ಗುಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್ (ಜಿ.ಎಸ್.ಟಿ.) ಮುಸೂದೆಯು ಕಡೆಗೂ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾದದ್ದು ಒಂದು ಸಮಾಧಾನಕರ ಸಂಗತಿ. ಕೆಲವು ವಿವರಾಂಶಗಳ ಹೊರತು ಮಸೂದೆಯ ಆವಶ್ಯಕತೆಯ ಬಗೆಗೆ ವಿವಿಧ ಪಕ್ಷಗಳ ನಡುವೆ ಮೂಲಭೂತ ಭೇದಗಳೇನೂ ಇರದಿದ್ದರೂ 2006-2007ರಷ್ಟು ಹಿಂದಿನಿಂದ ರಾಜಕೀಯ ಲೆಕ್ಕಾಚಾರಗಳ ಕಾರಣದಿಂದ ಈ ಜನಹಿತಪರ ಮಸೂದೆ ನೆನೆಗುದಿಗೆ ಬಿದ್ದಿತ್ತು. ವಿರೋಧಪಕ್ಷಗಳ ಮಾತಿರಲಿ; ಆರೂಢಪಕ್ಷ ಸರ್ಕಾರಗಳಿರುವ ರಾಜ್ಯಗಳೇ ತಮ್ಮ ಆದಾಯ ಈ ವ್ಯವಸ್ಥೆಯಿಂದ ಕಡಮೆಯಾದೀತೆಂದು ಶಂಕಿಸಿ ಮಸೂದೆಗೆ ಅಸಮ್ಮತಿ ಸೂಚಿಸಿದ್ದವು; ಸರ್ಕಾರ ಸರಕುಸಾಗಾಣಿಕೆಗೆ ಸೂಚಿಸಿದ್ದ ಶೇ. 1 ಅಂತರ-ರಾಜ್ಯ ತೆರಿಗೆಯನ್ನು ಕಾಂಗ್ರೆಸ್ ವಿರೋಧಿಸಿತ್ತು. ಈ ಕ್ಲೇಶಗಳೆಲ್ಲ ಸಂಧಾನಗಳ ಮೂಲಕ ನೀಗಿ ಈಗ ಮಸೂದೆಗೆ ಸಂಸತ್ತಿನಲ್ಲಿ ಸರ್ವಾನುಮತಿ ದೊರೆತಿದೆ. ವಿವಿಧ ರಾಜ್ಯಗಳ ಅನುಮೋದನೆ ಪಡೆಯುವುದು, ಹೊಸ ಕಾಯದೆಯ ಕಾರ್ಯಾನ್ವಯಕ್ಕೆ ಅವಶ್ಯವಾದ ಆಡಳಿತಯಂತ್ರವನ್ನು ಸಜ್ಜುಗೊಳಿಸುವುದು ಮೊದಲಾದ ಪ್ರಕ್ರಿಯೆಗಳು ಇನ್ನು ಮುಂದೆ ನಡೆಯಬೇಕಾಗಿದೆ. ಎಲ್ಲ ರಾಜ್ಯಗಳಿಗೂ ಏಕರೀತಿಯಲ್ಲಿ ಅನ್ವಯಿಸಬಹುದಾದ ಜಿ.ಎಸ್.ಟಿ. ದರ ಎಷ್ಟಿರಬೇಕು ಮೊದಲಾದ ಅಂಶಗಳ ಬಗೆಗೆ ಇನ್ನೂ ಸರ್ವಸಮ್ಮತಿ ಮೂಡಬೇಕಾಗಿದೆ. ಒಟ್ಟಾರೆ ನೋಡುವಾಗ – ಸೇವೆಗಳು ಸ್ವಲ್ಪ ದುಬಾರಿಗೊಂಡರೂ – ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಎಲ್ಲಕ್ಕಿಂತ ಮಿಗಿಲಾಗಿ ತೆರಿಗೆಯ ಸಂಗ್ರಹಣೆಯೂ ನಿರ್ವಹಣೆಯೂ ಹೆಚ್ಚು ದಕ್ಷವಾಗಲಿದೆ; ರಾಜ್ಯಗಳ ಮಟ್ಟದಲ್ಲಿ ಈ ಅಂಗದಲ್ಲಿ ದಕ್ಷತೆಯ ಕೊರತೆ ಎದ್ದುಕಾಣುತ್ತಿತ್ತು. ಈಗ ಸೂಚಿಸಲಾಗಿರುವ ವಿನ್ಯಾಸದಲ್ಲಿ ಇಡೀ ಆಡಳಿತ ವ್ಯವಸ್ಥೆ ಸರಳಗೊಳ್ಳುವುದಲ್ಲದೆ ದೀರ್ಘಾವಧಿಯಲ್ಲಿ ಕೇಂದ್ರದ ತೆರಿಗೆ ವರಮಾನದಲ್ಲಿಯೂ ರಾ?ದ ಸಗಟು ಉತ್ಪನ್ನದಲ್ಲಿಯೂ ಹೆಚ್ಚಳವಾಗಲಿದೆ; ತೆರಿಗೆಯ ಸರಳೀಕರಣದಿಂದಾಗಿ ಉದ್ಯಮಗಳ ಉತ್ಪಾದನಾವೆಚ್ಚ ಕಡಮೆಯಾಗಲಿದೆ. ದೇಶದ ಆರ್ಥಿಕತೆಗೆ ಬುನಾದಿಯಾದ ಆಡಳಿತ ಒಳಹಂದರವನ್ನು ಹೆಚ್ಚು ವ್ಯವಸ್ಥಿತಗೊಳಿಸಬಲ್ಲ ಈ ಸುಧಾರಣಕ್ರಮ ಸ್ವಾಗತಾರ್ಹವಾಗಿದೆ.
ಸ್ವಾಗತಾರ್ಹ ಕಾಯದೆ
Month : September-2016 Episode : Author :