ರಾಮಾಯಣ ಮಹಾಭಾರತಗಳಂತಹ ಪ್ರಾಚೀನ ಕಾವ್ಯಗಳು ಕೇವಲ ಪುರಾಣಗಳೋ ಅಥವಾ ಐತಿಹ್ಯವೋ ಎನ್ನುವ ವಾದವಿವಾದಗಳೇನೇ ಇದ್ದರೂ, ಜನಪದಕ್ಕೆ ಈ ವಾದ-ವಿವಾದಗಳಿಗಿಂತ, ಅವು ಜೀವನದ ಆದರ್ಶ ಕಥಾನಕಗಳು ಎನ್ನುವುದೇ ಮುಖ್ಯವಾಗುತ್ತದೆ. ರಾಮನಂಥ ಪಿತೃವಾಕ್ಯ ಪರಿಪಾಲಕನಿದ್ದ, ಭರತನಂಥ ಭ್ರಾತೃಪ್ರೇಮಿಯಿದ್ದ, ಅವರ ಬದುಕಿನ ಆದರ್ಶಗಳು ಹೀಗಿದ್ದವು, ನಾವೂ ಹಾಗಿರಬೇಕು ಎನ್ನುವ ನೀತಿಯೇ ಪ್ರಧಾನವಾಗಿ, ಅವನ್ನು ದೇವರ ಕಲ್ಪನೆಯ ಜೊತೆಗೂ ಸೇರಿಸಲಾಯಿತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ದೇವರ ವಿಷಯ ಬಂದಾಗ ಎಲ್ಲಾ ಧರ್ಮಗಳ ಕಥಾನಕದಂತೆ, ನಮ್ಮಲ್ಲಿಯೂ ಸಂಬಂಧಿತ ಕಥನಕಾವ್ಯಗಳಲ್ಲಿ ಪವಾಡಗಳ ಸೇರ್ಪಡೆಯಾಗಿರಬೇಕು. ಇದರ ಪರಿಣಾಮವೆಂದರೆ, ಸಹಜ ಮಾನವಕುಲದ ಸ್ವಭಾವ ವಿಮರ್ಶೆ, ಬದುಕಿನ ವಾಸ್ತವ ಐತಿಹ್ಯಗಳಿಗಿಂತ, ಪವಾಡಗಳೇ ಪ್ರಧಾನವಾಗುತ್ತ ಹೋಯಿತು. ಇದು ಐತಿಹಾಸಿಕವಲ್ಲ, ಬರಿದೆ ಪುರಾಣ, ಕಟ್ಟುಕತೆ ಎನ್ನುವ ನಿಲವು ಪಡೆಯುವುದಕ್ಕೆ ಅವಕಾಶವಾಯಿತು. ಈ ನೆಲೆಯಲ್ಲಿ, ಪ್ರಾಚೀನ ಮಹಾಕಾವ್ಯಗಳ ಕಥಾನಕವನ್ನು, ಪವಾಡಗಳಿಂದ ಹೊರತಾದ, ಬದುಕಿನ ತತ್ತ್ವ ಮತ್ತು ಸಂಘರ್ಷಗಳ ಕಥೆಯನ್ನಾಗಿ ಮಾಡಲು ಸಾಧ್ಯವಿಲ್ಲವೆ? – ಎನ್ನುವ ನಿಲವಿನೊಂದಿಗೆ ಮಾಡಿದ ಪ್ರಯತ್ನ ಎನ್ನುವ ದೃಷ್ಟಿಯಿಂದ ಭೈರಪ್ಪನವರ ’ಉತ್ತರಕಾಂಡ’ವನ್ನು ಗಮನಿಸಬಹುದು.

ಭೈರಪ್ಪನವರ ಈ ಬಗೆಯ ಪ್ರಯತ್ನ ಇದೇ ಮೊದಲಲ್ಲ. ೩೮ ವರ್ಷಗಳ ಹಿಂದೆ ಪ್ರಕಟಗೊಂಡ ’ಪರ್ವ’ದಲ್ಲಿಯೆ ಅವರು ಈ ಬಗೆಯ ಪ್ರಯತ್ನವನ್ನು ಮಾಡಿ ವಿಶಿಷ್ಟ ಯಶಸ್ಸನ್ನು ಸಾಧಿಸಿದ್ದಾರೆ ಎನ್ನುವುದನ್ನೂ ನಾವು ಕಂಡಿದ್ದೇವೆ. ಪಾಂಡುಪುತ್ರರು ದುರ್ವಾಸರ ಮಂತ್ರ ಫಲದಿಂದ ಹುಟ್ಟಿದವರಲ್ಲ, ಹಿಮಾಲಯದ ಗುಡ್ಡಗಾಡು ಜನಾಂಗದ ಬಲಶಾಲಿಗಳಾದ ಇಂದ್ರ, ಯಮ ಮುಂತಾದವರ ಸಂಯೋಗದಿಂದ ಕುಂತಿಯಲ್ಲಿ ಹುಟ್ಟಿದವರು ಎಂದು ಮುಂತಾಗಿ ಅಲ್ಲಿ ವಿವರಣೆ ಬರುತ್ತದೆ. ಇದರ ಹೊರತಾಗಿ ಹೆಚ್ಚಿನ ಪವಾಡಗಳನ್ನು ಬದಲಿಸುವ ಅಗತ್ಯ ಮಹಾಭಾರತದ ಕಥಾಹಂದರದಲ್ಲಿ ಭೈರಪ್ಪನವರಿಗೆದುರಾಗಲಿಲ್ಲ. ಆದರೆ ಈ ಬಗೆಯ ಸವಾಲು ರಾಮಾಯಣದಲ್ಲಿ ಸಾಕ? ಬಾರಿ ಅವರಿಗೆ ಎದುರಾಗಿರುವುದು ಕಂಡುಬರುತ್ತದೆ. ರಾಜಕೀಯ ತಂತ್ರ- ಪ್ರತಿತಂತ್ರಗಳು ಪ್ರಧಾನವಾಗಿದ್ದ ಮಹಾಭಾರತದಲ್ಲಿ ಸಾಮಾನ್ಯ ಓದುಗರ ದೃಷ್ಟಿ, ಕೃಷ್ಣಕಥೆಯೊಂದನ್ನು ಹೊರತುಪಡಿಸಿದರೆ, ಪವಾಡಗಳ ಕಡೆಗೆ ಅಷ್ಟಾಗಿ ಹೋಗುವುದಿಲ್ಲ. ಆದರೆ ರಾಮಾಯಣವು, ಮಹಾಭಾರತದ ತೆರನಾದ ವಿಶಿಷ್ಟ ವ್ಯಾಪಕ ಕೃತಿ ಆಗದೆ ರಾಮನೆಂಬ ವ್ಯಕ್ತಿಯೊಬ್ಬನ ಬದುಕಿನ ಏಳು-ಬೀಳುಗಳ ಕಥಾನಕವಾಗಿರುವುದು; ರಾಮ ಒಬ್ಬ ಅವತಾರೀ ಪುರುಷ, ರಾವಣಾದಿಗಳ ಹನನದ ಸಲುವಾಗಿ ಅವತಾರವೆತ್ತಿದ ವಿಷ್ಣು ಎನ್ನುವ ನೆಲೆಯಲ್ಲಿಯೆ ಪುರಾತನ ರಾಮಾಯಣ ರಚಿತವಾಗಿರುವುದರಿಂದ, ಇಲ್ಲಿಯ ಪವಾಡಗಳನ್ನು ಸಂಭಾಳಿಸುವುದು ಕಷ್ಟವೇ. ಮೂಲ ರಾಮಾಯಣಕ್ಕೆ ಒಗ್ಗಿಕೊಂಡ ಸಾಮಾನ್ಯ ಓದುಗರ ಮನಸ್ಸಿಗೆ, ಹನುಮಂತ ಒಬ್ಬ ಬ್ರಹ್ಮಚಾರಿಯಾಗಿ ಕಾಣಿಸುವುದು, ವಾನರ ಜನಾಂಗ ಸಮುದ್ರವನ್ನು ದೋಣಿಯಲ್ಲಿ ದಾಟುವುದು ಇಂಥವನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ.
ಈ ಸವಾಲನ್ನು ಸಮರ್ಥವಾಗಿ ಎದುರಿಸಲು ಭೈರಪ್ಪನವರು ಆಯ್ದುಕೊಂಡ ದಾರಿಯೆಂದರೆ ಅದನ್ನು ಸೀತೆಯ ಆತ್ಮಕಥಾನಕವಾಗಿ ನಿರೂಪಿಸುವುದು. ಕಥೆ ಆರಂಭವಾಗುವುದೇ ಸೀತೆ ರಾಮನಿಂದ ಪರಿತ್ಯಕ್ತಳಾಗಿ ವಾಲ್ಮೀಕಿ ಆಶ್ರಮದಲ್ಲಿದ್ದು ಅವಳಿಮಕ್ಕಳಿಗೆ ಜನ್ಮ ಕೊಟ್ಟ ಬಳಿಕ. ತನ್ನ ಬದುಕಿನ ಸಿಂಹಾವಲೋಕನ ಮಾಡುತ್ತ ಆಕೆ ಇಡೀ ರಾಮಾಯಣದ ಕಥನವನ್ನು ಬಿಚ್ಚಿಡುತ್ತ ಹೋಗುತ್ತಾಳೆ. ಮಾಯಾಜಿಂಕೆಯ ಕಥನವಾಗಲಿ, ಸೀತಾಪಹರಣವಾಗಲಿ ಎಲ್ಲವೂ ಇಂದಿನ ಬದುಕಿಗೆ ಹೊಂದಿಕೊಳ್ಳುವಂತೆ ಪವಾಡರಹಿತವಾಗಿ ಚಿತ್ರಿಸಲ್ಪಡುತ್ತ ಹೋಗುತ್ತವೆ. ಕುವೆಂಪು ಅವರು ರಾಮಾಯಣವನ್ನು ಪ್ರಕೃತಿವರ್ಣನೆಯ ವಿಶಿಷ್ಟ ಕೃತಿಯನ್ನಾಗಿಸಿದರೆ, ಭೈರಪ್ಪನವರು ಅದನ್ನು ಹೆಣ್ಣು ಗಂಡಿನ ಸ್ವಭಾವ ಸಂಘ?ಗಳ ತಳಹದಿಯನ್ನಾಗಿ ಬಳಸಿಕೊಳ್ಳುತ್ತಾರೆ. ರಾಮಾಯಣದಂತಹ ಮಹಾಕಾವ್ಯವೊಂದು ಬಗೆಬಗೆಯ ಪ್ರತಿಭೆಗಳಿಗೆ ಯಾವಾವ ದೃಷ್ಟಿಕೋನದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನುವುದೇ ಒಂದು ವಿಸ್ಮಯ.
ಇಲ್ಲಿಯ ಪ್ರತಿಯೊಂದು ಪಾತ್ರವೂ ಬದುಕಿನ ವಿವಿಧ ಮಗ್ಗಲುಗಳನ್ನು, ಮನುಷ್ಯಸ್ವಭಾವವನ್ನು ಪ್ರತ್ಯೇಕವಾಗಿ ತೆರೆದಿಡುತ್ತಾ ಹೋಗುತ್ತದೆ. ರಾಮನ ನಿತ್ಯ ಅನುಚರನಾಗಿದ್ದ ಲಕ್ಷ್ಮಣ ಸೀತೆಯನ್ನು ತ್ಯಜಿಸುವ ರಾಮನ ನಿರ್ಣಯವನ್ನು ಮನಸ್ಸಿನಲ್ಲಿಯೆ ವಿರೋಧಿಸಿ, ಕೃಷಿಕನಾಗುವುದು; ಸೀತೆಗಿಂತ ಗಟ್ಟಿಗಿತ್ತಿಯಾಗಿದ್ದ ಊರ್ಮಿಳೆ ಸೀತೆಗೆ ಅಂತ್ಯದಲ್ಲಿ ಆಸರೆಯಾಗುತ್ತ ಹೋಗುವುದು; ರಾಜನ ನಿರ್ಣಯ ಧಿಕ್ಕರಿಸಲಾಗದೆ ಸೀತೆಯನ್ನು ಕಾಣದೆ ಉಳಿದ ಮಾಂಡವಿ ಶ್ರುತಕೀರ್ತಿಯರು; ಅಂತ್ಯದಲ್ಲಿ ಸೀತೆ ರಾಮರನ್ನು ಒಗ್ಗೂಡಿಸಲು ಧರ್ಮಸಭೆ ಕರೆದು, ಅದರಲ್ಲೂ ಯಶಸ್ವಿಯಾಗದೆ ’ಕಾವ್ಯದಲ್ಲಿ ಕೂಡ ಸುಖವನ್ನು ಸೃಷ್ಟಿಸಲು ಸಾಧ್ಯವಿಲ್ಲದಂತಾಯಿತಲ್ಲ, ಕವಿಯು ಏನನ್ನು ತಾನೆ ಬದಲಿಸಬಲ್ಲ?’ ಎಂಬ ವೈಫಲ್ಯಭಾವ ಹೊಂದುವ ವಾಲ್ಮೀಕಿ – ಹೀಗೆ ಪ್ರತಿಯೊಂದು ಪಾತ್ರವೂ ಕಥೆಗೆ ಪೂರಕವಾಗಿಯೇ ಕಾಣಿಸಿಕೊಳ್ಳುತ್ತದೆ. ರಾಮ ತಾನು ಸೀತೆಯನ್ನು ಪರಿತ್ಯಜಿಸಿದುದಕ್ಕೆ ತನ್ನಮಟ್ಟಿಗೆ ಸಮರ್ಥ ಕಾರಣವನ್ನೇನೋ ಕೊಡುತ್ತಾನಾದರೂ, ಸೀತೆಗೆ ಅದು ಒಪ್ಪಿತವಾಗುವುದಿಲ್ಲ. ರಾಮನ ಪಾತ್ರವನ್ನು ಇಡೀ ಕಥಾನಕದುದ್ದಕ್ಕೂ ಸಾಕಷ್ಟು ದೂರದಲ್ಲಿಯೆ ಇಟ್ಟು ನೋಡಲಾಗಿದೆ ಎನ್ನುವುದರ ಅರಿವು ಓದುಗರಿಗೆ ಸುಲಭದಲ್ಲಿಯೆ ಆಗುತ್ತದೆ. ಅಂತ್ಯದಲ್ಲಿ ಸೀತೆ ರಾಮನ ಮರಣದ ಕುರಿತಾಗಿ ಕೇಳಿದಾಗ ಮಾತ್ರ ಆಕೆಯಲ್ಲಿ ಹುಟ್ಟಿಕೊಳ್ಳುವ ಭಾವಗಳು – ಆತ ತನ್ನನ್ನು ಅ?ಂದು ಗಾಢವಾಗಿ ಪ್ರೀತಿಸಿದ್ದ, ಸ್ಥಾನಗೌರವದಿಂದ ಆತ ಇದನ್ನೆಲ್ಲ ಮಾಡಬೇಕಾಯಿತೇನೋ ಎನ್ನುವ ಸೂಕ್ಷ್ಮ ಅರಿವು – ರಾಮನನ್ನು ಹತ್ತಿರ ತರುತ್ತದೆ ಅಷ್ಟೆ. ಹಾಗಾಗಿ ಇದು ರಾಮಾಯಣದ ಕಥಾನಕ ಎನ್ನುವುದಕ್ಕಿಂತ ಸೀತಾಯಣ ಎನ್ನುವುದೇ ಸೂಕ್ತವಾಗುತ್ತದೆ. ಅದಕ್ಕೇ ಇರಬೇಕು, ಇದನ್ನು ’ಉತ್ತರಕಾಂಡ’ ಎಂದು ಕರೆದದ್ದು. ಒಟ್ಟಾರೆ ಗಮನಿಸಬೇಕಾದ ಅಂಶವೆಂದರೆ, ಭೈರಪ್ಪನವರು ಮೂಲ ರಾಮಾಯಣದ ಕೆಲವು ಘಟನೆಗಳನ್ನು, ಪಾತ್ರಗಳನ್ನು ಕೈಬಿಟ್ಟಿದ್ದಾರೆ, ಮರುವ್ಯಾಖ್ಯಾನ ಮಾಡಿದ್ದಾರೆ ಎನ್ನುವುದನ್ನು ಬಿಟ್ಟರೆ, ಕಥೆಯನ್ನೆಲ್ಲೂ ಬದಲಿಸಿಲ್ಲ ಎನ್ನುವುದು.
ಮೂಲತಃ ತಮ್ಮ ಎಲ್ಲ ಕೃತಿಗಳಲ್ಲೂ ತತ್ತ್ವಸಂಘರ್ಷಕ್ಕೆ ಒತ್ತುಕೊಡುತ್ತ ಬಂದಿರುವ ಭೈರಪ್ಪನವರು, ಇಲ್ಲಿ ಸೀತೆ ಎಂಬ ಸ್ತ್ರೀಗೆ ಆದ ಅನ್ಯಾಯವನ್ನು – ಸಮಾಜದಲ್ಲಿ ಸ್ತ್ರೀಗೆ ಆಗುತ್ತಿರುವ ಅನ್ಯಾಯವನ್ನು – ಸಮರ್ಥವಾಗಿ ಪ್ರತಿಪಾದಿಸಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಕಾದಂಬರಿಯ ಕೊನೆಯಲ್ಲಿ ಆಕೆ ಎತ್ತುವ ಪ್ರಶ್ನೆಗಳೇ ಇಡೀ ಕಾದಂಬರಿಯ ತಿರುಳು. ’ಎಳೆಯ ವಯಸ್ಸಿನಲ್ಲಿ, ನೀತಿಗೆಟ್ಟಿದ್ದ ಅಹಲ್ಯೆಯನ್ನು ಮತ್ತೆ ಕೂಡಿಸಿದ ರಾಮನಿಗೆ ತಾನು ಮತ್ತೆ ಕೂಡಲಾಗದ ಪರಿತ್ಯಕ್ತೆಯಾದದ್ದು ಹೇಗೆ; ಅವನಿಗೆ ಮತ್ತೆ ತಾನು ಅಶ್ವಮೇಧಯಾಗದ ಸಂದರ್ಭದಲ್ಲಿ ಬೇಕಾದದ್ದು ಯಜ್ಞವನ್ನು ಪೂರ್ಣಗೊಳಿಸಲಿಕ್ಕೆ ಮಾತ್ರ ಹೊರತು, ಮೆಚ್ಚಿನ ಮಡದಿಯಾಗಿ ಅಲ’ ಎನ್ನುವ ಹತಾಶ ಮನೋವೃತ್ತಿಯಿಂದ ನೆಲದಿಂದ ಬಂದ ತಾನು ಮತ್ತೆ ನೆಲದ ಹೆಣ್ಣಾಗಿಯೇ ಉಳಿಯುತ್ತೇನೆ ಎಂದು ಕಾರ್ಷಿಕ ಬದುಕಿಗೆ ಮರಳುತ್ತಾಳೆ. ಆದರೆ ಕೊನೆಯಲ್ಲಿ ರಾಮನ ಮರಣದ ಸುದ್ದಿ ಕೇಳಿ, ತಾನೂ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಭಾರತೀಯ ಹೆಣ್ಣಿನ ಮನಃಸ್ಥಿತಿ ಹೀಗೇ ಎನ್ನುವುದನ್ನು ಅತ್ಯಂತ ಸಮರ್ಥವಾಗಿ ನಿರೂಪಿಸುತ್ತ ಅಂತ್ಯವಾಗುವ ಈ ಕೃತಿ ನಮಗೆ ಮೆಚ್ಚುಗೆಯಾಗುವುದು ಕೊನೆಯ ಭಾಗದಲ್ಲಿ. ಎಲ್ಲಿಯೂ ಯಾವುದೇ ಉದ್ವಿಗ್ನತೆ, ಅತಿರೇಕ ಭಾವಗಳಿಗೆ, ರಂಜಿತ ಶಬ್ದಗುಚ್ಛಗಳಿಗೆ ಒಳಗಾಗದೆ ತೆರೆದಿಟ್ಟಿರುವ ಕೃತಿ ಉತ್ತರಕಾಂಡ, ರಾಮಾಯಣದ ಹೊಸಬಗೆಯ ಓದು ಎನ್ನಬಹುದಾಗಿದೆ.