ಇಂದಿನ ಈ ಕುಟಿಲ ಮತ್ತು ಜಿಗಣೆಯಂತೆ ರಕ್ತಹೀರಿ ಸಾಯಿಸುವ ಯುದ್ಧವನ್ನು ಗೆಲ್ಲುವುದು ಪ್ರತಿಯೊಬ್ಬ ಭಾರತೀಯನದೇ ಸಮರವಲ್ಲವೆ? ಇದರ ಅರಿವು, ವಿರೋಧಿ ಕ್ರಿಯಾಶೀಲತೆ, ಎಚ್ಚರ, ಆತ್ಮಸಮರ್ಪಣೆ ನಮಗೆ ಎಂದು ಬರಬೇಕು?
ಸಾಂಪ್ರದಾಯಿಕ ಯುದ್ಧದ ದಿನಗಳು ಈಗ ವಿರಳವಾಗತೊಡಗಿವೆ. ಎರಡು ದೇಶಗಳ ಶಸ್ತ್ರಪಡೆಗಳು ಮುಖಾಮುಖಿಯಾಗಿ ಯುದ್ಧಭೂಮಿಯಲ್ಲಿ ಸೆಣಸುವುದನ್ನು ಕಡಮೆಗೊಳಿಸಿದ ಕಾರಣಗಳು ಅನೇಕ. ಮುಖ್ಯವಾಗಿ ಅಣ್ವಸ್ತ್ರಗಳ ಬೆಳವಣಿಗೆ-ಬೆದರಿಕೆಗಳು, ಅಂತಾರಾಷ್ಟ್ರೀಯ ಒತ್ತಡ-ನಿರ್ಬಂಧಗಳು, ವಿಪರೀತ ಹಣಕಾಸಿನ ವೆಚ್ಚ, ಇತ್ಯಾದಿ. ಆದರೂ ಪ್ರತಿಯೊಂದು ದೇಶ – ಸಣ್ಣದೇ ಇರಲಿ, ದೊಡ್ಡದೇ ಇರಲಿ – ಶಸ್ತ್ರ ಸಂಪಾದನೆ, ಶಸ್ತ್ರಪಡೆಗಳನ್ನು ಹೆಚ್ಚಿಸಿಕೊಳ್ಳುವುದನ್ನು ನಿಲ್ಲಿಸಿಲ್ಲ, ಸಡಿಲಿಸಿಯೂ ಇಲ್ಲ; ಬೆಳೆಸುತ್ತಲೇ ಇವೆ. ಇಂಥ ಬೆಳವಣಿಗೆಯೂ ಕೂಡ ಉಭಯ ಪಕ್ಷಗಳ ಪರಸ್ಪರ ಅಂಜಿಕೆಯಿಂದಲೋ, ವಿರೋಧಿಯನ್ನು ಧೈರ್ಯಗೆಡಿಸಲೆಂದೋ ಏನಾದರೂ ಇರಲಿ, ಮುಖಾಮುಖಿ ಯುದ್ಧವನ್ನು ತಡೆಗಟ್ಟತೊಡಗಿದುದು ಹೌದು.
ಬದಲಾದ ಸನ್ನಿವೇಶ
ಮನುಷ್ಯನೆಂಬ ಪ್ರಾಣಿ ತನ್ನ ಕಾಲ್ಕೆದರಿ ಜಗಳಕ್ಕಿಳಿಯುವ ಮಾನಸಿಕ ಒತ್ತಡವನ್ನು ಜಯಿಸಿಲ್ಲ; ತನ್ನ ಅಹಂಭಾವ, ಸ್ವಾಭಿಮಾನಗಳನ್ನು ಬಿಟ್ಟಿಲ್ಲ. ಇವಕ್ಕೆಲ್ಲ ಪ್ರಚೋದಕ ಪೂರಕವೆಂಬಂತೆ ಆರ್ಥಿಕ ಆಸೆ, ಇನ್ನಷ್ಟು ಗಳಿಸುವ, ಪಡೆಯುವ ಆರ್ಥಿಕ ವೃದ್ಧಿಯ ಹಿರಿಯಾಸೆ ಇವೂ ಕೂಡಿಕೊಂಡು ಸಂಘರ್ಷ, ಸೇಡುಗಳು ಸಶಸ್ತ್ರ ಸೇನೆಗಳ ಪಾರಂಪರಿಕ ದಾಳಿಗಳನ್ನು ಬದಿಗೆ ಸರಿಸಿದರೂ ಆ ಸ್ಥಾನವನ್ನು ಬೇರೆಯದೇ ರೂಪದಲ್ಲಿ ಧರಿಸಿವೆ: ಅಪರೋಕ್ಷ (Proxy), ವಿರೋಧಿ ಬಂಡಾಯ (Insurgency), ಭಯೋತ್ಪಾದನೆ (Terrorism), ಆರ್ಥಿಕ ವಸಾಹತುಶಾಹಿ (Economic Colonialism) ಇತ್ಯಾದಿ ಇಂಥವೇ ಪ್ರಕಾರಗಳು. ಸಾಂಪ್ರದಾಯಿಕ ಅಥವಾ ಪಾರಂಪರಿಕ ಯುದ್ಧಗಳಲ್ಲಿ ಶಸ್ತ್ರಪಡೆಗಳ ಸೈನಿಕರ ಪಾತ್ರ ಪ್ರಮುಖವಿತ್ತು; ಸಾಧಾರಣ ನಾಗರಿಕರ ಪಾತ್ರ ಗೌಣವಾಗಿತ್ತು ಈಗಿನ ಬದಲಾದ ಯುದ್ಧದ ಪ್ರಕಾರಗಳಲ್ಲಿ ಶಸ್ತ್ರಪಡೆಗಳ ಪಾತ್ರಕ್ಕಿಂತಲೂ ಹೆಚ್ಚು ಮಹತ್ತ್ವ ಪ್ರತಿಯೊಬ್ಬ ನಾಗರಿಕನದು, ಜನತೆಯದು, ಸಮಾಜದ್ದು.
ಗಡಿಕಚ್ಚಾಟ ಇದೊಂದು ತೆರನಾದರೆ ವಿರೋಧಿ ಬಂಡಾಯ, ಭಯೋತ್ಪಾದನೆ ಇವೊಂದು ತೆರ. ಪಾಕಿಸ್ತಾನ ಮತ್ತು ಚೀನಾದವರು ನಮ್ಮ ಗಡಿಯಲ್ಲಿ ಸತತವಾಗಿ ಚಕಮಕಿ ಸಂಘರ್ಷ, ಗಡಿ ಅತಿಕ್ರಮಣ, ಗಡಿಕಾರ್ಯವಿರೋಧಗಳನ್ನು ನಿರಂತರ ಜಾರಿ ಇಟ್ಟಿದ್ದಾರೆ. ಇಂಥದರಲ್ಲಿ ವೈರಿಯ ನುಸುಳುಗಾರಿಕೆ, ಮಾದಕವಸ್ತುಗಳ ಸಾಗಣೆಕೂಟಗಳು (ಡ್ರಗ್ ಮಾಫಿಯಾ), ಕಳ್ಳಸಾಗಾಟಗಾರಿಕೆಗಳೂ ಕೂಡಿಕೊಳ್ಳುತ್ತವೆ. ವಿರೋಧಿ ಬಂಡಾಯಗಾರರು, ಭಯೋತ್ಪಾದಕರು ಗಡಿಯಾಚೆಯ ದೇಶದ ಪ್ರದೇಶಗಳಲ್ಲಿ ಆಶ್ರಯ ಹೊಂದಿ, ಅಲ್ಲಿಂದ ನುಸುಳಿ ಬಂದು ನಮ್ಮ ಜನಸಮೂಹದಲ್ಲಿ ಕೂಡಿಕೊಂಡು ಆಶ್ರಯ, ಸಹಾಯ, ಸಂವೇದನೆ ಪಡೆದು ವ್ಯಕ್ತರಾಗಿ, ನಮ್ಮ ನಾಗರಿಕರಂತೆಯೇ ಇದ್ದುಕೊಂಡು ತಮ್ಮ ಕುಕಾರ್ಯಗಳಿಗೆ ಕೈಯಿಕ್ಕುತ್ತಾರೆ. ಮುಂಬೈ ದಾಳಿ, ಪಾರ್ಲಿಮೆಂಟ್ ಮೇಲಿನ ದಾಳಿ, ಸಾಂಬಾ ದಾಳಿ, ಗುರದಾಸ್ಪುರ ದಾಳಿ, ಪಠಾಣಕೋಟ್ ದಾಳಿ – ಇವೆಲ್ಲ ನಿದರ್ಶನಗಳು. ಚೀನಾದವರು, ಪಾಕಿಸ್ತಾನಿಗಳು ನಮ್ಮ ಪೂರ್ವೋತ್ತರ ರಾಜ್ಯಗಳಲ್ಲಿ, ಸರ್ಕಾರವಿರೋಧಿಯಾಗಿ ನಾಗಾ, ಮಿಜೋ, ಮಣಿಪುರಿ, ಬೋಡೋ ಬಂಡುಗಾರರಿಗೆ ದಶಕಾನುದಶಕಗಳಿಂದ ಸಹಾಯಮಾಡುತ್ತ ಬಂದಿದ್ದಾರೆ. ಶ್ರೀಲಂಕೆಯ ತಮಿಳರಿಗೆ ನಾವು ಯುಕ್ತಸಮರ್ಥನೆಯನ್ನು ಕೊಟ್ಟುದಾಗಿ ನೆಪ ತೆಗೆದು ಎಲ್.ಟಿ.ಟಿ.ಇ. ಪುಲಿಗಳು ನಮ್ಮ ಮಾಜಿ ಪ್ರಧಾನಿಯನ್ನು ಕೊಂದರು. ತಮಿಳುನಾಡಿನಲ್ಲಿ ತಮ್ಮ ಧ್ವಜ ಊರಿದರು. ಈ ಪುಲಿಗಳು ಮಧುರೆ, ಕೊಯಂಬತ್ತೂರು, ರಾಮನಾಡಿನಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದರು. ಅವರ ಬೆದರಿಕೆ, ಮೇಲ್ಗೈಯಿಂದಾಗಿ ಅಲ್ಲಿಯ ಆಡಳಿತಗಾರರು – ಜಿಲ್ಲಾಧಿಕಾರಿಗಳೂ ಕೂಡ – ತಮ್ಮ ಮಕ್ಕಳನ್ನು ರಕ್ಷಕತಂಡದೊಡನೆ ಶಾಲೆಗೆ ಕಳಿಸುತ್ತಿದ್ದ ಸ್ಥಿತಿ ಆಗಿನದು. ಅಲ್ಲದೆ ಈಗಿನ ನಕ್ಸಲರು ಬಿಹಾರದಿಂದ ಮಹಾರಾಷ್ಟ್ರ, ಕರ್ನಾಟಕದ ತುಂಗಭದ್ರೆಯವರೆಗೆ ಒಳಹೊಕ್ಕು ಸರ್ಕಾರಗಳಿಗೇ ತೊಡೆತಟ್ಟಿ ಸವಾಲೆಸೆಯುತ್ತಿದ್ದಾರೆ. ವೀರಪ್ಪನ್ನಂತಹ ಮಲೆಗಳ್ಳನನ್ನು ಹಿಡಿಯುವುದೂ ಅಷ್ಟು ಕಠಿಣವಾಗಿತ್ತು!
ಎರಡನೇ ಮಹಾಯುದ್ಧದಲ್ಲಿ ಇಂಗ್ಲೆಂಡಿನ ಶಹರವೊಂದರ ಬ್ಯಾಂಕಿನಲ್ಲಿ ಕ್ಯೂನಲ್ಲಿ ನಿಂತ ಗ್ರಾಹಕನೊಬ್ಬ ದುಡ್ಡು ತೆಗೆಯುವ ಕಿಟಕಿಯಲ್ಲಿ ನಗದು ಕೊಡುವವನ ಜೊತೆಗೆ ಮಾತಾಡುವಾಗ ಅವನ ಹಿಂದೆ ನಿಂತವನಿಗೆ ಗ್ರಾಹಕನ ಉಚ್ಚಾರದಲ್ಲಿ ಏನೋ ವೈಶಿಷ್ಟ್ಯ ಕೇಳಿಬಂದು ಆಗಲೇ ಅವನು ಪೊಲೀಸರಿಗೆ ವರದಿಯಿತ್ತ. ಆ ಗ್ರಾಹಕನನ್ನು ಹಿಡಿದು ಪ್ರಶ್ನಿಸಿದಾಗ ಅವನು ಜರ್ಮನ್ ಗುಪ್ತಚರನೆಂಬುದು ಸಾಬೀತಾಯ್ತು. ಇಂಥ ಎಚ್ಚರಿಕೆ, ಮನೋನೀತಿ ನಮ್ಮಲ್ಲಿ, ನಮ್ಮ ಜನತೆಯಲ್ಲಿ ಇರಬೇಕಲ್ಲವೆ?
ದುರಭ್ಯಾಸ ಗುಣ
ನಮ್ಮ ಸರ್ಕಾರಕ್ಕೆ, ನಮ್ಮ ಜನತೆಗೆ ಇಂಥ ಪ್ರತಿಯೊಂದು ಆಂತರಿಕ ತೀಕ್ಷ್ಣ ಪರಿಸ್ಥಿತಿಗಳ ನಿಯಂತ್ರಣಕ್ಕೆ ಸೇನೆಯನ್ನೇ ಕರೆಯುವ ಅಭ್ಯಾಸವಾಗಿಬಿಟ್ಟಿದೆ! ಸೇನೆ ಹೇಗಾದರೂ, ಎಂತಾದರೂ, ಸತ್ತು-ಬದುಕಿಯೂ ಕೆಲಸ ಮಾಡೇ ಮಾಡುತ್ತದಲ್ಲ? ಇಂಥ ಕುರುಡು ಶ್ರದ್ಧೆಯಲ್ಲಿ ಮರೆತುಹೋಗುವ ಸಂಗತಿಯೆಂದರೆ – `ಸೈನ್ಯವಿರುವುದು ಗುರುತಿಸಿದ ವೈರಿಯನ್ನು ಧ್ವಂಸಿಸಲು, ವೈರಿಯನ್ನು ಗುರುತಿಸಲಲ್ಲ’ – ಎಂಬುದು. ಶತ್ರುಗಳನ್ನು ಗುರುತಿಸುವ ಕೆಲಸ ಇತರ ಅಂಗಗಳದು – ಪೊಲೀಸ್, ವಾರ್ತಾಶಾಖೆ, ಮಾಹಿತಿ ಸಂಗ್ರಾಹಕರು, ಬೇಹುಗಾರರು – ಇತ್ಯಾದಿ ಸರಕಾರದ ಇತರ ಅಂಗಾಂಗಗಳದು, ಮತ್ತು ಅಷ್ಟೇ ಘನವಾಗಿ ಜನತೆಯದು ಕೂಡ. ಪಠಾಣಕೋಟ್ ನಿದರ್ಶನವನ್ನೇ ನೋಡಿ. ಪಾಕಿಸ್ತಾನದಿಂದ ರಾವಿ ನದಿಯನ್ನು ಲಕ್ಷಾನುಗಟ್ಟಲೆ ದುಡ್ಡು ವ್ಯಯಿಸಿ ಕಟ್ಟಿದ, ಬಿ.ಎಸ್.ಎಫ್. ದಳಗಳ ಕಣ್ಕಾಪಿನಲ್ಲಿದ್ದ ತಂತಿಬೇಲಿಯನ್ನು ದಾಟಿ ಬಂದು, ಮೂವತ್ತು ಕಿ.ಮೀ. ಒಳನಡೆದು ಪಠಾಣಕೋಟ್ ತಲಪಿ, ಅಲ್ಲಿಯ ವಾಯುಸೇನಾ ನೆಲೆಯ ಹನ್ನೊಂದು ಫೂಟು ಎತ್ತರದ ರಕ್ಷಾಗೋಡೆ ಹತ್ತಿ, ಅದರ ಮುಳ್ಳುತಂತಿಯನ್ನು ಕತ್ತರಿಸಿ ಒಳನುಗ್ಗಿ ನಮ್ಮ ಸೈನಿಕರಿಗೆ ಗುಂಡಿಕ್ಕಿದರು. ಅವರು ಎರಡು ಗುಂಪುಗಳಲ್ಲಿ ಆರು ಜನ ನೂರಾರು ಕಿಲೋ ಸಾಮಾನು, ಮದ್ದು-ಗುಂಡು, ಸರಬರಾಯಿ ಹೊತ್ತು ತಂದವರು. ಇದು ಕ್ಷಣಮಾತ್ರದಲ್ಲಾಗುವ ಕೆಲಸವೇ? ಆ ಆರು ನುಸುಳುಗಾರರಷ್ಟೇ ಇಷ್ಟೆಲ್ಲ ಕಾರ್ಯಗಳನ್ನೂ ಮಾಡಿದರೇ? ಪೊಲೀಸರ, ಗಡಿಪ್ರದೇಶದವರ, ಜನತೆಯ ಕೆಲವರಾದರೂ ಸಹಾಯಕರ, ಸಮರ್ಥಕರ, ಡ್ರಗ್ಭೂಪರ ಸಹಾಯವಿಲ್ಲದೆಯೇ ಅಥವಾ ಕಣ್ಮುಚ್ಚುವಿಕೆಯಿಲ್ಲದೆಯೇ ಇದು ಸಾಧ್ಯವೇ? ವೈರಿ ಗಡಿಯಾಚೆಯವನೇ ಅಥವಾ ಗಡಿಯೀಚೆಯ ನಮ್ಮವನೇ? ಅಥವಾ ಈರ್ವರೂ ಕೂಡಿಯೋ? ಜನತೆಯ ಅರಿವಿಲ್ಲದಿದ್ದೀತೇ? ಜನತೆಯ ಸ್ತಬ್ಧತೆಯಿಂದಾಗಿಯೇ? ನಮಗೇಕಪ್ಪಾ ಈ ಹಗರಣ, ದೂರವಿದ್ದರೆ ಸಾಕಲ್ಲ ಎಂದೋ? ನಮ್ಮವರ, ಒಳಗಿನವರ ಸಹಾಯ, ಅನುಕಂಪಗಳಿಲ್ಲದೆ ಇಷ್ಟೆಲ್ಲ ಸಾಧ್ಯವೇ?
ಹೀಗೆಯೇ ಆಗಿದ್ದು ಕೆಲವೇ ದಿನಗಳ ಹಿಂದೆ ಗುರದಾಸ್ಪುರದಲ್ಲಿ, ಮುಂಬೈಯಲ್ಲಿ, ದಿಲ್ಲಿಯಲ್ಲಿ. ಹೊರಗಿನವರಿಗೆ ಒಳಗೆ ಅನುಕೂಲತೆಗಳು ದೊರೆಯುತ್ತವೆ, ದೊರಕಿಸಿಕೊಡಲಾಗುತ್ತದಲ್ಲವೇ? ಅಥವಾ ಒಳಗಿನವರಿಗೆ ಆ ಪ್ರಕಾರ ಬ್ರೇನ್ವಾಶ್ ಮಾಡಿ ತಯಾರು ಮಾಡಲಾಗುತ್ತಿಲ್ಲವೇ? ಇದೆಲ್ಲ ಪೊಲೀಸ್, ಮಾಹಿತಿಗಾರರು, ಗೂಢಚಾರರು, ಜನತೆಗೆ ಗೊತ್ತಾಗಲಾರದೇ ಇರುತ್ತದೆಯೇ? ಏನು ಇವರೆಲ್ಲರ ಅಲಕ್ಷ್ಯವೋ, ದುರ್ಲಕ್ಷ್ಯವೋ, ನಿಷ್ಕ್ರಿಯತೆಯೋ? ಎರಡನೇ ಮಹಾಯುದ್ಧದಲ್ಲಿ ಇಂಗ್ಲಂಡಿನ ಶಹರವೊಂದರ ಬ್ಯಾಂಕಿನಲ್ಲಿ ಕ್ಯೂನಲ್ಲಿ ನಿಂತ ಗ್ರಾಹಕನೊಬ್ಬ ದುಡ್ಡು ತೆಗೆಯುವ ಕಿಟಕಿಯಲ್ಲಿ ನಗದು ಕೊಡುವವನ ಜೊತೆಗೆ ಮಾತಾಡುವಾಗ ಅವನ ಹಿಂದೆ ನಿಂತವನಿಗೆ ಗ್ರಾಹಕನ ಉಚ್ಚಾರದಲ್ಲಿ ಏನೋ ವೈಶಿಷ್ಟ್ಯ ಕೇಳಿಬಂದು ಆಗಲೇ ಅವನು ಪೊಲೀಸರಿಗೆ ವರದಿಯಿತ್ತ. ಆ ಗ್ರಾಹಕನನ್ನು ಹಿಡಿದು ಪ್ರಶ್ನಿಸಿದಾಗ ಅವನು ಜರ್ಮನ್ ಗುಪ್ತಚರನೆಂಬುದು ಸಾಬೀತಾಯ್ತು. ಇಂಥ ಎಚ್ಚರಿಕೆ, ಮನೋನೀತಿ ನಮ್ಮಲ್ಲಿ, ನಮ್ಮ ಜನತೆಯಲ್ಲಿ ಇರಬೇಕಲ್ಲವೇ?
ಜನತೆಯ ಯುದ್ಧ
ಅನೇಕ ಪರರಾಷ್ಟ್ರಗಳಲ್ಲಿ ನಮ್ಮಲ್ಲಿರುವಂತೆ ಭಾಷಾವೈವಿಧ್ಯ, ಭಾಷೆಯ ದುರಭಿಮಾನಗಳಿಲ್ಲ. ಒಂದೇ ಭಾಷೆ-ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿಯಲ್ಲಿ. ನಮ್ಮಲ್ಲಿ ಇಪ್ಪತ್ತಕ್ಕೂ ಅಧಿಕ ಭಾಷೆಗಳ ತುರುಸಿನ ಸ್ಪರ್ಧೆ. ನಮ್ಮದೆಂಬ ಒಂದೇ ಕಾಮನ್ ಭಾಷೆಗೆ ತೀವ್ರ ವಿರೋಧ ಬೇರೆ! ನಮ್ಮಲ್ಲಿ ಎಷ್ಟೋ ಪ್ರದೇಶೀಯ ಅಭಿಮಾನತೋರುವ ಜನರಿಗೆ ಭಾರತ ನಮ್ಮ ದೇಶ, ಇಲ್ಲಿ ವಾಸವಿರುವವರೆಲ್ಲ ನಮ್ಮ ಜನತೆ ಎಂಬ ನಂಬಿಕೆ, ಹೆಮ್ಮೆ, ಅಭಿಮಾನಗಳೂ ಇಲ್ಲ; ತಿಳಿದುಕೊಳ್ಳುವ ಪ್ರವೃತ್ತಿಯೂ ಇಲ್ಲ. ನಮ್ಮ ನಾಯಕರಿಗೂ ಅರಿವಿದ್ದಂತಿಲ್ಲ. ಅಲ್ಪಸಂಖ್ಯಾತರನ್ನೂ, ಪರಧಾರ್ಮಿಕರನ್ನೂ, ದಲಿತರನ್ನೂ, ಬುಡಕಟ್ಟಿನವರನ್ನೂ ತೆಗಳುವುದು, ದುರ್ಲಕ್ಷಿಸುವುದು, ಅವಗಣಿಸುವುದಾದರೆ ಅವರಲ್ಲಿ ಅಸಮಾಧಾನವುಂಟಾಗಲಾರದೇ? ಇದೇ ಅಸಮಾಧಾನದಿಂದ ಅವರು ಕುದಿಯಲಾರರೇ? ಇದೇ ಕುದಿಯಿಂದ ಅವರು ಕುಕೃತ್ಯಕ್ಕೆ, ವಿದ್ರೋಹಕ್ಕೆ, ಸೇಡು ತೀರಿಸಿಕೊಳ್ಳಲಿಕ್ಕೆ ಉದ್ಯುಕ್ತರಾಗಲಾರರೇ? ಪ್ರಜಾತಂತ್ರದಲ್ಲಿಯೇ ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು, ವಿವಿಧತೆ ಉಳ್ಳವರನ್ನು ರಮಿಸಿ, ತಿಳಿಹೇಳಿ, ಸಹಾಯವಿತ್ತು, ಅನುಕಂಪವಿತ್ತು ಜೊತೆಗೊಯ್ಯದಿದ್ದರೆ ಅಪರೋಕ್ಷ, ಸರ್ಕಾರವಿರೋಧಿ, ಭಯೋತ್ಪಾದಕ ಕೀಟಕಯುದ್ಧಗಳು, ಒಳಗೊಳಗೇ ಉರಿಯೆದ್ದು ದೇಶವನ್ನು ಸುಡಲಾರವೇ? ಇವರೆಲ್ಲ ಈಗ ನಮ್ಮೀ ಪ್ರಜಾತಂತ್ರದಲ್ಲಿ ಮತಗಳಿಕೆಯಷ್ಟಕ್ಕೆ ಮಾತ್ರ ಪ್ರಸಕ್ತರೆನಿಸುತ್ತಾರೆ. ಇದೆಂತಹ ಪ್ರಜಾತಂತ್ರ? ಹೀಗಾಗಿಯೇ ನಮ್ಮಲ್ಲಿ ಈ ಆಂತರಿಕ ಯುದ್ಧಗಳನ್ನು ಪರದೇಶದವರು ಎಣ್ಣೆ ಸುರಿದು ಧಗಧಗಿಸುತ್ತಿದ್ದಾರೆ. ಎಂದೇ ಇದು ಜನತೆಯದೇ ಯುದ್ಧವಾಗಿದೆ.
ಆಂತರಿಕ ಯುದ್ಧದಲ್ಲಿ ಸೈನಿಕ, ಸೈನ್ಯಗಳು ಗೌಣ. ಒಳಗೊಳಗೆಯೇ ನೂರು ಕೊರೆತಗಳನ್ನಿಟ್ಟು ರಕ್ತಹರಿಸಿ ಅಶಕ್ತರನ್ನಾಗಿಸುವ ಸುಸಂಧಿಯು ದೊರಕಿದಾಗ ನಮ್ಮ ಎದುರಾಳಿಗಳು ಸಾಂಪ್ರದಾಯಿಕ, ಮುಖಾಮುಖಿ ಯುದ್ಧವನ್ನೇಕೆ ಮಾಡಬೇಕು? ವಿರೋಧಿ ಬಂಡಾಯ, ಭಯೋತ್ಪಾದಕ ದಾಳಿ ಇವು ಮಾನಸಿಕ ಸಮರಾಧಾರಿತ, ಭಯಾಧಾರಿತವಾದಂಥವು. ಕಡಮೆ ವೆಚ್ಚದಲ್ಲಿ, ಕಡಮೆ ಯೋಧರನ್ನು ಬಳಸಿ ಸೃಷ್ಟಿಸುವ ಗರಿಷ್ಠಪ್ರಮಾಣದ ಆರ್ಥಿಕಹಾನಿಯನ್ನುಂಟುಮಾಡುವ ದೊಡ್ಡ ವಿಧ್ವಂಸಕ ಹೊರೆಯನ್ನೇ ದೇಶದ ಮೇಲೆ, ಸಮಾಜದ ಮೇಲೆ ಹೇರುವ ವಿಧಾನಗಳು. ಇಂಥ ಸಮರವಿಧಾನಗಳಿಂದ ರಕ್ಷಿಸಿಕೊಳ್ಳಲು ಸರಕಾರವು ಮಾಡಬಹುದಾದ ಪ್ರತಿಯೊಂದು ರೂಪಾಯಿಯ ವೆಚ್ಚವೂ ಭಯೋತ್ಪಾದಕರ, ಬಂಡುಕೋರರ ಜಯವನ್ನು, ಲಾಭವನ್ನು ಸೂಚಿಸುತ್ತದೆ. ಬೆರಳುಗಳಲ್ಲೆಣಿಸುವಷ್ಟು ಭಯೋತ್ಪಾದಕರು ಸಾವಿರಾರು ರಕ್ಷಕರನ್ನು ಕಟ್ಟಿಹಾಕುತ್ತಾರೆ, ಲಕ್ಷಾನುಗಟ್ಟಲೆ ಹಣವನ್ನು ರಕ್ಷಾವ್ಯವಸ್ಥೆಗಾಗಿ ಖರ್ಚು ಮಾಡಿಸುತ್ತಾರೆ. ಇಂದು ರಕ್ಷಾವ್ಯವಸ್ಥೆಯ ಉದ್ಯಮವು ಅಧಿಕ ನೌಕರಿ ನೀಡುವಲ್ಲಿ ಎರಡನೇ ಸ್ಥಾನ ಪಡೆಯುವಷ್ಟು ಬೆಳೆದಿದೆ ಎಂದು ಕೆಲ ಸಂಶೋಧಕರು ಹೇಳಿದ್ದಾರೆ. ನಾವು ಭಯೋತ್ಪಾದಕರಿಂದಾಗಿ ಇಂದು ಎಷ್ಟು ಭಯಗ್ರಸ್ತ ಮಟ್ಟಕ್ಕೆ ಇಳಿಸಲ್ಪಟ್ಟಿದ್ದೇವೆ ಎಂಬುದರ ಕಲ್ಪನೆಯಾದರೂ ನಮಗೆ ಬಂದೀತೇ?
ರಕ್ಷಾಕವಚ ಬೆಳೆದಂತೆ ಆರ್ಥಿಕ ವೆಚ್ಚವೂ ಬೆಳೆಯುವುದಿಲ್ಲವೇ? ಗೋಡೆಗಳು, ತಂತಿಬೇಲಿಗಳು, ಕಾವಲುಗಾರರು (ಬೇಲಿ-ಗೋಡೆಗಳಿಗೆ ಕಾವಲಿಲ್ಲದಿದ್ದರೆ ಅದು ಅಡೆತಡೆಯೇ ಅಲ್ಲ!), ಪೊಲೀಸ್ ಪಡೆಗಳ, ಅರೆಸೈನಿಕ ದಳಗಳ, ರಕ್ಷಾಪಡೆಗಳ ವೃದ್ಧಿ, ಕಣ್ಣಿಡುವ ಯಂತ್ರಗಳು, ಮಾಹಿತಿ ಸಂಘದವರು, ಮಾಹಿತಿಯನ್ನು ತೆಗೆದು, ಕೂಡಿಸಿ, ಬೆರೆಸಿ, ಸಾಣಿಸಿ, ವಿಶ್ಲೇಷಿಸಿ, ಹೊಂದಾಣಿಕೆ ಮಾಡಿ ಇತರರಿಗೆ ಹಂಚುವವರು – ಹೀಗೆ ಅನೇಕ ಕಾರ್ಯವೈವಿಧ್ಯಗಳಿಗೆ ದುಡ್ಡು ಬೇಕು, ಸಂಘಟನೆ ಬೇಕು. ಈ ವೆಚ್ಚವೆಲ್ಲ ಅನುತ್ಪಾದಕ ಮಾತ್ರ! ಅದೊಂದು ದೊಡ್ಡ ಪ್ರಮೇಯ. ಅಲ್ಲದೆ ಆ ವೆಚ್ಚದಿಂದಾಗಿ ಇತರ ಅನೇಕ ಉತ್ಪಾದಕ ಯೋಜನೆಗಳು ಘಾಸಿಗೊಂಡು ಸ್ಥಗಿತವಾಗುತ್ತವೆ. ಈಗ ನೋಡಿ ಐದು ತಾರಾ ಹಾಟೆಲೊಂದರಲ್ಲಿ ಒಂದು ಕಪ್ಪು ಕಾಫಿ ಕುಡಿದರೆ ಎಪ್ಪತ್ತೋ, ಎಂಭತ್ತೋ ರೂಪಾಯಿ ಖರ್ಚು. ಆ ಹೊಟೇಲಿನ ರಕ್ಷಾವ್ಯವಸ್ಥೆಯ ಖರ್ಚೂ ಇದರಲ್ಲೇ ಶಾಮೀಲು. ಅದನ್ನು ಗ್ರಾಹಕರೇ ತೆರಬೇಕು! ವಿಪರ್ಯಾಸವಲ್ಲವೇ? ಹೀಗೆಯೇ ಈ ವಿಷಚಕ್ರ. ರಕ್ಷಾವ್ಯವಸ್ಥೆಯ ಈ ಆಯಾಮಗಳೆಲ್ಲ ನಾಗರಿಕರಿಗೆ ತಿಳಿಯಬೇಕು, ಅವರು ಅದನ್ನು ಗಮನಿಸಬೇಕು, ಸಹಿಸಬೇಕು.
ಕ್ಷಯಿಸುತ್ತಿರುವ ಅಂತಃಪ್ರಜ್ಞೆ
ಇನ್ನು ಕಳ್ಳ ವ್ಯಾಪಾರ, ಡ್ರಗ್ ಟ್ರಾಫಿಕಿಂಗ್. ಇವು ದೇಶಾಭಿಮಾನ, ವೈರಿ, ತಾಟಸ್ಥ್ಯ ಇತ್ಯಾದಿ ಯಾವ ಆಯಾಮವನ್ನೂ ಗುರುತಿಸುವುದಿಲ್ಲ, ಆದರಿಸುವುದಿಲ್ಲ. ನುಸುಳುಗಾರರು ಇವರಲ್ಲಿ ಸೇರದೇ ಇರುವರೇ? ಇದು ಪೊಲೀಸರಿಗೆ, ಜನತೆಯಲ್ಲಿ ಹಲಕೆಲವರಿಗಾದರೂ ತಿಳಿಯದಿರುವುದೇ? ಲಂಚಕೋರತನ ಎಂಬುದೊಂದಿದೆಯಲ್ಲ? ದುಡ್ಡಿನಾಸೆ, ಅಧಿಕಾರದರ್ಪಗಳ ರುಚಿ, ಸೇಡುಗಳೂ ಇವೆಯಲ್ಲ? ಇವುಗಳನ್ನು ಜನತೆ, ಆಡಳಿತಗಾರರು, ಕಾನೂನುಪಡೆಗಳು, ಧಾರ್ಮಿಕ ಗುರುಗಳು, ಸಮಾಜ ಮುಖಂಡರು, ಜನಪ್ರತಿನಿಧಿಗಳು ತಡೆಯಲು, ತಿಳಿಹೇಳಲು, ನಿಯಂತ್ರಿಸಲು, ಕಣ್ಣಿಡಲು ಪ್ರಯತ್ನಿಸುತ್ತಿಲ್ಲವಲ್ಲ? ಅಥವಾ ನಿಷ್ಠುರವಾಗಿ, ಏಕಮತೀಯವಾಗಿ, ದೃಢವಾಗಿ ಪ್ರಯತ್ನಿಸುವುದಿಲ್ಲವೆನ್ನಬಹುದೇ? ತಡೆಯುವುದಷ್ಟೇ ಅಲ್ಲ, ತಮ್ಮವರೇ ಅಪರಾಧಿಯಾಗಿ ಸಿಕ್ಕಿಬಿದ್ದರೆ ಅವರನ್ನು ಉಳಿಸಿಕೊಳ್ಳುವ, ಬಿಡಿಸಿಕೊಳ್ಳುವ ಅಖಂಡ ಪ್ರಯತ್ನ, ಅಳುವುದು, ಎದೆಬಡೆದುಕೊಳ್ಳುವುದು, ಅವರು ನಿರಪರಾಧಿ, ಮುಗ್ಧರು ಎಂದು ವಾದಿಸುವುದು ಸರ್ವೇಸಾಮಾನ್ಯ. ದೇಶಾಡಳಿತದಲ್ಲಿ ಒಂದು ಕ್ರಮವಿದೆ, ಕಾನೂನಿದೆ, ಪದ್ಧತಿಯಿದೆ. ಅದನ್ನು ಅನುಸರಿಸುವುದು ಆವಶ್ಯಕ ಎಂಬ ಪ್ರಜ್ಞೆಯೇ ಇಂದು ಕ್ಷಯಿಸಿಹೋಗಿದೆ.
ಇಲ್ಲೊಂದು ನಿದರ್ಶನದ ಆವಶ್ಯಕತೆಯಿದೆ. ನಾಗಾ ಬಂಡುಕೋರರ ಕೃತ್ಯಗಳು ಇನ್ನೂ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳಾದರೂ, ನಡೆದೇ ಇವೆ. ನಾಗಾಲ್ಯಾಂಡ್ ರಾಜ್ಯದ ಟುವೆನ್ಸಾಂಗ್ ಜಿಲ್ಲೆಯ ನೋಕ್ಲಾಕ್ ಎಂಬ ಗಡಿವಿಭಾಗದ ದುಭಾಷಿಯೊಬ್ಬ ತನ್ನ ಒಬ್ಬನೇ ಮಗ ಬಂಡುಗಾರರಲ್ಲಿ ಶಾಮೀಲಾಗುವವನಿದ್ದಾನೆಂಬ ಶಂಕೆ ಬಂದು ಅವನು ತನ್ನ ಮಾತು ಕೇಳದಿದ್ದಾಗ, ಜಿಲ್ಲಾಧಿಕಾರಿಯ ಕಡೆಗೆ ೩೦ ಕಿ.ಮೀ. ನಡೆದು ತನ್ನ ಮಗ `ಜಂಗಲ್ ಪಾರ್ಟಿ’ ಸೇರಲಿದ್ದಾನೆ, ತನ್ನ ಮಾತು ಕೇಳುವುದಿಲ್ಲ, ಅವನನ್ನು ಬಂಧಿ ಮಾಡಿರಿ, ಇಲ್ಲವಾದರೆ ಬಂಡುಗಾರರನ್ನು ಸೇರಿ ವಿಧ್ವಂಸಕ ಕಾರ್ಯಕ್ಕಿಳಿಯುತ್ತಾನೆ ಎಂದು ರಿಪೋರ್ಟ್ ಮಾಡಿದ. (ದುಭಾಷಿ ಎಂದರೆ ಅನುವಾದಕ, ಅಲ್ಲದೆ ತನ್ನ ಬುಡಕಟ್ಟಿನ ಹಿರಿಯರಲ್ಲೊಬ್ಬ, ತನ್ನ ಜನರ ಕಟ್ಟುನಿಟ್ಟು, ಬುಡಕಟ್ಟು ಸಂಪ್ರದಾಯ, ಕಾನೂನುಗಳನ್ನು ಬಲ್ಲವ, ಸರಕಾರದಿಂದ ಬುಡಕಟ್ಟಿನ ಪ್ರತಿನಿಧಿಯೆಂದು ಆರಿಸಿ ನೇಮಿಸಲ್ಪಟ್ಟು ‘ಕೆಂಪು ಕಂಬಳಿ’ಯನ್ನು ಗಳಿಸಿದವ, ಜಿಲ್ಲೆಯ ಕಿರುನ್ಯಾಯಾಲಯದ ನ್ಯಾಯಾಧೀಶರಲ್ಲೊಬ್ಬ.) ಜಿಲ್ಲಾಧಿಕಾರಿ ಪೊಲೀಸರನ್ನು ಗಡಿಯಲ್ಲಿದ್ದ ಹಳ್ಳಿಗೆ ಕಳಿಸುವವರೆಗೆ ತುಸು ತಡವಾಯಿತು. ೫೦ ವರ್ಷಗಳ ಹಿಂದಿನ ಮಾತಿದು. ಆಗ ಪೊಲೀಸ್ ಸಂಖ್ಯೆ, ಸೈನಿಕ ವಸತಿಗಳೂ ಕಡಮೆಯೇ. ಪೊಲೀಸರು ಕೊನೆಗೆ ತಲಪುವವರೆಗೆ ಅವನ ಮಗ ಮಾಯವಾಗಿ ಬರ್ಮಾ ಗಡಿಯಾಚೆ ಜಂಗಲ್ ಪಾರ್ಟಿಯಲ್ಲಿ (ಬಂಡುಗಾರರನ್ನು ಅವನು ಗುರುತಿಸುವ ಪದ ಅದು) ಸೇರಿಬಿಟ್ಟಿದ್ದ. ಈಗ ಆ ದುಭಾಷಿ ಅಸಮಾಧಾನಗೊಂಡು ಪುನಃ ೩೦ ಕಿ.ಮೀ. ನಡೆದು ಜಿಲ್ಲಾಧಿಕಾರಿಗೆ ಹೇಳಿದ – “ನಾನು ಮಗನನ್ನು ಬಂಧಿಸಲು ಹೇಳಿದ್ದೆ. ನೀವು ಬಂಧಿಸಲಿಲ್ಲ. ಅವನು ಬಂಡುಗಾರರಲ್ಲಿ ಶಾಮೀಲಾದ. ನನ್ನ ಮಗನನ್ನು ಕಳಕೊಂಡೆ. ಒಬ್ಬ ದುಭಾಷಿಯ ಮಗ. ನನಗೆ ನಾಚಿಕೆ” ಎನ್ನುತ್ತ ತನ್ನ ದುಭಾಷಿ ದ್ಯೋತಕ ಕೆಂಪು ಕಂಬಳಿಯನ್ನು ಜಿಲ್ಲಾಧಿಕಾರಿಗೆ ವಾಪಸು ಮಾಡಿ ನೌಕರಿಯನ್ನು ಬಿಟ್ಟುಕೊಟ್ಟ! ಮಾಕುಂ ಖೆಮ್ನುಗನ್ ಎಂಬ ಈ ನಾಗಾ ಬುಡಕಟ್ಟಿನ ದುಭಾಷಿಯ ರಾಷ್ಟ್ರೀಯ ಅರಿವು, ಜಾಗರೂಕತೆ, ಕರ್ತವ್ಯಪಾಲನೆ ನಮ್ಮ ದೇಶದ ಜನತೆಯಲ್ಲಿ ಬರಬೇಕಲ್ಲವೇ? ಬಂದೀತೇ?
ವೈರಿಯು ಆಗಲೇ ಒಳಸೇರಿದ್ದಾನೆ. ಜನತೆಯಲ್ಲೇ ಅಡಗಿಕೊಂಡಿದ್ದಾನೆ. ತನ್ನ ವಿಧ್ವಂಸಕ ಕೆಲಸಕ್ಕಣಿಯಾಗತೊಡಗಿದ್ದಾನೆ. ಇದೇ ಇಂದಿನ ಯುದ್ಧಕ್ಷೇತ್ರ. ಪೂರ್ವಸೂಚನೆ, ಮಾಹಿತಿಗಳ ಒಳಕೂಟವನ್ನು ಜನತೆಯೇ ತಾವೇ ತಮಗಾಗಿಯೇ ಕಟ್ಟಿಕೊಳ್ಳಬೇಕಾದ ಕಾಲ, ಕ್ಷಣ ಇದು. ರಕ್ಷಾವ್ಯವಸ್ಥೆಯವರೇ ಸರ್ವವ್ಯಾಪಿಯಿರಬೇಕೆಂಬುದು ಅಸಾಧ್ಯ, ತಪ್ಪು. ರಕ್ಷಾವ್ಯವಸ್ಥೆಯ ಸರ್ವವ್ಯಾಪಿತ್ವವನ್ನು ಸ್ಥಾಪಿಸಲು, ನಡೆಸಲು ಜನತೆಯೂ ಕೈನೀಡಲೇಬೇಕು, ಅಲ್ಲವೇ?
ದೂರಾಲೋಚನೆ ಅಗತ್ಯ
ಮುನ್ನೆಚ್ಚರಿಕೆಯ ಕ್ರಮಗಳು, ಮಾಹಿತಿ ದೊರಕಿಸುವ ಚಟುವಟಿಕೆಗಳು, ಮಾಹಿತಿ ವಿಶ್ಲೇಷಣೆ, ನಾಗರಿಕರ ಮೇಲೆ ನಿಗಾ ಇಡುವುದು ಇತ್ಯಾದಿ ಚಾಲನೆಗಳು ನಾಗರಿಕರಿಗೆ ಕಿರಿಕಿರಿ ಉಂಟುಮಾಡುತ್ತವೆ. ವಾಕ್ಸ್ವಾತಂತ್ರ್ಯ, ಮಾಧ್ಯಮಗಳ ಸ್ವಾತಂತ್ರ್ಯ, ಮಾನವಹಕ್ಕುಗಳ ಮೇಲೆ ಬಿಗಿತ, ದೈನಂದಿನ ಚಲನೆ-ಚಟುವಟಿಕೆಗಳ ಸ್ವಾತಂತ್ರ್ಯ ಇತ್ಯಾದಿಗಳ ಮೇಲಿನ ಹಿಡಿತ ಬಿಗಿತಗಳೇ ಈ ಕಿರಿಕಿರಿ, ಅನಾನುಕೂಲ. ಸುರಕ್ಷೆ ಇದು ಸುಲಭವಾಗಿ ಸಿಗುವ ವಸ್ತುವೇ, ಅದೂ ಇಂಥ ಭಯೋತ್ಪಾದಕ ಪರಿಸರದಲ್ಲಿ? ಬೆಲೆ ತೆರಲೇಬೇಕಲ್ಲ? ಜನತೆಗೆ ಈ ಅರಿವು, ತಾಳ್ಮೆ ಬೇಕೇ ಬೇಕು. ನಾಗರಿಕ ಹಕ್ಕು, ಸ್ವಾತಂತ್ರ್ಯಗಳ ಮೇಲೆ ಸರ್ಕಾರ ಹಾಗೂ ಆಡಳಿತಾಧಿಕಾರಿಗಳ ಇಂಥ ಅತಿಕ್ರಮಣಗಳನ್ನು ಸದ್ಯಃ ವಿರೋಧಕ್ಕಿಂತಲೂ ದೂರಾಲೋಚನೆಯಿಂದ ಆವಶ್ಯಕತೆಯ ಗಣನೆಯಲ್ಲಿ ಪರೀಕ್ಷಿಸಬೇಕು.
ಇದೀಗ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ ಹುಟ್ಟಿಕೊಂಡಿರುವ ದೇಶವಿರೋಧಿ ಘಟನೆಯೂ ಬದಲಾಗುತ್ತಿರುವ ಯುದ್ಧಸ್ವರೂಪದ ಇನ್ನೊಂದು ಮುಖವೇ ಆಗಿದೆ.
ಜನರನ್ನು ಅಪಹರಿಸುವುದು, ಒತ್ತೆಯಾಳಾಗಿಸುವುದು – ಇವು ಭಯೋತ್ಪಾದಕರ, ಬಂಡಾಯಗಾರರ ಆಪ್ತ ನೀಲಿನಕ್ಷೆಗಳಾಗಿರುವುದು ಸಹಜ. ಕಂದಹಾರ ಹೈಜಾಕನ್ನೇ ನೋಡಿ. ಒತ್ತೆಯಾಳುಗಳನ್ನೆಲ್ಲ ಬಿಡಿಸಲು ಹಫೀಜನಂತಹ ಭಯಂಕರ ಪಾಕಿಸ್ತಾನಿ ಭಯೋತ್ಪಾದಕನನ್ನು ಬಿಡಬೇಕಾಯಿತು. ಎಂಥ ಹೀನಾಯ ಸ್ಥಿತಿ ನಮ್ಮ ರಾಷ್ಟ್ರದ್ದು, ಅದೂ ಅಂತಾರಾಷ್ಟ್ರೀಯ ಸ್ತರದಲ್ಲಿ! ಪುಕ್ಕಲು ರಾಷ್ಟ್ರವಾದೆವಲ್ಲ? ಭಯೋತ್ಪಾದಕನಿಗೆ ಮಣಿದೆವಲ್ಲ? ಅದಕ್ಕೆ ಇಂಬುಕೊಟ್ಟಂತಾಗಲಿಲ್ಲವೇ? ದೇಶವು ಭಯೋತ್ಪಾದಕರಿಗೆ ಮಣಿಯದೆ ಒತ್ತೆಯಾಳುಗಳ ಸಂಹಾರವನ್ನು ಲೆಕ್ಕಿಸದೆ ವಿರೋಧಿ ಕಾರ್ಯ ಕೈಕೊಂಡಿದ್ದರೆ ಭಯೋತ್ಪಾದಕರಿಗೆ ಪಾಠ ಕಲಿಸಿದಂತಾಗುತ್ತಿತ್ತಲ್ಲ? ಆದರೆ ಆ ೧೫೦ ಒತ್ತೆಯಾಳುಗಳ ಅಳು, ಅವರ ಸಂಬಂಧಿಕರು ಪ್ರಧಾನಿಯೆದುರು ಸುರಿಸಿದ ಕಣ್ಣೀರು ಇವೇ ನಮ್ಮ ಪುಕ್ಕಲುತನವನ್ನು ಜಗತ್ತಿಗೆ, ಭಯೋತ್ಪಾದಕರಿಗೆ ತೋರಿಸಲಿಲ್ಲವೇ? ಅದೇ ಭಯೋತ್ಪಾದಕರು ಈಗಲೂ ನಮ್ಮನ್ನು ಕುಕ್ಕುತ್ತಿದ್ದಾರಲ್ಲ? ಆ ೧೫೦ ಪ್ರಯಾಣಿಕರೆಲ್ಲ ಸಿರಿವಂತರು, ವರ್ಚಸ್ಸುಳ್ಳವರು. ಅವರಷ್ಟರ ಸಲುವಾಗಿ ನಮ್ಮ ದೇಶದ ಪೊಳ್ಳುತನ, ಪುಕ್ಕಲುತನ, ಜೊಳ್ಳು ಹೊರಬೀಳಲಿಲ್ಲವೇ, ಜಗಜ್ಜಾಹೀರಾಗಲಿಲ್ಲವೇ? ಹೀಗಾದರೆ ನಾವು ಭಯೋತ್ಪಾದನೆಯನ್ನು ಎದುರಿಸುವುದೆಂತು? ಎಂದೇ ಈಗಿನ ಯುದ್ಧ ಜನತೆಯದು. ಜನತೆಯೂ ಬಲಿದಾನಕ್ಕೆ ಮಿಸುಕಬಾರದು, ತಯಾರಿರಬೇಕು. ಹೇಳುವುದು ಸುಲಭ ಅನ್ನಬಹುದು. ಆದರೆ ಅದುವೇ ಕಟುಸತ್ಯ. ಅದಕ್ಕೆ ಪರ್ಯಾಯವೇ ಇಲ್ಲ – ಧೀರ ರಾಷ್ಟ್ರಗಳಲ್ಲಿ. ಪುಕ್ಕಲುತನ, ಅಳುಬುರುಕತನ ಪರ್ಯಾಯವಲ್ಲವೇ ಅಲ್ಲ.
ನಾವು ಪುಕ್ಕಲರೇ
ಹಾಗೆ ನೋಡಿದರೆ ಸಾವಿರಾರು ವರ್ಷಗಳ ಇತಿಹಾಸದಲ್ಲಿ ನಾವು ನಮ್ಮ ಸಂರಕ್ಷಣೆಯಲ್ಲೇ ನಾವು ಅಸಮರ್ಥರಾದೆವು ಎಂದು ಅನೇಕ ವೈಚಾರಿಕರು ವಿಶ್ಲೇಷಕರೇ ಹೇಳುತ್ತಾರೆ. ಅವರೆಲ್ಲರನ್ನು ನಾವು ಅರಗಿಸಿಕೊಂಡೆವು ಎಂದು ಆತ್ಮಸಮಾಧಾನ ನಮಗೆ ನಾವೇ ಮಾಡಿಕೊಳ್ಳುತ್ತೇವೆ. ನಮ್ಮ ನಮ್ಮೊಳಗೇ ಹೊಡೆದಾಡಿದವರನ್ನೇ ನಾವು ವೀರರು, ಅಗ್ರಣಿಗಳು ಎಂದು ಕೊಂಡಾಡಿಕೊಳ್ಳುತ್ತೇವೆ. ದೇಶದ ಹೊರಬಿದ್ದು, ನಮ್ಮನ್ನೇ, ನಮ್ಮತನವನ್ನೇ, ನಮ್ಮ ಸಮರ್ಥನೆಯನ್ನೇ ನಾವು ಮಾಡಿಕೊಳ್ಳುವುದೇ ಆಗಿಲ್ಲ. ನಮ್ಮಲ್ಲಿ ಗಝನಿ, ಘೋರಿ, ಅಲೆಕ್ಸಾಂಡರ್, ಬಾಬರ, ಡಗಾಮಾ, ಕ್ಲೈವ್ನಂತಹ ಸಾಹಸೀ ಧೀರತ್ವದ ಭೀರುಗಳು ಕಂಡುಬರುವುದಿಲ್ಲ. Adventurous spirit ನಮ್ಮಲ್ಲಿ ಸಾಕಷ್ಟಿಲ್ಲ ಅಲ್ಲವೇ?
ಪರದೇಶೀ ಆಕ್ರಮಣಕಾರರೆಲ್ಲ ತಮ್ಮ ದೇಶ ಬಿಟ್ಟು ಸಾವಿರಾರು ಮೈಲು ಭೂಮಿಯಿಂದಲೋ ಸಮುದ್ರದಿಂದಲೋ ಯಾವುದೋ ಭವ್ಯ ಕನಸು ಕಾಣುತ್ತ, ಹೊಸದನ್ನು ಹುಡುಕುತ್ತ, ಅನಿಶ್ಚಿತತೆಯನ್ನೇ ಕೆಣಕುತ್ತ, ಹಾನಿ-ಕಷ್ಟ-ದುರ್ದೆಸೆಗಳನ್ನು ಸಹಿಸುತ್ತ, ನಮ್ಮನ್ನು ನಮ್ಮ ಸೈನಿಕರಿಂದಲೇ ಗೆದ್ದು, ನಮ್ಮನ್ನೇ ತಮ್ಮಂತೆ ಪರಿವರ್ತಿಸುತ್ತ ಸಾವಿರಾರು ವರ್ಷ ಆಳಿದರು. ಇಂದಿಗೂ ನಾವು ಅದೇ ಮಾನಸಿಕ ದಾಸ್ಯದಲ್ಲಿಲ್ಲವೇ? ಅವರಂತೆ ಬಿರುಸಾಗಿದ್ದೇವೆಯೇ, ನಿಷ್ಠುರರಾಗಿದ್ದೇವೆಯೇ, ಏಕಮತೀಯ ಅಚಲ ವಿಶ್ವಾಸವುಳ್ಳವರಾಗಿದ್ದೇವೆಯೇ? ದೇಶದಿಂದ ಹೊರಬಿದ್ದು ಜಗದ್ವ್ಯಾಪಾರದಲ್ಲಿ ನಮ್ಮತನವನ್ನೇ ಸಮರ್ಥಿಸಿಕೊಳ್ಳುವ ಶಕ್ತಿ, ನಿಶ್ಚಯಗಳನ್ನು ಪಡೆದಿದ್ದೇವೆಯೇ, ಪ್ರಯತ್ನಪರರಾಗಿದ್ದೇವೆಯೇ? ನಮಗೆ ಸ್ವಾತಂತ್ರ್ಯದ ಹೊಸ ಪರಿಸರದಲ್ಲಿ ಬೇಕಾದುದು ಆಕ್ರಾಮಕತೆ, ನಮ್ಮನ್ನೇ ಸಮರ್ಥಿಸಿಕೊಳ್ಳುವ ನಿರ್ಧಾರ. ನಮ್ಮ ಭೂತಕಾಲದ ತಾತ್ತ್ವಿಕ ಮೆರುಗು, Spiritualism ಎಂಬ ಹೇಳಿಕೊಳ್ಳುವಿಕೆ, ಪ್ರಾಚೀನ ನಾಗರಿಕತೆಯ ಜಂಭ, ಅಹಿಂಸಾಪ್ರಿಯತೆ ಎಂಬ ಕಲ್ಪನೆ ಇವೆಲ್ಲ ಈಗ ಸದ್ಯಕ್ಕೆ ಬೇಕಾದ ವೈಶಿಷ್ಟ್ಯಗಳಲ್ಲ. ಅವುಗಳಿಂದ ಅಂತಾರಾಷ್ಟ್ರೀಯ ಪರಿಸರ ಈಗ ಪ್ರಭಾವಿತವಾಗುವುದೂ ಇಲ್ಲ.
ಎಷ್ಟೋ ಗಣ್ಯರು ಕೇಳುತ್ತಾರೆ ನಾವು ಪಾಕಿಸ್ತಾನದೊಳಗೆ ನಮ್ಮ ಟೋಳಿಗಳನ್ನು ಕಳಿಸಿ ವಿಧ್ವಂಸಕ ಕಾರ್ಯಗಳನ್ನೆಸಗಿ ಅವರಿಗೆ ಪಾಠವನ್ನೇಕೆ ಕಲಿಸಬಾರದು ಎಂದು. ಇಂಥ ಆಕ್ರಾಮಕತೆ ನಮ್ಮ ರಕ್ತದಲ್ಲೇ ಇಲ್ಲ! ಐತಿಹಾಸಿಕವಾಗಿ ಗಡಿಯಾಚೆ ನಾವು ಹೋಗಿಯೇ ಇಲ್ಲ. ಹಾಗೆ ಹೋದವರು ಬ್ರಿಟಿಶರು ಮಾತ್ರ. ಹಿಂದುಸ್ತಾನದ ತಮ್ಮ ಆಧಿಪತ್ಯವನ್ನು ಕಾಯ್ದುಕೊಳ್ಳಲು ಭಾರತೀಯ ಸಿಪಾಯಿಗಳನ್ನೇ ಉಪಯೋಗಿಸಿ ಅವರು ಆಫಘನಿಸ್ತಾನ, ಟಿಬೆಟ್, ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಪಶ್ಚಿಮ ಏಶಿಯಾ, ಚೀನದ ವರೆಗೆ ತಮ್ಮ ಅಧಿಕಾರದ ಮೇಲ್ಗೈ ಸ್ಥಾಪಿಸಿದರು. ಸ್ವಾತಂತ್ರ್ಯಾನಂತರ ನಾವು ಅವನ್ನೆಲ್ಲ ಬಿಟ್ಟುಕೊಟ್ಟೆವು. ಮತ್ತೆ ನಾವು `ಜೈಸೀ ಥೇ’ನೇ! ಪರದೇಶೀಯ ಆಕ್ರಮಣಕಾರರ ಆಶ್ರಯದಲ್ಲೇ ಬೆಳೆದು ಅದರಲ್ಲೇ ನಮ್ಮ ಸುರಕ್ಷೆಯನ್ನು ಕಂಡುಕೊಳ್ಳುತ್ತ ಬಂದ ನಮಗೆ ಈಗ ನಮ್ಮದೇ ಸುರಕ್ಷಾ ಜಾಲ ಹೆಣೆದು ನಾವೇ ನಮ್ಮನ್ನು ರಕ್ಷಿಸಿಕೊಳ್ಳುವ ಸಂದರ್ಭ ಒದಗಿ ಒದ್ದಾಡುತ್ತಿದ್ದೇವೆ. ಅಷ್ಟೇ ಅಲ್ಲ ಅಂಥ ಭೌಗೋಳಿಕ-ರಾಜಕೀಯ (Geopolitical) ಸಮರ್ಥನೆಯೂ ನಮಗೆ ಸಿಗುವುದಿಲ್ಲ. ಯಾವ ಬಲಶಾಲಿ ರಾಷ್ಟ್ರ ನಮ್ಮನ್ನು ಬೆಂಬಲಿಸೀತು? ಇಸ್ರೇಲ್ಗೆ ಅಮೆರಿಕದ ಪ್ರಚಂಡ ಬೆಂಬಲವಿದೆ. ಪಾಕಿಸ್ತಾನಕ್ಕೆ ಚೀನದ್ದಿದೆ, ಅಮೆರಿಕದ ತಾಟಸ್ಥ್ಯದ್ದಿದೆ. ಅರಬ ರಾಷ್ಟ್ರಗಳ ದುಡ್ಡಿನದಿದೆ. ನಮಗೆ ಅಂಥವು ಯಾವುದೂ ಇಲ್ಲ, ಬೆಳೆಸಿಕೊಳ್ಳುವ ಸಖತ್ ಪ್ರಯತ್ನಕ್ಕೆ ಅಪಾರ ಬೆಲೆ ತೆರಬೇಕು, ತೆರುವ ಭಾರ ಜನತೆಯ ಮೇಲೆಯೇ ತಾನೇ? ಜನತೆ ಅದನ್ನು ಯೋಚಿಸುವುದೂ ಇಲ್ಲ. ಆರಿಸಿ ಬಂದ ಪ್ರತಿನಿಧಿಗಳಿಗೂ ಇದು ಹೊಳೆಯುವುದಿಲ್ಲ ಅಥವಾ ಎಲ್ಲರೂ ಮುಂದಿನ ಚುನಾವಣೆ, ಈಗಿನ ಅಧಿಕಾರ ಬುಡಮೇಲು ಮಾಡಿಸುವುದು, ಮತಗಳಿಕೆ ಇದರಲ್ಲೇ ವ್ಯಸ್ತರೋ? ಸುರಕ್ಷೆ ಇದು ಜನತೆಗೆ ಪುಕ್ಕಟೆ ಸಿಗುವ ವಸ್ತುವಲ್ಲ, ಅದೂ ಈಗಿನ ಭಯೋತ್ಪಾದಕ ಪರಿಸರದಲ್ಲಿ. ಅದನ್ನು ಗಳಿಸಲು ಜನತೆಯ ಪ್ರಯತ್ನವೇ ಮುಖ್ಯ; ಯಾವ ಬೆಲೆಯನ್ನಾದರೂ ತೆರಲು ಸಿದ್ಧರಿರಬೇಕು.
ಏನಿದೆ ಮದ್ದು?
ಹಾಗಾದರೆ ಈ ಭಯೋತ್ಪಾದನೆಗೆ ಮದ್ದು ಇಲ್ಲವೇ?
ಇದೆ ಎನ್ನುತ್ತಾರೆ ರಘುರಾಮ ಅವರು ತಮ್ಮ – ` Everyman’s War’ ‘ – ಎಂಬ ಪುಸ್ತಕದಲ್ಲಿ. ಅದೆಂತಹುದು?
- ದೇಶದ ಒಳಗೆಯೇ ಹುದುಗಿಕೊಳ್ಳುವ ಭಯೋತ್ಪಾದಕರ ಭದ್ರನೆಲೆಯನ್ನು ಮತ್ತು ಅವರಿಗೆ ಆಶ್ರಯ ನೀಡುವ, ಅಡಗುದಾಣ ನೀಡುವ, ಸಹಾಯ ಒದಗಿಸುವ, ಮಾಹಿತಿ ಕೊಡುವಂಥವರನ್ನು ಹತ್ತಿಕ್ಕುವುದು. ಇಂಥ ಕಾರ್ಯನೀತಿಯಿಂದಾಗಿ ಸಹಾಯಕರು ಖಚಿತವಾಗಿ ಸೆರೆಹಿಡಿಯಲ್ಪಡುತ್ತಾರೆ ಎಂಬ ಭಯ ನೆಡುವಂತಿರಬೇಕು.
- ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಳ್ಳುವವರನ್ನು, ಸಹಾಯಕರನ್ನು, ಅನುಮೋದಿಸುವವರನ್ನು, ವಿಮುಖಗೊಳಿಸಲು ವ್ಯಾಪಕ ಪ್ರಚಾರ, ಮನೋವೈಜ್ಞಾನಿಕ ಪ್ರತಿದಾಳಿ ಮತ್ತು ಸತ್ಯಸಂಗತಿ-ವಾಸ್ತವಾಂಶಗಳ ಸಹಾಯದಿಂದ ಬ್ರೇನ್ವಾಶಿಂಗ್ ಮಾಡುವ ಶಕ್ತಿಯುತವಾದ ಸಂವಹನ ಕಾರ್ಯಕ್ರಮ.
ಇವುಗಳಲ್ಲೆಲ್ಲ ಜನತೆಯದೇ ಮುಖ್ಯ ಪಾತ್ರವಲ್ಲವೇ? ಇಂದಿನ ಈ ಕುಟಿಲ ಮತ್ತು ಜಿಗಣೆಯಂತೆ ರಕ್ತಹೀರಿ ಸಾಯಿಸುವ ಯುದ್ಧವನ್ನು ಗೆಲ್ಲುವುದು ಪ್ರತಿಯೊಬ್ಬ ಭಾರತೀಯನದೇ ಸಮರವಲ್ಲವೇ? ಇದರ ಅರಿವು, ವಿರೋಧಿ ಕ್ರಿಯಾಶೀಲತೆ, ಎಚ್ಚರ, ಆತ್ಮಸಮರ್ಪಣೆ ನಮಗೆ ಎಂದು ಬರಬೇಕು? ಎಂಥ ಬೆಲೆಯನ್ನಾದರೂ ತೆರುವುದು ನಮಗೆ ಅಸಮ್ಮತವೇ?