ಅನುಭವ ನಮ್ಮನ್ನು ಬೀಳದಂತೆ, ಜಾರದಂತೆ ಎಚ್ಚರಿಸುತ್ತದೆ. ಜೀವನ ಎಂಬುದು ಸಮತಟ್ಟಾದ ಬಯಲಲ್ಲ. ಅದು ಏಳು-ಬೀಳಿನ ಪರ್ವತ-ಪ್ರಪಾತಗಳಿಂದ, ಕಲ್ಲು-ಮುಳ್ಳುಗಳಿಂದ ಕೂಡಿದ ಕಷ್ಟಕರ ದಾರಿಯ ಪಯಣ. ಇಂತಹ ಬಾಳಪಯಣದಲ್ಲಿ ನಾವು ಸದಾ ಜಾಗರೂಕತೆಯಿಂದ ಹೆಜ್ಜೆಯಿಡಬೇಕಾಗುತ್ತದೆ.
ಮನುಷ್ಯ ಎಷ್ಟೇ ಪದವಿ ಗಳಿಸಿದರೂ ಅನುಭವ ಇಲ್ಲದಿದ್ದರೆ ಆ ಪದವಿಗೆ ಬೆಲೆಯಿಲ್ಲ. ಯಾವುದೇ ವಿದ್ಯೆಯ ಬಗ್ಗೆ ಅನುಭವವಿಲ್ಲದಿದ್ದರೆ ಕಲಿತದ್ದು ಪುಸ್ತಕದ ಬದನೆಕಾಯಿ ಆಗುತ್ತದೆ. ವಿಶ್ವವಿದ್ಯಾಲಯದಲ್ಲಿ ಕಲಿಯುವುದಕ್ಕಿಂತಲೂ ಹೆಚ್ಚು ಅನುಭವದಿಂದ ಕಲಿಯುವುದು ನಮ್ಮ ಜೀವನದಲ್ಲಿ ಇರುತ್ತದೆ. ದೂರಶಿಕ್ಷಣದಿಂದ ಅಡುಗೆ ಕಲಿಯಲು ಸಾಧ್ಯವೇ? ಅಂಚೆ ತೆರಪಿನ ಶಿಕ್ಷಣದಲ್ಲಿ ಈಜುವುದನ್ನು ಕಲಿಯಲಾಗುತ್ತದೆಯೇ? ವಿದ್ಯೆ ನಮಗೆ ದಾರಿ, ದಿಕ್ಕು ತೋರಿಸಬಹುದು. ಆದರೆ ಆ ದಾರಿಯಲ್ಲಿ, ಆ ದಿಕ್ಕಿನತ್ತ ಸ್ವತಃ ನಡೆಯಬೇಕು.
ಇಂದು ರೋಗಿಗಳನ್ನು ಪ್ರತ್ಯಕ್ಷವಾಗಿ ಪರೀಕ್ಷಿಸದೆ ಕೇವಲ ಅಂತರ್ಜಾಲದಲ್ಲಿ ಬರುವ ಮಾಹಿತಿಗಳನ್ನೂ ಪರೀಕ್ಷಾ ವರದಿಗಳನ್ನು ನೋಡಿ ಚಿಕಿತ್ಸೆ ನೀಡುವ ಯುಗ ಆರಂಭವಾಗಿದೆ. ಪಾಠ ಮಾಡುವ ಪ್ರತ್ಯಕ್ಷ ಗುರುಗಳಿಲ್ಲದೆ ಕೇವಲ ಗಣಕಯಂತ್ರದಿಂದ ಮಾಹಿತಿ ಪಡೆದು ಪರೋಕ್ಷ ಗುರುಗಳಿಂದ ಕಲಿಯುವ ಕಾಲ ಪ್ರಾರಂಭವಾಗಿದೆ. ಹೆರಿಗೆಯ ನೋವನ್ನು ಅನುಭವಿಸದೆ ಅರಿವಳಿಕೆ ಮದ್ದನ್ನು ಚುಚ್ಚಿಸಿಕೊಂಡು ಮಕ್ಕಳನ್ನು ಹೆರುವ ಸಂಪ್ರದಾಯಕ್ಕೆ ನಾಂದಿ ಹಾಡಿಯಾಗಿದೆ. ಹೀಗೆ ಕಷ್ಟವನ್ನು ನಿವಾರಿಸಲು ಹೋಗಿ ಅನುಭವವನ್ನೆ ನಿರಾಕರಿಸುತ್ತಿದ್ದೇವೆ. ಪ್ರಸಿದ್ಧ ಮನಃಶಾಸ್ತ್ರಜ್ಞ ವಿಕ್ಟರ್ ಇ. ಫ್ರಾಂಕ್ಲ್ ಹೇಳುವಂತೆ ದುಃಖಕ್ಕೂ ಅರ್ಥವಿದೆ ಎಂದು ತಿಳಿದಾಗ ದುಃಖವು ದುಃಖವಾಗಿ ಉಳಿಯುವುದಿಲ್ಲ. ಆದರೆ ಅನುಭವಗಳಿಂದ ಹೇಗೆ ಪಾಠ ಕಲಿಯಬೇಕೆಂದು ನಮಗೆ ತಿಳಿದಿರಬೇಕು.
ಜೀವನದಲ್ಲಿ ನೋವಿನ ಅನುಭವವಿಲ್ಲದಿದ್ದರೆ ನಲಿವಿನ ಅನುಭವವಾದರೂ ಎಲ್ಲಿಂದ ಬರಬೇಕು! ಅನುಭವವಿಲ್ಲದ ಬದುಕು ಯಾಂತ್ರಿಕ ಬದುಕು.
ಶಿಕ್ಷೆ ಶಿಕ್ಷಣದ ಭಾಗ
ಹಿಂದೆ ಗುರುಕುಲದಲ್ಲಿ ಶಿಕ್ಷಣವನ್ನು ಅನುಭವದ ಮುಖಾಂತರ ಕಲಿಸುತ್ತಿದ್ದರು. ಪ್ರತಿಯೊಬ್ಬ ಶಿಷ್ಯರು ಭಿಕ್ಷೆ ಬೇಡಿ ಆಶ್ರಮಕ್ಕೆ ಆಹಾರ ಸಾಮಗ್ರಿ ತರಬೇಕು. ತೋಟ, ಗದ್ದೆಯಲ್ಲಿ ಶಿಷ್ಯರಾಗಿದ್ದಾಗಲೆ ಮೈಮುರಿದು ಕೆಲಸ ಮಾಡಬೇಕು. ಹಸುವಿನ ಲಾಲನೆ-ಪಾಲನೆ ಮಾಡಬೇಕು. ಗುರುಗಳು ಶಿಷ್ಯನಿಗೆ ಪಾಠ ಹೇಳಿಕೊಡುವ ಮೊದಲು ಅವನನ್ನು ಸಾಕಷ್ಟು ಆಶ್ರಮದ ಸೇವಾ ಕೆಲಸಗಳಲ್ಲಿ ತೊಡಗಿಸಿ, ತದನಂತರ ವಿದ್ಯೆಯನ್ನು ಧಾರೆ ಎರೆಯುತ್ತಿದ್ದರು. ಶಿಷ್ಯನೇನಾದರೂ ತಪ್ಪಾಗಿ ನಡೆದುಕೊಂಡರೆ ಶಿಕ್ಷೆಯನ್ನು ಕೊಡಲು ಗುರುಗಳು ಹಿಂದೆ-ಮುಂದೆ ನೋಡುತ್ತಿರಲಿಲ್ಲ.
ಹಿಂದೆ ಒಬ್ಬ ರಾಜನಿದ್ದ. ಅವನಿಗೆ ಒಬ್ಬನೇ ಒಬ್ಬ ಮಗನಿದ್ದ. ಎಂಟು ವರ್ಷವಾಗುತ್ತಿದ್ದಂತೆ ರಾಜನು ಅವನನ್ನು ಅಧ್ಯಯನಕ್ಕಾಗಿ ಗುರುಕುಲಕ್ಕೆ ಕಳುಹಿಸಿದ. ಗುರುಕುಲದಲ್ಲಿ ರಾಜಕುಮಾರನ ಅಧ್ಯಯನ ಮುಗಿಯಿತು. ರಾಜನು ಮಗನನ್ನು ಕರೆದುಕೊಂಡು ಹೋಗಲು ಗುರುಕುಲಕ್ಕೆ ಬಂದ.
ಅಲ್ಲಿ ರಾಜಕುಮಾರನನ್ನು ಬೀಳ್ಕೊಡುವ ಸಮಾರಂಭ ಜರಗಿತು. ಹೊರಡುವ ಮೊದಲು ರಾಜಕುಮಾರನು ಗುರುಗಳಿಗೆ ನಮಸ್ಕಾರ ಮಾಡಿದನು. ಗುರುಗಳು ರಾಜಕುಮಾರನನ್ನು ಕುರಿತು – ನನ್ನ ಕೋಲನ್ನು ತೆಗೆದುಕೊಂಡು ಬಾ ಎಂದರು.
ರಾಜಕುಮಾರ ಒಳಗೆ ಹೋಗಿ ಕೋಲನ್ನು ತಂದು ಗುರುಗಳ ಎದುರಿಗಿಟ್ಟ. ಗುರುಗಳು ಕೂಡಲೇ ಅದನ್ನೆತ್ತಿ ರಾಜಕುಮಾರನಿಗೆ ಎರಡು ಸಾರಿ ಹೊಡೆದರು. ಹೊಡೆತ ಎಷ್ಟು ಬಲವಾಗಿತ್ತೆಂದರೆ ಈ ಹೊಡೆತಗಳಿಂದ ರಾಜಕುಮಾರನ ಬೆನ್ನ ಮೇಲೆ ಕೋಲಿನ ಗುರುತು ಚೆನ್ನಾಗಿ ಕಾಣಿಸುತ್ತಿತ್ತು. ಅನಂತರ ಗುರುಗಳು ಸಮಾಧಾನದಿಂದಲೇ, ವತ್ಸ, ನಿನಗೆ ಮಂಗಳವಾಗಲಿ, ಈಗ ನೀನು ತಂದೆಯೊಡನೆ ಹೋಗಬಹುದು ಎಂದರು.
ವಿನಯವಂತನಾದ ರಾಜಕುಮಾರ ಏನನ್ನೂ ಮಾತನಾಡದೆ ತಂದೆಯ ಸಮೀಪಕ್ಕೆ ಬಂದ. ರಾಜನು ಆಶ್ಚರ್‍ಯದಿಂದ – ಗುರುಗಳೇ, ಗುರುಕುಲದಿಂದ ಬೀಳ್ಕೊಡುವಾಗ ಹರಸಬೇಕಾದುದು ರೂಢಿ. ನೀವಾದರೋ ಯುವರಾಜನನ್ನು ಚೆನ್ನಾಗಿ ದಂಡಿಸಿದಿರಿ. ಇದೇತಕ್ಕೆ? ನನ್ನ ಮಗ ಏನು ತಪ್ಪು ಮಾಡಿದ? ನೀವು ಅವನನ್ನು ಏಕೆ ಹೊಡೆದಿರಿ? ಎಂದು ಗುರುಗಳನ್ನು ಕೇಳಿದ.
ಆಗ ಗುರುಗಳು ಸಮಾಧಾನವಾಗಿಯೇ – ಮಹಾರಾಜ! ನಿನ್ನ ಮಗನಿಗೆ ನಾನು ಎಲ್ಲ ವಿಧದ ಶಿಕ್ಷಣ ನೀಡಿದೆನಾದರೂ ನೋವೊಂದನ್ನು ಅರ್ಥ ಮಾಡಿಸಿರಲಿಲ್ಲ. ಏಕೆಂದರೆ ಅವನು ಎಂದೂ ಇಲ್ಲಿ ಶಿಕ್ಷೆಗೆ ಗುರಿಯಾಗಿರಲಿಲ್ಲ. ಅತ್ಯಂತ ವಿನಯಶೀಲನೂ ಗುಣಸಂಪನ್ನನೂ ಆದ ಆತ ಯಾವಾಗಲೂ ತನ್ನ ಶಿಕ್ಷೆಗೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಇನ್ನು ಮುಂದೆ ಅವನು ರಾಜನಾಗುತ್ತಾನೆ. ಯಾರು ಇನ್ನೊಬ್ಬರನ್ನು ಶಿಕ್ಷಿಸುತ್ತಾರೋ ಅವರು ಶಿಕ್ಷೆಯ ನೋವನ್ನು ಸ್ವತಃ ಅನುಭವಿಸಿರಬೇಕು. ಆಗಲೇ ಬೇರೆಯವರನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಆದುದರಿಂದಲೇ ಮನಸ್ಸೊಪ್ಪದಿದ್ದರೂ ನಾನು ಅವನಿಗೆ ನೋವನ್ನು ಉಣಿಸಬೇಕಾಯಿತು. ಮುಂದಿನ ಜೀವನದ ಒಳಿತಿನ ದೃಷ್ಟಿಯಿಂದ ಇದು ಆಶೀರ್ವಾದವೇ ಸರಿ ಎಂದರು.
ಗುರುಗಳ ಮಾತುಗಳನ್ನು ಕೇಳಿದ ಮಹಾರಾಜನು ಸಂತೋಷಗೊಂಡವನಾಗಿ ಮಗನನ್ನು ಕರೆದುಕೊಂಡು ಅರಮನೆಗೆ ಹಿಂದಿರುಗಿದ.
ಆದರೆ ಆಧುನಿಕ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಶಿಕ್ಷೆಕೊಡುವುದೇ ಅಪರಾಧ ಎಂಬುದಾಗಿ ಸರ್ಕಾರಗಳು ಇಂದು ಫರ್ಮಾನು ಹೊರಡಿಸಿವೆ. ಹಲವು ಬಾರಿ ಶಿಕ್ಷೆ ಕೂಡ ಶಿಕ್ಷಣದ ಒಂದು ಭಾಗ ಎಂಬುದನ್ನು ನಾವು ಮರೆತಿದ್ದೇವೆ.
ಅನುಭವವಿಲ್ಲದ ವಿದ್ಯೆಗಿಂತ
ವಿದ್ಯೆಯಿಲ್ಲದ ಅನುಭವವೇ ಮೇಲು
ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಾತ ಹಳ್ಳಿಯ ರೈತನೊಬ್ಬನ ಮನೆಗೆ ಬಂದ. ರೈತ ಬೆಳೆದ ಗಜಲಿಂಬೆಯ ಗಾತ್ರವನ್ನು ಕಂಡು ಅದು ಸಣ್ಣದಾಗಿರಲು ಕಾರಣ ಏನು, ಅದರ ಗಾತ್ರ ದೊಡ್ಡದು ಮಾಡಲು ಅದಕ್ಕೆ ಏನೇನು ಮಾಡಬೇಕು, ಯಾವ್ಯಾವ ಪೋಷಕಾಂಶ ಹಾಕಬೇಕು – ಎಲ್ಲವನ್ನೂ ಸವಿವರವಾಗಿ ತಿಳಿಸಿದ. ಪದವೀಧರನ ಭಾಷಣವನ್ನೆಲ್ಲ ಕೇಳಿದ ಮೇಲೆ ಆ ರೈತ ಹೇಳಿದ: ನೀವು ಹೇಳುವುದೆಲ್ಲವೂ ಸರಿ. ಆದರೆ ನೀವು ಯಾವುದನ್ನು ಗಜಲಿಂಬೆ ಎಂದು ತಿಳಿದಿದ್ದೀರಿ ಅದು ಗಜಲಿಂಬೆ ಅಲ್ಲ; ಬರಿ ಲಿಂಬೆ.
ಹಳ್ಳಿಯಲ್ಲೊಬ್ಬ ವೈದ್ಯರಿದ್ದರು. ಅವರು ವೈದ್ಯಶಿಕ್ಷಣವನ್ನು ಎಲ್ಲಿ ಪಡೆದಿದ್ದರೋ ಯಾರಿಗೂ ಗೊತ್ತಿಲ್ಲ. ಅವರು ಶಿಕ್ಷಣ ಪಡೆದಿದ್ದರೋ ಅಥವಾ ಅಲ್ಲಿ-ಇಲ್ಲಿ ನೋಡಿ ಕಲಿತಿದ್ದರೋ ಅದೂ ಗೊತ್ತಿಲ್ಲ. ಆದರೆ ಆತ ಅನುಭವದಿಂದಲೇ ಆ ಊರಿನಲ್ಲಿ ಪ್ರಸಿದ್ಧ ವೈದ್ಯನಾಗಿದ್ದ. ಆತನ ಮಗನಾದರೊ ಇಂಗ್ಲೆಂಡಿಗೆ ಹೋಗಿ ಉನ್ನತ ವೈದ್ಯಕೀಯ ಪದವಿ ಗಳಿಸಿ ತಂದೆಯೊಂದಿಗೆ ವೃತ್ತಿಯಲ್ಲಿ ತೊಡಗಿದ.
ಒಂದು ದಿನ ಒಬ್ಬ ರೈತ ವೈದ್ಯರ ಮನೆಗೆ ಓಡಿ ಬಂದ. ಅವನ ಮಗುವಿಗೆ ಜ್ವರ ವಿಪರೀತವಾಗಿದೆ. ಮೊನ್ನೆಯವರೆಗೆ ಕಡಮೆಯಾದ ಜ್ವರ ಮತ್ತೆ ಹೆಚ್ಚಾಗಿದೆ. ವೈದ್ಯರು ರೋಗಿಯನ್ನು ನೋಡುವುದಕ್ಕೆ ಹೊರಟರು. ಮಗನನ್ನು ಜೊತೆಗೆ ಬಾ ಎಂದು ಕರೆದುಕೊಂಡು ನಡೆದರು. ರೈತನ ಮನೆಯಲ್ಲಿ ಮಗುವಿನ ಹಾಸಿಗೆಯ ಮೇಲೆ ಕುಳಿತು, ಅವರ ನಾಡಿ ಹಿಡಿದುಕೊಂಡು ಕಣ್ಣು ಮುಚ್ಚಿದರು. ಎರಡು ನಿಮಿಷದ ಮೇಲೆ ಕಣ್ಣು ತೆಗೆದು ಕೋಪದಿಂದ, ಏನಯ್ಯ, ಮಗುವಿಗೆ ಅಪಥ್ಯ ಮಾಡಿಸಿದ್ದೀಯಾ? ಎಂದರು. ರೈತ ಗಾಬರಿಯಿಂದ, ಇಲ್ಲ ಸ್ವಾಮೀ, ತಾವು ಹೇಳಿದಂತೆಯೇ ಔಷಧಿ ಕೊಟ್ಟಿದ್ದೇನೆ ಎಂದ. ಔಷಧಿ ಕೊಟ್ಟಿದ್ದೀಯಾ. ಆದರೆ ಬಾಳೆಹಣ್ಣು ತಿನ್ನಿಸಿದ್ದೀಯಾ, ಹೌದೋ ಅಲ್ಲವೋ; ನಿಜ ಹೇಳು. ನನಗೆ ನಾಡಿಯಲ್ಲಿ ಬಾಳೆಹಣ್ಣು ತಿಂದದ್ದು ಗೊತ್ತಾಗುತ್ತಿದೆ ಎಂದರು. ಆಗ ಆತ ಹೌದು ಸ್ವಾಮೀ, ಮಗ ಬಾಳೆಹಣ್ಣು ಬೇಕು ಎಂದು ಬಹಳ ಅತ್ತ. ನೋಡಲಾರದೇ ಎರಡು ತಿನ್ನಿಸಿದೆ ಎಂದ. ಇಂಗ್ಲೆಂಡಿನಲ್ಲಿ ಪದವಿ ಪಡೆದ ತರುಣ ವೈದ್ಯರ ಮಗನಿಗೆ ಆಶ್ಚರ್ಯ. ನಾಡಿಯಿಂದ ಬಾಳೆಹಣ್ಣು ಪತ್ತೆಹಚ್ಚುವುದನ್ನು ಇಂಗ್ಲೆಂಡಿನಲ್ಲೂ ಹೇಳಿಕೊಟ್ಟಿರಲಿಲ್ಲ. ಮನೆಗೆ ಬಂದ ಮೇಲೆ ತಂದೆಯನ್ನು ಕೇಳಿದ. ವೃದ್ಧ ತಂದೆ, ದಡ್ಡಾ, ಬಾಳೆಹಣ್ಣು ತಿಂದದ್ದು ನಾಡಿಯಲ್ಲಿ ಗೊತ್ತಾಗುತ್ತದೇನೊ? ಅದೆಲ್ಲಾ ಸಾಮಾನ್ಯ ಜ್ಞಾನ. ಈ ರೈತಾಪಿ ಜನ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡಿರುವುದಿಲ್ಲ. ಮಗುವಿಗೆ ತಿನ್ನಿಸಿದ್ದರ ಅವಶೇಷವನ್ನು ಅಲ್ಲೇ ಹಾಸಿಗೆಯ ಕೆಳಗೆ ಹಾಕಿರುತ್ತಾರೆ. ಅದನ್ನು ನೋಡಿ ಹಾಗೆ ಹೇಳಿದೆ ಎಂದರು. ಮಗನಿಗೆ ಜ್ಞಾನೋದಯವಾಯಿತು.
ಎರಡು ದಿನದ ಮೇಲೆ ಇದೇ ತರಹದ ಮತ್ತೊಂದು ತಕರಾರು ಬಂತು. ತಂದೆ ಊರಲ್ಲಿರಲಿಲ್ಲ, ಮಗನೇ ಹೋದ. ರೋಗಿಯ ನಾಡಿ ಹಿಡಿದು ಅತ್ತಿತ್ತ ನೋಡಿದ. ನಂತರ ರೇಗಿದ, ಏನ್ರಿ ಇದು, ಅಪಥ್ಯ ಮಾಡಿಸಿದ್ದೀರಿ. ರೋಗಿಗೆ ಚರ್ಮದ ತುಂಡು ತಿನ್ನಿಸಿದ್ದೀರಿ; ನಾಡಿಯಲ್ಲಿ ನನಗೆಲ್ಲ ಗೊತ್ತಾಗುತ್ತದೆ.!
ಮನೆಯವರಿಗೆ ಹುಚ್ಚುಹಿಡಿದಂತಾಯಿತು. ನಂತರ ಬಂದು ಹಿರಿಯ ವೈದರಿಗೆ ದೂರಿದರು. ಅವರಿಗೆ ವಿಷಯ ಗೊತ್ತಾಗಿ ಮಗನಿಗೆ ಬೈದರು. ದಡ್ಡಾ, ನಾನು ಬಾಳೆಹಣ್ಣು ಹೇಳಿದೆ ಎಂದು ನೀನಲ್ಲಿ ಚರ್ಮ ಹೇಳಿದೆಯಾ? ಅದು ಚಮ್ಮಾರನ ಮನೆ, ಚರ್ಮದ ತುಂಡು ಅಲ್ಲಿ ಇಲ್ಲಿ ಬಿದ್ದಿರುತ್ತವೆ. ಅದನ್ನು ತಿನ್ನುವುದಕ್ಕೆ ಆಗುತ್ತದೆಯೇ? ಇದು ಸಾಮಾನ್ಯಜ್ಞಾನ ಅಲ್ಲವೇ?
ಕಥೆ ಅತಿಶಯೋಕ್ತಿ ಇರಬಹುದು. ಆದರೆ ಬಹುಜನರಿಗೆ ಸಾಮಾನ್ಯಜ್ಞಾನ ಸಾಮಾನ್ಯವಾಗಿ ಇರುವುದಿಲ್ಲ. ಅದು ಅನುಭವದಿಂದ ಬರವಂಥದ್ದು.
ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಿಯಿಕುಂ ಜ್ಞಾನನವನೀತವದೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ – ಮಂಕುತಿಮ್ಮ ||
ಅನುಭವವೆಂಬ ಹಾಲನ್ನು ವಿಚಾರವೆಂಬ ಮಂತಿನಿಂದ ಕಡೆದಾಗ ಜ್ಞಾನವೆಂಬ ಬೆಣ್ಣೆ ಹುಟ್ಟುತ್ತದೆ. ಅದು ಸುಖವನ್ನು ಕೊಡತಕ್ಕದ್ದು. ಪುಸ್ತಕದಿಂದ ದೊರೆತ ಜ್ಞಾನ ಕೇವಲ ಗಿಳಿಪಾಠ. ನಿನ್ನನುಭವವೆ ನಿನಗೆ ಧರ್ಮದ ದೀಪ.
ಇಂದು ನಮ್ಮ ಸಮಾಜದಲ್ಲಿ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ರೈತರ ಸಮಸ್ಯೆಗಳಿಗೆ ರಾಜಕಾರಣಿಗಳೇನೋ ರಾಜಧಾನಿಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಪರಿಹಾರ ಸೂಚಿಸುತ್ತಾರೆ. ಆದರೆ ಇಂತಹ ಬಹುತೇಕ ಪರಿಹಾರಗಳು ನಿಷ್ಪ್ರಯೋಜಕ. ಯಾಕೆಂದರೆ ಹೆಚ್ಚಿನ ರಾಜಕಾರಣಿಗಳಿಗೆ ರೈತರ ಬವಣೆಯಾಗಲಿ, ಬಡತನದ ಬೇಗೆಯಾಗಲಿ ಗೊತ್ತೇ ಇರುವುದಿಲ್ಲ.
ಸಾಹಿತ್ಯದ ತಿರುಳು
ಯಾರು ಅನುಭವದ ಹಿನ್ನೆಲೆಯಲ್ಲಿ ಸಾಹಿತ್ಯವನ್ನು ರಚಿಸುತ್ತಾರೊ ಅವರದು ಜನರ ಹೃದಯವನ್ನು ತಟ್ಟುತ್ತದೆ. ಅದು ನಿತ್ಯನೂತನವಾಗಿರುತ್ತದೆ. ಅದು ಎಲ್ಲ ಓದುಗರಿಗೂ ಚಿರಂತನವಾದ ಸ್ಫೂರ್ತಿ ಕೊಡುತ್ತದೆ. ಬಡತನದಲ್ಲಿ ಬೆಂದ ಬೇಂದ್ರೆಯವರ ಕವನಕ್ಕೆ ಬೆಲೆ ಕಟ್ಟಲಾದೀತೇ? ಯಾವುದೇ ವಿಚಾರದ ಬಗ್ಗೆ ಅನುಭವವನ್ನು ಪಡೆದ ಬಳಿಕವೇ ಕಾದಂಬರಿಯನ್ನು ಬರೆಯವ ಅಭ್ಯಾಸ ಇಟ್ಟುಕೊಂಡ ಎಸ್.ಎಲ್. ಭೈರಪ್ಪನವರ ಕೃತಿಯನ್ನು ಬೇರೆ ಅನುಭವರಹಿತ ಕೃತಿಗೆ ಹೋಲಿಸಲಾದೀತೇ? ಡೋಸ್ಟೋವೆಸ್ಕಿ ಆಗಲಿ, ಟಾಲ್‌ಸ್ಟಾಯ್ ಆಗಲಿ, ಚಿತ್ರಹಿಂಸೆಯ ಬದುಕನ್ನು ಅನುಭವಿಸದೇ ಇರುತ್ತಿದ್ದಲ್ಲಿ ಅಂಥ ಅಮರ ಕಾದಂಬರಿಗಳನ್ನು ಬರೆಯಲು ಸಮರ್ಥರಾಗುತ್ತಿರಲಿಲ್ಲವೋ ಏನೋ! ಕುವೆಂಪು, ಶಿವರಾಮ ಕಾರಂತ, ಮಾಸ್ತಿ ಮೊದಲಾದವರ ಕೃತಿಗಳಲ್ಲಿ ಅನುಭವ ಮಡುಗಟ್ಟಿದ್ದನ್ನು ನಾವು ಕಾಣಬಹುದು. ಅನುಭವಜನ್ಯವಲ್ಲದ್ದು ಸಾಹಿತ್ಯವೇ ಅಲ್ಲ ಎಂಬುದಾಗಿ ಶಿವರಾಮ ಕಾರಂತರು ಹೇಳಿದ್ದಾರೆ. ಪ್ರಸಿದ್ಧ ಸಾಹಿತಿಗಳೆಲ್ಲರೂ ಅನುಭವ ಪಡೆದ ಬಳಿಕವೇ ಸಾಹಿತ್ಯವನ್ನು ರಚಿಸುತ್ತಿದ್ದರು.
ಜಾನ್ ಗಾಲ್ಸ್‌ವರ್ದಿ (೧೮೬೭-೧೯೩೩)
ಜಾನ್ ಗಾಲ್ಸ್‌ವರ್ದಿ (೧೮೬೭-೧೯೩೩) ಇಂಗ್ಲೆಂಡಿನ ಪ್ರಸಿದ್ಧ ಕಾದಂಬರಿಕಾರ, ನಾಟಕ ಕರ್ತೃ, ನೊಬೆಲ್ ಪುರಸ್ಕಾರ ಪಡೆದುದು ಇವರ ಸಾಹಿತ್ಯದ ಹಿರಿಮೆಗೆ ಸಾಕ್ಷಿ. ಇವರು ‘ಜಸ್ಟಿಸ್’ ಎಂಬ ನಾಟಕವನ್ನು ಬರೆಯಲು ನಿರ್ಧರಿಸಿದಾಗ ಸೆರೆಮನೆಯೊಳಗಿನ ಕೈದಿಗಳ ಯಾತನೆಯ ನೈಜ ಅನುಭವ ಅಗತ್ಯವೆನಿಸಿತು. ತಾನು ಸೆರೆಯಾಳುವಾದರೆ ಮಾತ್ರ ಇದು ಸಾಧ್ಯವೆಂದರಿತ ಅವರು ವಿನಾಕಾರಣ ಅಂಗಡಿಯೊಂದರ ಗಾಜಿನ ಕಿಟಕಿಗೆ ಕಲ್ಲುಹೊಡೆದರು.
ಪೊಲೀಸರು ಗಾಲ್ಸ್‌ವರ್ದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಯ್ದರು. ವಿಚಾರಣೆ ನಡೆದು ತೀರ್ಪು ಹೊರಬಿದ್ದಾಗ ಅವರಿಗೆ ಆರು ತಿಂಗಳ ಸಜೆ ವಿಧಿಸಲಾಯಿತು. ಇದನ್ನು ಸ್ವಾಗತಿಸಿದ ಜಾನ್ ಸಾಮಾನ್ಯ ಕೈದಿಯಾಗಿ ಜೈಲಿನಲ್ಲಿದ್ದು ಅಲ್ಲಿನ ನೇರ ಅನುಭವ ಗಳಿಸಿದರು. ಬಿಡುಗಡೆಯಾದ ಮೇಲೆ ಅವರು ಬರೆದ ನಾಟಕದಲ್ಲಿ ಕಾರಾಗೃಹದ ದೃಶ್ಯಗಳು ಅದ್ಭುತವಾಗಿ ಮೂಡಿ ಬಂದವು. ಪೊಲೀಸರು, ಕೈದಿಗಳು ಮತ್ತು ಸಾರ್ವಜನಿಕರು ಅಭಿನಂದನೆಯ ಸುರಿಮಳೆಗರೆದರು.
ಇಂದು ನಮ್ಮ ಸಮಾಜದಲ್ಲಿ ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ರೈತರ ಸಮಸ್ಯೆಗಳಿಗೆ ರಾಜಕಾರಣಿಗಳೇನೋ ರಾಜಧಾನಿಯಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ಪರಿಹಾರ ಸೂಚಿಸುತ್ತಾರೆ. ಆದರೆ ಇಂತಹ ಬಹುತೇಕ ಪರಿಹಾರಗಳು ನಿಷ್ಪ್ರಯೋಜಕ. ಯಾಕೆಂದರೆ ಹೆಚ್ಚಿನ ರಾಜಕಾರಣಿಗಳಿಗೆ ರೈತರ ಬವಣೆಯಾಗಲಿ, ಬಡತನದ ಬೇಗೆಯಾಗಲಿ ಗೊತ್ತೇ ಇರುವುದಿಲ್ಲ. ಈ ದೇಶದ ಬಡವರ ಸಮಸ್ಯೆ ನಿವಾರಣೆ ಆಗಬೇಕೆಂಬ ಪ್ರಾಮಾಣಿಕ ಮನಸ್ಸು ಅವರಲ್ಲಿಲ್ಲ. ರಾಜಕಾರಣಿಗಳಿಗೆ ಅವರ ಮತ ಮುಖ್ಯವೇ ವಿನಾ ಅವರ ಸಮಸ್ಯೆ ನಿವಾರಣೆ ಮುಖ್ಯವಲ್ಲ. ಆಡಳಿತ ನಡೆಸುವ ಅಧಿಕಾರಿಗಳೂ ಸ್ವಾರ್ಥ ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ನಿಜಕ್ಕೂ ಈ ದೇಶದ ದುರಂತವೇ ಸರಿ. ಈ ಬಗ್ಗೆ ಹಲವಾರು ವರ್ಷಗಳ ಹಿಂದೆ ಗಾಂಧಿಯವರು ಹೇಳಿದ ಮಾತು ನೆನಪಾಗುತ್ತದೆ:
ಆಡಳಿತ ಸೇವಾ ವ್ಯವಸ್ಥೆಗೆ ಸೇರಿದ ಜನರಿಗೆ ಭಾರತದ ಜೀವನದ ದರ್ಶನ ಆಗಬೇಕಾದರೆ ಅವರನ್ನು ಭಾರತದ ಗ್ರಾಮಾಂತರ ಪ್ರದೇಶದಲ್ಲಿ ಆರು ತಿಂಗಳ ಕಾಲ ಇಡಬೇಕು. ಅವರನ್ನು ಎಂತಹ ಹಳ್ಳಿಗೆ ಕಳಿಸಬೇಕೆಂದರೆ, ಆ ಹಳ್ಳಿಯಲ್ಲಿ ಜನ ಮತ್ತು ದನದ ಜತೆ ಹೊರಳಾಡಬೇಕು. ಅಧಿಕಾರಿ ಜನರು ಅವರು ಊಟ ಮಾಡುವ ಅಂಬಲಿ ಮುದ್ದೆ ರೊಟ್ಟಿ ತಿನ್ನಬೇಕು. ಅವರು ಮಲಗುವ ಕಂಬಳಿ ಕೌದಿಗಳಲ್ಲಿ ಮಲಗಬೇಕು. ಬೆಳಗ್ಗೆ ಎದ್ದು ಬಾರುಕೋಲನ್ನು ಹೆಗಲಿಗೆ ಹಾಕಿಕೊಂಡು ಎತ್ತುಗಳನ್ನು ಹೊಲಕ್ಕೆ ಹೊಡೆದುಕೊಂಡು ಹೋಗಿ ಅಲ್ಲಿ ಬಿಸಿಲಲ್ಲಿ ಭೂಮಿಯನ್ನು ಉಳುಮೆ ಮಾಡಬೇಕು. ಸಂಜೆಯ ಹೊತ್ತು ರೈತರು ಮನೆಗೆ ಹಿಂದಿರುಗುವಾಗ ಮನೆಗೆ ಬರಬೇಕು. ಅಂಥ ಹಳ್ಳಿಯಲ್ಲಿ ಆರು ತಿಂಗಳ ಕಾಲ ಇದ್ದರೆ, ಹಳ್ಳಿ ಎಂದರೆ ಏನು, ಜನ ಎಂದರೆ ಏನು, ಬಡತನ ಅಂದರೆ ಏನು ಎನ್ನುವುದು ಅವರಿಗೆ ತಿಳಿಯುತ್ತದೆ.
ಆದರ್ಶ ಕುಲುಮೆ
ಜೀವನದಲ್ಲಿ ನಾವು ಸೋತಾಗ, ಕಷ್ಟವನ್ನು ಅನುಭವಿಸಿದಾಗ ತತ್ತ್ವಶಾಸ್ತ್ರಗಳಲ್ಲಿ ಇದಕ್ಕೆ ಪರಿಹಾರವನ್ನು ಹುಡುಕುತ್ತೇವೆ. ಜೀವಂತಿಕೆಯ ಜೀವನದ ಅನುಭವದಿಂದ ನಮ್ಮ ಕಷ್ಟಗಳಿಗೆ, ಸಮಸ್ಯೆಗಳಿಗೆ ಸಮಾಧಾನಕರ ಉತ್ತರಗಳು ಸಿಗಬಹುದೇ ವಿನಾ ತತ್ತ್ವಶಾಸ್ತ್ರದ ಮೂಲಕ ಅಲ್ಲ. ಪುಸ್ತಕದ ಮೂಲಕ ಯಾವುದೊಂದು ಉತ್ತರವೂ ಸಿಗುವುದಿಲ್ಲ. ಮಗುವಿಗೆ ಬೆಂಕಿಯ ಹತ್ತಿರ ಹೋಗಬೇಡ, ಅದು ಮೈಯನ್ನು ಸುಡುತ್ತದೆ ಎಂಬುದಾಗಿ ಸಾವಿರ ಸಲ ಹೇಳಿದರೂ ಅದಕ್ಕೆ ಅದು ಗೊತ್ತಾಗುವುದಿಲ್ಲ. ಯಾಕೆಂದರೆ ಬೆಂಕಿ ಮುಟ್ಟಿದರೆ ದೇಹ ಸುಡುತ್ತದೆ ಎಂಬುದು ಒಂದು ಸತ್ಯ. ಆದರೆ ಸತ್ಯದ ಸಾಕ್ಷಾತ್ಕಾರಕ್ಕೆ ಪ್ರತ್ಯಕ್ಷ ಅನುಭವವೇ ಆಗಬೇಕು. ಮಗು ಆಕಸ್ಮಿಕವಾಗಿ ಯಾವತ್ತಾದರೂ ಬೆಂಕಿಯನ್ನು ಮುಟ್ಟಿ ಕೈಯನ್ನು ಸುಟ್ಟುಕೊಂಡರೆ, ತದನಂತರ ಆ ಮಗು ಬೆಂಕಿಯ ಹತ್ತಿರ ಹೋಗುವುದಿಲ್ಲ. ಯಾಕೆಂದರೆ ಬೆಂಕಿ ಮುಟ್ಟಿದರೆ ಕೈ ಸುಡುತ್ತದೆ ಎನ್ನುವ ಉಪದೇಶಕ್ಕಿಂತ ಅನುಭವ ಹೆಚ್ಚಿನ ಪಾಠ ಕಲಿಸುತ್ತದೆ. ಆದ್ದರಿಂದ ಅನುಭವದ ಅಗ್ನಿಪರೀಕ್ಷೆಗೆ ಒಳಗಾಗದ ಯಾವ ಸಿದ್ಧಾಂತವೂ ಸಿದ್ಧಾಂತವಲ್ಲ, ಆದರ್ಶ ಆದರ್ಶವಲ್ಲ.
ಗೌತಮ ಬುದ್ಧ ಒಮ್ಮೆ ಒಂದು ಹಳ್ಳಿಯಲ್ಲಿ ತಂಗಿದ್ದ. ಊರ ಮಂದಿ ಆ ಊರಿನ ಒಬ್ಬ ಕುರುಡನನ್ನು ಅವನಲ್ಲಿಗೆ ಕರೆತಂದರು. ಅವನು ಹುಟ್ಟು ಕುರುಡ. ಎಂದೂ ಬೆಳಕನ್ನು ಕಂಡವನೇ ಅಲ್ಲ. ಆದುದರಿಂದ ಬೆಳಕೆಂದರೇನು ಎಂಬುದನ್ನೇ ತಿಳಿದಿರಲಿಲ್ಲ. ಬೆಳಕು ಎಂಬುದು ಇಲ್ಲವೇ ಇಲ್ಲ. ಇದೆಲ್ಲ ಊರ ಮಂದಿ ತನ್ನನ್ನು ಗೊಂದಲಕ್ಕೀಡು ಮಾಡಲೆಂದೇ ಹೇಳುವ ಕಟ್ಟುಕತೆ ಎಂದು ಸಾಧಿಸುತ್ತಿದ್ದ. ನಿಮ್ಮ ಹೇಳಿಕೆಯಂತೆ ಬೆಳಕೆಂಬುದೊಂದು ಇದ್ದರೆ ಅದರ ಪರಿಮಳವನ್ನು ನಾನು ಮೂಸಲಾರೆನೇಕೆ? ನನ್ನ ಸ್ಪರ್ಶಕ್ಕೆ ಸಿಕ್ಕುವುದಿಲ್ಲವೇಕದು? ಅದರ ಮರ್ಮರ ಕೇಳಿಸುವುದಿಲ್ಲವೇಕೆ? ಇನ್ನು ನೋಡುವುದೆಂದರೇನು; ನಾನೇಕೆ ನೋಡಲಾರೆ? ನೀವೆಲ್ಲ ನೋಡ್ತೀನಿ, ನೋಡ್ತೀನಿ ಅನ್ನುವುದು ಒಂದು ಭ್ರಮೆಯಾಗಿರಬಾರದೇಕೆ? ಕಡೆಯದಾಗಿ ನನ್ನ ಅಭಿಪ್ರಾಯದಂತೆ ನಾನು ನೋಡಲಾಗದ್ದನ್ನು ನೀವ್ಯಾರೂ ನೋಡಲಾರಿರಿ. ಯಾಕೆಂದರೆ ನೋಡುವಿಕೆ ಅನ್ನುವುದೇ ಇಲ್ಲ. ಹಾಗೆ ಬೆಳಕು ಎಂಬುದೂ ಇಲ್ಲ.
ಎಲ್ಲವನ್ನೂ ಕೇಳಿದ ಬುದ್ಧದೇವನೆಂದ: ಎಂದೂ ನೋಡುವಿಕೆ ಎಂಬುದರ ಅನುಭವವಿಲ್ಲದವನಿಗೆ ನೋಟವನ್ನು ವಿವರಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಅದು ಅಸಾಧ್ಯ ಕೂಡ. ಇವನಿಗೆ ತಜ್ಞವೈದ್ಯರ ಅಗತ್ಯವಿದೆ. ವಾದ, ಪ್ರತಿವಾದಗಳದ್ದಲ್ಲ.
ಮುಂದೆ ಒಂದು ದಿನ ಅವನಿಗೆ ದೃಷ್ಟಿ ಬಂತು. ಅವನು ಕಣ್ಣು ತೆರೆದು ಪ್ರಪಂಚ ನೋಡಿದ. ಬೆಳಕು ಕಂಡ. ಬುದ್ಧನನ್ನೂ ಕಂಡ. ಬುದ್ಧನೆಂದ ಹಾ! ಬೆಳಕನ್ನು ಸ್ಪರ್ಶಿಸಬಹುದೇ? ಆಘ್ರಾಣಿಸಬಹುದೇ? ರುಚಿ ನೋಡಬಹುದೇ?
ಕಣ್ಣು ಬಂದ ಕುರುಡ ದೀನನಾಗಿ ಹೀಗೆಂದ: ಯಾವುದು ಸ್ಪರ್ಶ, ರೂಪ, ರಸ, ಗಂಧಗಳಿಗೆ ಸಿಗದೆ ಭಿನ್ನವಾಗಿ ಕೇವಲ ಅನುಭವ ವೇದ್ಯವಾಗಿದೆಯೋ ಅದರಂತೆ ಇರುವುದನ್ನು ಕಂಡೆ, ಕಣ್ಣಿಲ್ಲದಿದ್ದಾಗ ಕಾಣದ್ದನ್ನು ಕಂಡೆ.
ಜ್ಞಾನಮೂಲ
ಲೌಕಿಕ ಜೀವನವನ್ನು ಸುಗಮವಾಗಿ ಸಾಗಿಸಬೇಕಾದರೆ ಮನುಷ್ಯನಿಗೆ ಅನುಭವ ಹೇಗೆ ಮುಖ್ಯವೋ ಹಾಗೆಯೇ ಅಧ್ಯಾತ್ಮದಲ್ಲಿ ತತ್ತ್ವಶಾಸ್ತ್ರಗಳಿಗಿಂತ ಅನುಭವ ಮುಖ್ಯ.
ಯಾವ ಗುರುವೂ, ಶಾಸ್ತ್ರವೂ ಎಂದೂ ದೇವರನ್ನು ತೋರಿಸಲಾರವು. ತನ್ನದೇ ಪರಿಶುದ್ಧಗೊಂಡ, ಪರಿಪೂರ್ಣಗೊಂಡ ಒಳದೃಷ್ಟಿಯಿಂದ ಪ್ರತಿಯೊಬ್ಬನೂ ಭಗವಂತನನ್ನು ತನ್ನ ಆಂತರ್ಯದಲ್ಲಿ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಜ್ಞಾನಕ್ಕೆ ಇರುವ ಮೂಲ ಒಂದೇ ಒಂದು: ನಮ್ಮ ಪ್ರತ್ಯಕ್ಷ ಅನುಭವ. ಈ ಅನುಭವವೇ ಎಲ್ಲ ಪ್ರಮಾಣಗಳಿಗೂ ಆಧಾರ – ಎಲ್ಲ ನದಿಗಳ ಮೂಲ ಸಮುದ್ರ ಹೇಗೋ ಹಾಗೆ! ಎಂಬುದಾಗಿ ಯೋಗವಾಸಿಷ್ಠದಲ್ಲಿ ಹೇಳಿದೆ.
ಎಷ್ಟೊ ವೇಳೆ ಆಧ್ಯಾತ್ಮಿಕ ಅನುಭವವನ್ನು ವಿವರಿಸುವುದು ಕಷ್ಟ. ಯಾಕೆಂದರೆ ಅಧ್ಯಾತ್ಮದಲ್ಲಿ ಪ್ರತಿಯೊಬ್ಬರ ಅನುಭವವೂ ಒಂದೇ ಆಗಿರಬೇಕಾಗಿಲ್ಲ. ಅದು ಚಾರಣಿಗರು ಬೇರೆ ಬೇರೆ ಕಡೆಯಿಂದ ಬೆಟ್ಟವನ್ನು ಹತ್ತಿದಂತೆ. ಒಬ್ಬರ ಅನುಭವಕ್ಕೂ, ಇನ್ನೊಬ್ಬರ ಅನುಭವಕ್ಕೂ ಸಾಮ್ಯತೆಯೇ ಇರುವುದಿಲ್ಲ. ಆದ್ದರಿಂದ ಆಧ್ಯಾತ್ಮಿಕ ಅನುಭವವನ್ನು, ಸತ್ಯದ ಸಾಕ್ಷಾತ್ಕಾರವನ್ನು ಮಾತಿನಿಂದ ಇನ್ನೊಬ್ಬರಿಗೆ ತಿಳಿಸುವುದು ಅಸಾಧ್ಯ.
ಒಂದು ಗುರುಕುಲದಲ್ಲಿ ಶಿಷ್ಯ ಗುರುವನ್ನು ಕೇಳಿದ: ಸತ್ಯವನ್ನು ಮಾತಿನ ಮೂಲಕ ಹೇಳಲು ಸಾಧ್ಯವೇ?
ಇಲ್ಲ ಎಂದರು ಗುರುಗಳು.
ಹಾಗಿದ್ದರೆ ಮೌನವಾಗಿದ್ದುಕೊಂಡು ಸತ್ಯವನ್ನು ಹೇಳಲು ಸಾಧ್ಯವೇ?
ಅದೂ ಸಾಧ್ಯವಿಲ್ಲ ಎಂದರು ಗುರುಗಳು.
ಹಾಗಾದರೆ ಸತ್ಯವನ್ನು ಹೇಳುವುದು ಹೇಗೆ? ಶಿಷ್ಯ ಪ್ರಶ್ನಿಸಿದ.
ಅಲ್ಲಿ ನೋಡು, ಹಕ್ಕಿಗಳು ಸುಮ್ಮನೆ ಮರದಲ್ಲಿ ಎಷ್ಟೊಂದು ಇಂಪಾಗಿ ಹಾಡುತ್ತಿವೆಯಲ್ಲ. ಹಾಗೆ ಸುಮ್ಮನೆ ಅನುಭವಿಸು ಮಾರ್ಮಿಕವಾಗಿ ಗುರು ಉತ್ತರಿಸಿದರು. ಸತ್ಯವನ್ನು ಕಂಡ ನಂತರ ಹೇಳುವುದು, ಕೇಳುವುದು ಯಾವುದೂ ಇರದು.
ಹೇಗೆ ಸತ್ಯವನ್ನು ವಿವರಿಸಲು ಸಾಧ್ಯವಿಲ್ಲವೋ ಅದೇ ರೀತಿ ಅಧ್ಯಾತ್ಮಲೋಕದಲ್ಲಿ ಆನಂದದ ಅನುಭವವನ್ನೂ ಹೇಳಲು ಆಗುವುದಿಲ್ಲ. ನಮ್ಮ ಜೀವಮಾನದಲ್ಲೂ ಕೆಲವು ಅನುಭವಗಳನ್ನು ಹುಡುಕಿ ನೋಡಿದರೆ ನಮಗೂ ಸಹ ಹೇಳಲಾಗುವುದಿಲ್ಲ. ಹುಣ್ಣಿಮೆಯ ರಾತ್ರಿಯ ಚಂದ್ರನನ್ನು ನೋಡಿ, ಅತ್ಯಂತ ಸುಂದರವಾಗಿದೆ ಎಂದು ನಾವು ಹೇಳಿದರೆ, ಇನ್ನೊಬ್ಬರು ‘ಎಲ್ಲಿದೆ ಸೌಂದರ್ಯ, ಹೇಳಿ?’ ಎಂದಾಗ ನಾವು ಸೌಂದರ್ಯವನ್ನು ಅವರಿಗೆ ವಿವರಿಸುವುದಾದರೂ ಹೇಗೆ? ಸೌಂದರ್ಯವನ್ನು ಮಾತಿನಿಂದ ಸಾಬೀತುಪಡಿಸುವುದಾದರೂ ಹೇಗೆ? ಸೌಂದರ್ಯವನ್ನು ಸಾಬೀತು ಪಡಿಸಲು ಯಾವ ಉಪಾಯವೂ ಇಲ್ಲ.
ಭಕ್ತನಿಗೆ ಅನುಭವ ಏನೋ ಆಗುತ್ತದೆ. ಆದರೆ ಅದರ ಬಗ್ಗೆ ಮಾತನಾಡಲು ಆಗುವುದಿಲ್ಲ, ಹೇಳಲಾಗುವುದಿಲ್ಲ, ತಾರ್ಕಿಕರಿಗೆ ಇದೊಂದು ಅರ್ಥವಾಗದ ಸಂಗತಿ, ಪಶ್ಚಿಮದ ವಿಚಾರವಂತರಾದ ಆರ್ಥರ್ ಕೋಏಸ್ಲರ್ ಹೇಳುತ್ತಿದ್ದರು: ಅನುಭವ ಆಗಿದೆ ಎಂದರೆ ಅದನ್ನೇಕೆ ಹೇಳಲಾಗುವುದಿಲ್ಲ? ನಿಮಗೆ ತಿಳಿದಿದೆ ಎಂದರೆ ನೀವದನ್ನು ತಿಳಿಯಪಡಿಸಿ; ಅಂಥ ಅಡಚಣೆಯಾದರೂ ಏನಿದೆ? ಪೂರ್ವದ ಸಾಧು-ಸಂತರಿಗೆ, ಋಷಿ-ಮುನಿಗಳಿಗೆ ಮಹತ್ತರವಾದ ಏನೋ ಅನುಭವ ಆಗಿದೆ ಎಂಬುದಾಗಿ ಎಲ್ಲರೂ ನಂಬುತ್ತಾರೆ. ಆದರೆ ಅನುಭಾವಿಗಳು ತಮ್ಮ ಅನುಭವವನ್ನು ಯಾಕೆ ಹೇಳುವುದಿಲ್ಲ? ನೀವು ಕಾಲಿಗೆ ಮುಳ್ಳು ಚುಚ್ಚಿದಾಗ ನೋವಾಗುತ್ತದೆ ಎಂದು ಹೇಳುತ್ತೀರಿ. ಸಿಹಿ ತಿಂದಾಗ ಸಂತೋಷ ಆಗುತ್ತದೆ ಎನ್ನುತ್ತೀರಿ. ಹೀಗೆ ಲೌಕಿಕ ಅನುಭವವನ್ನು ಹೇಳುತ್ತೀರಿ. ಆದರೆ ಪರಮಾತ್ಮನ ಸಂಬಂಧ ನಿಮ್ಮ ಅನುಭವವನ್ನು ಹೇಳುವಾಗ ಮೂಗರೇಕೆ ಆಗುತ್ತೀರಿ? ಇದು ಕೇವಲ ಆರ್ಥರ್ ಕೋಏಸ್ಲರ್ ಒಬ್ಬರ ಪ್ರಶ್ನೆಯಲ್ಲ. ವೈಚಾರಿಕರನೇಕರ ಪ್ರಶ್ನೆಯೂ ಇದೇ.
ಇಂತಹ ವಿಚಾರವಂತರ ಪ್ರಶ್ನೆಗೆ ನಾರದರು ಬಹಳ ಹಿಂದೆಯೇ ಉತ್ತರಿಸಿದ್ದಾರೆ. ಅವರು ಆಧ್ಯಾತ್ಮಿಕ ಅನುಭವವನ್ನು ಮೂಕಾಸ್ವಾದನವತ್ ಎಂಬುದಾಗಿ ಹೇಳಿದ್ದಾರೆ. ಮೂಗನಿಗೆ ಮಾತನಾಡಲು ಆಗುವುದಿಲ್ಲ ಎಂದ ಮಾತ್ರಕ್ಕೆ ಸಿಹಿ ತಿಂದಾಗ ಆತನಿಗೆ ಸಿಹಿಯ ಅನುಭವ ಆಗಲಿಲ್ಲ ಎಂದು ಹೇಳಲಾಗುವುದಿಲ್ಲ.
ಅನುಭವ ಅನಿವಾರ್ಯ
ಅಧ್ಯಾತ್ಮಕ್ಷೇತ್ರದಲ್ಲಿ ಅನುಭವ ಪಡೆದ ಅನುಭಾವಿಗಳು ಮಾತನಾಡುವುದು ಕಡಮೆ. ರಮಣಮಹರ್ಷಿಗಳು ಅನುಭಾವಿಗಳಾದರೂ ಮಾತನಾಡಿದ್ದು ಬಹಳ ಕಡಮೆ. ವಿದ್ಯಾವಂತನಾದ ನರೇಂದ್ರ ಶ್ರೀರಾಮಕೃಷ್ಣ ಪರಮಹಂಸರ ಹತ್ತಿರ ಹೋಗಿ ದೇವರ ಅಸ್ತಿತ್ವದ ಬಗ್ಗೆ ಪ್ರಶ್ನಿಸಿದಾಗ ಶ್ರೀರಾಮಕೃಷ್ಣ ಪರಮಹಂಸರು ವಿವರಿಸಲು ಹೋಗಲಿಲ್ಲ. ಅವರು ನರೇಂದ್ರನ ತಲೆಯ ಮೇಲೆ ಕೈಯಿಟ್ಟು ತಮ್ಮ ಸಾಧನೆಯಿಂದ ಗಳಿಸಿದ ಅನುಭವವನ್ನು ಧಾರೆಯೆರೆದರು. ಹೀಗೆ ಸತ್ಯದ ಸಾಕ್ಷಾತ್ಕಾರ ಪಡೆದ ನರೇಂದ್ರ ಮುಂದೆ ಸ್ವಾಮಿ ವಿವೇಕಾನಂದರಾಗಿ ಜಗತ್ತಿನಲ್ಲೆ ಪ್ರಸಿದ್ಧರಾದರು. ಅನುಭವದ ಬಗ್ಗೆ ತಿಳಿದುಕೊಳ್ಳುವುದು ಬೇರೆ, ಅನುಭಾವಿಯಾಗುವುದು ಬೇರೆ; ಆನಂದದ ಬಗ್ಗೆ ತಿಳಿದುಕೊಳ್ಳುವುದು ಬೇರೆ, ಆನಂದಿತನಾಗುವುದು ಬೇರೆ. ಲೌಕಿಕ ಅನುಭವವನ್ನು ಹಂಚಿಕೊಳ್ಳಬೇಕು; ಆಧ್ಯಾತ್ಮಿಕ ಅನುಭವವನ್ನು ಕೇವಲ ಆನಂದಿಸಿ ಅದರ ಬಗ್ಗೆ ಮೌನವಾಗಿರಬೇಕು. ಲೌಕಿಕ ಹಾಗೂ ಪಾರಲೌಕಿಕ ಜೀವನದಲ್ಲಿ ಉನ್ನತಿ ಗಳಿಸಲು ಅನುಭವವಂತೂ ಬೇಕೇಬೇಕು.
ಹಿಂದೆ ಕೂಡುಕುಟುಂಬದಲ್ಲಿ ಹಿರಿಯರ, ಅಜ್ಜ-ಅಜ್ಜಿಯರ ಜೀವನಾನುಭವ ಎಳೆಯ ಮಕ್ಕಳು, ಮೊಮ್ಮಕ್ಕಳಿಗೆ ದೊರೆಯುತ್ತಿತ್ತು. ಇಂದಿನ ವಿಭಕ್ತಕುಟುಂಬದಲ್ಲಿ ಇದರ ಅಭಾವ ಎದ್ದು ಕಂಡುಬರುತ್ತಿದೆ. ಹಿರಿಯರ ಅನುಭವ ನಮ್ಮ ಪಾಲಿಗೆ ದಕ್ಕದೆ ಇದ್ದರೆ ನಮ್ಮ ಬಾಳು ನಿರರ್ಥಕ. ಅದು ನರಕ ಆಗುವ ಸಾಧ್ಯತೆ ಇದೆ. ಯಾಕೆಂದರೆ ಹಿರಿಯರ ಅನುಭವ ನಮ್ಮನ್ನು ಬೀಳದಂತೆ, ಜಾರದಂತೆ ಎಚ್ಚರಿಸುತ್ತದೆ. ಜೀವನ ಎಂಬುದು ಸಮತಟ್ಟಾದ ಬಯಲಲ್ಲ. ಅದು ಏಳು-ಬೀಳಿನ ಪರ್ವತ-ಪ್ರಪಾತಗಳಿಂದ, ಕಲ್ಲು-ಮುಳ್ಳುಗಳಿಂದ ಕೂಡಿದ ಕಷ್ಟಕರ ದಾರಿಯ ಪಯಣ. ಇಂತಹ ಬಾಳಪಯಣದಲ್ಲಿ ನಾವು ಸದಾ ಜಾಗರೂಕತೆಯಿಂದ ಹೆಜ್ಜೆಯಿಡಬೇಕಾಗುತ್ತದೆ. ಇದಕ್ಕೆ ನಮ್ಮ ಹಿರಿಯರ ಅನುಭವದ ಮಾರ್ಗದರ್ಶನ ಬೇಕಾಗುತ್ತದೆ. ಅನುಭವ ತೆರೆದಿಡುವ ಅರ್ಥದ ಮುಂದೆ ಶಬ್ದಕೋಶದ ಅರ್ಥ ಅದೆಷ್ಟು ನೀರಸ!
Comments are closed.