ನನ್ನನ್ನು ಕೊಂಚ ದೂರದಲ್ಲಿದ್ದ ಬಿಡಾರದತ್ತ ಕರೆದೊಯ್ದ ಪರಿಚಾರಕನಲ್ಲಿ ಕೇಳಿದೆ, “ಅಯ್ಯಾ, ನಮ್ಮಲ್ಲಿ ಸಾಮಾನ್ಯ ಸೂತನೊಬ್ಬನಿಗೆ ಹೀಗೆ ಉಪಚರಿಸುವುದಿರಲಿ, ಮಲಗುವುದಕ್ಕೂ ಜಾಗ ಕೊಡುವವರಿಲ್ಲ. ನಾವೇನಿದ್ದರೂ ರಥದ ಮೂಕಿಯ ಮೇಲೆ ಮಲಗಿ ಬೆಳಗು ಮಾಡಬೇಕಾದವರು. ಅಂತಹದ್ದರಲ್ಲಿ ಇಷ್ಟು ಪ್ರೀತಿಯ ಆತಿಥ್ಯವನ್ನು ನೀಡುತ್ತಿರುವುದನ್ನು ಕಂಡು ಆಶ್ಚರ್ಯವಾಗುತ್ತಿದೆ. ಇದೇನು, ಮದ್ರದಿಂದ ಬಂದವನೆಂದು ನನ್ನನ್ನು ಆದರಿಸುತ್ತಿದ್ದೀರೋ, ಅಥವಾ ಯಾರು ಬಂದರೂ ಇದೇ ಬಗೆಯ ಸತ್ಕಾರವೇ?” ಅವನಾದರೋ ಮುಗುಳುನಗುತ್ತಲೇ ಉತ್ತರಿಸಿದ, “ನಿಜ ನೀನಾಡುತ್ತಿರುವುದು. ನೀನೆಂದೇನು, ಇಲ್ಲಿಗೆ ಬಂದ ಪ್ರತಿಯೊಬ್ಬನೂ ಅಚ್ಚರಿಯಿಂದಲೇ ನಮ್ಮಲ್ಲಿ ಹೀಗೆ ಕೇಳುತ್ತಾರೆ. ಪಾಂಡವರು, ಅದರಲ್ಲೂ ಧರ್ಮಪುತ್ರ ಯುಧಿಷ್ಠಿರ ಪರಮ ಧಾರ್ಮಿಕ. ಪ್ರತಿಯೊಬ್ಬನನ್ನೂ ಆಳು ಅರಸನೆಂಬ ಭೇದವಿಲ್ಲದೆ ಆದರಿಸುವವನು. ಅದೇ ನಮಗೂ ರೂಢಿಯಾಗಿದೆ” ಎಂದನವ.
ಮರುದಿನ ನಸುಕು ಮೂಡುವ ಹೊತ್ತಿಗಾಗಲೇ ಭೂಪತಿಗಳು ರಥವೇರಿದ್ದರು. ಅವರದು ಅದೇ ಗಂಭೀರ ಮೌನ. “ಹುಂ… ಅಂತೂ ಈ ಯುದ್ಧವೆಂಬುದು ಎಂತಹ ಪರಿವರ್ತನೆಗಳಿಗೆ ಕಾರಣವಾಗುತ್ತದೋ ಅಂತ ಭಯವಾಗುತ್ತಿದೆ ನನಗೆ. ಧರ್ಮರಾಜನಂತಹ ಧರ್ಮರಾಜನೇ ಯುದ್ಧವನ್ನು ಗೆಲ್ಲುವುದಕ್ಕಾಗಿ ಉಪಾಯಗಾರನಾಗುವುದೆಂದರೆ… ಅವನು ನನಗೆಂತಹ ಸಲಹೆ ಕೊಟ್ಟ ಗೊತ್ತೇ ಸೂತ? ನಾನು ಆ ಕರ್ಣನಿಗೆ ಸಾರಥ್ಯ ಮಾಡಿ ಅವನು ಸೋಲುವ ಹಾಗೆ ಮಾಡಬೇಕಂತೆ. ಋತಾಯನ ಪುತ್ರನಾದ ನನಗೆ ಧರ್ಮಪುತ್ರನ ಸಲಹೆಯಿದು! ನಮ್ಮ ಜೀವಿತದಲ್ಲಿ ನಾವು ಎತ್ತಿಹಿಡಿಯುವುದಕ್ಕೆ ಹೊರಟ ಮೌಲ್ಯಗಳೆಲ್ಲ ಹೀಗೆ ನಮ್ಮ ಕಣ್ಣೆದುರೇ ಮಣ್ಣುಪಾಲಾಗುವುದನ್ನು ಹೇಗೆ ಸಹಿಸಿಕೊಳ್ಳೋಣ ಹೇಳು? ಆದರೆ… ಅವನಾದರೂ ಏನು ಮಾಡಬಲ್ಲ? ಎಲ್ಲ ಹೊಣೆಯನ್ನೂ ಆ ಕೃಷ್ಣನಿಗೊಪ್ಪಿಸಿ ಯುದ್ಧಕ್ಕಿಳಿದಿದ್ದಾನೆ. ಅವನಾಡಿಸಿದಂತೆ ಆಡುವ ಕೈಗೂಸಾಗಿದ್ದಾನೆ ಧರ್ಮಪುತ್ರ. ಈ ಸಲಹೆಯನ್ನೂ ಕೃಷ್ಣನೇ ಕೊಟ್ಟಿರಬೇಕು ಅವನಿಗೆ. ಅವನ ತಲೆಯಲ್ಲಿ ಇನ್ನೇನು ಯೋಜನೆಯಿದೆಯೋ ಯಾರಿಗೆ ಗೊತ್ತು? ಸದ್ಯಃ ನಾನೂ ಕೃಷ್ಣನ ಕೈಗೊಂಬೆಯಾಗಿದ್ದೇನೆ ಅಂತನ್ನಿಸುವುದಕ್ಕೆ ತೊಡಗಿದೆ.” ಸ್ವಗತದಂತೆ ತೊಡಗಿದ ಅವರ ಮಾತುಗಳು ಮುಗಿದ ಬಳಿಕ ಮತ್ತೆ ಮೌನ. ನಾನಾದರೂ ಏನನ್ನು ತಾನೇ ಹೇಳಬಲ್ಲವನಾಗಿದ್ದೆ? ರಥ ಕೌರವರ ಪಾಳಯದತ್ತ ಸಾಗಿತು.
* * *
ನಾವು ಕೌರವರ ಪಕ್ಷದಿಂದ ಕಾದುವುದಕ್ಕೆ ಸಿದ್ಧರಾಗಿದ್ದೆವು. ಕೌರವರ ಸೇನಾಧ್ಯಕ್ಷತೆಯನ್ನು ಸ್ವತಃ ಆಚಾರ್ಯ ಭೀಷ್ಮರೇ ವಹಿಸಿಕೊಂಡಿದ್ದರು. ಪಾಂಡವರಿಗೆ ದ್ರುಪದ ಪುತ್ರ ಧೃಷ್ಟದ್ಯುಮ್ನ ಸೇನಾನಾಯಕನಾಗಿದ್ದ. ಭೀಷ್ಮರ ಸೇನಾಧ್ಯಕ್ಷತೆಯನ್ನು ವಿರೋಧಿಸಿ ಕರ್ಣ ಯುದ್ಧರಂಗದಿಂದ ಹೊರಗುಳಿದಿದ್ದ. ಭೀಷ್ಮರಿಂದ ಧರ್ಮಯುದ್ಧದ ನಿಯಮಗಳ ಘೋಷಣೆಯಾಗಿತ್ತು. ಉಭಯ ಸೇನೆಗಳೂ ಕುರುಕ್ಷೇತ್ರದಲ್ಲಿ ಮುಖಾಮುಖಿಯಾಗಿ ನಿಂತಿದ್ದವು.
ಯುದ್ಧ ಇನ್ನೇನು ಆರಂಭವಾಗಬೇಕು ಅನ್ನುವಷ್ಟರಲ್ಲಿ ಒಂದು ವಿಚಿತ್ರ ಸಂಭವಿಸಿತು. ಪಾಂಡವರ ಸೇನೆಯ ಮುಂಚೂಣಿಯಲ್ಲಿ ನಿಂತಿದ್ದ ಯುಧಿಷ್ಠಿರ ತನ್ನ ರಥದಿಂದಿಳಿದು ನಮ್ಮತ್ತ ಸಾಗಿಬಂದ. ಉಳಿದ ಪಾಂಡವರೂ, ಕೃಷ್ಣನೂ ಅವನನ್ನು ತುಸು ದೂರದಿಂದ ಹಿಂಬಾಲಿಸಿದರು. ನಾವೆಲ್ಲ ದಿಗ್ಭ್ರಾಂತರಾದೆವು. ನಿರಾಯುಧನಾಗಿ ಶತ್ರು ಸೇನೆಯ ಮಧ್ಯೆ ಬಂದುಬಿಡುವುದೆ? ಹೀಗೂ ಉಂಟೆ? ಇಂತಹ ವಿಷಮ ಸನ್ನಿವೇಶದಲ್ಲಿ ನಿರಾತಂಕವಾಗಿ ಬರಬೇಕಾದರೆ ಅವನ ಧೈರ್ಯವೆಷ್ಟಿದ್ದೀತು! ಇಂತಹ ದಿಟ್ಟತನ ಧರ್ಮಪುತ್ರನಿಗೆ ಮಾತ್ರ ಸಾಧ್ಯವೆಂದು ನಾನು ಭಾವಿಸಿದೆ.
ನಾವು ದಂಗಾಗಿ ನೋಡುತ್ತಿದ್ದಂತೆ, ಅವನು ಕುರು ಪ್ರಮುಖರು, ಗುರುಗಳು ಮುಂತಾದವರ ಸಮೀಪಕ್ಕೆ ಹೋಗಿ ಅವರ ಕಾಲಿಗೆರಗಿ ಆಶೀರ್ವಾದ ಬೇಡಿದ. ಅವರು ಸುಪ್ರೀತರಾದರು. ಅಲ್ಲಿ ಅವನೇನು ಮಾತನಾಡಿದನೋ ಏನೋ. ಆ ಬಳಿಕ ನಮ್ಮ ರಥದ ಬಳಿಗೂ ಬಂದ. ಭೂಪತಿಗಳ ಕಾಲಿಗೆರಗಿದ. ಅವನ ಸೌಮ್ಯ ಮುಖದಲ್ಲಿನ ತೇಜಸ್ಸನ್ನು ನೋಡಿ ನಾನು ಬೆರಗಾದೆ. ಅವನ ಹಿಂದಿನಿಂದಲೇ ಬಂದಿದ್ದ ಇತರರು ತುಸುದೂರದಲ್ಲಿ ನಿಂತಿದ್ದರು. ಮೊದಲು ಯುಧಿಷ್ಠಿರ ಭೂಪತಿಗಳ ಕಾಲಿಗೆರಗಿದ. ಬಳಿಕ ತಮ್ಮಂದಿರಿಗೂ ಸನ್ನೆ ಮಾಡಿದ. ನಮಸ್ಕರಿಸಿದ. ಅವನನ್ನು ಕಂಡು ಭೂಪತಿಗಳು ಸುಪ್ರಸನ್ನರಾದರು.
“ಮಗೂ, ನಿನ್ನ ವಿನಮ್ರತೆಗೆ ನಾನು ಮೆಚ್ಚಿದ್ದೇನಪ್ಪಾ. ಇದೇನು ಇವರನ್ನೆಲ್ಲಾ ಕೂಡಿ ಈ ವಿಷಮ ಸನ್ನಿವೇಶದಲ್ಲಿ ಶತ್ರುಗಳಾದ ನಮ್ಮನ್ನು ಕಾಣುವುದಕ್ಕೆ ಬಂದೆಯಲ್ಲ, ನಮ್ಮ ಪಾಳೆಯದವರೆಲ್ಲ ಧರ್ಮಿಷ್ಠರೇನಲ್ಲ. ಏನಾದರೂ ಹೆಚ್ಚುಕಡಮೆಯಾದರೆ…”
“ಮಾವ, ನಮ್ಮ ಮಾವ ನೀವು. ಅಜ್ಜ ಭೀಷ್ಮರು, ಗುರುಗಳು ಇರುವಲ್ಲಿ ನನಗೇನೂ ಆಗದೆಂದು ವಿಶ್ವಾಸವಿದೆ ಮಾವ. ನಿಮ್ಮನ್ನೆಲ್ಲ ಶತ್ರುಗಳೆಂದು ನಾನು ಕಾಣಲಾಪೆನೇ? ಅಥವಾ ನೀವೇ ಹೇಳಿ, ನಿಮಗೆ ನಾನು ವೈರಿಯಂತೆ ಕಾಣುವೆನೇನು? ನನಗೆ ಆ ಚಿಂತೆಯಿಲ್ಲ ಮಾವ. ಯುದ್ಧಕ್ಕೆ ಮೊದಲು ನಿಮ್ಮನ್ನು ನೋಡಬೇಕೆನಿಸಿತು, ಬಂದೆ ಅಷ್ಟೆ.”
“ಏನು ಮಗು, ಏನಾಗಬೇಕು ನನ್ನಿಂದ?”
ಭೂಪತಿಗಳ ಪ್ರಶ್ನೆಗೆ ಮತ್ತೊಮ್ಮೆ ಕಾಲಿಗೆರಗಿ ಧರ್ಮರಾಜ ಉತ್ತರಿಸಿದ. “ಮಾವ, ನಿಮ್ಮೊಂದಿಗೆ ಯುದ್ಧ ಮಾಡಲೇಬೇಕಾದ ದುರ್ಭರ ಸನ್ನಿವೇಶವನ್ನು ವಿಧಿ ನಿರ್ಮಾಣ ಮಾಡಿಬಿಟ್ಟಿದೆ. ನಾನು ಗತ್ಯಂತರವಿಲ್ಲದೆ ನಿಮ್ಮೊಂದಿಗೆ ಹೋರಾಟ ಮಾಡಬೇಕಿದೆ. ಅದಕ್ಕೆ ನಿಮ್ಮ ಅನುಮತಿ ಬೇಕು ಮಾವ.”
ಮಾತುಗಳನ್ನು ಕೇಳಿ ಸಂಬಂಧವೇ ಇಲ್ಲದಿದ್ದ ನನ್ನ ಕಣ್ಣುಗಳೇ ಹನಿದುಂಬಿದವು. ಇನ್ನು ಭೂಪತಿಗಳ ಆಂತಃಕರಣ ಕರಗದೇ ಇದ್ದೀತೇ?
“ಮಗೂ ಯುಧಿಷ್ಠಿರ, ನಾನೀಗ ನಿನ್ನ ವಿರೋಧಿಯಾಗಿ ಯುದ್ಧಕ್ಕೆ ನಿಂತವನು. ಯುದ್ಧನಿವೃತ್ತಿಯಂತೂ ಸಾಧ್ಯವಿಲ್ಲ. ನೀವಾದರೂ ಅಷ್ಟೆ. ಯಾವ ದಾಕ್ಷಿಣ್ಯವೂ ಇಲ್ಲದೆ ಯುದ್ದ ಮಾಡಬೇಕಾದವರು. ಇಲ್ಲಿ ಸಂಬಂಧ ಗೌಣ. ನಿನಗೆ ಸಂಕೋಚ ಬೇಡ. ಮಾವನೆಂಬ ಭಾವನೆ ಬಿಟ್ಟು ಕ್ಷಾತ್ರವನ್ನು ಅಂಗೀಕರಿಸಿ ಹೋರಾಟ ಮಾಡು. ನನ್ನ ಅನುಮತಿಯಿದೆ. ನೀನು ಅನುಸರಿಸುವ ಧರ್ಮ ನಿನ್ನನ್ನು ಕಾಪಾಡಲಿ. ಹೋಗು ಯುದ್ಧ ಮಾಡು.”
ಭೂಪತಿಗಳ ಮಾತಿಗೆ ಪ್ರತಿಯಾಡದೆ ಅವರ ಕಾಲಿಗೆ ಮತ್ತೊಮ್ಮೆ ನಮಸ್ಕರಿಸಿ ಯುಧಿಷ್ಠಿರ ಹಿಂದೆ ತೆರಳಿದ. ಒಂದು ಕ್ಷಣ ವಿಚಲಿತರಾದಂತೆ ಕಂಡ ಭೂಪತಿಗಳು ಯುದ್ಧಸನ್ನದ್ಧರಾದರು.
* * *
ಮತ್ತೆ ನಡೆದ ಕುರುಕ್ಷೇತ್ರ ಸಮರದಲ್ಲಿ ಭೀಷ್ಮರು ಸೇನಾಪತಿಯಾಗಿ ನಿರಂತರ ಹತ್ತು ದಿನಗಳ ಹೋರಾಟ ನಡೆಸಿದರು. ಅವರ ಅವಧಿಯಲ್ಲಿ ಅಕ್ರಮಗಳು, ತಂತ್ರಗಾರಿಕೆ ಇತ್ಯಾದಿ ನಡೆಯಲಿಲ್ಲ. ಪಾಂಡವ ಪಕ್ಷದ ಸಾವಿರಾರು ಅರಸರ ತಲೆಯನ್ನು ಕತ್ತರಿಸಿದ ಪಿತಾಮಹರು ಪಾಂಡವರಿಗೆ ಯಾವ ಹಾನಿಯನ್ನೂ ಮಾಡಲಿಲ್ಲ. ಗೆಲವು ಸೋಲುಗಳ ನಿರ್ಣಯವೂ ಆಗಲಿಲ್ಲ. ಹತ್ತನೇ ದಿನ ಅರ್ಜುನನ ಎದುರು ಕಾದುತ್ತಿದ್ದಾಗ ಅಸ್ತ್ರಾಘಾತದಿಂದ ಕೆಳಗೆ ಬಿದ್ದರು. ವಿಚಿತ್ರವೆಂದರೆ ಮೈತುಂಬ ನಾಟಿದ್ದ ಬಾಣಗಳಿಂದಾಗಿ ಅವರು ನೆಲಕ್ಕೆ ಸೋಕಲೇ ಇಲ್ಲ. ಅವರ ಪತನದಿಂದಾಗಿ ಯುದ್ಧ ಸ್ಥಗಿತವಾಯಿತು. ಉಭಯ ಪಕ್ಷದವರೂ ಖಿನ್ನರಾದರು.
ಬಳಿಕ ಬಂದ ಸೇನಾನಿ ಆಚಾರ್ಯ ದ್ರೋಣರು. ಈಗ ಕರ್ಣನೂ ಯುದ್ಧರಂಗ ಪ್ರವೇಶಿಸಿದ್ದ. ದ್ರೋಣರ ಅವಧಿಯಲ್ಲಿ ಯುದ್ಧಧರ್ಮ ಉಳಿಯಲಿಲ್ಲ. ಯಾರು ಯಾರನ್ನೂ ಹೇಗೂ ಕೊಲ್ಲಬಹುದು ಎಂಬ ಧೋರಣೆ ಕಾಣಿಸಿಕೊಂಡಿತು. ಸೂರ್ಯಾಸ್ತವಾದ ಮೇಲೂ ಯುದ್ಧ ನಡೆಯಿತು. ಅರ್ಜುನನ ಪುತ್ರ ಅಭಿಮನ್ಯುವನ್ನಂತೂ ತೀರ ಬರ್ಬರವಾಗಿ ಹತ್ಯೆ ಮಾಡಿದರು. ಐದು ದಿನಗಳ ದ್ರೋಣಾಚಾರ್ಯರ ನೇತೃತ್ವದ ಹೋರಾಟದಲ್ಲಿ ಯೋಧರ ನಡುವಣ ಹಗೆ ಹೆಚ್ಚಿತು. ಭೂಪತಿಗಳಂತೂ ಇದನ್ನೆಲ್ಲ ಕಂಡು ಖಿನ್ನರಾಗಿದ್ದರು. ಯುದ್ಧವಿರಾಮದಲ್ಲೂ ಮೌನವಾಗಿದ್ದರು. ನಿಟ್ಟುಸಿರು ಬಿಡುತ್ತಾ ಕೂತಿರುತ್ತಿದ್ದರು. “ಅಭಿಮನ್ಯುವನ್ನು ಹಾಗೆ ವಧಿಸಬಾರದಿತ್ತು. ಅದರಲ್ಲಿ ನಾನೂ ಸೇರಿಕೊಂಡಿದ್ದೆನಲ್ಲ, ಹಾಗಾಗಿಯೇ ನನ್ನ ಮಕ್ಕಳನ್ನೂ ಯುದ್ದದಲ್ಲಿ ಕಳಕೊಳ್ಳುವ ಶಿಕ್ಷೆಯನ್ನು ಭಗವಂತ ನನಗೆ ಕೊಟ್ಟ” ಅಂತ ಒಂದೆರಡು ಬಾರಿ ಆಡಿದ್ದರು. ನನಗೋ ಯುದ್ಧದ ಪರಿಣಾಮಗಳನ್ನು ನೋಡಿ ಮನಸ್ಸು ಸತ್ತೇ ಹೋಗಿತ್ತು. ಮತ್ತೆ ಮನೆಗೆ ಹಿಂದಿರುಗುವ ಭರವಸೆ ಉಳಿದಿರಲಿಲ್ಲ. ಇನ್ನೆಷ್ಟು ದಿನ ಬದುಕಿರುತ್ತೇವೆ ಅನ್ನುವುದು ಮಾತ್ರ ಪ್ರಶ್ನೆಯಾಗಿತ್ತು. ಆದರೆ ಈ ಮಹಾಯುದ್ಧದಲ್ಲಿ ಸಾರಥಿಯಾಗಿ ಅನೇಕ ಹೊಸ ವಿಚಾರಗಳನ್ನು ಕಲಿತೆ. ಅದರ ಪ್ರಯೋಜನ ಮಾತ್ರ ದಕ್ಕುವ ಹಾಗಿರಲಿಲ್ಲ. ಬದುಕುಳಿದರೆ ತಾನೇ?
ಐದನೆಯ ದಿನ ದ್ರೋಣರ ವಧೆಯೂ ಆಯಿತು. ಮತ್ತೆ ಬಂದವ ಕರ್ಣ. ಅವನಿಗೂ ಅರ್ಜುನನಿಗೂ ನಡೆಯುವ ಕಾಳಗವೊಂದು ಮಾತ್ರವೇ ನಿರ್ಣಾಯಕವಾಗಿ ಇದ್ದದ್ದು. ಮೊದಲ ದಿನ ಹೀನಾಯವಾಗಿ ನಾವು ಸೋತೆವು. ಕರ್ಣನಂತೂ ನಿರಾಶೆಯನ್ನೇ ಹುಟ್ಟಿಸಿದ. ಕೌರವ ಅವನ ಕುರಿತು ಬಹಳ ಭರವಸೆಯಿಟ್ಟುಕೊಂಡಿದ್ದನಲ್ಲ. ಅವನಿಗೂ ಚಿಂತೆಯಾವರಿಸಿದ್ದು ಸ್ಪಷ್ಟವಿತ್ತು. ಹೀಗೆ ನಾವು ತಲೆತಗ್ಗಿಸಿ ಶಿಬಿರಕ್ಕೆ ಮರಳಿದೆವು.
ಆ ದಿನ ನಡುವಿರುಳು ಸಮೀಪಿಸುತಿದ್ದಾಗ ನಮ್ಮ ಶಿಬಿರದತ್ತ ಯಾರೋ ಬರುವ ಸದ್ದು ಕೇಳಿತು. ನಾನು ಭೂಪತಿಗಳ ಬಿಡದಿಯ ಸಮೀಪದಲ್ಲೇ ಮಲಗಿದ್ದೆ. ತಟ್ಟನೆ ಎಚ್ಚರವಾಯಿತು. ಯುದ್ಧಕಾಲದಲ್ಲಿ ಬೇಟೆನಾಯಿಗಳಂತೆ ಸದಾ ಕಣ್ಣು ಕಿವಿಗಳನ್ನು ತೆರೆದೇ ಇರುವುದು ಅಭ್ಯಾಸವಾಗಿತ್ತು. ಬಂದವರು ಭೂಪತಿಗಳ ಬಿಡದಿಯತ್ತ ಸಾಗಿದಾಗ ನಾನು ಖಡ್ಗ ಹಿರಿದು ಅವರನ್ನೇ ಹಿಂಬಾಲಿಸಿದೆ. ಆದರೆ ಬಂದಿದ್ದವರು ಶತ್ರುಗಳಾಗಿರಲಿಲ್ಲ. ದುರ್ಯೋಧನನಾಗಿದ್ದ. ಅಚ್ಚರಿಯಾದರೂ ಅಲ್ಲಿ ನಿಲ್ಲುವ ಹಾಗಿರಲಿಲ್ಲ ನಾನು, ಹಿಂದೆ ಬಂದೆ. ರಾತ್ರಿ ಎಷ್ಟೋ ಹೊತ್ತಿನವರೆಗೆ ದುರ್ಯೋಧನ ಭೂಪತಿಗಳ ಜತೆ ಮಾತನಾಡುತ್ತಾ ಇದ್ದ. ನಡು ನಡುವೆ ಭೂಪತಿಗಳ ದನಿಯೇರಿದ್ದು ಕೇಳಿಸಿತ್ತು. ಮತ್ತೆ ಅವನ ಅನುನಯದ ದನಿ.
ಬೆಳಗಾಯಿತು. ಯುದ್ಧಾರಂಭದ ಕಹಳೆಯಾಗುತ್ತಲೇ ನಾನು ಭೂಪತಿಗಳ ಬಿಡದಿಗೆ ರಥವನ್ನೊಯ್ದೆ. ನನ್ನನ್ನು ಕಂಡು ಅವರೆಂದರು, ”ಬೇಡ ಸೂತ ಇಂದು ನಮ್ಮ ರಥವಲ್ಲ. ನೀನು ಯುದ್ಧರಂಗಕ್ಕೆ ಬರುವುದು ಬೇಡ. ವಿಶ್ರಾಂತಿ ಪಡೆ.” ನಾನು ಗೊಂದಲಕ್ಕೊಳಗಾದೆ.
“ಪ್ರಭುಗಳು ಇಂದು ಯುದ್ಧ ಮಾಡುವುದಿಲ್ಲವೇ? ತಮಗೂ ವಿಶ್ರಾಂತಿಯೇನು, ಅಥವಾ…?”
“ಹಾಂ, ಯುದ್ಧ ನಿಂತಿದೆಯೆಂದು ಭಾವಿಸಿದೆಯೇನು?” ನನ್ನ ಮಾತನ್ನು ಅರ್ಧಕ್ಕೇ ಕತ್ತರಿಸಿ ಅವರೆಂದರು, “ನಾನು ವಿಶ್ರಾಂತಿ ಪಡೆಯುತ್ತಿಲ್ಲ. ಸೇನಾನಿಯಾದ ಅಂಗರಾಜನಿಗೆ ಸಾರಥಿಯಾಗಿ ಹೋಗುತ್ತಿದ್ದೇನೆ.”
ನಾನು ದಂಗುಬಡೆದು ಹೋದೆ. ಹೀಗೂ ಉಂಟೆ ?
ನನ್ನ ಸ್ಥಿತಿಯನ್ನು ಕಂಡು ಅವರೇ ಹೇಳಿದರು, “ನಿಜ. ನಿನ್ನೆ ದುರ್ಯೋಧನ ನನ್ನ ಶಿಬಿರಕ್ಕೆ ಬಂದುದೇ ಇದಕ್ಕಾಗಿ. ನನ್ನ ಸಾರಥ್ಯದಲ್ಲಿ ತನಗೆ ಗೆಲವಾಗುವುದೆಂದು ಕರ್ಣ ಭಾವಿಸಿದ್ದಾನೆ. ನಾನು ಮೊದಲು ಒಪ್ಪಿರಲಿಲ್ಲ. ಕೊನೆಗೆ ಅವನ ಯಾಚನೆಗೆ ಮಣಿದು ಸಮ್ಮತಿಸಿದ್ದೇನೆ. ಆಗಲಿ. ಹೀಗಾದರೂ ಕೌರವನ ಋಣ ತೀರಿಹೋಗಲಿ.”
* * *
ಆ ಸಂಜೆ ಶಿಬಿರಕ್ಕೆ ಕರ್ಣ ಮರಳಲಿಲ್ಲ. ಅರ್ಜುನನ ಬಾಣಕ್ಕೆ ಬಲಿಯಾದ. ಕೌರವರ ಪಕ್ಷಕ್ಕೆ ಮಂಕು ಕವಿದಿತ್ತು. ನಾಳೆ ಶಲ್ಯ ಭೂಪತಿಗಳಿಗೆ ಸೇನಾಧಿಪತ್ಯ ಅಂತ ಸುದ್ದಿ ಹಬ್ಬುತ್ತಿತ್ತು. ನನ್ನನ್ನು ಭೂಪತಿಗಳು ಬರಹೇಳಿದರು. ಯಾಕೋ ತುಂಬ ವಿಷಣ್ಣರಾಗಿದ್ದರು.
“ಸೂತ, ನಾಳಿನ ನನ್ನ ಯುದ್ಧ ಬಹುಶಃ ಕೊನೆಯ ಯುದ್ಧ. ನಾನು ಪಾಂಡವರನ್ನು ಎದುರಿಸಿ ಗೆಲ್ಲಲಾರೆ ಅನ್ನುವುದು ಖಚಿತವಾಗಿದೆ. ನಿನ್ನನ್ನು ಈ ಕುರುಕ್ಷೇತ್ರಕ್ಕೆ ಕರೆತಂದು ತಪ್ಪು ಮಾಡಿದೆನೆಂದು ಭಾಸವಾಗುತ್ತಿದೆ. ನಿನಗಿನ್ನೂ ಎಳೆಯ ವಯಸ್ಸು. ತುಂಬು ಸಂಸಾರ. ನೀನು ಬೇಕಿದ್ದರೆ ನಾಳೆ ಮದ್ರಕ್ಕೆ ಮರಳು. ಯಾಕೋ ನಿನ್ನ ಕುರಿತು ನನಗೆ ವಾತ್ಸಲ್ಯ. ಹಿಂದೆ ಹೋಗುವೆಯೇನು?”
ಅವರಿಗೆ ನನ್ನ ಬಗೆಗಿದ್ದ ಕಾಳಜಿ ಮನಸ್ಸನ್ನು ಕಲಕಿತು. ನಾನೆಂದೆ, “ಪ್ರಭೋ, ನಾನು ಹಿಂದಕ್ಕೆ ಹೋಗುವ ಹಂಬಲವಿಟ್ಟುಕೊಂಡು ಈ ಯುದ್ಧಕ್ಕೆ ಬಂದವನಲ್ಲ. ಮರಳುವುದಾದರೂ, ಸಾಯುವುದಾದರೂ ತಮ್ಮೊಂದಿಗೇ. ಇದು ನಿಶ್ಚಯ. ಪ್ರಭುಗಳು ಆ ಮಾತನ್ನಾಡಬೇಡಿರಿ” ಎಂದೆ. ಅವರು ಮೌನವಾದರು.
ಕ್ಷಣಹೊತ್ತು ಬಿಟ್ಟು ಮತ್ತೆ ನುಡಿದರು, “ನಾನು ಅಂಗರಾಜನ ಸಾರಥ್ಯ ವಹಿಸಿದ್ದು ನಿನಗೆ ಆಶ್ಚರ್ಯವಾಗಿರಬೇಕು ಅಲ್ಲವೇ? ನಿಜ. ಸ್ವಾಭಿಮಾನಿಯಾದ ನಾನು ಆ ಸೂತನ ಸಾರಥ್ಯವನ್ನು ವಹಿಸುತ್ತಿರಲಿಲ್ಲ. ಆದರೆ ಒಂದೇ ಕಾರಣಕ್ಕೆ ನಾನು ಅದನ್ನು ಒಪ್ಪಿಕೊಂಡೆ. ನನ್ನ ಅಳಿಯಂದಿರಿಗೆ ಕೌರವ ಮಾಡಿದ ಅನ್ಯಾಯಗಳ ಪ್ರಧಾನ ಪಾಲುಗಾರ ಈ ಕರ್ಣ. ಅವರಿಗೂ ಪಾಂಚಾಲಿಗೂ ಅವರು ಕೊಟ್ಟ ಹಿಂಸೆಯೇನು ಸಾಮಾನ್ಯವೇ? ಅದಕ್ಕೆ ಶಿಕ್ಷೆಯೇ ಇಲ್ಲವೇ? ಅಲ್ಲದೆ ನಾನು ಪಾಂಡವರ ಪಕ್ಷಕ್ಕೆ ಹೋಗಬೇಕಾದವ. ನನ್ನ ದಾರಿಯನ್ನೂ ತಪ್ಪಿಸಿ ಮೋಸದಿಂದ ಮಾತು ಪಡೆದು ತಮ್ಮೊಂದಿಗೆ ಸೇರಿಸಿಕೊಂಡರಲ್ಲ. ಅದಕ್ಕೂ ಹಿನ್ನೆಲೆಯಲ್ಲಿದ್ದವ ಇದೇ ಕರ್ಣ. ಮೋಸಗಾರರಿಗೆ ಧರ್ಮಬೋಧೆಯಲ್ಲ, ಪ್ರತಿಮೋಸವೇ ಸರಿಯಾದ ಮದ್ದು. ನನ್ನನ್ನು ವಂಚಿಸಿದವನಿಗೆ ಬಲವಾದ ಘಾತ ನೀಡದೇ ಇದ್ದರೆ ನಾನು ಮಾದ್ರನೇ? ಕರ್ಣನಿಗೆ ಸರಿಯಾದ ಪಾಠ ಕಲಿಸಲೆಂದೇ ಅವನಿಗೆ ಸಾರಥಿಯಾದೆ. ಅಧರ್ಮಿಯೊಬ್ಬ ಗೆಲ್ಲುವುದೆಂದರೆ ಅಧರ್ಮವೇ ಗೆದ್ದಂತೆ. ಅದಕ್ಕೆ ನಾನು ಅವಕಾಶ ಕೊಟ್ಟೇನೆಯೇ?”
“ಆದರೆ ಪ್ರಭೂ, ನೀವು ಅವನಿಗೆ ಸಾರಥಿಯಾಗಿ ಏನು ಮಾಡಿದ ಹಾಗಾಯಿತು? ಹೇಗಿದ್ದರೂ ಕರ್ಣ ಗೆಲ್ಲುತ್ತಿರಲಿಲ್ಲ; ಅಲ್ಲವೆ? ನಿಮ್ಮ ಸಾರಥ್ಯವಿದ್ದೂ ಸೋತನೆಂದರೆ ನಿಮಗೂ ಅಪಕೀರ್ತಿಯಲ್ಲವೇ?” ನನ್ನ ಮಾತಿಗೆ ಭೂಪತಿಗಳು ನಕ್ಕರು.
“ಇಲ್ಲ ಸೂತ, ಕರ್ಣ ಗೆಲ್ಲುವ ಒಂದೇ ಒಂದು ಸಾಧ್ಯತೆಯಿತ್ತು. ಅದು ಸರ್ಪಾಸ್ತ್ರ ಪ್ರಯೋಗದ ಮೂಲಕ. ಕರ್ಣ ಅದನ್ನು ಧನುಸ್ಸಿಗೆ ಜೋಡಿಸಿದಾಗ ಸ್ವತಃ ಕೃಷ್ಣನೇ ಬೆವರಿದ್ದ. ಅದೇನಾದರೂ ಆಗಲೇ ಪ್ರಯೋಗವಾಗುತ್ತಿದ್ದರೆ ಅರ್ಜುನ ಉಳಿಯುವ ಸಂಭವವೇ ಇರಲಿಲ್ಲ. ತಪ್ಪಿಸಿಕೊಳ್ಳುವ ದಾರಿ ಕೃಷ್ಣಾರ್ಜುನರಿಬ್ಬರಿಗೂ ಹೊಳೆದಿರಲಿಲ್ಲ. ನಾನೇನು ಮಾಡಿದೆ ಗೊತ್ತೇ ಸೂತ? ನನ್ನ ಅಭಿಮತವನ್ನು ಅವನು ಕೇಳಿದ. ವಿನಾ ಕಾರಣ ಚರ್ಚೆಗೆಳೆದೆ. ಗುರಿಯ ಸಾಧ್ಯತೆಯ ಬಗ್ಗೆ ಸಂಶಯ ಪ್ರಕಟಿಸಿದೆ. ಅವನ ಅಭಿಮಾನವನ್ನು ಕೆರಳಿಸಿದೆ. ಅದನ್ನವನು ಅರ್ಜುನನ ಕೊರಳಿಗೇ ಪ್ರಯೋಗಿಸುವಂತೆ ಅಹಂಕಾರವನ್ನು ಚುಚ್ಚಿ ಆಡಿದೆ. ಕೊರಳಿಗೆ ಪ್ರಯೋಗಿಸಿದರೆ ಕೃಷ್ಣ ಕೌಶಲದಿಂದ, ವಿಶಿಷ್ಟ ತಂತ್ರದಿಂದ ರಥವನ್ನು ತಗ್ಗಿಸುತ್ತಾನೆಂದು ದೊಡ್ಡ ಧ್ವನಿಯಲ್ಲಿ ಹೇಳಿದೆ. ಅಲ್ಲಿಯವರೆಗೆ ದಿಕ್ಕುಗಾಣದಿದ್ದ ಕೃಷ್ಣನ ಮುಖದಲ್ಲಿ ನಗು ಸುಳಿಯಿತು. ಅವನು ಕಲಿತಿದ್ದ ತಂತ್ರವನ್ನು ಮರೆತುಬಿಟ್ಟಿದ್ದ. ನನ್ನ ಮಾತು ಅವನದನ್ನು ನೆನಪಿಸಿಕೊಳ್ಳುವಂತೆ ಆಯಿತು. ನನಗೆ ಬೇಕಾಗಿದ್ದದ್ದೂ ಅಷ್ಟೆ. ಮತ್ತಿನ್ನೇನಿದೆ? ಸರ್ಪಾಸ್ತ್ರ ಬಿಟ್ಟರೆ ಕರ್ಣ ಗೆಲ್ಲುವ ಅವಕಾಶವೇ ಇರಲಿಲ್ಲ. ಅರ್ಜುನನ ಬಾಣಕ್ಕೆ ಸೂತಪುತ್ರನ ತಲೆ ಹಾರಿತು.”
ನನಗೆ ಬೆರಗಿನ ಮೇಲೆ ಬೆರಗು. ಕೌರವ ಕಪಟದಿಂದ ಭೂಪತಿಗಳನ್ನು ಸೆಳೆದುಕೊಂಡಾಗ ಅವರು ಇದನ್ನೇ ಆಡಿದ್ದರು. ತನಗೆ ಮೋಸ ಮಾಡಿದವನನ್ನು ಸುಮ್ಮನೇ ಬಿಡಲಾರೆ ಅಂದಿದ್ದರು. ಈ ದೊಡ್ಡವರ ರಾಜನೀತಿಯಲ್ಲಿ ಏನೆಲ್ಲಾ ನಡೆಯುತ್ತದೆ!
“ಸರಿ ನಾಳೆ ಸಿದ್ಧನಾಗಿರು. ಬಹುಶಃ ನಮ್ಮ ಕೊನೆಯ ಯುದ್ಧವಿದು. ತಲೆ ಉಳಿದರೆ ಮದ್ರಕ್ಕೆ ಹೋಗೋಣ. ಇಲ್ಲವಾದರೆ…” ಅಷ್ಟಕ್ಕೇ ಮಾತು ನಿಲ್ಲಿಸಿದರು.
ನಾನು ರಥದ ಬಳಿಗೆ ಬಂದೆ. ಹೇಗೂ ನಾನದರಲ್ಲಿಯೇ ಮಲಗಬೇಕಾದವನಷ್ಟೆ. ಮಲಗಿದೆ ನಿಜ. ನಿದ್ರೆ ಬರಲಿಲ್ಲ. ನಾಳೆಯ ಯುದ್ಧದ ಕುರಿತು ಯೋಚಿಸುತ್ತಿದ್ದೆ. ಕೌರವ ಪಕ್ಷದಿಂದ ಹೋರಾಡುವ ನಾವು ಗೆಲ್ಲುವ ಮಾತೇ ಇಲ್ಲವೆಂಬುದು ನಿಶ್ಚಯವಾಗಿತ್ತು. ಉಳಿದರೂ ಕೈಯೋ ಕಾಲೋ ಕಳಕೊಂಡು ದುಡಿಯಲಾರದೆ ಪರಾಶ್ರಯದಲ್ಲಿ ಬದುಕಬೇಕಿತ್ತು. ಆ ಬಾಳಿಗಿಂತ ಸಾವೇ ಮೇಲು. ನನ್ನ ಜೀವನದಲ್ಲಿ ದೊಡ್ಡ ಆಸೆಯಿದ್ದುದು ಭೂಪತಿಗಳ ಮೆಚ್ಚಿನ ಸಾರಥಿಯಾಗಬೇಕೆಂದು. ಅದು ಈಡೇರಿತು. ಸಾರಥ್ಯ ಮಾಡಿದರೆ, ಅದರಲ್ಲಿ ನಿಷ್ಣಾತನಾದರೆ ಸಾಲದು. ಧರ್ಮಾಧರ್ಮಗಳ ಪ್ರಜ್ಞೆಯಿರಬೇಕೆಂಬ ಪಾಠವನ್ನು ಭೂಪತಿಗಳು ಇಂದು ಕಲಿಸಿದ್ದರು. ಅವರು ಇಂತಹ ಅನೇಕ ಪಾಠವನ್ನು ಕಲಿಸಿದರು. ನನ್ನನ್ನು ತಿದ್ದಿ ರೂಪಿಸಿದರು. ತನ್ನ ಮಗನಿಗೆ ಸಮಾನವಾಗಿ ನನ್ನನ್ನು ಕಂಡರು. ಅಂತಹ ಪ್ರಭುವಿಗಿಂತ ಮೊದಲು ನಾನು ಪ್ರಾಣ ಬಿಟ್ಟರೆ ಸಾಕು, ನಾಳಿನ ಯುದ್ಧದಲ್ಲಿ. ಮರಣದ ಯೋಚನೆಯೊಂದಿಗೆ ಮನೆಮಂದಿಯ ನೆನಪೂ ಬಂತು. ಹೀಗೆ ಹತ್ತಾರು ಆಲೋಚನೆಗಳ ಕಲಸುಮೇಲೋಗರದ ನಡುವೆ ಎಷ್ಟು ಹೊತ್ತಿಗೆ ನಿದ್ರೆ ಬಂದಿರಬೇಕು…
ಲೇಖಕರು ಯಕ್ಷಗಾನ ತಾಳಮದ್ದಳೆ ಕಲಾವಿದರು, ನಿವೃತ್ತ ಉಪನ್ಯಾಸಕರು