ಪೂರ್ಣ ಮನೆಯನ್ನು ಕಾಳಜಿ ಮಾಡುವ ಅವಳ ಕುರಿತು ಬೊಗಸೆ ತುಂಬ ಪ್ರೀತಿಯಿರಲಿ. ಮುಂಗುರುಳ ನೇವರಿಸುವ ಬೆಚ್ಚಗಿನ ಸ್ಪರ್ಶಕ್ಕಿಂತ ಬೇರೆ ಔಷಧಿ ಅವಳು ಬಯಸುವುದಿಲ್ಲ.
ಅಮ್ಮ ಹೇಳುತ್ತಿದ್ದ ಹಳೆಯ ಘಟನೆಯೊಂದು ಯಾಕೋ ಪದೇ ಪದೇ ಕಾಡುತ್ತಿದೆ. ಅಮ್ಮನ ಸಂಬಂಧಿಯೊಬ್ಬರು ತಿಂಗಳು ತುಂಬಿದ ಬಸುರಿಯಾಗಿದ್ದಾಗ ನಡೆದ ಘಟನೆಯಿದು. ಅವರ ಗಂಡ ಅವರನ್ನೇನೂ ಚೆನ್ನಾಗಿ ನೋಡಿಕೊಂಡವರಲ್ಲ. ಆದರೆ ಮಕ್ಕಳಾಗುವುದಕ್ಕೇನೂ ತೊಂದರೆಯಿರಲಿಲ್ಲ! ಅವರಿಗೋ ಇಸ್ಪೀಟು ಆಟದ ಹುಚ್ಚು. ಆಗೀಗ ಮನೆಯಲ್ಲೇ ತನ್ನ ಗೆಳೆಯರನ್ನೆಲ್ಲ ಕರೆದು ಆಡುವುದು ಅವರ ಅಭ್ಯಾಸ. ಆಗೆಲ್ಲ ಈ ತಾಯಿಯೂ ರಾತ್ರಿ ಪೂರ್ತಿ ಎದ್ದಿದ್ದು ಗಂಡನ ಸನ್ನೆಯಾದ ತಕ್ಷಣ ಅವರೆಲ್ಲರಿಗೆ ಚಹಾ, ತಿಂಡಿ ಕೊಡಬೇಕಿತ್ತು. ಇಂಥದೇ ಒಂದು ದಿನ ಆ ತಾಯಿ ಬಹಿರ್ದೆಸೆಗೆ ಹೋಗಿ ಬರುವಷ್ಟರಲ್ಲಿ ಆಕೆಗೆ ಗರ್ಭಜಲ ಸ್ರಾವವಾಗಲು ತೊಡಗಿತ್ತು. ಅಷ್ಟು ಜನರ ಮುಂದೆ ಅದನ್ನು ಪತಿಯಲ್ಲಿ ಹೇಳಲು ಸಂಕೋಚವಾಗಿ ಒಂದರೆಕ್ಷಣ ಅವರ ಮುಂದೆ ನಿಂತರು. ಆದರೆ ತನ್ನ ಮೋಜಿನಲ್ಲಿ ಮುಳುಗಿದ ಆತನಿಗೆಲ್ಲಿ ಇದು ಅರ್ಥವಾಗಬೇಕು. “ಯಾಕಿನ್ನೂ ಇಲ್ಲೇ ನಿಂತಿದ್ದೀ? ಅದೇನು ಬೊಗಳು” ಎಂದರಂತೆ. ಈ ತಾಯಿ ಮತ್ತೂ ಮಾತಾಡದಿದ್ದಾಗ ತಲೆಗೆರಡು ಮೊಟಕಿ “ಹೇಳುವುದಿದ್ದರೆ ಏನಾದರೂ ಹೇಳು. ಅಲ್ಲವಾದರೆ ಹೋಗಿ ಬಿದ್ದುಕೊ” ಎಂದರಂತೆ. ಅವರು ಕಣ್ಣೀರಿನೊಂದಿಗೆ ತನ್ನ ಕೊಠಡಿಗೆ ಹೋಗಿ ಮಕ್ಕಳನ್ನು ತಬ್ಬಿ ಮಲಗಿದರಷ್ಟೇ. ಮಕ್ಕಳಲ್ಲಿ ಹೇಳಿದರೆ ಅರ್ಥ ಮಾಡಿಕೊಳ್ಳುವಷ್ಟು ದೊಡ್ಡವರು ಅವರಲ್ಲ.
ಈಕೆಗೆ ಗರ್ಭಜಲವೆಲ್ಲ ಸ್ರಾವವಾಗಿ ಹೋಯಿತೇ ವಿನಾ ಹೆರಿಗೆ ಬೇನೆ ಕಾಣಿಸಿಕೊಳ್ಳಲಿಲ್ಲ. ಒಂದು ವಾರವಾದರೂ ಆಕೆ ಆ ವಿಷಯವನ್ನು ಗಂಡನಲ್ಲಿ ಹೇಳಿಕೊಳ್ಳಲೂ ಇಲ್ಲ. ಗರ್ಭಸ್ಥ ಶಿಶು ಅಲ್ಲೇ ಸತ್ತು ಕೊಳೆಯಲಾರಂಭಿಸಿದಾಗ ಹೊಟ್ಟೆನೋವು ಬಂತು. ವೈದ್ಯರ ಬಳಿ ಹೋಗಲಾಗಿ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಗರ್ಭಕೋಶಕ್ಕೂ ಸೋಂಕು ತಗುಲಿತ್ತು. ಅಂತೂ ಚಿಕಿತ್ಸೆಯಿಂದ ಆ ತಾಯಿ ಬದುಕಿಕೊಂಡರು. ಆದರೆ ಆ ನೋವಿನಿಂದ ಹೊರಬರಲು ಅವರು ತುಂಬಾ ಸಮಯ ತೆಗೆದುಕೊಂಡರು.
ಇದು ಸುಮಾರು ನಲುವತ್ತು ವರ್ಷಗಳ ಹಿಂದಿನ ಘಟನೆ. ಆದರೆ ಇಂದಿಗೂ ಹಲವು ಮನೆಗಳಲ್ಲಿ ಗಂಡ-ಹೆಂಡತಿ ಸಂಬಂಧ ಇಷ್ಟೇ ಹಳಸಿರುವುದನ್ನು ನಾವು ಕಾಣುತ್ತೇವೆ. ಬಸುರಿ ಪತ್ನಿಯ ಹೊಟ್ಟೆಗೆ ಒದ್ದ ಪರಿಣಾಮ ಹೆಣ್ಣು ಸಾವನ್ನಪ್ಪುವ ಹಲವು ಘಟನೆಗಳು ಪತ್ರಿಕೆಗಳಲ್ಲಿ ವರದಿಯಾಗುತ್ತವೆ. ಇದನ್ನು ದೌರ್ಜನ್ಯವೆನ್ನೋಣವೇ ಅಥವಾ ಶೋಷಣೆಯೆನ್ನೋಣವೇ ನನಗೆ ಗೊತ್ತಿಲ್ಲ. ಆದರೆ ಯಾವ ಸ್ತ್ರೀವಾದವೂ ಇಂಥ ಹೆಣ್ಣುಮಕ್ಕಳನ್ನು ಕಾಪಾಡಿಕೊಳ್ಳಲಾಗುತ್ತಿಲ್ಲವಲ್ಲ ಎಂಬುದು ಮಾತ್ರ ಬೇಸರದ ಸಂಗತಿ.
ಕೆಲವು ದಿನಗಳ ಹಿಂದೆ ಹೀಗಾಯಿತು. ಇಳಿಸಂಜೆಯ ನೀರವತೆಯಲ್ಲಿ ಹೆಣ್ಣೊಬ್ಬಳು ಚೀರಿಕೊಳ್ಳುವ ಸದ್ದು. ಸಮೀಪಿಸಿ ನೋಡಿದರೆ ಅವಳ ಗಂಡ ಅವಳಿಗೆ ಹೊಡೆಯುತ್ತಿದ್ದ. ಆ ಬೀದಿಯಲ್ಲಿ ಉನ್ನತ ಹುದ್ದೆಯಲ್ಲಿರುವ ಅನೇಕ ಮಂದಿಯ ಮನೆಗಳಿದ್ದರೂ ಯಾರೊಬ್ಬರಾದರೂ ಅವನನ್ನು ತಡೆಯುವುದಕ್ಕೆ ಮುಂದಾಗಲಿಲ್ಲ. ಹೆಣ್ಣು ಮಕ್ಕಳಾದರೋ ‘ಅಯ್ಯೋ, ಅವನು ಕುಡಿದಿದ್ದಾನೋ ಏನೋ, ನಮಗೇಕೆ ಇಲ್ಲದ ಉಸಾಬರಿ? ಗಂಡಹೆಂಡತಿ ಏನಾದರೂ ಮಾಡಿಕೊಳ್ಳಲಿ’ ಎಂದು ಸುಮ್ಮನಾದರು. ಯಾರದ್ದೋ ಕೌಟುಂಬಿಕ ವಿಷಯದಲ್ಲಿ ಮೂಗು ತೂರಿಸುವ ಕೆಲಸ ನನಗೇಕೆ ಎಂದುಕೊಂಡು ನಾನೂ ಸುಮ್ಮನಾದೆ. ಆದರೆ ಮನಸ್ಸಿನ ತುಂಬಾ ಕಳವಳ. ಕಡೆಯ ಪಕ್ಷ ಅವನನ್ನು ತಡೆಯುವ ಪ್ರಯತ್ನವನ್ನು ನಾಲ್ಕಾರು ಮಂದಿ ಹೆಂಗಸರನ್ನು ಸೇರಿಸಿಕೊಂಡು ನಾನಾದರೂ ಮಾಡಬಹುದಿತ್ತಲ್ಲ? ನನಗೇಕೆ ಆ ಧೈರ್ಯ ಬರಲಿಲ್ಲ? ನಾನು ನಿಜಕ್ಕೂ ಹೆದರಿದ್ದು ಯಾರಿಗೆ? ಒಟ್ಟೂ ಗೊಂದಲದೊಳಗೆ ರಾತ್ರಿ ಬೆಳಗಾಯಿತು. ಕಾಲೇಜಿಗೆ ಹೊರಡುವ ತರಾತುರಿಯಲ್ಲಿ ನಾನು ಮನೆ ದಾಟುತ್ತಿದ್ದಂತೆ ಹಿಂದಿನ ದಿನ ಹೊಡೆಸಿಕೊಂಡಿದ್ದ ಅವಳು ಎದುರಾದಳು. ಏನೂ ನಡೆದೇ ಇಲ್ಲವೇನೋ ಎಂಬ ಹಾಗೆ ಹಸನ್ಮುಖಿಯಾಗಿ ‘ಆಂಟಿ, ತಿಂಡಿ ಆಯ್ತಾ?’ ಎಂದು ಕುಶಲೋಪರಿ ವಿಚಾರಿಸಿದಳು. ನಾನು ಬೆಪ್ಪಾಗಿ ಹೋದೆ. ಅವಳ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದರೆ ಹಿಂದಿನ ದಿನದ ಬರೆ, ಕಣ್ಣೀರಿನ ಕಲೆ ಎರಡೂ ಹಾಗೇ ಇದ್ದವು. ತನಗೆ ಹೊಡೆಯುವುದಕ್ಕೆ ಗಂಡನಿಗೆ ಅಧಿಕಾರವಿದೆ; ಅದರಲ್ಲಿ ತಲೆಕೆಡಿಸಿಕೊಳ್ಳುವುದು ಏನೂ ಇಲ್ಲ ಎಂಬಂತಿತ್ತು ಅವಳ ಮುಖಭಾವ. ಮಾತಾಡಿಸುವುದಕ್ಕೆ ಮುಖವಿಲ್ಲವಾಗಿ ಹೂಂಗುಟ್ಟಿ ಮುಂದೆ ನಡೆದೆ.
ಏಕೀ ಮೌನ
ಮನೆಯ ನಂದಾದೀಪವನ್ನು ಬೆಳಗುವ ಮಾನಿನಿಯರೆಲ್ಲ ಏಕೆ ಹೀಗೆ ಮೌನವಾಗಿ ತಮ್ಮ ಮೇಲಿನ ಪ್ರತಿ ಹೊಡೆತವನ್ನು ಸಹಿಸಿಕೊಳ್ಳುತ್ತಾರೋ ನನಗೆ ಅರ್ಥವಾಗುವುದಿಲ್ಲ. ಅದು ಅವರು ಬದುಕನ್ನು ಒಪ್ಪಿಕೊಳ್ಳುವ, ಪಾಲಿಗೆ ಬಂದದ್ದು ಪಂಚಾಮೃತವೆಂದು ಭ್ರಮಿಸಿ ಸ್ವೀಕರಿಸುವ ಪರಿಯೇ, ನನಗೆ ಗೊತ್ತಿಲ್ಲ. ಆದರೆ ಇದೆಲ್ಲದರಿಂದ ತೊಂದರೆಗೊಳಗಾಗುವುದು ಸ್ವತಃ ಅವಳೇ.
ಮನೆಯೊಳಗಿನ ಎಲ್ಲ ಸಂದರ್ಭಗಳನ್ನೂ ಗಮನಿಸಿ ನೋಡಿದರೆ ಮಾನಿನಿಯ ಪಾತ್ರ ಮುಖ್ಯವಾದದ್ದು. ಪುಟ್ಟ ಮಗು ರಾತ್ರಿ ಎಲ್ಲ ಎಚ್ಚರವಿದ್ದು ಅಳುತ್ತಿದ್ದು ಬೆಳಗಿನ ಜಾವ ನಿದ್ದೆ ಹೋದರೆ ಆ ನಿದ್ದೆಯ ಸುಖ ಇವಳಿಗಿಲ್ಲ. ಬೆಳಗಿನ ಉಪಾಹಾರದ ವ್ಯವಸ್ಥೆ ಅವಳೇ ಮಾಡಬೇಕು. ಹಗಲು ಮನೆಗೆಲಸ ಮುಗಿಸಿಕೊಂಡು ಮಧ್ಯಾಹ್ನದ ವೇಳೆ (ಮಗು ಮಲಗಿದರೆ) ಇವಳು ಅರ್ಧ ಗಂಟೆಯ ವಿಶ್ರಾಂತಿ ತೆಗೆದುಕೊಂಡರೂ ‘ಪಾಪ, ದಣಿದಿದ್ದಾಳೆ. ಮಲಗಲಿ’ ಎನ್ನುವವರಿಲ್ಲ. ಕೇಳಿಸಿಕೊಂಡರೆ ‘ಎಮ್ಮೆ ಬಿದ್ದುಕೊಂಡಂತೆ ಬಿದ್ದುಕೊಂಡಿದ್ದಾಳೆ’ ಎಂಬ ಮೂದಲಿಕೆ ಕೇಳಿಸೀತು! ಅದೇ ಮನೆಯ ಮಗ ರಾತ್ರಿ ಯಾವುದೋ ಕಾರಣಕ್ಕೆ ಎದ್ದಿದ್ದು ಹಗಲು ವಿಶ್ರಾಂತಿ ಪಡೆದರೆ ‘ಪಾಪ, ಅವನು ರಾತ್ರಿ ಎಲ್ಲ ಮಲಗಲೇ ಇಲ್ಲ ಎಂಬ ಸಹಾನುಭೂತಿ ಅವನೆಡೆಗೆ ಹರಿದು ಬರುತ್ತದೆ. ಈ ತಾರತಮ್ಯ ಎಲ್ಲಿಯವರೆಗೆ?
ಮನೆಯ ಮಾನಿನಿ ಹೊರಗೆ ದುಡಿಯುವ ಸಂದರ್ಭವಿದ್ದಾಗಲೂ ಅಷ್ಟೇ. ಸಂಜೆ ಮನೆಗೆ ಬಂದು ಕೊಂಚ ಹೊತ್ತಾದರೂ ವಿಶ್ರಾಂತಿ ಪಡೆದುಕೊಳ್ಳುವ ಅವಕಾಶ ಅವಳಿಗಿರುವುದಿಲ್ಲ. ಯಾಕೆಂದರೆ ಬೆಳಗ್ಗೆ ಅರ್ಧಂಬರ್ಧ ಮುಗಿಸಿ ಹೋದ ಕೆಲಸಗಳನ್ನೆಲ್ಲ ದಡಬಡಿಸಿ ಮುಗಿಸಿಕೊಳ್ಳಬೇಕು. ಕೈಕಾಲಿಗೆ ತೊಡರಿಕೊಳ್ಳುವ ಪುಟ್ಟ ಮಕ್ಕಳನ್ನು ಸಂಭಾಳಿಸಿಕೊಳ್ಳಬೇಕು. ರಾತ್ರಿಯ ಊಟದ ವ್ಯವಸ್ಥೆ ನೋಡಬೇಕು. ಈ ಎಲ್ಲ ಆತಂಕಗಳನ್ನು ಬದಿಗಿರಿಸಿ ಮಲಗಿದರೂ ಹತ್ತು ನಿಮಿಷವಾದರೂ ಕಣ್ಣಿವೆಗಳು ಕೂಡಿಕೊಂಡಾವೇ?
ಸಹೋದ್ಯೋಗಿಗಳು ಹೇಳುವುದು ಕೇಳಿದ್ದೇನೆ, “ಹಗಲಿಡೀ ಮನೆಯನ್ನು, ಮಗುವನ್ನು ನಾನು ನೋಡಿಕೊಂಡಿದ್ದೇನೆ. ಇನ್ನು ನೀನು ನೋಡಿಕೋ. ನನ್ನ ಕೈಯ್ಯಲ್ಲಾಗುವುದಿಲ್ಲ ಎನ್ನುವ ಅತ್ತೆಯಂದಿರು ಒಂದು ಸಣ್ಣ ವಿಷಯವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಹೊರಗೆ ದುಡಿದು ಬಂದ ಸೊಸೆಯೂ ತನ್ನಂತೇ ದಣಿದಿರುತ್ತಾಳಲ್ಲ! ಈ ರೀತಿಯ ಮನೆಗಳಲ್ಲಿ ಸೊಸೆ ಎಂಬವಳು ಒಂದು ದುಡಿಯುವ ಯಂತ್ರ ಮಾತ್ರವಾಗಿ ಪರಿಣಮಿಸುತ್ತಾಳೆ. ಅವಳಿಗೆ ದೈಹಿಕವಾಗಿಯೂ ಮಾನಸಿಕವಾಗಿಯೂ ಆಗುವ ದಣಿವು ಯಾರಿಗೂ ಅರ್ಥವೇ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಅವಳು ಎರಡನೇ ಮಗುವಿನ ಬಸುರಿಯಾದಳೋ ಅವಳ ಪಾಡು ದೇವರಿಗೇ ಪ್ರೀತಿ. ತೀರಾ ನಾಜೂಕಾಗಿ ಬದಲಾಗುವ ಮನಸ್ಸು ಪುಟ್ಟ ಗಾಯವನ್ನೂ ಸಹಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ. ಕೆಲಸ ಬಿಟ್ಟು ಬಿಡೋಣವೆಂದರೆ ಮನೆಯ ಆರ್ಥಿಕ ಪರಿಸ್ಥಿತಿ ಒಪ್ಪುವುದಿಲ್ಲ. ಅವಳ ನೋವನ್ನು ಅವಳು ಹಂಚಿಕೊಳ್ಳುವುದಾದರೂ ಯಾರಲ್ಲಿ?
ಕಾಳಜಿ ಹೆಚ್ಚಲಿ
ಹಾಗೆಂದು ಎಲ್ಲಾ ಮನೆಗಳೂ ಎಲ್ಲಾ ಗಂಡಂದಿರೂ ಒಂದೇ ರೀತಿ ಇರುತ್ತಾರೆ ಎಂದೇನಲ್ಲ. ರಾತ್ರಿಪಾಳಿ ಮುಗಿಸಿ ಬಂದರೂ, ಕಣ್ಣೆವೆಗಳು ಎಳೆಯುತ್ತಿದ್ದರೂ ಹೆಂಡತಿ ಅಡುಗೆ ಮಾಡುತ್ತಿದ್ದಂತೆ ಮಕ್ಕಳ ಊಟದ ಚೀಲ ರೆಡಿ ಮಾಡಿ, ಮಕ್ಕಳನ್ನು ಶಾಲೆಗೆ ಹೊರಡಿಸಿ, ಪತ್ನಿಯೂ ಬೆಳಗಿನ ಉಪಾಹಾರ ಸೇವಿಸಿದ ನಂತರವೇ ತಾವು ವಿಶ್ರಾಂತಿಗೆ ಮುಂದಾಗುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಪತ್ನಿ ಕಾಯಿಲೆ ಬಿದ್ದರೆ ಮಗುವಿನಂತೆ ಆದರಿಸಿ ಕಾಳಜಿ ಮಾಡುವವರಿದ್ದಾರೆ. ಆದರೆ ಈ ಉದಾಹರಣೆಗಳು ಜಾಸ್ತಿಯಾಗಬೇಕಲ್ಲವೇ?
ನಾನು ಹೇಳಬಯಸುವುದು ಇಷ್ಟೇ. ಮಾನಿನಿ ಹುಷಾರು ತಪ್ಪಿದರೆ ಅವಳಿಗೆ ಅಗತ್ಯವಿರುವುದು ಕೇವಲ ಔಷಧಿಯಲ್ಲ, ಅಕ್ಕರೆಯ ಒಂದು ನೇವರಿಕೆ ಮಾತ್ರ. ‘ಯಾಕೆ ಹೀಗಿದ್ದೀ? ಏನಾಯಿತು?’ ಎಂಬ ಪ್ರಶ್ನೆಯೊಂದಿಗೆ ಒಂದು ಹನಿ ಪ್ರೀತಿಯಿದ್ದರೂ ಅವಳು ಔಷಧಿಯಿಲ್ಲದೇ ಚೇತರಿಸಿಕೊಳ್ಳಬಲ್ಲಳು. ಅದರ ಹೊರತಾಗಿ ಮಣಗಟ್ಟಲೆ ಮಾತ್ರೆಗಳನ್ನು ನುಂಗಿದರೂ ಅವಳ ನೋವು ಕಡಮೆಯಾಗುವುದಿಲ್ಲ.
ಇಡಿಯ ಮನೆಯನ್ನು ಕಾಳಜಿ ಮಾಡುವ ಅವಳ ಕುರಿತು ಬೊಗಸೆ ತುಂಬ ಪ್ರೀತಿಯಿರಲಿ. ಮುಂಗುರುಳ ನೇವರಿಸುವ ಬೆಚ್ಚಗಿನ ಸ್ಪರ್ಶಕ್ಕಿಂತ ಬೇರೆ ಔಷಧಿ ಅವಳು ಬಯಸುವುದಿಲ್ಲ.