ರಾಜ್ಯದ ಪ್ರಸಿದ್ಧ ನಿವೃತ್ತ ದಕ್ಷ ಪೊಲೀಸ್ ಅಧಿಕಾರಿಯೊಬ್ಬರು ಈಚೆಗೆ ಬೆಂಗಳೂರಿನಲ್ಲಿ ಜರಗಿದ ಸಮಾರಂಭವೊಂದರಲ್ಲಿ ಭಾಷಣ ಮಾಡುವಾಗ, ಇಂದು ನಮ್ಮ ಯುವಜನರಿಗೆ ಏನಾಗಿದೆಯೋ ಗೊತ್ತಿಲ್ಲ; ದೇಶದ ರಕ್ಷಣೆಗಾಗಿ ಹೋರಾಡಿದ ಸೇನಾನಾಯಕರ ಮತ್ತು ವೀರಯೋಧರ ಹೆಸರೂ ಗೊತ್ತಿರುವುದಿಲ್ಲ;ಯಾವುದೋ ಚಿತ್ರನಟ(ನಟಿ)ರ ಕಟೌಟಿಗೆ ಹಾಲೆರೆಯುತ್ತಿರುತ್ತಾರೆ ಎಂದು ಬೇಸರದಿಂದ ಹೇಳಿದರು. ಅವರು ಉಲ್ಲೇಖಿಸಿರುವುದು ಅಪರೂಪದ ಸಂಗತಿಯೇನೂ ಅಲ್ಲ; ಬದಲಾಗಿ ಪ್ರತಿ ದಿನವೂ ಕಾಣಲು ಸಿಗುವಂಥದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಗೆಗೆ ಕೂಡ ಈ ಮಾತನ್ನು ಅನ್ವಯಿಸಬಹುದು. ಚಿತ್ರದ ನಟ-ನಟಿಯರಿಂದ ಕನ್ನಡ ಭಾಷೆ-ಸಂಸ್ಕೃತಿಗಳಿಗೆ ಭಾರೀ ಪ್ರಯೋಜನವಾಗುತ್ತಿದೆ; ಬಹುದೊಡ್ಡ ಸೇವೆ ಸಲ್ಲುತ್ತಿದೆ ಎಂದು ನಾವು ಭಾವಿಸುತ್ತಿದ್ದೇವೆ ಅಥವಾ ನಮಗೆ ಹಾಗೆಂದು ನಂಬಿಸಲಾಗುತ್ತಿದೆ. ಅದೇ ವೇಳೆ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳಿಗೆ ಅಮೂಲ್ಯ ಸೇವೆ ಸಲ್ಲಿಸಿದ ಸಂಶೋಧಕರು, ವಿದ್ವಾಂಸರು, ಸಾಹಿತಿ-ಕಲಾವಿದರು ಎಷ್ಟೋ ಸಲ ನಮ್ಮ ಗಮನಕ್ಕೇ ಬರುವುದಿಲ್ಲ. ಯುವಜನ ಸಮುದಾಯವಂತೂ ಅತ್ತ ಗಮನ ಹರಿಸುವ ವ್ಯವಧಾನವನ್ನೇ ಹೊಂದಿಲ್ಲ ಎನಿಸುತ್ತದೆ.
ಸ್ವಾತಂತ್ರ್ಯಕ್ಕೆ ಮುನ್ನ ವಿವಿಧ ಪ್ರಾಂತ, ಸಂಸ್ಥಾನಗಳ ನಡುವೆ ಹರಿದುಹಂಚಿಕೋಗಿದ್ದ ಕನ್ನಡ ನಾಡಿನ ಪರಿಸ್ಥಿತಿ ಹೇಗಿತ್ತು? ಹಾಗಿದ್ದ ಸ್ಥಿತಿ ಹೋಗಿ ಈಗ ನಾವು ಕಾಣುವ ವಿಶಾಲವಾದ ಕರ್ನಾಟಕ ನಿರ್ಮಾಣಗೊಂಡದ್ದು ಹೇಗೆ? ಅದರ ಹಿಂದೆ ಯಾರೆಲ್ಲ ಇದ್ದಾರೆ? ಕನ್ನಡದಲ್ಲಿ ಏನಿದೆ, ಏನಿತ್ತು ಎಂದು ಕೇಳಿದವರಿಗೆ, ಇಲ್ಲಿ ಇಂಥದೆಲ್ಲ ಇತ್ತು ಎಂದು ಸಂಶೋಧನೆಯ ಆಧಾರದೊಂದಿಗೆ ಸಾಧಿಸಿ ತೋರಿಸಿದವರು ಯಾರು? ಕನ್ನಡದಲ್ಲಿ ಪ್ರಾಚೀನ ಸಾಹಿತ್ಯವಿದ್ದುದಷ್ಟೇ ಅಲ್ಲ; ಹೊಸ ಯುಗದಲ್ಲೂ ಈ ಭಾಷೆಯಲ್ಲಿ ಗಟ್ಟಿಯಾದ ಸಾಹಿತ್ಯ ನಿರ್ಮಾಣವಾಗಿದೆ, ಈಗಲೂ ನಿರ್ಮಾಣವಾಗುತ್ತಿದೆ ಎಂದು ತೋರಿಸಿದವರು ದೊಡ್ಡವರಾಗ ಬೇಕಲ್ಲವೆ? ಈಗ ಇರುವಂಥದನ್ನು ತೋರಿಸುವುದಕ್ಕಿಂತ ಹಿಂದೆ ಏನೆಲ್ಲ ಇತ್ತು? ಯಾವ ರಾಜ ಮನೆತನಗಳು ಈ ನಾಡನ್ನು ಆಳಿದವು? ನಾಡಿನ ಘನತೆ-ಗೌರವಗಳನ್ನು ಹೇಗೆ ಎತ್ತಿ ಹಿಡಿದವು? ಕಲೆ, ವಾಸ್ತುಕಲೆ, ಶಿಲ್ಪ, ಸಂಗೀತ, ನೃತ್ಯ ಇತ್ಯಾದಿಗಳಿಗೆ ಎಂತಹ ಕೊಡುಗೆ ನೀಡಿದವು? ಈ ನಾಡಿನ ಹಿರಿಮೆ-ಗರಿಮೆ ಏನು – ಮುಂತಾಗಿ ನಮ್ಮ ಈ ಕನ್ನಡ ನಾಡಿನ ಗತ ಇತಿಹಾಸ, ವೈಭವಗಳನ್ನು ಸಂಶೋಧನೆಯ ಬಲದಿಂದ ಸಾಧಿಸಿ ತೋರಿಸಿ ಜನರ ಮುಂದಿಟ್ಟವರು ನಾಡಿನ ಅಸ್ಮಿತೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅಂತಹ ಮಹಾನ್ ಸಾಧಕರ ನಡುವೆ ಎದ್ದುಕಾಣುವ ಒಂದು ಹೆಸರು ಈಚೆಗೆ ನಮ್ಮನ್ನಗಲಿದ ಇತಿಹಾಸಕಾರ, ಸಂಶೋಧಕ ಡಾ| ಸೂರ್ಯನಾಥ ಯು. ಕಾಮತ್ ಅವರದ್ದು.
ಸಾಧಕರಲ್ಲಿ ಹಲವು ಬಗೆಯವರಿರುತ್ತಾರೆ. ಕೆಲವರಿಗೆ ದೊಡ್ಡದಾದ ಹಿನ್ನೆಲೆಯಿದ್ದು ಅದರಿಂದ ಅವರಿಗೆ ಸಾಧನೆಯ ಹಾದಿ ಸುಲಭದಲ್ಲಿ ಕೈಗೆಟಕುತ್ತದೆ; ಅಂಥವರು ಸ್ವಲ್ಪ ಮಾಡಿದರೂ ದೊಡ್ಡದಾಗಿ ಕಾಣಿಸುತ್ತದೆ; ಅವರು ಮಾಡಿದ್ದನ್ನು ಕೊಂಡಾಡುವ ಒಂದು ಜನವರ್ಗ ಕೂಡ ಇರಬಹುದು. ಇನ್ನು ಕೆಲವು ಸಾಧಕರು ಬರಿಗೈಯಿಂದ ಮೇಲೆದ್ದು ಬಂದವರು. ಹೇಳುವಂತಹ ಯಾವ ಹಿನ್ನೆಲೆ ಇರದಿದ್ದರೂ ಸಮಯ-ಸಂದರ್ಭಗಳಿಗನುಸಾರವಾಗಿ ದೊರೆಯುವ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಕಾಲಾನಂತರದಲ್ಲೂ ಜನ ನೆನಪಿಡುವಂತಹ ಸಾಧನೆಗಳನ್ನು ಗೈದು ತೋರಿಸುವವರು. ಸೂರ್ಯನಾಥ ಕಾಮತ್ ಈ ಎರಡನೇ ಬಗೆಯ ಸಾಧಕರು.
ಬಾಲ್ಯದ ಪ್ರಭಾವಗಳು
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಏಪ್ರಿಲ್ ೨೬, ೧೯೩೭ರಂದು ಅವರ ಜನನ; ತಂದೆ ಉಪೇಂದ್ರ ಕಾಮತ್ ಪುಟ್ಟ ಹೊಟೇಲ್ ಮಾಲೀಕರು. ತಾಯಿ ಭಾಗೀರಥಿ. ಆರು ಗಂಡು, ಮೂರು ಹೆಣ್ಣು ಮಕ್ಕಳ ತುಂಬು ಸಂಸಾರ. ಸೂರ್ಯನಾಥ ಕಿರಿಯವರು. ಒಬ್ಬ ಅಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಒಂದೆರಡು ದಿನ ಜೈಲುವಾಸ ಅನುಭವಿಸಿ ಬಂದಿದ್ದರು. ಸೂರ್ಯನಾಥ ಚಿಕ್ಕಂದಿನಿಂದಲೇ ತೀವ್ರವಾದ ಭಾವನೆಗಳಿದ್ದ ಬಾಲಕ. ಮನೆಯ ದನಗಳೆಂದರೆ ತುಂಬ ಪ್ರೀತಿ; ಅವು ಮನೆಗೆ ಬರಲು ತಡವಾದರೆ ಅಳುತ್ತಿದ್ದ. ಮನೆ ಹಿಂಭಾಗದ ಗದ್ದೆ ಬಯಲಿನಲ್ಲಿ ಯಕ್ಷಗಾನ, ಸರ್ಕಸ್, ನಾಟಕ ಮುಂತಾದವು ನಡೆಯುತ್ತಿದ್ದವು. ಚಿಕ್ಕ ಮಗುವಾಗಿದ್ದಾಗಲೇ ಮನೆಯವರೊಂದಿಗೆ ಜಾಗ ಕಾದಿರಿಸಿ ರಾತ್ರಿ ಇಡೀ ಯಕ್ಷಗಾನ ನೋಡುವುದು; ಅಲ್ಲೇ ನಿದ್ರೆ; ಹಾಸ್ಯ, ಬಣ್ಣದ ವೇಷಗಳಿಗೆ ಎದ್ದು ನೋಡುವುದು, ಬೆಳಗ್ಗೆ ಅಲ್ಲಿ ಉದುರಿದ್ದ ಮಣಿಗಳನ್ನು ಸಂಗ್ರಹಿಸುವುದು. ಅಂತೂ ಯಕ್ಷಗಾನದ ನೂರಾರು ಸನ್ನಿವೇಶಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವು.
ಬಾಲ್ಯದ ಇನ್ನೊಂದು ಪ್ರೇರಣೆ ಭಜನೆಗಳಿಗೆ ಸಂಬಂಧಿಸಿದ್ದು. ಮನೆಯಲ್ಲಿ ದಿನವೂ ಸಂಜೆ ಭಜನೆ ಮಾಡುತ್ತಿದ್ದರು. ಮಕ್ಕಳೊಂದಿಗೆ ದೊಡ್ಡವರೂ ಸೇರಿಕೊಳ್ಳುತ್ತಿದ್ದರು. ಮರಾಠಿ ಅಭಂಗಗಳು, ಕಬೀರರ ದೋಹಾ, ಪುರಂದರ, ಕನಕದಾಸರ ಪದ್ಯಗಳನ್ನೆಲ್ಲ ಹಾಡುತ್ತಿದ್ದರು. ಶಾಲೆಯಲ್ಲಿ ತಿಂಗಳಿಗೊಮ್ಮೆ ಭಜನೆ ಇತ್ತು. ಒಟ್ಟಿನಲ್ಲಿ ನೂರಾರು ಭಜನೆಗಳು ಸೂರ್ಯನಾಥರಿಗೆ ಕಂಠಪಾಠವಿದ್ದವು. ಹೊಟೇಲಿಗೆ ಬರುವ ಪತ್ರಿಕೆ ಓದುವುದು ಮತ್ತು ಜನರ ಮಾತು, ಚರ್ಚೆ ಕೇಳುವುದು ಆಗಲೇ ಪ್ರಭಾವ ಬೀರಿದ್ದವು.
ಒಂದನೇ ತರಗತಿಯಲ್ಲಿದ್ದಾಗ ಕ್ವಿಟ್ ಇಂಡಿಯಾ ಚಳವಳಿ ಬಂತು. ಬೆಳ್ತಂಗಡಿಯಲ್ಲಿ ಸುಮಾರು ಎರಡು ತಿಂಗಳು ಪ್ರತಿದಿನ ೪೦-೫೦ ಜನ ಮೆರವಣಿಗೆ ನಡೆಸುತ್ತಿದ್ದರು; ಬಾಲಕ ಸೂರ್ಯನಾಥನೂ ಅದರಲ್ಲಿ ಭಾಗಿ. ಸುಮಾರು ಅದೇ ಹೊತ್ತಿಗೆ ವಿನಾಯಕ ಶೆಣೈ ಎನ್ನುವವರು ಸಂಘ ಪ್ರಚಾರಕರಾಗಿ ಬೆಳ್ತಂಗಡಿಗೆ ಬಂದರು; ಅವರೊಂದಿಗೆ ಪ್ರತಿದಿನ ಬೆಳಗ್ಗೆ ಆರೆಸ್ಸೆಸ್ ಶಾಖೆಗೆ ಹೋಗುವುದು ಅಭ್ಯಾಸವಾಯಿತು.
ದಣಿವರಿಯದ ಓದು
ಕಲಿಯುವುದರಲ್ಲಿ ಚುರುಕಾಗಿದ್ದ ಕಾರಣ ಚೆನ್ನಾಗಿ ಕಲಿಯಲೆಂದು ಐದನೇ ತರಗತಿಗೆ ಬಂಟ್ವಾಳದ ದೊಡ್ಡ ಶಾಲೆಗೆ ಸೇರಿಸಿದರು. ನೇತ್ರಾವತಿ ನದಿಗೆ ತಾಗಿಕೊಂಡಿದ್ದ ಎರಡು ಮೈಲಿ ದೂರದ ಮಣಿಹಳ್ಳದ ಅಕ್ಕ ಉಮಾ ಅವರ ಮನೆಯಲ್ಲಿ ವಾಸ. ಭಾವ ವಿಠಲ ಪೈ ಅವರು ಕೂಡ ಹೊಟೇಲ್ ನಡೆಸುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ನಾವೂರು ನಾರಾಯಣ ಆಚಾರ್ಯ ಎಂಬವರಿಂದ ಪತ್ರಿಕೆ ಓದುವ ಹವ್ಯಾಸ, ರಾಜಕೀಯ ಪ್ರಜ್ಞೆ, ಸಾಹಿತ್ಯ ಪ್ರೀತಿಗಳು ಬೆಳೆದವು; ಅವರು ಖಾದಿಧಾರಿ. ಅವರಿಂದಾಗಿ ಸಂಯುಕ್ತ ಕರ್ನಾಟಕ, ಪ್ರಜಾಮತ, ಕರ್ಮವೀರ, ಚಿತ್ರಗುಪ್ತ ಮತ್ತು ಜನಪ್ರಗತಿ ಪತ್ರಿಕೆಗಳು ಅಲ್ಲಿ ಓದಲು ಸಿಗುತ್ತಿದ್ದವು. ಬಂಟ್ವಾಳ ಪಂಚಾಯತ್ ಗ್ರಂಥಾಲಯದಲ್ಲಿ ೫ ರೂ. ಠೇವಣಿ ಇಟ್ಟರೆ ಎರಡು ಪುಸ್ತಕಗಳನ್ನು ತಂದು ಓದಬಹುದಿತ್ತು. ಅಕ್ಕನ ಮಗಳು ಪ್ರೇಮಾ ಅದರಲ್ಲಿ ಜೊತೆಗಾರ್ತಿ. ನೇತ್ರಾವತಿ ನದಿ ಆಚೆಗಿನ ಶಂಭೂರಿನಿಂದಲೂ ಪುಸ್ತಕ ತಂದು ಓದುತ್ತಿದ್ದರು; ಕಥೆ-ಕಾದಂಬರಿಗಳಲ್ಲದೆ ಗಾಂಧಿ ಆತ್ಮಕಥೆ ‘ಸತ್ಯಶೋಧನೆ’ಯನ್ನೂ ಓದಿದರು.
ಹೈಸ್ಕೂಲ್ ಲೈಬ್ರರಿಯಲ್ಲೂ ೫ ರೂ. ಠೇವಣಿ ಇಟ್ಟರೆ ಎರಡು ಪುಸ್ತಕ ಕೊಡುತ್ತಿದ್ದರು. ೯ನೇ ತರಗತಿಯಲ್ಲಿದ್ದಾಗ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ಒಂದೇ ದಿನದಲ್ಲಿ ಓದಿದರಂತೆ. ಕಾರಂತರು ಅವರ ಪ್ರಿಯ ಸಾಹಿತಿ. ಮಾಸ್ತಿ, ರಾಜರತ್ನಂ, ಶ್ರೀರಂಗ, ಕುವೆಂಪು ಅವರೆಲ್ಲ ಇಷ್ಟ; ಜೊತೆಗೆ ಅವರಂತೆ ತಾನು ಕೂಡ ಎಂ.ಎ. ಕಲಿತರೆ ಸಾಹಿತಿ ಆಗಬಹುದೆಂಬ ಕನಸು. ಆರನೇ ಫಾರ್ಮ್ (ಎಸ್ಸೆಸ್ಸೆಲ್ಸಿ)ನಲ್ಲಿದ್ದಾಗ ಶಾಲೆಯ ಕೈಬರಹದ ಪತ್ರಿಕೆ ‘ಮಿತ್ರವಾಣಿ’ಗೆ ಅವರೇ ಸಂಪಾದಕರು. ಪ್ರೌಢಶಾಲಾ ವಿದ್ಯಾರ್ಥಿಯಾಗಿ ಅನೇಕ ಭಾಷಣಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ತಂದರು. ಶಾಲಾ ಮುಖ್ಯೋಪಾಧ್ಯಾಯ ಪಾಂಡುರಂಗ ಬಾಳಿಗರು ಮತ್ತು ನಾವೂರಿನ ಧರ್ಮಪಾಲ ಶೆಟ್ಟರ ಪ್ರೇರಣೆಯಿಂದ ಸೂರ್ಯನಾಥ ಖಾದಿಧಾರಿಯಾದರು; ಶೆಟ್ಟರು ಓದಲು ಪುಸ್ತಕಗಳನ್ನು ಕೂಡ ಕೊಡುತ್ತಿದ್ದರು. ಹಾಸನದಲ್ಲಿದ್ದ ಅಕ್ಕ ಸಂಜೀವಿ ಒಂದು ಚರಖಾ ಕೊಟ್ಟಿದ್ದು ಅದರಲ್ಲಿ ಸೂರ್ಯನಾಥ ಪ್ರತಿದಿನ ನೂಲು ತೆಗೆಯುತ್ತಿದ್ದರು.
೧೯೪೮ರಲ್ಲಿ ಗಾಂಧಿ ಕೊಲೆ ನಡೆದಾಗ ಅದಕ್ಕೆ ಆರೆಸ್ಸೆಸ್ ಕಾರಣವೆಂಬ ಆರೋಪ ಬಂದರೂ ಸೂರ್ಯನಾಥ ಅದನ್ನು ನಂಬಲಿಲ್ಲ; ಅವರ ಅಣ್ಣ ದೇವದಾಸ ಕಾಮತ್ ಆರೆಸ್ಸೆಸ್ ಸ್ವಯಂಸೇವಕರು. ೧೯೫೨ರಲ್ಲಿ ಮೊದಲ ಮಹಾಚುನಾವಣೆ ನಡೆದಾಗ ಇವರು ಕಾಂಗ್ರೆಸ್ ಪರ ಪ್ರಚಾರ ಮಾಡಿದರು. ವಿಧಾನಸಭೆಗೆ (ಮದ್ರಾಸ್) ವೈಕುಂಠ ಬಾಳಿಗರು ಸ್ಪರ್ಧಿಸಿದ್ದರೆ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬೆನಗಲ್ ಶಿವರಾಯರು. ಪ್ರಚಾರಕ್ಕಾಗಿ ಹತ್ತಿಪ್ಪತ್ತು ದಿನ ಶಾಲೆಗೇ ಹೋಗಲಿಲ್ಲವಂತೆ. ಆಗ ಅವರ ಮೇಲೆ ನೆಹರು ಪ್ರಭಾವವಿತ್ತು. ಆರೆಸ್ಸೆಸ್ ಬಗ್ಗೆ ವಿಮರ್ಶಾತ್ಮಕ ಧೋರಣೆ ಹೊಂದಿದ್ದರು. ೧೯೫೩ರಲ್ಲಿ ಬಂಟ್ವಾಳದಲ್ಲಿ ಸಂಘದ ಶಾಖೆ ಆರಂಭವಾದಾಗ ಇವರು ಅದಕ್ಕೆ ಸೇರಲಿಲ್ಲ.
ಆರೆಸ್ಸೆಸ್ ನಿಷ್ಠೆ
೧೯೫೩ರಲ್ಲಿ ಮೆಟ್ರಿಕ್ ಪಾಸಾಗಿ ಇಂಟರ್ಗೆ ಮಂಗಳೂರಿನ ಅಲೋಶಿಯಸ್ ಕಾಲೇಜಿಗೆ ಸೇರಿದರು. ಅಲ್ಲಿ ಎರಡು ವರ್ಷ ಸೋದರ ಮಾವ ನರಸಿಂಹ ಬಾಳಿಗರ ಮನೆಯಲ್ಲಿದ್ದರು. ಅವರ ಮಕ್ಕಳು, ನೆರೆಮನೆಯ ಒಬ್ಬಾತ ಸಂಘದ ಸ್ವಯಂಸೇವಕರು. ದೇಶವಿಭಜನೆ, ಅದರಿಂದಾದ ರಕ್ತಪಾತ, ಕಾಂಗ್ರೆಸ್ನ ದುರ್ಬಲ ನೀತಿ, ನೆಹರು ಕಾಶ್ಮೀರ ಸಮಸ್ಯೆಗೆ ಕಾರಣರಾದದ್ದು, ಜನಸಂಘದ ಅಧ್ಯಕ್ಷ ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ಮುಂತಾದ ವಿಷಯಗಳ ಬಗ್ಗೆ ಬಿಸಿ ಚರ್ಚೆಗಳು ನಡೆಯುತ್ತಿದ್ದವು. ಇವೆಲ್ಲ ಕಾಂಗ್ರೆಸಿಗನಾದ ನನ್ನ ಮನಸ್ಸನ್ನು ಪರಿವರ್ತಿಸಿದವು ಎಂದು ಕಾಮತರು ಒಂದೆಡೆ ಹೇಳಿದ್ದಾರೆ. ವಿಭಜನೆ ಕಾಲದ ಕಥಾನಕವಿದ್ದ ಪ್ರೊ| ಎ.ಎನ್. ಬಾಲಿ ಅವರ Now it can be told (ಈಗ ಅದನ್ನು ಹೇಳಬಹುದು) ಎನ್ನುವ ಪುಸ್ತಕ ಅವರ ಮೇಲೆ ಗಾಢ ಪ್ರಭಾವ ಬೀರಿತು. ಪ್ರತಿದಿನ ಶಾಖೆಗೆ ಹೋಗಲಾರಂಭಿಸಿದರು. ಆಗ ಚಂದ್ರಶೇಖರ ಭಂಡಾರಿ, ಕೆ. ರಮಾನಂದ ಆಚಾರ್ಯ ಹಾಗೂ ಗೋಪಾಲಕೃಷ್ಣ ರಾವ್ (ಸುರತ್ಕಲ್) ಅವರ ಪರಿಚಯವಾಯಿತು. ಮಂಗಳೂರು ಜಿಲ್ಲಾ ಪ್ರಚಾರಕರಾಗಿದ್ದ ಶಂಕರ ದಿನಕರ ಕಾಣೆ ಅವರಿಂದ ಬಹಳಷ್ಟು ಪ್ರಭಾವಿತರಾದರು. ಬಿಹಾರದ ಬರಗಾಲ ಸಂತ್ರಸ್ತರಿಗಾಗಿ ಉಡುಪಿ ಬಸ್ನಿಲ್ದಾಣದಲ್ಲಿ ಜನರಿಂದ ಬೇಡಿ ಹಣ ಸಂಗ್ರಹಿಸಿದ್ದು ಅವರ ಆಗಿನ ಒಂದು ನೆನಪು. ಆಗ ಇನ್ನೊಂದು ಸಮಸ್ಯೆ ಆಯಿತು. ಒಬ್ಬ ಅಣ್ಣ ಸಂಘದ ಶಾಖೆಗೆ ಹೋಗುವುದನ್ನು ವಿರೋಧಿಸಿದರು; ಮಾತ್ರವಲ್ಲ, ಇವರ ಶಿಕ್ಷಣಕ್ಕೆ ಮಾಡುತ್ತಿದ್ದ ಸಣ್ಣ ಪ್ರಮಾಣದ ಸಹಾಯವನ್ನು ಕೂಡ ನಿಲ್ಲಿಸಿದರು; ಆದರೆ ಕಾಮತರ ಆರೆಸ್ಸೆಸ್ ಸಂಬಂಧ ಬಿಡಲಿಲ್ಲ; ಗಾಢವಾಗುತ್ತಾ ಹೋಯಿತು. ೧೯೫೫ರಲ್ಲಿ ಸಂಘದ ಒಂದು ತಿಂಗಳ ಶಿಕ್ಷಾವರ್ಗಕ್ಕಾಗಿ ಮದ್ರಾಸಿಗೆ ಹೋದರು.
ಆಹೊತ್ತಿಗೆ ಸಂಜೀವಿ ಅಕ್ಕ ಧಾರವಾಡದಲ್ಲಿದ್ದರು. ಮದ್ರಾಸಿನಿಂದ ಧಾರವಾಡಕ್ಕೆ ಹೋಗಿ ಜನತಾ ಕಾಲೇಜಿನಲ್ಲಿ ಬಿ.ಎ.ಗೆ ಸೇರಿದರು. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮತ್ತು ಕನ್ನಡ ಪ್ರಮುಖ ವಿಷಯಗಳು. ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಪ್ರೊ| ಕಾಳೆ, ರಾ.ಯ. ಧಾರವಾಡಕರ, ಸರೋಜಿನಿ ಮಹಿಷಿ, ಜಿ.ಡಿ. ನಾಡಕರ್ಣಿ ಅವರೆಲ್ಲ ಅಲ್ಲಿ ಗುರುಗಳು. ಕಾಲೇಜಿನಲ್ಲಿ ಉತ್ತಮ ಭಾಷಣಕಾರ ಎಂಬ ಹೆಸರಿತ್ತು. ಐತಿಹಾಸಿಕ ವಿಷಯಗಳನ್ನು ಎತ್ತಿಕೊಂಡು ಕಥೆ ಬರೆಯಲು ಆರಂಭಿಸಿದರು; ‘ಹರಿಶರಣ ಕೌರ್’ ಅವರ ಮೊದಲ ಕಥೆ. ‘ಬೆಳಗಿದ ತಾರೆಗಳು’ ಎಂಬ ಅವರ ಐತಿಹಾಸಿಕ ಕಥಾಸಂಗ್ರಹ ಪ್ರಕಟಗೊಂಡಿತು. ಪದವಿ ಪರೀಕ್ಷೆ ಮುಗಿಯುವಾಗ ತಾಯಿಗೆ ತೀವ್ರ ಅನಾರೋಗ್ಯ ಎಂಬ ಸುದ್ದಿ ಬಂತು. ಊರಿಗೆ ಧಾವಿಸಿದರು; ಪದವಿಯಲ್ಲಿ ಮಗ ಉತ್ತೀರ್ಣನಾದದ್ದು ಕೇಳಿ ತೃಪ್ತರಾಗಿ ತಾಯಿ ವಿದಾಯ ಹೇಳಿದರು. ತಂದೆ ಸೂರ್ಯನಾಥರಿಗೆ ಏಳು ವರ್ಷವಿದ್ದಾಗಲೇ ಕಾಲವಾಗಿದ್ದರು.
ಸಾಲೆತ್ತೂರ್ ಶಿಷ್ಯ
ಧಾರವಾಡ ವಿಶ್ವವಿದ್ಯಾಲಯದಲ್ಲಿ ಓದು ಮುಂದುವರಿಯಿತು; ಇತಿಹಾಸ ಎಂ.ಎ. ಗುರುಗಳಾಗಿ ಅಲ್ಲಿ ಪ್ರೊ| ಭಾಸ್ಕರಾನಂದ ಸಾಲೆತ್ತೂರ್ ಮತ್ತು ಪ್ರೊ| ಜಿ.ಎಸ್. ದೀಕ್ಷಿತ್ ದೊರೆತರು. ಸಾಲೆತ್ತೂರ್ ಅವರಂಥ ಬೇರೆ ಅಧ್ಯಾಪಕರಿಲ್ಲ. ಭಾರತ, ಜಗತ್ತು ಮತ್ತು ಕರ್ನಾಟಕದ ಸಂಶೋಧನ ವಿಧಾನ, ಸಂಶೋಧನ ಸಾಮಗ್ರಿ ಈ ಎಲ್ಲ ಸಂಗತಿಗಳನ್ನು ಅರೆದು ಕುಡಿಸಿದರು. ‘ಅವರ್ ಕಂಟ್ರಿ’ ಎಂದು ಕರ್ನಾಟಕ ಇತಿಹಾಸದ ಬಗ್ಗೆ ಆಗಾಗ ಒತ್ತಿ ಹೇಳುತ್ತಾ ನನಗೆ ರಕ್ತಗತ ಮಾಡಿದರು. ಮಯೂರಶರ್ಮನ ಸಾಧನೆಯನ್ನು ರೋಮಾಂಚಕವಾಗಿ ವಿವರಿಸಿದರು; ವಿಜಯನಗರದ ಘನತೆಯನ್ನು ತಿಳಿಸಿಕೊಟ್ಟರು; ರಕ್ಕಸತಂಗಡಿ ಪರಾಜಯಕ್ಕೆ ಕಾರಣನಾದ ರಾಮರಾಯ ‘ಜವಾಹರಲಾಲ್ ನೆಹರೂ ದೊಡ್ಡಣ್ಣ’ ಎಂದರು. ಪಾಕಿಸ್ತಾನದ ಧೂರ್ತತನ, ಚೀನಾ ಬೆನ್ನಿನಲ್ಲಿ ಇರಿಯುವ ಸಾಧ್ಯತೆ, ಕೃಷ್ಣಮೆನನ್ನರ ಅನರ್ಥಕಾರಿ ನೀತಿಗಳನ್ನು ಇತಿಹಾಸದ ಉದಾಹರಣೆಗಳೊಂದಿಗೆ ಬಿಡಿಸಿ ಹೇಳಿದರು. ಅದರಿಂದ ಇತಿಹಾಸ ನನ್ನದಾಯಿತು. ಭಾರತದ ಭವಿಷ್ಯದ ಬಗ್ಗೆ ಚಿಂತಿಸುವ ಜವಾಬ್ದಾರಿ ನನಗೆ ಬಂತು. ಕರ್ನಾಟಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕಾದ ಆವಶ್ಯಕತೆ ಒಡಮೂಡಿತು. ಇತಿಹಾಸ ಸಂಶೋಧನೆ ಎಂದರೇನೆಂದು ಆಗಲೇ ಗೊತ್ತಾಗಿತ್ತು. ಅವರ ಪೇಪರಿನಲ್ಲಿ ೭೦ ಅಂಕ ಬಂತು (ಆ ಕಾಲಕ್ಕೆ ತುಂಬ ಜಾಸ್ತಿ) ಎಂದು ಸೂರ್ಯನಾಥ ಕಾಮತ್ ತಮ್ಮ ನೆಚ್ಚಿನ ಈ ಗುರುಗಳ ಬಗ್ಗೆ ಹೇಳಿದ್ದಾರೆ.
ಅವರ ವ್ಯಕ್ತಿತ್ವದಲ್ಲಿ ಆರಂಭದಿಂದಲೂ ಸಾಹಿತ್ಯ ಮತ್ತು ಇತಿಹಾಸಗಳು ಒಟ್ಟಾಗಿ ಮಿಳಿತವಾಗಿ ರೂಪುಗೊಂಡ ಹೊಸ ಪಾಕವೊಂದು ದ್ರವಿಸತೊಡಗಿತ್ತು; ಮತ್ತು ಸಂಘದ ಶಾಖೆಗಳಲ್ಲಿ ಸದಾ ಕೇಳುತ್ತಿದ್ದ ದೇಶಮಾತೆಯ ಪೂಜೆಗೆ ಅನಾಘ್ರಾಣಿತ ಪುಷ್ಪಗಳೇ ಬೇಕು ಎಂಬ ಮಾತು ಯಾವಾಗಲೂ ಅವರ ಕಿವಿಯಲ್ಲಿ ಮೊಳಗುತ್ತಿತ್ತು. ಎಂ.ಎ. ಮುಗಿಯುವ ಹೊತ್ತಿಗೆ ಕಾಮತ್ ಗುರು ಸಾಲೆತ್ತೂರರ ಪ್ರೇರಣೆಯಂತೆ ಕರ್ನಾಟಕ ಇತಿಹಾಸ ಅಧ್ಯಯನಕ್ಕೆ ತಮ್ಮ ಬದುಕನ್ನು ಮುಡಿಪಾಗಿಟ್ಟರು; ಆದರೆ ಪುಟ್ಟದೊಂದು ವಿರಾಮದ ಬಳಿಕ. ಕನಿಷ್ಠ ಮೂರು ವರ್ಷ ಆರೆಸ್ಸೆಸ್ನ ಪೂರ್ಣಕಾಲೀನ ಪ್ರಚಾರಕರಾಗಿ ಸೇವೆ ಸಲ್ಲಿಸಬೇಕೆಂದು ಮೊದಲೇ ತೀರ್ಮಾನಿಸಿದ್ದರು. ಸಂಘದಿಂದ ಅವರನ್ನು ಗೋಕಾಕ್ ಜಿಲ್ಲಾ ಪ್ರಚಾರಕರಾಗಿ ನೇಮಿಸಿದರು. ವ್ಯಾಪಕ ಸಂಚಾರ, ಸಂಘದ ಶಾಖೆಗಳ ರಚನೆ. ಸಂಘದ ಕಛೇರಿಕೋಣೆಯೇ ವಾಸಸ್ಥಳವಾದರೆ ಕರೆಯುವ ಸದಸ್ಯಬಂಧುಗಳ ಮನೆಗಳಲ್ಲಿ ಊಟ, ಉಪಾಹಾರ. ಕರ್ನಾಟಕ ಜನಜೀವನದ ರಾಜಕೀಯ ಹಿನ್ನೆಲೆಯನ್ನು ತಿಳಿಯುವ ಸುವರ್ಣಾವಕಾಶ ಅದಾಗಿತ್ತು. ಸಂಘಶಿಕ್ಷಾವರ್ಗದಲ್ಲಿ ಶಿಕ್ಷಕನಾಗಿ ಭಾಗವಹಿಸಿದಾಗ ಇಡೀ ರಾಜ್ಯದ ಜನರ ರೀತಿನೀತಿ ನಡವಳಿಗಳ ಪರಿಚಯವಾಯಿತು ಎಂದು ಕಾಮತ್ ಹೇಳಿದ್ದಾರೆ. ಮೂರನೇ ವರ್ಷ ಬೆಳಗಾವಿ ಕೇಂದ್ರವಾಗಿ ಜಿಲ್ಲಾ ಪ್ರಚಾರಕ್ ಆಗಿದ್ದರು. ಬಿಡುವಿಲ್ಲದೆ ಸಂಘದ ಕಾರ್ಯಗಳಲ್ಲಿ ತೊಡಗಿದ್ದ ಅವರಿಗೆ ಪಿತ್ತಕೋಶ(ಲಿವರ್)ದ ತೀವ್ರ ಅನಾರೋಗ್ಯ ಉಂಟಾಯಿತು. ವಿಶ್ರಾಂತಿಗೆ ಧಾರವಾಡಕ್ಕೆ ಬಂದಾಗ ಸಾಲೆತ್ತೂರರು ಸಂಶೋಧನೆ(ಪಿಎಚ್.ಡಿ.)ಯನ್ನು ಕೈಗೊಳ್ಳುವಂತೆ ಸೂಚಿಸಿದರು; ವಿಷಯ ‘ವಿಜಯನಗರ ಕಾಲದಲ್ಲಿ ತುಳುನಾಡು’. ಹೀಗೆ ೧೯೬೨ರಲ್ಲಿ ಪ್ರಚಾರಕ್ ವೃತ್ತಿಯಿಂದ ನಿವೃತ್ತಿ ಪಡೆದರು.
ಧಾರವಾಡದಲ್ಲಿ ಪ್ರಬಂಧದ ವಿಷಯಸಂಗ್ರಹ ಮುಗಿಸುವಷ್ಟರಲ್ಲಿ ಸಾಲೆತ್ತೂರ್ ನಿವೃತ್ತರಾದರು. ಸಂಶೋಧನೆಯನ್ನು ಮುಂಬಯಿಯಲ್ಲಿ ಮುಂದುವರಿಸುವಂತೆ ಹೇಳಿ ಕಳುಹಿಸಿಕೊಟ್ಟರು. ಪ್ರೊ| ಕೊಯಿಲೊ ಅವರ ಮಾರ್ಗದರ್ಶನದಲ್ಲಿ ಎರಡು ವರ್ಷಗಳಲ್ಲಿ ಸಂಪ್ರಬಂಧ(ಥೀಸಿಸ್)ವನ್ನು ಮುಗಿಸಿದರು. ಆದರೆ ಆರಂಭದ ಏಳೆಂಟು ತಿಂಗಳು ಆದಾಯವಿಲ್ಲದೆ ಮುಂಬಯಿವಾಸ ದುರ್ಭರವಾಗಿತ್ತು. ಬಳಿಕ ಮದ್ದೂರು ಸುಬ್ಬರಾವ್ ಎಂಬವರ ಪ್ರಭಾವದಿಂದ ‘ಫ್ರೀ ಪ್ರೆಸ್ ಜರ್ನಲ್’ನಲ್ಲಿ ಕೆಲಸ ಸಿಕ್ಕಿತು; ತಿಂಗಳಿಗೆ ೧೫೦ ರೂ. ಸಂಬಳ. ೨೩ ತಿಂಗಳು ಅಲ್ಲಿ ದುಡಿದು ಅಪೂರ್ವ ಅನುಭವವನ್ನು ಪಡೆದರು. ಭಾಷೆಯ ಮೇಲೆ ಹಿಡಿತ, ಇಂಗ್ಲಿಷ್ನ ಶೈಲಿ ಸುಧಾರಿಸಲು ಅದರಿಂದ ತುಂಬ ಸಹಕಾರಿಯಾಯಿತು; ಲೇಖನ, ಪುಸ್ತಕ ವಿಮರ್ಶೆಗಳನ್ನು ಕೂಡ ಬರೆಯುತ್ತಿದ್ದರು. ಸಂಪಾದನೆ ಸಾಲದಿದ್ದಾಗ ಟ್ಯೂಶನ್ ಹೇಳುವುದು, ಇದ್ದುದರಲ್ಲೇ ದಿನ ದೂಡುವುದು ನಡೆದೇ ಇತ್ತು. ಇತರರು ಊಟ ರುಚಿಸದು ಎನ್ನುತ್ತಾರೆ; ನನಗೆ ಮಾತ್ರ ಊಟವೇನು, ಮಣ್ಣೇನು ಎಂಬ ಭೇದ ಇರಲಿಲ್ಲ ಎಂದು ಕಾಮತ್ ಒಂದೆಡೆ ಹೇಳಿದ್ದಾರೆ. ಮುಂದೆ ಜೀವನದುದ್ದಕ್ಕೂ ಊಟ-ತಿಂಡಿಗಳ ಬಗ್ಗೆ ಇದೇ ಅವರ ಧೋರಣೆಯಾಗಿತ್ತು.
ಪತ್ರಕರ್ತನಾಗಿ
ಪಿಎಚ್.ಡಿ. ಸಂಶೋಧನೆಯ ವಿಷಯಸಂಗ್ರಹಕ್ಕಾಗಿ ೧೯೬೪ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋದಾಗ ಉಡುಪಿಯಲ್ಲಿ ಡಾ| ಪಿ. ಗುರುರಾಜ ಭಟ್ಟರನ್ನು ಭೇಟಿಯಾಗಿ ಸಹಕಾರ ಪಡೆದರು. ಉಡುಪಿಯಲ್ಲಿ ಸೋದರ ಮಾವ ಅಚ್ಯುತ ಬಾಳಿಗರಲ್ಲಿ ಉಳಿದುಕೊಂಡಿದ್ದರು; ಆಗಲೇ ಅವರ ಮಗಳನ್ನು ಮದುವೆಯಾಗುವ ಪ್ರಸ್ತಾವವೂ ಬಂತು. ಥೀಸಿಸ್ನ ಕೊನೆಯ ಅಧ್ಯಾಯವನ್ನು ಫ್ರೀಪ್ರೆಸ್ ಪತ್ರಿಕೆಯ ಕಲಾವಿಮರ್ಶಕ ಅನಂತರಾವ್ ಕನ್ನಂಗಿ ಅವರಿಗೆ ನೀಡಿದಾಗ, ಅದನ್ನು ಓದಿದ ಅವರು. ಅರೆ, ಇಷ್ಟೊಂದು ಯೋಗ್ಯತೆಯ ನೀವು, ಪಿಎಚ್.ಡಿ. ಮಾಡುತ್ತಿರುವ ನೀವು ಈ ಕಛೇರಿಯಲ್ಲಿ ಯಾಕೆ ಸಾಯುತ್ತೀರಾ? ಎಂದು ಕೇಳಿದರಂತೆ. ಆಗ ‘ಟೈಮ್ಸ್ ಆಫ್ ಇಂಡಿಯ’ ಸೇರಿಕೊಳ್ಳುವ ಅವಕಾಶವಿತ್ತು; ವೇತನ ೬೦೦ ರೂ. ಆದರೆ ಕಾಮತ್ ಆಗಲೇ ಕನ್ನಡ ನಾಡಿನ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಲು ನಿರ್ಧರಿಸಿ ಆಗಿತ್ತು. ೧೯೬೫ರ ಜೂನ್ ೧೦ರಂದು ‘ಇಂಡಿಯನ್ ಎಕ್ಸ್ಪ್ರೆಸ್’ ಬೆಂಗಳೂರು ಆವೃತ್ತಿ ಆರಂಭವಾಗುತ್ತಿದ್ದು, ಅಲ್ಲಿಗೆ ಬಂದು ಸೇರಿಕೊಳ್ಳಿ ಎಂಬ ಕರೆಯೂ ಬಂತು. ಅದಕ್ಕೂ ಅವರು ಹೋಗಲಿಲ್ಲ.
ಸಂಘದ ಮಿತ್ರರ ಒತ್ತಾಯದಂತೆ ಹೊಸ ಮಾಸಿಕ(‘ಉತ್ಥಾನ’)ದ ಸಂಪಾದಕನಾಗಿ (ಪ್ರಥಮ ಮತ್ತು ಆಗಿನ ಏಕಮಾತ್ರ ಸಂಪಾದಕೀಯ ನೌಕರನಾಗಿ) ಸೇರಿದೆ… ದಸರಾ(ವಿಜಯದಶಮಿ)ಗೆ ಮಾಸಿಕದ ಪ್ರಥಮ ಅಂಕ ಬಂತು. ಮೊದಲ ಆರು ಅಂಕ ಸಿದ್ಧಮಾಡಿದವನು ನಾನೊಬ್ಬನೇ. ಆಫೀಸು ಸೌತೆಂಡ್ ಸರ್ಕಲ್ ಬಳಿ ಈಗ (೨೦೦೦) ಬ್ಯಾಂಕ್ ಆಫ್ ಮಧುರೆ ಇದ್ದಲ್ಲಿತ್ತು. ಮುದ್ರಣಾಲಯ ಬಳೆಪೇಟೆಯಲ್ಲಿ. ಓಡಾಡಲು ನನ್ನ ಕಾಲು ಇಲ್ಲವೇ ಬೇಕಾದ ಟೈಮಿಗೆ ಸಿಗದ ಬಿಟಿಎಸ್ (ಇಂದಿನ ಬಿಎಂಟಿಸಿ) ಎಂದು ಕಾಮತ್ ನೆನಪಿಸಿಕೊಂಡಿದ್ದರು.
ಅದೇ ಹೊತ್ತಿಗೆ ಅವರ ಮದುವೆ ಒತ್ತಡವೂ ಬಂತು. ಮಗಳನ್ನು ಮದುವೆ ಮಾಡಿಕೊಡುವ ಬಗ್ಗೆ ಸೋದರಮಾವನಿಂದ ಪ್ರಸ್ತಾವ ಬಂದಾಗ ಸೂರ್ಯನಾಥರು, ಒಂದು ಷರತ್ತು ಹಾಕಿದರು; ಅಣ್ಣನ ಮಗಳಿಗೆ ಸಂಬಂಧ ತಂದುಕೊಟ್ಟರೆ ಆಗುತ್ತೇನೆ ಎಂಬುದಾಗಿ. ಮಾವ ಅದನ್ನು ಮಾಡಿದರು. ಅಷ್ಟಾಗುವಾಗ ಅಕ್ಕ ಈ ಸಂಬಂಧ ಬೇಡ ಎಂದರು. ಆದರೆ ಕಾಮತ್ ಕೊಟ್ಟ ಮಾತಿನಿಂದ ಹಿಂದೆ ಸರಿಯುವುದಿಲ್ಲವೆಂದು ಹೇಳಿ, ಸರಳ ಮದುವೆಗೆ ವ್ಯವಸ್ಥೆ ಮಾಡುವಂತೆ ಮಾವನಿಗೆ ತಿಳಿಸಿ ಅದರಂತೆ ಅದೇ ಡಿಸೆಂಬರ್ (೧೯೬೫) ಮೂರರಂದು ಉಡುಪಿಯಲ್ಲಿ ಉಷಾ ಅವರನ್ನು ಮದುವೆಯಾದರು. ಫೆಬ್ರುವರಿ ಕೊನೆಯ ವೇಳೆಗೆ ಮಾಸಪತ್ರಿಕೆಯಿಂದ ಹೊರಬಂದರು. ಪತ್ರಿಕೆಯ ಈಗಿನ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ ಅವರು ೨೦೦೦ದ ಹೊತ್ತಿಗೆ ಕಾಮತ್ ಅವರ ಬಗ್ಗೆ ಬರೆದ ಒಂದು ಲೇಖನದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಕೋರಿಕೆಯಂತೆ ಸೂರ್ಯನಾಥ ಕಾಮತ್ ಇದರ ಸಂಪಾದಕತ್ವವನ್ನು ವಹಿಸಿಕೊಂಡರು. ೨೦ ವರ್ಷಗಳಿಂದ ನಾನಿದರ ಸಂಪಾದಕ. ಆಗ ಅವರ ಮುಂದೆ ಒಂದು ಮಾಡೆಲ್ ಇರಲಿಲ್ಲವೆಂದೇ ಹೇಳಬಹುದು. ಹಾಗೆ ಸಾಕಷ್ಟು ಆಲೋಚನೆ ಮಾಡಿ ಶ್ರಮವಹಿಸಿ ಕಾಮತ್ ಅವರು ‘ಉತ್ಥಾನ’ಕ್ಕೆ ನಿರ್ಮಿಸಿದ ಚೌಕಟ್ಟು ದೀರ್ಘಕಾಲ ಮುಂದುವರಿಯಿತು. ಅಕ್ಟೋಬರ್ ೧೯೬೫ರಿಂದ ಮಾರ್ಚ್ ೧೯೬೬ರವರೆಗೆ ಅದರಲ್ಲಿ ಗಣನೀಯ ಸಂಖ್ಯೆಯ ಲೇಖನಗಳನ್ನು ಅವರೇ ಬರೆದರು. ಅವರೊಬ್ಬ ಶಿಸ್ತಿನ ಬರಹಗಾರ ಎಂದಿದ್ದಾರೆ. ಅವರ ಯಾವುದೇ ಲೇಖನವನ್ನು ನೋಡಿದರೂ ಅದು ಆ ಕ್ಷೇತ್ರದ ಆಸಕ್ತರಿಗೆ ಸಂಗ್ರಹಯೋಗ್ಯ ಎನಿಸುತ್ತದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಕಾಮತ್ ‘ಪ್ರಜಾವಾಣಿ’ಗೆ ಉಪಸಂಪಾದಕರಾಗಿ ಸೇರಿದರು. ‘ಡೆಕ್ಕನ್ ಹೆರಾಲ್ಡ್’ಗೆ ಸೇರಿದರೆ ೧೦೦ ರೂ. ಜಾಸ್ತಿ ಸಂಬಳ ಸಿಗುತ್ತದೆನ್ನುವ ಸೂಚನೆಯೂ ಬಂತು. ಆದರೆ ಕನ್ನಡ ಬರವಣಿಗೆಯಲ್ಲಿ ಶಿಸ್ತು, ಒಪ್ಪ ಸಾಧಿಸಬೇಕೆಂದು ‘ಪ್ರಜಾವಾಣಿ’ಗೆ ಸೇರಿದೆ; ಇಂಗ್ಲಿಷ್ನಲ್ಲಿ ಬಂದ ಸುದ್ದಿಗಳನ್ನು ಭಾಷಾಂತರಿಸುವ ಕೆಲಸ ಕನ್ನಡದ ಮೇಲೆ ಹಿಡಿತ ಸಾಧಿಸಲು ನೆರವಾಯಿತು ಎಂದವರು ಹೇಳಿಕೊಂಡಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಉದ್ಯೋಗದಲ್ಲಿದ್ದ ಪತ್ನಿ ಉಷಾ ಅವರನ್ನು ಕೆಲಸದಿಂದ ಬಿಡಿಸಿದ ಕಾಮತ್ ಮತ್ತೆಂದೂ ಆಕೆ ದುಡಿಯುವುದಕ್ಕೆ ಒಪ್ಪಲಿಲ್ಲ. ನಾವು ಸರಳವಾದ ಜೀವನವನ್ನು ನಡೆಸೋಣ. ಕಷ್ಟಪಟ್ಟು ಬದುಕಿದರೆ ಜೀವನದ ಬೆಲೆ ತಿಳಿಯುತ್ತದೆ ಎಂಬುದು ಅವರ ಸಿದ್ಧಾಂತ. ಹೇಳಿದಂತೆ ಕಷ್ಟಪಡುವ ಸಂದರ್ಭ ಅವರಿಗೆ ಸಾಕಷ್ಟು ಬಂದಿತ್ತು. ಆದರೂ ತಾವು ಎಣಿಸಿದಂತೆಯೇ ಬದುಕಿದರು; ಅತಿಥಿಸತ್ಕಾರಕ್ಕೆ ಅವರ ಮನೆಯ ಬಾಗಿಲು ಸದಾ ತೆರೆದಿತ್ತು. ತಿಂಗಳಿಗೆ ೧೦೦ ಕೆ.ಜಿ. ಅಕ್ಕಿ ಖರ್ಚಾಗುತ್ತಿದ್ದ ದಿನಗಳು ಸಾಕಷ್ಟಿದ್ದವು.
ಇತಿಹಾಸ ಮರೆತ ಭಯ
‘ಪ್ರಜಾವಾಣಿ’ಯಲ್ಲಿ ೧೬ ತಿಂಗಳು ಸೇವೆ ಸಲ್ಲಿಸಿದರು. ಅವರ ಕಾದಂಬರಿ ‘ಥೇಮ್ಸ್ನಿಂದ ಗಂಗೆಗೆ’ ಆಗ ಪ್ರಕಟವಾಯಿತು. ಅದನ್ನು ಕುರಿತು ಬರೆದ ವಿಮರ್ಶೆಯಲ್ಲಿ ಹಿರಿಯ ನಾಟಕಕಾರ, ಸಾಹಿತಿ ಶ್ರೀರಂಗರು ಲೇಖಕರಿಗೆ ಕಾದಂಬರಿಯ ತಂತ್ರಗಾರಿಕೆ ಚೆನ್ನಾಗಿ ಸಿದ್ಧಿಸಿದೆ ಎಂದು ಬೆನ್ನುತಟ್ಟಿದರು. ಇದೇ ಗುಂಪಿನ ವಾರಪತ್ರಿಕೆ ‘ಸುಧಾ’ ಮತ್ತು ಆಂಗ್ಲದೈನಿಕ ‘ಡೆಕ್ಕನ್ ಹೆರಾಲ್ಡ್’ಗಳಿಗೂ ಲೇಖನ, ಪುಸ್ತಕ ವಿಮರ್ಶೆಗಳನ್ನು ಬರೆದರು. ೧೯೬೭ರಲ್ಲಿ ‘ಕನ್ನಡಪ್ರಭ’ ಆರಂಭವಾದಾಗ ಸಂಪಾದಕ ಎನ್.ಎಸ್. ಸೀತಾರಾಮಶಾಸ್ತ್ರಿಗಳು ತಮಗೂ ಬರೆಯುವಂತೆ ಕೋರಿದರು. ‘ಆದಿತ್ಯ’ ಎನ್ನುವ ಹೆಸರಿನಲ್ಲಿ ಆ ಪತ್ರಿಕೆಗೆ ಬರೆದರು. ಅವರ ಕಾದಂಬರಿ ‘ಕೃಷ್ಣದೇವಾರಾಯ’ ಅಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತು.
ಪತ್ರಿಕಾ ವೃತ್ತಿಯಲ್ಲಿ ಮುಖ್ಯವಾಗಿ ರಾತ್ರಿಪಾಳಿಯಿಂದ ಅವರ ಆರೋಗ್ಯ ಹಾಳಾಯಿತು. ನಾನು ಓದಿದ್ದ ಇತಿಹಾಸವನ್ನು ಮರೆತು ಬೇರೆ ಏನೇನೋ ಮಾಡುತ್ತಿದ್ದೇನೆ” ಎನ್ನುವ ಭೀತಿ ಹೆಚ್ಚಿತು. ಅಧ್ಯಾಪಕ ವೃತ್ತಿ ಬಿಟ್ಟರೆ ತಮ್ಮ ಸಂಶೋಧನೆಯ ಚಿಂತೆ ಬಿಡಬೇಕಾದೀತು ಎಂಬುದು ಖಚಿತವಾಯಿತು. ಆಚಾರ್ಯ ಪಾಠಶಾಲಾ (ಎ.ಪಿಎಸ್.) ಸಂಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ‘ಈಸಿ ಜಯಿಸಿದವರು’ ಕಾದಂಬರಿ ಆ ಕಾಲಕ್ಕೆ ಪ್ರಕಟಗೊಂಡಿತು. ಆಗ ಎಂ.ಎ.ಯಲ್ಲಾಗಲಿ ಅಥವಾ ಬಿ.ಎ.ಯಲ್ಲಾಗಲಿ ಕರ್ನಾಟಕದ ಇತಿಹಾಸವನ್ನು ಸಮಗ್ರವಾಗಿ ಕಲಿಸುತ್ತಾ ಇರಲಿಲ್ಲ; ಅದು ಭಾರತದ ಇತಿಹಾಸದ ಭಾಗವಾಗಿ ಬರುತ್ತಿತ್ತು. ೧೮, ೧೯, ೨೦ನೇ ಶತಮಾನದ ಚಿತ್ರಣ ಇರಲೇ ಇಲ್ಲ; ಕೆಳದಿ, ಮೈಸೂರು, ಟಿಪ್ಪು, ಹೈದರ್, ಆದಿಲ್ಶಾಹಿ ವಿಷಯ ಇರಲಿಲ್ಲ. ಹಲವು ಗ್ರಂಥಗಳನ್ನು ಓದುವಾಗ ಕರ್ನಾಟಕದ ಇತಿಹಾಸದ ಮೇಲೆ ಪ್ರಾಚೀನ ಮತ್ತು ಆಧುನಿಕ ಕಾಲಗಳಿಗೆ ಸಮನಾಗಿ ಮಹತ್ತ್ವ ಕೊಡುವ, ಜನಸಾಮಾನ್ಯರು ಮೆಚ್ಚುವ ಒಂದು ಪುಸ್ತಕ ಬರೆಯಬೇಕು ಎನ್ನಿಸಿತು. ಅದರಂತೆ ಬರೆದದ್ದು ‘ಕರ್ನಾಟಕದ ಸಂಕ್ಷಿಪ್ತ ಇತಿಹಾಸ’. ಅದರ ಕುರಿತು ಹಿರಿಯ ಸಂಶೋಧಕ ಡಾ|| ಎಂ. ಚಿದಾನಂದಮೂರ್ತಿ ಅವರು, ಇತಿಹಾಸಪೂರ್ವಕಾಲದಿಂದ ಏಕೀಕರಣದ ವರೆಗಿನ ಸುದೀರ್ಘ ಕಾಲದ ಚರಿತ್ರೆಯನ್ನು ಸಂಕ್ಷಿಪ್ತವಾಗಿ ನಿರೂಪಿಸಿರುವುದು ಕಾಮತರ ಒಂದು ಸಿದ್ಧಿ ಎಂದು ಶ್ಲಾಘಿಸಿದ್ದಾರೆ. ಪುಸ್ತಕದ ೧೫ ಅಧ್ಯಾಯಗಳಲ್ಲಿ ಎಂಟು ವಿಜಯನಗರದ ವರೆಗಿದ್ದರೆ ಏಳು ವಿಜಯನಗರೋತ್ತರ ಕಾಲದ ಬಗೆಗಿವೆ. ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೫) ಲಭಿಸಿದೆ.
ರಾಷ್ಟ್ರೋತ್ಥಾನ ಪರಿಷತ್ತಿನ ಕೋರಿಕೆಯಂತೆ ಸೂರ್ಯನಾಥ ಕಾಮತ್ `ಉತ್ಥಾನ’ದ ಸಂಪಾದಕತ್ವವನ್ನು ವಹಿಸಿಕೊಂಡರು. ೨೦ ವರ್ಷಗಳಿಂದ ನಾನಿದರ ಸಂಪಾದಕ. ಆಗ ಅವರ ಮುಂದೆ ಒಂದು ಮಾಡೆಲ್ ಇರಲಿಲ್ಲವೆಂದೇ ಹೇಳಬಹುದು. ಹಾಗೆ ಸಾಕಷ್ಟು ಆಲೋಚನೆ ಮಾಡಿ ಶ್ರಮವಹಿಸಿ ಕಾಮತ್ ಅವರು ‘ಉತ್ಥಾನ’ಕ್ಕೆ ನಿರ್ಮಿಸಿದ ಚೌಕಟ್ಟು ದೀರ್ಘಕಾಲ ಮುಂದುವರಿಯಿತು. ಅಕ್ಟೋಬರ್ ೧೯೬೫ರಿಂದ ಮಾರ್ಚ್ ೧೯೬೬ರವರೆಗೆ ಅದರಲ್ಲಿ ಗಣನೀಯ ಸಂಖ್ಯೆಯ ಲೇಖನಗಳನ್ನು ಅವರೇ ಬರೆದರು. ಅವರೊಬ್ಬ ಶಿಸ್ತಿನ ಬರಹಗಾರ.
– ಎಸ್.ಆರ್. ರಾಮಸ್ವಾಮಿ
ಬೆಂಗಳೂರು ವಿವಿಯಲ್ಲಿ
ಬೆಂಗಳೂರಿಗೆ ಬಂದ ಸುಮಾರು ಮೂರು ವರ್ಷಗಳಲ್ಲಿ ಸೂರ್ಯನಾಥ ಕಾಮತ್ ಲೇಖಕರಾಗಿ ಗಮನಾರ್ಹರೆನಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ ಹುದ್ದೆ ಸಿಗಲು ಅದರಿಂದ (೧೯೬೮) ಅನುಕೂಲವಾಗಿರಬೇಕು; ೧೩ ವರ್ಷಗಳ ಅಲ್ಲಿನ ಸೇವೆ ಅವರಿಗೆ ಇತಿಹಾಸಕಾರನಾಗಿ ಬೆಳೆಯಲು ಪೂರಕವಾಯಿತು. ಒಂದು ಗಂಟೆಯ (ಪೀರಿಯಡ್) ಪಾಠಕ್ಕೆ ೪-೫ ಗಂಟೆ ಓದಿಕೊಳ್ಳುತ್ತಿದ್ದರು. ಹೊಸ ಸಿಲಬಸ್ ಬಂದು ಅದಕ್ಕೆ ಸಂಬಂಧಿಸಿದ ಗ್ರಂಥ ತಮ್ಮಲ್ಲಿ ಸಿಗದಿದ್ದಾಗ ಮಿಥಿಕ್ ಸೊಸೈಟಿ, ಸೆಂಟ್ರಲ್ ಕಾಲೇಜ್ ಮುಂತಾಗಿ ಬೇರೆಕಡೆಗಳಿಂದ ಪಡೆಯುತ್ತಿದ್ದರು. ಅವರ ಬೋಧನೆಯ ಕುರಿತು ಓರ್ವ ವಿದ್ಯಾರ್ಥಿ ಹೀಗೆ ಹೇಳಿದ್ದಾರೆ; ಕಾಮತರ ತೀಕ್ಷ್ಣಬುದ್ಧಿ, ಸಂಗ್ರಹಿಸಿದ್ದ ಜ್ಞಾನಭಂಡಾರವನ್ನು ನಿಃಸ್ವಾರ್ಥವಾಗಿ ವಿದ್ಯಾರ್ಥಿಗಳಿಗೆ ವಿತರಿಸುವಲ್ಲಿ ಅವರಿಗಿದ್ದ ಆತುರ, ಮಾತಿನ ವೈಖರಿ ಇವನ್ನೆಲ್ಲ ವರ್ಣಿಸಲು ಅಸಾಧ್ಯ. ಯಾವ ವಿಷಯವನ್ನೇ ಆದರೂ ಅವರು ಆಧಾರವಿಲ್ಲದೆ ಪ್ರಸ್ತಾವಿಸುತ್ತಿರಲಿಲ್ಲ. ಇನ್ನು ಅವರ ಶಿಸ್ತು ಮತ್ತು ಸಮಯದ ಕಟ್ಟುನಿಟ್ಟಾದ ಪಾಲನೆಗಳು ಎಲ್ಲ ಕಡೆ ತಪ್ಪದೆ ಉಲ್ಲೇಖಗೊಳ್ಳುತ್ತವೆ.
ಜಗತ್ತಿನ ಪ್ರಾಚೀನ ಪದ್ಧತಿಗಳೊಡನೆ ಅರ್ವಾಚೀನ ಜಗತ್ತಿನ ಸ್ಥಿತಿಗಳ ತುಲನಾತ್ಮಕ ವಿಧಾನ ವಿದ್ಯಾರ್ಥಿಗಳಿಗೆ ಕುತೂಹಲಕಾರಿ ಆಗಿರುತ್ತಿತ್ತು. ನೂರಾರು ಹೊಸ ಆಲೋಚನೆ, ಹೊಸ ವಿಷಯಗಳು ತಿಳಿದು ವಿದ್ಯಾರ್ಥಿಗಳ ಮನಸ್ಸು ಬೆರಗಾಗುತ್ತಿತ್ತು. ಅವರ ಇನ್ನೊಂದು ವಿಶೇಷ ಬೋಧನೆಯ ಜೊತೆಗೆ ಟಿಪ್ಪಣಿ (ನೋಟ್ಸ್) ಬರೆಸುತ್ತಿದ್ದ ವಿಧಾನ. ಹೊಸ ಪದ ಬಳಸಿದರೆ ಬೋರ್ಡಿನಲ್ಲಿ ಅದನ್ನು ಬರೆದು ಕನ್ನಡ ಸೇರಿದಂತೆ ಅದರ ಅರ್ಥವನ್ನು ವಿವರಿಸುವರು. ಪ್ರಶ್ನೆ ಕೇಳಿದರೆ ಬೇಸರಿಸದೆ ಉತ್ತರಿಸುವರು. ಅದ್ಭುತ ಸ್ಮರಣಶಕ್ತಿ, ಅಪಾರ ಜ್ಞಾನಭಂಡಾರದಿಂದಾಗಿ ‘ಚಲಿಸುವ ವಿಶ್ವಕೋಶ’ ಎನಿಸಿದ್ದರು. ಕರ್ನಾಟಕದ ಇತಿಹಾಸದ ಮಟ್ಟಿಗಂತೂ ಕಾಮತ್ ಅಕ್ಷರಶಃ ವಿಶ್ವಕೋಶ ಆಗಿದ್ದರು.
ರಾಜಾಜಿ ಅವರು ‘ಸ್ವರಾಜ್ಯ’ ಪತ್ರಿಕೆಯಲ್ಲಿ ಕನ್ನಡ ಬಹುಮಟ್ಟಿಗೆ ತಮಿಳಾಗಿದ್ದು, ಕ್ರೈಸ್ತ ಮಿಷನರಿಗಳು ತಿದ್ದಿದ ತೆಲುಗು ಲಿಪಿಯಲ್ಲಿ ಅದನ್ನು ಬರೆಯುತ್ತಾರೆ ಎಂದು ದಾಖಲಿಸಿದ್ದರು. ಅದಕ್ಕೆ ಉತ್ತರವಾಗಿ ಕಾಮತರು ‘ಕನ್ನಡ ಭಾಷೆ ಮತ್ತು ಲಿಪಿಗಳ ಪ್ರಾಚೀನತೆ’ ಎಂಬ ಲೇಖನ ಬರೆದು ಆ ಅಭಿಪ್ರಾಯವನ್ನು ಅಲ್ಲಗಳೆದರು. ಅದಕ್ಕೆ ಮಂಗಳೂರಿನ ಒಬ್ಬರು ಕಾಮತರದ್ದು ಕೃತಿಚೌರ್ಯ ಎಂದು ದಾವೆ ಹೂಡಿದರು. ಅದು ಏಳು ವರ್ಷಗಳ ಕಾಲ ನಡೆದು ಕೊನೆಗೂ ಕಾಮತ್ ಗೆದ್ದರು.
ಪ್ರೊ| ಜಿ.ಎಸ್. ದೀಕ್ಷಿತರಿಗೆ ಶಿಷ್ಯನ ಪ್ರಗತಿ ಕಂಡು ಸಂತೋಷವಾದರೂ ಇಷ್ಟೊಂದು ಪ್ರತಿಭಾವಂತ ಪತ್ರಿಕಾರಂಗದಲ್ಲಿ ಸಿಲುಕಿ ಏನಾಗುವನೋ ಎಂಬ ಭೀತಿ ಆವರಿಸಿತ್ತು. ಕಾಮತರನ್ನು ಕರೆದು, ಕಥೆ, ಕಾದಂಬರಿ, ಪತ್ರಿಕೆಗಳಿಗೆ ಲೇಖನ, ಜುಜುಬಿ ನೋಟ್ಸ್ ಇದೆಲ್ಲ ಬರೆಯುವುದನ್ನು ಬಿಟ್ಟು ಸಂಶೋಧನೆಗೆ ಗಮನ ಕೊಡಿ ಎಂದು ಸಲಹೆ ನೀಡಿದರು; ವಿಚಾರಸಂಕಿರಣಗಳಲ್ಲಿ ಅವರನ್ನು ಸೇರಿಸಿದರು. ಕಾಮತರು ಪ್ರಬಂಧ ಮಂಡಿಸುತ್ತಿದ್ದ ರೀತಿ, ನಿರರ್ಗಳ ಮಾತು, ಖಚಿತ ಜ್ಞಾನ ಹಾಗೂ ಸಾಧಾರ ಪ್ರಸ್ತುತಿಯಿಂದಾಗಿ ಬಹುಬೇಗ ಓರ್ವ ಇತಿಹಾಸಕಾರ ಎನಿಸಿದರು. ಮಹಾರಾಷ್ಟ್ರದ ಕೊಲ್ಲಾಪುರ ವಿಶ್ವವಿದ್ಯಾಲಯದವರು ತಮ್ಮಲ್ಲಿಗೆ ಬಂದರೆ ಪದೋನ್ನತಿ ನೀಡಿ ವಿಭಾಗ ಮುಖ್ಯಸ್ಥರಾಗಿ ಮಾಡುವುದಾಗಿ ಹೇಳಿದರು; ಆದರೆ ಕಾಮತ್ ಈಗಾಗಲೆ ಹೇಳಿದಂತೆ ಕನ್ನಡನಾಡಿನ ಬಗೆಗಿನ ಅಭಿಮಾನದಿಂದ ಬೆಂಗಳೂರನ್ನು ಬಿಟ್ಟು ಹೋಗಲು ಒಪ್ಪಲಿಲ್ಲ.
ಸ್ವಾತಂತ್ರ್ಯ ಸಂಗ್ರಾಮ ಸ್ಮೃತಿಗಳು
ಈ ನಡುವೆ ರಾಮಚಂದ್ರ ವಡವಿ ಅವರ ‘ಕುಂದರ ನಾಡಿನಲ್ಲಿ ಒಂದು ಅಧ್ಯಾಯ’ ಎನ್ನುವ ಪುಸ್ತಕ ಸೂರ್ಯನಾಥ ಕಾಮತರಿಗೊಂದು ಸ್ಫೂರ್ತಿ ನೀಡಿತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರೀಸಾಮಾನ್ಯರು ಅಗ್ರಪಾತ್ರ ವಹಿಸಿದ ಬಗ್ಗೆ ಪುಸ್ತಕ ಬರೆಯಬೇಕು ಎನ್ನಿಸಿತು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಐದಾರು ಮಂದಿ ತಿಳಿದ ಗಣ್ಯರನ್ನು ಸಂದರ್ಶಿಸಿದರೆ ಕೆಲವು ಶ್ರೀಸಾಮಾನ್ಯ ಸ್ವಾತಂತ್ರ್ಯಯೋಧರ ಬಗ್ಗೆ, ಅವರ ಹೋರಾಟದ ಬಗ್ಗೆ ವಿವರ ಸಂಗ್ರಹಿಸಬಹುದು ಎನ್ನಿಸಿತು. ಭೇಟಿಯಿಂದ ಮಾಹಿತಿಸಂಗ್ರಹ ಹಾಗೂ ಪ್ರಶ್ನೋತ್ತರ ವಿಧಾನದಿಂದ ಕಟ್ಟುವ ಇತಿಹಾಸವನ್ನು ಮೌಖಿಕ ಇತಿಹಾಸ (Oral history) ಎನ್ನುತ್ತಾರೆ. ಈ ಕೆಲಸಕ್ಕೆ ಇದೇ ಸೂಕ್ತ ಕ್ರಮ ಎನ್ನಿಸಿ ಪತ್ರಿಕೆಗಳಲ್ಲಿ ಮಾಹಿತಿ ಕೋರಿ ಪ್ರಕಟನೆ ನೀಡಿದರು (ನವೆಂಬರ್, ೧೯೭೨) ಮತ್ತು ಆಯ್ದ ಮಹನೀಯರಿಗೆ ನಾಲ್ಕು ಪ್ರಶ್ನೆಗಳ ಮಾಲಿಕೆಯನ್ನು ಕಳುಹಿಸಿದರು. ಹತ್ತಿಪ್ಪತ್ತು ಜನ ಸ್ಪಂದಿಸಿದಾಗ ಅವರಿಂದ ಇನ್ನಷ್ಟು ಜನರ ವಿಳಾಸ ಪಡೆದು ಅವರಿಗೂ ಪತ್ರ ಬರೆದರು. ಹೀಗೆ ೨-೩ ತಿಂಗಳಾಗುವಾಗ ನೂರಾರು ಜನರ ಉತ್ತರ ಬಂತು. ಅಲ್ಲಿಗೆ ಹೋಗಿ ಸುತ್ತಾಡಿ ಚಳವಳಿಯ ಸ್ವರೂಪ ತಿಳಿದು ವಿವರ ಸಂಗ್ರಹಿಸಿದರು. ಆಗ ಬೆಂಗಳೂರಿನ ಹನುಮಂತನಗರದ ಇವರ ಮನೆಗೆ ಯಾರ್ಯಾರೋ ಬರಲಾರಂಭಿಸಿದರು; ಮನೆತುಂಬ ಮಾಹಿತಿಯ ಚೀಟಿಗಳು. ಊಟಕ್ಕೆ ಹೊರಗಿನ ೩-೪ ಜನ ಯಾವಾಗಲೂ ಇರುತ್ತಿದ್ದರಂತೆ. ಅಂತೂ ಮನೆತುಂಬ ಸ್ವಾತಂತ್ರ್ಯ ಸಂಗ್ರಾಮದ ಸಂಭ್ರಮ.
ಮೊದಲ ಸಂಪುಟ ೧೯೭೪ರ ಮೇ ತಿಂಗಳಲ್ಲಿ ಪ್ರಕಟಗೊಂಡಿತು. ಇವರಿದ್ದ ಬೆಂಗಳೂರು ವಿಶ್ವವಿದ್ಯಾಲಯದವರು ಪ್ರಕರ್ಟಣೆಗೆ ಮೊದಲು ಒಪ್ಪಿದ್ದರೂ ಅನಂತರ ಬಂದ ಸ್ವಾತಂತ್ರ್ಯಹೋರಾಟಗಾರ ಕುಲಪತಿ ನಿರಾಕರಿಸಿದರು; ಆಗ ಪ್ರಕಟಿಸಲು ಮುಂದೆ ಬಂದವರು ಮೈಸೂರಿನ ಗೀತಾ ಬುಕ್ಹೌಸಿನವರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಲೋಕಾರ್ಪಣೆ ಸಮಾರಂಭ ಜರಗಿತು. ಎರಡನೇ ಸಂಪುಟ ೧೯೭೭ರಲ್ಲಿ ಬಿಡುಗಡೆಗೊಂಡಿತು. ಈ ನಡುವೆ ೧೯೭೬ರಲ್ಲಿ ಕಾಣಿಸಿಕೊಂಡ ಸ್ಲಿಪ್ಡಿಸ್ಕ್ ಬೆನ್ನುನೋವು ಸುಮಾರು ಎರಡೂವರೆ ವರ್ಷ ಅವರನ್ನು ಬಾಧಿಸಿತು. ಅವರಿಗೆ ಪ್ರಿಯವಾಗಿದ್ದ ಸೈಕಲ್ ಸವಾರಿ ನಿಂತುಹೋಗಿ ಸಂಚಾರ ಕಷ್ಟವಾಯಿತು. ಮಲಗಿಕೊಂಡು ಬರೆದೇ ಈ ಸಂಪುಟಗಳ ಕೆಲಸ ಮಾಡಬೇಕಾಯಿತು. ೧೯೮೦ರಲ್ಲಿ ಮೂರನೇ ಸಂಪುಟದ ಕೆಲಸ ಮುಗಿಯುವುದರೊಂದಿಗೆ ೮೫೦ಕ್ಕೂ ಅಧಿಕ ಸ್ವಾತಂತ್ರ್ಯಯೋಧರನ್ನು ಪರಿಚಯಿಸುವ ಸುಮಾರು ೩,೨೦೦ ಪುಟಗಳ ಸಾಹಿತ್ಯ ಕನ್ನಡಿಗರ ಕೈಸೇರಿತು; ಗ್ರಂಥದ ಶೀರ್ಷಿಕೆ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’. ೧೯೯೮ರಲ್ಲಿ ಅದನ್ನು ಸರ್ಕಾರ ಮರುಮುದ್ರಣ ಮಾಡಿತು. ಮೌಖಿಕ ಇತಿಹಾಸಕ್ಕೊಂದು ಶ್ರೇಷ್ಠ ಮಾದರಿಯಾಗಿ ಈ ಸಂಪುಟಗಳು ಸ್ಥಾನ ಪಡೆದಿವೆ; ಜನಸಾಮಾನ್ಯರೇ ಇದರ ಹೀರೋಗಳು.
ವಿಶ್ವವಿದ್ಯಾಲಯದಲ್ಲಿ ೧೩ ವರ್ಷಗಳ ಸೇವೆ ಸಲ್ಲಿಸಿದರೂ ಕಾಮತರಿಗೆ ಯಾವುದೇ ಬಡ್ತಿ ಸಿಗಲಿಲ್ಲ. ಅಂತಾರಾಷ್ಟ್ರೀಯ ವ್ಯವಹಾರದ ಬಗ್ಗೆ ಸಂಶೋಧನೆ ನಡೆಸಿ ವಿಶ್ವ ಸುತ್ತಬಹುದು ಎಂದು ವಿಭಾಗ ಮುಖ್ಯಸ್ಥರು ಅನುದಾನ ಗಿಟ್ಟಿಸುವ ಒಂದು ಸಲಹೆ ನೀಡಿದಾಗ ಕಾಮತ್, ನನಗೆ ವಿಶ್ವಸುತ್ತುವ ಇರಾದೆ ಇಲ್ಲ. ಹಾಗೇನಾದರೂ ಹೋಗಬೇಕಾಗಿ ಬಂದರೆ ಕರ್ನಾಟಕವನ್ನು ಹಿಡಿದುಕೊಂಡೇ ಸುತ್ತುತ್ತೇನೆ ಎಂದರಂತೆ. ಅಂತಹ ಇನ್ನೊಂದು ಸಲಹೆಗೂ ಒಪ್ಪಲಿಲ್ಲ. ಅವರ ದೊಡ್ಡ ಯೋಜನೆ, ಪ್ರಸಿದ್ಧಿಗಳು ಕೂಡ ಕೆಲವು ಶತ್ರುಗಳನ್ನು ಹುಟ್ಟಿಸಿದವು. ಆಗ ೧೯೮೧ರ ಹೊತ್ತಿಗೆ ಕರ್ನಾಟಕ ಗೆಜೆಟಿಯರ್ನ ಮುಖ್ಯ ಸಂಪಾದಕರಾಗಲು ಸರ್ಕಾರದಿಂದ ಆಹ್ವಾನ ಬಂತು. ಒತ್ತಾಯ ಬಂದಾಗ ಒಪ್ಪಿಕೊಂಡರು. ಸ್ಲಿಪ್ಡಿಸ್ಕ್ ತೊಂದರೆ ಇದ್ದ ಕಾರಣ ದೂರದ ಜ್ಞಾನಭಾರತಿಗೆ ಪ್ರಯಾಣಿಸುವುದು ತಪ್ಪಿದ್ದು ಕೂಡ ಸಂತೋಷ ನೀಡಿತು.
ಗೆಜೆಟಿಯರ್ ಸೇವೆ
ಗೆಜೆಟಿಯರ್ (ಗ್ಯಾಸೆಟಿಯರ್) ಒಂದು ಮಹಾಗ್ರಂಥವಾಗಿದ್ದು ಅದರಲ್ಲಿ ಒಂದು ಪ್ರದೇಶದ ಭೌಗೋಳಿಕ ವಿವರಣೆ, ಐತಿಹಾಸಿಕ ಪರಂಪರೆ, ಜನಜೀವನಕ್ರಮ, ಆರ್ಥಿಕ ಪ್ರಗತಿ, ಆಡಳಿತ ವ್ಯವಸ್ಥೆ, ಸಾಂಸ್ಕೃತಿಕ ಮಹತ್ತ್ವ ಇವೆಲ್ಲ ಇರುತ್ತವೆ. ಆಡಳಿತಗಾರರಿಗೆ ಮಾರ್ಗದರ್ಶಕವಾದ ಅದು ಸರ್ಕಾರದ ಅಧಿಕೃತ ಪ್ರಕಟಣೆ. ೧೯೫೯ರಲ್ಲಿ ಕರ್ನಾಟಕ ಗೆಜೆಟಿಯರ್ ಇಲಾಖೆ ಆರಂಭಗೊಂಡಿತ್ತು. ಅಲ್ಲಿನ ತಮ್ಮ ಸೇವೆಯ ಬಗ್ಗೆ ಕಾಮತರು, ೧೪ ವರ್ಷ ಗ್ಯಾಸೆಟಿಯರ್ ಇಲಾಖೆಯಲ್ಲಿ ದುಡಿದೆ. ವ್ಯಾಪಕ ಪ್ರವಾಸ ಮಾಡಿದೆ. ರಾಜ್ಯ ಇತಿಹಾಸದ ಎಲ್ಲ ಮುಖಗಳ ಅಧ್ಯಯನ ಮಾಡಿ ಅದನ್ನು ವಿವರವಾಗಿ ರಾಜ್ಯ ಮತ್ತು ಜಿಲ್ಲಾ ಗೆಜೆಟಿಯರ್ಗಳಲ್ಲಿ ತೆರೆದಿಟ್ಟೆ. ರಾಜ್ಯ ಗೆಜೆಟಿಯರ್ ಮತ್ತು ಏಳು ಜಿಲ್ಲಾ ಗೆಜೆಟಿಯರ್(ಉತ್ತರ ಕನ್ನಡ, ಬೆಳಗಾವಿ, ಮೈಸೂರು, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಡಗು ಮತ್ತು ಧಾರವಾಡ)ಗಳನ್ನು ಸಂಪಾದಿಸಿದೆ. ಇದರಿಂದ ಸಾರ್ವಜನಿಕರಿಗೆ ಹಿಂದೆಂದೂ ಸಿಗದ ಮಾಹಿತಿ ಸಂಗ್ರಹವಾಯಿತು ಎಂದಿದ್ದಾರೆ. ಊರುಗಳ ಬಗ್ಗೆ ಶಾಸನಗಳ ಸಹಿತ ಇಷ್ಟು ವಿವರವಾದ ಮಾಹಿತಿಯನ್ನು ನಾವು ಸಂಗ್ರಹಿಸಿಲ್ಲ ಎಂದು ಮಹಾರಾಷ್ಟ್ರ ಗೆಜೆಟಿಯರ್ ಇಲಾಖೆಯವರು ಹೇಳಿದರೆ, ಮದ್ರಾಸ್ನವರು ನಿಮ್ಮದು ಭಾರತದಲ್ಲೇ ಉತ್ಕೃಷ್ಟ ಎಂದು ಹೊಗಳಿದ್ದಾರೆ. ಕಾಮತ್ರು ತಯಾರಿಸಿದ ರಾಜ್ಯ ಗೆಜೆಟಿಯರ್ ೧,೧೦೦ ಮತ್ತು ೧,೫೦೦ ಪುಟಗಳ ಎರಡು ಸಂಪುಟಗಳನ್ನು ಹೊಂದಿದೆ.
ಗ್ಯಾಸೆಟಿಯರ್ ಸಂಪಾದಕರಾದ ಕೆಲವೇ ವಾರಗಳಲ್ಲಿ ಸರ್ಕಾರ ಸೂರ್ಯನಾಥ ಕಾಮತರನ್ನು ರಾಜ್ಯ ಪತ್ರಾಗಾರದ ನಿರ್ದೇಶಕರಾಗಿ ಕೂಡ ನೇಮಿಸಿತು. ಆ ಹುದ್ದೆಯಿಂದ ಅವರು ಹಿಂದೆಂದೂ ಆಗದಷ್ಟು ಖಾಸಗಿ ಕಾಗದಪತ್ರ(ಐತಿಹಾಸಿಕ ದಾಖಲೆ)ಗಳನ್ನು ಸಂಗ್ರಹಿಸಿದರು. ಮೈಸೂರು ಅರಮನೆಯ ಕಾಗದಪತ್ರ. ೧೦ ಲಕ್ಷ ಪುಟಗಳಷ್ಟು ಹಳೆಯ ಪತ್ರಿಕೆಗಳು, ಗಣ್ಯರ ಕಾಗದಪತ್ರ, ಡೈರಿಗಳು ಎಲ್ಲವೂ ಸೇರಿದವು. ೧೯೭೩ರಲ್ಲಿ ಸ್ಥಾಪನೆಗೊಂಡ ಪತ್ರಾಗಾರದಿಂದ ಅದುವರೆಗೆ ಅಂತಹ ಸಾಧನೆ ಆಗಿರಲಿಲ್ಲ. ದಾಖಲೆಗಳ ಪ್ರದರ್ಶನ ಏರ್ಪಡಿಸಿ, ಅವುಗಳನ್ನು ರಕ್ಷಿಸಬೇಕು, ಪತ್ರಾಗಾರಕ್ಕೆ ದಾನಮಾಡಬೇಕು ಎಂದು ಜನರಲ್ಲಿ ಅರಿವು ಮೂಡಿಸಿದರು; ಹಾಗೂ ‘ಪತ್ರಾಗಾರ ವಾರ್ತಾ’ ಎಂಬ ತ್ರೈಮಾಸಿಕವನ್ನು ಆರಂಭಿಸಿದರು.
ಕರ್ನಾಟಕ ಇತಿಹಾಸ ಅಕಾಡೆಮಿ
ಡಾ| ಕಾಮತರ ಶಿಖರಪ್ರಾಯ ಸಾಧನೆಗಳಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಸ್ಥಾಪನೆ ಮತ್ತು ಅದನ್ನು ಶಿಸ್ತುಬದ್ಧವಾಗಿ ಮುನ್ನಡೆಸಿದ್ದು ಸೇರುತ್ತದೆ. ೧೯೮೫ರ ಹೊತ್ತಿಗೆ ಅವರಿಗೆ ಅಂತಹ ಚಿಂತನೆ ಬಂತು. ಮೊದಲ ಹತ್ತು ವರ್ಷ ಪ್ರೊ| ಜಿ.ಎಸ್. ದೀಕ್ಷಿತ್ ಅದರ ಅಧ್ಯಕ್ಷರಾದರೆ ಅನಂತರ ಕಾಮತರೇ ಅಧ್ಯಕ್ಷರಾದರು. ಅದು ಮೂಲತಃ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನಶಾಸ್ತ್ರ ವಿಭಾಗದ ಉಪಾಧ್ಯಾಯವೃಂದ ಮತ್ತು ಗ್ಯಾಸೆಟಿಯರ್ನಲ್ಲಿದ್ದ ತರುಣರೆಲ್ಲರ ಒತ್ತಾಸೆಯ ಮೇರೆಗೆ ಕಾಮತರು ಹೊಣೆಹೊತ್ತು ರೂಪಿಸಿದ ಸಂಸ್ಥೆ. ಕರ್ನಾಟಕ ಇತಿಹಾಸವನ್ನು ಜನಪ್ರಿಯಗೊಳಿಸಬೇಕು; ಅದರಲ್ಲಿ ಸಂಶೋಧನೆಯ ವಾತಾವರಣವನ್ನು ಸೃಷ್ಟಿಸಬೇಕು; ಹಾಗೂ ಇತಿಹಾಸ ಪರಂಪರೆ(ಸ್ಮಾರಕ, ಶಾಸನ, ಪ್ರಾಚ್ಯವಸ್ತು, ಕಾಗದಪತ್ರ, ಓಲೆಗರಿ ಇತ್ಯಾದಿ)ಯನ್ನು ರಕ್ಷಿಸಬೇಕು – ಇದು ಅಕಾಡೆಮಿಯ ಗುರಿ. ಪ್ರತಿವರ್ಷ ಮೂರುದಿನಗಳ ವಾರ್ಷಿಕ ಸಮ್ಮೇಳನ, ಪ್ರತಿ ಸಮ್ಮೇಳನದಲ್ಲಿ ಸುಮಾರು ೧೦೦ ಪ್ರಬಂಧಗಳ ಮಂಡನೆ, ಪ್ರತಿವರ್ಷ ಸುಮಾರು ೨೦೦ ಕಡೆ ‘ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮ ಹೀಗೆ ಅಕಾಡೆಮಿ ನಡೆದುಬಂತು. ೨೦೧೩ರ ಹೊತ್ತಿಗೆ ಪ್ರಬಂಧಕಾರರ ಸಂಖ್ಯೆ ಹೆಚ್ಚಿದ್ದರಿಂದ ೨-೩ ಕಡೆ ಗೋಷ್ಠಿಗಳನ್ನು ನಡೆಸಲಾಗುತ್ತಿದೆ. ಅಕಾಡೆಮಿ ಸದಸ್ಯರ ಸಂಖ್ಯೆ ೧೭೦೦ ದಾಟಿದೆ. ‘ಇತಿಹಾಸ ದರ್ಶನ’ದ ೨೬ ಸಂಪುಟಗಳು ಬಂದಿವೆ. ಸುಮಾರು ೧,೬೦೦ ಪ್ರಬಂಧಗಳು ಪ್ರಕಟಗೊಂಡಿವೆ ಎಂದು ಡಾ| ಕೆ. ವಸಂತಲಕ್ಷ್ಮಿ ಅವರು ತಿಳಿಸುತ್ತಾರೆ.
ತಮ್ಮ ಸಾಧನೆಯ ಕುರಿತು ಒಮ್ಮೆ ಹಿನ್ನೋಟ ಬೀರಿದ ಡಾ| ಸೂರ್ಯನಾಥ ಕಾಮತ್, ಕರ್ನಾಟಕದ ಪ್ರಾಚೀನ ಇತಿಹಾಸವಲ್ಲದೆ ವಿಜಯನಗರ, ಆದಿಲ್ಶಾಹಿ, ಬಹಮನಿ, ರಾಜ್ಯದಲ್ಲಿ ಮೊಘಲ್ ಆಡಳಿತ, ಮರಾಠರು ಹಾಗೂ ಪೋರ್ಚುಗೀಸರ ಚಟುವಟಿಕೆ, ಕರ್ನಾಟಕದ ಪ್ರಾಚೀನ ಕೈಗಾರಿಕೆ, ಹಿಂದುಳಿದ ವರ್ಗಗಳ ಚಳವಳಿ, ಪತ್ರಿಕೋದ್ಯಮ, ಸಮಾಜ ಸುಧಾರಣೆ ಚಳವಳಿ, ಅಸ್ಪೃಶ್ಯರ ಸಮಸ್ಯೆ, ಸ್ವಾತಂತ್ರ್ಯ ಸಂಗ್ರಾಮದಿಂದ ಬೆಳೆದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಪ್ರವೃತ್ತಿಗಳು ಇವೆಲ್ಲದರ ಬಗ್ಗೆ ಸಂಶೋಧನೆ ನಡೆಸಿದ್ದೇನೆ. ಕರ್ನಾಟಕವೇ ನನ್ನ ಅಧ್ಯಯನದ ಕೇಂದ್ರ ಎಂದಿದ್ದಾರೆ.
ಜನಮುಟ್ಟುವ ಶೈಲಿ
ನಾನು ಪತ್ರಕರ್ತನೂ ಸೃಜನಶೀಲ ಬರಹಗಾರನೂ ಆಗಿದ್ದು, ಇತಿಹಾಸ ಬರೆಯುವಾಗ ಇದೇ ಶೈಲಿಯನ್ನು ಬಳಸುತ್ತೇನೆ. ಇದನ್ನು ಟೀಕಿಸುವವರು ಇದ್ದಾರೆ. ಆದರೆ ಯಾವುದೇ ಅತಿಶಯೋಕ್ತಿ, ಅನವಶ್ಯ ಕ್ರಿಯಾವಿಶೇಷಣ ಅಥವಾ ನಾಮವಿಶೇಷಣ ಬಳಸದೆ ಸತ್ಯಸಂಗತಿಗಳನ್ನೇ ಬರೆಯುತ್ತೇನೆ. ವಿಶಾಲವಾದ ಸಾಮಾಜಿಕ ಅನುಭವದಿಂದಾಗಿ ಯಾವ ವಿಷಯವನ್ನು ಎತ್ತಿ ಹೇಳಬೇಕೆಂದು ನನಗೆ ಚೆನ್ನಾಗಿ ಅರ್ಥವಾಗಿದೆ. ಎಷ್ಟೋ ಇತಿಹಾಸಕಾರರಿಗೆ ಇದು ತಿಳಿಯದೆ ನಿರ್ಜೀವ ಕಥನವನ್ನು ನೀಡುತ್ತಾರೆ. ದೂರದರ್ಶನದಲ್ಲಿ ನಾನು ಪ್ರಸ್ತುತ ಪಡಿಸಿದ ‘ಒಂದಿಷ್ಟು ಇತಿಹಾಸ’ ಜನಪ್ರಿಯವಾಗಿತ್ತು ಎನ್ನುತ್ತಾರೆ. ಅದಕ್ಕೆ ನನ್ನ ಈ ವಿಧಾನವೇ ಕಾರಣ ಇರಬೇಕು.
ಇತಿಹಾಸ ಜೀವನಕ್ಕೆ ಹೇಗೆ ಮಾರ್ಗದರ್ಶಕ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದ್ದೇನೆ. ಅಪ್ರಿಯ ಸತ್ಯಗಳನ್ನು ಹೇಳದಿದ್ದರೆ ನಮಗೆ ಸೂಕ್ತ ಮಾರ್ಗದರ್ಶನ ಸಿಗದೆಂದು ಖಚಿತವಾಗಿ ತಿಳಿದು ಅದನ್ನು ಹೇಳುತ್ತ ಬಂದಿದ್ದೇನೆ. ಕನ್ನಡನಾಡಿನ ಶ್ರೀಸಾಮಾನ್ಯನಿಗೆ ರಾಜ್ಯದ ಇತಿಹಾಸವನ್ನು ಮುಟ್ಟಿಸುವಲ್ಲಿ ನೂರಾದರೂ ತರುಣರಿಗೆ ಇತಿಹಾಸ ಸಂಶೋಧನೆಯಲ್ಲಿ ಕುತೂಹಲ ಹುಟ್ಟಿಸಲು ಕಾರಣನಾದೆನೆಂಬ ಹೆಮ್ಮೆ ನನಗಿದೆ. ಶಾಸನಗಳ ಅಧ್ಯಯನ, ವಿವಿಧ ಭಾಷೆಗಳ ಅಧ್ಯಯನ ಹಾಗೂ ಇತಿಹಾಸ ಸಂಶೋಧನೆಯಲ್ಲಿ ತೊಡಗಿದ ಸುಮಾರು ೨೫ ಜನರ ಒಂದು ತಂಡ ನಮ್ಮ ಮಿಥಿಕ್ ಸೊಸೈಟಿ ಮತ್ತು ಇತಿಹಾಸ ಅಕಾಡೆಮಿಗಳ ಸುತ್ತ ಇರುವಂತಾದುದು ನನಗೆ ಹೆಮ್ಮೆ ತರುವ ಸಂಗತಿ ಎಂದ ಕಾಮತ್, ಆಲೂರು ವೆಂಕಟರಾಯರು ಮುಂದಿಟ್ಟ ಕರ್ನಾಟಕಾಂತರ್ಯಾಮಿ ಭಾರತಮಾತೆಯ ಸೇವೆಯ ಕಲ್ಪನೆ ನನಗೆ ಹಿಡಿಸಿದೆ ಎಂದು ದಾಖಲಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆ ಮಿಥಿಕ್ ಸೊಸೈಟಿಯ ಪದಾಧಿಕಾರಿ ಆಗಿದ್ದುದು ಸೇರಿದಂತೆ ಅದಕ್ಕೆ ಇವರ ಬಹುಮುಖಿ ಸೇವೆ ಸಂದಿದೆ.
ಜೀವನದುದ್ದಕ್ಕೂ ಪ್ರಾಮಾಣಿಕತೆ, ಶುದ್ಧಹಸ್ತಗಳನ್ನು ಒಂದು ವ್ರತವೆಂಬಂತೆ ಕಾಪಾಡಿಕೊಂಡು ಬಂದ ಕಾಮತ್ ಸರಳ ಜೀವನಕ್ಕೆ ಅಂಟಿಕೊಂಡಿದ್ದರು. ಅವರು ಹೆಚ್ಚು ಯೋಚಿಸದೆ ಕೊಳ್ಳುತ್ತಿದ್ದ ವಸ್ತುವೆಂದರೆ ಪುಸ್ತಕಗಳು ಮಾತ್ರವಂತೆ – ಒಂದು ಹಂತದಲ್ಲಿ ಅವರ ಸಂಪಾದನೆಯ ಶೇ. ೩೦ರಷ್ಟು ಪುಸ್ತಕ ಖರೀದಿಗೇ ಹೋಗುತ್ತಿತ್ತು. ಪತ್ನಿಯ ಅನಾರೋಗ್ಯ ಹಾಗೂ ಅಂಗವಿಕಲ ಪುತ್ರನ (ರಾಘವೇಂದ್ರ) ಚಿಕಿತ್ಸೆಗೂ ಡಾ| ಕಾಮತ್ ತುಂಬ ವ್ಯಯಿಸಿದ್ದರು; ಶ್ರಮಿಸಿದ್ದರು. ಇಬ್ಬರು ಪುತ್ರಿಯರು (ಅರ್ಪಣಾ ಮತ್ತು ಅರ್ಚನಾ) ವಿವಾಹಿತರಾಗಿ ಬೆಂಗಳೂರಲ್ಲೇ ನೆಲೆಸಿದ್ದಾರೆ; ಪುತ್ರನೂ ವಿವಾಹಿತನಾಗಿದ್ದು ತಂದೆ ಆತನ ಸ್ವಾವಲಂಬನೆಯ ಜೀವನಕ್ಕೆ ಅವಕಾಶ ಕಲ್ಪಿಸಿದ್ದರು.
ನಿವೃತ್ತಿ-ಪ್ರವೃತ್ತಿ
ನಿವೃತ್ತರಾದ ಕಾಮತರು ಜೀವನದ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ವೇಳಾಪಟ್ಟಿಯಂತೆ ಶಿಸ್ತುಬದ್ಧವಾಗಿದ್ದ ಜೀವನದಲ್ಲಿ ಓದು, ಬರವಣಿಗೆಗಳಿಗೆ ದೊಡ್ಡ ಸ್ಥಾನ ಮುಂದುವರಿದಿತ್ತು. ಹೀಗಿರುವಾಗ ಅವರಿಗೆ ಆಘಾತ ನೀಡಿದ್ದು, ೨೦೧೩ರ ಮಾರ್ಚ್ನಲ್ಲಿ ಸಂಭವಿಸಿದ ಪತ್ನಿ ಉಷಾ ಕಾಮತ್ ಅವರ ಅಗಲುವಿಕೆ. ಆ ನೋವನ್ನು ಸಹಿಸಲಾರದೆ ಅವರ ಮನಸ್ಸು, ದೇಹಗಳು ನಿಶ್ಶಕ್ತಿಗೊಂಡವು. ಪೂರ್ತಿ ಮರೆವು ಆವರಿಸಿತು. ಅದರಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ. ಅತ್ಯಂತ ಕ್ರಿಯಾಶೀಲರಾಗಿದ್ದ ಓರ್ವ ವ್ಯಕ್ತಿ ಕೊನೆಯ ಸುಮಾರು ಎರಡು ವರ್ಷಗಳನ್ನು ಆ ರೀತಿಯಲ್ಲಿ ಕಳೆದರು.
ಕಾಮತರು ಒಂದು ವಿಷಯಕ್ಕಲ್ಲ; ಸಮಗ್ರ ಕರ್ನಾಟಕ ಇತಿಹಾಸಕ್ಕೆ ಅಥಾರಿಟಿ; ಆ ಬಗ್ಗೆ ಯಾವುದೇ ಮಾಹಿತಿ ಕೇಳಿದರೂ ಅವರಲ್ಲಿ ಸ್ವಲ್ಪವಾದರೂ ಸಿಗುತ್ತದೆ; ಅದು ಅವರ ನಾಲಗೆಯ ಮೇಲೆಯೇ ಇರುತ್ತದೆ ಎನ್ನುವ ಸಂಶೋಧಕ, ವಿದ್ವಾಂಸ ಡಾ| ಶ್ರೀನಿವಾಸ ಹಾವನೂರು, ಮುಂದುವರಿದು, ಗುಣವೊಂದು ಅತಿಯಾಗಿದ್ದರೆ ದೋಷವಾಗಿ ಪರಿಣಮಿಸಬಹುದು. ಕಾಮತರದು ಬಿಚ್ಚುಮನದ ನೇರನುಡಿ. ಇದು ತುಸು ಹೆಚ್ಚಾಯಿತೆಂಬುದು ಹತ್ತಿರದಿಂದ ನೋಡಿದಾಗ ಗೊತ್ತಾಗುತ್ತದೆ. ಅದರಿಂದ ಅವರು ಅನೇಕ ಬಾರಿ ತೊಂದರೆಗೆ ಒಳಗಾಗುತ್ತಾರೆ ಎಂದು ಒಂದೆಡೆ ಹೇಳಿದ್ದಾರೆ. ಈ ಮಾತನ್ನು ಇನ್ನೊಂದು ಮಗ್ಗುಲಿನಿಂದ ನೋಡಿದಾಗ ಅದು ಕಾಮತರ ಬಲ ಎನ್ನಿಸಲೂಬಹುದು. ಏಕೆಂದರೆ ನಮಗೆ ಸ್ವಲ್ಪ ರಾಜಿಮಾಡಿಕೊಳ್ಳುವುದು ಅಭ್ಯಾಸವಾದರೆ ಎಷ್ಟೋ ಸಲ ಅದೇ ನಮ್ಮನ್ನು ಮುಳುಗಿಸುತ್ತದೆ. ಉರಿಯುವ ಪಂಜಿನಂತಹ ಕ್ರಿಯಾಶೀಲತೆಯಿಂದಾಗಿಯೇ ಅವರಿಗೆ ಅಷ್ಟೆಲ್ಲ ಕೆಲಸಗಳನ್ನು ಮಾಡುವುದು ಹಾಗೂ ಇತರರಿಂದ ಮಾಡಿಸುವುದು ಸಾಧ್ಯವಾಯಿತು ಎನಿಸುತ್ತದೆ. ಅದಕ್ಕೆ ಬೇಕಷ್ಟು ಉದಾಹರಣೆಗಳನ್ನು ಕೊಡಬಹುದು.