ನೇತಾಜಿ : ಸೈಬಿರಿಯಾ ದಿಂದ ಫೈಜಾಬಾದ್ ವರೆಗೆ
ಅಯೋಧ್ಯೆ ಸಮೀಪದ ಫೈಜಾಬಾದಿನ ಸಾಕಷ್ಟು ಜನವಸತಿ ಇದ್ದ ಪ್ರದೇಶದ ರಾಮಭವನ ಎಂಬ ಕಟ್ಟಡದ ಹಿಂಭಾಗದ ಒಂದು ಕೋಣೆಯಲ್ಲಿ ವಾಸವಿದ್ದ ಓರ್ವ ಸಾಧು(ಬಾಬಾ) ೧೯೮೫ರ ಸೆಪ್ಟೆಂಬರ್ ೧೬ರಂದು ಸಂಜೆ ನಿಧನ ಹೊಂದಿದರು. ಆ ರಾತ್ರಿ ಕೆಲವು ವಿಚಿತ್ರ ಘಟನೆಗಳು ನಡೆದವು. ಶವವನ್ನು ನೋಡಬಾರದೆಂದು ಬಾಬಾ ಶಿಷ್ಯರು ಮನೆಮಾಲೀಕ ಗುರುಬಸಂತ್ ಸಿಂಗ್ಗೇನೇ ತಾಕೀತು ಮಾಡಿದರು. ಏಕೆಂದರೆ ಸತ್ತಮೇಲೆ ಕೂಡ ಯಾರೂ ತನ್ನನ್ನು ನೋಡಬಾರದೆಂದು ಬಾಬಾ ಬಯಸಿದ್ದರು. ಎರಡು ದಿನ ಶವ ಕೋಣೆಯಲ್ಲೆ ಇತ್ತು. ಎರಡು ವರ್ಷಗಳಿಂದ ಅವರು ಅಲ್ಲಿ ವಾಸವಾಗಿದ್ದರು. ಸುಮಾರು ತೊಂಬತ್ತರ ಸಮೀಪದ ವಯಸ್ಸು. ಡಾ| ಮಿಶ್ರ, ಡಾ| ಬ್ಯಾನರ್ಜಿ, ಸರಸ್ವತಿದೇವಿ ಶುಕ್ಲ ಎಂಬವರು ಅವರನ್ನು ನೋಡಿಕೊಳ್ಳುತ್ತಿದ್ದರು. ಕೆಲವು ವಿಶೇಷ ಬಂಗಾಳಿ ಶಿಷ್ಯರು ಬರುತ್ತಾರೆಂದು ಹೇಳುತ್ತಿದ್ದರು. ಸೆಪ್ಟೆಂಬರ್ ೧೯ರಂದು ಅವರು ಬಂದಿರಬೇಕು. ರಾತ್ರಿ ಕತ್ತಲಲ್ಲಿ ಶವವನ್ನು ಒಂದು ತ್ರಿವರ್ಣ ಧ್ವಜದಲ್ಲಿ ಸುತ್ತಿ ಅವಸರದಲ್ಲಿ ಒಯ್ದರು.ರಯೂ ನದೀತೀರದಲ್ಲಿ ಜನವಸತಿ ಇಲ್ಲದ ಗುಪ್ತಾರ್ ಘಾಟಿನಲ್ಲಿ ಆಗಲೇ ಚಿತೆ ಸಿದ್ಧವಾಗಿತ್ತು. ಶವವನ್ನು ಅದರ ಮೇಲಿಟ್ಟು ಸುಟ್ಟುಹಾಕಿದರು. ಅಲ್ಲಿ ಸೇರಿದ್ದವರು ಫೈಜಾಬಾದ್ ಮತ್ತು ಬಾಬಾ ಹಿಂದೆ ವಾಸವಾಗಿದ್ದ ಅಯೋಧ್ಯೆಯ ಕೆಲವರು. ಸ್ಥಳದಲ್ಲಿದ್ದ ಮೂವರು ವೈದ್ಯರು ಒಂದು ನಿರ್ಧಾರವನ್ನು ಘೋಷಿಸಿದರು – ಭಗವಾನರಿಗೆ (ಅದು ಅವರ ಒಂದು ಹೆಸರು) ಭರವಸೆ ನೀಡಿದಂತೆ ಅವರು ಯಾರೆಂದು ಯಾರಿಗೂ ಹೇಳಬಾರದು. ಅಲ್ಲಿನವರೆಗೆ ಅವರ ಸಂಪರ್ಕಕ್ಕೆ ಬಂದವರು ಅದನ್ನು ಪಾಲಿಸಿಕೊಂಡು ಬಂದಿದ್ದರು.
ಹದಿಮೂರು ಜನರಿಂದ ವಿದಾಯ
ಇದ್ದಕ್ಕಿದ್ದಂತೆ ಭಾವುಕರಾದ ಪಂಡಾ ರಾಂಕಿಶೋರ್ ಅಳುತ್ತಾ, ಅವರನ್ನು ಕಳುಹಿಸಲು ನಾವಿಲ್ಲಿ ೧೩ ಜನ ಮಾತ್ರ ಇದ್ದೇವೆ. ೧೩ ಲಕ್ಷ ಜನ ಇರಬೇಕಾಗಿತ್ತು ಎಂದು ದುಃಖಿಸಿದರು. ೧೯೭೭ರಲ್ಲಿ ಭಗವಾನರನ್ನು ಸಮೀಪದ ಬೇರೆ ಕಡೆಯಿಂದ ಅಯೋಧ್ಯೆಗೆ ಸ್ಥಳಾಂತರಿಸುವಾಗ ರಾಂಕಿಶೋರ್ ಅವರಿಗೆ ಭಗವಾನ್ ಯಾರೆಂದು ಗೊತ್ತಾಗಿತ್ತು; ದೃಢೀಕರಿಸುವುದು ಬಾಕಿ ಉಳಿದಿತ್ತು.
ಮುಂದೊಮ್ಮೆ ಬಾಬಾರ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಡಾ| ಟಿ.ಸಿ. ಬ್ಯಾನರ್ಜಿ ಧಾವಿಸಿ ಬಂದಿದ್ದರು. ೧೯೭೫ರ ಒಂದು ಅಪರಾಹ್ನ ಸರಸ್ವತಿದೇವಿ ಶುಕ್ಲ ಅವರು ಕ್ಲಿನಿಕ್ಗೆ ಬಂದು ಕರೆದಿದ್ದರು. ಕ್ಲಿನಿಕನ್ನು ಮಗ ಡಾ| ಪ್ರಿಯವ್ರತ ಬ್ಯಾನರ್ಜಿಗೆ ವಹಿಸಿ ಕೆಲವು ಕಿ.ಮೀ. ದೂರದ ಅಯೋಧ್ಯೆಗೆ ಆಗಮಿಸಿದ ಡಾ| ಬ್ಯಾನರ್ಜಿ ಮರಳುವಾಗ ಒಂದು ರೀತಿ ಗಾಬರಿಗೊಂಡಿದ್ದರು. ಹಲವರಿಗೆ ವರ್ಷಗಳೇ ಕಳೆದರೂ ಸಿಗದಂಥದ್ದು ಅವರಿಗೆ ಒಮ್ಮೆಲೇ ಸಿಕ್ಕಿಬಿಟ್ಟಿತ್ತು.
ರೋಗಿಯನ್ನು ನೋಡಲು ಪರದೆಯ ಆಚೆಬದಿಗೆ ಹೋಗಿ ಭಗವಾನರನ್ನು ನೋಡಿದಾಗ ಮೈಯಲ್ಲಿ ನಡುಕ ಬಂದಿತ್ತು. ಯುವಕನಾಗಿದ್ದ ಟಿ.ಸಿ. ಬ್ಯಾನರ್ಜಿ ೧೯೩೯ರಲ್ಲಿ ಲಕ್ನೋದಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವರನ್ನು ಕಂಡಿದ್ದರು. ಅವರೇ ನೇತಾಜಿ ಸುಭಾಶ್ಚಂದ್ರ ಬೋಸ್. ಭಗವಾನರ ಕೋಣೆಯಿಂದ ಹೊರಗೆ ಬಂದ ಡಾ| ಬ್ಯಾನರ್ಜಿ ಅವರಲ್ಲಿ ರಾಂಕಿಶೋರ್ `ವೃದ್ಧರು ಹೇಗಿದ್ದಾರೆ’ ಎಂದು ಕೇಳಿದರು. `ಅವರ ಸ್ಥಿತಿ ಸ್ಥಿರವಾಗಿದೆ’ ಎಂದು ಹೇಳಿ ಕೆಲವು ಹೆಜ್ಜೆ ಮುಂದೆ ಹೋದ ಡಾ| ಬ್ಯಾನರ್ಜಿ ಮತ್ತೆ ರಾಂಕಿಶೋರ್ ಕಡೆಗೆ ತಿರುಗಿ, ಸುಭಾಸ್ ಬಾಬು ಅವರ ಸೇವೆ ಮಾಡುವ ಅವಕಾಶ ನಿಮಗೆ ಸಿಕ್ಕಿದೆ ಎಂದು ಅಭಿನಂದಿಸಿದರು.
ಸೆಪ್ಟೆಂಬರ್ ೧೯ರ ರಾತ್ರಿ ಭಗವಾನರ ಶಿ?ರ ಮನಸ್ಸು ಭಾವನೆಗಳ ಕೋಲಾಹಲಕ್ಕೀಡಾಗಿದ್ದವು. ದಿನಕಳೆದಂತೆ ಚಡಪಡಿಕೆ ಹೆಚ್ಚಿತು. ಅವರ ಬಳಿ ಇದ್ದುದು ಅನುಭವ, ನಂಬಿಕೆ ಮಾತ್ರ. ಸ್ವಾಮಿಜೀ ಗುರುತಿನ ಬಗ್ಗೆ ಇದ್ದುದು ಊಹೆ ಮಾತ್ರ. ಅವರು ಕೋಣೆಯೊಳಗೆ ಇದ್ದರೂ ಭಗವಾನರು
ವಾಸಿಸಿದ ಕಡೆ ಅದು ಸುಭಾಸ್ ಎಂಬ ವದಂತಿ ಹಬ್ಬುತ್ತಿತ್ತು. ಆದರೂ ಯಾರೂ ಸ್ಪಷ್ಟವಾಗಿ ಏನನ್ನೂ ಹೇಳರು; ಕಾರಣ ಭಗವಾನರ ಕಟ್ಟಪ್ಪಣೆ. ಗುಮ್ನಾಮಿ (ಹೆಸರಿಲ್ಲದ) ಬಾಬಾ ಅವರ ಒಂದು ಹೆಸರು.
ಅಜ್ಜ ಮಹದೇವಪ್ರಸಾದ್ ಮಿಶ್ರ ಮತ್ತು ತಾಯಿ ಸರಸ್ವತಿದೇವಿ ಶುಕ್ಲ ಸೇವೆ ಮಾಡುತ್ತಿದ್ದುದು ನೇತಾಜಿ ಎಂದು ಸಹಪಾಠಿಗಳಿಂದ ತಿಳಿದ ಬಾಲಕ ರಾಜಕುಮಾರ್ ಆ ಬಗ್ಗೆ ಭಗವಾನರಲ್ಲೇ ಕೇಳಿದ. ಅದಕ್ಕೆ ಅವರು ನನ್ನ ಕೇಸರಿ ಬಟ್ಟೆ ನೋಡು; ನಾನು ಒಬ್ಬ ಸಾಧು ಅಲ್ಲವೇ? ಎಂದು ಕೇಳಿ ಸುಮ್ಮನಾಗಿಸಿದ್ದರು. ಬೆಳೆದ ಮಗನಿಗೆ ತಾಯಿ `ವದಂತಿ ನಿಜ; ಆದರೆ ಗುಟ್ಟು’ ಎಂದು ಎಚ್ಚರಿಸಿದರು. ಒಂದು ದಿನ ಭಗವಾನ್ ಓರ್ವ ಹಿರಿಯ ಶಿ?ರಲ್ಲಿ ತಾವು ನೇತಾಜಿ ಬೋಸ್ ಎಂದು ಒಪ್ಪಿಕೊಂಡಿದ್ದನ್ನು ರಾಜಕುಮಾರ್ ನೋಡಿದ. ಪಿಸುಮಾತುಗಳು ಹೆಚ್ಚುತ್ತಾ ಹೋದವು. ೧೯೭೫ರ ಅನಂತರ ಭಗವಾನರು ನಾಟಕೀಯವಾಗಿ ಆರು ಬಾರಿ ವಸತಿಯನ್ನು ಬದಲಾಯಿಸಿದ್ದರು; ಅಯೋಧ್ಯೆಯಲ್ಲಿ ಕನಿಷ್ಠ ನಾಲ್ಕು ಕಡೆ ಇದ್ದರು.
ಈ ಸಂತ ಯಾರು?
ರಾಮನಗರದಲ್ಲಿ ವಾಸವಿದ್ದಾಗ ಜುಲೈ ೩, ೧೯೭೭ರಂದು ಒಂದು ಸ್ಥಳೀಯ ಸಾಪ್ತಾಹಿಕ `ಸಂತರ ವೇಷದಲ್ಲಿರುವ ಇವರು ಯಾರು?’ ಎಂಬ ಲೇಖನವನ್ನು ಪ್ರಕಟಿಸಿತು; ಅದರಲ್ಲಿ – ಅವರು ಬಹುದೊಡ್ಡ ವ್ಯಕ್ತಿ. ಅವರು ಬಹಿರಂಗಕ್ಕೆ ಬಂದರೆ ಭಾರತದ ರಾಜಕೀಯದಲ್ಲಿ ಭೂಕಂಪ ಉಂಟಾಗಬಹುದು ಎಂದು ಬರೆದಿತ್ತು.
ವಿಭಿನ್ನ ಕಾರಣಗಳಿಗಾಗಿ ಅವರು ವಸತಿ ಬದಲಾಯಿಸುತ್ತಿದ್ದರು. ಗುರುಭಕ್ಸ್ ಸಿಂಗ್ ಸೋಧಿಗೆ ತನ್ನ ಬಾಡಿಗೆದಾರ ಇಷ್ಟವಾಗಲಿಲ್ಲ. ಈ ಕಣ್ಣಿಗೆ ಕಾಣದ ಸಂತ ಅರ್ಧರಾತ್ರಿಯ ಬಳಿಕ ಗುಟ್ಟಾಗಿ ಸಂಚರಿಸುತ್ತಿದ್ದರು. ಅಯೋಧ್ಯೆಯ ಐತಿಹಾಸಿಕ ಬ್ರಹ್ಮಕುಂಡ್ ಗುರುದ್ವಾರದ ಬಳಿ ಇರಿಸಿದ ಶಿಷ್ಯರು ಆ ಮನೆಯ ಸುತ್ತ ಎತ್ತರದ ಗೋಡೆಯನ್ನು ನಿರ್ಮಿಸಿದರು. ತನ್ನಲ್ಲಿ ಮನಸ್ತಾಪ ಹೊಂದಿದ್ದ ಅಣ್ಣನ ಜೊತೆ ಈ ಸಾಧು ಒಳ್ಳೆಯದರಲ್ಲಿದ್ದುದು ಸೋಧಿಗೆ ಇಷ್ಟವಾಗಲ್ಲ. ತುಂಬ ಹೊತ್ತು ಪ್ರಾರ್ಥನೆ, ಸಂದರ್ಶಕರ ಭೇಟಿಯ ಆನಂತರ ಭಗವಾನರು ಸೋದಿಯ ಅಣ್ಣನ ಮೊಮ್ಮಗಳಿಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಅವರನ್ನು ಹೊರಹಾಕಲು ಸೋಧಿ ಯತ್ನಿಸಿದಾಗ ಸ್ಥಳೀಯ ಆಡಳಿತ ಅದಕ್ಕೆ ಸಮ್ಮತಿಸಲಿಲ್ಲ. ಪೊಲೀಸರಿಗೆ ದೂರು ನೀಡಿದ ಆತ ಭಗವಾನರ ಮೇಲೆ ಪ್ರಕರಣ ದಾಖಲಿಸಿದ. ನ್ಯಾಯಾಲಯದಲ್ಲಿ ಹಾಜರಾಗುವುದು ಬಾಬಾರಿಗೆ ಅಸಂಭವ; ಆದ್ದರಿಂದ ಅವರು ಮೇ ೧೫ರಂದು (೧೯೭೮) ಜಾಗ ಖಾಲಿ ಮಾಡಿದರು.
ಮುಂಬಯಿಯ ’ಕರೆಂಟ್’ ಪತ್ರಿಕೆಯ ಸ್ಥಳೀಯ ಬಾತ್ಮೀದಾರ ವೀರೇಂದ್ರಕುಮಾರ್ ಮಿಶ್ರ ೧೯೭೯ರ ಫೆಬ್ರುವರಿಯಲ್ಲಿ ಫೈಜಾಬಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸೈ)ಗೆ ಪ್ರಸ್ತುತ ಗುರುದೇವ ಸ್ವಾಮಿ ಅಥವಾ ದಶನಾಮಿ (ಹತ್ತು ಹೆಸರು ಇರುವಾತ) ವಿರುದ್ಧ ಏಳುಪುಟಗಳ ಒಂದು ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿದ್ದರು; ಇದರಲ್ಲಿ ಸಂಶಯಾಸ್ಪದವಾದದ್ದೇನೋ ಇದೆ ಎಂದಾತ ದೂರಿದ್ದರು. ಕೆಲವರು ಈತ ಗುಟ್ಟಿನಲ್ಲಿರುವ ಸುಭಾಸ್ ಬೋಸ್ ಎಂದರೆ ಮತ್ತೆ ಕೆಲವರು ಸಿಐಎ ಏಜೆಂಟ್ ಎಂದು ಕೂಡಾ ಹೇಳುತ್ತಾರೆ. ಶಿಷ್ಯನಾದ ಓರ್ವ ಸ್ಥಳೀಯ ಶಿಕ್ಷಕ ನಾಲ್ಕು ವರ್ಷಗಳ ಹಿಂದೆ ಬಾಬಾರನ್ನು ಬಸ್ತಿಯಿಂದ ಬ್ರಹ್ಮಕುಂಡಕ್ಕೆ ಕರೆತಂದಾಗ ಶಿಷ್ಯರ ನಡುವೆ ಅವರು ನೇತಾಜಿ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಗಣೇಶ ಚತುರ್ಥಿಯ ದಿನ ಅವರ ಮನೆಯ ಒಳಭಾಗವನ್ನು ಅಲಂಕರಿಸಿದ್ದರು. ಜನವರಿ ೨೩ರಂದು ಅವರ ಜನ್ಮದಿನವನ್ನು ಆಚರಿಸುತ್ತಾರೆ. ಹೊರಗಿನಿಂದ ಬರುವ ಶಿಷ್ಯರು ಅವರ ಮನೆಯಲ್ಲಿ ಉಳಿದುಕೊಳ್ಳುವುದಿಲ್ಲ. ಬ್ರಹ್ಮಕುಂಡದ ಮನೆಗೆ ದುರ್ಗಾಪೂಜೆಯ ವೇಳೆ ಐದಾರು ಜನ ಬಂಗಾಳಿಗಳು ಬಂದು ೩-೪ ದಿನ ಅವರೊಂದಿಗಿರುತ್ತಾರೆ. ಕೇಳಿದ ಪ್ರಶ್ನೆಗೆ ಅವರು ಸರಿಯಾಗಿ ಉತ್ತರಿಸುವುದಿಲ್ಲ. ಬಾಬಾ ಶಿಷ್ಯರಲ್ಲಿ ಶಿಕ್ಷಕರು, ನ್ಯಾಯವಾದಿಗಳು, ಡಾಕ್ಟರ್ಗಳು, ಕಲಾವಿದರು, ರಾಜಕಾರಣಿಗಳು, ವಿದ್ಯಾವಂತರು ಮುಂತಾಗಿ ಬೇರೆಬೇರೆ ಕ್ಷೇತ್ರದವರಿದ್ದಾರೆ.
ಬಾಬಾ ತಮ್ಮನ್ನು ಸಂನ್ಯಾಸಿ ಎಂದು ಗುರುತಿಸಿಕೊಳ್ಳುತ್ತಾರೆ; ಆದರೆ ಧೂಮಪಾನ ಮಾಡುತ್ತಾರೆ. ದರ್ಶನ್ನಗರದ `ಶಂಕರ್ ನಿವಾಸ’ದಲ್ಲಿದ್ದಾಗ ಬಾಬಾ ತಮ್ಮನ್ನು ನೋಡಲು ಮರ ಏರಿದವರನ್ನು ಬೆದರಿಸಲು ಬಂದೂಕು ತೋರಿಸಿದ್ದಾರೆ. ಅಯೋಧ್ಯೆಯ ಮಾಜಿ ಇನ್ಸ್ಪೆಕ್ಟರ್ ಜಾಲಿಂಸಿಂಗ್ ಭಗವಾನರ ಬಗ್ಗೆ ತನಿಖೆ ನಡೆಸಲು ಯತ್ನಿಸಿದರಾದರೂ ಪಂಡಾ ರಾಂಕಿಶೋರ್ ಯತ್ನದಿಂದಾಗಿ ಆತ ಮುಂದೆ ಶಿಷ್ಯನೇ ಆಗಿಬಿಟ್ಟರು. ವಿರೇಂದ್ರಕುಮಾರ್ ಮಿಶ್ರರ ದೂರನ್ನು ಗಂಭೀರವಾಗಿ ತೆಗೆದುಕೊಂಡ ಎಸ್ಪಿ ತನಿಖೆಗಾಗಿ ಬಾಬಾ ಭೇಟಿಯನ್ನು ಬಯಸಿದರು; ಸಿಗಲಿಲ್ಲ. ಒತ್ತಾಯ ತಂದಾಗ ಅವರೇ ವರ್ಗವಾದರಂತೆ.
ಮನೆ ಬಳಿ ಕಾರುಗಳ ಸಾಲು
ನಡುರಾತ್ರಿಯ ವೇಳೆ ವಿಭಿನ್ನ ಮಾಡೆಲ್ನ ಕಾರುಗಳು ಫೈಜಾಬಾದಿನ ಭಗವಾನರ ಮನೆಯ ಬಳಿ ನಿಂತಿರುತ್ತವೆ. ೧೯೬೦ರ ದಶಕದಲ್ಲಿ ಅವರು ಬಸ್ತಿಯಲ್ಲಿ ಒಬ್ಬ ಸ್ಥಳೀಯ ರಾಜನ ಪಾಳುಬಿದ್ದ ಮನೆಯಲ್ಲಿದ್ದರು.
ರಾತ್ರಿ ವೇಳೆ ಸರ್ಕಾರೀ ಅಧಿಕಾರಿಗಳು ಭಗವಾನರೊಂದಿಗೆ ಗಂಟೆಗಟ್ಟಲೆ ಇರುತ್ತಿದ್ದರು. ಫೈಜಾಬಾದ್ ಮನೆಯ ಮಾಲೀಕ ಗುರುಬಸಂತ್ ಸಿಂಗ್ಗೆ ಒಮ್ಮೆ ಒಬ್ಬ ಸೇನಾಕರ್ನಲ್ ಭೇಟಿ ಆಯಿತು. ಕರ್ನಲ್ಗೆ ಬಾಬಾಕೋಣೆಯ ಒಳಭಾಗಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ಬಾಬಾರನ್ನು ಕಂಡು ಏದುಸಿರು ಬಂದಂತಾಯಿತು; ಗಾಬರಿಯಿಂದ ಹೊರಗೆ ಬಂದು, ಒಳಗಿರುವವರು ಓರ್ವ ಜನರಲ್ ಎಂದು ಉದ್ಗರಿಸಿದರಂತೆ.
ಭಗವಾನರ ಉಪದೇಶ ಹೆಚ್ಚಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ಮತ್ತು ಅಸಾಮಾನ್ಯ (ಪಾರಲೌಕಿಕ) ವಿಷಯಗಳ ಕುರಿತಾಗಿ ಇರುತ್ತಿತ್ತು. ಅದರಲ್ಲೂ ಭಾರತೀಯ ಮತ್ತು ಪಾಶ್ಚಾತ್ಯ ಚಿಂತಕರ ಮಾತುಗಳನ್ನು ಉದಾಹರಿಸುತ್ತಿದ್ದರು. ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡುತ್ತಿದ್ದರು. ಅಲ್ಲಲ್ಲಿ ಸಂಸ್ಕೃತ ಮತ್ತು ಜರ್ಮನ್ ಪದಗಳು ಇರುತ್ತಿದ್ದವು. ಅತ್ಯಂತ ವಿಶ್ವಾಸಿ ಶಿಷ್ಯರ ಮುಂದೆ ಮಾತೃಭಾಷೆ ಬಂಗಾಳಿಯಲ್ಲಿ ಮಾತನಾಡುತ್ತಿದ್ದರು; ಅದರ ಮೇಲೆ ಕೋಲ್ಕತ್ತಾ ಪರಿಸರದ ಒತ್ತು ಇತ್ತು. ಕೇಳಿದರೆ ಗೌರವ ಮೂಡಿಸುವ ಆಳವಾದ ಸ್ವರ.
ಮಾತು ಸ್ವಾತಂತ್ರ್ಯ ಹೋರಾಟದಿಂದ ವಿಯೆಟ್ನಾಂವರೆಗೆ ಸಾಗುತ್ತಿತ್ತು. ಸಬ್ಮೆರಿನ್ನಲ್ಲಿ ತಿಂಗಳುಗಟ್ಟಲೆ ಪ್ರಯಾಣಿಸಿದ್ದನ್ನು ನೆನಪಿಸಿಕೊಳ್ಳುವರು. ಬರ್ಲಿನ್, ಸೈಬೀರಿಯಾ, ಟೋಕಿಯೋ, ಲಂಡನ್, ಕಾಬೂಲ್, ಸೈಗಾನ್, ಸಿಂಗಾಪುರ, ಕಲ್ಕತ್ತಾ ಇತ್ಯಾದಿ ಮಾತಿನ ಮಧ್ಯೆ ಬಂದುಹೋಗುತ್ತಿದ್ದವು. ಗಾಂಧಿ, ನೆಹರು, ಜಿನ್ನಾ, ಅಬುಲ್ಕಲಂ ಆಜಾದ್ ಅವರೆಲ್ಲ ಸಮಕಾಲೀನರು ಮತ್ತು ಆತ್ಮೀಯರೆಂಬಂತೆ ಪ್ರಸ್ತಾಪಗೊಳ್ಳುತ್ತಿದ್ದರು. `ನೀವು ಸಿಗಾರ್ ಸೇದುವಿರಾ?’ ಎಂದು ಕೇಳಿದಾಗ ಒಮ್ಮೆ ಬಾಬಾ, ನನಗೆ ಸಿಗಾರ್ ದುರಭ್ಯಾಸವನ್ನು ಮುಸಲೋನಿ ಕೊಟ್ಟರು ಎಂದು ಉತ್ತರಿಸಿದ್ದರಂತೆ. ತುಂಬ ಘಟನೆಗಳು, ಯುದ್ಧಗಳು, ಹಿಟ್ಲರ್ ಎಲ್ಲ ಅವರ ನೆನಪಿನಲ್ಲಿದ್ದವು. ಎರಡನೇ ಮಹಾಯುದ್ಧದ ಆನಂತರ ಅಮೆರಿಕ ಒಂದೂ ಯುದ್ಧವನ್ನು ಗೆದ್ದಿಲ್ಲ ಎಂಬುದು ಬಾಬಾರ ಒಂದು ಮಾತು. ಚರ್ಚಿಲ್ಗೆ ಎಸ್ ಅಕ್ಷರ ಉಚ್ಚರಿಸಲು ಬರುತ್ತಿರಲಿಲ್ಲ; ಇದನ್ನು ನಿಮಗೆ ಹೇಳಲು ನಾನು ಜೀವಂತ ಇದ್ದೇನೆ ಎಂದು ಅವರೊಮ್ಮೆ ಹೇಳಿದ್ದರು. ಜರ್ಮನ್, ಜಪಾನಿ ಸೈನಿಕರನ್ನು ತುಂಬ ಹೊಗಳುತ್ತಿದ್ದರು.
‘ನೇತಾ ನಿಧನರಾದರು’
ಒಂದು ತಿಂಗಳು ಸುಮ್ಮನಿದ್ದ ಉತ್ತರಪ್ರದೇಶ ಪೊಲೀಸರು, ಸರಸ್ವತಿದೇವಿ ಮತ್ತು ರಾಜಕುಮಾರ ಅವರನ್ನು ಠಾಣೆಗೆ ಕರೆದು ಬಂಧಿಸಿದರು. ಇದರಿಂದ ಬಾಬಾ ಹಿಂಬಾಲಕರು ಸಿಟ್ಟಾದರು. ಮರುದಿನ (ಅಕ್ಟೋಬರ್ ೨೮, ೧೯೮೫) ಸ್ಥಳೀಯ ಪತ್ರಿಕೆ `ನಯೇ ಲೋಗ್’ ದೊಡ್ಡ ಸುದ್ದಿಯ ಸ್ಫೋಟ ಮಾಡಿತು. ಸಂಪಾದಕ ಅಶೋಕ್ ಟಂಡನ್ ವರದಿಗಾರರಿಂದ ತನಿಖೆ ಮಾಡಿಸಿ, `ಫೈಜಾಬಾದ್ಸ್ ನೇತಾ ಸುಭಾಶ್ಚಂದ್ರ ಬೋಸ್ ಪಾಸ್ಡ್ ಅವೇ’ ಎನ್ನುವ ದೊಡ್ಡ ಮುಖಪುಟದ ಸುದ್ದಿ ಮಾಡಿದರು; ಸಂಪಾದಕೀಯ ಬರೆದು, ಅಧಿಕೃತ ತನಿಖೆ ನಡೆಯಲಿ ಎಂದು ಒತ್ತಾಯಿಸಿದರು. ಸರಸ್ವತಿದೇವಿ ಶುಕ್ಲಾ ಅವರು ಹೇಳಿಕೆ ನೀಡಿ, ತಾನು ಮತ್ತು ತಂದೆ (ಮಹದೇವಪ್ರಸಾದ್ ಮಿಶ್ರ) ಸೇವೆ ಮಾಡಿದ ವ್ಯಕ್ತಿ ಸುಭಾಶ್ಚಂದ್ರ ಬೋಸ್ ಎಂದು ದೃಢಪಡಿಸಿದ್ದಲ್ಲದೆ, ತನ್ನ ಈ ಅವಸ್ಥೆಗೆ ನೆಹರು-ಗಾಂಧಿ (ಇಂದಿರಾ ಗಾಂಧಿ) ವಂಶಾಡಳಿತವೇ ಕಾರಣವೆಂದು ಭಗವಾನ್ ಟೀಕಿಸುತ್ತಿದ್ದರು; ಅವರು ಯಾರೆಂದು ಹಲವು ಗಣ್ಯ ವ್ಯಕ್ತಿಗಳಿಗೆ ಗೊತ್ತಿತ್ತು ಎಂದು ತಿಳಿಸಿದರು.
ಸುದ್ದಿ ಪಸರಿಸಿತು. `ನಯೇ ಲೋಗ್’ ಪ್ರಸಾರಕ್ಕೆ ಯಾರೋ ತಡೆ ಒಡ್ಡುತ್ತಿದ್ದಾರೆಂದು ಟಂಡನ್ ಅವರಿಗೆ ಮಾಹಿತಿ ಬಂತು. ಆದರೆ ಸುದ್ದಿ ತುಂಬ ದೊಡ್ಡದಿದ್ದು ಅದನ್ನು ಮುಚ್ಚಿಹಾಕಲು ಸಾಧ್ಯವಾಗಲಿಲ್ಲ. ಓರ್ವ ಬಡ ಸಾಧುವನ್ನು ಮಹಾನ್ ಹೋರಾಟಗಾರನ ಜೊತೆ ಸಮೀಕರಿಸುವುದು ಸಮಂಜಸವಲ್ಲ ಎಂದ ಜಿಲ್ಲಾಧಿಕಾರಿ ತಾನು ಮತ್ತು ಎಸ್ಪಿ ತನಿಖೆ ನಡೆಸಿದ್ದು ಅಂಥದ್ದೇನೂ ಇಲ್ಲ ಎಂದು ಹೇಳಿದರು. ಅಕ್ಟೋಬರ್ ೨೯ರಂದು ಪಂಡಾ ರಾಂಕಿಶೋರ್ ಇನ್ನಷ್ಟು ಮಾಹಿತಿಗಳನ್ನು ಬಿಡುಗಡೆಗೊಳಿಸಿದರು. ಕಾಂಗ್ರೆಸ್ ಸಂಸತ್ಸದಸ್ಯ ನಿರ್ಮಲ್ಚಂದ್ ಖತ್ರಿ `ದೆಹಲಿಯಲ್ಲಿ ಈ ವಿಷಯವನ್ನು ಎತ್ತುವೆ’ ಎಂದು ಬೆದರಿಸಿದರು; ಮುಂದೆ ಹಾಗೇನೂ ಮಾಡಲಿಲ್ಲ. ಸ್ಥಳೀಯ ರಾಜಕಾರಣಿಗಳು ಹಲವು ಸಭೆ ನಡೆಸಿದರು.
ಓರ್ವ ನ್ಯಾಯವಾದಿ ಜಿಲ್ಲಾಧಿಕಾರಿಗೊಂದು ಅರ್ಜಿ ಸಲ್ಲಿಸಿ, ಭಗವಾನರ ಸೊತ್ತುಗಳ ಬಗ್ಗೆ ಕ್ರಮ ಕೈಗೊಳ್ಳಿ ಎಂದು ವಿನಂತಿಸಿದ್ದಲ್ಲದೆ, ನಯೇ ಲೋಗ್ ಸಂಪಾದಕ ಜನರನ್ನು ದಾರಿತಪ್ಪಿಸಿದ್ದು ಅವರನ್ನು ಬಂಧಿಸಿ, ಎಂದು ಒತ್ತಾಯಿಸಿದರು. ಫೈಜಾಬಾದ್ ಎಸ್ಪಿ ಮೃತ ಗುಮ್ನಾಮಿ ಬಾಬಾ ಅವರ ಸೊತ್ತುಗಳ ತಪಶೀಲುಪಟ್ಟಿ ತಯಾರಿಸಲು ಇಲಾಖಾ ಸಿಬ್ಬಂದಿಗೆ ಆದೇಶ ನೀಡಿದರು.
ಅದರಂತೆ ಫೈಜಾಬಾದಿನ ರಾಮಭವನಕ್ಕೆ ಪೊಲೀಸರು ಭೇಟಿ ನೀಡಿದಾಗ ಮೊದಲ ಬಾರಿಗೆ ಪರದೆಯ ಆಚೆಕಡೆ ಇದ್ದುದು `ಹೊರಗಿನವರ’ ಮುಂದೆ ಬಯಲಾಯಿತು. ಎಲ್ಲೆಲ್ಲೂ ಟ್ರಂಕ್ಗಳು, ಪೆಟ್ಟಿಗೆ(ಬಾಕ್ಸ್)ಗಳು, ಒಂದು ಮಿನಿ ಗ್ರಂಥಾಲಯವೆಂದು ಕಾಣುವ? ಪುಸ್ತಕಗಳು ಅಲ್ಲಿದ್ದವು. ವಿಶೇ?ವಾದ ಪತ್ರಗಳು, ಚಿತ್ರಗಳು ಕಂಡುಬಂದವು. ಬಸ್ತಿಯ ದುರ್ಗಾಪ್ರಸಾದ್ ಪಾಂಡೆ ಎಂಬವರು ಭಗವಾನರಿಗೆ ಬರೆದ ಪತ್ರದಲ್ಲಿ ನೀವು ಯಾರೆಂದು ಗೊತ್ತು; ನಿವೃತ್ತ ಕಂದಾಯ ಅಧಿಕಾರಿ ಜ್ವಾಲಾಮಿತ್ರ ವಕೀಲ್, ಸಾಯುವ ಹೊತ್ತಿಗೆ ನನ್ನಲ್ಲಿ ನೀವು ಯಾರೆಂದು ತಿಳಿಸಿ, ಗುಟ್ಟು ಬಿಟ್ಟುಕೊಡಬಾರದು ಎಂದು ತಿಳಿಸಿದ್ದರು. ಆದರೆ ಸತ್ಯ ಹೊರಗೆ ಬಾರದೆ ಇರುವುದಿಲ್ಲ. ನೀವು ಐಸಿಎಸ್ ಆಗಿದ್ದಿರಿ; ಜನವರಿ ೨೩ರಂದು ನಿಮ್ಮ ಜನ್ಮದಿನವನ್ನು ಆಚರಿಸಲಾಗುತ್ತದೆ. ಅಂದು ನಿಮ್ಮ `ಜೈಹಿಂದ್’ ಘೋಷಣೆ ಮೊಳಗುತ್ತದೆ ಎಂದು ತಿಳಿಸಿದರು.
ಕೈಬರಹದ ಹೋಲಿಕೆ
ಉತ್ತರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೃತ ಭಗವಾನ್ ನೇತಾಜಿ ಬೋಸರಲ್ಲ ಎಂದು ಹೇಳಿದರಾದರೂ ಪೋಲಿಸ್ ಡಿಐಜಿ ಅಜಯ್ರಾಜ್ ಶi ಬಾಬಾ ಅವರ ಕೈಬರಹ ಸುಭಾಶ್ಚಂದ್ರ ಬೋಸರದ್ದನ್ನು ಹೋಲುತ್ತದೆ ಎನ್ನುವ ಮಹತ್ತ್ವದ ಅಭಿಪ್ರಾಯ ನೀಡಿದರು. ವಾರಪತ್ರಿಕೆ `ಸಹರಾ’ ಗುಮ್ನಾಮಿ ಬಾಬಾ ನೇತಾಜಿ ಇದ್ದಿರಬೇಕು ಎಂದು ಹೇಳಿದರೆ, ಸುದೀರ್ಘ ತನಿಖೆ ನಡೆಸಿದ `ನಾರ್ತರ್ನ್ ಇಂಡಿಯಾ ಪತ್ರಿಕಾ’ ಅಗಲಿದ ಸಾಧು ಸುಭಾಶ್ಚಂದ್ರ ಬೋಸರೇ ಎನ್ನುವ ತೀರ್ಮಾನಕ್ಕೆ ಬಂತು. ವಿವರಣೆಯನ್ನು ಸರಿಯಾಗಿ ದಾಖಲಿಸದಿದ್ದರೂ ಕೂಡ ಪೊಲೀಸರು ಆ ಕೋಣೆಯಲ್ಲಿದ್ದ ೨೬೭೩ ವಸ್ತುಗಳನ್ನು ಪಟ್ಟಿಗೆ ಸೇರಿಸಿದರು. ಸುರೇಶ್ ಬೋಸ್ ಪುತ್ರಿ ಲಲಿತಾಬೋಸ್ ಕೊಠಡಿಯನ್ನು ನೋಡುತ್ತಲೇ ಅಲ್ಲಿದ್ದುದು ಓರ್ವ ಬಂಗಾಳಿ ಎಂದು ಉದ್ಗರಿಸಿದರು. ಕಾಳಿ, ಶ್ರೀ ರಾಮಕೃಷ್ಣ ಪರಮಹಂಸ, ಶಾರದಾದೇವಿ, ವಿವೇಕಾನಂದರ ಚಿತ್ರಗಳು, ಬಂಗಾಳಿ-ಇಂಗ್ಲಿಷ್ ಪುಸ್ತಕಗಳ ರಾಶಿ ಅಲ್ಲಿದ್ದವು. ಅಲ್ಲಿದ್ದ ಕೈಬರಹವನ್ನು ಕಾಣುತ್ತಲೇ ಅದು ಚಿಕ್ಕಪ್ಪನದೆಂದು ಲಲಿತಾ ಬೋಸ್ ಅವರಿಗೆ ದೃಢವಾಯಿತು.
ಒಂದು ಟ್ರಂಕಿನಲ್ಲಿ ಭಗವಾನರು ಯಾರಿಗೂ ತೋರಿಸದ ಭಾವಚಿತ್ರಗಳಿದ್ದವು. ಅದರಲ್ಲಿ ಲಲಿತಾ ಅವರ ಅಜ್ಜ-ಅಜ್ಜಿಯ ಚಿತ್ರವಿದ್ದು, ಅದರ ಕೆಳಗೆ `ಗೌರವಾನ್ವಿತ ತಂದೆ-ತಾಯಿಯರು’ ಎಂದು ಬರೆಯಲಾಗಿತ್ತು. ತಂದೆ ಜಾನಕೀನಾಥ್ ಬೋಸರ ಹಳೇರೀತಿಯ ಕೊಡೆಯನ್ನು ಯಾರೋ ಕಳುಹಿಸಿದ್ದು ಅದನ್ನು ಬಾಬಾ ಚೆನ್ನಾಗಿ ಇಟ್ಟುಕೊಂಡಿದ್ದರು. ನಿಕಟಬಂಧುಗಳ ಗ್ರೂಪ್ಫೋಟೊ, ಸುರೇಶ್ ಬೋಸ್ ಅವರು ಬರೆದ ಟಿಪ್ಪಣಿಗಳು, ೧೯೭೦ರ ದಶಕದ ಆರಂಭದ ಹೊತ್ತಿಗೆ ಬೋಸ್ ಸಾವಿನ ಕುರಿತು ತನಿಖೆ ನಡೆಸಿದ ಖೋಸ್ಲಾ ಆಯೋಗವು ಸುರೇಶ್ ಬೋಸರಿಗೆ ಕಳುಹಿಸಿದ ಸಮನ್ಸ್ – ಇವೆಲ್ಲ ರಾಮಭವನದ ಕೋಣೆಯಲ್ಲಿದ್ದವು. ನೇತಾಜಿ ಬೋಸ್ ಬಗೆಗಿನ, ವಿಶೇಷವಾಗಿ ಅವರ ಸಾವಿನ ರಹಸ್ಯಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಹಲವು ವ?ಗಳ ಕಾಲ ಸಂಗ್ರಹಿಸಿ ಇಟ್ಟದ್ದು ಕಂಡುಬಂತು.
ತಮಗೆ ಬಂದ ಎಲ್ಲವನ್ನೂ ಬಾಬಾ ಎಚ್ಚರದಿಂದ ಓದುತ್ತಿದ್ದರು. ೧೯೬೦ರ ದಶಕದಲ್ಲಿ ಪ್ರಕಟವಾದ `ಕೆಲವು ಬೋಸ್ ಸಹವರ್ತಿಗಳ ವಿಚಿತ್ರ ನಡವಳಿಕೆ’ ಎಂಬ ಒಂದು ವರದಿಯ ಪ್ರತಿ ಅಲ್ಲಿತ್ತು. ಅದರಲ್ಲಿ ಈ ಸಹವರ್ತಿಗಳು ಇದ್ದಕ್ಕಿದ್ದಂತೆ ನಾಪತ್ತೆ ಆಗುತ್ತಾರೆ. ಯಾತ್ರಾಸ್ಥಳ ನೀಮ್ಸಾರ್ (ನೇಪಾಳದ ಸಮೀಪದ)ಗೆ ಹೋಗಿ ಬರುತ್ತಾರೆ. ಅಲ್ಲಿರುವ ಓರ್ವ ಸಾಧುವನ್ನು ಭೇಟಿ ಮಾಡುವುದು ಅವರ ಉದ್ದೇಶ ಎಂದು ಬರೆದಿತ್ತು. ಭಗವಾನರು ಬಸ್ತಿಗೆ ಬರುವ ಮುನ್ನ ನೀಮ್ಸಾರ್ನಲ್ಲಿದ್ದರು ಎಂಬುದನ್ನು ಪತ್ತೆ ಮಾಡಲಾಗಿದೆ. ಗುರುದಾಸ್ಪುರದ ದೇರಾಬಾಬಾ ನಾನಕ್ನ ಗುರುಚರಣ್ಸಿಂಗ್ ಬೇಡಿ ಗುರುಗ್ರಂಥ ಸಾಹಿಬ್ನ ಒಂದು ಪ್ರತಿಯನ್ನು ಬಾಬಾ ಅವರಿಗೆ ಕಳುಹಿಸುತ್ತಾ, ಕೋಟ್ಯಾಂತರ ಭಾರತೀಯರ ಕಣ್ಣು ನಿಮ್ಮ ಮೇಲಿದೆ….. ನೀವು ನಮ್ಮ ಪಾಲಿಗೆ ಮಾನವರೂಪದಲ್ಲಿರುವ ದೇವರು ಎಂದು ಬರೆದಿದ್ದಾರೆ. ಅಬ್ದುಲ್ ಹಾಫಿಜ್ ಎಂಬವರು ಪತ್ರದಲ್ಲಿ ಗೌರವಾನ್ವಿತ ರಹಸ್ಯ ಸಾಧುಗಳೇ, ನೀವು ಯಾರು? ಯಾರು ಆಗಿದ್ದಿರಿ? ನಿಮಗೇಕೆ ಹೀಗಾಯಿತು ಎಂಬುದೆಲ್ಲ ನನಗೆ ಗೊತ್ತು. ಆದಷ್ಟು ಬೇಗ ನಿಮ್ಮ ಮೂಲರೂಪ ಪಡೆಯಿರಿ ಎಂದು ಹಾರೈಸಿದ್ದಾರೆ. ಗುರುಚರಣ್ ಎಂಬವರ ಪತ್ರದಲ್ಲಿ ನೀವು ನೇತಾಜಿ ಎಂದು ಜನ ಹೇಳುತ್ತಾರೆ. ಅದು ನಿಜವಾಗಿದ್ದರೆ ನಿಮ್ಮ ಈ ಸ್ಥಿತಿಗಾಗಿ ರಕ್ತವೇ ಕಣ್ಣೀರಾಗಿ ಬರುತ್ತದೆ ಎಂದು ಬರೆಯಲಾಗಿದೆ. ಬಾಬಾ ಅನಾರೋಗ್ಯಕ್ಕೊಳಗಾದಾಗ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ಪತ್ರಗಳು ಕೂಡಾ ಫೈಜಾಬಾದಿನ ಕೋಣೆಯಲ್ಲಿ ಸಿಕ್ಕಿವೆ.
ಗಣ್ಯರ ಸಂಪರ್ಕ
ಭಗವಾನರಿಗೆ ಹಲವು ಗಣ್ಯರ ಸಂಪರ್ಕ ಇದ್ದಿರಬೇಕು. ಆರ್ಎಸ್ಎಸ್ ಸರಸಂಘಚಾಲಕರಾದ ಎಂ.ಎಸ್. ಗೋಳ್ವಲ್ಕರ್ ಅವರು ೧೯೭೨ರಲ್ಲಿ ಬಾಬಾರಿಗೆ ಬರೆದ ಪತ್ರ ಸಿಕ್ಕಿದೆ. ಅದರಲ್ಲಿ ಭಗವಾನರನ್ನು ವಿಜಯಾನಂದರೆಂದು ಸಂಬೋಧಿಸಿದ್ದು, ತಮಗೆ ನೂರು ಪ್ರಣಾಮಗಳು ಎಂದು ಪತ್ರ ಆರಂಭವಾಗುತ್ತದೆ; ಪತ್ರದಲ್ಲಿ ಶ್ರೀಗುರೂಜಿ ಭಗವಾನರ ಮಾರ್ಗದರ್ಶನವನ್ನು ಕೋರಿದ್ದಾರೆ. ಬೋಸರ ಜನ್ಮದಿನಾಚರಣೆಯ ಹಲವು ಫೋಟೋಗಳು ಬಾಬಾ ಸಂಗ್ರಹದಲ್ಲಿ ಕಂಡುಬಂದಿದೆ. ಕಲ್ಕತ್ತಾದಲ್ಲಿ ಆಚರಿಸಿದವರು ಚಿತ್ರವನ್ನು ಇವರಿಗೆ ಕಳುಹಿಸುತ್ತಿದ್ದರು. ಒಂದು ಚಿತ್ರಕ್ಕೆ `ನೇತಾಜಿ ಜನ್ಮದಿನ – ೧೯೭೩ರ ಬ್ಯಾಂಡ್ ಪಾರ್ಟಿ’ ಎಂಬ ವಿವರಣೆ ನೀಡಲಾಗಿದೆ. ಬಾಬಾ ಪ್ರತಿವರ್ಷ ಜನವರಿ ೨೨ರಿಂದ ೨೪ರವರೆಗಿನ ದಿನಗಳನ್ನು ಕಲ್ಕತ್ತಾದ ಶಿಷ್ಯರಿಗೆ ಮೀಸಲಿಡುತ್ತಿದ್ದರು; ಆಗ ಕೆಲವರು ಬಂದು ಜನ್ಮದಿನವನ್ನು ಆಚರಿಸುತ್ತಾರೆಂದು ಸ್ಥಳೀಯರು ಹೇಳಿದ್ದಾರೆ.
ಸೊತ್ತುಗಳ ಪಟ್ಟಿ ಮಾಡುವಾಗ ಸ್ಥಳದಲ್ಲಿದ್ದ ದುರ್ಗಾಪ್ರಸಾದ್ ಪಾಂಡೆ ಅವರು ಬಸ್ತಿಯಲ್ಲಿ ತಾನು ಭಗವಾನರ ಕೋಣೆಯೊಳಗೆ ಹೋದ ಸಂದರ್ಭವನ್ನು ನೆನಪಿಸಿಕೊಂಡರು. ಆತ ೧೯೩೯ರಲ್ಲಿ ಸುಭಾಶ್ಚಂದ್ರ ಬೋಸರನ್ನು ಹತ್ತಿರದಿಂದ ಕಂಡಿದ್ದರು. ಕೋಣೆಯೊಳಗೆ ಅದೇ ರೂಪ ಕಂಡಿತು. ಬಿಳಿಯಾದ ಉದ್ದಮುಖ, ಉರುಟು ಗ್ಲಾಸ್ಗಳ ಕನ್ನಡಕದ ಹಿಂದೆ ಚೂಪಾದ ಮಂಗೋಲಾಯ್ಡ್ ಕಣ್ಣುಗಳು, ಅಲುಗಾಡುವ ಹೊಟ್ಟೆ, ಇನ್ನಷ್ಟು ಖಾಲಿಯಾದ ತಲೆಗೂದಲು, ಉದ್ದವಾದ ಮೀಸೆ-ಗಡ್ಡ, ಆದರೂ ಮುಖ ಅದೇ. ಪಾಂಡೆಗೆ ಉಸಿರು ನಿಂತಂತಾಗಿ ’ನೇ-ತಾ-ಜಿ’ ಎಂದರು. `ನೀನು ಸತ್ತವನ ಬಗ್ಗೆ ಮಾತನಾಡುತ್ತಿದ್ದಿ’ ಎಂದು ಹೇಳಿದರು. ಅದಕ್ಕೆ ಪಾಂಡೆ `ಇಲ್ಲ, ನಾನು ಜೀವಂತ ನೇತಾಜಿ ಜೊತೆ ಮಾತನಾಡುತ್ತಿದ್ದೇನೆ’ ಎಂದು ಉತ್ತರಿಸಿದರು. ಮತ್ತೆ ಭಗವಾನ್ ಒಪ್ಪಿಕೊಂಡರಂತೆ. ೧೯೭೮ರಲ್ಲಿ ಡಾ| ಟಿ.ಸಿ. ಬ್ಯಾನರ್ಜಿ ದಂಪತಿಗೆ ಅಂಥದ್ದೇ ಅನುಭವವಾಗಿತ್ತು. ಶ್ರೀಮತಿ ಬ್ಯಾನರ್ಜಿ ಅವರಲ್ಲಿ ಬಾಬಾ `ನಾನು ಸುಭಾಸ್ ಥರ ಕಾಣುತ್ತೇನಾ?’ ಎಂದು ಕೇಳಿದರು. ಅದಕ್ಕೆ ಆಕೆ ಅದು ಹೇಳಲು ನಾವು ಯಾರು? ನೀವೇ ಹೇಳಬೇಕು ಎಂದರು. ಆಗ ಬಾಬಾ ತಲೆ ಅಲ್ಲಾಡಿಸಿ `ಹೂಂ’ ಎಂದರಂತೆ. ಆದರೆ ಕೋಣೆಯಿಂದ ಹೊರಗೆ ಹೋಗುವ ಮುನ್ನ, ಇಲ್ಲಿ ಏನೇ ನಡೆದರೂ ಹೊರಗೆ ಗೊತ್ತಾಗಬಾರದು. ನನ್ನ ಬಗ್ಗೆ ಯಾರಿಗೂ ಹೇಳಬೇಡಿ. ಅದರಿಂದ ದೇಶಕ್ಕೆ ಏನೂ ಒಳ್ಳೆಯದಾಗುವುದಿಲ್ಲ ಎಂದು ಎಚ್ಚರಿಸಿ ಕಳುಹಿಸಿದರು.
೧೯೮೭ರಲ್ಲಿ ಭಗವಾನರ ಸೊತ್ತುಗಳನ್ನು ೨೩ ಪೆಟ್ಟಿಗೆಗಳಲ್ಲಿ ತುಂಬಿಸಿ ಜಿಲ್ಲಾ ಟ್ರೆಜರಿಗೆ ಕಳುಹಿಸಲಾಯಿತು. ಆಗ ಅಶೋಕ್ ಟಂಡನ್ ತಮ್ಮ ಹಿಂದಿ ಪತ್ರಿಕೆ `ಗಂಗಾ’ದಲ್ಲಿ ೧೯ ಕಂತಿನ ಲೇಖನ ಸರಣಿಯನ್ನು ಬರೆದು `ಅದು ನೇತಾಜಿ ಅಲ್ಲವಾದರೆ ಬೇರೆ ಯಾರು?’ ಎಂದು ಪ್ರಶ್ನಿಸಿದರು. ಅದನ್ನು ಯಾರೂ ಅಲ್ಲಗಳೆಯಲಿಲ್ಲ. ರಾಜ್ಯಸಭೆಯಲ್ಲಿ ಪ್ರಶ್ನೆ ಎತ್ತಿ ಗದ್ದಲವಾಯಿತು. ಲಲಿತಾಬೋಸ್ ಕೂಡಾ `ಭಗವಾನರು ನೇತಾಜಿ ಅಲ್ಲವಾದರೆ ಬೇರೆ ಯಾರು?’ ಎಂದು ಪ್ರಶ್ನಿಸಿದರು; ಅವರ ತೀರಾ ಖಾಸಗಿ ಪತ್ರಗಳು ಅಲ್ಲಿಗೆ ಹೇಗೆ ಬಂದವು? ಸಾಧು ಯಾರೆಂದು ಸರ್ಕಾರ ಗುರುತಿಸಿ ಹೇಳದಿದ್ದರೆ ಅದು ನೇತಾಜಿ ಎಂದೇ ಅರ್ಥ. ಭಗವಾನರ ವಯಸ್ಸು, ಗಾತ್ರ, ಮೈಬಣ್ಣ ಎಲ್ಲವೂ ನೇತಾಜಿಗೆ ಹೊಂದುತ್ತವೆ ಎಂದು ಆಕೆ ಸ್ಪಷ್ಟಪಡಿಸಿದರು. ಬಾಬಾ ಯಾರೆಂದು ಪ್ರಶ್ನಿಸಿ ಲಲಿತಾಬೋಸ್ ನ್ಯಾಯಾಲಯದಲ್ಲಿ ದಾವೆ ಹೂಡಿದಾಗ ಉತ್ತರಪ್ರದೇಶ ಸರ್ಕಾರ ಅದಕ್ಕೆ ಅಫಿಡವಿಟ್ ಹಾಕಲೇ ಇಲ್ಲ; ಅವರ ಕೇಸಿನ ಕಡತ ನಾಪತ್ತೆಯೂ ಆಯಿತು; ೧೩ ವ?ಗಳಾದ ಮೇಲ? ಅಫಿಡವಿಟ್ ಹಾಕಿತು.
ಎಂಥ ಸಾಧುವಪ್ಪಾ!
೧೯೯೯ರಲ್ಲಿ ವಾಜಪೇಯಿ ಸರ್ಕಾರ ನೇಮಿಸಿದ ನ್ಯಾ| ಮುಖರ್ಜಿ ಆಯೋಗ ಬೋಸರದ್ದೆನ್ನಲಾದ ಪ್ರಸ್ತುತ ವಸ್ತುಗಳನ್ನೆಲ್ಲ ಗಮನಿಸಿತು. ಅಲ್ಲಿ ಸಿಖ್, ಕ್ರೈಸ್ತ, ಯಹೂದಿ, ಇಸ್ಲಾಂ ಸೇರಿದಂತೆ ಧಾರ್ಮಿಕ ಗ್ರಂಥಗಳ ರಾಶಿ ಇದ್ದಂತೆಯೇ ಟಾಗೋರ್, ಶರಶ್ಚಂದ್ರರ ಬಂಗಾಳಿ ಕೃತಿಗಳು, ಇಂಗ್ಲಿಷ್ ಸಾಹಿತ್ಯಕೃತಿಗಳು ಧಾರಾಳವಾಗಿದ್ದವು. ಅದನ್ನು ಕಂಡ ಓರ್ವ ಪತ್ರಕರ್ತ ಈತ `ಎಂಥ ಸಾಧುವಪ್ಪಾ!’ ಎಂದು ಉದ್ಗರಿಸಿದರು. ಪುಸ್ತಕಗಳನ್ನು ಓದಿದ ಬಾಬಾ ತಮ್ಮ ಟಿಪ್ಪಣಿಗಳನ್ನು ದಾಖಲಿಸಿದ್ದರು; ಪಾಶ್ಚಾತ್ಯ ಇತಿಹಾಸಕಾರರ ತಪ್ಪುಗಳನ್ನು ಟೀಕಿಸಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಬಗೆಗೆ `ಅ ಮ್ಯಾನ್ ಆಲ್ವೇಸ್ ರಾಂಗ್’ (ಸದಾ ತಪ್ಪುಗಳನ್ನು ಮಾಡುತ್ತಿದ್ದ ಓರ್ವ ಮನು?) ಎಂದು ಬರೆದರೆ, ಜಗಜೀವನರಾಮ್ ಅವರನ್ನು ಹೊಗಳಿದ ಒಂದು ಕರಪತ್ರದ ಮೇಲೆ – `ಈ ಮನು? ಹತ್ತು ವರ್ಷ ಆದಾಯ ತೆರಿಗೆಯನ್ನೇ ಪಾವತಿಸಲಿಲ್ಲ’ ಎಂದು ಕುಟುಕಿದ್ದರು.
ಕೈ ಬರಹದ ಕುರಿತು ಅದರ ತಜ್ಞ ಬಿ. ಲಾಲ್ಕಪೂರ್ ಅವರನ್ನು ಕೇಳಿದಾಗ ಸಮಗ್ರ ಪರಿಶೀಲನೆ ನಡೆಸಿದ ಅವರು, ಇದು ಅದೇ ಮನುಷ್ಯ. ರಾಷ್ಟ್ರೀಯ ಆರ್ಕೈವ್ಸ್(ಪತ್ರಾಗಾರ)ನಿಂದ ತಂದ ದಾಖಲೆ ಮತ್ತು ಫೈಜಾಬಾದಿನಲ್ಲಿ ಸಿಕ್ಕಿದ ದಾಖಲೆಗಳನ್ನು ಬರೆದವರು ಒಬ್ಬರೇ; ೪೪ ವರ್ಷಗಳ ಅನುಭವದಿಂದ ನಾನಿದನ್ನು ಹೇಳುತ್ತಿದ್ದೇನೆ. ಬರೆದಾತ ತನ್ನ ಗುರುತು ಅಡಗಿಸಿಡಲು ಯತ್ನಿಸಿದ್ದಾನೆ; ಆದರೆ ಅದರಲ್ಲಿ ವಿಫಲನಾಗಿದ್ದಾನೆ ಎನ್ನುವ ಅಭಿಪ್ರಾಯದೊಂದಿಗೆ ೧೯ ಪುಟಗಳ ವರದಿ ನೀಡಿದರು.
ಕೊಲ್ಕತ್ತಾದ ಸುನೀಲ್ಕೃಷ್ಣ ಗುಪ್ತ ಖೋಸ್ಲಾ ಆಯೋಗದ ಮುಂದೆ ವಕೀಲರಾಗಿದ್ದವರು; ಭಗವಾನ್ ಅವರನ್ನು `ಸುಕೃತ್’ ಎಂದು ಕರೆಯುತ್ತಿದ್ದರು. ಆತ ಗುಟ್ಟಾಗಿ ಭಗವಾನ್ರನ್ನು ಭೇಟಿ ಮಾಡುತ್ತಿದ್ದರು. ಬಸ್ತಿಗೆ ಹೋಗಿ ಭಗವಾನರಲ್ಲಿ ಆಯೋಗದ ಕೆಲಸದ ಕುರಿತು ಚರ್ಚಿಸುತ್ತಿದ್ದರು. ಅವರ ಹಲವು ಪತ್ರಗಳು ಫೈಜಾಬಾದಿನ ರಾಮಭವನದಲ್ಲಿ ಸಿಕ್ಕಿವೆ. ನೇತಾಜಿ ಪರವಾಗಿ ಸಂಸತ್ ಸೇರಿದಂತೆ ವಿವಿಧೆಡೆ ವಾದಿಸಿದ ಸಂಸದ ಸಮರ್ ಗುಹಾ ಖೋಸ್ಲಾ ಆಯೋಗದ ಮುಂದೆ ಸುಕೃತ್ಗೆ ಸಹವರ್ತಿಯಾಗಿದ್ದರು.
`ನೇತಾಜಿ ಡೆಡ್ ಆರ್ ಅಲೈವ್?’ ಎನ್ನುವ ಪುಸ್ತಕ ಬರೆದ ಸಮರ್ ಗುಹಾ (೧೯೭೮) ಅದರ ಮುನ್ನುಡಿಯಲ್ಲಿ ನನ್ನಲ್ಲಿ ಕೆಲವು ಮಹತ್ತ್ವದ ಮಾಹಿತಿ ಇದ್ದು ಅದರ ಪ್ರಕಾರ ನೇತಾಜಿ ಈಗಲೂ ಜೀವಂತ ಇದ್ದಾರೆ ಎಂದು ಹೇಳಿದ್ದರು. ಪುಸ್ತಕವನ್ನು ಬಿಡುಗಡೆಗೊಳಿಸಿದ ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರು, ಒಂದು ದಿನವಾದರೂ ಅವರನ್ನು ಕಾಣಬೇಕು – ಈ ರಹಸ್ಯವನ್ನು ತಿಳಿಯಬೇಕು. ಭಾರತ ಸರ್ಕಾರಕ್ಕೆ ರಷ್ಯಾ ಸಹಕರಿಸಬೇಕು. ನೇತಾಜಿ ಅಲ್ಲಿದ್ದರೆ ಅವರನ್ನು ಭಾರತಕ್ಕೆ ಕಳುಹಿಸಬೇಕು ಎನ್ನುವ ಉತ್ಕಟ ಆಪೇಕ್ಷೆಯನ್ನು ವ್ಯಕ್ತಪಡಿಸಿದರು. ನಿಜವೆಂದರೆ ಆಗ ನೇತಾಜಿ ಭಾರತದಲ್ಲೇ ಇದ್ದರು. ಷಾ ನವಾಜ್ ಸಮಿತಿಯ ಮಾದರಿಯಲ್ಲೇ ವಿಮಾನದುರಂತದಲ್ಲಿ ನೇತಾಜಿ ಮಡಿದರೆಂದು ಸಾರಿದ ಖೋಸ್ಲಾ ವರದಿಯನ್ನು ವಜಾಗೊಳಿಸಬೇಕೆಂದು ಸಮರ್ ಗುಹಾ ಮೊರಾರ್ಜಿ ಅವರಲ್ಲಿ ಹಲವು ಸಲ ಒತ್ತಾಯಿಸಿದರು. ಮೊರಾರ್ಜಿ ಅದಕ್ಕೊಪ್ಪದೆ ಹಿಂದಿನ ಸರ್ಕಾರ ಒಪ್ಪಿದ್ದನ್ನು ರಿವರ್ಸ್ ಮಾಡಲು ಆಗುತ್ತದೆಯೇ ಎಂದು ಕೇಳಿ ಗುಹಾ ಬೇಡಿಕೆಗೆ ಸ್ಪಂದಿಸಲಿಲ್ಲ. ಆಗ ಗುಹಾ, ನೇತಾಜಿ ಬಗ್ಗೆ ಅತ್ಯಂತ ಜವಾಬ್ದಾರಿಯುತ ಜನರಿಂದ ಮಾಹಿತಿ ಇದ್ದು, ಅದರಂತೆ ನೇತಾಜಿ ಬದುಕಿದ್ದಾರೆ. ದೇವರ ಹೆಸರಿನಲ್ಲಿ ಈ ಸದನದಲ್ಲಿ ನಾನು ಪ್ರಕಟಿಸುವುದೆಂದರೆ ನೇತಾಜಿ ಬದುಕಿದ್ದಾರೆ ಎಂದು ಪ್ರಕಟಿಸಿದರು. ಆಗ ಹಲವು ಸದಸ್ಯರು ನಕ್ಕರು. ಗುಹಾ ಮುಂದುವರಿದು, ಅವರು ಎಲ್ಲಿದ್ದಾರೆ ಎಂಬುದನ್ನು ಏಕೆ ಹೇಳುವುದಿಲ್ಲವೆಂದು ಗೆಳೆಯರು ಕೇಳಬಹುದು. ನನಗೆ ತಿಳಿದಿರುವುದನ್ನು ದೇಶ ತಿಳಿಯಲಿ ಎಂದು ನನಗೆ ತುಂಬ ಆಶೆ ಇದೆ. ಆದರೆ ತಿಳಿದಿರುವುದನ್ನು ಹೇಳುವ ಸ್ವಾತಂತ್ರ್ಯ ನನಗಿಲ್ಲ. ಆದರೆ ಇಷ್ಟು ಹೇಳಬಲ್ಲೆ – ನೇತಾಜಿ ಯಾರ ಹಿಡಿತದಲ್ಲೂ ಇಲ್ಲ; ಅವರೀಗ ಸ್ವತಂತ್ರ ಮನುಷ್ಯ.
ತನಿಖೆಗೆ ಬಾಬಾ ಆಸಕ್ತಿ
ಖೋಸ್ಲಾ ಆಯೋಗದ ತನಿಖೆಯ ವೇಳೆ ಸುನೀಲ್ಕೃಷ್ಣ ಗುಪ್ತ ನಿರಂತರವಾಗಿ ಬಾಬಾ ಸಂಪರ್ಕ ಇರಿಸಿಕೊಂಡಿದ್ದರು. ವಿಮಾನದುರಂತ ಸಂಭವಿಸಿದ ತೈವಾನಿಗೆ ಗುಹಾ ಮತ್ತು ಗುಪ್ತ ಒಟ್ಟಾಗಿಯೇ ಹೋಗಿ ಬಂದಿದ್ದರು. ತೈವಾನಿಂದ ಬಂದ ಗುಪ್ತಾ ನೇರವಾಗಿ ಗುಮ್ನಾಮಿ ಬಾಬಾ ಬಳಿಗೆ ಹೋಗಿ ಎಲ್ಲವನ್ನೂ ವಿವರಿಸಿದರು. ಆಯೋಗ ಕೆಲಸ ಮಾಡುವ ರೀತಿಯನ್ನು ಬಾಬಾ ತುಂಬ ಆಸಕ್ತಿಯಿಂದ ತಿಳಿಯುತ್ತಿದ್ದರು. ಗುಪ್ತ ಒಂದು ರೀತಿಯಲ್ಲಿ ಬಾಬಾರ ರಹಸ್ಯ ಮಾಹಿತಿದಾರನಂತಿದ್ದರು. ಆತ ಜುಲೈ ೨೪, ೧೯೭೩ರಂದು ಬಾಬಾಗೆ ಬರೆದ ಪತ್ರದಲ್ಲಿ ನಾವು ತ್ಯಾಹೋಕುವಿನಲ್ಲಿ ೧೫ ದಿನ ಮಾತ್ರ ಇದ್ದೆವು. ತೈವಾನಿನ ಕೆಲಸ ಮುಗಿಯಿತು. ಪತ್ರದಲ್ಲಿ ಎಲ್ಲವನ್ನೂ ಬರೆಯಲಾರೆ. ನಿಮ್ಮ ಒಪ್ಪಿಗೆ ಇದ್ದರೆ ಒಂದು ವಾರದ ಮಟ್ಟಿಗೆ ಬರುತ್ತೇನೆ. (ಖೋಸ್ಲಾ) ಆಯೋಗದ ಮುಂದೆ ಅಂತಿಮ ವಾದ ಆರಂಭವಾಗಿಲ್ಲ; ಶುರು ಆಗುವಾಗ ನಿಮ್ಮ ಆಶೀರ್ವಾದ ಬೇಕು ಎಂದು ಗುಪ್ತ ಹೇಳಿದ್ದು ಅದು ಫೈಜಾಬಾದಿನ ಕೋಣೆಯಲ್ಲಿ ಸಿಕ್ಕಿದೆ. ಸಮರ್ ಗುಹಾ, ಸುಕೃತ್ ಅವರಿಗೆಲ್ಲ ಭಗವಾನ್ ಒಂದೇ ಮಾತು ಹೇಳುತ್ತಿದ್ದರು: ವಿಮಾನದುರಂತ ಸುಳ್ಳೆಂದು ಹೇಳಿ ಸಾಕು ಎನ್ನುತ್ತಿದ್ದರು.
೧೯೬೩ರಲ್ಲಿ ಸುರೇಶ್ ಬೋಸ್ ನನಗೆ ನೀಮ್ಸಾರ್ಗೆ ಹೋಗಲು ಹೇಳಿದರು; ಸುಭಾಸ್ ಅಲ್ಲಿರಬಹುದೆಂದು ಅವರು ಹೇಳಿದ್ದು ಅದರಂತೆ ಭಗವಾನರ ಭೇಟಿ ಆಯಿತು. ನೇಪಾಳ-ಭಾರತ ಗಡಿಯಲ್ಲಿರುವ ಅಲ್ಲಿ ನೇತಾಜಿ ೧೯೫೮ರಿಂದ ೬೪ರ ವರೆಗೆ ವಾಸ್ತವ್ಯ ಇದ್ದರು.
ಸಂಸತ್ನಲ್ಲಿ ಸಮರ್ ಗುಹಾ ನೇತಾಜಿ ಬಗೆಗೆ ಘೋಷಿಸಿದ ಐದಾರು ತಿಂಗಳಲ್ಲಿ ಆತ ಬಾಬಾ ಅವರ ವಿಶ್ವಾಸದಿಂದ ದೂರವಾಗುವ ಸಂದರ್ಭ ಎದುರಾಯಿತು. ಜನವರಿ ೨೨, ೧೯೭೯ರಂದು ಕಲ್ಕತ್ತಾ ಪ್ರೆಸ್ ಕ್ಲಬ್ನಲ್ಲಿ ಗುಹಾ ಒಂದು ಚಿತ್ರವನ್ನು ತೋರಿಸಿ, ನೇತಾಜಿ ಜೀವಂತವಾಗಿ ಆರೋಗ್ಯವಾಗಿದ್ದಾರೆ; ಮತ್ತು ಯಾವುದೇ ಬಂಧನದಲ್ಲಿಲ್ಲ; ಸ್ವತಂತ್ರವಾಗಿದ್ದಾರೆ ಎಂದು ತಿಳಿಸಿದರು. ಇದು ರಾಜಕೀಯ ಲಾಭಕ್ಕಾಗಿ ಮಾಡುವುದಲ್ಲ. ನೈತಿಕ ಜವಾಬ್ದಾರಿಯಿಂದ ನೇತಾಜಿ ಜೀವಂತವಾಗಿದ್ದಾರೆಂದು ಜನತೆಗೆ ತಿಳಿಸುತ್ತಿದ್ದೇನೆ. ನೇತಾಜಿ ಜನ್ಮದಿನ ಅವರಿಗೆ ಗೌರವ ಸಲ್ಲಿಸುವಾಗ ದೇಶದ ಜನ ದೇವಾಲಯ, ಮಸೀದಿ, ಚಚ್ಗಳಲ್ಲಿ ಅವರ ದೀರ್ಘಾಯಷ್ಯಕ್ಕೆ ಮತ್ತು ಜನತೆಯ ಮುಂದೆ ಅವರು ಬೇಗ ಕಾಣಿಸಿಕೊಳ್ಳುವಂತಾಗಲು ಪ್ರಾರ್ಥಿಸಲಿ. ಈ ಚಿತ್ರ ಈಚೆಗೆ ತೆಗೆದಿದ್ದು; ಎಲ್ಲ ಸಂದೇಹ ಇದರಿಂದ ದೂರಾಗಬೇಕು.
ನಿಯಮ ಮೀರಿದ್ದು – ಶಿಕ್ಷೆ
ಭಾರತದ ಒಂದು ದೇವಸ್ಥಾನದಲ್ಲಿ ಈ ಚಿತ್ರವನ್ನು ತೆಗೆದಿದ್ದು, ಜಯಪ್ರಕಾಶ್ ನಾರಾಯಣರಿಗೆ ಅದನ್ನು ತೋರಿಸಲಾಗಿದೆ; ಅವರಿಗೆ ತುಂಬ ಸಂತೋಷವಾಯಿತು. ಸ್ಪೀಕರ್ ಕೆ.ಎಸ್. ಹೆಗ್ಡೆ, ರಾಷ್ಟ್ರಪತಿ ಸಂಜೀವ ರೆಡ್ಡಿ, ಕೇಂದ್ರ ಸಚಿವ ವಾಜಪೇಯಿ, ಬೋಸ್ ನಿಕಟವರ್ತಿ ಎಚ್.ವಿ. ಕಾಮತ್, ಗೋವಿಂದ್ ಮುಕ್ಕೋಟಿ ಅವರಿಗೂ ತೋರಿಸಲಾಗಿದೆ ಎಂದಾಗ ಪತ್ರಕರ್ತರಿಂದ ಹಲವು ಪ್ರಶ್ನೆಗಳು ಬಂದವು. ಅದಕ್ಕೆ ಗುಹಾ ಪಾಟಿಸವಾಲ್ ಬೇಡ; ನಂಬಿ ಅಥವಾ ಬಿಡಿ. ಇನ್ನೇನೂ ಹೇಳಲಾರೆ. ಅವರೀಗ ಎಲ್ಲಿದ್ದಾರೆಂದು ಹೇಳಲಾರೆ. ಅವರು ಉನ್ನತಮಟ್ಟದ ಯೋಗಿ. ಆದರೆ ಅರವಿಂದರಂತಲ್ಲ. ಬಹಿರಂಗಕ್ಕೆ ಬಂದರೆ ದೇಶದಲ್ಲಿ ರಾಜಕೀಯ ಭೂಕಂಪ ಆಗುತ್ತದೆ. ನನ್ನಲ್ಲಿ ಬಹಳಷ್ಟು ಮಾಹಿತಿ ಇದೆ. ಅದರೆ ಅದನ್ನು ಅವರೇ ಹೇಳಬೇಕು. ಅವರ ಸಾವಿನ ಕಥೆಯನ್ನು ಕಟ್ಟಿದ್ದು ಅವರ ಪ್ರೀತಿಯ ಸಹವರ್ತಿಗಳು. ಆಂಗ್ಲೋ-ಅಮೆರಿಕನ್ ಸೇನೆಯಿಂದ ತಪ್ಪಿಸಿಕೊಳ್ಳಲು ಮಾಡಿದ್ದು. ಹಲವು ವರ್ಷ ಅವರು ರಷ್ಯಾದ ಜೈಲಿನಲ್ಲಿದ್ದರು. ಈಗ ಇರುವ ಭಾರತದ ದೇವಸ್ಥಾನಕ್ಕೆ ಹೇಗೆ ಬಂದರೆಂದು ನಾನು ಹೇಳುವುದಿಲ್ಲ. ತಂದೆ-ಮಗಳ ಸರ್ಕಾರಗಳು ಅವರ ವಿರುದ್ಧ ಪಿತೂರಿ ನಡೆಸಿದವು; ಜನರನ್ನು ದಾರಿತಪ್ಪಿಸಿದವು. ನಕಲಿ ತನಿಖೆಗಳನ್ನು ನಡೆಸಿದವು. ಸಾಕ್ಷ್ಯಗಳನ್ನು ಬಚ್ಚಿಟ್ಟದ್ದು ಮೊದಲ ಪ್ರಧಾನಿಯ (ನೆಹರು) ಬಹುದೊಡ್ಡ ದ್ರೋಹ ಮುಂತಾಗಿ ಸಮರ್ ಗುಹಾ ಮನಸ್ಸಿನಲ್ಲಿ ಇದ್ದುದನ್ನೆಲ್ಲ ತೋಡಿಕೊಂಡರು; ಭಾವುಕರಾಗಿ ಬಾಬಾ ವಿಧಿಸಿದ ನಿಯಮವನ್ನು ಬಹಳಷ್ಟು ಉಲ್ಲಂಘಿಸಿದರು. ಪತ್ರಿಕಾಗೋಷ್ಠಿಯ ವರದಿ ಮರುದಿನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾದವು; ಕಾಂಗ್ರೆಸಿಗರು ಟೀಕಿಸಿ ಗುಹಾ ತೋರಿಸಿದ ಚಿತ್ರ ಸಾಚಾ ಇರಲಾರದು ಎಂದರು.
ಇದಕ್ಕೆ ಬಾಬಾ ಪ್ರತಿಕ್ರಿಯೆ ತೀವ್ರವಾಗಿಯೇ ಇತ್ತು. ಸಮರ ಗುಹಾ, ಸುನೀಲ್ ಗುಪ್ತ ಮುಂತಾಗಿ ಎಲ್ಲರ ಸಂಪರ್ಕವನ್ನು ಅವರು ಕಡಿದುಕೊಂಡರು. ತಿಂಗಳುಗಳ ಕಾಲ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಗುಹಾ ಅದರಿಂದ ಶಾಶ್ವತವಾಗಿ ವಂಚಿತರಾದರು. ಸಮೀಪದ ಅನುಯಾಯಿ ಡಾ| ಪವಿತ್ರಮೋಹನ್ ರಾಯ್ ಅವರಿಗೆ ಮತ್ತೆ ಸಂಪರ್ಕ ಸಾಧಿಸಲು ಸಾಕುಬೇಕಾಯಿತು. ಗುಹಾ ಅವರನ್ನು ತಡೆಯಲಾಗದೆ ಇದ್ದುದಕ್ಕೆ ಕ್ಷಮೆ ಕೋರಿದ ರಾಯ್ ಪತ್ರ ಬರೆದು, ನೀನು ನನ್ನ ಗುಪ್ತವಾರ್ತಾ ಅಧಿಕಾರಿ; ನಿರ್ಭಯವಾಗಿ ಕೆಲಸ ಮಾಡು ಎಂದಿದ್ದಿರಿ. ಈಗ ಅದೇ ರೀತಿ ಕೆಲಸ ಮಾಡಲು ಅವಕಾಶ ಕೊಡಿ. ಮನಸ್ಸಿನಲ್ಲಿ ತಾಯಿ ಕಾಳಿ, ದೇಶಮಾತಾ, ವಂಗಜನನಿ ಮತ್ತು ನಿಮ್ಮ ಪಾದವನ್ನು ಇರಿಸಿಕೊಂಡು ಹೇಳುತ್ತಿದ್ದೇನೆ. ವಿಧೆಯತೆ, ಪೂರ್ತಿ ಅರ್ಪಣೆಗಳೊಂದಿಗೆ ಹಿಂದಿನದೇ ವಿಶ್ವಾಸ-ಪ್ರೀತಿಯಿಂದ ಕೆಲಸ ಮಾಡುತ್ತೇನೆ ಎಂದು ದುಂಬಾಲುಬಿದ್ದರು. ಬೋಸರ ಐಎನ್ಎಯಲ್ಲಿದ್ದ ಈತ ೧೯೫೭ರಲ್ಲಿ ಪಿಎಸ್ಪಿ ಪಕ್ಷದ ವಿಧಾನಸಭಾ ಸದಸ್ಯರಾಗಿದ್ದರು. ಆನಂತರ ಸಾರ್ವಜನಿಕ ಜೀವನದಿಂದ ಹಿಂದೆ ಸರಿದು ಬಾಬಾರ ರಹಸ್ಯಸೇವೆ ಮಾಡಿಕೊಂಡಿದ್ದರು.
ಗುಹಾರ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದ ಭಾವಚಿತ್ರ ಒಂದು ನಕಲಿ ಚಿತ್ರವಾಗಿತ್ತು. ಮೃತ ಐಎನ್ಎ ನಾಯಕನೊಬ್ಬನ ಪತ್ನಿ ಅದನ್ನು ನೀಡಿದ್ದರು. ಯಾವುದೇ ವಿವರಣೆ ನೀಡಿದರೂ ಬಾಬಾ ಗುಹಾರನ್ನು ಮತ್ತೆ ಒಪ್ಪಿಕೊಳ್ಳಲಿಲ್ಲ. ಆ ನೋವಿನಲ್ಲೇ ಬದುಕಿದ ಗುಹಾ ಅವರು ೨೦೦೨ರಲ್ಲಿ ನಿಧನ ಹೊಂದಿದರು. ಅವರಿಗೆ ಹೊರಗೆ ಬರಲು ಇಷ್ಟವಿಲ್ಲವಾದರೆ ನಾನೇನು ಮಾಡಲು ಸಾಧ್ಯ? ಎಂದೊಮ್ಮೆ ಅವರು ತನ್ನ ಅಳಲು ತೋಡಿಕೊಂಡಿದ್ದರು.
ಚಿಗುರಿದ ಹಳೇ ಸಂಬಂಧ
ಮಾಜಿ ಶಾಸಕ ಪ್ರೊ| ಅತುಲ್ ಸೇನ್ ಅವರಿಗೆ ಸುಭಾಸರದ್ದು ಹಳೇ ಪರಿಚಯ. ೧೯೬೨ರ ಎಪ್ರಿಲ್ನಲ್ಲಿ ಅವರಿಗೆ ಅಕಸ್ಮಾತ್ `ಪರ್ದೇವಾಲಾ ಬಾಬಾ’ (ನೀಮ್ಸಾರ್ನಲ್ಲಿ ಅದೇ ಹೆಸರು) ಅವರ ಭೇಟಿ ಆಯಿತು. ಆದರೆ ಅವರೊಂದು ತಪ್ಪು ಮಾಡಿದರು. ಭಗವಾನರ ಸೂಚನೆಯನ್ನು ಮೀರಿ ಸರ್ಕಾರ ಮತ್ತು ಪ್ರಧಾನಿಯನ್ನು ಸಂಪರ್ಕಿಸಿ ಸುಭಾಸರನ್ನು ಭೇಟಿ ಮಾಡಿದೆ ಎಂದು ತಿಳಿಸಿದರು. ಅದರಿಂದ ಪರಿಚಿತರಿಗೆ ಅವರ ಭೇಟಿ ಕ?ವಾಯಿತು. ಡಾ| ಪವಿತ್ರಮೋಹನ್ ರಾಯ್ ಹಲವು ದಿನ ಹುಡುಕಿ ನೀಮ್ಸಾರ್ನ ಹಳೆಯ ಶಿವಾಲಯದಲ್ಲಿ ಅವರನ್ನು ಪತ್ತೆ ಮಾಡಿದರು. ಒಂದು ತಿಂಗಳ ಪ್ರಯತ್ನದ ಬಳಿಕ ಪ್ರೋ| ಸೇನ್ ಭೇಟಿಗೆ ಒಪ್ಪಿದರು; ಇಬ್ಬರೂ ಹಳೆಕಾಲದ ತುಂಬ ವಿಷಯಗಳನ್ನು ಚರ್ಚಿಸಿದರು. ಏಕೆ ಈ ರಹಸ್ಯ ಎಂಬುದಕ್ಕೆ ಒಂದು ವಿವರಣೆಯೂ ಸಿಕ್ಕಿತು.
ಕೆಲವು ವರ್ಷಗಳ ಹಿಂದೆ ಲಕ್ನೋದಲ್ಲಿದ್ದಾಗ ನೇತ್ರವೈದ್ಯರ ಭೇಟಿಗೆ ಹೋದ ಸಂದರ್ಭ ಒಂದು ಘಟನೆ ನಡೆದಿತ್ತು. ಬಾಬಾರಿಗೆ ಹೊಸ ಕನ್ನಡಕ ಬೇಕಿತ್ತು. ಜನರಿಗೆ ಕಾಣಬಾರದೆಂದು ಕಾರಿನ ಹಿಂದಿನ ಸೀಟಿನ ಕೆಳಗೆ ಮಲಗಿದ್ದರು. ಕಾರಿನ ಇಂಜಿನ್ ಚಾಲನೆಯಲ್ಲೇ ಇದ್ದಾಗ ಬೋಸ್ ಅಂಗಡಿಗೆ ಹೋದರು. ಕನ್ನಡಕಗಳನ್ನು ನೋಡುತ್ತಿದ್ದರು. ರೌಂಡ್ ಗ್ಲಾಸ್ ಆಗಬಹುದೆಂದು ಕನ್ನಡಿಯಲ್ಲಿ ಮುಖ ನೋಡಿಕೊಂಡರು. ಟೋಪಿ ತೆಗೆದಿದ್ದರು. ಅಂಗಡಿಯಲ್ಲಿ ಗುಸುಗುಸು ಆಯಿತು. ಒಬ್ಬ `ನೇತಾಜಿ’ ಎಂದು ಕೂಗಿದ. ಇಬ್ಬರು ಹುಡುಗರು ಭಗವಾನರ ಕಾಲಿಗೆ ಅಡ್ಡಬಿದ್ದೂ ಆಯಿತು. ವ್ಯಾಪಾರ ಅಲ್ಲಿಗೇ ಬಿಟ್ಟು ಅಂಗಡಿಯಿಂದ ಹೊರಬಂದ ಬಾಬಾ ಕಾರನ್ನೇರಿ ಹೊರಟುಬಿಟ್ಟರು. ಇದನ್ನು ಹೇಳಿಕೊಂಡ ಅವರು ನಾನೀಗ ಉದ್ದ ಮೀಸೆ, ಗಡ್ಡ ಬೆಳೆಸಿದ್ದು ಏಕೆಂದು ತಿಳಿಯಿತಲ್ಲ! ಎಂದು ವಿವರಣೆ ನೀಡಿದರು.
೧೯೬೨ರಲ್ಲಿ ಒಮ್ಮೆ ನೀಮ್ಸಾರ್ಗೆ ಹೋದ ಪಬಿತ್ರ ಅವರಿಗೆ ಬಾಬಾ ಏನೇನು ತರಬೇಕೆಂದು ಹೇಳಿದ್ದರು; ಅವೆಲ್ಲ ಒಬ್ಬ ಸಂನ್ಯಾಸಿಗೆ ಬೇಕಾಗುವಂಥದ್ದಲ್ಲ. ಒಂದು ಶಕ್ತಿಶಾಲಿ ಟ್ರಾನ್ಸಿಸ್ಟರ್ ರೇಡಿಯೊ, ಒಂದು ಕ್ರೋನೋಮೀಟರ್, ಒಂದು ಟೆಲಿಸ್ಕೋಪ್, ಆಕ್ಸಫರ್ಡ್ ಡಿಕ್ಷನರಿ, ಸಿಗಾರ್ಗಳು, ಪಂಕಜ್ ಮತ್ತು ರಾಂಪ್ರಸಾದರ ಎಲ್ಲ ರೆಕಾರ್ಡಗಳು, ೨೬ ಗಜ ಉದ್ದ, ೪೮ ಇಂಚು ಅಗಲದ ಒಂದು ಬಿಳಿ ರೇಶ್ಮೆ ಬಟ್ಟೆ, ಅದೇ ಗಾತ್ರದ ಒಂದು ಮಲ್ಮಲ್, ೧೩.೫ ಗಜ ಉದ್ದ, ೪೮ ಇಂಚು ಅಗಲದ ಬಿಳಿಬಟ್ಟೆ ಇತ್ಯಾದಿ. ಬರ್ಲಿನ್ನಲ್ಲಿ ಪರಿಚಯವಾಗಿದ್ದ ಒಬ್ಬ ರಾಡಾರ್ ವಿಜ್ಞಾನಿ ಇದನ್ನೆಲ್ಲ ಕೇಳಿದ್ದನಂತೆ. ಪಬಿತ್ರನಿಗೆ ಇದಕ್ಕೆ ಹಣ ಹೊಂದಿಸಲು ಕಷ್ಟವಾಯಿತು. ಯಾರಲ್ಲಾದರೂ ಕೇಳಬೇಕಿತ್ತು. ಆಗ ಅಕ್ಕ ಲೀಲಾ ರಾಯ್ ನೆನಪಾದರು. ಹಣ ಕೇಳುತ್ತಾ ನೀಮ್ಸಾರ್ನಲ್ಲಿ ನೇತಾಜಿ ಬೋಸರನ್ನು ಕಂಡುದನ್ನು ಆತ ಲೀಲಾ ಅವರಿಗೆ ತಿಳಿಸಿದರು. ಆಕೆ ತನ್ನ ಬಂಧುಗಳಿಗೆ, ಶ್ರೀ ಸಂಘದವರಿಗೆ ಹೇಳಿದರು. ಅದರಲ್ಲಿ ಸಮರ್ ಗುಹಾ ಕೂಡ ಇದ್ದರು. ಅವರೆಲ್ಲ ತಮ್ಮ ನಾಯಕನ ಬಗ್ಗೆ ಚರ್ಚಿಸಿದರು. ಆದರೆ ಗುಟ್ಟು ತಪ್ಪುವಂತಿಲ್ಲ.
ಬಂಗಾಳದ ಕೊಂಡಿ
೧೯೬೩ರ ಮಾರ್ಚನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ನೇತಾಜಿಗೆ ಹಿಂದೆಯೇ ಪರಿಚಿತರಾಗಿದ್ದ ಲೀಲಾ ರಾಯ್ (ಸಂವಿಧಾನ ಸಭೆಯ ಸದಸ್ಯೆಯಾಗಿದ್ದ ಆಕೆ ರಾಷ್ಟ್ರವಿಭಜನೆ ವಿರೋಧಿಸಿ ಅದಕ್ಕೆ ರಾಜೀನಾಮೆ ನೀಡಿದ್ದರು.) ಸಮರ್ ಗುಹಾ ಮತ್ತಿಬ್ಬರು ನೀಮ್ಸಾರ್ಗೆ ಹೋದರು. ನೇತಾಜಿಗೆ ಎರಡು ಪುಸ್ತಕಗಳ ಉಡುಗೊರೆ ನೀಡಿದ ಲೀಲಾ ರಾಯ್ ದಯವಿಟ್ಟು ನನ್ನ ಶುಭಾಶಯ ಸ್ವೀಕರಿಸಿ. ಮಾರ್ಚ್ ೨೩ರಂದು ಇಲ್ಲಿಗೆ ಬಂದೆ. ಭೇಟಿ ಆಗಲಿಲ್ಲ. ಪಬಿತ್ರರು ತಡವಾಗಿ ತಿಳಿಸಿದರು. ಸಂಪರ್ಕ ಆಗಬಹುದೆಂಬ ಆಶೆಯಿಂದ ಬಂದಿದ್ದೇನೆ ಎಂದು ಸಂದೇಶ ಕಳುಹಿಸಿದರು. ಶ್ರೀಕಾಂತ ಶರ್ಮ ಎನ್ನುವ ಶಿಷ್ಯ ಎರಡೂ ಕಡೆ ಅಡ್ಡಾಡಿದರು. ಭೇಟಿ ಲೀಲಾಗೆ ಮಾತ್ರ; ಸಮರ್ಗೆ ಇಲ್ಲ. `ನಾನು ಭಾರತ ಬಿಡುವಾಗ ಆತ ಇನ್ನೂ ಬಾಲಕ’ ಎಂದು ತಿಳಿಸಿದರು; `ನಾನೀಗ ಪ್ರಕಟಗೊಂಡರೆ ಯಾರಿಗೂ ಏನೂ ಲಾಭ ಇಲ್ಲ’ ಎಂದರು.
ಆಗ ಲೀಲಾ ಅಳುವುದಕ್ಕೆ ಶುರು ಮಾಡಿದರೆ ಸಮರ್ ಗುಹಾ ಸಿಟ್ಟಾಗಿ, ನಾನು ಒಳಗೆ ಹೋಗಿ ಅವರನ್ನು ನೋಡುತ್ತೇನೆ; ಯಾರು ತಡೆಯುತ್ತಾರೆ? ಎಂದು ಅಬ್ಬರಿಸಿದ. ಶ್ರೀಕಾಂತ್ ಕೂಡಲೇ ಅಡ್ಡ ನಿಂತು ಅದು ನನ್ನ ಶವದ ಮೇಲೆ; ಇಲ್ಲಿ ಎಲ್ಲರೂ ಭಗವಾನರ ಆದೇಶ ಪಾಲಿಸುತ್ತಾರೆ ಎಂದು ಜೋರಾಗಿ ಹೇಳಿದ. ಮತ್ತೆ ತಣ್ಣಗಾದ ಮೇಲೆ ಲೀಲಾ ಭಗವಾನರ ಜೊತೆ ಮಾತನಾಡಬಯಸಿದರು. ಮಾರ್ಚ್ ೨೬ರಂದು ಭೇಟಿ ನಿಗದಿಯಾಯಿತು. ಅಂದು ಈ ಮೂವರು ಸಂದರ್ಶಕರು ಹೊರಗಿನಿಂದ ಬಂಗಾಳಿ ಭಜನೆಗಳನ್ನು ಹಾಡಿದರೆ ಭಗವಾನ್ ಒಳಗಿನಿಂದ ಹಾಡಿದರು. ಬಳಿಕ ಲೀಲಾರಾಯ್ ಜೊತೆ ನೇರವಾಗಿ ಮಾತನಾಡಿದರು. ಆದರೆ ಆಕೆಗೆ ಕಾಣಸಿಕೊಳ್ಳಲಿಲ್ಲ. ಲೀ, ನಿನಗೆ ಎರಡು ಬಾರಿ ಹೃದಯಾಘಾತ ಆಗಿದೆ. ನಿನ್ನ ಜೀವಕ್ಕೆ ತೊಂದರೆ ಆಗಬಾರದು. ನನ್ನನ್ನು ನೋಡಿದರೆ ನಿನಗೆ ತಡೆದುಕೊಳ್ಳಲು ಸಾಧ್ಯವಾಗದು ಎಂದು ಹೇಳಿ ಬಂಗಾಳಿಯಲ್ಲಿ ಏನೋ ಸೂಚನೆಯನ್ನು ಬರೆದುಕೊಟ್ಟು ಇದನ್ನು ಪಾಲಿಸು ಎಂದರು. ಆದರೆ ತನ್ನ ಕೈಬರಹ ಕಲ್ಕತ್ತಾಕ್ಕೆ ಹೋಗುವುದು ಅವರಿಗೆ ಇ?ವಿಲ್ಲ. ನನ್ನ ಕೈ ನಡುಗಿದೆ. ಎರಡು ದಶಕಗಳ ನಂತರ ಬಂಗಾಳಿಯನ್ನು ಬರೆಯುತ್ತಿದ್ದೇನೆ. ಇದನ್ನು ಬರೆದುಕೊಂಡು ಆ ಚೀಟಿಯನ್ನು ವಾಪಸು ಕೊಡು ಎಂದರು. ಕಲ್ಕತ್ತಾಕ್ಕೆ ಮರಳಿದ ಲೀಲಾರಾಯ್ ಅವರಿಗೆ ಅದು ಸುಭಾಸ್ ಬೋಸ್ ಎಂಬುದರಲ್ಲಿ ಸಂದೇಹ ಉಳಿಯಲಿಲ್ಲ. ಆತ ದೇಶಕ್ಕಾಗಿ ಎಷ್ಟು ಮಾಡಿದ್ದಾರೆ! ಆದರೆ ಈಗಲೂ ಕಷ್ಟ ಪಡುತ್ತಿದ್ದಾರೆ. ಅವರಿಗೆ ಏನಾದರೂ ಅನುಕೂಲ ಮಾಡಬೇಕು ಎಂದು ದತ್ತುಪುತ್ರ ಬಿಜಯ್ನಾಗ್ಗೆ ಹೇಳಿದರು. ಸಮರ್ ಗುಹಾಗೆ ಬೋಸ್ ಪರ ಕೆಲಸಕ್ಕೆ ಮಾರ್ಗದರ್ಶನ ಮಾಡಿದರು. ಆಕೆ ಮತ್ತು ಪಬಿತ್ರರಿಂದಾಗಿ ಹಲವರು ಭಗವಾನರ ಸಂಪರ್ಕಕ್ಕೆ ಬಂದರು.
ಶ್ರಮಶಿಬಿರದಲ್ಲಿ ಸೆರೆ
ಹೆವಿ ಇಂಜಿನಿಯರ್ ಕಾರ್ಪೊರೇಶನ್ನ ಮಾಜಿ ಮುಖ್ಯ ಇಂಜಿನಿಯರ್ ಅರ್ಧೇಂದು ಸರ್ಕಾರ್ ಅವರು ಮುಖರ್ಜಿ ಆಯೋಗದ ಮುಂದೆ ತನ್ನ ಹೇಳಿಕೆ ನೀಡಿದರು. ೧೯೬೦ರ ದಶಕದ ಆರಂಭದಲ್ಲಿ ಆತ ನಿಯೋಜನೆ ಮೇಲೆ ರ?ಕ್ಕೆ ಹೋಗಿದ್ದರು. ಆತನ ಸೀನಿಯರ್ ಬಿ.ಎ. ಜೆರೋವಿನ್ ಎಂಬವರು ನೇತಾಜಿ ಬೋಸರನ್ನು ಕಂಡು ಮಾತನಾಡಿದ ಒಂದು ಸಂದರ್ಭವನ್ನು ತಿಳಿಸಿದ್ದರು. ಜರ್ಮನ್ ಯಹೂದಿಯಾದ ಆತನ ಮನಃಪರಿವರ್ತನೆಗಾಗಿ ಸೈಬೀರಿಯಾಕ್ಕೆ ಕಳುಹಿಸಿದ್ದು, ಸ್ವಲ್ಪ ಸಮಯ ಅಲ್ಲಿನ ಗುಲಾಗ್(ಶ್ರಮಶಿಬಿರ)ನಲ್ಲಿದ್ದರು. ಸುಭಾಸ್ರನ್ನು ಬರ್ಲಿನ್ನಲ್ಲಿ ಕಂಡು ಪರಿಚಯವಾಗಿದ್ದ ಆತನಿಗೆ ೧೯೪೮ರಲ್ಲಿ ಗುಲಾಗ್ನಲ್ಲಿ ಆತನನ್ನು ಕಂಡು ಆಶ್ಚರ್ಯವಾಯಿತು. ಅದು ಟ್ರಾನ್ಸ್ಸೈಬೀರಿಯನ್ ರೇಲ್ವೆಗಿಂತ ಆಚೆಗೆ ಉರಾಲ್ ಪರ್ವತಪ್ರದೇಶದ ಒಂದು ಸ್ಥಳ. ಅವರ ನಡುವಣ ಸಂಭಾಷಣೆ ಹೀಗೆ ಸಾಗಿತು:
ಜೆರೋವಿನ್: ಸರ್ ನಾನು ನಿಮ್ಮನ್ನು ಬರ್ಲಿನ್ನಲ್ಲಿ ಭೇಟಿ ಮಾಡಿದ್ದೆ.
ಬೋಸ್: ಇರಬಹುದು.
ಜೆ: ನೀವಿಲ್ಲಿ ಏನು ಮಾಡುತ್ತಿದ್ದೀರಿ?
ಬೋ: ಏಕೆಂದು ಗೊತ್ತಿಲ್ಲ…..
ಜೆ: ನಿಮ್ಮ ಕಾರ್ಯಕ್ರಮ ಏನು ಸರ್? ನೀವು ಭಾರತಕ್ಕೆ ವಾಪಸ್ಸು ಹೋಗುತ್ತೀರಾ?
ಬೋ: ಸದ್ಯವೇ ಆಗಬಹುದೆಂದು ನಿರೀಕ್ಷಿಸುತ್ತೇನೆ.
ಸರ್ಕಾರ್ ಅವರಲ್ಲಿ ಈ ವಿಷಯವನ್ನು ತಿಳಿಸಿದ ಜೆರೋವಿನ್ ತಾನು ರಷ್ಯಾದಲ್ಲಿರುವ ತನಕ ಇದನ್ನು ಯಾರಲ್ಲೂ ಹೇಳಬೇಡಿ ಎಂದು ಅಂಗಲಾಚಿದ. ಆದರೆ ಸರ್ಕಾರ್ ಆ ಮಾತನ್ನು ಉಳಿಸಿಕೊಳ್ಳಲಿಲ್ಲ. ಕೆಲವೇ ದಿನಗಳಲ್ಲಿ ಮಾಸ್ಕೋದ ಭಾರತದ ರಾಯಭಾರಿ ಕಛೇರಿಗೆ ಹೋಗಿ ಕಾರ್ಯದರ್ಶಿಯವರ ಮುಂದೆ ಎಲ್ಲವನ್ನೂ ಹೇಳಿದ. ಸಿಟ್ಟಾದ ಕಾರ್ಯದರ್ಶಿ, ನೀನು ಈ ದೇಶಕ್ಕೆ ಏಕೆ ಬಂದಿ? ನಿನ್ನ ಕೆಲಸದಲ್ಲಿ ರಾಜಕೀಯದಲ್ಲಿ ಮೂಗು ತೂರಿಸುವುದೂ ಸೇರಿದೆಯೇ? ಎಂದು ದಬಾಯಿಸಿದರು.
ಬಂತು. ಈ ಮಾಹಿತಿಯ ಬಗ್ಗೆ ಯಾರಲ್ಲೂ ಚರ್ಚಿಸಬೇಡ. ನಿನ್ನ ಕೆಲಸ ಏನಿದೆಯೋ ಅಷ್ಟು ಮಾತ್ರ ಮಾಡು ಎಂದು ಆದೇಶಿಸಿದ. ಸರ್ಕಾರ್ ತನ್ನ ಕಛೇರಿಗೆ ಮರಳುವಷ್ಟರಲ್ಲಿ ರಾಯಭಾರಿ ಕಛೇರಿ ರಷ್ಯಾದಿಂದ ಆತನನ್ನು ಹೊರಹಾಕಲು ನಿರ್ಧರಿಸಿ ಆಗಿತ್ತು. ರಾಯಭಾರಿ ಕಛೇರಿಯ ಒಬ್ಬರು ಆತನ ವಿರುದ್ಧ ಕಂಪೆನಿಗೆ ಈತ ತನ್ನದಲ್ಲದ ಕೆಲಸದಲ್ಲಿ ಮೂಗುತೂರಿಸುತ್ತಿದ್ದಾನೆಂದು ದೂರು ನೀಡಿದ್ದರು. ಕೆಲವೇ ದಿನಗಳಲ್ಲಿ ಆ ಬಗ್ಗೆ ಆದೇಶವೂ ಬಂತು. ಒಟ್ಟಿನಲ್ಲಿ ನೇತಾಜಿ ಸೈಬೀರಿಯಾದ ಶಿಬಿರದಲ್ಲಿದ್ದರು. ಮತ್ತು ಭಾರತ ಸರ್ಕಾರಕ್ಕೆ ಅದು ತಿಳಿದಿತ್ತು. ಸೈಬೀರಿಯಾ ತೀವ್ರ ಚಳಿಗೆ ಜಗತ್ತಿನಲ್ಲೇ ಪ್ರಸಿದ್ಧ. ಅಲ್ಲಿ ತಮಗೆ ತುಂಬ ಕಷ್ಟವಾಯಿತೆಂದು ಕೂಡಾ ಹೇಳಿದ್ದರು.
ಜೆಎನ್ಯು ಪ್ರಾಧ್ಯಾಪಕ ರಾಂ ರಾಹುಲ್ ಅವರಿಗೆ ನಿವೃತ್ತ ರಾಜತಾಂತ್ರಿಕ ರಾಯ್ ಸಿಂಗ್ ಪರಿಚಯವಿತ್ತು. ರಾಹುಲ್ ತೀವ್ರ ಅನಾರೋಗ್ಯದಲ್ಲಿದ್ದಾಗ ಸಿಂಗ್ಗೆ ಬರಹೇಳಿದರು. ನಿಮಗೆ ಎನೋ ಹೇಳಬೇಕಾಗಿದೆ. ಇದರೊಂದಿಗೆ ನಾನು ಚಿತೆಯನ್ನು ಏರಲಾರೆ. ವಿಷಯ ನೇತಾಜಿಗೆ ಸಂಬಂಧಿಸಿದ್ದು ಎಂದು ಆತ ಮುಂದುವರಿದು, ನೇತಾಜಿ ಮಂಚೂರಿಯಾದ ಮೂಲಕ ರಷ್ಯಾ ಪ್ರವೇಶಿಸಿದ್ದು ನಿಜ. ಅಕ್ಷರಾಷ್ಟ್ರಗಳ ಸಹವರ್ತಿ ಆದ ಕಾರಣ ಅವರನ್ನು ಕೂಡಲೇ ಶಿಕ್ಷಿಸಬಹುದಾಗಿತ್ತು. ಆದರೆ ಸ್ಟಾಲಿನ್ ತನ್ನ ಮುಂದಿನ ವ್ಯವಹಾರಗಳಲ್ಲಿ ಬ್ರಿಟನ್, ಭಾರತಗಳೊಂದಿಗೆ ಚೌಕಾಸಿ ಮಾಡಲು ಅವರನ್ನು ದಾಳವಾಗಿ ಬಳಸಿದ. ಅದಕ್ಕಾಗಿ ಸೈಬೀರಿಯಾದ ಒಂದು ಕಾರ್ಮಿಕ ಶಿಬಿರದಲ್ಲಿ ಬಂಧನದಲ್ಲಿ ಇರಿಸಿದ ಎಂದರು. ತಲಾ ೧೫- ೩೦ ಸಾವಿರ ಜನರಿದ್ದ ೪೦ಕ್ಕೂ ಮಿಕ್ಕಿ ಶಿಬಿರಗಳು ಅಲ್ಲಿದ್ದವು.
ಮಾತನಾಡಬಾರದು ಎಂಬ ಷರತ್ತಿನ ಮೇಲೆ ಭಾರತದ ರಾಯಭಾರಿಗೆ ಶಿಬಿರದಲ್ಲಿದ್ದ ನೇತಾಜಿಯನ್ನು ನೋಡಲು ಅವಕಾಶ ನೀಡಿದರು. ಬೋಸ್ ಮಾತನಾಡಲು ಬಯಸಿದರೆ ಏನು ಮಾಡುವುದೆಂದು ಭಾರತದ ರಾಯಭಾರಿಗೆ ಗಾಬರಿಯಾಯಿತು. ಅದನ್ನು ತಾವು ನೋಡಿಕೊಳ್ಳುತ್ತೇವೆಂದು ಅಲ್ಲಿನ ಅಧಿಕಾರಿಗಳು ಭರವಸೆ ನೀಡಿ, ರಾಯಭಾರಿಯನ್ನು ಸೈಬೀರಿಯಾದ ಒಂದು ಕಾರ್ಮಿಕರ ಶಿಬಿರಕ್ಕೆ ಕರೆದೊಯ್ದರು. ಆತ ಕೇವಲ ೧೦ ಮೀಟರ್ ದೂರದಿಂದ ಬೋಸ್ರನ್ನು ಕಂಡರು.
ರಾಧಾಕೃಷ್ಣನ್ಗೆ ಲಾಭ
ದೇಶಕ್ಕೆ ಮರಳಿದ ರಾಯಭಾರಿ ಪ್ರಧಾನಿ(ನೆಹರು)ಗೆ ವರದಿ ನೀಡಿದರು. ಅವರು ಮುಂದೆ ದೇಶದ ರಾಷ್ಟ್ರಪತಿಯಾದರು. ಅವರೇ ಡಾ| ಎಸ್. ರಾಧಾಕೃಷ್ಣನ್; ೧೯೪೯-೫೩ರ ಅವಧಿಯಲ್ಲಿ ಅವರು ಸೋವಿಯತ್ ರಷ್ಯಾ ರಾಯಭಾರಿಯಾಗಿದ್ದರು. ರಾಯಭಾರಿ ಹುದ್ದೆಯಿಂದ ಅವರನ್ನು ನೆಹರು ಸೀದಾ ಉಪರಾ?ಪತಿ ಸ್ಥಾನಕ್ಕೇರಿಸಿದರು. ಸಂವಿಧಾನದಲ್ಲಿ ಆ ಹುದ್ದೆ ಇರಲಿಲ್ಲ. ಅಬುಲ್ಕಲಂ ಆಜಾದ್ ಅವರಿಗೆ ಅದು ಇಷ್ಟವಾಗಲಿಲ್ಲ. ನಾವೆಲ್ಲಾ ಸತ್ತುಹೋದೆವಾ? ಈ ಸರ್ವಪಲ್ಲಿ ಎಲ್ಲಿಂದ ಬಂದರಪ್ಪಾ! ಎಂದು ಉದ್ಗರಿಸಿದರಂತೆ. ಅವರಿಗೆ ನೆಹರು `ಭಾರತ ರತ್ನ’ ಪ್ರಶಸ್ತಿಯನ್ನು ನೀಡಿದರು. ಬೋಸ್ ಅವರಿಗೆ ಸಂಬಂಧಿಸಿದ ಹಲವರಿಗೆ ಈ ರೀತಿ ಬಂಪರ್ ಬಹುಮಾನ ಸಿಕ್ಕಿತ್ತಲ್ಲವೇ? ಹಿಂದಿನ ರಾಯಭಾರಿ ವಿಜಯಲಕ್ಷಿ ಪಂಡಿತ್ ಅವರಿಗೂ ಬೋಸ್ ಅಲ್ಲಿರುವುದು ತಿಳಿದಿತ್ತು.
೧೯೪೯ರ ಹೊತ್ತಿಗೆ ಯುದ್ಧಾಪರಾಧಿಗಳ ವಿಚಾರಣೆಗಳೆಲ್ಲ ಬಹುತೇಕ ಮುಗಿಯಿತು. ಆಗ ರ? ಬೋಸರನ್ನು ಕಳುಹಿಸಿಕೊಡಲು ಸಿದ್ಧವಾಯಿತು ಎನಿಸುತ್ತದೆ. ಭಾರತಕ್ಕೆ ಮರಳುವ ವಿಷಯದಲ್ಲಿ ಸುಭಾಸ್ ಎರಡು ಮನಸ್ಸಿನಲ್ಲಿದ್ದರು; ಭಾರತ ಸ್ವತಂತ್ರವಾಗಿದ್ದರೂ ಆರಂಭದಲ್ಲಿ ಬ್ರಿಟಿಷರ ಹಿಡಿತದಲ್ಲೆ ಇತ್ತು. ಕಾಮನ್ವೆಲ್ತಿನ ಕೆಳಗೆ ಉಳಿದುಕೊಂಡದ್ದು ನೇತಾಜಿಗೆ ಇ?ವಾಗಲಿಲ್ಲ; ಅದೇನು ಸ್ವಾತಂತ್ರ್ಯ ಎಂದವರು ಭಾವಿಸಿದ್ದರು.
ಅದೇ ಹೊತ್ತಿಗೆ ರಷ್ಯಾದಲ್ಲಿದ್ದ ಅವರಿಗೆ ಚೀನಾದಿಂದ ಆಮಂತ್ರಣ ಬಂತು. ೧೯೪೯ರ ಕೊನೆಯ ಭಾಗದಲ್ಲಿ ತಮ್ಮ ಕ್ರಾಂತಿಯ ಘೋ?ಣೆ ಆಗುವಾಗ ನೇತಾಜಿ ಇರಬೇಕೆಂದು ಮಾವೋತ್ಸೆ ತುಂಗ್ ಬಯಸಿದರು. ಅದರಲ್ಲಿ ಭಾಗವಹಿಸಿದ ನೇತಾಜಿ ನಂತರವೂ ಕೆಲವು ವರ್ಷ ಅಲ್ಲಿದ್ದರು. ಅವರ ಐಎನ್ಎ ಸಹವರ್ತಿ ಮುತ್ತುರಾಮಲಿಂಗಮ್ ತೇವರ್ ೧೯೫೦ರ ಜನವರಿಯಿಂದ ಅಕ್ಟೋಬರ್ ತನಕ ಚೀನಾದಲ್ಲಿ ಅವರೊಂದಿಗಿದ್ದರು; ಭಾರತಕ್ಕೆ ವಾಪಸಾದ ತೇವರ್ ಆ ಬಗ್ಗೆ ಸಾರ್ವಜನಿಕ ಹೇಳಿಕೆಯನ್ನು ನೀಡಿದರು. ಅಲ್ಲಿಂದಲೇ ನೇತಾಜಿ ವಿಯೆಟ್ನಾಮ್ ಮುಂತಾದ ದೇಶಗಳ ಸಂಪರ್ಕದಲ್ಲಿದ್ದರು. ಅಮೆರಿಕಾ ವಿರುದ್ಧ ಯುದ್ಧಕ್ಕಿಳಿದ ವಿಯೆಟ್ನಾಮ್ ನೇತಾಜಿ ಅವರ ಸಲಹೆ ಪಡೆದಿತ್ತು. ಚೀನಾದಿಂದ ನೇಪಾಳ ಮಾರ್ಗವಾಗಿ ೧೯೫೦ರ ದಶಕದ ಮಧ್ಯದ ಹೊತ್ತಿಗೆ ನೇತಾಜಿ ಭಾರತಕ್ಕೆ ಆಗಮಿಸಿದ್ದರು.
ಒಟ್ಟಿನಲ್ಲಿ ನಿಗೂಢವಾಗಿ ಬದುಕಿದ ನೇತಾಜಿ ಸುಭಾಶ್ಚಂದ್ರ ಬೋಸ್ ನಿಗೂಢವಾಗಿಯೇ ಅಸ್ತಂಗತರಾದರೆನ್ನಬಹುದು. ನ್ಯಾ| ಖೋಸ್ಲಾ ಅವರು ಲಾಸ್ಟ್ ಡೇಸ್ ಆಫ್ ನೇತಾಜಿ ಎಂಬ ಪುಸ್ತಕ ಬರೆದಾಗ ಅವರ ಕುಟುಂಬಿಕರು ಅವರು ಸತ್ತರೆಂಬುದಕ್ಕೆ ಪುರಾವೆ ಎಲ್ಲಿದೆ ಎಂದು ದಾವೆ ಹೂಡಿದಾಗ ಖೋಸ್ಲಾ ನ್ಯಾಯಾಲಯದ ಮುಂದೆ ಕ್ಷಮೆ ಕೇಳಬೇಕಾಗಿತ್ತು. ಎಷ್ಟು ವರ್ಷಗಳು ಅವರು ಇದ್ದಾರೆಯೇ, ಇಲ್ಲವೇ ಎಂಬುದರಲ್ಲೆ ಕಳೆದಿತ್ತು. ಈಗ ಅವರು ಬದುಕಿದ್ದರೆ ೧೧೯ ವರ್ಷಗಳಾಗುತ್ತವೆ; ಆದ್ದರಿಂದ ಈಗ ಅವರು ಬದುಕಿಲ್ಲ ಎಂದು ಧಾರಾಳ ಹೇಳಬಹುದೇನೋ; ಆದರೆ ಅವರ ಜೀವನದ ಸಂದೇಶ ಸದಾ ಜೀವಂತ.
ಮುಂದುವರಿಯುವುದು….