ಸರಸ್ವತಿ ನದಿಯನ್ನು ’ಅಂಬಿತಮೆ’ (ನದಿಗಳ ತಾಯಿ), ನದಿತಮೆ (ಅತ್ಯುತ್ತಮ ನದಿ) ದೇವಿತಮೆ (ಶ್ರೇಷ್ಟ ದೇವತೆ)’ ಎಂದು ವೇದಕಾಲೀನ ಋಷಿ-ಮುನಿಗಳು ಕರೆದರು. ಇದಕ್ಕೆ ಕಾರಣ ಇಲ್ಲದಿಲ್ಲ. ಹಿತಕರವಾದ ಹವಾಮಾನ, ವರ್ಷ ಪೂರ್ತಿ ತುಂಬಿ ಹರಿಯುವ ನೀರು, ಫಲವತ್ತಾದ ಕೃಷಿಯೋಗ್ಯ ಮಣ್ಣು, ಸಮೃದ್ಧವಾದ ಆಹಾರ, ಆಕಳುಗಳ ಹಿಂಡು. ಹೊಲೊಸಿನ್ ಯುಗದ ಮೊದಲ ಪಾದದಲ್ಲಿ (ಕ್ರಿ.ಪೂ. ೮,೦೦೦-೬,೦೦೦) ವೇದ ಸಂಸ್ಕೃತಿ ಉತ್ತುಂಗ ಶಿಖರವನ್ನು ತಲಪಿದ ಸಮಯ. ಸರಸ್ವತಿ ನದಿಯ ದಡ ಜಗತ್ತಿನ ಮೊದಲ ನಾಗರಿಕತೆಯ ತೊಟ್ಟಿಲಾಗಿತ್ತು. ಸರಸ್ವತಿ ನದಿಯು ವೇದಕಾಲೀನ ಜನರ ಕಣ್ಮಣಿಯಾಗಿತ್ತು. ಸರಸ್ವತಿ ನದಿಯನ್ನು ಸಪ್ತ ಸಿಂಧು (ಏಳು ಕವಲು) ಎಂದು ಕರೆಯುತ್ತಿದ್ದರು.
ಸರಸ್ವತಿ ನದಿಯು ಶಿವಾಲಿಕ್ ಶ್ರೇಣಿಯಲ್ಲಿರುವ ಹರ್-ಕಿ-ಧುನ್ ಹಿಮನದಿಯಿಂದ ಹುಟ್ಟುತ್ತದೆ. ಸರಸ್ವತಿ ನದಿಯು ೧,೩೦೦ ಕಿ.ಮೀ. ಉದ್ದವಿದ್ದು ಕೆಲವೆಡೆ ೩ರಿಂದ ೬ ಕಿ.ಮೀ. ಅಗಲವಿರುವುದು ಕಂಡು ಬಂದಿದೆ. ಇದನ್ನು ದಾಟುವುದು ಜನರಿಗೆ ಅಸಾಧ್ಯವಾಗಿತ್ತು, ಮಾತ್ರವಲ್ಲದೆ ಅವರು ಹರಿಯುವ ನೀರಿನ ರಭಸಕ್ಕೆ ಕೊಚ್ಚಿಹೋಗುವ ಸಾಧ್ಯತೆಯು ಹೆಚ್ಚಾಗಿತ್ತು. ಭಾರಿ ಮಳೆಬಂದಾಗ/ಹಿಮಗಡ್ಡೆ ಕರಗಿದಾಗ ನೆರೆ ಬಂದು ನದಿಯು ರುದ್ರರೂಪವನ್ನು ತಾಳುತ್ತಿತ್ತು.
ಸರಸ್ವತಿ ನದಿಯ ಬಗ್ಗೆ ವೇದಗಳಲ್ಲಿ ಅತ್ಯಂತ ಪ್ರಾಚೀನವಾದ ಋಗ್ವೇದದಲ್ಲಿ ಅತಿ ಹೆಚ್ಚಿನ ಉಲ್ಲೇಖವಿದೆ. ಋಗ್ವೇದದ ಹತ್ತು ಮಂಡಲಗಳಲ್ಲಿ ಹರಡಿರುವ ೭೫ ಮಂತ್ರಗಳು ಸರಸ್ವತಿ ನದಿಯ ವೈಭವವನ್ನು ಸಾರುತ್ತವೆ. ಯಜುರ್ವೇದ ಮತ್ತು ಅಥರ್ವಣ ವೇದಗಳಲ್ಲೂ, ಬ್ರಾಹ್ಮಣ ಮತ್ತು ಮನುಸ್ಮೃತಿಯಲ್ಲೂ ಸರಸ್ವತಿ ನದಿಯ ಬಗ್ಗೆ ಕೆಲವು ಶ್ಲೋಕಗಳಿವೆ.
ಸರಸ್ವತಿ ನಾಗರಿಕತೆಯ ಕುರುಹುಗಳು ಕರ್ನಾಲ್, ಜಿಂದ್, ಸೋಮ್ಜತ್, ರೋಹ್ಟಕ್, ಭಿವಾನಿ, ಗುಡ್ಗಾಂವ್, ಹಿಸ್ಸಾರ್, ಕಪೂರ್ತಲ, ರೋಪಾರ್, ಮಹೇಂದ್ರಗಢ ಮುಂತಾದ ಜಿಲ್ಲೆಗಳಲ್ಲಿ ಕಂಡುಬಂದಿವೆ. ಕಾನಿಬಂಗಾನ್ ಮತ್ತು ಲೋಥಾಲ್ನಲ್ಲಿ ದೊರೆತ ಯಜ್ನಕುಂಡಗಳು ವೇದಕಾಲೀನ ಧಾರ್ಮಿಕ ಕ್ರಿಯೆಗಳನ್ನು ಪ್ರತಿಬಿಂಬಿಸುತ್ತಿವೆ. ರುದ್ರನ ಆರಾಧನೆಗೆ ಬಳಸುವ ಶತಛಿದ್ರಕುಂಭವು ಸರಸ್ವತಿ ನದಿಯ ಬಹುತೇಕ ಅವಶೇಷಗಳಲ್ಲಿ ದೊರೆತಿದೆ. ಮಧ್ಯಭಾರತದ ವಿಂಧ್ಯಪರ್ವತದಲ್ಲಿ ದೊರೆತ ಮಧ್ಯ ಶಿಲಾಯುಗದ ಚಿತ್ರಗಳಲ್ಲಿ ವಿಷ್ಣುವಿನ ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ ಚಿತ್ರಗಳು ಬಲು ಜನಪ್ರಿಯ. ಅದುದರಿಂದ ವೇದಕಾಲವು ಹೋಲೊಸೀನ್ನ ಪ್ರಾರಂಭಕಾಲವಾಗಿದ್ದು ಖಂಡಿತವಾಗಿಯೂ ೧೦,೦೦೦ ವರ್ಷ ಹಿಂದಿನದಾಗಿದೆ.
ಹೋಲೊಸೀನ್ ಯುಗವು ಪ್ರಾರಂಭವಾಗುತ್ತಿದ್ದಂತೆ (೧೦,೦೦೦ ವರ್ಷಗಳ ಹಿಂದೆ) ದೀರ್ಘಕಾಲದ ಹಿಮಯುಗವು ಅಂತ್ಯವಾಗಿ ಹಿಮಾಲಯದ ಹಿಮನದಿಗಳು ಕರಗಿ ಅಗಾಧ ಪ್ರಮಾಣದಲ್ಲಿ ನೀರು ಹರಿಯಲು ಪ್ರಾರಂಭವಾಯಿತು. ವೇದಗಳಲ್ಲಿ ಬರುವ ವೃತ್ರಾಸುರ(ನಿಧಾನವಾಗಿ ಹರಿಯುವ ಹಾವಿನ ಆಕಾರವುಳ್ಳವ)ನನ್ನು ಮಳೆಯ ಅಧಿದೇವತೆಯಾದ ಇಂದ್ರನು ವಧಿಸಿದ ಕತೆ ಈ ಘಟನೆಯನ್ನೇ ಉಲ್ಲೇಖಿಸುತ್ತದೆ. ಮಧ್ಯ ಶಿಲಾಯುಗದ ಚಿತ್ರಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಅರಬ್ಬಿ ಸಮುದ್ರದ ತಳದಲ್ಲಿರುವ ಮಡ್ಡಿಯನ್ನು ಅಧ್ಯಯನ ಮಾಡಿದ ವಿಜ್ಞಾನಿಗಳು ಹೊಲೊಸಿನ್ ಯುಗದ ಪ್ರಾರಂಭ ಮತ್ತು ಮಧ್ಯಕಾಲದವರೆಗೆ ಉತ್ತರ ಭಾರತದಲ್ಲಿ ಮುಖ್ಯವಾಗಿ ಪಂಜಾಬ್, ರಾಜಸ್ಥಾನ, ಗುಜರಾಥ್ ಭಾಗದಲ್ಲಿ ಮಳೆ ಆಧಾರಿತ ಹವಾಮಾನವಿರುವುದನ್ನು ದೃಢಪಡಿಸಿದ್ದಾರೆ.
ಆದಿ ಶಿಲಾಯುಗದ ಹೊಮೊಸಪಿಯನ್ಸ್ ಕ್ರಿ.ಪೂ. ೧೦,೦೦೦ ವರ್ಷಗಳ ಹಿಂದೆ ಕಲ್ಲಿನ ಆಯುಧವನ್ನು ಬಳಸಿ ಬೇಟೆಯಾಡುತ್ತಾ ಕಾಡುಗಳಲ್ಲಿ ಗುಹೆಗಳಲ್ಲಿ ಬದುಕುತ್ತಿದ್ದರು. ಇಂತಹ ಮೂಲ ನಿವಾಸಿಗಳ ತಾಣಗಳು ಹಿಮಾಲಯದ ತಪ್ಪಲಲ್ಲಿ ಮಾತ್ರವಲ್ಲದೆ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ನರ್ಮದಾ ಕಣಿವೆಯ ಪ್ರದೇಶದಲ್ಲಿ ಕಂಡು ಬಂದಿವೆ. ಮಾನವನ ವಿಕಾಸದ ಹೊಸ ಕವಲುಗಳಾದ ಹೊಮೊಇರೆಕ್ಟಸ್ ನರ್ಮದಿಯಾ, ನರ್ಮದಾ ನದಿ ಪ್ರದೇಶದಲ್ಲೂ ಮತ್ತು ಹೊಮೊಸಪಿಯನ್ಸ್ ಭಿಂಬೆಕ್ಟಿಯನ್ಗಳು ಭೋಪಾಲದ ಸಮೀಪದಲ್ಲಿ ಪತ್ತೆಯಾಗಿವೆ.
ಹೊಮೊಸಪಿಯನ್ಸ್ಗಳು ಆದಿ ಶಿಲಾಯುಗದ ಕೊನೆಯ ಪಾದದಲ್ಲಿ ಸರಸ್ವತಿ ನದಿಯ ತಟದೆಡೆಗೆ ಸಂಚರಿಸಿದವು. ವರ್ಷ ಪೂರ್ತಿ ದೊರಕುವ ನೀರು, ಫಲವತ್ತದ ಮಣ್ಣು ಅಲೆಮಾರಿ ಮನುಷ್ಯನನ್ನು ನದಿ ದಡದಲ್ಲಿ ಮಧ್ಯ ಶಿಲಾಯುಗ ಮತ್ತು ನವ ಶಿಲಾಯುಗದ ಸಮಯದಲ್ಲಿ ನೆಲೆಸುವಂತೆ ಮಾಡಿತು. ಸರಸ್ವತಿ ನದಿ ದಡವು ಮಾನವ ವಿಕಾಸದ ಕೇಂದ್ರಬಿಂದು ಎನಿಸಿತು. ಬೇಟೆಯಾಡಿ ಕಾಡಿನಲ್ಲಿ, ಗುಹೆಗಳಲ್ಲಿ ಬದುಕುತ್ತಿದ್ದ ಜನರು ಆಶ್ರಮಗಳನ್ನು ಕಟ್ಟಿ ಬೇಸಾಯ ಮಾಡಲಾರಂಭಿಸಿದರು. ಕೃಷಿ ಆಧಾರಿತ ನಾಗರಿಕತೆಯು ಬೆಳೆದುನಿಂತಿತು. ವೇದಕಾಲೀನ ಕೃಷಿ ಆಧಾರಿತ ಗ್ರಾಮಜೀವನ ಪದ್ಧತಿಯ ಉಗಮವಾಯಿತು. ಇವರೇ ಈ ದೇಶದ ಮೂಲನಿವಾಸಿಗಳಾದ ಆರ್ಯರು. ಆರ್ಯ ಎಂದರೆ ಉತ್ತಮ ಕುಲದವನು, ಉತ್ತಮ ಗುಣ ಹೊಂದಿದವನು, ಸಜ್ಜನ ಮತ್ತು ಸನ್ನಡತೆಯುಳ್ಳವನು (ಅಮರ ಕೋಶ) ಎಂದರ್ಥ. ಆರ್ಯ ಎಂದರೆ ನೆಲವನ್ನು ಉಳುವವನು ಎಂಬ ಅರ್ಥವೂ ಇದೆ. ಆರ್ಯರು ಕೃಷಿಗೆ ಬಹಳ ಸಮೀಪವಿರುವವರು ಎಂಬ ಅರ್ಥ ಬರುತ್ತದೆ.
ಪಾಕಿಸ್ತಾನದಲ್ಲಿರುವ ಮೆಹಘಾಟ್ನಲ್ಲಿ ಕ್ರಿ.ಪೂ ೬,೦೦೦ ವ?ಗಳ ಹಿಂದೆ ಜನರು ಕೃಷಿ ಮಾಡಿ ಜೀವಿಸುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ದೊರಕಿವೆ. ಲುಂಕಾರಂಸಾರ್ ಕುರುಹುಗಳು ಕ್ರಿ.ಪೂ. ೯,೪೦೦ ಹಿಂದೆ ಸರಿದರೆ, ಕಾಲಿಬಂಗಾನಿನಲ್ಲಿ, ಸಂಬಾರ ಸಮೀಪ ದೊರೆತ ಕುರುಹುಗಳು ಕ್ರಿ.ಪೂ. ೩,೦೦೦ ವರ್ಷಗಳ ಹಿಂದೆ ಜನರು ಕೃಷಿ ಮಾಡಿ ಜೀವಿಸುತ್ತಿದ್ದರು ಎನ್ನುವುದನ್ನು ಸಾರುತ್ತವೆ.
ದುರ್ಬಲಗೊಂಡ ಸರಸ್ವತಿ ನದಿ
ಸರಸ್ವತಿ ನದಿಯ ದಡದಲ್ಲಿ ಜಗತ್ತಿನ ಶ್ರೇಷ್ಟ ನಾಗರಿಕತೆಯು ೮,೦೦೦ ವರ್ಷಗಳ ಹಿಂದೆ ಬೆಳಗಿತು. ಸರಸ್ವತಿ ನದಿಯು ತನ್ನ ಅಸ್ತಿತ್ವ ಕಳೆದುಕೊಳ್ಳಲು ಸರಿಯಾದ ಕಾರಣ ಹುಡುಕಲು ಇನ್ನಷ್ಟು ಆಳವಾದ ಅಧ್ಯಯನ ನಡೆಸಬೇಕಾಗಿದೆ.
ಮಹಾಭಾರತದಲ್ಲಿ ಸರಸ್ವತಿ ನದಿಯ ಉಲ್ಲೇಖವಿದೆ. ಹಿಮಾಲಯದಲ್ಲಿ ಹುಟ್ಟುವ ಸರಸ್ವತಿ ನದಿಯು ಕೆಲವೆಡೆ ಮಾತ್ರ ಗೋಚರಿಸಿ ಹಲವೆಡೆ ಹರಿವಿಲ್ಲದೆ ಕಣ್ಮರೆಯಾಗಿರುವುದು ಕಂಡುಬರುತ್ತದೆ. ಮಹಾಭಾರತ ಯುದ್ಧ (ಕ್ರಿ.ಪೂ. ೩,೧೦೨)ದ ಪ್ರಾರಂಭದಲ್ಲಿ ಬಲರಾಮ ತೀರ್ಥಯಾತ್ರೆಗೆ ಹೋದಾಗ ರಾಜಸ್ಥಾನದ ವಿನಾಶನದಲ್ಲಿ ಸರಸ್ವತಿ ನದಿಯು ಕಣ್ಮರೆಯಾಗುವುದನ್ನು ಉಲ್ಲೇಖಿಸಲಾಗಿದೆ. ಇದರಿಂದ ತಿಳಿದುಬರುವ ಅಂಶವೆಂದರೆ ಮಹಾಭಾರತ ಕಾಲದಲ್ಲಿ (ಸುಮಾರು ಕ್ರಿ.ಪೂ. ೩,೦೦೦ ವರ್ಷಗಳ ಹಿಂದೆ) ಸರಸ್ವತಿ ನದಿಯು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಾರಂಭಿಸಿತು ಎಂಬುದು.
ಮಹಾಭಾರತ ಮತ್ತು ಆನಂತರದ ಕಾಲಘಟ್ಟದಲ್ಲಿ ಸರಸ್ವತಿ ನದಿಯು ಕುರುಕ್ಷೇತ್ರದಲ್ಲಿ ಬ್ರಹ್ಮಸರ, ಜ್ಯೋತಿಸರ, ಸ್ಥಾನೆಸರ, ಕಾಲೇಶ್ವರಸರ ಮತ್ತು ರಾಜಸ್ಥಾನದಲ್ಲಿ ರಾವತಸರ, ಜಗಸರ, ಧಾನಸರ, ಪಾಂಡುಸರ, ವಿಜರಸರ, ಮಾತಸರ, ಬಾತಸರ, ರಾಣಸರ ಇತ್ಯಾದಿ ಸಣ್ಣಸಣ್ಣ ಸರೋವರಗಳಾಗಿ ಪರಿವರ್ತನೆ ಹೊಂದಿತು. ಸರಸ್ವತಿಯೆಂದರೆ ಸರೋವರಗಳ ಮಾಲೆಯೆಂದೆ ಅರ್ಥ. ಸರಸ್ವತಿ ನದಿಯು ಸಣ್ಣಸಣ್ಣ ನೀರಿನ ಮೂಲವಾಗಿ ಪರಿವರ್ತನೆ ಹೊಂದಿ ಪುರಾಣಕಾಲದಲ್ಲಿ ಪ್ರಸಿದ್ಧ ತೀರ್ಥಕ್ಷೇತ್ರಗಳಾಗಿ ಪ್ರಸಿದ್ಧಿ ಹೊಂದಿದುವು. ಇದನ್ನು ಭಾಗವತಪುರಾಣ, ವಾಯುಪುರಾಣ, ಸ್ಕಂದಪುರಾಣ, ಮಾರ್ಕಂಡೇಯ ಪುರಾಣಗಳಲ್ಲಿ ವರ್ಣಿಸಲಾಗಿದೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿನ ವಿನಾಶನದಲ್ಲಿ ಸರಸ್ವತಿ ನದಿಯು ಕಣ್ಮರೆಯಾಗುವುದು ಬ್ರಾಹ್ಮಣಗಳಲ್ಲಿ, ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅದರೆ ವೇದಗಳಲ್ಲಿ ಈ ಉಲ್ಲೇಖವು ಕಂಡು ಬಾರದಿರುವುದು ಸರಸ್ವತಿ ನದಿಯು ವೇದಕಾಲದಲ್ಲಿ ಅತ್ಯಂತ ಪ್ರಭಾವಿ ನದಿಯಾಗಿತ್ತೆಂದೇ ಹೇಳಬೇಕು. ತದನಂತರ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಪ್ರಾರಂಭಿಸಿತು.
ಹಿಮಾಲಯದ ತಪ್ಪಲು ಮತ್ತು ಗುಜರಾತಿನ ಭೂಭಾಗವು ಭೂಕಂಪನ ವಲಯವಾಗಿದೆ. ಇಲ್ಲಿ ಆಗಾಗ ಪ್ರಬಲ ಭೂಕಂಪನಗಳು ಸಂಭವಿಸುತ್ತವೆ. ಭೂಪದರದ ಉಬ್ಬುವಿಕೆಯಿಂದ ಸರಸ್ವತಿ ನದಿಯ ಪ್ರಧಾನ ಕವಲಾದ ಯಮುನಾ ನದಿಯು ಪೂರ್ವಾಭಿಮುಖವಾಗಿ ತಿರುಗಿ ಗಂಗಾ ನದಿಯನ್ನು ಸೇರಿಕೊಂಡಿತು. ಇನ್ನೊಂದು ಪ್ರಧಾನ ಪ್ರಮುಖ ಕವಲು ಸಟ್ಲೆಜ್ ಪಶ್ಚಿಮಾಭಿಮುಖವಾಗಿ ಹರಿದು ಸಿಂಧು(?) ನದಿಯನ್ನು ಸೇರಿದುದರ ಪರಿಣಾಮವಾಗಿ ಕ್ರಿ.ಪೂ. ೩,೦೦೦ದ ಸುಮಾರಿಗೆ ಅತ್ಯಂತ ವೈಭವದಿಂದ ಹರಿಯುತ್ತಿದ್ದ ನದಿಯು ಕಾಲನ ಆಘಾತಕ್ಕೆ ತುತ್ತಾಗಿ ಶ್ರೇಷ್ಠ ನಾಗರಿಕತೆಯನ್ನು ಕಳೆದುಕೊಂಡು ಥಾರ್ ಮರುಭೂಮಿಯಲ್ಲಿ ಕಣ್ಮರೆಯಾಯಿತು.
ಕ್ರಿ.ಪೂ ೩,೦೦೦ದ ಸುಮಾರಿಗೆ ಹವಾಮಾನದಲ್ಲಿ ಉಂಟಾದ ಹಠಾತ್ ಬದಲಾವಣೆಯು ಪಶ್ಚಿಮ ಭಾರತದಲ್ಲಿ ಭೀಕರ ನೆರೆ/ಭೂಕಂಪನ/ ಜ್ವಾಲಾಮುಖಿ/ಸಮುದ್ರ ಮಟ್ಟದ ಏರುವಿಕೆಯೇ ಕಾರಣಗಳಾಗಿ ಸರಸ್ವತಿ ನದಿಯ ಪಾತ್ರವು ಪಶ್ಚಿಮ ದಿಕ್ಕಿಗೆ ಸರಿದು ಸಿಂಧು ನದಿಯೆಂದು ಕರೆಯಲ್ಪಟ್ಟಳೆ? ಸರಸ್ವತಿ ನಾಗರಿಕತೆಗೆ ಸೇರಿದ ದ್ವಾರಕಾ, ಲೋಥಲ್, ದೊಲವೀರದಂತಹ ನಗರಗಳು ಸಮುದ್ರದ ಹತ್ತಿರವಿದ್ದುದರಿಂದ ಅವುಗಳ ನಾಶಕ್ಕೆ ನೆರೆ ಮತ್ತು ಪ್ರವಾಹಗಳು ಪ್ರಮುಖ ಕಾರಣವಾಗಿರಬೇಕೆಂದು ನಂಬಲಾಗಿದೆ. ಒಟ್ಟಿನಲ್ಲಿ ಸರಸ್ವತಿ ನದಿಯು ಪಶ್ಚಿಮಕ್ಕೆ ಸರಿದು ಸಿಂಧು ಹೆಸರಿನಿಂದ ಕರೆಯಲ್ಪಟ್ಟಿರಬೇಕೆಂಬ ಜಿಜ್ಞಾಸೆ ಮನದಲ್ಲಿ ಮೂಡುತ್ತದೆ.
ಸರಸ್ವತಿ ನಾಗರಿಕತೆಯ ಕಾಲದಲ್ಲಿ ಸಿಂಧು ನದಿಯು ಸರಸ್ವತಿ ನದಿಯ ಏಳು ಕವಲು ನದಿಗಳಲ್ಲೊಂದಾಗಿತ್ತು. ಈಗ ಇವುಗಳಲ್ಲಿ ಐದು ನದಿಗಳು (ಸಟ್ಲೇಜ್, ಬಿಯಾಸ್, ಚಿನಾಬ್, ರಾವಿ, ಝೀಲಮ್) ಸಿಂಧು ನದಿಯ ಕವಲುಗಳಾಗಿವೆಯೆಂಬುದು ಗಮನಿಸಬೇಕಾದ ಅಂಶ. ಮಾತ್ರವಲ್ಲದೆ ಸರಸ್ವತಿ ನಾಗರಿಕತೆಯ ಸಮಯದಲ್ಲಿ ಸ್ವತಂತ್ರವಾಗಿ ಹರಿಯುವ ಸಿಂಧು ನದಿಯ ಉಲ್ಲೇಖ ಋಗ್ವೇದದಲ್ಲಿ ಸರಿಯಾಗಿ ಕಂಡು ಬರುವುದಿಲ್ಲ.
ವೇದಕಾಲದಲ್ಲಿ ಹರಿಯುತ್ತಿರುವ ಸರಸ್ವತಿ ನದಿಯೆಂಬುದು ಸರಸ್ವತಿ, ಸಟ್ಲೇಜ್, ಬಿಯಾಸ್, ಚಿನಾಬ್, ರಾವಿ, ಝೀಲಮ್, ದೃಶದ್ವತಿ, ಯಮುನಾ, ಸಿಂಧು ಮುಂತಾದ ನದಿಗಳ ಸಮುಚ್ಚಯವಾಗಿತ್ತೆ? (ಚಿತ್ರ ೪). ಆಗ ತಾನೆ ಹಿಮ ಕರಗಿ ಅಗಾಧ ಪ್ರಮಾಣದ ನೀರು ಹರಿಯುತ್ತಲಿರುವುದರಿಂದ ಆಗಾಗ ಪಾತ್ರ ಬದಲಾಯಿಸಿಕೊಂಡು, ಕೆಲವೊಮ್ಮೆ ಒಂದಾಗಿ, ಮತ್ತೆ ಕೆಲವೊಮ್ಮೆ ಬೇರೆಬೇರೆಯಾಗಿ ಪಶ್ಚಿಮ ಭಾರತದಲ್ಲಿ ಹರಿಯುತ್ತಿದ್ದವೆ? ಪೂರ್ವದ ಪ್ರಯಾಗವನ್ನು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವೆಂದು ಕರೆಯುತ್ತಾರೆ. ಇಲ್ಲಿ ಸರಸ್ವತಿ ನದಿಯು ಗುಪ್ತಗಾಮಿನಿಯಾಗಿರುವ ಈ ಕಲ್ಪನೆ ಮೇಲಿನ ಅಂಶಕ್ಕೆ ಇಂಬುಗೊಡುತ್ತದೆ. ಯಮುನಾನದಿಯು ವೇದಕಾಲದಲ್ಲಿ ಸರಸ್ವತಿ ನದಿಯ ಭಾಗವಾಗಿತ್ತೆಂಬುದು ಇಲ್ಲಿ ನೆನಪಿಸಬೇಕು.
ಸರಸ್ವತಿ ನದಿಯನ್ನು ಸರಸುತಿ, ಹಕ್ರ, ನಾರಾ, ಗಗ್ಗರ್, ಮರ್ಕಂಡ, ಸುಪ್ರಭಾ, ಕಂಚನಾಕ್ಷಿ, ವಿಶಾಲ, ಮನೋರಮ ಮುಂತಾದ ಬೇರೆ ಬೇರೆ ಹೆಸರಿನಿಂದ ಗುರುತಿಸುವ ಯಾ ಕರೆಯುವ ಪ್ರಯತ್ನದಿಂದ ಇನ್ನಷ್ಟು ಗೊಂದಲ ಸೃಷ್ಟಿಯಾಗಿದೆ.
ಸರಸ್ವತಿ ಹರಿಯುವ ಹಿಮಾಲಯದ ಬಹುತೇಕ ಶಿಲಾಪದರಗಳು ಬಹಳ ದುರ್ಬಲ ಶಿಲೆಗಳು. ಇವುಗಳು ಸುಲಭವಾಗಿ ನೀರಿನಲ್ಲಿ ಕರಗುತ್ತವೆ. ಭಾರಿ ಮಳೆ ಬಂದಾಗ ಅನಿರೀಕ್ಷಿತ ನೆರೆಗೆ ಇವು ಕಾರಣವಾಗುತ್ತವೆ. ಮಾತ್ರವಲ್ಲದೆ ಇಂತಹ ಸಂಧರ್ಭದಲ್ಲಿ ಭಾರೀಪ್ರಮಾಣದ ಮಡ್ಡಿ ಸಂಗ್ರಹವಾಗಿ ನದಿಯು ತನ್ನ ಪಾತ್ರವನ್ನು ವರ್ಗಾವಣೆ ಮಾಡಿಕೊಳ್ಳಲು ಕಾರಣವಾಗುತ್ತವೆ. ಗುಜರಾತ ಮತ್ತು ರಾಜಸ್ಥಾನದ ನೆಲದ ಮೇಲುಪದರಲ್ಲಿ ಭಾರಿ ಪ್ರಾಮಾಣದ ಮಡ್ಡಿಯ ಸಂಗ್ರಹವನ್ನು ನಾವಿಂದು ಕಾಣಬಹುದು. ಈ ಭಾಗದಲ್ಲಿರುವ ಸರೋವರಗಳ ಇತಿಹಾಸವು ಸಾವಿರಾರು ವ?ಗಳ ಹಿಂದೆ ಹೋಗುತ್ತದೆ.
ಸರಸ್ವತಿ ಮತ್ತು ಪಶ್ಚಿಮ ಭಾರತದ ನದಿಗಳು ಹಲವು ಬಾರಿ ತಮ್ಮ ಪಾತ್ರವನ್ನು ಬದಲಾವಣೆ ಮಾಡಿರುವುದು ಅಧ್ಯಯನದ ಮೂಲಕ ಶ್ರುತಪಟ್ಟಿದೆ. ದೂರಸಂವೇದಿ ಉಪಗ್ರಹದಿಂದ ದೊರೆತ ಉಪಗ್ರಹಚಿತ್ರಣದಿಂದ ಪೂರ್ವದಲ್ಲಿರುವ ಲೂನಿ ನದಿಯಿಂದ ಪಶ್ಚಿಮದ ಕಡೆಗೆ ಸರಿದು ಇಂದಿನ ಗಗ್ಗರ್ ನದಿಯವರೆಗೆ ನದಿಯು ತನ್ನ ಪಾತ್ರವನ್ನು ಬದಲಾವಣೆ ಮಾಡಿರುವುದನ್ನು ನಾವು ಗಮನಿಸಬಹುದು.
ಗಗ್ಗರ್ ನದಿಯು ವೇದಗಳಲ್ಲಿ ವರ್ಣಿಸಿದ ಸರಸ್ವತಿ ನದಿಯನ್ನು ಹೋಲುತ್ತದೆ. ಅದುದರಿಂದ ಈಗಿನ ಗಗ್ಗರ್ ನದಿಯು ದುರ್ಬಲಗೊಂಡ ಸರಸ್ವತಿ ನದಿಯಾಗಿದೆಯೆಂಬುದು ಒಂದು ವಾದ. ಗಗ್ಗರ್ ನದಿಯ ಪಾತ್ರ ಬಹುತೇಕ ಸಿಂಧುನದಿಯ ಪಾತ್ರವನ್ನು ಹೋಲುತ್ತದೆ.
ಮನು ಮಹರ್ಷಿಯ ಕಾಲದಲ್ಲಿ ಉತ್ತರ ಭಾರತದ ಬಹುತೇಕ ಭಾಗವು ನೆರೆಯಿಂದಾಗಿ ಜಲಾವೃತವಾಯಿತು. ಈ ಪ್ರಕೃತಿ ವಿಕೋಪವನ್ನು ಮಹಾಭಾರತ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆಯು ವೇದಕಾಲೀನ ಸಂಸ್ಕೃತಿಯು ಅಂತ್ಯವಾಗಲು ಕಾರಣವಾಗಿರಬೇಕು. ಈ ಸಮಯದಲ್ಲಿ ಸರಸ್ವತಿ ನದಿಯ ಪಾತ್ರವು ಪಶ್ಚಿಮ ದಿಕ್ಕಿಗೆ ಸರಿದು ಸಿಂಧು ನದಿಯ ಹೆಸರಿನಲ್ಲಿ ಹರಿಯಲು ಪ್ರಾರಂಭವಾಗಿರಬೇಕು. ಹೊಸತಾಗಿ ಅಸ್ತಿತ್ವಕ್ಕೆ ಬಂದ ಸಿಂಧು ನದಿಯ ದಡದಲ್ಲಿ ಜನರು ನೆಲೆಯೂರಿ ಹರಪ್ಪಾ ಸಂಸ್ಕೃತಿಯನ್ನು ಬೆಳೆಸಿದರು. ಸರಸ್ವತಿ ನದಿಯು ಕಣ್ಮರೆಯಾಗುತ್ತಿದ್ದಂತೆಯೇ ಜನರು ಫಲವತ್ತಾದ ಭೂಮಿಯನ್ನು ಹುಡುಕಿಕೊಂಡು ವಿವಿಧ ದಿಕ್ಕಿನೆಡೆಗೆ ವಲಸೆಹೋದರು. ಪೂರ್ವಾಭಿಮುಖವಾಗಿ ಗಂಗಾನದಿಯೆಡೆಗೆ, ದಕ್ಷಿಣಾಭಿಮುಖವಾಗಿ ಗೋವಾ ಕಡೆಗೆ ಹೋದರು. ಕೆಲವರು ಮೆಸೊಪೊಟೇಮಿಯಾ ಮತ್ತು ಸುಮೇರಿಯಾ ನಾಗರಿಕತೆಗೆ ನಾಂದಿಹಾಡಿದರು.
ಹೇಗೆ ಸಾಧ್ಯ?
ಸಿಂಧು (ಹರಪ್ಪಾ) ನಾಗರಿಕತೆಯು (ಕ್ರಿ.ಪೂ. ೩,೧೦೦- ೧,೯೦೦) ಸರಸ್ವತಿ ನಾಗರಿಕತೆಯ ಮುಂದುವರಿದ ಭಾಗವಾಗಿದೆ. ಸಿಂಧು ನಾಗರಿಕತೆಯಲ್ಲಿ ಗಮನಿಸಬೇಕಾದ ಅಂಶಗಳೆಂದರೆ ವ್ಯವಸ್ಥಿತವಾದ ಸ್ನಾನಗೃಹಗಳು, ನೀರು ಹರಿಯುವ ಚರಂಡಿ, ಅಲ್ಲಲ್ಲಿ ಕೆರೆಗಳು, ಇಟ್ಟಿಗೆಯ ಬಳಕೆ, ಲೋಹದ ಬಳಕೆ, ಬರೆಯಲು ಲಿಪಿಯ ಬಳಕೆ, ಇತ್ಯಾದಿ ಇತ್ಯಾದಿ. ಇಂತಹ ನಾಗರಿಕತೆ ಒಮ್ಮಿಂದೊಮ್ಮೆಲೆ ಸಿಂಧು ನದಿಯ ದಡದಲ್ಲಿ ಪ್ರತ್ಯಕ್ಷವಾಗುವುದು ಹೇಗೆ ಸಾಧ್ಯ? ಇದು ಹಿಂದಿನ ಸರಸ್ವತಿ ನಾಗರಿಕತೆಯ ಮುಂದುವರಿದ ಭಾಗವಾಗಿದೆಯೆಂದೇ ಹೇಳಬೇಕು. ಸಿಂಧು (ಹರಪ್ಪಾ) ನಾಗರಿಕತೆಯು ಸರಸ್ವತಿ ನಾಗರಿಕತೆಯಿಂದ ಉಗಮವಾಗಿದೆಯೆಂಬುದನ್ನು ಇದು ಸ್ಪ?ಪಡಿಸುತ್ತದೆ. ಸರಸ್ವತಿ ನಾಗರಿಕತೆಯ ಬಹುತೇಕ ಕುರುಹುಗಳು ಥಾರ್ ಮರುಭೂಮಿಯ ಮಡ್ಡಿಯಲ್ಲಿ ಹೂತುಹೋಗಿರುವುದರಿಂದ ಆಳವಾದ ಉತ್ಖನನ ನಡೆದಲ್ಲಿ ಬಹಳ? ಸತ್ಯಾಂಶಗಳು ಬೆಳಕಿಗೆ ಬರಬಹುದು.
ನಮ್ಮ ಹಿರಿಯರು ತಮ್ಮ ಚರಿತ್ರೆಯನ್ನು ಸ್ಮಾರಕಗಳಲ್ಲಿ ಯಾ ಶಿಲೆಗಳಲ್ಲಿ ಬರೆದಿಟ್ಟಿಲ್ಲ. ಬಾಯಿಯಿಂದ ಬಾಯಿಗೆ ಹರಡುವ ವೇದಗಳ ರೂಪದಲ್ಲಿ ಸುಂದರ ಶ್ಲೋಕಗಳಲ್ಲಿ ನಮಗೆ ದೊರಕುವಂತೆ ಮಾಡಿದುದು ನಮ್ಮ ಅದೃ?ವೆಂದು ಹೇಳಬೇಕು. ಭೂವಿಜ್ಞಾನಿಗಳು, ಭೂರೂಪಶಾಸ್ತ್ರಜ್ಞರು, ಉಪಗ್ರಹ ಮಾಹಿತಿ, ಭೂರಸಾಯನಶಾಸ್ತ್ರಜ್ಞರು, ಸಾಗರವಿಜ್ಞಾನಿಗಳು, ಭೂಕಂಪನಶಾಸ್ತ್ರಜ್ಞರು, ಇತಿಹಾಸಕಾರರು, ವೇದಪಂಡಿತರು ಮತ್ತು ಪರಿಸರವಾದಿಗಳು ಒಟ್ಟಿಗೆ ಸೇರಿ ಸರಸ್ವತಿ ನದಿಯ ಪಾತ್ರವನ್ನು ಕರಾರುವಾಕ್ಕಾಗಿ ಗುರುತಿಸುವಂತಹ ಕೆಲಸ ಮತ್ತು ನದಿಯ ಕಣ್ಮರೆಗೆ ಸರಿಯಾದ ಕಾರಣವನ್ನು ಹುಡುಕುವ ಕೆಲಸ ಮಾಡಬೇಕಾಗಿದೆ.
ಸರಸ್ವತಿ ನದಿ ಬಗ್ಗೆ ಈ ಮಾಹಿತಿ ತುಂಬಾ ಇಷ್ಟ ಆಯ್ತು
ಸರಸ್ವತಿ ನದಿಯ ಕಣ್ಮರೆ ಬಗ್ಗೆ ಇನ್ನೂ ಆಳವಾಗಿ ಅಧ್ಯಯನ ಮಾಡಬೇಕು