“ಈ ದಿನ ನಾನು ಕೆಲವು ಮಂದಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಕೆಲವು ದಿನಗಳ ಹಿಂದೆ ಬಲೂಚಿಸ್ತಾನ, ಗಿಲ್ಗಿಟ್-ಬಾಲ್ಟಿಸ್ತಾನ ಹಾಗೂ ಪಾಕ್-ಆಕ್ರಮಿತ ಕಾಶ್ಮೀರದ ಜನರು ನನಗೆ ತಮ್ಮ ಕೃತಜ್ಞತೆಗಳನ್ನು, ಶುಭಹಾರೈಕೆಗಳನ್ನು ತಿಳಿಸಿದ್ದಾರೆ. ನನ್ನಿಂದ ಬಹುದೂರವಿರುವ, ನಾನೆಂದಿಗೂ ನೋಡದೆ, ಭೇಟಿಯಾಗದೆ ಇರುವ ಜನರು ಭಾರತದ ಪ್ರಧಾನಿಯನ್ನು, ಭಾರತದ 125 ಕೋಟಿ ಪ್ರಜೆಗಳನ್ನು ಪ್ರಶಂಸಿಸಿದ್ದಾರೆ. ಇದೊಂದು ಇಡೀ ದೇಶದ ಜನರಿಗೆ ಸಲ್ಲುವ ಗೌರವವಾಗಿದೆ.”
ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯದಿನಾಚರಣೆಯಂದು ಕೆಂಪುಕೋಟೆಯ ಮೇಲಿನಿಂದ ದೇಶವನ್ನು ಉದ್ದೇಶಿಸಿ ಹೇಳಿದ ಮಾತುಗಳು. ಮೋದಿ ತಮ್ಮ ಸುದೀರ್ಘ ನೂರು ನಿಮಿಷಗಳ ಭಾಷಣದಲ್ಲಿ ಹೇಳಿದ ಈ ಎರಡು-ಮೂರು ವಾಕ್ಯಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನವನ್ನೆ ಉಂಟುಮಾಡಿವೆ.
ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ದೃಢ ನೀತಿಯೊಂದರ ಕೊರತೆ ಅನುಭವಿಸುತ್ತಿದ್ದ ಭಾರತಕ್ಕೆ ಮೋದಿಯವರ ಈ ಮಾತುಗಳಿಂದ ಸ್ಪ? ರಣನೀತಿಯೊಂದು ಲಬ್ಧವಾದಂತಾಗಿದೆ ಎಂದೇ ಅನೇಕ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಈ ಮಾತುಗಳ ಮೂಲಕ ಮೋದಿ ಮುಖ್ಯವಾಗಿ ಮೂವರನ್ನು ಕಟಕಟೆಯಲ್ಲಿ ನಿಲ್ಲಿಸಿದ್ದಾರೆ. ಮೊದಲಿಬ್ಬರು ಸಹಜವಾಗಿಯೇ ಪಾಕಿಸ್ತಾನ ಮತ್ತು ಚೀನಾವಾದರೆ, ಮೂರನೆಯದಾಗಿ ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷ! ಈ ಮೂವರೂ ’ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡರು’ ಎಂಬಂತೆ ವರ್ತಿಸಿದರು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.
ಭಾರತೀಯ ಸೇನಾಪಡೆ ೨೦೧೬ರ ಜುಲೈ ೯ರಂದು ಹಿಜ್ಬುಲ್-ಮುಜಾಹಿದೀನ್ ಉಗ್ರ ಬುರಾನ್ ವಾನಿಯನ್ನು ಹತ್ಯೆಗೆಯ್ದಿತು. ಈ ಹತ್ಯೆಯ ಬಳಿಕ ಜಮ್ಮು-ಕಾಶ್ಮೀರದಾದ್ಯಂತ ಆರಂಭಗೊಂಡ ಹಿಂಸಾಚಾರ ಎರಡು ತಿಂಗಳುಗಳು ಕಳೆದರೂ ಶಾಂತವಾಗಿಲ್ಲ. ೮೦ಕ್ಕೂ ಅಧಿಕ ನಾಗರಿಕರನ್ನು ಬಲಿತೆಗೆದುಕೊಂಡ ಈ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡವಿರುವುದು ಹಗಲಿನಷ್ಟು ಸತ್ಯ. ಮಕ್ಕಳ ಕೈಗೆ ಕಲ್ಲು, ಬಾಂಬ್ ನೀಡಿ ಹಿಂಸಾಚಾರವನ್ನು ಪ್ರಚೋದಿಸುವ ಪಾಕಿಸ್ತಾನದ ಈ ಕೃತ್ಯದಿಂದ ಭಾರತೀಯ ಸೇನೆಯೂ ನಲುಗಿತು. ಪಾಕಿಸ್ತಾನದ ಧಾಷ್ಟ್ಯ ಎಷ್ಟಿತ್ತೆಂದರೆ ಭಾರತವಿರೋಧಿ ಉಗ್ರ ಬುರಾನ್ ವಾನಿಗೆ ’ಹುತಾತ್ಮ’ನ ಪಟ್ಟಕಟ್ಟಿತು. ಭಾರತದ ಅವಿಭಾಜ್ಯ ಅಂಗವಾದ ಕಾಶ್ಮೀರ ಹಿಂಸಾಚಾರ, ಹತ್ಯೆಯನ್ನು ಖಂಡಿಸಿ ’ಕರಾಳ ದಿನಾಚರಣೆ’ಯನ್ನಾಚರಿಸಿ ಭಾರತದ ತಾಳ್ಮೆ ಪರೀಕ್ಷೆ ಮಾಡಿತು.
ಪಾಕಿಸ್ತಾನ ಎಂದರೆಯೆ ಹಿಂಸೆ-ಕ್ರೌರ್ಯದಲ್ಲಿಯೇ ಹುಟ್ಟಿ, ಅದೇ ಕೂಪದಲ್ಲಿ ಜೀವಿಸುತ್ತಿರುವ ಮತ್ತು ಅದನ್ನು ಜಗತ್ತಿಗೆ ರಫ್ತು ಮಾಡುತ್ತಿರುವ ದೇಶ ಎಂಬ ನಿತ್ಯಸತ್ಯ ಯಾರಿಗೆ ಗೊತ್ತಿಲ್ಲ? ಇದೀಗ ಪಾಕಿಸ್ತಾನ ಭಾರತದ ಸಹನೆಯ ಎಲ್ಲ ಗೆರೆಯನ್ನೂ ಮೀರಿತು. ದೆಹಲಿಯಲ್ಲಿ ನಡೆದ ಸರ್ವಪಕ್ಷಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ “ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಮತ್ತಿತರೆಡೆಗಳಲ್ಲಿ ಪಾಕ್ ಸೇನಾಪಡೆ ನಡೆಸುತ್ತಿರುವ ಅತ್ಯಾಚಾರಗಳನ್ನು ಜಗತ್ತಿನೆದುರು ಬಯಲುಮಾಡುವ ಸಂದರ್ಭ ಬಂದಿದೆ” ಎಂದು ಎಚ್ಚರಿಸುವ ಮೂಲಕ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಿದರು. ಒಂದು ಹೆಜ್ಜೆ ಮುಂದಿಟ್ಟು, “ಈ ಭಾಗಗಳಲ್ಲಿ ಪಾಕ್ ನಡೆಸುತ್ತಿರುವ ದೌರ್ಜನ್ಯದ ದಾಖಲೆಗಳನ್ನು ಸಂಗ್ರಹಿಸಿ ಜಗತ್ತಿನೆದುರು ಬಯಲುಗೊಳಿಸಿ” ಎಂದು ಮೋದಿ ಖಡಕ್ಕಾಗಿಯೇ ಅಧಿಕಾರಿಗಳಿಗೆ ಸೂಚಿಸಿದರು (ಆಗಸ್ಟ್ ೧೨).
ಮೋದಿಯವರ ಈ ಮಾತು ಪಾಕ್ ದೌರ್ಜನ್ಯವನ್ನು ಖಂಡಿಸುತ್ತಿದ್ದ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಬಲೂಚಿಯರಿಗೆ ಆನೆಬಲ ತಂದುಕೊಟ್ಟಿತು. ಬಲೂಚಿಯರು ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಮೋದಿಗೆ ಧನ್ಯವಾದಗಳನ್ನರ್ಪಿಸಿದರು. ಬಲೂಚ್ನ ಬೀದಿ ಬೀದಿಗಳಲ್ಲಿ ಬಲೂಚಿಸ್ತಾನಕ್ಕಾಗಿ ಸ್ವಾತಂತ್ರ್ಯಾಗ್ರಹ, ಪಾಕ್-ವಿರೋಧಿ ಪ್ರತಿಭಟನೆ ಮೆರವಣಿಗೆಗಳು ನಡೆದವು. ಇಂದಿಗೂ ನಡೆಯುತ್ತಲೇ ಇವೆ. ಅಕ್ಷರಶಃ ಕೋಲು ಕೊಟ್ಟು ಪೆಟ್ಟು ತಿಂದ ಪರಿಸ್ಥಿತಿ ಈಗ ಪಾಕಿಸ್ತಾನದ್ದು.
ಬಲೂಚಿಸ್ತಾನ ಎಂಬ ಪಾಕ್ ಸೈನಿಕ ಗುಡಾರ
ಪ್ರಸ್ತುತ ಪಾಕಿಸ್ತಾನದ ಶೇ. ೪೬ ಭೂಭಾಗ ಹೊಂದಿರುವ ಬಲೂಚಿಸ್ತಾನ (ಸರಿಸುಮಾರು ಫ್ರಾನ್ಸ್ನಷ್ಟು ದೊಡ್ಡ ಭೂಭಾಗ) ಇಂದು ಜಗತ್ತಿನ ಅತ್ಯಂತ ಹಿಂದುಳಿದ ಪ್ರದೇಶ. ಹಾಗೆಂದು ಇಲ್ಲಿ ಸಂಪನ್ಮೂಲಗಳಿಗೇನೂ ಕೊರತೆಯಿಲ್ಲ. ಇದು ಅತ್ಯಂತ ಸಂಪದ್ಭರಿತ ಹಾಗೂ ದಕ್ಷಿಣ ಏಷ್ಯಾದ ಅತ್ಯಂತ ಹೆಚ್ಚು ನೈಸರ್ಗಿಕ ಸಂಪತ್ತನ್ನು ಹೊಂದಿರುವ ಪ್ರದೇಶ. ಅಗಾಧ ಪ್ರಮಾಣದ ಚಿನ್ನ-ತಾಮ್ರದ ಗಣಿಗಳು, ಅನಿಲ, ಯುರೇನಿಯಂ ಹಾಗೂ ನೈಸರ್ಗಿಕ ತೈಲನಿಕ್ಷೇಪಗಳು, ಕಲ್ಲಿದ್ದಲು, ಕ್ರೋಮೈಟ್, ಹರಳು ಕಲ್ಲುಗಳು ಮುಂತಾದ ಅಪರೂಪದ ಖನಿಜಸಂಪತ್ತುಗಳು ಈ ಭಾಗದಲ್ಲಿ ಹೇರಳವಾಗಿ ಇವೆ. ಜೊತೆಗೆ ಜಗತ್ತಿನ ಭವಿಷ್ಯದ ತೈಲ ಹಾಗೂ ಅನಿಲ ಮಾರ್ಗ ಎಂಬ ಖ್ಯಾತಿಯೂ ಈ ಭೂಭಾಗಕ್ಕಿದೆ.
ಆದರೆ ಈ ಭೂಭಾಗವನ್ನು ಪಾಕಿಸ್ತಾನ ಅಮಾನುಷವಾಗಿ ನಡೆಸಿಕೊಳ್ಳುತ್ತಿದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಇದು ಪಾಕಿಸ್ತಾನದ ದೌರ್ಜನ್ಯಗಳ ಪ್ರಯೋಗಭೂಮಿ; ಭಯೋತ್ಪಾದಕರ ಕಾರ್ಖಾನೆ; ಪಾಕಿಸ್ತಾನದ ಸೇನಾ ಗುಡಾರ!
ಈ ಭೂಭಾಗದಲ್ಲಿ ಪಾಕಿಸ್ತಾನೀ ಸೈನ್ಯದ ೬೯ ಅರೆಮಿಲಿಟರಿ ಪಡೆಯ ದಂಡುಗಳು, ೬ ಭಾರೀ ಶಸ್ತಾಸ್ತ್ರ ಪಡೆಗಳ ದಂಡುಗಳಿವೆ. ಪರಮಾಣು, ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳ ಕೇಂದ್ರಗಳಿವೆ. ಒಟ್ಟಾರೆ ಬಲೂಚ್ ಎಂದರೆ ಪಾಕ್ನ ಬಲಾಢ್ಯ ಮಿಲಿಟರಿ ನೆಲೆ. ಎಲ್ಲೆಡೆ ಸೇನಾ ದಂಡುಗಳೇ. ತಮ್ಮ ತವರು ನೆಲದಲ್ಲಿಯೇ ಬಲೂಚಿಗಳು ಪಾಕ್ನ ೭೦೦ ಚೆಕ್ಪೋಸ್ಟ್ಗಳನ್ನು ದಾಟಬೇಕಾದ ದುಃಸ್ಥಿತಿಯಲ್ಲಿದ್ದಾರೆ.
ಇನ್ನು ಬಲೂಚಿಗಳ ಸಾಮಾಜಿಕ ಸ್ಥಿತಿಗತಿ ನಾಯಿಪಾಡು. ಸಂಪದ್ಭರಿತ ಬಲೂಚ್ನ ಶೇ. ೮೦ರ? ಭಾಗಗಳಿಗೆ ದೂರವಾಣಿ ಸಂಪರ್ಕವೇ ಇಲ್ಲ. ಶೇ. ೨೫ರಷ್ಟೂ ತಲಪದ ಸಾಕ್ಷರತೆಯ ಪ್ರಮಾಣ. ರಸ್ತೆ, ಶಾಲೆಗಳನ್ನೇ ಕಾಣದ ಜಿಲ್ಲೆಗಳು. ಬಲೂಚ್ನ ೧೦ ಜಿಲ್ಲೆಗಳು ಆಫ್ರಿಕದ ಅತಿ ಹಿಂದುಳಿದ ಪ್ರದೇಶಗಳಿಗಿಂತಲೂ ಹೀನಾಯ ಸ್ಥಿತಿಯಲ್ಲಿವೆ. ಭೂಮಿಯ ಅತ್ಯಂತ ಕೆಟ್ಟ ಪ್ರದೇಶ ಎಂಬ ಖ್ಯಾತಿಯೂ ಈ ಭಾಗಕ್ಕಿದೆ ಎನ್ನುತ್ತದೆ ಅಧ್ಯಯನವರದಿಯೊಂದು. ಅಮೆರಿಕದ ಪಾಕ್ ರಾಯಭಾರಿ (೨೦೦೮ರಿಂದ ೧೧ರತನಕ) ಯಾಗಿದ್ದ ಹುಸೈನ್ ಹಕ್ವಾನಿ “ಬಲೂಚಿಸ್ತಾನವು ಪಾಕಿಸ್ತಾನಕ್ಕೆ ಅಗತ್ಯವಾದ ಶೇ. ೪೦ರಷ್ಟು ವಿದ್ಯುತ್ ಮತ್ತು ಅನಿಲವನ್ನು ಪೂರೈಸುತ್ತದೆ. ಆದರೆ ಬಲೂಚಿಸ್ತಾನದ ಶೇ. ೪೬.೬ರಷ್ಟು ಭಾಗ ಇನ್ನೂ ವಿದ್ಯುತ್ ಸಂಪರ್ಕವನ್ನೇ ಪಡೆದಿಲ್ಲ” ಎಂದು ಬಲೂಚ್ನ ವಾಸ್ತವಗಳನ್ನು ತೆರೆದಿಟ್ಟಿದ್ದಾರೆ.
ಹೀಗೆ ಪಾಕಿಸ್ತಾನದ ಸಿಂಧ್-ಪಂಜಾಬ್ ಭಾಗದ ಅಗತ್ಯವನ್ನು ಪೂರೈಸುವುದಕ್ಕಾಗಿ ಬಲೂಚನ್ನು ಬಳಸಿಕೊಳ್ಳಲಾಗುತ್ತಿದೆ.
ಕೆಲ ಸಮೀಕ್ಷಾ ವರದಿಗಳು
ಕರಾಚಿಯ ಸಾಮಾಜಿಕ ನೀತಿ ಮತ್ತು ಅಭಿವೃದ್ಧಿ ಕೇಂದ್ರ (SPDC) ನಡೆಸಿದ ’ಪಾಕಿಸ್ತಾನದ ಪ್ರಾಂತೀಯ ಖಾತೆಗಳು – ವಿಧಾನ ಮತ್ತು ಅಂದಾಜು ೧೯೭೩- ೨೦೦೦’ ಎಂಬ ಅಧ್ಯಯನ ವರದಿಯಲ್ಲಿ ಬಲೂಚಿಸ್ತಾನವು ಅಭಿವೃದ್ಧಿಯ ಪಥದಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.
ಮಾಧ್ಯಮ ವರದಿಯ ಪ್ರಕಾರ, ಲಾಹೋರ್ನ ಮಾನವ ಅಭಿವೃದ್ಧಿ ಸೂಚ್ಯಂಕ (HDI) ೦.೮೦೬ರಷ್ಟಿದರೆ ಬಲೂಚ್ನ ವ್ರಾನ್, ಕ್ವಿಲಾ, ಅಬ್ದುಲ್ಲಾ ಮತ್ತು ಜಾಲಾ ಜಿಲ್ಲೆಗಳ ಸೂಚ್ಯಂಕ ೦.೪೬೭, ೦.೪೯೯ ಮತ್ತು ೦.೪೩೫ರಷ್ಟಿದೆ. ಇನ್ನುಳಿದವುಗಳ ಗತಿ ದೇವರೇ ಬಲ್ಲ.
ಬಲೂಚ್ನ ಶೇ. ೬೩ರಷ್ಟು ಜನ ಆಹಾರ ಅಭದ್ರತೆಯಿಂದ ಬಳಲುತ್ತಿದ್ದಾರೆ ಎನ್ನುತ್ತದೆ ೨೦೧೧ರ ಪಾಕಿಸ್ತಾನದ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆ.
ಲಾಹೋರ್ ವಿಲಾಸಿಗಳಿಗೆ ಬಲೂಚಿಸ್ತಾನದ ಅಭಿವೃದ್ಧಿಯ ಬಗ್ಗೆ ಅಜ್ಞಾನ ಮಾತ್ರವಲ್ಲ, ಹೆಚ್ಚಿನವರಿಗೆ ಬಲೂಚಿಸ್ತಾನದ ಒಂದೇ ಒಂದು ನಗರದ ಹೆಸರೂ ತಿಳಿದಿಲ್ಲ. ಪಾಕ್ನ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಒಬ್ಬನೇ ಒಬ್ಬ ವ್ಯಕ್ತಿಗೂ ಪಾಕ್ ಬಲಪಂಥೀಯ ಹೋರಾಟಗಾರ ಮಾಮಾ ಖಾದರ್ ಹೆಸರು ತಿಳಿದಿಲ್ಲ – ಎಂದಿದ್ದರು ಡಾಕ್ಯುಮೆಂಟರಿ ಚಿತ್ರನಿರ್ಮಾಪಕರೊಬ್ಬರು (೨೦೧೧ರಲ್ಲಿ).
ನಿರಂತರ ಕಾಣೆಯಾಗುತ್ತಿರುವವರ ಕುರಿತು ಜಾಗೃತಿಗಾಗಿ ಬಲೂಚಿ ಹೋರಾಟಗಾರರು ಕ್ವೆಟ್ಟಾದಿಂದ ಇಸ್ಲಾಮಾಬಾದ್ವರೆಗೆ ಬೃಹತ್ ಮೆರವಣಿಗೆ ನಡೆಸಿದರೂ ಪಾಕ್ನ ಇತರೆಡೆಯ ವ್ಯಕ್ತಿಗಳಿಗೆ ಅದು ತಿಳಿಯುವುದಿಲ್ಲ. ಮಾಧ್ಯಮಗಳಂತೂ ಅದನ್ನು ವರದಿ ಮಾಡಲಾರವು ಎನ್ನುತ್ತಾರೆ ಪಾಕ್ನಲ್ಲಿರುವ ವಿದೇಶೀ ಪತ್ರಕರ್ತರು.
ರಾಜಕೀಯ ಅಸ್ಪೃಶ್ಯತೆ
ಅಗಾಧ ಖನಿಜಸಂಪತ್ತಿನ ಆಗರವಾಗಿರುವ ಬಲೂಚಿಸ್ತಾನ ಆರ್ಥಿಕ ಅಭಾವದಿಂದ ನರಳುತ್ತಿದೆ. ಸರ್ಕಾರ ಹಾಗೂ ಪಾಕಿಸ್ತಾನಿ ಸೇನೆ ಬಲೂಚಿಗಳನ್ನು ರಾಜಕೀಯವಾಗಿಯೂ ದೂರವಿಟ್ಟಿವೆ. ಇಲ್ಲಿ ರಚನೆಗೊಳ್ಳುವ ಸರ್ಕಾರವೂ ಪಾಕ್ ಸೇನೆ ಹಾಗೂ ಸರ್ಕಾರೀ ಪ್ರತಿನಿಧಿಗಳನ್ನ? ಒಳಗೊಂಡಿರುವುದು.
ಸ್ವತಂತ್ರ ಪಾಕಿಸ್ತಾನದ ಪ್ರಾರಂಭದ ದಿನಗಳಲ್ಲಿ ಬಲೂಚಿಸ್ತಾನದ ೩ನೇ ಗವರ್ನರ್-ಜನರಲ್ ಆಗಿದ್ದ ಗೌಸ್ ಬಕ್ಷ್ ಬಿಜೆನ್ಜೊ ಅವರು “ನಾವು ಪಾಕಿಸ್ತಾನವಿಲ್ಲದೇ ಬದುಕಬಲ್ಲೆವು. ಪಾಕಿಸ್ತಾನದಿಂದ ಹೊರಹೋಗುವುದರಲ್ಲಿ ನಮ್ಮ ಏಳಿಗೆಯಿದೆ. ಆದರೆ ಪ್ರಶ್ನೆಯಿರುವುದು ನಾವಿಲ್ಲದ ಪಾಕಿಸ್ತಾನ ಹೇಗಿರುತ್ತದೆ ಎಂಬುದು. ಒಂದೊಮ್ಮೆ ಪಾಕಿಸ್ತಾನ ನಮ್ಮನ್ನು ಸಾರ್ವಭೌಮ ಜನರಂತೆ ನಡೆಸಿಕೊಳ್ಳಲು ಬಯಸುವುದಾದರೆ ನಾವು ಪಾಕಿಸ್ತಾನದೊಂದಿಗೆ ಸ್ನೇಹ- ಸಹಕಾರದಿಂದ ಜೊತೆಗೂಡಲು ಸಿದ್ಧರಿದ್ದೇವೆ. ಪಾಕಿಸ್ತಾನ ಇದಕ್ಕೊಪ್ಪದೆ ಇದ್ದಲ್ಲಿ ಈಗಿರುವ ಈ ’ಅದೃ?’ವನ್ನು ಒಪ್ಪಿಕೊಳ್ಳುವಂತೆ ಬಲಾತ್ಕರಿಸಿದಲ್ಲಿ ಪ್ರತಿಯೊಬ್ಬ ಬಲೂಚೀಪುತ್ರರೂ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧರಾಗುತ್ತಾರೆ” – ಎಂದು ಎಚ್ಚರಿಸಿದ್ದರು.
ಆದರೆ ಪಾಕಿಸ್ತಾನೀ ಸರ್ಕಾರ-ಸೇನೆ ಇದನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಪರಿಣಾಮವಾಗಿ ಪಂಜಾಬಿ ಪ್ರಾಬಲ್ಯ ಮತ್ತು ಇಸ್ಲಾಮಾಬಾದ್ನ ಮಿಲಿಟರಿ ಸರ್ಕಾರದ ಪರಭಕ್ಷಕ ವಸಾಹತುಶಾಹಿಗಳಿಂದ ಮಾತೃಭೂಮಿಯನ್ನು ಉಳಿಸಲು ಬಲೂಚಿಗಳು ಹೋರಾಟ ನಡೆಸುತ್ತಿದ್ದಾರೆ.
ಬಿಕ್ಕಟ್ಟಿನ ಮೂಲ
ಬ್ರಿಟಿಷರ ಆಳ್ವಿಕೆಯ ವೇಳೆ ಈಗಿನ ಬಲೂಚಿಸ್ತಾನವು ನಾಲ್ಕು ರಾಜ್ಯಗಳಾಗಿ ಹಂಚಿಹೋಗಿತ್ತು. ೧೯೪೭ರಲ್ಲಿ ಬ್ರಿಟಿಷರ ಆಳ್ವಿಕೆ ಕೊನೆಗೊಂಡು ಭಾರತದ ವಿಭಜನೆಯಾಗಿ ಪಾಕಿಸ್ತಾನ ಎಂಬ ದೇಶ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಈ ನಾಲ್ಕು ರಾಜ್ಯಗಳಲ್ಲಿ ಮೂರು ರಾಜ್ಯಗಳು ಪಾಕಿಸ್ತಾನದ ಜೊತೆ ವಿಲೀನಗೊಂಡವು. ಆದರೆ ಕಲತ್ ರಾಜ್ಯದ ರಾಜ ಅಹ್ಮದ್ ಯಾರ್ ಖಾನ್ ವಿಲೀನಕ್ಕೆ ಒಪ್ಪಲಿಲ್ಲ.
ಖಾನ್ ಆಫ್ ಕಲತ್ ಒಂದು ಪ್ರಮಾದವೆಸಗಿದ್ದ. ಬ್ರಿಟಿಷ್ ಸರ್ಕಾರದೊಂದಿಗೆ ಸ್ವತಂತ್ರ ಬಲೂಚ್ ಕುರಿತು ವಾದಮಾಡಲು ವಕೀಲರೊಬ್ಬರನ್ನು ನೇಮಿಸಿಕೊಂಡಿದ್ದ. ಅವರ್ಯಾರು ಗೊತ್ತಾ? ಪಾಕಿಸ್ತಾನ ಜನಕ ಮಹಮದ್ ಆಲಿ ಜಿನ್ನಾ!
೧೯೪೭ರ ಆಗಸ್ಟ್ ೧೧ರಂದು ಬ್ರಿಟಿಷ್ ಸರ್ಕಾರ ಈ ಭಾಗಕ್ಕೆ ಸ್ವಾತಂತ್ರ್ಯ ನೀಡಿತ್ತು. ಬಲೂಚ್ಗೆ ಸ್ವಾತಂತ್ರ್ಯ ನೀಡಿರುವ ಸುದ್ದಿಯನ್ನು ’ನ್ಯೂಯಾರ್ಕ್ ಟೈಮ್ಸ್’ ಆಗಸ್ಟ್ ೧೨ರಂದೇ ಪ್ರಕಟಿಸಿತ್ತು. ಬ್ರಿಟಿಷರು ಭಾರತ ಬಿಟ್ಟು ಹೋದ ಏಳೂವರೆ ತಿಂಗಳುಗಳವರೆಗೂ ಬಲೂಚ್ ಸ್ವತಂತ್ರವಾಗಿಯೇ ಇತ್ತು. ಇಂದಿಗೂ ಬಲೂಚ್ನಾದ್ಯಂತ ಆಗಸ್ಟ್ ೧೧ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ.
ಪಾಕಿಸ್ತಾನ ಸೇರುವಂತೆ ಪಾಕ್ ಪ್ರಧಾನಿ ಮೊಹಮ್ಮದ್ ಆಲಿ ಜಿನ್ನಾ, ಖಾನ್ ಅವರನ್ನು ಒತ್ತಾಯಿಸಿದರು. ಖಾನ್ ಒಪ್ಪದಿದ್ದಾಗ, ೧೯೪೮ರಲ್ಲಿ ಸೇನೆ ಬಳಸಿ ದಾಳಿ ನಡೆಸಿ, ಖಾನ್ನ ಮೇಲೆ ’ವಿಲೀನ ಒಪ್ಪಂದ’ಕ್ಕೆ ಸಹಿ ಮಾಡಬೇಕಾದ ಒತ್ತಡ ಸೃಷ್ಟಿಸಿದ. ಖಾನ್ ಅವರ ಸಹೋದರರಾದ ಆಘಾ ಅಬ್ದುಲ್ ಕರೀಂ ಬಲೂಚ್ ಮತ್ತು ಮೊಹಮ್ಮದ್ ರಹೀಂ ಸೇನೆಯ ವಿರುದ್ಧ ಸಶಸ್ತ್ರ ಹೋರಾಟ ಆರಂಭಿಸಿದರು. ಅಂದು ಆರಂಭವಾದ ಬಲೂಚಿಸ್ತಾನ ಹೋರಾಟವು ತನ್ನ ತೀವ್ರತೆಯಲ್ಲಿ, ಸ್ವರೂಪದಲ್ಲಿ ಹಲವು ಏರಿಳಿತಗಳನ್ನು ಕಂಡು ಇಂದಿಗೂ ಮುಂದುವರಿದಿದೆ.
ಈ ಹೋರಾಟಗಾರರ ಮೇಲೆ ಪಾಕ್ ಸೇನೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದೆ. ಬಲೂಚಿ ರಾಷ್ಟ್ರೀಯವಾದಿಗಳನ್ನು, ಪ್ರತಿಭಟನಾಕಾರರನ್ನು ಒಕ್ಕಲೆಬ್ಬಿಸುತ್ತಿದೆ. ಅವರು ತಪ್ಪು ಮಾಡಿದ್ದಾರೋ ಇಲ್ಲವೋ ಎಂಬ ಕುರಿತು ಯಾವುದೇ ವಿಚಾರಣೆ ನಡೆಸದೆ ಮನಬಂದಂತೆ ಕೊಲ್ಲಲಾಗುತ್ತಿದೆ. ಎಲ್ಲಿಯಾದರೂ ಪ್ರತಿಭಟನೆಯ ವಾಸನೆಯೇನಾದರೂ ಬಂದಲ್ಲಿ ಆ ಊರಿನ ಎಲ್ಲ ಗಂಡಸರು ಮಕ್ಕಳು ರಾತ್ರೋರಾತ್ರಿ ನಾಪತ್ತೆಯಾದ ಅಸಂಖ್ಯ ಉದಾಹರಣೆಗಳಿವೆ. ಇವರ ನಿಯಂತ್ರಣಕ್ಕೆ ಪಾಕ್ ಸೇನೆ ರಾಸಾಯನಿಕಗಳನ್ನೂ ಬಳಸುತ್ತಿದೆ ಎಂಬ ಆಪಾದನೆಗಳಿವೆ. ಒಟ್ಟಾರೆ ಪಾಕಿಸ್ತಾನ ಈ ಭಾಗದಲ್ಲಿ ಮಾನವಹಕ್ಕುಗಳ ದಮನ ಮಾತ್ರವಲ್ಲ, ನಾಗರಿಕರ ಮಾರಣಹೋಮವನ್ನೇ ನಡೆಸುತ್ತಿದೆ. ಇಲ್ಲಿ ಪಾಕಿಸ್ತಾನ ಅಕ್ಷರಶಃ ’ಕೊಲ್ಲು, ಗುಡ್ಡೆಹಾಕು’ ನೀತಿಯನ್ನು ಅನುಸರಿಸುತ್ತಿದೆ.
ಸ್ವಾತಂತ್ರ್ಯ ಕೇಳುತ್ತಿರುವ ಬಲೂಚಿಗಳು ಹಾಗೂ ಪಾಕಿಸ್ತಾನದ ಸೇನೆಯ ನಡುವಿನ ಸಂಘ?ದಲ್ಲಿ ಈವರೆಗೆ ೧೧ ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ’ಇಂಟರ್ನ್ಯಾ?ನಲ್ ಇನ್ಸ್ಟಿಟ್ಯೂಟ್ ಫಾರ್ ಸ್ಟ್ರಾಟಜಿಕ್ ಸ್ಟಡೀಸ್’ ಸಂಸ್ಥೆ ಅಂದಾಜು ಮಾಡಿದೆ. ಅಲ್ಲದೆ, ಪ್ರಾಂತದಿಂದ ಕಣ್ಮರೆಯಾದವರ ಸಂಖ್ಯೆಯ ನಿಖರ ಲೆಕ್ಕವಿಲ್ಲದಿದ್ದರೂ ಐದಂಕಿ ದಾಟಿರುವುದರಲ್ಲಿ ಅನುಮಾನವಿಲ್ಲವೆನ್ನಲಾಗಿದೆ.
ಪತ್ರಿಕಾ ಸ್ವಾತಂತ್ರ್ಯ
ಇಷ್ಟೆಲ್ಲ ನಡೆಯುತ್ತಿದ್ದರೂ ಬಲೂಚಿಸ್ತಾನದ ಈ ವಾಸ್ತವ ಚಿತ್ರಣ ಹೊರಜಗತ್ತಿಗೆ ಅಸ್ಪಷ್ಟ ಮತ್ತು ಅಜ್ಞಾತವಾಗಿಯೆ ಉಳಿದಿದೆ. ಏಕೆಂದರೆ ಈ ಪ್ರಾಂತಗಳಿಗೆ ಪಾಕ್ ಸೇನೆಯ ಅನುಮತಿಯಿಲ್ಲದೆ ಯಾರಿಗೂ ಭೇಟಿ ನೀಡಲಾಗದು. ಪತ್ರಕರ್ತರಿಗಂತೂ ಪಾಕಿಸ್ತಾನದಲ್ಲಿ ಇಂಥದ್ದೊಂದು ಭಾಗವಿದೆಯೇ ಎಂಬ? ಅಪರಿಚಿತ ಅದು. ಈ ಭೂಭಾಗದ ವರದಿ ಮಾಡಹೊರಟ ಪತ್ರಕರ್ತರು ಕಾಣೆಯಾದ, ಬಂಧನಕ್ಕೊಳಗಾದ, ಪಾಕಿಸ್ತಾನದಿಂದಲೇ ಹೊರಹಾಕಲ್ಪಟ್ಟ ಘಟನೆಗಳಿವೆ.
ಅನುಮತಿಯಿಲ್ಲದೆ ಬಲೂಚಿಸ್ತಾನಕ್ಕೆ ತೆರಳುವುದೆಂದರೆ ಪ್ರಾಣದ ಆಸೆ ಕಳೆದುಕೊಂಡಂತೆಯೇ’ ಎನ್ನುತ್ತಾರೆ ಪಾಕಿಸ್ತಾನದಲ್ಲಿರುವ ಸ್ಪೈನ್ನ ’ಇ.ಎಫ್.ಇ. ನ್ಯೂಸ್ ಏಜೆನ್ಸಿ’ಯ ವರದಿಗಾರ ಪಾವ್ ಮಿರಾಂದ.
ಪಾಕಿಸ್ತಾನದ ’ಕೆಂಪುಗೆರೆ’ಯನ್ನು ದಾಟಿ ಬಲೂಚಿಸ್ತಾನದ ಕುರಿತು ವರದಿ ಮಾಡಹೊರಟ, ಇಸ್ಲಾಮಾಬಾದ್ನಲ್ಲಿ ನೆಲೆಸಿರುವ ’ದಿ ಗಾರ್ಡಿಯನ್’ ಮತ್ತು ’ದಿ ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯ ವರದಿಗಾರ ಡೆಕ್ಲಾನ್ ವಾಲ್ಶ್ನನ್ನು ವಶಕ್ಕೆ ಪಡೆದ ಪೊಲೀಸರು ಯಾವುದೇ ಪೂರ್ವಾಪರವನ್ನು ವಿಚಾರಿಸದೆ, ಕಾರಣವನ್ನೂ ನೀಡದೆ ೭೨ ಗಂಟೆಗಳೊಳಗೆ ದೇಶ ಬಿಟ್ಟು ಹೋಗುವಂತೆ ಆದೇಶಿಸಿತು. ವಾಲ್ಶ್ ಅದೃಷ್ಟವಂತ! ಯಾಕೆಂದರೆ ಆತ ಅತ್ಯಂತ ಸಣ್ಣ ಶಿಕ್ಷೆಗೊಳಗಾಗಿದ್ದ – ಎನ್ನುತ್ತಾರೆ ಆತನ ಪತ್ರಕರ್ತ ಮಿತ್ರರು.
೨೦೦೬ರಲ್ಲಿ ನಡೆದ ಇನ್ನೊಂದು ಘಟನೆ. ಪೊಲೀಸ್ ವಿಶೇ?ದಳದ ಸದಸ್ಯನೆಂದು ಸ್ವಯಂಘೋಷಿತ ವ್ಯಕ್ತಿಯ ಕೈಗೆ ಬಲೂಚ್ನಲ್ಲಿ ಸಿಕ್ಕಿಬಿದ್ದ ’ಟೈಮ್ಸ್’ ಪತ್ರಿಕೆಯ ವರದಿಗಾರ ಕ್ಯಾರಲಾಟ್ ಗಾಲ್ನ ಮೊಬೈಲ್, ಕಂಪ್ಯೂಟರ್, ಪುಸ್ತಕಗಳನ್ನು ಜಫ್ತಿಗೊಳಿಸಿಕೊಂಡದ್ದ? ಅಲ್ಲ, ಆತನನ್ನು ಅಮಾನು?ವಾಗಿ ಥಳಿಸಿ ಮಹಡಿಯಿಂದ ಹೊರಕ್ಕೆ ತಳ್ಳಿದ್ದರು. ೨೦೧೩ರ ಮಾರ್ಚ್ನಲ್ಲಿ ನಾಪತ್ತೆಯಾಗಿದ್ದ ಬಲೂಚ್ ಭಾ?ಯ ದಿನಪತ್ರಿಕೆ ’ತವಾರ್’ನ ಪತ್ರಕರ್ತನೊಬ್ಬನ ಮೃತದೇಹ ಆಗಸ್ಟ್ ೨೧ರಂದು ಕರಾಚಿಯಲ್ಲಿ ಪತ್ತೆಯಾಗಿತ್ತು. ಆ ಮೃತದೇಹವನ್ನು ಅತ್ಯಂತ ಅಮಾನುಷವಾಗಿ ತುಂಡರಿಸಲಾಗಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ಅವರ ಕುಟುಂಬದವರಿಗೂ ಕೂಡಾ ಆ ಶವವನ್ನು ಗುರುತಿಸಲು ೨೪ ಗಂಟೆಗಳೇ ಬೇಕಾದವು.
ಈ ಕೆಲವು ಉದಾಹರಣೆಗಳು ಬಲೂಚ್ ಪರಿಸ್ಥಿತಿಯು ಎಷ್ಟು ಭಯಾನಕ ಎಂಬುದನ್ನು ತಿಳಿಸಲಷ್ಟೇ.
ಸ್ಥಳೀಯ ಪತ್ರಕರ್ತರೂ ಕೂಡ ಅಲ್ಲಿ ಏನಾಗುತ್ತಿದೆ ಎಂಬುದನ್ನು ವರದಿ ಮಾಡಲು ಹಿಂಜರಿಯುತ್ತಾರೆ. ಹಾಗೆ ವರದಿ ಮಾಡುವುದು ‘ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಎಂಬ ಭಾವನೆ ಇದೆ’ ಎನ್ನುತ್ತಾರೆ ಪಾಕಿಸ್ತಾನ ಮೂಲದ ಪತ್ರಕರ್ತ ಮಲಿಕ್ ಸಿರಾಜ್ ಅಕ್ಬರ್. ಪ್ಯಾರಿಸ್ ಮೂಲದ ಎನ್.ಜಿ.ಒ. ಪಾಕಿಸ್ತಾನಕ್ಕೆ ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ೧೫೯ನೇ ಸ್ಥಾನ ನೀಡಿದೆ. ಜೊತೆಗೆ ’ಪತ್ರಕರ್ತರಿಗೆ ಜಗತ್ತಿನ ಅತ್ಯಂತ ಅಪಾಯಕಾರಿ ದೇಶ’ ಎಂದೂ ಅದು ಬೊಟ್ಟುಮಾಡಿದೆ.
ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯ ಈ ಅಮಾನುಷ ಕೃತ್ಯಗಳಿಂದ ೧೯೪೮, ೧೯೫೮ ಮತ್ತು ೧೯೭೮ರಲ್ಲಿ ಪಾಕ್ ವಿರುದ್ದ ಬಂಡಾಯ, ದೊಡ್ಡಮಟ್ಟದ ದಂಗೆಗಳೂ ಆಗಿದ್ದವು. ಇದೀಗ ೨೦೦೦ದ ಬಳಿಕ ಈ ಸಂಘರ್ಷ ಮತ್ತೆ ಆರಂಭವಾಗಿದ್ದು, ತೀವ್ರಸ್ವರೂಪ ಪಡೆದುಕೊಂಡಿದೆ. ಇದೀಗ ಮೋದಿ ಹೇಳಿಕೆಯಿಂದ ಇದಕ್ಕೆ ಇನ್ನಷ್ಟು ಬಲ ಬಂದಿದ್ದು, ಬಲೂಚ್ನ ಗಲ್ಲಿಗಳಲ್ಲಿ ಹಾಗೂ ಜರ್ಮನಿ, ಇಂಗ್ಲೆಂಡ್, ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಬಲೂಚಿಗಳು ಸ್ವಾತಂತ್ರ್ಯಕ್ಕೆ ಆಗ್ರಹಿಸಿ ಬೀದಿಗಿಳಿದಿದ್ದಾರೆ.
ಈ ಮೂಲಕ ಸದಾ ಕಾಶ್ಮೀರದಲ್ಲಿ ಬೆಂಕಿಹಚ್ಚಿ ಅದರಲ್ಲಿಯೇ ಚಳಿ ಕಾಯಿಸಿಕೊಳ್ಳುವ ಪಾಕಿಸ್ತಾನಕ್ಕೆ ’ನಿಮ್ಮ ಮನೆಯಲ್ಲಿ ನೀವೇ ಹಚ್ಚಿರುವ ಬೆಂಕಿಯ ಬಗ್ಗೆ ಮೊದಲು ಜಗತ್ತಿಗೆ ಉತ್ತರಿಸಿ’ ಎಂದು ಭಾರತ ತೀಕ್ಷ್ಣವಾಗಿ ಎಚ್ಚರಿಸಿದೆ. ವಿಶ್ವಸಂಸ್ಥೆಯಂತಹ ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಇದನ್ನು ಭಾರತ ಪ್ರಸ್ತಾಪಿಸುವ ಸಾಧ್ಯತೆ ಇರುವುದರಿಂದ ಪಾಕ್ ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗಿದೆ. ಈ ಮೂಲಕ ದಕ್ಷಿಣ ಏಷ್ಯಾದ ಚೆಸ್ಬೋರ್ಡ್ನಲ್ಲಿ ಹೊಸ ಆಟವೊಂದು ಪ್ರಾರಂಭಗೊಂಡಿದೆ. ಪ್ರಧಾನಿ ಮೋದಿಯವರು ತಮ್ಮ ಕೆಂಪುಕೋಟೆ ಹೇಳಿಕೆಯ ಮೂಲಕ ಪಾಕ್ ಸೈನ್ಯ ಮತ್ತು ಸರ್ಕಾರಕ್ಕೆ ’ಚೆಕ್’ ನೀಡಿದ್ದಾರೆ!
ಚೀನಾದ ಲೆಕ್ಕಾಚಾರ
ಇಡೀ ಭಾರತ ಬ್ರಿಟಿಷರ ವಶದಲ್ಲಿದ್ದಾಗಲೂ ಬಲೂಚಿಸ್ತಾನ ಬ್ರಿಟಿ?ರ ನೇರ ವಸಾಹತಾಗಿರಲಿಲ್ಲ. ಆದರೆ ಅವರು, ಒಂದಿಲ್ಲೊಂದು ಕಾರಣ ಹೇಳಿ ಬಲೂಚನ್ನು ಅಂಕುಶದಲ್ಲಿಟ್ಟುಕೊಂಡಿದ್ದರು. ಬ್ರಿಟಿ?ರ ಬಲೂಚ್ ಪ್ರೀತಿಗೆ ಪ್ರಮುಖ ಕಾರಣ ಸಂಪತ್ತಿಗಿಂತಲೂ ಅದರ ಭೌಗೋಳಿಕ ಸ್ಥಾನ. ಪಾರ್ಸಿ-ಓಮನ್ ಕೊಲ್ಲಿಗೆ ತಾಗಿಕೊಂಡಿರುವ 700 ಮೈಲಿ ಉದ್ದದ ಸಮುದ್ರತೀರ ಹಾಗೂ ಗ್ವಾದಾರ್ ಬಂದರನ್ನು ಹೊಂದಿರುವ ಈ ಪ್ರದೇಶ ಪಾಶ್ಚಾತ್ಯ ರಾಷ್ಟ್ರಗಳೊಂದಿಗೆ ವ್ಯಾಪಾರವಹಿವಾಟಿಗೆ ಹೆದ್ದಾರಿ. ಅರಬ್ಬೀ ಸಮುದ್ರದ ಮೇಲೆ ತಮಗಿರುವ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲು ಬ್ರಿಟಿಷರು ಅನಿವಾರ್ಯವಾಗಿ ಬಲೂಚ್ನ ಮೇಲೆ ಹಿಡಿತ ಸಾಧಿಸಲೇಬೇಕಿತ್ತು. ಈ ಕಾರಣಕ್ಕಾಗಿ ’ಗ್ರೇಟ್ ಗೇಮ್’ ಹಾಗೂ ೨ನೇ ಮಹಾಯುದ್ಧದ ಸಂದರ್ಭದಲ್ಲಿಯೂ ’ಬ್ರಿಟಿಷ್ ಭಾರತ’ ಸರ್ಕಾರ ರಷ್ಯಾವನ್ನು ವ್ಯವಸ್ಥಿತವಾಗಿ ಬಲೂಚ್ನಿಂದ ದೂರವಿಟ್ಟಿತ್ತು. 1928ರಲ್ಲಿ ಪಶ್ಚಿಮ ಬಲೂಚಿಸ್ತಾನದ ರಾಜ ಮೀರ್ ದೋಸ್ತ್ ಮಹಮದ್ ಬಾರಂಜಾಯ್ ಸೋವಿಯತ್ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಎಂಬ ಒಂದೇ ಕಾರಣಕ್ಕೆ ಆತನ ಆಡಳಿತಕ್ಕೆ ಮನ್ನಣೆ ನೀಡಲು ನಿರಾಕರಿಸಿತ್ತು.
ಬ್ರಿಟಿಷರಿಗೇ ಹೀಗನ್ನಿಸಿರಬೇಕಾದರೆ, ಆಧುನಿಕ ವಿಸ್ತರಣಾವಾದಿ ಚೀನಾ ಹೇಗೆ ಸುಮ್ಮನಿದ್ದೀತು? ಭಾರತದ ಗುಮ್ಮನನ್ನು ತೋರಿಸಿ ಪಾಕಿಸ್ತಾನವನ್ನು ಒಲಿಸಿಕೊಳ್ಳುವುದು ಅದಕ್ಕೇನು ಕಷ್ಟವಲ್ಲ. ಒಮ್ಮೆ ಗ್ವಾದಾರ್ ಬಂದರಿನ ಮೇಲೆ ಹಿಡಿತ ಸಾಧಿಸಿದ್ದೇ ಆದಲ್ಲಿ ಸೌದಿ ದೇಶಗಳೊಂದಿಗೆ ಸಂಬಂಧ ಸಾಧಿಸುವುದು ಹಾಗೂ ಅರಬ್ಬೀ ಸಮುದ್ರದ ಮೇಲೆ ಹಿಡಿತ – ಹೀಗೆ ಎರಡೆರಡು ಲಾಭಗಳು ತೆರೆದುಕೊಳ್ಳುತ್ತವೆ ಎಂಬುದು ಚೀನಾಕ್ಕೆ ಅರಿವಿದೆ. ಜೊತೆಜೊತೆಗೆ ಭಾರತದ ಮೇಲೆ ಹದ್ದುಗಣ್ಣಿಡುವ ಸುವರ್ಣಾವಕಾಶವೂ ಲಭಿಸುತ್ತದೆ. ಈ ಅವಕಾಶವನ್ನು ಚೀನಾ ಹೇಗೆತಾನೆ ಬಿಟ್ಟುಕೊಟ್ಟೀತು? ಅದಕ್ಕಾಗಿಯೇ ’ಚೀನಾ-ಪಾಕಿಸ್ತಾನ ಇಕನಾಮಿಕ್ ಕಾರಿಡಾರ್’ ಎಂಬ ೪೬ ಬಿಲಿಯನ್ ಡಾಲರ್ ಮೊತ್ತದಲ್ಲಿ ಚೀನಾದ ಕಶ್ ನಗರದಿಂದ ಬಲೂಚಿಸ್ತಾನದ ಗ್ವಾದಾರ್ ಬಂದರಿಗೆ ಸಂಪರ್ಕ ಕಲ್ಪಿಸುವ ೨,೦೦೦ ಕಿ.ಮೀ. ಉದ್ದದ ’ಪಾಕ್-ಚೀನಾ ಆರ್ಥಿಕ ಕಾರಿಡಾರ್’ ಯೋಜನೆಯನ್ನು ರೂಪಿಸಿ ಪಾಕಿಸ್ತಾನದ ಅನುಮತಿಯನ್ನೂ ಪಡೆದಿತ್ತು. ಆದರೆ ಇದೀಗ ಮೋದಿ ಎಸೆದ ಚೆಂಡಿನ ಗೂಗ್ಲಿ ಸುಳಿ ಬಲೂಚ್ನಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿದೆ.
ಆರ್ಥಿಕ ಕಾರಿಡಾರ್ಗೆ ವಿರೋಧ ವ್ಯಕ್ತಪಡಿಸಿರುವ ಬಲೂಚಿಸ್ತಾನ ರಾಷ್ಟ್ರವಾದಿಗಳು ಕಾಮಗಾರಿಗೆ ಅಡಚಣೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಜತೆಗೆ ಇಲ್ಲಿ ಸಕ್ರಿಯವಾಗಿರುವ ಪಾಕಿಸ್ತಾನ ತಾಲಿಬಾನ್ ಪಡೆಗಳು ಚೀನಾ ಕಾರ್ಮಿಕರನ್ನು ಅಪಹರಿಸಿ ವಸೂಲಿ ದಂಧೆಯನ್ನು ನಡೆಸುತ್ತಿವೆ. ಚೀನೀ ಕಾರ್ಮಿಕರನ್ನು ಅಪಹರಿಸಿ ಕೊಲೆಗೈದ ಪ್ರಕರಣಗಳೂ ವರದಿಯಾಗುತ್ತಿವೆ. ಈ ಕಾರಣಗಳಿಂದ ಇದೀಗ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಚೀನಾ ಮತ್ತು ಪಾಕಿಸ್ತಾನ ಎರಡೂ ರಾ?ಗಳಿಗೆ ಸವಾಲಾಗಿದೆ. ಇದೇ ಕಾರಣಕ್ಕೆ ಪಾಕಿಸ್ತಾನ ಕಾರಿಡಾರ್ಗೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.
ಚೀನೀ ಕಾರ್ಮಿಕರಿಗೆ ರಕ್ಷಣೆ ಒದಗಿಸಲು ಪಾಕಿಸ್ತಾನ ಸರ್ಕಾರ ಪಂಜಾಬ್ ಪ್ರಾಂತದಲ್ಲಿ ೬,೩೬೪, ಬಲೂಚಿಸ್ತಾನದಲ್ಲಿ ೩,೧೩೪, ಸಿಂಧ್ನಲ್ಲಿ ೨,೬೫೪, ಖೈಬರ್ ಫಖ್ತುಂಕ್ವಾದಲ್ಲಿ ೧,೯೧೨ ಹಾಗೂ ಇಸ್ಲಾಮಾಬಾದ್ ಪ್ರದೇಶದಲ್ಲಿ ೪೩೯ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದೆ. ಅಂದರೆ ’ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್’ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ೭,೦೩೬ ಚೀನಾ ಕಾರ್ಮಿಕರ ರಕ್ಷಣೆಗೆ ಪಾಕ್ ತನ್ನ ದೇಶದ ೧೪,೫೦೩ ಮಂದಿ ಭದ್ರತಾ ಸಿಬ್ಬಂದಿಯ ಕಾವಲನ್ನು ಒದಗಿಸಿದೆ!
ಇತ್ತ ಭಾರತ ಪರಮಾಣು ಪೂರೈಕೆ ಒಕ್ಕೂಟ (ಎನ್ಎಸ್ಜಿ) ಸೇರುವುದನ್ನು ತಪ್ಪಿಸಿ ಮೆರೆದಿದ್ದ ಚೀನಾ ಇದೀಗ ದಕ್ಷಿಣಚೀನಾ ಸಮುದ್ರದ ವಿಷಯದಲ್ಲಿ ಭಾರತವನ್ನೊಲಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದೆ. ಒಟ್ಟಾರೆಯಾಗಿ ಮೋದಿ ನಡೆ ’ಗೇಮ್ ಚೇಂಜರ್’ ಆಗಿ ಪರಿವರ್ತಿತಗೊಂಡಿದೆ ಎಂದರೆ ತಪ್ಪಾಗದು.
ನೆಹರು ಪಾಪದ ಫಲ!
ಮೋದಿಯವರು ಕೆಂಪುಕೋಟೆಯ ಮೇಲೆ ಬಲೂಚ್ ವಿಚಾರವನ್ನು ಉಲ್ಲೇಖಿಸುತ್ತಿದ್ದಂತೆಯೇ ಕಾಂಗ್ರೆಸ್ ಅನುಮಾನಾಸ್ಪದವಾಗಿ ನಡೆದುಕೊಂಡಿತು. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್, ’ಬಲೂಚಿಸ್ತಾನ ಪಾಕಿಸ್ತಾನದ ಅವಿಭಾಜ್ಯ ಅಂಗ. ಮಾನವಹಕ್ಕುಗಳ ಹೆಸರಿನಲ್ಲಿ ಇದರ ಕುರಿತು ಭಾರತ ಹಸ್ತಕ್ಷೇಪ ಮಾಡುವುದು ಸರಿಯಲ್ಲ’ ಎಂದು ಪಾಕಿಸ್ತಾನೀಯನಂತೆ ಭಾರತವನ್ನು ಹಾಗೂ ಭಾರತದ ಪ್ರಧಾನಿಯನ್ನು ಟೀಕಿಸಿದರು. ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬೀ ಆಜಾದ್ ಕೂಡ ಇಂತಹದ್ದೇ ಧ್ವನಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ನ ಈ ಪಾಕ್ಪರ ನೀತಿಗೆ ಪ್ರಬಲವಾದ ಕಾರಣವೊಂದಿದೆ. ಬಹುಶಃ ಇದೇ ಕಾರಣದಿಂದಲೇ ಭಾರತ ಕಳೆದ ಎಂಟು ದಶಕಗಳಿಂದ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನೀತಿಯೊಂದನ್ನು ರೂಪಿಸಲು ಸಾಧ್ಯವಾಗದೇ ಇದ್ದದ್ದು. ಯಾಕೆಂದರೆ ಬಲೂಚ್ನ ಇಂದಿನ ಈ ದುಃಸ್ಥಿತಿಯೂ ಕೂಡಾ ಕಾಂಗ್ರೆಸ್ನ ಅಧಿಕಾರದ ಹಪಾಪಿತನದ, ನಕಲಿ ಜಾತ್ಯತೀತತೆಯ ಬಳುವಳಿ. ಬಲೂಚ್ನತ್ತ ಗುರಿಯಿಟ್ಟರೆ ಅದು ಮೊದಲು ತಾಗುವುದು ನೆಹರು ಮತ್ತು ಕಾಂಗ್ರೆಸ್ನತ್ತ.
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದಿದ್ದ ಬಲೂಚ(ಕಲಾತ್)ನ್ನು ವಶಪಡಿಸಿಕೊಳ್ಳಲು ಜಿನ್ನಾ ಸಂಚು ರೂಪಿಸುತ್ತಲೇ ಇದ್ದ. ಒಂದೊಮ್ಮೆ ಬಲೂಚ್ ಪಾಕಿಸ್ತಾನದ ಪಾಲಾದರೆ ತಾನು ಜೀವನಪೂರ್ತಿ ನರಕದಲ್ಲಿ ಬದುಕಬೇಕಾಗುತ್ತದೆ ಎಂಬ ಸ್ಪಷ್ಟ ಅರಿವು ’ಖಾನ್ ಆಫ್ ಕಲಾತ್’ನಿಗೆ ಇತ್ತು. ಹೀಗಾಗಿ ಅಗತ್ಯವಾದರೆ ಭಾರತದ ಅಧೀನದಲ್ಲಿರಲೂ ಬಲೂಚಿಸ್ತಾನ ಸಿದ್ಧವಿದೆ ಎಂದು ಕಲಾತ್ನ ರಾಜ ಭಾರತಕ್ಕೆ ಪತ್ರ ಬರೆದಿದ್ದ. ಹೇಗೆ ಕಾಶ್ಮೀರದ ರಾಜ ಹರಿಸಿಂಗ್ ಅಪಾಯದ ಅರಿವಾಗಿ ಭಾರತಕ್ಕೆ ಮೊರೆಯಿಟ್ಟನೋ ಅದೇ ರೀತಿ ಅಂದಿನ ಖಾನ್ ಆಫ್ ಕಲಾತ್ ಮೀರ್ ಅಹಮದ್ ಖಾನ್ ಭಾರತಕ್ಕೆ ಮೊರೆಯಿಟ್ಟಿದ್ದ.
ಆದರೆ ಅಧಿಕಾರದ ಅಮಲಿನಲ್ಲಿದ್ದ ನೆಹರು ಮತ್ತು ಕಾಂಗ್ರೆಸ್ಗೆ ಬಲೂಚ್ನ ರಾಜನ ದನಿ ಕೇಳಲೇ ಇಲ್ಲ. ಖಾನ್ ಆಫ್ ಕಲತ್ನ ಪತ್ರ ಅದಾಗಲೇ ರೇಡಿಯೋದಲ್ಲಿ ಪ್ರಸಾರವಾಗಿಬಿಟ್ಟಿತ್ತು. ಭಾರತದ ವಿದೇಶಾಂಗ ಕಾರ್ಯದರ್ಶಿಗಳೂ ಅದನ್ನು ಒಪ್ಪಿಕೊಂಡಿದ್ದರು. ಆದರೆ ಮರುದಿನ ಸರ್ದಾರ್ ಪಟೇಲರು ಮಾತ್ರ ಇಂತಹ ಯಾವ ಮನವಿಯೂ ನಮ್ಮ ಮುಂದಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟರು. ಮರುದಿನ ಭಾರತದ ವಿದೇಶಾಂಗ ಕಾರ್ಯದರ್ಶಿ ’ಖಾನ್ ಆಫ್ ಕಲಾತ್ ತುಂಬಾ ತಡ ಮಾಡಿಬಿಟ್ಟಿದ್ದಾರೆ’ ಎಂದು ಹೇಳಿಕೆ ನೀಡಿದರು.
ಸ್ವತಂತ್ರ ಭಾರತದ ವಿದೇಶಾಂಗ ಸಚಿವಖಾತೆಯ ವಿ.ಪಿ. ಮೆನನ್ ಅವರು 1948 ಮಾರ್ಚ್ 27ರಂದು ’ಆಲ್ ಇಂಡಿಯಾ ರೇಡಿಯೋ’ದೊಂದಿಗೆ ಮಾತನಾಡುತ್ತಾ “ಬಲೂಚ್ನ ಖಾನ್ ಅವರು ಭಾರತ ದೊಂದಿಗೆ ವಿಲೀನಗೊಳ್ಳುವುದಾಗಿ ವಿನಂತಿಸಿದ್ದರು. ಆದರೆ ಈ ವಿಷಯ ಭಾರತಕ್ಕೆ ಸಂಬಂಧಿಸಿದ್ದಲ್ಲ’ ಎಂದು ನೆಹರುಸರ್ಕಾರದ ಧೋರಣೆಯನ್ನು ಪುನರುಚ್ಚರಿಸಿ ಕೈತೊಳೆದುಕೊಂಡುಬಿಟ್ಟರು!
ಅತ್ತ ಜಿನ್ನಾ ನೆಹರುವಿನಂತಲ್ಲ. ಭಾರತವನ್ನೇ ಮುರಿದವನಿಗೆ ಬಲೂಚ್ ಇನ್ನೆಲ್ಲಿಯ ಲೆಕ್ಕ? ತನ್ನ ಹಿಡಿತದಲ್ಲಿದ್ದ, ಬ್ರಿಟಿಷ್ ಭಾರತದಲ್ಲಿ ಅತ್ಯಂತ ಶೌರ್ಯ ಸಾಹಸಗಳಿಗೆ ಹೆಸರಾದ ಬಲೂಚ್ ರೆಜಿಮೆಂಟನ್ನು ಜಿನ್ನಾ ಬಲೂಚ್ಗೆ ನುಗ್ಗಿಸಿ, ಖಾನ್ ಆಫ್ ಕಲಾತ್ನನ್ನು ಸೆರೆಹಿಡಿದು ಕರಾಚಿಗೆ ಕರೆತಂದು ಒತ್ತಡದಿಂದ ಆತನ ಕೈಯಲ್ಲಿ ಸಹಿ ಹಾಕಿಸಿಕೊಂಡ. ಹೀಗೆ ಏಳೂವರೆ ತಿಂಗಳುಗಳ ಕಾಲ ಸ್ವತಂತ್ರವಾಗಿಯೇ ಇದ್ದ ಭಾರತಪ್ರಿಯ ನೆಲವೊಂದು ೧೯೪೮ ಮಾರ್ಚ್ ೨೮ರಂದು ಅನಿವಾರ್ಯವಾಗಿ ಪಾಕ್ನ ಭಾಗವಾಯಿತು.
೧೯೪೦ರ ದಶಕದಲ್ಲಿ ಪಾಕಿಸ್ತಾನದ ಕೂಗು ಕೇಳಲಾರಂಭಿಸಿದಾಗ ಅದರ ಬಿಸಿ ನಿಧಾನವಾಗಿ ಖಾನ್ ಆಫ್ ಕಲಾತ್ನಿಗೂ ತಟ್ಟಲಾರಂಭಿಸಿತ್ತು. ಸತ್ವರಗೊಂಡ ಖಾನ್ ೧೯೪೬ರ ಮಾರ್ಚ್ನಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿಗೆ ತನ್ನ ರಾಯಭಾರಿಯನ್ನು ಕಳುಹಿಸಿ, ಬಲೂಚ್ನ್ನು ಸ್ವತಂತ್ರ ರಾಜ್ಯವಾಗಿ ಘೋಷಿಸಲು ಸಹಕರಿಸಬೇಕು ಎಂದು ಕೋರಿಕೊಂಡ. ಕಾಂಗ್ರೆಸ್ನ ಅಂದಿನ ಅಧ್ಯಕ್ಷರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಸಕಾರಾತ್ಮಕ ಮಾತುಗಳನ್ನಾಡಿ ಕಳುಹಿಸಿಕೊಟ್ಟಿದ್ದರು. ಆದರೆ ದುರ್ದೈವವಶಾತ್ ಪಾಕ್ ಆಕ್ರಮಣ ನಡೆಸಿದಾಗ ಯಾವ ಕಾಂಗ್ರೆಸಿಗನೂ ಮಾತನಾಡಲಿಲ್ಲ.
ಅಂದು ಕಾಂಗ್ರೆಸ್ ಸತರ್ಕವಾಗಿ ಪ್ರತಿಕ್ರಿಯಿಸಿದ್ದರೆ ಬಲೂಚಿಗಳ ಸ್ಥಿತಿಯೇ ಬೇರೆಯಾಗುತ್ತಿತ್ತು. ತಾನು ಎಸಗಿದ ಐತಿಹಾಸಿಕ ತಪ್ಪೊಂದನ್ನು ಅಜ್ಞಾತವಾಗಿಡುವ ಸಲುವಾಗಿ ಕಾಂಗ್ರೆಸ್ ಪಕ್ಷ ದೇಶದ ಅಖಂಡತೆ ಮತ್ತು ಭದ್ರತೆಯೊಂದಿಗೆ ರಾಜಿಮಾಡಿಕೊಂಡಿದೆಯೇ ಎಂಬ ಪ್ರಶ್ನೆ ಈಗಲೂ ಭಾರತೀಯರನ್ನು ಕಾಡದಿರದು.