ರಾಯರು ಸರ್ಕಾರದ ಒಂದು ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ತುಂಬ ಪ್ರಾಮಾಣಿಕ ವ್ಯಕ್ತಿ. ’ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಮನಸಾರೆ ನಂಬಿಕೊಂಡಿದ್ದರು. ತಮ್ಮ ಪಾಲಿನ ಕೆಲಸವನ್ನು ಶಿಸ್ತು ಶ್ರದ್ಧೆಗಳಿಂದ ನೆರವೇರಿಸುತ್ತಿದ್ದರು. ಓದುವುದು ಮತ್ತು ಬರೆಯುವುದು ಕೂಡ ರಾಯರಿಗೆ ಬಹಳ ಇಷ್ಟ. ಹಗಲಿಡೀ ಆಫೀಸಿನಲ್ಲಿ ದುಡಿಯಬೇಕಾಗಿದ್ದರಿಂದ ಬೆಳಗಿನಜಾವವೇ ಎದ್ದು ಅವರು ಓದು-ಬರಹದ ಕೆಲಸವನ್ನು ಮಾಡಿಕೊಳ್ಳುತ್ತಿದ್ದರು. ರಾತ್ರಿಯೂ ಹಾಗೆಯೇ. ಊಟವಾದ ಮೇಲೆ ತಮ್ಮ ಓದುವ ಮೇಜಿನ ಮುಂದೆ ಕೂತರೆ, ಮಧ್ಯರಾತ್ರಿಯವರೆಗೂ ಬರಹದ ಕಾಯಕ!
ತಮ್ಮ ಕೆಲಸದ ನಿಮಿತ್ತ ರಾಯರು ಹಳ್ಳಿಹಳ್ಳಿಗೆ ಭೇಟಿ ಕೊಡಬೇಕಾಗುತ್ತಿತ್ತು. ಪ್ರತಿಯೊಂದು ಹಳ್ಳಿಯಲ್ಲಿ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿವೆಯೇ, ಹಳ್ಳಿಯ ಜನರಿಗೆ ಇದರಿಂದ ಉಪಯೋಗ ಆಗುತ್ತಿದೆಯೇ ಎಂದೆಲ್ಲ ವಿವರವಾಗಿ ಪರಿಶೀಲಿಸಬೇಕಾಗುತ್ತಿತ್ತು. ರಾಯರು ಹಳ್ಳಿಗೆ ಹೋಗುತ್ತಿದ್ದುದು ಸೈಕಲ್ಲಿನಲ್ಲಿಯೇ! ಹ್ಯಾಟು-ಬೂಟು ಹಾಕಿಕೊಂಡು ಒಬ್ಬ ಶಿಸ್ತಿನ ಸಿಪಾಯಿಯ ಹಾಗೆ ರಾಯರು ಹೊರಟುಬಿಡುತ್ತಿದ್ದರು.
ಸಂಜೆ ಆಗುತ್ತಿದ್ದಂತೆ ರಾಯರು ತಮ್ಮ ಕೆಲಸವನ್ನು ಮುಗಿಸಿ ಹಳ್ಳಿಯಲ್ಲಿರುವ ದೇವಸ್ಥಾನ-ಬಸದಿಗಳನ್ನು ಹುಡುಕಿಕೊಂಡು ಹೊರಟುಬಿಡುವರು. ಅವುಗಳ ಸುತ್ತಮುತ್ತ ಅಲ್ಲೇ ಇರುವ ವೀರಗಲ್ಲುಗಳು, ಮಾಸ್ತಿಕಲ್ಲುಗಳು, ಶಾಸನಗಳು ಇವುಗಳ ಮುಂದೆ ಗಂಟೆಗಟ್ಟಲೆ ನಿಂತು ಪರೀಕ್ಷಿಸುವರು. ಕೆಲವೊಂದು ವಿವರಗಳನ್ನು ಕೈಯಲಿದ್ದ ಪುಸ್ತಕದಲ್ಲಿ ಬರೆದುಕೊಳ್ಳುವರು. ಮನೆಗೆ ಬಂದ ಮೇಲೆ ಅವುಗಳ ವಿವರ ಪರಿಶೀಲನೆ; ಅಗತ್ಯ ಅನಿಸಿದ್ದನ್ನು ತಮ್ಮ ಬರವಣಿಗೆಗೆ ಬಳಕೆ.
ಹೀಗವರು ಒಂದು ದಿನ ಪಾಳುಬಿದ್ದ ದೇಗುಲದ ಸ್ಮಾರಕವೊಂದರ ಮುಂದೆ ತಲ್ಲೀನರಾಗಿ ನಿಂತು, ಅಸ್ಪ? ಬರಹ ಇದ್ದ ಕಲ್ಲೊಂದನ್ನು ಪರಿಶೀಲಿಸುತ್ತಿದ್ದಾಗ ರೈತ ನಿಂಗೇಗೌಡ ಅಲ್ಲಿಗೆ ಬಂದ. ಅವನೊಂದಿಗೆ ಅವನ ಒಂದಿಬ್ಬರು ಗೆಳೆಯರೂ ಇದ್ದರು.
ಯಾವಾಗಲೂ ಗಂಭೀರವಾಗಿರುವ, ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಳ್ಳುವ ರಾಯರನ್ನು ಕಂಡರೆ ನಿಂಗೇಗೌಡನಿಗೆ ಪ್ರೀತಿ ಮತ್ತು ಭಕ್ತಿ. ರಾಯರೂ ಎದುರಿಗೆ ಕಂಡಾಗಲೆಲ್ಲ ಅವನನ್ನು ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ಹಾಗಾಗಿ, ಅವರವರಲ್ಲಿ ಒಂದು ಬಗೆಯ ವಿಶೇಷ ಸ್ನೇಹ.
ಇದೀಗ ನಿಂಗೇಗೌಡ ರಾಯರ ಹತ್ತಿರ ಬಂದು ಅವರಿಗೆ ನಮಸ್ಕರಿಸಿದ.
“ಚೆನ್ನಾಗಿದ್ದೀಯಾ ನಿಂಗೇಗೌಡ?” ರಾಯರೂ ಪ್ರೀತಿಯಿಂದ ವಿಚಾರಿಸಿದರು.
“ಹೌದು ಬುದ್ದೀ. ಚೆನ್ನಾಗಿದೀನಿ. ಬಾಳದಿನದಿಂದ ನಿಮ್ಮನ್ನು ಒಂದು ಮಾತು ಕೇಳಬೇಕೂಂತ ಇದ್ದೆ. ಕೇಳಲಾ ಸ್ವಾಮಿ?”
“ಅದಕ್ಕೇನಪ್ಪ, ಕೇಳು” ರಾಯರು ನಕ್ಕರು.
“ಅಲ್ಲ ಬುದ್ದಿ, ಆಫೀಸು ಕೆಲಸ ಮುಗೀತು ಅಂದ್ರೆ ದೇವಸ್ಥಾನದ ಮುಂಭಾಗದಲ್ಲಿ ಬಿದ್ದಿರೋ ಕಲ್ಲುಗಳನ್ನು ಹುಡುಕಿಕೊಂಡು ಹೊರಟುಬಿಡ್ತೀರಲ್ಲ ನೀವು, ಆ ಕಲ್ಲುಗುಂಡುಗಳ ಜತೆ ಏನು ಸಾಮಿ ನಿಮ್ಮ ಮಾತುಕತೆ?” ನಿಂಗೇಗೌಡ ಮುಗ್ಧತೆಯಿಂದ ಪ್ರಶ್ನಿಸಿದ.
ರಾಯರು ಯಾರು ಏನೇ ಕೇಳಿದರೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಕೇಳುವವರಿಗೆ ಸಮಾಧಾನವಾಗುವಂತೆ ಪ್ರಾಮಾಣಿಕವಾಗಿ ಉತ್ತರಿಸುತ್ತಿದ್ದರು. ಇದೀಗ ಸರಳ ಮನು? ನಿಂಗೇಗೌಡನ ಮುಗ್ಧ ಪ್ರಶ್ನೆಗೂ ಅವನ ಕುತೂಹಲ ತಣಿಯುವಂತೆ ವಿವರವಾಗಿ ಉತ್ತರ ಹೇಳಿದರು.
“ಇವೆಲ್ಲ ಸಾಧಾರಣವಾದ ಕಲ್ಲುಗಳಲ್ಲಪ್ಪ ನಿಂಗೇಗೌಡ. ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ ಎಲ್ಲವೂ ಈ ಕಲ್ಲುಗುಂಡುಗಳಲ್ಲೇ ಅಡಗಿರುವುದು. ಇದು ನಿನಗೆ ಗೊತ್ತೇ?”
“ಹಂಗಂದರೇನು ಸಾಮಿ? ಸ್ವಲ್ಪ ಬಿಡಿಸಿ ಹೇಳಿ.”
“ನೋಡಪ್ಪ ನಿಂಗೇಗೌಡ, ನಮ್ಮ ಹಿಂದಿನವರು ಬಹಳ ಜಾಣರಾಗಿದ್ದರು, ಶೂರರಾಗಿದ್ದರು. ವೈಭವ ತುಂಬಿತುಳುಕುತ್ತಿತ್ತು ನಮ್ಮಲ್ಲಿ! ಅದನ್ನೆಲ್ಲ ಅವರು ನಮಗೂ ತಿಳಿಯಲಿ ಅಂತ ಈ ರೀತಿ ಕಲ್ಲುಗಳ ಮೇಲೆ ಬರೆದು ನಿಲ್ಲಿಸಿದ್ದಾರೆ. ನಾನು ಮಾತ್ರ ಅಲ್ಲ, ನೀವೆಲ್ಲರೂ ಹೀಗೆಯೇ ಈ ಕಲ್ಲುಗಳನ್ನು ಓದಬೇಕು. ನಮ್ಮ ಚರಿತ್ರೆಯನ್ನು ತಿಳಿದುಕೊಳ್ಳಬೇಕು.”
“ಅದ್ಯಾಕೆ ಬುದ್ದಿ ನಾವೆಲ್ಲ ಈ ಕಲ್ಲುಗಳನ್ನು ಓದಬೇಕು, ಅದರಿಂದ ಏನು ಪ್ರಯೋಜನ?” ನಿಂಗೇಗೌಡ ಆಶ್ಚರ್ಯದಿಂದ ಕೇಳಿದ.
“ಅವಶ್ಯವಾಗಿ ಓದಬೇಕಪ್ಪ, ನಿಂಗೇಗೌಡ. ಬ್ರಿಟಿ?ರು ಬಹಳ ಕಾಲ ನಮ್ಮನ್ನು ಆಳಿಬಿಟ್ಟರು. ಅದರಿಂದ ನಾವು ಯಾರು ಎಂಬುದೇ ನಮಗೆ ಪೂರ್ತಿ ಮರೆತುಹೋಗಿದೆ. ಇದಂತು ಬಹಳ ದುಃಖದ ವಿಚಾರ. ನಾವು ಯಾರು, ಹೇಗೆಲ್ಲ ಧೀರರಾಗಿ ಬಾಳಿದ್ದೆವು ಎಂಬುದನ್ನೆಲ್ಲ ನಾವು ತಿಳಿದುಕೊಳ್ಳಲೇಬೇಕು. ಆಗ ಮತ್ತೆ ಕೆಚ್ಚೆದೆಯಿಂದ ಬಾಳಲು ಸ್ಫೂರ್ತಿ ಸಿಗುತ್ತದೆ.”
“ಹಂಗಾರೆ ಈ ಕಲ್ಲುಗಳೆಲ್ಲ ನಮ್ಮ ಹಿಂದಿನವರ ಕತೆಗಳನ್ನು ಹೇಳುತ್ತವೆ ಅನ್ನಿ?”
“ಚೆನ್ನಾಗಿ ಹೇಳಿದೆ ನಿಂಗೇಗೌಡ. ಈ ಕಲ್ಲುಗುಂಡುಗಳು ಮಾಡುವುದು ಆ ಕೆಲಸವನ್ನೇ. ನಮ್ಮ ಸಂಸ್ಕೃತಿ ಯಾವುದು? ನಮ್ಮ ನಾಗರಿಕತೆ ಹೇಗಿತ್ತು? ಇವುಗಳನ್ನೆಲ್ಲ ಖಚಿತವಾಗಿ ತಿಳಿಸುತ್ತವೆ.”
“ರಾಜ-ಮಹಾರಾಜರ ಬಗ್ಗೆನೂ ಹೇಳುತ್ತವಾ ಸಾಮಿ?” ನಿಂಗೇಗೌಡ ಕುತೂಹಲದಿಂದ ಕೇಳಿದ.
“ಹೌದಪ್ಪ. ನಮ್ಮಲ್ಲಿ ಯಾವ ಯಾವ ಶೂರರು ರಾಜ್ಯ ಆಳಿದರು, ಅವರ ಆಡಳಿತಕ್ರಮ ಹೇಗಿತ್ತು? ನಮ್ಮ ಹಿರಿಯರು ಏನೆಲ್ಲ ಸಾಧನೆ ಮಾಡಿದರು – ಇವೆಲ್ಲವೂ ಈ ಕಲ್ಲುಗಳಲ್ಲೇ ಅಡಗಿವೆ.”
“ಓಹೋ! ಹಂಗಾರೆ ಈ ಕಲ್ಲುಗಳು ಅದೊಂದು ಥರಾ ಪುಸ್ತಕ ಇದ್ದ ಹಾಗೆ ಅನ್ನಿ ಬುದ್ದಿ…”
ಮೆಚ್ಚುಗೆಯಿಂದ ರಾಗ ಎಳೆದ ನಿಂಗೇಗೌಡ.
“ಜಾಣ ನೀನು! ಈಗ ವಿ?ಯ ತಿಳೀತಲ್ಲ. ಇನ್ನು ಮುಂದೆ ಈ ಕಲ್ಲುಗಳನ್ನು ಎಲ್ಲಿ ಕಂಡರೂ ಜೋಪಾನವಾಗಿ ಸಂರಕ್ಷಣೆ ಮಾಡೋ ಜವಾಬ್ದಾರಿ ನಿನ್ನದು! ನಮ್ಮೆಲ್ಲರದು!”
“ಖಂಡಿತ ಮಾಡ್ತೀನಿ ಬುದ್ದಿ, ಈಗ ನೀವು ಹೇಳಿದ್ದನ್ನೆಲ್ಲ ನಾನು ಎಲ್ಲರಿಗೂ ಹೇಳ್ತೀನಿ” ನಿಂಗೇಗೌಡ ಮನಸ್ಸು ತುಂಬಿ ಹೇಳಿದ.
“ಸಂತೋ? ಕಣಪ್ಪ. ನಾನಿನ್ನು ಬರ್ತೀನಿ” ರಾಯರು ಹೊರಟರು.
“ಬನ್ನಿ ಸಾಮಿ, ಒಂದು ಎಳನೀರು ಕೊಚ್ಚಿಕೊಡ್ತೀನಿ.”
“ಬೇಡ ಬೇಡ, ಹೊತ್ತಾಯ್ತು. ಒಳ್ಳೆಯದಾಗಲಿ ನಿನಗೆ.”
ಶಿಸ್ತಾಗಿ ಸೈಕಲ್ಲೇರಿ ಗಮ್ಮತ್ತಾಗಿ ಹೊರಟುಬಿಟ್ಟರು ರಾಯರು.
ನಿಂಗೇಗೌಡ ಪ್ರೀತಿಯಿಂದ ಅವರಿಗೆ ಕೈಮುಗಿದ.