`ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು, ಯಾವುದನ್ನೂ ಲೆಕ್ಕಿಸದೆ ವಿಶ್ವದ ರಹಸ್ಯತಮ ಸತ್ಯಗಳನ್ನು ಭೇದಿಸಿ ಸಾಧ್ಯವಾದರೆ ಕಡಲಿನ ಆಳಕ್ಕಾದರೂ ಹೋಗಿ ಮೃತ್ಯುವಿನೊಂದಿಗೆ ಹೋರಾಡಿ ಗುರಿಯನ್ನು ಸಾಧಿಸಬಲ್ಲ ಅದಮ್ಯ ಪ್ರಚಂಡ ಇಚ್ಛಾಶಕ್ತಿ.’
– ಸ್ವಾಮಿ ವಿವೇಕಾನಂದ
ಕಳೆದ ಸೆಪ್ಟೆಂಬರ್ನ ಸುದ್ದಿ. ಉತ್ತರಪ್ರದೇಶ ಸರ್ಕಾರ ಸೆಕ್ರೆಟೆರಿಯೇಟ್ನ ಜವಾನ ಹುದ್ದೆಗೆ ಅರ್ಜಿ ಕರೆದಿತ್ತು. ಒಟ್ಟು ೩೬೮ ಜನರಿಗೆ ಅವಕಾಶವಿತ್ತು. ಬಂದ ಅರ್ಜಿಗಳು ಅದೆಷ್ಟು ಗೊತ್ತೆ? ೨೩ ಲಕ್ಷ! ಅರ್ಜಿ ಸಲ್ಲಿಸಲು ಇರಬೇಕಿದ್ದ ಅರ್ಹತೆ ಶಾಲಾಶಿಕ್ಷಣ ಪಡೆದಿರಬೇಕು ಮತ್ತು ಸೈಕಲ್ ಚಲಾಯಿಸಲು ಗೊತ್ತಿರಬೇಕು ಎಂದಿತ್ತು. ಆದಾಗ್ಯೂ ಒಂದೂವರೆ ಲಕ್ಷ ಜನ ಪದವೀಧರರು, ೨೫ ಸಾವಿರ ಉನ್ನತಶಿಕ್ಷಣ ಪದವಿ ಪಡೆದವರು ಮತ್ತು ಇನ್ನೂರೈವತ್ತು ಜನ ಡಾಕ್ಟರೇಟ್ ಪಡೆದವರೂ ಇದ್ದರು!
ಸರ್ಕಾರೀ ವ್ಯವಸ್ಥೆಗೆ ಅದೆಷ್ಟು ಗೊಂದಲವಾಯಿತೆಂದರೆ ಇಷ್ಟೂ ಜನರನ್ನು ಸಂದರ್ಶನದ ಮೂಲಕ ಆಯ್ಕೆಮಾಡುವುದೇ ಆದರೆ ಅನೇಕ ವರ್ಷಗಳೇ ಕಳೆದುಹೋಗುತ್ತವೆ. ಹಾಗೆಂದೇ ಪೂರ್ವಭಾವಿಯಾಗಿ ಲಿಖಿತ ಪರೀಕ್ಷೆ ನಡೆಸಿ ಈ ಸಂಖ್ಯೆಯನ್ನು ಕಡಮೆ ಮಾಡಬೇಕೆಂದು ನಿರ್ಧರಿಸಲಾಯಿತು. ಅನೇಕ ಕಡೆ ಈ ಪರಿಯ ಒತ್ತಡ ತಾಳಲಾಗದೆ ಆಯ್ಕೆಪ್ರಕ್ರಿಯೆಯನ್ನೇ ಅನಿರ್ದಿಷ್ಟಾವಧಿ ಮುಂದೂಡಿದ ಉದಾಹರಣೆಗಳಿವೆ.
ಕರ್ನಾಟಕವೂ ಇದಕ್ಕೆ ಹೊರತಲ್ಲ. ಕೆಪಿಎಸ್ಸಿ ಆಗಸ್ಟ್ ತಿಂಗಳಲ್ಲಿ ಗುಮಾಸ್ತರಿಗಾಗಿ ಅರ್ಜಿ ಕರೆದಿತ್ತು. ಒಟ್ಟೂ ಎರಡೂವರೆ ಸಾವಿರದಷ್ಟು ಖಾಲಿ ಹುದ್ದೆಗಳಿದ್ದವು. ೧೮ ಲಕ್ಷ ೮೫ ಸಾವಿರ ಅರ್ಜಿಗಳು ಬಂದಿದ್ದವು. ಹೆಚ್ಚುಕಡಮೆ ಒಂದು ಹುದ್ದೆಗೆ ೮೦೦ ಜನ ಆಕಾಂಕ್ಷಿಗಳು! ಹೀಗೇಕೆ?
ಗುಲಾಮಿ ಮಾನಸಿಕತೆಯ ಪರಿಣಾಮ
ಭಾರತ ಜನಸಂಖ್ಯಾಬಾಹುಳ್ಯದ ದೇಶ. ಇಲ್ಲಿ ಹೆಚ್ಚು ಜನ ಕೂಡಿ ಮಾಡುವ ಉತ್ಪಾದನೆಗೆ ಹೆಚ್ಚು ಬೆಲೆ. ಯಂತ್ರಗಳ ಬಳಕೆ ಹೆಚ್ಚಾದಷ್ಟೂ ಉತ್ಪಾದನೆಯೊಂದಿಗೆ ನಿರುದ್ಯೋಗವೂ ಹೆಚ್ಚುತ್ತದೆ. ಕಳೆದ ಐದು ದಶಕಗಳಿಂದೀಚೆಗೆ ಈ ದೇಶದಲ್ಲಿ ಕಂಡುಬಂದ ನಿರುದ್ಯೋಗದ ಸುನಾಮಿಗೆ ಇದೇ ಮೂಲಕಾರಣ. ಅದರೊಟ್ಟಿಗೇ ಏಕಕಾಲಕ್ಕೆ ಲಕ್ಷಾಂತರ ಜನರಿಗೆ ಉದ್ಯೋಗ ಕೊಡುವ ಸಾಮರ್ಥ್ಯವಿದ್ದ ಕೃಷಿಯನ್ನು ನಿರ್ಲಕ್ಷಿಸುತ್ತಾ ಬಂದಿದ್ದು ಮತ್ತೊಂದು ದೊಡ್ಡ ಹೊಡೆತ. ಮೊದಲೆಲ್ಲ ಉತ್ತಮ ಕೃಷಿ, ಮಧ್ಯಮ ವ್ಯಾಪಾರ, ನೌಕರಿಯೇ ಕನಿಷ್ಠವೆಂಬ ಮಾತೂ ಚಾಲ್ತಿಯಲ್ಲಿತ್ತು. ಬ್ರಿಟಿಷರ ಆಕ್ರಮಣದ ನಂತರ ಕೃಷಿಕ ಬಡವಾದ, ಲೂಟಿಗೊಳಗಾದ. ಇಂಗ್ಲಿಷ್ ಕಲಿತು ಬ್ರಿಟಿಷರ ಸೇವೆಯಲ್ಲಿ ನಿರತನಾದವನಿಗೆ ಗೌರವ ಹೆಚ್ಚಾಯ್ತು. ಕೃಷಿಕರ ಮಗನೂ ಒಕ್ಕಲುತನ ಬಿಟ್ಟು ಶಾಲೆಗೆ ಹೋಗಿ ಅಕ್ಷರ ಕಲಿತ. ಕೃಷಿಯ ಮೇಲಿನ ಭರವಸೆ ಕಳಕೊಂಡು ಸರ್ಕಾರೀ ಸೇವೆ ಮಾಡುವುದನ್ನೇ ಗೌರವದ ಸಂಕೇತವಾಗಿ ಭಾವಿಸಿದ. ಅಲ್ಲಿಗೆ ಹಳೆಯ ಮಾತು ವಿಪರೀತವಾಯ್ತು. ಇತರರ ಕೈಕೆಳಗೆ ದುಡಿಯುವುದು ಶ್ರೇಷ್ಠ, ವ್ಯಾಪಾರ ಪರವಾಗಿಲ್ಲ ಮತ್ತು ಕೃಷಿ ಕನಿಷ್ಠ.
ಅಲ್ಲಿಂದಾಚೆಗೆ ಕೃಷಿಗೆ ಹೊಂದಿಕೊಂಡಿದ್ದ ಉದ್ಯೋಗಗಳೂ ನಾಶವಾದವು. ಪಶುಸಂಗೋಪನೆಯಿಂದ ಜೀವನ ನಡೆಸುತ್ತಿದ್ದವರು ಈಗ ಅನಾಥರಾದರು. ಹಳ್ಳಿ ಹಳ್ಳಿಗಳಲ್ಲಿ ಜೀವಿಕೆ ನಡೆಸಿದ್ದ ನೇಯ್ಗೆಕಾರರು, ಚಮ್ಮಾರರು, ಕುಂಬಾರರು ಇವರೆಲ್ಲಾ ಒಬ್ಬೊಬ್ಬರಾಗಿ ಕಾಣೆಯಾದರು. ಎಲ್ಲರೂ ಸರ್ಕಾರದತ್ತ ಮುಖಮಾಡಿ ಸಂಬಳಕ್ಕಾಗಿ ದುಡಿಯುವುದು ಸುಲಭವೆಂದು ಸಿದ್ಧರಾದರು. ಇದು ಒಂದೆರಡು ದಿನಗಳಲ್ಲಿ ಏಕಾಕಿ ಆದ ಬದಲಾವಣೆಯಲ್ಲ. ಅನೇಕ ದಶಕಗಳ ಕಾಲ ನಮ್ಮೊಳಗೆ ಹೊಕ್ಕು ಆಶ್ರಯ ಪಡೆದ ಗುಲಾಮಿ ಮಾನಸಿಕತೆಯ ಪರಿಣಾಮ. ಸಾಹಸಿಗನಾಗಿ ಜಗತ್ತನ್ನು ಅನ್ವೇಷಿಸುತ್ತ ಸಾಗರಯಾನ ಕೈಗೊಳ್ಳುತ್ತಿದ್ದ ಭಾರತದ ತರುಣ ಈಗ ಉಂಡುಟ್ಟು ಮಲಗಿದರೆ ಸಾಕೆಂದು ನಿಶ್ಚಯಿಸಿದ್ದ. ದಿನದ ಕೊನೆಗೆ ಒಂದಷ್ಟು ಕೂಲಿ ದಕ್ಕಿದರೆ ಸಾಕೆಂಬ ಅಸಡ್ಡೆಯ ಮನೋಭಾವ ಅವನನ್ನು ಆವರಿಸಿತ್ತು. ಸಾಹಸ ಒಡೆಯನಿಗಿರಲಿ ತಾನು ಅನುಸರಿಸುವೆನೆಂಬ ಗುಲಾಮನಾಗಿ ಅವನೀಗ ಮಾರ್ಪಟ್ಟಿದ್ದ. ಪೀಳಿಗೆಯಿಂದ ಪೀಳಿಗೆಗೆ ಇದು ಹರಿಹರಿದು ಇಂದು ಆತ ಅಕ್ಷರಶಃ ಸವಾಲು ಸ್ವೀಕರಿಸಲಾಗದ, ಹೊಸದನ್ನು ಸಾಧಿಸಲಾಗದ, ಸಾಹಸೀ ವೃತ್ತಿಯಿಲ್ಲದ ತರುಣನಾಗಿಬಿಟ್ಟಿದ್ದಾನೆ.
ಹೀಗಾಗಿಯೇ ಡಾಕ್ಟರೇಟ್ ಪಡೆದಿರುವವನನ್ನು ನೀನೇಕೆ ಜವಾನನಾಗಲು ಅರ್ಜಿಹಾಕಿದ್ದೀಯೆಂದು ಪತ್ರಿಕೆಯೊಂದು ಕೇಳಿದ್ದಕ್ಕೆ ತಿಂಗಳಿಗೆ ಒಂಭತ್ತು ಸಾವಿರ ಖಾತ್ರಿಯಾಗಿ ದಕ್ಕುವುದಲ್ಲ, ಅದಕ್ಕೇ ಎಂದಿದ್ದ ಆತ!
ಶಿಕ್ಷಣ ಪಡೆಯುತ್ತ ನಡೆದಂತೆ ಆತ್ಮವಿಶ್ವಾಸ ವೃದ್ಧಿಯಾಗುತ್ತ ಸಾಗಬೇಕು. ಆದರೆ ದುರ್ದೈವವಶಾತ್ ನಾವು ಹೆಚ್ಚುಹೆಚ್ಚು ಶಿಕ್ಷಿತರಾದಂತೆ ಬದುಕುವ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಇರುವ ಕೌಶಲಗಳನ್ನೆಲ್ಲಾ ಬಲಿಕೊಟ್ಟು, ನಮ್ಮಲ್ಲಿ ಇಲ್ಲದುದಕ್ಕೆ ಇಂಬುಕೊಟ್ಟು ಕಾಪಿಡುವ ಪ್ರಯತ್ನ ಮಾಡಿದ್ದರಿಂದಲೇ ಸೋತುಹೋದೆವು ನಾವು. ಹೀಗಾಗಿಯೇ ಉರುಹೊಡೆದು ಪರೀಕ್ಷೆ ಪಾಸಾಗುವ, ಸಂದರ್ಶನಕ್ಕೆ ಹೋಗುವ ಮುನ್ನ ಗುಂಪುಚರ್ಚೆ ಹೇಗೆ ಮಾಡಬೇಕೆಂದು ಸ್ಪರ್ಧಾತ್ಮಕ ಪತ್ರಿಕೆಗಳಲ್ಲಿ ಓದುತ್ತ ಕೂರುವ ಹುಡುಗರನ್ನು ಸೃಷ್ಟಿಸಿದ್ದೇವೆ. ಇವರಿಗೆ ಪರೀಕ್ಷೆಯಲ್ಲಿ ಅಂಕಗಳೇನೋ ಸಾಕಷ್ಟಿವೆ, ಆದರೆ ಸಾಫ್ಟ್ವೇರ್ ಕಂಪೆನಿಯಲ್ಲಿ ಹೇಳಿದ್ದನ್ನು ಮಾಡುವುದು ಬಿಟ್ಟರೆ ಬೇರೇನೂ ಮಾಡಲಾಗದೇ ಸುಮ್ಮನಿರುತ್ತಾರೆ.
ತುರ್ತು ಆಗಬೇಕಾದ ಕೆಲಸ
ಬಿಡಿ. ನಾವು ಪಡೆಯುತ್ತಿರುವ ಶಿಕ್ಷಣ ಸುದೀರ್ಘ ಚರ್ಚೆಗೆ ಒಳಪಡಬೇಕಾದ ವಿಷಯ. ಆದರೆ ಈಗ ಆಗಬೇಕಿದ್ದು ಹೊಸಪೀಳಿಗೆಯಲ್ಲಿ ಚೈತನ್ಯ ತುಂಬುವ ಕೆಲಸ. ಅವರೊಳಗಿನ ಸಾಮರ್ಥ್ಯ ಗುರುತಿಸಿ ನೌಕರಿಯ ಗುಂಗಿನಿಂದ ಆಚೆತರುವ ಕೆಲಸ. ಎಲ್ಲಕ್ಕೂ ಮಿಗಿಲಾಗಿ ಇಂಜಿನಿಯರಿಂಗ್, ಮೆಡಿಕಲ್ ಇವೆರಡು ಬಿಟ್ಟರೆ ಬೇರೆಯ ಕ್ಷೇತ್ರಗಳೇ ಇಲ್ಲ ಎಂದು ಭಾವಿಸಿರುವ ಜನಾಂಗಕ್ಕೆ ಹೊಸಮಾರ್ಗಗಳನ್ನು ತೋರಿಸಿ ಒಯ್ದು ನಿಲ್ಲಿಸಬೇಕಿದೆ. ಜೊತೆಗೆ ಹೊಸ ಸವಾಲುಗಳನ್ನು ಎದುರಿಸಲು ಪ್ರೇರಣೆ ಕೊಟ್ಟು ಹೊಸ ಆಲೋಚನೆಗಳಿಗೆ ಬೆಲೆ ತಂದುಕೊಡಬೇಕಿದೆ.
ಪ್ರೌಢಶಾಲೆಗೆ ಹೋಗುವಾಗಲೇ ವೆಬ್ಸೈಟ್ ನಿರ್ಮಿಸುವ ಕೌಶಲ ಬೆಳೆಸಿಕೊಂಡ ಸುಹಾಸ್ ಗೋಪೀನಾಥ್
ಅಷ್ಟೇ ಅಲ್ಲ. ಯಾವ ಉದ್ಯೋಗವೂ ಕನಿಷ್ಠ ಅಲ್ಲ ಎಂಬುದರ ಪ್ರಜ್ಞೆಯನ್ನು ಇಂದು ಸಮಾಜದಲ್ಲಿ ಮೂಡಿಸಬೇಕಿದೆ. ಮಹಾರಾಷ್ಟ್ರದ ಪುಣೆ ಭಾಗದಲ್ಲಿ ಹಳ್ಳಿಯ ತರುಣನೊಬ್ಬ ನೂರಿಪ್ಪತ್ತು ಬಗೆಯ ದೋಸೆ ಮಾಡುವುದರಲ್ಲಿ ನಿಸ್ಸೀಮ. ಆತ ಆರು ಗಾಡಿಗಳನ್ನಿಟ್ಟು ನಲವತ್ತು ಜನರನ್ನು ಉದ್ಯೋಗಕ್ಕೆ ಹಚ್ಚಿದ್ದಾನೆ. ವಿದೇಶದ ಕಂಪೆನಿಯೊಂದು ಇತ್ತೀಚೆಗೆ ಈ ದೋಸೆ ತಯಾರಿಸುವ ಫಾರ್ಮುಲಾವನ್ನು ೫ ಕೋಟಿ ರೂಪಾಯಿಗೆ ಕೊಂಡುಕೊಂಡಿದೆ! ಕಣೇರಿ ಮಠದ ಶ್ರೀಗಳು ಇತ್ತೀಚೆಗೆ ತರುಣ ಸಮಾವೇಶದಲ್ಲಿ ಈ ಘಟನೆ ಹೇಳುವಾಗ ಎಲ್ಲರ ಕಣ್ಣಲ್ಲೂ ಮಿಂಚಿತ್ತು. ಅಲ್ಲದೆ ಮತ್ತೇನು? ದೋಸೆ ಮಾಡುವುದೆಂದರೆ ಅಡುಗೆಮನೆಯಲ್ಲಿ ಹೆಂಗಸರ ಕೆಲಸ ಎಂದು ಮೂಗುಮುರಿದವರು ಮತ್ತೆಮತ್ತೆ ಯೋಚಿಸಬೇಕಾದ ಸಂಗತಿ ಇದು.
ಗುಲ್ಬರ್ಗದಲ್ಲಿ ಅಡಕೆಯ ಮೇಲೆ ಅಲಂಕಾರ ಮಾಡುತ್ತಿದ್ದ ಹುಡುಗಿಗೆ ಆರಂಭದಲ್ಲಿ ಅದು ಹವ್ಯಾಸವೇ ಆಗಿತ್ತು. ಬರುಬರುತ್ತಾ ಅದೇ ಉದ್ಯೋಗವಾಗಿ ಈಗ ಸಾಕಷ್ಟು ಆದಾಯವೂ ಶುರುವಾಗಿದೆ! ಅಥಣಿಯಲ್ಲಿ ಚಪ್ಪಲಿ ಹೊಲಿಯುವ ಹೆಣ್ಣುಮಕ್ಕಳು ಮನೆಯನ್ನೇ ಸಂಭಾಳಿಸುತ್ತಾರೆ. ಅವರನ್ನೂ ಒಟ್ಟುಗೂಡಿಸಿ ಈ ಕೆಲಸ ಮಾಡಿಸಿದವರಿಗೆ ಹಣ-ಕೀರ್ತಿ ಎರಡೂ ಜೊತೆಯಲ್ಲಿಯೇ.
ಬದಲಾಗಬೇಕಿದೆ ಆಲೋಚನೆಯ ದಿಕ್ಕು
ನಮ್ಮ ಆಲೋಚನೆಯ ದಿಕ್ಕು ಬದಲಾಗಬೇಕು. ಇಲ್ಲವಾದಲ್ಲಿ ಓಟದಲ್ಲಿ ಹಿಂದೆ ನಿಲ್ಲುವುದು ಖಾತ್ರಿ. ಮೂರ್ನಾಲ್ಕು ವರ್ಷದ ಹಿಂದಿನ ಮಾತು. ಅಧ್ಯಯನ ಮುಗಿಸಿ ಬಂದ ಹೆಣ್ಣುಮಗಳೊಬ್ಬಳು ತನ್ನೂರಿನ ಹೆಣ್ಣುಮಕ್ಕಳು ವುಲ್ಲನಿನಲ್ಲಿ ಹೆಣೆಯುವ ವಸ್ತುಗಳನ್ನು ಕಂಡಳು, ಅಚ್ಚರಿ ಪಟ್ಟಳು. ತನ್ನ ಫೇಸ್ಬುಕ್ ಪೇಜ್ನಲ್ಲಿ ಶೇರ್ಮಾಡಿದಳು. ಅದನ್ನು ನೋಡಿದವರು ನಮಗೊಂದು ಬೇಕೆಂದರು. ವಹಿವಾಟು ಶುರುವಾಯ್ತು. ಹಳ್ಳಿಯ ಉತ್ಪನ್ನಕ್ಕೆ ಜಾಗತಿಕಮಾರುಕಟ್ಟೆ ಸಿಕ್ಕಿತು. ಇದು ಅಸಾಧ್ಯವಲ್ಲ; ಸಾಧಿಸುವ ಮನಸ್ಸು ಬೇಕು ಅಷ್ಟೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ `ಡಿಜಿಟಲ್ ಇಂಡಿಯಾ’ದ ಕನಸು ಕಾಣುತ್ತಿರುವುದು. ಹಳ್ಳಿ ಹಳ್ಳಿಯನ್ನು ಅಂತರ್ಜಾಲಕ್ಕೆ ಬೆಸೆಯಬೇಕೆಂಬ ಹೆಬ್ಬಯಕೆ ಅವರದ್ದು. ಹೈವೇ ಎಷ್ಟು ಮುಖ್ಯವೋ ಐವೇ (ಇಂಟರ್ನೆಟ್ ವೇ) ಕೂಡ ಅಷ್ಟೇ ಮುಖ್ಯ ಅಂತಾರೆ ಅವರು. ಈಗಾಗಲೇ ಅನೇಕ ಕಂಪನಿಗಳು ಈ ದಿಕ್ಕಿನಲ್ಲಿ ಚುರುಕು ಚಟುವಟಿಕೆಗೆ ಇಳಿದಿರುವುದರಿಂದ ಬರಲಿರುವ ದಿನಗಳಲ್ಲಿ ವಿಪುಲ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ. ಕಂಪ್ಯೂಟರ್, ಮೊಬೈಲ್, ಮೋಡೆಮ್ ಇತ್ಯಾದಿಗಳ ಉತ್ಪಾದನಾ ಘಟಕಗಳೂ ತೀವ್ರತರವಾಗಿ ಬೆಳೆಯಲಿವೆ. ವಿದ್ಯುತ್ ಉತ್ಪಾದನೆಯಲ್ಲಿ ಹೊಸ ಸಂಶೋಧನೆಗಳು, ಪರಿಸರಪೂರಕವಾದ ಆಲೋಚನೆಗಳಿಗೆ ಜಾಗತಿಕಮಾರುಕಟ್ಟೆ ಲಭಿಸಲಿದೆ.
`ಮೇಕ್ ಇನ್ ಇಂಡಿಯಾ’ದ ನೆಪದಲ್ಲಿ ಸ್ಮಾರ್ಟ್ ಆಪ್ಗಳಿಗೆ ಸಹಾಯಹಸ್ತ ಹರಿದುಬರುತ್ತಿರುವುದು ನೋಡಿದರೆ ಬರಲಿರುವ ದಿನಗಳಲ್ಲಿ ಇಂಜಿನಿಯರಿಂಗ್ ಕಾಲೇಜಿನ ಹುಡುಗರ ಹೊಸಹೊಸ ಚಿಂತನೆಗಳಿಗೆ ಹಣ ಹೂಡುವವರು ಸಾಲುಸಾಲಾಗಿ ನಿಲ್ಲಬಹುದು. ಅಲ್ಲಿಗೆ ಭಾರತೀಯ ತರುಣರ ಮಾನಸಿಕ ಸ್ಥಿತಿ ಬದಲುಗೊಂಡು ನೌಕರಿಯಿಂದ ಸ್ವಯಂ ಉದ್ಯೋಗದತ್ತ ಹರಿಯಬಹುದು.
`ಸ್ಕಿಲ್ ಇಂಡಿಯಾ’ದ ಕುರಿತಂತೆ ರಾಷ್ಟ್ರದಲ್ಲಿ ಚರ್ಚೆ ಆರಂಭಗೊಂಡ ನಂತರ ದೇಶದಲ್ಲಿ ಅನೇಕ ಸ್ವಯಂಸೇವಾ ಸಂಸ್ಥೆಗಳು ಕೌಶಲಾಭಿವೃದ್ಧಿಗೆ ಮನಸ್ಸು ಮಾಡಿವೆ. ಎಷ್ಟು ಓದಿಕೊಂಡರೇನು, ಎಷ್ಟು ಅಂಕಗಳನ್ನು ಗಳಿಸಿದರೇನು! ಕೌಶಲವಿಲ್ಲದಿದ್ದರೆ ಯಾವುದೂ ಉಪಯೋಗಕ್ಕೆ ಬರಲಾರದು. ಹೀಗಾಗಿಯೇ ಕಾಲೇಜಿನಲ್ಲಿ ಓದುವಾಗಲೇ ವಿವಿಧ ಕೌಶಲಗಳನ್ನು ಮೈಗೂಡಿಸಿಕೊಳ್ಳುವುದರಿಂದ ಬದುಕಿನ ಸವಾಲುಗಳನ್ನೆದುರಿಸಲು ಸಮರ್ಥರಾಗುತ್ತಾರೆ.
ಕ್ರೀಸ್ ಬಿಟ್ಟಾಗಲೇ…
ಸುಹಾಸ್ ಗೋಪೀನಾಥ್ ಪ್ರೌಢಶಾಲೆಗೆ ಹೋಗುವಾಗಲೇ ವೆಬ್ಸೈಟ್ ನಿರ್ಮಿಸುವ ಕೌಶಲ ಬೆಳೆಸಿಕೊಂಡರು. ಹದಿನಾಲ್ಕು ವರ್ಷವಾಗುವಾಗ ಅವರು ಜಗತ್ತಿನ ಅತ್ಯಂತ ಕಿರಿಯ ಸಿಇಒ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮುಂಬಯಿ ಮಹಾನಗರದ ಬಡ ಕುಟುಂಬದಲ್ಲಿ ಬೆಳೆದ ಸುಜಾತಾ ಕಬ್ಬಿಣದ ವ್ಯಾಪಾರಕ್ಕಿಳಿದು ಕಾಲಕ್ರಮದಲ್ಲಿ ತನ್ನ ಸಾಮರ್ಥ್ಯದಿಂದಲೇ ದೊಡ್ಡ ದೊಡ್ಡ ಕಂಪೆನಿಗಳಿಗೂ ಸೆಡ್ಡುಹೊಡೆದು ನಿಂತಳು. ಪುತ್ತೂರಿನ `ಬಿಂದು’ ಕಂಪೆನಿ ಕಟ್ಟಿದ ಭಟ್ಟರು ಎಸ್.ಎಸ್.ಎಲ್.ಸಿ. ಮುಗಿಸಿರಬಹುದಷ್ಟೆ. ತಮ್ಮ ತೋಟದಲ್ಲಿ ಸಿಕ್ಕ ಸಿಹಿನೀರನ್ನು ರಾಜ್ಯಕ್ಕೆಲ್ಲ ಕುಡಿಸಬೇಕೆಂಬ ಹಠದಿಂದ ಅವರು ಕಂಪೆನಿ ಕಟ್ಟಿದರು. ಇಂದು ಬಿಂದು ಕಂಪೆನಿ ರಾಜ್ಯದ ಅತ್ಯಾಧುನಿಕ ಮೆಷಿನ್ ಹೊಂದಿರುವ ಕಂಪೆನಿಯಾಗಿದೆ. ಅಷ್ಟೆ ಅಲ್ಲ, ೧೫ಕ್ಕೂ ಹೆಚ್ಚು ಬೇರೆಬೇರೆ ಉತ್ಪನ್ನಗಳ ಮೂಲಕ ನೂರು ಕೋಟಿ ವಹಿವಾಟು ನಡೆಸುವ ಕಂಪೆನಿಯಾಗಿ ಕಟ್ಟಿನಿಲ್ಲಿಸಿದ್ದಾರೆ. ಪೆಪ್ಸಿ ಕಂಪೆನಿ ಬಿಂದುವನ್ನು ಸಾರಾಸಗಟಾಗಿ ಕೊಂಡುಕೊಳ್ಳಲು ಬಂದಾಗ ಅದನ್ನು ಧಿಕ್ಕರಿಸುವ ಧೈರ್ಯ ತೋರಿ ದೇಶಭಕ್ತಿಯನ್ನೂ ಮೆರೆದಿದ್ದಾರೆ.
ಇವೆಲ್ಲ ಅಲ್ಲೊಂದು, ಇಲ್ಲೊಂದು ಉದಾಹರಣೆಗಳಷ್ಟೆ. ಈ ರೀತಿಯ ಪ್ರೇರಣೆಯ ಘಟನೆಗಳು ಸಾಕಷ್ಟು ಸಿಗುತ್ತವೆ. ತರುಣರಿಗೆ ಅವುಗಳನ್ನು ಪರಿಚಯಿಸಿ ಹೊಸ ಉತ್ಸಾಹ ತುಂಬುವುದು ಇವತ್ತಿನ ಅಗತ್ಯ. ಅವಕಾಶಗಳಿಗೆ ಕೊರತೆ ಇಲ್ಲ. ಆದರೆ ಸರಿಯಾದ ಅವಕಾಶವನ್ನು ಸರಿಯಾದ ಸಂದರ್ಭದಲ್ಲಿ ತಮ್ಮದಾಗಿಸಿಕೊಳ್ಳಲು ತಯಾರಾಗಬೇಕಷ್ಟೆ. ಸವಾಲುಗಳನ್ನೆದುರಿಸಲು ಸಾಹಸಕ್ಕೆ ಅಣಿಯಾಗಬೇಕಿದೆ. ಇಷ್ಟಕ್ಕೂ ಕ್ರೀಸ್ ಬಿಟ್ಟಾಗಲೇ ಸಿಕ್ಸ್ ಹೊಡೆಯಲು ಸಾಧ್ಯ. ವಿಕೆಟ್ ಉಳಿಸಿಕೊಳ್ಳಲು ಅಂಟಿಕೊಂಡು ನಿಂತರೆ ದಿನವಿಡೀ ಆಡಿದ್ದಷ್ಟೇ ಖುಷಿ ಮತ್ತೇನೂ ಅಲ್ಲ!