ಶ್ರೀ ಶಂಕರ ಜಯಂತಿಯ ಪ್ರಯುಕ್ತ ಕಿರುನಾಟಕ
[ದೃಶ್ಯ ೧ – ಮಂಡನಮಿಶ್ರ ಅವರ ಮನೆ. ಉಭಯಭಾರತಿ ಹೊಸ್ತಿಲು ತೊಳೆದು , ಅಂಗಳದಲ್ಲಿ ನೀರನ್ನು ಥಳಿ ಹೊಡೆದು ರಂಗವಲ್ಲಿ ಹಾಕಿ , ತುಳಸಿಗಿಡಕ್ಕೆ ನೀರು ಹಾಕಿ ನಮಿಸುತ್ತಾ ಪದ ಹೇಳುತ್ತಿರುವುದು.]
ಪದ : (ಚಾಲ – ’ಭಾಗ್ಯವತೆ ಹೇ ಕಪಿಲಾ…’ ಎಂಬಂತೆ)
ಭಾಗ್ಯದಾತೆ ತುಳಸಿಮಾತೆ ನಿನಗೆ ವಂದನೆ
ಅನವರತ ಸೌಭಾಗ್ಯ ನೀಡು ಕರುಣಾಮಯಿ ನೀ…
ಚರಣದಲಿ ವಂದಿಪೆ ಹರಸು ಹರಸು ನೀ || (ಎನ್ನುತ್ತಾ ನಮಿಸುವಳು)
ಮಂಡನಮಿಶ್ರ : (ಬಾಗಿಲ ಹತ್ತಿರ ನಿಂತು) ಪ್ರಿಯೇ, ನಿನ್ನ ದೈವಭಕ್ತಿ ನನಗೆ ತುಂಬಾ ಆನಂದವನ್ನುಂಟುಮಾಡಿದೆ. ನಿನ್ನ ಪತಿಯಾದ ನಾನು ಧನ್ಯ! ಧನ್ಯ!
ಉಭಯಭಾರತಿ : (ಕೆಳಗೆ ಮುಖ ಮಾಡಿ) ತಮ್ಮಂಥ ವೈದಿಕಕರ್ಮದ ನಿಷ್ಣಾತರು ಆರ್ಯಸಂಸ್ಕೃತಿಯ ಪ್ರತೀಕರೂ ಆದ ಪುಣ್ಯಪುರುಷರನ್ನು ದೈವೀಸಂಕಲ್ಪದಂತೆ ಕೈಹಿಡಿದು ಅರ್ಧಾಂಗಿಯಾದ ನನಗೂ ಸ್ವರ್ಗಸುಖಸದೃಶವಾದ ಆನಂದವೆನಿಸಿದೆ.
ಮಂ. : ದೇವೀ, ನಿನಗೆ ಈ ದಿವಸ ತಾನಾಗಿಯೇ ಸುಯೋಗ ಬಂದಿರುವುದನ್ನು ಹೇಳುವೆನು, ಕೇಳು.
ಉ. ಭಾ. : (ಆಶ್ಚರ್ಯದಿಂದ) ಅದೇನು ಸ್ವಾಮಿ! ಅದೆಲ್ಲವೂ ತಮ್ಮ ಆಶೀರ್ವಾದದ ಒಲುಮೆಯಿಂದಲ್ಲದೇ ಬೇರೆ ಇರಲಿಕ್ಕಿಲ್ಲ.
ಮಂ. : ಆ ಸುಯೋಗವು ನಿನ್ನ ಪೂರ್ಣ ವಿದ್ವತ್ತೆಯೇ ನಿನಗಾಗಿ (ಆಹಾ…) ಎಂಥ ಗೌರವಸ್ಥಾನ ಅಲಂಕರಿಸುವಂತೆ ಮಾಡಿದೆ! ನಿನ್ನ ಪತಿಯಾದ ನಾನು ನೋಡಿ ಹರ್ಷಪಡುವೆ.
ಉ. ಭಾ. : ಅಂತಹದ್ದೇನು ಸುಯೋಗ? ಏನೇ ಆದರೂ ತಮ್ಮ ಕೃಪೆ.
ಮಂ. : ಧನ್ಯ ನಿನ್ನ ಪತಿಭಕ್ತಿ! ಕೇಳು, ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಬಂದ ಬಾಲಯತಿಗಳು ಈ ದಿನದಿಂದ ನನ್ನೊಡನೆ ವಾಕ್ಯಾರ್ಥ ಮಾಡುವವರಾಗಿದ್ದಾರೆ.
ಉ. ಭಾ. : ಮಾಡಬಹುದು, ಅದರಲ್ಲಿ ನನ್ನದೇನು ಕಾರ್ಯ ಸ್ವಾಮಿ?
ಮಂ. : ದೇವೀ, ಈ ದಿವಸ ಬೆಳಗಿನ ಸುಮೂಹೂರ್ತದಲ್ಲಿ ನಡೆಯುವ ಚರ್ಚೆಯಲ್ಲಿ ನಿರ್ಣಯಕೊಡುವ ಅಧ್ಯಕ್ಷಸ್ಥಾನವನ್ನು ನೀನೇ ಅಲಂಕರಿಸಬೇಕೆಂದು ಆ ಬಾಲಯತಿಗಳೇ ಆಗ್ರಹದಿಂದ ಹೇಳಿದ್ದಾರೆ. ನೀನು ಅಧ್ಯಕ್ಷಳಾಗಿ ನಿರ್ಣಯಕೊಡುವುದು ಬೇಡವೆಂದು ನಾನು ಎಷ್ಟು ಹೇಳಿದರೂ ಕೇಳದೆ ಆಗ್ರಹಿಸಿದ್ದರಿಂದ ಕೊನೆಗೆ ನೀನು ನಿರ್ಣಾಯಕ ಅಧ್ಯಕ್ಷಿಣಿಯಾಗಲು ಒಪ್ಪಿದ್ದೇನೆ.
ಉ.ಭಾ. : (ಸ್ವಗತ) ಎಂಥ ಹೊಣೆಗಾರಿಕೆಯ ಕಾರ್ಯವನ್ನು ಮಾಡುವುದಕ್ಕೋಸ್ಕರ ಪರಮೇಶ್ವರನು ಈ ಅವಕಾಶವನ್ನು ತಂದಿರುವನಲ್ಲಾ! ನನ್ನ ಪತಿದೇವರು ಒಪ್ಪಿಕೊಂಡ ಬಳಿಕ ಒಲ್ಲೆನೆಂದು ಹಟಹಿಡಿಯುವುದು ಪತ್ನಿಧರ್ಮಕ್ಕೆ ಶೋಭಿಸದು. ಪರಮೇಶ್ವರನೂ, ನನ್ನ ಪಾತಿವ್ರತ್ಯದ ಸತ್ಯವೂ ಈ ಮಹಾಕಾರ್ಯದಲ್ಲಿ ನೆರವಾಗಲಿ ದೇವಾ!
ಮಂ. : ಪ್ರಿಯೇ, ಏಕೆ ಮೌನವಾದೆ? ನನ್ನ ಪತಿಯು ಎಂಥದ್ದರಲ್ಲಿ ತೊಡಗಿಸಿದರೆಂದು ಯೋಚಿಸುತ್ತಿರುವಿಯೇನು?
ಉ. ಭಾ. : ಅಹುದು ಆರ್ಯಪುತ್ರ! ನೀವು ಒಪ್ಪಿಕೊಂಡ ಮೇಲೆ ನಾನು ಅಧ್ಯಕ್ಷಿಣಿಯಾಗಲಾರೆನೆಂದು ಹೇಳಲಾರೆ. ಈ ಮಹತ್ತ್ವವಾದ ಕಾರ್ಯದ ಯಶಸ್ಸಿಗಾಗಿ ನಿರ್ವಹಿಸುವ ಸಾಮರ್ಥ್ಯವು ಪ್ರಾಪ್ತವಾಗಲು ನನಗೆ ಪೂರ್ಣ ಆಶೀರ್ವಾದ ಮಾಡಿರೆಂದು ಬೇಡುವೆನು (ಎನ್ನುತ್ತಾ ಪತಿಚರಣದಲ್ಲಿ ನಮಿಸುವಳು).
ಮಂ. : ದೇವಿ ನಿನಗೆ ನನ್ನ ಪೂರ್ಣ ಆಶೀರ್ವಾದವಿದೆ. ಏಳು, ಮೇಲೇಳು (ಏಳುವಳು). ಇನ್ನು ನೀನು ಒಳಗೆ ಹೋಗಿ ಬೆಳಗಿನ ಕಾರ್ಯವನ್ನು ಅವಶ್ಯವಾಗಿ ಮುಗಿಸು. ಆ ಬಾಲಯತಿಗಳು ಶಿ?ರನ್ನು ಕೂಡಿಕೊಂಡು ಬರುವ ಸಮಯವಾಗಿದೆ.
ಉ. ಭಾ. : ಹಾಗೇ ಆಗಲಿ ದೇವಾ. (ಸ್ವಗತ) ನನ್ನ ಪಾತಿವ್ರತ್ಯದ ಸತ್ಯದ ಪರೀಕ್ಷಾಸಮಯ. ಹ್ಞಾಂ! ನಾನು ಆ ಸ್ಥಾನಕ್ಕೆ ಬರುವಾಗ ನನ್ನ ಜೊತೆ ಎರಡು ಮಲ್ಲಿಗೆ ಮಾಲೆಗಳನ್ನು ತಂದುಬಿಡುತ್ತೇನೆ. ಆ ಮಾಲೆಗಳೇ ನಿರ್ಣಯ ಕೊಡುವವೆಂದು ಸಭೆಯಲ್ಲಿ ಘೋಷಿಸುವೆ. (ಒಳಹೋಗುತ್ತಾಳೆ.)
ಮಂ. : (ಶಿಷ್ಯರನ್ನು ಕರೆಯುತ್ತಾ) ಏ ಹಣಮು, ಭೀಮು… ಬರ್ರೆಪಾ… (ಅವರು ಒಳಗಿನಿಂದ ಬಂದು ನಿಲ್ಲುವರು). ನಮ್ಮ ಪಡಸಾಲೆಯ ಗೋಡೆಯ ಹತ್ತಿರ ಒಂದು ಎತ್ತರದ ಆಸನ ಇರಿಸಿ, ಸ್ವಲ್ಪ ಮುಂದೆ ಆ ಆಸನದ ಎಡ-ಬಲಕ್ಕೆ ಒಂದೊಂದು ಆಸನ ಹಾಕಿರಿ. ಮತ್ತೆ ಊರೊಳಗಿನ ಜನರು ಬಂದು ಕೂಡ್ರಲಿಕ್ಕೆ ಒಂದೊಂದು ದೊಡ್ಡ ಜಮಖಾನೆ ಹಾಕಿರಿ. ತಿಳಿಯಿತೇ?
ಹಣಮು, ಭೀಮಾ : (ಒಟ್ಟಿಗೆ) ಆಯಿತು ಗುರುಗಳೇ, ತಮ್ಮ ಆಜ್ಞೆಯಂತೆ ಮಾಡುತ್ತೇವೆ.
ಮಂ. : ನಾನು ಒಳಗೆ ಹೋಗಿ ಬೇಗನೆ ಆಹ್ನಿಕಾದಿಗಳನ್ನು ಮುಗಿಸಿಕೊಂಡು ಬರುತ್ತೇನೆ. ನಿನ್ನೆ ನಮ್ಮನ್ನು ಭೆಟ್ಟಿ ಮಾಡಿದ ಬಾಲಯತಿಗಳು ಇ?ರಲ್ಲಿಯೇ ಇಲ್ಲಿಗೆ ಬರಬಹುದು. ಬಂದಾಗ ಸ್ವಾಗತಿಸಿ ಆಸನದ ಮೇಲೆ ಕೂಡ್ರಲಿಕ್ಕೆ ಹೇಳಿರಿ. ಪ್ರೇಕ್ಷಕರಾಗಿ ಬರುವ ಊರವರನ್ನೂ ಗೌರವದಿಂದ ಕೂಡ್ರಲಿಕ್ಕೆ ಹೇಳಿರಿ. (ಒಳಹೋಗುವರು)
[ಊರೊಳಗಿನ ಸಭ್ಯಗೃಹಸ್ಥರು ಒಬ್ಬೊಬ್ಬರಾಗಿ ಬಂದು ಕುಳಿತುಕೊಳ್ಳುವರು. ಈ ಸಮಯದಲ್ಲಿ ಮಂಗಳವಾದ್ಯ ನುಡಿಸಬಹುದು. ಶ್ರೀ ಶಂಕರಾಚಾರ್ಯರು ನಾಲ್ಕೈದು ಶಿಷ್ಯರೊಡಗೂಡಿ ಆಗಮಿಸುವರು.]
ಹಣಮು : ಯತಿವರ್ಯ ಸ್ವಾಮಿ! ದಯಮಾಡಿ ಆಗಮಿಸಬೇಕು. ದಯಮಾಡಿ ಈ ಆಸನದಲ್ಲಿ ಆಸೀನರಾಗಿ. ಇ?ರಲ್ಲಿಯೇ ನಮ್ಮ ಗುರುಗಳು ಆಗಮಿಸುತ್ತಾರೆ. (ಶ್ರೀ ಶಂಕರರು ಆಸನದ ಮೇಲೆ ಕುಳಿತ ನಂತರ ಅವರ ಪಕ್ಕದಲ್ಲೇ ಶಿಷ್ಯರೂ ಕೂಡುವರು.)
(ಅದೇ ವೇಳೆಗೆ ಮಂಡನಮಿಶ್ರರು ಬರುತ್ತಾರೆ.)
ಮಂ. : ಯತಿಗಳು ಈಗಾಗಲೇ ಬಂದಿದ್ದಾರೆ, ಬಹಳ ಸಂತೋ?. ಊರೊಳಗಿನ ಹಿರಿಯ ವಿದ್ವಾಂಸರೂ ಆಗಮಿಸಿದ್ದಾರೆ, ಆನಂದ. ಹಣಮು, ನೀನು ಒಳಗೆ ಹೋಗಿ ನನ್ನವಳಿಗೆ ಈ ದಿನದ ಚರ್ಚಾಸಮಯಕ್ಕೆ ಎಲ್ಲರೂ ಬಂದಿದ್ದಾರೆಂದು ಬೇಗ ಹೇಳು. [ಹಣಮು ಒಳಹೋಗಿ ಉಭಯಭಾರತಿ ದೇವಿಯವರನ್ನು ಕರೆದುಕೊಂಡು ಬರುತ್ತಾನೆ. ಸಭಿಕರೆಲ್ಲರೂ ಎದ್ದುನಿಂತು ಗೌರವ ಸೂಚಿಸುವರು. ಶಿ? ಉಭಯಭಾರತಿಯವರನ್ನು ಅಧ್ಯಕ್ಷಸ್ಥಾನಕ್ಕೆ ಕರೆತಂದಾಗ…]
ಮಂಡನಮಿಶ್ರರು : ಈಗ ಈ ಗೌರವಸ್ಥಾನದಲ್ಲಿ ಆಸೀನರಾಗಿರಿ. (ಕೈಮಾಡಿ ತೋರಿಸುವರು.)
ಉ. ಭಾ. : ಸಂತೋಷ. (ಎದ್ದು ನಿಂತೇ) ಈ ಸಭಾಸ್ಥಾನಕ್ಕೆ ಆಗಮಿಸಿದ ತಾವೆಲ್ಲರೂ ಕುಳಿತುಕೊಳ್ಳಿರಿ. (ಎಲ್ಲರೂ ಕುಳಿತುಕೊಳ್ಳುವರು. ಎಲ್ಲರಿಗೂ ಕೈಮುಗಿದು ತಾವೂ ಕುಳಿತುಕೊಳ್ಳುವರು.) ತಮ್ಮ ವಾಕ್ಯಾರ್ಥವೇನೆಂಬುದನ್ನು ಸಿದ್ಧಮಾಡುವವರು ಪ್ರತಿಜ್ಞೆಯೊಂದಿಗೆ ಬಹಿರಂಗಪಡಿಸಬೇಕು.
ಶ್ರೀ ಶಂಕರಾಚಾರ್ಯರು : ಆಗಬಹುದು. (ಎದ್ದು ನಿಂತು) ನಾನು ಮೊದಲಿಗೆ ನನ್ನ ಪ್ರತಿಜ್ಞೆ ಏನೆಂಬುದನ್ನೂ, ಈ ಸಭೆಯಲ್ಲಿ ಪ್ರತಿಪಾದಿಸುವ ವಿಷಯವೇನೆಂಬುದನ್ನೂ ಹೇಳುವೆನು.
ಸೋಮಶಾಸ್ತ್ರಿ : (ಸಭಿಕರಲ್ಲೊಬ್ಬ ವಯೋವೃದ್ಧರು ಎದ್ದು ನಿಂತು) ಯತಿಗಳೇ, ತಮ್ಮ ನಾಮಾಭಿದಾನವಾವುದೆಂಬುದು ನೆರೆದ ಸಭಿಕರಿಗೆ ಗೊತ್ತಾಗಲೆಂದು ಆಪೇಕ್ಷಿಸುತ್ತೇನೆ.
ಶ್ರೀ ಶಂಕರಾಚಾರ್ಯರು : ಹೀಗೆ ಕೇಳುವುದರಲ್ಲಿ ನನಗೇನೂ ತೊಂದರೆಯಿಲ್ಲ. ನಾನು ಶಂಕಾರಾಚಾರ್ಯನೆಂದು ಕರೆಯಿಸಿಕೊಳ್ಳುತ್ತೇನೆ. ಇನ್ನು ಈ ಸಭೆಯಲ್ಲಿ ವಾಕ್ಯಾರ್ಥದ ಪ್ರತಿಪಾದನೆ ಏನೆಂದರೆ-
ಬ್ರಹ್ಮೈಕಂ ಪರಮಾರ್ಥಸಚ್ಚಿದಮಲಂ ವಿಶ್ವಪ್ರಪಂಚಾತ್ಮನಾ|
ಶುಕ್ತೀ ರೂಪ್ಯಪರಮಾತ್ಮನೇವ ಬಹಲಾಜ್ಞಾನಾವೃತಂ ಭಾಸತೇ||
ತತ್ಜ್ಞಾನಾನ್ನಿಖಿಲಪ್ರಪಂಚನಿಲಯಾ ಸ್ವಾತ್ಮನ್ಯವಸ್ಥಾಪರಮ್|
ನಿರ್ವಾಣಂ ಜನಿಮುಕ್ತಮಭ್ಯುಪಗತಂ ಮಾನಂ ಶ್ರುತೇರ್ಮಸ್ತಕಮ್||
ಅಂದರೆ ಸಚ್ಚಿದಾನಂದಸ್ವರೂಪವೂ ನಿರ್ಮಲವೂ ಆಗಿರುವ ವಸ್ತು ’ಬ್ರಹ್ಮ’ ಒಂದೇ. ಅದೊಂದೇ ಸತ್ಯವಾಗಿದೆ. ಸಿಂಪಿಯ ಒಳಗೆ ಕಾಣುವ ಹೊಳಪನ್ನೇ ನೋಡಿ ಭ್ರಾಂತಿಯಿಂದ ಬೆಳ್ಳಿಯೆಂದು ತಿಳಿದುಕೊಂಡರೆ ಮಾಯಾ ವಿಶೇಷತೆಯಿಂದಾಗಿ ಅಜ್ಞಾನದಿಂದ ನಾವು ಬ್ರಹ್ಮವನ್ನೇ ಪ್ರಪಂಚವೆಂದು ಕರೆಯುತ್ತಿರುವೆವು. ಈ ಆವರಿಸಲ್ಪಟ್ಟ ಅಜ್ಞಾನ ದೂರವಾದರೆ ಎಲ್ಲೆಲ್ಲಿಯೂ ಬ್ರಹ್ಮವೇ ಗೋಚರಿಸುವುದು. ಆ ಬ್ರಹ್ಮಜ್ಞಾನ ಸ್ಥಿತಿಯಿಂದರಿತು ಇರುವುದೇ ಮುಕ್ತಿಯು. ಇದಕ್ಕೆ ವೇದಾಂತವೇ ಪ್ರಮಾಣವಾಗಿದೆ.
ಈ ವಿಷಯವನ್ನೇ ನಾನು ಸಿದ್ಧಮಾಡಿ ನಿಮಗೆಲ್ಲರಿಗೂ ನಂಬಿಕೆಯಾಗುವಂತೆ ಹೇಳುವೆನು. ಒಂದುವೇಳೆ ಸಿದ್ಧಮಾಡುವಾಗ ಅಸಮರ್ಥನಾದರೆ ಮಂಡನಮಿಶ್ರರಂತೆ ಗೃಹಸ್ಥಾಶ್ರಮ ಸ್ವೀಕರಿಸುವೆನು ಎಂದು ನಿಮ್ಮೆದುರಿಗೆ ಪ್ರತಿಜ್ಞೆ ಮಾಡುವೆನು.
ಮಂ. : (ಎದ್ದುನಿಂತು) ನಾನು ಸಿದ್ಧಮಾಡತಕ್ಕ ವಿಷಯವೇನೆಂದರೆ –
ವೇದಾಂತಾ ನ ಪ್ರಮಾಣಂ ಚಿತಿವಪುಷಿಪದೇ ತತ್ರ ಸಾಂಗತ್ಯಯೋಗಾತ್
ಪೂರ್ವೋ ಭಾಗಃ ಪ್ರಮಾಣಂ ಪದಚಯಗಮಿತೇ ಕಾರ್ಯವಸ್ತೂನ್ಯಶೇಷೇ||
ಶಬ್ದಾನಾಂ ಕಾರ್ಯಮಾತ್ರಂ ಪ್ರತಿ ಸಮಧಿಗತಾ ಶಕ್ತಿರಭ್ಯುನ್ನತಾನಾಂ
ಕರ್ಮಭ್ಯೋ ಮುಕ್ತಿರಿಷ್ಟಾ ತದಿಹ ತನುಭೃತಾಮಾಯುಷಃ ಸ್ಯಾತ್ಸಮಾಪ್ತೇಃ||
ಅಂದರೆ ಬ್ರಹ್ಮವಿಷಯದಲ್ಲಿ ವೇದಾಂತವಾಕ್ಯಗಳು ಪ್ರಮಾಣವಲ್ಲ. ಬ್ರಹ್ಮವೆಂಬುದು ಇಲ್ಲವೇ ಇಲ್ಲ. ವೇದದ ಪೂರ್ವಭಾಗವೆಂದು ಹೇಳುವ ಕರ್ಮಕಾಂಡವೇ ಪ್ರಮಾಣ. ಕರ್ಮದಿಂದಲೇ ಮೋಕ್ಷವೆಂಬುದು ಸ್ಪಷ್ಟವಾಗಿ ಸಿದ್ಧವಾಗುವುದರಿಂದ ಮನುಷ್ಯನು ಸಾಯುವವರೆಗೂ ಕರ್ಮವನ್ನು ಮಾಡಿಯೇ ತೀರಬೇಕು.
ಈ ವಿಷಯವನ್ನು ನಾನು ಸಿದ್ಧಮಾಡದೇ ಇದ್ದರೆ, ನನ್ನ ಗೃಹಸ್ಥಾಶ್ರಮ ತ್ಯಜಿಸಿ, ಸಂನ್ಯಾಸ ಆಶ್ರಮ ಸ್ವೀಕರಿಸಿ, ಶ್ರೀ ಶಂಕರಾಚಾರ್ಯರ ಶಿಷ್ಯನಾಗುವೆನು.
ಉ. ಭಾ. : ನನ್ನ ಪೂರ್ವಜನ್ಮದ ಪುಣ್ಯದಿಂದ, ತಮ್ಮೆಲ್ಲರ ಸಹೃದಯದ ಒಲುಮೆಯಿಂದ ಈ ವಾಕ್ಯಾರ್ಥ ನಡೆಸುವ ತತ್ತ್ವಪೂರ್ಣ ಸಂವಾದದ ಸಭೆಯ ನಿರ್ಣಾಯಕ ಅಧ್ಯಕ್ಷಿಣಿಯಾಗುವ ಸುಯೋಗವು ಬಂದದ್ದರಿಂದ, ಮುಖ್ಯವಾಗಿ ಯತಿವರ್ಯ ಶ್ರೀ ಶಂಕರಾಚಾರ್ಯರ ಕಾರಣದಿಂದ ಈ ಸ್ಥಾನಕ್ಕೆ ನಾನು ಇಲ್ಲಿರಬೇಕಾಯಿತು. ಆದ್ದರಿಂದ ಶ್ರೀಗಳ ಪಾವನ ಚರಣದಲ್ಲಿ ಅನಂತ ಪ್ರಣಾಮಗಳು. ಅದೇ ಮೇರೆಗೆ ಪುಣ್ಯಪುರುಷರಾದ ನನ್ನ ಪತಿಯ ಚರಣದಲ್ಲಿ ಪ್ರಣಾಮ ಸಲ್ಲಿಸುತ್ತಾ, ಯಾವತ್ತೂ ಕುಳಿತ ಸಭ್ಯಗೃಹಸ್ಥರಿಗೂ ವಂದನೆಗಳು. ಈ ಸಭೆಯ ಸಂವಾದ ಬೇಗ ಒಂದೆರಡು ದಿವಸಗಳಲ್ಲಿ ಸಮಾಪ್ತವಾಗಲಾರದ್ದೆಂದು ನನಗೆ ಅನಿಸುತ್ತದೆ. ಈ ಇಬ್ಬರು ಮಹನೀಯರು ಕುಳಿತುಕೊಂಡೇ ಸಂವಾದ ಮುಂದುವರಿಸಲಿ, ತಾವು ಸಿದ್ಧಮಾಡಿ ತೋರಿಸುವ ತತ್ತ್ವಾಧಿಷ್ಠಿತ ಪ್ರತಿಜ್ಞೆ ಸಭಿಕರೆಲ್ಲರಿಗೆ ತಿಳಿದಿದೆ. ಆದರೂ ಅವರೀರ್ವರ ಪ್ರತಿಜ್ಞೆಯ ಮುಖ್ಯ ಸಾರಾಂಶ ಹೇಳಬಯಸುವೆ.
ಒಬ್ಬರು ಕರ್ಮವನ್ನು ನಿಷ್ಠೆಯಿಂದ ಮಾಡುವುದರಿಂದ ಮೋಕ್ಷವಾಗುವುದೆಂದು ಹೇಳಿದ್ದಾರೆ. ಮತ್ತೊಬ್ಬರು ಮೋಕ್ಷವಾಗಲಿಕ್ಕೆ ಜ್ಞಾನದ ಆವಶ್ಯಕತೆಯಿದೆ ಎಂದು ಸಾಧಾರ ಶ್ಲೋಕದಿಂದ ಬ್ರಹ್ಮಜ್ಞಾನದ ಅನುಭವದಿಂದ ಮುಕ್ತಿ ಸಾಧ್ಯವೆಂದು ಸಾರಿದ್ದಾರೆ. ಇವರ ಚರ್ಚೆಯನ್ನು ಕೇಳುತ್ತ ಕೂಡ್ರುವ ಅವಕಾಶ ನನಗಿರುವುದಿಲ್ಲ. ಯಾಕೆಂದರೆ ನಾನು ಗೃಹಿಣಿಯಾಗಿ ಅತಿಥಿಗಳ ಸಲುವಾಗಿ ಅಡುಗೆ ಮೊದಲಾದ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಇಲ್ಲಿಂದ ನಾನು ಹೊರಡುವ ಮೊದಲು ನನ್ನ ಪತಿ ಆರ್ಯಪುತ್ರರ ಕೊರಳಿಗೆ ಮಲ್ಲಿಗೆ ಹೂವಿನ ಮಾಲೆಯನ್ನು ಹಾಕುವೆನು. ಇನ್ನು ಯತಿವರ್ಯರ ಕೊರಳಿಗೆ ಅವರ ಶಿಷ್ಯೋತ್ತಮರು ಈ ಮಲ್ಲಿಗೆ ಹೂವಿನ ಮಾಲೆಯನ್ನು ಹಾಕಲಿ. (ಮಾಲೆಯನ್ನು ಶಿಷ್ಯನ ಕಡೆಗೆ ನೀಡುವಳು. ಅದನ್ನು ಶಂಕರಾಚಾರ್ಯರ ಕೊರಳಿಗೆ ಹಾಕಿದ ನಂತರ…) ಕೇಳಿ ಸಭಿಕರೇ, ಸಂವಾದ ಮಾಡುವಾಗ ಯಾರ ಕೊರಳೊಳಗಿನ ಮಾಲೆಯು ಬಾಡುವುದೋ ಅವರು ಸೋತರೆಂದು ಸಭಿಕರು ತಿಳಿಯಬೇಕು. ಈ ನನ್ನ ವಿನಂತಿಯನ್ನು ಮನ್ನಿಸಿರಿ. ನಾನು ನನ್ನ ಗೃಹಕೃತ್ಯಕ್ಕಾಗಿ ಹೊರಡುವೆ.
ಎಲ್ಲರೂ – ತಾವು ಅವಶ್ಯವಾಗಿ ಹೊರಡಬಹುದು.
(ಕೂಡಲೆ ಉ.ಭಾ. ನಿರ್ಗಮಿಸುವಳು)
ನಾರಾಯಣ ದೀಕ್ಷಿತ : ಅಬ್ಬಾ! ಈ ತಾಯಿಯ ಆದರ್ಶವೆ! ತನ್ನ ನಿರ್ಣಾಯಕ ಶಕ್ತಿಯನ್ನು ಮಾಲೆಗಳಲ್ಲಿರಿಸಿದ್ದಾಳಲ್ಲಾ; ಆಶ್ಚರ್ಯ! ತನ್ನ ಕರ್ತವ್ಯಕ್ಕೆ ಚ್ಯುತಿ ಬರಬಾರದು. ವಾಗ್ವಾದ ಮಾಡುವವರಿಗೂ ವಿರಸವಾಗಬಾರದು. ಸಭಿಕರಿಗೂ ಸರಿ ಎನಿಸುವ ಯುಕ್ತಿ ಮಾಡಿ ಹೋದಳು!
ಸೋಮಶಾಸ್ತ್ರಿ : ಬುದ್ಧಿವಂತರು ಹೀಂಗ ಇರತಾರ ಏನ್ರೆಪಾ!
ಮಂಡನಮಿಶ್ರರು : ದಯವಿಟ್ಟು ಎಲ್ಲರೂ ಸುಮ್ಮನಿರಬೇಕು. ಈಗ ನಮ್ಮೀರ್ವರ ಸಂವಾದ ಪ್ರಾರಂಭಿಸಲಾಗುವುದು. (ಎಲ್ಲರೂ ಶಾಂತರಾಗುವರು.) ಯತಿಗಳೇ, ಈ ಕಲಿಯುಗದಲ್ಲಿ ಸಂನ್ಯಾಸತ್ವವು ತ್ಯಾಜ್ಯವೆಂದು ಹೇಳಲ್ಪಟ್ಟಿದ್ದರೂ ನೀವು ಬ್ರಹ್ಮಚಾರಿಗಳಿರುವಾಗಲೇ ಸಂನ್ಯಾಸಾಶ್ರಮ ಸ್ವೀಕರಿಸಿದ್ದು ಅಧರ್ಮವಾಗಿದೆ. ಆದ್ದರಿಂದ ಅಧರ್ಮದಿಂದಲಿರುತ್ತಾ ವೇದ, ವೇದಾಂತದ ಮಾತನಾಡಲು ಯೋಗ್ಯ ಅಧಿಕಾರವೂ ಇಲ್ಲದೆ ನನ್ನೊಡನೆ ಚರ್ಚೆ ಮಾಡಲಿಕ್ಕೆ ಯೋಗ್ಯತಾಹೀನರಾಗಿರುವಿರಿ.
ಶ್ರೀ ಶಂ. : (ಮುಗುಳುನಗೆಯಿಂದ) ನಿಮ್ಮ ಮಾತನ್ನು ನಾನು ಹೇಗೆ ಒಪ್ಪಲಿ?
ಮಂ. : ಯಾಕೆ ಒಪ್ಪುವುದಿಲ್ಲ?
ಶ್ರೀ ಶಂ. : ಯಾಕೆಂದು ಕೇಳಿರಿ,
ಯಾವದ್ವರ್ಣವಿಭಾಗೊಸ್ತಿ ಯಾವದ್ವೇದಃ ಪ್ರವರ್ತತೇ|
ಸಂನ್ಯಾಸಶ್ಚಾಗ್ನಿಹೋತ್ರಂ ಚ ತಾವದೇವ ಕಲೌ ಯುಗೇ||
– ಎಂದು ಹೇಳಲಾಗಿದೆ.
ಸ್ವಲ್ಪ ವಿಚಾರಿಸಿ ನೋಡಿ. ಯಾವ ನಾಲ್ಕು ವೇದಗಳೂ, ಯಾವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ವಿಭಾಗ ಮಾಡಿದಂತಹ ವರ್ಣಗಳೂ ಕಲಿಯುಗದಲ್ಲಿರುವುದಾದರೆ ಸಂನ್ಯಾಸ ಮೊದಲಾದ ಆಶ್ರಮಗಳು ಏಕಿರಬಾರದು? ಇವು ಈಗಲೂ ಮುಂದೆಯೂ ಇರುವಂತಹವಲ್ಲವೆ? ಆಶ್ರಮಗಳ ಆಚರಣೆಯಂತೆ ಆಚರಿಸುವವರಿಗೆ ಇವುಗಳೆಲ್ಲಾ ಇದ್ದೇ ಇವೆ.
ಮಂ. : ನೀವು ಏನೇ ಹೇಳಿದರೂ ಈ ಕಲಿಯುಗದಲ್ಲಿ ಸಂನ್ಯಾಸ ಆಶ್ರಮವು ತ್ಯಾಜ್ಯವೆಂದೇ ನನ್ನ ಅಭಿಪ್ರಾಯ.
ಶ್ರೀ ಶಂ. : ಸಂನ್ಯಾಸ ಆಶ್ರಮ ಈ ಕಾಲದಲ್ಲಿ ಗ್ರಾಹ್ಯವಲ್ಲವೆಂದು ಏಕೆ ಅನ್ನುವಿರೆಂದು ನನಗೆ ಗೊತ್ತಿದೆ. ಆದರೆ ಅದು ನಿಮಗೆ ಗೊತ್ತಿಲ್ಲ.
ಮಂ. : (ಹುಬ್ಬುಗಂಟಿಕ್ಕಿ) ನನಗೇಕೆ ಗೊತ್ತಿಲ್ಲ? ಈಗ ಕಲಿಯುಗದ ಪ್ರಭಾವದಿಂದ ನಿಯಮಬದ್ಧ ಆಶ್ರಮಧರ್ಮ ಪಾಲಿಸುವುದಕ್ಕಾಗುವುದಿಲ್ಲ. ಸತ್ಕರ್ಮದಾನಾದಿಗಳನ್ನು ಮಾಡಿದರಾಯಿತು.
ಶ್ರೀ ಶಂ. : ನೀವು ಈ ಬಗ್ಗೆ ಹಟಹಿಡಿದು ಹೇಳುವುದು ಏಕೆಂದರೆ, ನಿಮ್ಮಲ್ಲಿರುವ ಪ್ರಪಂಚಾಸಕ್ತಿಯೇ ನಿಮ್ಮಿಂದ ಹೀಗೆ ಹೇಳಿಸುತ್ತಿದೆಯಲ್ಲದೆ ಮತ್ತೇನಲ್ಲ. (ಸಭಿಕರೆಲ್ಲರೂ ಗೊಳ್ಳೆಂದು ನಗುವರು.) ನಗಬಾರದು, ಸುಮ್ಮನಿರಬೇಕು.
ಮಂ. : ಆರ್ಯಸಂಸ್ಕೃತಿಯ ಆಧಾರದಿಂದ ಹೇಳುವುದನ್ನು ನೀವು ಅಲ್ಲಗಳೆಯುವುದನ್ನು ನೋಡಿದರೆ, ವಾದಮಾಡುವ ಹಟ ಯಾರಿಗೆ? ನನಗೋ ನಿಮಗೋ?
ಶ್ರೀ ಶಂ. : ನನಗೆ ಸರಿ ಎನಿಸಿದ್ದನ್ನು ಹೇಳುತ್ತೇನೆ; ಇದರಲ್ಲಿ ಹಟದಿಂದ ವಾದಿಸುವ ಪ್ರಸಂಗವೂ ಇಲ್ಲ, ನನಗೆ ಆ ದುರ್ಬುದ್ಧಿಯೂ ಇಲ್ಲ. ನಾನು ಕೇವಲ ನನ್ನ ಪ್ರತಿಜ್ಞೆಯಂತೆ ವಾಕ್ಯಾರ್ಥ ನಡೆಸಲಿಕ್ಕೆ ಬಂದಿರುವೆ. ಆದರೆ ನೀವು ಮಾತಾಡುವ ರೀತಿಯನ್ನು ನೋಡಿದರೆ, ಏನಾದರೊಂದು ಜೋರಿನಿಂದ ಹೇಳಿ ನನ್ನ ಬಾಯಿ ಬಂದು ಮಾಡುವ ವಿಚಾರವನ್ನಿಟ್ಟುಕೊಂಡಂತೆ ಕಾಣುತ್ತದೆ. ನಿಮ್ಮ ಪದ್ಧತಿಯು ಈ ಸಭೆಗೂ ನಿಮ್ಮ ವಿದ್ವತ್ತಿಗೂ ಶೋಭಿಸಲಾರದು. ನಾನೂ ನಿಮ್ಮಂತೆಯೇ ಪೂರ್ವದ ಸನಾತನ ಸಂಸ್ಕೃತಿ, ಧರ್ಮದ ಆಧಾರ ತೆಗೆದುಕೊಂಡೇ ಚರ್ಚೆ ಮಾಡುವುದಕೋಸ್ಕರ ಸಿದ್ಧನಿರುವೆನಲ್ಲಾ!
ಮಂ. : ಹಾಗಾದರೆ ನಮ್ಮ ಸಂಸ್ಕೃತಿಗನುಗುಣವಾಗಿ ಮುಖ್ಯವಾಗಿ ಬೇಕಾದದ್ದು ಯಜ್ಞೋಪವೀತವಲ್ಲವೇ? ಅದು ನಿಮ್ಮ ಕೊರಳೊಳಗಿಂದ ಯಾವಾಗಲೋ ಮಾಯವಾಗಿದೆ. ಮತ್ತು ಅದು ಮುಕ್ತಿಗೆ ಸಾಧನವೂ ಆಗಿದೆ. ಆದರೆ ನಾಲ್ಕೂ ಆಶ್ರಮದವರು ಶಾಸ್ತ್ರಬದ್ಧತೆ ಪಾಲಿಸದಿದ್ದರೆ, ಅವರು ಎಂತಹ ತಪಸ್ವಿಗಳಾಗಿದ್ದರೂ ಬ್ರಾಹ್ಮಣ್ಯಕ್ಕೆ ಚ್ಯುತರಾಗುವರು. ಏನೋ ಭ್ರಾಂತಿಯಿಂದ ಯಜ್ಞೋಪವೀತವನ್ನು ತ್ಯಜಿಸಿದರೆ ಸದ್ಗತಿಯೇ ಇಲ್ಲ.
ಯಜ್ಞೋಪವೀತಂ ಸರ್ವೇ?ಂ ದ್ವಿಜಾನಾಂ ಮುಕ್ತಿದಾಯಕಂ |
ಪರಿತ್ಯಜಂತಿ ಯೇ ಮೋಹಾತ್ ತೇ ವೈ ನಿರಯಗಾಮಿನಃ ||
ಶಿಖಾ, ಯಜ್ಞೋಪವೀತಗಳನ್ನು ತ್ಯಜಿಸಿದವನೂ ಸಂಧ್ಯೋಪಾಸನೆ ಮಾಡದವನೂ ಬ್ರಾಹ್ಮಣನೆನಿಸುವುದಿಲ್ಲ. ಸತ್ಕರ್ಮಗಳಿಂದಲೇ ಸ್ವರ್ಗ, ರಾಜ್ಯ, ಪುತ್ರ, ಪೌತ್ರ, ಸಂಪತ್ತು ಮೊದಲಾದ ಫಲಗಳು ದೊರೆಯುತ್ತವೆ. ತಿಳಿದು ಸತ್ಕರ್ಮ ಮಾಡುತ್ತಾ ಜನರಿಗೆ ಸನ್ಮಾರ್ಗದರ್ಶನ ಮಾಡುವವನೇ ಜ್ಞಾನಿಯೂ ಪಂಡಿತನೂ ಎನಿಸುತ್ತಾನೆ. ಕಲಿಯುಗದಲ್ಲಿಯಂತೂ ಸತ್ಕರ್ಮದಲ್ಲಿ ನಿಷ್ಠನಾದವನೇ ಜ್ಞಾನಿಯೆನಿಸುತ್ತಾನೆ. ಅವನೇ ಶ್ರೇಷ್ಠ ಭಕ್ತನೆನಿಸುವನು. ಆದಕಾರಣ ಸದ್ಯದ ಯುಗದಲ್ಲಿ ಸರ್ವಥಾ ಸಂನ್ಯಾಸವು ತ್ಯಾಜ್ಯವೇ ಇರುತ್ತದೆ.
ಶ್ರೀ ಶಂ. : ಕರ್ಮಾಭಿಮಾನದ ಕಾಂಕ್ಷತೆಯಿಂದ ನೀವು ಈ ರೀತಿ ಹೇಳುವುದು ಸರ್ವಸಮ್ಮತವಾಗಲಿಕ್ಕೆ ಸಾಧ್ಯವೇ ಇಲ್ಲ. ನಿಜವಾದ ಪಂಡಿತರು ಹೀಗೆ ಹೇಳುತ್ತಾರಲ್ಲಾ:
ಯಜ್ಞೋಪವೀತಂ ಕರ್ಮಾಂಗಂ ವದಂತ್ಯುತ್ತಮಬುದ್ಧಯಃ |
ಉಪಕುರ್ವಾಣಕಾತ್ಪೂರ್ವಂ ಯತೋ ಲೋಕೇ ನ ದೃಶ್ಯತೇ ||
ಅಂದರೆ ಶಾಸ್ತ್ರಸಂಪನ್ನ ಪಂಡಿತರು ಯಜ್ಞೋಪವೀತವನ್ನು ಕರ್ಮಾಂಗವೆಂದೇ ಸ್ಪಷ್ಟೀಕರಿಸಿದ್ದಾರೆ. ಬ್ರಾಹ್ಮಣರೆಲ್ಲರಿಗೆ ಯಜ್ಞೋಪವೀತವು ಸಾಧನವಾಗಿದ್ದರೆ ಉಪನಯನದ ಪೂರ್ವದಲ್ಲಿ ಅದನ್ನು ಏಕೆ ಧರಿಸುವುದಿಲ್ಲ? ಶುದ್ಧಸ್ವರೂಪಾತ್ಮಜ್ಞಾನದಿಂದ ಯಾವ ಅರಿವು ಆಗುವುದೋ, ಆ ಅರಿವಿನ ಇರುವಿಕೆಯ ಸ್ಥಿತಿಯೇ ಸರ್ವಚರಾಚರದಲ್ಲಿ ವ್ಯಾಪಿಸಿದ್ದನ್ನು ಅನುಭವಿಸುವವನಿಗೇ ಸ್ವಸಂವೇದ್ಯವಾಗಿರುವುದು. ಈ ರೀತಿಯ ಜ್ಞಾನಸೂತ್ರವನ್ನು ಆಂತರ್ಯದಲ್ಲಿ ಧರಿಸಿದವನೇ “ಸೂತ್ರಜ್ಞನೆನಿಸಿ, ಜೀವನ್ಮುಕ್ತನೆನಿಸಿದ್ದು” ಹೀಗೆ ಜ್ಞಾನೋಪವೀತನಾಗಿದ್ದಾನೆ. ಈ ರೀತಿಯಾಗಿ ನಾನು ಜ್ಞಾನೋಪವೀತಿಯಾಗಿದ್ದೇನೆ. ಈ ಕಾರಣದಿಂದ ಸಂವಾದಮಾಡುವುದಕ್ಕೋಸ್ಕರ ನಿಮಗಿಂತ ಹೆಚ್ಚು ಅರ್ಹತೆಯುಳ್ಳವನಾಗಿದ್ದೇನೆ. ಇ?ಗಿಯೂ ನಿಮ್ಮ ಸಂಶಯವಿದ್ದರೆ ಹೇಳಿ. (ಈ ಸಮಯದಲ್ಲಿ ಉ.ಭಾ. ಅಡುಗೆಮನೆ ಬಾಗಿಲಲ್ಲಿ ನಿಲ್ಲುವಳು.)
ಮಂ. : ಆಗಲಿ! ನೀವು ಸಂವಾದಕ್ಕೆ ಅರ್ಹರೆಂದೇ ಭಾವಿಸುತ್ತೇನೆ, ಆಯಿತಲ್ಲಾ.
ಉ.ಭಾ. : ಆರ್ಯಪುತ್ರರೇ! (ಮರಳಿ ಹೊರಳಿ ಅವಳ ಕಡೆ ನೋಡುವರು.) ಈ ಮಾನ್ಯ ಯತಿಗಳು ತಮ್ಮೊಡನೆ ವಾಕ್ಯಾರ್ಥ ನಡೆಸಲಿಕ್ಕೆ ಯೋಗ್ಯತಾಸಂಪನ್ನರೆಂದು ತಿಳಿದು ತಾವು ಅವರಿಗೆ ಒಪ್ಪಿಗೆ ಕೊಟ್ಟದ್ದು ಕೇಳಿ ನನಗೆ ಬಹಳ ಸಂತೋಷವಾಗಿದೆ.
ಮಂ. : ಈ ಬಗ್ಗೆ ನಿನಗೇಕೆ ಸಂತೋಷವಾಗಿದೆ?
ಉ. ಭಾ. : ಪತಿದೇವಾ, ಎಷ್ಟೆಂದರೂ ಸಂನ್ಯಾಸಿಗಳು. ಅವರಿಗೆ ತಾವು ಆಗ್ರಹದಿಂದ ಅಯೋಗ್ಯರೆಂದು ವಾದ ನಿಲ್ಲಿಸಿದ್ದರೆ, ಅವರ ಪವಿತ್ರ ಮನಸ್ಸಿಗೆ ಧಕ್ಕೆಯಿಂದ ನೋವಾಗುತ್ತಿತ್ತು. ಸಭೆಯಲ್ಲಿ ಮುಂದೆ ಬರಬಹುದಾದ ಯೋಗ್ಯ ಚರ್ಚೆಯ ವಿಷಯ ನಿಂತೇ ಹೋಗುತ್ತಿತ್ತು. ಪ್ರತಿಜ್ಞೆಯನ್ನು ಪಾಲಿಸಲಾಗದ ದೋಷವು ನಿಮಗೆ ತಗಲುತ್ತಿತ್ತು. ಸಭೆಗೆ ಅವಕಳೆಯಾಗುತ್ತಿತ್ತು. ನಿಜವಾಗಿ ಒಪ್ಪಿ ಒಳ್ಳೆಯದನ್ನೇ ಮಾಡಿದಿರಿ.
ಮಂ. : ವ್ಹಾ! ವ್ಹಾ! ದೇವೀ, ನಿನ್ನ ಧೋರಣೆಯ ವಿಚಾರ ಕೇಳಿ ಆನಂದವಾಯಿತು.
ಶ್ರೀ ಶಂ. : ತಾಯೀ ಧನ್ಯ! ನಿಮ್ಮ ನಿಜವಾದ ಕೌಶಲಕ್ಕೆ ಎಂತಹ ಪಂಡಿತರೂ ಕೂಡಾ ಹರ್ಷಪಡತಕ್ಕದ್ದೇ!
ಉ. ಭಾ. : ಮಾನ್ಯ ಯತಿಗಳೇ, ತಾವು ಹೊಗಳುವಷ್ಟು ನಾನು ಯೋಗ್ಯತೆಯವಳಲ್ಲ. ಆ ಪ್ರಸಂಗದಲ್ಲಿ ತೋಚಿದ್ದನ್ನು ಹೇಳಿದೆ. ಈಗ ಮಧ್ಯಾಹ್ನವಾಗುತ್ತಾ ಬಂದಿದೆ. ತಾವು ನದಿಗೆ ಹೋಗಿ ಸ್ನಾನಾದಿಗಳನ್ನು ಮುಗಿಸಿಕೊಂಡು ಶಿಷ್ಯರ ಸಮೇತ ಬಂದು ನಮ್ಮ ಆತಿಥ್ಯ ಸ್ವೀಕರಿಸಬೇಕು. (ಮಂಡನಮಿಶ್ರರ ಕಡೆಗೆ ನೋಡಿ) ಆರ್ಯಪುತ್ರರೇ, ಬೇಗ ಆಚಮನಾದಿಗಳನ್ನು ಮುಗಿಸಿಕೊಂಡರೆ ಒಳ್ಳೆಯದು.
ಮಂ. : ಸರಿಯೇ, ನಿನ್ನ ಇಚ್ಛೆಯಂತೆಯೇ ಆಗಲಿ. (ಎದ್ದು ನಿಂತು ಶ್ರೀ ಶಂಕರರ ಕಡೆಗೆ ನೋಡಿ) ಮಾನ್ಯ ಸಂನ್ಯಾಸಿಗಳು ಸ್ನಾನಾದಿಗಳನ್ನು ಮುಗಿಸಿಕೊಂಡು ಶಿಷ್ಯರ ಸಹಿತ ಬಂದು ಆತಿಥ್ಯ ಸ್ವೀಕರಿಸಬೇಕು. ಹೀಗೆಯೇ ನಮ್ಮ ನಿಮ್ಮ ಸಂವಾದ ಮುಗಿಯುವವರೆಗೂ ಆತಿಥ್ಯ ಸ್ವೀಕರಿಸಬೇಕಾಗಿ ವಿನಂತಿ.
ಶ್ರೀ ಶಂ. : ಆಗಬಹುದು, ಪಂಡಿತರೇ! (ಎದ್ದು ಶಿಷ್ಯರ ಸಮೇತ ನದಿಯ ಕಡೆಗೆ ಹೊರಡುವರು. ಕುಳಿತ ಜನರು ತಮ್ಮ ತಮ್ಮ ಮನೆಗೆ ತೆರಳುವರು.)
* * * * * * * * * *
(ದೃಶ್ಯ೨: ಮಂಡನಮಿಶ್ರರ ಮನೆಯ ಪಡಸಾಲೆ(ಹಜಾರ)ಯಲ್ಲಿ ಹಿಂದಿನ ದಿನದಂತೆ ಸಂವಾದಕರು ತಮ್ಮ ತಮ್ಮ ಆಸನದ ಮೇಲೆ ಕುಳಿತಿದ್ದಾರೆ. ಪ್ರೇಕ್ಷಕ ಜನರೂ ಕುಳಿತಿದ್ದಾರೆ.)
ಸೋಮಶಾಸ್ತ್ರಿ : ಏನು ದೀಕ್ಷಿತರೇ, ಇನ್ನೂ ಅಧ್ಯಕ್ಷಿಣಿಯವರು ಬರಲಿಲ್ಲವಲ್ಲ?
ನಾರಾಯಣ ದೀಕ್ಷಿತರು : ಏನು ಶಾಸ್ತ್ರಿಗಳೇ, ಪ್ರಾರಂಭದಲ್ಲಿಯೇ ಅಧ್ಯಕ್ಷಿಣಿಯಾದ ತಾಯಿ ತನ್ನ ನಿರ್ಣಯವನ್ನು ಮಲ್ಲಿಗೆ ಹೂವಿನ ಮಾಲೆಗಳೇ ಕೊಡುತ್ತವೆಂದು ಹೇಳಿದ್ದನ್ನು ಮರೆತಿರೇನು?
ಮಂ. : ದಯವಿಟ್ಟು ಯಾರೂ ಗದ್ದಲ ಮಾಡದೆ ಸುಮ್ಮನಿರಿ. ನಮ್ಮೀರ್ವರ ಚರ್ಚೆಯನ್ನು ಪ್ರಾರಂಭಿಸಲಾಗುವುದು. ಯತಿಗಳೆ, ಮನುಷ್ಯರೆಲ್ಲರಿಗೆ ಸತ್ಕರ್ಮದಿಂದಲೇ ಮೋಕ್ಷವಾಗುತ್ತದೆಂದು ಕರ್ಮದ ಮುಖ್ಯ ಅಂಗವಾದ ಯಜ್ಞ ಮಾಡದಿದ್ದರೆ ವೀರ್ಯಹತ್ಯಾದೋಷ ಬರುತ್ತದೆಂದು ’ಯಾವಜ್ಜೀವಮಗ್ನಿಹೋತ್ರಂ ಜುಹುಯಾತ್’ ಎಂದರೆ ಮನುಷ್ಯನು ತನ್ನ ಜೀವನಪರ್ಯಂತ ಕರ್ಮ ಮಾಡಲೇಬೇಕು. ಆದ್ದರಿಂದ ಕರ್ಮಕ್ಕೆ ಮಾತ್ರ ಮಹತ್ತ್ವವಿದೆ ಹೊರತು ಜ್ಞಾನಕ್ಕಿರುವುದಿಲ್ಲ. ನೋಡಿರಿ ಈಶಾವಾಸ್ಯೋಪನಿಷತ್ತಿನ ಎರಡನೇ ಮಂತ್ರವು – ಕುರ್ವನ್ನೇವೇಹ ಕರ್ಮಾಣಿ ಜಿಜೀವಿಶೇಚ್ಛತಂ ಸಮಾಃ | ಎಂದೇ ನಿರ್ಧಾರವಾಗಿ ಹೇಳಿದ್ದರಿಂದ ಮನುಷ್ಯನ ನೂರು ವರುಷದ ಆಯುಷ್ಯ ಕರ್ಮಕ್ಕಾಗಿಯೇ ಇದ್ದಂತಾಯಿತಲ್ಲವೇ?
ಶ್ರೀ ಶಂ. : ನಾನು ಹೇಳುವ ವಿಷಯದ ಕಡೆಗೆ ದಯವಿಟ್ಟು ಲಕ್ಷ್ಯಕೊಡಿರಿ. ಯಾಕೆಂದರೆ ಮಾನವರಲ್ಲಿ ನಾಲ್ಕು ತರಹದ ಜನರಿರುತ್ತಾರೆ. ಅವರ ಬಗ್ಗೆ ಹೇಳುವೆ, ಕೇಳಿರಿ. ಬದ್ಧ, ಮುಮುಕ್ಷು, ಸಾಧಕ, ಸಿದ್ಧ – ಹೀಗೆ. ಇವರಲ್ಲಿ ಮೊದಲನೆಯವ ಬದ್ಧ; ತಾಮಸಗುಣ ರಾಜಸಗುಣಗಳ ಪ್ರವೃತ್ತಿಯಿಂದ ಮಾನವನು ’ನನ್ನ ಪ್ರಪಂಚ, ನನ್ನ ಹೆಂಡತಿ, ಮಕ್ಕಳು, ದುಡ್ಡು’ ಎಂದು ಲೋಭ, ಮೋಹ, ಮದ, ಮತ್ಸರ, ಸಿಟ್ಟು, ಕಾಮ – ಇವುಗಳನ್ನೇ ಗಟ್ಟಿಯಾಗಿರಿಸಿಕೊಂಡು ಸ್ವಾರ್ಥಿಯಾಗಿ ಜೀವನಸಾಗಿಸುವ ಸಂಭ್ರಮದಲ್ಲಿರುತ್ತಾನೆ. ಇನ್ನು ಮುಮುಕ್ಷುವು ಹೇಗಿರುತ್ತಾನೆಂದರೆ – ಅತಿಪ್ರಪಂಚಾಸಕ್ತಿಯಿಂದ ಇದ್ದರೂ ದುಃಖ-ದುಮ್ಮಾನ ಘಟನೆಗಳನ್ನು ಅನುಭವಿಸುತ್ತಾ ತ್ರಾಹಿ, ತ್ರಾಹಿ ಎಂದು ಅನೇಕ ರೀತಿಯಿಂದ ಬಳಲಿ ಬೆಂಡಾಗಿದ್ದಾಗ ’ಭಗವಂತಾ! ಈ ದುಃಖಮಯ ಜೀವನದಿಂದ ಪಾರುಮಾಡು’ ಎಂದು ದೇವರಿಗೆ ಮೊರೆಹೊಗುವನು. ಹಾಗೂ ಸಜ್ಜನರಸಂಗ ಬಯಸುತ್ತಾ, ಸಾಧುಗಳಿಗೆ ಶರಣುಹೊಗುವನು. ಇವನಿಗೆ ಮುಮುಕ್ಷು ಎನ್ನಬೇಕು. ಮುಮಕ್ಷುತ್ವ ಭಾವ ಇದ್ದುಕೊಂಡೂ ಪ್ರಪಂಚಭಾವದಿಂದ ವರ್ತಿಸುವವನಿಗೆ ಬದ್ಧತನವು ಅವನನ್ನು ಬಿಟ್ಟಿಲ್ಲವೆಂದು ತಿಳಿಯಬೇಕು. ಪ್ರಪಂಚದ ತೊಂದರೆಗಳಿಂದ ಪಾರಾಗುವುದಕ್ಕೆ ದೇವರ ಭಕ್ತಿಯನ್ನು, ವ್ರತಗಳನ್ನು ಆಚರಿಸುವವನನ್ನು ಬದ್ಧನೆಂದು ತಿಳಿಯಬೇಕು. ನಿಷ್ಕಾಮಕರ್ಮ ಮಾಡುತ್ತಾ ಸದ್ಗುರುವಿಗೆ ಶರಣಾಗತನಾದಾಗ ಮಾತ್ರ ಮುಮುಕ್ಷುವೆನಿಸಿಕೊಳ್ಳುತ್ತಾನೆ. ಆದರೆ ನಿಷ್ಕಾಮಕರ್ಮದಿಂದ ಚಿತ್ತಶುದ್ಧಿ ಮಾಡಿಕೊಂಡು ಸದ್ಗುರುಗಳ ಬೋಧನೆಯಂತೆ ಅಂತರಂಗದಲ್ಲಿಯ ಸಂಸಾರಾಸಕ್ತಿಯನ್ನು ಕಡಮೆ ಮಾಡುತ್ತಾ, ಶ್ರವಣದಲ್ಲಿಯ ಜ್ಞಾನದಂತೆ ಆತ್ಮನ ವಿವೇಕ ವಿಚಾರದಂತೆ ಮನನ ಮಾಡುತ್ತಾ ತನ್ನ ಆತ್ಮಸ್ವರೂಪದ ನಿಶ್ಚಯಮಾಡುವವನೇ ಸಾಧಕನೆನಿಸುತ್ತಾನೆ. ಮುಮುಕ್ಷುದೆಶೆಯಲ್ಲಿ ನಿಷ್ಕಾಮಕರ್ಮ, ಸತ್ಕರ್ಮ ಮಾಡಿದ್ದರ ಫಲವಾಗಿ ಸ್ವರ್ಗ, ಸಂಪತ್ತು
ಪ್ರಾಪ್ತವಾಗುವುದೆಂದು ವೇದಗಳ ಪೂರ್ವಭಾಗದಲ್ಲಿ ಹೇಳಿದೆ. ಈ ಕರ್ಮಗಳ ಪುಣ್ಯಫಲದಿಂದ ಸ್ವರ್ಗಸುಖದಲ್ಲಿದ್ದರೂ ಪುಣ್ಯದ ಕ್ಷೀಣತೆಯಾದಾಗ ಪುನಃ ಮೃತ್ಯುಲೋಕದಲ್ಲಿ ಜನ್ಮ-ಮರಣ ಚಕ್ರದಲ್ಲಿ ಸಿಕ್ಕಿಕೊಂಡು ದುಃಖವನ್ನು ಅನುಭವಿಸಲೇಬೇಕಾಗುತ್ತದೆ. ’ಜ್ಯೋತಿಷ್ಯಮೇನ ಸ್ವರ್ಗಕಾಮೋ ಯಜೇತ’ ಎಂದು ಇದಕ್ಕಾಗಿ ಹೇಳಿದೆ. ಸ್ವರ್ಗಸುಖವು ಅನಿತ್ಯವೆಂದು ತಿಳಿಯಿರಿ. ಸದ್ಗುರು ಬೋಧನೆಯಿಂದ ಸ್ವರೂಪಾತ್ಮಜ್ಞಾನ ಹೃದಯದಲ್ಲಿ ದೃಢೀಕರಿಸುವ, ಸಾಧನಸಂಪನ್ನ ಸಾಧಕ ಮಾತ್ರ ಸದ್ಗುರುಗಳ ಅನುಗ್ರಹದಿಂದ ಶಾಶ್ವತ ಅಸಂಗತ್ವದ ಆತ್ಮಬುದ್ಧಿನಿಶ್ಚಯದಿಂದ ಭವಚಕ್ರದಿಂದ ಪಾರಾಗಿ ಮೋಕ್ಷವನ್ನು ತನ್ನ ಜೀವಿತದಲ್ಲಿಯೇ ಪಡೆದು ಜೀವನ್ಮುಕ್ತನೆನಿಸುತ್ತಾನೆ. ಇವನಿಗೇ ಸಿದ್ಧ-ವಸ್ತು ಎಂದರೆ ಆತ್ಮಪ್ರಾಪ್ತಿ ಕೊಂಡ ಧೀರನೆನ್ನುವುದು. ಭಗವಾನ್ ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ’ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ’ ಮತ್ತು ಋಷಿಗಳ ನಿರ್ಧಾರದ ಅಭಿಪ್ರಾಯವಾಗಿದೆಯೆಂಬುದು ಉಪನಿಷತ್ತುಗಳಲ್ಲಿ ಹೇಳಿದೆ. ಆದ್ದರಿಂದ ಯಾವುದೇ ಪ್ರತಿಫಲಾಶೆಗಳನ್ನಿಟ್ಟು ಕರ್ಮಗಳನ್ನಾಚರಿಸಿದರೂ ಶಾಶ್ವತ ಮೋಕ್ಷಫಲ ದೊರೆಯದು. ಹೀಗೆಂದ ಮೇಲೆ ನಿಮ್ಮ ಹೇಳಿಕೆಯಂತೆ ಕರ್ಮದ ಫಲವು ಅಶಾಶ್ವತವೆಂದು ತಿಳಿಯಲ್ಪಡುತ್ತದೆ. ಅಲ್ಲವೇ?
ಮಂ. : ಹಾಗಾದರೆ ನೀವು ಪ್ರತಿಪಾದಿಸುವ ನಿತ್ಯಮೋಕ್ಷವಾವುದು? ಇದನ್ನು ಯಾರು ಪಡೆಯತ್ತಾರೆ?
ಶ್ರೀ ಶಂ. : ಒಳ್ಳೆಯದು. ಈ ಮೊದಲು ತಿಳಿಸಿದಂತೆ ಶ್ರೀ ಸದ್ಗುರುಗಳಿಗೆ ಶರಣಾಗತನಾದ ಶಿಷ್ಯನಿಗೆ ಆತ್ಮಜ್ಞಾನದ ಉಪದೇಶದ ಪ್ರಕಾರ ಮನನ, ನಿದಿಧ್ಯಾಸನ ಮಾಡುವಂಥ ಸಾಧಕನಿಗೆ ಸ್ವರೂಪಜ್ಞಾನದ ಸ್ವಸಂವೇದಿತ ಅಪರೋಕ್ಷಜ್ಞಾನವಾಗಿ ಮೋಕ್ಷವಾಗುತ್ತದೆ. ’ಬ್ರಹ್ಮವಿದ್ ಆಪ್ನೋತಿ ಪರಂ’. ಪರಂ ಅಂದರೆ ಶ್ರೇ?ವಾದ ಬ್ರಹ್ಮತಿಳಿದ ಸಿದ್ಧಸ್ಥಿತಿ ಪಡೆದವನೆಂದು, ಮೋಕ್ಷ ಪಡೆದವನೆಂದು ಉಪನಿ?ತ್ತಿನಲ್ಲಿ ಹೇಳಿದೆ. ಈ ಸಾಧನಮಾರ್ಗ ಹೊರತು ಬೇರೆ ದಾರಿಯೇ ಇಲ್ಲ ಎಂಬುದನ್ನು ’ನಾನ್ಯಃ ಪಂಥಾ ವಿದ್ಯತೇ ಅಯನಾಯ’. ಈ ವಾಕ್ಯವು ದೃಢೀಕರಿಸಿದೆ. ಕೇಳಿರಿ ಪಂಡಿತರೇ – ಭಗವಾನ್ ಜಗದ್ಗುರು ಶ್ರೀಕೃಷ್ಣನೇ ’ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ’ ಮತ್ತೊಂದು ಕಡೆ ’ಯಸ್ಯ ……… ಜ್ಞಾನಾಗ್ನಿದಗ್ಧಕರ್ಮಾಣಾಂ ತಮಾಹುಃ ಪಂಡಿತಂ ಬುಧಾಃ’ || (೪-೧೯). ಯಾವನ ಕರ್ಮಗಳು ಜ್ಞಾನಾಗ್ನಿದ್ವಾರದಿಂದ ಸುಡಲ್ಪಟ್ಟಿವೆಯೋ ಅವನಿಗೆ ಜ್ಞಾನಿಗಳು ಪಂಡಿತನೆಂದು ಹೇಳುವರು.
ಮಂ. : ಹಾಗಾದರೆ ಜ್ಞಾನಿಗೆ ಪಾಪಪುಣ್ಯಗಳು ಇಲ್ಲವೆ?
ಶ್ರೀ ಶಂ. : ಕರ್ಮಫಲಾಶೆಯನ್ನೇ ಬಿಟ್ಟಿರುವ ಬ್ರಹ್ಮಾನಂದದಲ್ಲಿರುವ ನಿತ್ಯತೃಪ್ತನಿಗೆ ಹೇಗೆ ಪಾಪ-ಪುಣ್ಯಗಳು ಸಂಬಂಧಪಟ್ಟಾವು? ಅವನು ನಿರಾಶ್ರಯನೂ ಆಗಿ ಕರ್ಮದಲ್ಲಿ ಒಂದುವೇಳೆ ಪ್ರವೃತ್ತನಾಗಿದ್ದರೂ ಅವನು ಅಸಂಗತ್ವದಿಂದ ಏನನ್ನೂ ಮಾಡುತ್ತಿಲ್ಲವೆಂಬಂತೆ ಇರುತ್ತಾನೆ.
’ತ್ಯಕ್ತ್ವಾ ಕರ್ಮಫಲಾಸಂಗಂ ನಿತ್ಯತೃಪ್ತೋ ನಿರಾಶ್ರಯಃ |
ಕರ್ಮಣ್ಯಭಿಪ್ರವೃತ್ತೋಪಿ ನೈವ ಕಿಂಚಿತ್ ಕರೋತಿ ಸಃ’ || (೪-೨೦)
ಮಂ. : ಜ್ಞಾನದಿಂದಲೇ ಜೀವರುಗಳಿಗೆ ಮೋಕ್ಷವಾಗುತ್ತಿದ್ದರೆ, ವೇದದ ಪೂರ್ವಮೀಮಾಂಸಾದಲ್ಲಿ ಕರ್ಮಾಚರಣೆಯಿಂದೇಕೆ ಮೋಕ್ಷವಾಗುವುದೆಂದು ಹೇಳಿದರು?
ಶ್ರೀ ಶಂ. : (ಮುಗುಳುನಗೆಯಿಂದ) ನಿಮ್ಮ ಈ ಸಂಶಯದ ಪ್ರಶ್ನೆಗೆ ಉತ್ತರ ಕೊಡಲು ನನಗೂ ಸಂತೋಷವೆನಿಸುತ್ತದೆ.
ಮಂ. : ನಿಮ್ಮಂಥವರ ಮುಂದೆ ನನ್ನ ಕರ್ಮನಿಷ್ಠೆ, ಪಾಂಡಿತ್ಯದ್ವಾರಾ ಎಲ್ಲರಿಗೂ ಗೊತ್ತಾಗಲಿ. ಸತ್ಕರ್ಮನಿಷ್ಠೆಯಿದ್ದ ಒಂದು ಶಕ್ತಿ ಸಮಾಧಾನ ತಂದುಕೊಡುತ್ತದೆ. ಇದು ನಿಮಗೇನು ತಿಳಿದೀತು?
ಶ್ರೀ ಶಂ. : ನಿಮಗಾಗುವ ಸಮಾಧಾನ ವಿಚಾರಶೀಲ ನಿಮ್ಮ ಚಿತ್ತಕ್ಕಲ್ಲವೆ?
ಮಂ. : ಹಾಗಾದ್ದರಿಂದ ಚಿತ್ತವು ಶಾಂತಿಮಯ ಸಮಾಧಾನವೆನಿಸಿ ಶುದ್ಧವಿದ್ದ ಭಾವನೆ ನಮ್ಮಲ್ಲಿ ಪ್ರಕಟವಾಗುವಂತಹ ಶಕ್ತಿಯನ್ನು ಕರ್ಮಪರತೆ ತಂದುಕೊಡುತ್ತದಲ್ಲ.
ಶ್ರೀ ಶಂ. : ಕೇವಲ ನಿಮ್ಮ ಚಿತ್ತದ ಶುದ್ಧಿಗಾಗಿ ಕರ್ಮ ಮಾಡುತ್ತೀರಲ್ಲವೆ? ಚಿತ್ತಶುದ್ಧಿಕಾರ್ಯವು ಶಾಶ್ವತ ಸಚ್ಚಿದಾನಂದಾನುಭವ ಮೋಕ್ಷವಲ್ಲವೆಂದಂತಾಯಿತು. ನೀವು ಹೇಳಿದ್ದು ಆತ್ಮಾನುಭವವಲ್ಲವೆಂದಂತಾಯಿತು. ವಸ್ತುಪ್ರಾಪ್ತಿಯಲ್ಲವಾಯಿತು.
ಮಂ. : ವಸ್ತುಪ್ರಾಪ್ತಿ ಎಂದರೆ?
ಶ್ರೀ ಶಂ. : ಬ್ರಹ್ಮಪ್ರಾಪ್ತಿಯಾದ ನಂತರ ಜ್ಞಾನಿಯು ಬ್ರಹ್ಮಾನಂದ ಸ್ಥಿತಿಯಲ್ಲಿರುವುದಕ್ಕೆ ಹೀಗೆ ಹೇಳುವುದು. ತಿಳಿಯಿತೇ? ಚಿತ್ತಶುದ್ಧಿಯು ಕೇವಲ ಕರ್ಮನಿಷ್ಠಯಿಂದ ಆಗದೆ ಈಶ್ವರಾರ್ಪಣಬುದ್ಧಿಯುಳ್ಳ ಕರ್ಮಾಚರಣೆಯಿಂದ ಚಿತ್ತಶುದ್ಧಿಯಾಗಿ ಆತ್ಮಜ್ಞಾನದ ಪಾತ್ರತೆ ತಂದುಕೊಡಲಿಕ್ಕೆ ಒಂದು ಮುಖ್ಯಸಾಧನವಾಗಿದೆ. ಜ್ಞಾನವನ್ನರಿತುಕೊಳ್ಳಲು ಯೋಗ್ಯನಾಗುವವನಿಗೆ ಕರ್ಮಗಳನ್ನು ಮಾಡುವ ಆವಶ್ಯಕತೆಯೇ ಇರುವುದಿಲ್ಲ. ಈ ಎಲ್ಲವೂ ಜ್ಞಾನದಲ್ಲಿ ಸಮಾಪ್ತಿಯಾಗುತ್ತವೆ. ಗೀತೆಯಲ್ಲಿ ಈ ಕುರಿತು – ’ಸರ್ವಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ’ ಎಂದು ಹೇಳಿದ್ದನ್ನಾದರೂ ನೋಡಿರಲ್ಲ?
ಮಂ. : ಜ್ಞಾನ ಪಡೆದು ಅದರ ಆನಂದ ಅನುಭವಿಸುವವನಿಗೆ ಕರ್ಮ ಮಾಡಬೇಕಾದ ಆವಶ್ಯಕತೆ ಇಲ್ಲವೆಂದು ನೀವು ಹೇಳುತ್ತಿರುವುದೆಂದರೆ – ಸಂಶಯದ ತೊಡಕನ್ನೇ ತಲೆಯಲ್ಲಿ ತುಂಬಿಸುವಂತಿದೆ. ಗೀತೆಯಲ್ಲಿಯೇ – ’ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್’. ಶರೀರವಿರುವವರೆಗೂ ಕರ್ಮಮಾಡಬೇಕೆಂದು ಈ ವಾಕ್ಯ ಹೇಳುವುದಲ್ಲವೆ ಮತ್ತು ಶರೀರವಿದೆ ಎಂದೇ ವ್ಯವಹಾರದಲ್ಲಿ ಕರ್ಮ ಮಾಡುತ್ತೇವಲ್ಲವೆ? ಆದ್ದರಿಂದ ಜ್ಞಾನದಿಂದ ಮೋಕ್ಷವಾಗುತ್ತದೆಂಬುದನ್ನು ಸಿದ್ಧಮಾಡಲಿಕ್ಕೆ ಅಸಮರ್ಥರಾಗಿದ್ದೀರಿ.
ಶ್ರೀ ಶಂ. : ಈ ಶ್ಲೋಕಾರ್ಥದಿಂದ ನನಗೆ ನೀವು ಅಸಮರ್ಥನೆಂದರೂ ಗೀತೆಯಲ್ಲಿಯೇ – ’ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ’ ಈ ರೀತಿಯಲ್ಲಿ ಹೇಳಿದ್ದನ್ನು ಸೂಕ್ಷ್ಮವಿಚಾರದಿಂದ ನೋಡಿದರೆ, ಜ್ಞಾನಿಯು ಆತ್ಮತ್ವದಲ್ಲಿಯೇ ಇದ್ದು ಕರ್ಮ ಮಾಡಿದರೂ ಅರ್ಥಾತ್ ಬ್ರಹ್ಮಸ್ಥಿತಿಯಿಂದ ಬೇರೆಯಾಗಿರದೇ ಏಕಿಯಾಗಿರುವುದು. ಅವನು ಮಾಡಿದ ಕರ್ಮವು ಬ್ರಹ್ಮಮಯದಲ್ಲಿ ಇರುವುದು. ಅವನು ಮಾತ್ರ ಅಸಂಗ, ಅಕರ್ತಭಾವದಿಂದ ಇರುವುದರ ಕಾರಣ ತಿಳಿದೇ ಭಗವಂತನು – ’ಬ್ರಹ್ಮಾರ್ಪಣಂ ಬ್ರಹ್ಮಹವಿಃ ಬ್ರಹ್ಮಾಗ್ನೌ ಬ್ರಹ್ಮಣಾ ಹುತಂ | ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ ||’ ಅಂತ ಹೇಳಿದ ಮೇಲೆ ಏನೆಲ್ಲವೂ ಏನಿದ್ದಂತಾಯಿತು? ಇದರ ಮೇಲಿಂದ ಜ್ಞಾನಿಯು ನಿತ್ಯಮುಕ್ತ ಸ್ವರೂಪನಾಗಿಯೇ ಕರ್ಮಾದಿಗಳನ್ನು ಎಸಗುವನೆಂಬುದು ಸುಜ್ಞಾನರಾದ ನಿಮಗೆ ಅರ್ಥವಾಗಿರಲಿಕ್ಕೆ ಸಾಕು.
ಮಂ. : ಸರಿ, ಈ ನಿಮ್ಮ ಕೌಶಲಪೂರ್ಣ ವಾದವೈಖರಿ ಒಪ್ಪತಕ್ಕದ್ದೇ ಇದೆ. ಹಾಗೂ ನಮ್ಮನ್ನು ಅದ್ವೈತ ಸಿದ್ಧಾಂತವೇ ಸರಿ ಎಂದು ಒಂದು ರೀತಿಯಿಂದ ಒಪ್ಪಿಸಿಕೊಂಡರೂ ನಿಮ್ಮ ಸಿದ್ಧಾಂತದಲ್ಲಿ ಬರುವ “ಬ್ರಹ್ಮ ಸತ್ಯಂ ಜಗನ್ಮಿಥ್ಯಾ, ಜೀವೋ ಬ್ರಹ್ಮೈವ ನಾಪರಃ” ಎಂಬುದನ್ನು ನಾನು ಸಮ್ಮತಿಸಲಾರೆ.
ಶ್ರೀ ಶಂ. : ಈವರೆಗೂ ನಮ್ಮೀರ್ವರ ಸಂವಾದದಲ್ಲಿ ಈ ಬಗ್ಗೆ ವಿ?ಯ ಚರ್ಚಿಸಲ್ಪಟ್ಟಿದ್ದರೂ ಈಗೇಕೆ ಸಮ್ಮತಿಸುವುದಿಲ್ಲ? (ಸ್ವಗತ _ ಆಹಾ! ಕರ್ಮಠತನದ ಅಭಿಮಾನವೇ.)
ಮಂ. : ಈ ವಾಕ್ಯದಲ್ಲಿ ’ಜಗನ್ಮಿಥ್ಯಾ ಜೀವೋ ಬ್ರಹೈವ ನಾಪರಃ’ – ಎಂಬುದನ್ನು ಹೇಗೆ ಒಪ್ಪಲಾದೀತು? ಪ್ರತ್ಯಕ್ಷಾನುಭವದಿಂದ ವಿಶ್ವವೆಲ್ಲದರ ಕಾರ್ಯದ ಘಟಾಟೋಪಗಳು ನಡೆದಿರುವುದನ್ನು ದ್ವೈತದೃಷ್ಟಿಯಿಂದಲೇ, ಕಾಣುತ್ತೇವಲ್ಲ? ಹೀಗಿದ್ದ ಬಳಿಕ ಜಗತ್ತು ಮಿಥ್ಯಾ ಎಂದು ಹೇಗೆ ಸಿದ್ಧವಾದೀತು? ಪೂರ್ವ ಮೀಮಾಂಸಾದಲ್ಲಿಯ ಅನೇಕ ಮಂತ್ರಗಳು ದೇವತೆಗಳ ಪ್ರೀತ್ಯರ್ಥವಿದ್ದು ಆಯಾದೇವತೆಗಳ ಮೂರ್ತಿ ಉಪಾಸಕರು ಶ್ರದ್ಧಾಭಕ್ತಿಗಳಿಂದ ಭಜಿಸಿ ತೃಪ್ತಿಹೊಂದುವರಲ್ಲ?
ಶ್ರೀ ಶಂ. : ದೇವತೆಗಳ ಮೂಲಸ್ವರೂಪ, ನಿರ್ಗುಣ ನಿರಾಕಾರ ಸಚ್ಚಿದಾನಂದ ಲಕ್ಷ್ಯದಿಂದ ಲಕ್ಷಿಸುವ ಪರಬ್ರಹ್ಮವೆಂಬುದರ ಜ್ಞಾನವಿಲ್ಲದ್ದರಿಂದ ಆಯಾ ದೇವತೆಗಳ ಉಪಾಸನೆ ಮಾಡುವುದು ನನಗೂ ಮಾನ್ಯವೇ ಇದೆ. ಸಗುಣದೇವತೆಗಳು ಸಾಕಾರವಾಗಿರುವುದರಿಂದ, ಆ ದೇವತೆಗಳ ಅವತಾರದಲ್ಲಿ ಭಕ್ತೋದ್ಧಾರ ಕಾರ್ಯ ಲೀಲೆಗಳಿಂದ ಕೂಡಿರುವುದರಿಂದ ಮಾನವರಾದ ನಮಗೆಲ್ಲರಿಗೆ ಶ್ರದ್ಧೆಯುಂಟಾಗುವುದು. ಆದರೆ ಆ ದೇವತೆಗಳು ತಮ್ಮ ಅವತಾರಕಾರ್ಯ ಮುಗಿಸಿ ದೇಹತ್ಯಾಗ ಮಾಡಿದ್ದು ಹಾಗೂ ಪ್ರತಿಯೊಂದು ಜೀವಿಯೂ ಆಯುಷ್ಯ ಮುಗಿದ ಕೂಡಲೇ ಮೃತವಾಗುವುದು ನಿತ್ಯ ನಡೆದೇ ಇದೆ. ಅದು ಶಾಶ್ವತವಾಗಿದ್ದರೆ ಮರಣ ಹೊಂದಲೇಬಾರದಿತ್ತು. ಜಗತ್ತಿನ ಯಾವುದೋ ಭಾಗದಲ್ಲಿ ಭೂಕಂಪವಾಗಿ ಜೀವಿಗಳೆಷ್ಟೋ ಹಾನಿಯಾದದ್ದು, ಅಡವಿಯಲ್ಲಿ ತನ್ನಷ್ಟಕ್ಕೆ ತಾನೇ ಬೆಂಕಿ ಪ್ರಜ್ವಲಿಸುವುದು, ನದಿ ಮೊದಲಾದವುಗಳ ಮಹಾಪೂರದಿಂದ ಜನ, ಧನ, ದ್ರವ್ಯ, ಮನೆಗಳ ನಾಶ ಪ್ರತ್ಯಕ್ಷ ಅನುಭವದ ವಿಷಯವಲ್ಲವೇ? ಅದರಂತೆ ಎಲ್ಲರ ಶರೀರವೂ ಒಂದು ದಿವಸ ಮಸಣದಲ್ಲಿ ದಗ್ಧವಾಗಿ ನಾಶವಾಗುವುದರಿಂದ ಹೀಗಿರುವ ಜಗತ್ತಿಗೆ ಹಾಗೂ ಜಗತ್ತಿನ ವ್ಯವಹಾರಕ್ಕೆ ಶಾಶ್ವತತ್ವವೇ ಇಲ್ಲದಿರುವುದರಿಂದ ’ಜಗನ್ಮಿಥ್ಯಾ, ಅಂದರೆ ಸುಳ್ಳುತೋರಿಕೆ’ ಇದ್ದುದಕ್ಕೆ ಸತ್ಯವೆಂದು ಹೇಗೆ ಅನ್ನಲಿಕ್ಕೆ ಬಂದೀತು? ಜಗತ್ತು ಹೇಗೆ ಭಾಸವಾಗುತ್ತದೆಂದರೆ ಮೃಗಜಲವು ದೂರದಿಂದ ಮಧ್ನಾಹ್ನ ಬಿಸಿಲಿನಲ್ಲಿ ಸತ್ಯವೆನಿಸಿದರೂ ಕಾಣಿಸಿಕೊಂಡ ಸ್ಥಳಕ್ಕೆ ಹೋಗಿ ನೋಡಿದಾಗ ಬಟಾಬಯಲೇ ಇದ್ದದ್ದು ತಿಳಿಯುವಂತೆ, ಈ ಜಗತ್ತಿನದಾದರೂ ಅದೇ ನ್ಯಾಯವೆಂದು ತಿಳಿಯಬೇಕು. ಅಲ್ಲದೆ ವಿಕಾರಿ, ಅಶಾಶ್ವತತೆ ಪ್ರತ್ಯಕ್ಷವೇ ತಿಳಿಯುತ್ತಿದೆಯಲ್ಲ?
ಮಂ. : ಸರಿ! ನಿಮ್ಮ ಜಗನ್ಮಿಥ್ಯಾ ಪ್ರಮಾಣ ಹೇಳಿಕೆ ನನಗೂ ಒಪ್ಪಿಗೆಯಾಯಿತು. ಆದರೆ ’ಜೀವೋ ಬ್ರಹ್ಮೈವ ನಾಪರಃ’ ಎಂಬುದು ಹೇಗೆ ಸಿದ್ಧವಾದೀತು? ಜೀವನು ಭೇದದಿಂದ ವ್ಯವಹರಿಸುವುದು ಪ್ರತ್ಯಕ್ಷವಿರುವಾಗ. ಜೀವನು ಬ್ರಹ್ಮನೇ ಎಂದು ಹೇಳುವುದು ಹಾಸ್ಯಾಸ್ಪದವಲ್ಲವೇ?
ಶ್ರೀ ಶಂ. : ಜೀವ, ಜಗತ್ತು ಬ್ರಹ್ಮವೆಂಬುದರ ಸರಿಯಾದ ಅರಿವು ನಿಮಗಿಲ್ಲದಿರುವುದರಿಂದಲೇ ಹೀಗೆ ಮಾತಾಡುವಿರಿ. ಆದರೆ ಸರ್ವಾಂತರ್ಯಾಮಿಯಾದ ಬ್ರಹ್ಮವು ಜೀವಿಗಳ ಶರೀರದಲ್ಲಿ ನಾನು ಎಂಬ ಅಹಂಕಾರದಿಂದ ನಾ ನೀ ಎಂಬ ಜೀವನಾಗಿದ್ದಾನೆ. ಅಹಂಕಾರ ಅಳಿದು ಸ್ವರೂಪಜ್ಞಾನ ಮಾಡಿಕೊಂಡಾಗ ಶಾಶ್ವತಬ್ರಹ್ಮದ ಜ್ಞಾನವಾಗುವುದು. ಬ್ರಹ್ಮ ತಿಳಿದವ ಬ್ರಹ್ಮ ತಾನೆಂದು ಅಪರೋಕ್ಷ ಜ್ಞಾನಿ ಎನಿಸುತ್ತಾನೆ. ಜ್ಞಾನಿಯಾದವನು ಉಪನಿಷತ್ತಿನಲ್ಲಿ ಪ್ರತಿಪಾದಿಸಿದಂತೆ, ’ಬ್ರಹ್ಮವಿತ್ ಬ್ರಹ್ಮೈವ ಭವತಿ’ ಬ್ರಹ್ಮವೇ ಆಗುವನು. ಈಗ ತಿಳಿದಿರಬಹುದಲ್ಲವೇ?
ಮಂ. : (ಸ್ವಗತ) ನನ್ನ ಎಲ್ಲ ರೀತಿಯ ವಕ್ರಪ್ರಶ್ನೆಗಳಿಗೂ ಸಂಶಯಗಳಿಗೂ ಸಮರ್ಪಕವಾಗಿ ಉತ್ತರ ನೀಡಿದ ಈ ಯತಿಯು ಯಾವ ದೇವನಿರಬಹುದು? ಇನ್ನು ನಾನು ಪಂಡಿತನೆಂಬ ಅಹಂಕಾರದಿಂದ ಯಾವುದೇ ಪ್ರಶ್ನೆಮಾಡಿದರೂ ಸಮಾಧಾನಕರ ಉತ್ತರವಷ್ಟೇ ಅಲ್ಲ; ಸಂಶಯಛೇದವನ್ನೂ ತತ್ಕ್ಷಣ ಮಾಡುವ ಸಮರ್ಥ ಸಂನ್ಯಾಸಿ ಇವನಾದ್ದರಿಂದಲೂ ನನ್ನ ಅಂತರಂಗವೂ ಸಂನ್ಯಾಸಿಗಳು ಹೇಳಿದಂತೆ ’ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ’ ಎಂಬುದನ್ನು ಒಪ್ಪಿಕೊಳ್ಳುತ್ತಿರುವುದರಿಂದ ಭವಿಷ್ಯದಲ್ಲಿ ನನ್ನಿಂದ ಸತ್ಕಾರ್ಯ, ಮಹಾನ್ ಕಾರ್ಯವೇಕಾಗಬಾರದು? ಹ್ಞಾಂ! ನನ್ನ ಕೊರಳೊಳಗಿನ ಮಾಲೆಯು ಬಾಡಿದೆಯಲ್ಲ! ಪರಮಾತ್ಮಾ! (ಪ್ರಕಟ) ಯತಿವರೇಣ್ಯರೇ, ನನ್ನ ಪ್ರತಿಜ್ಞೆಯಂತೆ ವೈದಿಕಕರ್ಮಗಳಿಂದ ಮೋಕ್ಷವಾಗುವುದೆಂಬುದನ್ನು ಸಿದ್ಧಮಾಡಲಿಕ್ಕೆ ನನ್ನಿಂದಾಗಲಿಲ್ಲವಾದ್ದರಿಂದ ನಾನು ಸೋತು ತಮ್ಮ ಶಿಷ್ಯನಾಗುವುದು ಖಚಿತ ನಿರ್ಧಾರವಾದಂತಾಯಿತು. ಅದಕ್ಕೋಸ್ಕರ ತಮ್ಮ ಚರಣದಲ್ಲಿ ಸಂಪೂರ್ಣ ಶರಣಾಗತನಾಗಿದ್ದೇನೆ.
(ಹೀಗೆಂದು ಬಾಗಬೇಕೆನ್ನುವಷ್ಟರಲ್ಲಿ ಉಭಯಭಾರತಿದೇವಿ ಬಂದು)
ಉ. ಭಾ. : ಯತಿಗಳೇ, ನನ್ನ ಪತಿಯು ಸೋತೆನೆಂದು ಹೇಳಿದರೂ ಸೋತಂತಾಗಿಲ್ಲ. ಯಾಕೆಂದರೆ ಈ ಆರ್ಯಪುತ್ರನ ಅರ್ಧಾಂಗಿಯಾದ ನನ್ನನ್ನೂ ವಾದದಲ್ಲಿ ಸೋಲಿಸಿದರೆ ಮಾತ್ರ ಪೂರ್ಣ ಸೋತಂತಾದೀತು. ಆದ್ದರಿಂದ ನನ್ನ ಪ್ರಶ್ನೆಗಳಿಗೂ ಉತ್ತರ ಕೊಡುವಿರಷ್ಟೇ?
ಶ್ರೀ ಶಂ. : ಏನು ತಾಯಿ? ಪತಿಯಲ್ಲಿರಿಸಿದ ನಿನ್ನ ಅನನ್ಯ ಭಕ್ತಿಯಿಂದ ನನ್ನ ಮೇಲೆ ರೋಷಗೊಂಡು ಹೀಗೆ ಕೇಳುವುದೆಂದರೆ – ಸ್ತ್ರೀಯಾದ ನಿನ್ನ ಜತೆ ವಾದ-ವಿವಾದ ಮಾಡುವುದು ಸಮಂಜಸವೆನಿಸಲಾರದು!
ಉ. ಭಾ. : ಏನು ಯತಿಗಳೇ, ತಾವು ಸರ್ವಸಂಗಪರಿತ್ಯಾಗ ಮಾಡಿದ ಧೀರಸಂನ್ಯಾಸಿಗಳಾಗಿದ್ದು ನಾನು ಕೇವಲ ಸ್ತ್ರೀ ಎಂಬ ವಿಚಾರದಿಂದ ಭಯಪಟ್ಟಿರುವಿರೇನು?
ಶ್ರೀ ಶಂ. : ಭಯಪಡಲಿಕ್ಕೆ ಅಂತಹದ್ದೇನೂ ಇಲ್ಲ ತಾಯಿ. ವಾದ-ವಿವಾದವಾಗಬಾರದೆಂಬುದೇ ನನ್ನ ಇಚ್ಛೆ. ಯೋಗ್ಯ ಪ್ರಶ್ನೆಗಳಿಗೆ ಉತ್ತರ ಕೊಡುವೆ ತಾಯಿ.
ಉ. ಭಾ. : (ಸ್ವಗತ) ನಾನು ಕೋಪದಿಂದ ಮಾತಾಡುವಾಗ ಉತ್ತರ ಕೊಡುವೆ ತಾಯಿ ಎಂದಾಕ್ಷಣ ನನ್ನ ಹೃದಯದಲ್ಲಿ ಹೀಗೆಂದು ಹೇಳಲಿಕ್ಕಾಗದ ಸಮಾಧಾನವಾಗಿದೆಯಲ್ಲ. ಇರಲಿ (ಪ್ರಕಾಶ), ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವೆನೆಂದು ಈ ಮೊದಲೇ ಒಪ್ಪಿಕೊಂಡಿದ್ದೀರಿ.
ಶ್ರೀ ಶಂ. : ಹೌದು ತಾಯಿ!
ಉ. ಭಾ. : ಈ ಸಭೆಯಲ್ಲಿ ಈಗಲೇ ತಮ್ಮಿಂದ ಉತ್ತರ ಬರಲೆಂದು ಆಪೇಕ್ಷಿಸುತ್ತೇನೆ. ತಮ್ಮಿಂದ ಉತ್ತರ ಬರದಿದ್ದರೆ ಅಧ್ಯಕ್ಷಸ್ಥಾನದಿಂದ ನಾನು ತಾವು ಸೋತಿರೆಂದು ಘೋಷಿಸುವೆ. ತಿಳಿಯಿರಿ.
ಶ್ರೀ ಶಂ. : ತಾಯಿ, ನಿಮ್ಮ ಸಿಟ್ಟನ್ನು ಶಾಂತಮಾಡಿ, ಶಾಂತಚಿತ್ತದಿಂದ ಪ್ರಶ್ನೆ ಮಾಡಬಹುದು.
ಉ. ಭಾ. : ತಮ್ಮ ಬುದ್ಧಿ ಚಾಣಾಕ್ಷತೆಯ ನಡಿಗೆಯಿಂದ ನಾನು (ಮುಗುಳುನಗೆಯಿಂದ) ತುಂಬಾ ಸಂತೋ?ಗೊಂಡಿದ್ದೇನೆ. ತಮ್ಮ ಮೃದುಶಬ್ದದ ’ತಾಯೀ’ ಈ ಶಬ್ದವು ನನ್ನ ಕೋಪವನ್ನು ಮೂಲದಿಂದಲೇ ಹಾರಿಸಿಬಿಟ್ಟಿದೆ. (ಸಭಿಕರಿಂದ ಹೌದು, ಅಹಹಹ ಎಂಬ ಸ್ವರ) ಈಗ ಪುರುಷಾರ್ಥಗಳಾವುವು ಎಂಬುದನ್ನು ಹೇಳುವಿರಾ?
ಶ್ರೀ ಶಂ. : ಪುರುಷಾರ್ಥಗಳು ನಾಲ್ಕು. ಧರ್ಮ, ಅರ್ಥ, ಕಾಮ, ಮೋಕ್ಷ – ಈ ಹೆಸರಿನಿಂದ ಹೇಳಿಸಿಕೊಳ್ಳುತ್ತಿವೆ.
ಉ. ಭಾ. : ಧರ್ಮದ ಬಗ್ಗೆ ತಾವು ವ್ಯಾಖ್ಯಾನ ಮಾಡುವಿರಾ? ಧರ್ಮದಂತೆ ನಡೆಯುವವರಾರು?
ಶ್ರೀ ಶಂ. : ಧರ್ಮದ ಅರ್ಥವು ಬಹಳ ವಿಶಾಲವೂ ಆನಂದದಾಯಕವೂ ಆಗಿದೆ. ನೋಡು ತಾಯಿ, ’ಯತೋsಭ್ಯುದಯನಿಃಶ್ರೇಯಸಸಿದ್ಧಿಃ ಸ ಧರ್ಮಃ’ ಅಲ್ಲದೇ ’ಯದ್ಧರತೇ ತತ್ ಇತಿ ಧರ್ಮಃ’ ಎಂದೂ ವ್ಯಾಖ್ಯಾನಿಸಬಹುದು. ವಿಶ್ವವನ್ನು ಯಾವ ಸನಾತನ ಬ್ರಹ್ಮಚೈತನ್ಯವು ಧಾರಣೆಮಾಡಿ ಕ್ರಿಯಾಶೀಲ ಮಾಡುವುದೋ ಯಾವುದು ಅದರ ಸಹಜ ಸ್ವಭಾವವೋ, ಅದೇ ಧರ್ಮವೆಂದೆನಿಸುವುದು. ಹಾಗೂ ಯಾರು ಇದರ ಸೂಕ್ಷ್ಮತತ್ತ್ವಾನುಭವಿಯಾಗಿ ಸಂಸ್ಕೃತಿ-ಸಂಪನ್ನನಾಗಿರುವನೋ ಅವನೇ ಧರ್ಮಿ ಎನಿಸುವನು.
ಉ. ಭಾ. : ಈ ಧರ್ಮಾಚರಣೆ ಸೂಕ್ಷ್ಮತತ್ತ್ವವೆಂದಿರಲ್ಲಾ. ಆ ತತ್ತ್ವವನ್ನು ಹೇಗೆ ಅರಿತುಕೊಳ್ಳಬೇಕು?
ಶ್ರೀ ಶಂ. : ದೃಶ್ಯವಸ್ತು. ಅಂದರೆ ಜಗದಾದಿ ನಕ್ಷತ್ರ ಮೊದಲಾದವುಗಳ ಕ್ರಿಯೆಗೆ ಆಧಾರವಾದ ತಾನು ಸ್ವತಃ ನಿಷ್ಕ್ರಿಯವಾಗಿರುವ ಸನಾತನ ಪರಬ್ರಹ್ಮವೇ ಪ್ರಾಣಿಮಾತ್ರರೆಲ್ಲದರಲ್ಲಿ ತಾನುತಾನಾಗಿರುವ ಆತ್ಮನು ದೇಹಾದಿಗಳಲ್ಲಿ ನಿರ್ವಿಕಲ್ಪತೆಯಿಂದ ಸಚ್ಚಿದಾನಂದ ಸ್ವರೂಪದಿಂದ ಇದನ್ನು ಯಾರು ಅಂತರಂಗದಲ್ಲಿ ನಿದಿಧ್ಯಾಸದಿಂದ ಸಾಧಿಸಿಕೊಂಡು ಸಾಕ್ಷಾತ್ಕಾರಿಗಳಾಗುವರೋ ಅವರೇ ಧರ್ಮಿಗಳು. ಈ ಸ್ವರೂಪಜ್ಞಾನಿಗಳೇ ಜೀವನ್ಮುಕ್ತರಾಗಿ ತಮ್ಮ ಭವಚಕ್ರ ಮೀರಿದವರಾಗಿರುತ್ತಾರೆ. ಅದಕ್ಕಾಗಿ ನೈಜವಾಗಿ ಈ ಆತ್ಮತತ್ತ್ವಾನುಭವಿಗೆ ಜಾತಿ, ಮತಗಳ ಸಂಪರ್ಕವಿಲ್ಲದ ಸರ್ವಸಂಗತ್ಯಾಗವುಂಟಾಗುತ್ತದೆ. ಸಹಜಾನಂದದಲ್ಲಿ ವಿಹರಿಸುವವನನ್ನು ಸಿದ್ಧನೆಂದು ಕರೆಯುತ್ತಾರೆ. ಈ ರೀತಿ ಮೈಗೂಡಿಸಿಕೊಂಡವರ ಇರುವಿಕೆಯೇ ಧರ್ಮವೆನಿಸಿದೆ. ಆದ್ದರಿಂದ ’ಧರ್ಮೋ ರಕ್ಷತಿ ರಕ್ಷಿತಃ’. ತಾಯಿ, ತಿಳಿಯಿತಲ್ಲವೇ?
ಉ. ಭಾ. : ಯತಿವರ್ಯರೇ, ನಿಮ್ಮಿಂದ ಬ್ರಹ್ಮವೇ ಶರೀರದಲ್ಲಿ ಆತ್ಮವೆಂದೆನಿಸುತ್ತದೆ ಎಂಬುದು ಚೆನ್ನಾಗಿ ತಿಳಿದುಕೊಂಡೆ. ಮತ್ತು ನಿರ್ವಿಕಲ್ಪ ಆತ್ಮತತ್ತ್ವದಿಂದ ಇರುವ ಸಚ್ಚಿದಾನಂದ ಸ್ವರೂಪಾನುಭವದ ಜೀವನ್ಮುಕ್ತ ಇರುವಿಕೆಯೇ ಧರ್ಮವೆಂದು ಸೊಗಸಾಗಿ ತಿಳಿಸಿದಿರಿ. ಅಲ್ಲದೇ ಈ ಆತ್ಮತತ್ತ್ವದಿಂದ ಭವಚಕ್ರದಿಂದ ಜೀವನನ್ನು ಪಾರುಮಾಡುತ್ತದೆಂಬುದೂ ತಿಳಿಯಿತು. ದಯವಿಟ್ಟು ಅರ್ಥ, ಕಾಮ, ಮೋಕ್ಷಗಳ ಬಗೆಗೆ ಹೇಳಬೇಕಾಗಿ ಕೇಳುವೆ.
ಶ್ರೀ ಶಂ. : ಮನುಷ್ಯರೆಲ್ಲ ಕೇವಲ ಪಾರಮಾರ್ಥಿಕರೇ ಇರುವುದಿಲ್ಲ. ಪಾರಮಾರ್ಥಿಕರ ಅರ್ಥವೆಂದರೆ ಸಚ್ಚಿದಾನಂದ ಸ್ವರೂಪಾನಂದಾನುಭವವೇ ಆಗಿದೆ. ಇನ್ನು ಸಾಮಾನ್ಯ ಸಾಂಸಾರಿಕರಿಗೆ ಬೆಳ್ಳಿ, ಬಂಗಾರವೇ ಅರ್ಥ. ಈ ಅರ್ಥಗಳಿಕೆ ಮಾಡಿದಂತೆ ಲೋಭವೂ ಹೆಚ್ಚಾಗಿ ಏನೂ ದಾನಮಾಡದೆ ಕೃಪಣತೆಯುಂಟಾಗುತ್ತದೆ; ಕಾಮ ಅಂದರೆ ಆಸೆ. ಇದು ಷಡ್ಗುಣಗಳಲ್ಲಿಯೇ ಮೊದಲನೆಯದು. ಇದರ ಇಚ್ಛೆ ಪೂರೈಸಿದರೆ ಸಮಾಧಾನ. ಇಚ್ಛೆ ಪೂರೈಸದಿದ್ದರೆ, ಕ್ರೋಧದಿಂದ ದೊಡ್ಡ ಗೋಳಾಟವೇ ಸೃಷ್ಟಿಯಾಗುವುದು! ಇನ್ನು, ಈ ಕಾಮವಾಸನೆ ಅತ್ಯಂತ ಹೇಯವಾಗಿದೆ. ಸದ್ಗುಣಗಳು ಇದ್ದವರು ಮಾತ್ರ, ತಮ್ಮ ಅಂಕಿತದಲ್ಲಿರಿಸಿಕೊಂಡು ಸುಖೀ ಜೀವನ ಸಾಗಿಸುತ್ತಾರೆ. ಪ್ರಾಪಂಚಿಕರಲ್ಲಿ ಕಾಮಾಸಕ್ತರೇ ಬಹುಜನ.
ಉ. ಭಾ. : ಸರಿ, ಇದು ಎಲ್ಲರಿಗೂ ತಿಳಿದಿದೆ. ಈಗ ಈ ಬಗ್ಗೆ ನನ್ನ ಪ್ರಶ್ನೆ ಏನೆಂದರೆ – (ಸ್ವಗತ) ಈ ಯತಿಯನ್ನು ಸೋಲಿಸಬೇಕಾದರೆ ಯುಕ್ತಿಯಿಂದ ಕಾಮಕಲಾಶಾಸ್ತ್ರದ ಪ್ರಶ್ನೆ ಮಾಡುವೆ. (ಪ್ರಕಟ) ಪ್ರಪಂಚಾಸಕ್ತರಿಗೆ ವಿವಾಹವಾದ ನಂತರ ಸಮಾಜದಲ್ಲಿ ಗೌರವ. ಆದ್ದರಿಂದ ತನ್ನ ಅರ್ಧಾಂಗಿಯೊಂದಿಗೆ ವಾಸನಾತೃಪ್ತಿಯಾಗುವುದಕ್ಕೋಸ್ಕರ ಸಂಭೋಗಿಸುವುದೂ ಕೂಡಾ ಒಂದು ಕಲೆಯೇ. ಈ ಮನ್ಮಥಕಲೆಯು ಸ್ತ್ರೀ-ಪುರುಷರಲ್ಲಿ ಯಾವಯಾವ ಸ್ಥಾನದಿಂದ ತಿಂಗಳ ಯಾವ ದಿವಸ ಪ್ರಕಟಚೇಷ್ಟೆಗೈಯುವುದು?
ಶ್ರೀ ಶಂ. : (ಆಶ್ಚರ್ಯದಿಂದ) ಏನು ತಾಯಿ! ಬ್ರಹ್ಮಚಾರಿ, ಮೇಲಾಗಿ ಸಂನ್ಯಾಸಿಯಾದ ನನಗೆ ಹೀಗೆ ಪ್ರಶ್ನೆ ಮಾಡುವುದೇ? ಛೇ! ಛೇ! ಗೃಹಿಣಿಯ ನೀತಿಬಾಹಿರ ಪ್ರಶ್ನೆ. ಗೃಹಿಣಿಗೂ ಕಲಂಕಪ್ರಾಯವಾದ ತಾಮಸಿಯ ಪ್ರಶ್ನೆಯಿಂದ ನಿನಗೂ, ಸಭೆಗೂ ಅಗೌರವ!
ಉ. ಭಾ. : ಅದೇಕೆ ಅಗೌರವ? ಸರ್ವಶಾಸ್ತ್ರಸಂಪನ್ನರಿದ್ದ ನನ್ನ ಪತಿಯೊಡನೆ ವಾದಕ್ಕೆ ಪ್ರಾರಂಭಿಸಿದ್ದೀರಿ, ಅಲ್ಲವೇ? ನಾವೂ ತಮ್ಮನ್ನು ಸರ್ವಶಾಸ್ತ್ರಸಂಪನ್ನರೆಂದೇ ತಿಳಿದಿದ್ದೇವೆ. ಆದ್ದರಿಂದ ತಮ್ಮಿಂದ ಉತ್ತರಿಸಲಿಕ್ಕೆ ಸಂಕೋಚವೇಕೆ?
ಶ್ರೀ ಶಂ. : (ಸ್ವಗತ) ಈ ಗೃಹಿಣಿಯು ತನ್ನ ಪತಿಗಾದ ಸೋಲಿನ ಅಪಮಾನದಿಂದ ನೊಂದುಕೊಂಡು ಪತಿಯ ಗೌರವ ಉಳಿಸುವುದಕ್ಕಾಗಿ ಕುಟಿಲಪ್ರಶ್ನೆ ಮಾಡಿದ್ದಾಳೆಂಬುದು ತಿಳಿಯಿತು. ಈಗಲೇ ಉತ್ತರ ಕೊಟ್ಟರೆ ಸಂನ್ಯಾಸಧರ್ಮಕ್ಕೆ ಕುಂದು. ಉತ್ತರ ಕೊಡದಿದ್ದರೆ ಸೋತೆನೆಂದು ಒಪ್ಪಬೇಕಾಗುವುದು. ಆದರೆ ಯುಕ್ತಿಯಿಂದ ಈ ಪ್ರಶ್ನೆಗೆ ಎರಡು-ಮೂರು ತಿಂಗಳ ಅವಧಿ ಕೇಳಿಬಿಡೋಣ.
ಉ. ಭಾ. : ಯತಿಗಳೇ ಯಾಕೆ ಮೌನವಾದಿರಿ? ತಮಗೆ ನನ್ನ ಪ್ರಶ್ನೆಗೆ ಉತ್ತರ ಕೊಡಲಾಗದಿದ್ದರೆ, ಸೋತೆನೆಂದು ಒಪ್ಪಿರಿ.
ಶ್ರೀ ಶಂ. : ತಾಯಿ, ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟೇಬಿಡುವೆ. ಆದರೆ ನನ್ನ ಸಂನ್ಯಾಸಕ್ಕೆ ಕುಂದುಬರಬಾರದು. ಲೋಕರೂಢಿಗೂ ವಿರುದ್ಧವಾಗಿರಬಾರದು. ಮತ್ತೇನೆಂದರೆ, ನಿಮಗೆ ಸಮರ್ಪಕ ಉತ್ತರ ದೊರೆಯಬೇಕು. ಇದನ್ನೇ ಮನದಲ್ಲಿ ವಿಚಾರಿಸುತ್ತಿದ್ದೆನು. ಈ ಕಾರಣಕ್ಕಾಗಿ ನನಗೆ ಉತ್ತರಕೊಡಲಿಕ್ಕೆ ಮೂರು ತಿಂಗಳ ಅವಧಿಗೆ ನೀವು ಸಮ್ಮತಿಸಿದರೆ ಸಾಕು. ನನ್ನ ವಚನದಂತೆ ಇದೇ ಸ್ಥಳಕ್ಕೆ ಬಂದು ಉತ್ತರಿಸುವೆನು.
ಉ. ಭಾ. : ಹಾಗೆಯೇ ಮಾಡಿರಿ, ಯತಿಗಳೇ. ಮೂರು ತಿಂಗಳ ನಂತರ ಉತ್ತರ ಕೊಡುವಿರಲ್ಲವೆ? ನನಗೆ ಸಮರ್ಪಕ ಉತ್ತರ ಕೊಟ್ಟರೆ ಸಾಕು. ಈಗ ವಾದ-ವಿವಾದದಲ್ಲಿಂದು ಊಟದ ವೇಳೆ ಬಹಳಾಯಿತು. ಕ್ಷಮಿಸಿ, ತಾವು ಬೇಗ ಸ್ನಾನಾದಿ ಮುಗಿಸಿಕೊಂಡು ಬನ್ನಿ.
ಶ್ರೀ ಶಂ. : ಇಂತಹ ಪ್ರಸಂಗಗಳಲ್ಲಿ ಊಟಕ್ಕೆ ವೇಳೆಯಾಗುವುದು ಸಹಜ. ನಾವು ಸ್ನಾನಾದಿ ಮುಗಿಸಿಕೊಂಡು ಬರುವೆವು. (ನದಿ ಕಡೆ ಹೋಗುವರು.)
* * * * * * * * * *
(ದೃಶ್ಯ ೩: ಶ್ರೀಶಂಕರಾಚಾರ್ಯರು ದಟ್ಟವಾಗಿ ಬೆಳೆದ ಗಿಡಗಳ ಅಡವಿಯಲ್ಲಿ ತಮ್ಮ ಶರೀರರಕ್ಷಣೆ ಮಾಡುವಂತೆ ಪದ್ಮಪಾದ ಮೊದಲಾದ ಶಿ?ರಿಗೆ ಕಟ್ಟಾಜ್ಞೆ ಮಾಡಿ, ತಾವು ಅದೇ ಸಮಯದಲ್ಲಿ ದೇಹಬಿಟ್ಟ ಕಾಶೀಕ್ಷೇತ್ರದ ರಾಜನಾದ ಅಮರಕರಾಜನ ಶರೀರದಲ್ಲಿ ಪರಕಾಯಪ್ರವೇಶ ಮಾಡುವರು. ಆಗ ದುಃಖಿಸುತ್ತಿದ್ದ ರಾಣಿಗೂ ಪ್ರಜೆಗಳಿಗೂ ಸಂತಸವಾಯ್ತು. ಮಂಗಳವಾದ್ಯಗಳು ಮೊಳಗಿದವು. ಮುಂದೆ ಯಥಾಪ್ರಕಾರ ರಾಜ್ಯಕಾರ್ಯಭಾರ, ಅರಮನೆಯಲ್ಲಿ ಎಲ್ಲರೊಡನೆ ಪ್ರೀತಿಯಿಂದ ಇದ್ದರು. ದರ್ಬಾರದ ವೇಳೆಯಲ್ಲಿ ರಾಜಧರ್ಮದಂತೆ ಪ್ರಜೆಗಳಿಗೆ ಸೌಖ್ಯವೆನಿಸುವ ಕಾಯದೆ ಮಾಡಿದರು. ಹೀಗೆ ಎರಡು ತಿಂಗಳು ಕಳೆದವು. ರಾಣಿಯರೊಡನೆ ಅಂತಃಪುರದಲ್ಲಿದ್ದಾಗ ಇವರ ಪ್ರಭಾವದಿಂದ ರಾಣಿಯರೆಲ್ಲರಿಗೆ ವಾಸನಾಕ್ರಿಯೆ ಇಲ್ಲದೆ ತೃಪ್ತಭಾವಾನಂದವಾಗುತ್ತಿತ್ತು. ರಾಣಿಯರೊಂದಿಗೆ ಹೀಗಿರುವಾಗ ಕಾಮಕಲೆಯನ್ನು ಸಂಪೂರ್ಣ ಅರ್ಥಮಾಡಿಕೊಂಡರು.
ಒಂದು ದಿವಸ ಪಟ್ಟದರಾಣಿಯು ತನ್ನಲ್ಲಿ ತಾನು ವಿಚಾರಿಸುತ್ತಾ – ನನ್ನ ಮಹಾರಾಜರಿಗೆ ಪುನರ್ಜನ್ಮವಾದ ನಂತರ ದರ್ಬಾರದಲ್ಲಿ ರಾಜಕೀಯತೊಡಕು ನಿವಾರಣೆಯಾಗಿ ಪ್ರಜೆಗಳಿಗೆ ಸುಖವಾಗುವಂತಹ ಕಾಯದೆಗಳಾಗಿವೆ. ರಾಣಿಯಾದ ನನಗೆ ವಾಸನಾತೃಪ್ತಿಯೇ ಆಗುತ್ತಿದೆಯಲ್ಲ? ಹೀಗಾಗಬೇಕಾದರೆ ಯಾವುದೋ ಮಹಾಪುರುಷರ ಜೀವವು ಪ್ರವೇಶಮಾಡಿರಬಹುದೆಂದು ನನಗನ್ನಿಸುವುದು! ಆದ್ದರಿಂದ ಮಂತ್ರಿಗಳೊಡನೆ ಗುಪ್ತವಾಗಿ ಸಮಾಲೋಚಿಸಿ ರಾಜ್ಯದ ಯಾವ ಭಾಗದಲ್ಲಿಯಾದರೂ ಇರಬಹುದಾದ ಶರೀರಬಿಟ್ಟ ದೇಹವನ್ನು ಶೋಧಿಸಿ ಅಗ್ನಿಸಂಸ್ಕಾರ ಮಾಡುವ ವ್ಯವಸ್ಥೆಯಾಗಲೆಂದು ಸೂಚಿಸುವೆನು. ಏನೇ ಇರಲಿ, ನನಗೆ ದೀರ್ಘಕಾಲದ ಮುತ್ತೈದೆಭಾಗ್ಯ ಬೇಕು. ಆಮೇಲೆ ಶೋಧಕಾರ್ಯ ಶುರುವಾಯಿತು. ಶ್ರೀ ಶಂಕರಾಚಾರ್ಯರ ದೇಹಶೋಧವಾಗಿ ರಾಜದೂತರು ಶಿಷ್ಯರನ್ನು ಕಟ್ಟಿಹಾಕಿ ಇತ್ತ ಅಗ್ನಿಸಂಸ್ಕಾರ ಮಾಡುವ ವೇಳೆಗೆ ರಾಜದರ್ಬಾರಕ್ಕೆ ಶಿಷ್ಯವರೇಣ್ಯ ಪದ್ಮಪಾದರು ಗಾಯಕವೇಷದಿಂದ ಆಗಮಿಸಿ ಸೊಗಸಾದ ರಾಗದಿಂದ ರಾಜನನ್ನು ಆನಂದಗೊಳಿಸುವ ಪದಗಳಲ್ಲಿ ಸೂಚ್ಯವಾಗಿ ತಿಳಿಯುವಂತೆ ’ಪ್ರಫುಲ್ಲಿತ ಪುಷ್ಟಗಳ ಮಕರಂದ ಸ್ವೀಕರಿಸುವ ಸಂಭ್ರಮದಲ್ಲಿ ದಟ್ಟಾರಣ್ಯದಲ್ಲಿದ್ದ ನಿನ್ನ ಭೃಂಗಬಳಗವನ್ನೇ ಮರೆತಿರಲ್ಲಾ. ಆ ಬಳಗದ ಕಡೆಗೆ ಹೋಗಿ ಒಂದಾಗಿ ಆನಂದಿಸಬಾರದೆ?’ ಎಂಬರ್ಥದಿಂದ ಎಚ್ಚರಿಸಿದರು. ಈ ಗಾಯಕನು ಪದ್ಮಪಾದನೇ ಎಂದು ತಿಳಿದು ಸಭೆಗೆ ಬಂದ ಈ ಗಾಯಕನಿಗೆ ಗೌgವಾದರಗಳನ್ನಿತ್ತು ಕಳುಹಿಸಿಕೊಟ್ಟು, ತಾನು ದರ್ಬಾರದವರಿಗೆ ವಿಶ್ರಾಂತಿಗಾಗಿ ಅಂತಃಪುರಕ್ಕೆ ಹೋಗುವೆನೆಂದು ಹೇಳಿ, ಪಲ್ಲಂಗದ ಮೇಲೆ ಮಲಗಿದ್ದಾಗ ದೇಹತ್ಯಾಗಮಾಡಿ ಮೊದಲಿನ ತಮ್ಮ ದೇಹಪ್ರವೇಶ ಮಾಡಿದರು. ಈ ಮೊದಲೇ ರಾಜದೂತರು ಇವರ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದ್ದರು. ಆದರೂ ಅವರ ಶರೀರ ಪೂರ್ಣ ಸುಡದಿದ್ದಾಗ ಎಚ್ಚರಗೊಂಡ ಶ್ರೀಶಂಕರಾಚಾರ್ಯರು ಭಗವಾನ್ ಲಕ್ಮೀನರಸಿಂಹದೇವರ ಸ್ತುತಿ ಮಾಡಿದ ಪ್ರಭಾವದಿಂದ ಸುಟ್ಟಗಾಯ ಶಮನವಾಯಿತು. ಆಚಾರ್ಯರು ಎದ್ದುಕುಳಿತದ್ದನ್ನು ನೋಡಿ ರಾಜಭಟರು ಭಯಗೊಂಡು ಓಡಿಹೋದರು.
ಆಮೇಲೆ ತಮ್ಮ ವಚನ ಈಡೇರಿಸುವ ಉದ್ದೇಶದಿಂದ ಮಾಹಿಷ್ಮತಿ ನಗರದಲ್ಲಿಯ ಮಂಡನಮಿಶ್ರರ ಮನೆಗೆ ಬಂದರು. ಆಚಾರ್ಯರ ಆಗಮನದಿಂದ ಉಭಯಭಾರತಿ ಮಂಡನಮಿಶ್ರರು ಇನ್ನು ತಮಗೆ ಸರಿಯಾಗಿ ಉತ್ತರ ಕೊಡುವರೆಂದು ಗ್ರಹಿಸಿ, ’ಯತಿಗಳೇ ತಾವು ಸರ್ವಜ್ಞರು, ಪರಮಮಿತ್ರರು. ನಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ಹೇಳುವಿರೆಂದು ನಮಗೆ ಅರ್ಥವಾಗಿದೆ. ತಮಗೆ ನಾವು ಪೂರ್ಣಸೋತೆವೆಂದು ಒಪ್ಪುತ್ತೇವೆ’ ಎಂದು ಸೋಲೊಪ್ಪಿಕೊಳ್ಳುವರು. ಅನಂತರ ಶ್ರೀ ಆಚಾರ್ಯರನ್ನು ಉಚ್ಚಾಸನದ ಮೇಲೆ ಕೂರಿಸಿ ಇಬ್ಬರೂ ಸಾಷ್ಟಾಂಗಪ್ರಣಾಮ ಮಾಡುವರು.)
ಶ್ರೀ ಶಂ. – ಭಗವಾನ್ ನಾರಾಯಣನ ಅನುಗ್ರಹವಿರಲಿ.
ಮಂಡನಮಿಶ್ರರು : ತಾವು ದೇವರ ಅವತಾರವಾಗಿರಲೇಬೇಕೆಂದು ನನ್ನ ಮನ ಹೇಳುತ್ತದೆ. ಆದರೆ ಕರ್ಮಕಾಂಡದ ಅಧ್ವರ್ಯುಗಳಾದ ಜೈಮಿನಿಋಷಿಗಳ ಸಂದರ್ಶನವಾದಾಗ ಒಮ್ಮೆಯಾದರೂ ಬ್ರಹ್ಮಜ್ಞಾನದಿಂದಲೇ ಮೋಕ್ಷಪ್ರಾಪ್ತಿ ಎಂದೇಕೆ ಹೇಳಲಿಲ್ಲ?
ಶ್ರೀ ಶಂ. : ಹಾಗೋ! ಈಗ ಆ ಋಷಿವರ್ಯರನ್ನು ಸ್ಮರಿಸಿರಿ. ಅವರು ದರ್ಶನಕೊಡುವರು. ಆಗ ಅವರಿಂದಲೇ ನಿಮಗೀರ್ವರಿಗೆ ಸಮಾಧಾನಕರ ಉತ್ತರ ಸಿಗುವುದು. (ಕೂಡಲೇ ಮಂಡನಮಿಶ್ರರು ಕಣ್ಣು ಮುಚ್ಚಿ ಋಷಿವರ್ಯ ಜೈಮಿನಿಗಳೇ, ದಯವಿಟ್ಟು ದರ್ಶನಕ್ಕಾಗಿ ಪ್ರಾರ್ಥಿಸುವೆ. ನಮೋ ಋಷಿವರ್ಯ! (ಆ ಕ್ಷಣದಲ್ಲಿ ಜೈಮಿನಿಋಷಿಗಳು ಪ್ರಕಟರಾಗಿ – ನಮೋನಮಃ ಭಗವನ್ ಪರಶಿವನೇ, (ಶ್ರೀ ಶಂಕರಾಚಾರ್ಯರ ಚರಣದಲ್ಲಿ ಸಾಷ್ಟಾಂಗಪ್ರಣಾಮ ಮಾಡುವರು).
ಉ.ಭಾ./ಮಂಡನಮಿಶ್ರರು : (ಆಶ್ಚರ್ಯದಿಂದ) ಆಹಾ! ಪರಶಿವನೇ ನಮ್ಮೀರ್ವರನ್ನೂ ಉದ್ಧರಿಸಿ ಕಾಪಾಡು (ಎನ್ನುತ್ತಾ ಸಾಷ್ಟಾಂಗಪ್ರಣಾಮ ಮಾಡಿ ಏಳುವರು).
ಜೈಮಿನಿಋಷಿ : ಪರಮೇಶ್ವರಾ! ಜಗದ್ರಕ್ಷಕಾ! ಧರ್ಮರಕ್ಷಕಾ! ಶಂಕರಾಚಾರ್ಯರೂಪದಿಂದ ತಮ್ಮ ಅವತಾರವಾಗದಿದ್ದಿದ್ದರೆ, ಈ ಕಲಿಯುಗದಲ್ಲಿ ಸಂಪೂರ್ಣ ಧರ್ಮಗ್ಲಾನಿಯಾಗುತ್ತಿತ್ತು. ಇನ್ನು ಧರ್ಮರಕ್ಷಣೆಯ ಲೋಕಸಂಗ್ರಹ ಮಹಾನ್ಯಾಯಕ್ಕೋಸ್ಕರ ಬ್ರಹ್ಮನೇ ಮಂಡನಮಿಶ್ರರೂಪದಿಂದ ಅವತಾರವಾಗಿದೆ. ಇವನನ್ನೇ ಶಿಷ್ಯನೆಂದು ಸ್ವೀಕರಿಸಿ ಧರ್ಮಪೀಠಕ್ಕೆ ಪ್ರಥಮ ಜಗದ್ಗುರುವನ್ನಾಗಿ ಮಾಡಿ ಯೋಗಪಟ್ಟ ನೀಡಿ ಅನುಗ್ರಹಿಸಬೇಕೆಂದು ತಮ್ಮ ಚರಣದಲ್ಲಿ ಪ್ರಾರ್ಥಿಸುವೆ ಭಗವಂತಾ!
ಉ.ಭಾ. : ಏನು, ಪರಮಪೂಜ್ಯರಿಗೆ ನೀವು ಪ್ರಾರ್ಥಿಸಿಕೊಂಡದ್ದು? ನಮಗೇನೂ ಅರ್ಥವಾಗಲಿಲ್ಲ. ಈ ವಿಚಾರವಾಗಿ ನಮ್ಮ ಪೂರ್ವಜನ್ಮದ ಬಗೆಗೆ ತಿಳಿಸಿದರೆ ನಮಗೀರ್ವರಿಗೆ ಸಂತಸವಾಗುತ್ತದೆ.
ಜೈಮಿನಿಋಷಿ : ನಿಮ್ಮ ಪ್ರಶ್ನೆಯು ಬಹಳ ಶುಭವಾದದ್ದು, ಕೇಳಿ. ಅನೇಕ ಸಾವಿರ ವರು?ಗಳ ಹಿಂದೆ ದೇವತೆಗಳ ಸಭೆಯು ನಡೆದಿತ್ತು. ಆ ಸಮಯದಲ್ಲಿ ಜಗದೀಶ್ವರರಾದ ಬ್ರಹ್ಮ, ವಿಷ್ಣು, ಮಹೇಶ್ವರರು ಇಂದ್ರ, ವರುಣ, ಋಷಿಗಣವು ಇದ್ದಾಗ ದುರ್ವಾಸಋಷಿಗಳು ಸಂಸ್ಕೃತದಲ್ಲಿ ಭಾಷಣಮಾಡುವಾಗ ವ್ಯಾಕರಣದೋಷ ಇರುವ ಶಬ್ದ ಆ ಋಷಿಗಳ ಬಾಯಿಂದ ಬಂದಾಗ ವಿದ್ಯಾದಾತೆಯಾದ ಸರಸ್ವತಿಯು ಸಣ್ಣನಗು ನಗುತ್ತಿರುತ್ತಾಳೆ. ಅವಳ ನಗುವಿನಿಂದ ದುರ್ವಾಸಋಷಿಯು ಸಿಟ್ಟಿನಿಂದ ಸರಸ್ವತಿಗೆ ನೀನು ವಿದ್ಯಾದೇವತೆಯೆಂಬ ಅಹಂಕಾರದಿಂದ ಮಾನವರಂತೆ ನಕ್ಕು ನನಗೆ ಅಪಹಾಸ್ಯ ಮಾಡಿದೆ. ಅದಕ್ಕಾಗಿ ನೀನು ಮರ್ತ್ಯಲೋಕದಲ್ಲಿ ಜನಿಸೆಂದು ಶಾಪಕೊಟ್ಟು ಹೊರಟುಹೋದರು. ಆಗ ವಿಷ್ಣುವು, ಕಲಿಯುಗದಲ್ಲಿ ಈ ಶಾಪವಿಮೋಚನೆಗಾಗಿ ನಾವು ಮೂವರು ದೇವತೆಗಳು, ಸರಸ್ವತಿ, ನೀನೂ ಮೃರ್ತ್ಯಲೋಕದಲ್ಲಿ ಧರ್ಮಗ್ಲಾನಿಯಾಗುವ ಕಾಲಕ್ಕೆ ನಮ್ಮ ಅಂಶದಿಂದ ಅವತರಿಸಬೇಕಾಗುತ್ತದೆಂದು ಹೇಳಿದ ಮೇರೆಗೆ ಪರಶಿವನೇ ಧರ್ಮಪಾಲನೆಗಾಗಿ ಶಂಕರಾಚಾರ್ಯನಾಗಿದ್ದಾನೆ. ವಿಷ್ಣುವಿನ ಅಂಶದಿಂದ ಶ್ರೀಶಂಕರರ ಶಿಷ್ಯವರೇಣ್ಯ ಪದ್ಮಪಾದ. ಆವಾಗಿನ ಬ್ರಹ್ಮ, ಸರಸ್ವತಿಯರೇ ಈಗ ಕರ್ಮಕಾಂಡದ ಸಂಸ್ಕೃತಿ ಉಳಿಯಲಿಕ್ಕೋಸ್ಕರ ನೀವು ಅವತರಿಸಿದ್ದೀರಿ. ನಿಮಗೀರ್ವರಿಗೆ ಈವರೆಗೆ ನಿಮ್ಮ ಪೂರ್ವದ ಇತಿಹಾಸ ಏಕೆ ಗೊತ್ತಾಗಿಲ್ಲವೆಂದರೆ, ಆಗಿನ ಸರಸ್ವತಿಯಾದ ನೀನು ಅಹಂಕಾರದಿಂದ ಅಪಹಾಸ್ಯ ಮಾಡಿದ್ದರ ಅಜ್ಞಾನವು ಈಗಲೂ ಬುದ್ಧಿಗೆ ಮುಸುಕುಹಾಕಿದೆಯ?.
ಉ.ಭಾ. : ನಮ್ಮ ಪೂರ್ವೇತಿಹಾಸ ಹೇಳಿ ಧನ್ಯರನ್ನಾಗಿ ಮಾಡಿದಿರಿ!
ಮಂ. : ದುರ್ವಾಸಋಷಿಗಳ ಶಾಪವು ಭಗವಾನ್ ಶಂಕರಾಚಾರ್ಯರ ಅವತಾರಕ್ಕೂ ನಮ್ಮೀರ್ವರ ಪುನರ್ಜನ್ಮಕ್ಕೂ ಮುಖ್ಯ ಕಾರಣ! ಇದು ಧರ್ಮಸಂಸ್ಥಾಪನೆಗೆ ಕಾರಣ! ಆನಂದವಾಯಿತು! ಶ್ರೀ ಶಂಕರಾಚಾರ್ಯ ಭಗವತ್ಪಾದರೆ, ನಾನು ವಾದಮಾಡುವ ಪ್ರಾರಂಭದಲ್ಲಿ ಪ್ರತಿಜ್ಞೆ ಮಾಡಿದ ಮೇರೆಗೆ, ಸೋತ ಅನಂತರ ತಮ್ಮ ಶಿಷ್ಯನಾಗಿ ಸೇವೆಗೈಯಲು ಸಿದ್ಧನಿರುವೆ. ಸಂನ್ಯಾಸಾಶ್ರಮ ಸ್ವೀಕರಿಸುವೆ. ಅಪ್ಪಣೆಯಾಗಲಿ. (ಕೈಮುಗಿದುಕೊಂಡು ನಿಲ್ಲುವರು.)
ಉ.ಭಾ. : ಋಷಿವರ್ಯರ ಮುಖದಿಂದ ನಮ್ಮೀರ್ವರ ಮೊದಲಿನ ಜನ್ಮದ ಇತಿಹಾಸ ಕೇಳಿದ ಕೂಡಲೇ ನನ್ನ ಪ್ರತಿಜ್ಞೆಯು ಜಾಗೃತವಾಗಿದ್ದರಿಂದ ನನ್ನ ಸತ್ಯಲೋಕಕ್ಕೆ ಈಗಲೇ ಪಯಣಿಸುವೆ. ಆದರೆ ಭಗವತ್ಪಾದರಿಗೆ ಅನನ್ಯ ಭಕ್ತಿಯಿಂದ ಗೌರವದ ಮಂಗಳಾರತಿ ಮಾಡುವುದವಶ್ಯವೆನಿಸಿದೆ.
ಜೈ. ಋಷಿ : ಬಹಳ ಯೋಗ್ಯ! (ಶಂಕರರ ಕಡೆ ನೋಡುತ್ತ) ಭಗವಂತ ತಾವು ಮಂಡನರನ್ನು ಶಿ?ರೆಂದು ಸ್ವೀಕರಿಸಿದ ಮೇಲೆ ವೈದಿಕಧರ್ಮದ ಉತ್ಕ?ಕ್ಕಾಗಿ, ಉಪನಿ?ತ್ತುಗಳ ಉತ್ತರಮೀಮಾಂಸಾದಲ್ಲಿ ವಿವರಿಸಿದ ಅದ್ವೈತಸಿದ್ಧಾಂತ ತಳಹದಿಯ ಮೇಲೆ ವೈದಿಕಧರ್ಮದ ಪುನರುತ್ಥಾನ ಮಾಡುವಿರಲ್ಲವೇ? ಪ್ರಶ್ನೆಮಾಡಿದ್ದಕ್ಕೆ ಕ್ಷಮಿಸಬೇಕು.
ಶ್ರೀ ಶಂ. : ಋಷಿವರ್ಯಾ. ನೀವು ಪ್ರಶ್ನೆಮಾಡಿದ್ದು ಬಹಳ ಯೋಗ್ಯವಾಗಿದೆ. ಇದನ್ನೇ ವಿಚಾರಿಸುತ್ತಿದ್ದೇನ?. ಈವರೆಗೆ ನಾನು ಸಂಚರಿಸಿ ಜೈನ, ಶೈವ, ಗಾಣಪತ್ಯ, ಶಾಕ್ತ ಮೊದಲಾದ ಅವೈದಿಕ ಮತೀಯರೊಡನೆ ಚರ್ಚಿಸಿ ಅವರ ದೇವತೋಪಾಸನೆಯ ದೇವತೆಗಳ ಮೂಲಸ್ವರೂಪ ಪರಬ್ರಹ್ಮವೆಂದು ತಿಳಿಹೇಳಿದ್ದನ್ನು ಒಪ್ಪಿಕೊಂಡು, ನಮ್ಮ ಅದ್ವೈತ ತತ್ತ್ವಾನುಯಾಯಿಗಳಾಗಿದ್ದಾರೆ. ಈ ನಮ್ಮ ಶಿಷ್ಯರಾದ ಬ್ರಹ್ಮಾವತಾರಿ ಮಂಡನಮಿಶ್ರರನ್ನು ನನ್ನ ಆಶೆಯಂತೆ ಶೃಂಗೇರಿಯಲ್ಲಿ ಮಠ ಸ್ಥಾಪಿಸಿ, ಸುರೇಶ್ವರಾಚಾರ್ಯ ಎಂಬ ಯೋಗಪಟ್ಟಹೆಸರು ಅನುಗ್ರಹಿಸಿ ’ತತ್ತ್ವಮಸಿ’ ವಾಕ್ಯದ ಉಪದೇಶ ಮಾಡಿ ಪ್ರಥಮ ಜಗದ್ಗುರು ಪೀಠದ ಮೇಲೆ ಆರೋಹಣ ಮಾಡಿಸುತ್ತೇನೆ. ಇನ್ನು ಧರ್ಮಪ್ರಚಾರಕ್ಕೆ ಉಪನ್ಯಾಸ ಮಾಡುವುದಕ್ಕೋಸ್ಕರ ವಾಣಿಯ ಶಕ್ತಿ ಕೃಪೆ ಅವಶ್ಯವಿದೆ. ತಾಯಿ ವೀಣಾಪಾಣಿ ವಾಣಿಯನ್ನು ಆ ಕ್ಷೇತ್ರದಲ್ಲಿ ಶ್ರೀಚಕ್ರದಲ್ಲಿ ಸದೋದಿತವಿರುವಂತೆ ಕೇಳಿಕೊಳ್ಳುವೆ; ನಮ್ಮ ಶೃಂಗೇರಿಯಲ್ಲಿ ಶ್ರೀ ಶಾರದಾಪೀಠಮ್ನ ಕೃಪಾಶೀರ್ವಾದ ಬಲದಿಂದ…
ಜೈ. ಋಷಿ : ಅದಕ್ಕೋಸ್ಕರ ಭಗವನ್ ನಾನು ಘೋಷಿಸುವೆ ಕೇಳಿರಿ: ದಕ್ಷಿಣಭಾರತದಲ್ಲಿಯ ಈ ಶ್ರೀಮಠಕ್ಕೆ “ಶ್ರೀ ಶ್ರೀ ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್ ದಕ್ಷಿಣಾಮ್ನಾಯಶ್ರೀಶಾರದಾಪೀಠಮ್ ಶೃಂಗೇರಿ” ಎಂದು ಹೆಸರು. ಋ?ಶೃಂಗರ ಪವಿತ್ರಸ್ಥಳ. ತುಂಗಾನದಿಯ ತಟಾಕ. ಪ್ರಶಾಂತ ವಾತಾವರಣ, ಈ ಸ್ಥಳದಲ್ಲಿ ಧರ್ಮದ ಪುನಃಪ್ರಚಾರಕಾರ್ಯಾರಂಭ! ನೋಡಿರಿ ಧರ್ಮಸಂಸ್ಥಾಪಕರ ದೈವೀವಿಲಾಸ! “ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾ ಪರಃ!” ಸಾರಿದ ಜಗದೋದ್ಧಾರಗೈಯುವ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯರಿಗೆ ನಾವೆಲ್ಲರೂ ಸಂತೋ?ದಿಂದ ಮಹಾಮಂಗಳಾರತಿ ಮಾಡೋಣ.
(ಶ್ರೀಮಜ್ಜಗದ್ಗುರು ಶಂಕರಾಚಾರ್ಯರ ಆರತಿ)
ಜಯ ಭಗವನ್ ಜಯ ಶಂಕರ ವಿದ್ಯಾಕಲ್ಪತರೋ |
ನಿರ್ಮಥಿತಶ್ರುತಿಸಾಗರ ಜಯ ಜಯ ಭುವನಗುರೋ || ಜಯದೇವ ಜಯದೇವ ||
ಧರ್ಮಸ್ಥಾಪನಹೇತೋರ್ಲೀಲಾತನುಧಾರಿನ್ |
ಲೋಕಾನುಗ್ರಹಹೇತೋರ್ಬ್ರಹ್ಮಣಿ ಸಂನ್ಯಾಸಿನ್ |
ಕಲ್ಯುದ್ಭವನಾನಾವಿಧಪಾಖಂಡಧ್ವಂಸಿನ್ |
ಅದ್ವೈತಾಮೃತವೃ? ಜಡಜೀವೋದ್ಧಾರಿನ್ ||೧|| ಜಯದೇವ ಜಯದೇವ ||
ಶ್ರುತಿಶಿರಸಸ್ತತ್ತ್ವಾನಾಮೇಕಸ್ತ್ವಂ ವೇತ್ತಾ |
ಪರಪಕ್ಷಾಣಾಂ ಪವಿರಿವ ವಿದಿತಸ್ತ್ವಂ ಭೇತ್ತಾ |
ಸಂಶೀತೇರ್ಯುಕ್ತಿಬಲಾದೇಕಸ್ತ್ವಂ ಛೇತ್ತಾ |
ತ್ವದ್ಭಾ?ಮೃತಪು?ಃ ಕೋ ನು ಜನಃ ಖೇತ್ತಾ ||೨|| ಜಯದೇವ ಜಯದೇವ ||
ಶಾರದಯಾಪಿ ನುತಂ ತ್ವಾಂ ಸ್ತೋತುಮಲಂ ಕೋಹಮ್ |
ಮ?ಯ ಮೇ ತ್ವಸಮಂಜಸಮಕ್ಷರಸಂದೊಹಮ್ |
ಸ್ಪರ್ಶಮಣೇ ಸ್ವರ್ಣೀಕುರು ಮಾಂ ಮಲಿನಂ ಲೋಹಮ್ |
ಸ್ಥಿತ್ವಾ ಮೇ ಹೃದ್ಯನಿಶಂ ವಾರಯ ಮಮ ಮೋಹಮ್ ||೩|| ಜಯದೇವ ಜಯದೇವ ||
ತ್ವಚ್ಚರಿತಾನುಧ್ಯಾನಾದಾಚಾರೇ ಶುದ್ಧಿಮ್|
ತ್ವದ್ಭಾಷಶ್ರವಣಾದಪ್ಯನಘಾಮಿಹ ಬುದ್ಧಿಮ್ |
ವಿಂದೇಮ ತ್ವನ್ಮಾರ್ಗಾಶ್ರಯಣಾತ್ ಪುಣ್ಯರ್ದ್ಧಿಮ್ |
ದೇಹಿ ಗುರೋ ಕರುಣಾಘನ ನಿಃಶ್ರೇಯಸಸಿದ್ಧಿಮ್ ||೪|| ಜಯದೇವ ಜಯದೇವ ||
ನಾನು ಯಾರು- ನಾನು ಯಾವ ಕಾರಣಕ್ಕಾಗಿ ಹುಟ್ಟಿದ್ದೇನೆ ಎಂಬುದು ಕೆಲವರಿಗೆ ಅರಿವಾಗುವುದರಲ್ಲಿ ಜೀವನವೇ ಮುಗಿದಿರುತ್ತದೆ. ಆದರೆ ನಾವು ಬದುಕಿರುವಾಗ ನಡೆಯುವ ಎಲ್ಲ ಘಟನೆಗಳು “ನಾನು’ವಿನಿಂದಲೇ ಪ್ರಾರಂಭವಾಗಿ “ನಾನು’ ವಿನಿಂದಲೇ ಮುಗಿಯುತ್ತವೆ. ಅಧ್ಯಾತ್ಮದಲ್ಲಿ “ನಾನು’ ಅಂದರೆ ಆತ್ಮ. ಆತ್ಮ ಅಂದರೆ ಬ್ರಹ್ಮ. “ನಾನು’ ಅಂದರೆ ಬ್ರಹ್ಮ. ಪರಮಾತ್ಮನನ್ನು ಅರಿತುಕೊಳ್ಳಬೇಕೆಂಬುದರ ಆಶಯ “ನನ್ನನ್ನು’ ಅರಿತುಕೊಳ್ಳುವುದೇ. ಮೋಕ್ಷ ಅಂದರೂ ಇದೇ. ಇದನ್ನೇ ಬ್ರಹ್ಮಜ್ಞಾನ ಎನ್ನುತ್ತಾರೆ. ವೇದಗಳು, ಉಪನಿಷತ್ತುಗಳು, ಮಹಾಕಾವ್ಯಗಳು, ವಿಜ್ಞಾನ, ಸಮಾಜಶಾಸ್ತ್ರ ಇತ್ಯಾದಿ ಪ್ರತಿಪಾದಿಸುವುದೂ ಇದನ್ನೇ.
ನಿಜಕ್ಕೂ ನಾನೆಂದರೆ ಯಾರು?