ಮನುಷ್ಯನ ಜೀವನದಲ್ಲಿ ಬಾಲ್ಯ, ಯೌವನ, ಪ್ರೌಢ, ವೃದ್ಧಾಪ್ಯ ಎಂದು ನಾಲ್ಕು ಘಟ್ಟಗಳು. ಅವುಗಳಲ್ಲಿ ಯೌವನ ಹಾಗೂ ಪ್ರೌಢಾವಸ್ಥೆ ಸಾಧನೆಗೆ ಬಹಳ ಮುಖ್ಯವಾದವು. ಏಕೆಂದರೆ, ಬಾಲ್ಯದಲ್ಲಿ ಜೀವನದ ಅರ್ಥವೇ ಗೊತ್ತಿರುವುದಿಲ್ಲ. ವೃದ್ಧಾಪ್ಯದಲ್ಲಿ ಜೀವನದ ಅರ್ಥ ಗೊತ್ತಾದರೂ, ಏನಾದರೂ ಸಾಧಿಸಲು ದೇಹ ಸಹಕರಿಸುವುದಿಲ್ಲ. ಯೌವನ ಹಾಗೂ ಪ್ರೌಢಾವಸ್ಥೆಯಲ್ಲಿ ಯೌವನವೇ ಸಾಧನೆಗೆ ಪ್ರಶಸ್ತವಾದ ಸಮಯ. ಯೌವನದಲ್ಲಿ ಉತ್ಸಾಹ, ಶಕ್ತಿ, ಧೈರ್ಯ, ಸ್ಫೂರ್ತಿ, ಛಲ, ಆರೋಗ್ಯ ಎಲ್ಲವೂ ಇರುತ್ತವೆ. ಕಲ್ಲು ತಿಂದರೂ ಕರಗಿಸಿಕೊಳ್ಳುವ ವಯಸ್ಸದು.
ಏನಾದರೂ ಸಾಧಿಸುವುದಾದರೆ ಯೌವನದಲ್ಲೇ ಸಾಧಿಸಬೇಕು. ಯೌವನದಲ್ಲಿ ಸಕಾರಾತ್ಮಕವಾದ ಅನೇಕ ಗುಣಗಳಿದ್ದರೂ, ನಕಾರಾತ್ಮಕವಾದ ಕೆಲವು ಅಂಶಗಳೂ ಇರುತ್ತವೆ. ಮನಶ್ಚಾಂಚಲ್ಯ, ಸೌಂದರ್ಯದ ಆಕರ್ಷಣೆ, ಕಾಮದ ಕುತೂಹಲ ಇವೆಲ್ಲವೂ ಪ್ರಬಲವಾಗಿರುವುದು ಯೌವನದಲ್ಲೇ. ಇವನ್ನೆಲ್ಲ ನಿಭಾಯಿಸಿ, ಯೌವನದಲ್ಲಿ ದಾರಿತಪ್ಪದೆ ಜೀವನ ಸಾಗಿಸುವುದೇ ಒಂದು ದೊಡ್ಡ ಸಾಧನೆ. ಯೌವನದ ಬಯಕೆಗಳನ್ನು ಹಿಡಿತದಲ್ಲಿಟ್ಟುಕೊಂಡು ಜೀವನ ಸಾಗಿಸುವುದಕ್ಕಿಂತ, ರಭಸವಾದ ನದಿಯನ್ನು ದಾಟುವುದು ಸುಲಭ. ಯೌವನದಲ್ಲಿ ಸ್ವಲ್ಪ ಮೈಮರೆತು ವಿವೇಕವನ್ನು ಕಳೆದುಕೊಂಡರೆ, ಮನುಷ್ಯನು ಪತನಕ್ಕೊಳಗಾಗಿ ಪ್ರಪಾತಕ್ಕೆ ಬೀಳುತ್ತಾನೆ.
ಯೌವನವೆಂಬುದು ವರವೂ ಹೌದು, ಶಾಪವೂ ಹೌದು. ನಾವು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಅದು ನಿರ್ಣಯವಾಗುತ್ತದೆ. ಯೌವನ ಇರುವುದು `ಕೇವಲ ಸುಖಿಸಲು’ ಎಂಬುದಾಗಿ ಭಾವಿಸಿದರೆ ಅದು ಶಾಪವಾಗುತ್ತದೆ; `ಸಾಧನೆಗಾಗಿ’ ಎಂದು ಭಾವಿಸಿದರೆ ವರವಾಗುತ್ತದೆ. ಯೌವನದ ಬಾಧಕಗಳಾದ ಕಾಮ, ಕ್ರೋಧಗಳನ್ನು ನಿಭಾಯಿಸುವ ಕಲೆ ಗೊತ್ತಿಲ್ಲದಿದ್ದರೆ ಮನುಷ್ಯನು ಶಾಪಗ್ರಸ್ತನಾಗಿ ಜೀವಿಸುತ್ತಾನೆ. ಕಾಮ- ಕ್ರೋಧಗಳನ್ನು ಪ್ರೇಮ-ಕರುಣೆಯನ್ನಾಗಿ ಪರಿವರ್ತಿಸುವ ಕಲೆ ಗೊತ್ತಾದರೆ, ಮನುಷ್ಯನು ಅನುಗ್ರಹೀತನಾಗಿ ಜೀವಿಸುತ್ತಾನೆ.
ತೀರದ ಬಯಕೆ
ಚಕ್ರವರ್ತಿ ಯಯಾತಿ ಸೋಲು ಕಂಡರಿಯದ ಪರಾಕ್ರಮಿ. ದೇವರು, ಗುರು-ಹಿರಿಯರಲ್ಲಿ ಅನನ್ಯ ಭಕ್ತಿ ಉಳ್ಳವನಾಗಿದ್ದು, ಪ್ರಜೆಗಳಲ್ಲಿ ಪ್ರೀತಿ ಪಡೆದು ಕೀರ್ತಿ ಸಂಪಾದಿಸಿದ್ದನು. ಇಂಥವನು ತನ್ನ ತಪ್ಪಿನಿಂದಾಗಿ ಶುಕ್ರಾಚಾರ್ಯರ ಶಾಪಕ್ಕೆ ತುತ್ತಾಗಿ, ಯೌವನವನ್ನು ಕಳೆದುಕೊಂಡು ಮುಪ್ಪು ಪಡೆದು ತನ್ನ ಸುಂದರ ರೂಪವನ್ನು ಹಾಳು ಮಾಡಿಕೊಂಡನು. ಆದರೂ ಯಯಾತಿಗೆ ಕಾಮತೃಷೆ ಕುಂದಿರಲಿಲ್ಲ. ತನ್ನ ಐದೂ ಮಂದಿ ಮಕ್ಕಳನ್ನು ಕರೆದು “ಇದುವರೆಗೂ ನಾನು ಕ್ಷತ್ರಿಯನಿಯಮವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದೇನೆ. ಆದರೆ ಭೋಗವನ್ನು ತೃಪ್ತಿಯಾಗುವಂತೆ ಅನುಭವಿಸಲಾಗಲಿಲ್ಲ. ನನ್ನ ಮುಪ್ಪನ್ನು ನಿಮ್ಮಲ್ಲಿ ಯಾರಾದರೂ ಪಡೆದು, ನಿಮ್ಮ ಯೌವನವನ್ನು ನನಗೆ ಧಾರೆಯೆರೆದು ಕೊಡಿ. ಇಂಥ ತ್ಯಾಗಕ್ಕೆ ಮುಂದಾಗುವ ಮಗನು ನನ್ನ ರಾಜ್ಯವನ್ನು ಆಳಲು ತಕ್ಕವನಾಗುತ್ತಾನೆ. ಅವನ ಎಳೆಯ ಶರೀರದಲ್ಲಿ ಕಾಮಸುಖ ಪಡೆಯುವ ಆಸೆ ನನಗಿದೆ” ಎಂದು ಕೇಳಿದನು.
ಯಯಾತಿಯ ಕೋರಿಕೆಯನ್ನು ಅವನ ಹಿರಿಯ ನಾಲ್ಕು ಮಕ್ಕಳು ತಿರಸ್ಕರಿಸಿದರೂ, ಕೊನೆಯ ಮಗನಾದ ರಾಜಕುಮಾರ ಪುರು ಮಾತ್ರ, “ತಂದೆಯೇ! ನಿನ್ನ ಆಜ್ಞೆಯಂತೆಯೆ ಆಗಲಿ. ಮುಪ್ಪನ್ನೂ, ರಾಜ್ಯಭಾರವನ್ನೂ ತೆಗೆದುಕೊಳ್ಳುತ್ತೇನೆ. ನಿನ್ನ ಆಸೆ ನೆರವೇರಿಸುವುದು ನನ್ನ ಕರ್ತವ್ಯ” ಎಂದನು. ಯಯಾತಿ ಇದನ್ನು ಕೇಳಿ ಆನಂದದಿಂದ ಮಗನನ್ನು ತಬ್ಬಿಕೊಂಡನು. ಕೂಡಲೇ ಯಯಾತಿಗೆ ಯೌವನ ಬಂದಿತು, ಪುರು ತಂದೆಯ ಮುಪ್ಪನ್ನು ಪಡೆದುಕೊಂಡನು.
ಯಯಾತಿ ತನ್ನ ಇಬ್ಬರು ಪತ್ನಿಯರೊಡನೆ ಆನಂದದಿಂದ ಕಾಲ ಕಳೆದ. ಕುಬೇರನ ಉದ್ಯಾನದಲ್ಲಿ ಅಪ್ಸರೆಯೊಬ್ಬಳ ಜೊತೆಯೂ ಸುಖಿಸಿದನು. ಇಷ್ಟಾದರೂ ಅವನ ಕಾಮದಾಹ ಕಡಮೆಯಾಗಲಿಲ್ಲ. ಅದರಿಂದ ಜ್ಞಾನೋದಯ ಹೊಂದಿದ ಅವನು ಕೊನೆಗೆ ಮಗ ಪುರುವಿನ ಬಳಿ ಬಂದು, “ಕಾಮವೆಂಬುದು ಆರದ ಬೆಂಕಿ. ದಿನೇದಿನೇ ಹೆಚ್ಚುತ್ತದೆಯೇ ಹೊರತು ಕಡಮೆಯಾಗಲಾರದು. ಈ ಸತ್ಯ ಈಗ ನನಗೆ ತಿಳಿಯಿತು. ರಾಗ, ದ್ವೇಷಗಳನ್ನು ತೊರೆದು ಶಾಂತಸ್ಥಿತಿಯನ್ನು ಪಡೆಯುವುದೇ ಸರಿಯಾದ ಮಾರ್ಗ. ನಿನ್ನ ಯೌವನವನ್ನು ಮತ್ತೆ ಹಿಂದಕ್ಕೆ ಪಡೆದು ವೃದ್ಧಾಪ್ಯವನ್ನು ನನಗೆ ಹಿಂತಿರುಗಿಸಿ ಸುಖದಿಂದ ರಾಜ್ಯಭಾರ ಮಾಡು” ಎಂದು ಮತ್ತೆ ಮುಪ್ಪು ಪಡೆದು ತಪಸ್ಸಿಗಾಗಿ ವನಕ್ಕೆ ತೆರಳಿದನು.
ಎಷ್ಟು ಜನರಿಗೆ ಮುಪ್ಪು ಬಂದರೂ, ಅದನ್ನು ಮನಸ್ವಿಯಾಗಿ ಸ್ವೀಕರಿಸುವುದೂ ಇಲ್ಲ, ಒಪ್ಪುವುದೂ ಇಲ್ಲ.
ಒಬ್ಬರು ತಮ್ಮ ಮನೆಯಲ್ಲಿ ಸತ್ಯನಾರಾಯಣಪೂಜೆ ಇಟ್ಟುಕೊಂಡಿದ್ದರು. ಬಂದ ಅತಿಥಿಗಳಿಗೆ ಕೂಡಲು ಜಮಖಾನೆ ಹಾಸಿದ್ದರು. ಮೂಲೆಯಲ್ಲಿ ನಾಲ್ಕು ಕುರ್ಚಿಗಳಿದ್ದವು. ಪೂಜೆಗೆ ಬಂದ ಹೆಂಗಸರು ಕುರ್ಚಿ ಮೇಲೆ ಕುಳಿತುಕೊಳ್ಳಲು ಹೋದಾಗ, “ಅದರಲ್ಲಿ ವಯಸ್ಸಾದವರು ಮಾತ್ರ ಕುಳಿತುಕೊಳ್ಳಿ” ಎಂದರು. ಪೂಜೆ ಮುಗಿದರೂ ಕುರ್ಚಿಗಳು ಖಾಲಿಯಾಗೇ ಉಳಿದವು!
ಯೌವನದ ಸಾರ್ಥಕ್ಯ
ಜಗತ್ತಿನ ಇತಿಹಾಸದಲ್ಲಿ ಬಹುತೇಕ ಅತ್ಯಾಚಾರ- ಅನಾಚಾರ ನಡೆದದ್ದು ಮನುಷ್ಯನ ಯೌವನಾವಸ್ಥೆಯಲ್ಲೇ. ಬಹುತೇಕ ಸತ್ಕಾರ್ಯಗಳು ನಡೆದದ್ದೂ ಯೌವನದಲ್ಲೇ. ಹಿಟ್ಲರ್, ಛಂಗೀಸಖಾನರು ದೌರ್ಜನ್ಯ, ದಬ್ಬಾಳಿಕೆ ನಡೆಸಿ ಜಗತ್ತನ್ನು ಕತ್ತಲೆಯ ಕೂಪಕ್ಕೆ ತಳ್ಳಿದ್ದು ತಮ್ಮ ಯೌವನಾವಸ್ಥೆಯಲ್ಲೇ. ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು ಮನುಷ್ಯನ ಪ್ರಾಣವನ್ನು ತೆಗೆಯಲೂಬಹುದು, ಉಳಿಸಲೂಬಹುದು. ಮನುಷ್ಯನ ಕಣ್ಣಮುಂದೆ ಒಂದು ಉದಾತ್ತ ಧ್ಯೇಯವಿದ್ದಾಗ, ಆ ಧ್ಯೇಯವನ್ನು ಸಾಧಿಸುವ ಛಲವಿದ್ದಾಗ ಯೌವನದ ಆಕರ್ಷಣೆಗಳೂ, ಚಾಂಚಲ್ಯಗಳೂ ದುರ್ಬಲವಾಗುತ್ತವೆ. ಉನ್ನತ ಗುರಿಯೇ ಇಲ್ಲದಿದ್ದಾಗ ನಾವು ಕ್ಷುಲ್ಲಕ ಸಂಗತಿಗಳಲ್ಲೇ ಮುಳುಗಿ ಯೌವನವನ್ನೇ ವ್ಯರ್ಥಗೊಳಿಸುತ್ತೇವೆ. ಕ್ಷುದ್ರತೆಯನ್ನು ಕೈಬಿಟ್ಟಾಗ ಮಾತ್ರ ಶ್ರೇಷ್ಠತೆಯನ್ನು ಪಡೆಯಬಹುದು. ಆಗಲೇ ಯೌವನ ಸಾರ್ಥಕವಾಗುವುದು.
ಯೌವನವು ಕನಸುಗಳನ್ನು ಹೊತ್ತುಕೊಂಡು ತಿರುಗುವ ವಯಸ್ಸು. ನಾನು ಬದುಕಿನಲ್ಲಿ ಏನೇನೋ ಆಗಬೇಕು, ಏನೇನೋ ಸಾಧಿಸಬೇಕು ಎನ್ನುವ ಹಲವಾರು ಸುಂದರ ಕನಸುಗಳನ್ನು ಪ್ರತಿಯೊಬ್ಬರೂ ತಮ್ಮ ಯೌವನದಲ್ಲಿ ಕಾಣುತ್ತಾರೆ. ಆದರೆ ಆ ಸುಂದರ ಕನಸುಗಳನ್ನು ನನಸಾಗಿಸುವುದರಲ್ಲಿ ಮಾತ್ರ ಹೆಚ್ಚಿನವರು ವಿಫಲರಾಗುತ್ತಾರೆ.
ಯೌವನ ಒಂದು ತರಹದ ನಶೆ; ಕನಸುಗಳ ಸಮಯ. ಕನಸು ಕಾಣುವಾಗ ವಾಸ್ತವಕ್ಕೆ ಹತ್ತಿರವಿರುವ ಕನಸು ಕಾಣಬೇಕೇ ವಿನಾ ಆಕಾಶಕ್ಕೆ ಏಣಿ ಇಡುವಂತಹ ಕನಸು ಕಾಣಬಾರದು. ಯೌವನದಲ್ಲಿ ಆಕಾಂಕ್ಷೆ ಇರಬೇಕಾದುದು ಸಹಜ. ಹಾಗೆಂದು ಹುಚ್ಚು ಮಹತ್ತ್ವಾಕಾಂಕ್ಷೆಯ ಬೆನ್ನುಹತ್ತಿದರೆ, ಭ್ರಮನಿರಸನ ಆಗುವ ಸಾಧ್ಯತೆ ಹೆಚ್ಚು. ಸ್ವತಃ ಅಲೆಕ್ಸಾಂಡರ್ ಜಗತ್ತನ್ನೇ ಗೆಲ್ಲಬೇಕೆಂಬ ಮಹತ್ತ್ವಾಕಾಂಕ್ಷೆಯಿಂದ ಯೌವನವನ್ನೆಲ್ಲ ವ್ಯರ್ಥಗೊಳಿಸಿದ. ಅದೇ ಮಹತ್ತ್ವಾಕಾಂಕ್ಷೆಯಿಂದ ಅಪಾರ ಜೀವಹಾನಿ ಮಾಡಿದನೇ ವಿನಾ ಲೋಕಕ್ಕೆ ಏನೂ ಉಪಕಾರ ಆಗಲಿಲ್ಲ.
ಅಲೆಕ್ಸಾಂಡರ್ ಭಾರತವನ್ನು ಪೂರ್ತಿ ಗೆಲ್ಲಲಾಗದೆ ಸ್ವದೇಶಕ್ಕೆ ಹಿಂತಿರುಗಿದ. ದಾರಿಯ ಮಧ್ಯದಲ್ಲಿ ಆತನ ಆರೋಗ್ಯ ಹದಗೆಟ್ಟಿತು. ತಾನು ಸಾಯುವುದು ಖಚಿತವೆಂದು ಗೊತ್ತಾದಾಗ ತನ್ನ ಸೇನಾಧಿಕಾರಿಯ ಬಳಿ ಹೇಳಿದ: “ನನ್ನ ಶವಯಾತ್ರೆಯ ಸಮಯದಲ್ಲಿ ದೇಹವನ್ನು ಬಟ್ಟೆಯಿಂದ ಮುಚ್ಚಿದರೂ ಪರವಾಗಿಲ್ಲ. ಆದರೆ ಖಾಲಿಯಾದ ಎರಡು ಕೈಗಳನ್ನು ಮಾತ್ರ ಹೊರಗೆ ತೋರುವಂತೆ ಶವಯಾತ್ರೆ ಮಾಡಿ. ನನ್ನ ಯೌವನದಲ್ಲಿ ನಾನು ಗಳಿಸಿದ ಅಪಾರ ಸಂಪತ್ತನ್ನು, ರಾಜ್ಯವನ್ನು ಸಾಯುವಾಗ ತೆಗೆದುಕೊಂಡು ಹೋಗಲಾಗಲಿಲ್ಲ. `ಜಗದೇಕವೀರ’ ಎನಿಸಿಕೊಂಡ ಈ ಅಲೆಕ್ಸಾಂಡರ್ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂದು ಜಗತ್ತಿನ ಜನರಿಗೆ ಗೊತ್ತಾಗಲಿ.”
ಹುಚ್ಚು ಆದರ್ಶ
ಯೌವನದಲ್ಲಿ ಆದರ್ಶಗಳ ಆಕರ್ಷಣೆ ಜಾಸ್ತಿ ಇರುತ್ತದೆ, ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚಿರುತ್ತದೆ. ಹಾಗೆಂದು ಹುಚ್ಚು ಆದರ್ಶದ ಹಿಂದೆ ಓಡಿದರೆ, ನಮ್ಮ ಬದುಕು ದುರಂತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮನಸ್ಸಿನ ಭಾವನೆಗಳನ್ನು ಹೃದಯದಿಂದ ವಿಮರ್ಶಿಸಿ ಜಾಗರೂಕತೆಯಿಂದ ಮುಂದೆ ಹೆಜ್ಜೆ ಇಡಬೇಕು. ಕೇವಲ ನಮ್ಮ ಭಾವುಕತೆಗೆ ಅಂಟಿಕೊಂಡರೆ, ನಮ್ಮ ಯೌವನ ವ್ಯರ್ಥವಾಗುವ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲ, ಅದರಿಂದ ಅನರ್ಥವಾಗುವ ಸಂಭವ ಇದೆ.
ಧರ್ಮಕ್ಕಾಗಿ ಹೋರಾಡಿ ಸತ್ತರೆ ಸ್ವರ್ಗ ಸಿಗುತ್ತದೆ; ಅಪ್ಸರೆಯರು ಸಿಗುತ್ತಾರೆ ಎಂಬಂತಹ ಹುಚ್ಚುಕಲ್ಪನೆಯಿಂದ ಅಸಂಖ್ಯಾತ ಯುವಕರು ಇಂದು ಕೈಯಲ್ಲಿ ಬಂದೂಕು ಹಿಡಿದು ಭಯೋತ್ಪಾದಕರಾಗಿದ್ದಾರೆ. ಪ್ರೀತಿ, ಪ್ರೇಮ, ಪರಸ್ಪರ ಸಹಬಾಳ್ವೆಯಿಂದ ಜೀವಂತ ಇರುವಾಗಲೇ ಈ ಜಗತ್ತನ್ನು ಸ್ವರ್ಗ ಮಾಡಲು ಸಾಧ್ಯತೆ ಇದೆ. ಆದರೆ ಯಾವುದೋ ಮೂಢನಂಬಿಕೆಯಿಂದ ಸಹಸ್ರಾರು ಯುವಕರು ಸತ್ತ ಮೇಲೆ ಸಿಗುವುದೆಂಬ ಸ್ವರ್ಗದ ಆಸೆಯಿಂದ ತಮ್ಮ ಯೌವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.
ಸಮಾನತೆಯಲ್ಲ, ಸಮನ್ವಯತೆ
ನಮ್ಮ ದೇಶದಲ್ಲೂ ಕೆಲ ಯುವಕ-ಯುವತಿಯರು ಅನ್ಯಾಯದ ವಿರುದ್ಧ ಹೋರಾಡಲು ಕೈಯಲ್ಲಿ ಬಂದೂಕು ಹಿಡಿದು ’ನಕ್ಸಲೈಟ್’ನಂತಹ ಭಯೋತ್ಪಾದಕರಾಗುತ್ತಿದ್ದಾರೆ. ಸಮಾನತೆಯ ಹುಚ್ಚು ಆದರ್ಶದ ಬೆನ್ನುಹತ್ತಿ, ತಮ್ಮ ಯೌವನವನ್ನೇ ಬಲಿಗೊಡುತ್ತಿದ್ದಾರೆ. ವಾಸ್ತವದಲ್ಲಿ ಈ ಜಗತ್ತಿನಲ್ಲಿ ಸಮಾನತೆ ಎಂಬುದೇ ಇಲ್ಲ. ಈ ಜಗತ್ತಿನ ೭೫೦ ಕೋಟಿ ಜನರಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ. ಒಂದೇ ಜಾತಿಯ ಮರಗಳು ಕೂಡಾ ಒಂದರಂತೆ ಒಂದಿಲ್ಲ. ಒಂದೇ ಮರದಲ್ಲಿರುವ ಸಾವಿರಾರು ಎಲೆಗಳು ಕೂಡಾ ಒಂದರ ರೀತಿ ಇನ್ನೊಂದಿಲ್ಲ. ಇಡೀ ಜಗತ್ತೇ ವೈವಿಧ್ಯಮಯ. ನಾವು ಸಾಧಿಸಬೇಕಾದ್ದು ಸಮನ್ವಯತೆಯೇ ವಿನಾ `ಸಮಾನತೆ’ಯನ್ನಲ್ಲ ಎಂಬ ಅಂಶ ಮನದಟ್ಟಾದರೆ, ಯೌವನದ ಶಕ್ತಿ, ಸಮಯ ತಪ್ಪು ದಾರಿಯ ಕಡೆ ಹೋಗುವುದಿಲ್ಲ.
ಆದರ್ಶ ವ್ಯಕ್ತಿಗಳನ್ನು ಕೊಲ್ಲಬಹುದು. ಆದರೆ ಅವರು ಹೊತ್ತಿಸಿದ ಆದರ್ಶದ ಕಿಡಿಗಳನ್ನು ನಂದಿಸಲು ಬಂದೂಕಿನಿಂದ ಸಾಧ್ಯವಿಲ್ಲ. ಕೊಲ್ಲುವುದು ಆದರ್ಶವಾಗುವುದಕ್ಕಿಂತ, ಬದುಕಿಸುವುದು ಆದರ್ಶವಾಗಬೇಕು. ಜೀವ ತೆಗೆಯುವುದಕ್ಕಿಂತ, ಜೀವನ ಕೊಡುವುದರಲ್ಲಿ ದೊಡ್ಡತನ ಅಡಗಿದೆ. ಆದರ್ಶಕ್ಕಾಗಿ ಸಾಯುವುದಕ್ಕಿಂತ, ಬದುಕಿ ಹೋರಾಡಿ ಆದರ್ಶ ಪಾಲಿಸುವುದು ಯಾವಾಗಲೂ ಶ್ರೇಯಸ್ಕರ. ನಕ್ಸಲಿಸಂನ ಜನಕನಾದ ಕನು ಸನ್ಯಾಲ್ ಎಂಬ ವ್ಯಕ್ತಿ ತನ್ನ ಯೌವನವೆಲ್ಲ ನಕ್ಸಲೈಟನಾಗಿ ವ್ಯರ್ಥವಾಗಿ ಹೋರಾಡಿದ. ಯೌವನ ಜಾರಿದ ಮೇಲೆ ತನ್ನ ತಪ್ಪಿನ ಅರಿವಾಯಿತು. ತಾನು ಹಿಡಿದ ದಾರಿಯ ಬಗ್ಗೆ ಭ್ರಮನಿರಸನಗೊಂಡು ತನ್ನ ಯೌವನವೆಲ್ಲ ವ್ಯರ್ಥವಾಯ್ತು ಎಂಬುದಾಗಿ ಪಶ್ಚಾತ್ತಾಪ ಪಟ್ಟ. ವಾಸ್ತವದ ಅರಿವಾದಾಗ ಆತನಿಗೆ ಮುಪ್ಪು ಆವರಿಸಿತ್ತು.
ನಕಾರಾತ್ಮಕವಾಗಿ ಕೆಲಸ ಮಾಡಿ ಸಮಾಜಕ್ಕೆ ಕಂಟಕವಾದ ವ್ಯಕ್ತಿಗಳು ನಮಗೆ ಆದರ್ಶವಾಗುವ ಬದಲು, ಸಕಾರಾತ್ಮಕವಾಗಿ, ರಚನಾತ್ಮಕವಾಗಿ ಕೆಲಸ ಮಾಡಿದ ಮಹಾಪುರುಷರು ನಮ್ಮ ಆದರ್ಶವಾಗಬೇಕು. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದ ಅಣ್ಣಾಹಜಾರೆಯವರು ವಿವೇಕಾನಂದರ ಪುಸ್ತಕದಿಂದ ಪ್ರೇರಣೆ ಪಡೆದು ಸಮಾಜಸುಧಾರಕರಾದರು. ಸ್ವಾಮಿ ವಿವೇಕಾನಂದರ ಜೀವನದಿಂದ ಸ್ಫೂರ್ತಿ ಪಡೆದು ಡಾ| ಆರ್. ಬಾಲಸುಬ್ರಮಣ್ಯಂ ಹೆಗ್ಗಡದೇವನಕೋಟೆಯಲ್ಲಿ ದೀನ-ದಲಿತರ, ವನವಾಸಿ ಬಂಧುಗಳ ಸೇವೆಗಾಗಿ ಕಂಕಣಬದ್ಧರಾದರು. ಸ್ವಾಮಿ ವಿವೇಕಾನಂದರ ಜೀವನದಿಂದ ಪ್ರೇರಣೆ ಪಡೆದು ಈ ದೇಶದ ಅಸಂಖ್ಯಾತ ಯುವಕ- ಯುವತಿಯರು ತಮ್ಮ ಯೌವನವನ್ನೇ ಸೇವೆಗಾಗಿ ಮುಡಿಪಾಗಿಟ್ಟರು.
ಆದರ್ಶದ ಸೆಳೆತ
ಸ್ವಾಮಿ ವಿವೇಕಾನಂದರ ಮಾತು ಪ್ರಸಿದ್ಧವಿದೆ: “ಏಳು, ಎಚ್ಚರಗೊಳ್ಳು, ಗುರಿಯನ್ನು ತಲಪುವವರೆಗೆ ನಿಲ್ಲಬೇಡ.” ಈ ಉಕ್ತಿ ಡಾ| ಎಚ್.ಎನ್. ಸುದರ್ಶನ್ರ ಮೇಲೆ ಮಂತ್ರದಂತೆ ಕೆಲಸ ಮಾಡಿತು. ಬಡಜನರ, ಅವಕಾಶವಿಹೀನರ, ಶೋಷಣೆಗೆ ಒಳಗಾದವರ ಸೇವೆಗೆ ತಮ್ಮ ಜೀವನವನ್ನು ಮುಡುಪಿರಿಸಬೇಕೆಂದು ಅವರು ತೀರ್ಮಾನಿಸಿದರು. ಎಂ.ಬಿ.ಬಿ.ಎಸ್. ಪದವಿ ಮುಗಿದ ಮೇಲೆ ಮದುವೆ ಆಗದೇ ಇರಲು ನಿಶ್ಚಯಿಸಿದರು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇರುವ ಜನರಿಗೆ ಅದರಲ್ಲಿಯೂ ವಿದ್ಯಾವಂತರಾದ ಯುವಕರಿಗೆ ನಗರಜೀವನದ ಆಕರ್ಷಣೆ ಇರುತ್ತದೆ. ಆದರೆ ಡಾ| ಸುದರ್ಶನ್ರನ್ನು ಕಾಡಿನ ಕುಗ್ರಾಮ ಆಕರ್ಷಿಸಿತು. ಯೌವನದ ಆಕರ್ಷಣೆಗಳಿಗಿಂತ, ದೀನ-ದಲಿತರ ಸೇವೆಯ ಆಕರ್ಷಣೆಯೇ ಬಲಿಯಿತು. ಬಡವರ ಸೇವೆ ಮಾಡಬೇಕೆನ್ನುವ ಅದಮ್ಯ ಆದರ್ಶ ಅವರನ್ನು ಬಿಳಿಗಿರಿರಂಗನಬೆಟ್ಟದಲ್ಲಿ ಯಾವುದೇ ಸೌಕರ್ಯಗಳಿಲ್ಲದ ಜೀವನವನ್ನು ಸಾಗಿಸುತ್ತಿದ್ದ ಸೋಲಿಗರ ಸೇವೆಮಾಡಲು ಎಳೆದೊಯ್ದಿತು. ಈ ಜನರ ಸೇವೆಯಲ್ಲಿಯೇ ತಮ್ಮ ಬದುಕಿನ ಸಾರ್ಥಕತೆ ಇದೆಯೆಂದು ಅವರು ಬಗೆದರು.
ಉಳಿಯಲು ಸರಿಯಾದ ಮನೆ ಸಿಗುವುದಿಲ್ಲವೆಂದು ಹಳ್ಳಿಯಲ್ಲಿರಲು ನಿರಾಕರಿಸುವ ತರುಣ ವೈದ್ಯ ಪದವೀಧರರಿದ್ದಾರೆ. ಅವರಿಗೆ ಆಗಾಗ ಸಮೀಪದ ನಗರಕ್ಕೆ ಬಂದುಹೋಗುವ ಅವಕಾಶ, ಅನುಕೂಲ ಎರಡೂ ಇರುತ್ತವೆ. ಅಷ್ಟಾದರೂ ಹಳ್ಳಿಯ ಜೀವನವೆಂದರೆ ಆಗಿಬರುವುದಿಲ್ಲ. ಆದರೆ ಡಾ| ಸುದರ್ಶನ್ ನಾಗರಿಕತೆ ತಿಳಿಯದಿದ್ದ ಆದಿವಾಸಿಗಳ ಸ್ಥಾನವನ್ನೇ ಹುಡುಕಿಕೊಂಡು ಹೋದರು. ಅವರಿಗೆ ಅಲ್ಲಿ ಮನೆಯೂ ಇರಲಿಲ್ಲ, “ನೀನು ಬಂದೆಯಾ?” ಎಂದು ಕೇಳುವವರೂ ಇರಲಿಲ್ಲ.
ಅವರು ಸುಮಾರು ಮೂವತ್ತು ವರ್ಷಗಳ ಹಿಂದೆ ನಾಗರಿಕ ಸೌಕರ್ಯ, ಯೌವನದ ಸುಖಭೋಗಗಳನ್ನು ನಿರಾಕರಿಸಿ ಅನಾಕರ್ಷಕವಾದ, ಯಾವ ಅನುಕೂಲತೆಯೂ ಇಲ್ಲದ ಕಾಡಿನ ಜೀವನವನ್ನು ಒಂದು ಪುಟ್ಟ ಮುರಕಲು ಗುಡಿಸಲಿನಲ್ಲಿ `ವಿವೇಕಾನಂದ ಗಿರಿಜನ ಸೇವಾ ಕೇಂದ್ರವನ್ನು ಸ್ಥಾಪಿಸಿ, ಅದರ ಮೂಲಕ ಆರಂಭ ಮಾಡಿದರು. ಪ್ರತಿಕೂಲಗಳು ಅವರನ್ನು ಹೆಜ್ಜೆಹೆಜ್ಜೆಗೂ ಹೆದರಿಸಿದವು. ಅನೇಕ ಜನರು ಅಡ್ಡಗಾಲುಹಾಕಿದರು. ಯಾವುದರಿಂದಲೂ ಡಾ| ಸುದರ್ಶನ್ ಹೆದರಿ ಹಿಮ್ಮೆಟ್ಟಲಿಲ್ಲ.
ಸೇವಾನಿಷ್ಠೆ
ಅಲ್ಲಿಯ ಸೋಲಿಗರೂ ಅವರನ್ನು ಸಂದೇಹದಿಂದ ಕಂಡರು. ಅವರೊಂದಿಗೆ ಸಹಕರಿಸಲು ಮೊದಮೊದಲು ಮನಸ್ಸು ಮಾಡಲಿಲ್ಲ. ಆದರೆ ಸುದರ್ಶನರ ಸರಳ ಜೀವನಕ್ಕೆ, ಕೃತ್ರಿಮವನ್ನರಿಯದ ಮನಸ್ಸಿಗೆ, ಬಡಜನರ ಮೇಲಿನ ಅವರ ಪ್ರೀತಿ, ಕಾಳಜಿಗೆ ಬರಬರುತ್ತ ಮಾರುಹೋದರು.
ಈಗ ಡಾ| ಸುದರ್ಶನ್ರ ಸೇವಾಕಾರ್ಯ ಬಹಳ? ಬೆಳೆದುಕೊಂಡಿದೆ. ಸೋಲಿಗರಿಗೆ ಔಷಧೋಪಚಾರ ಮಾತ್ರವೇ ಲಭಿಸುತ್ತಿಲ್ಲ. ಅವರ ಆರೋಗ್ಯದ ರಕ್ಷಣೆಯ ಜತೆಗೆ ಅವರಿಗೆ ಅರಿವು ಮೂಡಿಸುವ, ಅವರ ಸಾಂಪತ್ತಿಕ ಸ್ಥಿತಿಗತಿಗಳನ್ನು ಸುಧಾರಿಸುವ ಕ್ರಮಗಳನ್ನು ಕೂಡಾ ಸುದರ್ಶನ್ ಕೈಗೊಂಡಿದ್ದಾರೆ. ಸೋಲಿಗರ ಪಾರಂಪರಿಕ ಔಷಧಜ್ಞಾನವನ್ನು ತಮ್ಮ ಅಧುನಿಕ ಔಷಧ ಚಿಕಿತ್ಸಾ ಪದ್ಧತಿಯಲ್ಲಿ ಡಾ| ಸುದರ್ಶನ್ ಅಳವಡಿಸಿಕೊಂಡಿದ್ದಾರೆ.
ಅಲ್ಲಿ ಇಂದು ಸುಸಜ್ಜಿತ ಆಸ್ಪತ್ರೆ ಇದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ ಇದೆ. ಆ ಜನರು ಜೇನು ಸಾಕುತ್ತಾರೆ, ಚಾಪೆ ಹೆಣೆಯುತ್ತಾರೆ. ಮನೆಮನೆಯಲ್ಲೂ ನೂಲುತೆಗೆಯುವ ಸ್ಪಿಂಡಲ್ಸ್ ಇವೆ. ಆ ಜನಸಮುದಾಯದ ಆವಶ್ಯಕತೆ ಪೂರೈಸುವ ಮುದ್ರಣಾಲಯ ಬಂದಿದೆ. ಒಟ್ಟಿನಲ್ಲಿ ಮನುಷ್ಯನ ಪ್ರಾಥಮಿಕ ಆವಶ್ಯಕತೆಗಳಾದ ಆಹಾರ, ಆರೋಗ್ಯ, ವಿದ್ಯೆ, ವಸತಿ ಎಲ್ಲವೂ ಸೋಲಿಗರ ಪಾಲಿಗೆ ನಿಜವಾಗಿದೆ. ಡಾ| ಸುದರ್ಶನರ ಸೇವೆಯ ಹರಹು ವಿಸ್ತಾರಗೊಂಡಿದೆ. ಈಗ ಅವರಿಗೆ ಅವರ ಕಾರ್ಯದಲ್ಲಿ ನೆರವಾಗುವ ಜನರೂ ಬಂದಿದ್ದಾರೆ.
ಆದರ್ಶಸಾಧನೆಯ ಸೇವಾದೀಕ್ಷೆ ತೊಟ್ಟು ಸುದರ್ಶನರು ಮಾಡಿದ ಕೆಲಸ ಅದ್ಭುತವಾಗಿದೆ. ಅವರು ಸೇವೆಯ ಜೊತೆಯಲ್ಲೆ, ಸೋಲಿಗರಿಗಾದ ಅನ್ಯಾಯದ ವಿರುದ್ಧ ಬಂದೂಕು ಹಿಡಿಯದೇ ಹೋರಾಟವನ್ನೂ ಮಾಡಿದ್ದಾರೆ. ಸೋಲಿಗರ ಭೂಮಿಯನ್ನು ಸೋಲಿಗರಿಗೆ ಕೊಡಿಸಲು ಹೋರಾಟ ಮಾಡಿದಾಗ ರಾಜ್ಯಸರ್ಕಾರ ಡಾ| ಸುದರ್ಶನರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಿತು. ಅದೇ ರಾಜ್ಯಸರ್ಕಾರ ಮುಂದೆ ರಾಜ್ಯ ಪ್ರಶಸ್ತಿ ಕೊಟ್ಟು ಗೌರವಿಸಿತು. ಬಡವರಿಗೆ ಸಲ್ಲಿಸಿದ ಸೇವೆ ಗುರುತಿಸಿ ಮ್ಯಾಗ್ಸೇಸೇ ಪ್ರಶಸ್ತಿಯೂ ದೊರಕಿತು.
ಯಾವ ಪ್ರಶಸ್ತಿಯೂ ಅವರ ತಲೆ ಕೆಡಿಸಲಿಲ್ಲ. ಪ್ರಶಸ್ತಿಯ ಎಲ್ಲ ಮೊತ್ತವನ್ನು ತನ್ನ ಸ್ವಂತಕ್ಕೆ ಉಪಯೋಗಿಸದೆ ಸೋಲಿಗರ ಕಲ್ಯಾಣಕ್ಕಾಗಿಯೆ ವಿನಿಯೋಗಿಸಿದರು. ಸೋಲಿಗ ಸಮಾಜದ ಯುವಕರಿಗೆ ತರಬೇತಿ ನೀಡಿ ಅವರಿಗೆ ಅನೇಕ ಹೊಣೆ ವಹಿಸಿಕೊಟ್ಟರು. ತನ್ನ ಅಮೂಲ್ಯ ಯೌವನವನ್ನೆಲ್ಲ ಗಂಧದಂತೆ ತೇದು, ಸೋತು ಸುಣ್ಣವಾಗಿದ್ದ ಸೋಲಿಗರ ಜೀವನದಲ್ಲಿ ಆಶಾವಾದವನ್ನು, ಬೆಳಕನ್ನು ತಂದರು. ಸೋಲಿಗರು ಸೋಲಿಗರಲ್ಲ, ಬದಲಿಗೆ ಗೆಲ್ಲಿಗರಾಗಿದ್ದಾರೆ. ಯೌವನಾವಸ್ಥೆಯಲ್ಲೇ ಉತ್ತಮ ಆದರ್ಶದ ಹುಚ್ಚು ಹಚ್ಚಿಕೊಂಡ ಒಬ್ಬ ಮನುಷ್ಯ ಏನು ಮಾಡಬಲ್ಲ ಎನ್ನುವುದಕ್ಕೆ ಡಾ| ಸುದರ್ಶನ್ ಶ್ರೇಷ್ಠ ನಿದರ್ಶನವಾಗಿದ್ದಾರೆ.
ಆಯ್ಕೆಯ ವಿವೇಕ
ತಾರುಣ್ಯದ ಮೈಮರೆವಿನಲ್ಲಿ ಮನು?ಷ್ಯ ಎಷ್ಟು ಉಚ್ಛೃಂಖಲನಾಗಬಹುದು, ಸುಖದ ಬೆಂಬತ್ತಿ ಮುಳ್ಳು- ಕಂಟಿಗಳಲ್ಲಿ, ಗಿರಿ-ಕಂದರಗಳಲ್ಲಿ ಸಿಕ್ಕಿಬಿದ್ದು ಒದ್ದಾಡಬಹುದು. ಹೀಗೆ ಓಡುತ್ತಿರುವಾಗ ಮಂಗಲವಾದ, ಕೋಮಲವಾದ ಎಷ್ಟು ವಿಷಯಗಳನ್ನು ತನ್ನ ಕಾಲುಗಳಿಂದ ತುಳಿಯಬಹುದು ಎನ್ನುವುದರ ಪರಿವೆ ನಮಗಿರುವುದಿಲ್ಲ. ಯೌವನ ಎಂಬುದು ಬೆಂಕಿ ಇದ್ದ ಹಾಗೆ. ಅದು ಎಲ್ಲವನ್ನೂ ಸುಡಬಹುದು. ಬೆಂಕಿಗೆ ಕೆಟ್ಟದ್ದು-ಒಳ್ಳೆಯದರ ತಾರತಮ್ಯ ಇರುವುದಿಲ್ಲ. ತನ್ನ ಸಂಪರ್ಕಕ್ಕೆ ಬಂದ ಎಲ್ಲವನ್ನೂ, ಎಲ್ಲರನ್ನೂ ಸುಟ್ಟು ಭಸ್ಮ ಮಾಡಿಬಿಡುತ್ತದೆ. ಆದ್ದರಿಂದ ಈ ಯೌವನದ ಬೆಂಕಿಯಿಂದ ಒಂದು ಮನೆಯನ್ನೊ, ಸಮಾಜವನ್ನೊ, ಊರನ್ನೊ, ದೇಶವನ್ನೊ ಹೊತ್ತಿ ಉರಿಸುವ ಬದಲು, ಬೆಳಗಿಸಿ ಬೆಳಕನ್ನಾಗಿಸಬೇಕು.
ಯುವಕ-ಯುವತಿಯರು ದೇಶದ ನಿಜವಾದ ಸಂಪತ್ತು. ಆ ಸಂಪತ್ತು ಸದ್ವಿನಿಯೋಗವಾದರೆ ದೇಶ ಉನ್ನತಿಯತ್ತ ಸಾಗುತ್ತದೆ. ದುರ್ವಿನಿಯೋಗವಾದರೆ ಅವನತಿಯತ್ತ ಸಾಗುತ್ತದೆ. ಅದೇ ರೀತಿ ವೈಯಕ್ತಿಕವಾಗಿ ನಮ್ಮ ಯೌವನವನ್ನು ನಾವು ಸದುಪಯೋಗಪಡಿಸಿಕೊಂಡಲ್ಲಿ ಬಾಳು ಸಾರ್ಥಕವಾಗುತ್ತದೆ. ದುರುಪಯೋಗಪಡಿಸಿಕೊಂಡಲ್ಲಿ ನಮ್ಮ ಬದುಕೆಲ್ಲ ನರಕವಾಗಿ ದುಃಖಿಸಬೇಕಾಗುತ್ತದೆ. ಆದ್ದರಿಂದ ನಾವು ನಮ್ಮ ಯೌವನವನ್ನು ವ್ಯರ್ಥಗೊಳಿಸದೆ, ಸಾರ್ಥಕಗೊಳಿಸಿ ದೇಶಕ್ಕೊಂದು ಆಸ್ತಿಯಾಗೋಣ.