ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚದಲ್ಲಿ ರುದ್ರಪಟ್ಣಂ ಸಹೋದರರೆಂದು (ರುದ್ರಪಟ್ಣಂ ಬ್ರದರ್ಸ್) ಪ್ರಸಿದ್ಧರಾದ ಆರ್.ಎನ್. ತ್ಯಾಗರಾಜನ್ ಮತ್ತು ಡಾ. ಆರ್.ಎನ್. ತಾರಾನಾಥನ್ ಅವರಿಗೆ ಈ ಕೆಲವು ತಿಂಗಳುಗಳ ಅಂತರದಲ್ಲಿ ದೇಶದ ಎರಡು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದವು. ಅವುಗಳೆಂದರೆ ’ಕೇಂದ್ರ ಸಂಗೀತ ನಾಟಕ ಅಕಾಡೆಮಿ’ಯ ಪುರಸ್ಕಾರ ಮತ್ತು ’ಮದ್ರಾಸ್ ಮ್ಯೂಸಿಕ್ ಅಕಾಡೆಮಿ’ಯ ’ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರವನ್ನು ಕಳೆದ ಅಕ್ಟೋಬರ್ನಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಪ್ರದಾನ ಮಾಡಿದರು. ಕರ್ನಾಟಕ ಸಂಗೀತ ಕ್ಷೇತ್ರದ ಉನ್ನತ ಸಂಸ್ಥೆಯಾದ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಹಿರಿಯ ವಿದ್ವಾಂಸರಿಗೆ ನೀಡುವ ಸಂಗೀತಕಲಾ ಆಚಾರ್ಯ ಪ್ರಶಸ್ತಿಯನ್ನು ಕಳೆದ ಜನವರಿಯಲ್ಲಿ ರುದ್ರಪಟ್ಣಂ ಸಹೋದರರಿಗೆ ನೀಡಿತು. ವೇದಿಕೆಕಲಾವಿದರಾಗಿ ಹೆಸರುಮಾಡಿದವರು ಮತ್ತು ಗಣನೀಯ ಸಂಖ್ಯೆಯ ಶಿ?ರನ್ನು ತಯಾರುಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಗಳನ್ನು ಇಬ್ಬರಿಗೂ ಒಟ್ಟಿಗೆ ನೀಡಲಾಗಿದೆ. ವಿಶೇಷವೆಂದರೆ ಕಳೆದ ೬೧ ವರ್ಷಗಳಿಂದ ಈ ಸಹೋದರರು ಜೊತೆಯಾಗಿ ಕಚೇರಿಗಳನ್ನು ನಡೆಸಿಕೊಂಡು ಬಂದಿದ್ದಾರೆ. ೧೯೫೬ರಲ್ಲಿ ಮೈಸೂರಿನಲ್ಲಿ ಮೊದಲ ಕಚೇರಿ ಮಾಡುವಾಗ ಡಾ. ತಾರಾನಾಥನ್ ಅವರ ವಯಸ್ಸು ಕೇವಲ ಹತ್ತು ವರ್ಷ. ಅವರಿಗಿಂತ ತ್ಯಾಗರಾಜನ್ ಮೂರು ವರ್ಷ ದೊಡ್ಡವರು.
ಉತ್ಥಾನ ಪ್ರತಿಷ್ಠಿತ ಪ್ರಶಸ್ತಿಗಳು ಬಂದ ಹಿನ್ನೆಲೆಯಲ್ಲಿ ’ಉತ್ಥಾನ’ದ ವತಿಯಿಂದ ಈ ಸಹೋದರರನ್ನು ಬೆಂಗಳೂರು ರಾಜಾಜಿನಗರ(ಫಸ್ಟ್ಬ್ಲಾಕ್)ದ ಅವರ ನಿವಾಸಗಳಲ್ಲಿ ಭೇಟಿಮಾಡಿದೆವು. ಪತ್ರಿಕೆಯ ಸಂಪಾದಕ ಕಾಕುಂಜೆ ಕೇಶವ ಭಟ್ಟ ಮತ್ತು ಎಚ್. ಮಂಜುನಾಥ ಭಟ್ ಅವರು ನಡೆಸಿದ ಮಾತುಕತೆಯ ಆಯ್ದ ಎರಡು ಭಾಗಗಳು ಈ ಲೇಖನದಲ್ಲಿವೆ. ಮೊದಲ ಭಾಗವಾಗಿ ಡಾ. ಆರ್.ಎನ್. ತಾರಾನಾಥನ್ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ. ಆರ್.ಎನ್. ತ್ಯಾಗರಾಜನ್ ಅವರೊಡನೆ ನಡೆಸಿದ ಸಂದರ್ಶನ ಮುಂದಿನ ಸಂಚಿಕೆಯಲ್ಲಿ ಪ್ರಕಟವಾಗಲಿದೆ.
’ನಮ್ಮದು ಅಪರೂಪದ, ಹೆಚ್ಚು ಕೇಳದ ಕೃತಿಗಳ ಗಾಯನ’
ಪ್ರ: ತಮ್ಮ ಕುಟುಂಬದ ಹಿನ್ನೆಲೆಯನ್ನು ಹೇಳಿ; ರುದ್ರಪಟ್ಣದವರು ಸಂಗೀತಕ್ಷೇತ್ರದಲ್ಲಿ ಹಲವರು ಇದ್ದಾರಲ್ಲವೆ?
ಡಾ. ತಾರಾನಾಥನ್: ನಮ್ಮ ಕುಟುಂಬದ ಹಿನ್ನೆಲೆ ತುಂಬ ದೊಡ್ಡದಿದೆ. ನಿಜವೆಂದರೆ ರುದ್ರಪಟ್ಣದವರು ವೇದಾಧ್ಯಯನ, ಸಂಗೀತ, ಕೃಷಿ ಇದಕ್ಕೆಲ್ಲ ತುಂಬ ಹೆಸರಾಗಿದ್ದಾರೆ; ಸಂಕೇತಿ ಬ್ರಾಹ್ಮಣರು. ಬಹಳ? ಸಂಗೀತ ವಿದ್ವಾಂಸರು ರುದ್ರಪಟ್ಣದವರು. ಕೆಲವರ ಹೆಸರು ಹೇಳುವುದಾದರೆ, ನಮ್ಮ ತಾತ ಆರ್.ಕೆ. ಕೃಷ್ಣಶಾಸ್ತ್ರಿಗಳು ಅಂತ. ಅವರ ತಮ್ಮ ಶ್ಯಾಮಾಶಾಸ್ತ್ರಿಗಳು. ಅವರಿಬ್ಬರು ’ಕಲ್ಲಿಕೋಟೆ ಬ್ರದರ್ಸ್’ ಎನ್ನುವ ಹೆಸರಿನಲ್ಲಿ ಹಾಡುತ್ತಿದ್ದರಂತೆ. ಕಲ್ಲಿಕೋಟೆ ಏಕೆಂದರೆ ನಾವು ಕಲ್ಲಿಕೋಟೆಯಿಂದ ಬಂದವರು. ಕಲ್ಲಿಕೋಟೆಯ ಶೆಂಕೋಟೈನಿಂದ ಬಂದಿರುವ ಕಾರಣ ನಮ್ಮ ಸಮುದಾಯಕ್ಕೆ ಸಂಕೇತಿಗಳು ಎನ್ನುವ ಹೆಸರು ಬಂತೆಂದು ಹೇಳುತ್ತಾರೆ. ಇನ್ನೊಂದು, ಹಿಂದೆ ನಮ್ಮ ಭಾಷೆ ಸಾಂಕೇತಿಕವಾಗಿತ್ತು: ಸಂಜ್ಞೆ (action) ಮಾಡಿ ತೋರಿಸುವುದು, ಸಂಕೇತರೂಪದಲ್ಲಿ ತಿಳಿಸುವುದು – ಅದರಿಂದಾಗಿ ’ಸಂಕೇತಿ’ ಎಂದು ಬಂತು ಎನ್ನುತ್ತಾರೆ.
ನಮ್ಮ ತಾತ ಕೃಷ್ಣಶಾಸ್ತ್ರಿಗಳು ಹರಿಕಥೆ ಮಾಡುತ್ತಿದ್ದರು. ಸಂಸ್ಕೃತ ಮತ್ತು ಸಂಗೀತದ ವಿದ್ವಾಂಸರು. ಅವರಿಗೆ ನಾಲ್ವರು ಮಕ್ಕಳು. ಮೊದಲಿನವರು ಆರ್.ಕೆ. ವೆಂಕಟರಾಮಶಾಸ್ತ್ರಿ; ಚೌಡಯ್ಯನವರ ಶಿಷ್ಯ. ವಯೊಲಿನ್ ವಾದಕರಾಗಿ ಮದ್ರಾಸಿನಲ್ಲಿ (ಚೆನ್ನೈ) ಪ್ರಸಿದ್ಧರಾಗಿದ್ದರು. ಎರಡನೆಯವರು ನಮ್ಮ ತಂದೆ ಆರ್.ಕೆ. ನಾರಾಯಣಸ್ವಾಮಿ ಅವರು; ಮುಸುರಿ ಸುಬ್ರಹ್ಮಣ್ಯ ಅಯ್ಯರ್ ಅವರ ಶಿಷ್ಯರು. ಬಳಿಕ ಆರ್.ಕೆ. ರಾಮನಾಥನ್; ಇಂಗ್ಲಿಷ್ ಪ್ರೊಫೆಸರ್ ಆಗಿದ್ದರು; ಸಂಗೀತವನ್ನೂ ಹಾಡುತ್ತಿದ್ದರು. ಕೊನೆಯವರು ಪ್ರಸಿದ್ಧ ಗಾಯಕರಾದ ಆರ್. ಕೆ. ಶ್ರೀಕಂಠನ್. ನಾಲ್ವರೂ ಸಂಗೀತಗಾರರು. ಮೊದಲಿನವರು ವಯೊಲಿನ್ ವಾದಕರಾದರೆ ಉಳಿದವರು ಗಾಯಕರು.
ಇದು ಬಿಟ್ಟರೆ ಆರ್.ಎಸ್. ಕೇಶವಮೂರ್ತಿ ದೊಡ್ಡ ವೈಣಿಕ ವಿದ್ವಾಂಸರು. ಅವರಿಗೆ ಹತ್ತೋ ಹನ್ನೊಂದೋ ಗಂಡುಮಕ್ಕಳು. ಆರ್.ಕೆ. ಸೂರ್ಯನಾರಾಯಣ, ಆರ್. ಕೆ. ಶ್ರೀನಿವಾಸಮೂರ್ತಿ, ಆರ್.ಕೆ. ರಾಘವನ್, ಆರ್. ಕೆ. ಪ್ರಕಾಶ್, ಆರ್.ಕೆ. ಪದ್ಮನಾಭ ಅವರೆಲ್ಲ ಶಾಸ್ತ್ರೀಯ ಸಂಗೀತ ಕ್ಷೇತ್ರದವರು. ನಮಗೆ ಸಂಬಂಧ ಅಂತಲ್ಲ; ನಮ್ಮ ಸಮುದಾಯ ಮತ್ತು ರುದ್ರಪಟ್ಣದವರು. ಇನ್ನು ಆರ್. ಆರ್. ಕೇಶವಮೂರ್ತಿ ಪ್ರಸಿದ್ಧ ವಯೊಲಿನ್ ವಾದಕರು; ಬೆಂಗಳೂರಿನಲ್ಲೇ ಇದ್ದರು. ವೀಣಾವಾದಕ ಆರ್. ಎನ್. ದೊರೆಸ್ವಾಮಿ ಕೂಡ ರುದ್ರಪಟ್ಣದವರು. ಆರ್.ಕೆ. ಪದ್ಮನಾಭ ಕೂಡ ರುದ್ರಪಟ್ಣದವರು. ಅವರ ತಂದೆ ನಮ್ಮ ಕುಲಪುರೋಹಿತರಾಗಿದ್ದರು. ಅವರು ಸಂಗೀತಕ್ಕೆ ಬಂದದ್ದು ಈಚೆಗೆ, ಕಳೆದ ಇಪ್ಪತ್ತು ವರ್ಷದಲ್ಲಿ.
ನಮ್ಮ ತಂದೆ ಮೈಸೂರಿನ ಆರ್ಕಿಯಾಲಜಿ ಡಿಪಾರ್ಟ್ಮೆಂಟಿನಲ್ಲಿ ಸ್ಟೆನೋ ಮತ್ತು ಸೂಪರಿಂಟೆಂಡೆಂಟ್ ಆಗಿದ್ದರು. ಜೊತೆಗೆ ಸಂಗೀತವನ್ನೂ ಇಟ್ಟುಕೊಂಡಿದ್ದರು. ಮೈಸೂರಿನಲ್ಲೇ ಇದ್ದರು. ನಾವು ಹುಟ್ಟಿದ್ದು ಹಾಸನದಲ್ಲಿ. ಬೆಳೆದದ್ದು, ಶಿಕ್ಷಣ, ಕೆಲಸ-ಕಾರ್ಯ, ಮದುವೆ ಎಲ್ಲವೂ ಮೈಸೂರಿನಲ್ಲಾಯಿತು. ಅಣ್ಣನವರಿಗೆ ಮತ್ತೆ ವರ್ಗವಾಗಿ ಬೇರೆ ಕಡೆಗೆ ಹೋಗಬೇಕಾಯಿತು. ನನಗೆ ನಿವೃತ್ತಿ (೨೦೦೬) ಆದ ಮೇಲೆ ಮಗಳಿಗೆ ಇಲ್ಲಿಗೆ ಕೊಟ್ಟು ಮದುವೆ ಆಯಿತು. ಮಗನಿಗೆ ಇಲ್ಲೇ ಕೆಲಸವಾಯಿತು. ಆದ್ದರಿಂದ ೨೦೧೦ರಲ್ಲಿ ಮೈಸೂರು ಬಿಟ್ಟು ಬೆಂಗಳೂರಿಗೆ ಬಂದೆ.
ನಾನು ಮೈಸೂರಿನಲ್ಲಿರುವ ಕೇಂದ್ರಸರ್ಕಾರದ ದೊಡ್ಡ ಸಂಸ್ಥೆ ಸಿಎಫ್ಟಿಆರ್ಐ(ಸೆಂಟ್ರಲ್ ಫುಡ್ ಟೆಕ್ನಾಲಜಿ ರಿಸರ್ಚ್ ಇನ್ಸ್ಟಿಟ್ಯೂಟ್)ಯಲ್ಲಿ ಉದ್ಯೋಗದಲ್ಲಿದ್ದೆ. ಹೆಚ್ಚುವರಿ ನಿರ್ದೇಶಕ(ಅಡಿಶನಲ್ ಡೈರೆಕ್ಟರ್)ನಾಗಿ ನಿವೃತ್ತನಾದೆ. ನನ್ನ ವಿಷಯ ಸಾವಯವ ರಸಾಯನಶಾಸ್ತ್ರ (ಆರ್ಗ್ಯಾನಿಕ್ ಕೆಮಿಸ್ಟ್ರಿ); ಎಂಎಸ್ಸಿ, ಪಿಎಚ್ಡಿ. ನಾಲ್ಕೈದು ಸಲ ಜರ್ಮನಿಗೆ ಹೋಗಿದ್ದೆ. ಎರಡು ಸಲ ಫೆಲೋಶಿಪ್ನಲ್ಲಿ ಹೋದದ್ದು. ನನಗೆ ೧೯೮೧-೮೨ರಲ್ಲಿ ಆಯ್ಕೆಯಾಯಿತು. ಎರಡು ವರ್ಷ ಅಲ್ಲಿದ್ದು ಉನ್ನತವ್ಯಾಸಂಗ ಮಾಡಿಕೊಂಡು ಬಂದೆ. ಮತ್ತೆ ಎರಡು ಸಲ ವಿಸಿಟಿಂಗ್ ಪ್ರೊಫೆಸರಾಗಿ ಮತ್ತು ವಿಜ್ಞಾನಿಯಾಗಿ ಹೋಗಿಬಂದೆ.
ಮಕ್ಕಳು ಇಲ್ಲಿಗೆ ಬಂದ ಕಾರಣ ಮೈಸೂರಿನ ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು ಬಂದೆವು. ಜೊತೆಗೆ ಅಣ್ಣಾವರೂ ಇಲ್ಲೇ ಸಮೀಪ ಇರುವುದರಿಂದ ಹಾಡುಗಾರಿಕೆ, ಪ್ರಾಕ್ಟೀಸ್ ಮಾಡುವುದಕ್ಕೆಲ್ಲ ಅನುಕೂಲವಾಗುತ್ತದೆ.
ಪ್ರ: ಬೆಂಗಳೂರಿನಲ್ಲಿ ಮತ್ತು ರಾಜ್ಯದಲ್ಲಿ ಕರ್ನಾಟಕ (ಶಾಸ್ತ್ರೀಯ) ಸಂಗೀತದ ವಾತಾವರಣ ಹೇಗಿದೆ?
ಡಾ| ತಾರಾನಾಥನ್: ಕರ್ನಾಟಕ ಸಂಗೀತಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸುಮಾರು ೪೦ ಸಂಸ್ಥೆಗಳಿವೆ. ಇದರ ಮಧ್ಯೆ ಸಂಗೀತಗಾರರಲ್ಲೇ ಪಾಲಿಟಿಕ್ಸ್ ಇದೆ. ಅದಂತೂ ಅನ್ಯಾಯದ ವಿಚಾರ. ನಿಮ್ಮನ್ನು ಕಂಡರೆ ನನಗೆ ಆಗುವುದಿಲ್ಲ; ನನ್ನನ್ನು ಕಂಡರೆ ನಿಮಗೆ ಆಗುವುದಿಲ್ಲ; ಇನ್ನೊಬ್ಬರಿಗೆ ಆಗುವುದಿಲ್ಲ; ಅವರಿಗೇಕೆ ಚಾನ್ಸ್ ಕೊಡಬೇಕು? ನನಗೆ ಕೊಡಿ, ನನ್ನ ಶಿಷ್ಯನಿಗೆ ಕೊಡಿ ಎನ್ನುತ್ತಾರೆ. ಕನ್ನಡ-ಸಂಸ್ಕೃತಿ ಇಲಾಖೆ ಕಛೇರಿಗೆ ಹೋಗಿ, ’ನನ್ನದೊಂದು ಸಂಸ್ಥೆ ಇದೆ. ಈ ಕಾರ್ಯಕ್ರಮ ಮಾಡುತ್ತೇನೆ; ಈ ಉತ್ಸವ ಮಾಡುತ್ತೇನೆ. ೧೦ ಲಕ್ಷ ರೂ. ಮಂಜೂರು ಮಾಡಿ’ ಎನ್ನುವುದು. ಎಲ್ಲವೂ ಸುಳ್ಳು. ಯಾರಾದರೂ ಹತ್ತು ಜನರನ್ನು ಕೂಡಿಸಿ ೧೦ ಲಕ್ಷ ರೂ. ತೆಗೆದುಕೊಂಡುಬಿಡುವುದು. ಈ ರೀತಿಯಲ್ಲಿ ಇದು ತುಂಬ ಭ್ರಷ್ಟ (ಹೈಲೀ ಕರಪ್ಟ್) ಆಗಿದೆ. ಈ ವಿಷಯದಲ್ಲಿ ನಾನು ತುಂಬ ಬೋಲ್ಡಾಗಿ ಹೇಳುತ್ತೇನೆ. ನಾನು ಅಥವಾ ನನ್ನ ಅಣ್ಣ ಇಂತಹ ಒಂದಕ್ಕೂ ಎಂಟರ್ ಆಗಿಲ್ಲ. ಯಾವ ಪಾಲಿಟಿಕ್ಸ್ಗೂ ಹೋಗಿಲ್ಲ. ಮರ್ಯಾದೆಯಾಗಿ ಕಚೇರಿಗೆ ಕರೆದರೆ ನಮಗೆ ಅವಕಾಶ, ಸಮಯ ಇದ್ದರೆ ಒಪ್ಪಿಕೊಳ್ಳುತ್ತೇವೆ. ಕಚೇರಿಗೆ ಜಾಸ್ತಿ ಡಿಮಾಂಡ್ ಮಾಡುವುದಿಲ್ಲ. ಮರ್ಯಾದೆಯಾಗಿ ಕೊಟ್ಟುದನ್ನು ತೆಗೆದುಕೊಳ್ಳುತ್ತಿದ್ದೆವು. ಈಗ ನಮ್ಮ ಅನುಭವದಿಂದಾಗಿ, ಕೆಲವರು ಮೋಸ ಮಾಡುತ್ತಾರೆ ಎಂಬುದಕ್ಕಾಗಿ ಸ್ವಲ್ಪ ಡಿಮಾಂಡ್ ಮಾಡುತ್ತಿದ್ದೇವೆ. ಕಚೇರಿಗಾಗಿ ಯಾರನ್ನೂ ಕೇಳಲು ಹೋಗುವುದಿಲ್ಲ. ಪ್ರಶಸ್ತಿ ಕೊಡಿ ಎಂದು ಕೇಳುವವರೂ ಅಲ್ಲ. ತಾನಾಗಿ ಬಂದರೆ ಸಂತೋಷ. ನಾವು ಹಾಡದಿದ್ದರೆ ಏನಾಗುತ್ತದೆ? ನಮಗೆ ಮನೆಯಲ್ಲೇ ದೇವರಿದ್ದಾನೆ. ಇಲ್ಲೇ ’ರಾಮಭಕ್ತಿ ಸಾಮ್ರಾಜ್ಯ’ವನ್ನು ಹಾಡುತ್ತೇವೆ; ಪ್ರಾಕ್ಟೀಸ್ ಮಾಡುತ್ತೇವೆ; ಸಾಕು ಅಷ್ಟೆ.ಪ್ರಸಿದ್ಧ ರಾಮೋತ್ಸವ ಸರಣಿಗಳಲ್ಲೂ ಒಂದಷ್ಟು ಪಾಲಿಟಿಕ್ಸ್ ನಡೆಯುತ್ತಿದೆ. ಮದ್ರಾಸಿನಿಂದ ಕರೆಸಿದ ಸಂಗೀತಗಾರರಿಗೆ ಅವರು ಕೇಳಿದಷ್ಟು ಕೊಡುತ್ತಾರೆ; ಮತ್ತೆ ಆತಿಥ್ಯ ಕೂಡ ನೀಡುತ್ತಾರೆ. ರೈಲುನಿಲ್ದಾಣದಿಂದ ವಾಹನ ಕಳಿಸಿ ಕರೆಸಿಕೊಳ್ಳುತ್ತಾರೆ. ಸ್ಥಳೀಯರಿಗೆ ವಾಹನ ಕೂಡ ಕಳಿಸುವುದಿಲ್ಲ. ಅಲ್ಲಿ ಹೋದರೆ ’ಬನ್ನಿ’ ಅನ್ನುವವರೂ ಇರುವುದಿಲ್ಲ. ಪಾವತಿಯಲ್ಲೂ ಅಷ್ಟೆ; ಅವರು ಕೊಟ್ಟದ್ದು ನಾವು ತೆಗೆದುಕೊಳ್ಳಬೇಕೆಂಬ ಧೋರಣೆ. ಆಕ್ಷೇಪಿಸಿದರೆ ಮತ್ತೆ ಕರೆಯುವುದೇ ಇಲ್ಲ. ಅದೇ ಮದ್ರಾಸಿನಿಂದ ಕರೆಸಿದವರಿಗೆ, ಕಿರಿಯ ಕಲಾವಿದರಾದರೂ, ಅವರು ಕೇಳಿದಷ್ಟು ಕೊಡುತ್ತಾರೆ. ನಾವದನ್ನು ಇ?ಪಡುವುದಿಲ್ಲ. ನಮಗೆ ಅಂತಹ ಕಚೇರಿಯೇ ಬೇಡ. ನಮ್ಮ ಸಂಗೀತಕ್ಕೆ, ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಕೊಡದಿದ್ದ ಮೇಲೆ ನಮಗೇಕೆ ಅಂತಹ ಕಚೇರಿ, ಸಂಗೀತ?
ಎಲ್ಲ ಕಡೆಯೂ ಅದೇ ಕಥೆ. ಮದ್ರಾಸಿನಿಂದ ಬಂದವರು ಏನು ಹಾಡಿದರೂ ಅದು ಸಂಗೀತ! ನಮ್ಮಲ್ಲಿ ಒಳ್ಳೊಳ್ಳೆಯ ಕಲಾವಿದರು ಬೇಕಾದ? ಜನ ಇದ್ದಾರೆ. ಆದರೆ ಕಚೇರಿಗೂ ಅವರೇ (ಮದ್ರಾಸಿನವರು) ಬೇಕು; ಪ್ರಶಸ್ತಿ ನೀಡುವುದೂ ಅವರಿಗೇ.
ಆದರೆ ಅದೇ ವೇಳೆ ಮದ್ರಾಸಿನವರು ಇಲ್ಲಿನವರನ್ನು ಅ?ನೂ ಕರೆಸುವುದಿಲ್ಲ; ಈ ರೀತಿ ಕೇಳಿದ? ಹಣ ಕೊಡುವುದೂ ಇಲ್ಲ. ವಡಕತ್ತೂರು ಮಠದಲ್ಲಿ ಈಗ (ಫೆಬ್ರುವರಿ ಕೊನೆಗೆ) ಏಳೆಂಟು ದಿನ ಕಚೇರಿ ನಡೆಯುತ್ತಿವೆ. ಎಲ್ಲ ಕಲಾವಿದರೂ ಚೆನ್ನೈಯವರು. ಕರ್ನಾಟಕದ ಒಬ್ಬ ಕಲಾವಿದನೂ ಇಲ್ಲ. ಪ್ರತಿವ?ವೂ ಹೀಗೆ ಆಗುತ್ತಿದೆ; ಸರ್ಕಾರ ಅಥವಾ ಮಾಧ್ಯಮದವರು ಇದನ್ನು ಗಮನಿಸಬೇಕು.ಪ್ರ: ಇದಕ್ಕೆ ಕನ್ನಡಿಗರ ಕೀಳರಿಮೆ (ಇನ್ಫೀರಿಯಾರಿಟಿ) ಕಾರಣ ಇರಬಹುದೆ?
ಉ: ಸರ್ಕಾರ ಕೂಡ ಹಾಗೆ ಮಾಡುತ್ತದೆ. ಹಂಪಿ ಉತ್ಸವ, ಬೆಂಗಳೂರು ಉತ್ಸವ, ಮೈಸೂರು ಅರಮನೆ ಕಾರ್ಯಕ್ರಮ ಎಲ್ಲದಕ್ಕೂ ಅವರನ್ನೇ (ಚೆನ್ನೈಯವರನ್ನೇ) ಕರೆಸುತ್ತಾರೆ. ಹೆಸರಿಗೆ ರಾಜ್ಯದ ಒಬ್ಬರಿಗೋ ಇಬ್ಬರಿಗೋ ಕೊಟ್ಟಹಾಗೆ ಮಾಡುತ್ತಾರೆ. ಮತ್ತೆ ಆ ದುಡ್ಡಿನಲ್ಲಿ ವ್ಯವಹಾರ(ಡೀಲ್)ಗಳು. ಕಮಿ?ನ್ ಏಜೆಂಟರು ಇರುತ್ತಾರೆ. ಒಂದು ಲಕ್ಷ ಅಂತ ಹೇಳಿದರೆ ಅವನಿಗೆ ೫೦ ಸಾವಿರ; ಬಾಕಿ ಉಳಿದದ್ದು ಇವರಿಗೆ. ಹೀಗೆಲ್ಲ ಆಗುತ್ತಿದೆ; ಇದು ತುಂಬ ಶೋಚನೀಯ. ನಮ್ಮ ಬಹಳ? ಸಂಗೀತಗಾರರು ಗುರುತಿಸುವಿಕೆ ಇಲ್ಲದೆ (ರೆಕಗ್ನೈಸ್ ಆಗದೆ) ಹಾಗೇ ಮೂಲೆಗುಂಪಾಗುತ್ತಿದ್ದಾರೆ. ಕೆಲವರು ಅರ್ಧಂಬರ್ಧ ಆಗಿದ್ದಾರೆ. ಕೆಲವರು ಯಾವುದೇ ಬಂಡವಾಳ ಇಲ್ಲದಿದ್ದರೂ ದೊಡ್ಡ ವಿದ್ವಾಂಸರೆನ್ನುವ ಹೆಸರು ಪಡೆದು ಕೂತಿದ್ದಾರೆ.
ಕನ್ನಡಿಗ ಸಂಘಟಕರದ್ದಂತೂ ತುಂಬ ತಪ್ಪು. ತಮ್ಮದು ದೊಡ್ಡ ಸಭಾ ಎಂದು ಹಣ ಎಲ್ಲ ಸಂಗ್ರಹಿಸಿ ಸರ್ಕಾರದ್ದೂ ತೆಗೆದುಕೊಂಡು ಲಕ್ಷಾಂತರ, ಕೋಟ್ಯಂತರ ಮಾಡುತ್ತಾರೆ. ಅದು ಯಾರ್ಯಾರಿಗೋ ಹೋಗುತ್ತದೆ. ಎಷ್ಟು ಸಲ ಸಂಸ್ಥೆಯೇ ಇರುವುದಿಲ್ಲ. ಏನೋ ಛೋಟಾಮೋಟಾ ಇರುತ್ತದೆ. ಸರ್ಕಾರದ ಅನುದಾನ ಅವರಿಗೇ ಹೋಗುತ್ತಿರುತ್ತದೆ. ರಾಜ್ಯಮಟ್ಟದ ಪ್ರಶಸ್ತಿ ಕೂಡ ಹಾಗೇನೇ; ಅಲ್ಲಿ ’ಅಂಡರ್ಸ್ಟ್ಯಾಂಡಿಂಗ್’ ಇರುತ್ತದೆ. ಪ್ರಶಸ್ತಿ ಹಣ ಒಂದು ಲಕ್ಷ ಇದೆ; ನನಗೆ ಇಷ್ಟು ಕೊಟ್ಟುಬಿಡು ಎನ್ನುವ ಏಜೆಂಟರಿರುತ್ತಾರೆ. ಇದರಲ್ಲಿಯೂ ತುಂಬ ಅನ್ಯಾಯವಾಗುತ್ತಿದೆ. ಇದನ್ನೆಲ್ಲ ತಡೆಯಲೇಬೇಕು.ಪ್ರ: ದೂರದರ್ಶನದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಅವಕಾಶ ಹೇಗಿದೆ?
ಉ: ಅಲ್ಲಿ ಕಮ್ಮಿ ಇದೆ. ಅದೊಂದು ಖೇದದ ವಿ?ಯ. ಸಂಗೀತಕ್ಕೆ ಜಾಸ್ತಿ ಪ್ರಾಧಾನ್ಯ ಇಲ್ಲ. ಬೆಂಗಳೂರು ದೂರದರ್ಶನದಲ್ಲಂತೂ ಮಾತೆತ್ತಿದರೆ ’ಮಧುರ ಮಧುರವೀ ಮಂಜುಳಗಾನ’ದಂತಹವೇ ಬರುತ್ತಿರುತ್ತವೆ. ಶನಿವಾರ ಬೆಳಗ್ಗೆ ಒಂದು ಚಂಕ್ ಇರುತ್ತದೆ, ಅಷ್ಟೆ. ಅದು ಬಿಟ್ಟರೆ ಬೇರೆ ಇಲ್ಲ. ಅವರು ತುಂಬ ಮಾಡಬಹುದು. ಕರ್ನಾಟಕದಲ್ಲಿ ಒಳ್ಳೆಯ ಕಲಾವಿದರು ಬಹಳಷ್ಟು ಇದ್ದಾರೆ.
ಪ್ರ: ಅಣ್ಣ ಗಣಿತ ಪ್ರಾಧ್ಯಾಪಕರಾಗಿದ್ದರಲ್ಲವೇ?
ಉ: ಹೌದು. ಮೈಸೂರಿನಲ್ಲಿ ಗಣಿತ ಎಂಎಸ್ಸಿ ಮುಗಿಸಿದ ಅವರು ಏಳು ವರ್ಷ ಪಾಂಡವಪುರದಲ್ಲಿ ಲೆಕ್ಚರರ್ ಆಗಿದ್ದರು. ಅನಂತರ ನಿಲಯ ಕಲಾವಿದರಾಗಿ ಮೈಸೂರು ಆಕಾಶವಾಣಿಗೆ ಸೇರಿದರು. ಮತ್ತೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿ ಕಾರ್ಯಕ್ರಮ ಅಧಿಕಾರಿ (ಪ್ರೋಗ್ರಾಂ ಎಕ್ಸಿಕ್ಯೂಟಿವ್) ಎಂಬುದಾಗಿ ಆಡಳಿತದ ಕಡೆಗೆ ಬಂದರು. ಆಕಾಶವಾಣಿ ದೂರದರ್ಶನಗಳಲ್ಲಿ ಸೇವೆ ಸಲ್ಲಿಸಿ, ಬೆಂಗಳೂರು ದೂರದರ್ಶನದ ಉಪನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್) ಆಗಿ ನಿವೃತ್ತರಾದರು (೨೦೦೩). ಎಂಟು ವರ್ಷ ಚೆನ್ನೈನಲ್ಲಿ ದೂರದರ್ಶನ ಡಿ.ಡಿ. ಆಗಿದ್ದರು. ಅವರಿಗೆ ಸಂಗೀತದ ಮೇಲೆ ಒಲವು ಜಾಸ್ತಿ ಇದ್ದ ಕಾರಣ ಶಿಕ್ಷಣಕ್ಷೇತ್ರ ಬಿಟ್ಟು ಆಕಾಶವಾಣಿಗೆ ಸೇರಿಕೊಂಡರು. ನನಗೆ ಕೆಮಿಸ್ಟ್ರಿ ಮತ್ತು ಕುಟುಂಬದಿಂದ ಬಂದ ಸಂಗೀತವಿತ್ತು.
ನಾವು ಒಡಹುಟ್ಟು ಮೂವರು. ತಂಗಿ ಆರ್.ಎನ್. ಶ್ರೀಲತಾ ಮೈಸೂರಿನಲ್ಲಿದ್ದಾಳೆ; ಹಾಡುತ್ತಾಳೆ. ನಮಗೆ ಮೂವರಿಗೂ ತಂದೆಯೇ ಗುರುಗಳು; ಮತ್ತು ದೊಡ್ಡಪ್ಪ ವೆಂಕಟರಾಮಶಾಸ್ತ್ರಿಗಳು ಮದ್ರಾಸಿನಲ್ಲಿ ಇದ್ದ ಕಾರಣ ನಾವು ಆಗಾಗ ಅಲ್ಲಿಗೆ ಹೋಗುತ್ತಿದ್ದೆವು. ಅವರೂ ಮೈಸೂರಿಗೆ ಬರುತ್ತಿದ್ದರು. ಅವರಿಗೆ ಮದ್ರಾಸಿನಲ್ಲಿ ಎಲ್ಲರ ಸಂಪರ್ಕವಿತ್ತು. ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಚೆಂಬೈ ವೈದ್ಯನಾಥ ಭಾಗವತರ್, ಜಿ.ಎನ್. ಬಾಲಸುಬ್ರಹ್ಮಣ್ಯಮ್, ಡಿ.ಕೆ. ಪಟ್ಟಮ್ಮಾಳ್, ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆಲ್ಲ ಪಕ್ಕವಾದ್ಯ ನುಡಿಸಿದ್ದರು. ಅವರಿಗೆ ಸಾಕ? ಪರಿಚಯಗಳಿದ್ದು ತುಂಬ ಕೀರ್ತನೆಗಳ ಸಂಗ್ರಹವಾಗುತ್ತಿತ್ತು. ಅದನ್ನು ನಮಗೆ ಹೇಳಿಕೊಡುತ್ತಿದ್ದರು. ಹೀಗಾಗಿ ನಮ್ಮ ಬಳಿ ಸಾಕ? ದೊಡ್ಡ ರೆಪರ್ಟರಿ ಸೇರಿತು. ನಮಗೆ ತಂದೆ ಮೊದಲ ಗುರುಗಳಾಗಿದ್ದರೆ ದೊಡ್ಡಪ್ಪ ಗುರುಸಮಾನರು. ಅವರ ಮಕ್ಕಳು ಸಂಗೀತಕ್ಕೆ ಬರಲಿಲ್ಲ. ಮೊಮ್ಮಗ, ಆರ್.ವಿ. ಕೃಷ್ಣಮೂರ್ತಿ; ಅವರ ಮಗ ಆರ್.ಕೆ. ಶ್ರೀರಾಂಕುಮಾರ್ ಹೆಸರಾಂತ ವಯೊಲಿನ್ವಾದಕನಾಗಿದ್ದಾನೆ. ಟಿ.ಎಂ. ಕೃಷ್ಣ, ಸಂಜಯ ಸುಬ್ರಹ್ಮಣ್ಯಮ್, ಉಣ್ಣಿಕೃಷ್ಣನ್ ಅವರಿಗೆಲ್ಲ ನುಡಿಸುತ್ತಿರುತ್ತಾನೆ.
ಪ್ರ: ನಿಮ್ಮ ಸಂಗೀತಪಾಠ ಯಾವ ರೀತಿ ನಡೆಯಿತು?
ಉ: ತಂದೆ ಕಲಿಸುತ್ತಿದ್ದರು. ನಾವು ಮನೆಯಲ್ಲಿ ಕಲಿತೆವು. ತಂದೆ ಕೆಲಸ ಮುಗಿಸಿ ಸಾಯಂಕಾಲ ೫.೩೦ರ ಹೊತ್ತಿಗೆ ಮನೆಗೆ ಬರುತ್ತಿದ್ದರು. ಕಾಫಿ ಕುಡಿದು ಸಂಗೀತದ ಮನೆಪಾಠಕ್ಕೆ ಹೋಗುತ್ತಿದ್ದರು. ಆಗ ಈಗಿನಂತೆ ಗುರುಗಳ ಮನೆಗೆ ಶಿ?ರು ಬರುತ್ತಿರಲಿಲ್ಲ. ಅವರ ಮನೆಗೇ ಹೋಗಬೇಕು. ಅಲ್ಲಿಂದ ೮, ೮-೩೦ರ ಹೊತ್ತಿಗೆ ಮನೆಗೆ ಬರುತ್ತಿದ್ದರು. ಸಂಧ್ಯಾವಂದನೆ ಮುಗಿಸಿ ಸುಮಾರು ೯ ಗಂಟೆಗೆ ನಮ್ಮನ್ನು ಪಾಠಕ್ಕೆ ಕೂರಿಸಿಕೊಳ್ಳುತ್ತಿದ್ದರು. ಪಾಠ ರಾತ್ರಿ ೧೧, ೧೨ ಗಂಟೆಯ ತನಕವೂ ಮುಂದುವರಿಯುವುದಿತ್ತು. ಸುಮಾರು ಬೈಗುಳ, ಹೊಡೆತ ಎಲ್ಲ ಆಗುತ್ತಿತ್ತು. ನಮ್ಮ ತಾಯಿ ಪಾಠ ಮುಗಿಯುವುದನ್ನು ಕಾಯುತ್ತಾ ಕೂರುತ್ತಿದ್ದರು. ಏಕೆಂದರೆ ಒಟ್ಟಿಗೆ ಊಟ ಮಾಡಬೇಕಲ್ಲ; ಅದು ಆಗಿನ ಪದ್ಧತಿ. ಎ? ಸಲ ಬೆಳಗ್ಗೆ ಮಾಡಿದ ಅಡುಗೆ ಕೆಟ್ಟುಹೋಗಿ ಬರೇ ಮಜ್ಜಿಗೆ ಊಟ ಮಾಡುವುದಿತ್ತು. ಪ್ರತಿದಿನ ಸುಮಾರು ಎರಡು ತಾಸು ಹೇಳಿಕೊಡುತ್ತಿದ್ದರು.
ಪ್ರ: (ಮೂರೂಕಾಲು ವರ್ಷ ವ್ಯತ್ಯಾಸವಿದ್ದರೂ) ಪಾಠ ಒಟ್ಟಿಗೆ ಶುರುವಾಯಿತಾ?
ಉ: ಹೌದು. ಅಣ್ಣನವರಿಗೆ ಮೊದಲು ಶುರು ಮಾಡಿರಲಿಲ್ಲ. ಅದು ಹೇಗಾಯಿತೆಂದರೆ ಮೊದಲು ನಮ್ಮ ಮೈಸೂರು ಮನೆಯಲ್ಲಿ ದೊಡ್ಡಪ್ಪ, ಚಿಕ್ಕಪ್ಪ ಎಲ್ಲ ಒಟ್ಟಿಗೇ ಇದ್ದೆವು. ಆಗ ಮೈಸೂರಿನಲ್ಲಿ ರಾಮಮಂದಿರದಲ್ಲಿ ಬಿಡಾರಂ ಕೃಷ್ಣಪ್ಪನವರ ದೊಡ್ಡದೊಡ್ಡ ಕಚೇರಿಗಳು ನಡೆಯುತ್ತಿದ್ದವು. ಅದಕ್ಕೆ ಮದ್ರಾಸಿನಿಂದ ಬಂದ ಸಂಗೀತಗಾರರು ನಮ್ಮ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಮುಸುರಿ ಸುಬ್ರಹ್ಮಣ್ಯ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರೆಲ್ಲ ಬರುತ್ತಿದ್ದರು. ಅವರು ದೊಡ್ಡಪ್ಪನಲ್ಲಿ ಮಾತನಾಡುವುದು, ಚರ್ಚಿಸುವುದು, ಹಾಡುವುದು ಎಲ್ಲ ನಡೆಯುತ್ತಿತ್ತು. ಚಿಕ್ಕ ಹುಡುಗರಾಗಿದ್ದಾಗ ಅದು ನಮ್ಮ ಕಿವಿಗೆ ಬೀಳುತ್ತಿತ್ತು. ಬೇರೆಬೇರೆ ರೂಮುಗಳಲ್ಲಿ ತಂದೆ, ಚಿಕ್ಕಪ್ಪ ಪ್ರಾಕ್ಟೀಸ್ ಮಾಡುವುದು ಕೂಡ ಕಿವಿಗೆ ಬೀಳುತ್ತಿತ್ತು. ಹಾಗೇ ನಾವು ಸುಮಾರು ಸಂಗೀತ ಕಲಿತುಕೊಳ್ಳುತ್ತಿದ್ದೆವು. ನಮ್ಮ ಅಜ್ಜಿ (ತಾಯಿಯ ತಾಯಿ) ಇದನ್ನು ಗಮನಿಸಿ, ಇಬ್ಬರೂ ಒಟ್ಟಿಗೆ ಹಾಡಬಹುದಲ್ಲಾ; ಚೆನ್ನಾಗಿದೆಯಲ್ಲಾ; ಕಚೇರಿ ಮಾಡಬಹುದಲ್ಲಾ ಎಂದು ತಂದೆಗೆ ಗೊತ್ತಿಲ್ಲದೆಯೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದರು. ನಮ್ಮ ತಾಯಿಗೂ ಸಂಗೀತದ ಮೇಲೆ ಬಹಳ ಆಸಕ್ತಿ, ಮತ್ತು ನಾವು ಸಂಗೀತದಲ್ಲಿ ಮೇಲೆಬರಬೇಕೆನ್ನುವ ಆಸೆ ಇತ್ತು. ತಂದೆಗೆ ಕಲಿಸುವ ಆಸಕ್ತಿ ಇರಲಿಲ್ಲ. ಸಂಗೀತದಲ್ಲಿ ಬಿದ್ದುಹೋದರೆ ಜೀವನದಲ್ಲಿ ಬಹಳ ಕಷ್ಟ ಆಗುತ್ತದೆ. ಕೆಲಸವೂ ಸಿಗುವುದಿಲ್ಲ. ಅದಕ್ಕಾಗಿ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ಆನಂತರ ಬೇಕಾದರೆ ಸಂಗೀತ ಮಾಡಲಿ; ಸಂಗೀತವನ್ನು ನೆಚ್ಚಿಕೊಳ್ಳುವುದು ಬೇಡವೆಂದು ಅವರು ಹೇಳಿಕೊಟ್ಟಿರಲಿಲ್ಲ.
ಹೀಗೆ ಮೊದಲನೆಯದಾಗಿ ನಮ್ಮ ಅಜ್ಜಿಯವರು ಒಂಟಿಕೊಪ್ಪಲ್ನ ಭಾರತೀ ಸ್ತ್ರೀಸಮಾಜದಲ್ಲಿ ಸರಸ್ವತೀಪೂಜೆಯ ಕಚೇರಿಯನ್ನು ಗೊತ್ತುಮಾಡಿದರು. ನಮ್ಮ ತಂದೆಗೆ ಅದು ಗೊತ್ತು, ಗೊತ್ತಿಲ್ಲ ಆ ಥರ. ಕಚೇರಿ ಚೆನ್ನಾಗಿ ಆಯಿತು. ಒಳ್ಳೆಯ ಅಭಿಪ್ರಾಯ ಬಂತು. ಜನ ಹೊಗಳಿದರು. ಆ ಸುದ್ದಿಯೂ ತಂದೆಯವರಿಗೆ ಮುಟ್ಟಿತು. ಬೇರೆ ಸ್ಥಳೀಯರು ಕೂಡ ಮತ್ತೆ ಕಚೇರಿಗೆ ಕರೆದರು. ಅಲ್ಲೂ ಚೆನ್ನಾಗಿ ಹಾಡಿದೆವು. ತಾಯಿ(ಸಾವಿತ್ರಮ್ಮ)ಯವರಿಗೆ ತುಂಬ ಖುಷಿ ಆಯಿತು. ನಮಗೆ ಸಂಗೀತ ಹೇಳಿಕೊಡಬೇಕೆಂದು ತಂದೆಯವರಲ್ಲಿ ಕೇಳಿದರು; ಒತ್ತಾಯಿಸಿದರು; ಬೈಸಿಕೊಂಡರು. ಆದರೂ ಬಿಡದೆ ಒಪ್ಪಿಸಿದರು. ಮತ್ತೆ ನಮಗೆ ಪಾಠ ಶುರುವಾಯಿತು. ಸರಳೆವರಸೆ, ಜಂಟಿವರಸೆ ಏನೂ ಇಲ್ಲ. ನೇರವಾಗಿ ವರ್ಣ, ಕೃತಿಯಿಂದಲೇ ಶುರು. ಹೀಗೆ ನಮ್ಮದು ಕಚೇರಿ ಮಾಡಿದ ಅನಂತರವೇ ಪಾಠ ಶುರು ಆದದ್ದು! ತಂದೆ ಚೆನ್ನಾಗಿ ಹಾಡುತ್ತಿದ್ದರು. ಆದರೆ ಅವರಿಗೆ ಸಿಗಬೇಕಾದ ಪ್ರೋತ್ಸಾಹ, ಮನ್ನಣೆ ಸಿಗಲಿಲ್ಲ. ಅದೊಂದು ಬೇಜಾರಿತ್ತು. ಆದಕಾರಣ ತಮ್ಮ ಮಕ್ಕಳು ಆ ಥರ ಆಗಕೂಡದು, ನೆಮ್ಮದಿಯಾಗಿ ಜೀವನ ಮಾಡಬೇಕು ಎಂಬುದಕ್ಕಾಗಿ ಅವರು ನಮಗೆ ಸಂಗೀತ ಹೇಳಿಕೊಟ್ಟಿರಲಿಲ್ಲ.
ಕಲಿಯುತ್ತಿದ್ದಂತೆಯೇ ನಮಗೆ ಸಾಕ? ಕಚೇರಿಗಳು ಬರುತ್ತಿದ್ದವು. ಒಳ್ಳೆಯ ಹೆಸರು ಬಂತು. ಸುಮಾರು ಸ್ಪರ್ಧೆಗಳಲ್ಲಿ ಬಹುಮಾನಗಳೂ ಬಂದವು. ತಂದೆಯವರಿಗೆ ಖುಷಿ ಆಯಿತು. ತೀರಿಕೊಂಡಾಗ ಅವರಿಗೆ ೯೩ ವರ್ಷ (೨೦೦೫). ಮೈಸೂರಿನಲ್ಲಿ ನಮ್ಮ ಜೊತೆ ಇದ್ದರು. ನನ್ನ ಶ್ರೀಮತಿಗೆ (ಕುಮುದಾ ತಾರಾನಾಥನ್) ಸಂಗೀತ ಹೇಳಿಕೊಟ್ಟಿದ್ದರು. “ನನಗೆ ಬರಲಿಲ್ಲ. ನನ್ನ ಮಕ್ಕಳು ಬಹಳ ಹೆಸರು ತೆಗೆದುಕೊಂಡರು. ದೇವರು ಅವರಿಗಾದರೂ ಕೊಟ್ಟನಲ್ಲ!” ಅಂತ ಸಂತೋ?ಪಟ್ಟರು. ನಮ್ಮ ತಾಯಿ ೧೯೮೮ರಲ್ಲೇ ತೀರಿಕೊಂಡಿದ್ದರು. ತಂದೆಯವರಿಗೆ ಆ ಒಂಟಿತನವೂ ಇತ್ತು. ಆದರೆ ನನ್ನ ಹೆಂಡತಿ ಚೆನ್ನಾಗಿ ನೋಡಿಕೊಂಡಳು. ತಮ್ಮ ಭಾವನೆಗಳನ್ನು ಅವಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವಳಿಂದ ನನಗೆ ತಿಳಿಯುತ್ತಿತ್ತು. ನಾನು ಸುಮ್ಮನೆ ಇರುತ್ತಿದ್ದೆ.
ಪ್ರ: ನಿಮ್ಮ ತಾಯಿಯ ಕಡೆಯಿಂದ ಸಂಗೀತ ಬಂದಿದೆಯೆ?
ಉ: ತಾಯಿ ಹಾಸನದವರು. ಅಜ್ಜ (ತಾಯಿಯ ತಂದೆ) ಗಮಕವಾಚನ ಮಾಡುತ್ತಿದ್ದರು. ಕೃಷ್ಣಪ್ಪ ಅಂತ ಅವರ ಹೆಸರು. ಸಂಗೀತದ ಜ್ಞಾನ ಸ್ವಲ್ಪ ಇತ್ತು. ರಾಗಗಳು ಗೊತ್ತಾಗುತ್ತಿತ್ತು. ಅಜ್ಜಿ ನಾಗಮ್ಮನವರಿಗೆ ಸಂಗೀತವೆಂದರೆ ತುಂಬ ಇ?. ಮೊಮ್ಮಕ್ಕಳು ಚೆನ್ನಾಗಿ ಹಾಡಿ ಹೆಸರು ಪಡೆಯಬೇಕೆಂದು ಅವರಿಗೆ ತುಂಬ ಆಸೆ ಇತ್ತು. ಅಲ್ಲಿ ಹಾಡಿ, ಇಲ್ಲಿ ಹಾಡಿ ಎಂದು ಹೇಳುತ್ತಲೇ ಇದ್ದರು. ನಮ್ಮ ತಂದೆಯ ತಾಯಿ ಮತ್ತು ತಂದೆಯ ತಂದೆಯನ್ನು ನಾವು ನೋಡಲೇ ಇಲ್ಲ. ನಮ್ಮ ದೊಡ್ಡಮ್ಮ(ತಾಯಿಯ ಅಕ್ಕ)ನಿಗೂ ಸಂಗೀತದ ಒಲವಿತ್ತು. ಆದರೂ ನಮಗೆ ಸಂಗೀತ ಬಂದದ್ದು ತಂದೆ ಕಡೆಯಿಂದ. ನನಗೆ ಗಮಕ ಪಾಠ ಸ್ವಲ್ಪ ಆಗಿತ್ತು. ಮೈಸೂರಿನ ಬಿ.ಎಸ್. ಕೌಶಿಕ್ ಅವರು ಹೇಳಿಕೊಟ್ಟಿದ್ದರು. ಅನಂತರ ಪ್ರಸಿದ್ಧ ಗಮಕಿ ಮಾಯಿಗ್ಗೌಡರು ಹೇಳಿಕೊಟ್ಟರು. ಆದರೆ ಸಂಗೀತಕ್ಕೆ ಧಕ್ಕೆ ಬರಬಹುದೆಂದು ನಾವು ಅದರಲ್ಲಿ ಮುಂದುವರಿಯಲಿಲ್ಲ. ಏಕೆಂದರೆ ಅದರಲ್ಲಿ ಸಾಹಿತ್ಯ ಪ್ರಧಾನ, ಸಂಗೀತ ಗೌಣ.
ನಮಗೆ ಗುರುಗಳು ತಂದೆ ಮತ್ತು ದೊಡ್ಡಪ್ಪ. ಜೊತೆಗೆ ದೊಡ್ಡಪ್ಪನಿಗೆ ಮದ್ರಾಸಿನಲ್ಲಿ ಎಲ್ಲರೂ ಪರಿಚಯವಿದ್ದುದರಿಂದ ಹಲವರಲ್ಲಿ ಚರ್ಚಿಸಿ ಕೃತಿಗಳನ್ನು ಕಲಿತುಕೊಂಡೆವು. ನಮಗೆ ಬೇರೆ ಗುರುಗಳಿಲ್ಲ; ಆದರೆ ಎಲ್ಲರೂ ಗುರುಗಳೇ! ನಾವು ತಪ್ಪು ಮಾಡಿದಾಗ ಅದನ್ನು ಹೇಳುವ ಕಿರಿಯರೂ ಕೂಡ ನಮ್ಮ ಗುರುಗಳಾಗುತ್ತಾರೆ.
ಪ್ರ: ಆರ್.ಕೆ. ಶ್ರೀಕಂಠನ್ ಅವರೊಂದಿಗೆ ಸಂಗೀತದ ಸಂಬಂಧವಿತ್ತೆ?
ಉ: ಅವರ ಶಿಷ್ಯರಾಗಿ ಕಲಿತದ್ದಿಲ್ಲ. ಅವರು ಆಕಾಶವಾಣಿಗೆ ಸೇರಿ ಬೆಂಗಳೂರಿಗೆ ವರ್ಗವಾದ ಮೇಲೆ ಕೆಲಸದ ನಿಮಿತ್ತ ಮೈಸೂರಿಗೆ ಬರುತ್ತಿದ್ದರು. ಬಂದಾಗ ನಮ್ಮ ಮನೆಯಲ್ಲೇ ಇಳಿದುಕೊಳ್ಳುತ್ತಿದ್ದರು. ಆಗ ಒಟ್ಟಿಗೆ ಕುಳಿತುಕೊಂಡು ಶೆಮ್ಮಂಗುಡಿ, ಜಿಎನ್ಬಿ ಮುಂತಾದವರ ಸಂಗೀತದ ರೆಕಾರ್ಡ್ ಹಾಕಿಕೊಂಡು ನೊಟೇಶನ್ ಮಾಡುತ್ತಿದ್ದೆವು. ಅಣ್ಣ ಆ ರೀತಿಯಲ್ಲಿ ತುಂಬ ಕೃತಿಗಳ ನೊಟೇಶನ್ ಮಾಡಿದರು. ’ಆ ಸಂಗತಿ ಹೀಗೆ ಬರುತ್ತದೆ, ಇದು ಚೆನ್ನಾಗಿದೆ, ಜಿಎನ್ಬಿ ಹೀಗೆ ಹಾಡಿದ್ದಾರೆ; ಅದನ್ನು ಸೇರಿಸಿಕೊಳ್ಳಬಹುದು’ ಮುಂತಾಗಿ ಚರ್ಚಿಸಿ ನೊಟೇಶನ್ ಮಾಡುತ್ತಿದ್ದೆವು. ಅದರ ಒಂದು ಪ್ರತಿ ನಮಗೆ, ಇನ್ನೊಂದು ಚಿಕ್ಕಪ್ಪನಿಗೆ – ಹೀಗೆ ಮಾಡುತ್ತಿದ್ದೆವು; ಚರ್ಚಿಸುತ್ತಿದ್ದೆವು. ಅವರು ೧೯೬೦ರ ದಶಕದಲ್ಲೇ ಬೆಂಗಳೂರಿಗೆ ಬಂದರು. ನಾವು ಕಚೇರಿ ಮಾಡಲು ಬೆಂಗಳೂರಿಗೆ ಬಂದರೆ ಅವರ ಮನೆಗೆ ಹೋಗುತ್ತಿದ್ದೆವು; ಚರ್ಚಿಸುತ್ತಿದ್ದೆವು; ಏನಿದ್ದರೂ ನಮಗೆ ಗುರುಗಳು ತಂದೆಯವರೇ.
ಪ್ರ: ಮುಖ್ಯವಾಗಿ ನಿಮ್ಮ ಮೇಲೆ ಯಾರ ಪ್ರಭಾವ ಇದೆ?
ಉ: ಮುಖ್ಯವಾಗಿ ರಾಮನಾಡ್ ಕೃಷ್ಣನ್. ತುಂಬ ದೊಡ್ಡ ವಿದ್ವಾಂಸರು. ನಮಗೆ ತುಂಬ ಪ್ರಿಯರಾದ ಸಂಗೀತಗಾರರು. ೧೯೭೨ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ನಮ್ಮ ಕಚೇರಿ ನಡೆಯಿತು. ಅದನ್ನು ಕೇಳಿದ ಅವರ ಒಬ್ಬ ಶಿಷ್ಯರು ಅವರಿಗೆ ಫೋನ್ ಮಾಡಿ, ’ಇವರ ಸಂಗೀತ ನಿಮ್ಮ ಸಂಗೀತವನ್ನು ಹೋಲುತ್ತಿದೆ’ ಎಂದು ತಿಳಿಸಿದರು. ’ಕಚೇರಿ ಮುಗಿದೊಡನೆ ಅವರನ್ನು ಮನೆಗೆ ಕರೆದುಕೊಂಡು ಬಾ’ ಎಂದು ಕೃಷ್ಣನ್ ಶಿಷ್ಯಗೆ ಹೇಳಿದರು. ಅದರಂತೆ ನಾವು ಅವರ ಮನೆಗೆ ಹೋದಾಗ ಪ್ರೀತಿಯಿಂದ ಮಾತನಾಡಿಸಿ ಸಂತೋಷ ವ್ಯಕ್ತಪಡಿಸಿ ’ಚೆನ್ನಾಗಿ ಮುಂದುವರಿಸಿ’ ಎಂದು ಹರಸಿದರು.
ವೆಂಕಟರಾಮಶಾಸ್ತ್ರಿಗಳ ತಮ್ಮನ ಮಕ್ಕಳೆಂದು ಅವರಿಗೆ ಇನ್ನಷ್ಟು ಸಂತೋಷವಾಯಿತು. ಅನಂತರ ಮದ್ರಾಸಿಗೆ ಹೋದಾಗ ಅವರ ಮನೆಗೆ ಹೋಗುತ್ತಿದ್ದೆವು; ನಮ್ಮ ಕಚೇರಿಗೆ ಅವರು ಬರುತ್ತಿದ್ದರು. ಅವರ ಸಂಗೀತ ನಮಗೆ ತುಂಬ ಇ?. ಅವರ ಸಂಗೀತ ಗ್ರೇಟ್. ಆದರೆ ಅವರಿಗೆ ಅಷ್ಟೊಂದು ಹೆಸರು ಬರಲಿಲ್ಲ. ಏಕೆಂದರೆ ಅದು ಮಾಸ್(ಸಾಮಾನ್ಯರು)ಗಿಂತ ಕ್ಲಾಸ್(ಬಲ್ಲಿದರು) ಗೆ ಹಿಡಿಸುವ ಸಂಗೀತ. ಇವತ್ತಿನ ಪ್ರಪಂಚಕ್ಕೆ ಮಾಸ್ ಬೇಕಲ್ಲ; ಈಗ ತಾರಾ ಮೌಲ್ಯ (ಸ್ಟಾರ್ ವ್ಯಾಲ್ಯೂ) ಎಲ್ಲಿದೆ ನೋಡುತ್ತೇವೆ. ಅದು ಮೊದಲೂ ಇತ್ತು. ಹೀಗಾಗಿ ಅವರು ಅ?ಂದು ಜನಪ್ರಿಯರಾಗಲಿಲ್ಲ. ಆದರೆ ಮದ್ರಾಸಿನ ಸಂಗೀತದ ವಲಯಗಳಲ್ಲಿ ಅವರಿಗೆ ದೊಡ್ಡ ಹೆಸರೇ ಇದೆ. ಈಗಲೂ ರಾಮನಾಡ್ ಕೃಷ್ಣನ್ ಎಂದರೆ ತುಂಬ ಗೌರವವಿದೆ.
ಪ್ರ: ಅವರು ಯಾವ ಪರಂಪರೆಯವರು?
ಉ: ಅವರ ಗುರುಗಳು ಶಂಕರ ಅಯ್ಯರ್ ಅಂತ. ಯೂ-ಟ್ಯೂಬ್ನಲ್ಲಿ ರಾಮನಾಡ್ ಕೃಷ್ಣನ್ ಅಂತ ಕೊಟ್ಟರೆ ಬೇಕಾದ? ಸಿಗುತ್ತದೆ. ನಮ್ಮ ದೊಡ್ಡಪ್ಪ ಶೆಮ್ಮಂಗುಡಿ, ಮಹಾರಾಜಪುರಂ ವಿಶ್ವನಾಥ ಅಯ್ಯರ್ ಅವರಿಗೆಲ್ಲ ವಯೊಲಿನ್ ನುಡಿಸುತ್ತಿದ್ದರು. ಅವರ ಸಂಗೀತದ ಬಗೆಗಿನ ಮತ್ತು ಹಾಸ್ಯಭರಿತ ಮಾತುಗಳನ್ನು ನಾವು ಕೇಳುತ್ತಿದ್ದೆವು. ದೊಡ್ಡಪ್ಪ ಎಂ.ಎಸ್. ಸುಬ್ಬುಲಕ್ಷ್ಮಿ ಅವರಿಗೆ ಸುಮಾರು ೨೫ ವ? ವಯೊಲಿನ್ ನುಡಿಸಿದ್ದರು. ಎಂ.ಎಸ್. ಮತ್ತು ಅವರ ಪತಿ ಸದಾಶಿವಂ ದೊಡ್ಡಪ್ಪನ ಫ್ಯಾಮಿಲಿಗೆ ತುಂಬ ನಿಕಟವಾಗಿದ್ದರು. ಬಂದು ಹೋಗಿ ಮಾಡುತ್ತಿದ್ದರು. ನಮ್ಮ ಅತ್ತಿಗೆ, ಶ್ರೀರಾಂಕುಮಾರ್ ತಾಯಿ ವಿಶೇಷ ಅಡುಗೆ ಮಾಡಿದರೆ ಸುಬ್ಬುಲಕ್ಷ್ಮಿ ಅವರ ಮನೆಗೊಂದು ಕ್ಯಾರಿಯರ್ ಪಾರ್ಸೆಲ್ ಆಗುತ್ತಿತ್ತು. ಸಮಾರಂಭವಾದರೆ ಇವರು ಕರೆಯುವುದು, ಅವರು ಕರೆಯುವುದು ಎಲ್ಲ ಇತ್ತು. ಡಿ.ಕೆ. ಪಟ್ಟಮ್ಮಾಳ್ ಮನೆಯವರು ಕೂಡ ಹಾಗೆಯೆ. ಒಟ್ಟಿನಲ್ಲಿ ೧೯೫೬ರಲ್ಲಿ ಕಚೇರಿ ಮಾಡಲು ಆರಂಭಿಸಿದ ನಾವು ಮತ್ತೆ ಹಿಂದೆ ನೋಡಿದ್ದೇ ಇಲ್ಲ.
ಪ್ರ: ನಿಮ್ಮ ವೃತ್ತಿಜೀವನದ ಬಗ್ಗೆ ಹೇಳಿ.
ಉ: ಮೈಸೂರಿನ ಯುವರಾಜಾಸ್ ಕಾಲೇಜಿನಲ್ಲಿ ಬಿಎಸ್ಸಿ ಮಾಡಿದೆ. ಅದರಲ್ಲಿ ಉತ್ತಮ ಅಂಕ ಬಂದ ಕಾರಣ ರಾಷ್ಟ್ರೀಯ ಮೆರಿಟ್ ಸ್ಕಾಲರ್ಶಿಪ್ ಬಂತು. ಮೈಸೂರು ಮಾನಸಗಂಗೋತ್ರಿಯಲ್ಲಿ ಎಂಎಸ್ಸಿಗೆ ಸೇರಿದಾಗ ಸಬ್ಜೆಕ್ಟ್ ಸ್ಕಾಲರ್ಶಿಪ್ ಸಿಕ್ಕಿತು; ಕೆಮಿಸ್ಟ್ರಿಯಲ್ಲಿ ನನಗೆ ಗರಿಷ್ಠ ಅಂಕ ಬಂದಿತ್ತು. ಅಲ್ಲೇ ಪಿಎಚ್ಡಿ ಮಾಡಿದೆ. ಅದಾದ ಬಳಿಕ ಒಂದು ವ? ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದೆ. ೧೯೭೩ರಲ್ಲಿ ಸಿಎಫ್ಟಿಆರ್ಐಗೆ ಸೇರಿದೆ. ಎರಡು ವರ್ಷ ಕೆಲಸ ಮಾಡಿ ಹೆಚ್ಚಿನ ವ್ಯಾಸಂಗಕ್ಕೆ ಜರ್ಮನಿಗೆ ಹೋದೆ. ಎರಡು ವ?ದಲ್ಲಿ ಅದನ್ನು ಪೂರೈಸಿ ವಾಪಸ್ಸು ಬಂದು ಅಲ್ಲೇ ಸೇರಿಕೊಂಡೆ. ಹಿರಿಯ ವಿಜ್ಞಾನಿಯ ಹುದ್ದೆ ಸಿಕ್ಕಿತು. ಮುಂದೆ ಪದೋನ್ನತಿ ಆಗಿ ೨೦೦೬ರಲ್ಲಿ ನಿವೃತ್ತಿ ಆಗುವಾಗ ಅಡಿಶನಲ್ ಡೈರೆಕ್ಟರ್ ಅಥವಾ ಡೈರೆಕ್ಟರ್ ಗ್ರೇಡ್ ಸೈಂಟಿಸ್ಟ್ ಆಗಿದ್ದೆ. ಸಿಎಫ್ಟಿಆರ್ಐಯಲ್ಲಿ ೨೫-೩೦ ಜನರಿಗೆ ಪಿಎಚ್ಡಿಗೆ ಗೈಡ್ ಮಾಡಿದ್ದೇನೆ. ಸುಮಾರು ೧೮೦ ಸಂಶೋಧನಪ್ರಬಂಧಗಳನ್ನು ಬರೆದಿದ್ದು ಅವು ಪ್ರಸಿದ್ಧ ಜರ್ನಲ್ಗಳಲ್ಲಿ ಪ್ರಕಟವಾಗಿವೆ. ೧೦-೧೨ ಪೇಟೆಂಟ್ಸ್ ತೆಗೆದುಕೊಂಡಿದ್ದೇನೆ. ೮-೧೦ ಜನರಿಗೆ ಎಂಫಿಲ್/ಡೆಸರ್ಟೆಶನ್ಗೆ ಗೈಡ್ ಮಾಡಿದ್ದೇನೆ. ಆ ಕಾಲಕ್ಕೆ ನಾನು ಸಿಎಫ್ಟಿಆರ್ಐ
ಓರ್ವ ಶ್ರೇಷ್ಠ ವಿಜ್ಞಾನಿ ಎನಿಸಿದ್ದೆ. ನಿಜವೆಂದರೆ ನನ್ನ ಕ್ಷೇತ್ರವಾದ ಕಾರ್ಬೊಹೈಡ್ರೇಟ್ಸ್ನಲ್ಲಿ ನಾನು ಭಾರತದಲ್ಲೇ ಒಬ್ಬ ಶ್ರೇಷ್ಠ ವಿಜ್ಞಾನಿ. ಅಮೆರಿಕದಲ್ಲಿ ’ಥಾಂಪ್ಸನ್ ರಾಯಿಟರ್ಸ್’ ಎನ್ನುವ ಒಂದು ಸಂಸ್ಥೆ ಇದೆ. ಅವರು ಬೇರೆಬೇರೆ ವಿಷಯದ ಪ್ರಬಂಧಗಳ ಬಗ್ಗೆ ಸಮೀಕ್ಷೆ ನಡೆಸುತ್ತಾರೆ. ಯಾವ ಪೇಪರ್ ಹೆಚ್ಚು ಸೈಟ್ ಆಗಿದೆ (ಉಲ್ಲೇಖ ಆಗಿದೆ) ಎಂದು ಪರಿಶೀಲಿಸುತ್ತಾರೆ. ಜಗತ್ತಿನ ೩,೨೦೦ ಜನ ಆ ಪಟ್ಟಿಯಲ್ಲಿದ್ದು, ಅವರಲ್ಲಿ ಭಾರತದ ಆರು ಮಂದಿ ಸೇರಿದ್ದಾರೆ. ಅವರಲ್ಲಿ ನಾನೂ ಒಬ್ಬ. ಜಗತ್ತಿನಾದ್ಯಂತ ಕೃಷಿವಿಜ್ಞಾನ ಕ್ಷೇತ್ರದಲ್ಲಿ ಬೇರೆಬೇರೆ ಉದ್ದೇಶಗಳಿಗಾಗಿ ನನ್ನ ಪ್ರಬಂಧಗಳು ತುಂಬ ಉದ್ಧೃತವಾಗಿವೆ. ಅಂದರೆ ನಾನು ಅತಿಹೆಚ್ಚು ಸೈಟಾದ ಓರ್ವ ಸಂಶೋಧಕ. ಈ ಆರು ಜನರಲ್ಲಿ ವಿಜ್ಞಾನಿ ಡಾ. ಸಿ.ಎನ್. ಆರ್. ರಾವ್ ಕೂಡ ಇದ್ದಾರೆ. ೨೦೧೫ ಮತ್ತು ೨೦೧೬ ಎರಡೂ ವರ್ಷಗಳಲ್ಲಿ ನನಗೆ ಆ ಸ್ಥಾನವಿತ್ತು.
ಪ್ರ: ಯಾವ ವಿಷಯ?
ಉ: ನನ್ನದು ಕಾರ್ಬೊಹೈಡ್ರೇಟ್ಸ್ (ಶರ್ಕರ ಪಿಷ್ಠಾಗಳು). ಅದರಲ್ಲಿ ನಾನು ತುಂಬ ಸಂಶೋಧನೆ ಮಾಡಿದ್ದು, ಜಗತ್ತಿನಾದ್ಯಂತ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಬಹಳ ಜನ ಅದನ್ನು ಬಳಸಿಕೊಂಡಿದ್ದಾರೆ. ಬೇರೆಯವರೂ ತುಂಬಾ ಬಳಸಿಕೊಂಡಿದ್ದಾರೆ. ಈ ಕೆಲಸ ಎಷ್ಟು ಮುಖ್ಯ ಎಂಬುದರ ಮೇಲೆ ಹತ್ತು ವರ್ಷಗಳಿಗೊಮ್ಮೆ ಥಾಂಪ್ಸನ್ ರಾಯಿಟರ್ಸ್ ವಿಶ್ಲೇಷಣೆ ಮಾಡಿ ಪಟ್ಟಿ ತಯಾರಿಸುತ್ತಾರೆ. ಅದರಲ್ಲಿ ನನ್ನನ್ನು ಎರಡು ವರ್ಷ ಹೆಸರಿಸಿದ್ದಾರೆ. ಕೃಷಿಕ್ಷೇತ್ರದವರು ನನ್ನ ಸಂಶೋಧನೆಯನ್ನು ಹೆಚ್ಚು ಉಪಯೋಗಿಸಿಕೊಂಡಿದ್ದಾರೆ. ನನ್ನ ಸಂಶೋಧನೆ ಆಹಾರವಸ್ತುಗಳಿಗೆ ಸಂಬಂಧಿಸಿದ್ದು. ಆಹಾರವಸ್ತುಗಳ ಸಂಸ್ಕರಣೆಗೆ ನಾವೇನು ಮಾಡಿದ್ದೇವೆ, ಆಹಾರಉತ್ಪನ್ನಗಳು ಹೇಗೆ ಬದಲಾಗುತ್ತವೆ ಎಂಬುದು ನನ್ನ ಸಂಶೋಧನೆ. ಆದರೆ ಕೃಷಿಸಂಬಂಧಿ ಪ್ರಬಂಧಗಳಲ್ಲಿ ಇದನ್ನು ಹೆಚ್ಚು ಕೋಟ್ ಮಾಡಲಾಗಿದೆ. ಬಯೋಕೆಮಿಸ್ಟ್ರಿ ಅಥವಾ ಬಯೋಟೆಕ್ನಾಲಜಿಯಲ್ಲಿ ಕೋಟ್ ಆಗಬೇಕಾದದ್ದು ಕೃಷಿವಿಜ್ಞಾನದಲ್ಲಿ ಜಾಸ್ತಿ ಕೋಟಾಗಿದೆ. ಏನಿದ್ದರೂ ಇದು ಅಕಾಡೆಮಿಕ್ ವಲಯದಲ್ಲಿ ವಿಶೇಷ ಮನ್ನಣೆ.
ಪ್ರ: ಸಂಗೀತ ಮತ್ತು ವೃತ್ತಿಯನ್ನು ನೀವು ಹೇಗೆ ಹೊಂದಿಸಿಕೊಂಡಿರಿ?
ಉ: ಬಹಳ ಕಷ್ಟ ಅದು. ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ದುಃಖ ಪಡುತ್ತೀರಿ; ಸಂತೋಷಪಡುತ್ತೀರಿ. ಎಲ್ಲವೂ ಉಂಟು. ಅದು ಹೇಗೆ ಮಾಡಿದೆ ಎಂದು ಎಣಿಸಿದರೆ ನನಗೇ ಆಶ್ಚರ್ಯವಾಗುತ್ತದೆ. ತುಂಬಾ ಕಷ್ಟ. ಏಕೆಂದರೆ ಸಿಎಫ್ಟಿಆರ್ಐಯಲ್ಲಿ ನಾನು ಓರ್ವ ಸಾಮಾನ್ಯ ಮನುಷ್ಯ ಅಲ್ಲ. ನನಗೆ ಆಡಳಿತದ ಕೆಲಸವೂ ಇತ್ತು. ಹಾಗಾಗಿ ಬಾಸ್ಗೆ ಮುಂಚಿತವಾಗಿ ತಿಳಿಸಿ ರಜೆ ಪಡೆಯಬೇಕಾಗಿತ್ತು. ಡೈರೆಕ್ಟರ್ ನನ್ನ ಬಾಸ್. ಕಾರಣ ಹೇಳಿದರೂ ಕಷ್ಟ, ಹೇಳದೇ ಇದ್ದರೂ ಕಷ್ಟ. ಆದರೆ ನಾನೊಬ್ಬ ಒಳ್ಳೆಯ ಸಂಗೀತಗಾರ ಎಂಬುದು ಬಾಸ್ಗೆ ಗೊತ್ತಿತ್ತು. ಕೆಲವು ಸಲ ಹೇಳುತ್ತಿರಲಿಲ್ಲ. ಫೋನ್ ಏನಾದರೂ ಬಂದರೆ ಈಗಷ್ಟೇ ಮನೆಗೆ ಹೋದರು ಅಂತ ಹೇಳು ಎಂಬುದಾಗಿ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದೆ.
ಅಣ್ಣನವರು ಎಂಟು ವರ್ಷ ಮದ್ರಾಸಿನಲ್ಲಿದ್ದಾಗ ತಿಂಗಳಿಗೆ ಎರಡು ಮೂರು ಸಲ ಮದ್ರಾಸಿಗೆ ಹೋಗುತ್ತಿದ್ದೆ. ಸಾಮಾನ್ಯವಾಗಿ ಪ್ರತಿ ವಾರಾಂತ್ಯದಲ್ಲಿ ಅಲ್ಲಿ ಕಚೇರಿ ಇರುತ್ತಿತ್ತು. ಶುಕ್ರವಾರ ಸಂಜೆ ೬.೧೫ರ ರೈಲಿಗೆ ಮೈಸೂರಿನಿಂದ ಹೊರಟರೆ ಶನಿವಾರ ಬೆಳಗಿನ ಜಾವ ಅಲ್ಲಿ ತಲಪುತ್ತಿತ್ತು. ಶನಿವಾರ, ಭಾನುವಾರ ಕಚೇರಿ ಮುಗಿಸಿಕೊಂಡು ಭಾನುವಾರ ರಾತ್ರಿ ಅಲ್ಲಿ ರೈಲು ಹತ್ತುವುದು, ಸೋಮವಾರ ಬೆಳಗ್ಗೆ ಅದು ಮೈಸೂರಿಗೆ ಬಂದಾಗ ಕೆಲವು ಸಲ ಅಲ್ಲಿಂದಲೇ ಆಫೀಸಿಗೆ ಹೋಗಬೇಕಾಗುತ್ತಿತ್ತು. ೮.೩೦ಕ್ಕೆ ಕಚೇರಿಗೆ ಹೋಗಿ ಸಹಿ ಮಾಡಿ ೧೦ ಗಂಟೆಯ ಹೊತ್ತಿಗೆ ಸಿಕ್ಕಿದ ಕಾಫಿ ಬ್ರೇಕ್ನಲ್ಲಿ ಮನೆಗೆ ಬರುತ್ತಿದ್ದೆ; ಸ್ನಾನ, ಪೂಜೆ ಮಾಡಿ ತಿಂಡಿ ತಿಂದು ಮತ್ತೆ ಆಫೀಸಿಗೆ ಹೋಗುತ್ತಿದ್ದೆ. ಹೀಗೆಲ್ಲ ಒದ್ದಾಡಿದ್ದೇನೆ. ’ಸಂಗೀತಕಲಾ ಆಚಾರ್ಯ’ ಪ್ರಶಸ್ತಿ ಬಂದಾಗ ಮದ್ರಾಸಿನಲ್ಲಿ ಯಾರೋ ಒಬ್ಬರು ಸಂದರ್ಶನ ಮಾಡಿದಾಗ ಸಂಗೀತಕ್ಕಿಂತ ಮುಖ್ಯವಾಗಿ ನನ್ನ ಹೋರಾಟ(ಸ್ಟ್ರಗಲ್)ಕ್ಕಾಗಿ ಪ್ರಶಸ್ತಿ ಕೊಟ್ಟಿರಬೇಕು ಎಂದಿದ್ದೆ. ನನ್ನ ವಿದ್ಯಾರ್ಥಿಗಳು ಅದು ’ತಾರಾನಾಥನ್ ಸ್ಟೈಲ್’ ಎನ್ನುತ್ತಿದ್ದರು. ಅಣ್ಣ ಅಲ್ಲಿದ್ದಾಗ ನಾವು ಅಲ್ಲಿ ವಾರಾಂತ್ಯಕ್ಕೆ ಕಚೇರಿಗಳನ್ನು ಇಟ್ಟುಕೊಳ್ಳುತ್ತಿದ್ದೆವು. ಕೆಲವರು ಅಲ್ಲಿ ನಮ್ಮನ್ನು ’ವೀಕೆಂಡ್ಸ್ ಬ್ರದರ್ಸ್’ ಎಂದು ತಮಾಷೆ ಮಾಡುತ್ತಿದ್ದರು. ’ವಾರದ ಮಧ್ಯೆ ಅವರನ್ನು ಕರೆಯಬೇಡಿ; ಕೆಲಸ ಬಿಟ್ಟು ಅವರಿಗೆ ಬರಲಿಕ್ಕೆ ಆಗುವುದಿಲ್ಲ’ ಎನ್ನುತ್ತಿದ್ದರು.
ಪ್ರ: ಮದ್ರಾಸಿನಲ್ಲಿ ಆ ಹೊತ್ತಿಗೆ ನಿಮ್ಮದು ತುಂಬ ಕಚೇರಿ ಆಗಿದೆಯಾ?
ಉ: ಆಗಿದೆ. ಒಂದು ಸಲ ನಾನು ಮದ್ರಾಸಿಗೆ ಹೋಗಲು ಸಂಜೆ ರೈಲು ಹತ್ತಿದ್ದೇನೆ. ಮಧ್ಯದಲ್ಲೆಲ್ಲೋ ಯಾವುದೋ ರೈಲು ಹಳಿತಪ್ಪಿದ ಕಾರಣ ನಮ್ಮ ರೈಲು ಬೇರೆ ದಾರಿ ಹಿಡಿದಿದೆ. ನನಗೆ ಗೊತ್ತಿಲ್ಲ. ಬೆಳಗ್ಗೆ ಎದ್ದು ನೋಡುತ್ತೇನೆ, ರೈಲು ಮಧ್ಯದಲ್ಲಿ ಸೇಲಂನಲ್ಲೋ ಎಲ್ಲೋ ಇದೆ. ಸಾಯಂಕಾಲ ೫ ಗಂಟೆಗೆ ಮದ್ರಾಸ್ ತಲಪಿತು. ೬ ಗಂಟೆಗೆ ಕಚೇರಿ. ಅಣ್ಣನ ಮನೆಗೆ ಹೋಗುವಾಗ ಅವರು ಕಚೇರಿಗೆ ಹೋಗಿ ಆಗಿದೆ. ಬೆಳಗಿನಿಂದ ಊಟವೂ ಇಲ್ಲ. ಬರೇ ಕಾಫಿ ಕುಡಿದು ಕಚೇರಿ ಸ್ಥಳಕ್ಕೆ ಧಾವಿಸಿ, ಬಟ್ಟೆ ಬದಲಿಸಿಕೊಂಡು ವೇದಿಕೆಗೆ ಹೋದೆ. ಅ? ಹೊತ್ತಿಗೆ ನಮ್ಮ ಶ್ರೀರಾಂಕುಮಾರ್ ತಾಯಿ ಬಾಕ್ಸ್ ಕಳುಹಿಸಿದ್ದರು. ಕಚೇರಿ ಮುಗಿಸಿ ಅದನ್ನು ತೆಗೆದುಕೊಂಡು ಹಾಗೇ ರೈಲುನಿಲ್ದಾಣಕ್ಕೆ ಹೋಗಿ ಅಲ್ಲಿ ಊಟ ಮಾಡಿ ರೈಲುಹತ್ತಿ ವಾಪಸು ಬಂದಿದ್ದೆ. ೨-೩ ಸಲ ಆ ಥರ ಆಗಿತ್ತು. ಈಗ ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಏನೋ ದೇವರ ದಯೆ, ಅದೆಲ್ಲ ನಡೆದುಹೋಯ್ತು.
ಆ ಎಂಟು ವರ್ಷಗಳಲ್ಲಿ ಮದ್ರಾಸಿನಲ್ಲಿ ನಮ್ಮ ಕಚೇರಿ ತುಂಬ ಆಗಿದೆ. ತಿಂಗಳಿಗೆ ಐದಾರು ಆಗುತ್ತಿತ್ತು. ಮೂರು ನಾಲ್ಕಕ್ಕಂತೂ ಕಮ್ಮಿ ಇಲ್ಲ. ಮದ್ರಾಸಿನ ಸಂಗೀತ ಸೀಸನ್(ನವೆಂಬರ್, ಡಿಸೆಂಬರ್)ನಲ್ಲಿ ೧೦-೧೨ ಕಚೇರಿಗಳು ಆಗುತ್ತಿದ್ದವು. ಅಲ್ಲಿ ನಮಗೆ ಒಳ್ಳೆಯ ಹೆಸರಿತ್ತು. ಅಣ್ಣ ಇಲ್ಲಿಗೆ ಬಂದ ಮೇಲೆ ಅದು ಸ್ವಲ್ಪ ಕಮ್ಮಿ ಆಯಿತು. ಅವರು ಮದ್ರಾಸಿಗೆ ಹೋಗುವ ಮೊದಲೂ ಅಲ್ಲಿ ನಮ್ಮ ಕಚೇರಿಗಳು ಆಗುತ್ತಿದ್ದವು; ಆದರೆ ಅಷ್ಟಿಲ್ಲ. ಅವರು ಅಲ್ಲಿ ದೂರದರ್ಶನದ ಉಪನಿರ್ದೇಶಕರಾಗಿದ್ದ ಕಾರಣ ಸುಮಾರು ಸಂಗೀತಗಾರರು, ಸಭಾದವರು, ಸಂಘಟಕರದ್ದೆಲ್ಲ ಪರಿಚಯವಾಯಿತು. ಜೊತೆಗೆ ನಮಗೆ ಒಳ್ಳೆಯ ಹೆಸರಿತ್ತು; ನಮ್ಮ ಸಂಗೀತಕ್ಕೆ ಬೆಲೆ ಇತ್ತು.
ಪ್ರ: ಮದ್ರಾಸಿನಲ್ಲಿ ಹೆಸರು ಮಾಡಿದ ಕರ್ನಟಕದ ಸಂಗೀತಗಾರರು ಕಡಮೆ ಅಲ್ಲವೆ?
ಉ: ಬೆರಳೆಣಿಕೆಯ ಜನ ಮಾತ್ರ ಅಲ್ಲಿ ಹೆಸರು ಮಾಡಿದ್ದಾರೆ. ವೀಣೆ ದೊರೆಸ್ವಾಮಿ ಅಯ್ಯಂಗಾರ್, ಮೈಸೂರಿನ ದೊಡ್ಡ ವಿದ್ವಾಂಸರಾದ ತಿಟ್ಟೆ ಕೃ? ಅಯ್ಯಂಗಾರ್, ಆರ್.ಕೆ. ಶ್ರೀಕಂಠನ್, ಅವರ ಶಿಷ್ಯ ಎಂ.ಎಸ್. ಶೀಲಾ ಹೀಗೆ ಕೆಲವರು ಮಾತ್ರ. ಒಳ್ಳೆಯ ಸಂಗೀತ, ಒಳ್ಳೆಯ ಶೈಲಿ ಅಂದರೆ ಮಾತ್ರ
ಅವರು ಇ?ಪಡುತ್ತಾರೆ. ರುದ್ರಪಟ್ಣಂ ಅಂತ ನಮಗೆ ಒಳ್ಳೆಯ ಹೆಸರಾಗಿದೆ. ಮದ್ರಾಸಿನ ಎಲ್ಲ ಕಡೆ ನಾವು ಹಾಡಿದ್ದೇವೆ. ವಿದೇಶಗಳಲ್ಲಿ ಅಮೆರಿಕ, ಇಂಗ್ಲೆಂಡ್, ದುಬೈ, ಮಲೇ?ಗಳಲ್ಲಿ ಕಚೇರಿ ಮಾಡಿದ್ದೇವೆ. ಕರ್ನಾಟಕ, ತಮಿಳುನಾಡು ಬಿಟ್ಟರೆ ಆಂಧ್ರಪ್ರದೇಶಕ್ಕೆ ಬಹಳಷ್ಟು ಹೋಗಿದ್ದೇವೆ. ಮುಂಚೆ ಕೇರಳಕ್ಕೆ ಜಾಸ್ತಿ ಹೋಗುತ್ತಿದ್ದೆವು. ವ?ದಲ್ಲಿ ಐದಾರು ಕಚೇರಿ ಇರುತ್ತಿದ್ದವು. ಆದರೆ ಅಲ್ಲಿಗೆ ಹೋಗಲು ಸಮಸ್ಯೆ. ಬಸ್ಸಿನಲ್ಲಿ ಹೋದರೆ ಆಯಾಸವಾಗುತ್ತದೆ. ರೈಲಿನಲ್ಲಿ ಹೋಗಬೇಕಿದ್ದರೆ ಬೆಂಗಳೂರಿಗೆ ಬಂದು ಹೋಗಬೇಕು. ಹೀಗಾಗಿ ಕಡಮೆ ಮಾಡಿದೆವು.
ಪ್ರ: ಒಟ್ಟಿಗೆ ಹಾಡುವುದರಿಂದ (ಯುಗಳ ಗಾಯನ) ಅನುಕೂಲಗಳೇನು, ಅನನುಕೂಲಗಳೇನು?
ಉ: ಎರಡೂ ಉಂಟು. ಅನುಕೂಲವೆಂದರೆ ಅದು ಕಚೇರಿಗೆ ಶಕ್ತಿಯನ್ನು ತುಂಬುತ್ತದೆ. ಇಬ್ಬರೂ ಹಾಡುವುದರಲ್ಲಿ ಇರುವ ಖುಷಿ, ಮಜಾ ಒಬ್ಬರೇ ಹಾಡುವುದರಲ್ಲಿ ಇಲ್ಲ. ಶಕ್ತಿ (ಸ್ಟ್ರೆಂಗ್ತ್), ವಾಲ್ಯೂಮ್ ಜಾಸ್ತಿ ಇರುತ್ತದೆ; ವೋಕಲ್ ಸಪೋರ್ಟ್ ಇರುತ್ತದೆ. ಸ್ಪರ್ಧಾತ್ಮಕ ಹಾಡುಗಾರಿಕೆ ಇರುತ್ತದೆ. ಇಬ್ಬರೂ ಒಟ್ಟಿಗೆ ಒಂದೇ ಪಾಠವಾದರೂ ಕೂಡ ಆಲಾಪನೆ ಅಥವಾ ಸ್ವರ ಹಾಡುವಾಗ ವೈಯಕ್ತಿಕವಾಗಿ ನಮಗೆ ನಮ್ಮದೇ ಆದ ಹಾಡುಗಾರಿಕೆ ಶೈಲಿ ಇರುತ್ತದೆ. ಅವೆರಡೂ ಒಂದೇ ಥರ ಇರುವುದಿಲ್ಲ. ಅಣ್ಣನವರದು ಮತ್ತು ನನ್ನದು ಒಂದೇ ಪಾಠ, ಒಂದೇ ಕಲಿಕೆಯಾದರೂ ಹಾಡುವುದರಲ್ಲಿ ಸ್ವಲ್ಪಸ್ವಲ್ಪ ವ್ಯತ್ಯಾಸವಿರುತ್ತದೆ. ಶ್ರೋತೃಗಳು ಅದನ್ನು ಇ?ಪಡುತ್ತಾರೆ. ಗಾಯನ ಎರಡು ಥರ ಇರುತ್ತದೆ. ಸ್ವರ ಹಾಡುವಾಗ ನಾನು ಒಂದು ಥರ ಪ್ರಾಕ್ಟೀಸ್ ಮಾಡಿದ್ದರೆ ಅವರು ಇನ್ನೊಂದು ಥರ ಪ್ರಾಕ್ಟೀಸ್ ಮಾಡಿರುತ್ತಾರೆ. ಅಂದರೆ ಶ್ರೋತೃಗಳಿಗೆ ಎರಡು ರೀತಿಯ ಗಾಯನ ಮತ್ತು ಸ್ಪರ್ಧಾತ್ಮಕತೆ ಸಿಗುತ್ತದೆ.
ಪ್ರ: ಆಲಾಪನೆಯಲ್ಲಿ ವ್ಯತ್ಯಾಸ ಇರುತ್ತದೆಯಲ್ಲವೆ?
ಉ: ಹೌದು. ಅದು ವೈಯಕ್ತಿಕವಾಗಿ (ಇಂಡಿವಿಜುವಲ್ ಆಗಿ) ಬರುತ್ತದೆ. ಸ್ವರ ಹಾಕುವಾಗ ಕೂಡ ಹಾಗೆಯೆ. ಕೀರ್ತನೆ ಹಾಡುವಾಗ ಮಾತ್ರ ಅಚ್ಚುಕಟ್ಟು; ಒಂದೇ ಪಾಠ. ಅಲ್ಲಿ ವ್ಯತ್ಯಾಸ ಇರುವುದಿಲ್ಲ. ಹೊರಗಿನಿಂದ ಕೇಳಿದರೆ ಒಬ್ಬರೇ ಹಾಡುತ್ತಿದ್ದಾರೆ ಅನ್ನಿಸಬಹುದು. ಒಳಗೆ ಬಂದು ನೋಡಿದರೆ ಇಬ್ಬರು ಹಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಅ?ರಮಟ್ಟಿಗೆ ಅದು ಬ್ಲೆಂಡ್ ಆಗಿರುತ್ತದೆ. ಅದು ಬಹಳ ಮುಖ್ಯ. ಹಾಗೆ ಬ್ಲೆಂಡ್ ಆಗಬೇಕಿದ್ದರೆ ಒಟ್ಟಿಗೇ ಅಭ್ಯಾಸ ಆಗಿರಬೇಕು; ಒಟ್ಟಿಗೇ ಪ್ರಾಕ್ಟೀಸ್ ಮಾಡಿರಬೇಕು. ಜೊತೆಗೆ ಉತ್ತಮ ಹೊಂದಾಣಿಕೆ (ಅಂಡರ್ಸ್ಟ್ಯಾಂಡಿಂಗ್) ಇರಬೇಕು. ಕಾಂಪ್ರಮೈಸ್ ಬಹಳ ಮುಖ್ಯ. ’ನಾನು ಹೆಚ್ಚು, ನೀನು ಕಮ್ಮಿ’ ಅಂತ ಇರಲೇಕೂಡದು. ಅದು ಬಂದರೆ ಹೋಯಿತು; ಆ ಕೂಟ ಉಳಿಯುವುದಿಲ್ಲ.
ಪ್ರ: ಸ್ವರದಲ್ಲಿ ನಿಮ್ಮ ವ್ಯತ್ಯಾಸ ಕಾಣಬಹುದಲ್ಲವೆ?
ಉ: ತೋರಿಸಬಹುದು. ಸ್ವರದಲ್ಲಿ, ರಾಗದಲ್ಲಿ ಇಂಡಿವಿಜುವಲ್ಲಾಗಿ ತೋರಿಸಬಹುದು. ಆದರೆ ಒಟ್ಟಿಗೆ ಹಾಡುವಾಗ ಮಾತ್ರ ಒಟ್ಟಿಗೇ ಇರಬೇಕು. ಒಂದೊಂದು ಸಲ ಒಬ್ಬರಿಗೆ ಸಂಗತಿ ಮರೆತುಹೋಗಿ ಮುಂದಕ್ಕೆ ಹೋಗಬಹುದು; ಮುಂದಿನ ಸಂಗತಿ ಹಾಡಬಹುದು. ಆಗ ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾರಾದರೂ ಸರಿ; ಅದಕ್ಕೆ ತಪ್ಪಬಾರದು. ಒಟ್ಟಿನಲ್ಲಿ ಅನುಕೂಲ ಚೆನ್ನಾಗಿರುತ್ತದೆ. ಸ್ಪಿರಿಟ್ (ಉತ್ಸಾಹ) ಇರುತ್ತದೆ; ಕೇಳುವುದಕ್ಕೆ ಚೆಂದವಾಗಿರುತ್ತದೆ. ಒಬ್ಬರಿಗೇನಾದರೂ ಗಂಟಲಿನ ಸಮಸ್ಯೆ
ಆರ್.ಕೆ. ವೆಂಕಟರಾಮಶಾಸ್ತ್ರಿ
ಇದ್ದರೆ, ಹೆಚ್ಚುಕಮ್ಮಿ ಆಗಿದ್ದರೆ ಇನ್ನೊಬ್ಬರು ಮೇಕಪ್ ಮಾಡಬಹುದು. ಒಬ್ಬರೇ ಆದರೆ ಸ್ವರ ಬಿದ್ದುಹೋದರೆ ಕಚೇರಿ ರದ್ದುಮಾಡಬೇಕು ಅಥವಾ ಇದ್ದಹಾಗೆ ಹಾಡಬೇಕ?. ಇದೆಲ್ಲ ಅನುಕೂಲಗಳು. ಅನನುಕೂಲ (ಡಿಸ್ಅಡ್ವಾಂಟೇಜ್) ಅಂದರೆ ನಾವು ಹೊಂದಿಕೊಳ್ಳಬೇಕು (ಅಡ್ಜಸ್ಟ್ ಆಗಬೇಕು). ಕೆಲವು ಸಲ ನಮಗೆ ಮೆಚುರಿಟಿ ಬಂದಿರುವುದರಿಂದ ಸ್ವಲ್ಪ ಇಗೋ (ಅಹಂ) ಕೂಡ ಇರುತ್ತದೆ; ಆಗ ಹೊಂದಾಣಿಕೆ ಕಷ್ಟವಾಗಬಹುದು.
ಪ್ರ: ಹೈದರಾಬಾದ್ ಬ್ರದರ್ಸ್ ಅವರದ್ದು ಕೆಲವು ಸಲ ಹಾಗೆ ಆಗುತ್ತದೇನೋ?
ಉ: ನೀವು ಸರಿಯಾಗಿ ಜಡ್ಜ್ ಮಾಡಿದ್ದೀರಿ. ಅಲ್ಲಿ ಒಬ್ಬರದ್ದು ಸ್ವಲ್ಪ ಜಾಸ್ತಿ ಇದೆ. ಶೇ?ಚಾರಿ ಅವರದ್ದು ಕಮಾಂಡಿಂಗ್ ಇದೆ. ಮತ್ತೊಬ್ಬರನ್ನು ಸ್ನಬ್ ಮಾಡಿ (ಹಿಂದಿಕ್ಕಿ) ಅವರೇ ಮುಗಿಸಿ ಬಿಡುತ್ತಾರೆ. ಕೆಲವು ಕೀರ್ತನೆಗಳು ಇನ್ನೊಬ್ಬರಿಗೆ ಗೊತ್ತಿರುವುದಿಲ್ಲ ಅಥವಾ ಪಾಠ ಆಗಿರುವುದಿಲ್ಲ. ಇವರೊಬ್ಬರೇ ಹಾಡಿಬಿಡುತ್ತಾರೆ; ಅದು ತಪ್ಪು. ಒಟ್ಟಿಗೆ ಕುಳಿತುಕೊಂಡ ಮೇಲೆ ವೇದಿಕೆಯ ಮರ್ಯಾದೆ ಬೇಕು. ಅದು ಟೀಮ್ ಸ್ಪಿರಿಟ್. ಅಲ್ಲಿ ಎಲ್ಲರೂ ಒಂದೇ. ಯಾರೂ ಹೆಚ್ಚಿಲ್ಲ, ಯಾರೂ ಕಮ್ಮಿ ಇಲ್ಲ. ವಯೊಲಿನ್ ವಾದಕರು, ಮೃದಂಗವಾದಕರು ಕೂಡ ಕಮ್ಮಿ ಅಲ್ಲ. ಎಲ್ಲರೂ ಒಂದೇ. ಹಾಗಿದ್ದರೇನೇ ನಿಮಗೆ ಚೆನ್ನಾಗಿ ಕಾಣಿಸುತ್ತದೆ. ಹೆಚ್ಚುಕಮ್ಮಿ ಮಾಡಿಕೊಂಡರೆ ಅದು ನೋಡುವವರಿಗೆ ಸರಿ ಕಾಣುವುದಿಲ್ಲ. ಪಕ್ಕವಾದ್ಯದವರು ದೊಡ್ಡವರೇ ಇರಲಿ, ಚಿಕ್ಕವರೇ ಇರಲಿ; ಅಂಡರ್ಸ್ಟ್ಯಾಂಡಿಂಗ್ ಇರಬೇಕು. ಸಾಹಿತ್ಯವನ್ನು ನೆನಪಿಡಲು ಕೂಡ ಯುಗಳಗಾಯನ ಅನುಕೂಲ. ಒಬ್ಬರಿಗೆ ಮರೆತುಹೋದರೂ ಇನ್ನೊಬ್ಬರಿಗೆ ನೆನಪಿರುತ್ತದೆ. ಇಬ್ಬರಿಗೂ ಒಟ್ಟಿಗೇ ತಪ್ಪುವುದಿಲ್ಲ. ಒಬ್ಬರಿಗೆ ಅತಿಯಾದ ಆತ್ಮವಿಶ್ವಾಸ (ಓವರ್ ಕಾನ್ಫಿಡೆನ್ಸ್) ಇದ್ದರೂ ಮತ್ತೊಬ್ಬರು ಅಲರ್ಟ್ (ಎಚ್ಚರ) ಆಗಿರುತ್ತಾರೆ.
ಪ್ರ: ಇನ್ನು ಮನೋಧರ್ಮದ ವಿಷಯ?
ಉ: ಅದು ಕೂಡ ಒಬ್ಬರಿಗೊಬ್ಬರದ್ದು ಪೂರಕವಾಗಿರುತ್ತದೆ. ಒಬ್ಬರು ಚೆನ್ನಾಗಿ ಹಾಡಿದರೆ ಮತ್ತೊಬ್ಬರಿಗೂ ಚೆನ್ನಾಗಿ ಹಾಡಬೇಕೆಂದು ಉತ್ಸಾಹ ಬರುತ್ತದೆ. ಚೆನ್ನಾಗಿ ಮುಂದಕ್ಕೆ ಹೋಗಿ ಮನೋಧರ್ಮಕ್ಕೆ ಸಹಾಯವಾಗುತ್ತದೆ. ಮನೋಧರ್ಮ ಬೆಳೆಸಲು ಯುಗಳಗಾಯನದಲ್ಲಿ ಏನೂ ತೊಂದರೆ ಆಗುವುದಿಲ್ಲ.
ಪ್ರ: ಕಚೇರಿಗೆ ಮುನ್ನ ಒಟ್ಟಿಗೆ ಪ್ರಾಕ್ಟೀಸ್ ಮಾಡುತ್ತೀರಾ?
ಉ: ಈಗ ಅದೇನೂ ಬೇಕಿಲ್ಲ. ಫೋನ್ ಮೂಲಕ ಮಾತಾಡಿಕೊಂಡು ಲಿಸ್ಟ್ ಮಾಡಿಕೊಳ್ಳುತ್ತೇವೆ; ಇಂಡಿವಿಜುವಲ್ ಆಗಿ ಪ್ರಾಕ್ಟೀಸ್ ಮಾಡಿಕೊಳ್ಳುತ್ತೇವೆ. ಈಗ ನಾವು ಮೆಚುರಿಟಿ (ಪಕ್ವತೆ) ಹೊಂದಿದ್ದೇವಲ್ಲವೆ? ಒಟ್ಟಿಗೆ ಪ್ರಾಕ್ಟೀಸ್ ಬೇಕಿಲ್ಲ. ಹೊಸ ಸಾಂಗ್ಸ್ ಕಲಿತುಕೊಂಡರೆ ಒಂದು ಅಥವಾ ಎರಡು ಸಲ ಒಟ್ಟಿಗೆ ಹಾಡಿಕೊಳ್ಳುತ್ತೇವೆ. ಹಿಂದಿನ ಕೃತಿಗಳನ್ನು ಮತ್ತೆ ಪ್ರಾಕ್ಟೀಸ್ ಮಾಡಿಕೊಳ್ಳಬೇಕಿಲ್ಲ. ಅವು ಸ್ಮರಣೆಯಲ್ಲಿ ಗಟ್ಟಿಯಾಗಿ ಕೂತಿವೆ.
ಪ್ರ: ನಿಮ್ಮ ಇಷ್ಟದ ರಾಗ ಬೇರೆ, ಅವರದ್ದು ಬೇರೆಯಾಗಿ ತೊಂದರೆ ಆಗುವುದಿಲ್ಲವೆ?
ಉ: ಇಲ್ಲ. ಅದರಲ್ಲಿ ಮ್ಯಾಚ್ ಆಗುತ್ತದೆ. ನಾವು ಸ್ವಲ್ಪ ಅಪರೂಪದ ಮತ್ತು ಕಡಮೆ ಹಾಡುವ ರಾಗಗಳನ್ನು ಹಾಡಲು, ವಿಸ್ತರಿಸಲು ಇಷ್ಟಪಡುತ್ತೇವೆ. ನಾಯಕಿ, ಶಹಾನಾ, ಬೇಗಡೆ, ಫಲಮಂಜರಿ, ಜಯಮನೋಹರಿ, ಯದುಕುಲ ಕಾಂಭೋಜಿ, ದೇವಗಾಂಧಾರಿ, ಮಾಳವಿ, ಜನರಂಜನಿ – ಇವು ಅಪರೂಪದ ರಾಗಗಳು; ಕಚೇರಿಗಳಲ್ಲಿ ಹೆಚ್ಚಾಗಿ ಕೇಳಿಬರುವುದಿಲ್ಲ. ಅವನ್ನು ನಾವು ಇಷ್ಟಪಡುತ್ತೇವೆ; ವಿಸ್ತಾರವಾಗಿ ಹಾಡುತ್ತೇವೆ. ಕಚೇರಿಯ ಮುಖ್ಯರಾಗವಾಗಿ ಕೂಡ ತೆಗೆದುಕೊಳ್ಳುತ್ತೇವೆ. ಒಂದು ಸಲ ಎಂ.ಎಸ್. ಗೋಪಾಲಕೃ?ನ್ ಮತ್ತು ಪಾಲ್ಘಾಟ್ ರಘು ಅವರು ಪಕ್ಕವಾದ್ಯಕ್ಕೆ ಇದ್ದಾಗ ಯದುಕುಲ ಕಾಂಭೋಜಿಯನ್ನು ವಿಸ್ತಾರವಾಗಿ ಹಾಡಿ ತನಿಗೆ ಬಿಟ್ಟೆವು. ಅದನ್ನು ಇಬ್ಬರೂ ತುಂಬ ಇಷ್ಟಪಟ್ಟರು. ಲಾಲ್ಗುಡಿ ಜಯರಾಮನ್, ಉಮಯಾಳಪುರಂ ಶಿವರಾಮನ್, ಕಾರೈಕುಡಿ ಮಣಿ, ವೆಲ್ಲೂರು ರಾಮಭದ್ರನ್, ಎಂ. ಚಂದ್ರಶೇಖರನ್ – ಹೀಗೆ ಹಳೆಯ ದೊಡ್ಡದೊಡ್ಡ ವಿದ್ವಾಂಸರೆಲ್ಲ ನಮಗೆ ಪಕ್ಕವಾದ್ಯ ನುಡಿಸಿದ್ದಾರೆ; ಶಾಭಾಸ್, ಭೇಷ್ ಎಂದು ಬೆನ್ನುತಟ್ಟಿದ್ದಾರೆ. ಲಾಲ್ಗುಡಿ ಅವರಂತೂ ಎಲ್ಲರಿಗೂ ನುಡಿಸುತ್ತಿರಲಿಲ್ಲ. ತುಂಬ ಸೆಲೆಕ್ಟಿವ್. ಅವರಿಗೆ ಸಮಾಧಾನವಾದರೆ ಮಾತ್ರ ನುಡಿಸುತ್ತಿದ್ದರು. ನಮ್ಮ ನಾಲ್ಕೈದು ಕಚೇರಿಗೆ ಅವರೂ ನುಡಿಸಿದ್ದಾರೆ. ಎಂ.ಎಸ್.ಜಿ. ಇನ್ನೂ ಜಾಸ್ತಿ ನುಡಿಸಿದ್ದಾರೆ.
ಈಚೆಗೆ ನಮ್ಮ ಕಚೇರಿಗೆ ಸಿ.ಎನ್. ಚಂದ್ರಶೇಖರ್, ನಳಿನಾ ಮೋಹನ್ ಹೆಚ್ಚಾಗಿ ವಯೊಲಿನ್ ನುಡಿಸುತ್ತಾರೆ; ಚೆಲುವರಾಜ್ ಅಥವಾ ಟಿ.ಎ.ಎಸ್. ಮಣಿ ಮೃದಂಗ ನುಡಿಸುತ್ತಾರೆ. ಇನ್ನು ಸಂಘಟಕರೇ ಆರಿಸುವುದು ಇದ್ದೇ ಇದೆ. ಕೆಲವುಸಲ ನನ್ನ ಮಗ ಸಂಜಯ್ ತಾರಾನಾಥನ್ ಮೃದಂಗ ನುಡಿಸುತ್ತಾನೆ. ಮಗಳು ಸಂಗೀತ ಕಚೇರಿ ಮಾಡುತ್ತಾಳೆ. ಎಂ.ಎ. ಮ್ಯೂಸಿಕ್ ಆಗಿ ಈಗ ಎಂ.ಫಿಲ್. ಮಾಡುತ್ತಿದ್ದಾಳೆ; ಅವಳು ಆಕಾಶವಾಣಿ ಕಲಾವಿದೆ.
ಪ್ರ: ನಿಮ್ಮ ಗಾಯನಕ್ಕೆ ದಾಸರಪದಗಳನ್ನು ಹೇಗೆ ಸಂಗ್ರಹ ಮಾಡಿದಿರಿ?
ಉ: ಕೆಲವೆಲ್ಲ ಹಿಂದಿನವರು ಹಾಡುತ್ತಿದ್ದುದನ್ನು ಕೇಳಿ ಸಂಗ್ರಹಿಸಿದೆವು. ಸಂಧ್ಯಾವಂದನಂ ಶ್ರೀನಿವಾಸರಾವ್ ಅವರು ಮದ್ರಾಸ್ ಆಕಾಶವಾಣಿಯಲ್ಲಿ ಪ್ರೊಡ್ಯೂಸರ್ ಆಗಿದ್ದರು. ಅವರು ಸಾಕ? ದಾಸರಪದಗಳನ್ನು ಹಾಡುತ್ತಿದ್ದರು. ದೊಡ್ಡಪ್ಪನ ಮೂಲಕ ಅವರ ಪರಿಚಯವಾಗಿ ಅವರಿಂದ ಕೆಲವನ್ನು ಸಂಗ್ರಹ ಮಾಡಿಕೊಂಡೆವು. ಇನ್ನು ತಿಟ್ಟೆ ಕೃಷ್ಣ ಅಯ್ಯಂಗಾರ್ ಅವರಿಂದ ಕೆಲವು ದಾಸರಪದಗಳು ಸಿಕ್ಕಿದವು. ಮೈಸೂರಿನಲ್ಲಿ ಕೆಲವು ವಿದ್ವಾಂಸರ ಪರಿಚಯವಾಗಿ ಅವರಿಂದ ಪಡೆದೆವು. ಕೆಲವು ನಾವೇ ಪುಸ್ತಕ ನೋಡಿ ಆರಿಸಿಕೊಂಡೆವು. ಅಣ್ಣನವರು ರಾಗ ಹಾಕಿದ್ದಾರೆ. ಅದನ್ನು ಒಟ್ಟಿಗೆ ಹಾಡುತ್ತೇವೆ. ಸುಮಾರು ಕಡೆ ನಾವು ಬರೇ ಪುರಂದರದಾಸರ ರಚನೆಗಳ ಕಚೇರಿಗಳನ್ನೇ ಮಾಡಿದ್ದೇವೆ. ದೇವರನಾಮದಲ್ಲಿ ಮೂರು ತಾಸಿನ ಕಚೇರಿ ಮಾಡಿದ್ದೇವೆ. ಪುರಂದರದಾಸರು, ಕನಕದಾಸರು, ವಾದಿರಾಜರು ಹೀಗೆಲ್ಲ ಕಾರ್ಯಕ್ರಮ ನೀಡಿದ್ದೇವೆ. ಒಂದೇ ವಿಷಯದ ಮೇಲೆ (ಥೀಮ್ಯಾಟಿಕ್) ತುಂಬ ಕಚೇರಿ ಮಾಡಿದ್ದೇವೆ: ಮೈಸೂರು ಮಹಾರಾಜರ ರಚನೆಗಳು, ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಕೃತಿಗಳು, ಮೈಸೂರು ಸದಾಶಿವರಾವ್, ಮೈಸೂರು ವಾಸುದೇವಾಚಾರ್, ಸ್ವಾತಿ ತಿರುನಾಳ್ ರಚನೆಗಳು – ಹೀಗೆ. ಮತ್ತು ಪ್ರಾತ್ಯಕ್ಷಿಕೆಗಳನ್ನೂ ಮಾಡಿದ್ದೇವೆ. ನಾನು ಈಚೆಗೆ ಮದ್ರಾಸಿನ ’?ಣ್ಮುಖ’ ಸೇರಿದಂತೆ ಕೆಲವು ಪತ್ರಿಕೆಗಳು, ಸ್ಮರಣಸಂಚಿಕೆ(ಸಾವನೀರ್)ಗಳಿಗೆ ಸಂಗೀತವನ್ನು ಕುರಿತು ಲೇಖನಗಳನ್ನು ಬರೆಯುತ್ತಿದ್ದೇನೆ.
ಪ್ರ: ಕರ್ನಾಟಕ ಸಂಗೀತದಲ್ಲಿ ಬದಲಾವಣೆ ಆಗಬೇಕು ಎನ್ನುವ ಬಗ್ಗೆ ಏನು ಹೇಳುತ್ತೀರಿ?
ಉ: ಬದಲಾವಣೆ ಆಗಬೇಕು ನಿಜ; ಆದರೆ ಮಿತಿಗಳನ್ನು ಮೀರಿ ಅಲ್ಲ. ಸಾಂಪ್ರದಾಯಿಕತೆ(ಟ್ರೆಡಿಶನಲ್) ಯನ್ನು ಸುಭದ್ರವಾಗಿ ಇಟ್ಟುಕೊಂಡು, ಆ ಮೌಲ್ಯಗಳಿಗೆ ಮರ್ಯಾದೆಕೊಟ್ಟು ಅದರೊಳಗೆ ಮಾಡಬಹುದು. ಬದಲಾವಣೆ ಎಂದು ಒಂದು ರಾಗದೊಳಗೆ ಇನ್ನೊಂದು ರಾಗವನ್ನು ತರಲು ಆಗುತ್ತದೆಯೆ? ಶಾಸ್ತ್ರೀಯಸಂಗೀತವು ಶಾಸ್ತ್ರೀಯವೇ ಆಗಬೇಕಲ್ಲವೆ? ಪಾಪ್ ಮ್ಯೂಸಿಕ್, ಹಿಂದೂಸ್ತಾನಿ ಸಂಗೀತವನ್ನು ಸೇರಿಸಿ ಬದಲಾವಣೆಗಳನ್ನು ತರುತ್ತೇವೆಂದರೆ ಅದು ಬದಲಾವಣೆ ಎನಿಸುವುದಿಲ್ಲ. ಚೌಚೌ ಮತ್ತು ಜಾಮೂನು ಬೆರೆಸಿ ತಿಂದ ಹಾಗಾಗುತ್ತದೆ. ಅವೆಲ್ಲ ಬೇರೆಬೇರೆ ಚೌಕಟ್ಟುಗಳು. ಪರಂಪರೆಯನ್ನು ಧ್ವಂಸ (ಮ್ಯುಟಿಲೇಟ್) ಮಾಡುವುದು ಬೇಡ. ಕೆಲವರು ಮಾಡುತ್ತಿದ್ದಾರೆ. ’ಪರಂಪರೆ ಏಕೆ ಬೇಕು? ಹೀಗೆ ಮಾಡಿದರೆ ಆಗುವುದಿಲ್ಲವಾ?’ ಎಂದು ಕೇಳುತ್ತಾರೆ. ಉದಾಹರಣೆಗೆ ಎರಡನೇ ಕಾಲದಲ್ಲಿ ಹಾಡುವ ವರ್ಣ, ಬಳಿಕ ಗಣೇಶ ಅಥವಾ ಸರಸ್ವತಿ ಸ್ತುತಿ, ಮಧ್ಯಮಕಾಲದ ಕೀರ್ತನೆ, ಉಪಮುಖ್ಯ ರಾಗ, ಮುಖ್ಯರಾಗ, ರಾಗಂ-ತಾನಂ- ಪಲ್ಲವಿ, ತನಿ, ಲಘು ಹಾಡುಗಳು (ಲೈಟರ್ ಸಾಂಗ್ಸ್), ಭಜನೆ, ಜಾವಳಿ, ಮಂಗಳ – ಹೀಗೆ ಪರಂಪರೆ ಇದೆ. ಇದು ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅವರು ಮಾಡಿಕೊಟ್ಟ ಪರಂಪರೆ. ಅದು ಎಲ್ಲರಿಗೂ ಒಪ್ಪಿಗೆಯಾಗಿ ೫೦ ವ?ಗಳಿಗೂ ಮಿಕ್ಕಿ ನಡೆದುಕೊಂಡು ಬಂದಿದೆ. ಅದರೊಳಗೆ ನಾವು ವಿವಿಧ ವಾಗ್ಗೇಯಕಾರರ ವಿಭಿನ್ನ ರಾಗದ ರಚನೆಗಳು, ವ್ಯತ್ಯಾಸ ಕಾಣುವ ರಾಗಗಳು ಇವೆಲ್ಲ ಗಮನ ಇಟ್ಟುಕೊಂಡು ಮಾಡಬೇಕು. ಇದು ಚೆನ್ನಾಗಿದೆ. ಇದುವರೆಗೂ ಬೆಳೆದುಬಂದಿದೆ. ಈಗ ಕೆಲವು ತಥಾಕಥಿತ (ಸೋಕಾಲ್ಡ್) ವಿದ್ವಾಂಸರುಗಳು ’ಹಾಗೆ ಯಾಕೆ ಮಾಡಬೇಕು? ನಾನೊಂದು ಜಾವಳಿಯಿಂದ ಆರಂಭಿಸುತ್ತೇನೆ’ ಎನ್ನುತ್ತಾರೆ. ಜಾವಳಿ ಒಂದು ಲಘುರಚನೆ; ತನಿಯ ಅನಂತರ ಬರುವಂಥದ್ದು. ಅದರಿಂದಲೇ ಪ್ರಾರಂಭ ಮಾಡಿದರೆ ಹೇಗೆ? ಬರೇ ವರ್ಣವನ್ನು ತೆಗೆದುಕೊಂಡು ಒಂದನೇ ಕಾಲ, ಎರಡನೇ ಕಾಲ, ರಾಗ, ಸ್ವರ ಹಾಕುವುದು ಮುಂತಾಗಿ ಒಂದು ಒಂದೂವರೆ ಗಂಟೆ ಹಾಡಿದರೆ ಹೇಗೆ? ಶ್ರೋತೃಗಳಿಗೆ ವಿಭಿನ್ನ ರಚನೆಗಳು, ರಾಗಗಳು ಬೇಡವೆ? ಕಚೇರಿ ಮಧ್ಯದಲ್ಲಿ ತನಗೆ ಮೂಡಿಲ್ಲವೆಂದು ಎದ್ದುಹೋದರೆ ಹೇಗೆ? ಅದು ಮರ್ಯಾದೆ ಎನಿಸುತ್ತದೆಯೆ? ಈಗ ಕೆಲವರು ಹಾಗೆ ಮಾಡುತ್ತಿದ್ದಾರೆ. ಅದನ್ನು ನಾವು ವಿರೋಧಿಸುತ್ತೇವೆ; ಖಂಡಿಸುತ್ತೇವೆ. ಅದು ಶ್ರೋತೃಗಳಿಗೆ, ಸಂಗೀತಪ್ರಪಂಚಕ್ಕೆ ಅವಮಾನ ಮಾಡಿದಂತೆ.
ಪ್ರ: ಹಿಂದೆ ಬೇರೆ ರೀತಿ ಇತ್ತು. ಅರಿಯಾಕುಡಿ ಇದನ್ನು ಶುರು ಮಾಡಿದರು. ಇದೇ ಏಕೆ ಶಾಶ್ವತ ಆಗಬೇಕು?
ಉ: ಏಕೆಂದರೆ ಇದು ಎಲ್ಲರಿಗೂ ಇ?ವಾಯಿತು. ಅನಂತರ ಬಂದ ಕೆ.ವಿ. ನಾರಾಯಣಸ್ವಾಮಿ, ಡಿ.ಕೆ. ಜಯರಾಮನ್, ಶೆಮ್ಮಂಗುಡಿ, ಚೆಂಬೈ ಮುಂತಾದ ಎಲ್ಲ ದೊಡ್ಡ ಸಂಗೀತಗಾರರು ಇದನ್ನು ಅನುಸರಿಸಿದರು. ಏಕೆಂದರೆ ಇದು ತುಂಬ ಚೆನ್ನಾಗಿದೆ; ಇದರಲ್ಲಿ ಎಲ್ಲವೂ ಕವರ್ ಆಗುತ್ತದೆ. ಹಾಗೆಯೆ ಮುಂದುವರಿಯುತ್ತಿದೆ. ಈಗ
ಕೆಲವರು ಶುರು ಮಾಡಿಕೊಂಡಿದ್ದಾರಲ್ಲ; ಅದನ್ನು ವಿಕ್ಷಿಪ್ತತೆ ಅನ್ನಬೇಕ?. ಅಂತಿಮವಾಗಿ ಅದು ಉಳಿಯುವುದಿಲ್ಲ. ಟ್ರೆಡಿಶನ್ನೇ ಉಳಿಯುವುದು. ಏಕೆಂದರೆ ಇದಕ್ಕೆ ಸುದೀರ್ಘ ಇತಿಹಾಸವಿದೆ, ಪರಂಪರೆ ಇದೆ. ಅರಿಯಾಕುಡಿ ಅವರದ್ದು ಒಂದುರೀತಿ ಸ್ಟ್ಯಾಂಡರ್ಡೈಸ್ (ನಿರ್ದಿ? ಕ್ರಮ) ಆಗಿಬಿಟ್ಟಿದೆ. ಸದ್ಯಕ್ಕಂತೂ ಅದನ್ನು ಬದಲಾಯಿಸಲು ಅಸಾಧ್ಯ. ಏಕೆಂದರೆ ಅದರಲ್ಲಿ ಎಲ್ಲ ಧನಾತ್ಮಕ ಗುಣಗಳಿವೆ; ವಿಭಿನ್ನ ವಾಗ್ಗೇಯಕಾರರು, ವಿಭಿನ್ನ ರಾಗಗಳು, ಉಪಮುಖ್ಯ ರಾಗ, ಮುಖ್ಯರಾಗ ಎಲ್ಲವೂ ಕವರಾಗುತ್ತದೆ. ರಾಗಂ-ತಾನಂ- ಪಲ್ಲವಿ, ತನಿ ಆದ ಮೇಲೆ ೧೫-೨೦ ನಿಮಿ? ಲೈಟರ್ ಸಾಂಗ್ಸ್; ದೇವರನಾಮ, ಜಾವಳಿ, ಭಜನ್ ಇತ್ಯಾದಿ. ಹೀಗೆ ಅದನ್ನು ಬೆಳೆಸಿದ್ದಾರೆ; ಎಲ್ಲರೂ ಅನುಸರಿಸುತ್ತಾರೆ. ಹಿಂದೆ ಒಂದು ಪದ್ಧತಿ ಅಂತ ಇರಲಿಲ್ಲ.
ಪ್ರ: ರಾಗಗಳನ್ನೇ ಪೂರ್ತಿ ಹಾಡುತ್ತಿದ್ದರಂತೆ, ಅಲ್ಲವೆ?
ಉ: ರಾಗಗಳಲ್ಲ; ಒಂದೇ ರಾಗ. ಈವತ್ತೊಂದು ತೋಡಿ ರಾಗ ತೆಗೆದುಕೊಂಡರೆ ಅದು ಕೂಡ ಪೂರ್ತಿ ಆಗುವುದಿಲ್ಲ. ಕೆಳಗಿನ ?ಡ್ಜದಿಂದ ಪಂಚಮದವರೆಗೆ ಈವತ್ತು. ಮತ್ತೆ ನಾಳೆ ಪಂಚಮದಿಂದ ಮೇಲಿನ ?ಡ್ಜಕ್ಕೆ; ಮುಂದಿನ ದಿನ ?ಡ್ಜದಿಂದ ತಾರಸ್ಥಾಯಿಗೆ. ಒಂದು ಕೀರ್ತನೆ ತೆಗೆದುಕೊಂಡರೆ ಅದನ್ನು ಅನೇಕದಿನ ಹಾಡುತ್ತಿದ್ದರು. ರಾಗಗಳಿಗೆ ಮಿತಿ ಇದೆ. ಒಂದು ರಾಗವನ್ನು ತೆಗೆದುಕೊಂಡರೆ ನೀವು ೧೫- ೨೦ ನಿಮಿ? ವಿಸ್ತರಿಸಬಹುದು. ಮತ್ತೆ ಏನೂ ಇರುವುದಿಲ್ಲ. ಅದದೇ ರೆಪಿಟಿಶನ್ ಆಗುತ್ತಿರುತ್ತದೆ. ಆದ್ದರಿಂದ ಪರಿಸ್ಥಿತಿ ಆ ರೀತಿಯಲ್ಲಿ ಇದ್ದಾಗ ಅರಿಯಾಕುಡಿಯವರು ಅದನ್ನು ಮನಗಂಡು ಅದಕ್ಕೊಂದು ಕ್ರಮ ಅಥವಾ ಪದ್ಧತಿಯನ್ನು ತಂದರು. ಒಂದು ಶಿಸ್ತಿನಂತೆ (ಡಿಸಿಪ್ಲಿನ್) ರೂಪಿಸಿದರು. ಎಲ್ಲರೂ ಅದನ್ನು ಒಪ್ಪಿಕೊಂಡು ಮುಂದುವರಿಸಿದರು; ಇದು ಮುಂದಕ್ಕೂ ಹೀಗೆಯೇ ಇರುತ್ತದೆಂದು ನನ್ನ ಭಾವನೆ.
ಪ್ರ: ಹಿಂದೂಸ್ತಾನಿ ಸಂಗೀತದ ರೀತಿಯಲ್ಲಿ ಕರ್ನಾಟಕ ಸಂಗೀತದ ಕಚೇರಿಯನ್ನು ರೂಪಿಸಬಹುದೇ?
ಉ: ಆಗದು. ಎರಡೂ ಬೇರೆಬೇರೆ ಪದ್ಧತಿಗಳು. ಅಲ್ಲಿ ಕೃತಿಗಳೇ ಇಲ್ಲ. ’ಬಂದಿಶ್’ ಎಂದು ಹೇಳುತ್ತಾರೆ. ಕಡಮೆ ಉದ್ದದ ಸಾಹಿತ್ಯ. ಅದನ್ನು ಇಟ್ಟುಕೊಂಡು ಎಳೆದಾಡಿ ಮಾಡುತ್ತಾರೆ. ಅವರ ದೃಷ್ಟಿಕೋನವೇ (ಅಪ್ರೋಚ್) ಬೇರೆ. ಒಂದು ಬಂದಿಶ್ ತೆಗೆದುಕೊಂಡರೆ ಅದನ್ನು ಮುಕ್ಕಾಲುಗಂಟೆ, ಒಂದು ಗಂಟೆ ಹಾಡಿ ಮಧ್ಯಾಂತರ(ಇಂಟರ್ವಲ್)ಕ್ಕೆ ಬಿಡುತ್ತಾರೆ. ಮತ್ತೆ ಸಣ್ಣದಾದ ಛೋಟಾ ಖಯಾಲ್, ಬಡಾ ಖಯಾಲ್ ತೆಗೆದುಕೊಂಡು ಮುಗಿಸಿಬಿಡುತ್ತಾರೆ. ನಮ್ಮಲ್ಲಿ ಆ ಥರ ಆಗುವುದಿಲ್ಲ. ನಮಗೆ ಕಾವೇರುವುದಕ್ಕೇ ಅರ್ಧ ಗಂಟೆ ಬೇಕು. ಮೂರು, ಮೂರುವರೆ ತಾಸಿನ ಕಚೇರಿಯಾದರೂ ಇಂಟರ್ವಲ್ ಕೊಡುವುದಿಲ್ಲ. ನಮ್ಮಲ್ಲಿ ವೈವಿಧ್ಯಮಯ ರಚನೆಗಳಿವೆ. ಜೊತೆಗೆ ನಮ್ಮಲ್ಲಿ ರಾಗಗಳ ಚೌಕಟ್ಟು ಬೇಕಾದಷ್ಟಿವೆ; ಮತ್ತು ತಾಳಗಳಿಗೆ ತುಂಬ ಅವಕಾಶವಿದೆ. ಹಿಂದೂಸ್ತಾನಿಯಲ್ಲಿ ತಾಳಗಳ ವೆರೈಟಿ ಕಡಮೆ; ಲಿಮಿಟೆಡ್. ನಾವು ವಿಭಿನ್ನ ಲಯಾತ್ಮಕ ಕಸುಬುದಾರಿಕೆ (ರಿದಮಿಕ್ ಎಕ್ಸರ್ಸೈಸ್) ಎಲ್ಲ ಮಾಡುತ್ತೇವೆ. ಸ್ವರ ಹಾಕುವುದು, ಮುಕ್ತಾಯ ಇದೆಲ್ಲ ಮಾಡುತ್ತೇವೆ. ಅಲ್ಲಿ ಆ ರೀತಿ ಇಲ್ಲ. ನಾನು ಕ?ಪಟ್ಟರೆ ಒಂದು ಅಥವಾ ಎರಡು ವ?ದಲ್ಲಿ ಒಬ್ಬ ಒಳ್ಳೆಯ ಹಿಂದೂಸ್ತಾನಿ ಸಂಗೀತಗಾರ ಆಗಬಹುದು. ಆದರೆ ಒಬ್ಬ ಹಿಂದೂಸ್ತಾನಿ ಸಂಗೀತಗಾರ ಇ? ಅವಧಿಯಲ್ಲಿ ಒಳ್ಳೆಯ ಕರ್ನಾಟಕ ಸಂಗೀತಗಾರ ಆಗಲಾರನೇನೊ. ಅವರಿಗೆ ಇದು ತುಂಬ ಕಷ್ಟ. ಅವರ ಬಾಯಲ್ಲಿ ಇದು, ಈ ಸಂಸ್ಕೃತ ಪದಗಳು ಹೊರಳುವುದೇ ಇಲ್ಲ.
ಪ್ರ: ಅವರು ರಾಗಕ್ಕೆ ಪ್ರಾಮುಖ್ಯ ನೀಡುತ್ತಾರಲ್ಲವೆ?
ಉ: ಮೆಲೊಡಿ(ಮಾಧುರ್ಯ)ಗೆ ಪ್ರಾಧಾನ್ಯ. ನಾವು ಮೆಲೊಡಿ ಮತ್ತು ರಿದಂ (ಲಯ) ಎರಡಕ್ಕೂ ಪ್ರಾಮುಖ್ಯ ನೀಡುತ್ತೇವೆ. ಜೊತೆಗೆ ವೆರೈಟಿ. ನಮ್ಮಲ್ಲಿ ತುಂಬ ವೈವಿಧ್ಯವಿದೆ. ವರ್ಣಗಳು, ಸಣ್ಣ ಕೀರ್ತನೆಗಳು, ಗಣೇಶ ಸ್ತುತಿ, ಸರಸ್ವತಿ ಸ್ತುತಿ, ವಿವಿಧ ದೇವತೆಗಳ ಸ್ತುತಿ, ವಿಭಿನ್ನ ವಾಗ್ಗೇಯಕಾರರ ಕೃತಿಗಳು, ವಿಭಿನ್ನ ರಾಗಗಳು, ಶುದ್ಧಮಧ್ಯಮ, ಪ್ರತಿಮಧ್ಯಮ, ಸಣ್ಣ ಸಣ್ಣ ಕೃತಿಗಳು, ಚಿಕ್ಕದಾಗಿ ಹಾಡುವುದು, ವಿಸ್ತಾರವಾಗಿ ಹಾಡುವುದು – ಹೀಗೆ ಬೇಕಾದ? ವೆರೈಟಿ ಇದೆ. ಹಿಂದೂಸ್ತಾನಿಯಲ್ಲಿ ಆ ರೀತಿಯವಿಲ್ಲ. ಈಚೆಗೆ ಫ್ಯೂ?ನ್ ಮ್ಯೂಸಿಕ್ ಅಂತ ಒಂದು ಬರ್ತಾ ಇದೆ. ನಿಜವೆಂದರೆ ಅದು ಕನ್ಫ್ಯೂಶನ್ ಮ್ಯೂಸಿಕ್. ಅದರಲ್ಲಿ ಇದೂ ಸರಿಯಾಗಿ ಇರುವುದಿಲ್ಲ, ಅದೂ ಸರಿಯಾಗಿ ಇರುವುದಿಲ್ಲ. ಬಲವಂತವಾಗಿ ಸೇರಿಸುತ್ತಾರೆ. ಇವರೊಂದು ರಾಗ ಹಾಡುವುದು, ಅವರೊಂದು ರಾಗ ಹಾಡುವುದು. ಅದು ನಮಗೆ ಸರಿ ಬರುವುದಿಲ್ಲ.
ಪ್ರ: ಸಂಪ್ರದಾಯದ ವಿಚಾರದಲ್ಲಿ ಶ್ರೀಕಂಠನ್ ಮತ್ತು ನಿಮ್ಮ ಅಭಿಪ್ರಾಯ ಒಂದೇ, ಅಲ್ಲವೇ?
ಉ: ಹೌದು, ಅವರು ತುಂಬ ಸಂಪ್ರದಾಯಸ್ಥರು. ನಮ್ಮ ಫ್ಯಾಮಿಲಿ ಪೂರ್ತಿ ಸಂಪ್ರದಾಯಕ್ಕೆ ಗೌರವ ಕೊಡುವವರು. ನಮ್ಮ ಸಂಗೀತದ ಬಗ್ಗೆ ಪತ್ರಿಕೆಯಲ್ಲಿ ’ರುದ್ರಪಟ್ಣಂ ಸಹೋದರರು ಪಕ್ಕಾ ಸಂಪ್ರದಾಯನಿ?ರು’ (ಟ್ರೆಡಿಶನಲಿಸ್ಟ್ಸ್ ಟು ದಿ ಕೋರ್) ಎಂದು ಬರೆದಿದ್ದಾರೆ. ಜನ ನಮ್ಮ ಸಂಗೀತ ಕೇಳಿ ಶಿಕ್ಷಿತರಾಗಲಿ ಎನ್ನುವ ನಾವು ಅವರಿಗೋಸ್ಕರ ಸಂಗೀತವನ್ನು ಡೈಲ್ಯೂಟ್ (ತೆಳು) ಮಾಡುವುದಿಲ್ಲ. ಹಾಗೆಯೆ ಉಳಿಸಿಕೊಂಡು ಬಂದಿದ್ದೇವೆ. ಕಚೇರಿಗೆ ಬಂದಾಗ ಏನು ಹಾಡಬೇಕೆಂದು ಅಂದುಕೊಂಡಿದ್ದೇವೋ ಅದನ್ನು ಹಾಡುತ್ತೇವೆ; ಶ್ರೋತೃಗಳು ಕೇಳಿದರೆಂದು ಲೈಟ್ ಮಾಡುವುದಿಲ್ಲ.
ಪ್ರ: ತರಗತಿ ನಡೆಸುತ್ತೀರಾ?
ಉ: ಹೌದು, ಕೆಲವರು ಉದ್ಯೋಗಿಗಳು ಬರುತ್ತಾರೆ. ಅವರ ಸಮಯ ನೋಡಿಕೊಂಡು ರಾತ್ರಿ ಕೂಡ ಕ್ಲಾಸ್ಗಳು ಇರುತ್ತವೆ. ಮೊದಲು ಆಗುತ್ತಿರಲಿಲ್ಲ. ನಿವೃತ್ತನಾದ ಮೇಲೆ ತರಗತಿ ಶುರುಮಾಡಿದ್ದು. ಈಗ ಸಯನ್ಸ್ ಬಿಟ್ಟು ಸಂಗೀತಕ್ಕೆ ಬಂದಿದ್ದೇನೆ. ಶಿ?ರಲ್ಲಿ ನನ್ನ ಮಗಳು ಹಾಡುತ್ತಾಳೆ. ಇನ್ನೊಬ್ಬ ಶ್ರೀಹರಿ ಅಂತ; ಚಾರ್ಟರ್ಡ್ ಅಕೌಂಟೆಂಟ್, ಆತ ಹಾಡುತ್ತಾನೆ. ಮೈಸೂರಿನ ಎನ್. ಶ್ರೀನಾಥ್ ಕಚೇರಿ ಮಾಡುತ್ತಾರೆ; ಅವರಿಗೆ ಹಿಂದೆ ತಂದೆ ಹೇಳಿಕೊಟ್ಟಿದ್ದರು. ಒಟ್ಟು ೮-೧೦ ಜನ ಕ್ಲಾಸ್ಗೆ ಬರುತ್ತಾರೆ. ಸೀನಿಯರ್ಸ್ ಮಾತ್ರ ತೆಗೆದುಕೊಳ್ಳುವುದು. ಬಾಲ್ಯಪಾಠದವರು ಬಂದರೆ ಮಗಳ ಬಳಿಗೆ ಕಳುಹಿಸುತ್ತೇನೆ; ಅವಳು ಇಲ್ಲೇ ಹತ್ತಿರ (ರಾಜಾಜಿನಗರ) ಇದ್ದಾಳೆ. ಆಕಾಶವಾಣಿಯ ’ಗಾನವಿಹಾರ’ದಲ್ಲೂ ಸಂಗೀತಪಾಠ ಮಾಡಿದ್ದೇನೆ; ಮೈಸೂರಿನಲ್ಲಿ ೪-೫ ಸಲ ಆಗಿದೆ.
ಪ್ರ: ಆಕಾಶವಾಣಿ ಜೊತೆಗಿನ ಸಂಬಂಧದ ಬಗ್ಗೆ ಹೇಳಿ.
ಉ: ರಾಷ್ಟ್ರೀಯ ಕಾರ್ಯಕ್ರಮ, ಸಂಗೀತ ಸಮ್ಮೇಳನ ಅದರಲ್ಲೆಲ್ಲ ಹಾಡಿದ್ದೇವೆ. ಜೊತೆಯಾಗಿಯೇ ಹಾಡುತ್ತಿದ್ದೆವು. ಆದರೆ ಅಣ್ಣನವರಿಗೆ ಬೇರೆಬೇರೆ ಕಡೆಗೆ ವರ್ಗವಾದ ಕಾರಣ ಯುಗಳ ಗಾಯನ ತಪ್ಪಿತು. ಇಬ್ಬರೂ ’ಎ-ಟಾಪ್’ ಗ್ರೇಡ್. ೧೯೬೦ರ ದಶಕದ ಹೊತ್ತಿಗೆ ಆಕಾಶವಾಣಿಯಲ್ಲಿ ಸಂಗೀತಸ್ಪರ್ಧೆ ಇರುತ್ತಿತ್ತು. ಅದರಲ್ಲಿ ನಾವು ಇಬ್ಬರೂ ಪ್ರತ್ಯೇಕವಾಗಿ ಹಾಡಿ ಇಬ್ಬರಿಗೂ ಬಹುಮಾನ ಬಂತು. ರಾ?ಪತಿ ಡಾ| ಎಸ್. ರಾಧಾಕೃ?ನ್ ಬಹುಮಾನ ನೀಡಿದ್ದರು. ಅದರಿಂದಾಗಿ ನೇರ ಬಿ ಗ್ರೇಡಾಯಿತು. ಮತ್ತೆ ಬಿ-ಹೈ, ಎ, ಎ-ಟಾಪ್ ಎಲ್ಲ ಆಯಿತು. ಇಬ್ಬರೂ ಒಂದೇ ಗ್ರೇಡಾದ ಕಾರಣ ಈಗ ಕೆಲವು ಸಲ ಒಟ್ಟಿಗೆ ಹಾಡಿಸುತ್ತಾರೆ. ಅದರಿಂದ ಅವರಿಗೆ ಒಂದು ಸ್ಲಾಟ್ ಉಳಿಯುತ್ತದೆ. ಆದರೆ ಪ್ರಸಾರ ಭಾರತಿ ಆದ ಮೇಲೆ ಅವರಿಗೆ ಫಂಡ್ಸ್ ಕಮ್ಮಿ ಆಗಿದೆ. ಹಿಂದೆ ವ?ಕ್ಕೆ ೨-೩ ಚಾನ್ಸ್ ಸಿಗುತ್ತಿದ್ದುದು ಈಗ ಒಂದು ಸಿಗುವುದೇ ಹೆಚ್ಚು ಎಂಬಂತಾಗಿದೆ.
ಪ್ರ: ಸಂಗೀತಪಾಠಕ್ಕೆ ನಿಮ್ಮದೇ ವಿಶಿಷ್ಟ ಕ್ರಮ ಇದೆಯಾ?
ಉ: ಹಾಗಂತ ಏನೂ ಇಲ್ಲ. ಆದರೆ ಕಟ್ಟುನಿಟ್ಟಾಗಿ ಮಾಡುತ್ತೇನೆ. ವರ್ಣದಿಂದ ಶುರು ಮಾಡುವುದು. ಅದರಲ್ಲಿ ಮೂರು ಕಾಲ ಪಕ್ಕಾ ಆಗಬೇಕು. ಅದರಲ್ಲಿ ಕಾಲಪ್ರಮಾಣ, ಸಾಹಿತ್ಯ ಬಿಡುವುದು, ಶ್ರುತಿ ಸೇರದಿರುವುದು ಈ ಥರ ಏನೂ ಇರಕೂಡದು; ಇದ್ದರೆ ಕೂಡಲೇ ತಿದ್ದುತ್ತೇನೆ. ಅದು ಪಕ್ಕಾ ಆಗಿ ಒಂದುಸಲ ಟ್ರ್ಯಾಕಿಗೆ ಬಂದ ಮೇಲೆ ಕೀರ್ತನೆ, ರಾಗಗಳು. ಎಲ್ಲರೂ ಹಾಗೇ ಮಾಡುವುದು. ಆದರೆ ನಾವು ಒಂದು ತಾಸು ಹೇಳಿಕೊಡುತ್ತೇವೆ; ಅದು ಒನ್ ಟು ಒನ್. ಗುಂಪಿನಲ್ಲಿ ಹೇಳಿಕೊಡುವುದೇ ಇಲ್ಲ. ಅದರಿಂದಾಗಿ ನೇರ ಗಮನ ಇರುತ್ತದೆ; ವಾರಕ್ಕೆ ಎರಡು ಕ್ಲಾಸ್.
ಪ್ರ: ಕರ್ನಾಟಕ ಸಂಗೀತವನ್ನು ಜನರ ಸಮೀಪ ಒಯ್ಯಲು ಏನು ಮಾಡಬಹುದು?
ಉ: ಮಕ್ಕಳು ಕಲಿಯಲು ಶುರುಮಾಡುತ್ತಾರೆ. ಆಮೇಲೆ ಅವರಿಗೆ ಆಸಕ್ತಿ ಕಡಮೆಯಾಗುತ್ತದೆ. ನೀವು ಕಚೇರಿಗಳಿಗೆ ಹೋದರೆ ಯಾವಾಗಲೂ ವಯಸ್ಸಾದವರು, ಹಿರಿಯ ನಾಗರಿಕರೇ ಇರುತ್ತಾರೆ. ಕಲಿಯುವವರು ಯಾರೂ ಕಾಣುವುದಿಲ್ಲ.
ಪ್ರ: ಯುವಜನರು ರೆಕಾರ್ಡ್ಗಳನ್ನು ಕೇಳುತ್ತಾರೇನೋ?
ಉ: ಪ್ರಯೋಜನವಿಲ್ಲ. ಲೈವ್ ಕಚೇರಿಗಳನ್ನು ಕೇಳಬೇಕು. ಆಗಲೇ ಅವರಿಗೆ ಪರಿಚಯ ಆಗುವುದು. ಕಚೇರಿ ಅಂದರೆ ಹೇಗಿರಬೇಕು? ಅಲ್ಲಿನ ಮರ್ಯಾದೆಗಳೇನು, ಯಾವ ಥರ ಹಾಡುತ್ತಾರೆ? ಬೇರೆ ಬೇರೆಯವರ ಶೈಲಿ ಏನು? ಏನು ಹಾಡಿದರೆ ಅಪಸ್ವರ, ಏನು ಹಾಡಿದರೆ ಸುಸ್ವರ? – ಎಂಬುದು ಅವರಿಗೆ ತಿಳಿದಿರಬೇಕು. ತಿಳಿಯಬೇಕಾದರೆ ಕೆಟ್ಟ ಸಂಗೀತಕ್ಕೂ ಹೋಗಬೇಕು; ಒಳ್ಳೆಯದಕ್ಕೂ ಹೋಗಬೇಕು; ಆಗ ಒಳ್ಳೆಯದರ ರುಚಿ ಗೊತ್ತಾಗುತ್ತದೆ. ಅದಕ್ಕಾಗಿ ಲೈವ್ ಕಚೇರಿಗಳಿಗೆ ಹೋಗಲೇಬೇಕು. ಯೂಟ್ಯೂಬ್ನಲ್ಲಿ ಕೇಳುತ್ತೇವೆ ಅಂದರೆ ಆಗುವುದಿಲ್ಲ. ಅದು ಅ? ಇಂಪ್ಯಾಕ್ಟ್ ಕೊಡದು. ಮತ್ತು ಈವತ್ತಿನ ಮಕ್ಕಳಿಗೆ ಟೈಮೇ ಸಿಗುವುದಿಲ್ಲ. ಎಸ್ಸೆಸ್ಸೆಲ್ಸಿ, ಪಿಯುಸಿಗೆ ಬರುವಾಗ ಶಿಕ್ಷಣದ ಒತ್ತಡದಿಂದಾಗಿ ಸಂಗೀತ ನಿಂತುಹೋಗುತ್ತದೆ. ಆನಂತರ ಕೆಲಸಕ್ಕೆ ಸೇರಿಕೊಂಡರೆ ಡ್ಯೂತ್ತಡ ಜಾಸ್ತಿ ಇರುತ್ತದೆ; ಸಮಯ ಸಿಗುವುದಿಲ್ಲ. ಎರಡನೆಯದಾಗಿ ಸಂಬಳ ಬರುತ್ತದೆ. ಕೈಯಲ್ಲಿ ದುಡ್ಡಿರುವಾಗ ಮಜವಾಗಿರೋಣ ಅನ್ನಿಸುತ್ತದೆ.
ಪ್ರ: ಮುಂದಿನ ಕಚೇರಿಗಳು ಎಲ್ಲಿವೆ?
ಉ: ರಾಮೋತ್ಸವದ ವೇಳೆ ಬೆಂಗಳೂರಿನಲ್ಲಿ ಎರಡು ಕಚೇರಿಗಳಿವೆ. ಆನಂತರ ಅಮೆರಿಕದ ಕ್ಲೀವ್ಲ್ಯಾಂಡ್ ಸಂಗೀತೋತ್ಸವಕ್ಕೆ ಕರೆದಿದ್ದಾರೆ. ಏಪ್ರಿಲ್ ಮೊದಲವಾರ ಹೋಗಬೇಕು. ಅದು ೨-೩ ವಾರ ಆಗುತ್ತದೆ. ಅದಕ್ಕಾಗಿ ಕೆಲವು ಕಚೇರಿ ಕೈಬಿಟ್ಟೆವು. ’ಕ್ಲೀವ್ಲ್ಯಾಂಡ್ ತ್ಯಾಗರಾಜ ಆರಾಧನಾ ಉತ್ಸವ’ ಈಗ ಮೈಲಿಗಲ್ಲಾಗಿದೆ. ಒಂದು ವಾರ ನಡೆಯುತ್ತದೆ.
ಕೆಮಿಸ್ಟ್ರಿಯಲ್ಲಿ ನನಗೆ ತುಂಬ ಅವಕಾಶವಿತ್ತು. ಜರ್ಮನಿಗೆ ಹೋದಾಗ ಅಲ್ಲೇ ಖಾಯಂ ಕೆಲಸ ಸಿಗುತ್ತಿತ್ತು. ಆದರೆ ಸಂಗೀತದಲ್ಲಿ ಆಗಲೇ ಸಾಕ? ಹೆಸರು ಮಾಡಿದ್ದೆವು. ಸಂಗೀತದಲ್ಲಿ ಒಲವಿತ್ತು. ಮತ್ತು ನಮ್ಮ ತಾಯಿಯವರಿಗೆ ಸಂಗೀತ ತುಂಬ ಇ?ವಾಗಿತ್ತು. ಅಣ್ಣನವರಿಗೆ ನಿರಾಶೆ ಆಗುತ್ತದೆ ಮತ್ತು ತಾಯಿಗೆ ಬೇಜಾರಾಗುತ್ತದೆ ಎಂದು ಅಲ್ಲಿನ ಅವಕಾಶವನ್ನು ನಿರಾಕರಿಸಿ ವಾಪಸು ಬಂದೆ. ಅಲ್ಲೇ ನಿಂತಿದ್ದರೆ ಸಂಗೀತದ ಕಥೆ ಮುಗಿಯುತ್ತಿತ್ತು.