ಭಾರತ ಅಭಿವೃದ್ಧಿಯತ್ತ ದೌಡಾಯಿಸುತ್ತಿದೆ. ಶಿಕ್ಷಣದ ಆದ್ಯತೆಗಳು ಬದಲಾಗಬೇಕಾದ ಕಾಲ ಇದು. ಶಿಕ್ಷಣವನ್ನು ಅನ್ನ ಸಂಪಾದಿಸುವ ಮಾರ್ಗ ಎಂಬ ಸಂಕುಚಿತ ದೃಷ್ಟಿಯಿಂದ ನೋಡುವ ಕಾಲ ಮುಗಿದಿದೆ. ಬೇರೆಯವರು ಕಟ್ಟಿಕೊಟ್ಟ ದೋಣಿಯಲ್ಲಿ ನದಿ ದಾಟುವುದನ್ನು ಬಿಟ್ಟು ನಾವಾಗಿ ದೋಣಿ ಕಟ್ಟುವ ಸಮಯ ಸನ್ನಿಹಿತವಾಗಿದೆ.
`ಎಂದಿಗೂ ಒಂದು ಹೆಜ್ಜೆಯನ್ನೂ ಹಿಂದೆ ಇಡಬೇಡ. ಅದೇ ಆದರ್ಶ. ಏನಾದರೂ ಆಗಲಿ ಹೋರಾಡಬೇಕು. ನಕ್ಷತ್ರಗಳೇ ತಮ್ಮ ಗತಿಯನ್ನು ಬದಲಾಯಿಸಲಿ, ಇಡೀ ಜಗತ್ತೇ ನಮಗೆ ವಿರೋಧವಾಗಿ ನಿಲ್ಲಲಿ, ಚಿಂತೆಯಿಲ್ಲ. …ಅದರಿಂದೇನು? ಹೋರಾಡಿ! ಹೇಡಿಗಳಾದರೆ ನೀವು ಏನನ್ನೂ ಸಾಧಿಸಲಾರಿರಿ… ಹೆಜ್ಜೆಯನ್ನು ಹಿಂತೆಗೆದುಕೊಂಡು ಯಾವ ದೌರ್ಭಾಗ್ಯವನ್ನೂ ತಡೆಯಲಾಗುವುದಿಲ್ಲ.’
– ಸ್ವಾಮಿ ವಿವೇಕಾನಂದ
ಆಕೆಯ ಹೆಸರು ಅನುರಾಧಾ. ಹೈಸ್ಕೂಲ್ನಲ್ಲಿರುವಾಗಲೇ ಆಕೆಗೆ ಕೆಮಿಸ್ಟ್ರಿಯಲ್ಲಿ ಒಳ್ಳೆಯ ಅಭಿರುಚಿ ಇತ್ತು. ವಿಜ್ಞಾನ ಮತ್ತು ಗಣಿತದಲ್ಲಿ ಒಳ್ಳೆಯ ಅಂಕಗಳನ್ನೂ ಪಡೆಯುತ್ತಿದ್ದವಳು. ಪಿಯುಸಿ ಸೇರಿದಳು. ಕಾಲೇಜಿನಲ್ಲಿ ವಿಜ್ಞಾನ ಅಭ್ಯಾಸ ಮಾಡಿ ಮುಂದೆ ರಸಾಯನ ವಿಜ್ಞಾನಿಯಾಗುವ ಕನಸು ಕಾಣುತ್ತಿದ್ದಳು. ಆದರೆ ಮನೆಯಿಂದ ತಂದೆತಾಯಿಯ ಒತ್ತಡ ಶುರುವಾಯಿತು. ತಮ್ಮ ಸಹೋದ್ಯೋಗಿಗಳ ಮಕ್ಕಳೆಲ್ಲ ಸಿಇಟಿ ಪರೀಕ್ಷೆ ಬರೆಯುತ್ತಿದ್ದಾರೆನ್ನುವುದು ಗೊತ್ತಾದಾಗ ಸಹಜವಾಗಿಯೇ ಅವರಿಗೆ ತಮ್ಮ ಮಗಳ ಬಗ್ಗೆ ಚಿಂತೆ ಹತ್ತಿತು. ವಿಜ್ಞಾನಿಯಾಗಬೇಕೆಂಬ ಆಸೆಯಿದ್ದರೂ ಅದರಿಂದ ಏನು ಅನುಕೂಲ; ಇಂಜಿನಿಯರಿಂಗ್ ಓದದೆ ಮುಂದುವರಿದರೆ ಭವಿಷ್ಯ ಇದೆಯೇ ಇಲ್ಲವೇ ಎನ್ನುವುದನ್ನೆಲ್ಲ ವಿವರಿಸುವಷ್ಟು ಆಕೆ ಬೆಳೆದಿರಲಿಲ್ಲ. ವಿಜ್ಞಾನಿಯಾದರೆ ಬದುಕು ಹೇಗಿರುತ್ತದೆ ಎಂಬ ಸ್ಪಷ್ಟ ಕಲ್ಪನೆಯೂ ಅನುರಾಧಾಳಿಗಿರಲಿಲ್ಲ. ಮನೆಯಲ್ಲಿ, ನೆರೆಹೊರೆಯವರಿಂದ, ಕುಟುಂಬದ ಇತರ ಸದಸ್ಯರಿಂದ ನಿರಂತರವಾದ ಬುದ್ಧಿವಾದ, ಬಿಟ್ಟಿ ಸಲಹೆ-ಸೂಚನೆಗಳು ಬರತೊಡಗಿದ ಮೇಲೆ ಆಕೆಗೆ ತನ್ನ ಆಸೆಯಂತೆ ಬದುಕು ಕಟ್ಟಿಕೊಳ್ಳುವ ಅವಕಾಶ ಇಲ್ಲ ಎನ್ನುವುದು ಅರಿವಾಗತೊಡಗಿತು. ಸಂಶೋಧನೆಯೆಲ್ಲ ಹುಡುಗಿಯರಿಗೆ ಹೇಳಿಸಿದ್ದಲ್ಲ ಎಂದರು ಒಬ್ಬರು. ಕಾಲೇಜು ಮುಗಿಸಿ ಒಂದೆರಡು ವರ್ಷದಲ್ಲಿ ಮದುವೆಯಾಗಿ ಆಮೇಲೆ ಮಕ್ಕಳಾದರೆ ಈ ಸಂಶೋಧನೆಯೆಲ್ಲ ಮುಂದುವರಿಸುವುದಕ್ಕೆ ಆಗುತ್ತೇನಮ್ಮ ಎಂದರು ಇನ್ನೊಬ್ಬರು. ಇಂಡಿಯಾದಲ್ಲಿ ರಿಸರ್ಚಿಗೆ ಸ್ಕೋಪೇ ಇಲ್ಲ; ಅದಕ್ಕೆಲ್ಲ ವಿದೇಶಕ್ಕೆ ಹೋಗಬೇಕು. ಅಷ್ಟು ಸೌಕರ್ಯ ನಿನಗಿದೆಯೆ ಎಂದು ಹೆದರಿಸಿದರು ಮತ್ತೊಬ್ಬರು. ಒಟ್ಟಲ್ಲಿ ಎರಡು ವರ್ಷದ ಪಿಯುಸಿ ಮುಗಿಸುವ ಹೊತ್ತಿಗೆ ಸಿಇಟಿ ಬರೆದು ಇಂಜಿನಿಯರಿಂಗ್ ಸೀಟು ಗಿಟ್ಟಿಸುವಷ್ಟು ಅವಳನ್ನು ಅವರೆಲ್ಲರೂ ತಯಾರು ಮಾಡಿದ್ದರು. ಅನುರಾಧಾ ಈಗ ಇನ್ಫರ್ಮೇಶನ್ ಟೆಕ್ನಾಲಜಿಯ ಇಂಜಿನಿಯರಿಂಗ್ನಲ್ಲಿ ಮೂರನೇ ವರ್ಷ ಓದುತ್ತಿದ್ದಾಳೆ. ಕಂಪ್ಯೂಟರು, ಪ್ರೋಗ್ರಾಮಿಂಗ್, ಕೋಡಿಂಗ್ – ಇವೆಲ್ಲ ಅವಳ ಇಷ್ಟ ಅಲ್ಲವೇ ಅಲ್ಲ. ಆದರೂ ಮೆಚ್ಚದ ಊಟವನ್ನು ಕಷ್ಟಪಟ್ಟು ಉಣ್ಣಬೇಕಾದಂತೆ ಹೇಗೋ ಕಾಲೇಜಿಗೆ ಹೋಗಿಬರುವ ಯಾಂತ್ರಿಕ ಕೆಲಸ ಮಾಡುತ್ತಿದ್ದಾಳೆ.
ಇವನು ವಿದ್ಯಾಧರ. ಹೆಸರಿಗೆ ತಕ್ಕಂತೆ ವಿದ್ಯೆಯಲ್ಲಿ ಮುಂದಿದ್ದ ಚುರುಕು ಹುಡುಗ. ಪಠ್ಯ ಮಾತ್ರವಲ್ಲ ಸಿಕ್ಕ ಪುಸ್ತಕ, ಪತ್ರಿಕೆಗಳನ್ನೆಲ್ಲ ಓದಿ ಮುಗಿಸುವ ಹವ್ಯಾಸ. ಚಿಕ್ಕಂದಿನಿಂದಲೂ ವಿದ್ಯಾಧರನಿಗೆ ಸರ್ ಸಿ.ವಿ. ರಾಮನ್, ಸುಬ್ರಹ್ಮಣ್ಯಂ ಚಂದ್ರಶೇಖರ್ ಮುಂತಾದವರಂತೆ ವಿಜ್ಞಾನಿಯಾಗಿ ದೊಡ್ಡ ಹೆಸರು ಮಾಡಬೇಕು ಎಂಬ ಹುಚ್ಚಿತ್ತು. ಅದಕ್ಕೆ ತಕ್ಕಂತೆ ಪಿಯುಸಿಯ ಬಳಿಕ ಶುದ್ಧವಿಜ್ಞಾನದ ಪದವಿಯನ್ನೇ ಮಾಡಬೇಕೆಂದು ಸಂಕಲ್ಪಿಸಿದ್ದ ಕೂಡ. ಆದರೆ ವೈದ್ಯರಾದ ತಂದೆಗೆ ಮಗನೂ ತನ್ನ ಹಾಗೇ ವೈದ್ಯವೃತ್ತಿ ಸೇರಬೇಕೆಂಬ ಆಕಾಂಕ್ಷೆ. ಮಗ ತಯಾರಾಗದಿದ್ದರೆ ತನ್ನ ನರ್ಸಿಂಗ್ಹೋಮ್ ನೋಡಿಕೊಳ್ಳುವವರು ಯಾರು ಎಂಬ ಚಿಂತೆಯನ್ನು ಹಲವು ಸಲ ಮನೆಯಲ್ಲಿ ತೋಡಿಕೊಂಡರು. ಮನಸ್ಸಿಲ್ಲದ ಮನಸ್ಸಿನಿಂದ ವಿದ್ಯಾಧರ ಸಿಇಟಿ ಪರೀಕ್ಷೆ ಬರೆಯಬೇಕಾಯಿತು. ನಿರೀಕ್ಷಿಸಿದಂತೆಯೇ ಅವನಿಗೆ ವೈದ್ಯಕೀಯ ಪದವಿಗೆ ಸೇರುವಷ್ಟು ಅಂಕಗಳು ಬರಲಿಲ್ಲ. ಆದರೆ ತಂದೆ ಕೇಳಬೇಕಲ್ಲ! ಲಕ್ಷಲಕ್ಷಗಳನ್ನು ಸುರಿದು ಅಂತೂ ಒಂದು ಪೇಮೆಂಟ್ ಸೀಟ್ ಗಿಟ್ಟಿಸಿಯೇಬಿಟ್ಟರು. ವಿಜ್ಞಾನಿಗಳ ಜೀವನಚರಿತ್ರೆ ಓದುತ್ತ ತಾನೂ ಒಬ್ಬ ದೊಡ್ಡ ಭೌತಶಾಸ್ತ್ರಜ್ಞನಾಗಬೇಕೆಂದಿದ್ದ ಹುಡುಗ ಇದೀಗ ಮನಸ್ಸಿಲ್ಲದೆ ಸ್ಟೆತಾಸ್ಕೋಪ್ ಹಿಡಿಯಬೇಕಾಗಿದೆ.
ಬಹುಶಃ ನಮ್ಮ ದೇಶದ ಬಹುತೇಕ ಮನೆಗಳ ಕತೆಗಳು ಹೆಚ್ಚುಕಡಮೆ ಹೀಗೇ ಇರುತ್ತವೆ. ಇಂಜಿನಿಯರಿಂಗ್ ಓದುವ ಮನಸ್ಸಿಲ್ಲದೆ, ವೈದ್ಯಕೀಯ ಕಲಿಯುವ ಇಚ್ಛೆಯಿಲ್ಲದೆ ಆ ಕುಲುಮೆಗಳಿಗೆ ಬಿದ್ದು ಬೇಯುವ ಲಕ್ಷಾಂತರ ವಿದ್ಯಾರ್ಥಿಗಳು ಭಾರತದಲ್ಲಿದ್ದಾರೆ. ಹತ್ತು ವರ್ಷಗಳ ಹಿಂದೆ ಇಂಜಿನಿಯರಿಂಗ್ ಸೀಟು ಗಿಟ್ಟಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ಈಗ ಸಿಇಟಿಯಲ್ಲಿ ಕಟ್ಟಕಡೆಯ ರ್ಯಾಂಕ್ ಪಡೆದವನಿಗೂ ಇಂಜಿನಿಯರಿಂಗ್ ಸೀಟು ಸಿಗುವಂತಾಗಿದೆ. ಇದರ ನೇರ ಪರಿಣಾಮ ಬಿದ್ದಿರುವುದು ಶುದ್ಧವಿಜ್ಞಾನವನ್ನು ಕಲಿಸುವ ಕಾಲೇಜುಗಳ ಮೇಲೆ. ಎಷ್ಟೋ ಕಾಲೇಜುಗಳಲ್ಲಿ ಕೆಲವೊಂದು ಕೋರ್ಸುಗಳಿಗೆ ಜನರಿಲ್ಲದೆ ಆ ವಿಭಾಗಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಕಾಲೇಜಿನಲ್ಲಿ ಶುದ್ಧವಿಜ್ಞಾನವನ್ನು ಕಲಿತು ವಿಶ್ವವಿದ್ಯಾಲಯಗಳಲ್ಲಿ ಓದಿದವರೂ ಕೂಡ ಬೋಧನೆಯ ಕ್ಷೇತ್ರಕ್ಕೆ ಕಾಲಿಡುತ್ತಿಲ್ಲ. ಇದಕ್ಕೆ ಎರಡು ಕಾರಣಗಳು. ಒಂದು – ಶಿಕ್ಷಕವೃತ್ತಿಯಲ್ಲಿ ಸಂಬಳ ಕಡಮೆ ಎಂಬ ನಂಬಿಕೆ. ಎರಡನೆಯದಾಗಿ – ಹೆಚ್ಚಿನ ಶಿಕ್ಷಣಸಂಸ್ಥೆಗಳು ಪಿಎಚ್ಡಿ ಪಡೆದಿರುವವರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದರಿಂದ, ಸ್ನಾತಕೋತ್ತರ ಪದವಿ ಪಡೆದು ಮತ್ತೆ ನಾಲ್ಕೈದು ವರ್ಷ ಪಿಎಚ್ಡಿಗಾಗಿ ಸಂಶೋಧನೆ ಮಾಡುವುದರಲ್ಲಿ ವಿದ್ಯಾರ್ಥಿಗಳಿಗಿರುವ ನಿರಾಸಕ್ತಿ. ಹೀಗಾಗಿ ಬೋಧಕರಾಗುವ ಬದಲು ಹಲವು ಶುದ್ಧವಿಜ್ಞಾನದ ವಿದ್ಯಾರ್ಥಿಗಳು ತಮ್ಮ ಓದಿಗೆ ಸಂಬಂಧವೇ ಇಲ್ಲದ ಬ್ಯಾಂಕ್, ಐಟಿ, ಪತ್ರಿಕೋದ್ಯಮ, ಇಂಡಸ್ಟ್ರಿ ಎಂಬಿತ್ಯಾದಿ ಕ್ಷೇತ್ರಗಳಲ್ಲಿ ನೌಕರಿ ಮಾಡುತ್ತ ಕಳೆದುಹೋಗುತ್ತಾರೆ. ಇನ್ನು ಇವೆಲ್ಲಕ್ಕಿಂತ ದೊಡ್ಡ ಇನ್ನೊಂದು ದುರಂತವೆಂದರೆ ಶುದ್ಧವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರು ಇಂಜಿನಿಯರುಗಳ ಬೌದ್ಧಿಕಸಾಮರ್ಥ್ಯಕ್ಕೆ ಸರಿದೂಗುವುದಿಲ್ಲ ಎಂಬ ಮೂಢನಂಬಿಕೆ ಹಲವು ಕಂಪೆನಿಗಳಿಗಿದೆ. ಆದ್ದರಿಂದ, ಅವರಿಗೆ ಇಂಜಿನಿಯರುಗಳಿಗಿಂತ ಕಡಮೆ ಸಂಬಳ ಸಿಗುತ್ತದೆ. ಇಂಥ ಅಸಮತೆಯನ್ನು ನೋಡಿದವರು, ಸ್ವತಃ ಅನುಭವಿಸಿದವರು ತಮ್ಮ ಮಕ್ಕಳನ್ನು ಇಂಜಿನಿಯರಿಂಗ್ ಓದಲು ಒತ್ತಾಯಿಸುತ್ತಾರೆ. ಸಹಜವೇ ಅಲ್ಲವೆ?
ಶುದ್ಧವಿಜ್ಞಾನ ಕುಂಟಲು ಕಾರಣಗಳೇನು?
ಶಾಲೆಗಳಲ್ಲೇ ಇಲ್ಲದ ಪ್ರೋತ್ಸಾಹ – ಯಾವುದೇ ಕ್ಷೇತ್ರದ ಸಾಧಕರ ಜೀವನಚರಿತ್ರೆಗಳನ್ನು ಓದಿನೋಡಿ. ಅವರಲ್ಲಿ ನೂರಕ್ಕೆ ತೊಂಬತ್ತರಷ್ಟು ಜನರಿಗೆ ತಮ್ಮ ಬಾಲ್ಯದಲ್ಲಿ ನಡೆದ ಯಾವುದೋ ಘಟನೆ, ಓದಿದ ಯಾವುದಾದರೂ ಪುಸ್ತಕ, ಕಲಿಸಿದ ಮೇಷ್ಟ್ರು, ಕಣ್ಣಿಗೆ ಕಂಡ ದೊಡ್ಡ ಸಾಧಕರು – ಹೀಗೆ ಒಂದಿಲ್ಲೊಂದು ಸಂಗತಿ ಸ್ಫೂರ್ತಿ ತುಂಬಿರುತ್ತದೆ. ಅಂದರೆ ನಮ್ಮ ಬದುಕಿನ ದೊಡ್ಡ ಕನಸುಗಳು ಸಾಕಾರವಾಗುವುದು ಬಾಲ್ಯದಲ್ಲಿ ಸಿಕ್ಕ ಪ್ರಭಾವಗಳಿಂದಲೇ. ಆದರೆ, ನಮ್ಮ ಶಾಲೆಗಳಲ್ಲಿ ಎಷ್ಟರಮಟ್ಟಿಗೆ ಮಕ್ಕಳಿಗೆ ಶುದ್ಧವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಕೆಲಸ ನಡೆಯುತ್ತಿದೆ? ಹೆಚ್ಚಿನ ಶಾಲೆಗಳಲ್ಲಿ ಪ್ರಾಜೆಕ್ಟುಗಳಾಗಲಿ ಪ್ರಯೋಗಾಲಯದ ಚಟುವಟಿಕೆಗಳಾಗಲಿ ಅಂಕ ಗಳಿಸಲೊಂದು ಸರಕು ಅಷ್ಟೇ ವಿನಾ ಅವುಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕೆಲಸ ನಡೆಯುವುದಿಲ್ಲ.
ನೀರಸ ಪಠ್ಯ – ಶಾಲಾ ಪಠ್ಯದಲ್ಲಿ ಶುದ್ಧವಿಜ್ಞಾನವನ್ನು ಎತ್ತಿಹಿಡಿಯುವ ಕೆಲಸ ನಡೆಯುತ್ತಿದೆಯೇ ಎಂದು ನೋಡಿದರೆ ಅಲ್ಲೂ ನಿರಾಸೆ ಕವಿಯುವಂತಿದೆ. ಶುದ್ಧವಿಜ್ಞಾನದ ಸೌಂದರ್ಯ ಇರುವುದು ಒಂದು ಪುಟ್ಟ ತರ್ಕವನ್ನು ಬೆಳೆಸುತ್ತಾ ಹೋಗಿ ಹೊಸ ವಿಚಾರಗಳನ್ನು ಹೇಗೆ ಕಂಡುಹಿಡಿಯಬಹುದು ಅಥವಾ ಇದುವರೆಗೂ ಇದ್ದು ಅಜ್ಞಾತವಾಗಿದ್ದ ಸಂಗತಿಗಳನ್ನು ಹೇಗೆ ಶೋಧಿಸಿ ತೆಗೆಯಬಹುದು ಎನ್ನುವುದರಲ್ಲಿ. ಉದಾಹರಣೆಗೆ, ಮರದಿಂದ ಸೇಬು ಬೀಳುವ ಘಟನೆ ನ್ಯೂಟನ್ ಕೊನೆಗೆ ವಿಶ್ವ ಗುರುತ್ವಾಕರ್ಷಣ ನಿಯಮವನ್ನು ಅನ್ವೇಷಿಸಲು ಸಹಾಯವಾಯಿತು. ಆದರೆ ಶಾಲಾ ಪಠ್ಯಗಳು ಇಂತಹ ತರ್ಕಬದ್ಧ ವಿಚಾರಸರಣಿಯ ಬಗ್ಗೆ ಹೇಳದೆ ವ್ಯಾಖ್ಯೆ-ವಿವರಣೆ-ಸೂತ್ರ-ಪ್ರಶ್ನೆ ಎಂಬಂಥ ಸಿದ್ಧಮಾದರಿಯನ್ನೇ ಇನ್ನೂ ಅಪ್ಪಿಕೊಂಡಿವೆ. ಇದರಿಂದ ವಿದ್ಯಾರ್ಥಿಗಳು ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು `ಕಲಿ’ಯುತ್ತಾರೆಯೇ ವಿನಾ `ಅರಿ’ಯುವುದಿಲ್ಲ.
ಎಲ್ಲಿವೆ ಸಂಸ್ಥೆಗಳು? – ಭಾರತದಲ್ಲಿ ಒಂದುವೇಳೆ ಶುದ್ಧವಿಜ್ಞಾನವನ್ನು ಕಾಲೇಜಿನಲ್ಲಿ ಕಲಿತು ಹೊರಬಂದರೂ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳನ್ನು ಕಾಡುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂತಾದ ಕೆಲವೇ ಕೆಲವು ಸಂಸ್ಥೆಗಳನ್ನು ಹೊರತುಪಡಿಸಿದರೆ ನಮ್ಮ ದೇಶದಲ್ಲಿ ಶುದ್ಧವಿಜ್ಞಾನವನ್ನು ಸಂಶೋಧನಾ ಮಟ್ಟದಲ್ಲಿ ಪ್ರೋತ್ಸಾಹಿಸುವವರೇ ಇಲ್ಲ. ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಇದು ಆಟಕ್ಕಿಲ್ಲ ಲೆಕ್ಕಕ್ಕುಂಟು ಎಂಬಂಥ ವ್ಯವಸ್ಥೆ. ಸರಕಾರದ ಅನುದಾನಕ್ಕೆ ತಕ್ಕಂತೆ ಮೂರು ಮೊಳ ನೇಯ್ದು `ಸಂಶೋಧನೆ’ ಮುಗಿಸುವವರೇ ಅಧಿಕ.
ಸಂಶೋಧನೆಗಾಗಿ ಭಾರತ ಬಿಡಿ ! – ನಿಮಗೆ ಕ್ವಾಲಿಟಿ ಸಂಶೋಧನೆ ಮಾಡಬೇಕೆ? ಹಾಗಾದರೆ ಭಾರತ ಬಿಟ್ಟು ಹೊರದೇಶಗಳಿಗೆ ಹೋಗಿ. ಯುರೋಪಿನ ಹಲವು ದೇಶಗಳು, ಆಸ್ಟ್ರೇಲಿಯ, ಅಮೆರಿಕ, ಜಪಾನ್ ಮುಂತಾದ ಕಡೆಗಳಲ್ಲಿ ಸಂಶೋಧನೆಗೆ ಒಳ್ಳೆಯ ಅವಕಾಶ ಇದೆ. ಸಂಶೋಧಕರನ್ನು ಗೌರವಿಸುವಂಥ ವಾತಾವರಣ ಇದೆ. ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡುವುದಿಲ್ಲ. ಜಾತಿಘರ್ಷಣೆಗಳು ಇಲ್ಲ. ಪ್ರತಿಭೆಗೆ ಮಾತ್ರ ಮನ್ನಣೆ. ಅಲ್ಲದೆ, ಸಂಶೋಧನೆ ಮುಗಿಯುವವರೆಗೂ ಮಾರ್ಗದರ್ಶಕರು ವಿದ್ಯಾರ್ಥಿಯೊಂದಿಗೆ ನಿರಂತರವಾಗಿ ಚರ್ಚೆ, ಸಂವಾದ, ವಿಷಯವಿನಿಮಯ ಮಾಡುತ್ತಿರುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ, ಸಂಶೋಧನೆ ಮಾಡಲು ಹೊರದೇಶಗಳಿಗೆ ಗುಳೆಹೋಗುವುದು ಒಳ್ಳೆಯದು – ಇದು ಬಹುತೇಕ ಅನುಭವಸ್ಥರ ನುಡಿ. ಪರಿಸ್ಥಿತಿ ಹೀಗಿರುವಾಗ ಭಾರತದಲ್ಲೇ ನಿಂತು ಸಂಶೋಧನೆ ಕೈಗೆತ್ತಿಕೊಳ್ಳಲು ಯಾರಿಗೆ ಮನಸ್ಸು ಬಂದೀತು?
ಹೇಳಿಕೊಳ್ಳುವಂಥ ಬಿರುದಲ್ಲ – ಶುದ್ಧವಿಜ್ಞಾನದಲ್ಲಿ ಮುಂದುವರಿದರೆ ಸಂಶೋಧಕರಾಗಬಹುದು; ಇಲ್ಲವೇ ಶಿಕ್ಷಣಕ್ಷೇತ್ರಕ್ಕೆ ಕಾಲಿಡಬಹುದು. ಇವೆರಡನ್ನು ಬಿಟ್ಟರೆ ಮಿಕ್ಕಕಡೆಗಳಲ್ಲಿ ಶುದ್ಧವಿಜ್ಞಾನವನ್ನು ಅಭ್ಯಾಸಮಾಡಿದವರಿಗೆ ಅವಕಾಶಗಳು ಕಡಮೆ. ಅಲ್ಲದೆ ತಾವು ಕೆಲಸ ಮಾಡುವ ಕಡೆಗಳಲ್ಲಿ ಅವರಿಗೆ ಸಂಬಳವೂ ಹೇಳಿಕೊಳ್ಳುವಷ್ಟೇನೂ ಇರುವುದಿಲ್ಲ. ಹಾಗಾಗಿ ಬೇಸಿಕ್ ಸೈನ್ಸ್ ಎಂದೂ ಹಾಟ್ ಜಾಬ್ಗಳ ಪಟ್ಟಿಯಲ್ಲಿ ಇರುವುದಿಲ್ಲ. ಸಾಮಾಜಿಕ ಸ್ಥಾನಮಾನಗಳನ್ನು ನೌಕರಿ ಮತ್ತು ಸಿಗುವ ಪಗಾರದಿಂದ ಅಳೆಯುವವರಿಗೆ ಶುದ್ಧವಿಜ್ಞಾನ ಕಲಿತವರು ಎಂದೆಂದೂ ಎರಡನೇ ದರ್ಜೆಯ ನಾಗರಿಕರಂತೆಯೇ ಕಾಣುತ್ತಾರೆ.
ಅನಿಶ್ಚಿತತೆ – ಇನ್ನು ಕೊನೆಯದಾಗಿ, ಶುದ್ಧವಿಜ್ಞಾನದಲ್ಲಿ ಸಂಶೋಧನೆ ಕೈಗೊಂಡವರಿಗೆ ತಮ್ಮ ಕೆಲಸದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆಂಬ ಗ್ಯಾರಂಟಿ ಇಲ್ಲ. ಬಹುತೇಕ ಸಂದರ್ಭಗಳಲ್ಲಿ ಅವರು ತಮ್ಮ ಜೀವಮಾನವನ್ನೇ ತೇಯ್ದರೂ ಗಮನಾರ್ಹವೆನ್ನುವಂಥ ಫಲಿತಾಂಶ ಸಿಗುವುದಿಲ್ಲ. ಅಥವಾ ಅವರ ಫಲಿತಾಂಶಗಳನ್ನು ಬಳಸಿಕೊಂಡು ಮಿಕ್ಕವರು ಸಂಪಾದನೆ ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಸಂಶೋಧಕನ ಮರಣಾನಂತರ ಆತನ ಕೆಲಸಕ್ಕೆ ಮನ್ನಣೆ ಸಿಕ್ಕಿರುವುದೂ ಉಂಟು. ಹಾಗಾಗಿ ತಕ್ಷಣದ ಪ್ರಸಿದ್ಧಿ ಬೇಕು, ಸಾಕುಸಾಕೆನಿಸುವಷ್ಟು ದುಡ್ಡು ಮಾಡಬೇಕು ಎಂದೆಲ್ಲ ಆಸೆಗಳನ್ನಿಟ್ಟುಕೊಂಡವರು ಶುದ್ಧವಿಜ್ಞಾನಕ್ಕೆ ದೂರದಿಂದಲೇ ಕೈ ಮುಗಿಯುವುದು ಒಳ್ಳೆಯದು!
ಹಾಗಾದರೆ ಶುದ್ಧವಿಜ್ಞಾನಕ್ಕೆ ಭಾರತದಲ್ಲಿ ಭವಿಷ್ಯ ಇಲ್ಲವೆ? ಈ ಪ್ರಶ್ನೆ ಕೇಳುವುದಕ್ಕಿಂತ ಮೊದಲು, ಇಂಥ ಪರಿಸ್ಥಿತಿ ಉದ್ಭವವಾಗಲು ಕಾರಣಗಳೇನು ಎನ್ನುವುದನ್ನು ನೋಡೋಣ. ಮ್ಯಾಸ್ಲೋನ ಪಿರಮಿಡ್ ಎಂಬ ಚಿತ್ರದಲ್ಲಿ ಶಿಕ್ಷಣದ ಮೂರು ಹಂತಗಳನ್ನು ತೋರಿಸಲಾಗಿದೆ. ಇದರಲ್ಲಿ ಮೊದಲ ಹಂತ – ಶಿಕ್ಷಣ ಒಂದು ಭಾಗ್ಯ; ಬದುಕಲು ಅತ್ಯಗತ್ಯವಾದ ಆವಶ್ಯಕತೆ ಎಂದು ಭಾವಿಸುವುದು. ಬಡ ದೇಶಗಳಲ್ಲಿ ಈ ಪರಿಸ್ಥಿತಿ ಸಾಮಾನ್ಯ. ಅಲ್ಲಿನ ಜನರಿಗೆ ರಾಕೆಟ್ ಉಡಾಯಿಸುವುದು ಹೇಗೆ ಎಂಬ ಚಿಂತೆ ಇಲ್ಲ. ಇಂದಿನ ರೊಟ್ಟಿ ಗಳಿಸುವುದು ಹೇಗೆ, ನಾಲ್ಕು ಕಾಸು ಸಂಪಾದಿಸುವುದು ಹೇಗೆ ಎಂಬುದೇ ಮುಖ್ಯ ಸಮಸ್ಯೆ. ಇಂಥ ಪರಿಸ್ಥಿತಿಯಲ್ಲಿ ವೃತ್ತಿಪರ ಶಿಕ್ಷಣವೇ ಪ್ರಾಮುಖ್ಯ ಪಡೆಯುತ್ತದೆ. ಎರಡನೆಯ ಹಂತ – ಶಿಕ್ಷಣವನ್ನು ವೈಯಕ್ತಿಕವಾಗಿ ಬೆಳೆಯಲು ಬಳಸಬೇಕಾದ ಏಣಿ ಮತ್ತು ಸ್ವಾತಂತ್ರ್ಯದ ದಾರಿ ಎಂದು ಬಗೆಯುವುದು. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸ್ಥಿತಿ. ಯಾವುದೇ ದೇಶ ಅಭಿವೃದ್ಧಿಯ ದಾರಿಯಲ್ಲಿ ನಡೆಯತೊಡಗಿದಾಗ ಅದಕ್ಕೆ ಸಾವಿರಾರು ಸಂಖ್ಯೆಯ ತಂತ್ರಜ್ಞರ ಅಗತ್ಯ ಬೀಳುತ್ತದೆ. ನೈರ್ಮಲ್ಯ, ಆರೋಗ್ಯ ಮುಂತಾದ ಕ್ಷೇತ್ರಗಳತ್ತಲೂ ದೇಶ ಕಣ್ಣು ಹಾಯಿಸುವುದರಿಂದ ದೊಡ್ಡ ಸಂಖ್ಯೆಯಲ್ಲಿ ವೈದ್ಯರೂ ಬೇಕಾಗುತ್ತಾರೆ. ಹಾಗಾಗಿ ಇಂಥ ಸನ್ನಿವೇಶದಲ್ಲಿ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಎಂಬ ನಿಯಮದಂತೆ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ನಾಯಿಕೊಡೆಯಂತೆ ತಲೆಯೆತ್ತುತ್ತವೆ. ಇನ್ನು ಮೂರನೆಯದ್ದು – ಶಿಕ್ಷಣವನ್ನು ಆತ್ಮಸಂತೋಷದ ಮಾರ್ಗವಾಗಿ ನೋಡುವ ಹಂತ. ಒಂದು ದೇಶ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಸ್ಥಿತಿಯಲ್ಲಿದ್ದಾಗ, ದೇಶದಲ್ಲಿ ಬೇಕಾದಷ್ಟು ಸಂಖ್ಯೆಯಲ್ಲಿ ವೃತ್ತಿಪರ ಶಿಕ್ಷಿತರೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪಧವೀಧರರೂ ಇದ್ದಾಗ ಸಂಶೋಧನೆಯಲ್ಲಿ ಆಸಕ್ತಿ ಇರುವವರು ಶುದ್ಧವಿಜ್ಞಾನದತ್ತ ಕಣ್ಣುಹಾಯಿಸಬಹುದು.
ಗೂಗಲ್ನಲ್ಲಿ ಎನ್ಗ್ರಾಮ್ ವ್ಯೂವರ್ ಎಂಬ ತಂತ್ರಾಂಶ ಲಭ್ಯ. ಇದರಲ್ಲಿ ಯಾವುದೇ ಪದ ಅಥವಾ ಪದಪುಂಜ ಕಳೆದ ನೂರು ವರ್ಷಗಳಲ್ಲಿ ಎಷ್ಟು ಸಲ ಮುದ್ರಣವಾಗಿದೆ ಎಂದು ಲೆಕ್ಕ ಹಾಕಬಹುದು. ಆ ಮೂಲಕ ಜನರ ಅಭಿರುಚಿಗಳು ಹೇಗೆ ಬದಲಾಗುತ್ತಾ ಹೋಗಿವೆ ಎಂದು ಅಳೆಯಬಹುದು. ಉದಾಹರಣೆಗೆ `ಬಣ್ಣದ ಟಿವಿ’ ಎಂಬ ಪದಪುಂಜ ೧೯೮೦-೯೦ರಲ್ಲಿ ಅತ್ಯಂತ ಹೆಚ್ಚು ಬಳಕೆಯಾಗಿದ್ದಿರಬಹುದು. ಆದರೆ, ಈಗ ಅವುಗಳ ಟ್ರೆಂಡ್ ಕಡಮೆಯಾಗಿರುವುದಿರಂದ, ಆ ಪದಪುಂಜವನ್ನು ಎಲ್ಲೂ ಕಾಣಲಾರೆವು. ಈ ತಂತ್ರಾಂಶದಲ್ಲಿ `ಫಾಲೋ ಯುವರ್ ಪ್ಯಾಶನ್’ (ಕನಸುಗಳನ್ನು ಬೆಂಬತ್ತಿ) ಎಂಬ ಪದಪುಂಜದ ಬಳಕೆಯ ಬಗ್ಗೆ ನೋಡಿದಾಗ ಒಂದು ಕುತೂಹಲಕರ ಫಲಿತಾಂಶ ಸಿಗುತ್ತದೆ. ಅದೇನೆಂದರೆ, ಈ ಪದಪುಂಜ, ೧೯೯೦ರವರೆಗೂ ಹೆಚ್ಚು ಪ್ರಸಿದ್ಧವಾಗಿರಲಿಲ್ಲ. ಆದರೆ, ಆ ನಂತರದ ೨೫ ವರ್ಷಗಳಲ್ಲಿ ಅತ್ಯಂತ ಹೆಚ್ಚು ಬಾರಿ ಬಳಕೆಯಾಗಿದೆ. ಹಾಗೆಯೇ `ಎ ಸೆಕ್ಯೂರ್ ಜಾಬ್’ (ಭದ್ರತೆ ಇರುವ ಉದ್ಯೋಗ) ಎಂಬ ಪದಪುಂಜ ಸವಕಲಾಗಿ `ಎ ಫುಲ್ಫಿಲ್ಲಿಂಗ್ ಜಾಬ್’ (ಮಾನಸಿಕ ತೃಪ್ತಿ ಕೊಡುವ ಉದ್ಯೋಗ) ಎಂಬ ಮಾತು ಹೆಚ್ಚುಹೆಚ್ಚು ಬಳಕೆಯಾಗಿದೆ. ಇದರರ್ಥ ಇಷ್ಟೆ – ಯುವಜನತೆಯ ಮನಃಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ತಮ್ಮ ಕನಸಿಗೆ ತಕ್ಕ ಶಿಕ್ಷಣ ಪಡೆಯುವುದರತ್ತ ಅವರು ಆಕರ್ಷಿತರಾಗುತ್ತಿದ್ದಾರೆ. ಬದುಕಿನ ಭದ್ರತೆಗಾಗಿ ತಮಗೆ ಇಚ್ಛೆಯಿಲ್ಲದ ಕೋರ್ಸಿಗೆ ಸೇರಬೇಕಾದ ಅನಿವಾರ್ಯತೆ ಕಮ್ಮಿಯಾಗುತ್ತಿದೆ.
ಸದ್ಯಕ್ಕೆ ಭಾರತ ಎರಡನೇ ಹಂತದಿಂದ ಮೂರನೆಯ ಮೆಟ್ಟಿಲಿಗೆ ಹಾರುವ ಸಂಧಿಕಾಲದಲ್ಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ದೇಶ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ದೇಶಗಳ ಸಾಲಲ್ಲಿ ನಿಲ್ಲಬಹುದೇನೋ. ೧೯೪೭ರಲ್ಲಿ ಸ್ವಾತಂತ್ರ್ಯ ಪಡೆದ ಸಮಯದಲ್ಲಿ ನಾವಿನ್ನೂ ಮೊದಲ ಹಂತದಲ್ಲಿದ್ದೆವು. ದೇಶ ಕಟ್ಟುವ ಕೆಲಸ ತ್ವರಿತವಾಗಿ ನಡೆಯಬೇಕಾಗಿತ್ತು. ಅದು ವೃತ್ತಿಪರ ಶಿಕ್ಷಣದ ಕಾಲ. ಮುಂದೆ, ೧೯೭೦ರ ನಂತರ ನಮ್ಮಲ್ಲಿ ಇಂಜಿನಿಯರಿಂಗ್ ಕ್ರಾಂತಿಯಾಗತೊಡಗಿತು. ದೊಡ್ಡ ಅಣೆಕಟ್ಟುಗಳು, ಫ್ಯಾಕ್ಟರಿಗಳು ಕಟ್ಟಲ್ಪಟ್ಟವು. ಜನರ ಕೊಳ್ಳುವ ಸಾಮರ್ಥ್ಯ ಉತ್ತಮ ಸ್ಥಿತಿಯಲ್ಲಿತ್ತು. ಆರೋಗ್ಯಕ್ಷೇತ್ರವೂ ಉತ್ತಮಗೊಂಡಿತ್ತು. ೧೯೯೦ರ ದಶಕದ ನಂತರ ಐಟಿ ಕ್ರಾಂತಿಯೂ ಆಯಿತು. ಈ ಎಲ್ಲ ಕಾರಣಗಳಿಂದಾಗಿ ಅದು, ಶಿಕ್ಷಣವನ್ನು ಬಿಡುಗಡೆಯ ದಾರಿ ಎಂಬಂತೆ ನೋಡಿದ ಕಾಲ. ಇದೀಗ ಇಪ್ಪತ್ತೊಂದನೇ ಶತಮಾನದಲ್ಲಿ ನಾವು ಆ ಹಂತವನ್ನೂ ದಾಟಿ ಮುಂದೆ ಹೋಗುತ್ತಿದ್ದೇವೆ. ಸರ್ವಿಸ್ ಇಂಡಸ್ಟ್ರಿ ಅಲ್ಲ; ಪ್ರೊಡಕ್ಷನ್ ಇಂಡಸ್ಟ್ರಿ ಈಗಿನ ಮಂತ್ರ. ಯಾರೋ ತಯಾರಿಸಿಕೊಟ್ಟ ಬಿಡಿಭಾಗಗಳನ್ನು ನಟ್ಟು-ಬೋಲ್ಟು ಬಳಸಿ ಜೋಡಿಸುವುದು ನಮ್ಮ ಆದ್ಯತೆಯಲ್ಲ; ನಮ್ಮಲ್ಲೇ ಪ್ರತಿಯೊಂದನ್ನೂ ತಯಾರಿಸಿ ಉಳಿದ ದೇಶಗಳಿಗೆ ಮಾರಾಟ ಮಾಡುವುದು ಈಗಿನ ಆದ್ಯತೆ. ಸದ್ಯದ ಸರಕಾರದ `ಮೇಕ್ ಇನ್ ಇಂಡಿಯಾ’ ಅಭಿಯಾನದ ಮೂಲ ಆಶಯವೂ ಅದೇ.
ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ (ಮತ್ತು ಆ ಸ್ಥಿತಿಯನ್ನು ಸದಾ ಕಾಯ್ದುಕೊಳ್ಳಬೇಕಾದರೆ) ಅಲ್ಲಿ ಶುದ್ಧವಿಜ್ಞಾನ ಮುನ್ನೆಲೆಗೆ ಬರುವುದು ಬಹಳ ಮುಖ್ಯ. ನಮ್ಮ ಸಮಸ್ಯೆಗಳಿಗೆ ನಾವಾಗಿ ಉತ್ತರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುವುದು ಶುದ್ಧವಿಜ್ಞಾನದಿಂದ ಮಾತ್ರ. ಭಾರತ ೧೩೦ ಕೋಟಿ ಜನಸಂಖ್ಯೆ ಇರುವ ದೇಶ. ಆದರೆ ಇಲ್ಲಿ ಮೂಲವಿಜ್ಞಾನದಲ್ಲಿ ಪ್ರತಿ ವರ್ಷ ಸೃಷ್ಟಿಯಾಗುವ ಉದ್ಯೋಗಗಳು ಎಷ್ಟು ಗೊತ್ತೆ? ಕೇವಲ ಒಂದು ಸಾವಿರ! ಭಾರತದಲ್ಲಿ ಸದ್ಯಕ್ಕೆ ಇರುವ ಮೂಲ(ಅಥವಾ ಶುದ್ಧ)ವಿಜ್ಞಾನ ಸಂಶೋಧಕರ ಸಂಖ್ಯೆ ಕೇವಲ ಮೂರು ಲಕ್ಷ. ಅಂದರೆ ಒಟ್ಟು ಜನಸಂಖ್ಯೆಯ ೦.೦೨% ಅಷ್ಟೆ! ಇದುವರೆಗೆ ಸಂಶೋಧನೆಯ ಕೆಲಸವನ್ನು ಹೊರಗಿನ ದೇಶಗಳಲ್ಲಿ ಮಾಡುತ್ತ ಕೂಲಿಯಂಥ ಕೆಲಸವನ್ನು ಮಾತ್ರ ಭಾರತಕ್ಕೆ ಕೊಡುತ್ತಿದ್ದ ದೊಡ್ಡ ಕಂಪೆನಿಗಳು ಇತ್ತೀಚೆಗೆ ಇಲ್ಲೂ ತಮ್ಮ ಸಂಶೋಧನಾ ಘಟಕಗಳನ್ನು ತೆರೆಯುವ ಬಗ್ಗೆ ಯೋಚಿಸುತ್ತಿವೆ. ೨೦೧೫ರಲ್ಲಿ ಒಟ್ಟು ಮುನ್ನೂರು ಬಹುರಾಷ್ಟ್ರೀಯ ಕಂಪೆನಿಗಳು ಭಾರತದಲ್ಲಿ ಸಂಶೋಧನೆಯ ಕೇಂದ್ರಗಳನ್ನು ತೆರೆಯಲು ನಿರ್ಧರಿಸಿವೆ. ಇವುಗಳಲ್ಲಿ ಐಬಿಎಮ್, ಮೈಕ್ರೋಸಾಫ್ಟ್, ಎಚ್ಸಿಎಲ್, ನೊವಾರ್ಟಿಸ್ ಮುಂತಾದ ಸಂಸ್ಥೆಗಳೂ ಸೇರಿವೆ. ಅಮೆರಿಕದಲ್ಲಿ ಒಬ್ಬ ಸಂಶೋಧಕನಿಗೆ ಸರಾಸರಿ ೩೮.೭ ಲಕ್ಷ ರೂಪಾಯಿ ವಾರ್ಷಿಕ ವೇತನ ನೀಡಬೇಕಾದರೆ ಭಾರತದಲ್ಲಿ ಸರಾಸರಿ ೯.೭ ಲಕ್ಷ ರೂಪಾಯಿ ವಾರ್ಷಿಕ ವೇತನಕ್ಕೆ ಸಂಶೋಧಕರು ಸಿಗುತ್ತಾರೆ ಎನ್ನುವುದು ಈ ಸಂಸ್ಥೆಗಳ ಲೆಕ್ಕಾಚಾರವಂತೆ. ಅದೇನೇ ಇರಲಿ, ಇದರಿಂದ ಭಾರತದಲ್ಲಿ ಶುದ್ಧವಿಜ್ಞಾನ ಕಲಿತವರಿಗೆ ಉಪಯೋಗವಾಗುವುದಂತೂ ನಿಜ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು
ಭಾರತದಲ್ಲಿರುವ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು
- ಇಸ್ರೋ – ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್
- ಡಿಆರ್ಡಿಓ – ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್
- ಎನ್ಎಎಲ್ – ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್
- ಬಿಇಎಲ್ – ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
- ಟಿಐಎಫ್ಆರ್ – ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್
- ಎನ್ಪಿಎಲ್ – ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ
- ಸಿಎಸ್ಐಆರ್ – ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್
- ಬಾರ್ಕ್ – ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್
- ಸಿಡಿಆರ್ಐ – ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್
ಪರಿಸ್ಥಿತಿ ಬದಲಾದೀತೆ?
ರಿಸರ್ಚ್ ಆಂಡ್ ಡೆವಲೆಪ್ಮೆಂಟ್ (ಆರ್ ಅಂಡ್ ಡಿ) – ಸಂಶೋಧನೆ ಮತ್ತು ಅಭಿವೃದ್ಧಿ – ಇದು ಯಾವುದೇ ಸಂಸ್ಥೆಯ ಹೃದಯಭಾಗ. ಆ ಸಂಸ್ಥೆ ಅಭಿವೃದ್ಧಿ ಕಾಣಬೇಕಾದರೆ ಈ ಆರ್ ಆಂಡ್ ಡಿ ವಿಭಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಇಲ್ಲಿ ನಡೆಸುವ ಸಣ್ಣಪುಟ್ಟ ಸಂಶೋಧನೆಗಳೂ ಅತ್ಯಂತ ದೊಡ್ಡ ಮಟ್ಟದಲ್ಲಿ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವ ಶಕ್ತಿ ಪಡೆದಿರುತ್ತವೆ. ಉದಾಹರಣೆಗೆ ಮನೋಜ್ ಭಾರ್ಗವ ಎಂಬ ಭಾರತೀಯ ಸಂಜಾತ ಅಮೆರಿಕನ್ ಉದ್ಯಮಿ ತನ್ನ ಸಂಸ್ಥೆಯಲ್ಲಿ ಒಂದು ದೊಡ್ಡ ಸಂಶೋಧನಾ ಘಟಕವನ್ನು ಸಾಕುತ್ತಿದ್ದಾರೆ. ಇಲ್ಲಿರುವ ಸಂಶೋಧಕರು ಗ್ರಾಫೀನ್ ತಂತಿಗಳನ್ನು ಮಾಡುವ ವಿಧಾನವನ್ನು ಅಭಿವೃದ್ಧಿಪಡಿಸಿದರು. ಈಗ ಈ ತಂತಿಗಳನ್ನು ಭೂಮಿಯ ಆಳಕ್ಕೆ ಹಾಯಿಸಿ, ಅಲ್ಲಿನ ಉಷ್ಣತೆಯನ್ನು ಭೂಮಿಯ ಮೇಲ್ಪದರಕ್ಕೆ ತಂದು ಅದರಿಂದ ಹಲವು ಕೆಲಸ ತೆಗೆಯುವ ಬಗ್ಗೆ ಮನೋಜ್ರ ಕಂಪೆನಿ ಯೋಚಿಸುತ್ತಿದೆ. ಗ್ರಾಫೀನ್ ತಂತಿಗಳ ವಿಶೇಷತೆ ಏನೆಂದರೆ ಅವು ಉಷ್ಣವನ್ನು ಒಂದೆಡೆಯಿಂದ ಇನ್ನೊಂದು ಕಡೆಗೆ ವರ್ಗಾಯಿಸುವಾಗಲೂ ನಡುಭಾಗದಲ್ಲಿ ತಣ್ಣಗಿರುತ್ತವೆ! ಹಾಗಾಗಿ ಉಷ್ಣತೆಯ ಸೋರಿಕೆ ಇಲ್ಲವೇ ಇಲ್ಲ! ಕೇವಲ ಹತ್ತು-ಹದಿನೈದು ಜನ ಸಂಶೋಧಕರ ತಂಡದ ಒಂದು ಸಾಧನೆ ಕಂಪೆನಿಗೆ ಮಿಲಿಯನ್ ಡಾಲರ್ಗಳಷ್ಟು ಲಾಭ ತರಬಹುದು. ನಾವು ದಿನನಿತ್ಯ ಬಳಸುವ ಮೊಬೈಲ್ ಕೂಡ ಸಾಪೇಕ್ಷ ಸಿದ್ಧಾಂತದಂಥ ಶುದ್ಧವಿಜ್ಞಾನವನ್ನು ಬಳಸುತ್ತಿದೆ ಎಂದರೆ ಅಚ್ಚರಿಯಾಗಬಹುದೇನೋ. ಆಧುನಿಕ ಜಗತ್ತಿನ ಪ್ರಾಣವಾಯುವಾಗಿರುವ ವಿದ್ಯುತ್ತು, ಜಗತ್ತಿನ ಮೂಲೆಮೂಲೆಗಳನ್ನೂ ಕ್ಷಣಾರ್ಧದಲ್ಲಿ ಬೆಸೆಯಬಲ್ಲ ಅಂತರ್ಜಾಲ, ಲಕ್ಷಾಂತರ ಜನರ ಜೀವ ರಕ್ಷಿಸುತ್ತಿರುವ ಆಂಟಿಬಯಾಟಿಕ್ಗಳು, ಗುರುತ್ವಾಕರ್ಷಣ ಬಲವನ್ನು ಬಳಸಿಕೊಂಡು ಕಡಮೆ ಖರ್ಚಿನಲ್ಲಿ ನಾವು ಮಾಡಿದ ಮಂಗಳಯಾನ – ಇವೆಲ್ಲ ಶುದ್ಧವಿಜ್ಞಾನದ ಕೊಡುಗೆಗಳನ್ನು ಒಂದಿಲ್ಲೊಂದು ರೀತಿಯಲ್ಲಿ ಬಳಸಿಕೊಂಡಿವೆ. ಕಂಪ್ಯೂಟರ್ ವಿಜ್ಞಾನದ ಬಹಳಷ್ಟು ಸಂಶೋಧನೆಗಳು ಇಂದು ಗಣಿತದ ಗ್ರಾಫ್ ಸಿದ್ಧಾಂತ, ಸಂಖ್ಯಾ ಸಿದ್ಧಾಂತ, ಕಾಂಬಿನಟೋರಿಕ್ಸ್, ಲೀನಿಯರ್ ಆಲ್ಜೀಬ್ರ – ಮುಂತಾದ ಶಾಖೆಗಳನ್ನು ಅವಲಂಬಿಸಿವೆ.
ಶುದ್ಧವಿಜ್ಞಾನಕ್ಕೆ ಇಷ್ಟೆಲ್ಲ ಹಿರಿಮೆ ಇದ್ದರೂ ಭಾರತೀಯರು ಅದರ ಮಹತ್ತ್ವವನ್ನು ಇನ್ನೂ ಸರಿಯಾಗಿ ಅರಿತಿಲ್ಲವೆನ್ನುವುದು ದುರದೃಷ್ಟ. ಭಾರತದ ವಿಜ್ಞಾನಿಗಳು ನಿಜವಾದ ಸಂಶೋಧನೆಗೆ ಹೆಚ್ಚಿನ ಗಮನ ಕೊಡುವುದಕ್ಕಿಂತಲೂ ವೈಜ್ಞಾನಿಕ ಜರ್ನಲ್ಗಳಲ್ಲಿ ತಮ್ಮ ಲೇಖನ ಪ್ರಕಟವಾದರೆ ಸಾಕು ಎಂಬ ಮನೋಭಾವವನ್ನೇ ಇನ್ನೂ ನೆಚ್ಚಿಕೊಂಡಿದ್ದಾರೆ. ಹೆಚ್ಚಿನವರಿಗೆ ಸಂಶೋಧನೆ ಎನ್ನುವುದು ಸರಕಾರದಿಂದ ಒಂದಷ್ಟು ಗ್ರಾಂಟ್, ಸ್ಕಾಲರ್ಶಿಪ್ ಇತ್ಯಾದಿಗಳನ್ನು ಪಡೆದುಕೊಳ್ಳಲು ಇರುವ ಸುಲಭಮಾರ್ಗ. ಸಿಎಸ್ಐಆರ್ನಂತಹ ದೇಶದ ಉನ್ನತ ವಿಜ್ಞಾನಸಂಸ್ಥೆಗಳು ಕೂಡ ಹತ್ತುವರ್ಷಗಳ ಹಿಂದೆ ಅಮೆರಿಕದ ಕ್ಯಾಲ್ಟೆಕ್ ಅಥವಾ ಎಮ್ಐಟಿಗಳಲ್ಲಿ ನಡೆದಿರುವ ಸಂಶೋಧನೆಗಳನ್ನು ಮರುನಿರ್ಮಿಸುತ್ತಿವೆ. ಇನ್ನು ಭಾರತದಲ್ಲಿ ತಯಾರಾಗುವ ಮಹಾಪ್ರಬಂಧಗಳ ಗುಣಮಟ್ಟ ಅಂತಾರಾಷ್ಟ್ರೀಯ ಮಟ್ಟದಲ್ಲಿಲ್ಲ ಎಂಬ ದೂರು ಇದ್ದದ್ದೇ. ನೌಕರಿಯಲ್ಲಿ ಒಂದಷ್ಟು ಮೆಟ್ಟಿಲು ಮೇಲೇರಲು ಅಥವಾ ವೇತನದಲ್ಲಿ ಹೆಚ್ಚಳ ಕಾಣಲು ಪಿಎಚ್ಡಿ ಅನಿವಾರ್ಯ ಎಂಬ ಕಾರಣಕ್ಕೇ ಸಂಶೋಧನೆಗಿಳಿಯುವವರು ಇದ್ದಾರೆ. ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ `ಹಲವು ಮೂಲಗಳಿಂದ ಕದ್ದು ಬರೆಯುವುದೇ ಸಂಶೋಧನೆ’ ಎನ್ನುವಂತಾಗಿದೆ! ಇತ್ತೀಚೆಗೆ ಬಿಡುಗಡೆಯಾದ `ವಿಶ್ವದ ೨೦೦ ಅತ್ಯುತ್ತಮ ಶಿಕ್ಷಣಸಂಸ್ಥೆಗಳು’ ಎಂಬ ಪಟ್ಟಿಯಲ್ಲಿ ಜಾಗ ಪಡೆದ ಭಾರತೀಯ ವಿಶ್ವವಿದ್ಯಾಲಯ ಕೇವಲ ಒಂದು ಎನ್ನುವುದು ನಮ್ಮಲ್ಲಿನ ಸಂಶೋಧನೆ ಮತ್ತು ಕಲಿಕೆಯ ಕಳಪೆತನವನ್ನು ಎತ್ತಿ ತೋರಿಸುವಂತಿದೆ.
ನಮ್ಮ ದೇಶದಲ್ಲಿ ಶುದ್ಧವಿಜ್ಞಾನ ತನ್ನ ಘನತೆ ಮರಳಿ ಪಡೆಯಬೇಕಾದರೆ –
೧. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಜ್ಞಾನವನ್ನು ಕಲಿಸುವ ಸಂಸ್ಥೆಗಳನ್ನು ಬಲಗೊಳಿಸಬೇಕು. ದೇಶಕ್ಕೆ ಉತ್ತಮ ಸಂಶೋಧಕರ ಅಗತ್ಯ ಇದೆ ಎಂಬ ಸಂದೇಶ ಸರಕಾರಗಳಿಂದ ಬರಬೇಕು.
೨. ಶಾಲಾಮಟ್ಟದಲ್ಲಿ ಮಕ್ಕಳಲ್ಲಿ ಸಂಶೋಧನೆಯತ್ತ ಹೋಗಲು ಪ್ರೇರೇಪಿಸುವ ಶಿಕ್ಷಕರನ್ನು ತಯಾರು ಮಾಡಬೇಕು. ಪಠ್ಯಪುಸ್ತಕಗಳು ಆಮೂಲಾಗ್ರವಾಗಿ ಬದಲಾಗಬೇಕು. ಅಂಕ ಗಳಿಸುವುದೇ ಶಿಕ್ಷಣದ ಮೂಲೋದ್ದೇಶ ಎಂಬ ಭಾವನೆ ಬದಲಾಗದಿದ್ದರೆ ಯಾವ ಪ್ರಗತಿಯೂ ಸಾಧ್ಯವಿಲ್ಲ.
೩. ನೌಕರಿಯ ಭದ್ರತೆಗಾಗಿ ಸಂಶೋಧನೆ ಮಾಡುವ ಪರಿಸ್ಥಿತಿ ಇದೆ. ನಿಜವಾದ ಆಸಕ್ತಿ ಇದ್ದವರಷ್ಟೇ ಸಂಶೋಧನೆಗಿಳಿಯುವ ವಾತಾವರಣ ನಿರ್ಮಾಣವಾಗಬೇಕು.
೪. ಪಿಎಚ್ಡಿ ವಿದ್ಯಾರ್ಥಿಗಳ ಶಿಷ್ಯವೇತನ ಸಣ್ಣ ಪ್ರಮಾಣದ್ದು. ತನ್ನ ಓರಗೆಯ ಗೆಳೆಯರು ಕಂಪೆನಿಗಳನ್ನು ಸೇರಿ ಲಕ್ಷ ರೂಪಾಯಿ ಸಂಬಳ ಪಡೆಯುವಾಗ ತಾನು ಕೆಲವು ಸಾವಿರ ರೂಪಾಯಿಗಳ ವೇತನ ಪಡೆಯುತ್ತ ಸಂಶೋಧನೆ ಮಾಡಬೇಕೆ ಎಂಬ ನಿರಾಸೆ, ಗೊಂದಲ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಮೂಡುವಂತಿರಬಾರದು.
೫. ದೇಶದ ಕಂಪೆನಿಗಳು ತಮ್ಮ ಸಂಶೋಧನಾ ಘಟಕಗಳನ್ನು ಇಲ್ಲೇ ಸ್ಥಾಪಿಸಿ ಭಾರತೀಯರಿಗೇ ಕೆಲಸ ಕೊಡುವಂತಾಗಬೇಕು. ಬಹುರಾಷ್ಟ್ರೀಯ ವಿದೇಶೀ ಕಂಪೆನಿಗಳು ಇಲ್ಲಿ ಶಾಖೆ ತೆರೆದಾಗಲೂ ಭಾರತೀಯರಿಗೆ ನೌಕರಿಯಲ್ಲಿ ಹೆಚ್ಚಿನ ಪಾಲು ಸಿಗುವಂತಾಗಬೇಕು.
೬. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಂದೆತಾಯಿಯರು ತಮ್ಮ ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ಬಿಡಬೇಕು. ಸಂಶೋಧನೆ ಮತ್ತು ಮೂಲವಿಜ್ಞಾನದಲ್ಲಿ ಮುಂದುವರಿಯುವ ಆಸಕ್ತಿ ಇರುವವರನ್ನು ಇಂಜಿನಿಯರಿಂಗ್, ವೈದ್ಯಕೀಯ ಕೋರ್ಸುಗಳಿಗೆ ಹಾಕಿ ಕೊಳೆಸುವುದನ್ನು ಬಿಡಬೇಕು.
ಕೇಂದ್ರೀಯ ಆಹಾರ ಸಂಶೋಧನ ಸಂಸ್ಥೆ, ಮೈಸೂರು
ಭಾರತ ಅಭಿವೃದ್ಧಿಯತ್ತ ದೌಡಾಯಿಸುತ್ತಿದೆ. ಶಿಕ್ಷಣದ ಆದ್ಯತೆಗಳು ಬದಲಾಗಬೇಕಾದ ಕಾಲ ಇದು. ಶಿಕ್ಷಣವನ್ನು ಅನ್ನ ಸಂಪಾದಿಸುವ ಮಾರ್ಗ ಎಂಬ ಸಂಕುಚಿತ ದೃಷ್ಟಿಯಿಂದ ನೋಡುವ ಕಾಲ ಮುಗಿದಿದೆ. ಬೇರೆಯವರು ಕಟ್ಟಿಕೊಟ್ಟ ದೋಣಿಯಲ್ಲಿ ನದಿ ದಾಟುವುದನ್ನು ಬಿಟ್ಟು ನಾವಾಗಿ ದೋಣಿ ಕಟ್ಟುವ ಸಮಯ ಸನ್ನಿಹಿತವಾಗಿದೆ. ಅಭಿವೃದ್ಧಿಯತ್ತ ಹೆಜ್ಜೆಹಾಕಲು ತಯಾರಾಗಿರುವ ದೇಶಕ್ಕೆ ಶುದ್ಧವಿಜ್ಞಾನ ಓದಿಕೊಂಡವರ ದೊಡ್ಡ ಪಡೆಯೇ ಬೇಕು. ೧೯೭೦ರ ದಶಕದಲ್ಲಿ ಅಮೆರಿಕದಲ್ಲಿ ಆದ ಶಿಕ್ಷಣಕ್ರಾಂತಿ ಈಗ ನಮ್ಮಲ್ಲಿ ಆಗಬೇಕಾಗಿದೆ. ಶುದ್ಧವಿಜ್ಞಾನಕ್ಕೆ ಉಜ್ಜ್ವಲ ಭವಿಷ್ಯವಿದೆ ಎನ್ನುವುದನ್ನು ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಿಕ್ಷಕರು ಅರಿತುಕೊಳ್ಳಬೇಕು.
Nice article sir