ಕೇವಲ ಆರ್ಥಿಕ ವಹಿವಾಟಿನ ಹೆಚ್ಚಳವಷ್ಟನ್ನೆ ಅಭಿವೃದ್ಧಿಯೆಂದು ಪರಿಗಣಿಸಲಾಗದು
ಕಳೆದ (೨೦೧೬) ಮೇ ಅಂತ್ಯದಲ್ಲಿ ’ಈಗ ಶೇ. ೭.೬ರಷ್ಟು ವಾರ್ಷಿಕವೃದ್ಧಿವೇಗದಲ್ಲಿ ವರ್ಧಿಸುತ್ತಿರುವ ಭಾರತದ ಆರ್ಥಿಕತೆ ಅನ್ಯರಾಷ್ಟ್ರಗಳಿಗಿಂತ ಆರ್ಥಿಕವಾಗಿ ಉನ್ನತ ಸ್ತರದಲ್ಲಿ ಇದೆ” ಎಂದು ಕೇಂದ್ರ ಸರ್ಕಾರದಿಂದ ಹೊರಬಿದ್ದ ಹೇಳಿಕೆ ಹಲವು ವಲಯಗಳಲ್ಲಿ ಟೀಕೆಗೆ ಗುರಿಯಾಯಿತು. ತಥೋಕ್ತ ವೃದ್ಧಿವೇಗ ಮಂಡನೆ ಉತ್ಪ್ರೇಕ್ಷಿತವೆಂದು ಹಲವರು ತಜ್ಞರ ಅಭಿಮತವಿದೆ. ಆ ವೃದ್ಧಿವೇಗದ ಗಣನೆಗೆ ಆಧಾರವಾದ ತಃಖ್ತೆಗಳಲ್ಲಿ ರೂ. 1,40,000 ಕೋಟಿಗಳಷ್ಟು ವ್ಯತ್ಯಾಸವಿದೆ – ಎಂದು ಆರ್ಥಿಕತಜ್ಞ-ಪತ್ರಕರ್ತ ಅಭೀಕ್ ಬರ್ಮನ್ ಹೇಳಿದ್ದಿದೆ. ಇತರ ಹಲವರು ತಜ್ಞರೂ ಮಂಡಿತ ವೃದ್ಧಿವೇಗ ಪ್ರಮಾಣವನ್ನು ಶಂಕಿಸಿದ್ದಾರೆ. ವಾಸ್ತವ ವಾರ್ಷಿಕ ವೃದ್ಧಿವೇಗ ಸುಮಾರು ಶೇ. ೪ರಷ್ಟು ಮಾತ್ರವಿದೆ ಎಂಬುದು ಬರ್ಮನ್ ಅವರೂ ಸೇರಿದಂತೆ ಹಲವರ ಪರಾಮರ್ಶನೆ ಇದೆ.
ಹಲವು ದಿಶೆಗಳಲ್ಲಿ ದೇಶದ ಆರ್ಥಿಕತೆ ಉನ್ಮುಖವಾಗಿದೆಯೆಂದು ಒಪ್ಪಬಹುದು. ಶಂಕೆಯು ವ್ಯಕ್ತವಾಗಿರುವುದು ಜಿ.ಡಿ.ಪಿ. ಮೊದಲಾದ ಮಾಪನಸಾಧನಗಳ ಬಗೆಗೆ.
ಈಗಿನ ವಾಸ್ತವ ಸ್ಥಿತಿಯ ವಿಶ್ಲೇಷಣೆ ಹಾಗಿರಲಿ. ಮೂಲಭೂತವಾಗಿ ದೀರ್ಘಕಾಲದಿಂದ ದೇಶದ ಸಗಟು ರಾಷ್ಟ್ರೋತ್ಪನ್ನವನ್ನು (ಜಿ.ಡಿ.ಪಿ.=ಗ್ರೋಸ್ ಡೊಮೆಸ್ಟಿಕ್ ಪ್ರಾಡಕ್ಟ್) ಗಣಿಸಲು ಬಳಸುತ್ತಿರುವ ವಿಧಾನದ ಸಮರ್ಪಕತೆಯ ಬಗೆಗೇ ಶಂಕೆ ಇಲ್ಲದಿಲ್ಲ. ಇದುವರೆಗೆ ಎರಡು ರೀತಿಯಲ್ಲಿ ಆ ಗಣನೆ ನಡೆದಿದೆ: ಮೊದಲನೆಯದಾಗಿ ಉತ್ಪಾದನೆಯ ಒಟ್ಟಿಲಿನ ಆಧಾರದ ಮೇಲೆ; ಎರಡನೆಯದಾಗಿ ಒಟ್ಟು ವ್ಯಯದ ಆಧಾರದ ಮೇಲೆ. ತಾತ್ತ್ವಿಕವಾಗಿ ಈ ಎರಡು ಲಬ್ಧಗಳೂ ಸರಿಸುಮಾರು ಸಮನಾಗಿ ಇರಬೇಕಾಗುತ್ತದೆ. ಆದರೆ ವಾಸ್ತವಾನುಭವದಲ್ಲಿ ಎರಡಕ್ಕೂ ನಡುವೆ ಗಣನೀಯ ಅಂತರ ಇರುತ್ತದೆ – ಮೂಲ ಆಕರಗಳ ವೈವಿಧ್ಯದಿಂದ. ಕಾಲಕ್ರಮದಲ್ಲಿ ಖಚಿತ ಮಾಹಿತಿ ದೊರೆತಂತೆ ಈ ವ್ಯತ್ಯಾಸದ ಪ್ರಮಾಣ ಕಡಮೆಯಾಗುತ್ತಹೋಗುತ್ತದೆ. ಇಂತಹ ವ್ಯತ್ಯಾಸಗಳು ಸರ್ವೇಸಾಮಾನ್ಯವೆಂದು ಸರ್ಕಾರದ ಸಾಂಖ್ಯಿಕ ವಿಭಾಗ, ನೀತಿ ಆಯೋಗ ಮೊದಲಾದ ಅಂಗಗಳ ಸರ್ಕಾರೀ ವಕ್ತಾರರು ಸಮರ್ಥನೆ ನೀಡಿದ್ದಾರೆ. ಇಂತಹ ‘ವ್ಯತ್ಯಾಸ’ಗಳು ಅನೇಕ ವರ್ಷಗಳಿಂದಲೇ ಇದ್ದವೆಂದೂ ಹೇಳಲಾಗಿದೆ. ಹಣದುಬ್ಬರ ಮೊದಲಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡರೂ ಈಗಿನ ಜಿ.ಡಿ.ಪಿ. ಗಣನೆಯ ಆಧಾರದ ವ್ಯತ್ಯಾಸಗಳು ಹಿಂದಿದ್ದುದಕ್ಕಿಂತ ಅಧಿಕವಾಗಿವೆ ಎಂಬ ಪರಾಮರ್ಶನೆ ಇದೆ. ಮೂಲ ಆಕರಗಳಲ್ಲಿಯೆ ಇಷ್ಟು ಅಗಾಧ ಪ್ರಮಾಣದ ವ್ಯತ್ಯಾಸಗಳು ಇವೆಯೆಂಬುದು ಪರೀಕ್ಷಾರ್ಹವಾಗಿದೆ. ಅಭಿವೃದ್ಧ ದೇಶಗಳಲ್ಲಿ ಇಂತಹ ‘ವ್ಯತ್ಯಾಸ’ಗಳ ಪ್ರಮಾಣ ಶೇ. 1ಕ್ಕಿಂತ ಕಡಮೆ ಇರುತ್ತದೆ.
ಈ ವಿವರಗಳಿಗೆ ಸಂಬಂಧಿಸಿದಂತೆ ಸಮರ್ಪಕ ಸಮಾಧಾನವು ಅಲಭ್ಯವಾದಲ್ಲಿ ಸರ್ಕಾರದ ಪರವಾದ ಮಂಡನೆಗಳ ವಿಶ್ವಸನೀಯತೆ ಕುಗ್ಗುತ್ತದೆ.
ವಿವೇಚನೆಗೆ ಅರ್ಹವಾದ ಇತರ ಸಂಗತಿಗಳೂ ಉಂಟು. ನಿದರ್ಶನಕ್ಕೆ: ಸಗಟು ರಾಷ್ಟ್ರೋತ್ಪನ್ನದ ಗಣನೆಗೆ ಖಾಸಗಿ ವಲಯದ ಕೊಡುಗೆ ಎಂಬುದರ ಪರಿಶೀಲನೆಗೆ ಹಿಂದೆ ರಿಜರ್ವ್ ಬ್ಯಾಂಕಿನ ಮಾಹಿತಿ ಮೂಲವನ್ನು ಅವಲಂಬಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಅದಕ್ಕೆ ಬದಲಾಗಿ ಕೇಂದ್ರ ಸರ್ಕಾರದ ಕಾರ್ಪೊರೇಟ್ ವಹಿವಾಟು ಸಚಿವಾಲಯದಿಂದ ಲಬ್ಧವಾದ ಮಾಹಿತಿಯನ್ನು ಅವಲಂಬವಾಗಿ ಬಳಸಲಾಗುತ್ತಿದೆ. ಇಂತಹ ವಿಧಾನಗಳಿಂದಾಗಿ ಅಂತರರಾಷ್ಟ್ರೀಯ ಸ್ತರದಲ್ಲಿಯೂ ವಿಶ್ವಸನೀಯತೆ ಕುಗ್ಗುವ ಸಂಭವವಿದೆ.
ಬ್ಯಾಂಕು ಸಾಲಗಳ ಲಭ್ಯತೆ, ರಫ್ತು ಪ್ರಮಾಣ, ಹಣಹೂಡಿಕೆ ಪ್ರಮಾಣ, ಸುಸ್ತಿ ಸಾಲಗಳು ಮೊದಲಾದ ಅಂಶಗಳಿಗೆ ಸಾಕಷ್ಟು ಗಮನ ಹರಿಸದೆ ಜಿ.ಡಿ.ಪಿ. ಅಂಕನದಲ್ಲಿಯೆ ಲಕ್ಷ್ಯವನ್ನು ಕೇಂದ್ರೀಕರಿಸುವುದು ಅಪೇಕ್ಷಣೀಯವೆನಿಸದು.
ಈ ಹಿನ್ನೆಲೆಯಲ್ಲಿಯೆ ಕಳೆದ ಜುಲೈ ತಿಂಗಳಲ್ಲಿ ಅಮೆರಿಕ ಸರ್ಕಾರದ ಗೃಹಖಾತೆಯು ಪ್ರಕಟಿಸಿದ ದೇಶವಿದೇಶ ಸಮೀಕ್ಷೆಯಲ್ಲಿಯೂ ಭಾರತ ಸರ್ಕಾರ ಮಂಡಿತ ಶೇ. 7.5 ವೃದ್ಧಿವೇಗ ಪ್ರಮಾಣವು ಉತ್ಪ್ರೇಕ್ಷಿತವೆಂಬ ಪರಾಮರ್ಶನೆ ಇದ್ದಿತು. ಸುಷ್ಟವಾದ ಆಕರಗಳನ್ನು ಬಳಸದ ವೃದ್ಧಿವೇಗ ಮಂಡನೆಗಳಿಂದ ಹೆಚ್ಚಿನ ಪ್ರಯೋಜನವಾಗದು.
ಇದರ ಹೊರತಾಗಿಯೂ ಜಿ.ಡಿ.ಪಿ.ಯನ್ನು ದೇಶದ ಆರ್ಥಿಕ ಸ್ಥಿತಿಯ ಯಥಾರ್ಥ ಬಿಂಬವೆಂದು ಒಪ್ಪುವುದು ಕಷ್ಟ. ಏಕೆಂದರೆ ಈಗಿನ ಗಣನೆಯ ಕ್ರಮದಲ್ಲಿ ಗಾತ್ರಕ್ಕೂ ಗುಣಾಂಶಕ್ಕೂ ನಡುವೆ ಪಾರಸ್ಪರಿಕತೆ ಇಲ್ಲ. ವರಮಾನಗಳ ಅಸಮಾನತೆ, ಗಾತ್ರವೃದ್ಧಿಯಿಂದಾಗುವ ಪರಿಸರಹಾನಿ ಮೊದಲಾದ ಸೂಕ್ಷ್ಮಾಂಶಗಳು ಜಿ.ಡಿ.ಪಿ. ಪರಿಗಣನೆಯ ಕಕ್ಷೆಯಿಂದ ಹೊರಗೇ ಉಳಿಯುತ್ತವೆ. ಯಾಂತ್ರಿಕ ಜಿ.ಡಿ.ಪಿ.ಗೆ ಪರ್ಯಾಯವಾಗಿ ಉದ್ಯೋಗ, ವಸತಿ, ಶಿಕ್ಷಣ, ಆರೋಗ್ಯ, ಸುರಕ್ಷೆ ಮೊದಲಾದ ಅಂಶಗಳನ್ನು ಒಳಗೊಂಡ ‘Better Life Index’ ಎಂಬ ಮಾನದಂಡವನ್ನು ಒ.ಇ.ಸಿ.ಡಿ. ಹಾಗೂ ಯೂರೋಪಿಯನ್ ಯೂನಿಯನ್ ಒಕ್ಕೂಟ ಆವಿಷ್ಕರಿಸಿವೆ. ಭಾರತದ ನೆರೆಯ ರಾಜ್ಯವೇ ಆದ ಭೂತಾನ್ ಸಾಮಾಜಿಕಾಂಶಗಳನ್ನು ಒಳಗೊಂಡ ‘Gross National Happiness Index’ ರೂಪಿಸಿದೆ.
ಜಿ.ಡಿ.ಪಿ.ಯನ್ನು ಹೊರತುಪಡಿಸಿ ಭಾರತ ಪರಿಶೀಲಿಸತೊಡಗಿರುವ ಪೂರಕ ’ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್’ ಕೇವಲ ಆರೋಗ್ಯ, ಶಿಕ್ಷಣ, ವರಮಾನಗಳಿಗೆ ಮಾತ್ರ ಸೀಮಿತವಾಗಿದೆ.
ಕೇವಲ ಆರ್ಥಿಕ ವಹಿವಾಟಿನ ಹೆಚ್ಚಳವಷ್ಟನ್ನೆ ಅಭಿವೃದ್ಧಿಯೆಂದು ಪರಿಗಣಿಸಲಾಗದು. ಇಂಗ್ಲೆಂಡಿನ ರಾಷ್ಟ್ರೀಯ ವರಮಾನದ ಗಣನೆಯಲ್ಲಿ ಮಾದಕದ್ರವ್ಯಗಳ ವ್ಯಾಪಾರದಿಂದಾಗುವ ಉತ್ಪತ್ತಿ ಮೊದಲಾದವೂ ಸೇರಿವೆ. ಒಬ್ಬ ವಿಮರ್ಶಕರು ವ್ಯಂಗ್ಯವಾಗಿ ಹೇಳಿದಂತೆ ಪರಿಸರವು ನಾಶವಾದಷ್ಟೇ ಜಿ.ಡಿ.ಪಿ. ಏರುತ್ತ ಹೋಗುತ್ತದೆ. ವಿಷಯುಕ್ತ ಆಹಾರ ಸೇವನೆಯಿಂದ ಅವಶ್ಯವಾಗುವ ವೈದ್ಯಕೀಯ ವೆಚ್ಚದ ಹೆಚ್ಚಳವೂ ಜಿ.ಡಿ.ಪಿ. ಪ್ರಮಾಣವನ್ನು ಹೆಚ್ಚಿಸುತ್ತದೆ. ಪರಿಸರಹಾನಿಯ ರಿಪೇರಿಗಾಗಿ ತಗಲುವ ಅಪಾರ ವೆಚ್ಚವೂ ಜಿ.ಡಿ.ಪಿ. ವೃದ್ಧಿಗೆ ಕಾರಣವಾಗುತ್ತದೆ.
ಈ ಹಿನ್ನೆಲೆಯಲ್ಲಿಯೆ ಪ್ರೌಢ ಚಿಂತಕವಲಯಗಳಲ್ಲಿ ಈಚೆಗೆ ಅಭಿವೃದ್ಧಿಯ ಮಾಪಕವಾಗಿ ಜಿ.ಡಿ.ಪಿ. ಹಿಂದಿದ್ದ ಮಾನ್ಯತೆಯನ್ನು ಉಳಿಸಿಕೊಂಡಿಲ್ಲ.