರು ಸೇದಿ ಹಾಕಿ ಮಕ್ಳಳನ್ನು ಸಾಕಿದ ಹಾಗೆ ಸಾಕಿ ಮರಗಳನ್ನು ದೊಡ್ಡದು ಮಾಡಿದ್ದೇನೆ. ಅದ್ರ ಕಷ್ಟ ನಿಮಗೊತ್ತುಂಟಾ?’ ಅಂತ ಬೊಬ್ಬೆಹೊಡೆದ್ರು(ಕೂಗಾಡಿದ್ರು).
ಈ ದೇಶದಲ್ಲಿ ಹೆಂಗಸರ ಮಾತು, ಅವರ ಕಷ್ಟದ ಬಗ್ಗೆ ಯಾವ ಗಂಡಸು ಕೇಳುತ್ತಾನೆ ಹೇಳಿ? ಇಲ್ಲಿಯೂ ಅಷ್ಟೆ ಆಯಿತು.
ರಾಮರಾಯರು, `ಸುಗಂಧಿ…. ನಿಂಗೆ ಇದೆಲ್ಲ ಅರ್ಥ ಆಗೂದಿಲ್ಲ. ಸುಮ್ಮನೆ ನಮ್ಮ ಮಂಡೆ(ತಲೆ) ಹಾಳು ಮಾಡ್ಬೇಡ. ನೀನೂ ಮಂಡೆ ಹಾಳು ಮಾಡಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬೇಡ. ನಡಿ ಒಳಗೆ ನೀನು’ ಅಂತ ಅವುಡು ಕಚ್ಚಿ ಹೇಳಿದ್ರು. ಸುಗಂಧಿಯಕ್ಕ ಮಾತನಾಡದೇ ಒಳಗೆ ಹೋದ್ರು.
ಪೇಪರ್ಗಳೆಲ್ಲ ತಯಾರಾಯ್ತು. ಹಣ ಪಾವತಿ ಆಯ್ತು. ಅಪಾರ್ಟ್ಮೆಂಟ್ ತಯಾರಾಗುವ ತನಕ ಒಂದು ಮನೆಯನ್ನು ಬಾಡಿಗೆಗೆ ತಕ್ಕೊಂಡು ಇದ್ರು. ನೋಡ್ತಾ ಇದ್ದ ಹಾಗೆ ಬಿಹಾರದವರು, ತಮಿಳರು, ಎಲ್ಲ ಕೆಲಸಗಾರರು ಬೇರೆ ಬೇರೆ ಟೈಪಿನ ಮೆಷೀನುಗಳು, ಕಟ್ಟಡ ಕಟ್ಟುವ ಸಾಮಾನುಗಳು ರಾಶಿಗಟ್ಟಲೆ ಬಂದು ಬಿದ್ದವು. `ನಮ್ಮ ಕುದುರೆಬೆಟ್ಟು ಬೊಂಬಾಯಿಯ ಹಾಗೆ ದೊಡ್ಡ ಸಿಟಿ ಆಗ್ತದೆ ನೋಡ್ತಾ ಇರಿ. ನೀವು ಸಾ ನಿಮ್ಮ ಗದ್ದೆ ತೋಟ ಮಾರಿ ಪ್ಲ್ಯಾಟ್ ಮಾಡ್ಳಿಕ್ಕೆ ಕೊಡಿ’ ಅಂತ ರಾಯರು ಊರಲ್ಲೆಲ್ಲ ಹೇಳಿಕೊಳ್ಳಿಕ್ಕೆ ಶುರುಮಾಡಿದ್ರು. ಆದ್ರೆ ಊರಿನವರು ಯಾರೂ ಅಷ್ಟು ಸೀರಿಯಸ್ಸಾಗಿ ತೆಕ್ಕೊಳ್ಳಿಲ್ಲ. ಬದಲಿಗೆ ಕೆಲಸಕ್ಕೆ ಬರುವ ಜನರಿಗೆ ಅನುಕೂಲ ಮಾಡಿಕೊಡ್ಳಿಕ್ಕೆ ತಯಾರಾದ್ರೂ. ಊರಲ್ಲಿ ಗೂಡಂಗಡಿಗಳು ಎದ್ದವು. ಇದ್ದ ಮನೆಗಳನ್ನು ಎರಡು ಭಾಗ ಮಾಡಿ ಬಾಡಿಗೆ ಮನೆ ಮಾಡಿದ್ರು. ಐದಾರು ತಿಂಗಳಲ್ಲಿ ಊರಿಗೆ ಊರೇ ಬದಲಾಯ್ತು. ಅಲ್ಲಲ್ಲಿ ಟೆಂಟುಗಳು, ಕಂಡಕಂಡಲ್ಲಿ ಹೇಲುವವರು, ಉಚ್ಚೆ ಹೊಯ್ಯುವವರು ಹೆಚ್ಚಾದ್ರು. ಬುದ್ಧಿಯಿದ್ದ ಕೆಲವರು, `ಮೊದಲೇ ಹೈವೇ ಕೆಲಸ ಮಾಡುವವರಿಂದ ಊರು ಹಾಳಾಗ್ತಾ ಇತ್ತು. ಅದ್ರೊಟ್ಟಿಗೆ ಈ ಅಪಾರ್ಟ್ಮೆಂಟ್ ಕಟ್ಟುವವರಿಂದ ಮತ್ತಷ್ಟು ಹಾಳಾಯ್ತು’ ಅಂತ ಪರಂಚಿಕೊಂಡ್ರು (ಹಳಹಳಿಸಿದ್ರು). ಯುವಕರು ತಮ್ಮ ತಮ್ಮ ಜಮೀನನ್ನು ಕೊಟ್ರೆ ಹೇಗೆ? ಎಷ್ಟು ರೇಟು ಬಂದೀತು? ರಾಯರಿಗಿಂತ ಹೆಚ್ಚು ರೇಟು ಬಂದೀತಾ ಹೇಗೆ? ಅಂತೆಲ್ಲ ಲೆಕ್ಕಾಚಾರ ಹಾಕ್ಲಿಕ್ಕೆ ಶುರು ಮಾಡಿದ್ರು.
ತಾವು ಬೆಳೆಸಿದ ಮರಗಳನ್ನೆಲ್ಲ ಬುಲ್ಡೋಜರ್ ಬೇರು ಸಮೇತ ಕಿತ್ತು ತೆಗೆಯೂದನ್ನ ನೋಡ್ಳಿಕ್ಕೆ ಸುಗಂಧಿಯಕ್ಕನ ಕೈಯಲ್ಲಿ ಆಗ್ಲಿಲ್ಲ. `ಫಲಬಿಡುವ ತೆಂಗಿನಮರ ಕಡಿಯುವುದು ಒಂದೇ ಗರ್ಭಿಣಿ ಹೆಣ್ಣನ್ನು ಕೊಲ್ಲುವುದು ಒಂದೇ ಗೊತ್ತುಂಟಾ ನಿಮಗೆ? ಇಲ್ಲ…. ನನ್ನ ಹತ್ರ ಇದನ್ನೆಲ್ಲ ನೋಡ್ಳಿಕ್ಕೆ ಆಗುವುದಿಲ್ಲ. ನಾನು ಮಕ್ಕಳ ಹತ್ರ ಹೋಗ್ತೇನೆ’ ಅಂತ ಆಗಾಗ ಶಪಿಸ್ತಾ ಇದ್ದ ಅವರು, `ಫ್ಲ್ಯಾಟ್ ಎಲ್ಲ ರೆಡಿ ಆದ್ಮೇಲೆ ಹೇಳಿ, ಆ ದಿವಸ ಬರ್ತೇನೆ’ ಅಂತ ಹೇಳಿ ಮಗ ಮಗಳು ಇದ್ದಲ್ಲಿಗೆ ಹೋಗಿಯೇ ಬಿಟ್ರು.
ಅದಕ್ಕೆ ಇನ್ನೊಂದು ಕಾರಣವೂ ಇತ್ತು. ಒಂದೇ ಸರ್ತಿ ಕೋಟಿಗಟ್ಟಲೆ ದುಡ್ಡು ಬಂದದ್ದೇ ರಾಯರು ಒಂದು ನಮೂನಿ ಚೇಂಜ್ ಆದ್ರು. ಪುರೈತಿಕೆ ಕೆಲಸ ಬಿಟ್ರು. ಬರ್ಮುಡಾ, ಟೀ-ಷರ್ಟ್ ಹಾಕ್ಕೊಂಡು ಇಡೀ ದಿನ ಬಿಲ್ಡರ್ಗಳ ಅಸಿಸ್ಟೆಂಟ್ಗಳ ಒಟ್ಟಿಗೆ ತಿರುಗಾಡ್ಳಿಕ್ಕೆ ಶುರು ಮಾಡಿದ್ರು. ದಿನಾ ಪೇಟೆಗೆ ಹೋಗಿ ಬಂದು ಆ ಬ್ಯಾಂಕಲ್ಲಿ ಇಷ್ಟು ಎಫ್.ಡಿ. ಇಟ್ಟೆ; ಈ ಬ್ಯಾಂಕಲ್ಲಿ ಇಷ್ಟು ಎಫ್.ಡಿ. ಇಟ್ಟೆ. ಈ ಕಂಪೆನಿಯದ್ದು ಇಷ್ಟು ಷೇರು ಖರೀದಿಸಿದೆ ಅಂತ ಸರ್ಟಿಫೀಕೇಟುಗಳನ್ನು ತೋರಿಸ್ಲಿಕ್ಕೆ ಶುರು ಮಾಡಿದ್ರು. ರಾತ್ರಿಯಲ್ಲಿ ಎಚ್ಚರಾದಾಗೆಲ್ಲ ಅವುಗಳನ್ನು ತೆಗ್ದು ನೋಡ್ಳಿಕ್ಕೆ ಶುರು ಮಾಡಿದ್ರು. ಮಾತ್ರ ಅಲ್ಲ ಹೇಗೆ ದುಡ್ಡು ಮಾಡಿದೆ ನೋಡಿದೆಯಾ? ನಿನ್ನ ಮಾತು ಕೇಳಿದ್ರೆ ಇದೆಲ್ಲ ಆಗ್ತಿರ್ಲಿಲ್ಲ. ಇನ್ನು ಎಂಟು ಹತ್ತು ವರ್ಷಕ್ಕೆ ಎಲ್ಲ ಡಬ್ಬಲ್ ಆಗ್ತದೆ ಅಂತ ಮಲಗಿದ್ದ ಸುಗಂಧಿಯಕ್ಕನನ್ನು ಎಬ್ಬಿಸಿ ಹೇಳ್ತಿದ್ರು. ಪುರಸೊತ್ತು ಆದಾಗ ಕಟ್ಟಡ ನಿರ್ಮಾಣದ ಬ್ಲೂಪ್ರಿಂಟ್ ತಂದು `ಇಲ್ಲಿ ಪಾರ್ಕ್ ಬರ್ತದೆ, ಇಲ್ಲಿ ಸ್ವಿಮ್ಮಿಂಗ್ಪೂಲ್ ಬರ್ತದೆ, ಇದು ವಾಕಿಂಗ್ ಟ್ರ್ಯಾಕ್. ನಡುವೆ ಗಣಪತಿದ್ದು, ನವಗ್ರಹದ್ದು, ನಾಗ ಹಾಗೂ ದೇವಿಯದ್ದು ಮೂರ್ತಿ ಎಲ್ಲ ಹಾಕಿ ಒಂದು ಗುಡಿ ಕಟ್ತೇನೆಂತ ಹೇಳಿದ್ದಾನೆ. ಫ್ಲ್ಯಾಟಿಗೆ ಎಲ್ಲ ನಾರ್ತ್ನವರು ಬರ್ತಾರೆ. ದೇವಸ್ಥಾನಕ್ಕೆ ನಾನೇ ಭಟ್ರು. ಒಳ್ಳೇ ಸಂಪಾದನೆ ಆಗ್ತದೆ. ಐಟಿಬಿಟಿಯವರು ಕೇಳಿದಷ್ಟು ಕೊಡ್ತಾರೆ’ ಅಂತೆಲ್ಲ ಹೇಳ್ಳಿಕ್ಕೆ ಶುರು ಮಾಡಿದ್ದಿದ್ರು. ದಿನಾ ಕೇಳಿ ಕೇಳಿ ಸಾಕಾಗಿ ಸುಗಂಧಿಯಕ್ಕ ಊರು ಬಿಟ್ರು.
ರಾಯರಿಗೆ ಹೆಂಡತಿ ಇರದೇ ಇದ್ದುದು ದೊಡ್ಡ ವಿಷಯ ಅನ್ನಿಸಲೇ ಇಲ್ಲ. ತಮ್ಮ ಅಪಾರ್ಟ್ಮೆಂಟ್ ರೆಡಿಯಾಗುವುದೇ ಮುಖ್ಯ ಆಗಿತ್ತು. ಅಂತೂ ಒಂದುವರೆ ವರ್ಷದಲ್ಲಿ ಮುಂಭಾಗದಲ್ಲಿ ಒಂಭತ್ತು ಮಹಡಿಯದ್ದು, ಹಿಂದೆ ಏಳು ಮಹಡಿಯದ್ದು ಎರಡು ಬಿಲ್ಡಿಂಗ್ಗಳು ರೆಡಿಯಾದವು. ಜಾಗಕ್ಕೆ ಇದ್ದ ಓನರ್ನ ಹೆಸರನ್ನೇ ಅಪಾರ್ಟ್ಮೆಂಟ್ಗೆ ಇಡಲಾಯಿತು. ಹಾಗಾಗಿ `ಸುಗಂಧಿರಾಮ’ ಅಪಾರ್ಟ್ಮೆಂಟ್ಸ್’ ಅಂತ ಹೆಸರಾಯಿತು.
ಸುಗಂಧಿಯಕ್ಕ, ರಾಯರು ಎದುರಿಗಿನ ಬಿಲ್ಡಿಂಗಿನ ತುದಿಯ ಫ್ಲ್ಯಾಟಿಗೆ ಪ್ರವೇಶ ಮಾಡಿದ್ರು. ನೋಡ್ತಾ ಇದ್ದ ಹಾಗೆ ಅವರಿದ್ದ ಬಿಲ್ಡಿಂಗು ಮಾತ್ರ ಅಲ್ಲ ಹಿಂಬದಿಯದ್ದೂ ಎರಡೂ ತುಂಬಿತು. ಮೂರು ನಾಲ್ಕು ತಿಂಗಳಲ್ಲಿ ಪಂಜಾಬು, ಉತ್ತರಪ್ರದೇಶ, ಬೊಂಬಾಯಿಯಿಂದ ಬಂದವರು ಎಲ್ಲ ತುಂಬಿಕೊಂಡರು. ಸುಗಂಧಿಯಕ್ಕನಿಗಂತೂ ಒಮ್ಮೆಲೇ ನೀರಿನಿಂದ ತೆಗೆದು ಬಿಸಾಡಿದ ಮೀನಿನ ಹಾಗೆ ಆಯಿತು. ಯಾರ ಹತ್ರ ಮಾತಾಡ್ಲಿಕ್ಕೂ ಇಲ್ಲ. ಎಲ್ಲ ಹೈ-ಫೈ ಜನ. ಕನ್ನಡ, ತುಳು ಗೊತ್ತಿರುವವರು ಒಂದಿಬ್ರು ಇದ್ರೆ ಹೆಚ್ಚು. ಅವ್ರದ್ದೇ ಗುರ್ತುಮಾಡಿಕೊಳ್ಳಿಕ್ಕೆ ನೋಡಿದ್ರು. ಆದ್ರೆ ಅವ್ರೆಲ್ಲ ಹೆಚ್ಚು ಮಾತಾಡುವವರಲ್ಲ. ಹಿಂದೆ ಆದ್ರೆ ತೋಟದಲ್ಲಿ ಕೆಲಸ ಮಾಡುವವರೊಟ್ಟಿಗೆ ಮಾತಾಡ್ಳಿಕ್ಕೆ ಲಾಯಕ್ ಆಗ್ತಿತ್ತು. ಇತ್ತ ರಾಯರು ಇನ್ನೂ ಸ್ಟೈಲ್ ಭಟ್ರಾದ್ರು. ಸೋಮವಾರ ಶಿವ, ಮಂಗಳವಾರ ಗಣಪತಿ ಅಂತೆಲ್ಲ ದೇವರುಗಳ ಸಮೂಹದಲ್ಲಿ ಒಬ್ಬೊಬ್ಬರನ್ನೂ ವಿಜೃಂಭಣೆಯಿಂದ ಪೂಜೆ ಮಾಡ್ಳಿಕ್ಕೆ ಶುರು ಮಾಡಿದ್ರು. ಡೈಲಿ ಸಂಜೆ `ಸುಗಂಧಿ …. ನೋಡು ಇವತ್ತಿನ ಕಲೆಕ್ಷನ್ ಅಂತ ಐನೂರು, ಸಾವಿರದ ಗರಿಗರಿ ನೋಟುಗಳನ್ನು ಜೊಲ್ಲುಸುರಿಸ್ತಾ ತೋರಿಸುವಾಗ ಸುಗಂಧಿಯಕ್ಕನಿಗೆ ಹೇಸಿಗೆ ಆಗ್ತಿತ್ತು. ಹಣದ ಮರ್ಲ್ ಹಿಂದಿಗಿಂತ ಹೆಚ್ಚಾಗಿತ್ತು. ರಾತ್ರಿಯೆಲ್ಲ ಎಚ್ಚರವಾದಾಗ ಸರ್ಟಿಫಿಕೇಟುಗಳನ್ನು ನೋಡುವುದು, ಮುಚ್ಚಿಡುವುದು. ಬೀಗ ಹಾಕುವುದು ತೆಗೆಯೋದು ಎಲ್ಲ ಜೋರಾಯ್ತು. `ಹಗಲು ಹೊತ್ತಲ್ಲಿ ನೀನು ಮನೆ ಬಿಟ್ಟು ಹೋಗ್ಬೇಡ. ಯಾರಾದ್ರೂ ಒಳಗೆ ನುಗ್ಗಿ ಕದ್ದಾರು’ ಅಂತ ತಾಕೀತು ಮಾಡ್ತಿದ್ರು. ಈಗ ಮನೆ ಒಳಗೆಯೇ ಕೈದಿಗಳ ಹಾಗೆ. ಹೀಗಾಗಿ ಸುಗಂಧಿಯಕ್ಕನಿಗೆ ಕಿರಿಕಿರಿ ಹೆಚ್ಚಾಯ್ತು.
ಅಲ್ಪ ಸ್ವಲ್ಪ ಯೋಗ ವಿದ್ಯೆ ಗೊತ್ತಿದ್ದುದರಿಂದ ಜಿಮ್ಮಿನಲ್ಲಿ ಬೆಳಗ್ಗೆ, ರಾತ್ರಿ ಯೋಗ ಕ್ಲಾಸ್ ಶುರು ಮಾಡಿದ್ರು. `ಯೋಗ ಮಾಡುವ ನೆವದಲ್ಲಿ ನಿಮ್ಮ ಗಂಡ ಹೆಂಗಸರ ಮೈ ಮುಟ್ಟಿ ಎಂಜಾಯ್ ಮಾಡ್ತಾರೆ’ ಅಂತ ಅಕ್ಕ-ಪಕ್ಕದವರು ಹೇಳಿ ಮುಸಿಮುಸಿ ನಕ್ಕಾಗ ಸುಗಂಧಿಯಕ್ಕನಿಗೆ ತುಂಬ ಬೇಜಾರಾಯ್ತು. ಒಂದು ಸರ್ತಿ ಅವ್ರೇ ಹೋಗಿ ನೋಡಿದಾಗ ತಾನು ಕೇಳಿದ್ದು ಹೌದು ಅಂತ ಗೊತ್ತಾಯ್ತು. ಮನೆಗೆ ಗಂಡ ಬಂದ ಮೇಲೆ `ಯೋಗ ಕಲಿಸಿ ಕೊಡ್ತೇನೆ ಅಂತ ಕಂಡ ಕಂಡ ಹೆಂಗಸರ ಮೈ ಅರಂಟಿ(ಒತ್ತಿ) ಹಿಡ್ಕೊಳ್ತೀರಿ, ನಾಚಿಕೆ ಆಗೂದಿಲ್ವಾ?’ ಅಂತ ಸಮಾ ಗಲಾಟೆ ಮಾಡಿದ್ರು. ರಾಯರೂ ಬಿಡ್ಳಿಲ್ಲ. `ನಿನ್ನ ದೃಷ್ಟಿ ಸಮಾ ಇಲ್ಲ. ನನ್ನ ಕೀರ್ತಿ, ಪ್ರಸಿದ್ಧಿ ಎಲ್ಲ ಕಂಡ್ರೆ ನಿನಗೆ ಆಗುವುದಿಲ್ಲ. ಒಟ್ಟಾರೆ ನಿನಗೆ ಮಂಡೆ ಪೂರಾ ಬಿಂಗ್ರಿ ಆಗಿದೆ’ ಅಂದ್ರು. `ಬಿಂಗ್ರಿ ನಾನಲ್ಲ ನೀವು’ ಅಂತ ಅವರೂ ಹೇಳಿದ್ರು. ಎಲ್ಲಿ ಇತ್ತೊ ಏನೊ ಗರ್ವ (ಸಿಟ್ಟು) ರಾಯರಿಗೆ, ಛಟೀರಂತ ಒಂದು ಬಿಟ್ರು ಹೆಂಡತಿಗೆ. ಅನಂತರ ಮೈಮೇಲೆ ಬಂದವರ ಹಾಗೆ ಬೊಬ್ಬೆಹೊಡೀತಾ ಫ್ಲ್ಯಾಟಿನ ಮೆಟ್ಟಿಲಿನಲ್ಲಿ ಮೇಲೆ ಕೆಳಗೆ ಹತ್ತಿ ಇಳಿಯಲಿಕ್ಕೆ ಶುರು ಮಾಡಿದ್ರು. ಸುತ್ತಮುತ್ತಲಿನವರು ಇವರ ಗಲಾಟೆ ಕೇಳಿ ಓಡಿಬಂದ್ರು. ರಾಯರ ಮೈಮೇಲೆ ದೇವರು ಬಂದಿದ್ದಾರೆ ಅಂತ ಮಾತನಾಡಿಕೊಂಡ್ರು. ಅದೇ ಸರಿಯಾದ ಸಂದರ್ಭ ಅಂತ ಎಣಿಸಿದ ರಾಯರು ಮನೆಗೆ ಹೋಗಿ ಕುಂಕುಮದ್ದು ನಾಮ ಹಾಕ್ಕೊಂಡು ಮೈಮೇಲೆ ಬಂದದ್ದು `ದೇವಿ ದೇವೀ’ ಅಂತ ಹೂಂಕರಿಸಿದ್ರು.
ಅಪಾರ್ಟ್ಮೆಂಟ್ನ ಸೆಕ್ರೆಟರಿ, `ದೇವಿ…. ಶಾಂತಳಾಗು, ನಿನಗೆ ಎಂತ ಮಾಡ್ಬೇಕು ಅಂತ ಹೇಳು. ನಾನು ಮಾಡಿಸ್ತೇನೆ’ ಅಂದ. ದೇವಿ, `ಪ್ರತಿ ಶುಕ್ರವಾರ, ಸಂಕ್ರಾಂತಿ, ಅಮಾವಾಸ್ಯೆ ದಿನಗಳಂದು ನಾನು ಬರ್ತೇನೆ. ನನ್ನ ದರ್ಶನ ಏರ್ಪಡಿಸಿ’ ಅಂತ ಹೇಳಿದ್ಳು. ಸೆಕ್ರಟರಿ ಒಪ್ಪಿದ. ರಾಯರು ದೇವಿಪಾತ್ರಿಯಾಗಿ ಬದಲಾದರು. ದರ್ಶನಕ್ಕೆ ಬರುವವರ, ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಯಿತು. ಸಂಪಾದನೆ ಹೆಚ್ಚಾಯ್ತು. ಮೈ ತುಂಬ ಚಿನ್ನ, ಕೈ ಬೆರಳುಗಳಿಗೆ ಉಂಗುರ ಎಲ್ಲಾ ಹಾಕ್ಕೊಂಡು ಮರ್ಲಾಟಿಕೆ ಮಾಡ್ತಾ ಇರ್ಲಿಕ್ಕೆ ಶುರು ಮಾಡಿದ್ರು.
ದುಡ್ಡು ವಿಪರೀತ ಆದ ಮೇಲೆ ಶೋಕಿ, ಸ್ಟೈಲು ಜಾಸ್ತಿ ಆಯ್ತು. ಹೊಸ ಫೋನು ನಲವತ್ತೈದು ಸಾವಿರದ್ದು ತಕ್ಕೊಂಡ್ರು. ಅದ್ರಲ್ಲಿ ಒಂದಿಷ್ಟು ಬ್ಲೂಫಿಲ್ಮ್ ಹಾಕ್ಕೊಂಡು ರಾತ್ರಿ ಎಚ್ಚರಿಕೆ ಆದಾಗಲೆಲ್ಲ ನೋಡ್ತಾ ಇರ್ಲಿಕ್ಕೆ ಶುರು ಮಾಡಿದ್ರು. ಹೆಂಡತಿ ಒಂದು ದಿವಸ ನೋಡಿ ಗಾಬರಿಯಾದ್ರು. `ನೀನು ಒಂದು ದಿವಸ ಆದ್ರೂ ಹೀಗೆ ಇದ್ದಿಯಾ ನನ್ನೊಟ್ಟಿಗೆ?’ ಅಂತ ಕೇಳಿದ್ರು. `ಋಷಿ ಪಂಚಮಿ ಆದವಳು ನಾನು, ಎಪ್ಪತ್ತನೆ ಶಾಂತಿಯ ಹತ್ರ ಬಂದವರು ನೀವು. ನಾಚಿಕೆ ಆಗೂದಿಲ್ವಾ?’ ಅಂದ್ರು ಅವರು. ರಾಯರದ್ದು ಮೊಬೈಲ್ನಲ್ಲಿ ಮರ್ಲಾಟ ಹೆಚ್ಚಾಯ್ತು ಶಿವಾಯಿ ಕಡಮೆ ಆಗ್ಲಿಲ್ಲ.
ಒಂದು ದಿವಸ ಸುಗಂಧಿಯಕ್ಕ ಎಂಥದಕ್ಕೊ ಗಂಡನನ್ನ ಕರೀತಾರೆ ಹೂಂ ಇಲ್ಲ ಹಾಂ ಇಲ್ಲ. ಬೆಡ್ರೂಮಿಗೆ ಹೋಗಿ ನೋಡ್ತಾರೆ ಅವರು ಬೈನಾಕ್ಯುಲರ್ ಹಿಡಕೊಂಡು ಕಳ್ಳರ ಹಾಗೆ ಕಿಟಕಿಯ ಕರ್ಟನ್ ಹಿಂದೆ ನಿಂತುಕೊಂಡು ನೋಡ್ತಾ ಇದ್ರು. `ಎಂತ ಮಾಡ್ತಾ ಇದ್ದೀರಿ?’ ಅಂತ ಕೇಳಿದಾಗ ಬೈನಾಕ್ಯುಲರ್ ಬಿಟ್ಟು ಗಡಕ್ಕಂತ ಆಚೆ ರೂಮಿಗೆ ಹೋದ್ರು. ಸುಗಂಧಿಯಕ್ಕ ಬೈನಾಕ್ಯುಲರ್ ತೆಕ್ಕೊಂಡು ಅವರು ನೋಡ್ತಾ ಇದ್ದ ಜಾಗೆಯನ್ನು ನೋಡಿದ್ರು. ಎಂತ ಹೇಳುವುದು? ಹಿಂಬದಿಯ ಫ್ಲ್ಯಾಟಿನ ಒಬ್ಳು ಡ್ರೆಸ್ ಚೇಂಜ್ ಮಾಡ್ತಾ ಇದ್ದಾಳೆ! ಸುಗಂಧಿಯಕ್ಕ ದೊಡ್ಡದೊಂದು ಸ್ವಾಸ ಬಿಟ್ರು.
ಸುಗಂಧಿಯಕ್ಕ ಮಕ್ಕಳ ಹತ್ರ ಫೋನ್ ಮಾಡುವಾಗ ಎಲ್ಲ ಗಂಡನ ಹುಚ್ಚು ವ್ಯವಾಹಾರಗಳ ಬಗ್ಗೆ ಹೇಳಿ ಅತ್ತಿದ್ರು. ಮಕ್ಳು ಊರಿಗೆ ಬಂದಾಗ ಅಪ್ಪನಿಗೆ ಬುದ್ಧಿ ಹೇಳ್ಳಿಕ್ಕೆ ನೋಡಿದ್ರು. ಆದರೆ ರಾಯರು ಎಲ್ಲಿ ಕೇಳ್ತಾರೆ? ನಿಮ್ಮ ನಿಮ್ಮ ಕೆಲಸ ನೋಡಿಕೊಳ್ಳಿ ಅಂದ್ರು.
ಹೀಗಿದ್ದ ರಾಯರ ಮರ್ಲಾಟಿಕೆ ಕ್ಲೈಮ್ಯಾಕ್ಸ್ ತಲಪಿದ್ದು ಹೀಗೆ:
ಆ ದಿನ ರಾಯರ ಮೊಬೈಲಿಗೆ ಒಂದು ವೀಡಿಯೋ ಬಂತು. ನೇಪಾಳದಲ್ಲಿ ಭೂಕಂಪ ಆದಾಗ ಬಿಲ್ಡಿಂಗ್ ಒಂದು ಎಲ್ಲರ ಕಣ್ಣೆದುರಲ್ಲಿ ಬಿದ್ದ ದೃಶ್ಯ ಅದರಲ್ಲಿತ್ತು. ಅದನ್ನು ಕಂಡ ಕಂಡವರ ಹತ್ರ `ನೋಡಿ ಹೇಗೆ ಬೀಳ್ತದೆ ಅಂತ’ ತೋರಿಸಿಕೊಂಡು ತಿರುಗಾಡ್ತಾ ಇದ್ರು. ಆಗ ಯಾರೋ ಹೇಳಿದ್ರು, `ರಾಯರೇ, ನಿಮ್ಮ ಬಿಲ್ಡಿಂಗೂ ಹೀಗೆ ಆದ್ರೆ ಎಂತ ಮಾಡ್ತೀರಿ?’ ಅಂತ. ಆಗ ರಾಯರಿಗೆ ಎಂಥದ್ದೂ ಅನ್ನಿಸ್ಲಿಲ್ಲ. ಆದ್ರೆ ಮನೆಗೆ ಬಂದ ಅನಂತರ ಅದೇ ನೆನಪಿಸಿಕೊಳ್ಳುತ್ತಾ ಮಲಗಿದ್ರು. ನಿದ್ರೆ ಬರ್ಲಿಲ್ಲ. ಹೆಂಡತಿಯನ್ನು ಎಬ್ಬಿಸಿ ಅವರಿಗೂ ಆ ವೀಡಿಯೋ ತೋರಿಸಿ ಊರವರು ಹೇಳಿದ ಸುದ್ದಿಯನ್ನು ಹೇಳಿದ್ರು. ಅವರೂ ಸಾ, `ಊರಿನವರು ಸರಿಯೇ ಹೇಳಿದ್ದಾರೆ. ಚಿನ್ನದಂಥ ತೋಟ ಮಾರಿ ಮರಗಳನ್ನು ಕಡಿದು, ಭೂಮಿ ಅಗೆದು ಬಿಲ್ಡಿಂಗು ಮಾಡಿಸಿದ್ರಿ ಅಲ್ವಾ? ಆ ಮರಗಳ ಶಾಪ ತಟ್ಟದೇ ಇರ್ತದಾ ನಿಮಗೆ? ಈ ಬಿಲ್ಡಿಂಗೂ ಹಾಗೆ ಬಿದ್ರೆ ಆಶ್ಚರ್ಯ ಇಲ್ಲ ಅಂತ ಹೇಳಿ ಮಗ್ಗಲು ಬದಲಾಯಿಸಿ ಮಲಕ್ಕೊಂಡ್ರು.
ರಾಯರಿಗೆ ನಿದ್ರೆ ಬರ್ಲಿಲ್ಲ. ಇಡೀ ರಾತ್ರಿ ಅದನ್ನೇ ನೋಡ್ತಾ ಮಲಗಿದ್ರು. ಹಗಲಿಗೂ ಅದೇ ಚಿಂತೆ. ಒಂದು ಸಣ್ಣ ಸೌಂಡಾದ್ರೂ `ಬಿಲ್ಡಿಂಗು ಬೀಳ್ತದಾ ಬಿಲ್ಡಿಂಗು ಬೀಳ್ತದಾ? ಅಂತ ಹೆಂಡತಿಯ ಹತ್ರ ಬಿಲ್ಡರ್ನ ಹತ್ರ ಕಂಡ ಕಂಡವರ ಹತ್ರ ಕೇಳ್ಳಿಕ್ಕೆ ಸುರು ಮಾಡಿದ್ರು. ಅವ್ರೆಲ್ಲ ಎಂತ ಸಮಾಧಾನ ಹೇಳಿದ್ರೂ ಅವರಿಗೆ ಭ್ರಾಂತು(ಭ್ರಮೆ) ಕಡಮೆ ಆಗ್ಲೇ ಇಲ್ಲ.
ಅವತ್ತು ರಾತ್ರಿ ಜೋರು ಗಾಳಿ-ಮಳೆ; ಕರೆಂಟು ಬೇರೆ ಇಲ್ಲ. ಆಗ್ಲೇ ಸುಮಾರು ಸರ್ತಿ ರಾಯರು ಆ ವಿಡಿಯೋ ನೋಡಿದ್ದಿದ್ದು ಹಾಗೆ ಕಣ್ಣಿಗೆ ಇನ್ನೇನು ನಿದ್ರೆ ಹತ್ಬೇಕು ಅನ್ನುವಷ್ಟರಲ್ಲಿ ಗಾಳಿ ಜೋರು ಬಂದು ಕಿಟಕಿ, ಬಾಲ್ಕನಿಯ ಬಾಗಿಲು ಎಲ್ಲ ದಢಾರ್ ಅಂತ ಬಡೀತು. ಒಂದು ದೊಡ್ಡ ಸಿಡಿಲು ಬಂದು ಇಡೀ ಅಪಾರ್ಟ್ಮೆಂಟ್ ನಡುಗಿದ ಹಾಗೆ ಆಯ್ತು. ರಾಯರು ಒಮ್ಮೆಲೆ ಎದ್ದು ಅಯ್ಯೋ…. ಅಯ್ಯೋ….. ಅಯ್ಯೋ…. ಬಿಲ್ಡಿಂಗು ಬೀಳ್ತಾ ಉಂಟು, ಬಿಲ್ಡಿಂಗು ಬೀಳ್ತಾ ಉಂಟು’ ಅಂತ ಬೊಬ್ಬೆಹೊಡೀತಾ ಹೊರಗೆ ಓಡಿದ್ರು. ಮೆಟ್ಟಿಲಿನಿಂದ ಕೆಳಗೆ ಇಳಿದು ಓಡಿ ಬರ್ತಾ ಇದ್ದ ಅವರನ್ನು ಅಕ್ಕ-ಪಕ್ಕದವರು ತಡೆದು ನಿಲ್ಲಿಸೋ ಪ್ರಯತ್ನ ಮಾಡಿದರೂ ಎಲ್ಲರಿಂದ ತಪ್ಪಿಸಿಕೊಂಡು ದೂರ ಓಡಿ ಹೋದ್ರು. ಕಾಂಪೌಂಡಿನಿಂದ ಆಚೆ ಹೋಗಿ, `ಎಲ್ಲ ಓಡಿ ಬನ್ನಿ ಎಲ್ಲ ಓಡಿ ಬನ್ನಿ’ ಅಂತ ಬೊಬ್ಬೆಹೊಡೀತಾ ಇದ್ರು,
ಅಕ್ಕ-ಪಕ್ಕದವರು, `ಸುಗಂಧಿಯಕ್ಕ ಬೇಜಾರು ಮಾಡಿಕೊಳ್ಳಬೇಡಿ. ರಾಯರನ್ನು ಯಾವುದಾದರೂ ಆಸ್ಪತ್ರೆಗೆ ತೋರಿಸಿ. ಮಕ್ಕಳಿಗೆ ಫೋನ್ ಮಾಡಿ. ಹೀಗೆ ಬಿಟ್ರೆ ಮರ್ಲ್ (ಹುಚ್ಚು) ಇನ್ನೂ ಹೆಚ್ಚಾಗ್ತದೆ’ ಅಂದರು. ಸುಗಂಧಿಯಕ್ಕ ದೊಡ್ಡದೊಂದು ಶ್ವಾಸ ಬಿಟ್ಟು ಆಸ್ಪತ್ರೆಯವರಿಗೆ, ಮಕ್ಕಳಿಗೆ ಫೋನ್ ಮಾಡ್ಳಿಕ್ಕೆ ಅಂತ ಮೊಬೈಲ್ ತೆಕ್ಕೊಂಡ್ರು.