ಹೈದರಾಬಾದ್ ವಿಶ್ವವಿದ್ಯಾಲಯದ ರೋಹಿತ ವೇಮುಲ ಎಂಬ ವಿದ್ಯಾರ್ಥಿಯು ತನಗೆ ಆದ ‘ಅನ್ಯಾಯ’ದಿಂದ ಖಿನ್ನನಾಗಿ ಆತ್ಮಹತ್ಯೆ ಮಾಡಿಕೊಂಡನೆಂಬುದು ತಥೋಕ್ತ ಬುದ್ಧಿಜೀವಿಗಳಿಗೆ ಇತ್ತೀಚೆಗೆ ಗ್ರಾಸವಾಗಿರುವ ಒಂದು ಸರಕು. ಆ ವಿದ್ಯಾರ್ಥಿ ಯಾವ ಸಮುದಾಯದವನೆಂಬುದು ಇನ್ನೂ ಸ್ಪಷ್ಟವಿಲ್ಲ; ಆದರೆ ಈ ಪ್ರಸಂಗವನ್ನು ಮುಂದಿರಿಸಿಕೊಂಡು ಇಡೀ ವ್ಯವಸ್ಥೆಯೂ ಸರ್ಕಾರವೂ ದಲಿತವಿರೋಧಿಯಾಗಿದೆ ಎಂದು ಹುಯಿಲೆಬ್ಬಿಸಲಾಗಿದೆ. ಒಂದು ಕೂಟಮಂಡನೆಯ ಕಳೇಬರದ ಮೇಲೆರಗಿ ಅದನ್ನು ಅವೆಷ್ಟು ರಣಹದ್ದುಗಳು ಭೋಜನವನ್ನಾಗಿ ಮಾಡಿಕೊಂಡಿವೆ ಎಂಬುದು ಸೋಜಿಗ ತರುತ್ತದೆ, ಅದು ಹಾಗಿರಲಿ. ಇಲ್ಲಿ ಎದುರಾಗುವ ಪ್ರಶ್ನೆ – ಈ ಅಸಹಿಷ್ಣುತಾಪ್ರತಿಪಾದಕ ಬಣಗಳ ದಲಿತಪ್ರೇಮ ಎಷ್ಟು ಸಾಚಾ ಎಂಬುದು. ದೆಹಲಿ ಪಟ್ಟಣದಲ್ಲಿ ಸೌಕರ್ಯಾಭಾವದಿಂದ ಪ್ರತಿದಿನ ಕನಿಷ್ಠ ಹತ್ತು ಮಂದಿ ಸಾಯುತ್ತಾರೆ. ಅದರ ಬಗೆಗೆ ಲಕ್ಷ್ಯ ಕೊಡಲು ಪುರಸತ್ತಿರದ ಕೇಜ್ರಿವಾಲ್ ಹೈದರಾಬಾದಿಗೆ ಧಾವಿಸುತ್ತಾರೆ. ಎಲ್ಲರೂ ಮೊಸಳೆಕಣ್ಣೀರು ಸುರಿಸುವವರೇ. ಆದರೆ ಇದೇ ಸಂದರ್ಭದಲ್ಲಿ ದಲಿತರಿಗೆ ನ್ಯಾಯವನ್ನು ಲಭ್ಯವಾಗಿಸುವ ದಿಶೆಯಲ್ಲಿ ಈ ರಣಹದ್ದುಗಳು ಎಷ್ಟು ಆಸಕ್ತಿ ತಳೆದಿವೆ ಎಂದು ಕೇಳಬೇಡವೆ?
ದೇಶದಲ್ಲಿ ಎರಡು ಮುಸ್ಲಿಂ ವಿಶ್ವವಿದ್ಯಾಲಯಗಳು ಇವೆಯಷ್ಟೆ – ಅಲಿಗಢ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ. ಇವು ಪ್ರಚಾರದಲ್ಲಿ ತಮ್ಮನ್ನು ಅಲ್ಪಸಂಖ್ಯಕ ವಿದ್ಯಾಲಯಗಳೆಂದು ಕರೆದುಕೊಂಡರೂ ಇವೆರಡೂ ವಾಸ್ತವವಾಗಿ ಸರ್ಕಾರಪೋಷಿತ ಕೇಂದ್ರೀಯ ವಿದ್ಯಾಲಯಗಳಷ್ಟೆ. ಈ ಎರಡರಲ್ಲಿಯೂ ಶೇ. ೫೦ ರಷ್ಟು ಸ್ಥಾನಗಳು ಮುಸ್ಲಿಮರಿಗೆ ಮೀಸಲು. ಉಳಿದ ಶೇ. ೫೦ರಷ್ಟು ಸ್ಥಾನಗಳು ‘ಸರ್ವೇಸಮಸ್ತರಿಗಾಗಿ’. ಈ ಎರಡನೇ ವರ್ಗದಡಿಯಲ್ಲಿ ದಲಿತರಿಗೆ ಅವಕಾಶ ದೊರೆಯುವ ಸಂಭವ ಶೂನ್ಯ. ಈ ಅಸಮತೋಲದ ಹಿನ್ನೆಲೆಯಲ್ಲಿ ಎರಡೂ ವಿದ್ಯಾಲಯಗಳಿಗೆ ‘ಅಲ್ಪಸಂಖ್ಯಕ’ ಅಭಿಧಾನವು ಸಂವಿಧಾನವಿರೋಧಿ ಎಂಬುದು ಸ್ಪಷ್ಟವೇ ಆಗಿದೆ. ತಾನು ದಲಿತರ ಪರವೆಂದು ಅರಚುವ ಸೋನಿಯಾ-ನಿಯಂತ್ರಿತ ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಈ ವಿಷಯದ ಬಗೆಗೆ ಜಾಣ ಮೌನ ತಳೆದಿದೆ. ೨೦೧೧ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಈ ದಲಿತಹಿತರಕ್ಷಕ ಪ್ರಸ್ತಾವ ಬಂದಾಗಲೂ ಕಾಂಗ್ರೆಸ್‌ನದು ಘನಮೌನವಾಗಿತ್ತು. ಅಲಿಗಢ ವಿದ್ಯಾಲಯವು ‘ಅಲ್ಪಸಂಖ್ಯಕ’ ಪಟ್ಟಕ್ಕೆ ಅರ್ಹವಲ್ಲವೆಂದು ಸರ್ವೋಚ್ಚ ನ್ಯಾಯಾಲಯ ೧೯೬೭ರಷ್ಟು ಹಿಂದೆಯೇ ಹೇಳಿದ್ದುದುಂಟು. ಆದರೆ ಮುಸ್ಲಿಂ ಮತಬ್ಯಾಂಕಿನ ಅಂದಾಜನ್ನು ಇರಿಸಿಕೊಂಡಿದ್ದ ಇಂದಿರಾಗಾಂಧಿ ಸರ್ಕಾರ ನಿಯಮಗಳಲ್ಲಿಯೆ ತಿದ್ದುಪಾಟು ಮಾಡಿತು. ಆ ಜಾಡಿನ ‘ಸವರಣೆ’ಗಳು ಕಾನೂನುಬಾಹಿರವೆಂದೂ ಅವನ್ನು ರದ್ದು ಪಡಿಸಬೇಕೆಂದೂ ಅಲಹಾಬಾದ್ ಉಚ್ಚ ನ್ಯಾಯಾಲಯ ೨೦೦೬ರಲ್ಲಿ ನಿರ್ದೇಶ ನೀಡಿತ್ತು. ಈ ಎಲ್ಲ ಇತಿಹಾಸದ ಹಿನ್ನೆಲೆಯಲ್ಲಿ ಈಗಿನ ಕೇಂದ್ರಸರ್ಕಾರದ ನಿಲವು ಏನೆಂದು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ. ಕಾನೂನು ರೀತ್ಯಾ ಮೇಲಿನೆರಡು ವಿದ್ಯಾಲಯಗಳಿಗೆ ‘ಅಲ್ಪಸಂಖ್ಯಕ’ ಸ್ಥಾನ ನೀಡುವುದು ಅಸಾಧ್ಯವೆಂದು ಸರ್ಕಾರ ತಿಳಿಸಿದೆ. ಈ ಹಿಂದೆ ಅಲಿಗಢ ವಿದ್ಯಾಲಯಕ್ಕೆ ‘ಅಲ್ಪಸಂಖ್ಯಕ’ ಸ್ಥಾನವನ್ನು ನೀಡಬಾರದು ಎಂದೇ ಕಾಂಗ್ರೆಸ್ ಪಕ್ಷದ ಮಂತ್ರಿಗಳೇ ಆಗಿದ್ದ ನೂರುಲ್ ಹಸನ್ ಮತ್ತು ಎಂ.ಸಿ. ಛಗ್ಲಾ ಅವರು ಆಗ್ರಹಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.
ದಲಿತರ ಹಿತಕ್ಕೆ ಪೂರಕವಾದ ಕಾನೂನುಕ್ರಮಗಳನ್ನು ವಿಪಕ್ಷಗಳೂ ನಕಲಿ ಬುದ್ಧಿಜೀವಿಗಳೂ ವಿರೋಧಿಸುತ್ತಿರುವುದರ ತರ್ಕವಾದರೂ ಏನು?
ಇದೇ ಏಪ್ರಿಲ್ ೪ರಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ಈ ವಿಷಯ ಚರ್ಚೆಗೆ ಬರುವುದಿದೆ. ಕಾಂಗ್ರೆಸ್ ಮತ್ತು ವಾಮವಾದಿ ಪಕ್ಷಗಳೂ ಸೆಕ್ಯುಲರಿಸ್ಟ್ ಧೀಮಂತರೂ ತಥೋಕ್ತ ‘ದಲಿತಪ್ರೇಮಿ’ ಮುಸ್ಲಿಮರೂ ಏನು ಪ್ರತಿಕ್ರಿಯೆ ತೋರಿಯಾರೆಂಬುದು ಕುತೂಹಲಕರ. ನ್ಯಾಯಾನುಗುಣ ನಿಲವು ತಳೆದರೆ ಮುಸ್ಲಿಂ ಮತಬ್ಯಾಂಕ್ ಕೈಬಿಟ್ಟುಹೋದೀತು ಎಂಬ ಗಾಬರಿ; ಪ್ರಸ್ತಾವವನ್ನು ವಿರೋಧಿಸಹೊರಟರೆ ತಮ್ಮ ‘ದಲಿತಪ್ರೇಮ’ ಶಂಕಾಸ್ಪದವೆನಿಸುತ್ತದೆ. ‘ಅಲ್ಪಸಂಖ್ಯಕ’ ವಿದ್ಯಾಲಯಗಳಲ್ಲಿ ದಲಿತ ಅಭ್ಯರ್ಥಿಗಳಿಗೆ ಅವಕಾಶವನ್ನು ಕಲ್ಪಿಸುವುದರ ಬಗೆಗೆ ಸೆಕ್ಯುಲರಿಸ್ಟ್ ಬಣದವರು ಔದಾಸೀನ್ಯ ಮೆರೆದರೆ ಅವರನ್ನು ಜನ ಕ್ಷಮಿಸಿಯಾರೆ?
ವಾಸ್ತವವೆಂದರೆ ಹಿಂದಿನಿಂದ ಈ ಬಣಗಳೆಲ್ಲ ತೋರಿಕೆಗಾಗಿಯಷ್ಟೆ ‘ದಲಿತಪರ’ವಾಗಿದ್ದವೆಂಬುದು ರೋಹಿತ ವೇಮುಲ ಘಟನೆಯೂ ಸೇರಿದಂತೆ ವರ್ಷಗಳುದ್ದಕ್ಕೂ ಸಾಬೀತಾಗಿದೆ.