ನಾವು ಪರಿಹಾರದ ಭಾಗವೋ, ಅಥವಾ ಸಮಸ್ಯೆಯ ಭಾಗವೋ? – ಎಂಬುದನ್ನು ಮೊದಲು ನಿರ್ಧರಿಸಬೇಕು. ನಾವು ಪರಿಹಾರದ ಭಾಗವಾಗಿದ್ದರೆ ನಮ್ಮೆದುರು ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ನಾವೇ ಸಮಸ್ಯೆಯ ಭಾಗವಾಗಿದ್ದರೆ ನಮಗೆ ಯಾವ ಪರಿಹಾರವೂ ಕಾಣುವುದಿಲ್ಲ…
ಈ ಪ್ರಪಂಚ ಎಷ್ಟು ಪ್ರಾಚೀನವೋ ಮನುಷ್ಯನ ಸಮಸ್ಯೆ ಕೂಡ ಅಷ್ಟೇ ಪುರಾತನವಾದದ್ದು. ಮನುಷ್ಯನ ಬದುಕಿನಲ್ಲಿ ಸಮಸ್ಯೆ ಸಮುದ್ರದ ತೆರೆಗಳಂತೆ ನಿರಂತರವಾಗಿ ಬರುತ್ತಾ ಇರುತ್ತದೆ. ಅದಕ್ಕೆ ಅಂತ್ಯ ಎಂಬುದೇ ಇಲ್ಲ. ಸಮಸ್ಯೆ ಮನುಷ್ಯನನ್ನು ಖಿನ್ನತೆಯ ಪ್ರಪಾತಕ್ಕೂ ತಳ್ಳಬಹುದು, ಯಶಸ್ಸಿನ ಉತ್ತುಂಗಕ್ಕೂ ಕೊಂಡೊಯ್ಯಬಲ್ಲದು. ಸಮಸ್ಯೆ ಒಂದು ಸೋಲು ಎಂದು ಭಾವಿಸಿದರೆ ನಮ್ಮನ್ನು ಖಿನ್ನತೆಯತ್ತಲೂ, ಸವಾಲು ಎಂದು ಭಾವಿಸಿದರೆ ಯಶಸ್ಸಿನತ್ತಲೂ ಕೊಂಡೊಯ್ಯುತ್ತದೆ.
ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಾನೆ. ಹಲವು ಬಾರಿ ಮನುಷ್ಯ ತಾನೇ ನಿರ್ಮಿಸಿದ ಸಮಸ್ಯೆಯ ಬಲೆಯೊಳಗೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುತ್ತಾನೆ. ನಾವು ಯಾರ ತಕರಾರಿಗೂ ಹೋಗದೆ ನಮ್ಮಷ್ಟಕ್ಕೆ ನಾವಿದ್ದರೂ ಸಮಸ್ಯೆ ಮಾತ್ರ ಪೆಡಂಭೂತದಂತೆ ನಮ್ಮ ಬೆನ್ನ ಹಿಂದೆ ಬಿದ್ದಿರುತ್ತದೆ. ಶಿಕ್ಷಿತನಾದರೂ ಅಶಿಕ್ಷಿತನಾದರೂ, ಬಡವನಾದರೂ ಶ್ರೀಮಂತನಾದರೂ ಸಮಸ್ಯೆ ಮಾತ್ರ ಎಲ್ಲರನ್ನೂ ಸಮಾನವಾಗಿ ಪೀಡಿಸುತ್ತದೆ.
ಸಮಸ್ಯೆಗೆ ಬೇರೆ ಬೇರೆ ಮುಖಗಳು, ಆಯಾಮಗಳಿರಬಹುದು. ಅದು ಆರ್ಥಿಕ ಸಮಸ್ಯೆ ಇರಬಹುದು, ಆರೋಗ್ಯ ಸಮಸ್ಯೆ ಇರಬಹುದು, ಸಾಂಸಾರಿಕ ಸಾಮರಸ್ಯ ಸಮಸ್ಯೆ ಇರಬಹುದು, ನೌಕರಿ ಭದ್ರತೆ ಸಮಸ್ಯೆ ಇರಬಹುದು, ಕಛೇರಿಯಲ್ಲಿ ಮೇಲಧಿಕಾರಿಗಳ ಕಿರುಕುಳ ಸಮಸ್ಯೆಗಳಿರಬಹುದು. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಜವಾಹರಲಾಲ್ ನೆಹರು ಈ ದೇಶದಲ್ಲಿ ಎಷ್ಟು ಜನರು ಇರುವರೋ ಅಷ್ಟು ಸಮಸ್ಯೆಗಳು ಇವೆ ಎಂದು ಹೇಳಿದ್ದರು. ಮನುಷ್ಯನಿಗೊಂದು ಮನಸ್ಸಿಗೊಂದು ಸಮಸ್ಯೆಯೂ ಇರುತ್ತದೆ. ಸತ್ತವರಿಗೆ ಮಾತ್ರ ಸಮಸ್ಯೆಗಳಿರುವುದಿಲ್ಲ. ಬದುಕಿರುವುದೆಂದರೆ ಸಮಸ್ಯೆಗಳೊಂದಿಗೆ ಇರುವುದೆಂದೇ ಅರ್ಥ.
ಅಮೆರಿಕದಲ್ಲಿ ಒಬ್ಬ ದೊಡ್ಡ ಉದ್ಯಮಿ ಇದ್ದರು. ಭಾರಿ ವ್ಯವಹಾರಸ್ಥರು. ಆಗಿಂದಾಗ್ಗೆ ವ್ಯವಹಾರದಲ್ಲಿ, ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತಿದ್ದವು. ಕೆಲವೊಮ್ಮೆ ಸಣ್ಣದು, ಕೆಲವೊಮ್ಮೆ ದೊಡ್ಡದು. ಒಮ್ಮೆ ಅವರಿಗೆ ಕುತೂಹಲ ಉಂಟಾಯಿತು. ‘ಇಷ್ಟು ದೊಡ್ಡ ನಗರದಲ್ಲಿ ಈ ಸಮಸ್ಯೆಗಳೆಲ್ಲಾ ನನಗೊಬ್ಬನಿಗೆ ಮಾತ್ರ ಇದೆಯಾ? ಸಮಸ್ಯೆಗಳೇ ಇಲ್ಲದವರು ಯಾರಾದರೂ ಇರಬಹುದಾ?’ ಎಂದು ಕಂಡುಕೊಳ್ಳಬೇಕೆನಿಸಿತು. ಒಬ್ಬ ಬುದ್ಧಿವಂತನನ್ನು ಕರೆದು ‘ಮೂರು ತಿಂಗಳ ಒಳಗೆ ಈ ನಗರದಲ್ಲಿ ಸಮಸ್ಯೆಗಳೇ ಇಲ್ಲದವರ ಪಟ್ಟಿ ಮಾಡಿ’ ಎಂದು ನೇಮಿಸಿ ಕಳುಹಿಸಿದ. ಮೂರು ತಿಂಗಳ ನಂತರ ಕೇಳಿದಾಗ, ಆ ಬುದ್ಧಿವಂತ ‘ಸಾವಿರಾರು ಜನ ಇದ್ದಾರೆ’ ಎಂದ. ತಕ್ಷಣ ಶ್ರೀಮಂತ, ‘ಬನ್ನಿ ಹೋಗೋಣ ನಾನು ಅಂತಹವರ ಕೈ ಕುಲುಕಬೇಕು’ ಎಂದ ಕುತೂಹಲದಿಂದ. ಆಗ ಬುದ್ಧಿವಂತ ನಿಧಾನವಾಗಿ ಹೇಳಿದ, ‘ನೀವು ಅವರ ಕೈ ಕುಲುಕಲು ಸಾಧ್ಯವಿಲ್ಲ. ಏಕೆಂದರೆ ಅವರೆಲ್ಲ ಆಗಲೆ ಸತ್ತು ಸಮಾಧಿ ಆಗಿದ್ದಾರೆ. ನಾನು ನಗರದ ತುಂಬ ಹುಡುಕಿದೆ; ಸತ್ತವರಿಗೆ ಮಾತ್ರ ಸಮಸ್ಯೆಗಳಿಲ್ಲ’ ಎಂದು ಹೇಳಿದ. ಶ್ರೀಮಂತನಿಗೆ ಈ ಮಾತು ಕೇಳಿ ಜ್ಞಾನೋದಯವಾಯಿತು. ತನಗೆ ಸಮಸ್ಯೆಗಳಿದ್ದರೇನು, ತಾನು ಜೀವಂತವಾಗಿದ್ದೇನಲ್ಲ ಎಂದು ಸಮಾಧಾನವೂ ಆಯಿತು.
ನಾವು ಬಹಳಷ್ಟು ಜನ ಬಯಸುವುದು ನಮಗೆ ಕಷ್ಟ-ಕೋಟಲೆಗಳು ಇರಬಾರದು, ತೊಂದರೆ-ತಾಪತ್ರಯಗಳು ಬರಬಾರದು, ರೋಗ-ರುಜಿನಗಳು ಕಾಡಬಾರದು, ನಿಂದೆ-ಅವಮಾನಗಳು ಬರಬಾರದು ಎಂಬುದಾಗಿ. ಆದರೆ ಇಂತಹ ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತವೆ. ಬರುವ ಪ್ರಮಾಣದಲ್ಲಿ ಹೆಚ್ಚು ಕಡಮೆ ಇರಬಹುದು.
ಸಾಮರ್ಥ್ಯನಿಕಷ
ಮನುಷ್ಯನ ನಿಜವಾದ ಸಾಮರ್ಥ್ಯ ಪ್ರಕಟವಾಗುವುದೇ ಕಷ್ಟದ ಕಾಲದಲ್ಲಿ; ಸಮಸ್ಯೆಯ ಸಮಯದಲ್ಲಿ. ಹನುಮಂತನ ಅಪಾರ ಸಾಮರ್ಥ್ಯ ಗೊತ್ತಾದದ್ದೇ ಸಮುದ್ರೋಲ್ಲಂಘನ ಮಾಡಿದಾಗ. ಅಲ್ಲಿಯ ತನಕ ಆತ ಎಲೆಮರೆಯ ಕಾಯಿಯಂತಿದ್ದ. ಸ್ವತಃ ಆತನ ಸಾಮರ್ಥ್ಯ ಆತನಿಗೆ ಗೊತ್ತಿರಲಿಲ್ಲ. ಲಂಕೆಗೆ ಹೋಗಿ ಸೀತೆಯನ್ನು ಹುಡುಕಬೇಕು; ಆದರೆ ಲಂಕೆಯನ್ನು ತಲಪಲು ಸಮುದ್ರವನ್ನು ಹಾರುವವರು ಯಾರು ಎಂಬ ಸಮಸ್ಯೆ ಬಂದಾಗ ಹನುಮಂತನಿಂದ ಇದಕ್ಕೊಂದು ಪರಿಹಾರ ಸಿಕ್ಕಿತು. ಹನುಮಂತನ ಸಾಮರ್ಥ್ಯ ಜಗತ್ತಿಗೆ ಗೊತ್ತಾಯಿತು.
ಜೀವನದುದ್ದಕ್ಕೂ ಸಮಸ್ಯೆಯೇ ಇಲ್ಲದೆ ಸುಖವೇ ಇದ್ದರೆ ಯಾರ ಬದುಕೂ ಅರಳುವುದಿಲ್ಲ. ಜೀವನ ಅರಳಬೇಕಾದರೆ, ಬೆಳಗಬೇಕಾದರೆ ‘ಕಷ್ಟ’ ಎಂಬ ಪರೀಕ್ಷೆ ಇರಬೇಕು. ಆದ್ದರಿಂದ ಭಗವಂತ ಸೋಲು-ಗೆಲವು, ಸುಖ-ದುಃಖ, ಮಾನ-ಅಪಮಾನ ಎಂಬಂತಹ ದ್ವಂದ್ವಗಳನ್ನು ಮನುಷ್ಯನಿಗೆ ಕೊಟ್ಟಿದ್ದಾನೆ. ಸೋಲು ಮನುಷ್ಯನನ್ನು ನರಳಿಸಲು ಭಗವಂತ ಸೃಷ್ಟಿಸಿಲ್ಲ; ಬದಲಿಗೆ ಜೀವನವನ್ನು ಅರಳಿಸಲು ಸೃಷ್ಟಿಸಿದ್ದಾನೆ. ಮನುಷ್ಯನಿಗೆ ಸಿಹಿ ಇಷ್ಟವೆಂದು ನಿರಂತರ ಸಿಹಿ ಮಾತ್ರ ತಿಂದರೆ ಅದರಿಂದ ಆರೋಗ್ಯವೂ ಹಾಳಾಗುತ್ತದೆ, ನಾಲಿಗೆ ರುಚಿಯೂ ಕೆಟ್ಟುಹೋಗುತ್ತದೆ. ಆದ್ದರಿಂದ ಸಿಹಿಯೊಂದಿಗೆ ಕಹಿಯೂ ಬೇಕು. ಬೇವು-ಬೆಲ್ಲವಿದ್ದಾಗಲೇ ಜೀವನ ಸಹ್ಯವಾಗುವುದು.
ನಿರ್ಮಾಣ ಹಂತದಲ್ಲಿದ್ದ ಒಂದು ಕಟ್ಟಡ. ಅದರ ೧೦ನೇ ಮಹಡಿಯಿಂದ ಮೇಲ್ವಿಚಾರಕನೊಬ್ಬ ಕೆಳ ಅಂತಸ್ತಿನಲ್ಲಿದ್ದ ಕೆಲಸಗಾರನನ್ನು ಕೂಗಿ ಕರೆದ. ಆದರೆ ವಿಪರೀತ ಗದ್ದಲವಿದ್ದ ಕಾರಣ ಕೆಲಸಗಾರನಿಗೆ ಮೇಲ್ವಿಚಾರಕನ ಧ್ವನಿ ಕೇಳಿಸಲಿಲ್ಲ. ಮೇಲ್ವಿಚಾರಕ ಇನ್ನೂ ಗಟ್ಟಿಯಾಗಿ ಕರೆದಾಗಲೂ ಆತನ ಕೂಗು ಕೆಲಸಗಾರನ ಗಮನಕ್ಕೆ ಬರಲೆ ಇಲ್ಲ. ಆಗ ಆತನ ಗಮನ ಸೆಳೆಯಲು ಮೇಲ್ವಿಚಾರಕ ೧೦ ರೂಪಾಯಿಯ ನೋಟೊಂದನ್ನು ಮೇಲಿನಿಂದ ಎಸೆದ. ಕೆಳಗೆ ನಿಂತ ವ್ಯಕ್ತಿ ಆ ನೋಟನ್ನು ಮೆಲ್ಲನೆ ಜೇಬಿಗಿಳಿಸಿ ತನ್ನ ಕೆಲಸದಲ್ಲಿ ನಿರತನಾದ. ಆದರೆ ಮೇಲೆ ಮಾತ್ರ ನೋಡಲಿಲ್ಲ. ಈ ಬಾರಿ ಮೇಲ್ವಿಚಾರಕ ೫೦೦ ರೂಪಾಯಿಯ ನೋಟೊಂದನ್ನು ಎಸೆದ. ಕೆಲಸಗಾರ ಅಕ್ಕಪಕ್ಕ ನೋಡಿ ಯಾರೂ ಗಮನಿಸುವುದಿಲ್ಲ ಎಂಬುದಾಗಿ ಖಾತರಿಯಾದಾಗ ಅದನ್ನು ಎತ್ತಿಕೊಂಡು ಜೇಬಿಗಿಳಿಸಿದನೇ ವಿನಾ ಇದು ಎಲ್ಲಿಂದ ಬಂತು ಎಂದು ತಿಳಿಯಲು ಮೇಲೆ ನೋಡಲೇ ಇಲ್ಲ. ಕೊನೆಗೆ ಮೇಲ್ವಿಚಾರಕ ಚಿಕ್ಕ ಕಲ್ಲನ್ನೆತ್ತಿಕೊಂಡು ಕೆಲಸಗಾರನ ಮೇಲೆ ಎಸೆದ. ಕಲ್ಲು ತಲೆಮೇಲೆ ಬಿದ್ದ ತಕ್ಷಣವೇ ಕೆಲಸಗಾರ ಮೇಲೆ ನೋಡಿದ!
ನಮ್ಮ ಜೀವನವೂ ಈ ಕಥೆಗಿಂತ ಭಿನ್ನವಾಗಿಲ್ಲ. ಮೇಲಿಂದ ಭಗವಂತನು ನಮ್ಮ ಜೊತೆಗೆ ಮಾತನಾಡಲು ಪ್ರಯತ್ನಿಸುತ್ತಲೇ ಇರುತ್ತಾನೆ. ಆದರೆ ಅದನ್ನು ಕೇಳಿಸಿಕೊಳ್ಳದಷ್ಟು ನಾವು ನಮ್ಮ ಪ್ರಾಪಂಚಿಕ ಕೆಲಸದಲ್ಲಿ ಮುಳುಗಿಹೋಗಿರುತ್ತೇವೆ.
‘ನ ದೈನ್ಯಂ, ನ ಪಲಾಯನಂ’
ಸಮಸ್ಯೆ ಎದುರಾದಾಗ ಅದನ್ನು ಪರಿಹಿಸಲು ಪ್ರಯತ್ನಿಸಬೇಕೇ ವಿನಾ ಭಗವಂತನನ್ನೊ, ಇನ್ನಾರನ್ನೊ ದೂರುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಶಾಸ್ತ್ರದಲ್ಲಿ ಒಂದು ಮಾತು ಬರುತ್ತದೆ – ‘ನ ದೈನ್ಯಂ, ನ ಪಲಾಯನಂ’ ಎಂಬುದಾಗಿ. ಸಮಸ್ಯೆ ಬಂದಾಗ ನಾವು ಅದರ ಎದುರು ದೀನರಾಗುವುದಲ್ಲ, ಅಥವಾ ಸಮಸ್ಯೆ ಬಿಟ್ಟು ಓಡಿಹೋಗುವುದಲ್ಲ. ಸಮಸ್ಯೆಗಳು ಬಂದಾಗ ಅವುಗಳನ್ನು ನೋಡುವ ನಮ್ಮ ಋಣಾತ್ಮಕ ದೃಷ್ಟಿಯಲ್ಲಿ ಪರಿವರ್ತನೆ ಮಾಡಿಕೊಳ್ಳುವುದು ತೀರಾ ಅಗತ್ಯ. ಸಮಸ್ಯೆಗಳು ನಿಜವಾಗಿ ನಮ್ಮನ್ನು ನೋಯಿಸುವುದಿಲ್ಲ. ಅದನ್ನು ವ್ಯಾಖ್ಯಾನಿಸುವ ರೀತಿ ನೋಯಿಸುತ್ತದೆ. ಮಕ್ಕಳು ಆಟ ಆಡಿ ಬಿದ್ದಾಗ ಅಲ್ಲಿ ಯಾರೂ ಇಲ್ಲದಿದ್ದರೆ ಅಳುವುದಿಲ್ಲ; ಆದರೆ ಎಷ್ಟೋ ಹೊತ್ತಿನ ನಂತರ ಅಮ್ಮನನ್ನು ನೋಡಿದರೆ ಬಿದ್ದದ್ದನ್ನು ವಿವರಿಸಿ, ನೋವಾಗುತ್ತದೆಂದು ಜೋರಾಗಿ ಅಳುತ್ತದೆ. ಸಮಸ್ಯೆಯಿಂದ ತೊಂದರೆಯಿಲ್ಲ, ನಾವು ಸರ್ಜನಶೀಲರಾಗಲು ಅದೊಂದು ಸವಾಲು ಎಂದು ತಿಳಿದುಕೊಂಡರೆ ಸಮಸ್ಯೆಯೊಳಗೇ ಪರಿಹಾರಮಾರ್ಗಗಳು ಗೋಚರಿಸುತ್ತವೆ.
ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ನಾವು ನಮ್ಮ ವ್ಯಕ್ತಿತ್ವವನ್ನು ಸಮಸ್ಯೆಗಿಂತ ದೊಡ್ಡದಾಗಿ ಬೆಳೆಸಿಕೊಳ್ಳಬೇಕು. ಈ ರೀತಿ ಬೆಳೆಸಿಕೊಳ್ಳುವ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಅದರ ಅರಿವು ಮಾತ್ರ ನಮಗಿರುವುದಿಲ್ಲ. ಸಮಸ್ಯೆಯ ಸಣ್ಣ ಸರಳರೇಖೆಯೆದುರು ನಾವು ದೊಡ್ಡ ರೇಖೆಯಾಗಿ ರೂಪುಗೊಂಡರೆ, ಸಮಸ್ಯೆಯ ರೇಖೆ ಚಿಕ್ಕದಾಗುತ್ತದೆ. ಆಗ ಅದನ್ನು ಪರಿಹರಿಸಲು ಸುಲಭವಾಗುತ್ತದೆ. ಅಕಸ್ಮಾತ್ ಆಗಿ ನಾವು ಸಮಸ್ಯೆಗಳಿಗೆ ಹೆದರಿದರೆ ಅದು ಆಕಾಶದೆತ್ತರಕ್ಕೆ ಬೆಳೆದು ನಮ್ಮನ್ನು ಇನ್ನಷ್ಟು ಚಿಂತೆಯ ಚಿತೆಗೆ ತಳ್ಳಿಬಿಡುತ್ತದೆ.
ಅರಣ್ಯದ ದೊಡ್ಡ ಮರವೊಂದರ ಪಕ್ಕದಲ್ಲಿ ಒಂದು ಸರೋವರವಿತ್ತು. ಸರೋವರದಲ್ಲಿ ಒಂದು ಮುದಿಮೊಸಳೆಯಿತ್ತು. ನೂರಾರು ಕಪ್ಪೆಗಳಿದ್ದವು. ಮರದ ಮೇಲೊಂದು ಮುದಿಗೂಬೆ ಕುಳಿತಿರುತ್ತಿತ್ತು. ಅದು ದಿನವಿಡೀ ಸರೋವರದಲ್ಲಿ ನಡೆಯುವುದನ್ನೆಲ್ಲವನ್ನೂ ಗಮನಿಸುತ್ತಿತ್ತು. ವಯಸ್ಸಾಗಿದ್ದ ಮೊಸಳೆಯು ಪ್ರತಿದಿನ ಸರೋವರದಲ್ಲಿದ್ದ ಕಪ್ಪೆಗಳಲ್ಲಿ ಕೆಲವೊಂದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಸರೋವರದಲ್ಲಿ ನೂರಾರು ಕಪ್ಪೆಗಳಿದ್ದರೂ ಮೊಸಳೆಯಿಂದಾಗಿ ಅವುಗಳ ಸಂಖ್ಯೆ ಕಡಮೆಯಾಗುತ್ತಾ ಬಂದು, ಕೊನೆಗೊಂದು ದಿನ ಒಂದೇ ಒಂದು ಮುದಿಕಪ್ಪೆ ಉಳಿದುಕೊಂಡಿತ್ತು. ಅದು ಮರದ ಮೇಲಿದ್ದ ಗೂಬೆಗೆ ‘ನನ್ನ ಮಕ್ಕಳು-ಮೊಮ್ಮಕ್ಕಳು, ಬಂಧು-ಬಳಗದ ಕಪ್ಪೆಗಳನ್ನೆಲ್ಲ ಮೊಸಳೆ ತಿಂದು ಮುಗಿಸಿದೆ. ಆಗ ನನಗೆ ಅಳು ಬರಲಿಲ್ಲ. ಈಗ ಉಳಿದಿರುವ ನನ್ನನ್ನೂ ಮೊಸಳೆ ನಾಳೆ ತಿಂದುಹಾಕುತ್ತದೆ. ನನಗೀಗ ಅಳು ಬರುತ್ತಿದೆ. ನಾನೇನು ಮಾಡಲಿ?’ ಎಂದು ಗೋಳಾಡಿತು. ಮುದಿಗೂಬೆ ಗಂಭೀರವಾಗಿ ‘ನೀನು ಸರೋವರದಲ್ಲೇ ಇದ್ದರೆ ಮೊಸಳೆ ನಿನ್ನನ್ನೂ ತಿನ್ನುತ್ತದೆ. ನೀನು ಈ ಮರದ ಕೊಂಬೆಯ ಮೇಲೆ ಹಾರಿ ಕುಳಿತುಕೋ. ಮೊಸಳೆಯು ಮರವನ್ನೇರಲಾರದು. ನೀನು ಬದುಕಿಕೊಳ್ಳುತ್ತೀಯ’ ಎಂದಿತು. ಕಪ್ಪೆಯು ‘ನಾನು ಹೆಚ್ಚೆಂದರೆ ನಾಲ್ಕೈದಡಿ ಜಿಗಿಯಬಲ್ಲೆ. ಇಪ್ಪತ್ತಡಿ ಎತ್ತರವಿರುವ ಮರದ ಮೇಲಕ್ಕೆ ಹೇಗೆ ಹಾರಲಿ?’ ಎಂದು ಕೇಳಿತು. ಅದಕ್ಕೆ ಮುದಿಗೊಬೆಯು ‘ನಾನು ಅಮೂಲ್ಯವಾದ ಸಲಹೆಗಳನ್ನು ಉಚಿತವಾಗಿ ಕೊಡಬಲ್ಲೆ, ಅದನ್ನು ಆಚರಣೆಗೆ ತರುವುದನ್ನು ಹೇಳಲಾರೆ’ ಎಂದುಬಿಟ್ಟಿತು.
ಕಪ್ಪೆಯು ದಡದಲ್ಲಿ ಕುಳಿತುಕೊಂಡು ಹಿಂಗಾಲುಗಳನ್ನು ನೆಲಕ್ಕೂರಿ. ಮುಂಗಾಲುಗಳನ್ನು ಮೇಲಕ್ಕೆತ್ತಿ ಮರದ ಕಡೆ ಜಿಗಿಯಲು ಪ್ರಯತ್ನಿಸಿತು. ಅದು ನಾಲ್ಕೈದು ಅಡಿ ಎತ್ತರಕ್ಕೆ ಮಾತ್ರ ಜಿಗಿಯಲು ಯಶಸ್ವಿಯಾಯಿತು. ಆದರೆ ಅದು ಪ್ರಯತ್ನವನ್ನು ಬಿಡಲಿಲ್ಲ. ವಟರ್-ವಟರ್ ಎನ್ನುತ್ತ ಮತ್ತೆ-ಮತ್ತೆ ಜಿಗಿಯುವ ಪ್ರಯತ್ನ ಮಾಡುತ್ತಿತ್ತು. ಕಪ್ಪೆ ಮಾಡುತ್ತಿದ್ದ ಸದ್ದು ಕೇಳಿಸಿಕೊಂಡ ಮೊಸಳೆಯು ಕುತೂಹಲದಿಂದ ದಡಕ್ಕೆ ಬಂದು ಕುಳಿತುಕೊಂಡಿತು. ಕಪ್ಪೆಯ ಜಿಗಿದಾಟವನ್ನು ನೋಡಿ ಅದು ಗಟ್ಟಿಯಾಗಿ ನಕ್ಕುಬಿಟ್ಟಿತು. ನಗುವಿನ ಸದ್ದುಕೇಳಿದ ಕಪ್ಪೆ ಹಿಂತಿರುಗಿ ನೋಡಿದಾಗ ತನ್ನ ಹಿಂದೆಯೇ ಮೊಸಳೆ ಇದ್ದುದನ್ನು ಕಂಡಿತು. ಅದರ ಪ್ರಾಣಭಯ ಇನ್ನೂ ಹೆಚ್ಚಾಗಿ ಮೊಸಳೆಯತ್ತಲೇ ಅದು ಜಿಗಿದಾಗ, ಮೊಸಳೆಯ ಬೆನ್ನ ಮೇಲೆಯೇ ಹೋಗಿ ಕುಳಿತಿತ್ತು! ಮೊಸಳೆಗೆ ತನ್ನ ಬೆನ್ನ ಮೇಲೆಯೇ ಕುಳಿತಿದ್ದ ಕಪ್ಪೆಯನ್ನು ತಿನ್ನಲು ಸಾಧ್ಯವಿರಲಿಲ್ಲ. ಕಪ್ಪೆ ಸುರಕ್ಷಿತವಾಗಿ ಉಳಿಯಿತು.
ಸಮಸ್ಯೆಯಿಂದ ಪಾರಾಗಬೇಕಾದರೆ ಸಮಸ್ಯೆಗಿಂತ ಎತ್ತರಕ್ಕೆ ಜಿಗಿಯಬೇಕು. ಸಮಸ್ಯೆಯ ಮೇಲೆಯೇ ಹೋಗಿ ಕುಳಿತುಕೊಳ್ಳಬೇಕು!
ಗಾಳಿಯೊಂದಿಗೆ ಗುದ್ದಾಟ
ಮನುಷ್ಯನ ಬಹುದೊಡ್ಡ ದೌರ್ಬಲ್ಯವೆಂದರೆ ಭವಿಷ್ಯದಲ್ಲಿ ಸಮಸ್ಯೆ ಬರಬಹುದೆಂದು ಇಂದು ಚಿಂತಿತರಾಗುವುದು. ಇಂತಹ ಬಹುತೇಕ ಸಂದರ್ಭಗಳಲ್ಲಿ ಸಮಸ್ಯೆಗಳು ಬರುವುದೇ ಇಲ್ಲ. ಬಾರದೆ ಇರುವ ಸಮಸ್ಯೆಯ ಬಗ್ಗೆ ಚಿಂತಿತರಾಗುವುದೆಂದರೆ ಗಾಳಿಯೊಂದಿಗೆ ಗುದ್ದಾಟ ನಡೆಸಿದಂತೆ. ನಿಜವಾದ ಸಮಸ್ಯೆಯನ್ನು ಎದುರಿಸಬಹುದು, ಕಾಲ್ಪನಿಕ ಸಮಸ್ಯೆಗಳನ್ನು ಎದುರಿಸುವುದು ಕಷ್ಟ. ಅವುಗಳಿಗೆ ಪರಿಹಾರವಿಲ್ಲ. ಇಲ್ಲದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುವುದೆಂದರೆ ಗಾಢ ಕತ್ತಲೆಯಲ್ಲಿ ಇಲ್ಲದ ಕಪ್ಪು ಬೆಕ್ಕನ್ನು ಹುಡುಕಲು ಪ್ರಯತ್ನಿಸಿದಂತೆ.
ಹಲವು ಬಾರಿ ನಮ್ಮ ತಪ್ಪಿನಿಂದ ಸಮಸ್ಯೆ ಸೃಷ್ಟಿಯಾದರೆ, ಇನ್ನು ಕೆಲ ಸಂದರ್ಭದಲ್ಲಿ ತಪ್ಪು ತಿಳಿವಳಿಕೆಯಿಂದ ಸಮಸ್ಯೆಗಳು ನಿರ್ಮಾಣವಾಗುತ್ತವೆ. ಇಂತಹ ಸಂದರ್ಭದಲ್ಲಿ ನಾವು ತಾಳ್ಮೆಯನ್ನು ಕಳೆದುಕೊಳ್ಳಬಾರದು. ನಮ್ಮಿಂದ ಆದ ತಪ್ಪನ್ನು ಒಪ್ಪಿಕೊಂಡು ಅದನ್ನು ಸರಿಪಡಿಸಲು ಪ್ರಯತ್ನಿಸಬೇಕು. ಯಾರ ಬಗ್ಗೆಯೂ ‘ಇದಮಿತ್ಥಂ’ ಎಂಬುದಾಗಿ ನಿರ್ಣಯಕ್ಕೆ ಬರಬಾರದು. ಯಾರನ್ನೂ ತಪ್ಪು ತಿಳಿದುಕೊಳ್ಳಬಾರದು. ಸಮಸ್ಯೆಯ ಆಳಕ್ಕಿಳಿದು ಪರಾಮರ್ಶಿಸಿ ನೋಡಿಕೊಳ್ಳುವಾಗ ನಾವು ನಿಷ್ಪಕ್ಷವಾಗಿ ವಿಮರ್ಶೆ ಮಾಡುವುದಿಲ್ಲ, ಬದಲಿಗೆ ಪೂರ್ವಗ್ರಹಪೀಡಿತರಾಗಿಯೇ ನಮ್ಮ ಮೂಗಿನ ನೇರಕ್ಕೆ ವಿಮರ್ಶೆ ಮಾಡುತ್ತೇವೆ. ಇದೇ ಸಮಸ್ಯೆಗೆ ಮೂಲ ಹೇತುವಾಗುತ್ತದೆ.
ಬಸ್ ನಿರ್ವಾಹಕನ ಹುದ್ದೆಗೆ ರಾಜು ಆಯ್ಕೆಯಾದ. ಖುಷಿಯಿಂದ ಕೆಲಸಕ್ಕೂ ಹಾಜರಾದ. ತನ್ನ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು ಅಂದುಕೊಂಡ. ಬಸ್ ಪ್ರಯಾಣಿಕರೊಂದಿಗೆ ನಗುನಗುತ್ತಾ ಸ್ನೇಹದಿಂದ ವ್ಯವಹರಿಸಿದ. ಮೊದಲ ಕೆಲವು ದಿನ ಯಾವ ಸಮಸ್ಯೆಯೂ ಉಂಟಾಗಲಿಲ್ಲ.
ಆದರೆ ರಾಜುವಿಗೆ ತಲೆನೋವು ಪ್ರಾರಂಭವಾದದ್ದು ದೊಡ್ಡರಂಗಪ್ಪ ಪ್ರತಿದಿನವೂ ಬಸ್ ಪ್ರಯಾಣಿಕನಾಗಿ ಬರತೊಡಗಿದಾಗ. ಹೆಸರಿಗೆ ತಕ್ಕಂತೆ ಆತ ದೊಡ್ಡ ಆಸಾಮಿ. ಆರಡಿ ಎತ್ತರದ ದಪ್ಪ ಶರೀರ, ಪೊದರು ಮೀಸೆಯಿದ್ದು ನೋಡಿದವರಿಗೆ ಭಯ ಹುಟ್ಟಿಸುವ ಆಕೃತಿ. ಬಂದು ಕುಳಿತೊಡನೆ, ದೊಡ್ಡರಂಗಪ್ಪ ದುಡ್ಡು ಕೊಡಲಿಕ್ಕಿಲ್ಲ ಎನ್ನುವುದು ಅವನ ಅಭ್ಯಾಸ. ರಾಜು ಸಣಕಲು ವ್ಯಕ್ತಿ, ಹಣ ಕೇಳಲು ಧೈರ್ಯವೂ ಬರಲಿಲ್ಲ. ಹೀಗೆ ಕೆಲಸಮಯ ಕಳೆಯಿತು.
ಹೇಗಾದರೂ ರಂಗಪ್ಪನಿಗೆ ಬುದ್ಧಿ ಕಲಿಸಬೇಕೆಂದು ರಾಜು ಕರಾಟೆ, ಜೂಡೋ ಕಲಿತ. ಶಾರೀರಿಕ ವ್ಯಾಯಮ ಮಾಡಿದ. ಗಟ್ಟಿತನದೊಂದಿಗೆ ಧೈರ್ಯವೂ ಬಂತು. ಅದೊಂದು ದಿನ ರಂಗಪ್ಪ ದುಡ್ಡು ಕೊಡಲಿಕ್ಕಿಲ್ಲ ಎಂದಾಗ, ಯಾಕೆ? ಎಂದು ರಾಜು ಕೆಕ್ಕರಿಸಿ ನೋಡಿದಾಗ ನನ್ನಲ್ಲಿ ಬಸ್ಪಾಸ್ ಇದೆ ಎಂಬ ಉತ್ತರ ಬಂತು. ಇಲ್ಲದ ಸಮಸ್ಯೆಗೆ ಹೆದರಿದೆನಲ್ಲ ಎಂದು ರಾಜು ಒಳಗೊಳಗೇ ನಾಚಿದ.
ಒಮ್ಮೆ ಒಬ್ಬ ಸಾಮ್ರಾಟನ ಆಸ್ಥಾನದಲ್ಲಿ ಮುಖ್ಯಮಂತ್ರಿಯ ಸ್ಥಾನ ತೆರವಾಯಿತು. ಮುಖ್ಯಮಂತ್ರಿಯಾಗಲು ಅನೇಕ ಅರ್ಹತೆಗಳು ಇರಬೇಕು. ತಾಳ್ಮೆ, ಸಮಸ್ಯೆ ಬಂದಾಗ ಸಮರ್ಥವಾಗಿ ಎದುರಿಸುವ ಸಾಮರ್ಥ್ಯ, ಸಮಯಾಸಮಯ ಪ್ರಜ್ಞೆ, ಮುತ್ಸದ್ದಿತನ ಮತ್ತು ಬುದ್ಧಿವಂತಿಕೆ ಮುಖ್ಯವಾದವು. ಇದಕ್ಕೆಂದು ಅನೇಕ ಪರೀಕ್ಷೆಗಳನ್ನು ರೂಪಿಸಲಾಯಿತು. ಕಡೆಗೂ ಕಡೆಯ ಸುತ್ತಿನ ಪರೀಕ್ಷೆಗೆಂದು ಮೂವರು ಆಯ್ಕೆಯಾದರು. ಇಷ್ಟರಲ್ಲಿ ಒಂದು ಸುದ್ದಿ ಹಬ್ಬಿತ್ತು. ಈ ಅಂತಿಮ ಪರೀಕ್ಷೆ ಒಂದು ಅದ್ಭುತ ಬೀಗಕ್ಕೆ ಸಂಬಂಧಿಸಿತ್ತು. ಈ ಮೂವರನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ಈ ಅದ್ಭುತ ಬೀಗ ಹಾಕಲಾಗುವುದಂತೆ. ಮೇಧಾವಿ ಗಣಿತಜ್ಞ ಮಾತ್ರ ಈ ಬೀಗದ ರಹಸ್ಯ ಭೇದಿಸಬಲ್ಲನಂತೆ. ಮೊದಲು ಬೀಗ ಬಿಚ್ಚಿ ಹೊರಬರುವವನಿಗೆ ಮಂತ್ರಿ ಪದವಿಯಂತೆ. ಇದು ಆ ವದಂತಿಯ ಸಾರ.
ಪರೀಕ್ಷೆಯ ದಿನ ಸಮೀಪಿಸುತ್ತಿದ್ದಂತೆ ಈ ಮೂವರೂ ಬಹಳ ತಯಾರಿ ನಡೆಸಿದರು. ನಿರೀಕ್ಷಿಸಿದಂತೆ ಪರೀಕ್ಷೆಯ ದಿನ ಮೂವರನ್ನು ಒಂದು ಕೋಣೆಯಲ್ಲಿ ಕೂಡಿಹಾಕಿದರು. ವಿಶೇಷವೆಂದರೆ, ಬೀಗ ಒಳಗಿನಿಂದ ಹಾಕಲ್ಪಟ್ಟಿತ್ತು; ಹೊರಗಿನಿಂದಲ್ಲ. ಮೂವರಲ್ಲಿ ಒಬ್ಬ ನಿರಾತಂಕದಿಂದಿದ್ದ, ನಿಶ್ಚಿಂತೆಯಿಂದಿದ್ದ. ಉಳಿದಿಬ್ಬರು ಸೋತುಹೋದಂತೆ ಕಂಡುಬರುತ್ತಿದ್ದರು. ಮುನ್ನಾ ದಿನದ ರಾತ್ರಿ ಪೂರ್ತಿ ಅವರು ನಿದ್ರಿಸಿರಲಿಲ್ಲ. ಗಣಿತದ ಸಮಸ್ಯೆಗಳನ್ನು ಉರುಹೊಡೆದು, ಚಿಕ್ಕ ಚಿಕ್ಕ ಚೀಟಿಗಳಲ್ಲಿ ಬರೆದು ಸಮಯಕ್ಕಿರಲಿ ಎಂದು ಸಾಧ್ಯವಿದ್ದಲ್ಲೆಲ್ಲಾ ಅಡಗಿಸಿಟ್ಟುಕೊಂಡಿದ್ದರು. ನಮ್ಮ ಕಥಾನಾಯಕ ಮಾತ್ರ ಸುಖವಾಗಿ ನಿದ್ದೆ ಮಾಡಿದ್ದರಿಂದ ಲವಲವಿಕೆಯಿಂದಿದ್ದ.
ಹಬ್ಬಿದ ವದಂತಿಯಂತೆ ಬೀಗ ಬಹು ಕ್ಲಿಷ್ಟ ಸ್ವರೂಪದ್ದಾಗಿದ್ದಂತೆ ಕಂಡುಬರುತ್ತಿತ್ತು. ಗಣಿತದ ಅಂಕೆ-ಸಂಖ್ಯೆಗಳು ಅದರ ಮೇಲೆ ಕೆತ್ತಲ್ಪಟ್ಟಿದ್ದವು. ಅದರ ರೂಪ ಅದ್ಭುತ ತಾಂತ್ರಿಕತೆಯಿಂದ ಕೂಡಿತ್ತು. ಆ ಕೋಣೆಯನ್ನು ಸುತ್ತುವರಿದು, ಕಿಟಕಿಯಿಂದ ರಾಜ ಮತ್ತವನ ಮಂತ್ರಿಗಳು, ಅಧಿಕಾರಿಗಳು ಭಾವೀ ಮುಖ್ಯಮಂತ್ರಿಗಳನ್ನು ಗಮನಿಸುತ್ತಿದ್ದರು. ಮೊದಲನೆಯವ ಎದ್ದು ಬೀಗವನ್ನು ಅಭ್ಯಸಿಸಿದ, ತಲೆಕೆರೆದುಕೊಂಡ. ಏನು ಮಾಡಿದರೂ ಅವನಿಗೇನೊ ಹೊಳೆಯಲಿಲ್ಲ. ಎರಡನೆಯವನ ಪಾಡೂ ಹಾಗೆಯೇ ಆಯಿತು. ಬೀಗ ಪೆಡಂಭೂತವಾಗಿ ಮಂತ್ರಿಪದವಿ ಮತ್ತವರ ಮಧ್ಯೆ ನಿಂತಿತ್ತು. ಸೋಲನ್ನೊಪ್ಪಿಕೊಂಡು ಅವರಿಬ್ಬರೂ ತಲೆತಗ್ಗಿಸಿದರು. ಅನಂತರ ಮೂರನೆಯವ ಎದ್ದು ಬಂದ. ಒಮ್ಮೆ ದೀರ್ಘವಾಗಿ ಬೀಗವನ್ನು ನೋಡಿದವನೇ ಅದರ ಹಿಡಿಯನ್ನು ಹಿಡಿದು ಜಗ್ಗಿ ಎಳೆದ. ಏನಾಶ್ಚರ್ಯ! ಬಾಗಿಲು ತೆರೆಯಿತು.
ವಾಸ್ತವದಲ್ಲಿ ಬೀಗ ಹಾಕಿರಲೇ ಇಲ್ಲ. ಬೀಗ ಹಾಕಿರುತ್ತದೆ, ತೆರೆದರೆ ಮಾತ್ರ ಮಂತ್ರಿಪದವಿ ಎಂದು ಹಬ್ಬಿಸಿದ ಸುಳ್ಳು ವದಂತಿಯಿಂದ ಉಳಿದಿಬ್ಬರೂ ಮರುಳಾಗಿದ್ದರು. ಬೀಗ ಹಾಕದೆಯೂ ಪರೀಕ್ಷೆ ನಡೆಸಬಹುದು ಎಂಬುದು ಅವರ ಗಮನಕ್ಕೆ ಬಂದಿರಲೇ ಇಲ್ಲ.
ಇಲ್ಲದ ಸಮಸ್ಯೆಗಳು ಇದೆ ಎಂದು ಭ್ರಮಿಸಿದಾಗ ಇಂತಹ ಅವಾಂತರಗಳು ಆಗುತ್ತವೆ. ಬೀಗವೇ ಹಾಕಿಲ್ಲದಾಗ ಬೀಗವನ್ನು ತೆಗೆಯುವ ಪ್ರಶ್ನೆಯಾದರೂ ಎಲ್ಲಿಂದ ಬರಬೇಕು?
ಆಳ ತಿಳಿದು ಈಜು
ಸಮಸ್ಯೆ ಎದುರಾದಾಗ ಶಾಂತಮನಸ್ಸಿನಿಂದ ವಿವೇಚನೆ ನಡೆಸಿದರೆ ಸಮಸ್ಯೆಗಳ ಗಹನತೆಯ ಅರಿವಾಗುತ್ತದೆ. ಆಳ ತಿಳಿದ ಬಳಿಕ ಈಜು ಸುಲಭ. ಅದೇ ರೀತಿ ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಅದರ ಪರಿಹಾರವೂ ಸುಲಭ. ಬಹಳಷ್ಟು ಸಲ ಸಮಸ್ಯೆಗಳು ಎಷ್ಟು ಕ್ಷುಲ್ಲಕವಾಗಿರುತ್ತವೆಂದರೆ ಸ್ವಲ್ಪ ಕಾಲದ ನಂತರ ಕಡ್ಡಿಯನ್ನು ಗುಡ್ಡ ಮಾಡಿ ನೋಡಿದೆವೆಂದು ಪಶ್ಚಾತ್ತಾಪಪಡುವಂತಾಗುತ್ತದೆ. ಹಲವು ಬಾರಿ ಗುಡ್ಡದಂತೆ ಇದ್ದ ಸಮಸ್ಯೆ ಮಂಜಿನಂತೆ ಕರಗಿಹೋಗುತ್ತದೆ.
ಗಂಡ: ಅಯ್ಯೋ ದೇವರೇ! ಸ್ನಾನ ಮಾಡಿದಾಗಿನಿಂದ ನನಗೆ ಏನೋ ಆಗಿಬಿಟ್ಟಿದೆ. ಬಗ್ಗೋಕಾಗಲ್ಲ, ಏಳೋಕಾಗಲ್ಲ; ಬೆನ್ನು ಗೂನಾಗಿದೆ. ಹೊಟ್ಟೆ ಅಮುಕಿದ ಹಾಗಾಗಿದೆ, ತಲೆ ಎತ್ತೋಕಾಗ್ತಾ ಇಲ್ಲ.
ಹೆಂಡತಿ: ಅದು ಸರಿ, ಎಲ್ಲದ್ರೂ ನೋವಾಗ್ತಾ ಇದೆಯಾ?
ಗಂಡ: ನೋವೇನೂ ಇಲ್ಲ. ಪಾರ್ಶ್ಚವಾಯು ಹಿಡಿದಿದೆಯೊ ಏನೋ? ಡಾಕ್ಟ್ರನ್ನ ಕರಿ ಬೇಗ.
ಹೆಂಡತಿ: ಡಾಕ್ಟ್ರನ್ನ ಕರಿಯೋಕ್ಕೆ ಮುಂಚೆ ನಾನೇ ಒಂದು ಸಾರಿ ನೋಡ್ತೀನಿ. ಮೊದಲು ನಿಮ್ಮ ಅಂಗಿಯ ಕೊನೆಯ ಗುಂಡಿಯ ತೂತಿನಿಂದ ಪ್ಯಾಂಟಿನ ಮೇಲಿನ ಗುಂಡಿಯನ್ನು ಬಿಡಿಸಿ.
ಮಾನಸಿಕವಾಗಿ ದುರ್ಬಲರಾದವರು ಸಮಸ್ಯೆ ಬಂದಾಗ ಪರಿಹಾರಕ್ಕಾಗಿ ಯಾರಾರನ್ನೋ ಹುಡುಕಿ ಹೋಗುತ್ತಾರೆ. ಅವರ ಮಾನಸಿಕ ದುರ್ಬಲತೆಯನ್ನೇ, ಹೆದರಿಕೆಯನ್ನೇ ಬಂಡವಾಳವಾಗಿಸಿ ಲಾಭ ಮಾಡಿಕೊಳ್ಳಲು ಕೂತ ಜನರಿದ್ದಾರೆ. ಜನರ ಸಮಸ್ಯೆಗೆ ಪರಿಹಾರ ಸೂಚಿಸಲು ವೃತ್ತಿಪರರು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿದ್ದಾರೆ. ಇವರಿಗೆ ಜನರ ಸಮಸ್ಯೆ ಪರಿಹರಿಸುವುದಕ್ಕಿಂತಲೂ ತಮ್ಮ ಪರಿವಾರದ ಪೋಷಣೆಯೇ ಮುಖ್ಯವಾಗಿರುತ್ತದೆ.
ಓರ್ವ ಪುಸ್ತಕ ಮಾರಾಟಗಾರ ಸಮಸ್ಯೆಯಿಂದ ಬಳಲುತ್ತಿದ್ದವನ ಹತ್ತಿರ ಬಂದು, ಈ ಪುಸ್ತಕ ತೆಗೆದುಕೊಳ್ಳಿ, ಈ ಪುಸ್ತಕದಿಂದ ನಿಮ್ಮ ಯಾವುದೇ ಸಮಸ್ಯೆಗೆ ಅರ್ಧದಷ್ಟು ಪರಿಹಾರ ಸಿಗುತ್ತದೆ ಎಂದ.
ಹೌದಾ! ಆದರೆ ನನಗೆ ಅರ್ಧಸಮಸ್ಯೆ ಪರಿಹಾರವಾದರೆ ಪ್ರಯೋಜನವಿಲ್ಲ. ಏನಿದ್ದರೂ ಸಮಸ್ಯೆ ಪೂರ್ತಿ ಪರಿಹಾರವಾಗಬೇಕು ಎಂಬುದಾಗಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಹೇಳಿದ. ಆಗ ಮಾರಾಟಗಾರನೆಂದ: ಹಾಗಾದರೆ ಎರಡು ಪುಸ್ತಕ ಕೊಂಡುಕೊಳ್ಳಿ!
ಹಸ್ತಾಮಲಕ
ನಮ್ಮ ಸಮಸ್ಯೆಗಳಿಗೆ ಯಾರೋ ದಿಢೀರ್ ಪರಿಹಾರ ಸೂಚಿಸುವರೆಂದು ನಾವು ನಂಬುತ್ತೇವೆ. ಆದರೆ ಸಮಸ್ಯೆಗೆ ಪರಿಹಾರ ನಮ್ಮ ಕೈಯಲ್ಲೆ ಇರುತ್ತದೆ. ಅದು ಪುಸ್ತಕದಲ್ಲಿರುವುದಿಲ್ಲ; ನಮ್ಮ ಮಸ್ತಕದಲ್ಲಿರುತ್ತದೆ. ನಮ್ಮ ಪ್ರಯತ್ನವನ್ನು ಅವಲಂಬಿಸಿರುತ್ತದೆ.
ಯಾವ ಸಮಸ್ಯೆಯೂ ಮೊದಲ ದಿನದಷ್ಟು ಎರಡನೆಯ ದಿನ, ಎರಡನೆಯ ದಿನದಷ್ಟು ಮೂರನೆಯ ದಿನ ತೀವ್ರವಾಗಿರುವುದಿಲ್ಲ. ಸಮಸ್ಯೆಗೆ ಬೆಳವಣಿಗೆ ಎಂಬುದೇ ಇಲ್ಲ. ಅದಕ್ಕೆ ಎರಡೇ ಸ್ಥಿತಿ. ಒಂದು ಹುಟ್ಟು. ಇನ್ನೊಂದು ಸಾವು. ಸಮಸ್ಯೆ ಹುಟ್ಟಿತು ಎಂದು ತಿಳಿದ ತಕ್ಷಣ ಅದರ ಸಾವನ್ನಷ್ಟೇ ಕಾಯಬೇಕು. ಸಮಸ್ಯೆಗೆ ಸಾವು ಬೇಗ ಬರಬೇಕಾದರೆ ಅದನ್ನು ನಾವು ಎದುರಿಸಬೇಕು. ಸಮಸ್ಯೆಗಳಿಗೆ ಎಂದೂ ಅಂಜಬಾರದು. ಸಮಸ್ಯೆಯನ್ನು ಧೈರ್ಯದಿಂದ ನಿವಾರಿಸಲು ಪ್ರಯತ್ನಿಸದೆ ಅದರ ಬಗ್ಗೆಯೆ ಚಿಂತಿಸುತ್ತಿದ್ದರೆ ಅದು ನಮಗೆ ಇನ್ನೂ ಭಾರವಾಗುತ್ತದೆ; ನಿಜವಾದ ಸಮಸ್ಯೆಯಾಗಿ ಕಾಡುತ್ತದೆ.
ಅಧ್ಯಾಪಕಿಯೊಬ್ಬಳು ಒಂದು ಪುಟ್ಟ ಗ್ಲಾಸನ್ನು ಹಿಡಿದುಕೊಂಡು ವಿದ್ಯಾರ್ಥಿಗಳನ್ನು ಪ್ರಶ್ನಿಸಿದಳು, ‘ಈ ಗ್ಲಾಸಿನ ಭಾರವೇನು?’ ಅನೇಕ ಉತ್ತರಗಳು ಕೇಳಿಬಂದವು. ಆದರೆ ಓರ್ವ ಹುಡುಗಿ ಎದ್ದು ನಿಂತು ಹೇಳಿದಳು: ‘ಮೇಡಂ, ಅದು ಸಾಪೇಕ್ಷವಾಗಿದೆ. ಗ್ಲಾಸನ್ನು ಒಂದು ನಿಮಿಷ ಹಿಡಿದುಕೊಂಡರೆ ಒಂದು ಯೂನಿಟ್ ಭಾರವಿರುತ್ತದೆ. ಒಂದು ಗಂಟೆ ಕಾಲ ಹಿಡಿದುಕೊಂಡರೆ ತುಂಬಾ ಭಾರವಾಗುತ್ತದೆ. ಒಂದು ದಿನ ಹಿಡಿದುಕೊಂಡರೆ ಅದಕ್ಕಿಂತ ಹಿಂಸೆ ಬೇರಿಲ್ಲ’.
ನಮ್ಮನ್ನು ಯಾರಾದರೂ ಅವಮಾನಿಸಿದರೆ ಮನಸ್ಸಿಗೆ ಸ್ವಲ್ಪ ನೋವಾಗುತ್ತದೆ. ಆದರೆ ಈ ಅವಮಾನವನ್ನು ಸದಾ ನಮ್ಮ ಮನಸ್ಸಿನಲ್ಲಿ ಇರಿಸಿಕೊಂಡರೆ ಅದೇ ನೋವು ನಮಗೆ ಬಹಳ ಹಿಂಸೆ ಕೊಡುತ್ತದೆ. ನೋವುಗಳನ್ನು ಆಗಾಗಲೆ ಬಿಟ್ಟುಬಿಡಲು ಕಲಿಯಬೇಕು. ಮನಸ್ಸಿನಲ್ಲಿ ಅದನ್ನು ದೀರ್ಘಕಾಲ ಉಳಿಸಿಕೊಳ್ಳಬಾರದು. ಸಮಸ್ಯೆಯ ಬಗ್ಗೆ ಚಿಂತಿತರಾಗುವುದಕ್ಕಿಂತ ಚಿಂತನೆ ನಡೆಸಿದರೆ ಆಗ ಸಮಸ್ಯೆಗೊಂದು ಪರಿಹಾರವೂ ಸಿಗುತ್ತದೆ; ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ.
ಸಮಸ್ಯೆ ಬರುವುದು ಪರಿಹಾರ ಬಯಸುವವರಿಗೆ ಮಾತ್ರ. ಆದ್ದರಿಂದ ಸಮಸ್ಯೆ ಬಂದಾಗ ಯಾರನ್ನೂ ದೂರದೆ, ಯಾರ ಬಗ್ಗೆಯೂ ಗೊಣಗದೆ ಅದನ್ನು ನಿವಾರಿಸಲು ಪ್ರಯತ್ನಿಸೋಣ. ನಾವು ಸಮಸ್ಯೆಯ ಪಥಿಕರಾಗದೆ ಪರಿಹಾರದ ಹಾದಿಯಲ್ಲಿ ಸಣ್ಣ ಹೆಜ್ಜೆಯಾದರೂ ಸರಿ ದೃಢವಾಗಿ ಇಡೋಣ. ನಾವು ಪರಿಹಾರದ ಭಾಗವೋ? ಅಥವಾ ಸಮಸ್ಯೆಯ ಭಾಗವೋ? ಎಂಬುದನ್ನು ಮೊದಲು ನಿರ್ಧರಿಸೋಣ. ನಾವು ಪರಿಹಾರದ ಭಾಗವಾಗಿದ್ದರೆ ನಮ್ಮೆದುರು ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ನಾವು ಸಮಸ್ಯೆಯ ಭಾಗವಾಗಿದ್ದರೆ ನಮಗೆ ಯಾವ ಪರಿಹಾರವೂ ಕಾಣುವುದಿಲ್ಲ.
ಸಮಸ್ಯೆಯ ಬಗ್ಗೆ ದಲೈಲಾಮಾ ಹೇಳುತ್ತಾರೆ: ಒಂದು ಸಮಸ್ಯೆಗೆ ಪರಿಹಾರ ಇದೆ ಎಂದಾದರೆ ಅದರ ಬಗ್ಗೆ ಹೆಚ್ಚು ಹೆದರಬೇಕಾಗಿಲ್ಲ. ಚಿಂತೆಯಲ್ಲಿ ಮುಳುಗುವ ಅಗತ್ಯವಿಲ್ಲ. ಇಲ್ಲಿ ಮಾಡಬೇಕಾದ ಕೆಲಸವೆಂದರೆ ಪರಿಹಾರ ಹುಡುಕುವುದು. ನಿಮ್ಮ ಸಮಸ್ಯೆಗೆ ಪರಿಹಾರವೇ ಇಲ್ಲವೆಂದಾದರೆ, ಅದರ ಬಗ್ಗೆ ಚಿಂತಿಸುವ, ಹೆದರುವ ಅಥವಾ ಖಿನ್ನರಾಗುವ ಅಗತ್ಯವೇ ಇಲ್ಲ! ಏಕೆಂದರೆ ಅದನ್ನು ಸರಿಪಡಿಸಲು ನೀವು ಏನು ಮಾಡಿದರೂ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಎಷ್ಟು ಬೇಗ ನೀವು ವಾಸ್ತವವನ್ನು ಒಪ್ಪಿಕೊಳ್ಳುತ್ತೀರೊ ಅಷ್ಟು ಬೇಗ ನಿರಾಳವಾಗುತ್ತೀರಿ.
ಬದುಕು ಬಂಗಾರ
ಮನುಷ್ಯಪ್ರಯತ್ನದಿಂದ ಯಾವ ಸಮಸ್ಯೆಯನ್ನು ನಿವಾರಿಸಲು ಸಾಧ್ಯವೋ ಅದನ್ನು ನಿವಾರಿಸಲು ಪ್ರಾಮಾಣಿಕವಾಗಿ ಶಕ್ತಿಮೀರಿ ಪ್ರಯತ್ನಿಸೋಣ. ಮನುಷ್ಯಪ್ರಯತ್ನಕ್ಕೆ ಮೀರಿದ ಸಮಸ್ಯೆಯನ್ನು ಆ ಭಗವಂತನಿಗೆ ಬಿಡೋಣ; ಸಮಸ್ಯೆಯನ್ನು ಸೃಷ್ಟಿಸಿದವನಿಗೆ ಅದನ್ನು ನಿವಾರಿಸುವ ಹೊಣೆಗಾರಿಕೆಯೂ ಇರುತ್ತದೆ ಎಂದು ಬಲವಾಗಿ ನಂಬಿ ನಿಶ್ಚಿಂತರಾಗಿರೋಣ.
ನಮ್ಮ ವೈಯಕ್ತಿನ ಸಮಸ್ಯೆಗಳು ಕಡಮೆಯಾಗಬೇಕಾದರೆ ನಾವು ಸಮಾಜದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ನಾವು ಸಮಾಜದ ಸಮಸ್ಯೆಗಳ ಬಗ್ಗೆ ಹೆಚ್ಚುಹೆಚ್ಚು ಆಸಕ್ತಿಯನ್ನು ತೋರತೊಡಗಿದಂತೆ ನಮ್ಮ ವೈಯಕ್ತಿಕ ಸಮಸ್ಯೆಗಳು ಕ್ಷುಲ್ಲಕವಾಗತೊಡಗುತ್ತದೆ. ನಾವು ಸಮಾಜದಲ್ಲಿ ಹೆಚ್ಚುಹೆಚ್ಚು ಬೆರೆಯುತ್ತಾ, ಸ್ನೇಹ, ಸೌಜನ್ಯವನ್ನು ತೋರುತ್ತಾ ಹೋದಂತೆ ತಮ್ಮ ವೈಯಕ್ತಿಕ ಸಂಬಂಧಗಳು ವೃದ್ಧಿಯಾಗುತ್ತಾ, ಸುಮಧುರವಾಗುತ್ತಾ ಹೋಗುತ್ತವೆ. ಇನ್ನೊಂದೆಡೆ ನಮ್ಮಲ್ಲಿರುವ ಋಣಾತ್ಮಕ ಯೋಚನೆಗಳು ಕಡಮೆಯಾಗುತ್ತಾ ಹೋಗುತ್ತವೆ. ಧನಾತ್ಮಕ ಯೋಚನೆಗಳು ಅಧಿಕವಾಗಿ ಸಮಸ್ಯೆಯನ್ನು ಸಮರ್ಥವಾಗಿ ಪರಿಹರಿಸಲು ಸಹಕರಿಸುತ್ತವೆ.
ಜೀವನದಲ್ಲಿ ಸಮಸ್ಯೆ ಇರಬಹುದು. ಆದರೆ ಜೀವನವೇ ಸಮಸ್ಯೆಯಾಗಬಾರದು. ಜೀವನವೇ ಸಮಸ್ಯೆಯಾದಾಗ ಬದುಕು ಭಾರವಾಗುತ್ತದೆ. ಬದುಕು ಭಾರವಾಗದೆ ಬಂಗಾರವಾಗಬೇಕಾದರೆ ಸಮಸ್ಯೆಯೊಂದಿಗೆ ಕೊಚ್ಚಿಕೊಂಡು ಹೋಗಬಾರದು. ಸಮಸ್ಯೆಯ ತೆರೆಗಳ ಮೇಲಿಂದ ಆರಾಮವಾಗಿ ಈಜಿಕೊಂಡು ಹೋದರೆ ಜೀವನ ಒಂದು ಉತ್ಸವವಾಗುತ್ತದೆ, ಆನಂದಮಯವಾಗುತ್ತದೆ. ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಿ ಪರಿಹರಿಸಿಕೊಳ್ಳುವ ಕಲೆಯನ್ನು ಬೆಳೆಸಿಕೊಳ್ಳೋಣ.
it’s really awesome article .I’ve been reading your articles since my childhood days. I would like to thank you for making my life go easier and happier.