ಸೊಸೆಯನ್ನು ಮನೆಮಗಳಾಗಿಯೂ ಅತ್ತೆಯನ್ನು ಹೆತ್ತ ತಾಯಿಗೆ ಸಮಾನವಾಗಿಯೂ ಕಾಣಬಲ್ಲ ಅತ್ತೆ-ಸೊಸೆಯರಿರುವ ಮನೆ ನಿಜಕ್ಕೂ ಸ್ವರ್ಗವೇ ಸರಿ.
ಎಲ್ಲವನ್ನೂ ಒಪ್ಪಿಕೊಳ್ಳುವ, ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣುವ, ಬೇರೆಯವರ ಕಣ್ಣಿಗೂ ಒಳ್ಳೆಯದಾಗಿಯೇ ಕಾಣಿಸುವ ಹೆಣ್ಣೊಬ್ಬಳು ತನ್ನ ಸೊಸೆಯನ್ನು ಒಳ್ಳೆಯವಳಾಗಿ ಕಾಣಲಾರಳು, ಸೊಸೆಯ ಕಣ್ಣಿಗೂ ಒಳ್ಳೆಯವಳಾಗಿ ಕಾಣಲಾರಳು ಎಂದರೆ ಬಹುಶಃ ಬ್ರಹ್ಮ ತೀರಾ ಮನಸ್ಸು ಹಾಳಾಗಿದ್ದ ಸಮಯದಲ್ಲಿಯೇ ಅತ್ತೆ-ಸೊಸೆಯೆಂಬ ಸಂಬಂಧವನ್ನು ರೂಪಿಸಿರಬೇಕು. ಅತ್ತೆ-ಸೊಸೆಯರು ಒಂದೇ ಮನೆಯಲ್ಲಿರುವ ಯಾವ ಮನೆಯಲ್ಲಾದರೂ ನೋಡಿ, ಅವರ ನಡುವೆ ಒಂದು ಶೀತಲ ಸಮರ ನಡೆದೇ ನಡೆಯುತ್ತಿರುತ್ತದೆ. ಇತ್ತೀಚೆಗಂತೂ ಮದುವೆಗಿರುವ ಹೆಣ್ಣುಮಕ್ಕಳು ‘ಅತ್ತೆ, ಮಾವ ಜತೆಗಿರಬಾರದು’ ಎಂಬ ಷರತ್ತು ವಿಧಿಸಿಯೇ ಮದುವೆಗೆ ಒಪ್ಪಿಕೊಳ್ಳುವ ಸಂದರ್ಭ ಸೃಷ್ಟಿಯಾಗಿದೆ!
ಪತ್ರಿಕೆಗಳ ವರದಿ ನೋಡುತ್ತಿದ್ದರೆ ಭಯವಾಗುತ್ತದೆ. ಗಂಡ ಮನೆಯಲ್ಲಿಲ್ಲದ ವೇಳೆ ಮಹಿಳೆಯೊಬ್ಬಳ ಅತ್ತೆ, ಮೈದುನ, ನಾದಿನಿಯರು ಸೇರಿ ಹಿಂಸೆ ಕೊಟ್ಟಿರುವುದೋ, ಕೊಲೆ ಮಾಡಿರುವುದೋ, ಬಸುರಿ ಹೆಣ್ಣಾದರೂ ಸರಿ ಸೀಮೆಯೆಣ್ಣೆ ಸುರಿದು ಸುಟ್ಟಿರುವುದೋ ಇತ್ಯಾದಿ. ಹಾಗಿದ್ದರೆ ಇನ್ನೊಂದು ಮನೆಯಿಂದ ತಮ್ಮ ಮಗನ ಧರ್ಮಪತ್ನಿಯಾಗಿ ಬಂದ ಹುಡುಗಿಯನ್ನು ತಮ್ಮ ಮನೆಮಗಳೆಂದು ಕಾಣಲಾಗದ ಮನೆಗೆ ಇರುವ ತೊಂದರೆಯಾದರೂ ಏನು? ಆಕೆ ಕೂತರೂ ನಿಂತರೂ ನಡೆದರೂ ಮಲಗಿದರೂ ಎಲ್ಲದಕ್ಕೂ ಕಟಿಕಿಯಾಡುವ ಅತ್ತೆಯಿದ್ದರೆ ಆಕೆ ಮಾಡಬೇಕಾದುದಾದರೂ ಏನು? ತಾಳಿ ಕಟ್ಟಿದ ಗಂಡ ಪತ್ನಿಯ ಒತ್ತಾಸೆಯಾಗಿ ನಿಂತರೆ ಪರವಾಗಿಲ್ಲ. ಆಕೆ ಬದುಕಿನ ಜತೆಗೆ ಹೇಗಾದರೂ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ ಅವನೂ ಅಮ್ಮನ ತಾಳಕ್ಕೆ ಕುಣಿಯುವ ಗೊಂಬೆಯಾದರೆ ಹೆಣ್ಣು ಬದುಕುವುದು ಹೇಗೆ? ಹೆಣ್ಣಾಗಿ ಹುಟ್ಟಬಾರದಿತ್ತೆಂದೋ, ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯಿತೆಂದೋ ಅನ್ನಿಸುವುದು ಇಂತಹ ಸಂದರ್ಭಗಳಲ್ಲಿಯೇ ತಾನೆ?
ಕೆಲವು ಸಣ್ಣಪುಟ್ಟ ಸಂಗತಿಗಳನ್ನು ಗಮನಿಸೋಣ. ಮಗ ತನ್ನ ಪತ್ನಿಗೆಂದು ಒಡವೆಯೋ ಸೀರೆಯೋ ತಂದರೆ ತಾಯಿಯ ಜೀವ ಮಿಡುಕುತ್ತದೆ. ‘ಅಯ್ಯೋ ಅಯ್ಯೋ.. ನನ್ನ ಮಗನ ಕೈಯಲ್ಲಿ ಅದೆಷ್ಟು ಖರ್ಚು ಮಾಡಿಸುತ್ತಾಳೋ ಇವಳು.. ಮೂರುತಿಂಗಳಿಗೊಮ್ಮೆ ಹೊಸ ಸೀರೆ ಕೊಂಡುಕೊಳ್ಳುತ್ತಾಳೆ. ನಾವೆಲ್ಲ ಏನು ಇಷ್ಟು ಸೀರೆ ಇಟ್ಟುಕೊಂಡಿದ್ದೆವಾ? ಅದ್ಯಾವ ಘಳಿಗೆಯಲ್ಲಿ ಮನೆಯೊಳಗೆ ಕಾಲಿಟ್ಟಳೋ ಬರೀ ಖರ್ಚು..’
ವಿಪರ್ಯಾಸ
ಅದೇ ಜೀವ ಇನ್ನೊಂದು ಸಂದರ್ಭದಲ್ಲಿ ತನ್ನ ಕಳೆದ ಯೌವನದ ದಿನಗಳ ಬಗ್ಗೆ ಮಾತಾಡುತ್ತಾರೆ ಎಂದುಕೊಳ್ಳೋಣ. ‘ಉಂಡು ಉಟ್ಟು ಮಾಡಬೇಕಾದ ವಯಸ್ಸಿನಲ್ಲಿ ವರ್ಷಕ್ಕೊಂದು ಹೊಸಸೀರೆ ಕೊಂಡುಕೊಳ್ಳಲೂ ಆಗುತ್ತಿರಲಿಲ್ಲ. ಬರೀ ಮಕ್ಕಳಿಗೆ ಅಂತ ಕೂಡಿಡುವುದೇ ಆಯ್ತು. ಆವಾಗಿಲ್ಲದ ಮೇಲೆ ಇನ್ನು ಮುದುಕಿಯಾದ ಮೇಲೆ ಎಂಥದಕ್ಕೆ?’ ಅಂದರೆ ಆಕೆಗಿದ್ದ ಆಕಾಂಕ್ಷೆಗಳು ಬಡತನದ ಕಾರಣದಿಂದ ಪೂರೈಕೆಯಾಗಿಲ್ಲ. ಅದೇ ಈಗ ಪರಿಸ್ಥಿತಿ ಚೆನ್ನಾಗಿದೆ. ಸೊಸೆಗೆ ಉಟ್ಟು ಮೆರೆಯುವ ಕಾಲ. ಮಗ ತಂದು ಕೊಡುತ್ತಾನೆ ಎಂದರೆ ಆಕೆಗೆ ಸಹಿಸಲು ಸಾಧ್ಯವಾಗುವುದಿಲ್ಲ. ಅಂದರೆ ಈಡೇರದೇ ಉಳಿದ ತನ್ನ ಬಯಕೆಗಳು ಸೊಸೆಗೂ ಈಡೇರಬಾರದು ಎಂಬುದು ಅವಳ ಆಸೆ. ತಾನು ಪಟ್ಟ ಕಷ್ಟಗಳನ್ನೆಲ್ಲ ತನ್ನ ಸೊಸೆಯೂ ಪಡಲಿ ಎಂಬ ಸುಪ್ತ ಮನಸ್ಸಿನ ಅಭೀಷ್ಟೆ.
ಇದೇ ತಾಯಿಯ ಮಗಳಿಗೆ ಅವಳ ಗಂಡ ಹೊಸದಾಗಿ ಒಡವೆ, ಸೀರೆ ತಂದನೆಂದುಕೊಳ್ಳೋಣ. ಈಕೆಗೆ ಹೃದಯ ಸಂತೃಪ್ತಿಯಿಂದ ಉಬ್ಬಿ ಹೋಗುತ್ತದೆ. ‘ಅಳಿಯ ಬಹಳ ಒಳ್ಳೆಯವನು. ಮಗಳಿಗೆ ಬೇಕು ಬೇಕಾದಂತೆ ಸೀರೆ ಕೊಡಿಸುತ್ತಾನೆ. ಸದ್ಯಃ, ನಾನು ಕಷ್ಟ ಪಟ್ಟಂತೆ ನನ್ನ ಮಗಳು ಕಷ್ಟ ಪಡುತ್ತಿಲ್ಲ. ನಾನು ಸಂಪಾದಿಸಿದ ಪುಣ್ಯ. ಅಳಿಯ ಮಗಳನ್ನು ರಾಣಿಯಂತೆ ಮೆರೆಸುತ್ತಾನೆ.’ ಒಂದೇ ವಿಷಯ, ಎರಡು ಭಿನ್ನ ಸಂದರ್ಭ. ಒಂದು ಸನ್ನಿವೇಶದಲ್ಲಿ ಅತ್ತೆ, ಇನ್ನೊಂದರಲ್ಲಿ ಅಮ್ಮ. ಸ್ಪಂದಿಸುವ ರೀತಿಯಲ್ಲಿ ಮಾತ್ರ ಅಜಗಜಾಂತರ.
ಯಾರು ಹಿತವರು?
ಸೊಸೆ ಹೊರಗೆ ದುಡಿಯುವಂತಿದ್ದರೆ ಮೂದಲಿಕೆಗಳು ಇನ್ನೂ ಜಾಸ್ತಿಯಾಗುತ್ತವೆ. ‘ಅವಳಿಗೇನು, ಬಣ್ಣಬಣ್ಣದ ಸೀರೆಯುಟ್ಟು ಬಿಂಕ ಬಿನ್ನಾಣ ಮಾಡಿಕೊಂಡು ಓಡಾಡಿದರಾಯಿತು. ಮನೆಗೆ ಬಂದು ವಿಶೇಷ ಕೆಲಸವೇನೂ ಮಾಡುವುದಿಲ್ಲ. ಅಷ್ಟಕ್ಕೇ ಸುಸ್ತು ಸುಸ್ತು ಅನ್ನುತ್ತಾಳೆ. ನಮ್ಮಂತೆ ಮನೆಯಲ್ಲಿ ಕಸಮುಸುರೆ ಮಾಡಿಕೊಂಡಿರುವ ಕಷ್ಟ ಅವಳಿಗೇನು ಗೊತ್ತು?’ ಮನೆಯೊಳಗಿನ ಕೆಲಸಗಳನ್ನೂ ಮಾಡಿಕೊಂಡು ಹೊರಗೆ ಕಛೇರಿಯಲ್ಲೂ ದುಡಿದು ಸಂಜೆ ಮನೆಗೆ ಹಿಂದಿರುಗಿದ ಮೇಲೆ ಮಿಕ್ಕಿರುವ ಕೆಲಸಗಳನ್ನು ಮುಗಿಸಿಕೊಂಡು ರಾತ್ರಿ ಹತ್ತರ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವ ಸೊಸೆ ತನ್ನ ಕಷ್ಟಗಳನ್ನು ಹೇಳಿಕೊಳ್ಳುವುದಾದರೂ ಯಾರಲ್ಲಿ? ಅವಳ ಸುಸ್ತು ಸಂಕಟಗಳನ್ನು ಅರ್ಥ ಮಾಡಿಕೊಳ್ಳುವವರು ಯಾರು?
ಇನ್ನೂ ತಮಾಷೆ ಕಾಣಿಸುವುದೆಂದರೆ ಸೊಸೆ ಬಂದ ಮೇಲೆ ಮಗ ಪೂರ್ತಿಯಾಗಿ ಅವಳ ಮಾತೇ ಕೇಳುತ್ತಾನೆ ಎಂದು ಅತ್ತೆಮ್ಮಂದಿರು ಅಲವತ್ತುಕೊಳ್ಳುವುದು. ‘ನೋಡಿ ಎಷ್ಟರಮಟ್ಟಿಗೆ ಮಂಕುಬೂದಿ ಎರಚಿದ್ದಾಳೆ ಅವಳು. ಮೊದಲು ಎಲ್ಲದಕ್ಕೂ ನನ್ನ ಸಲಹೆ ಕೇಳುತ್ತಿದ್ದ. ಈಗೀಗ ಅವನಿಗೆ ಅಮ್ಮನ ಮಾತು ಕೇಳುವ ವ್ಯವಧಾನವೇ ಇಲ್ಲ. ಎಲ್ಲ ಅವಳು ಹೇಳಿದ ಹಾಗೆ. ಅವಳೂ ಅಷ್ಟೇ. ಚೆನ್ನಾಗಿ ಇವನಿಗೆ ಕಿವಿಯೂದುತ್ತಾಳೆ. ಇವನು ಮುಗ್ಧ. ಏನೂ ಗೊತ್ತಾಗುವುದಿಲ್ಲ. ಅವಳು ಹೇಳಿದ್ದು ಕೇಳಿಕೊಂಡು ಅವಳ ತಾಳಕ್ಕೆ ಕುಣಿಯುತ್ತಾನೆ. ಹೆತ್ತವರು ಹೊಟ್ಟೆಬಟ್ಟೆ ಕಟ್ಟಿ ಇವನನ್ನು ಬೆಳೆಸಿದ್ದು ಮರೆತೇ ಬಿಟ್ಟಿದ್ದಾನೆ..’
ಇದೇ ವರಸೆ ಮಗಳ ವಿಷಯಕ್ಕೆ ಬಂದಾಗ ಬದಲಾಗುವ ಪರಿ ಹೀಗೆ, ‘ಅಳಿಯಂದಿರಂತೂ ಬಿಡಿ, ದೇವರಂಥವರು. ಮಗಳು ಹಾಕಿದ ಗೆರೆ ಸ್ವಲ್ಪವೂ ದಾಟುವುದಿಲ್ಲ. ಅಲ್ಲಿ ಎಲ್ಲ ಉಸ್ತುವಾರಿಯೂ ಅವಳದೇ. ಮನೆಯಲ್ಲಿ ಅವಳು ಹೇಳಿದ ಮಾತೇ ನಡೆಯುವುದು. ಅತ್ತೆ ಮಾವನೂ ಅವಳ ಅನುಮತಿಯಿಲ್ಲದೇ ಏನೂ ಮಾಡುವ ಹಾಗಿಲ್ಲ..’ ಇದ್ಯಾವ ಸೀಮೆಯ ನ್ಯಾಯ?
ಅತ್ತೆ-ಸೊಸೆಯ ಸಂಬಂಧ ತಾಯಿ ಮಗಳ ಬಂಧಕ್ಕಿಂತಲೂ ವಿಶೇಷವಾದದ್ದೇ ಆಗಿರಬಹುದು. ಆದರೆ ಇವರಿಬ್ಬರೂ ಅನ್ಯೋನ್ಯವಾಗಿರುವ ಸಂದರ್ಭ ತೀರಾ ವಿರಳ. ಸೊಸೆಯನ್ನು ಮನೆಮಗಳಾಗಿಯೂ ಅತ್ತೆಯನ್ನು ಹೆತ್ತ ತಾಯಿಗೆ ಸಮಾನವಾಗಿಯೂ ಕಾಣಬಲ್ಲ ಅತ್ತೆ ಸೊಸೆಯರಿರುವ ಮನೆ ನಿಜಕ್ಕೂ ಸ್ವರ್ಗವೇ ಸರಿ. ಇವರ ನಡುವಿನ ಶೀತಲ ಸಮರಗಳು ವಿಷಮವಾಗುತ್ತಾ ಬಂದರೆ ಮಾತ್ರ ಆ ಮನೆ ನರಕವಾಗುತ್ತದೆ. ಸ್ಮಶಾನ ಸದೃಶವಾಗುತ್ತದೆ. ಅತ್ತೆ-ಸೊಸೆಯರ ನಡುವೆ ಮಗ/ಗಂಡನೆಂಬ ಜೀವಿ ಸಿಲುಕಿ ಒದ್ದಾಡುವಂತಾದರೆ ಅದು ಅವನ ದೌರ್ಭಾಗ್ಯವೂ ಹೌದು. ಒಂದೋ ಅಮ್ಮ, ಇಲ್ಲವೇ ಪತ್ನಿ ಎಂಬ ಆಯ್ಕೆ ಅವನಿಗೆ ಎದುರಾದರೆ ಅವನಷ್ಟು ಅಸಹಾಯಕ ಯಾರೂ ಇಲ್ಲ. ಅಮ್ಮನನ್ನೇ ನೆಚ್ಚಿಕೊಂಡರೆ ‘ಈ ಸೌಭಾಗ್ಯಕ್ಕೆ ಇವನಿಗೆ ಮದುವೆ ಯಾಕೆ ಬೇಕಿತ್ತು? ಅಮ್ಮನ ಸೆರಗಿನ ಹಿಂದೆ ಬಚ್ಚಿಟ್ಟುಕೊಂಡಿರಬೇಕಿತ್ತು’ ಎಂಬ ಮಾತು ಕೇಳಿಬರುತ್ತದೆ. ಅದೇ ಪತ್ನಿಯ ಪರವಾಗಿ ನಿಂತನೋ ‘ಹೆಂಡತಿ ಬಂದದ್ದೇ ಬಂದದ್ದು. ನೋಡಿ ಅವನು ಹೇಗೆ ಬದಲಾದ? ಅವನಿಗಾಗಿ ಅವಳು ಅದೆಷ್ಟು ಕಷ್ಟಪಟ್ಟಳು. ಈಗ ಎಲ್ಲ ಮರೆತಿದ್ದಾನೆ’ ಎಂಬ ವಿಮರ್ಶೆ ಎದುರಾಗುತ್ತದೆ.
`ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ’ – ಎಂಬ ಕವಿವಾಣಿ ಅದೆಷ್ಟು ಅರ್ಥಗರ್ಭಿತ!