ಅವಳು ನನ್ನ ಪಕ್ಕದಲ್ಲಿ ಕುಳಿತು ಕಥೆ ಹೇಳುತ್ತಾಳೆ. ಅದೂ ಅಂತಿಂಥ ಕಥೆಯಲ್ಲ, ಧರಣಿ ಮಂಡಲದ ಗೋವಿನ ಕಥೆ…..
ಅವಳು ಬಂದೇ ಬಿಟ್ಟಳು. ಈಗ ನನ್ನನ್ನು ಅಮ್ಮನಲ್ಲಿಗೆ ಕರೆದೊಯ್ಯುತ್ತಾಳೆ…. ಬಾಲವೆತ್ತಿದೆ, ಕಿವಿಗಳನ್ನಾಡಿಸಿದೆ, ಕಣ್ಣುಗಳನ್ನು ಪಿಳಪಿಳನೆ ಪಿಳುಕಿಸಿ ಅವಳನ್ನೇ ನೋಡಿದೆ. ಕಾಲುಗಳನ್ನು ಅತ್ತಿತ್ತ ಕುಣಿಸಿದೆ. ಅವಳ ಕಾಲಿಗೂ ನನ್ನ ಕಾಲು ತಾಗಿತ್ತೇನೋ….. ಆಹ್….. ಎಂಥಾ ಅವಸರ ನಿನಗೆ ಎಂದು ಪ್ರೀತಿಯಿಂದಲೇ ಹೇಳುತ್ತಾ ನನ್ನ ಬೆನ್ನಿಗೆ ಪುಟ್ಟ ಪೆಟ್ಟು ಕೊಟ್ಟು ಮರದ ಗೂಟದಿಂದ ನನ್ನ ಹಗ್ಗವನ್ನು ಬೇರ್ಪಡಿಸಿದಳು. ಚಂಗನೆ ಹೊರ ಹಾರಿದೆ. ಅವಳಿಗೂ ನನ್ನ ತುಂಟತನ ಗೊತ್ತಿದೆ. ಹಗ್ಗವನ್ನು ಸಡಿಲವಾಗಿ ಬಿಟ್ಟೇ ಬಿಟ್ಟಳು. ಓಡಿ ತಲಪಿದ್ದೇ ಅಮ್ಮನ ಮಡಿಲಿಗೆ.
ಅಬ್ಬಾ….. ಈ ಅಮ್ಮನೇ….. ನನ್ನನ್ನು ಅದೆಷ್ಟು ಮುದ್ದು ಮಾಡುತ್ತಾಳೆ. ನಾನಿಲ್ಲಿಗೆ ಬರುವುದೇ ಹೊಟ್ಟೆ ತುಂಬಿಸಿಕೊಳ್ಳಲು ಅನ್ನುವುದನ್ನು ಮರೆತು ನನ್ನನ್ನು ಮುದ್ದಾಡುತ್ತಲೇ ಹೊತ್ತು ಕಳೆದುಬಿಡುತ್ತಾಳೆ….. ಪ್ರೀತಿ ಉಕ್ಕದೇ ಇದ್ದೀತೇ ಅವಳಿಗೆ….. ದಿನದಲ್ಲಿ ಮೂರು ಬಾರಿ ಮಾತ್ರ ಈ ಸಾನ್ನಿಧ್ಯ…. ಅಲ್ಲವಾದಲ್ಲಿ ಅವಳು ಹಟ್ಟಿಯ ಆ ಕಡೆ ಇದ್ದರೆ ನಾನು ಕರುಗಳಿಗೆಂದೇ ಇರುವ ಹಟ್ಟಿಯ ಪುಟ್ಟ ಜಗಲಿಯಲ್ಲಿ ಮಲಗಿಕೊಂಡು ಕಾಲ ಕಳೆಯುತ್ತೇನೆ.
ಅಕೋ ಅಲ್ಲಿ ಅದೆಷ್ಟು ಬೇಗ ಬರುತ್ತಾಳವಳು. ಈಗ ನನ್ನನ್ನೆಳೆದೇ ಬಿಡುತ್ತಾಳೆ. ಇನ್ನಷ್ಟು ಹಾಲು ಹೀರುವ ಮೊದಲೇ…. ಊಹೂಂ….. ಇವತ್ತಂತೂ ಹೋಗಲೇಬಾರದು. ಕಾಲುಗಳನ್ನು ಬಲವಾಗಿ ನೆಲಕ್ಕೂರಿಸಿ ನಿಂತೆ. ಆದರೂ ಅದೇನು ಶಕ್ತಿಯೋ ಅವಳ ಬಡಕಲು ಕೈಗಳಿಗೆ….. ಎಳೆದೇ ಬಿಟ್ಟಳು. ‘ಅಂಬಾ’ ಎಂದು ಅಮ್ಮನೂ ನನ್ನನ್ನಲ್ಲೇ ಉಳಿಸಿಕೊಳ್ಳುವ ವ್ಯರ್ಥಪ್ರಯತ್ನ ಮಾಡುತ್ತಾಳೆ. ಆದರೆ ಅವಳು ಅಮ್ಮನ ಎದುರು ಹಸಿರು ಹುಲ್ಲಿನ ರಾಶಿ ಹಾಕಿ, ದೊಡ್ಡ ಬಾಲ್ದಿಯಲ್ಲಿ ಹಿಂಡಿಯನ್ನಿಟ್ಟು ನನ್ನಮ್ಮನನ್ನು ಪೂಸಿಮಾಡುತ್ತಾ ನನ್ನನ್ನೆಳೆದು ಅಮ್ಮನ ಮುಖದ ಹತ್ತಿರ ಕಟ್ಟುತ್ತಾಳೆ. ಅಮ್ಮ ಬಾಲ್ದಿಯೊಳಗೆ ಬಾಯಿ ಹಾಕಿ ಸೊರ ಸೊರ ಶಬ್ದ ಮಾಡುತ್ತಾ ಅಕ್ಕಚ್ಚನ್ನು ಹೀರುತ್ತಿದ್ದರೆ ಅವಳು ಅಮ್ಮನ ಕೆಚ್ಚಲಿಗೆ ನೀರು ಹಾಕಿ ತೊಳೆದು ಪುಟ್ಟ ಮಣೆಯಿಟ್ಟುಕೊಂಡು ಕುಳಿತು ಕೈಯಲ್ಲಿ ಹಿಡಿದ ಚೆಂಬಿನ ಬಾಯಿಯ ಬದಿಯಲ್ಲಿ ಅಂಟಿಸಿದ ಬೆಣ್ಣೆ ತೆಗೆದು ಅಮ್ಮನ ಕೆಚ್ಚಲಿಗೆ ಪೂಸುತ್ತಾಳೆ. ನೊರೆ ಹಾಲು ಅವಳ ಚೆಂಬು ತುಂಬಿ ಹರಿಯುವಷ್ಟಾಗುತ್ತದೆ.
ನಾನೇನು ಆಸೆ ಕಣ್ಣುಗಳಿಂದ ಅಲ್ಲೇ ನೋಡಿಕೊಂಡಿರುತ್ತೇನೆ ಎಂದುಕೊಂಡಿರಾ….. ನನಗೆ ಮಾಡಲೇನೂ ಕೆಲಸವಿಲ್ಲವೇ….. ಸುಮ್ಮನೆ ನಿಲ್ಲುವ ಬದಲು ಅಮ್ಮನ ಬಾಯಿಗಂಟಿದ ಹಿಂಡಿಯ ರುಚಿ ನೋಡುವ ಪ್ರಯತ್ನ ಮಾಡುತ್ತೇನೆ…. ಊಹೂಂ…. ಹಾಲಿನಷ್ಟು ರುಚಿಯಿಲ್ಲ ಇದು….. ಎಳೆ ಹಸಿರು ಹುಲ್ಲಿನ ಬಣ್ಣ ನನ್ನನ್ನು ಕೈಬೀಸಿ ಕರೆಯುತ್ತದೆ. ಪುಟ್ಟ ಬಾಯಿಗೆ ನಿಲುಕಿದಷ್ಟು ಎಳೆದು ಜಗಿಯುವ ಆಸೆ.
ಅದೋ ಅಲ್ಲಿ ಆ ಪುಟ್ಟು ಹುಡುಗಿ ಬಂದಳು. ನನ್ನ ಕೊರಳಿನಲ್ಲಿ ಸದ್ದು ಮಾಡುವಂತಹುದೇ ಗೆಜ್ಜೆ ಆ ಹುಡುಗಿಯ ಕಾಲಲ್ಲೂ ಗಲ್ಗಲ್ ಎನ್ನುತ್ತಿರುತ್ತದೆ. ಅವಳು ಬಂದರೆ ನನಗೆ ಸಂತಸ. ಅವಳು ನನಗೆಂದೇ ಎಳೆ ಅಲಸಂದೆ, ಬಾಳೆಹಣ್ಣು ಏನಾದರೂ ಹಿಡಿದು ಬರುತ್ತಾಳೆ. ಅದರ ಪರಿಮಳವೇ ನನ್ನನ್ನಾಕರ್ಷಿಸುತ್ತದೆ. ಅಮ್ಮನೂ ಮೂಗು ಮೇಲೆತ್ತುತ್ತಾ ಬಾಲವನ್ನು ಅತ್ತಿತ್ತ ಬಡಿದು ತನಗೂ ಅದು ಬೇಕು ಎಂದು ಬಾಯಿ ಚಾಚುತ್ತಾಳೆ. ಆಗ ಅವಳಮ್ಮ ಪುಟ್ಟು ಹುಡುಗಿಯನ್ನು ಹೊರ ಹೋಗುವಂತೆ ಗದರಿಸುತ್ತಾಳೆ. ನಾನು ಅವಳ ಕಡೆಗೇ ಹೋಗಬೇಕೆಂದು ಬಳ್ಳಿಯನ್ನು ಬಲವಾಗಿ ಜಗ್ಗುತ್ತೇನೆ. ಆದರೆ ನನ್ನಮ್ಮನೂ ಅವಳಮ್ಮನಂತೆ ನನ್ನನ್ನು ಗದರುತ್ತಾಳೆ. ಈ ಅಮ್ಮಂದಿರೆಲ್ಲಾ ಹೀಗೆಯೇ ಏನೋ!
ಅಯ್ಯೋ…. ಅವಳೆಲ್ಲಿ ಹೋದಳೀಗ. ಹ್ಹೋ….. ನನ್ನನ್ನು ಕಟ್ಟುವ ಜಾಗದಲ್ಲಿ ನನಗಾಗಿ ಕಾದು ಕುಳಿತಿದ್ದಾಳೆ. ಅವಳಾದರೆ ನನ್ನ ಕುತ್ತಿಗೆಯನ್ನಪ್ಪಿ ಹಿತವಾಗಿ ಸವರುತ್ತಾ ಮಾತನಾಡಿಸುತ್ತಾಳೆ. ನನ್ನಷ್ಟೇ ವಯಸ್ಸಿರಬಹುದೇನೋ ಅವಳಿಗೆ. ನನ್ನಂತೆ ನೋಡುತ್ತಾಳೆ, ನಗುತ್ತಾಳೆ, ಕುಣಿಯುತ್ತಾಳೆ. ನನಗಿಷ್ಟವಾದದ್ದೆಲ್ಲಾ ಅವಳಿಗೂ ಇಷ್ಟವೇ. ಅವಳು ನನಗೆಂದೇ ಪ್ರತಿದಿನ ಒಣಗಿದ ಸೊಪ್ಪಿನ ಹಾಸಿಗೆ ಹಾಕುತ್ತಾಳೆ. ನಾನು ಅಲ್ಲಿ ಮಲಗಿದರೆ ಅವಳೂ ನನ್ನೊಡನೆ ಮಾತನಾಡುತ್ತಾ ನನ್ನನ್ನೊರಗಿ ಕುಳಿತುಕೊಳ್ಳುತ್ತಾಳೆ.
ಹಾಲು ಕರೆದಾಯಿತೇನೋ….. ಸದ್ದು ನಿಂತಿದೆ. ನನ್ನನ್ನು ಕಟ್ಟಿದ ಬಳ್ಳಿಯನ್ನು ಸಡಿಲಮಾಡಿ ಬಿಟ್ಟಿದ್ದಾರೆ. ಮತ್ತೆ ಅಮ್ಮನ ಕೆಚ್ಚಲಿಗೆ ತಲೆ ತಾಕಿಸಿ ಹಾಲು ಹೀರುತ್ತಿದ್ದೇನೆ. ‘ಗೌರೀ ಬಾ….’ ಪುಟ್ಟ ಹುಡುಗಿಯ ಕರೆ. ಬಂದೇ ಬಂದೇ ಎಂದು ನಾನು ಹೇಳಿದ್ದು ಅವಳಿಗೆ ಕೇಳಿಸಬಹುದೇ? ಕಿಣಿ ಕಿಣಿ ಕೊರಳಗಂಟೆಯ ಸದ್ದಿನೊಂದಿಗೆ ಅವಳಿದ್ದಲ್ಲಿಗೆ ಹೊರಟರೆ ಈ ಅಮ್ಮ ನನ್ನನ್ನು ಎಳೆದೆಳೆದು ನಾಲಿಗೆಯಲ್ಲಿ ಮುದ್ದುಗರೆಯುತ್ತಾಳೆ. ನಾನು ಹೊರಗೆ ಹೋಗಬೇಕೀಗ…. ಮತ್ತೊಮ್ಮೆ ಬಾಲ ಎತ್ತಿ ಚಂಗನೆ ಹೊರ ಹಾರುತ್ತೇನೆ. ನನ್ನನ್ನು ಹಿಡಿದಿದ್ದ ಅವಳು ನನ್ನ ನೆಗೆಯುವಿಕೆಗೆ ಹಗ್ಗದಿಂದ ಕೈ ಬಿಟ್ಟು ವಾಲುತ್ತಾಳೆ. ‘ಅಬ್ಬಾ ಇದರ ಅಹಂಕಾರವೇ’ ಎಂದು ಬಯ್ಯುತ್ತಾಳೆ. ನನಗೆ ಅವಳ ಮಾತುಗಳ್ಯಾವುದೂ ಬೇಕಾಗಿಲ್ಲ. ಪುಟ್ಟ ಹುಡುಗಿ ನನಗಾಗಿ ಕಾದಿದ್ದಾಳೆ. ಲಂಗದಲ್ಲಿ ಮರೆಸಿ ಹಿಡಿದಿದ್ದ ಕೈಯಲ್ಲಿ ಬೆಲ್ಲ, ಬಾಳೆಹಣ್ಣು, ಹಸಿರು ಹಕ್ಕಿಗಳು ಬಂದು ಬೀಜವನ್ನೆಲ್ಲಾ ತಿಂದು ಸಿಪ್ಪೆ ಉಳಿಸಿದ್ದ ಅಲಸಂದೆ ಕೋಡುಗಳು…. ನಾನು ನಾಲಿಗೆ ಚಾಚಿದರೆ ಅವಳ ಪುಟ್ಟ ಕೈಗಳು ಅದರಲ್ಲಿ ಅವೆಲ್ಲವನ್ನೂ ಇಡುತ್ತವೆ. ಜಗಿದು ತಿಂದರೆ ಬ್ರಹ್ಮಾನಂದ.
ನನ್ನನ್ನು ಪುಟ್ಟ ಮರದ ಗೂಟಕ್ಕೆ ಬಿಗಿದು ಅವಳು ಹಾಲಿನ ಚೆಂಬು ಹಿಡಿದು ನಡೆದು ಬಿಡುತ್ತಾಳೆ. ಅಮ್ಮನನ್ನು ಈಗ ಹಟ್ಟಿಯಿಂದ ಹೊರ ಬಿಟ್ಟಿದ್ದಾರೆ. ಅವಳೋ ಎಳೆ ಹುಲ್ಲನ್ನು ನೆಲದಿಂದ ಎಳೆದೆಳೆದು ಮೆಲ್ಲುತ್ತಾ ಮುಂದೆ ಸಾಗುತ್ತಿದ್ದಾಳೆ. ನಾನೂ ಹಾಗೆ ಹೋಗಬೇಕು….. ಅಂಬಾ….. ಎಂದು ಕೂಗುತ್ತೇನೆ. ಅಮ್ಮ ನನ್ನ ಕೂಗಿಗೆ ಕಿವಿಯಾನಿಸಿ `ನೀನಿನ್ನೂ ಪುಟ್ಟ ಕರು, ಅಲ್ಲೇ ಇರು’ ಎಂದು ಹೇಳುವಂತೆ ಅಂಬಾ ಎಂದು ಗುಟುರುಹಾಕಿ ಒಂದು ಕ್ಷಣ ನಿಂತು ಮತ್ತೆ ಹುಲ್ಲು ಮೇಯಲು ಮಾಳದ ಕಡೆಗೆ ಹೋಗುತ್ತಾಳೆ.
ಪುಟ್ಟ ಹುಡುಗಿ ನನ್ನ ಕೂಗನ್ನು ಅರ್ಥ ಮಾಡಿಕೊಂಡಂತೆ ಪೂಂಬಾಳೆ, ಎಳೆ ಹುಲ್ಲು ತಂದು ನನ್ನ ಮುಂದೆ ಹಿಡಿಯುತ್ತಾಳೆ. ಕೈಯಲ್ಲೊಂದು ಪುಟ್ಟ ಲೋಟ ಹಿಡಿದು ನನ್ನ ಕೆಚ್ಚಲಿರುವ ಜಾಗದಲ್ಲಿ ಕೈಹಾಕಿ ಹಾಲುಕರೆಯುವಂತೆ ನಟನೆ ಮಾಡುತ್ತಾಳೆ. ನನಗೆ ಇದು ಕಚಗುಳಿ ಇಟ್ಟಂತಾಗಿ ಚಂಗನೆ ಜಿಗಿದಾಡುತ್ತೇನೆ.
ಅವಳು ಪುಟ್ಟ ಕೈಗಳನ್ನು ಜೋಡಿಸಿ ಚಪ್ಪಾಳೆ ತಟ್ಟುತ್ತಾ ನಗುತ್ತಾಳೆ. ನನ್ನ ಪಕ್ಕದಲ್ಲಿ ಕುಳಿತು ಕಥೆ ಹೇಳುತ್ತಾಳೆ. ಅದೂ ಅಂತಿಂಥ ಕಥೆಯಲ್ಲಾ. ಧರಣಿ ಮಂಡಲದ ಗೋವಿನ ಕಥೆ….. ಅವಳು ಕಥೆ ಹೇಳುತ್ತಾ ಹೇಳುತ್ತಾ ಹೋದಂತೆ ನಾನು ಕಿವಿ ನಿಮಿರಿಸಿ ಕೇಳುತ್ತೇನೆ. ಒಳಗೊಳಗೆ ಇನ್ನೂ ಬಾರದ ಅಮ್ಮನನ್ನು ಕಾಣುವ ತವಕದಲ್ಲಿ ಹೊರಗೆ ನೋಡುತ್ತಿರುತ್ತೇನೆ. ಪುಟ್ಟ ಹುಡುಗಿ ನನಗೆ ಕಥೆ ಹೇಳಿ ಹೇಳಿ ತಾನೇ ಇಲ್ಲಿ ನಿದ್ದೆ ಮಾಡಿಬಿಟ್ಟಿದ್ದಾಳೆ. ಅದೂ ನಾನು ಮಲಗುವ ಜಾಗದಲ್ಲಿ. ಅಂಬಾ ಎಂದು ಕರೆಯುತ್ತೇನೆ. ಅಂಬಾ ಎಂದರೆ ಅಮ್ಮನೇ ಅಲ್ಲವೇ?
ಅವಳಮ್ಮ ಬರುತ್ತಾಳೆ. ‘ಅಯ್ಯೋ ಎಂತಾ ಹುಡುಗಿಯೋ ಇದು. ಇಲ್ಲೇ ಮಲಗಿದೆ’ ಎಂದು ಅವಳ ನಿದ್ರೆಗೆ ಭಂಗಬಾರದಂತೆ ಮೆಲ್ಲನೆ ಅವಳನ್ನು ಎತ್ತಿಕೊಂಡು ಹೊರಗೊಯ್ಯುತ್ತಾಳೆ. ನಾನು ಸ್ವಲ್ಪ ನಿರಾಸೆಯಿಂದಲೇ ಕಾಲುಗಳನ್ನು ಇನ್ನಷ್ಟು ಅಗಲಕ್ಕೆ ಚಾಚಿ ನಿದ್ರಿಸುವ ಪ್ರಯತ್ನ ಮಾಡುತ್ತೇನೆ.
ಅಮ್ಮನ ಹೆಜ್ಜೆಯ ಸದ್ದು ಕೇಳಿದಂತೆ…. ಹಟ್ಟಿಯ ಬಾಗಿಲು ಕಿರ್…ರ್…. ಎಂದು ತೆರೆದು ಅಮ್ಮ ಕಟ್ಟುವ ಜಾಗದಲ್ಲಿ ಬಂದು ನಿಂತಿದ್ದು ನನಗಿಲ್ಲಿಂದಲೇ ಕಾಣಿಸುತ್ತಿದೆ. ಅದೇಕೋ ತಿಳಿಯದು. ಇನ್ನೇನು ಸ್ವಲ್ಪ ಹೊತ್ತಿಗೆ ಮತ್ತೆ ನಾನು ಅವಳ ಮಡಿಲು ಸೇರುತ್ತೇನೆ. ಅಮ್ಮನೂ ಇದನ್ನೇ ಯೋಚಿಸುತ್ತಿದ್ದಾಳೇನೋ…. ಹಟ್ಟಿಯ ಆಚೆ ನಿಂತು ನನ್ನನ್ನು ಕಣ್ಣುಗಳಿಂದಲೇ ತುಂಬಿಕೊಳ್ಳುತ್ತಾಳೆ. ನಾನೂ ಬೇಗನೆ ದೊಡ್ಡವಳಾಗಬೇಕು. ಅಮ್ಮನಂತೆ ಹುಲ್ಲನ್ನು ಎಳೆದು ತಿನ್ನಬೇಕು. ಮಾಳದ ಮೂಲೆ ಮೂಲೆಗೆಲ್ಲಾ ನಡೆಯುತ್ತಾ ಹೋಗಬೇಕು….. ಅಮ್ಮನಂತೆ ಹಟ್ಟಿಯ ಆ ಬದಿಯಲ್ಲಿ ನಿಲ್ಲಬೇಕು….. ನನ್ನ ಕಣ್ಣುಗಳು ಕನಸು ಕಾಣುತ್ತಾ ಮತ್ತೆ ಆಲಸಿಗಳಂತೆ ಮುಚ್ಚಿಕೊಳ್ಳುತ್ತವೆ. ನನಗೆ ಎಚ್ಚರವಾದಾಗ ಅವಳು ಕೈಯಲ್ಲಿ ಚೆಂಬು ಹಿಡಿದು ನನ್ನ ಬಳ್ಳಿಯನ್ನು ಸಡಿಲಿಸುತ್ತಿದ್ದಳು.
ಜಿಗಿಯುತ್ತಲೇ ನಡೆದೆ ಮತ್ತೆ ಅಮ್ಮನ ಬಳಿಗೆ…..