‘ಅಮ್ಮನ ಕಂಬನಿ ಕಂಡಷ್ಟು ನಮಗೆ ಅಪ್ಪನ ಬೆವರು ಕಾಣುವುದೇ ಇಲ್ಲ’ – ಹೌದು ತಾನೇ?
ಚಾಲ್ಸ್ ಪ್ಲಂಬ್ ಓರ್ವ ಯುದ್ಧ ವಿಮಾನದ ಪೈಲಟ್. ಒಂದು ಸಲ ಅವನ ಯುದ್ಧವಿಮಾನ ಪತನಗೊಂಡಾಗ ಅದೃಷ್ಟವಶಾತ್ ಪಾರಷೂಟ್ ನೆರವಿನಿಂದ ಕೆಳಕ್ಕೆ ಜಿಗಿದು ಜೀವ ಉಳಿಸಿಕೊಂಡಾತ. ಆದರೆ ಅವನು ಇಳಿದದ್ದು ವೈರಿಗಳ ನೆಲದಲ್ಲಿ. ಅಲ್ಲಿ ಅವರಿಂದ ಬಂಧಿತನಾಗಿ ಆರು ವರ್ಷಗಳ ಕಾಲ ಹೀನಾಯವಾಗಿ ಕಳೆದ. ಆ ದಿನಗಳು ಅತ್ಯಂತ ಕಠಿಣವಾಗಿದ್ದವು. ಅಂತೂ ಅಲ್ಲಿಂದ ಬಿಡುಗಡೆಗೊಂಡು ಬಂದ ಮೇಲೆ ಆ ದುರ್ದಿನಗಳಲ್ಲಿ ಗಳಿಸಿಕೊಂಡ ಅನುಭವಗಳನ್ನು ಕೇಳುಗಮಂದಿಗೆ ಉಪನ್ಯಾಸವಾಗಿ ಕೊಡುತ್ತಾ ಬಂದಿದ್ದಾನೆ. ಒಂದು ದಿನ ಪ್ಲಂಬ್ ಮತ್ತು ಆತನ ಮಡದಿ ಹೋಟೆಲೊಂದರಲ್ಲಿ ಕುಳಿತಿದ್ದಾಗ ಪಕ್ಕದ ಮೇಜಿನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಬಂದು ಅವನನ್ನು ಮಾತಾಡಿಸಿದ. “ನೀವು ಪ್ಲಂಬ್ ತಾನೆ? ಕಿಟ್ಟಿ ಹಾಕ್ ಎಂಬ ಯುದ್ಧವಿಮಾನ ಹಾರಿಸುತ್ತಿರಬೇಕಾದರೆ ಅಪಘಾತಕ್ಕೀಡಾಗಿ ಶತ್ರುಗಳಿಗೆ ಸೆರೆ ಸಿಕ್ಕಿದ್ದಿರಿ!” ಎಂದ. ಪ್ಲಂಬ್ಗೆ ಆಶ್ಚರ್ಯ. ಏಕೆಂದರೆ ಅವನಿಗೆ ಯಾವತ್ತೂ ಈ ವ್ಯಕ್ತಿಯನ್ನು ಮಾತಾಡಿಸಿದ್ದರ ನೆನಪಿರಲಿಲ್ಲ. `’ನನ್ನ ಬಗ್ಗೆ ಇಷ್ಟೆಲ್ಲಾ ವಿವರ ನಿನಗೆ ಹೇಗೆ ಗೊತ್ತು?” ಎಂದು ಅವನನ್ನೇ ಕೇಳಿದ. ‘`ಅಂದು ನಿಮ್ಮ ಪಾರಷೂಟನ್ನು ಪ್ಯಾಕ್ ಮಾಡಿದ್ದವನು ನಾನೇ ಸರ್! ಬಹುಶಃ ಅದು ಸಮರ್ಪಕವಾಗಿ ಕೆಲಸ ಮಾಡಿರಬೇಕು, ಅಲ್ಲವೇ?” ಆ ವ್ಯಕ್ತಿ ಮುಗುಳುನಗುತ್ತಾ ಉತ್ತರಿಸಿದ. ಅವನ ಕೈಕುಲುಕಿದ ಪ್ಲಂಬ್, ಖಂಡಿತಾ. ಆ ಪಾರಷೂಟ್ ಕೆಲಸ ಮಾಡಿದ್ದರಿಂದ ನಾನು ಇವತ್ತು ಇಲ್ಲಿದ್ದೇನೆ. ಅಲ್ಲದಿದ್ದರೆ ಎಂದೋ ಇನ್ನಿಲ್ಲವಾಗುತ್ತಿದ್ದೆ…..” ಎಂದು ಅವನಿಗೆ ಧನ್ಯವಾದ ಸಮರ್ಪಿಸಿ ಅವನಿಂದ ಬೀಳ್ಕೊಂಡ.
ಆದರೆ ಆ ರಾತ್ರಿಯಿಡೀ ಪ್ಲಂಬ್ಗೆ ನಿದ್ದೆ ಬರಲಿಲ್ಲ. ಅವನ ತಲೆಯ ತುಂಬೆಲ್ಲ ಆ ವ್ಯಕ್ತಿಯೇ ಇದ್ದ. ಸೇನೆಯ ಸಮವಸ್ತ್ರದಲ್ಲಿ ಆತ ಹೇಗೆ ಕಾಣಿಸುತ್ತಿದ್ದಿರಬಹುದು, ಬಿಳಿಯ ಟೋಪಿ, ಬೆನ್ನಿಗೆ ಬಿಬ್, ಬೆಲ್ ಬಾಟಮ್ ಪ್ಯಾಂಟು…. ಬಹುಶಃ ಅದೆಷ್ಟೋ ಸಲ ತಾನು ಅವನನ್ನು ನೋಡಿರಬಹುದು. ಆದರೆ ಅವನಿಗೊಂದು ಶುಭೋದಯ ಹೇಳುವುದಾಗಲೀ, ಹೇಗಿದ್ದೀಯಾ ಎಂದು ವಿಚಾರಿಸುವ ಕಾಳಜಿಯಾಗಲೀ, ಅಥವಾ ಇನ್ನೇನನ್ನೇ ಆದರೂ ಮಾತಾಡಿಸುವ ಸೌಜನ್ಯ ತೋರಿರುವುದಿಲ್ಲ. ಏಕೆಂದರೆ ತಾನೊಬ್ಬ ಯುದ್ಧವಿಮಾನದ ಪೈಲಟ್, ಅವನಾದರೋ ಕೇವಲ ಒಬ್ಬ ಸಹಾಯಕ….. ಸ್ಥಾನ, ಅಧಿಕಾರ ಎರಡೂ ದೊಡ್ಡದು ಎಂಬ ಕಾರಣಕ್ಕೆ…. ಎಂಬುದಾಗಿ ಚಿಂತಿಸಿದ ಪ್ಲಂಬ್.
ಆ ವ್ಯಕ್ತಿ ಪ್ರತಿದಿನವೂ ತನಗೆ ಗೊತ್ತಿಲ್ಲದ, ತನ್ನನ್ನು ಮಾತಾಡಿಸದ, ಪೈಲಟ್ಗಳಿಗಾಗಿ ಅತ್ಯಂತ ಜತನದಿಂದ ಪಾರಷೂಟುಗಳನ್ನು ಮಡಚಿ ಕಟ್ಟುತ್ತಿರುತ್ತಾನೆ. ಹಾಗೆ ನೋಡಿದರೆ ಅವನು ಜೋಪಾನವಾಗಿ ಕಟ್ಟುವುದು ಒಬ್ಬೊಬ್ಬ ಪೈಲಟ್ಗಳ ವಿಧಿಯನ್ನೇ ಎಂದರೂ ತಪ್ಪಿಲ್ಲ. ಆದರೆ ಅವನನ್ನು, ಅವನ ಕೆಲಸವನ್ನು ಗುರುತಿಸುವ ಮಂದಿ ಕಡಮೆ.
ಈಗ ಪ್ಲಂಬ್ ತನ್ನ ಭಾಷಣದಲ್ಲೆಲ್ಲಾ ತನ್ನ ಪ್ರೇಕ್ಷಕರನ್ನು ಒಂದು ಪ್ರಶ್ನೆ ಕೇಳುತ್ತಾನೆ ನಿಮ್ಮ ಪಾರಷೂಟನ್ನು ಕಟ್ಟುತ್ತಿರುವವರು ಯಾರು?
ನಾವು ಒಂದು ದಿನ ಕಳೆಯಬೇಕಾದರೆ ನಮಗೆ ಹಲವು ಬಗೆಯ ಪಾರಷೂಟುಗಳು ಬೇಕಾಗುತ್ತವೆ. ದೈಹಿಕವಾದ ಪಾರಷೂಟ್, ಮಾನಸಿಕವಾದ ಪಾರಷೂಟ್, ಭಾವನಾತ್ಮಕವಾದ ಪಾರಷೂಟ್… ಹೀಗೆ. ನಮ್ಮ ಪ್ರತಿಯೊಂದು ದಿನವೂ ಸುಂದರವಾಗಿರುವಲ್ಲಿ ಕೆಲಸ ಮಾಡುವ ಮಂದಿ ಹಲವರಿರುತ್ತಾರೆ. ಆದರೆ ನಿಜಕ್ಕೂ ನಾವು ಅವರನ್ನು ಗುರುತಿಸುತ್ತೇವೆಯೇ? ನಮ್ಮ ಸಮಯ ತುಂಬಾ ದುಬಾರಿಯೆಂಬಂತೆ ವರ್ತಿಸುತ್ತೇವೆ. ನಮಗಾಗಿಯೇ, ನಮ್ಮ ಒಳಿತಿಗಾಗಿಯೇ ಕೆಲಸ ಮಾಡುವವರೊಂದಿಗೆ ಕ್ಷಣಕಾಲ ಆತ್ಮೀಯವಾಗಿ ಮುಗುಳುನಗುವುದಕ್ಕೂ ನಮಗೆ ಇರಿಸುಮುರಿಸು! ಅಥವಾ ಅವರೂ ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂಬುದು ನಮ್ಮ ಅರಿವಿಗೇ ಬರುವುದಿಲ್ಲ. ಆಫೀಸಿನ ಪ್ರವೇಶ ದ್ವಾರ ತಲಪುತ್ತಿದ್ದಂತೆ ಎದುರಾಗುವ ಸೆಕ್ಯೂರಿಟಿ, ನಾವು ಕುಳಿತುಕೊಳ್ಳುವ ಕುರ್ಚಿ, ಮೇಜುಗಳನ್ನು ಒರೆಸಿ ಶುಭ್ರವಾಗಿರಿಸುವ ಕೆಲಸದವರು…. ಇವರನ್ನೆಲ್ಲಾ ಒಂದು ವೇಳೆ ನಾವು ಮಾತಾಡಿಸಿದರೂ ‘ಡಿಗ್ನಿಟಿ’ ಕಾಪಾಡಿಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಇತರರು ನಮ್ಮನ್ನೇ ಆಡಿಕೊಂಡರೂ ಅಚ್ಚರಿಯಿಲ್ಲ!
`ಟೇಕನ್ ಫಾರ್ ಗ್ರಾಂಟೆಡ್’
ಹೊರಗಿನ ಪ್ರಪಂಚ ಹಾಗಿರಲಿ, ಮನೆಯ ಒಳಗಿನ ಜಗತ್ತಿಗೇ ಬರೋಣ. ದಿನದ ಇಪ್ಪತ್ತ ನಾಲ್ಕು ಗಂಟೆಯೂ ಮನೆಯ ಕೆಲಸಗಳಲ್ಲಿಯೇ ತೊಡಗಿಸಿಕೊಂಡಿರುವ ಹೆಂಗಳೆಯರು ‘ಟೇಕನ್ ಫಾರ್ ಗ್ರಾಂಟೆಡ್’ ಆಗಿಬಿಡುವುದು ಸಾಮಾನ್ಯ. ಯಾಕೆಂದರೆ ದಿನಪೂರ್ತಿ ಮನೆಮಂದಿಯ ಆರೈಕೆಯಲ್ಲಿ ತೊಡಗಿಕೊಳ್ಳುವ ಅವಳು ಮಾಡುವ ಕೆಲಸಕ್ಕಿಂತ ಮಾಡದ ಕೆಲಸಗಳು ಬೇಗ ಕಾಣುತ್ತವೆ. ಪ್ರತಿದಿನವೂ ತಪ್ಪದಂತೆ ಮನೆಗುಡಿಸಿ, ಒರೆಸಿ, ಪಾತ್ರೆ, ಬಟ್ಟೆ ತೊಳೆಯುವ ಕೆಲಸಗಳನ್ನೇ ನೋಡಿ. ಅವನ್ನೆಲ್ಲ ಮಾಡಿದ್ದೀಯಾ, ಮನೆ ವಾತಾವರಣ ಹಿತವಾಗಿದೆ ಎಂದು ಅವಳಿಗೆ ಮೆಚ್ಚುಗೆ ಸೂಸದೇ ಇರುವ ಜನ, ಒಂದೇ ದಿನವಾದರೂ ಅವಳು ಈ ಕೆಲಸಗಳನ್ನು ಪೂರೈಸದೇ ಇದ್ದರೆ ‘ಅದು ಮಾಡಿಲ್ಲ, ಇದು ಮಾಡಿಲ್ಲ’ ಎಂದು ಎಗರಾಡುತ್ತಾರೆ. ಸ್ನಾನಕ್ಕೆ ಹೊರಟಾಗ ಟವೆಲ್ಲು, ಬಳಿಕ ಉಡುಪುಗಳು ಬೇಕಾದಂತೆ ಕೈಗೆಟಕುವ ರೀತಿಯಲ್ಲಿದ್ದರೆ ತಮ್ಮ ಖುಷಿಯನ್ನು ವ್ಯಕ್ತಪಡಿಸಲಾಗದ ಜನ ಒಂದು ದಿನ ಕರ್ಚೀಪು ಸಿಗದಿದ್ದರೆ ಮಾತ್ರ ‘ಬೇಕಾದದ್ದೊಂದೂ ಸಿಗುವುದಿಲ್ಲ ಇಲ್ಲಿ’ ಎಂದು ಕೂಗಾಡಿಯಾರು. ದಿನವೂ ಹಿತವಾದ ಅಡುಗೆಯನ್ನೇ ಮಾಡಿಬಡಿಸಿದಾಗ ‘ಚೆನ್ನಾಗಿದೆ’ ಎಂದು ಒಂದೇ ಒಂದು ಮಾತಾಡದವರು ಒಂದು ದಿನ ಅಡುಗೆಯ ತಾಳ ತಪ್ಪಿದರೂ ‘ಏನು ಅಡುಗೆ ಮಾಡುತ್ತಾಳೋ ಏನೋ’ ಎಂದು ಹಂಗಿಸುವುದು ಮಾಮೂಲಿ. ಈ ಎಗರಾಡುವ ಅಧಿಕಾರ ಪ್ರಾಪ್ತವಾಗುವುದು ಅವಳಿಗೆ ಅರ್ಹವಾಗಿಯೇ ಒದಗಬೇಕಾದ ಪ್ರಶಂಸೆಯನ್ನು ಕೊಡುತ್ತಿದ್ದರೆ ಮಾತ್ರ ತಾನೇ? ಆದರೆ ನಾವು ಹಾಗೆ ಯೋಚನೆ ಮಾಡುವುದೇ ಇಲ್ಲ. ಸ್ನಾನಕ್ಕಿಳಿದಾಗ ಬಿಸಿನೀರು ಇಲ್ಲವಾದರೆ ಕೂಗಾಡಿಯೇವು ವಿನಾ ಒಂದೇ ದಿನವಾದರೂ ‘ನಮಗಾಗಿ ಎಷ್ಟೆಲ್ಲಾ ಮಾಡುತ್ತೀಯಾ ಅಮ್ಮಾ?’ ಎಂದು ಧನ್ಯವಾದ ಹೇಳುವುದು ನಮಗೆ ನೆನಪಾಗುವುದೇ ಇಲ್ಲ.
ಮನೆಯ ಮಾನಿನಿ ಮಾತ್ರವಲ್ಲ, ಮನೆಯ ಯಜಮಾನನ ಕಥೆಯೂ ಇಷ್ಟೇ. ಇತ್ತೀಚೆಗೆ ಬಂದ ಯಾವುದೋ ಸಂದೇಶವೊಂದರಲ್ಲಿ ಬರೆದಿತ್ತು, ‘ಅಮ್ಮನ ಕಂಬನಿ ಕಂಡಷ್ಟು ನಮಗೆ ಅಪ್ಪನ ಬೆವರು ಕಾಣುವುದೇ ಇಲ್ಲ….’ ಹೌದು ತಾನೇ? ತನ್ನ ದುಡಿಮೆ ಎಷ್ಟೇ ಇರಲಿ, ಅದರ ಬಹುಪಾಲನ್ನೂ ಮನೆಗೆ ಮಕ್ಕಳಿಗೆ ಎಂದು ತಂದು ಸುರಿಯುವ ಅವನ ಚಪ್ಪಲಿ ಕಿತ್ತು ಕಾಲಲ್ಲಿ ಗಾಯವಾಗಿರುವುದು ನಮಗೆ ಸುಲಭವಾಗಿ ಕಾಣಿಸೀತೇ? ಹುಟ್ಟಿದ ಹಬ್ಬಕ್ಕೆ ತಾನು ಬಯಸಿದಂತೆ ಸರವೋ ಸೀರೆಯೋ ತಂದು ಕೊಡಲಿಲ್ಲ ಎಂದು ಮುನಿಸಿಕೊಳ್ಳುವ ಪತ್ನಿಗೆ ತನ್ನ ಪತಿಯ ಬನಿಯನ್ನಿನ ತೂತುಗಳು ಕಾಣಿಸಲಾರವೇ?
ಹಾಗೆಂದ ಮಾತ್ರಕ್ಕೆ ಮನೆಯೊಳಗಿನ ಪ್ರತೀ ಕೆಲಸಕ್ಕೂ ಧನ್ಯವಾದ, ಕ್ಷಮಿಸಿ, ದಯವಿಟ್ಟು ಎಂಬಿತ್ಯಾದಿ ಪದಪುಂಜಗಳನ್ನು ಬಳಸಿ ಮನೆಯೊಳಗಿನ ಸಂಬಂಧಗಳಿಗೂ ಔಪಚಾರಿಕತೆಯ ಲೇಪನ ಬೇಕು ಎಂದು ಅರ್ಥವಲ್ಲ. ಒಳ್ಳೆಯದನ್ನು ಮೆಚ್ಚಿಕೊಳ್ಳುವ ಮನಸ್ಸಿಗೆ ಮಾತ್ರ ತಪ್ಪನ್ನು ಹೇಳುವ ಅಧಿಕಾರ ಒದಗುತ್ತದೆ. ವಿಮರ್ಶೆಯೆಂದರೆ ಸರಿತಪ್ಪುಗಳೆರಡನ್ನೂ ಹೇಳುವುದು ತಾನೆ? ಕೇವಲ ತಪ್ಪುಗಳನ್ನು ಮಾತ್ರ ಎತ್ತಿಹಿಡಿದು ಚುಚ್ಚುತ್ತಿದ್ದರೆ ಯಾವ ಸಂಬಂಧಗಳೂ ಉಳಿಯುವುದಿಲ್ಲ. ಹಾಗೆಂದು ಮಿತಿ ಮೀರಿ ಸಾರಿ, ಥ್ಯಾಂಕ್ಯೂ ಎಂದರೂ ಮನೆಯ ವಾತಾವರಣ ಪರಕೀಯವಾಗಬಹುದು. ಒಳ್ಳೆಯ ಕೆಲಸ ಮಾಡಿದಾಗ ಮೆಚ್ಚಿಕೊಳ್ಳುವವರು ಯಾರೇ ಆಗಿರಲಿ, ಅವರು ನಮ್ಮ ತಪ್ಪನ್ನು ತಿದ್ದಿಕೊಳ್ಳುವಂತೆ ಸೂಚಿಸಿದಾಗ ಮನಸ್ಸಿಗೆ ಇರಿಸುಮುರಿಸಾಗುವುದೇ ಇಲ್ಲ. ಯಾಕೆಂದರೆ ಅಲ್ಲಿ ಹಿತವಾದ ಬಂಧವೊಂದು ಬೆಸೆದಿರುತ್ತದೆ.
ಪ್ರತಿದಿನವೂ ನಮ್ಮ ಪಾರಷೂಟನ್ನು ಯಾರು ಕಟ್ಟುತ್ತಾರೆಂಬುದನ್ನು ಗುರುತಿಸುವ ಮನಸ್ಸು ನಮ್ಮದಾಗಲಿ. ನಮಗಾಗಿ ಅಡುಗೆಮನೆಯಲ್ಲಿ ಬೇಯುವ ಹೆಣ್ಣುಮಗಳು, ತೊಡುವ ಬಟ್ಟೆಯನ್ನು ಒಗೆದು ಒಣಗಿಸಿಡುವ ದಣಿವ ಕೈಗಳು, ತನ್ನ ಮಂಡಿ ನೋವಾಗಿ ಹಿಂಸೆಯಾಗುತ್ತಿದ್ದರೂ ಮಗನ/ಳ ತಲೆನೋವಿಗೆ ಮಸಾಜು ಮಾಡುವ ಅಮ್ಮ, ಮನೆಯ ಮಂದಿಯೆಲ್ಲ ಮಲಗಿದ್ದರೂ ಮನೆಯವರ ಒಳಿತಿಗಾಗಿ ಏನಾದರೊಂದು ಕೆಲಸದಲ್ಲಿ ತೊಡಗಿಕೊಳ್ಳುವ ಅಪ್ಪ…. ಇವರೆಲ್ಲರ ದುಡಿಮೆಯಿಂದಾಗಿಯೇ ನಾವು ಸಂತೋಷವಾಗಿದ್ದೇವೆ ಎಂಬುದು ಪ್ರತಿಕ್ಷಣವೂ ನಮಗೆ ನೆನಪಿರಲಿ.
Comments are closed.