ಬೃಹತ್ ಅವಕಾಶವನ್ನು ಕೊಡುವ ದೇಶದ ಏಕೈಕ ಸಂಸ್ಥೆ ಭಾರತೀಯ ಸೈನ್ಯ. ಪ್ರತಿ ವರ್ಷ ಸಾವಿರಾರು ಯುವಕರು ಸೈನ್ಯದ ಕಮಿಶನ್ಡ್ ಪರೀಕ್ಷೆಗಳಿಗೆ ಕೂರುತ್ತಾರೆ. ಲಕ್ಷಾಂತರ ಖರ್ಚು ಮಾಡಿ ಅದಕ್ಕೆ ಸಿದ್ಧತೆಯನ್ನೂ ಮಾಡುತ್ತಾರೆ. ವಿಶೇಷವೆಂದರೆ ಮಿಲಿಟರಿಗೆ ಸೇರಲು ಇಂದು ತೀವ್ರವಾದ ಪೈಪೋಟಿ ಇದೆ.
`ಏಳಿ, ಎಚ್ಚರಗೊಳ್ಳಿ, ನೀವು ಎಚ್ಚೆತ್ತುಕೊಂಡು ಉಳಿದವರನ್ನೂ ಎಚ್ಚರಗೊಳಿಸಿ, ನರಜನ್ಮ ಕಳೆಯುವ ಮೊದಲೇ ಅದನ್ನು ಸಾರ್ಥಕಗೊಳಿಸಿ ಹೋಗಿ; ಉತ್ತಿಷ್ಠತ-ಜಾಗ್ರತ-ಪ್ರಾಪ್ಯವರಾನ್ ನಿಬೋಧತ.’
– ಸ್ವಾಮಿ ವಿವೇಕಾನಂದ
ವಿಶ್ವದಲ್ಲಿ ಅತಿ ಹೆಚ್ಚು ಯುವಕರಿರುವ ದೇಶ ಭಾರತ” – ಹೀಗೆಂದು ವಿಶ್ವಸಂಸ್ಥೆಯ ವರದಿಗಳೇ ಹೇಳುತ್ತವೆ. ಯಾವ ಸಂಗತಿಯೇ ಆದರೂ ಹೆಚ್ಚು ಅಥವಾ ಕಡಮೆ ಇರುವುದು ಸಮಸ್ಯೆಗೆ ಕಾರಣ ಎಂಬುದು ನಂಬಿಕೆ. ಆದರೆ ಯುವಕರ ಸಂಖ್ಯೆಯನ್ನಾಧರಿಸಿ ಆಯಾ ದೇಶದ ಭವಿಷ್ಯವನ್ನು ಇಂದು ತೀರ್ಮಾನಿಸಲಾಗುತ್ತದೆ. ಆಡಳಿತಗಳು ಯುವಕರ ಶ್ರೇಯೋಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಉದ್ಯೋಗ ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತದೆ. ಯುವಕರ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಲು ಎ ಆಡಳಿತಗಳು ಸಾಧ್ಯವಾದ ಎ ಪ್ರಯತ್ನಗಳನ್ನು ಮಾಡತೊಡಗುತ್ತವೆ. ಯುವಕರು ಹೆಚ್ಚು ತುಂಬಿರುವ ರಾಷ್ಟ್ರ ಸಹಜವಾಗಿ ‘ಯುವಕ ದೇಶ’ ಎಂದು ಕರೆಸಿಕೊಳ್ಳುತ್ತದೆ. ಹಾಗಾಗಿ ಆಯಾ ದೇಶದ ಯುವಕರ ಸಂಖ್ಯೆ ಆ ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಮಾನದಂಡ.
ಕೌಶಲಾಭಿವೃದ್ಧಿ, ಪ್ರತಿಭೆಗೆ ಅವಕಾಶ, ಸಾಲ ಯೋಜನೆಗಳು, ವಿದ್ಯಾಭ್ಯಾಸ ಸೌಲಭ್ಯಗಳ ಮೂಲಕ ಆಡಳಿತ ತನ್ನ ಬೃಹತ್ ಯುವಕರ ಪಡೆಯ ಸದ್ಬಳಕೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆಂಬುದು ನಿಜವೇ ಆದರೂ, ಯುವಕರ ಆದ್ಯತೆಗಳು ಬೇರೆ ಇರುತ್ತವೆಯೆಂಬುದೂ ಅಷ್ಟೇ ನಿಜ. ಜಾಗತೀಕರಣಾನಂತರ ಭಾರತ ಇಂಥ ಪರಿಣಾಮವನ್ನು ಎದುರಿಸಿದ್ದು ಇನ್ನೂ ಕಣ್ಣಮುಂದಿದೆ. ಕೃಷಿಯತ್ತ ತಾತ್ಸಾರ, ನಗರಗಳತ್ತ ವಲಸೆ, ವಿದ್ಯಾವಂತವರ್ಗದ ವೈಟ್ಕಾಲರ್ ಉದ್ಯೋಗದ ಕನಸು ಮುಂತಾದ ಮನೋಭಾವಗಳು ಸಾಮಾಜಿಕ ಅಸಮತೋಲವನ್ನುಂಟುಮಾಡಿತ್ತು. ಯುವಕರ ಮತ್ತು ಪೋಷಕರ ಆದ್ಯತೆಗಳಿಗನುಗುಣವಾಗಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಹಣ ಸುಲಿಯುವುದರ ಜೊತೆಗೆ ಅಸಮತೋಲವನ್ನು ಮತ್ತಷ್ಟು ಹೆಚ್ಚು ಮಾಡಿದವು. ಒಂದು ಕಾಲದಲ್ಲಿ ‘ಪದವೀಧರ’ ಎಂದುಕೊಳ್ಳುವ ಅಹಂ ಯಾರೂ ಮೂಸದ ವಿದ್ಯೆಯಾಯಿತು. ಗುಮಾಸ್ತಗಿರಿ ಹಳೆಯ ಈಸ್ಟ್ಮನ್ ಕಲರ್ ಜಮಾನದ ಉದ್ಯೋಗವಾಯಿತು. ವಿದೇಶಕ್ಕೆ ಹಾರಬೇಕು, ಕೈತುಂಬಾ ಸಂಪಾದಿಸಬೇಕು ಎನ್ನುವ ಉತ್ಸಾಹ ಹೊಂದುವ ವಿದ್ಯಾವಂತರ ಆಕಾಂಕ್ಷೆಗೆ ಇಂಬುಗೊಟ್ಟದ್ದು ಜಾಗತೀಕರಣಾನಂತರ ಲಗ್ಗೆಯಿಟ್ಟ ಐಟಿ ಉದ್ಯಮ. ಭಾರತದ ಯುವಕರ ಸಂಖ್ಯೆಯ ಮೇಲೆ ಕಣ್ಣಿಟ್ಟ ವಿದೇಶೀ ಉದ್ಯಮಗಳು ತಮ್ಮ ಶ್ರಮವನ್ನು ಕಡಮೆಮಾಡಿಕೊಂಡವು. ಜೊತೆಗೆ ಭಾರತೀಯ ಯುವಕರ ಕನಸುಗಳನ್ನೂ ಈಡೇರಿಸಿದವು!
ಅಬ್ಬರದ ನಡುವೆ…
ಈ ಅಬ್ಬರದ ನಡುವೆ ನರಳಿದ್ದು ಭಾರತೀಯ ಕೃಷಿ. ಅದರಲ್ಲಿ ಸತ್ಯವಿತ್ತು. ಹಾಳುಬಿದ್ದಿದ್ದ ಕೃಷಿಭೂಮಿಗಳು, ಅನಾಥಾಶ್ರಮಗಳಂತಿದ್ದ ಹಳ್ಳಿಗಳು ಅದನ್ನು ಸತ್ಯವೆಂದು ಪ್ರಮಾಣೀಕರಿಸುತ್ತಿದ್ದವು. ಐಟಿ ಕ್ಷೇತ್ರದ ಅಬ್ಬರ ಪೇಟೆಯ ಹುಚ್ಚನ್ನು ಹಿಡಿಸಿತು ಎಂದು ಜನ ಹೇಳುವುದರಲ್ಲೂ ಹುರುಳಿತ್ತು.
ಆದರೆ ಅದೇ ಹೊತ್ತಲ್ಲಿ ಐಟಿ ಕ್ಷೇತ್ರ ಇನ್ನೂ ಕೆಲವು ಅಪವಾದಗಳನ್ನು ಹೊರಬೇಕಾಯಿತು: ಸಂಕಷ್ಟಗಳಿಗೆ ಶನೀಶ್ವರನೇ ಹೊಣೆ ಎನ್ನುವಂತೆ. ಐಟಿಯ ಆಕರ್ಷಣೆ ಯುವಕರನ್ನು ಇತರ ಕ್ಷೇತ್ರಗಳಿಂದ ವಿಮುಖರನ್ನಾಗಿ ಮಾಡಿತು ಎಂದು ಆರೋಪ ಮಾಡಲಾಯಿತು.
ವಿನಾ ಕಾರಣ ನಮ್ಮ ಸೈನ್ಯಕ್ಕೂ ಆ ಆರೋಪವನ್ನು ಮಾಡಲಾಯಿತು. ಅಂದರೆ ಐಟಿ ಕ್ಷೇತ್ರದತ್ತ ಮುನ್ನುಗ್ಗುವ ಕಾರಣಕ್ಕೆ, ಯುವಕರು ಸೇನೆಗೆ ಸೇರುವುದರಲ್ಲಿ ಕಡಮೆಯಾಗುತ್ತಿzರೆ ಎನ್ನಲಾಯಿತು. ಐಟಿಯ ಅಬ್ಬರದ ನಡುವೆ ಆ ಮಾತುಗಳು ಹಲವರಿಗೆ ಸಮಂಜಸ ಎನಿಸುತ್ತಿದ್ದವು. ಆದರೆ ಪರಿಸ್ಥಿತಿ ಹಾಗಿತ್ತೆ? ಯಾವ ಕಾಲದಲ್ಲಿ ಸೇನೆಗೆ ಸೇರುವವರ ಸಂಖ್ಯೆ ಕಡಮೆಯಾಗಿತ್ತು? ಯಾವ ಹೊತ್ತಿನಲ್ಲಿ ಭಾರತೀಯ ಸೈನ್ಯದಲ್ಲಿ ಯುವಕರ ಬದಲು ಮುದುಕರ ನೇಮಕಾತಿಯಾಗಿತ್ತು? ಯಾವ ಕಾಲಘಟ್ಟದಲ್ಲೂ ಭಾರತೀಯ ಸೈನ್ಯದಲ್ಲಿ ಯುವಕರ ಸಂಖ್ಯೆ ಕಡಮೆಯಾದ ಉದಾಹರಣೆಯೇ ಇಲ್ಲ. ಕರ್ನಾಟಕದ ಬೆಂಗಳೂರು ಬಿಡಿ. ಹಲವು ಜಿ ಕೇಂದ್ರಗಳಲ್ಲೂ ಈಗ ಸೈನ್ಯಕ್ಕೆ ನೇಮಕಾತಿಗಳು ವರ್ಷಕ್ಕೊಮ್ಮೆ ಅಥವಾ ವರ್ಷಕ್ಕೆರಡು ಬಾರಿ ನಡೆಯುತ್ತವೆ. ಮಂಗಳೂರಿನಂಥ ಜಾಗದಲ್ಲಿ ಸೈನ್ಯಕ್ಕೆ ನೇಮಕಾತಿ ನಡೆಯುವಾಗ ಸಮಸ್ತ ಕರ್ನಾಟಕದ ಸಾವಿರಾರು ಯುವಕರು ನೇಮಕಾತಿಗೆ ಆಗಮಿಸುತ್ತಾರೆ. ಹಲವು ವರ್ಷಗಳ ಹಿಂದಿನವರೆಗೂ ಕೊಡಗಿನ ಸಣ್ಣಪುಟ್ಟ ಪಟ್ಟಣಗಳಲ್ಲಿ ಸೇನಾ ನೇಮಕ ನಡೆಯುತ್ತಿತ್ತು. ಈಗ ಅವು ನಡೆಯುತ್ತಿಲ್ಲ. ಏಕೆಂದರೆ ಒಂದು ಕಾಲದಲ್ಲಿ ಸೈನ್ಯಕ್ಕೆ ಸೇರುವವರು ಕೊಡಗಿನವರು ಮಾತ್ರ ಎಂಬ ಭಾವನೆ ಮಿಲಿಟರಿಗೂ ಇತ್ತು. ಈಗ ಮಿಲಿಟರಿಗೆ ಕೊಡಗಿನಲ್ಲಿ ನೇಮಕಾತಿಯಾಗದೆಯೂ ಪಡೆಗಳು ಭರ್ತಿಯಾಗುತ್ತವೆ. ಇದಕ್ಕೇನೆನ್ನಬೇಕು?
ಯಥೇಚ್ಛ ಅವಕಾಶಗಳು
ನಿಜ, ಒಂದು ಕಾಲವಿತ್ತು. ಜನ ಸೈನ್ಯಕ್ಕೆ ಸೇರಲು ಹಿಂದೆಮುಂದೆ ನೋಡುತ್ತಿದ್ದರು. ನೇಮಕಾತಿಗೆ ಮಿಲಿಟರಿ ಜನಗಳು ಊರೂರು ನುಗ್ಗಿ ನೇಮಕ ಮಾಡಿಕೊಳ್ಳುತ್ತಿದ್ದರೆಂಬ ಕಥೆಗಳೂ ಇವೆ. ಆದರೆ ಸ್ವತಂತ್ರ ಭಾರತವಂತೂ ಅಂಥ ಘಟನೆಯನ್ನು ಎಲ್ಲೂ ಕೇಳಿಲ್ಲ. ಎಲ್ಲಿ ಸೈನ್ಯಕ್ಕೆ ನೇಮಕಾತಿಯಾಗುತ್ತದೋ ಅ ಅಭ್ಯರ್ಥಿಗಳು ಜಮಾಯಿಸುತ್ತಾರೆ. ಜೊತೆಗೆ ಅಂದಿನಂತೆ ಇಂದು ಮಿಲಿಟರಿ ಎಂದರೆ ಕೆಳದರ್ಜೆಯ ಉದ್ಯೋಗ ಎಂಬ ಭಾವನೆ ಕೂಡ ಇಲ್ಲ. ದೇಶದ ಅತ್ಯುನ್ನತ ಮತ್ತು ಗೌರವಾನ್ವಿತ ಉದ್ಯೋಗ ಎಂಬ ಹಿರಿಮೆ, ಭಾವನಾತ್ಮಕ ಸೆಲೆಗಳು ಜನರನ್ನು ಸೈನ್ಯಕ್ಕೆ ಧಾವಿಸುವಂತೆ ಮಾಡಿವೆ. ಅಲ್ಲದೆ ತಲೆಗೆ ವಿದ್ಯೆ ಹತ್ತದವ ಮಿಲಿಟರಿಗೆ ಸೇರುತ್ತಾನೆ ಎಂಬ ಮಾತೂ ಕೂಡಾ ಇಂದಿಲ್ಲ. ಕಡೆ ಸಿಪಾಯಿಯ ನೇಮಕಾತಿಗೆ ಕೂಡ ಕನಿಷ್ಠ ವಿದ್ಯಾರ್ಹತೆ ಇದೆ. ಸಿಇಟಿ ಸೀಟಿನಿಂದ ಎಂಜಿನಿಯರಿಂಗ್ ಮಾಡಿದ ಹುಡುಗ ಕೂಡ ಇಂದು ಮಿಲಿಟರಿಗೆ ಸೇರುತ್ತಾನೆ. ಕಂಪ್ಯೂಟರ್ ಇಂಜಿನಿಯರ್ ಹುಡುಗ ತಾನು ಇನ್ಫೋಸಿಸ್ಗೆ ಮಾತ್ರ ಸೇರಬೇಕೆಂಬ ತುಡಿತವನ್ನು ಇಂದು ಇಟ್ಟುಕೊಂಡಿರುವುದಿಲ್ಲ. ಮ್ಯೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದವನಿಗೆ ಎಲ್ಅಂಡ್ಟಿ ಮಾತ್ರ ಉದ್ಯೋಗ ಕೊಡಬೇಕೆಂದೇನಿಲ್ಲ. ಆತನಿಗೆ ಮಿಲಿಟರಿಯಲ್ಲೂ ಯಥೇಚ್ಛ ಅವಕಾಶಗಳಿವೆ.
ಇಂದು ಸೈನ್ಯದ ವಿವಿಧ ಇಲಾಖೆಗಳು ಜಾಹೀರಾತುಗಳನ್ನು ಬಹಿರಂಗವಾಗಿ ನೀಡುತ್ತವೆ. ಯುವಕರನ್ನು ಸೈನ್ಯಕ್ಕೆ ಪ್ರೇರೇಪಿಸುವ ಪ್ರಚಾರ ಕಾರ್ಯಕ್ರಮಗಳನ್ನು ಮಿಲಿಟರಿ ಹಮ್ಮಿಕೊಳ್ಳುತ್ತಿದೆ. ಅದರರ್ಥ ಮಿಲಿಟರಿಗೆ ಯುವಕರ ಕೊರತೆ ಇದೆ ಎಂದಲ್ಲ; ಖಾಸಗಿ ರಂಗದಲ್ಲಿ ಇರುವ ಅವಕಾಶಗಳಷ್ಟೇ ಅವಕಾಶಗಳು ಮಿಲಿಟರಿಯಲ್ಲಿವೆ ಎಂಬುದನ್ನು ಪ್ರಚಾರಮಾಡಲು ಎಂಬುದನ್ನು ನಾವು ಅರಿತುಕೊಳ್ಳಬೇಕು. ನೌಕಾದಳ, ವಾಯುಪಡೆಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯಲು ಖಾಸಗಿಯವರೊಡನೆ ಪೈಪೋಟಿಗೆ ಬೀಳುತ್ತವೆ. ಇಂದು ಓರ್ವ ವಿದ್ಯಾರ್ಥಿ ಯಾವ ಕೋರ್ಸುಗಳನ್ನು ಮಾಡಿದರೂ ಅದಕ್ಕೆ ತಕ್ಕಂತಹ ಹುzಗಳು ಮಿಲಿಟರಿಯಲ್ಲಿವೆ. ಆತ ಮೆಡಿಕಲ್ ಮಾಡಿರಬಹುದು, ಮೆರೈನ್ ಇಂಜಿನಿಯರಿಂಗ್ ಮಾಡಿರಬಹುದು, ಭಾಷಾಶಾಸ್ತ್ರ ಪದವೀಧರನಿರಬಹುದು, ಸನ್ನದು ಲೆಕ್ಕಿಗ(ಚಾರ್ಟರ್ಡ್ ಅಕೌಂಟೆಂಟ್) ಆಗಿರಬಹುದು, ಕಾನೂನು ಪದವೀಧರನಾಗಿರಬಹುದು, ಛಾಯಾಚಿತ್ರ ಪರಿಣತನಾಗಿರಬಹುದು, ಕಂಪ್ಯೂಟರ್ ಪರಿಣತನಾಗಿರಬಹುದು, ಲೋಹಶಾಸ್ತ್ರಜ್ಞನಿರಬಹುದು, ಕುದುರೆಸವಾರ, ವಾಹನ ಚಾಲಕ, ಉತ್ತಮ ಕ್ರೀಡಾಪಟು ಇರಬಹುದು. ಎಲ್ಲರನ್ನೂ ಸೈನ್ಯ ಕೈಬೀಸಿ ಕರೆಯುತ್ತದೆ. ಎಲ್ಲರಿಗೂ ಅವಕಾಶವನ್ನು ಸೈನ್ಯ ಕೊಡುತ್ತದೆ. ಇಂಥ ಬೃಹತ್ ಅವಕಾಶವನ್ನು ಕೊಡುವ ದೇಶದ ಏಕೈಕ ಸಂಸ್ಥೆ ಭಾರತೀಯ ಸೈನ್ಯ. ಪ್ರತಿ ವರ್ಷ ಸಾವಿರಾರು ಯುವಕರು ಸೈನ್ಯದ ಕಮಿಶನ್ಡ್ ಪರೀಕ್ಷೆಗಳಿಗೆ ಕೂರುತ್ತಾರೆ. ಲಕ್ಷಾಂತರ ಖರ್ಚು ಮಾಡಿ ಅದಕ್ಕೆ ಸಿದ್ಧತೆಯನ್ನೂ ಮಾಡುತ್ತಾರೆ. ವಿಶೇಷವೆಂದರೆ ಮಿಲಿಟರಿಗೆ ಸೇರಲು ಇಂದು ತೀವ್ರವಾದ ಪೈಪೋಟಿ ಇದೆ.
ಮೇಜರ್ ಧ್ಯಾನ್ಚಂದ್, ಮೇಜರ್ ಮಿಲ್ಖಾಸಿಂಗ್, ಸುಬೇದಾರ್ ಮೇಜರ್ ವಿಜಯ ಕುಮಾರ್, ರಾಮ್ಸಿಂಗ್ ಯಾದವ್, ಗಗನ್ ನಾರಂಗ್ ಮುಂತಾದ ನೂರಾರು ಶ್ರೇಷ್ಠ ಕ್ರೀಡಾಪಟುಗಳನ್ನು ಸೃಷ್ಟಿಸಿದ್ದು ಭಾರತೀಯ ಸೈನ್ಯ. ದೇಶದ ಯುವಜನರ ಪಾಲಿನ ನಿಜವಾದ ಹೀರೋಗಳಾಗಿ ನಿಂತಿರುವವರು ಯಾರೋ ಉದ್ಯಮಿಗಳಲ್ಲ, ಅದು ಭಾರತೀಯ ಯೋಧ. ಇಂದು ಯಾವನೇ ಒಬ್ಬ ಐಟಿ ತಂತ್ರಜ್ಞನನ್ನು ನಿನ್ನ ಮುಂದೆ ಭಾರತೀಯ ಸೈನ್ಯ ಮತ್ತು ಇದೇ ಕೆಲಸದಲ್ಲಿ ಮುಂಬಡ್ತಿ, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀ?” ಎಂಬ ಪ್ರಶ್ನೆಯನ್ನಿಟ್ಟರೆ ಬರುವ ಉತ್ತರ ನಿಸ್ಸಂಶಯವಾಗಿ ಭಾರತೀಯ ಸೈನ್ಯವೇ.
ಭಾರತೀಯ ಯುವಕರು ಸೈನ್ಯಕ್ಕೆ ಸೇರಲು ಇಷ್ಟಪಡುವುದಕ್ಕೆ ಬೇರೆ ಕಾರಣಗಳೂ ಇವೆ:
- ಸಂಬಳಕ್ಕಿಂತ ಆತ್ಮತೃಪ್ತಿಗಾಗಿ ಕೆಲಸ ಮಾಡುವ ಅವಕಾಶ ಅಲ್ಲಿ ಸಿಗುವುದು.
- ದೇಶ ಕಾಯುವ ಕೆಲಸ ಎಂಬ ಗೌರವ ಇರುವುದು.
- ಹಲವು ಅವಕಾಶಗಳು ಸೈನ್ಯದಲ್ಲಿ ಒಟ್ಟಾಗಿ ಸಿಗುವುದು. ಅಂದರೆ ಮಿಲಿಟರಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಒಬ್ಬ ಜೀವಮಾನ ಪೂರ್ತಿ ಕಂಪ್ಯೂಟರ್ ಕುಟ್ಟುತ್ತಾ ಕಾಲಕಳೆಯಬೇಕಿಲ್ಲ. ಆತನೊಳಗೆ ಕ್ರೀಡಾಪಟುವೊಬ್ಬನಿದ್ದರೆ ಸೈನ್ಯ ಮಾತ್ರ ಅದಕ್ಕೆ ಅವಕಾಶ ಕೊಡುತ್ತದೆ.
- ಆದರ್ಶಮಯ ಬದುಕನ್ನು ಸೈನ್ಯ ರೂಪಿಸುವುದು.
- ನೈಜ ಹೀರೋನಂತೆ ಬದುಕಬಹುದೆಂಬ ಆಕಾಂಕ್ಷೆ.
- ಸದಾ ಕ್ರಿಯಾಶೀಲರಾಗಿರಬಹುದೆಂದು.
- ಜಾತಿ, ಲಿಂಗತಾರತಮ್ಯ, ರಾಜಕಾರಣ ಮುಂತಾದ ಅನಿಷ್ಟಗಳ ಹಂಗಿಲ್ಲದೆ ಕೆಲಸ ಮಾಡಬಹುದಾದ್ದರಿಂದ.
- ತನ್ನ ಉದ್ಯೋಗ ಸಂಪೂರ್ಣ ದೇಶವನ್ನು ಪ್ರತಿನಿಧಿಸುವುದರಿಂದ.
- ಇತರ ಉದ್ಯೋಗಗಳಿಗಿಂತ ಮಿಲಿಟರಿ ಹೆಚ್ಚು ಥ್ರಿಲ್ ಆಗಿರುವುದರಿಂದ ಮತ್ತು ತಮ್ಮ ಧೈರ್ಯ-ಸಾಹಸಗಳಿಗೆ ಮಿಲಿಟರಿ ಉತ್ತೇಜನ ಕೊಡುವುದರಿಂದ.
- ದೇಶದ ಶತ್ರುಗಳನ್ನು ನಿಗ್ರಹಿಸಬೇಕು ಎಂಬ ಆಕ್ರೋಶದಿಂದ.
- ಅಸಾಧ್ಯವಾದುದನ್ನು ಸಾಧಿಸುವ ಏಕೈಕ ಕೆಲಸ ಎಂಬ ನಂಬಿಕೆ.
- ವಿಶ್ವದ ಎಲ್ಲೂ ವ್ಯಾಪಿಸುತ್ತಿರುವ ರಾಷ್ಟ್ರೀಯತೆಯ ಕೂಗಿನಿಂದ ಪ್ರೇರಣೆಹೊಂದಿ, ಅದಕ್ಕೆ ಸೈನ್ಯವೊಂದೇ ಸಮರ್ಪಕ ಸ್ಥಳ ಎಂಬ ಭಾವನೆ.
- ಸೈನ್ಯ ನೀಡುವ ಪ್ರಶಸ್ತಿ, ಬಿರುದು, ಫಲಕಗಳು ದೇಶದ ಇತರ ನಾಗರಿಕ ಪ್ರಶಸ್ತಿಗಿಂತ ಶ್ರೇಷ್ಠ ಎಂಬ ಭಾವನೆ ಯುವಕರಲ್ಲಿ ಇರುವುದರಿಂದ.
ಹೀಗೆ ಯುವಕರು ಸೈನ್ಯದತ್ತ ಆಕರ್ಷಿತರಾಗಲು ಹಲವಾರು ಕಾರಣಗಳನ್ನು ಪಟ್ಟಿಮಾಡುತ್ತಾ ಹೋಗಬಹುದು. ಯುವಕರು ಸೈನ್ಯಕ್ಕೆ ಸೇರಲು ಉತ್ಸುಕರಾಗಿzರೆ ಎನ್ನಲು ಈ ಕಾರಣಗಳೇ ಸಾಕು. ಹಾಗೆ ನೋಡಿದರೆ ಯುವಕರು ಈ ಭಾವನೆಗಳ ಹೊರತಾಗಿಯೂ ಸಂಬಳದನೂ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಯೂ ಇಲ್ಲ. ಇಂದು ಕೆಲವು ಹುzಗಳಿಗೆ ಐಟಿಗರಿಗಿಂತಲೂ ಹೆಚ್ಚಿನ ಸಂಬಳವನ್ನು ಮಿಲಿಟರಿ ಕೊಡುತ್ತಿದೆ.
ಪರಿಣಾಮ ಕಳೆದ ಎರಡು ದಶಕಗಳಿಂದ ನಾವು ಕಾಣುತ್ತಿರುವ ಭಾರತೀಯ ಸೈನ್ಯದ ಸ್ವರೂಪವೇ ಬೇರೆಯಾಗಿದೆ. ಎಲ್ಲೂ ಯುವಕರು. ಕ್ಯಾಪ್ಟನ್, ಬ್ರಿಗೇಡಿಯರ್, ಫ್ಲೈಟ್-ಲೆಫ್ಟಿನೆಂಟ್, ಅಷ್ಟೇ ಏಕೆ ಅನೇಕ ಏರ್ಮಾರ್ಷಲ್ಗಳು ಮತ್ತು ಮೇಜರ್-ಜನರಲ್ಗಳೂ ಕೂಡಾ ಯುವಕರು! ಕೂದಲು ನೆರೆತ ಮಿಲಿಟರಿ ಅಧಿಕಾರಿಗಳು ಅಪರೂಪವಾಗಿzರೆ. ಅಂದರೆ ಭಾರತೀಯ ಸೈನ್ಯ ಮೊದಲಿಗಿಂತಲೂ ಇಂದು ಹೆಚ್ಚು ಯೌವನದಿಂದಿದೆ.
ಇಂದಿನ ಸವಲತ್ತು, ಇಂದಿನ ಅವಕಾಶ, ಇಂದಿನ ಮನಃಸ್ಥಿತಿಯಲ್ಲಿ ಸೈನ್ಯಕ್ಕೆ ಸೇರಲಾರದವರು ಯಾರಿದ್ದಾರೆ? ಮಿಲಿಟರಿಗೆ ಸೇರಿದರೆ ಕೆರಿಯರ್ ಹಾಳಾಗಿಹೋಗುತ್ತದೆ ಎನ್ನುವ ಮೂರ್ಖತನದ ಮಾತನ್ನು ಆಡುವ ಸ್ಥಿತಿಯಲ್ಲಿ ಇಂದಿನ ಭಾರತೀಯ ಯುವಕರಿಲ್ಲ.
ಈ ಲೇಖನವನ್ನು ಓದಿದ ಮೇಲೆ ನಮ್ಮ ಯುವಕರ ಬಗ್ಗೆ ನನಗಿದ್ದ ಅಭಿಪ್ರಾಯ ಬದಲಾಯಿತು.