ಶಾಸ್ತ್ರೀಯ ಸಂಗೀತದಲ್ಲಿ ಯಾರು ಯಾರ ಗುರು, ಹಾಗೇ ಯಾರು ಯಾರ ಶಿಷ್ಯ ಎಂಬುದಕ್ಕೆ ತುಂಬ ಮಹತ್ತ್ವವಿದೆ. ಪ್ರಸಿದ್ಧರಾದ ದೊಡ್ಡ ಗುರುಗಳಲ್ಲಿ ಕಲಿತ ಶಿಷ್ಯರಿಗೆ ಅದರಿಂದಲೇ ಒಂದು ಗೌರವ ಬರುತ್ತದೆ; ಇನ್ನೊಂದೆಡೆ ಶಿಷ್ಯರು ಸಮರ್ಥರು ಮತ್ತು ಪ್ರಸಿದ್ಧರಾದಾಗ ಗುರುಗಳ ಘನತೆ ಮತ್ತು ಗೌರವ ಕೂಡ ಇಮ್ಮಡಿಯಾಗುತ್ತದೆ. ಇದರಲ್ಲಿ ಎರಡನೇ ಕ್ರಮದಲ್ಲಿ ಎದ್ದು ಕಾಣುವ ಓರ್ವ ಗುರು ಆಂಧ್ರ ಪ್ರದೇಶದ ಕರ್ನೂಲಿನವರಾದ ಡಾ| ಶ್ರೀಪಾದ ಪಿನಾಕಪಾಣಿ ಅವರು. ನೇದುನೂರಿ ಕೃಷ್ಣಮೂರ್ತಿ, ನೂಕುಲ ಚಿನ್ನ ಸತ್ಯನಾರಾಯಣ, ವೋಲೇಟಿ ವೆಂಕಟೇಶ್ವರುಲು, ಶ್ರೀರಂಗಂ ಗೋಪಾಲರತ್ನಂ, ವಿಜಯಲಕ್ಷ್ಮಿ ಶೇಖರ್, ಮಲ್ಲಾಡಿ ಸೂರಿಬಾಬು ಮತ್ತವರ ಪ್ರಸಿದ್ಧ ಮಕ್ಕಳಾದ ಮಲ್ಲಾಡಿ ಬ್ರದರ್ಸ್ (ಶ್ರೀರಾಂ ಪ್ರಸಾದ್ ಮತ್ತು ರವಿಕುಮಾರ್) ಇವರೆಲ್ಲ ಡಾ| ಎಸ್. ಪಿನಾಕಪಾಣಿ ಅವರ ಶಿಷ್ಯರು. ಈಗ್ಗೆ ಮೂರುವ? ಹಿಂದೆ (11 ಮಾರ್ಚ್ 2013) ನಮ್ಮನ್ನಗಲಿದರು ಡಾ| ಪಿನಾಕಪಾಣಿ. ನೂರುವ?ಗಳ ತುಂಬುಜೀವನ ಸವರದು.
ಡಾ| ಶ್ರೀಪಾದ ಪಿನಾಕಪಾಣಿ ಅವರ ಹೆಸರಿನೊಂದಿಗೆ ಇನ್ನೊಂದು ಕುತೂಹಲಕರ ಅಂಶವೂ ಇದೆ. ಅವರು ಸಂಗೀತಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆಯದಿದ್ದರೂ ಅವರು ಡಾಕ್ಟರ್ ಪಿನಾಕಪಾಣಿ. ಎಂ.ಡಿ ಪದವೀಧರರಾದ ಅವರು ವೈದ್ಯಕೀಯ ಕಾಲೇಜಿನಲ್ಲಿ ಮೆಡಿಸಿನ್ ವಿಭಾಗದ ಪ್ರೊಫೆಸರ್ ಆಗಿದ್ದರು; ಮತ್ತು ಒಂದು ಸರ್ಕಾರೀ ಆಸ್ಪತ್ರೆಯ ಮುಖ್ಯಸ್ಥನ ಹುದ್ದೆಯನ್ನು ಅಲಂಕರಿಸಿದ್ದರು. ಆದರೆ ಅವರ ಅಪಾರವಾದ ಸಂಗೀತಜ್ಞಾನವನ್ನು ಕಂಡವರು ಅವರದ್ದು ಸಂಗೀತದ ಡಾಕ್ಟರೇಟ್ ಎಂದೇ ಭ್ರಮಿಸುತ್ತಿದ್ದರು. ಇನ್ನು ಮದ್ರಾಸ್ (ಚೆನೈ)ನ ಸಂಗೀತ ಕಛೇರಿ ಮತ್ತು ಸಂಗೀತೋತ್ಸವಗಳ ಸಂಘಟಕರು, ಡಾ| ಪಿನಾಕಪಾಣಿಯವರು ಸಂಗೀತಶಾಸ್ತ್ರಜ್ಞರು(musicologist) ನಿಜ, ಆದರೆ ವೇದಿಕೆ ಕಲಾವಿದರಾಗಿ ಅವರು ಆ ಮಟ್ಟದಲ್ಲಿಲ್ಲ ಎಂದು ಭಾವಿಸಿದ್ದಿದೆ. ಚೆನ್ನೈನ ಪ್ರತಿಷ್ಠಿತ ಸಂಸ್ಥೆ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಕೂಡ ಅವರಿಂದ ಸಾಕಷ್ಟು ತಡವಾಗಿಯೇ ಕಛೇರಿ ಮಾಡಿಸಿತು. ಒಂದು ರೀತಿ ’ಸಂಗೀತ ಕಳಾನಿಧಿ’ ಪ್ರಶಸ್ತಿಯನ್ನು ನೀಡುವ ಹೊತ್ತಿಗೆ ಅನಿವಾರ್ಯವೆಂಬಂತೆ ಕಛೇರಿ ಮಾಡಿಸಿತೆಂದು ಹೇಳಬಹುದು.
ಆದರೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ, ಮುಖ್ಯವಾಗಿ ಆಂಧ್ರಪ್ರದೇಶದ ಭಾಗಕ್ಕೆ ತಂಜಾವೂರು ಶೈಲಿ ಅದರಲ್ಲೂ ಅಧಿಕೃತವಾದ(ಅಥೆಂಟಿಕ್) ಅರಿಯಾಕುಡಿ ಶೈಲಿಯನ್ನು ಪರಿಚಯಿಸಿದ ಪ್ರಮುಖ ವ್ಯಕ್ತಿಯಾಗಿ ಡಾ| ಪಿನಾಕಪಾಣಿ ಇತಿಹಾಸದಲ್ಲಿ ಸ್ಥಾನ ಪಡೆದಿದ್ದಾರೆ. ಅದಕ್ಕೆ ಮುನ್ನ ಆಂಧ್ರದಲ್ಲಿ ತಂಜಾವೂರು ಶೈಲಿಯೇ ಇದ್ದರೂ ವಿಭಿನ್ನ ಬ್ರಾಂಡ್ಗಳ ಗಾಯನವಿದ್ದು, ಅಷ್ಟೊಂದು ತೀವ್ರವಾಗಿ ಸಾಂಪ್ರದಾಯಿಕ (ಆರ್ಥಡಾಕ್ಸ್) ಅಲ್ಲದ್ದು ಇದ್ದಿರಬೇಕು. ಕರ್ನಾಟಕ ಸಂಗೀತದ ಸುವರ್ಣ ಯುಗದ ದಿಗ್ಗಜರ ಸಂಗೀತದ ಸೂಕ್ಷ್ಮತೆಗಳನ್ನು ಅಂತಃಸ್ಥಗೊಳಿಸಿಕೊಂಡ ಅವರು ತಮ್ಮದಾದ ’ಪಾಣಿ ಬಾನಿ’ಯನ್ನು ರೂಪಿಸಿದರು.
ಖ್ಯಾತನಾಮ ಶಿಷ್ಯರು
ತಮ್ಮವರು ತಮಿಳುನಾಡಿನ ಸಂಗೀತಗಾರರಿಗೆ ಸಮಾನರಾದರು ಎನ್ನುವ ಸಮಾಧಾನ ಅವರದ್ದು. ಆ ಬಗ್ಗೆ ಅವರು ಹೀಗೆ ಹೇಳಿಕೊಂಡಿದ್ದಾರೆ:
“ಇಂದಿನ ಕೆಲವು ಬಹಳ ಉತ್ತಮ ಸಂಗೀತಗಾರರಿಗೆ ತರಬೇತಿ ನೀಡುವ ಅವಕಾಶ ನನ್ನದಾಯಿತು. ಅವರೆಂದರೆ ನೂಕುಲ ಚಿನ್ನಸತ್ಯನಾರಾಯಣ, ನೇದುನೂರಿ ಕೃಷ್ಣಮೂರ್ತಿ, ವೋಲೇಟಿ ವೆಂಕಟೇಶ್ವರುಲು, ಶ್ರೀರಂಗಂ ಗೋಪಾಲರತ್ನಂ ಮುಂತಾದವರು. ಅವರು ಮುಂದುವರಿದು ದೊಡ್ಡ ರಾ?ಮಟ್ಟದ ಗೌರವಗಳನ್ನು ಪಡೆದರು. ಅವರೀಗ ದಕ್ಷಿಣಭಾರತದ ಇತರ ಶ್ರೇಷ್ಠ ಸಂಗೀತಗಾರರಿಗೆ ಸಮಾನರೆನಿಸಿದ್ದಾರೆ. ನನಗೆ ಇನ್ನೇನು ಬೇಕು? ನನಗೆ ನನ್ನ ಗುರಿ ಸಾಧಿಸಿದ ಮತ್ತು ಕರ್ನಾಟಕ ಸಂಗೀತಕ್ಕೆ ನನ್ನದಾದ ಕೊಡುಗೆ ನೀಡಿದ ಪೂರ್ತಿ ಸಮಾಧಾನವಿದೆ.” ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯ ಹುಡುಕಾಟದಲ್ಲಿ ತೊಡಗಿದ ಡಾ| ಪಾಣಿಯವರು (’ಪಾಣಿಗಾರು’) ಸಂಗೀತ ತ್ರಿಮೂರ್ತಿಗಳ (ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಮತ್ತು ಶ್ಯಾಮಶಾಸ್ತ್ರಿಗಳು) ವಿಭಿನ್ನ ಶೈಲಿಗಳನ್ನು ಅವುಗಳ ಭಕ್ತಿ ಹಾಗೂ ಬೌದ್ಧಿಕತೆಗಳ ಸಹಿತವಾಗಿ ಅರ್ಥೈಸಿಕೊಂಡು ಅವರ ರಚನೆಗಳ ಸಾರವನ್ನು ಹೊರತಂದರು; ಮಹತ್ತ್ವದ ಗ್ರಂಥಗಳನ್ನು ರಚಿಸಿ ಶಿ?ರು, ಪ್ರಶಿ?ರಲ್ಲದೆ ಮುಂದಿನ ತಲೆಮಾರುಗಳಿಗೆ ಉಳಿಸಿಹೋದರು.
“ಶಾಸ್ತ್ರೀಯ ಸಂಗೀತವು ನನ್ನನ್ನು ಪೂರ್ತಿಯಾಗಿ ಆವರಿಸಿದೆ ಎಂದು ನನಗೆ ತಿಳಿಯುತ್ತಲೇ ನನಗೆ ದೊಡ್ಡ ಜವಾಬ್ದಾರಿ ಇದೆಯೆನಿಸಿತು. ಕೇವಲ ಕಲಿಯುವುದು, ಕಛೇರಿ ನಡೆಸುವುದು ಮತ್ತು ಕಲಿಸಿದರೆ ಸಾಲದು. ಕರ್ನಾಟಕ ಸಂಗೀತದಲ್ಲಿ ಶ್ರೇ?ವಾದುದನ್ನು ಮತ್ತು ಕಾಲದ ಪರೀಕ್ಷೆಯಲ್ಲಿ ಗೆದ್ದುದನ್ನು ಒಂದು ಕಡೆ ಸೇರಿಸಬೇಕು; ವರ್ತಮಾನದಲ್ಲಿ ಅದನ್ನು ಬಳಸಬೇಕು; ಮತ್ತು ಭವಿ?ದಲ್ಲಿ ಬಳಸುವಂತೆ ದಾಖಲಿಸಿ ಇಡಬೇಕು ಎನ್ನಿಸಿತು” ಎಂದು ಡಾ| ಪಾಣಿಯವರು ತಾವು ಮಾಡಿದ ಕೆಲಸದ ಬಗೆಗೆ ಒಂದೆಡೆ ಹೇಳಿಕೊಂಡಿದ್ದಾರೆ.
ನೇದುನೂರಿ ಕೃಷ್ಣಮೂರ್ತಿ ಅವರು ತಮ್ಮ ಗುರುಗಳ ಬಗ್ಗೆ ಹೇಳುತ್ತಾ, “ಅವರು ಆಂಧ್ರಪ್ರದೇಶಕ್ಕೆ ’ಉತ್ತಮ ಸಂಪ್ರದಾಯ ಸಂಗೀತ’ವನ್ನು ನೀಡಿದರು. ಸಂಗೀತವನ್ನು ಕುರಿತ ಅವರ ವಿಶ್ಲೇಷಣೆ ಅದ್ಭುತ. ಅವರು ಹಾಡುವರು, ಬೋಧಿಸುವರು, ವಿಶ್ಲೇಷಿಸುವರು ಮತ್ತು ಸೃಷ್ಟಿಸುವರು. ಆ ರೀತಿಯಲ್ಲಿ ’ಪಾಣಿ ಬಾನಿ’ಯನ್ನು ರೂಪಿಸಿದರು. ಅಲ್ಲಿ ರಾಗಗಳು ಸಮುದ್ರದಂತೆ ವಿಜೃಂಭಿಸುತ್ತವೆ. ಒಮ್ಮೆ ಅವರು ನನ್ನಲ್ಲಿ ’ನನ್ನ ಬೋಧನೆಯಿಂದ ನಿನಗೆ ಏನಾದರೂ ಪ್ರಯೋಜನ ಆಗಿದೆಯಾ?’ ಎಂದು ಕೇಳಿದರು. ಅದಕ್ಕೆ ನಾನು ’ನನಗೆ ದೊರೆತ ಸಂಗೀತ ಕಳಾನಿಧಿಗೆ ನೀವೇ ಕಾರಣ’ ಎಂದು ಹೇಳಿದೆ” ಎಂದು ಕೊಂಡಾಡಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ಅಂಥದ್ದೇ ಉನ್ನತಮಟ್ಟವನ್ನು ಸಾಧಿಸಿದ್ದ ಡಾ| ಪಿನಾಕಪಾಣಿಯವರು ಸಂಗೀತದಿಂದ ಆರ್ಥಿಕವಾಗಿ ಏನನ್ನೂ ಆಪೇಕ್ಷೆ ಪಡಲಿಲ್ಲ; ಶಿಷ್ಯರಿಗೆ ಉಚಿತವಾಗಿಯೇ ಕಲಿಸುತ್ತಿದ್ದರು.
ಶಾಸ್ತ್ರೀಯ ಸಂಗೀತಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ಹಿರಿಯರು ಆ ಕ್ಷೇತ್ರಕ್ಕೆ ಪ್ರವೇಶಿಸಿದ್ದು ಮತ್ತು ಸಂಗೀತವೆಂಬ ಅಪೂರ್ವ ನಿಧಿಯನ್ನು ಬಾಚಿಕೊಂಡ ರೀತಿ ಒಂದೊಂದೂ ವಿಭಿನ್ನ ಮತ್ತು ವಿಶಿಷ್ಟ ಎಂದರೆ ತಪ್ಪಲ್ಲ. ಅವರಲ್ಲಿ ಬಹಳಷ್ಟು ಜನ ಸಂಗೀತಗಾರರ ಕುಟುಂಬದಿಂದ ಬಂದವರೇನೂ ಅಲ್ಲ. ಶ್ರೀಪಾದ ಪಿನಾಕಪಾಣಿ ಅವರೂ ಅಷ್ಟೇ. ಅವರ ತಂದೆ ಶ್ರೀಪಾದ ಕಾಮೇಶ್ವರರಾವ್ ರಾಜಮಂಡ್ರಿಯ ಸರಕಾರಿ ತರಬೇತಿ ಕಾಲೇಜಿನಲ್ಲಿ ಶಿಕ್ಷಣ ವಿಷಯದ ಕಿರಿಯ ಪ್ರಾಧ್ಯಾಪಕರಾಗಿದ್ದರು. ಅವರು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಗ ಶಾಸ್ತ್ರೀಯ ಸಂಗೀತವು ನಾಟಕಗಳ ಪ್ರಮುಖ ಭಾಗವಾಗಿದ್ದುದ? ಸಂಗೀತಕ್ಕೂ ಅವರಿಗೂ ಇದ್ದ ಸಂಬಂಧ. ಶ್ರೀಕಾಕುಲಂ ಜಿಲ್ಲೆಯ ಪ್ರಿಯಾಗ್ರಹಾರಂ ಎಂಬ ಊರಿನಲ್ಲಿ ಅಗಸ್ಟ್ 3, 1913ರಂದು ಪಿನಾಕಪಾಣಿ ಅವರ ಜನನವಾಯಿತು. ತಾಯಿ ಜೋಗಮ್ಮ.
’ಸಂಗೀತ ನನಗಲ್ಲ’ ಎಂದಿದ್ದ
ಬಾಲಕ ಪಿನಾಕಪಾಣಿ ಶಾಸ್ತ್ರೀಯ ಸಂಗೀತದ ವಿರುದ್ಧ ಸಡ್ಡುಹೊಡೆದಿದ್ದನಂತೆ. ಮೈಸೂರು ಬಿ.ಎಸ್. ಲಕ್ಷ್ಮಣರಾವ್ ಎಂಬವರು ಮನೆಯಲ್ಲೇ ಅಕ್ಕನಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸುತ್ತಿದ್ದರೂ, ಪಾಣಿ ಹತ್ತಿರ ಸುಳಿದವನಲ್ಲ; ಅದರಿಂದ ದೂರವೇ ಇರುತ್ತಿದ್ದ. “ಸಂಗೀತ ಹುಡುಗಿಯರಿಗೇ ಹೊರತು ಹುಡುಗರಿಗೆ ಮತ್ತು ಪುರುಷರಿಗೆ ಅಲ್ಲ” ಎಂದು ಹೇಳುತ್ತಿದ್ದ. ಆದರೂ ಸಂಗೀತ ಕಿವಿಯ ಮೇಲೆ ಬೀಳುತ್ತಿತ್ತು. ಕೆಲವುಸಲ ಅಕ್ಕ ಪ್ರಾಕ್ಟೀಸ್ ಮಾಡುವುದನ್ನು ಕೇಳುತ್ತಿದ್ದ. ಆದರೆ ಅದರ ಉದ್ದೇಶವೇನು ಗೊತ್ತೆ? ಅಕ್ಕ ಮಾಡುವ ತಪ್ಪನ್ನು ಸರಿಪಡಿಸುವುದು! ಬಾಲಕ ಪಾಣಿಯ ಗ್ರಹಣ ಮತ್ತು ಧಾರಣಶಕ್ತಿ ಎ? ಹರಿತವಾಗಿತ್ತೆಂಬುದು ಇದರಿಂದ ತಿಳಿಯುತ್ತದೆ.
ಕೊನೆಗೆ ಅಂತೂ ಗುರುಗಳ ಮತ್ತು ತಂದೆಯವರ ಒತ್ತಾಯದ ಮೇರೆಗೆ ಅವನ ಸಂಗೀತಾಭ್ಯಾಸ ಆರಂಭವಾಯಿತು. ಆಗ ಆತನ ವಯಸ್ಸು ೧೧ ವರ್ಷ. ಪಾಠ ಮಾತ್ರ ಅಷ್ಟು ವೇಗವಾಗಿ ನಡೆಯಿತು. ಆರಂಭಿಕ ಪಾಠಗಳಾದ ಬಳಿಕ ಸೀದಾ ತೋಡಿರಾಗದ ’ಗಜಾನನ ಸದಾ ಯನಚು’ ಕೃತಿಯನ್ನು ಎತ್ತಿಕೊಂಡರು; ಅದು ಕೂಡ ಕಲ್ಪನಾಸ್ವರದ ಸಹಿತ. (ಮುಂದೆ ಅವರೇ ಅದಕ್ಕೆ ಸ್ವರಚಿಹ್ನೆ-ನೊಟೇಶನ್ ಹಾಕಿ ಪ್ರಕಟಿಸಿದರು) ಈ ರೀತಿಯಲ್ಲಿ ಸುಮಾರು ಐವತ್ತು ಕೃತಿಗಳ ಪಾಠ ನಡೆಯಿತು; ಐದು ವರು?ಗಳಾಗುವಾಗ ರಾಜಮಂಡ್ರಿಯಲ್ಲಿ ಎಸ್.ಎಸ್. ಎಲ್.ಸಿ. ಮುಗಿಸುವ ಹೊತ್ತಿಗೆ (೧೯೨೯) ಮೈಸೂರು ಲಕ್ಷ್ಮಣರಾಯರ ಪಾಠ ಮುಕ್ತಾಯಗೊಂಡಿತೆನ್ನಬಹುದು. ಲಕ್ಷ್ಮಣರಾಯರು ಸಂತ ತ್ಯಾಗರಾಜರ ನೇರ ಪರಂಪರೆಯಲ್ಲಿ ನಾಲ್ಕನೆ ತಲೆಮಾರಿನವರು; ಗುರುಗಳಿಗೆ ಈ ಶಿಷ್ಯನ ಮೇಲೆ ವಿಶೇಷ ವಾತ್ಸಲ್ಯ ಉಂಟಾಗಿತ್ತು. ಸಂಗೀತ ಕಛೇರಿಗಳಿಗೆ ಇವನನ್ನು ಕರೆದುಕೊಂಡು ಹೋಗುವರು. ಕಛೇರಿಯ ಪ್ರಸ್ತುತಿಯಲ್ಲಿ ಏನಾದರೂ ವಿಶೇ?ವಿದ್ದರೆ ಮರುದಿನ ಆ ಸಂಗೀತಗಾರರನ್ನು ಭೇಟಿ ಮಾಡಿ, ಅದನ್ನು ತನ್ನ ಶಿ?ನಿಗೆ ಕಲಿಸಿ ಎಂದು ಕೇಳುವರು. ಕಲಾವಿದರಿಗೆ ಒಂದೇ ತಾಸಿನಲ್ಲಿ ಆ ಊರಿನಿಂದ ಹೊರಡಬೇಕಿದ್ದರೂ ಅ?ರೊಳಗೆ ಪಾಣಿಗೆ ಆ ವಿಶೇಷವನ್ನು ಕಲಿಸಿಕೊಡುವರು; ಗುರು ಲಕ್ಷ್ಮಣರಾವ್ ಶಿಷ್ಯನ ಬಗ್ಗೆ ಅಂತಹ ಆಸ್ಥೆಯನ್ನು ವಹಿಸಿದರು.
ಶುರು ಮಾಡಿದ್ದು ತಡವಾದರೂ ಪಿನಾಕಪಾಣಿ ತನ್ನನ್ನು ಕರ್ನಾಟಕ ಸಂಗೀತದಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡ. ವೈಯಕ್ತಿಕ ಜೀವನವೂ ಅದೇ ಎಂಬಂತಾಯಿತು. ಶಾಲೆ- ಕಾಲೇಜುಗಳಿಗೆ ಹೋಗುವಾಗ ಸೈಕಲಿನಲ್ಲಿ ಹೋಗುತ್ತಿದ್ದರು. ಆಗ ತನ್ನ ಶ್ರುತಿಗೆ ಹೊಂದಬಹುದಾದ ಸೈಕಲ್ಲನ್ನು ಆರಿಸಿ ಅದಕ್ಕೆ ಶ್ರುತಿಪೆಟ್ಟಿಗೆಯನ್ನು ಜೋಡಿಸಿ ಹಾಡುತ್ತಾ ಹೋಗುತ್ತಿದ್ದರು. ಸಂಖ್ಯೆಗಳನ್ನು ನೆನಪಿಡುವ ಸ್ವಭಾ ಅವರಲ್ಲಿ ಅಂತರ್ನಿಹಿತವಾಗಿತ್ತು. ಉದಾಹರಣೆಗೆ ಯಾವುದೇ ಸಂಖ್ಯೆ ಇದ್ದರೂ ಅದನ್ನು ಮೇಳಕರ್ತ ರಾಗದ ಸಂಖ್ಯೆಗೆ ಹೊಂದಿಸುತ್ತಿದ್ದರು. ತನ್ನ ಟೆಲಿಫೋನ್ ನಂಬರ್ ಎರಡು ಚಾರುಕೇಶಿ, ಜೊತೆಗೆ ರತ್ನಾಂಗಿ ಎನ್ನುವುದು, ಕಾರಿನ ನಂಬ್ರ ಚಕ್ರವಾಕ ಶಂಕರಾಭರಣ ಎಂದು ಗುರುತಿಸುವುದು ಇತ್ಯಾದಿ.
ಕಿವಿತುಂಬ ಕೇಳಿದರು
ಕಾಕಿನಾಡಾದಲ್ಲಿ ಓರ್ವ ಜಮೀನ್ದಾರರು ಇತರ ಕೆಲವು ಭೂಮಾಲೀಕರ ನೆರವಿನೊಂದಿಗೆ ಅಲ್ಲಿನ ’ಸರಸ್ವತಿ ಗಾನಸಭಾ’ದಲ್ಲಿ ಪ್ರತಿವ? ಹತ್ತು ದಿನಗಳ ಸಂಗೀತೋತ್ಸವವನ್ನು ಏರ್ಪಡಿಸುತ್ತಿದ್ದರು. ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಪಿನಾಕಪಾಣಿ ಅಲ್ಲಿನ ಕಛೇರಿಗಳಿಗೆ ಹೋಗಲಾರಂಭಿಸಿದರು. ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಕಾಂಚೀಪುರಂ ನಯನಾ ಪಿಳ್ಳೈ, ಪಾಪಾ ವೆಂಕಟರಾಮಯ್ಯ, ಕುಂಭಕೋಣಂ ರಾಜಮಾಣಿಕ್ಯಂ ಪಿಳ್ಳೈ, ತಿರುಚಿ ಗೋವಿಂದಸ್ವಾಮಿ ಪಿಳ್ಳೈ ಮೊದಲಾದವರ ಸಂಗೀತವನ್ನು ಅವರು ಅಲ್ಲಿ ಕೇಳಿದರು. ಅರಿಯಾಕುಡಿ, ತಿರುಚಿ ಗೋವಿಂದಸ್ವಾಮಿ ಹಾಗೂ ನಯನಾ ಪಿಳ್ಳೈ ಅವರ ಗಾಯನ ಮತ್ತು ಪಳನಿ ಸುಬ್ರಮಣ್ಯ ಪಿಳ್ಳೈ ಅವರ ಖಂಜಿರ ವಾದನಗಳಿಂದ ಯುವಕ ಪಾಣಿ ಪ್ರಭಾವಿತರಾದರು. ಅರಿಯಾಕುಡಿ ಮತ್ತು ಗೋವಿಂದಸ್ವಾಮಿ ಅವರ ಅನುಕರಣೆಯಲ್ಲಿ ಹುಶಾರು ಎನಿಸಿದರು.
ಆದರೆ ತಾನು ಈಗಾಗಲೆ ತುಂಬ ಕೃತಿಗಳನ್ನು ಹಾಡಲು ಕಲಿತಿದ್ದೇನೆ ಎನ್ನುವುದಕ್ಕೂ, ಅರಿಯಾಕುಡಿ ಮತ್ತಿತರ ದಿಗ್ಗಜ ಕಲಾವಿದರು ಹಾಡುವುದಕ್ಕೂ ತಾಳೆ ಆಗುತ್ತಿಲ್ಲ. ಅದು ಬೇರೆಯೇ ಇದೆ. ಅಂದಿನ ಮದ್ರಾಸು ಪ್ರಾಂತದ ತಮಿಳುಭಾಷೆ ಪ್ರದೇಶದಿಂದ ಬಂದವರ ಮಹಾನ್ ಸಂಗೀತವನ್ನು ತಾನೇ ಸ್ವೀಕರಿಸಬೇಕು, ಸ್ವೀಕರಿಸುತ್ತಿದ್ದೇನೆ ಎನ್ನಿಸಿತು. ಆ ಶೈಲಿಯನ್ನು ಕಲಿತು ಅದನ್ನು ಆಂಧ್ರದಲ್ಲಿ ಪ್ರತಿಷ್ಠಾಪಿಸಬೇಕು ಎನ್ನುವ ನಿರ್ಧಾರಕ್ಕೂ ಪಾಣಿ ಬಂದರು; ಆಗ ಅವರ ವಯಸ್ಸು ಸುಮಾರು ೧೬ ವರ್ಷ.
ಆ ಕಾಲದ ಗ್ರಾಮಾಫೋನ್ ರೆಕಾರ್ಡುಗಳಲ್ಲಿ ದೇವದಾಸಿಯರು ಹಾಡಿದ ಪದ ಮತ್ತು ಜಾವಳಿಗಳು ಇರುತ್ತಿದ್ದವು. ಪಾಣಿ ಆ ಹಾಡುಗಳನ್ನು ಬಾಯಿಪಾಠ ಕಲಿತಿದ್ದಲ್ಲದೆ, ಗ್ರಾಮಾಫೋನ್ ರೆಕಾರ್ಡುಗಳಲ್ಲಿ ಬರುತ್ತಿದ್ದ ಇಂದುಬಾಲಾ, ವ್ಯಾಸ್, ಬಾಲಗಂಧರ್ವ ಮತ್ತಿತರರ ಗಾಯನವನ್ನು ಕೇಳಿ ದೋ?ವಿಲ್ಲದೆ ಪುನರುಚ್ಚಾರ ಮಾಡುವುದನ್ನೂ ರೂಢಿಸಿಕೊಂಡರು. ತಂದೆ ಭಾಗವಹಿಸುತ್ತಿದ್ದ ನಾಟಕತಂಡದ ನಾಟಕಗಳನ್ನು ನೋಡುತ್ತಾ ಅವರಿಗೆ ಆಂಧ್ರಪ್ರದೇಶದ ರಂಗಸಂಗೀತವು ಅಂತಃಸ್ಥವಾಯಿತು.
ಯಾವುದನ್ನಾದರೂ ಕೇಳಿ ಅಲ್ಲಿಗೇ ಬಿಡುವುದು ಪಿನಾಕಪಾಣಿ ಅವರ ಜಾಯಮಾನವಲ್ಲ. ತಂಜಾವೂರು ಶೈಲಿಯ ಅಂಶಗಳನ್ನು ಒಟ್ಟು ಸೇರಿಸಿದರು. ಕಛೇರಿ ಅಥವಾ ರೆಕಾರ್ಡುಗಳಲ್ಲಿ ಕೇಳಿದ ಸಂಗೀತಗಳನ್ನು ಬರೆದಿಟ್ಟುಕೊಂಡರು. ಅದರಲ್ಲಿ ಅವರು ಎಷ್ಟೊಂದು ಮುಳುಗಿದ್ದರೆಂದರೆ, “ನನ್ನ ಮಟ್ಟಿಗೆ ಹೇಳುವುದಾದರೆ ಅರಿಯಾಕುಡಿ ಅವರಿಗೆ ಸಮಾನರೆಂದು ಅವರ ಜೊತೆ ಹೇಳಬಹುದಾದ ಇನ್ನೊಬ್ಬರು ಕಾಣಿಸುತ್ತಿಲ್ಲ. ರಾಗಾಲಾಪನೆ, ಕೃತಿ ವಿನಿಕೆ, ನೆರವಲ್, ಸ್ವರಕಲ್ಪನೆ, ಗಮಕ, ಎಲ್ಲದರಲ್ಲೂ ಅವರು ಇತರರಿಗಿಂತ ಮೇಲೆ ನಿಲ್ಲುತ್ತಾರೆ” ಎಂದು ಹೇಳಿದ್ದಿದೆ. “ನಾನು ಕೇಳಿದ ಎಲ್ಲ ಸಂಗೀತಗಾರರ ಒಳ್ಳೆಯ ಅಂಶಗಳನ್ನು ಇರಿಸಿಕೊಂಡು, ನನ್ನ ಸಂಗೀತದಲ್ಲಿ ಅಳವಡಿಸಿಕೊಂಡೆ” ಎಂದು ಪಾಣಿಗಾರು ಹೇಳಿದ್ದಾರೆ.
ಮೈಸೂರು ಮೂಲದ ಗುರು
ಮೊದಲ ಗುರು ಮೈಸೂರು ಲಕ್ಷ್ಮಣರಾಯರು ಪ್ರಯತ್ನಪಟ್ಟು ಪಾಣಿಯನ್ನು ವಯೋಲಿನ್ ದಿಗ್ಗಜ ದ್ವಾರಂ ವೆಂಕಟಸ್ವಾಮಿನಾಯ್ಡು ಅವರ ಶಿಷ್ಯನಾಗಿ ಸೇರಿಸಿದರು. ಕಾಕಿನಾಡಾದಲ್ಲಿ ಇಂಟರ್(ಪಿಯುಸಿ) ಮುಗಿಸಿ ೧೯೩೨ರಲ್ಲಿ ಬೇಸಿಗೆ ರಜೆಯನ್ನು ವಿಜಯನಗರಂನಲ್ಲಿ ಕಳೆಯುವಾಗ ಆ ಸಂದರ್ಭ ಕೂಡಿಬಂತು. ದ್ವಾರಂ ಅವರ ಮನೆಯ ಪುಟ್ಟ ಕೋಣೆಯಲ್ಲಿ ಉಳಿದುಕೊಂಡು, ರಾಗಾಲಾಪನೆಯನ್ನು ಕುರಿತು ವಿವಿಧ ಶಿಷ್ಯರಿಗೆ ಆ ಮಹಾನ್ ಕಲಾವಿದ ಮಾಡಿದ ಪಾಠಗಳನ್ನು ಪಾಣಿ ಹೀರಿಕೊಂಡರು. ಅಲ್ಲಿದ್ದುದು ಕೇವಲ ಮೂರು ತಿಂಗಳಾದರೂ ಆದ ಲಾಭ ಅಪಾರ.
೧೯೩೦ರಲ್ಲಿ ಹೆತ್ತವರು ರಾಮೇಶ್ವರ ಯಾತ್ರೆಗೆ ಹೊರಟರು. ಆಗ ಪಾಣಿ ತಾನು ಯಾತ್ರೆಗೆ ಬರುವುದಿಲ್ಲ, ತನ್ನನ್ನು ಮದ್ರಾಸಿನಲ್ಲಿ ಬಿಡಿ ಎಂದರು. ಆಗ ಡಿಸೆಂಬರಿನ ಸಂಗೀತ ಋತುವಿನ ಸಮಯ. ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಂಡು ಅರಿಯಾಕುಡಿ ಗಾಯನ, ಸ್ವಾಮಿನಾಥ ಪಿಳ್ಳೈ ಅವರ ಕೊಳಲು, ಕಾರೈಕುಡಿ ಸಹೋದರರ ವೀಣೆ, ಸಂಗೀತ ಅಕಾಡೆಮಿಯ ಕಛೇರಿಗಳು – ಎಲ್ಲವನ್ನೂ ಕೇಳಿದರು. ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರ ವಿಳಂಬ ಗಾಯನದ (ಸರಸ್ವತಿ ಮನೋಹರಿ ರಾಗ) ನೆರವಲ್ ಕೇಳಿ ಗೆಳೆಯರ ಮುಂದೆ ಅದರ ಪುನರುಚ್ಚಾರ ಮಾಡಿದರು; ಇತರ ಕೃತಿಗಳಿಗೆ ಅದನ್ನು ಅನ್ವಯಿಸುವುದನ್ನು ಕಲಿತರು. ವಿಳಂಬಕೃತಿಗಳನ್ನು ಹೇಗೆ ಹಾಡುವುದೆಂದು ಮುಸಿರಿ ಗಾಯನದಿಂದ ಕಲಿತರೆ, ಎಡುಪ್ಪು ಅಥವಾ ಪಲ್ಲವಿಯ ನಾಲ್ಕನೇ ಕಾಲದ ಎತ್ತುಗಡೆ (ಟೇಕಾಫ್) ಹೇಗೆ ಎಂಬುದನ್ನು ಚೆಂಬೈ ವೈದ್ಯನಾಥ ಭಾಗವತರ ಗಾಯನದಿಂದ ಕಲಿತರು.
ಎಗ್ಮೋರ್ನಲ್ಲಿ ವೀಣೆ ಧನಮ್ಮಾಳ್ ಅವರ ಶುಕ್ರವಾರ ಸಂಜೆಯ ಕಛೇರಿಯನ್ನು ಕೇಳಿದ್ದು ಪಿನಾಕಪಾಣಿ ಅವರ ಮೇಲೆ ಗಾಢ ಪ್ರಭಾವವನ್ನು ಬೀರಿತು; ಧನಮ್ಮಾಳ್ ಅವರ ಶುಕ್ರವಾರ ಸಂಜೆಯ ಕಛೇರಿಯನ್ನು ಅವರು ಸಾಧ್ಯವಾದಾಗಲೆಲ್ಲ ಕೇಳುತ್ತಿದ್ದರು.
“ಅರಿಯಾಕುಡಿ ಅವರ ಸ್ವರಕಲ್ಪನೆ ವರ್ಣವನ್ನು ಹೋಲುತ್ತದೆ. ಅವರ ದಪ್ಪ ಸ್ವರದಿಂದಾಗಿ ತುಂಬ ರಾಗಭಾವಗಳು ಇದ್ದಂತೆ ತೋರುತ್ತವೆ” ಎಂದು ದ್ವಾರಂ ಅವರಲ್ಲಿ ಒಮ್ಮೆ ಹೇಳಿದ ಪಿನಾಕಪಾಣಿ ಅದನ್ನು ಕೆಲವು ಸ್ವರಗಳಲ್ಲಿ ಹಾಡಿ ತೋರಿಸಿದರು. ಆಗಲೇ ದ್ವಾರಂ ಅವರಿಗೆ ಈ ಯುವಕ ತುಂಬ ಮುಂದೆ ಹೋಗುತ್ತಾನೆ ಎನಿಸಿತಂತೆ. ಗಮಕ ಗಾಯನದಲ್ಲಿ ಅರಿಯಾಕುಡಿ ಅವರ ಸಾರಗ್ರಾಹಿತ್ವ (ಕ್ರಿಸ್ಪ್ನೆಸ್) ಪಾಣಿ ಅವರಿಗೆ ಇಷ್ಟ. ಪಾಣಿ ಅವರ ಗಾಯನವನ್ನು ಕೇಳಿದ ಮುಡಿಕೊಂಡನ್ ವೆಂಕಟರಾಮ ಅಯ್ಯರ್, “ಸರಸಾಂಗಿ (ರಾಗ)ಯನ್ನೇ ಇಷ್ಟು ಆಳವಾಗಿ ಚಿತ್ರಿಸುವ ಇವರು ತೋಡಿ ಅಥವಾ ಶಂಕಾರಾಭರಣವನ್ನು ಏನು ಮಾಡಬಹುದು?” ಎಂದು ಉದ್ಗರಿಸಿದ್ದರು. ಹಾಗೆಯೆ ಖ್ಯಾತ ಪಿಟೀಲುಪಟು ಟಿ. ಚೌಡಯ್ಯ “ಬೇರೆಯವರು ಇಡೀ ಜೀವಮಾನದಲ್ಲಿ ಕಲಿಯಬಹುದಾದದ್ದನ್ನು ಈ ಮನು? ಇ? ಸಣ್ಣ ಪ್ರಾಯದಲ್ಲಿ ಕಲಿತು ತೋರಿಸಿದ್ದಾರೆ” ಎಂದು ಮೆಚ್ಚುಗೆ ಸೂಚಿಸಿದ್ದರು.
ಪಾಣಿಗಾರು ಎಂಬಿಬಿಎಸ್ ಪದವಿ ಶಿಕ್ಷಣಕ್ಕಾಗಿ ವಿಶಾಖಪಟ್ಟಣದ ವೈದ್ಯಕೀಯ ಕಾಲೇಜಿಗೆ ಸೇರಿದಾಗ ಅವರ ಶಾಸ್ತ್ರೀಯಸಂಗೀತ ಕಲಿಕೆಗೆ ಸ್ವಲ್ಪ ಹಿನ್ನಡೆ ಉಂಟಾಯಿತು ಎಂಬುದು ಒಂದು ವಾದ. ಆದರೆ ವಿವರಗಳನ್ನು ಗಮನಿಸಿದರೆ ಹಾಗೇನೂ ಆಗಲಿಲ್ಲ ಎನಿಸುತ್ತದೆ. ಮುಂಜಾವು ನಾಲ್ಕು ಗಂಟೆಗೆ ಎದ್ದು ಒಬ್ಬ ಹಾಸ್ಟೆಲ್ಮೇಟ್ ಜೊತೆಗೆ ಹಾಸ್ಟೆಲಿನ ಆವರಣ ಮತ್ತು ಸಮೀಪದ ಕಡಲತೀರ(ಬೀಚ್)ದಲ್ಲಿ ಅಭ್ಯಾಸ ಮಾಡುತ್ತಿದ್ದರು. ಕಛೇರಿಗಳನ್ನು ಕೇಳುವುದು, ಕೇಳಿದುದರ ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಳ್ಳುವುದಂತೂ ನಡೆದೇ ಇತ್ತು. ೧೯೩೯ರಲ್ಲಿ ಎಂಬಿಬಿಎಸ್ ಪದವಿಯನ್ನು ಗಳಿಸಿದ್ದಾಯಿತು. ಆ ಹೊತ್ತಿಗೆ ಅವರು ಬಾಡಿಬಿಲ್ಡರ್ ಮತ್ತು ಟೆನ್ನಿಸ್ ಆಟಗಾರರಾಗಿದ್ದರು.
ಕಾಲೇಜಿನ ಉಪನ್ಯಾಸಕರು ಸಂಘಟಿಸಿದ ಮೊದಲ ದೊಡ್ಡ ಸಭಾದ ವೇಳೆ ಶ್ರೋತೃಗಳಲ್ಲಿ ಟಿ. ಚೌಡಯ್ಯ ಕೂಡ ಇದ್ದರು. ಯುವಕ ಪಾಣಿಯನ್ನು ಚೌಡಯ್ಯ ಮೈಸೂರಿಗೆ ಆಮಂತ್ರಿಸಿದರು. ಮೈಸೂರಿನಲ್ಲಿ ಅವರ ಅತಿಥಿಯಾಗಿ ನಿಂತ ಪಿನಾಕಪಾಣಿ ಅಲ್ಲೂ ಸಂಗೀತಾಭ್ಯಾಸ ನಡೆಸಿದರು. ಅವರು ಹಾಡುವಾಗ ಚೌಡಯ್ಯ ಪಿಟೀಲು ನುಡಿಸುತ್ತಿದ್ದರು. ಮದ್ರಾಸಿನಲ್ಲಿ ನೆಲೆಸಿದ ಒಂದು ತೆಲುಗು ಕುಟುಂಬದವರು ಚೌಡಯ್ಯನವರ ಮುಂದೆ ಹಾಡುವ ಸಲುವಾಗಿ ಮೈಸೂರಿಗೆ ಬಂದಿದ್ದರು. ಜೊತೆಗೆ ಅವರ ಇಬ್ಬರು ಹೆಣ್ಣುಮಕ್ಕಳಿದ್ದು, ಅವರಲ್ಲಿ ಒಬ್ಬಾಕೆಯನ್ನು ಪಿನಾಕಪಾಣಿ ವಿವಾಹವಾದರು. ೧೯೪೦ರಲ್ಲಿ ಅವರ ಮದುವೆ ನೆರವೇರಿತು. ಮದ್ರಾಸಿನ ಶ್ರೀರಂಗ ರಾಮಾನುಜ ಅಯ್ಯಂಗಾರ್ ಮತ್ತು ಟಿ. ವಾಸುದೇವನ್ ಅವರನ್ನು ಕೂಡ ಪಿನಾಕಪಾಣಿ ತಮ್ಮ ವಿದ್ಯಾಗುರುಗಳೆಂದು ಒಪ್ಪಿಕೊಂಡಿದ್ದರು.
ಸಂಗೀತ ಕಲಿಕೆ – ಹಿನ್ನೋಟ
ತಮ್ಮ ಸಂಗೀತ ಕಲಿಕೆಯನ್ನು ಕುರಿತ ಒಂದು ಹಿನ್ನೋಟದಲ್ಲಿ ಪಿನಾಕಪಾಣಿ, “ದೈವಸಂಕಲ್ಪದಿಂದ ನನಗೆ ಸಂಗೀತದಲ್ಲಿ ಪ್ರೀತಿ ಬಂತು; ನನ್ನೊಂದಿಗೇ ಬೆಳೆಯುತ್ತಾ ಬಂತು. ರಾಜಮುಂಡ್ರಿಯಲ್ಲಿ ಐದು ವರ್ಷ ಮೈಸೂರು ಬಿ.ಎಸ್. ಲಕ್ಷ್ಮಣರಾವ್ ಅವರಿಂದ ಆರಂಭಿಕ ಶಿಕ್ಷಣವನ್ನು ಪಡೆದೆನಾದರೂ ನನ್ನದು ವ್ಯವಸ್ಥಿತ ಕಲಿಕೆಯಲ್ಲ. ಅವರು ಶಿಕ್ಷಕರಾದರೂ ಕಛೇರಿ ಕಲಾವಿದರಲ್ಲ. ಮುಂದೆ ದ್ವಾರಂ ವೆಂಕಟಸ್ವಾಮಿ ಅವರ ಬಳಿ ಸ್ವಲ್ಪ ಕಲಿತೆ. ಕರ್ನಾಟಕ ಸಂಗೀತದಲ್ಲಿ ಗರಿಷ್ಠ ಸಾಧನೆ (ಬೆಂಚ್ಮಾರ್ಕ್) ಮಾಡಿದ ತಂಜಾವೂರು ಬಾನಿಗಾಗಿ ನಾನು ತುಂಬ ಕಲಿಯಬೇಕಿತ್ತು. ರಾಜಮುಂಡ್ರಿ ಮತ್ತು ಕಾಕಿನಾಡಾದಲ್ಲಿ ಸಾಧ್ಯವಾದ? ಕಛೇರಿಗಳನ್ನು ಕೇಳುತ್ತಿದ್ದೆ. ರಾಗಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ; ವಿನಿಕೆಯ ವಿಧಾನವನ್ನು ಗಮನಿಸುತ್ತಿದ್ದೆ. ಮನೆಗೆ ಬಂದು ಆ ಬಗ್ಗೆ ಯೋಚಿಸುತ್ತಿದ್ದೆ. ಮತ್ತು ಸಾಧ್ಯವಾದಷ್ಟು ನೆನಪಿಟ್ಟುಕೊಳ್ಳುತ್ತಿದ್ದೆ. ಇದು ನನ್ನ ಸಂಗೀತಸಾಧನೆಯ ಮೊದಲ ಹಂತ” ಎಂದಿದ್ದಾರೆ.
ಮುಂದುವರಿದು, “ವಿಶಾಖಪಟ್ಟಣದ ಆಂಧ್ರ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿತು. ವೈದ್ಯಕೀಯದ ಮೇಲೆ ಏಕಾಗ್ರತೆ ಸಾಧಿಸುವುದಕ್ಕಾಗಿ ಸ್ವಲ್ಪ ಕಾಲ ಸಂಗೀತಪ್ರಪಂಚದಿಂದ ಹೊರಗೆ ಇರಬೇಕಾಯಿತು. ಆದರೆ ಕಛೇರಿಗೆ ಹೋಗುವುದನ್ನು ನಿಲ್ಲಿಸಲಿಲ್ಲ. ಅದು ನನಗೆ ಬಹುದೊಡ್ಡ ಕಲಿಕೆ ಪ್ರಕ್ರಿಯೆಯಾಗಿತ್ತು. ದಕ್ಷಿಣ (ತಂಜಾವೂರು) ಶೈಲಿಯ ಗಾಯನ ನನಗೆ ಅರ್ಥವಾಗುತ್ತಾ ಇತ್ತು. ಮುಂದಿನ ಹೆಜ್ಜೆಯಾಗಿ ಸ್ವತಃ ಕಲಿಯತೊಡಗಿದೆ. ಸಹಪಾಠಿಗಳ ಮುಂದೆ ಹಾಡಿ ನನ್ನ ಹಾಡುಗಾರಿಕೆಯ ಬಗೆಗಿನ ಅವರ ಅಭಿಪ್ರಾಯವನ್ನು ತಿಳಿಯುತ್ತಿದ್ದೆ. ಈ ಫೀಡ್ಬ್ಯಾಕ್ನ ಬಲದಿಂದ ಯುವಗಾಯಕರಿಗೆ ಕಲಿಸುವುದನ್ನೂ ಮಾಡುತ್ತಿದ್ದೆ. ಪರಿಣಾಮವಾಗಿ ಶ್ರೋತೃಗಳ ಮುಂದೆ ಆತ್ಮವಿಶ್ವಾಸದಿಂದ ಹಾಡಲು ಸಾಧ್ಯವಾಯಿತು” ಎಂದು ವಿವರಿಸಿದ್ದಾರೆ.
“ನಿಧಾನವಾಗಿ ಸಂಗೀತದ ಬಗೆಗಿನ ನನ್ನ ಪ್ರೀತಿ ನನ್ನ ಗುರಿಯ ರೂಪ ತಾಳಿತು; ಮುಖ್ಯವಾಗಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಕಛೇರಿಗಳು ಮತ್ತು ತಮಿಳುನಾಡಿನ ಸಂಗೀತಗಾರರನ್ನು ಕೇಳಿದ ಬಳಿಕ ವಿದ್ಯ್ಯಾರ್ಥಿಗಳಿಗೆ ತರಬೇತಿ ನೀಡಿ, ಅವರನ್ನು ತಮಿಳುನಾಡಿನ ಸಂಗೀತಗಾರರಿಗೆ ಸಮಾನರನ್ನಾಗಿ ಮಾಡಲು ನಿರ್ಧರಿಸಿದೆ.”
“ವೈದ್ಯಕೀಯ ವೃತ್ತಿಯಲ್ಲಿ ಸಾಕಷ್ಟು ಕೆಲಸ ಇತ್ತು. ಸಂಗೀತದ ಶಿ?ರಿಗೆ ಉಚಿತವಾಗಿ ಕಲಿಸುತ್ತಿದ್ದೆ. ಬಡವರಿಗೆ ಚಿಕಿತ್ಸೆ ಕೂಡ ಉಚಿತ. ನನ್ನ ಶಿ?ರು ಮದ್ರಾಸಿನಲ್ಲಿ ಮೆಚ್ಚುಗೆ ಗಳಿಸಬೇಕೆಂದು ಬಯಸಿದೆ. ವಿದ್ಯಾರ್ಥಿಗಳೆಂದರೆ ನೂಕುಲ, ನೇದುನೂರಿ, ವೋಲೇಟಿ, ಶ್ರೀರಂಗಂ ಗೋಪಾಲರತ್ನಂ ಮೊದಲಾದವರು. ಅವರೆಲ್ಲ ’ಸಂಗೀತ ಕಳಾನಿಧಿ’ ಗಳಿದ್ದಾರೆ. ನನ್ನ ಪ್ರಸಿದ್ಧ ಶಿಷ್ಯರು ನಾನು ಬಯಸಿದ ಶೈಲಿಯನ್ನು ಆಂಧ್ರದಲ್ಲಿತರಲು ಸಮರ್ಥರಾದರು. ನೊಟೇಶನ್ ಇಲ್ಲದ ಕೃತಿಗಳಿಗೆ ಅದನ್ನು ಹಾಕಿದೆ. ಆಸ್ಪತ್ರೆಯ ಸುಪರಿಂಟೆಂಡೆಂಟ್ ಹುದ್ದೆಯಿಂದ ನಿವೃತ್ತಿಗೊಂಡ ಅನಂತರ ’ಸಂಗೀತ ಸೌರಭಂ’ನ ನಾಲ್ಕು ಸಂಪುಟಗಳನ್ನು ರಚಿಸಿದೆ. ಇದರಿಂದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಆಗಬಹುದು.”
“ಈಗಲೂ ಸಂಗೀತವೇ ನನ್ನ ಉಸಿರಾಗಿದೆ. ಒಬ್ಬ ವೈದ್ಯನಾಗಿ ಹೇಳುತ್ತೇನೆ: ಸಂಗೀತವು ಪ್ರಾಣಾಯಾಮದಂತೆ; ಅದರಲ್ಲಿ ಉಸಿರಾಟದ ನಿಯಂತ್ರಣ ಮುಖ್ಯ. ಇಂದು ನಾನು ತೃಪ್ತ. ನನ್ನ ಆಶಯ (ವಿಷನ್) ಪೂರ್ಣಗೊಂಡಿದೆ. ಇಂದು ತೆಲುಗು ಸಂಗೀತಗಾರರು ಶ್ರೇಷ್ಠರಲ್ಲಿ ಶ್ರೇಷ್ಠರೆನಿಸಿದ್ದಾರೆ. ಇದು ನನಗೆ ತುಂಬ ಸಂತೋಷ ತರುವ ವಿಷಯ.”
ಸೂಕ್ಷ್ಮಗಳ ಅಳವಡಿಕೆ
ಸಾಮಾನ್ಯವಾಗಿ ಹಾಡುವ ಕೃತಿಗಳಿಗೆ ಕೂಡ ಡಾ| ಪಿನಾಕಪಾಣಿ ವಿಶೇಷವಾದ ಸೂಕ್ಷ್ಮಗಳನ್ನು ಅಳವಡಿಸುತ್ತಿದ್ದರು. ಅದರಿಂದ ಒಂದೆಡೆ ಸಂತೋ?ವಾದರೆ ಇನ್ನೊಂದೆಡೆ ಅಲ್ಲೇ ಶಿಕ್ಷಣವೂ ಸಿಗುತ್ತಿತ್ತು. ಪದಂನಲ್ಲಿ ಪಾಣಿಗಾರು ಎತ್ತಿದ ಕೈ. ವೋಲೇಟಿ ಜೊತೆ ಅವರು ಸಂಗೀತದ ಈ ಅಂಗವನ್ನು ಜನಪ್ರಿಯಗೊಳಿಸಿದರು. ವೋಲೇಟಿ ಅವರ ಅಕಾಲಮರಣ (೨೯-೧೨-೧೯೮೯) ಪಾಣಿ ಅವರಿಗೆ ತುಂಬ ದುಃಖ ಉಂಟುಮಾಡಿತ್ತು. ಡಾ| ಪಾಣಿ ಅವರು ಕಲಿಸಿದಂತೆಯೇ ಹಾಡುತ್ತಿದ್ದ ವೋಲೇಟಿ ಗುರುಗಳು ಬಯಸಿದಂತಹ ಸೂಕ್ಷ್ಮಗಳ ಮರುಸೃಷ್ಟಿಯಲ್ಲಿ ಇತರ ಶಿಷ್ಯರಿಗಿಂತ ಮುಂದಿದ್ದರು.
ಆಲಾಪನೆಯನ್ನು ಡಾ| ಪಿನಾಕಪಾಣಿ ಆಧಾರ?ಡ್ಜದಲ್ಲಿ ಶುರು ಮಾಡುತ್ತಿರಲಿಲ್ಲ; ತುಂಬ ತಡವಾಗಿ ಆರಂಭಿಸುತ್ತಿದ್ದರು. ಇದು ಗಾಯಕರಿಗೆ ಸುಲಭವಾಗಿ ದಕ್ಕುವಂಥದ್ದಲ್ಲ. ರಾಗದಲ್ಲಿ ತಜ್ಞತೆ ಬರುವುದು ಕೀರ್ತನೆಗಳಿಂದ ಎಂಬುದು ಅವರ ಅಭಿಪ್ರಾಯ. ಅಪರೂಪದ ರಾಗಕ್ಕೆ ಹೆಚ್ಚಿನ ವಿವರಣೆ ಬೇಕಾದಾಗ ಪಾಣಿಗಾರು ಸ್ವರಜತಿಯಿಂದ ಆರಂಭಿಸುತ್ತಿದ್ದರು; ಮತ್ತೆ ವರ್ಣ ಅಥವಾ ಆ ರಾಗದಲ್ಲಿ ಒಂದು ಬಿಗಿಯಾದ ಕೃತಿ.
ದ್ವಾರಂ ಸಲಹೆಯ ಮೇರೆಗೆ ಡಾ| ಪಾಣಿ ಬಹಳ? ನಾಗಸ್ವರಗಳನ್ನು ಕೇಳಿದರು. ಅರಿಯಾಕುಡಿ ಮತ್ತು ಧನಮ್ಮಾಳ್ಗೆ ಇದು ಹೆಚ್ಚುವರಿ ಸೇರ್ಪಡೆ. “ಕೆಲವು ಸಲ ಗುರುಗಳು ಹಾಡಿದ್ದನ್ನು ಕೇಳುವಾಗ ದೊಡ್ಡದಾದ ವೀಣೆಯ ಸ್ವರ ಕೇಳಿದಂತೆ ತೋರುತ್ತದೆ” ಎಂದು ನೇದುನೂರಿ ಒಂದೆಡೆ ಹೇಳಿದ್ದಾರೆ. ಡಾ| ಪಾಣಿ ಅವರ ಆಲಾಪನೆ ತಂಜಾವೂರು ಬಾನಿಗೆ ಅನುಗುಣವಾಗಿ ಇಡೀ ಪ್ಯಾಕೇಜ್ ಹೊರತು ಸ್ವರಗುಚ್ಛ (ಫ್ರೇಸ್) ಮಾದರಿಯ ಪ್ರಯತ್ನ ಅಲ್ಲ. ರಾಗಾಲಾಪನೆಯ ಪೂರ್ವಾಂಗ-ಉತ್ತರಾಂಗ ಮಾದರಿಯದ್ದು. ರಾಜರತ್ನಂ ಪಿಳ್ಳೈ ಮತ್ತು ಅರಿಯಾಕುಡಿ ಅವರಂತೆ ರಾಗಂ-ತಾನಂ, ನೆರವಲ್ ಮತ್ತು ಕಲ್ಪನಾ ಸ್ವರಗಳಲ್ಲಿ ಡಾ| ಪಾಣಿ ಅವರ ರಾಗಭಾವ ಆಳವಾದ ನದಿಯಂತೆ ಹರಿಯುತ್ತಿತ್ತು. ಹೊಸಹೊಸ ಮನೋಧರ್ಮಗಳಿಗೆ ಚಾಚುತ್ತಿತ್ತು. ಸಾಂಪ್ರದಾಯಿಕ ರಾಗಗಳಾದ ತೋಡಿ, ಬೇಗಡೆ, ಕಾಂಬೋಧಿ, ಸುರಟಿಗಳು ಅವರಿಗೆ ಇ?. ರಘುಪ್ರಿಯ, ಯಾಗಪ್ರಿಯ, ನಾಸಿಕಾಭೂ?ಣದಂತಹ ಅಪರೂಪದ ವಿವಾದಿ ರಾಗಗಳನ್ನು ಹಾಡುವುದು ಕೂಡ ಅವರಿಗೆ ಇಷ್ಟ; ವಿವಾದಿ ಸ್ವರದ ಮೇಲೆ ಕೇಂದ್ರೀಕರಿಸದೆ ಅವುಗಳನ್ನು ಘನರಾಗಗಳಂತೆಯೇ ಹಾಡಬೇಕು ಎಂಬುದು ಅವರ ನಿಲವು.
“ಪರಿಪೂರ್ಣವಾದ ಸಂಗೀತವನ್ನು ಕಲಿಯಬೇಕು ಮತ್ತು ಹಾಡಬೇಕೆಂದು ನಾನು ಬಯಸಿದೆ. ಅದು ನನ್ನ ಏಕೈಕ ಗುರಿಯಾಗಿತ್ತು. ಅದರ ಮುಂದೆ ಉಳಿದ ಎಲ್ಲವೂ ಗೌಣ. ಶಾಸ್ತ್ರೀಯ ಸಂಗೀತವು ಸಂಗೀತವೆನಿಸಲು ಬೇಕಾದ ವ್ಯಾಕರಣ ಮತ್ತು ಬಂಧಗಳ ಪರಂಪರೆಯನ್ನು ಬದಿಗೊತ್ತಿ ತರುವ ಭಕ್ತಿ ಸಲ್ಲದು. ಶಾಸ್ತ್ರೀಯ ಸಂಗೀತ ಒಂದು ಬಿಗಿಯಾದ ಚೌಕಟ್ಟಾಗಿದ್ದು, ಅದನ್ನು ಹಾಳುಮಾಡುವುದು ಸಲ್ಲದು. ಪರಿಪೂರ್ಣತೆಯಿಂದ ಮಾತ್ರ ಮನು? ಪರಿಪೂರ್ಣನಾಗುತ್ತಾನೆ” ಎಂದು ಡಾ| ಪಿನಾಕಪಾಣಿ ತಮ್ಮ ಮನದಾಳವನ್ನು ತೆರೆದಿಟ್ಟಿದ್ದರು. ಆದರೆ ಅದೇ ಹೊತ್ತಿಗೆ ಅವರು, ’ಸಂಗೀತವು ದಿವ್ಯವಾದದ್ದು – ಆರಾಧನೆ ಎನಿಸುವಂಥದ್ದು. ನಮ್ಮ ಸಂತೋಷಕ್ಕಾಗಿ ಹಾಡಿಕೊಳ್ಳಬೇಕು” ಎಂದು ಕೂಡ ಹೇಳಿದ್ದಾರೆ. ’ಸಂಗೀತವು ಶಬ್ದದ ನೃತ್ಯ’ ಎಂಬುದು ಅವರ ಒಂದು ಆಕ?ಕ ಮತ್ತು ಅರ್ಥಪೂರ್ಣ ಮಾತು.
ವೃತ್ತಿಜೀವನದಲ್ಲಿ
ಸ್ನಾತಕೋತ್ತರ ಶಿಕ್ಷಣದಿಂದ ೧೯೪೫ರಲ್ಲಿ ಎಂ.ಡಿ. ಪದವಿಯನ್ನು ಗಳಿಸಿದ ಡಾ| ಎಸ್. ಪಿನಾಕಪಾಣಿ ಅವರು ಮೊದಲಿಗೆ ತಾವು ಕಲಿತ ವಿಶಾಖಪಟ್ಣಂ ಮೆಡಿಕಲ್ ಕಾಲೇಜಿನಲ್ಲೇ ಉದ್ಯೋಗಕ್ಕೆ ಸೇರಿದರು. ನಾಲ್ಕು ವರ್ಷ ಸೇವೆ ಪೂರೈಸಿದರೂ ಹುದ್ದೆ ಕನ್ಫರ್ಮ್ ಆಗಲಿಲ್ಲ; ಅದಕ್ಕೆ ಕಾರಣ ಜಾತಿ-ಆಧಾರದ ಲೆಕ್ಕಾಚಾರ ಇರಬಹುದು. ಅಲ್ಲಿ ರಾಜೀನಾಮೆ ನೀಡಿ, ರಾಜಮುಂಡ್ರಿಗೆ ಹೋದರು. ಅಲ್ಲಿ ನೇದುನೂರಿ ಇವರ ಶಿ?ರಾದರು. ಎರಡು ವರ್ಷ ಅಲ್ಲಿದ್ದು, ೧೯೫೧ರಲ್ಲಿ ಪುನಃ ವಿಶಾಖಪಟ್ಟಣದಲ್ಲಿ ಸೇರಿಕೊಂಡರು. ಮದ್ರಾಸ್ ಪ್ರಾಂತದಿಂದ ಹೊರಬಂದು ಹೊಸ ಆಂಧ್ರ ರಚನೆಯಾದಾಗ ಅದರ ಸೇವೆಗೆ ಸೇರಿಕೊಂಡರು. ೧೯೫೭ರಲ್ಲಿ ಕರ್ನೂಲಿಗೆ ವರ್ಗಾವಣೆಯಾಗಿ ೧೧ ವ? ಅಲ್ಲಿ ಸೇವೆ ಪೂರೈಸಿ ನಿವೃತ್ತಿ ಹೊಂದಿದರು; ಕರ್ನೂಲಿನಲ್ಲಿ ನೆಲೆ ನಿಂತರು.
ಡಾಕ್ಟರ್ ಆಗಿದ್ದಾಗಲೂ ಅವರು ಶಿಷ್ಯರಿಗೆ ಸಂಗೀತಬೋಧನೆಯನ್ನು ಮಾಡದೆ ಬಿಟ್ಟವರಲ್ಲ. ನಿವೃತ್ತಿಯಿಂದ ದಿನದ ೨೪ ತಾಸುಗಳನ್ನು ಸಂಗೀತ ಆವರಿಸಿಕೊಂಡಿತು. ಆ ದಿನಗಳಲ್ಲಿ ಶಾಸ್ತ್ರೀಯ ಸಂಗೀತದ ಪ್ರಮುಖ ವೇದಿಕೆಯಾಗಿದ್ದ ಆಕಾಶವಾಣಿಗೆ ೧೯೩೮ರಲ್ಲಿ ಡಾ| ಪಾಣಿ ಅವರ ಪ್ರವೇಶವಾಯಿತು. ಆ ನಂಟು ೨೦೦೧ರ ತನಕವೂ ಮುಂದುವರಿಯಿತು. ದೆಹಲಿ, ಮುಂಬಯಿ, ಬೆಂಗಳೂರು, ಆಂಧ್ರ, ತಮಿಳುನಾಡಿನ ವಿವಿಧ ಕಡೆ ಅವರ ಕಛೇರಿಗಳು ವ್ಯಾಪಕವಾಗಿ ಜರಗಿದವು. ’ಹಾಡುವ ಡಾಕ್ಟರ್’ ಎಂದು ಜನ ಅವರನ್ನು ಪ್ರೀತಿಯಿಂದ ಕರೆದರು.
ಜಗ ಮಲಗಿದಾಗ ಪಾಠ
ಡಾ| ಪಿನಾಕಪಾಣಿ ಅವರ ಸಂಗೀತಜೀವನ ಅಥವಾ ಸಂಗೀತಯಾತ್ರೆಯಲ್ಲಿ ಶಿ?ರೊಂದಿಗಿನ ಅವರ ಒಡನಾಟ ಮಹತ್ತ್ವಪೂರ್ಣವಾದದ್ದು. ಅದೊಂದು ಅತ್ಯಂತ ಆಪ್ತ ಮತ್ತು ಗಾಢವಾದ ಸಂಬಂಧ. ಸಂಶಯಪರಿಹಾರ ಮತ್ತು ಮಾರ್ಗದರ್ಶನಗಳಿಗಾಗಿ ಶಿ?ರು ಕೊನೆಯತನಕವೂ ಅವರ ಬಳಿಗೆ ಹೋಗುತ್ತಿದ್ದರು. ನೇದುನೂರಿ ತಮ್ಮ ಗುರುಗಳ ಬಗ್ಗೆ ಹೀಗೆ ಹೇಳುತ್ತಾರೆ: “ತ್ಯಾಗರಾಜರು ಸಂಗೀತದ ಮೂಲಕ ಸಮಾಜ ಮತ್ತು ಮಾನವಜೀವನಗಳನ್ನು ಶುದ್ಧಗೊಳಿಸಬಯಸಿದರು. ಡಾ| ಪಾಣಿಯವರ ಒಂದೇ ಗುರಿ ಭವಿ?ದ ಜನಾಂಗಕ್ಕೆ ಸಂಗೀತಜ್ಞಾನದ ದೊಡ್ಡ ಭಂಡಾರವನ್ನು ಬಿಟ್ಟು ಹೋಗುವುದು. ಇಲ್ಲವಾದರೆ ಅದು ಒಂದೇ ತಲೆಮಾರಿನಲ್ಲಿ ಅಳಿದುಹೋಗುತ್ತದೆ ಎಂಬುದವರ ಆತಂಕವಾಗಿತ್ತು.”
ತಮ್ಮ ಕಲಿಕೆಯ ಅನುಭವ ಹೇಗಿತ್ತೆಂದು ಕೇಳಿದರೆ ನೇದುನೂರಿ “ಬೋಧನೆಗೆ ನಿಗದಿತ ಸಮಯವಿರಲಿಲ್ಲ. ಜಗತ್ತಿನ ಸಾಮಾನ್ಯ ಭಾ?ಯಲ್ಲಿ ಹೇಳುವುದಾದರೆ ಅದು ಸಭ್ಯ (ಡೀಸೆಂಟ್) ಸಮಯ ಆಗಿರಲಿಲ್ಲ. ಅವರಿಗೆ ಮಧ್ಯರಾತ್ರಿಯ ಹೊತ್ತಿಗೆ ಕಲಿಸುವ ಮೂಡ್ ಬರುವುದೂ ಇತ್ತು. ಬೆಳಗಿನ ಜಾವ ೩ ಗಂಟೆಯವರೆಗೂ ಕಲಿಸುವರು. ಆಗ ಸಿಕಂದರಾಬಾದ್-ದೋರ್ನಕಲ್ ಎಕ್ಸ್ಪ್ರೆಸ್ ರೈಲಿನ ಕೂಗು ಕೇಳಿಸುತ್ತಿತ್ತು. ಆಗ ನಮ್ಮ ಸಂಗೀತ ಪ್ರಪಂಚದಿಂದ ಕಳಚಿಕೊಂಡು ಮಲಗಲು ಹೋಗುತ್ತಿದ್ದೆವು. ಕ್ರಿಕೆಟ್, ಟೆನ್ನಿಸ್, ವೈದ್ಯಕೀಯ, ಸಂಗೀತ, ಕಾವ್ಯ – ಹೀಗೆ ಜಗತ್ತಿನ ಎಲ್ಲ ವಿ?ಯಗಳ ಕುರಿತೂ ಅವರು ಮಾತನಾಡುತ್ತಿದ್ದರು. ನಾನು ಕುರಿಯಂತೆ ಅವರ ಹಿಂದೆ ಹೋಗುತ್ತಾ ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದೆ. ಕೆಲವು ಸಲ ನಿದ್ರೆ ಒತ್ತರಿಸಿಕೊಂಡು ಬರುವುದೂ ಇತ್ತು. ತಮಿಳುನಾಡಿನ ಮಹಾನ್ ಸಂಗೀತ ವಿದ್ವಾನರ ಬಗ್ಗೆ ಅವರು ಉತ್ಸಾಹದಿಂದ ಹೇಳುತ್ತಿದ್ದರು. ಸಂಗೀತದ ಎಲ್ಲ ವಿ?ಯ ಅವರ ಬೆರಳ ತುದಿಯಲ್ಲಿದ್ದವು. ಅವರು ವೃತ್ತಿಯಲ್ಲಿ ಡಾಕ್ಟರ್. ಪ್ರವೃತ್ತಿಯಲ್ಲಿ ಸಂಗೀತಗಾರ. ಅವರು ಪ್ರತಿಯಾಗಿ ನಮ್ಮಿಂದ ಏನನ್ನೂ ಬಯಸುತ್ತಿರಲಿಲ್ಲ” ಎಂದು ಕೊಂಡಾಡಿದ್ದಾರೆ.
ನೇದುನೂರಿ ಅವರ ಶಿ?ರಾದ ಮಲ್ಲಾಡಿ ಸಹೋದರರು ಈ ಪರಮ ಗುರುವಿನಿಂದಲೂ ಸಾಕ? ಕಲಿತಿದ್ದಾರೆ. “ನಮಗೆ ಎಷ್ಟು ಸ್ವೀಕರಿಸಲು ಸಾಧ್ಯ ಎಂದು ನೋಡಿ ಕಲಿಸುತ್ತಿದ್ದರು. ದಿನಕ್ಕೆ ಎಂಟು ಗಂಟೆ ಪಾಠ ಮಾಡುತ್ತಿದ್ದರು. ನಮ್ಮ ಸ್ವರ, ಅನುಸ್ವಾರಗಳನ್ನು ತಿದ್ದಿದರು. ಸುಮಾರು ೨೦೦ ಕೃತಿಗಳನ್ನು ಕಲಿಸಿದರು. ಆಗಲೇ ಅವರ ’ಸಂಗೀತ ಸೌರಭಂ’ ಪ್ರಕಟಗೊಂಡಿತು. ತಿರುಪತಿ ತಿರುಮಲ ದೇವಸ್ಥಾನ(ಟಿಟಿಡಿ) ದವರು ಪ್ರಕಟಿಸಿದ ನಾಲ್ಕು ಸಂಪುಟಗಳ ಅದರಲ್ಲಿ ೧೨೦೦ಕ್ಕೂ ಅಧಿಕ ಕೃತಿಗಳು ನೊಟೇಶನ್ ಸಹಿತ ಇವೆ. ಆ ಗ್ರಂಥ ನಮಗೆ ಗುರುಗೀತೆ” ಎಂದವರು ಹೇಳಿದ್ದಾರೆ.
“ಕಛೇರಿಯಲ್ಲಿ ಅವರು ವರ್ಣದ ಸ್ವರ, ಸಾಹಿತ್ಯ ಎರಡನ್ನೂ ಹಾಡುತ್ತಿದ್ದರು. ಆಲಾಪನೆಯ ಫ್ರ್ರೇಸ್ನ ಸ್ವರವನ್ನು ಕೂಡ ಹಾಡುವ ಸಾಮರ್ಥ್ಯ ಇರಬೇಕು ಎನ್ನುತ್ತಿದ್ದರು. ನೊಟೇಶನ್ ಬರೆಯುವ ಅವರ ಸಾಮರ್ಥ್ಯ ಅದ್ಭುತ. ಅವರಿಂದ ನಾವು ತುಂಬ ಪಲ್ಲವಿಗಳನ್ನು ಹಾಡಲು ಕಲಿತೆವು. ಅವರ ’ಪಲ್ಲವಿ ಗಾನ ಸುಧಾ’ದಲ್ಲಿ ೨೦೦ಕ್ಕೂ ಅಧಿಕ ಪಲ್ಲವಿಗಳಿಗೆ ನೊಟೇಶನ್ ಹಾಕಿದ್ದಾರೆ. ಮಹಾವೈದ್ಯನಾಥ ಅಯ್ಯರ್ ಅವರ ೭೨ ಮೇಳಕರ್ತ ರಾಗಗಳಿಗೂ ನೊಟೇಶನ್ ಹಾಕಿದ್ದಾರೆ. ಈ ಯೋಜನೆಗಳನ್ನೆಲ್ಲ ಅವರು ಮಾಡಿದ್ದು ಅವರಿಗೆ ೮೦ ವ?ಗಳಾದ ಬಳಿಕ. ’ಮನೋಧರ್ಮ ಸಂಗೀತಂ’ ಕೃತಿಯಲ್ಲಿ ಪಾಣಿಗಾರು ೫೦ಕ್ಕೂ ಅಧಿಕ ರಾಗಗಳಿಗೆ ನೋಟ್ ಹಾಕಿದ್ದು, ಇದು ಶಿಕ್ಷಕರು, ವಿದ್ಯಾರ್ಥಿಗಳು ಇಬ್ಬರಿಗೂ ಅನುಕೂಲಕರವಾಗಿದೆ” – ಎಂದಿದ್ದಾರೆ ಮಲ್ಲಾಡಿ ಬ್ರದರ್ಸ್.
ಗ್ರಂಥರಚನೆ
“(ಪಾರ್ಶ್ವವಾಯುಪೀಡಿತರಾಗಿ) ಅವರ ಕೈಗಳು ಕೆಲಸ ಮಾಡದಿದ್ದಾಗ ಮಿದುಳನ್ನು ಸಕ್ರಿಯವಾಗಿಡಲು ೧೫೦ ಮುಕ್ತಾಯ ಸ್ವರಗಳ ಕುರಿತು ಗ್ರಂಥ ರಚಿಸಿದರು. ಅದರಲ್ಲಿ ಅವರು ತುಂಬ ಶ್ರಮಪಟ್ಟು ವಿವಿಧ ರಾಗಗಳ ಸ್ವರಬಂಧಗಳ ಬಗ್ಗೆ ಲೆಕ್ಕಾಚಾರ ಮಾಡಿದರು” ಎಂದು ಮಲ್ಲಾಡಿ ಸಹೋದರರು ಪರಮಗುರು ಡಾ| ಪಾಣಿ ಅವರ ಕೆಲಸವನ್ನು ಹತ್ತಿರದಿಂದ ಕಂಡು ಬಣ್ಣಿಸಿದ್ದಾರೆ. “ಹೊಗಳಿಕೆ, ಕಛೇರಿಯ ಅವಕಾಶ ಸಿಗುವುದು ಮತ್ತು ಹಣಕ್ಕಿಂತಲೂ ಒಳ್ಳೆಯ ಹೃದಯದ ಸರಳ ಜನರ ಗೆಳೆತನವೇ ಪಾಣಿಯವರಿಗೆ ಇ?. ಅನಾರೋಗ್ಯದ ಕಾರಣದಿಂದ ಹಾಸಿಗೆಯಲ್ಲೇ ಮಲಗಿದ್ದಾಗಲೂ ಅವರು ಒಂದು ಕ್ಷಣವೂ ಸಂಗೀತದಿಂದ ಆಚೆ ಸರಿಯುತ್ತಿರಲಿಲ್ಲ. ಒಬ್ಬ ಹುಡುಗ ಸರಳೆವರಸೆಯನ್ನು ಹಾಡಿದರೂ ಮೆಚ್ಚಿ ’ಆಹಾ’ ಎಂದು ಸಂತೋ? ಸೂಚಿಸಿ ಪ್ರೋತ್ಸಾಹಿಸುತ್ತಿದ್ದರು. ನಿಃಸ್ವಾರ್ಥ ಮತ್ತು ವಿನಯಗಳಿಂದ ಪಾಣಿಗಾರು ಒಬ್ಬ ಯೋಗಿಯಂತಿದ್ದರು” ಎಂದು ಕೂಡ ಮಲ್ಲಾಡಿ ಶ್ರೀರಾಂ ಪ್ರಸಾದ್ ಮತ್ತು ರವಿಕುಮಾರ್ ಕೊಂಡಾಡಿದ್ದಾರೆ.
ಮಲೇಷ್ಯಾದ ಶಿಷ್ಯ
ವೀಣಾವಾದಕಿ ಶ್ರೀಮತಿ ವಿಜಯಲಕ್ಷ್ಮೀ ಶೇಖರ್ ಅವರು ೧೯೯೪-೯೮ರ ಅವಧಿಯಲ್ಲಿ ಸುಮಾರು ನಾಲ್ಕು ವ?ಗಳ ಕಾಲ ಮಲೇ?ದಿಂದ ಕರ್ನೂಲಿಗೆ ಆಗಮಿಸಿ ಡಾ| ಪಿನಾಕಪಾಣಿ ಅವರಿಂದ ಸಂಗೀತಾಭ್ಯಾಸ ನಡೆಸಿದವರು. ಅದಕ್ಕೆ ಮುನ್ನ ಸುಮಾರು ೧೫ ವ?ಗಳ ಕಾಲ ಡಾ| ಪಾಣಿ ಅವರ ಸಂಗೀತವನ್ನು ಆಲಿಸಿದ್ದರಿಂದ ಕಲಿಕೆ ಸುಲಭವಾಯಿತು. ವ?ದಲ್ಲಿ ಮೂರು ಸಲ ಬಂದು ಪ್ರತಿ ಬಾರಿ ಸುಮಾರು ಎರಡು ತಿಂಗಳ ಕಾಲ ಇಲ್ಲಿದ್ದು ಪಾಠ ಹೇಳಿಸಿಕೊಂಡರು. ದಿನಕ್ಕೆ ಸುಮಾರು ಐದುಗಂಟೆ ಪಾಠ. ಬೆಳಗ್ಗೆ ಸಂಜೆ ತಲಾ ಎರಡೂವರೆ ತಾಸು. ೧೯೯೪ರಲ್ಲಿ ಮಲೇ?, ಸಿಂಗಾಪುರಕ್ಕೆ ಭೇಟಿ ನೀಡಿದ್ದ ಡಾ| ಪಾಣಿ, ವಿಜಯಲಕ್ಷ್ಮೀ ಅವರಲ್ಲಿ ಉಳಿದುಕೊಂಡು ಕೆಲವು ಕೃತಿ, ಪದ, ಜಾವಳಿಗಳನ್ನು ಕಲಿಸಿದ್ದರು. ಆ ಮಧ್ಯೆ ಒಮ್ಮೆ “ಸಂಗೀತಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಬೇಕಾಗುತ್ತದೆ; ಟಿoಟಿe oಣheಡಿಟಿess ಅಗತ್ಯ” ಎಂದರಂತೆ. ಅದಕ್ಕೆ ಈಕೆ “ತಾವು ಕಲಿಸುವುದಾದರೆ ಸವಾಲು ಸ್ವೀಕರಿಸಲು ಸಿದ್ಧ” ಎಂದರು. ಹಾಗೇ ಅವರ ಪಾಠ ಆರಂಭವಾಗಿತ್ತು. ಅವರು ತಮ್ಮ ಕೊಠಡಿಯಿಂದ ’ಜಯಮ್ಮ-’ ಎಂದು ಕರೆಯುತ್ತಲೇ ಇವರು ವೀಣೆ ಮತ್ತು ರೆಕಾರ್ಡರ್ನೊಂದಿಗೆ ಹಾಜರ್. ಕಲಿಸಲು ಅವರಿಗೆ ಪುಸ್ತಕ ಬೇಡ; ನೆನಪೇ ಸಾಕು.
“ಅನುಸ್ವಾರಗಳ ಸ್ವರಜತಿ ಸಂಗತಿ, ಗಮಕ ಸ್ವರಗುಚ್ಛ (ಫ್ರೇಸ್) ಮತ್ತು ಸಾಮಾನ್ಯ ಸ್ವರಶ್ರೇಣಿಯ ಸಮತೋಲನ ಮುಂತಾದ ವಿ?ಯಗಳಲ್ಲಿ ಅವರು ತುಂಬ ಕಟ್ಟುನಿಟ್ಟು. ಫ್ರೇಸ್ಗಳ ಬಿಕ್ಕಟ್ಟು (ಣeಟಿsioಟಿ) ಇನ್ನೊಂದು ಮುಖ್ಯ ಅಂಶ. ಟೆನ್ಶನ್ ಎಂದರೆ ಪ್ರತಿ ಫ್ರೇಸಿಗೆ ತೆಗೆದುಕೊಳ್ಳುವ ಸಮಯ. ಅದಕ್ಕೂ ಕೃತಿಯ ಓಘಕ್ಕೂ ಸಂಬಂಧ ಇದೆ. ವೀಣೆ ನುಡಿಸುವಾಗ ಸರಿಯಾದ ಟೆನ್ಶನ್ ಪಡೆಯಬೇಕೆಂದು ಒತ್ತಾಯಿಸುತ್ತಿದ್ದರು” ಎಂದು ವಿಜಯಲಕ್ಷ್ಮೀ ನೆನಪಿಸಿಕೊಳ್ಳುತ್ತಾರೆ. “ಲೆಕ್ಕಾಚಾರ ಅಥವಾ ಕಣಕ್ಕೂ ಒಂದು ವಿಜ್ಞಾನ. ಅದನ್ನು ಅಲಕ್ಷಿಸಬಾರದು; ಹಾಡಬೇಕು. ಸ್ವರಪ್ರಸ್ತಾರವು ಲೆಕ್ಕಾಚಾರ ಮತ್ತು ಮಾಧುರ್ಯ(ನಾದ)ಗಳನ್ನು ಆಧರಿಸಿರಬೇಕು ಎನ್ನುತ್ತಿದ್ದರು. ಗುರುಗಳು ಯಾವಾಗಲೂ ದಕ್ಷಿಣ (ತಂಜಾವೂರು) ಬಾನಿಗೆ ಒತ್ತು ನೀಡುತ್ತಿದ್ದರು” ಎನ್ನುವ ವಿಜಯಲಕ್ಷ್ಮೀ, “ತನಗೆ ಕಲಿಯುವುದು ಮುಗಿಯಿತೆಂದು ಪಾಣಿಯವರು ಎಂದೂ ತಿಳಿಯಲಿಲ್ಲ. ಗೊತ್ತಿಲ್ಲದ ಕೃತಿಗಳನ್ನು ಕಲಿಯುತ್ತಲೇ ಇದ್ದರು. ಅವರ ವಿನಯ ಮರೆಯಲಾಗದ್ದು. ಫೀಸು ಕೊಟ್ಟರೆ ಬೈಯುತ್ತಿದ್ದರು; ಕೇವಲ ಒಂದು ರೂಪಾಯಿ ತೆಗೆದುಕೊಳ್ಳುತ್ತಿದ್ದರು. ವೈದ್ಯಕೀಯ ಸೇವೆ, ಸಂಸ್ಕೃತ ಬೋಧನೆ ಮತ್ತು ಸಂಗೀತ ಬೋಧನೆ – ಈ ಮೂರು ಉದ್ಯೋಗಗಳಿಂದ ಹಣ ಮಾಡಬಾರದು ಎಂದು ಹೇಳುತ್ತಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ.
ಗುರುಗಳ ’ಸಂಗೀತ ಸೌರಭಂ’ ಮತ್ತು ’ಮನೋಧರ್ಮ ಸಂಗೀತಂ’ ಕರ್ನಾಟಕ ಸಂಗೀತದ ಅದ್ಭುತ ಪಠ್ಯಪುಸ್ತಕಗಳು. ಅವುಗಳನ್ನು ಓದಿ ಅದರಂತೆ ಕಲಿತರೆ ಹಲವು ಅದ್ಭುತ ಐಡಿಯಾಗಳು ಸಿಗುತ್ತವೆ. ಮನೋಧರ್ಮ ಸಂಗೀತದಲ್ಲಿ ಸ್ವರಗಳ ಹಲವು ಸಂಭಾವ್ಯ ಜೋಡಿಗಳ ಬಗ್ಗೆ ಅವರು ಹೇಳಿದ್ದಾರೆ. ಕಲಿಯುವವರಿಗೆ ಮತ್ತು ಕಲಾವಿದರಿಗೆ ಸಂಗೀತ ಚಿಂತನೆಗಳಿಗೆ ಸಂಬಂಧಿಸಿ ಅವು ಖರ್ಚಾಗದ ಭಂಡಾರಗಳು. ಡಾ| ಪಾಣಿ ಅವರ ಪಾಠಾಂತರ ಶ್ರೇ?, ಕೃತಿ ಸಂಗ್ರಹವೂ ಶ್ರೇ?. ಅದರಿಂದ ಮರೆಯಲಾಗದ ಕಛೇರಿ ನೀಡಬಹುದು. ಪಾಠಾಂತರ ಚೆನ್ನಾಗಿದ್ದರೆ ಕಛೇರಿ ಯಶಸ್ವಿ ಆಗದೆ ಇರುವುದಿಲ್ಲ” ಎಂದು ವಿಜಯಲಕ್ಷ್ಮೀ ಗುರುಗಳ ಕೊಡುಗೆಯನ್ನು ಅಪೂರ್ವವಾಗಿ ಚಿತ್ರಿಸಿದ್ದಾರೆ.
ಅನಾಥವಾದ ಚೆಕ್ಕುಗಳು
ಡಿವಿಜಿಯವರು ತಮಗೆ ನೀಡಲಾದ ಎ? ಚೆಕ್ಗಳನ್ನು ನಗದೀಕರಿಸಲೇ ಇಲ್ಲ ಎಂದು ಕೇಳುತ್ತೇವೆ. ಡಾ| ಪಿನಾಕಪಾಣಿ ಕೂಡ ಅದೇ ವರ್ಗದವರು ಎಂಬುದು ಯುವ ಸಂಗೀತಗಾರ್ತಿ ಅನಸೂಯಾ ತಂಗಿರಾಳ ಅವರ ಈ ಮಾತುಗಳಲ್ಲಿ ವ್ಯಕ್ತವಾಗುತ್ತದೆ: “ಇಂದಿನ ಕಾಲಕ್ಕೆ ಡಾ| ಪಾಣಿ ಭಾರಿ ಅಪರೂಪದವರು. ಅವರಿಗೆ ಪ್ರಶಸ್ತಿಗಳು ಬಂದವು, ಹೋದವು ಎಂಬಂತಿತ್ತು. ಅವು ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಡಾಕ್ಟರ್ ಕಲಿಯುವಾಗ ಬಂದ ಚಿನ್ನದ ಪದಕವನ್ನು ಅವರು ಭದ್ರಾಚಲದ ಸೀತಾದೇವಿಗೆ ಅರ್ಪಿಸಿದರು. ಆಕಾಶವಾಣಿ ಮತ್ತಿತರ ಕಡೆಗಳಿಂದ ಬಂದ ಚೆಕ್ಕುಗಳನ್ನು ನಗದೀಕರಿಸುತ್ತಿರಲಿಲ್ಲ; ಅದರ ಲಕೋಟೆಗಳನ್ನು ತೆರೆಯುತ್ತಲೇ ಇರಲಿಲ್ಲ. ಅವರ ಡೆಸ್ಕಿನ ಮೇಲೆ ಅವು ಧೂಳು ತಿನ್ನುತ್ತಾ ಬಿದ್ದಿರುತ್ತಿದ್ದವು. ಇಂದಿಗೂ ಕೂಡ (ಮಲಗಿದಲ್ಲೇ ಇದ್ದಾಗ) ಅವರಿಗೆ ಸಂಗೀತಕ್ಕೆ ಹೊರತಾದ ಸಂಭಾ?ಣೆಯಲ್ಲಿ ಆಸಕ್ತಿಯಿಲ್ಲ. ಅವರಿಗೆ ಮೌನ ಎಂದರೆ ಪ್ರಾರ್ಥನೆ. ಮಾತು ಎಂದರೆ ಸಂಗೀತ. ಅವರ ಕಿವಿ ಕೇಳುವುದು ಸಂಗೀತವನ್ನು ಮಾತ್ರ; ತುಟಿ ಹಾಡುವುದು ಸಂಗೀತವನ್ನು ಮಾತ್ರ; ಅವರು ಮತ್ತು ಸಂಗೀತದ ನಡುವೆ ಬೇರೆ ಪ್ರಪಂಚ ಇಲ್ಲ. ಸಂಗೀತವೇ ಅವರ ಉಸಿರು.” ಕಾವ್ಯಾತ್ಮಕವೆನಿಸುವ ಈ ಮಾತುಗಳು ಸಂಗೀತದ ಯೋಗಿಯಂತಿದ್ದ ಅವರನ್ನು ಸಮರ್ಥವಾಗಿ ವರ್ಣಿಸುತ್ತವೆ ಎನ್ನಬಹುದು.
ಡಾ| ಪಿನಾಕಪಾಣಿ ಅವರನ್ನು ಅರಸಿಕೊಂಡುಬಂದ ಪ್ರಶಸ್ತಿಗಳ ಸಾಲು ಸಾಕ? ದೊಡ್ಡದಾಗಿಯೇ ಇದೆ. ಅದರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ’ಸಂಗೀತ ಕಳಾನಿಧಿ’ (೧೯೮೩) ಮತ್ತು ಭಾರತ ಸರ್ಕಾರದ ’ಪದ್ಮಭೂ?ಣ’ (೧೯೮೪) ಪ್ರಶಸ್ತಿಗಳು ವಿಶೇ?ವಾಗಿ ಉಲ್ಲೇಖಾರ್ಹವಾದಂಥವು. ಉಳಿದಂತೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೭೭), ತಿರುಪತಿ ದೇವಸ್ಥಾನದ ’ಸಂಗೀತ ವಿದ್ಯಾ ವಾರಿಧಿ’ ಪ್ರಶಸ್ತಿ (೧೦ ಲಕ್ಷ ರೂ. ಹಮ್ಮಿಣಿ ಸಹಿತ), ಆಂಧ್ರಕ್ಕೆ ಜಾಗತಿಕ ಪ್ರಶಸ್ತಿಯನ್ನು ತಂದವರಿಗೆ ಕೊಡುವ ಸಲುವಾಗಿ ೨೦೧೨ರಲ್ಲಿ ರೂಪಿಸಿದ ’ತೆಲುಗು ವೆಲುಗು’ ಪ್ರಶಸ್ತಿ (ಮೊದಲಿಗೆ ಪಡೆದವರು), ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ’ಟಾಗೋರ್ ರತ್ನ’ ಪ್ರಶಸ್ತಿ (೨೦೧೨) ಮುಂತಾದುವನ್ನು ಹೆಸರಿಸಬಹುದು.
ರುಗ್ಣ ಶಯ್ಯೆಯಲ್ಲಿ
ಸಂಗೀತಗಾರ್ತಿ ಬಾಲಾಂಬಾ ಅವರು ಡಾ| ಎಸ್. ಪಿನಾಕಪಾಣಿ ಅವರ ಪತ್ನಿ. ಈ ದಂಪತಿಗಳಿಗೆ ಮೂವರು ಪುತ್ರರು, ಮೂವರು ಪುತ್ರಿಯರು. ಶಿ?ರು, ಅಭಿಮಾನಿಗಳು ವಿವಿಧೆಡೆ ತಮ್ಮ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿದ್ದಾಗಲೇ ಅವರು ಅಸ್ತಂಗತರಾದರು (ಮಾರ್ಚ್ ೧೧, ೨೦೧೩). ಆದರೆ ಅದಕ್ಕೆ ಹಿಂದಿನ ಒಂಬತ್ತು ವ? ಅವರು ಹಾಸಿಗೆಯಲ್ಲೇ ಇರಬೇಕಾಯಿತು. ದೇಹದ ಕ?- ನೋವುಗಳನ್ನು ಮರೆಸುವ? ಅವರ ಚೇತನ ಸಂಗೀತಕ್ಕೆ ಅಂಟಿಕೊಂಡಿತ್ತು ಎಂಬುದು ಬೇರೆ ಮಾತು. ಮನಸ್ಸು ಕ್ರಿಯಾಶೀಲವಾಗಿದ್ದು ಸಂಗೀತಪರ ಚಟುವಟಿಕೆಗಳಲ್ಲಿ ತೆಡಗಿರುತ್ತಿತ್ತು. ಮಲಗಿದಲ್ಲಿಂದಲೇ ಶಿ?ರನ್ನು ತಿದ್ದುತ್ತಿದ್ದರು. ತಮ್ಮ ಇಷ್ಟದ ರಾಗಗಳನ್ನು ಗುಣುಗುತ್ತಿದ್ದರು. ಲೇಖಕರು, ವಿದ್ವಾಂಸರು ಬಂದರೆ ಅವರೊಂದಿಗೆ ಚರ್ಚಿಸುತ್ತಿದ್ದರು. ಶಾಸ್ತ್ರೀಯ ಸಂಗೀತದ ಬಗ್ಗೆ “ಅಷ್ಟು ಪ್ರಯತ್ನಪಟ್ಟ ಬಳಿಕ ನಿಮಗೀಗ ಸಾರ್ಥಕತೆಯ ಭಾವ ಇದೆಯೇ?” ಎಂದು ಯಾರೋ ಕೇಳಿದರು. ಅದಕ್ಕೆ ಉತ್ತರ ಸಿದ್ಧವಾಗಿಯೇ ಇತ್ತು; “ಹೌದು, ತೃಪ್ತಿ ಇದೆ. ಇದಕ್ಕಿಂತ ಹೆಚ್ಚು ಕೇಳುವಂತಿರಲಿಲ್ಲ” ಎಂದರವರು.
ಭಾರತದ ಶಾಸ್ತ್ರೀಯ ಸಂಗೀತವು ಒಂದು ಉತ್ಕೃರ್ಷಮಟ್ಟದ ಕಲೆ. ಅದನ್ನು ತಮ್ಮ ಜೀವದ ಉಸಿರಾಗಿ ಮಾಡಿಕೊಂಡ ಎ? ಜೀವಗಳು ಅಂಥದ್ದೇ ಉತ್ಕೃರ್ಷಮಟ್ಟದ ಜೀವನವನ್ನು ನಡೆಸಿದ್ದನ್ನು ಕಾಣುತ್ತೇವೆ. ನೂರು ವ?ಗಳ ತುಂಬುಜೀವನ ನಡೆಸಿದ ಡಾ| ಎಸ್. ಪಿನಾಕಪಾಣಿ ಅಂಥವರಲ್ಲೊಬ್ಬರು. ಲೇಖಕಿ ರಾಣಿ ಕುಮಾರ್ ಹೇಳುವಂತೆ “ಡಾ| ಪಾಣಿ ಅವರು ಎರಡು ಉದ್ಯೋಗಗಳಿದ್ದ ಏಕೈಕ ವ್ಯಕ್ತಿ ಅಲ್ಲದಿರಬಹುದು. ಆದರೆ ಅದ್ವಿತೀಯರೆನಿಸುತ್ತಾರೆ. ತೆಲುಗು ಪ್ರದೇಶಕ್ಕೆ ಕರ್ನಾಟಕ ಸಂಗೀತದ ಮರುನಿರೂಪಣೆ ಮಾಡಿದ ಅವರು ಉದಯೋನ್ಮುಖರಿಗೆ ಅಥೆಂಟಿಕ್ ತಂಜಾವೂರು ಬಾನಿಯಲ್ಲಿ ತರಬೇತಿ ನೀಡುವ ಮೂಲಕ ಸಿದ್ಧಾಂತವನ್ನು ಅಭ್ಯಾಸ (ಪ್ರ್ಯಾಕ್ಟೀಸ್)ವಾಗಿ ಮಾಡಿದರು. ಆ ಪರಂಪರೆಯನ್ನು ಮುಂದಿನ ತಲೆಮಾರುಗಳಿಗೆ ದಾಟಿಸಿದರು. ಅದೇ ವೇಳೆಯಲ್ಲಿ ಅಸಂಖ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯವನ್ನು ಕಲಿಸಿದರು. ಹಲವು ಮೆಡಿಕಲ್ ಆಸ್ಪತ್ರೆ ಕಾಲೇಜುಗಳಲ್ಲಿ ಡಾಕ್ಟರಾಗಿದ್ದರು. ಎರಡು ಉದ್ಯೋಗಗಳು ಪರಸ್ಪರ ಪೂರಕವಾಗಿ ಸಾಗಿದವು. ಪರಸ್ಪರ ಬಾಧಕ ಆಗಲಿಲ್ಲ. ಅವರಲ್ಲಿ ಮೌಲ್ಯಗಳು, ಆದರ್ಶಗಳು, ವೃತ್ತಿ, ಜವಾಬ್ದಾರಿ, ಮನೋರಂಜನೆ, ಅರ್ಪಣಾ ಮನೋಭಾವ – ಎಲ್ಲವೂ ಸಮತೂಕದಲ್ಲಿದ್ದವು; ಅತಿರೇಕ ಇರಲಿಲ್ಲ.