ಯುವಶಕ್ತಿ ಎಂದರೆ ಅದು ಸ್ವಚ್ಛಂದ ಪ್ರವಾಹ. ಯುವಶಕ್ತಿಯೆಂದರೆ ಅದು – ಪುಟಿವ ಚೈತನ್ಯ, ವೀರ್ಯವತ್ತತೆಯ ಮಹೋನ್ನತ ಸ್ಥಿತಿ. ಅದಮ್ಯ ಛಲದ ಮಹಾಬಲ. ಹುರುಪು-ಉತ್ಸಾಹದ ಮಹೋದಧಿ. ಮಹತ್ತ್ವಾಕಾಂಕ್ಷೆ ಹಾಗೂ ಸರ್ಜನಶೀಲತೆಯ ವೈಭವ. ದೃಢಮನೋಭೂಮಿಕೆ, ಭರವಸೆಯ ತಾಣ.
ಇಂದಿನ ಭಾರತ ಒಂದು ಯುವಶಕ್ತಿಸಂಪನ್ನ ರಾಷ್ಟ್ರ. ನಮ್ಮ ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ ೬೫ರಷ್ಟು ಜನರ ವಯೋಮಾನ ೩೫ ಅಥವಾ ಅದಕ್ಕಿಂತಲೂ ಕಡಮೆಯಿದೆ; ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನಮ್ಮ ಜನಸಂಖ್ಯೆಯ ೫೫% ಅಂದರೆ ೫೫,೫೦,೦೦,೦೦೦ ಜನರ ವಯಸ್ಸು ೨೫ಕ್ಕಿಂತಲೂ ಕಡಮೆ. ಮಹತ್ತರವಾದ ಈ ಯುವಶಕ್ತಿ, ತನ್ನದೇ ದೇಶದ ಪುರೋಭಿವೃದ್ಧಿಗಾಗಿ – ಸೈನ್ಯ, ಅಧ್ಯಾಪನ, ಸಂಶೋಧನೆ, ಶುದ್ಧವಿಜ್ಞಾನ, ರಾಜಕೀಯ, ಕೃಷಿ ಮುಂತಾಗಿ – ಎಲ್ಲ ರಂಗಗಳಲ್ಲೂ ಸಮನ್ವಿತವಾಗಿ ಸಕ್ರಿಯವಾಗಿ ತೊಡಗಿಕೊಳ್ಳುವಂತಾದರೆ – ಈ ೨೧ನೇ ಶತಮಾನ, ಅದು ಭಾರತದ್ದೇ ಆಗಲಾರದೇಕೆ?
ಭಾರತ ಸಮಾಜವಾದದಿಂದ ದೂರಸರಿದಮೇಲೆ, ಜಾಗತಿಕ ವಾಣಿಜ್ಯ ಮತ್ತು ಮಾಹಿತಿಕ್ರಾಂತಿಗೆ ತನ್ನನ್ನು ತಾನು ತೆರೆದುಕೊಂಡ ನಂತರದ ಮೊತ್ತಮೊದಲ ಪೀಳಿಗೆ ಈ ನಮ್ಮ ನವಯುವಕರದ್ದು. ಎಂತಹ ಅಪಾಯಗಳೂ ಸವಾಲುಗಳೂ ಎದುರಾದರೂ ಅವುಗಳನ್ನು ಸಾಹಸ ಪರಾಕ್ರಮಗಳಿಂದ ನಿರ್ಭಯವಾಗಿ ಎದುರಿಸಲು ಹಾತೊರೆಯುವವರು ಇವರು. ಸ್ವಾಮಿ ವಿವೇಕಾನಂದರು ಹೇಳುವಂತೆ, ರಾಷ್ಟ್ರದ ಪುರೋಭಿವೃದ್ಧಿಗಾಗಿ ನಮಗೀಗ ಎಲ್ಲದಕ್ಕಿಂತ ಹೆಚ್ಚು ಆವಶ್ಯಕವಾಗಿರುವುದು ಕೂಡ – `ಅದಮ್ಯ ಸಾಹಸ, ವಿಪುಲ ಧೈರ್ಯ, ಅನಂತ ಶಕ್ತಿ ಮತ್ತು ಸಂಪೂರ್ಣ ವಿಧೇಯತೆ’ಯನ್ನು ಹೊಂದಿರುವ ಇಂತಹ ಯುವಕರ ಪಡೆಯೇ. `ಯಾವಾಗ ನೂರಾರು ಜನ ಉದಾರಹೃದಯಿಗಳಾದ ಸ್ತ್ರೀ-ಪುರುಷರು ಜೀವನದ ಸುಖ-ಸಂತೋಷಗಳನ್ನು ಅನುಭವಿಸಬೇಕೆಂಬ ಆಸೆಯೆಲ್ಲವನ್ನೂ ತೊರೆದು, ಬಡತನ ಮತ್ತು ಅಜ್ಞಾನದ ಕೂಪದಲ್ಲಿ ದಿನೇ ದಿನೇ ಆಳಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೋಸುಗ ಆತುರರಾಗಿ ಕೈಲಾದಮಟ್ಟಿಗೆ ಪರಿಶ್ರಮಿಸುವರೋ ಆಗ ಮಾತ್ರ ಭರತಖಂಡ ಮೇಲೆ ಏಳುವುದು’ – ಎಂಬ ಸ್ವಾಮಿಜೀಯವರ ಅಂದಿನ ಕರೆ ಇಂದಿಗೂ ಪ್ರಸ್ತುತವಾಗಿದೆ. ಏಕೆಂದರೆ ಒಂದು ದೇಶದ ಅಭಿವೃದ್ಧಿಯ ಎಲ್ಲ ಭರವಸೆಗಳು ಆ ದೇಶದ ಯುವಕರನ್ನು ಆಶ್ರಯಿಸಿವೆ. ಮಾತೃಭೂಮಿಯ ಉತ್ಥಾನಕ್ಕಾಗಿ ಕೆಲಸಮಾಡಬಲ್ಲ ಕಾರ್ಯಕರ್ತರು ಎದ್ದುಬರುವುದು ಇಂತಹ ಯುವಕರ ಮಧ್ಯದಿಂದಲೇ; ಮಾತ್ರವಲ್ಲ, ಎಲ್ಲ ಜವಾಬ್ದಾರಿಗಳೂ ಇರುವುದು ಅವರ ಹೆಗಲಮೇಲೆಯೇ. ಈ ನಿಟ್ಟಿನಲ್ಲಿ ಸ್ವಚ್ಛಂದವಾಗಿ ಪ್ರವಹಿಸುತ್ತಿರುವ ಯುವಶಕ್ತಿಗೊಂದು ಯೋಗ್ಯ ದಿಕ್ಕು ದೊರೆತು, ರಾಷ್ಟ್ರನಿರ್ಮಾಣಕಾರ್ಯದಲ್ಲಿ ಸದ್ವಿನಿಯೋಗವಾಗುವಂತಾಗಲು ಚಾಲನೆ ದೊರೆಯಲಿ ಎಂಬುದು ನಮ್ಮ ಸದಾಶಯ.
– ಸಂಪಾದಕ