ಮಂತ್ರಾಲಯ ತಲಪಿದಾಗ ಚುಮು ಚುಮು ಬೆಳಕು ಹರಿದಿತ್ತು. ಚಳಿ ಮೈಯ ಕೊರೆದಿತ್ತು. ರಾಜಹಂಸದ ಸುಖಾಸನದಲ್ಲೂ ನಿದ್ದೆ ಬಂದಿರಲಿಲ್ಲ. ಕಣ್ಣು ಮುಚ್ಚಿದರೂ ಮಗನದೆ ಚಿಂತೆ.
ಲಿಖಿತಪರೀಕ್ಷೆಯಲ್ಲಿ ಪಾಸಾಗಿದ್ದಾನೆ; ಮೌಖಿಕದಲ್ಲೂ ಚೆನ್ನಾಗಿ ಮಾಡಿದ್ದೇನೆ ಎಂದಿದ್ದ. ಇನ್ನೇನು ಸೆಲೆಕ್ಟ್ ಆದಹಾಗೆ ಎಂದು ಸಂಭ್ರಮದಲ್ಲಿ ಆರ್ಡರ್ಗಾಗಿ ಕಾದಿರುವಾಗ ಸುರೇಂದ್ರನಾಯರ್ ಫೋನ್ ಮಾಡಿ – ತನ್ನಷ್ಟಕ್ಕೆ ತಾನೆ ಸೆಲೆಕ್ಟಾಗಿ ಆರ್ಡರ್ ಕೈಗೆ ಬರುತ್ತದೆ ಎಂದು ಕಾಯಬೇಡ. ಇದು ಹಿಂದಿನ ಕಾಲ ಅಲ್ಲ. ಐದಾದರೂ ಜೋಡಿಸಿಕೊಂಡು ಬಾ ಎಂದಿದ್ದ. ಆತ ಹೆಡ್ಆಫೀಸಿನಲ್ಲಿ ಚೇರ್ಮನ್ನರ ಪಿ.ಎ.; ಈತನ ಕ್ಲಾಸ್ಮೇಟ್.
ಏನು, ಐದು ಸಾವಿರಾನಾ?
ನಾಯರ್ ಗಹಗಹಿಸಿ ನಕ್ಕು, ಸಾವಿರ ಅಲ್ಲೋ ಮಾರಾಯ, ಲಕ್ಷ ಎಂದಾಗ ನಗುವ ಸರದಿ ಈತನದಾಗಿತ್ತು.
ಯಾಕ್ರೀ ಹಾಗೆ ನಗುತ್ತೀರಿ? ಎಂದು ಹೆಂಡತಿ ಕೇಳಿದಳು.
ಏನೂ ಇಲ್ಲ ಬಿಡು ಎಂದು ಮತ್ತೆ ನಕ್ಕು, ಈವತ್ತು ರಾತ್ರಿ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನಮಾಡಿ ಫಲಮಂತ್ರಾಕ್ಷತೆ ತಗೆದುಕೊಂಡು ಬರುತ್ತೇನೆ. ರಾಯರು ಅನುಗ್ರಹಿಸಿದರೆ ಯಾವುದು ಅಸಾಧ್ಯ; ಮಗ ಸೆಲೆಕ್ಟ್ ಆಗಿಯೇ ಆಗ್ತಾನೆ ಎಂದ.
ಆತನ ಈ ಭಕ್ತಿ ಮತ್ತು ನಂಬಿಕೆ ಇಂದು ನಿನ್ನೆಯದಲ್ಲ. ಅಂದು, ಇನ್ನೇನು ಎಸ್.ಎಸ್.ಎಲ್.ಸಿ. ಪಬ್ಲಿಕ್ ಪರೀಕ್ಷೆಗೆ ಎರಡೇ ದಿನ. ಬೆಳಗ್ಗೆ ಏಳಬೇಕು. ಕಟಕಟ ಹಲ್ಲುಕಡಿಯುವ ಚಳಿ. ಹೊದ್ದುಕೊಂಡು ಮಲಗಿದ. ‘ಈವತ್ತು ಎಲ್ಲವನ್ನೂ ರಿವೈಸ್ ಮಾಡಬೇಕು ಎಂದಿರುವಾಗ ಹೀಗಾಗಿತ್ತು. ಇನ್ನೇನು ಚಳಿ ಕಡಮೆಯಾಯ್ತು ಎಂದು ಮೈ ಮುಟ್ಟಿಕೊಂಡರೆ, ಕೆಂಡದಂತೆ ಸುಡುತ್ತಿತ್ತು. ‘ಅಮ್ಮಾ..’ ಎಂದು ಮುಲುಗಿದ. ಜ್ವರದ ತಾಪದಿಂದ ತತ್ತರಿಸಿದ್ದ.
‘ರಾಯರೇ ಪರೀಕ್ಷೆ ಆದಮೇಲೆ ಜ್ವರ ಎಷ್ಟು ದಿನವಾದರೂ ಬರಲಿ; ನಾಳೆ ಪರೀಕ್ಷೆ ಇದೆ, ಈವತ್ತು ಕಡಮೆ ಮಾಡು’ ಎಂದು ಒಂದೇಸಮನೆ ಬಡಬಡಿಸತೊಡಗಿದ್ದ.
ಟಪ್..ಟಪ್..ಟಪ್..ಟಪ್.. ಬಾಗಿಲು ದಬ್ಬಿಕೊಂಡು ಒಬ್ಬ ಕಪ್ಪನೆಯ ಮನುಷ್ಯ ಒಳಬಂದರು. ಏಳಲು ಹೋದ. ‘ಏಳಬೇಡ, ಮಲಕ್ಕೋ’ ಎನ್ನುತ್ತಾ ಬಗಲಿಗೆ ಬಂದು ಕೂತರು, ಮೈ ತಡವಿದರು. ವಿದ್ಯುತ್ ಸಂಚಲನವಾದಂತೆ ಮೈ ಜುಂ ಅಂದಿತು. ಹೆದರಬ್ಯಾಡ. ಇನ್ನೇನು ಜ್ವರ ಬಿಡುತ್ತದೆ ಎಂದರು. ಅವನು ಉದ್ವಿಗ್ನಗೊಂಡ.
ಅರೆ, ಯಾರಿವರು… ಎಲ್ಲೋ ನೋಡಿದ್ದೇನೆ… ಎಲ್ಲಿ?… ಹಾ! ರಾಯರು…!!
ದೇಹಾದ್ಯಂತ ಕಂಪನ. ಅರೆ, ಹೊರಟುಹೋಗುತ್ತಿದ್ದಾರೆ. ನಮಸ್ಕಾರ ಮಾಡಬೇಕು.
ಕಣ್ಣುಜ್ಜಿ ನೋಡಿದ; ಕೋಣೆಯೆಲ್ಲ ಗಾಢಾಂಧಕಾರ. ಕತ್ತಲೋ ಕತ್ತಲು. ಮೈ ಜಲಜಲ ಬೆವರತೊಡಗಿತ್ತು. ಏಳಲಾರ, ಆದರೂ ನಿಧಾನವಾಗಿ ಕೈ ಊರಿ ಎದ್ದು ಹೆಜ್ಜೆಯಿಡುತ್ತಾ ಕಿಟಕಿ ಬಾಗಿಲು ತೆಗೆದ. ಹನ್ನೆರಡು ಗಂಟೆಯ ಪ್ರಖರ ಕಿರಣ ಒಳನುಗ್ಗಿ ರೂಮಲ್ಲೆ ಭಗ್ ಎಂದು ಕಣ್ಣು ಕೋರೈಸಿತ್ತು. ಜ್ವರ ಬಿಟ್ಟಿತ್ತು. ಮೈಯೆಲ್ಲ ಹಗುರಾಗಿತ್ತು… ಇದು ಜ್ವರದ ತಾಪವಲ್ಲ, ಭ್ರಮೆಯಂತೂ ಅಲ್ಲವೇ ಅಲ್ಲ; ರಾಯರೇ ಬಂದಿದ್ದಾರೆ; ಅನುಗ್ರಹಿಸಿದ್ದಾರೆ; ಜ್ವರ ಬಿಟ್ಟಿದೆ!
ಉತ್ಸಾಹದಿಂದ ಈ ಪ್ರಸಂಗ ಗೆಳೆಯರ ಮುಂದೆ ಹೇಳಿದ್ದ.
ನೋಡ್ರೋ ನಮ್ಮ ಗೆಳೆಯಂಗೆ ರಾಯರು ಪ್ರತ್ಯಕ್ಷ ಆದರಂತೆ! ಬರೋವ್ರು ಬರ್ರೀ, ಇವನ ಕಾಲು ಮುಟ್ಟಿ ನಾವು ಪಾವನರಾಗೋಣ… ಎಂದು ಗಹಗಹಿಸಿ ನಕ್ಕರು.
ಅಲ್ಲ, ಎಂಥಾ ಹುಚ್ಚ ಇವ. ಎಸ್.ಎಸ್.ಎಲ್.ಸಿ. ಓದುತ್ತಾನೆ. ಸೈನ್ಸ್ ತೆಗೆದುಕೊಂಡಿದ್ದಾನೆ. ಇನ್ನೂ ಅಡುಗೂಲಜ್ಜಿ ತರಹ ಆಡುತ್ತಾನೆ. ಇಂಥೋರಿದ್ದರೆ ಈ ದೇಶ ಉದ್ಧಾರವಾದ ಹಾಗೆ ಎಂದು ಬಹಳ ಬುದ್ಧಿವಂತ ಎನ್ನಿಸಿಕೊಂಡ ಭಾಗವತ್ ಲೇವಡಿ ಮಾಡಿದ. ಪಾಪ, ಆತ ಮುಖ ಸಣ್ಣದು ಮಾಡಿಕೊಂಡು ಸುಮ್ಮನಾದ.
ಹೌದು. ಇದನ್ನು ಯಾರೂ ನಂಬುವುದಿಲ್ಲ. ತಾನೂ ನಂಬುತ್ತಿದ್ದಿಲ್ಲ. ಆದರೆ ಪ್ರತ್ಯಕ್ಷ ನೋಡಿದ್ದೇನೆ. ಮುಟ್ಟುತ್ತಲೇ ಜ್ವರ ಬಿಟ್ಟಿತ್ತು. ಪರೀಕ್ಷೆ ಚೆನ್ನಾಗಿ ಮಾಡಿದೆ. ಅವನು ದೃಢವಾಗಿ ನಂಬಿದ. ಸತ್ಯ, ಧರ್ಮ ಪರಿಪಾಲಿಸುತ್ತಾ ಬದುಕಬೇಕು ಎಂದು ದೃಢಸಂಕಲ್ಪ ಮಾಡಿದ. ಸಂಕಲ್ಪ ಎಂದರೆ ದೇವರಿಗೆ ಕೊಟ್ಟ ಮಾತು ತಪ್ಪಬಾರದು. ತಪ್ಪಿದರೆ ಸರ್ವನಾಶ ಎಂಬ ಭಯ ಮೂಡಿತ್ತು.
ಮುಂದೆ ಮದುವೆ ಆಯಿತು. ಅನುಕೂಲವಾದ ಪತ್ನಿ ಸಿಕ್ಕಳು. ತಾನು ಆದರ್ಶ ಪತಿಯಾದ. ಅಮ್ಮ ಅಂದರೆ ಅವನಿಗೆ ಬಹಳ ಇಷ್ಟ. ತನ್ನನ್ನು ಮಗುವಾದಾಗ ನೋಡಿಕೊಂಡಂತೆ, ತಾನೂ ಅವರನ್ನು ವಯಸ್ಸಾದ ಮೇಲೆ ನೋಡಿಕೊಳ್ಳಬೇಕು. ಹೆಂಡತಿಗೆ ಹೇಳಿದ. ‘ನಿಮ್ಮಮ್ಮ ನನಗೂ ಅಮ್ಮ’ ಎಂದಳು ಅವಳು. ಮನಸ್ಸು ಆರ್ದ್ರವಾಯ್ತು. ಅವಳ ತಲೆಯನ್ನು ಪ್ರೀತಿಯಿಂದ ನೇವರಿಸಿದ. ಸುಖವಾಗಿ ಇದ್ದರು.
ಆಫೀಸಿನಲ್ಲಿ ಈತನ ಪ್ರಾಮಾಣಿಕತೆ ತಮಾಷೆಯಾಗಿ ಕಂಡಿತು. ಕಲೀಗ್ಸ್ ಮುಸಿಮುಸಿ ನಕ್ಕರು. ‘ಇಂಥವರು ಏಕೆ ಸರ್ಕಾರೀ ನೌಕರಿಗೆ ಬರ್ತಾರೋ, ಪುಕ್ಕಲ…’ ಎಂದು ಅಪಹಾಸ್ಯ ಮಾಡಿದರು. ಆದರೆ ಇವನು ಜಡಪತಿರಾಯ. ಯಾವುದನ್ನೂ ಹಚ್ಚಿಕೊಳ್ಳುತ್ತಿರಲಿಲ್ಲ.
ಮದುವೆಯಾಗಿ ನಾಲ್ಕು ವರ್ಷ ಆಗುತ್ತಾ ಬಂತು; ಮಕ್ಕಳಾಗಿರಲಿಲ್ಲ. ಅದೇ ಚಿಂತೆಯಲ್ಲಿ ಹೆಂಡತಿ ಕೊರಗಿದ್ದಳು.
ಇದನ್ನೂ ಆಫೀಸಿನಲ್ಲಿ ತಮಾಷೆ ಮಾಡಿದರು.
ಅಲ್ಲೋ, ನಿಮ್ಮ ರಾಯರು ಏಕೋ ಮಕ್ಕಳನ್ನು ಇನ್ನೂ ಕರುಣಿಸಿಲ್ಲ? ಅವರು ಜಪ ಮಾಡುತ್ತಿರಬೇಕು, ಪಾಪ. ಕಣ್ಣುತೆರೆದು ನೋಡೋಕೆ ಹೇಳು ಎಂದ ಒಬ್ಬ ಕಲೀಗ್ ಹರಟೆ ಮಧ್ಯೆ.
ಸಾಕು ಸುಮ್ಮನೇ ಇರೋ. ರಾಯರು ಸಂನ್ಯಾಸಿ ಅಲ್ಲೇನೋ? ಹ್ಯಾಗೆ ಮಕ್ಕಳನ್ನು ಕರುಣಿಸುತ್ತಾರೋ ಎಂದ ಭಾಗವತ್; ಅವನು ಈಗ ಕಲೀಗ್ ಕೂಡ. ಆತನನ್ನು ಕಂಡರೆ ಎಲ್ಲರಿಗೂ ಕುವಾಡ ಮಾಡೋ ಸದರ ಇತ್ತು. ಎಲ್ಲ ಸಹಿಸಿಕೊಂಡಿರುತ್ತಿದ್ದ. ಆದರೆ ಆವತ್ತೇಕೋ ಅವನ ಕಣ್ಣಲ್ಲಿ ನೀರು ಬಂತು.
ಏನು ಹಾಸ್ಯ ಅಂತ ಮಾಡ್ತಿರೋ? ಅವರವರ ನಂಬಿಕೆ ಅವರದು. ಪಾಪ, ಆತ ಎಷ್ಟು ನೊಂದಕೊಂಡಿದ್ದಾನೆ ನೋಡಿ ಎಂದ ಸ್ಟಾಫಿನ ಒಬ್ಬ ಹಿರಿಯ, ಅವನ ಸಹಾಯಕ್ಕೆ ಬಂದು.
ಮನೆಗೆ ಬಂದ. ಹೆಂಡತಿ ಗಾಬರಿಯಿಂದ ಯಾಕ್ರೀ ಹೀಗಿದ್ದೀರಿ? ಎಂದಳು.
ರಾಯರನ್ನು ಕುವಾಡ ಮಾಡ್ತಾರೆ. ಸಂನ್ಯಾಸಿ ಸೇವೆ ಮಾಡಿದರೆ ಹೇಗೋ ಮಕ್ಕಳಾಗ್ತಾವೆ ಅಂತಾರೆ ಎಂದ ಗಂಭೀರವಾಗಿ.
ಅವಳ ಕಣ್ಣಲ್ಲಿ ಪಳಕ್ ಎಂದು ನೀರು ಬಂತು. ಮೊದಲೇ ಮಕ್ಕಳಿಲ್ಲದೆ ನೊಂದ ಹೆಣ್ಣುಜೀವ ಅದು. ಆದರೂ ದುಃಖನುಂಗಿಕೊಂಡು ಸೆರಗಿನಿಂದ ಕಣ್ಣು ಒರಸಿಕೊಳ್ಳುತ್ತಾ, ಇರಲಿ ಬಿಡ್ರಿ, ಯಾರೋ ಏನೋ ಅಂದರು ಅಂತ ಯಾಕೆ ಮನಸ್ಸಿಗೆ ಇಷ್ಟುಹಚ್ಚಿಕೊಳ್ತೀರಿ? ಅಂಥೋರ ಜತೆ ಏಕೆ ಮಾತಾಡೋಕೆ ಹೋಗ್ತೀರಿ? ಎಂದಳು.
ಮನಸ್ಸಿನ ತಳಮಳ ತಡೆಯಲಾರದೆ ಹೆಂಡತಿಗೆ ಹೇಳಿದ್ದ. ಆದರೆ ಅವಳು ಎಂದಿನಂತೆ ಮಾತಾಡಿದ್ದು ಕೇಳಿ ಸಮಾಧಾನಗೊಂಡ.
ಮಗ ಹುಟ್ಟಿದ. ಸಂಸಾರ ಬೆಳೆಯಿತು. ಒಳ್ಳೆಯ ಮನು?, ಪಾಪ ಬಡತನ ಎಂದು ಒಳ್ಳೆಯ ಸಂಪಾದನೆ ಇರುವ ಸ್ಥಾನಕ್ಕೆ ಆತನ ಜಾತಿಯವರೇ ಆದ ಕೊಟ್ಟೂರ್ ರಾಘಪ್ಪ ಎಂಬ ಆಫೀಸರ್ ಪೋಸ್ಟ್ ಮಾಡಿಸಿಕೊಂಡರು. ಆದರೆ ಅಲ್ಲಿಯೂ ಆತ ಒಂದು ಕಾಸೂ ಮುಟ್ಟಲಿಲ್ಲ. ಮುದುಕನ ರೂಮಿಗೆ ರಂಭೇನ ಕಳಿಸಿದಂತಾಯ್ತು ಎಂದು ತನ್ನ ಪಿ.ಎ. ಜೊತೆ ಮಾತಾಡುತ್ತಾ ಕೊಟ್ಟೂರು ರಾಘಪ್ಪ ರಸಿಕವಾಗಿ ನಕ್ಕರು.
ಕೆಲಸದಲ್ಲಿ ಆತನೊಂದು ಕಂಪ್ಯೂಟರ್. ಎಲ್ಲ ಅಚ್ಚುಕಟ್ಟು. ಅವನ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಕಂಡು ಇಂಥವರೂ ಇದ್ದಾರಾ ಎಂದು ರಾಘಪ್ಪ ಬೆರಗಾಗಿದ್ದರು.
ಈಗಲೂ ಅಷ್ಟೆ. ಮಗ ಕೆ.ಪಿ.ಎಸ್.ಸಿ. ಸಂದರ್ಶನ ಮುಗಿಸಿ ಬಂದಿದ್ದ. ಸದಾಶಿವಯ್ಯ ‘ಐದು ಲಕ್ಷ ಕೊಟ್ಟು ಬಾ. ಕೆಲಸ ಗ್ಯಾರಂಟಿ. ಚೆನ್ನಾಗಿ ಸಂಪಾದಿಸಬಹುದು’ ಎಂದಿದ್ದ. ‘ನಿನ್ನ ಕಲೀಗ್ ಭಾಗವತ್ ನೋಡು. ಕೈತುಂಬ ರೊಕ್ಕ ಮಾಡಿಕೊಂಡಿದ್ದಾನೆ. ಐದಲ್ಲ ಹತ್ತಾದರೂ ಸರಿ, ಕೊಟ್ಟು ತನ್ನ ಮಗನಿಗೆ ಕೆಲಸ ಮಾಡಿಸಿಕೊಂಡು ಬರುತ್ತೇನೆ ಅಂತ ಹೊರಟಿದ್ದಾನೆ. ನೀನೂ ಇದ್ದೀ…’ ಎಂದ. ಅದಕ್ಕೆ ಮಾರುತ್ತರವಾಗಿ ನಕ್ಕು ಅವನು ಮಂತ್ರಾಲಯಕ್ಕೆ ಬಂದಿದ್ದ.
ಬಸ್ ಇಳಿದ. ಬ್ಯಾಗಿನಲಿದ್ದ ಶಾಲು ತೆಗೆದು ಹೊದ್ದುಕೊಂಡ. ಆದರೂ ಮೈ ನಡುಗುತ್ತಿತ್ತು. ಹೋಟೆಲ್ ತೆರೆದಿತ್ತು. ಏಳುತ್ತಲೇ ಕಾಫಿ ಕುಡಿದು ಅಭ್ಯಾಸ. ಹಸಿದ ಹೊಟ್ಟೆಯಲ್ಲೇ ಪ್ರದಕ್ಷಿಣೆಹಾಕಿ ರಾಯರ ದರ್ಶನ ಮಾಡೋಣ ಅಂತ ಸೀದಾ ಡಾರ್ಮೆಟ್ರಿಗೆ ಹೋಗಿ, ಬ್ಯಾಗಲ್ಲಿದ್ದ ಒಂದು ಮಡಿಪಂಚೆ, ಸಂಧ್ಯಾವಂದನೆ ಪಾತ್ರೆ, ಗೋಪಿಚಂದನ ತೆಗೆದುಕೊಂಡು ಮತ್ತೆ ಅಂಗಿ, ಪ್ಯಾಂಟ್, ಶಾಲು ಎಲ್ಲ ಸುತ್ತಿ ಲಾಕರಲ್ಲಿಟ್ಟು ಸುತ್ತಮುತ್ತ ನೋಡಿದ. ಯಥಾಪ್ರಕಾರ ಬರುವವರು ಹೋಗುವವರು ತುಂಬಿದ್ದರು. ತಾನು ಪ್ಯಾಂಟ್ ಶರಟು ಇಟ್ಟಿದ್ದು ಯಾರಾದರೂ ನೋಡಿದರಾ? ಎಂದು ಸೂಕ್ಷ್ಮವಾಗಿ ಗಮನಿಸಿದ. ಅವರವರ ಅವಸರದಲ್ಲಿ ಅವರವರು ಇದ್ದರು. ನೆಮ್ಮದಿ ಎನ್ನಿಸಿತು. ನದಿಯ ಕಡೆಗೆ ಹೊರಟ.
ಎಲ್ಲಿ ನೋಡಿದರೂ ಜನ ಜನ; ನದಿಗೆ ಇಳಿಯುತ್ತಿದ್ದರು, ಮುಳುಗು ಹಾಕುತ್ತಿದ್ದರು. ಹೆಣ್ಣುಮಕ್ಕಳು ಒದ್ದೆ ಸೀರೆಯಲ್ಲಿ ದಂಡೆಮೇಲೆ ಬಂದು ರೇಷ್ಮೆಸೀರೆ ಉಟ್ಟುಕೊಳ್ಳುತ್ತಿದ್ದರು. ಅಲ್ಲಿಯೂ ಕೆಲವು ಗಂಡಸರು ಕಣ್ಣಲ್ಲೇ ಸುಖಿಸುತ್ತಿದ್ದರು. ಕೆಲವರು ಕೃಷ್ಣಾಜಿನ, ಚೀಲದಲ್ಲಿನ ಮಡಿಸೀರೆ ತೆಗೆಯುತ್ತಿದ್ದರು; ದಂಡೆ ಮೇಲೆ ಕುಳಿತು ಗುರುಮಂತ್ರ ಹೇಳಿಕೊಳ್ಳುತ್ತಿದ್ದರು.
ನದಿ ಹರಿಯುತ್ತಿತ್ತು. ಯಾರೂ ಇಲ್ಲದ ಸ್ಥಳ ಅಂದರೆ ಅದು ಸುರಕ್ಷಿತ ಅಲ್ಲ ಎಂದು ನೀರಲ್ಲಿ ಮುಳುಗಿ ಏಳುತ್ತಿದ್ದವರ ಮಧ್ಯೆ ಆತನೂ ಜಾಗ ಮಾಡಿಕೊಂಡು ನದಿಗೆ ಇಳಿದು ತಣ್ಣನೆ ನೀರಲ್ಲಿ ಮೂರು ಸಲ ಮುಳುಗಿ ಎದ್ದ. ಒಂದು ಕಡೆ ಕುಳಿತು ಗೋಪಿಚಂದನ ಹಚ್ಚಿಕೊಂಡು ಸಂಧ್ಯಾವಂದನೆ ಶಾಸ್ತ್ರ ಮುಗಿಸಿ, ರಾಘವೇಂದ್ರ ಸ್ತೋತ್ರ ಹೇಳುತ್ತ ದುಡುದುಡು ಹೊರಟ. ಗುಡಿ ನೋಡುತ್ತಲೇ ದೇಹದೊಳಗೆ ಒಂದು ಮಿಂಚುಹರಿದಂತೆ ಆಯ್ತು. ಭಕ್ತಿಯಿಂದ ಕಣ್ಣುಮುಚ್ಚಿ ಕೈಮುಗಿದು ಸಾಷ್ಟಾಂಗ ನಮಸ್ಕಾರ ಮಾಡಿ ಪ್ರದಕ್ಷಿಣೆ ಹಾಕತೊಡಗಿದ. ದರ್ಶನದ ಕ್ಯೂ ದೊಡ್ಡದಿರಲಿಲ್ಲ. ರಾಯರ ಮುಂದೆ ನಿಲ್ಲುತ್ತಿದ್ದಂತೆ ಕಣ್ಣುಗಳು ತುಂಬಿಬಂದವು. ಅತ್ಯಂತ ಭಾವುಕನಾಗಿ ಕೈ ಜೋಡಿಸಿದ. ಬೃಂದಾವನ ನೋಡುತ್ತಾ ನೋಡುತ್ತಾ, ಸಾಕ್ಷಾತ್ ರಾಯರೇ ಕಂಡಂತೆ ಭಾಸವಾಯ್ತು. ಕಣ್ಣು ಮುಚ್ಚಿದ.
‘ನಡೀರಿ…ನಡೀರಿ…’ ಪರಿವಾರದವರು ಅವಸರಪಡಿಸುತ್ತಿದ್ದರು. ಜನರೂ ದಬ್ಬುತ್ತಿದ್ದರು. ಕೊನೆಯಸಲ ಎಂಬಂತೆ ರಾಯರನ್ನು ಮತ್ತೆ ನೋಡಿ ಕಣ್ಣುಮುಚ್ಚಿ ತುಂಬಿಕೊಂಡು, ಆತ ಮುಂದೆ ನಡೆದ; ತೀರ್ಥ, ಮಂತ್ರಾಕ್ಷತೆ ತೆಗೆದುಕೊಂಡು ಅಲ್ಲಿಯೇ ಇದ್ದ ವಾದೀಂದ್ರರ ಬೃಂದಾವನಕ್ಕೆ ಕೈಮುಗಿದು ಹೊರನಡೆದ.
ಸರಿಯಾಗಿ ಹನ್ನೆರಡೂವರೆಗೆ ಎಲೆಹಾಕಿದರು. ಹಸಿದಿದ್ದ ಆತನಿಗೆ ಅದು ಅಮೃತಾನ್ನವಾಗಿತ್ತು. ಊಟ ಮುಗಿಸಿ ಹೊರಬರುತ್ತಿದ್ದ.
ಏನೋ ಯಾವಾಗ ಬಂದೀ?
ಯಾರದು ಎಂದು ತಲೆಯೆತ್ತಿ ನೋಡಿದರೆ, ಒಬ್ಬ ಆಚಾರ್ಯರು. ದ್ವಾದಶನಾಮ, ಅಂಗಾರ ಅಕ್ಷತೆ, ಬೆರಳಲ್ಲಿ ಹರಳಿನ ಉಂಗುರ, ಕೊರಳಲ್ಲಿ ಬಂಗಾರದ ತುಳಸೀ ಮಾಲೆ. ಮುಖದ ಮೇಲೆ ದಿವ್ಯ ತೇಜಸ್ಸು. ಎಲ್ಲಿಯೂ ನೋಡಿದ ನೆನಪಿಲ್ಲ. ತಲೆತುರಿಸಿಕೊಂಡರೂ ಹೊಳೆಯಲಿಲ್ಲ. ಆದರೆ ನೋಡುತ್ತಲೇ ಏನು ಅನ್ನಿಸಿತೋ, ಉದ್ದಂಡ ನಮಸ್ಕಾರಮಾಡಿಬಿಟ್ಟ.
ಅವರು ಗಂಭೀರವಾಗಿ ನಕ್ಕು, ಯಾಕೋ, ನಾನು! ಗುರುತು ಸಿಗಲಿಲ್ಲವೇನು? ಜಿ.ಕೆ. ಹಯವದನ. ನಿನ್ನದು ಹೊಸಪೇಟಿ ಅಲ್ಲವೇನು?
ಹಯವದನ! ಹೋ ಅವನಾ ಇವನು ಎಂದು ನೆನಪಿಗೆ ಬರುತ್ತಿದ್ದಂತೆ, ’ಲೇ ಹಯವದನ’ ಎಂಬ ಅಂದಿನ ವಾಡಿಕೆಯ ಮಾತು ಹೊರಡಬೇಕು. ಅದು ಹೇಗೋ ತಕ್ಷಣ ತುಟಿಕಚ್ಚಿಕೊಂಡ.
‘ಈಗ ಹಯವದನ ಒಂದು ಮಠದಲ್ಲಿ ರಾಯರ ಅರ್ಚನೆ ಮಾಡಿಕೊಂಡು ದೊಡ್ಡ ಆಚಾರ್ಯರು ಎನ್ನಿಸಿಕೊಂಡಿದ್ದಾರೆ. ರಾಯರ ಅನುಗ್ರಹದಿಂದ ತಕ್ಕ? ಮಾಡಿಕೊಂಡಿದ್ದಾರೆ’ – ಎಂದೂ ಕೇಳಿದ್ದ. ಅವನೇ ಇವರು.
ಸಂಕೋಚದಿಂದ ನಗು ತಂದುಕೊಂಡ. ಆದರೆ ಅವರು ಮಾತ್ರ ಸಲುಗೆಯಿಂದಲೇ-
ಏನಪ್ಪ, ಎಲ್ಲ ಹೇಗೆ ನಡೆದಿದೆ? ತಾಲ್ಲೂಕು ಆಫೀಸ್ನಲ್ಲಿ ಇದ್ದೀ ಎಂದು ಕೇಳಿದ್ದೆ. ಪವರ್ಫುಲ್ ಪೋಸ್ಟ್ ಅಂತೆ. ಒಳ್ಳೆಯದು, ಏನು ಇಲ್ಲಿಗೆ ಬಂದಿದ್ದು? ಎಂದರು.
ಆತ ಮಗನ ಕೆಲಸದ ವಿ?ಯ ಹೇಳಿದ.
ಓಹೋ ಹಾಗೋ. ಕೆ.ಪಿ.ಎಸ್.ಸಿ.ಗೆ ಅಪಿಯರ್ ಆಗಿದ್ದಾನೋ; ನನ್ನ ಮಗನೂ ಆಗಿದ್ದಾನೆ. ಇನ್ನೇನು ಎರಡು ಮೂರು ದಿನದಲ್ಲಿ ಲಿಸ್ಟ್ ಅನೌನ್ಸ್ ಮಾಡುತ್ತಾರೆ. ಆ ಆಫೀಸಿನಲ್ಲಿ ನನಗೆ ಗೊತ್ತಿರೋರು ಒಬ್ಬರು ಇದ್ದರು. ’ಹತ್ತು ಲಕ್ಷ ಜೋಡಿಸಿ ತನ್ನಿ’ ಎಂತ ಹೇಳಿ ಕಳಿಸಿದ್ದಾರೆ. ಇವತ್ತು ರಾತ್ರಿ ರೈಲಿಗೆ ಬೆಂಗಳೂರಿಗೆ ಹೊರಟಿದ್ದೇನೆ. ನೀನು ಏನು ಮಾಡಿದ್ದೀ? ಎಂದು ಕೇಳಿದರು.
ಮಗ ಚೆನ್ನಾಗಿ ಮಾಡಿದ್ದೇನೆ ಅಂತ ಹೇಳಿದ್ದಾನೆ. ಎಲ್ಲ ರಾಯರ ಮೇಲೆ ಭಾರಹಾಕಿ ಕುಳಿತಿದ್ದೇನೆ. ರಾಯರ ಸೇವೆ ಮಾಡಿಕೊಂಡು ಹೋಗೋಣ ಅಂತ ಬಂದಿದ್ದೇನೆ. ಕಲಿಯುಗದ ಕಾಮಧೇನು ಕಲ್ಪವೃಕ್ಷ ಅವರು ಎಂದ ಆತ.
ಅವರು ನಕ್ಕರು. ನೀನು ಹೇಳುವುದೆಲ್ಲ ಸರಿ. ಆದರೆ ನಮ್ಮ ಪ್ರಯತ್ನ ನಾವು ಮಾಡಬೇಕು. ದೇವರು ಕೊಟ್ಟಿದ್ದಾನೆ. ಅದಕ್ಕೆ ಇವತ್ತು ಹತ್ತು ಲಕ್ಷ ತಗೆದುಕೊಂಡು ಹೊರಟಿದ್ದೇನೆ. ಎಲ್ಲದಕ್ಕೂ ರಾಯರ ಅನುಗ್ರಹಾನೂ ಬೇಕು, ನಮ್ಮ ಪ್ರಯತ್ನಾನೂ ಬೇಕು ಎನ್ನುತ್ತಾ ಅವರು ಹೊರಟರು.
ದಿನವೂ ಬೆಳಗ್ಗೆ ನದಿಯಲ್ಲಿ ಸ್ನಾನ, ರಾಯರ ವೃಂದಾವನ ಪ್ರದಕ್ಷಿಣೆ, ದರ್ಶನ, ತೀರ್ಥಪ್ರಸಾದ ಉಳಿದ ಸಮಯದಲ್ಲಿ ಅನನ್ಯ ಭಕ್ತಿಭಾವದಿಂದ ಧ್ಯಾನ.
ಆತ ನಾಲ್ಕು ದಿನ ಮಂತ್ರಾಲಯದಲ್ಲಿ ರಾಯರ ಸನ್ನಿಧಾನದಲ್ಲೇ ಕಳೆದು ಊರಿಗೆ ಮರಳಿದಾಗ ಬೆಳಗ್ಗೆ ಎಂಟು ಗಂಟೆ. ಮಗ ಒಂದು ಕಡೆ ಪೇಪರ್ ಓದುತ್ತಾ ಕುಳಿತಿದ್ದ. ಹೆಂಡತಿ ಒಳಗೆ ಇದ್ದಳು. ಚೀಲ ಕೆಳಗಿಟ್ಟು ಮಗನತ್ತ ನೋಡಿದ. ಮಗ ಏನೂ ಮಾತಾಡಲಿಲ್ಲ.
ಸೆಲೆಕ್ಷನ್ ಲಿಸ್ಟ್ ಅನೌನ್ಸ್ ಮಾಡಿದರಂತೇನು? ಕೇಳಿದ.
ಹೂಂ ಅಪ್ಪ, ನಾನು ಸೆಲೆಕ್ಟ್ ಆಗಿಲ್ಲ ಎಂದ ಮಗ ನಿರಾಶೆಯ ಧ್ವನಿಯಲ್ಲಿ.
ಹೋಗಲಿ ಬಿಡು. ಏನು ಮಾಡುವುದು, ರಾಯರ ಇಚ್ಛೆ ಏನಿದೆಯೋ? ಎನ್ನುತ್ತ ಆತ ಒಳಗೆ ಹೋದ. ಏಕೆ ಹೀಗಾಯ್ತು ಅಂತ ಬೇಸರ ಆದರೂ ಅದು ಕ್ಷಣ ಮಾತ್ರ. ಎಲ್ಲ ರಾಯರ ಇಚ್ಛೆ, ಏನು ಅಗಬೇಕೋ ಅದು ಅಗುತ್ತದೆ – ಎಂಬ ಸ್ಥಿಮಿತಕ್ಕೆ ಬಂದ.
ಏನು ಯಾತ್ರೆ ಎಲ್ಲ ಸರಿಯಾಗಿ ಆಯಿತೆ… ಅದೇನು
ಒಂದು ದಿನಕ್ಕೆ ಅಂತ ಹೋದವರು ಒಂದು ವಾರ…? ಕೇಳಿದಳು ಹೆಂಡತಿ.
ಏನೋ ರಾಯರ ಪ್ರೇರಣೆ ಆಯಿತು. ನಾಕು ದಿನ ಇರಬೇಕು ಅನ್ನಿಸಿತು, ಇದ್ದೆ ಎಂದ.
ಹೆಂಡತಿ ಆತನ ಚೀಲದಿಂದ ರಾಯರ ಪರಿಮಳ ಪ್ರಸಾದ, ಮಂತ್ರಾಕ್ಷತೆ ಪೊಟ್ಟಣ ತೆಗೆದುಕೊಂಡು ದೇವರಕಟ್ಟೆಯ ಮೇಲಿಟ್ಟು, ಈಗ ಸ್ನಾನ ಪೂಜೆ ಮುಗಿಸಿರಿ. ಉಪ್ಪಿಟ್ಟು ಮಾಡಿದ್ದೇನೆ, ತಿಂದು ಸ್ವಲ್ಪ ಹೊತ್ತು ಅಡ್ಡಾಗಿರಿ. ನಾಕು ದಿನ ಸರಿಯಾಗಿ ನಿದ್ದೇನೂ ಮಾಡಿದ ಹಾಗಿಲ್ಲ ಎಂದಳು.
ಸ್ನಾನ ಪೂಜೆ ಮುಗಿಯಿತು. ಇನ್ನೇನು ಉಪ್ಪಿಟ್ಟು ತಿನ್ನಬೇಕು; ಆಗಲೇ ಹೊರಗಿಂದ ಏನಪ್ಪ, ಏನಾತು ನಿನ್ನ ಮಗಂದು? ಎನ್ನುತ್ತಾ ರಂಗನಾಥಾಚಾರ್ರು ಬರುವುದು ಕಾಣಿಸಿತು.
ಬನ್ನಿ ಬನ್ನಿ… ಇದೇ ಈಗ ಮಂತ್ರಾಲಯದಿಂದ ಬಂದೆ.
ಆಚಾರ್ಯರು ಒಳಗೆ ಬಂದರು.
ನೋಡು ಭಾಗವತನ ಸ್ಥಿತಿ. ಹಾಸಿಗೆ ಹಿಡಿದಿದ್ದಾನೆ. ಎಂಥ ಹುಚ್ಚನಿರಬೇಕು, ಕೆಲಸಕ್ಕೆ ಮಗನನ್ನು ಸೆಲೆಕ್ಟ್ ಮಾಡಿಸಲು ಯಾವನನ್ನೋ ನಂಬಿ ಹತ್ತು ಲಕ್ಷ ಕೊಟ್ಟು ಮಂಗ ಆಗಿದ್ದಾನೆ. ಏನು ಅನ್ನಬೇಕು? ಹಣ ವಾಪಸ್ ಕೇಳಿದರೆ ’ಸೆಲೆಕ್ಷನ್ ಕಮಿಟಿ ಮೆಂಬರಿಗೆ ಕೊಟ್ಟಿದ್ದೇನೆ. ದೇವರಂಥ ಮನುಷ್ಯ. ಚಿಂತೆ ಬೇಡ. ಹಣ ಬ್ಯಾಂಕಿನಲ್ಲಿ ಇದ್ದಂತೆ ಸೇಫಾಗಿರುತ್ತದೆ. ಇಷ್ಟರಲ್ಲೇ ಮತ್ತೆ ಕಾಲ್ ಮಾಡುತ್ತಾರೆ. ಆಗ ಖಂಡಿತ ಕೆಲಸ ಕೊಡಿಸುತ್ತೇನೆ’ ಅಂತ ಹೇಳ್ತಾರೆ. ದೇವರನ್ನು ನಂಬದ ಮನುಷ್ಯ ಒಬ್ಬ ಕ್ಲಾರ್ಕನ್ನು ನಂಬಿ ಮೋಸಹೋಗಿದ್ದಾನಲ್ಲ, ಏನು ಹೇಳಬೇಕು? ಇನ್ನೇನು ಆ ಹಣ ಬಂದ ಹಾಗೆ, ಕೆಲಸ ಸಿಕ್ಕಹಾಗೆ! ಸಂಪಾದಿಸಿದ್ದ ಹಣ ಎಲ್ಲ ಅದ್ಯಾವನ ಬಾಯಿಗೊ ಇಟ್ಟೆ ಅಂತ ಒದ್ದಾಡುತ್ತಿದ್ದಾನೆ. ಅದಕ್ಕೆ ಈಗ ಹಾರ್ಟ್ ಪ್ರಾಬ್ಲೆಮ್ ಶುರುವಾಗಿದೆ. ಆಗದೇ ಇನ್ನೇನು, ಒಂದಲ್ಲ ಎರಡಲ್ಲ… ಹತ್ತು ಲಕ್ಷ. ಏನೋ ಗಟ್ಟಿ ಜೀವ. ಬೇರೆಯವರಾಗಿದ್ದರೆ ಜೀವಾನೇ ಹೋಗಿರುತ್ತಿತ್ತು… ಎಂದು ವಿವರವಾಗಿ ಹೇಳಿದರು.
ಹಾಗಾಯಿತೇ…? ಆತ ಎನ್ನುತ್ತಿರುವಾಗಲೇ, ‘ಫೋಸ್ಟ್… ಪೋಸ್ಟ್’ ಹೊರಗಡೆಯಿಂದ ಪೋಸ್ಟಮ್ಯಾನ್ ಕೂಗಿದ.
ಮಗನೇ ಹೋಗಿ ಕವರ್ ತೆಗೆದುಕೊಂಡು ಬಂದು ಅಪ್ಪನ ಕೈಗೆ ಕೊಟ್ಟ.
ಯಾರದು ಪತ್ರ? ಮತ್ತೆಮತ್ತೆ ನೋಡಿದ. ರಾಘಪ್ಪ ಕೊಟ್ಟೂರು ಅಂತ ಬರೆದಿತ್ತು.
ಅಂದರೆ…? ತಕ್ಷಣ ಹೊಳೆಯಿತು. ಅರೆ… ನಮ್ಮ ಹಳೇ ಸಾಹೇಬರದು! ಎಂದು ಬೆರಗಿನಿಂದ ಓದಿದ.
ಮೊನ್ನೆ ನಿಮ್ಮ ಕಲೀಗ್ ಭಾಗವತ ಸಿಕ್ಕು ನಿಮ್ಮ ಮಗ ಬಿ.ಎಸ್ಸಿ. ಪಾಸಾಗಿದ್ದಾನೆ. ಇನ್ನೂ ಕೆಲಸ ಸಿಕ್ಕಿಲ್ಲ ಎಂದು ಹೇಳಿದರು. ನನ್ನ ಸ್ನೇಹಿತರೊಬ್ಬರು ಇಲ್ಲಿ ಒಂದು ಫ್ಯಾಕ್ಟರಿ ಆರಂಭಿಸಿದ್ದಾರೆ. ಅಸಿಸ್ಟೆಂಟ್ಮ್ಯಾನೇಜರ್ ಪೋಸ್ಟಿಗೆ ಒಬ್ಬರು ಬೇಕು ಅಂತ ನನಗೆ ಹೇಳಿದ್ದಾರೆ. ನಿಮ್ಮ ಮಗನನ್ನು ಕರೆದುಕೊಂಡು ಬನ್ನಿ. ನಿಮ್ಮ ಕೆಲಸ ಖುದ್ದಾಗಿ ನೋಡಿದ ನನಗೆ ನಿಮ್ಮ ಮಗ ಸೂಟೆಬಲ್ ಕ್ಯಾಂಡಿಡೇಟ್ ಎನ್ನಿಸಿದೆ. ತಕ್ಷಣ ಬನ್ನಿ. ಸಂಬಳದ ಬಗ್ಗೆ ಚಿಂತೆ ಬೇಡ, ಒಳ್ಳೆಯ ಸಂಬಳಾನೆ ಕೊಡುತ್ತಾರೆ’ – ಎಂದಿತ್ತು.
ಅರ್ಥವಾಗುತ್ತಾ ಆಗುತ್ತಾ ಕಣ್ಣು ತುಂಬಿಬಂತು. ಇದೇನಿದು? ಸಾಹೇಬರು ನನ್ನ ಮರೆತಿಲ್ಲ ಎಂದು ಭಾವುಕನಾದ.
ಏನ್ರೀ ಅದು? ಎನ್ನುತ್ತ ಹೆಂಡತಿ ಒಳಗಿನಿಂದ ಬಂದಳು.
ಬೆಂಗಳೂರಿನಲ್ಲಿ ಒಂದು ಫ್ಯಾಕ್ಟರಿ ಮೇನೇಜರ್ ಪೋಸ್ಟ್ ಖಾಲಿ ಇದೆಯಂತೆ. ನಿಮ್ಮ ಮಗನನ್ನು ಕರೆದುಕೊಂಡು ಬನ್ನಿ ಅಂತ ಕಾಗದ ಬರೆದಿದ್ದಾರೆ. ಅಂತೂ ಎಷ್ಟು ವರ್ಷ ಆದರೇನು ರಾಘಪ್ಪ ನಮ್ಮನ್ನು ಮರೆತಿಲ್ಲ…
ನಾನು ನಿಮಗೆ ಎಷ್ಟು ಸಲ ಹೇಳಿಲ್ಲ… ನಂಬಿದವರನ್ನು ರಾಘಪ್ಪ ಕೈಬಿಡುತ್ತಾರೇನ್ರೀ? ಮೊದಲು ಬೆಂಗಳೂರಿಗೆ ಹೊರಡಿ. ಮುಂದಿನವಾರ ಎಲ್ಲರೂ ಮಂತ್ರಾಲಯಕ್ಕೆ ಹೋಗಿ ರಾಯರಿಗೆ ಪಂಚಾಮೃತಾಭಿಷಕ ಮಾಡಿಸಿಕೊಂಡು ಬರೋಣ… ಎಂದಳು ಸಡಗರದಿಂದ ಆ ತಾಯಿ.
ಎಲ್ಲಿ ಸ್ವಲ್ಪ ಪರಿಮಳಪ್ರಸಾದ, ಮಂತ್ರಾಕ್ಷತೆ ಕಾಗದದಲ್ಲಿ ಕಟ್ಟಿಕೊಡು. ಈಗ ಭಾಗವತನ ಮನೆಗೆ ಹೋಗಿ ಬರುತ್ತೇನೆ. ಮನಸ್ಸಿಗೆ ಬಹಳ ಹಚ್ಚಿಕೊಂಡು ಆತ ಹಾಸಿಗೆ ಹಿಡಿದಿದ್ದಾನೆ, ಪಾಪ. ಒಂದು ರೀತಿ ಆತನೇ ನಮ್ಮ ಹುಡುಗನಿಗೆ ನೌಕರಿಗೆ ಸಹಾಯ ಮಾಡಿದ್ದಾನೆ. ಮೊನ್ನೆ ಬೆಂಗಳೂರಿಗೆ ಹೋದಾಗ ನಮ್ಮ ಹಳೇ ಸಾಹೇಬರನ್ನು ಆತ ಕಾಣೋದಂದ್ರೇನು, ಅಲ್ಲಿ ನಮ್ಮ ಹುಡುಗನ ವಿಷಯ ಹೇಳೋದು ಅಂದ್ರೇನು? ಎಲ್ಲ ರಾಯರ ಲೀಲೆ…
ನೋಡ್ರೀ, ಬರೀ ಪ್ರಸಾದ ಕೊಟ್ಟಿದ್ದೇನೆ. ರಾಯರ ಪ್ರಸಾದ ಅಂತ ಹೇಳಬೇಡಿ. ಬಹಳ ನಾಸ್ತಿಕ ನಿಮ್ಮ ಸ್ನೇಹಿತ ಎಂದಳು ಹೆಂಡತಿ.
ಸುಮ್ನಿರು. ನನಗೆ ಅಷ್ಟು ಗೊತ್ತಾಗದೇನು? ಎನ್ನುತ್ತ ರಾಯರ ಪ್ರಸಾದ ತೆಗೆದುಕೊಂಡು, ಬನ್ರೀ ಆಚಾರ್ರೇ, ಭಾಗವತನ ಮನೆಗೆ ಹೋಗಿ ನೋಡಿಕೊಂಡು ನಾಲ್ಕು ಸಮಾಧಾನದ ಮಾತು ಆಡಿ ಬರೋಣ. ಪಾಪ ಹ್ಯಾಗಿದ್ದಾನೋ ಎನ್ನುತ್ತಾ ರಂಗನಾಥಾಚಾರ್ಯರ ಜೊತೆ ಆತ ಭಾಗವತನ ಮನೆಗೆ ಧಾವಿಸಿದ.