ಯಾವುದೇ ಪ್ರಜಾಪ್ರಭುತ್ವಾನುಗುಣ ಸರ್ಕಾರದ ದಾರ್ಢ್ಯವಂತಿಕೆಯ ಸೂಚಕವೆಂದರೆ ಅದರಲ್ಲಿಯ ನ್ಯಾಯಾಂಗದ ಕ್ರಿಯಾಶೀಲತೆಯ ಮಟ್ಟ – ಎಂಬುದು ರಾಜ್ಯಶಾಸ್ತ್ರದ ಒಂದು ಗೃಹೀತ ಸೂತ್ರ. ಈ ದೃಷ್ಟಿಯಿಂದ ಪರಿಶೀಲಿಸಿದಲ್ಲಿ ಭಾರತದ ಸದ್ಯಃಸ್ಥಿತಿ ಅಷ್ಟೇನೂ ಸಮಾಧಾನ ನೀಡುವಂತಿಲ್ಲ ಎನ್ನಬೇಕಾಗಿದೆ. ಕಳೆದ (2016) ಏಪ್ರಿಲ್ 25ರಂದು ದೆಹಲಿಯ ವಿಜ್ಞಾನಭವನದಲ್ಲಿ ನಡೆದ ಒಂದು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತೀರ್ಥಸಿಂಹ ಠಾಕೂರ್ ಅವರು ದೇಶದ ವಿವಿಧ ನ್ಯಾಯಾಲಯಗಳಲ್ಲಿನ ನ್ಯಾಯಾಧೀಶರ ಸಂಖ್ಯೆಯ ತೀವ್ರ ಕೊರತೆಯನ್ನು ನೀಗಿಸಿ ನ್ಯಾಯಾಂಗದ ಗೌರವವನ್ನು ಉಳಿಸುವಂತೆ ಅಶ್ರುಪೂರ್ಣರಾಗಿ ನಿವೇದಿಸಿದುದು ದೇಶವನ್ನೆಲ್ಲ ವಿಚಲಿತಗೊಳಿಸಿತು.
ಸಮಸ್ಯೆ ಹೊಸದೇನಲ್ಲ; ಅನೇಕ ವರ್ಷಗಳಿಂದ ಉಲ್ಬಣಗೊಳ್ಳುತ್ತ ಬಂದಿರುವುದು. ಆದರೂ ಅದರ ಅಗಾಧತೆಯ ದರ್ಶನ ಎಲ್ಲರನ್ನೂ ಆತಂಕಗೊಳಿಸಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಶೇ. 19ರಷ್ಟು, ರಾಜ್ಯ ಉಚ್ಚ ನ್ಯಾಯಾಲಯಗಳಲ್ಲಿ ಶೇ. 44ರಷ್ಟು ಮತ್ತು ಅಧೀನ ನ್ಯಾಯಾಲಯಗಳಲ್ಲಿ ಶೇ. 25ರಷ್ಟು ನ್ಯಾಯಾಧೀಶ ಸ್ಥಾನಗಳು ರಿಕ್ತವಾಗಿ ಉಳಿದಿವೆ. ಅಲಹಾಬಾದ್ ಉಚ್ಚ ನ್ಯಾಯಾಲಯ ಒಂದರಲ್ಲಿಯೇ 88 ನ್ಯಾಯಾಧೀಶ ಹುದ್ದೆಗಳು ಖಾಲಿ ಬಿದ್ದಿವೆ. ಬಿಹಾರದ ಅಧೀನ ನ್ಯಾಯಾಲಯಗಳಲ್ಲಿ 730 ನ್ಯಾಯಾಧೀಶ ಹುದ್ದೆಗಳು ಖಾಲಿ ಇವೆ. ವಿವಿಧ ರಾಜ್ಯ ಉಚ್ಚ ನ್ಯಾಯಾಲಯಗಳಲ್ಲಿ ಒಟ್ಟು 464 ನ್ಯಾಯಾಧೀಶ ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಭಾವೋದ್ವಿಗ್ನರಾದುದು ಅಚ್ಚರಿ ತರಿಸಬೇಕಾಗಿಲ್ಲ.
ವಿಳಂಬ ಸಂಪ್ರದಾಯ
ಇದೀಗ ತೀರ್ಪಿಗಾಗಿ ಕಾದಿರುವ ಮೊಕದ್ದಮೆಗಳು ಮೂರು ಕೋಟಿಯಷ್ಟು ಇವೆ. ಸರ್ವೋಚ್ಚ ನ್ಯಾಯಾಲಯದಲ್ಲಿಯೆ ಇದೀಗ ನಿರ್ಣಯವಾಗದೆ ಉಳಿದಿರುವ ಮೊಕದ್ದಮೆಗಳ ಸರಾಸರಿ ವಯಸ್ಸು 13 ವರ್ಷ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಒಂದೊಂದು ಮೊಕದ್ದಮೆಯ ಸಲುವಾಗಿ ಮನವಿದಾರರು ನ್ಯಾಯಾಲಯದಲ್ಲಿ ಹಾಜರಾಗಬೇಕಾಗಿರುವುದು ಸರಾಸರಿ 78 ದಿನಗಳಷ್ಟು ಕಾಲ. ಹಲವು ನ್ಯಾಯಾಲಯಗಳಲ್ಲಿ ನಿರ್ಣಯವಾಗದೆ ಉಳಿದಿರುವ ಮೊಕದ್ದಮೆಗಳಲ್ಲಿ 1940ರ ಮತ್ತು 1950ರ ದಶಕಗಳಲ್ಲಿ ದಾಖಲೆಮಾಡಲಾಗಿದ್ದ ವಯೋವೃದ್ಧ ಮೊಕದ್ದಮೆಗಳೂ ಇವೆ. ಅಜ್ಜ ದಾಖಲೆ ಮಾಡಿದ ಮೊಕದ್ದಮೆ ಮೊಮ್ಮಗನ ಕಾಲಕ್ಕೆ ನಿರ್ಣಯವಾಗುತ್ತದೆ ಎಂದು ಸಾಮತಿ ಇದೆ. ನ್ಯಾಯಾಲಯಗಳ ಮತ್ತು ನ್ಯಾಯಾಧೀಶರುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ 1987ರಷ್ಟು ಹಿಂದಿನಿಂದ ಕಾನೂನು ಆಯೋಗ (ಲಾ ಕಮಿಶನ್) ಆಗ್ರಹಿಸುತ್ತ ಬಂದಿದೆ.
ನ್ಯಾಯಾಧೀಶರುಗಳ ಕೊರತೆಯೇ ಇಷ್ಟು ಅಗಾಧಪ್ರಮಾಣದ್ದಾಗಿರುವಾಗ ಅರ್ಹತೆ, ದಕ್ಷತೆ ಮೊದಲಾದ ಅಂಶಗಳ ಬಗೆಗೆ ಯೋಚಿಸಲು ಯಾರಿಗೆ ತಾನೆ ಅವಧಾನವಿದೆ! ಪಟ್ನಾದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಒಂದು ಮೊಕದ್ದಮೆಯ ನಿರ್ಣಯಕ್ಕೆ ವ್ಯಯಮಾಡುವ ಸರಾಸರಿ ಸಮಯ ಎರಡು ನಿಮಿಷಗಳು ಎಂದು ದಾಖಲೆಯಾಗಿದೆ. ಇನ್ನು ಅಡ್ಜರ್ನ್ಮೆಂಟುಗಳಂಥ ಮೂಲ-ವ್ಯಾಧಿಯ ಬಗೆಗೆ ಎಷ್ಟು ಕಡಮೆ ಹೇಳಿದರೆ ಅಷ್ಟು ಒಳ್ಳೆಯದು. ತುರ್ತು ಸುಧಾರಣೆ ಬೇಡುವ ಕ್ಷೇತ್ರ ಇದು.
ಭಾರತೀಯ ನ್ಯಾಯಾಲಯಗಳ ವಿಳಂಬಸಂಪ್ರದಾಯ ಅಂತರರಾಷ್ಟ್ರೀಯ ವಲಯಗಳಲ್ಲಿಯೂ ಟೀಕೆಗೊಳಗಾಗಿದೆ. ಇಂಗ್ಲೆಂಡಿನಲ್ಲಿ ಅಡ್ಜರ್ನ್ಮೆಂಟುಗಳು ವಿರಳವಾಗಷ್ಟೇ ದೊರೆಯುತ್ತವೆ; ಹೆಚ್ಚಿನ ಸಂದರ್ಭಗಳಲ್ಲಿ ಪ್ರತಿವಾದಿಗಳ ಸಮಯವನ್ನು ವ್ಯಯಮಾಡಿದುದಕ್ಕಾಗಿ ಮನವಿದಾರರು ವೆಚ್ಚವನ್ನು ತೆರಬೇಕಾಗುತ್ತದೆ. ಈ ಪ್ರತಿಬಂಧಕ ವ್ಯವಸ್ಥೆಗಳಿಂದಾಗಿ ಅಲ್ಲಿ ಅಡ್ಜರ್ನ್ಮೆಂಟಿಗಾಗಿ ಕೋರುವವರು ವಿರಳ. ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಯೂ ಆಗಿದೆ. ಈ ದಕ್ಷತೆಯ ಕಾರಣದಿಂದಾಗಿ ಅಂತರರಾಷ್ಟ್ರೀಯ ಮೊಕದ್ದಮೆಗಳನ್ನು ಇಂಗ್ಲೆಂಡಿನ ನ್ಯಾಯಾಲಯಗಳಿಗೊಯ್ಯಲು ಕಕ್ಷಿದಾರರು ಒಲವನ್ನು ತೋರುತ್ತಿದ್ದಾರೆ. ಭಾರತದಲ್ಲಿ ವಿಳಂಬದ ರೂಢಿಯಿಂದಾಗಿ ವ್ಯಕ್ತಿಗಳಿಗೂ ರಾಷ್ಟ್ರಕ್ಕೂ ಎಷ್ಟು ನಷ್ಟ ಘಟಿಸುತ್ತಿದೆಯೆಂದು ಲೆಕ್ಕಹಾಕತೊಡಗಿದರೆ ಹುಚ್ಚೇ ಹಿಡಿದೀತು. ಸರಾಸರಿ ಒಬ್ಬೊಬ್ಬ ಮನವಿದಾರನು ಒಂದೊಂದು ಮೊಕದ್ದಮೆಗಾಗಿ ನ್ಯಾಯಾಲಯಕ್ಕೆ ಅಲೆಯುವುದರಿಂದ ಉಂಟಾಗುವ ಸ್ವೀಯ ಉತ್ಪಾದಕತೆಯ ನಷ್ಟ ಸರಾಸರಿ ರೂ. 50,387 ಎಂದು ಒಂದು ಅಂದಾಜು.
ಸಾಂಸ್ಥಿಕ ಸಮಸ್ಯೆಗಳು
ನ್ಯಾಯಾಲಯಗಳ ರಜಾದಿನಗಳ ಆಧಿಕ್ಯವೂ ಸಮಸ್ಯೆಯ ಜಟಿಲತೆಗೆ ಕೊಡುಗೆ ನೀಡಿದೆ. ಸರ್ವೋಚ್ಚ ನ್ಯಾಯಾಲಯ ವರ್ಷದಲ್ಲಿ ಕೆಲಸ ಮಾಡುವ ದಿನಗಳು 193 ಮಾತ್ರ; ಉಚ್ಚ ನ್ಯಾಯಾಲಯಗಳು 210 ದಿನಗಳು. ಫ್ರಾನ್ಸ್ ಮೊದಲಾದ ದೇಶಗಳಲ್ಲೂ ಅಮೆರಿಕದಲ್ಲೂ ನ್ಯಾಯಾಲಯಗಳಿಗೆ ಭಾರತದಲ್ಲಿರುವಂತೆ ಬೇಸಗೆ ರಜೆ ಇಲ್ಲ. ಕೆನಡಾದಲ್ಲಿ ನ್ಯಾಯಾಲಯ ರಜಾದಿನಗಳು ವರ್ಷದಲ್ಲಿ 11 ಮಾತ್ರ; ಇಂಗ್ಲೆಂಡಿನಲ್ಲಿ 24 ದಿನಗಳಷ್ಟು.
ನ್ಯಾಯಾಂಗ ಸುಧಾರಣೆ ಹಲವಾರು ಮುಖಗಳಲ್ಲಿ ಆಗಬೇಕಾಗಿದೆಯೆಂದು ಸೂಚಿಸಲು ಮೇಲಣ ವಿವರಗಳನ್ನು ಪ್ರಸ್ತಾವಿಸಬೇಕಾಯಿತು. ನ್ಯಾಯಾಧೀಶರುಗಳ ಸಂಖ್ಯೆಯೂ ದಕ್ಷತೆಯೂ ಹೆಚ್ಚುವುದರ ಜೊತೆಜೊತೆಗೇ ನ್ಯಾಯಾಲಯಗಳ ಭಾಗವಾದ ಯಂತ್ರಾಂಗದ ಕ್ಷಮತೆಯೂ ಹೆಚ್ಚಬೇಕಾಗಿದೆ. ನ್ಯಾಯಾಲಯಗಳು ಈಗಿರುವುದರ ಎರಡರ? ಪ್ರಮಾಣದಲ್ಲಿ ಕೆಲಸ ಮಾಡಿದರೂ ಈಗ ಇರುವ ಮೊಕದ್ದಮೆಗಳನ್ನು ಮುಗಿಸಲು ೬೦ ವ? ಹಿಡಿಯುತ್ತದೆನ್ನಲಾಗಿದೆ. ನ್ಯಾಯವ್ಯವಸ್ಥೆಯ ಸಂಖ್ಯಾತ್ಮಕ ವೃದ್ಧಿ, ಗುಣಾತ್ಮಕ ವೃದ್ಧಿ – ಎರಡೂ ಆಗಬೇಕಾಗಿದೆ.
ಸರ್ಕಾರದ ಪಾತ್ರ
ನ್ಯಾಯಾಲಯಗಳ ಮೇಲಿನ ಹೊರೆಯನ್ನು ತಗ್ಗಿಸುವುದರಲ್ಲಿ ಸರ್ಕಾರದ ಪಾತ್ರ ಪ್ರಮುಖವಾಗಿದೆ. ನ್ಯಾಯಾಧೀಶರುಗಳ ಸಂಖ್ಯೆಯ ಹೆಚ್ಚಳ, ನ್ಯಾಯಾಂಗದ ಒಳಹಂದರದ ಎಂದರೆ ಯಂತ್ರಾಂಗದ ಸಶಕ್ತೀಕರಣ, ಹೆಚ್ಚಿನ ನ್ಯಾಯಾಲಯಗಳ ಘಟನೆ – ಇವೆಲ್ಲ ಸರ್ಕಾರದ ವ್ಯಾಪ್ತಿಯ ಪ್ರಕ್ರಿಯೆಗಳೇ. ಇನ್ನೊಂದು ಅತ್ಯಂತ ಮುಖ್ಯ ಅಂಶವೂ ಇದೆ. ಸರ್ಕಾರದ ಕಾರ್ಯಾಂಗದ ತರ್ಕಹೀನ ನಿರ್ಣಯಗಳು ಮತ್ತು ವಿ?ಯಗಳನ್ನು ನಿರ್ಣಯಿಸದೆ ಮುಂದೂಡುತ್ತ ಹೋಗುವ ಪ್ರವೃತ್ತಿ – ಇವುಗಳಿಂದಾಗಿಯೆ ಸಾವಿರಾರು ಮೊಕದ್ದಮೆಗಳು ನ್ಯಾಯಾಲಯ ಕಟ್ಟೆಯನ್ನೇರುತ್ತಿವೆ. ನ್ಯಾಯಾಲಯವು ಯಾವುದೇ ಮನವಿಯನ್ನು ಸ್ವೀಕರಿಸದಿರುವುದು ಶಕ್ಯವಲ್ಲ; ಏಕೆಂದರೆ ರಾಜ್ಯಾಂಗದಲ್ಲಿ ನ್ಯಾಯಾಂಗವೇ ಅಂತಿಮ ಆಸರೆ. ಈಚಿನ ವರ್ಷಗಳಲ್ಲಿ ಪರಿಸರಸಂಬಂಧಿಯಾದವು, ಭಾ?ಸಂಬಂಧಿಯಾದವು, ಶಿಕ್ಷಣಸಂಬಂಧಿಯಾದವು, ನಗರಾಡಳಿತಗಳಿಗೆ ಸಂಬಂಧಿಸಿದವು ಮೊದಲಾದ ಹತ್ತಾರು ವಿಷಯಗಳಲ್ಲಿ ಸರ್ವೋಚ್ಚ ನ್ಯಾಯಾಲಯವೂ ಉಚ್ಚ ನ್ಯಾಯಾಲಯಗಳೂ ನಿರ್ದೇಶನ ನೀಡಬೇಕಾದ ಅನಿವಾರ್ಯತೆ ಉಂಟಾಗಿದೆ. ಹೀಗೆ ಸರ್ಕಾರಗಳೇ ಅಧಿಕಾಂಶ ನ್ಯಾಯಾಂಗ ಪ್ರಕರಣಗಳ ಉದ್ಗಮಸ್ಥಾನಗಳಾಗಿವೆ. ತನ್ನದು ಪರಮಾಧಿಕಾರವೆಂಬ ಮಾನಸಿಕತೆಯಿಂದ ಸರ್ಕಾರ ಹೊರಬರಬೇಕಾಗಿದೆ. ತಾವೂ ದಂಡ್ಯರೆಂಬ ಭಾವನೆಯನ್ನು ಸರ್ಕಾರೀ ಅಧಿಕಾರಿಗಳೂ ನೌಕರರೂ ಅರಗಿಸಿಕೊಳ್ಳಬೇಕಾಗಿದೆ. ಸರ್ಕಾರದಲ್ಲಿಯೂ ಅಧಿಕಾರಿಗಳಲ್ಲಿಯೂ ಉತ್ತರಬಾಧ್ಯತೆಯ ಮಟ್ಟ ಹೆಚ್ಚದಿದ್ದಲ್ಲಿ ಪ್ರಜಾಪ್ರಭುತ್ವಾನುಸರಣೆಯೂ ಪ್ರಜೆಗಳ ಸಂವಿಧಾನಿಕ ಹಕ್ಕುಗಳೂ ಗ್ರಂಥಸ್ಥಮಾತ್ರವಾಗಿ ಉಳಿದಾವು.
ಕ್ಷಮತೆ ಹೆಚ್ಚಲಿ
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಈಚಿನ ವರ್ಷಗಳಲ್ಲಿ ಕೆಲವು ನ್ಯೂನತೆಗಳು ತಲೆದೋರಿರುವುದನ್ನು ಅಲ್ಲಗಳೆಯಲಾಗದು. ಒಂದಷ್ಟುಮಟ್ಟಿಗೆ ಸಮಾಜದಲ್ಲೆಲ್ಲ ಹರಡಿರುವ ಶೈಥಿಲ್ಯದ ಪರಿಣಾಮ ನ್ಯಾಯಾಂಗದ ಮೇಲೂ ಆಗಿದೆಯೆನಿಸುತ್ತದೆ. ಜೀವನದ ಯಾಂತ್ರೀಕರಣ, ಮೌಲ್ಯಹ್ರಾಸ, ಹಣಕ್ಕೆ ದೊರೆತಿರುವ ಯಾಜಮಾನ್ಯ, ಜಾಗತೀಕರಣದ ಅಡ್ಡಪರಿಣಾಮಗಳು, ಕೌಟುಂಬಿಕ- ಸಾಮಾಜಿಕ ಸಂಬಂಧಗಳು ಶಿಥಿಲಗೊಂಡಿರುವುದು – ಈ ಪ್ರವೃತ್ತಿಗಳ ಪ್ರಭಾವವು ನ್ಯಾಯಾಂಗವೂ ಸೇರಿದಂತೆ ಎಲ್ಲ ಜೀವನಕ್ಷೇತ್ರಗಳ ಮೇಲೂ ಆಗಿದೆ. ಆದರೂ ಈಗಿನ ಸ್ಥಿತಿಯಲ್ಲಿಯೂ ಎಲ್ಲ ವಿ?ಮ ಸನ್ನಿವೇಶಗಳಲ್ಲಿಯೂ ಅಂತಿಮವಾಗಿ ಆಶ್ರಯಣೀಯವಾಗಿರುವುದು ನ್ಯಾಯಾಂಗವೇ – ಎಂಬುದು ನಾಗರಿಕಜೀವನದ ಆಧಾರಸಮ್ಮತಿಯೇ ಆಗಿದೆ. ಜನತೆಯಲ್ಲಿ ಈಗಲೂ ಸ್ಥಿರವಾಗಿರುವ ಈ ವಿಶ್ವಾಸಕ್ಕೆ ಧಕ್ಕೆಯೊದಗಿದರೆ ಉಂಟಾಗಬಹುದಾದ ಅರಾಜಕಸ್ಥಿತಿ ಭಯಾನಕವಾದೀತು. ನ್ಯಾಯಾಧೀಶರುಗಳ ನೇಮಕ ಮೊದಲಾದ ವಿ?ಯಗಳಿಗೆ ಸಂಬಂಧಿಸಿದಂತೆ ಕೆಲವು ಸುಧಾರಣಪ್ರಯತ್ನಗಳು ಇದೀಗ ನಡೆದಿವೆ. ನ್ಯಾಯವಿತರಣೆಯಲ್ಲಿ ಹೆಚ್ಚಿನ ದಕ್ಷತೆ ತರುವಂತಹ ನಿಯಮಾವಳಿಗಳ ರೂಪಣವೂ ಸೇರಿದಂತೆ ನ್ಯಾಯಾಂಗದ ದೃಢೀಕರಣಕ್ಕಾಗಿ ಕ್ಷಿಪ್ರ ಕ್ರಮಗಳು ಈಗಿನ ತುರ್ತು ಆವಶ್ಯಕತೆಯಾಗಿದೆ. ಇದು ಆದಲ್ಲಿ ಮಾತ್ರ ನಮ್ಮ ದೇಶವು ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವವೆಂಬ ಹೆಗ್ಗಳಿಕೆ ಉಳಿದೀತು.