ಕಣ್ಣುಗಳೆದುರು ಆರ್ತಳಾದ ಪಾಂಚಾಲೆಯ ದೀನಸ್ಥಿತಿ ಸ್ತಬ್ಧಚಿತ್ರವಾಗಿ ಕಟ್ಟುತ್ತಿದೆ…
ಅವಳು ಕುರುಸಭೆಯ ಮಧ್ಯೆ ಏಕಾಂಗಿಯಾಗಿ ನಿಂತಿದ್ದಳು. ಅವಳ ಗಂಡಂದಿರೈವರೂ ಅಸಹಾಯಕರಂತೆ ನೆಲನೋಡುತ್ತ ಮೌನವಾಗಿದ್ದರು. ಸಮಸ್ತ ಸಭಾಸದರೂ ಮಾತನಾಡುವ ಧೈರ್ಯವಿಲ್ಲದೆ ಸ್ತಬ್ಧರಾಗಿ ನಿರ್ವೀರ್ಯತೆಯನ್ನು ಕಾಣಿಸುತ್ತಿದ್ದರು.
ಅವಳೋ ಕೇಳುವುದನ್ನು ಕೇಳಿ ಉತ್ತರದ ನಿರೀಕ್ಷೆಯಲ್ಲಿ ಕಾದಿದ್ದಳು. ವಿಧಿಯ ವಿಲಾಸವಲ್ಲದಿದ್ದರೆ ಹೀಗೆ ನಿಲ್ಲಬೇಕಾದವಳಲ್ಲ. ಆಗುವುದಕ್ಕೆ ಸಮ್ರಾಟನ ಪಟ್ಟದರಸಿಯಾಗಿ ಚಕ್ರವರ್ತಿನಿ ಎಂದು ಕರೆಸಿಕೊಂಡ ಯೋಗ್ಯತೆ ಅವಳದು. ಆದರಿಂದು? ಹೆಣ್ಣೊಬ್ಬಳಿಗೆ ಬರಲೇಬಾರದ ದುಃಸ್ಥಿತಿ ಅವಳಿಗೆ ಪ್ರಾಪ್ತಿಸಿತ್ತು. ಛೇ! ಹೀಗಾಗಬಾರದಿತ್ತು ಎಂದು ನಾನು ಅಂದುಕೊಂಡುದು ಇದೆಷ್ಟನೆಯ ಬಾರಿಯೋ!
ಅವಳೀಗ ಮಹಾರಾಣಿಯಾಗಿರಲಿಲ್ಲ. ಕೌರವರ ದಾಸಿಯಾಗಿದ್ದಳು. ಯುಧಿಷ್ಠಿರ ಶಕುನಿಯ ಜತೆ ದ್ಯೂತವಾಡಿ ತನ್ನ ಸಮಸ್ತವನ್ನೂ, ತಮ್ಮಂದಿರನ್ನೂ, ದ್ರೌಪದಿಯನ್ನೂ ಸೋತುಬಿಟ್ಟಿದ್ದ. ಅವರೆಲ್ಲ ದುರ್ಯೋಧನನ ದಾಸರಾಗಿದ್ದರು. ರಾಜಯೋಗ್ಯ ಆಭೂಷಣಗಳನ್ನು ಕಳಚಿ ದಾಸ್ಯವನ್ನು ಅಂಗೀಕರಿಸುವ ಅನಿವಾರ್ಯಕ್ಕೆ ಸಿಲುಕಿದ್ದರು. ಹೀಗಾಗಿ ತಮ್ಮ ಪತ್ನಿಯೇ ಅಸಹಾಯಕ ಸ್ಥಿತಿಯಲ್ಲಿದ್ದರೂ ಏನೂ ಮಾಡಲಾಗದೆ ಒಳಗೊಳಗೆ ಹೊಗೆಯುತ್ತ ಕುಳಿತಿರಬೇಕಾಗಿ ಬಂದಿತ್ತು. ಅಷ್ಟು ಮಂದಿ ಸೇರಿದ ಸಭೆಯಾದರೂ ಪರಿಸ್ಥಿತಿಯ ಗಂಭೀರತೆ ನೀರವಕ್ಕೆ ಕಾರಣವಾಗಿತ್ತು. ಹೆಚ್ಚಿನವರು ತಲೆತಗ್ಗಿಸಿ ಚಡಪಡಿಸುತ್ತಿದ್ದುದು ಸ್ಪಷ್ಟವಿತ್ತು. ಕುರುಕುಲ ಪ್ರಮುಖರು, ಆಚಾರ್ಯರು ಏನೂ ಮಾಡಲಾರದೆ ಕೈ ಹಿಸುಕಿಕೊಳ್ಳುತ್ತಿದ್ದರು.
ಇದಕ್ಕೊಂದು ಕಾರಣವಿತ್ತು. ಸಭೆಗೆ ಬಂದ ಯಾಜ್ಞಸೇನೆ ಒಂದು ಪ್ರಶ್ನೆ ಕೇಳಿದ್ದಳು. “ಯುಧಿಷ್ಠಿರ ದ್ಯೂತದಲ್ಲಿ ತನ್ನನ್ನು ಮೊದಲು ಸೋತು ಬಳಿಕ ನನ್ನನ್ನು ಪಣವಾಗಿಟ್ಟು ಸೋತನೋ ಅಥವಾ ನನ್ನನ್ನು ಪಣವಾಗಿಟ್ಟು ಬಳಿಕ ತನ್ನನ್ನು ಸೋತನೋ?”
ಈ ಪ್ರಶ್ನೆಗೆ ಉತ್ತರಿಸುವುದಕ್ಕೆ ಯಾರೂ ಮುಂದಾಗಲಿಲ್ಲ. ಮೌನವಾದರು. ಭೀಷ್ಮರಂತಹ ಕುರುವೃದ್ಧರೇ ನಿರುತ್ತರರಾದ ಪ್ರಶ್ನೆಗೆ ಉತ್ತರಿಸುವ ಧೈರ್ಯ ಯಾರಲ್ಲಿತ್ತು? ಮಂತ್ರಿಯ ಸ್ಥಾನದಲ್ಲಿದ್ದ ವಿದುರ ತನ್ನ ಅಭಿಪ್ರಾಯವನ್ನು ನಿರ್ಭೀತಿಯಿಂದ ಪ್ರಕಟಿಸಿದ. ದ್ಯೂತದಲ್ಲಿ ತನ್ನನ್ನು ಮೊದಲೇ ಸೋತ ಧರ್ಮಜ ದಾಸನಾದ ಬಳಿಕ ದ್ರೌಪದಿಗೆ ಹೇಗೆ ಸ್ವಾಮಿಯಾಗುತ್ತಾನೆ? ಅವನಿಗೆ ಅವಳನ್ನು ಪಣವಿಡುವ ಅಧಿಕಾರವೇ ಇಲ್ಲದ ಬಳಿಕ ಅವಳನ್ನು ಸೋಲುವುದು ಹೇಗೆ? ಅವಳು ದಾಸಿಯಲ್ಲವೆಂದು ಹೇಳಿದ. ಆದರೆ ಅಲ್ಲಿ ಮೌಲ್ಯಗಳಿಗೆ ಮನ್ನಣೆಯಿರಲಿಲ್ಲ. ವಿದುರ ಮೊದಲೇ ದಾಸಿಯ ಮಗನೆಂದು ತಿರಸ್ಕಾರಕ್ಕೆ ಒಳಗಾದವನು. ಅವನ ಮಾತುಗಳನ್ನು ಅಹಂಕಾರದಿಂದ ಬೀಗಿ ಮೆರೆಯುತ್ತಿದ್ದ ದುರ್ಯೋಧನಾದಿಗಳು ಗಣನೆಗೆ ತರಲಿಲ್ಲ. ನೂರು ಮಂದಿ ಕೌರವರಲ್ಲಿ ಆತ್ಮಸಾಕ್ಷಿಯಿದ್ದವನೊಬ್ಬನೇ. ಅವನು ವಿಕರ್ಣ. ”ದ್ರೌಪದಿ ಯಾರಿಗೂ ದಾಸಿಯಲ್ಲ“ ಎಂದು ದೃಢವಾಗಿ ಘೋಷಿಸಿದ. ಆದರೆ ಕರ್ಣ ಗದರಿ ಅವನ ಬಾಯಿಯನ್ನು ಮುಚ್ಚಿಸಿದ. ಎಂತಹ ಸ್ಥಿತಿ ಬಂತು! ಎಲ್ಲಿಂದಲೋ ಬಂದು ಸೇರಿಕೊಂಡ ದುರ್ಬುದ್ಧಿಯ ಈ ಕರ್ಣ ನ್ಯಾಯದ ನುಡಿಗಳನ್ನಾಡಿದ ಕುರುವಂಶದ ರಾಜಕುಮಾರನ ಬಾಯಿ ಬಡಿಯುತ್ತಾನೆ. ಅವನು ಮುಚ್ಚಿಸಿದ್ದು ವಿಕರ್ಣನ ಬಾಯಿಯನ್ನಲ್ಲ, ಸತ್ಯದ ಬಾಯಿಯನ್ನು ಎಂದೇ ನನಗೆ ತೋರಿತು. ನಾನಂತೂ ಮಾತನಾಡುವ ಹಾಗಿರಲಿಲ್ಲ. ಯಾಕೆಂದರೆ ನಾನು ಕ್ಷತ್ರಿಯನಾಗಿರಲಿಲ್ಲ; ಬ್ರಾಹ್ಮಣನೂ ಆಗಿರಲಿಲ್ಲ. ಒಬ್ಬ ಯಃಕಶ್ಚಿತ್ ಸೂತನಾಗಿದ್ದೆ. ಅದರಲ್ಲೂ ದುರ್ಯೋಧನನ ಸಾರಥಿಯಾಗಿದ್ದೆ. ನನ್ನಂತಹ ಕ್ರಿಮಿಯೊಂದು ತನ್ನ ಸ್ವಾಮಿಯ ವಿರುದ್ಧ ಮಾತನಾಡುವ ಸಾಧ್ಯತೆಯೇ ಇರಲಿಲ್ಲ.
ದ್ರೌಪದಿಯಂತಹ ಸಾಧ್ವಿಯನ್ನು ಹೀಗೆ ಸಭಾಮಧ್ಯದಲ್ಲಿ ನಿಲ್ಲಿಸಿ ಅವಮಾನಗೊಳಿಸುವ ಹೀನಾಯ ಪರಿಸ್ಥಿತಿಯಲ್ಲಿ ನನ್ನ ಪಾಲೂ ಇತ್ತೇ? ಹೌದು ಅಂತ ನನ್ನ ಅಂತರಂಗ ಚುಚ್ಚುವುದಕ್ಕೆ ತೊಡಗಿತು. ಈ ಪ್ರಕರಣದಲ್ಲಿ ನಾನೇ ಹೊಣೆಯೆನ್ನುವಂತಿಲ್ಲವಾದರೂ ನನ್ನ ಪಾಲೂ ಇರುವುದು ಸುಳ್ಳಲ್ಲ. ಯಾಕೆಂದರೆ ದ್ರೌಪದಿಯ ಪ್ರಶ್ನೆ ಈಗ ಸಭಾಸದರ ಮುಂದೆ ಇಡಲ್ಪಟ್ಟಿದ್ದರೂ ಅವಳು ಮೊದಲಬಾರಿ ಇದನ್ನೆತ್ತಿದ್ದು ನನ್ನಲ್ಲೇ. ನಾನು ಹಿಂದೆ ಮುಂದೆ ಆಲೋಚಿಸದೆ ಅದನ್ನು ಬಂದು ದುರ್ಯೋಧನನ ಮುಂದೆ ಆಡಿಬಿಟ್ಟಿದ್ದೆ. ಅದರಿಂದಾಗಿ ಹೀಗಾಯಿತೆ? ಈ ದಿನ ನಡೆದ ಘಟನೆಗಳು ನನ್ನ ಕಣ್ಣುಗಳ ಮುಂದೆ ಸುಳಿಯತೊಡಗಿದವು.
****
ಪಾಂಡವರನ್ನು ದ್ಯೂತವಾಡುವ ಉದ್ದೇಶಕ್ಕಾಗಿ ಆಹ್ವಾನಿಸಿದಾಗಲೇ ನಮಗೆಲ್ಲ ಏನೋ ಕೇಡಾಗಲಿದೆ ಎಂಬ ಸಂಶಯ ಕಾಡತೊಡಗಿತ್ತು. ನೆಪಕ್ಕೆ ಹಸ್ತಿನಾವತಿಯಲ್ಲಿ ಕಟ್ಟಿಸಿದ ಹೊಸ ಸಭಾಮಂಟಪವನ್ನು ತೋರಿಸುವುದಕ್ಕೆಂದು ಹೇಳಿದ್ದರೂ, ಸುಹೃದ್ಯೂತದ ಆಹ್ವಾನದ ಹಿಂದೆ ಒಂದು ಒಳಸಂಚು ಇತ್ತು. ಅದರ ಹಿಂದಿದ್ದವನು ಶಕುನಿ. ಈ ಶಕುನಿ ದುರ್ಯೋಧನನ ಮಾವ. ಹಸ್ತಿನಾವತಿಯಲ್ಲಿ ಅನಗತ್ಯವಾಗಿ ಉಳಿದವ. ಕುರು ಪಾಂಡವರ ದ್ವೇಷಕ್ಕೆ ಎಣ್ಣೆ ಹೊಯ್ಯುತ್ತಿದ್ದವನೇ ಇವನು. ದ್ಯೂತದ ಮೂಲಕ ಪಾಂಡವರ ಪಾಲಿನ ರಾಜ್ಯ, ಸಂಪದವನ್ನೆಲ್ಲ ದುರ್ಯೋಧನನ ವಶಕ್ಕೆ ತಂದುಕೊಡುವೆನೆಂದು ಸಂಕಲ್ಪ ಮಾಡಿದವ. ಅದಕ್ಕಾಗಿಯೇ ಪಾಂಡವರನ್ನು ಆಹ್ವಾನಿದ್ದು. ಅವರು ಬಂದ ಬಳಿಕ ದ್ಯೂತಕ್ಕೆ ಪಣವಿದೆಯೆಂದೂ, ದುರ್ಯೋಧನನ ಪರವಾಗಿ ಶಕುನಿ ಆಡುವುದೆಂದೂ ಘೋಷಿಸಲಾಯಿತು. ಯುಧಿಷ್ಠಿರ ಇದನ್ನು ಒಪ್ಪಿಕೊಳ್ಳಬೇಕಿರಲಿಲ್ಲ. ಕಪಟವೆಂದು ತಿಳಿದೂ ಅವನು ಸಮ್ಮತಿಸಿದ. ವಿಧಿ ಬಲವತ್ತರವಾದುದು. ದ್ಯೂತ ತೊಡಗಿತು.
ಯುಧಿಷ್ಠಿರ ಎಲ್ಲವನ್ನೂ ಕಳೆದುಕೊಂಡ. ಎಲ್ಲಿಯಾದರೂ ಮನುಷ್ಯರನ್ನು ಪಣವಿಡುವ ಪದ್ಧತಿಯುಂಟೇ? ಅದೂ ಆಯಿತು. ಸೋತ ಪಾಂಡವರೈವರೂ ದ್ರೌಪದಿ ಸಹಿತ ಕೌರವರ ದಾಸರಾದರು. ಆಗ ದುರ್ಯೋಧನ, ಕರ್ಣಾದಿಗಳ ಒಳಗಿದ್ದ ದುಷ್ಟತನ ಪ್ರಕಟವಾಯಿತು. “ದಾಸರು ಉತ್ತಮ ವಸ್ತ್ರಗಳನ್ನು, ಸ್ವರ್ಣಾಭರಣಗಳನ್ನು ಧರಿಸುವ ಹಾಗಿಲ್ಲ. ಅದನ್ನು ಕಳಚಿಡಿ” ಎಂಬ ಆದೇಶಕ್ಕೆ ಮಣಿದು ಪಾಂಡವರು ವಸ್ತ್ರ ಭೂಷಣಗಳನ್ನು ತೆಗೆದಿಟ್ಟು ನಾರು ವಸ್ತ್ರಗಳನ್ನು ತೊಟ್ಟರು. “ಅಂತಃಪುರದಲ್ಲಿದ್ದಾಳಲ್ಲ ದ್ರೌಪದಿ, ಅವಳೂ ಸಭೆಗೆ ಬರಲಿ“ ಎಂದ ಕರ್ಣ. ದುರ್ಯೋಧನ ಅದಕ್ಕೊಪ್ಪಿ, “ಏ ಪ್ರಾತಿಕಾಮಿ, ಹೋಗು. ಅವಳ ಗಂಡಂದಿರು ದ್ಯೂತದಲ್ಲಿ ಸೋತಿದ್ದಾರೆ. ಯುಧಿಷ್ಠಿರ ನಿನ್ನನ್ನೂ ಸೋತಿದ್ದಾನೆ. ನೀನು ಸಭೆಗೆ ಬರಬೇಕಂತೆ“ ಎಂದು ಹೇಳಿ ಅವಳನ್ನಿಲ್ಲಿ ಕರೆ ತಾ“ ಹೀಗೆಂದು ದುರ್ಯೋಧನ ನನ್ನನ್ನು ಕರೆದು ಆಜ್ಞಾಪಿಸಿದ. ಇದು ನನ್ನ ದುರ್ದೈವವಲ್ಲದೆ ಬೇರಿನ್ನೇನು ?
ನಾನು ಸೂತ. ದುರ್ಯೋಧನನ ಸಾರಥಿ. ಪರಂಪರೆಯಿಂದ ನಾವು ಅರಮನೆಯ ಊಳಿಗದವರು. ನನ್ನ ಅಪ್ಪನೂ ಅರಮನೆಯ ಊಳಿಗದವನೇ ಆಗಿದ್ದ. ಒಡೆಯನ ಆಜ್ಞೆಯನ್ನು ಪಾಲಿಸಬೇಕಾದ್ದು ನಮ್ಮ ಧರ್ಮ. ಇಷ್ಟವಿರಲಿ, ಬಿಡಲಿ ಮಾಡಲೇಬೇಕು. ಹಾಗಿದ್ದರೂ ನನ್ನ ಮನಸ್ಸು ಅಳುಕಿತು. ಆದರೆ ವಿರೋಧಿಸುವುದು ನನಗೆ ಸಾಧ್ಯವಿರಲಿಲ್ಲ. ಅನಿವಾರ್ಯವೆಂದು ಅಂತಃಪುರಕ್ಕೆ ತೆರಳಿದೆ. ಸಖೀವೃಂದದ ನಡುವಿದ್ದ ಆ ಸಾಧ್ವಿಗೆ ದುರ್ಯೋಧನನ ಆಜ್ಞೆಯನ್ನು ಬಿನ್ನವಿಸಿದೆ. ಆನಂದದಿಂದ ಬೆಳಗುತ್ತಿದ್ದ ಆಕೆಯ ಮುಖಕಾಂತಿ ತಗ್ಗಿಹೋಯಿತು. “ಏನು, ಧರ್ಮಜ ದ್ಯೂತವಾಡಿದನೇ? ದ್ಯೂತದಲ್ಲಿ ಸೋತನೇ? ನನ್ನನ್ನು ಒತ್ತೆಯಿಟ್ಟನೇ? ಪ್ರಾತಿಕಾಮಿ, ಕುರುಸಭೆ ಇದನ್ನು ಸಮ್ಮತಿಸಿತೇ?” ಅವಳ ಪ್ರಶ್ನೆಗಳಿಗೆ ನಾನು ವಿನೀತನಾಗಿ ಉತ್ತರಿಸಿದೆ, “ನಿಜ ತಾಯೆ, ದ್ಯೂತದಲ್ಲಿ ಧರ್ಮಜ ಎಲ್ಲವನ್ನೂ, ಎಲ್ಲರನ್ನೂ ಸೋತ. ನೀವೀಗ ಅವರ ದಾಸಿಯಾಗಿದ್ದೀರೆಂದು ದುರ್ಯೋಧನ ಪ್ರಭುಗಳು ಹೇಳುತ್ತಿದ್ದಾರೆ. ನೀವು ಸಭೆಗೆ ಬರಬೇಕಂತೆ.” ಇಷ್ಟು ಮಾತುಗಳನ್ನಾಡುವುದಕ್ಕೆ ನಾನು ಬಹಳ ಕಷ್ಟಪಟ್ಟೆ. ಅಲ್ಲದೆ ಇನ್ನೇನು? ಮಹಾರಾಣಿಯಾದವಳು, ನನಗೆ ಆಜ್ಞೆ ಮಾಡಬೇಕಾದ ಸ್ಥಾನದಲ್ಲಿರುವವಳು ಅವಳನ್ನು ದಾಸಿಯೆಂದು ಹೇಳಬೇಕಾಗಿ ಬಂದ ನನ್ನ ಸ್ಥಿತಿಯೇನು? ಧರ್ಮಾತ್ಮರಾದ ಪಾಂಡವರ ಪತ್ನಿ, ಯಜ್ಞಸಂಭವೆ ಎನ್ನುವುದನ್ನೂ ನಾನು ಮರೆಯುವ ಹಾಗಿರಲಿಲ್ಲವಷ್ಟೆ?
“ಅಯ್ಯಾ ಪ್ರಾತಿಕಾಮಿ, ನಾನೆಂತು ಸಭೆಗೆ ಬರಲಿ. ಈಗ ಏಕವಸನಧಾರಿಣಿಯಾಗಿದ್ದೇನೆ. ರಜಸ್ವಲೆಯಾದ ಕ್ಷತ್ರಿಯಾಣಿ ಹೀಗೆ ಬರುವುದು ಸಾಧುವೆ? ಹೋಗು, ಪತಿಯಾದ ಯುಧಿಷ್ಠಿರನ ಮುಂದೆ ನನ್ನ ಪ್ರಶ್ನೆಯನ್ನಿಡು. ಯುಧಿಷ್ಠಿರ ಮೊದಲು ತನ್ನನ್ನು ಸೋತನೋ ಅಥವಾ ನಮ್ಮನ್ನು ಮೊದಲು ಸೋತು ಬಳಿಕ ತಾನೂ ಸೋತನೋ? ಈ ಪ್ರಶ್ನೆಗೆ ಉತ್ತರ ಬೇಕೆಂದು ಹೇಳು.”
ಅಷ್ಟೇ ಸಾಕೆಂಬಂತೆ ನಾನು ಒಂದೇ ಓಟಕ್ಕೆ ಸಭಾಸ್ಥಾನವನ್ನು ಸೇರಿದೆ. ಪಾಂಚಾಲೆಯ ಪ್ರಶ್ನೆಯನ್ನು ಯುಧಿಷ್ಠಿರನ ಮುಂದಿಟ್ಟೆ. ಅವನು ಒಂದೇ ಒಂದು ನುಡಿಯನ್ನೂ ಆಡಲಿಲ್ಲ. ಅವನ ಮೌನಕ್ಕೆ ನಾನು ಏನೆಂದು ವ್ಯಾಖ್ಯಾನಿಸಲಿ? ದ್ರೌಪದಿಯ ಪ್ರಶ್ನೆ ಬಹು ಗಹನವಾದುದೆಂದು ನನಗೆ ಈಗ ಅರ್ಥವಾಯಿತು. ವಿದುರನೂ ಸಭೆಯಲ್ಲಿ ಇದೇ ಪ್ರಶ್ನೆಯನ್ನೆತ್ತಿದ್ದನಲ್ಲವೆ? ಆಗ ವಿದುರನೇ ನಿರ್ಣಯವನ್ನೂ ಹೇಳಿದ್ದ. ಆದರೆ ಯುಧಿಷ್ಠಿರ ಮಾತ್ರ ಉತ್ತರ ನೀಡುತ್ತಿಲ್ಲ. ನಾನೇನು ಮಾಡಲಿ? ಅಷ್ಟರಲ್ಲಿ ದುರ್ಯೋಧನನ ಧ್ವನಿ ಮೊಳಗಿತು, ”ಏ ಸೂತ, ಹಾಗೇಕೆ ನಿಂತಿದ್ದೀಯೆ? ಹೋಗು ಯಾಜ್ಞಸೇನಿಗೆ ಹೇಳು, ಅವಳೇ ಇಲ್ಲಿಗೆ ಬಂದು ಸಭಾಸದರ ಮುಂದೆ ಈ ಪ್ರಶ್ನೆಯನ್ನಿಡಲಿ. ಉತ್ತರ ದೊರೆತೀತು. ಈ ಕ್ಷಣ ಹೋಗು. ಅವಳನ್ನು ಬರಹೇಳು.” ಛೇ! ಇದೆಂತಹ ವಿಪರೀತ! ಮತ್ತೆ ಆ ಪುಣ್ಯಾತ್ಮಳ ಸನ್ನಿಧಿಗೆ ನಾನೇ ಹೋಗಬೇಕೇ? ನನ್ನ ಸಂದಿಗ್ಧವನ್ನು ಕಂಡು ದುರ್ಯೋಧನ ಗುರುಗುಟ್ಟಿದ. ಬೇರೆ ದಾರಿಯಿಲ್ಲದೆ ನಾನು ಮತ್ತೆ ಅಂತಃಪುರಕ್ಕೆ ಧಾವಿಸಿದೆ.
ಮತ್ತೆ ಬಂದ ನನ್ನನ್ನು ಕಂಡು ಅವಳು ಚಕಿತಳಾದಳು. ನಾನು ತಗ್ಗಿದ ದನಿಯಲ್ಲಿ ಉಸುರಿದೆ, ”ಅಮ್ಮಾ ನಿನ್ನ ಪ್ರಶ್ನೆಗೆ ಯುಧಿಷ್ಠಿರ ಉತ್ತರಿಸಲಿಲ್ಲ. ನೀನೇ ಬರಬೇಕೆಂದು ಪ್ರಭುವಾಜ್ಞೆ ತಾಯೆ. ಏನೋ ಕುರುಕುಲಕ್ಕೆ ಕೇಡುಗಾಲವೇ ಸಂಭವಿಸುವಂತೆ ತೋರುತ್ತಿದೆ. ಇಲ್ಲವಾದಲ್ಲಿ ನಮ್ಮ ಒಡೆಯರಿಗೆ ಈ ದುರ್ಬುದ್ಧಿ ಉಂಟಾಗುತ್ತಿರಲಿಲ್ಲ. ನಾನು ಸೇವಕ. ಅಸಹಾಯಕನಾದ ನನ್ನನ್ನು ಕ್ಷಮಿಸು ತಾಯಿ. ನಾನೇನು ತಾನೇ ಮಾಡಲಾರೆ? ರಾಜಾಜ್ಞೆಯನ್ನು ವಿರೋಧಿಸಿದರೆ ಶಿಕ್ಷೆಗೊಳಗಾಗುತ್ತೇನೆ. ನಾನೇನು ಮಾಡಲಮ್ಮಾ?” ಹೀಗೆ ನುಡಿಯುತ್ತಿರುವಂತೆ ನನ್ನ ಮನದೊಳಗೆ ಅವಳು ಅನುಭವಿಸಬೇಕಾದ ಸಂಕಷ್ಟವನ್ನು ನೆನೆದು ಮರುಕವುಂಟಾಯಿತು. ಇಂದ್ರಪ್ರಸ್ಥದಲ್ಲಿ ನೆಲೆನಿಂತು, ರಾಜರನ್ನೆಲ್ಲಾ ಗೆದ್ದು ರಾಜಸೂಯ ಮಹಾಯಾಗವನ್ನು ಮಾಡಿ ಮೆರೆದ ಪಾಂಡವರಿಗೆ ಈ ದಾಸ್ಯ ಸರ್ವಥಾ ಸಲ್ಲ. ಆದರೆ ಪ್ರಬಲವಾದ ಪುರಾಕೃತವನ್ನು ಮೀರುವುದೆಂತು? ಇವಳಾದರೋ ಹೀಗೆ ಒಂದೇ ಬಟ್ಟೆಯನ್ನುಟ್ಟು ಸಭಾಮಧ್ಯದಲ್ಲಿ ನಿಲ್ಲಬೇಕಾದವಳಲ್ಲ. ಶ್ರೀಕೃಷ್ಣಾನುಗ್ರಹಕ್ಕೆ ಪಾತ್ರರಾದವರಿಗೇ ಹೀಗಾದರೆ, ಬಡಪಾಯಿಗಳಾದ ನಮ್ಮ ಪಾಡೇನು?
ನಾನು ಮೌನವಾಗಿ ನಿಂತು ಯೋಚಿಸುತ್ತಿರುವಾಗ ಅವಳೆಂದಳು, “ಪ್ರಾತಿಕಾಮಿ, ನೀನು ಮರುಗಬೇಡ. ನಮ್ಮ ವಿಧಿಯೇ ಹಾಗಿರಬೇಕು. ಇಲ್ಲವಾದಲ್ಲಿ ಧರ್ಮಜನೂ ದ್ಯೂತವಾಡುವುದುಂಟೆ? ಇರಲಿ, ನೀನು ಹಿಂದೆ ಹೋಗು. ಕೇವಲ ದುರ್ಯೋಧನನ ಆಜ್ಞೆಗೆ ಮಣಿಯುವ ಪ್ರಮೇಯ ನನಗೆ ಕಾಣಿಸದು. ಹಿಂದೆ ಹೋಗು. ಕುರುಸಭೆಯ ಮುಂದೆ ನಾನಿಟ್ಟ ಪ್ರಶ್ನೆಯನ್ನು ಮಂಡಿಸು. ಹಿರಿಯರೂ ಆಚಾರಶೀಲರೂ, ಧಾರ್ಮಿಕರೂ ಆದ ಸಭಾಸದರು ಯಾವ ಉತ್ತರವನ್ನು ಕೊಡುವರೋ ನೋಡೋಣ. ಧರ್ಮಸಮ್ಮತವಾದುದನ್ನೇ ಅವರಾಡುವರೆಂದು ನಿರೀಕ್ಷಿಸುತ್ತೇನೆ. ಹೋಗು, ಯಾಜ್ಞಸೇನಿ ಸಭಾಸದರ ಉತ್ತರವನ್ನು ಬಯಸುತ್ತಿರುವಳೆಂದು ಹೇಳು.“
ಅವಳ ನುಡಿಗೆ ಮರುಮಾತಾಡದೆ ಸಭೆಗೆ ಬಂದೆ.
ಅವಳ ಮಾತನು. ಸಭೆಯ ಮುಂದೆ ಪುನರುಚ್ಚರಿಸಿದೆ. ಯಾರೂ ಉತ್ತರಿಸಲಿಲ್ಲ. ಕ್ಷಣಕಾಲದ ಮೌನದ ಬಳಿಕ ದುರ್ಯೋಧನ ಅಬ್ಬರಿಸಿದ, “ಸೂತನೆ, ಆ ದಾಸಿಯನ್ನಿಲ್ಲಿ ಎಳೆದು ತಾ. ಅವಳೇ ಬಂದು ತನ್ನ ಪ್ರಶ್ನೆಯನ್ನು ಸಭೆಯಲ್ಲಿ ಕೇಳಲಿ.” ನಾನು ಭೀತನಾದೆ. ಏನೇ ಆಗಲಿ, ಈ ದೌಷ್ಟ್ಯವನ್ನ ನಾನು ಮಾಡುವುದಿಲ್ಲವೆಂದೇ ನಿರ್ಧರಿಸಿದೆ. ನನಗೆ ನನ್ನ ಮನೆಯ ಹೆಮ್ಮಕ್ಕಳ ನೆನಪಾಯಿತು. ಅವರಿಗೇನಾದರೂ ಈ ಸ್ಥಿತಿ ಬರುತ್ತಿದ್ದರೆ? ಇದರಿಂದ ನನ್ನ ಮನಸ್ಸು ಮತ್ತೂ ದೃಢವಾಯಿತು. ದುರ್ಯೋಧನನ ಮುಖವನ್ನೂ ನೋಡದೆ ಸಭೆಯೆದುರು ಮತ್ತೊಮ್ಮೆ ಎರಡೂ ಕೈಗಳನ್ನು ಮುಗಿದು ಯಾಚಿಸಿದೆ, “ನಾನು ಕೃಷ್ಣೆಗೆ ಏನು ಹೇಳಲಿ?”
“ಛೀ” ದುರ್ಯೋಧನ ಫೂತ್ಕರಿಸಿದ, “ದುಃಶಾಸನ, ಈ ಹೇಡಿ ಸೂತ ಅಂಜಿದ್ದಾನೆ. ಅವಳನ್ನು ಎಳೆದು ತರುವ ಕಾರ್ಯ ಇವನಿಂದಾಗದು. ನೀನೇ ಹೋಗು, ಅವಳನ್ನು ಸಭೆಗೆ ಎಳೆದು ತಾ” ಹಿರಿಯನ ಆದೇಶವನ್ನೇ ಕಾಯುತ್ತಿದ್ದವನಂತೆ ಆ ಪಾಪಿ ಅಂತಃಪುರದತ್ತ ಧಾವಿಸಿದ. ಮುಂದೇನು ನಡೆಯಲಿರುವುದೋ ನನಗರ್ಥವಾಯಿತು. ಅಲ್ಲಿ ನಿಲ್ಲುವುದು ನನ್ನಿಂದಾಗಲಿಲ್ಲ. ಮೆಲ್ಲ ಮೆಲ್ಲನೆ ಹಿಂದೆ ಸರಿದು ಸಭೆಯಿಂದ ಹೊರಬಂದೆ.
****
ಆಮೇಲೆ ಸಭೆಯಲ್ಲಿ ಏನೇನೋ ನಡೆಯಬಾರದ್ದೆಲ್ಲ ನಡೆಯಿತಂತೆ. ದ್ರೌಪದಿಯ ಪ್ರಶ್ನೆಗೆ ಯಾರೂ ಉತ್ತರಿಸಲೇ ಇಲ್ಲವಂತೆ. ಕೊನೆಗೆ ಕೌರವರ ಧಾರ್ಷ್ಟ್ಯ ಮಿತಿಮೀರಿ ಯಾಜ್ಞಸೇನಿಯ ಸೀರೆ ಸೆಳೆಯುವ ಪ್ರಯತ್ನವೂ ನಡೆಯಿತಂತೆ. ಅದಕ್ಕೆಲ್ಲ ಕರ್ಣನ ಒತ್ತಾಸೆಯಿತ್ತಂತೆ. ವಸ್ತ್ರಾಪಹರಣಕ್ಕೆ ಮುಂದಾದ ದುಃಶಾಸನ ಕೈ ಸೋತು ಕುಸಿದನಂತೆ. ಕೆಲವರು ಕೃಷ್ಣನ ಮಹಿಮೆಯಿಂದ ಸೀರೆ ಅಕ್ಷಯವಾಯಿತು ಎನ್ನುತ್ತಾರೆ. ನಿಜವಿದ್ದರೂ ಇರಬಹುದು. ಅಥವಾ ತಾನು ಮಾಡಬಾರದ ಕೆಲಸ ಮಾಡುತ್ತಿದ್ದೇನೆಂಬ ಪಾಪಪ್ರಜ್ಞೆಯೇ ಅವನು ಕುಸಿದು ಬೀಳುವಂತೆ ಮಾಡಿತೋ ಯಾರು ಬಲ್ಲರು? ಕೊನೆಗೆ ಭೀಮಾದಿಗಳು ಭೀಷಣವಾದ ಪ್ರತಿಜ್ಞೆಯನ್ನು ಮಾಡಿದರಂತೆ. ದುರ್ಯೋಧನನ ತೊಡೆಗಳನ್ನು ಮುರಿದು ಹಾಕುತ್ತೇನೆಂದೂ, ದುಃಶಾಸನನ ಕರುಳನ್ನು ಬಗೆಯುತ್ತೇನೆಂದೂ ಭೀಮ ಗುಡುಗಿದನಂತೆ. ಇದರಿಂದ ಭಯಗೊಂಡ ಧೃತರಾಷ್ಟ್ರ ಭೂಪತಿ ಪಾಂಡವರನ್ನು ದಾಸ್ಯದಿಂದ ಬಿಡುಗಡೆಗೊಳಿಸಿ ಅವರು ಸೋತುದನ್ನೆಲ್ಲ ಹಿಂದಿರುಗಿಸಿದನಂತೆ.
ಧೃತರಾಷ್ಟ್ರ ಹಿಂದಿರುಗಿಸಿದರೂ ಪಾಂಡವರು ಅದನ್ನು ಹೊಂದುವುದಕ್ಕೆ ಧಾರ್ತರಾಷ್ಟ್ರರು ಬಿಡಲಿಲ್ಲ. ಅವರು ಇಂದ್ರಪ್ರಸ್ಥ ಮುಟ್ಟುವ ಮುನ್ನವೇ ಅವರನ್ನು ಮರಳಿ ಕರೆಸಿಕೊಂಡು ಮತ್ತೊಮ್ಮೆ ದ್ಯೂತ ನಡೆಯಿತಂತೆ. ಅರ್ಧರಾಜ್ಯವನ್ನು ಪಣವಾಗಿಟ್ಟು ಸೋತ ಪಾಂಡವರು ದ್ರೌಪದಿಯ ಸಹಿತ ವನವಾಸಕ್ಕೆ ತೆರಳಿದರಂತೆ. ಹನ್ನೆರಡು ವರ್ಷ ವನವಾಸ, ಒಂದು ವರ್ಷ ಅಜ್ಞಾತವಾಸದ ನಿಬಂಧನೆಯಂತೆ. ಹೀಗೆಲ್ಲ ಹಬ್ಬಿದ ವರ್ತಮಾನವನ್ನು ನಾನೂ ಕೇಳಿದೆ. ಛೇ! ಪಾಂಡವರಿಗೆ ಹೀಗಾಗಬಾರದಿತ್ತು ಎಂದು ನಾನೂ ಇತರರಂತೆ ಅಂದುಕೊಂಡೆ. ಇದಾದ ಬಳಿಕ ನನ್ನ ಬದುಕಿನಲ್ಲಿ ಏನೂ ಘಟಿಸಲಿಲ್ಲ.
ಬದುಕಿನಲ್ಲಿ ವಿಶೇಷವೇನೂ ಸಂಭವಿಸಲಿಲ್ಲ, ನಿಜ. ಆದರೆ ನನ್ನಲ್ಲಿ ಅಲ್ಲಿಯವರೆಗೆ ಅಚಲವಾಗಿದ್ದ ರಾಜಭಕ್ತಿ ಮಾತ್ರ ಅಲ್ಲಾಡಿ ಹೋಯಿತು. ಇದುವರೆಗೂ ಅರಮನೆಗೆ ನಿಷ್ಠನಾಗಿ ಬಾಳಿದ್ದ ನನ್ನ ಜೀವನಕ್ಕೆ ಬೇರೊಂದು ಉದ್ದೇಶವೇ ಇರಲಿಲ್ಲ. ಆದರಿಂದು ದಿಕ್ಕುಗಾಣದ ಸ್ಥಿತಿಯಲ್ಲಿ ನಾನಿದ್ದೆ. ಪ್ರಭು ಏನು ಮಾಡಿದರೂ ಸಹಿಸಿಕೊಂಡು ವಿಧೇಯನಾಗಿರುವುದೇ ಭೃತ್ಯಧರ್ಮವೆ? ಅಥವಾ ನ್ಯಾಯಾನ್ಯಾಯಗಳನ್ನು ಪರಿಗಣಿಸಿ ಸರಿಯಾದುದನ್ನು ಆಚರಿಸಬೇಕೇ ಎಂಬುದಕ್ಕೆ ನನಗೆ ಉತ್ತರ ದೊರೆಯದೇ ಹೋಯಿತು. ಅದೇನಿದ್ದರೂ ನಾನು ದುರ್ಯೋಧನನಿಗೆ ಸಾರಥಿಯಾಗಿಯೇ ಉಳಿದೆ. ಅಂದು ಸಭೆಯಲ್ಲಿ ಅವಿಧೇಯನಾದೆನೆಂದು ನನ್ನನ್ನು ದುರ್ಯೋಧನ ಶಿಕ್ಷಿಸಲಿಲ್ಲ. ನನ್ನನ್ನು ತಿರಸ್ಕರಿಸಲೂ ಇಲ್ಲ. ಆದರೆ ನನ್ನ ಒಳಮನಸ್ಸಿಗೆ ಮಾತ್ರ ಮಾಯದ ಗಾಯವನ್ನೇ ಉಂಟುಮಾಡಿತ್ತು ಆ ಘಟನೆ. ದುರ್ಯೋಧನ, ಕರ್ಣ, ದುಃಶಾಸನರನ್ನು ಕ್ಷಮಿಸುವುದು ಎಂದಿಗೂ ನನ್ನಿಂದ ಸಾಧ್ಯವಿರಲಿಲ್ಲ. ಇಷ್ಟನ್ನು ಮಾಡಿಸಿದವನು ಶಕುನಿಯಾದರೂ ಅವನು ಅಪರಾಧಿಯೆಂದು ನನಗೆ ತೋರಲಿಲ್ಲ. ಇವರಿಗೆ ಬೇಕಾಗಿ ಅವನು ವರ್ತಿಸಿದನೇ ಹೊರತು, ಅವನ ಸ್ವಾರ್ಥವೇನು ಈ ಪ್ರಕರಣದಲ್ಲಿ?
ನಿಜ, ನಾನು ಆ ಮೂವರನ್ನು ದ್ವೇಷಿಸುತ್ತಿದ್ದೆ. ಅವರು ಮಾಡಿದ ಘನ ಅಪರಾಧಕ್ಕೆ ಯೋಗ್ಯ ಶಿಕ್ಷೆಯಾಗಲೆಂದು ಹಾರೈಸುತ್ತಿದ್ದೆ. ಒಳಗೊಳಗೆ ಭೀಮನ ಪ್ರತಿಜ್ಞೆ ಈಡೇರಲೆಂದು ಬಯಸುತ್ತಿದ್ದೆ. ನಿಮಗಿದು ವಿಚಿತ್ರವಾಗಿ ಕಾಣಬಹುದು. ನನ್ನದು ತಪ್ಪೆಂದು ತೋರಲೂಬಹುದು. ಯಾರ ಅನ್ನವನ್ನು ಉಂಡೆನೋ ಅವರಿಗೆ ಕೆಡುಕನ್ನು ಹಾರೈಸುವುದು ತಪ್ಪಿರಬಹುದು. ಆದರೆ, ನಾನೇನು ಮಾಡಲಿ? ಅಮಾಯಕಳಾದ ಪಾಂಚಾಲೆಯನ್ನು ಘೋರ ಅವಮಾನಕ್ಕೆ ಈಡು ಮಾಡಿದ ಸಂದರ್ಭವನ್ನು ನೆನೆದರೆ?
ಅದು ಸಂಭವಿಸಿದ್ದು ಪಾಂಚಾಲೆಗಿರಬಹುದು. ಆದರೆ ಈ ದುಷ್ಟರು ರಾಜ್ಯವಾಳುತ್ತಿರುವಷ್ಟು ಕಾಲ ನನ್ನ ಮನೆಯ ಹೆಂಗಸರಾದರೂ ಸುರಕ್ಷಿತರೆಂದು ನಾನು ಹೇಗೆ ತಿಳಿಯಲಿ? ಆಳುವಾತ ದುರ್ಬುದ್ಧಿಯವನಾದರೆ ಅವನ ಕೈ ಕೆಳಗಿರುವವರು ಒಳ್ಳೆಯವರಾಗುವುದು ಸಾಧ್ಯವೆ? ಅರಮನೆಯಲ್ಲಿರುವ ಅವನ ಬಂಧುಗಳು ಇನ್ನು ಹೇಗಿದ್ದಾರು? `ಅರಸು ರಾಕ್ಷಸ, ಮಂತ್ರಿಯೆಂಬವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡಜನರ ಬಿನ್ನಪವನಿನ್ನಾರು ಕೇಳುವರು?’ ಎಂಬ ಹಾಗಾಗಿಹೋಯಿತಲ್ಲ ಹಸ್ತಿನಾಪುರದ ಆಡಳಿತ! ನನ್ನ ಮನಸ್ಸಿನಲ್ಲಿ ಮಾತ್ರ ಈ ತುಮುಲವೆದ್ದುದಲ್ಲ. ಅನೇಕ ಮಂದಿ ರಾಜಸೇವಕರಲ್ಲಿ, ಸೈನಿಕರಲ್ಲಿ, ದಂಡನಾಯಕರಲ್ಲಿ ಎದ್ದಿರಬೇಕೆಂದು ನನಗನಿಸುತ್ತಿತ್ತು. ಪ್ರಜೆಗಳಂತೂ ಈ ಕುರಿತು ಆಡಿಕೊಳ್ಳುತ್ತಿದ್ದುದನ್ನು ನಾನೇ ಕೇಳಿದ್ದಿದೆ. ಪಾಂಡವರಿಗೆ ಮಾಡಿದ ಅನ್ಯಾಯವಾದರೂ ಪ್ರಜೆಗಳಿಗೆ ಮರೆತುಹೋಗುತ್ತಿತ್ತೋ ಏನೋ. ಆದರೆ ದ್ರೌಪದಿಯ ಅವಮಾನ ಪ್ರಸಂಗವಂತೂ ಕೌರವರ ಮೇಲೆ ಅಳಿಸಲಾಗದ ಕಪ್ಪು ಮುದ್ರೆಯನ್ನೊತ್ತಿಬಿಟ್ಟಿತು.
****
ಪಾಂಡವರು ವನವಾಸ, ಅಜ್ಞಾತವಾಸಗಳನ್ನು ಮುಗಿಸಿ ಬಂದರು. ಅವರ ರಾಜ್ಯಭಾಗವನ್ನು ದುರ್ಯೋಧನ ಕೊಡಲೊಪ್ಪಲಿಲ್ಲ. ಯುದ್ಧ ಪ್ರಾರಂಭವಾಯಿತು. ಕರ್ಣನಂತಹ ಕೆಲವೇ ಕೆಲವರನ್ನು ಬಿಟ್ಟರೆ ಇತರ ಯಾವ ಯೋಧನೂ ಪೂರ್ಣಮನಸ್ಸಿನಿಂದ ಹೋರಾಟ ಮಾಡಿದಂತೆ ನನಗೆ ತೋರಲಿಲ್ಲ. ದ್ಯೂತಸಭೆಯ ಪ್ರಕರಣ ಎಲ್ಲರ ಮನಸ್ಸನ್ನೂ ಕೆಡಿಸಿತ್ತು. ಸೇನಾಪತಿಗಳಾದ ಭೀಷ್ಮಾದಿಗಳೂ ಪಾಂಡವರ ವಿರುದ್ಧ ಆಸಕ್ತಿಯಿಂದ ಕತ್ತಿಯೆತ್ತಲಿಲ್ಲ. ಪರಿಣಾಮ ಕೌರವರು ದಿನೇ ದಿನೇ ಸೋಲುತ್ತ ಬಂದರು. ಶಲ್ಯಾವಸಾನವೂ ಆಯಿತು. ಭೀಮನ ಪ್ರತಿಜ್ಞೆ ಕ್ರಮೇಣ ಪೂರ್ಣವಾಗುತ್ತ ಬಂತು. ಶಕುನಿ ಸತ್ತ ಮೇಲೆ ಉಳಿದುದು ಸಾರಥಿಯಾದ ನಾನು ಮತ್ತು ದುರ್ಯೋಧನ ಮಾತ್ರ. ಅಳಿದುಳಿದ ಬೆರಳೆಣಿಕೆಯ ಸೈನಿಕರನ್ನು ಒತ್ತಾಯಿಸಿ ಯುದ್ಧಕ್ಕಟ್ಟಿದ ದುರ್ಯೋಧನ. ಸದ್ಯ ನನ್ನ ಸಾವಿನ ಗಳಿಗೆಯನ್ನು ನಿರೀಕ್ಷಿಸುತ್ತ ಕಾದಿದ್ದೇನೆ. ಕಣ್ಣುಗಳೆದುರು ಆರ್ತಳಾದ ಪಾಂಚಾಲೆಯ ದೀನಸ್ಥಿತಿ ಸ್ತಬ್ಧಚಿತ್ರವಾಗಿ ಕಟ್ಟುತ್ತಿದೆ.