ಟಿ.ಎಸ್. (ತಲಕಾಡು ಶ್ರೀನಿವಾಸಯ್ಯ) ನಾಗಾಭರಣ (ಜನನ: ೧೯೫೩) ಭಾರತೀಯ ಚಲನಚಿತ್ರರಂಗದಲ್ಲಿ ಪ್ರಸಿದ್ಧರು. ನಟ-ನಿರ್ದೇಶಕ ಸ್ಥಾನವನ್ನೂ ಮೀರಿದ, ಒಬ್ಬ ಪೂರ್ಣಪ್ರಮಾಣದ ರಂಗಕರ್ಮಿಯಾಗಿ ಅವರು ಕನ್ನಡ ರಂಗಭೂಮಿಯಲ್ಲೂ ಗಣನೀಯ ಸೇವೆ ಸಲ್ಲಿಸಿದ್ದಾರೆ. ನಾಗಾಭರಣ ಅವರು ಕನ್ನಡ ಚಿತ್ರರಂಗದಲ್ಲಿ – ಕಲಾತ್ಮಕ ಹಾಗೂ ವಾಣಿಜ್ಯಾತ್ಮಕ – ಹೀಗೆ ಎರಡೂ ಧಾರೆಗಳಲ್ಲಿ ಸಮನ್ವಯವನ್ನು ಸಾಧಿಸಿಕೊಂಡ ಯಶಸ್ವೀ ಚಿತ್ರಗಳನ್ನು ನೀಡಿರುವ ಒಬ್ಬ ಅಪರೂಪದ ನಿರ್ದೇಶಕ; ಕಿರುತೆರೆಯಲ್ಲೂ ಕೂಡ ಯಶಸ್ಸನ್ನು ಕಂಡವರು. ರಾಜ್ಯಮಟ್ಟದಿಂದ ಅಂತಾರಾಷ್ಟ್ರೀಯಮಟ್ಟದವರೆಗೂ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದುಕೊಂಡವರು. ’ಕರ್ನಾಟಕ ಚಲನಚಿತ್ರ ಅಕಾಡೆಮಿ’ಯ ಅಧ್ಯಕ್ಷರಾಗಿದ್ದವರು.
ಇತ್ತೀಚೆಗೆ, 64ನೇ ’ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ’ದಲ್ಲಿ, ಅವರು ನಿರ್ದೇಶಿಸಿದ ’ಅಲ್ಲಮ’ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ (ಬಾಪು ಪದ್ಮನಾಭ) ಹಾಗೂ ಪ್ರಸಾಧನ ವಿಭಾಗ (ಎನ್.ಕೆ. ರಾಮಕೃಷ್ಣ) ಗಳಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿಗಳು ದೊರೆತವು. ಈ ಸಂದರ್ಭದಲ್ಲಿ ’ಉತ್ಥಾನ’ದ ಓದುಗರಿಗಾಗಿ ನಡೆಸಿದ ಸಂವಾದದ ಪೂರ್ಣಪಾಠದ ಮೊದಲ ಭಾಗ ಇಲ್ಲಿದೆ.
ಪ್ರಶ್ನೆ: ನಿಮ್ಮ ಬಾಲ್ಯವನ್ನು ಹೇಗೆ ನೆನಪಿಸಿಕೊಳ್ಳುತ್ತೀರಿ?
ಉತ್ತರ: ನನ್ನ ಹುಟ್ಟೂರು ತಲಕಾಡು. ನನ್ನ ತಾತಂದಿರು ಒಬ್ಬೊಬ್ಬರೂ ಒಂದೊಂದರಲ್ಲಿ ಪ್ರವೀಣರು. ಒಬ್ಬರು ಮದ್ದಲೆ ನುಡಿಸುವುದರಲ್ಲಿ, ಇನ್ನೊಬ್ಬರು ಯಕ್ಷಗಾನ(ಬಯಲುಸೀಮೆಯಲ್ಲಿ ಬಯಲಾಟ)ಗಳಲ್ಲಿ ಪಾತ್ರ ಮಾಡುತ್ತಿದ್ದವರೂ ಗಮಕಿಗಳೂ ಆಗಿದ್ದರು. ರಾಮಾಯಣ, ಮಹಾಭಾರತ ಮುಂತಾದವುಗಳನ್ನು ಬಹಳ ಸರಾಗವಾಗಿ ಹೇಳುತ್ತಿದ್ದರು. ಇವೆಲ್ಲವೂ ನನ್ನನ್ನು ಗಾಢವಾಗಿ ಪ್ರಭಾವಿಸಿದವು. ತಲಕಾಡಿನ ಆ ಬಾಲ್ಯದ ದಿನಗಳ ಪ್ರಭಾವವನ್ನು ನೀವು ನನ್ನ ಸಿನೆಮಾಗಳಲ್ಲಿಯೂ ಕಾಣಬಹುದು. ನನ್ನ ಸಿನೆಮಾಗಳಲ್ಲಿ ಕಂಡುಬರುವ ಜಾನಪದೀಯ ಅಂತಃಸತ್ತ್ವಗಳಿಗೆ ನನ್ನ ಬಾಲ್ಯದ ದಿನಗಳೇ ಕಾರಣ. ಬೆಳಗ್ಗೆಯೆದ್ದರೆ ಕಂಸಾಳೆ, ಸಂಜೆಯಾದರೆ ಕಹಳೆ ಮೊಳಗುವುದನ್ನು, ಬಯಲಾಟದ ಭಾಗವತಿಕೆಯನ್ನು ಕೇಳುತ್ತಿದ್ದೆ; ನಮ್ಮ ತಾತನೇ ಜಗಲಿಯಲ್ಲಿ ಕುಳಿತು ಹೇಳುತ್ತಿದ್ದ ಗಮಕಗಳನ್ನು ಕೇಳುತ್ತಿದ್ದೆ. ನಮ್ಮ ಅಜ್ಜಿ ಒಂದು ಗ್ರಂಥಾಲಯವನ್ನು ನಿರ್ಮಿಸಿಕೊಂಡಿದ್ದರು. ಅದರಲ್ಲಿ ’ಬೃಹತ್ಕಥಾಮಂಜರಿ’ಯಂತಹ ಪುಸ್ತಕಗಳಿದ್ದವು. ಅದನ್ನು ಹುಡುಕಿ ಓದುತ್ತಿದ್ದೆ. ಇದು ನನ್ನ ಮೇಲೆ ಬಹಳ ಪ್ರಭಾವ ಬೀರಿದೆ. ನನ್ನ ಮಿಡ್ಲ್ಸ್ಕೂಲ್ವರೆಗಿನ ಆ ದಿನಗಳು ನನ್ನ ಬೆಳವಣಿಗೆಯಲ್ಲಿ ದೊಡ್ಡ ಕಣಜ.
ನನ್ನ ಮಿಡ್ಲ್ಸ್ಕೂಲ್ ಪ್ರಾರಂಭವಾದದ್ದು ಬೆಂಗಳೂರಿನಲ್ಲಿ – ಚಾಮರಾಜಪೇಟೆಯ ಮಸೀದಿ ಗ್ರೌಂಡ್ನ ಎದುರಿಗಿರುವ ಕಾರ್ಪೊರೇ?ನ್ ಸ್ಕೂಲ್ನಲ್ಲಿ; ಅದರ ಹಿಂಭಾಗದಲ್ಲಿಯೇ ಹೈಸ್ಕೂಲ್ ಶಿಕ್ಷಣವಾಯಿತು. ಕಾಲೇಜಿಗೆ ಬರುವ ಹೊತ್ತಿಗಾಗಲೇ ನಾನು ಬೆಂಗಳೂರಿನ ಸಾಂಸ್ಕೃತಿಕ ಮೂವ್ಮೆಂಟ್ಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಚಾಮರಾಜಪೇಟೆಯ ಗರಡಿಮನೆಯಲ್ಲಿ ವ್ಯಾಯಾಮ ಮಾಡಲು ಹೋಗುತ್ತಿದ್ದೆ. ಕನ್ನಡ ಸಾಹಿತ್ಯ ಪರಿಷತ್ ಕೂಡಾ ಹತ್ತಿರದಲ್ಲಿಯೇ ಇತ್ತು. ಆಗ ನಾಟಕ ಆಗುವುದಿದ್ದರೆ ಅದು ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಮಾತ್ರ ಎಂಬ ಪರಿಸ್ಥಿತಿಯಿತ್ತು. ಬೇರೆ ವ್ಯವಸ್ಥೆಗಳಿರಲಿಲ್ಲ; ಥಿಯೇಟರ್ಗಳೂ ಇರಲಿಲ್ಲ. ಇಲ್ಲಿಗೆ ನಾಟಕ ನೋಡಲು ಹೋಗುವುದು ಆ ದಿನಗಳಲ್ಲಿ ನನ್ನ ನಿತ್ಯಕಾಯಕವೇ ಆಗಿತ್ತು. ನಮ್ಮಣ್ಣ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಹೀಗೆ ಪ್ರಾರಂಭವಾದದ್ದು ನನ್ನ ನಾಟಕದ ಒಡನಾಟ.
ಬಾಲ್ಯದಿಂದ ನನ್ನೊಳಗೆ ಒಂದು ಕಲೆಯ ಸಾಹಿತ್ಯಿಕ ಅಂಶವಿದ್ದೇ ಇತ್ತು. ನಾನು ಬೆಳಗ್ಗೆಯೆಲ್ಲ ಹಗಲುಗನಸು ಕಾಣುತ್ತಾ ಕಳೆಯಬಲ್ಲೆ. ಒಂದು ಪುಸ್ತಕವಿದ್ದರೆ ಸಾಕು, ನಾನು ಆ ಪುಸ್ತಕದ ಜೊತೆ ಸಂವಾದ ನಡೆಸಬಲ್ಲೆ. ಇದು ತೆರೆದುಕೊಂಡದ್ದು ನಾನು ಥಿಯೇಟರ್ಗೆ ಬಂದಾಗ. ಅದು ಪ್ರಾರಂಭಗೊಂಡದ್ದು, ಮುಖ್ಯವಾಗಿ ಕಲಾಕ್ಷೇತ್ರದ ಮೆಟ್ಟಿಲುಗಳಲ್ಲಿ, ಕಲಾಕ್ಷೇತ್ರ ಮತ್ತು ಬಿ.ವಿ. ಕಾರಂತರಿಂದ.
ಪ್ರ.: ಕಾಲೇಜು ದಿನಗಳಲ್ಲಿಯೇ ನೀವು ರಂಗಭೂಮಿಯೆಡೆಗೆ ಆಕರ್ಷಿತರಾದಿರಿ. ವರ್ಣಮಯ ಕಲಾಜಗತ್ತು ನಿಮ್ಮನ್ನು ಆಕರ್ಷಿಸಲು ಕಾರಣವೇನು?
ಉತ್ತರ: ೧೯೬೯ರ ಸಮಯ. ನಾನು ಆ ಸಮಯದಲ್ಲಿ ಎಸ್ಎಸ್ಎಲ್ಸಿ ಮುಗಿಸಿದ್ದೆ. ಪಿಯುಸಿಗೆ ಸೇರಬೇಕಿತ್ತು. ಆದರೆ ಆಗಷ್ಟೇ ಪಿಯುಸಿ ಬೋರ್ಡ್ ಹೊಸ ನಿರ್ಣಯವೊಂದನ್ನು ತೆಗೆದುಕೊಂಡಿತ್ತು – ‘೧೬ ವರ್ಷ ಆದವರನ್ನು ಮಾತ್ರ ಪಿಯುಸಿಗೆ ಸೇರಿಸಿಕೊಳ್ಳುತ್ತೇವೆ’ ಎಂದು. ನನಗೆ ಆಗಿನ್ನೂ ೧೫ ವರ್ಷ. ಕೊನೆಗೆ ಈ ರೀತಿಯ ಅಂಡರ್-ಏಜ್ನವರೆಲ್ಲ ಮೊದಲು ಸೆಂಟ್ರಲ್ ಕಾಲೇಜಿನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲಿ, ಅನಂತರ ಅವರಿಗೆ ನಿರ್ದಿಷ್ಟ ಕಾಲೇಜನ್ನು ತಿಳಿಸುವುದಾಗಿ ಬೋರ್ಡ್ ಸೂಚಿಸಿತು. ಅದರಂತೆ ಒಂದಷ್ಟು ಜನರನ್ನು ಸೆಂಟ್ರಲ್ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಕೊಂಡರು. ಅದರಲ್ಲಿ ನಾನೂ ಒಬ್ಬ. ನಮಗೆ ಸೆಂಟ್ರಲ್ ಕಾಲೇಜಿನಲ್ಲಿ ಹಾಜರಿ ಮಾತ್ರ. ಪಾಠ ಇತ್ಯಾದಿ ಇರಲಿಲ್ಲ. ಇದೇ ವೇಳೆಗೆ ನಮ್ಮಪ್ಪ ನನಗೊಂದು ಸೈಕಲ್ ಕೊಡಿಸಿದ್ರು. ಹೀಗಾಗಿ ನಾವು ಸೆಂಟ್ರಲ್ ಕಾಲೇಜಿನಲ್ಲಿ ಅಟೆಂಡೆನ್ಸ್ ಹಾಕಿ ಕಲಾಕ್ಷೇತ್ರದ ಮೆಟ್ಟಿಲುಗಳಲ್ಲಿ ವಾಸ್ತವ್ಯ ಹೂಡುತ್ತಿದ್ದೆವು. ಹುಡುಗ-ಹುಡುಗಿಯರು ಸೇರಿದಂತೆ ನಾವು ಹಲವರು ಅಲ್ಲಿ ಸೇರುತ್ತಿದ್ದೆವು. ಅದೊಂದು ನಮ್ಮ ಅಡ್ಡೆಯಾಯಿತು. ಯಾವ ಕಾಲೇಜು, ಮುಂದೇನು? – ಎಂಬುದೂ ಗೊತ್ತಿಲ್ಲದೆ ನಮ್ಮ ಪಾಡಿಗೆ ನಾವು ಆರಾಮವಾಗಿ ಕುಳಿತು ಹರಟೆ ಹೊಡೆಯುತ್ತಿದ್ದೆವು.
ಈ ಸಮಯದಲ್ಲಿ ನನಗೆ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಆದ್ಯ ರಂಗಾಚಾರ್ಯರ (ಶ್ರೀರಂಗರು) ಭೇಟಿಯಾಯಿತು. ಕಚ್ಚೆಪಂಚೆಯ ಸಣ್ಣಗಿನ ವ್ಯಕ್ತಿ. ಕುಸ್ತಿ ಮಾಡುತ್ತಿದ್ದರು ಎಂದು ನಂಬುವುದೇ ಕಷ್ಟ ಎಂಬಂತಿದ್ದ ದೇಹ. ಪ್ರತಿ ದಿನ ನಮ್ಮನ್ನು ದುರುಗುಟ್ಟಿಕೊಂಡು ನೋಡಿಕೊಂಡು ಹೋಗುವರು. ’ಏನು, ಹುಡುಗರು ಸುಮ್ಮನೆ ಹರಟೆ ಹೊಡೆಯುತ್ತಾ ಕುಳಿತಿದ್ದಾರೆ’ ಎಂದು ಸಿಂಡರಿಸಿಕೊಂಡಿದ್ದೂ ಇದೆ.
ಒಂದು ದಿನ ಅಂಬಾಸಡರ್ ಕಾರಿನಲ್ಲಿ ಬಂದು ಕಲಾಕ್ಷೇತ್ರದಲ್ಲಿ ಇಳಿದ ಅವರು ’ಇಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ಒಳಗೆ ಕುಳಿತು ನೋಡಿ’ ಎಂದು ಗದರಿದರು. ಏನು ಮಾಡುವುದೆಂದು ತಿಳಿಯದೆ, ಒಳಗೆ ಬಿಡುತ್ತಾರೋ ಇಲ್ಲವೋ ಎಂಬ ಸಂದೇಹದಲ್ಲಿಯೇ ಒಳಗೆ ಹೋದೆವು. ಅದು ಬೆಳಗ್ಗೆಯ ಸಮಯವಾದದ್ದರಿಂದ ನಾಟಕದ ರಿಹರ್ಸಲ್ಗಳು ನಡೆಯುತ್ತಿದ್ದವು. ನಾನು ಮೊತ್ತ ಮೊದಲ ಬಾರಿಗೆ ರಿಹರ್ಸಲ್ಗಳನ್ನು ನೋಡಿದ್ದು ಅಂದು, ಕಲಾಕ್ಷೇತ್ರದ ಒಳಗೆ.
ಅದೊಂದು ದಿನ ರಷ್ಯನ್ ಬ್ಯಾಲೆಯೊಂದು ಕಲಾಕ್ಷೇತ್ರಕ್ಕೆ ಬಂದಿತ್ತು. ಅದು ಏನೇನೋ ಮಾಡುತ್ತಿತ್ತು. ಯಾರೂ ಸಹಾಯಕ್ಕಿರಲಿಲ್ಲ. ನಾನವರೊಂದಿಗೆ ಕೈಜೋಡಿಸಿದೆ. ಅವರಿಗೆ ಸಹಾಯ ಮಾಡುತ್ತಾ ಮಾಡುತ್ತಾ ಪರದೆಯ ಹಿಂದಿನ ಕೆಲಸಗಳಲ್ಲಿ ಜೋಡಿಸಿಕೊಂಡೆ.
ಅದೇ ಸಮಯದಲ್ಲಿ ರಂಗಶಿಕ್ಷಣದ ಮೂಲಕ ಶಿಕ್ಷಣವನ್ನು ಆರಂಭಿಸಬೇಕು ಎಂಬ ಆಶಯದಿಂದ, ನಾಟಕ ಅಕಾಡೆಮಿಯು ಶಿಕ್ಷಕರಿಗಾಗಿ ೮ ವರ್ಷಗಳ ಕಾಲದಿಂದ ನಡೆಸುತ್ತಿದ್ದ ೪೫ ದಿನಗಳ ಕೋರ್ಸ್ನ್ನು ’ಡ್ರೆಮಾಟಿಕ್ ವರ್ಕ್ಶಾಪ್’ ಎಂದು ಬದಲಾಯಿಸಿ ಮೊದಲ ಬಾರಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿತು.
ನನ್ನ ಕಾಲೇಜು ಶಿಕ್ಷಣ ನಾಷನಲ್ ಕಾಲೇಜು, ಅನಂತರ ಒಕ್ಕಲಿಗರ ಸಂಘ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜು – ಹೀಗೆ ಅಲ್ಲೊಂದು ಮೂರು ತಿಂಗಳು ಇಲ್ಲೊಂದು ಮೂರು ತಿಂಗಳು ಎಂದು ಗೊಂದಲದಲ್ಲಿದ್ದೆ. ಆ ಸಮಯದಲ್ಲಿ ಈ ಸಮ್ಮರ್ ವರ್ಕ್ಶಾಪ್ ನಡೆಯಿತು. ಇದರ ಇನ್ನೊಂದು ಧನಾತ್ಮಕ ಅಂಶವೆಂದರೆ ಇಲ್ಲಿ ೧.೫೦ ರೂ. ದಿನಭತ್ಯೆ ನೀಡುತ್ತಿದ್ದರು. ಸುಮಾರು ೬೦ ರೂ. ಹಣ ಸಿಗುತ್ತದೆ ಎಂದು ಕೂಡಲೇ ಹೆಸರು ನೋಂದಾಯಿಸಿದೆ. ಆಡ್ಮಿಷನ್ ರೀತಿಯಲ್ಲಿ ಮಾಡಿ ಎಲ್ಲರನ್ನೂ ಸೇರಿಸಿಕೊಂಡರು. ಒಟ್ಟು ೪೦ ಜನ; ಅದರಲ್ಲಿ ೩೨ ಉಳಿದುಕೊಂಡೆವು. ಈ ೩೨ ಜನರಲ್ಲಿ ಕಲಾಕ್ಷೇತ್ರದ ಮೆಟ್ಟಿಲಲ್ಲಿ ಕುಳಿತ ನಾವು ೧೨-೧೩ ಜನರಿದ್ದೆವು! ಇವರೆಲ್ಲರೂ ಇಂದಿಗೂ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ನಿಮಗೆ ಹೆಸರು ಕೇಳಿದರೆ ಆಶ್ಚರ್ಯವಾಗಬಹುದು – ದೂರದರ್ಶನದ ಪ್ರಮುಖರಾಗಿದ್ದ ಎನ್.ಎ. ಸೂರಿ, ಎನ್.ಕೆ. ಮೋಹನ್ರಾವ್, ಮೇಕಪ್ ರಾಮಕೃಷ್ಣ, ರಂಗಶಂಕರ ಕಟ್ಟಿದ ಕೆ. ಲೋಕೇಶ್, ಲೈಟಿಂಗ್ ಎಕ್ಸ್ಪರ್ಟ್ ಚಂದ್ರಕುಮಾರ್ ಸಿಂಗ್ ಸೇರಿದಂತೆ ೧೨ ಜನ ಇಂದಿಗೂ ಕೆಲಸ ಮಾಡುತ್ತಿದ್ದೇವೆ. ರಂಗಭೂಮಿಯ ಮೊಟ್ಟಮೊದಲ ನಿಜವಾದ ವರ್ಕ್ಶಾಪ್ ನಮಗೆ ಅಲ್ಲಿ ಆಯಿತು. ೪೫ ದಿನ ಶಿಕ್ಷಣ ಪಡೆದು ಹೊರಬರುವಾಗ ನಾವು ಪಕ್ಕಾ ರಂಗಕರ್ಮಿಗಳಾಗಿದ್ದೆವು. ಅಂದಿನ ದಿಗ್ಗಜರಾಗಿದ್ದ ಆದ್ಯ ರಂಗಾಚಾರ್ಯ, ಬಿ.ವಿ. ಕಾರಂತ್, ಪ್ರೇಮಾ ಕಾರಂತ್, ಎನ್.ಎಸ್. ವೆಂಕಟರಾಮ್, ಮೇಕಪ್ ನಾಣಿ, ವಿ. ರಾಮಮೂರ್ತಿ, ಸಾಯಿಪ್ರಕಾಶ್, ಪಿ. ಪರಾಂಜಪೆ, ಬಿ.ಎಂ. ಷಾ ಅವರಂತಹ ಖ್ಯಾತನಾಮರು ಅಲ್ಲಿ ನಮಗೆ ಪಾಠಮಾಡಿದರು. ಹಾಗಾಗಿ ನನಗೆ ರಂಗಭೂಮಿಯ ಶಿಸ್ತು ಮತ್ತು ರಂಗಭೂಮಿ ಯಾಕಿರಬೇಕು, ಯಾಕೆ ಮಾಡಬೇಕು ಮತ್ತು ಅದರ ಆಶಯಗಳೇನೇನು – ಇತ್ಯಾದಿಗಳನ್ನು ಆವತ್ತಿನಿಂದಲೇ ಮನನಮಾಡಿಕೊಳ್ಳಲು ಸಾಧ್ಯವಾಯಿತು.
ಪ್ರ.: ವರ್ಕ್ಶಾಪ್ ನಂತರ ನೀವು ನೇರವಾಗಿ ನಟನೆಯಲ್ಲಿ ತೊಡಗಿಕೊಂಡಿರಾ? ಪರದೆಯ ಹಿಂದೆ ಕೆಲಸ ಮಾಡಿದ ಅನುಭವವೇನಾದರೂ ಸಿಕ್ಕಿತ್ತೇ?
ಉತ್ತರ: ಈ ವರ್ಕ್ಶಾಪ್ ಮುಗಿಯುತ್ತಿದ್ದಂತೆ, ಸುಮಾರು ೧೯೭೦ರಲ್ಲಿ, ಬಯಲು ನಾಟಕೋತ್ಸವ ನಡೆಯಿತು. ಅದು ಹವ್ಯಾಸಿ ರಂಗಭೂಮಿಯ ಮೊದಲ ಪ್ಯಾಂಡೊರಾಬಾಕ್ಸ್. ಅದನ್ನು ಮಾಡಿದವರು ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮತ್ತು ಲಂಕೇಶ್. ಒಂದು ಪ್ರಯೋಗವಾಗಿ ಕಲಾಕ್ಷೇತ್ರದ ಹಿಂಭಾಗದಲ್ಲಿ ಪ್ರಾರಂಭವಾಯಿತು. ಕನ್ನಡ ಹವ್ಯಾಸಿ ರಂಗಭೂಮಿಯ ಹೊಸ ಮಜಲು ಪ್ರಾರಂಭವಾಗಿದ್ದು ಅಲ್ಲಿಯೇ. ಈ ಬಯಲು ನಾಟಕೋತ್ಸವದ ಒಂದು ರಂಗಮಂಟಪದ ಸ್ಟೇಜ್ ಮ್ಯಾನೇಜರ್ ಆಗಿ ನಾನು ಕಾರ್ಯ ನಿರ್ವಹಿಸಿದ್ದೆ (ಗೋಪಿನಾಥ ಸ್ವಾಮಿ ಮತ್ತು ನಾನು). ಬೇರೆಡೆ ಇನ್ನು ಕೆಲವು ಸಂದರ್ಭಗಳಲ್ಲಿ ಅಭಿನಯವನ್ನೂ ಮಾಡುತ್ತಿದ್ದೆ. ಪ್ರಾರಂಭದಿಂದಲೂ ನನ್ನದು ಪರದೆಯ ಹಿಂದಿನ (back-stage) ಕೆಲಸವಾಗಿತ್ತು.
ವರ್ಕ್ಶಾಪ್ನಲ್ಲಿ ಕೂಡಾ ನಾನು ಪರದೆಯ ಹಿಂದೆಯೇ ಕೆಲಸ ಮಾಡುತ್ತಿದ್ದೆ. ಹೀಗಾಗಿ ಅದು ’ಕತ್ತೆ ಕೆಲಸ ಮಾಡಲು ಯಾರೂ ಇಲ್ಲ ಎಂದಾಗ ನಾಗಾಭರಣ ಇದ್ದಾನೆ, ಕರೆದುಕೊಳ್ಳಿ’ ಎಂಬಂತಿತ್ತು. ಪರದೆಯ ಹಿಂದೆ ಕೆಲಸ ನಿರ್ವಹಿಸಿದ್ದರಿಂದ ರಾಮಮೂರ್ತಿಗಳಿಂದ ಲೈಟಿಂಗ್, ಬಿ.ಎಂ. ಷಾ ಅವರಿಂದ ಸ್ಟೇಜ್ – ಹೀಗೆ ಹತ್ತಾರು ಹಿನ್ನೆಲೆಯ ಕೆಲಸಗಳನ್ನು ಕಲಿಯಲು ಅವಕಾಶ ದೊರಕಿತು. ಒಂದರ್ಥದಲ್ಲಿ ಪರದೆ ಹಿನ್ನೆಲೆಯ ಕೆಲಸಗಾರನಾಗಿ ರಂಗಭೂಮಿ ಪ್ರವೇಶಿಸಿದ್ದೇ ನನಗೆ ನಿಜವಾದ ಶಕ್ತಿ. ಪರದೆಯ ಹಿಂದಿರುವವನಾಗಿ ಎಲ್ಲವೂ ನನಗೆ ತಿಳಿಯುತ್ತಿತ್ತು. ಅಭಿನಯಗಾರನಿಗೆ ಆ ಸಂದರ್ಭ, ಅವನ ನಾಟಕದ ಡೈಲಾಗ್ಗಳು ಮಾತ್ರ ತಿಳಿಯುತ್ತದೆ. ಆದರೆ ಪರದೆಯ ಹಿನ್ನೆಲೆಯಲ್ಲಿ ಕೆಲಸ ಮಾಡುವವನಿಗೆ ಬೆಳಕಿನ ವಿನ್ಯಾಸ, ಮೇಕಪ್, ಸೆಟ್ಟಿಂಗ್, ಅಗತ್ಯ ವ್ಯವಸ್ಥೆಗಳು, ಸಮಸ್ಯೆಗಳು – ಹೀಗೆ ಎಲ್ಲವೂ ಅನುಭವಕ್ಕೆ ಬರುತ್ತಾ ತಿಳಿಯುತ್ತಾ ಹೋಗುತ್ತದೆ. ರಂಗಭೂಮಿಯ ಬೇರೆ ಬೇರೆ ಆಯಾಮಗಳಲ್ಲಿರುವ ಎಲ್ಲ ಸಾಧ್ಯತೆಗಳೂ ಕಣ್ಮುಂದೆ ಬರುತ್ತಿರುತ್ತವೆ. ಇದರಿಂದ ಬಹಳಷ್ಟು ಕಲಿಯಲು ಸಿಗುತ್ತದೆ. ಒಬ್ಬ ನಟನಿಗಿಂತ ಹೆಚ್ಚಿನ ಕಲಿಕೆ ಆಗ ನನಗೆ ದೊರಕಿತು. ನನ್ನೊಳಗಿನ ನಟನಿಗೆ ’ನಾನು ಮುಂದೆ ನಿಲ್ಲಬೇಕು, ನಾಟಕ ಮಾಡಬೇಕು’ ಎಂದು ಅನಿಸುತ್ತಿರಲಿಲ್ಲ. ಆದರೆ ಯಾರಾದರೂ ಇಲ್ಲ ಎಂದಾದಾಗ ನಾಗಾಭರಣ ಮಾಡುತ್ತಾರೆ ಎಂದು Proxy’ಯಾಗಿ ನನ್ನನ್ನು ಇಟ್ಟುಕೊಂಡಿರುತ್ತಿದ್ದರು. ಎಲ್ಲಿಯವರೆಗೆಂದರೆ ಪ್ರಮುಖ ಹೀರೋ ಪಾತ್ರವನ್ನೂ ಕೂಡ Proxy ಆಗಿ ಮಾಡಿದ್ದಿದೆ. ಹೀಗೆ ನಾನು ಎಲ್ಲವನ್ನೂ ತಿಳಿದಿರುವ ರಂಗಕರ್ಮಿಯಾಗಿ ತಯಾರಾದೆ. ೧೯೭೦ರ ದಶಕದಲ್ಲಿ ದೊರೆತ ಕಾರಂತ, ಕಂಬಾರ, ಕಾರ್ನಾಡ್, ಲಂಕೇಶ್, ಅನಂತರ ಜಿ.ಬಿ. ಜೋಶಿ ಜೊತೆಗಿನ ಒಡನಾಟವೇ ನನ್ನ ಬೆಳವಣಿಗೆಗೆ ಮುಖ್ಯ ಕಾರಣ.
ಅಂದು (೧೯೭೦ರ ದಶಕದಲ್ಲಿ) ಪ್ರಾರಂಭವಾದ ನಮ್ಮ ’ಬೆನಕ’ ತಂಡ ೪೩-೪೪ ವರ್ಷಗಳ ನಂತರ ಇಂದಿಗೂ ಸಕ್ರಿಯವಾಗಿದೆ. ಇಂದಿಗೂ ನಾಟಕ ಮಾಡುತ್ತಿದ್ದೇವೆ. ಹೀಗೆ ಸತತವಾಗಿ ನನ್ನನ್ನು ರಿಜುವಿನೇಟ್ ಮಾಡುತ್ತಿರುವುದು, ಎಜುಕೇಟ್ ಮಾಡುತ್ತಿರುವುದು, ನನ್ನನ್ನು ಮತ್ತೆ ಮತ್ತೆ ಕ್ರಿಯಾಶೀಲವಾಗಿ ಮಾಡುತ್ತಿರುವುದು ರಂಗಭೂಮಿ.
ಪ್ರ.: ರಂಗಭೂಮಿ ಅಥವಾ ಚಿತ್ರರಂಗದಲ್ಲಿ ನಿಮ್ಮನ್ನು ಗಾಢವಾಗಿ ಪ್ರಭಾವಿಸಿದವರು ಯಾರು?
ಉತ್ತರ: ನನ್ನ ಮೇಲೆ ಗಾಢ ಪ್ರಭಾವ ಬೀರಿದವರು ಬಿ.ವಿ. ಕಾರಂತರು. ರಂಗಭೂಮಿಯಲ್ಲಿ ಸುಮಾರು ೪೩-೪೪ ವರ್ಷ ಅವರ ಜೊತೆ ಕೆಲಸ ಮಾಡಿದ್ದೇನೆ. ನನ್ನೆಲ್ಲ ಲರ್ನಿಂಗ್ ಅವರ ಮೂಲಕವೇ ಆಗಿದ್ದು. ನನ್ನೊಳಗಿನ ನಿರ್ದೇಶಕನನ್ನು ಅವರು ಯಾವ ರೀತಿ ಜಾಗೃತಗೊಳಿಸಿದರು ಎನ್ನುವುದು ಬಹಳ ಚೆನ್ನಾಗಿದೆ. ಕನಿಷ್ಠ ಐದಾರು ನಾಟಕ ಒಪ್ಪಿಕೊಂಡು ೧೫ ದಿನಕ್ಕೋ ಒಂದು ತಿಂಗಳಿಗೋ ಒಮ್ಮೆ ಬೆಂಗಳೂರಿಗೆ ಬರುತ್ತಿದ್ದ ಅವರು ದಿನಕ್ಕೆ ಕನಿಷ್ಠ ೩ ನಾಟಕ – ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ – ಅಭ್ಯಾಸ ಮಾಡಿಸುತ್ತಿದ್ದರು; ಈ ಅಲಿಖಿತ ನಿಯಮ ಸಾಮಾನ್ಯ. ನಾಟಕದ ಅಭ್ಯಾಸ/ರಿಹರ್ಸಲ್ ನಡೆಯಬೇಕಾದರೆ ನಾನು ಅವರಿಗೆ ಸಹಾಯಕನಾಗಿರುತ್ತಿದ್ದೆ. ಅವರು ಸ್ಟೇಜ್ ನೋಡಿಕೋ ಎನ್ನುತ್ತಿದ್ದರೂ ನಾನು ಸ್ಟೇಜ್ಗಿಂತ ಹೆಚ್ಚಾಗಿ ಅವರು ಫಿಕ್ಸ್ಮಾಡುವ ಮೂವ್ಮೆಂಟ್, ಅವರು ಯಾವ ರೀತಿ ಹೇಳಿಕೊಡುತ್ತಾರೆ ಎನ್ನುವುದನ್ನು ಗಮನಿಸುತ್ತಿದ್ದೆ. ಕೆಲವು ದಿನ ’ನಾನು ೨ ಗಂಟೆ ತಡವಾಗಿ ಬರುತ್ತೇನೆ, ನೀನು ಪ್ರಾರಂಭಿಸಿರು’ ಎನ್ನುತ್ತಿದ್ದರು. ಆ ೨ ಗಂಟೆ ೪ ಗಂಟೆಯಾಗುವುದೂ ಇತ್ತು. ಆಗ ನಾನೇ ರಿಹರ್ಸಲ್ ಮಾಡಿಸುತ್ತಿದ್ದೆ. ಹೀಗೆ ಅವರು ನನ್ನೊಳಗಿನ ಒಬ್ಬ ನಿರ್ದೇಶಕನಿಗೆ ಆಗಲೇ ರೂಪಕೊಡುತ್ತಿದ್ದರು.
ಕೆಲವೊಮ್ಮೆ ಅವರು ಬರುವಷ್ಟರಲ್ಲಿ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗುತ್ತಿದ್ದೆ. ’ಚೆನ್ನಾಗಿ ಮಾಡುತ್ತಿದ್ದೀಯಾ, ಗುಡ್, ಇದು ಸ್ವಲ್ಪ ಬದಲಾಗಬೇಕು ನೋಡು’ ಎಂದು ಅದನ್ನು ತಿದ್ದುತ್ತಿದ್ದರು. ಇದರಿಂದ ನನ್ನಲ್ಲೊಂದು ಕಾನ್ಫಿಡೆನ್ಸ್ ಮೂಡುತ್ತಿತ್ತು. ’ನಾನೂ ಮಾಡಬಹುದು’ ಎಂಬ ಈ ಭರವಸೆಯಿಂದಲೇ ಮುಂದೆ ಲಾ ಕಾಲೇಜು, ಸೆಂಟ್ರಲ್ ಕಾಲೇಜಿಗೆ ಬಂದಾಗ ನಾಟಕಗಳನ್ನು ಮಾಡುವಂತಾಗಿದ್ದು.
ನಾನು ಡಬಲ್ ಗ್ರಾಜುಯೇಟ್ ಆಗಬೇಕು ಎಂಬುದು ನಮ್ಮಪ್ಪನ ಆಸೆ. ಹಾಗಾಗಿ ಬಿಎಸ್ಸಿ ಮಾಡಿ ಎಲ್ಎಲ್ಬಿ ಮಾಡಿದೆ. ಎಲ್ಎಲ್ಬಿ ಮಾಡಿದುದಕ್ಕೂ ಒಂದು ಹುನ್ನಾರವಿದೆ. ಯಾಕೆಂದರೆ ಎಲ್ಎಲ್ಬಿ ತರಗತಿ ನಡೆಯುವುದು ಬೆಳಗ್ಗೆ ೭ರಿಂದ ೧೦ರ ವರೆಗೆ. ಉಳಿದ ಸಮಯ ಕಲಾಕೇಂದ್ರದಲ್ಲಿ ಕಳೆಯುತ್ತಿದ್ದೆ. ಈ ಸಮಯದಲ್ಲಿ ’ಶೋಕಚಕ್ರ’, ’ಏವಂ ಇಂದ್ರಜಿತ್’ ಮುಂತಾದ ನಾಟಕಗಳನ್ನು ಕಾಲೇಜಿನಲ್ಲಿಯೂ ಮಾಡುತ್ತಿದ್ದೆ. ಆ ಸಮಯದಲ್ಲಿ ನಡೆಯುತ್ತಿದ್ದ ’ಉಲ್ಲಾಳ್ ಶೀಲ್ಡ್’ ಎಂಬ ಇಂಟರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ನಾನು ರೆಗ್ಯುಲರ್ ಆಗಿ ನಾಟಕ ಮಾಡುತ್ತಿದ್ದೆ. ಸತತವಾಗಿ ಮೂರು ವರ್ಷ ಈ ಪ್ರಶಸ್ತಿ ನಮ್ಮ ಕಾಲೇಜಿಗೆ ಬರುವಂತೆ ಮಾಡಿದೆ. ಅಷ್ಟರಮಟ್ಟಿಗೆ ನನ್ನ ರಂಗಭೂಮಿಯ ಸಂಪರ್ಕ ಉಪಯೋಗಕ್ಕೆ ಬರುತ್ತಿತ್ತು.
ನನ್ನ ಬೆಳವಣಿಗೆಯು ಸಂಪೂರ್ಣವಾಗಿ ಕಾರಂತರ ಪ್ರಭಾವದಿಂದಲೇ ಆದದ್ದು. ಸಾಹಿತ್ಯಿಕವಾಗಿ ನನ್ನನ್ನು ಪ್ರಭಾವಿಸಿದವರು ಕಾರ್ನಾಡ್, ಕಂಬಾರರು ಮತ್ತು ಜಿ.ಬಿ. ಜೋಶಿ. ಲಂಕೇಶ್ ಪ್ರಭಾವ ಅಷ್ಟಾಗಿ ಇಲ್ಲದಿದ್ದರೂ ಅವರ ಜೊತೆ ಕೆಲಸಮಾಡಿದ ಅನುಭವ ನನಗಿದೆ.
ಪ್ರ. ನಿಮ್ಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ ’ಬೆಂಗಳೂರು ನಗರ ಕಲಾವಿದರು’ (ಬೆನಕ) ಸಂಸ್ಥೆ ಪ್ರಾರಂಭವಾಗಿದ್ದು ಹೇಗೆ?
ಉತ್ತರ: ನನ್ನ ಮತ್ತು ಕಾರಂತರ ಪರಿಚಯ ವರ್ಕ್ಶಾಪ್ನಲ್ಲಿಯೇ ಪ್ರಾರಂಭವಾಗಿದ್ದು. ಅದಾದನಂತರ ನಾನು ಅವರ ಪಟ್ಟಶಿಷ್ಯನಾಗಿಬಿಟ್ಟೆ. ವರ್ಕ್ಶಾಪ್ನಿಂದ ಹೊರಬರುತ್ತಿದ್ದಂತೆಯೇ ನಾವೊಂದು ತಂಡ ಮಾಡಿದೆವು. ಹೋಗಿ ’ನಾವೊಂದು ನಾಟಕ ತಂಡ ಮಾಡಬೇಕೆಂದಿದ್ದೇವೆ’ ಎಂದು ಕಾರಂತರಲ್ಲಿ ಕೇಳಿದೆವು. ’ಏನು ಹೆಸರಿಡುತ್ತೀರಿ?’ ಎಂದ ಅವರು, ’ಶಕಶೈಲೂಷರು’ ಎಂದಿಡಿ ಎಂದು ಸೂಚಿಸಿದರು. ಅರ್ಥವಾಗದೇ ಹಾಗೆಂದರೇನು ಎಂದು ಕೇಳಿದ್ದಕ್ಕೆ ’ಶಕಶೈಲೂಷರು ಎಂದರೆ ಆಕ್ಟರ್ಸ್ ಆಫ್ ದಿ ಸೆಂಚುರಿ ಎಂದರ್ಥ’ ಎಂದರು.
ವರ್ಕ್ಶಾಪ್ನಿಂದ ಹೊರಬಂದವರೇ ಇಲ್ಲಿ ಸೇರಿಕೊಂಡಿದ್ದರಿಂದ ಶಕಶೈಲೂಷರು ಗುಂಪಿನಲ್ಲಿ ಕಾರಂತರಿಗೆ ವಿವಿಧತೆ ಕಾಣಲಿಲ್ಲ. ಹೀಗಾಗಿ “ಇಡೀ ಬೆಂಗಳೂರಿನಲ್ಲಿರುವ ನಾಟಕ ತಂಡದವರು, ಅಭಿಮಾನಿಗಳು ಎಲ್ಲರನ್ನೂ ಸೇರಿಸಿ ’ಬೆಂಗಳೂರು ನಗರ ಕಲಾವಿದರು’ ಎಂದು ಮಾಡಿ” ಎಂದರು. ತದನಂತರ ’ಹಯವದನ’ ಮುಂತಾದವು ಪ್ರಾರಂಭವಾದವು. ಅದನ್ನು ವೈಯೆನ್ಕೆ – ’ಬೆಂಚಿನಾಕ’ (ಬೆಂಗಳೂರು ಚಿತ್ರ ನಾಟಕ ಕಲಾವಿದರು) ಎಂದು ಕರೆದರು. ಅದು ಬೆಂಕಿಹಾಕ ಎಂದಹಾಗಿದೆ; ಅದನ್ನು ’ಬೆನಕ ಮಾಡು’ ಎಂದರು. ಹೀಗೆ ’ಬೆನಕ’ ಗುಂಪು ಪ್ರಾರಂಭವಾದದ್ದು ಕಾರಂತರಿಂದಲೇ. ಆದರೆ ಕಾರಂತರಿಗೆ ಯಾವತ್ತೂ ಗುಂಪು ಕಟ್ಟುವುದು ಇಷ್ಟವಿರಲಿಲ್ಲ. ಅವರು ಹೇಳುವರು, ’ಗುಂಪು ಕಟ್ಟಿದರೆ ಒಂದುಕಡೆ ನಿಂತುಬಿಡುತ್ತೀರಿ. ಗುಂಪು ಕಟ್ಟಬಾರದು. ಸುಮ್ಮನೆ ಎಲ್ಲ ಕಡೆಯಿಂದ ಮಾಡುತ್ತಿರಬೇಕು’ ಎಂದು. ಅದು ಅವರಿಗೆ ಮಾತ್ರ ಸಾಧ್ಯ. ಯಾಕೆಂದರೆ ಅವರು ’ರಂಗಜಂಗಮ’. ಆದರೆ ನಮಗೆ ಗುಂಪು ಮಾಡಿ, ಅದನ್ನು ಕಟ್ಟಿಬೆಳೆಸಬೇಕು. ಹಾಗಾಗಿ ಯಾವಾಗಲೂ ನಾವು ಒಂದು ರೀತಿಯ ಜಗಳ ಮಾಡುತ್ತಿದ್ದೆವು. ಯಾವುದಾದರೂ ನಾಟಕದ ಶೋ ಚೆನ್ನಾಗಿ ಬರುತ್ತಿಲ್ಲ ಎಂದು ಕಂಡರೆ ’ನಿಲ್ಲಿಸಿಬಿಡು ಈ ನಾಟಕವನ್ನು, ಚೆನ್ನಾಗಿಲ್ಲ’ ಎಂದುಬಿಡುವರು. ಅನಂತರ ಅದೇ ನಾಟಕದ ಶೋವನ್ನು ನೋಡಿ, ’ನಾಟಕವನ್ನು ಚೆನ್ನಾಗಿ ಮಾಡಿದಿರಿ, ಗುಡ್ ಗುಡ್, ಕಂಟಿನ್ಯೂ’ ಎನ್ನುವರು. ನಮಗೆ ಬೆನಕ ಮಾಡುವುದು ಅನಿವಾರ್ಯವಾಗಿತ್ತು. ಅದು ಕಾರಂತರ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು. ಇಂದಿನವರೆಗೂ ಅದು ನಡೆದುಕೊಂಡು ಬರುತ್ತಿದೆ.
ಪ್ರ. ’ಅಲ್ಲಮ’ನ ವಿಚಾರ ಎಂದರೆ ಅದು ಅನುಭಾವದ ಪ್ರಪಂಚ; ಅದನ್ನು ಈ ಅನುಭವದ ಪ್ರಪಂಚಕ್ಕೆ ವಿವರಿಸುವ ಸಾಹಸವನ್ನು ಮಾಡಿದ್ದೀರಿ, ಅಭಿನಂದನೆಗಳು. ಈ ಪ್ರಯತ್ನದಲ್ಲಿ ಗೆದ್ದಿದ್ದೇನೆ ಎಂದು ನಿಮಗೆ ಅನಿಸುತ್ತಿದೆಯೆ?
ಉತ್ತರ: ನಾನು ಗೆದ್ದಿದ್ದೇನೆ ಎನ್ನುವುದಕ್ಕಿಂತ ಸೋತಿದ್ದೇನೆ ಎಂದೇ ಹೇಳಿಕೊಳ್ಳಬೇಕು. ಕಾರಣವೇನೆಂದರೆ ಅಲ್ಲಮನಿಗೆ ಅಷ್ಟು ಸುಲಭವಾಗಿ ಒಂದು ಮೂರ್ತಸ್ವರೂಪ ಕೊಡಲು ಸಾಧ್ಯವಿಲ್ಲ. ಅವನೊಬ್ಬ ಅಮೂರ್ತ. ಆದರೆ ಸಿನೆಮಾ ಕೇಳುವುದು ಮೂರ್ತತೆಯನ್ನು. ಅದು ಎಷ್ಟರಮಟ್ಟಿಗೆ ಕೇಳುತ್ತದೆ ಎಂದರೆ ಒಂದು ಮರ ಎಂದರೆ ಎಂತಹ ಮರ, ಎಲ್ಲಿರುತ್ತೆ, ಹೇಗಿರುತ್ತೆ – ಇವೆಲ್ಲವನ್ನೂ ಅಲ್ಲಿ ನಾವು ತೋರಿಸಬೇಕು. ಕಾವ್ಯ, ಸಾಹಿತ್ಯದಲ್ಲಾದರೆ ಅದನ್ನು ಓದುವ ಅಥವಾ ಕೇಳುವ ಪ್ರೇಕ್ಷಕ ತನಗೆ ಇಷ್ಟ ಬಂದಹಾಗೆ ಯೋಚನೆಮಾಡಿಕೊಳ್ಳಲು ಬಿಡಬಹುದು. ಆದರೆ ಸಿನೆಮಾ ಹಾಗಲ್ಲ. ಒಂದು ಬಾರಿ ಒಂದು ಫ್ರೇಮ್ನ ಒಳಗಡೆ ಅದಕ್ಕೆ ಚಿತ್ರಿಕೆಯನ್ನು ಕಾಣಿಸಿಬಿಟ್ಟರೆ ಮುಗಿಯಿತು. ಇದು ಹೀಗೇ, ಇವನು ಹೀಗೆಯೆ – ಎಂದೇ ಹೇಳುತ್ತದೆ. ಬ್ಲಾಕ್ ಅಂಡ್ ವೈಟ್ನಲ್ಲಿಯೇ ತೋರಿಸುತ್ತದೆ. ಆದರೆ ಅದರ ಗ್ರೇ ಕಲರ್ಗಳನ್ನು ಕ್ಯಾರೆಕ್ಟರ್ನಲ್ಲಿ ಹೇಳುತ್ತಾ ಹೋಗುತ್ತದೆ. ಅಂತಹ ಮೂರ್ತಸ್ವರೂಪದ ಅಲ್ಲಮನನ್ನು ಹಿಡಿಯಬೇಕಾದರೆ ಅದಕ್ಕೆ ಬಹಳ ಕಷ್ಟವಿದೆ. ಇದಕ್ಕಾಗಿ ನಾನು ’ಸೋತಿದ್ದೇನೆ’ ಎಂಬ ಪದ ಬಳಸಿದ್ದೇನೆ. ಕಾರಣವೇನೆಂದರೆ ಅದರ ಗೆಲವನ್ನು ಹೇಗೆ ಹೇಳುತ್ತೀರಿ? ಕಮರ್ಷಿಯಲ್ ಚಿತ್ರ, ಹಣ ಮಾಡಿತು ಎಂದೋ ಅಥವಾ ವೈಚಾರಿಕವಾಗಿ ಸಕ್ಸೆಸ್, ಅವಾರ್ಡ್ಗಳು, ಒಳ್ಳೊಳ್ಳೆಯ ವಿಮರ್ಶೆಗಳು ಬಂದವು ಎಂದೋ? ಇವೆರಡನ್ನೂ ಬಿಟ್ಟರೆ, ಒಂದು ಸಿನೆಮ್ಯಾಟಿಕ್ ಮೈಲುಗಲ್ಲಾಗಿ ಅದು ಹೇಗೆ ನಿಲ್ಲುತ್ತದೆ? – ಎಂಬುದು ಬಹಳ ಮುಖ್ಯ. ಇದನ್ನು ಅರ್ಥೈಸಬೇಕಾದವರು ವಿಮರ್ಶಕರು/ ಟೀಕಾಕಾರರು ಮತ್ತು ಪ್ರೇಕ್ಷಕರು, ನಾನಲ್ಲ. ಯಾಕೆಂದರೆ ನನಗೆ ಇದು ಮೈಲಿಗಲ್ಲಾಗಿರಬಹುದು. ಸುತ್ತಲಿನ ಜನರು ಆ ಮೈಲ್ಸ್ಟೋನನ್ನು ಅರ್ಥಮಾಡಿಕೊಳ್ಳದಿರಬಹುದು. ಈ ದೃಷ್ಟಿಯಲ್ಲಿ ಈ ಸಿನೆಮಾ ಏನು ಎನ್ನುವುದು ಮುಖ್ಯವಾಗುತ್ತದೆ.
’ಅಲ್ಲಮ’ ಚಿತ್ರಕ್ಕೆ ಪ್ರಶಸ್ತಿಯೂ ಬಂದಿದೆ. ಒಬ್ಬ ಚಿತ್ರನಿರ್ದೇಶಕನಾಗಿ ನಾವು ಒಂದು ಒಳ್ಳೆಯ ಕೆಲಸ ಮಾಡಿದ್ದೇವೆ ಎಂಬ ತೃಪ್ತಿಯೂ, ಒಂದು ಪರಿಪೂರ್ಣ ಕೆಲಸ ಮಾಡಿದ್ದೇವೆ ಎಂಬ ಖುಷಿಯೂ ನನಗಿದೆ. ಇದಕ್ಕೆ ಇಡೀ ತಂಡ ಅದ್ಭುತವಾಗಿ ಕೆಲಸ ಮಾಡಿದೆ. ಆದರೆ ಸಕ್ಸೆಸ್ ಮತ್ತು ರೀಚ್ಗಳನ್ನು ಗಮನಿಸಿದಾಗ ನನ್ನ ಉಳಿದ ಚಿತ್ರಗಳ ಹಾಗೆ ಇದು ತನ್ನ ಸಕ್ಸೆಸ್ ಮತ್ತು ರೀಚನ್ನು ಪಡೆದುಕೊಳ್ಳಲಿಲ್ಲ. ಇದಕ್ಕೆ ಕಾರಣವೇನು ಎಂಬುದು ನನಗಂತೂ ಈವರೆಗೆ ತಿಳಿದಿಲ್ಲ.
ಒಂದು ಚಿತ್ರ ಯಾಕೆ ಓಡುತ್ತೆ, ಯಾಕೆ ಓಡುವುದಿಲ್ಲ; ಯಾಕೆ ಜನರಿಗೆ ಹತ್ತಿರವಾಯಿತು; ಯಾಕೆ ಜನರಿಗೆ ರೀಚ್ ಆಗಿಲ್ಲ ಎಂದು ಏಕ್ದಂ ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಲೋಕೋ ಭಿನ್ನರುಚಿಃ. ಯಾವ ಕಾಲಕ್ಕೆ ಯಾವುದು ರುಚಿಯಿದೆ, ಅರ್ಥವಿದೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಲಾಂಗ್ ಮಚ್ಚುಗಳಿಂದ ಭಿನ್ನವಾದಾಗ, ಅಬ್ಬಾ ಏನೋ ಬಂತಪ್ಪಾ, ಭಿನ್ನವಾಗಿ ರಿಫ್ರೆಶ್ ಆಗಿದೆ ಎಂದು ವಿಡಿಯೋಗ್ರಫಿ ಫಿಲ್ಮ್ಗಳೂ ಕ್ಲಿಕ್ ಆಗಿಬಿಡಬಹುದು. ಬಹಳ ಒಳ್ಳೆಯ ಸಿನಿಮಾಗಳು ಕ್ಲಿಕ್ ಆಗದೆಯೂ ಇರಬಹುದು. ಇದು ಯಾಕೆ? ಗೊತ್ತಿಲ್ಲ. ಈ ರೀತಿಯ ಸನ್ನಿವೇಶದಲ್ಲಿ ’ಅಲ್ಲಮ’ನನ್ನು ಇಡಲು ಸಾಧ್ಯವಾಗುವುದಾದರೆ, ಇಷ್ಟೊಂತೂ ಸತ್ಯ: ’ಅಲ್ಲಮ’ ವಚನಾಧಾರಿತ ಸಿನೆಮಾ. ಇಡೀ ಶರಣಸಾಹಿತ್ಯದ ಹಲವು ವಚನಗಳನ್ನು ಆಧರಿಸಿ ಮಾಡಿದಂತಹ ಸಿನೆಮಾ. ಅದರ ಡೈಲಾಗ್ನಲ್ಲಿ ಬರುವ ಮಾತುಗಳನ್ನು ಹಾಗೂ ಹಾಡುಗಳಲ್ಲಿ ಬರುವ ಸಾಹಿತ್ಯವನ್ನು – ಎಲ್ಲವನ್ನೂ ಯಾರಾದರೂ ಅಭ್ಯಾಸ ಮಾಡಿದರೆ ಶರಣಸಾಹಿತ್ಯದ ಹಲವು ವಚನಗಳನ್ನು ನಾವಲ್ಲಿ ಕಾಣುತ್ತೇವೆ. ಬಹಳ ಮುಖ್ಯವಾಗಿ ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ, ಸೊನ್ನಲಿಗೆ ಸಿದ್ದರಾಮಯ್ಯ ಮುಂತಾದವರ ವಚನಗಳನ್ನು ನಾವಲ್ಲಿ ಕಾಣುತ್ತೇವೆ. ಇಡೀ ವಚನಸಾಹಿತ್ಯದಲ್ಲಿ ಒಂದು ಬೊಗಸೆಯ? ವಚನಸಾಹಿತ್ಯವನ್ನು ನಾವು ಇಟ್ಟುಕೊಂಡು ನಮ್ಮ ಕೆಲಸ ಮಾಡಿದ್ದೇವೆ. ಈ ಕೆಲಸ ಇದುವರೆಗಿನ ನಮ್ಮ ಕನ್ನಡ ಸಾರಸ್ವತ ಲೋಕದಲ್ಲಾಗಲಿ ಅಥವಾ ಸಿನಿಮಾ ಲೋಕದಲ್ಲಾಗಲಿ ಆಗಿಲ್ಲ.
ಪ್ರ. ಕನ್ನಡ ಸಿನೆಮಾ ಲೋಕದಲ್ಲಿ ’ಅಲ್ಲಮ’ ಚಿತ್ರದ ಹೆಗ್ಗಳಿಕೆ ಅಥವಾ ಭಿನ್ನತೆಗಳೇನು? ಅಂತಹ ಯಾವ ವೈಶಿಷ್ಟ್ಯವನ್ನು ನಾವು ಈ ಸಿನಿಮಾದಲ್ಲಿ ಕಾಣಬಹುದು?
ಉತ್ತರ: ನಾನು ಈಗಾಗಲೇ ಹೇಳಿದಂತೆ ’ಅಲ್ಲಮ’ ಒಂದು ವಚನಾಧಾರಿತ ಸಿನೆಮಾ. ಬಸವೇಶ್ವರರ ಬಗ್ಗೆ ಬಂದ ಮೂರೂ ಸಿನೆಮಾಗಳಲ್ಲಿ ಎಷ್ಟು ವಚನಗಳನ್ನು ಅವರು ಬಳಸಿಕೊಂಡಿದ್ದಾರೆ? ಡೈಲಾಗ್ನಲ್ಲಿ ಎಷ್ಟು ಬಳಸಿದ್ದಾರೆ, ಹಾಡುಗಳಲ್ಲಿ ಎಷ್ಟು ಬಳಸಿದ್ದಾರೆ? ಇಲ್ಲವೇ ಇಲ್ಲ ಎನ್ನುವಷ್ಟು ಕಡಮೆ. ಅದಕ್ಕಾಗಿ ಬೇರೆಬೇರೆ ಹಾಡುಗಳನ್ನು ಬರೆದು ಸೇರಿಸಿದ್ದಾರೆ! ಆದರೆ ’ಅಲ್ಲಮ’ನಲ್ಲಿ ನಾವು ಡೈಲಾಗ್ಗಳಲ್ಲಿಯೂ ವಚನಗಳನ್ನೇ ಬಳಸಿಕೊಂಡಿದ್ದೇವೆ. ಈ ರೀತಿಯ ಪ್ರಯತ್ನ ಸ್ತುತ್ಯರ್ಹ ಎನಿಸುತ್ತದೆ. ಈ ರೀತಿಯ ಬಹಳಷ್ಟು ಹೆಗ್ಗಳಿಕೆಗಳು ಈ ಸಿನೆಮಾಕ್ಕಿವೆ.
ಸಿನೆಮಾ ಮುಖಾಂತರ ಕನ್ನಡತನವನ್ನು ತೋರಿಸಿದ ಯಾವ ಕನ್ನಡ ಸಿನೆಮಾಗಳು ಈವರೆಗೆ ಬಂದಿವೆ? ’ಇದು ನಮ್ಮ ಕನ್ನಡ ಸಿನೆಮಾ’ ಎನ್ನುವ ಒಂದು ಸಿನೆಮಾ ತೋರಿಸಿ. ಯಾವುದೂ ಇಲ್ಲ. ಆದರೆ ’ಅಲ್ಲಮ’ ಇದೆ; ಇದೊಂದು ಕನ್ನಡ ಸಿನೆಮಾ. ’ಹೇಗೆ?’ ಎಂದು ನೀವು ಕೇಳಬಹುದು. ಇಲ್ಲಿ ಕನ್ನಡ ಆರ್ಕಿಟೈಪ್ ಇದೆ. ಕನ್ನಡದ ೧೨ನೇ ಶತಮಾನದ ಪರಿಸರವನ್ನು ನಿರ್ಮಾಣ ಮಾಡುವುದಕ್ಕೆ ಪ್ರಾಮಾಣಿಕವಾದ ಪ್ರಯತ್ನಪಟ್ಟಿದ್ದೇವೆ. ಅದನ್ನಿಲ್ಲಿ ಕಾಣಬಹುದು. ಅದು ಸೆಟ್ ಇರಬಹುದು, ವೇಷಭೂಷಣಗಳಿರಬಹುದು, ಪ್ರಾಪರ್ಟಿ ಇರಬಹುದು, ಮೇಕಪ್ ಇರಬಹುದು – ಇವೆಲ್ಲದರ ಮೂಲಕ ಒಂದು ಐತಿಹಾಸಿಕವಾದ ಹಿನ್ನೆಲೆಯನ್ನು ’ಅಲ್ಲಮ’ ಕಟ್ಟಿಕೊಡುತ್ತದೆ. ಇದುವರೆಗಿನ ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಕನ್ನಡದ ಐತಿಹಾಸಿಕತನವನ್ನು ಕಟ್ಟಿಕೊಟ್ಟಿರುವ ಸಿನೆಮಾಗಳು ಕಾಣಿಸುವುದಿಲ್ಲ. ’ಕಲ್ಲರಳಿ ಹೂವಾಗಿ’ ಮತ್ತು ’ಅಲ್ಲಮ’ – ಚಿತ್ರಗಳಲ್ಲಿ ಈ ಪ್ರಯತ್ನವನ್ನು ಕಾಣಬಹುದು.
ಕೆಲ ಸಿನೆಮಾಗಳಲ್ಲಿ ಕನ್ನಡತನವನ್ನು ತೋರಿಸುವ ಪ್ರಯತ್ನ ನಡೆದರೂ ಅಲ್ಲಿಯ ಆರ್ಕಿಟೈಪ್ ನಮ್ಮದಲ್ಲವೇ ಅಲ್ಲ, ಇದ್ದಕ್ಕಿದ್ದ ಹಾಗೆ ಜಯಪುರ ಅರಮನೆ, ಇನ್ನೇನೋ ಬಂದುಬಿಡುತ್ತದೆ. ಇಂಗ್ಲಿಷ್ ಪ್ರಸಂಗದಲ್ಲಿ ಮೈಸೂರು ಅರಮನೆ ಬಂದುಬಿಡುತ್ತದೆ. ನಮ್ಮ ಸಿನೆಮಾಗಳಲ್ಲಿ ೧೨, ೧೩, ೧೪ನೇ ಶತಮಾನಗಳು ಬಿಡಿ, ೧೮ನೇ ಶತಮಾನವನ್ನೂ ಸರಿಯಾಗಿ ಹೇಳಲಾಗಲಿಲ್ಲ. ’ಕೃಷ್ಣದೇವರಾಯ’ ಸಿನೆಮಾದಲ್ಲಿ ನಮ್ಮದಲ್ಲದ ಬೇರೆ ಯಾವುದೋ ಆರ್ಕಿಟೈಪನ್ನು ನಾವು ನೋಡುತ್ತೇವೆ. ಕೃಷ್ಣದೇವರಾಯನಲ್ಲಿ ರಜಪೂತ ವೇಷಭೂಷಣವನ್ನು ನೋಡುತ್ತೇವೆ. ಹಾಗಾದರೆ ಕೃಷ್ಣದೇವರಾಯ ರಜಪೂತರಂತೆ ವೇಷ ಧರಿಸುತ್ತಿದ್ದನೆ? ಇವುಗಳನ್ನೆಲ್ಲ ನಾವು ಅರ್ಥೈಸಿಕೊಳ್ಳಬೇಕು.
ಈ ರೀತಿಯಲ್ಲಿ ಒಂದು ಸಿನೆಮಾ ಮಾಡುವಾಗ ಸಾಂಸ್ಕೃತಿಕವಾದಂತಹ ಒಂದು ಸಿದ್ಧತೆ ಇರಬೇಕು. ಭಾಷೆ, ಪರಿಸರ, ವೇಷಭೂಷಣ, ನಡಾವಳಿ(ಆಟಿಟ್ಯೂಡ್)ಗಳಲ್ಲಿ ಸಾಂಸ್ಕೃತಿಕ ಸಿದ್ಧತೆ ಇರಬೇಕು. ಇವುಗಳನ್ನೆಲ್ಲ ಗಮನಿಸಿದಾಗ ಕನ್ನಡದಲ್ಲಿ ಶೈಕ್ಷಣಿಕವಾದ ಸಿನೆಮಾಗಳಿಲ್ಲ. ಸಿನೆಮಾಗಳನ್ನೇನೊ ಮಾಡಿದ್ದಾರೆ. ಉದಾಹರಣೆಗೆ ’ಸಂಗೊಳ್ಳಿ ರಾಯಣ್ಣ’ ಸಿನೆಮಾ ಓಡಿರಬಹುದು. ಆದರೆ ಯಾವ ರೀತಿಯಲ್ಲಿ ಅದನ್ನು ಕನ್ನಡ, ಕನ್ನಡತನ ಇರುವ ಸಿನೆಮಾ ಎಂದು ಹೇಳುತ್ತೀರಿ? ಸಿನೆಮಾವನ್ನು ಒಂದು ರೆಫರೆನ್ಸ್ ಪಾಯಿಂಟ್ ರೀತಿಯಲ್ಲಿ ಬಳಸುವಂತಾಗಬೇಕು. ’ನೀವು ಈ ಸಿನೆಮಾ ನೋಡಿ; ನಮ್ಮ ಕರ್ನಾಟಕ, ಕನ್ನಡ, ಕನ್ನಡತನ ಎಂದರೇನು ಎಂಬುದು ನಿಮಗೆ ಗೊತ್ತಾಗುತ್ತದೆ’ – ಎಂದು ಹೇಳುವಂತಹ ಸಿನೆಮಾ ಬರಬೇಕು. ನಮ್ಮ ’ಕಿತ್ತೂರು ಚೆನ್ನಮ್ಮ’ ಸಿನೆಮಾ ಹಾಗಿತ್ತು. ಆದರೆ ಭಾಷೆ? ಕಿತ್ತೂರಿನ ಭಾಷೆ ಅಲ್ಲವೇ ಅಲ್ಲ! ಅದು ಬೆಂಗಳೂರು ಸುತ್ತಮುತ್ತಲಿನ ಭಾಷೆ. ಹಾಗಾಗಿ ಭಾಷೆಯನ್ನು ಕಟ್ಟಿಕೊಡುವಲ್ಲಿ ಅದು ವಿಫಲವಾಯಿತು. ’ಅಲ್ಲಮ’ನಲ್ಲಿ ಈ ಕನ್ನಡತನಗಳನ್ನು ಕಾಣಬಹುದು. ಅಲ್ಲಮನೇ ಬರೆದ ವಚನಗಳನ್ನು ಅವನ ಸಂಭಾಷಣೆಯಲ್ಲಿ ತಂದಿರುವುದರಿಂದ ಅದು ಅವನ ಭಾಷೆಯೇ ಆಗಿದೆ.
ಇನ್ನು ಕೆಲವರು ’ಬಸವಣ್ಣನ ಭಾಷೆ ಉತ್ತರ ಕರ್ನಾಟಕ ಮಾಡಬೇಕಾಗಿತ್ತು’ ಎನ್ನಬಹುದು. ಅವರು ’ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಎಂದು ಹೇಳುತ್ತಾರೆ. ಅದನ್ನು ಉತ್ತರ ಕರ್ನಾಟಕ ಭಾಷೆಯಲ್ಲಿ ಹೇಗೆ ಹೇಳುತ್ತಾರೆ? ಅವನು ಅಷ್ಟೇ ಚೆನ್ನಾಗಿ ಬರೆದಿರುವಾಗ, ಅದನ್ನು ಅವನ ಭಾಷೆಯಲ್ಲ ಎಂದರೆ ಏನರ್ಥ! ಒಟ್ಟಿನಲ್ಲಿ ’ಅಲ್ಲಮ’ ಸಿನೆಮಾವನ್ನು ಸಾಹಿತ್ಯವನ್ನು ಆಧರಿಸಿ ಮಾಡಲಾಗಿದೆ. ಇದರಲ್ಲಿ ಅಲ್ಲಮನ ಅನುಭವದ ಅಂದರೆ ಆ ಅನುಭಾವಿ ಕವಿಯ ಒಂದು ಪ್ರತಿಶತವನ್ನು ನಾವು ನಮ್ಮ ಸಿನೆಮಾದಲ್ಲಿ ಕಟ್ಟಿಕೊಟ್ಟಿದ್ದೇವೆ. ಒಂದು ರೀತಿಯಲ್ಲಿ ಇದು ದೊಡ್ಡ ಪ್ರಯತ್ನವೇ ಸರಿ. ಆದರೆ ಅದಕ್ಕೆ ಸಿಗಬೇಕಾದ ಪ್ರಾಶಸ್ತ್ಯ ಸಿಕ್ಕಿಲ್ಲ. ಇದರಿಂದಾಗಿ ನಾವು ಸೋತಿದ್ದೇವೆ.
ಆದರೆ ನನಗೆ ಈ ಸಿನೆಮಾದಲ್ಲಿ ಆತ್ಮತೃಪ್ತಿಯಿದೆ. ನಾನು ಸ್ಕ್ರಿಪ್ಟ್ಗಾಗಿ ಮೂರು ವರ್ಷ ಹಾಗೂ ನಿರ್ಮಾಣಕ್ಕಾಗಿ ಒಂದು ವರ್ಷ ಕೆಲಸ ಮಾಡಿದ್ದೇನೆ. ಹೀಗೆ ಒಟ್ಟು ನಾಲ್ಕು ವರ್ಷಗಳನ್ನು ಈ ಒಂದು ಸಿನೆಮಾಕ್ಕಾಗಿ ಬಳಸಿದ್ದೇನೆ. ಇದು ನನ್ನ ಜೀವನದಲ್ಲೊಂದು ರೆಕಾರ್ಡ್. ಯಾಕೆಂದರೆ ನನ್ನ ಉಳಿದ ಸಿನೆಮಾಗಳನ್ನು ಹೆಚ್ಚೆಂದರೆ ೨ ವರ್ಷ ಸ್ಕ್ರಿಪ್ಟ್ ಮಾಡಿ, ೬ ತಿಂಗಳಲ್ಲಿ ಸಿನೆಮಾ ಮುಗಿಸುತ್ತಿದ್ದೆ. ಆದರೆ ಇದು ಒಂದು ವಿಶಾಲ ಅನುಭವ. ಈಗ ಈ ಅನುಭವದಿಂದ ಆಚೆ ಹೋಗಬೇಕೆಂಬ ಆಸೆಯಾಗುತ್ತಿದೆ. ಯಾಕೆಂದರೆ ನಾನು ಮತ್ತೊಂದು ಸಿನೆಮಾ ಮಾಡಬೇಕಾಗಿದೆ. ಬೇರೊಂದು ಸಿನೆಮಾ ಮಾಡಬೇಕಾದರೆ ಇದು ತಲೆಯಲ್ಲಿರಬಾರದು. ಹಾಗಾಗಿ ಇದನ್ನು ಕಳೆದುಕೊಳ್ಳಬೇಕಾಗಿದೆ. ಅದು ಹೇಗೆ ಎಂದು ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಇದು ನಮ್ಮ ಸಂಪೂರ್ಣ ತಂಡಕ್ಕೆ ಅದ್ಭುತವಾದ ಅನುಭವ. ಇದನ್ನು ಅಲ್ಲಮ ನಮಗೆ ದೊರಕಿಸಿಕೊಟ್ಟಿದ್ದಾನೆ. ಅದಕ್ಕಾಗಿ ಅಲ್ಲಮನಿಗೆ ಹಾಗೂ ಶ್ರೀಹರಿ ಖೋಡೆ ಅವರಿಗೆ ಆಭಾರಿಯಾಗಿದ್ದೇನೆ. ಯಾಕೆಂದರೆ ಇದರ ಹಿಂದಿರುವವರು ನಿರ್ದೇಶಕನಿಗಿಂತಲೂ ಒಬ್ಬ ನಿರ್ಮಾಪಕ.
ಶ್ರೀಹರಿ ಖೋಡೆಯವರಂತಹ ನಿರ್ಮಾಪಕರು ಬಹಳ ವಿರಳ. ಇಂತಹ ನಿರ್ಮಾಪಕರು ಇಂದು ಸಿಗಲಾರರು. ‘ಸಂತ ಶಿಶುನಾಳ’, ‘ಮೈಸೂರು ಮಲ್ಲಿಗೆ’, ‘ನಾಗಮಂಡಲ’, ‘ಅಲ್ಲಮ’ – ಈ ನಾಲ್ಕೂ ಶ್ರೀಹರಿ ಖೋಡೆ ನೀಡಿದ ಚಿತ್ರರತ್ನಗಳು. ಬೇರೆ ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ. ‘ನಾಗಮಂಡಲ’ದಲ್ಲಾದರೂ ಕಥೆ, ಸಾಹಿತ್ಯ ಇತ್ತು. ಆದರೆ ‘ಮೈಸೂರು ಮಲ್ಲಿಗೆ’, ‘ಶಿಶುನಾಳ’, ‘ಅಲ್ಲಮ’ರ ಬಗೆಗೆ ಸಿನೆಮಾ ಮಾಡುವ ಕನಸನ್ನೂ ಯಾವ ನಿರ್ಮಾಪಕ ಕಾಣಲಾರ. ನನಗೆ ಈ ಪ್ರಯೋಗಕ್ಕೆ ಜಾಗಮಾಡಿಕೊಟ್ಟವರು ಶ್ರೀಹರಿ ಖೋಡೆ ಅವರು. ಇಂತಹ ನಿರ್ಮಾಪಕರು ಬಹಳ ವಿರಳ. ಕನ್ನಡದಲ್ಲಂತೂ ಇಲ್ಲವೇ ಇಲ್ಲ.
ಪ್ರ. ಹಿಂದೆ ಚಿತ್ರರಂಗದಲ್ಲಿ ಒಂದು ಒಳ್ಳೆಯ ಚಲನಚಿತ್ರವೆಂದರೆ ಉತ್ತಮ ಕಥೆ ಮುಖ್ಯವಾಗಿತ್ತು, ಅನಂತರ ಕಥೆಗಿಂತ ಸಂಭಾಷಣೆ, ಹಾಡುಗಳು ಪ್ರಾಮುಖ್ಯ ಪಡೆದವು. ಈಗ ತಾಂತ್ರಿಕತೆಯೇ ಚಿತ್ರದ ಜೀವಾಳ ಎನ್ನುವಂತಹ ದಿನಗಳು ಬಂದಿವೆ ಎನ್ನಿಸುತ್ತಿದೆಯೆ?
ಉತ್ತರ: ಯಾವತ್ತಿಗೂ ತಾಂತ್ರಿಕತೆ ಜೀವಾಳ ಅಲ್ಲ; ಅದು ಆಗಲು ಸಾಧ್ಯವೂ ಇಲ್ಲ. ತಾಂತ್ರಿಕತೆ ಕ್ಷಣಿಕ. ಸ್ವಲ್ಪ ದಿನಗಳಲ್ಲಿ ಇದಕ್ಕಿಂತಲೂ ಉತ್ತಮ ತಂತ್ರಜ್ಞಾನ ಬರುತ್ತದೆ. ಅಲ್ಲಿಗೆ ಇದು ಮರೆತೇ ಹೋಗುತ್ತದೆ. ಹೀಗಾಗಿ ನನ್ನ ಪ್ರಕಾರ, ತಂತ್ರಜ್ಞಾನ ಒಂದು ರೀತಿಯ ಆಲಂಕಾರಿಕ ವಸ್ತು. ಕಥೆ ಕಂಟೆಂಟ್ ಅದರ ಅಂತಃಸತ್ತ್ವ. ಇಂದು ನಾವು ಬಾಹ್ಯ ಅಲಂಕಾರಕ್ಕೆ ಪ್ರಾಶಸ್ತ್ಯ ಕೊಡುತ್ತಿದ್ದೇವೆ. ಒಳ್ಳೆಯ ವೇಷ ಮಾಡಿಕೊಂಡು ಬಂದಾಗ ಎದ್ದು ಸಿಳ್ಳೆ ಹೊಡೆಯುತ್ತೇವೆ. ಅವನಲ್ಲಿರುವ ಕ್ರೌರ್ಯ ನಮಗೆ ಗೊತ್ತೇ ಆಗುವುದಿಲ್ಲ. ಈ ರೀತಿ ಆಗುತ್ತಿದೆ. ನಾವು ಆಲಂಕಾರಿಕ ವಸ್ತುಗಳಿಗೆ ಪ್ರಾಮುಖ್ಯ ನೀಡುತ್ತಾ ಮೂಲವಸ್ತುವನ್ನು ಮರೆಯುತ್ತಿದ್ದೇವೆ.
ಹಾಗೆಂದು ಎಲ್ಲಾ ಸಿನೆಮಾಗಳಲ್ಲಿ ಹೀಗೆಯೇ ಆಗುತ್ತಿದೆ ಎಂದಲ್ಲ; ಹಲವು ಕಂಟೆಂಟನ್ನೇ ಪ್ರಾಮುಖ್ಯವಾಗಿಟ್ಟು ತಾಂತ್ರಿಕತೆಯನ್ನು ಬದಿಗಿಟ್ಟು ಅಥವಾ ಅದನ್ನು ಪೂರಕ ಅಂಶವಾಗಿ ಬಳಸಿಕೊಂಡ ಸಾಕಷ್ಟು ಸಿನೆಮಾಗಳು ಬಂದಿವೆ. ನಾವು ’ಅಲ್ಲಮ’ನನ್ನು ’ಬಾಹುಬಲಿ’ಯ ರೀತಿಯಲ್ಲಿ ಮಾಡಬಹುದಾಗಿತ್ತು. ಫ್ಯಾಂಟಸಿಗಳನ್ನು ಹಾಕಬಹುದಿತ್ತು. ಇದು ಆ ರೀತಿಯ ವಿಷಯವೇ ಆಗಿತ್ತು. ಚಾಮರಸನ ಪ್ರಭುಲಿಂಗಲೀಲೆ, ಅಲ್ಲಮನ ಕಾವ್ಯಗಳನ್ನು ಓದಿದರೆ ಅಲ್ಲಿ ಅಲ್ಲಮನನ್ನು ಬೇರೆ ರೀತಿಯಾಗಿ – ದೇವಗಣವಾಗಿ ಬರುವ ಹಾಗೆ – ನೋಡಲಾಗುತ್ತದೆ. ಹೀಗಾಗಿ ’ಅಲ್ಲಮ’ನಲ್ಲಿ ಎಲ್ಲವೂ ಇತ್ತು, ಮಾಡಬಹುದಾದ ಎಲ್ಲ ಸಾಧ್ಯತೆಗಳೂ ಅದರಲ್ಲಿತ್ತು.
ಆದರೆ ನಾನದನ್ನು ಇತಿಹಾಸವಾಗಿ ಯೋಚನೆ ಮಾಡಿದೆ. ಯಾವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ತ್ವ ರೂಪುಗೊಳ್ಳುವುದು ಅವನ ಐತಿಹಾಸಿಕ ಕಾಲಘಟ್ಟಕ್ಕೆ ತಕ್ಕ ಹಾಗೆ. ಒಂದು ಕಾಲಘಟ್ಟದಲ್ಲಿ ನಡೆದ ಘಟನೆಗಳನ್ನು ಯೋಚನೆಮಾಡಿದರೆ, ಅಂತಹ ಒಬ್ಬ ಇತಿಹಾಸಪುರುಷ ಹುಟ್ಟಿಬರುತ್ತಾನೆ. ನೀವು ಬುದ್ಧ, ಗಾಂಧಿ, ಶಂಕರಾಚಾರ್ಯ ಯಾರನ್ನು ಬೇಕಾದರೂ ತೆಗೆದುಕೊಳ್ಳಿ. ಪ್ರತಿಯೊಬ್ಬರೂ ಆ ರೀತಿಯಲ್ಲಿ ಇತಿಹಾಸಪುರುಷರಾಗಿ ಬರುವವರು. ಆ ರೀತಿಯಲ್ಲಿ ನಾನು ಅಲ್ಲಮನನ್ನು ಯೋಚನೆ ಮಾಡಿದ್ದೇನೆ.
ಈಗ ಪ್ರಜಾಪ್ರಭುತ್ವದಲ್ಲಿಯೇ ನಾವು ಒದ್ದಾಡುತ್ತಿದ್ದೇವೆ. ರಾಜಮಹಾರಾಜರ ಆ ೧೨ನೇ ಶತಮಾನದಲ್ಲಿ ಬಸವಣ್ಣನವರು ಆ ಚಿಂತನೆಯನ್ನು ಹೊರಗೆ ತರಬೇಕಾದರೆ ಅವರನ್ನು ಪ್ರಭಾವಿಸಿದಂಥವು ಎಂಥ ಅಂಶಗಳು ಎನ್ನುವುದನ್ನು ಯೋಚನೆಮಾಡಿದಾಗ ಅಲ್ಲಮ ಬಹಳ ಮುಖ್ಯವಾಗುತ್ತಾನೆ. ಅಲ್ಲಮನಂತಹ ಒಬ್ಬ ಶೂನ್ಯಸಿಂಹಾಸನಾಧೀಶ್ವರ, ಎಲ್ಲವನ್ನೂ ಖಡಕ್ ಆಗಿ ಹೇಳುವವವನು; ಇದು ಸರಿ, ಇದು ತಪ್ಪು ಎಂದು ಹೇಳಿ ವಿಮರ್ಶಿಸುವ ಬುದ್ಧಿ ಇರುವ ಅಲ್ಲಮ ಬೇಕಾಗುತ್ತಾನೆ. ಅವನ ಇಡೀ ತತ್ತ್ವವೇ ಒಂದು ಶೂನ್ಯ. ಒಂದು ನಿರೀಶ್ವರ ತತ್ತ್ವವನ್ನು ಹೇಳುತ್ತಾ ಹೋಗುವುದು ತೋರುತ್ತದೆ – ಇದು ಎಲ್ಲಕ್ಕಿಂತ ಮೇಲಿದೆ ಎಂದು. ಜೀವನದ ಎಲ್ಲ ಮಜಲುಗಳನ್ನು ದಾಟಿ ಎಲ್ಲೋ ಒಂದು ಕಡೆ ತನ್ನದೇ ಆದಂತಹ ಒಂದು ಸ್ಥಿತಿಯಲ್ಲಿರುವ ಸಂತನಿಗೆ ಮಾತ್ರ ಅದು ಸಾಧ್ಯವಾಗುತ್ತದೆ. ಅದನ್ನು ಅನುಸರಿಸಲು ಬಸವಣ್ಣ ಸಿಗುತ್ತಾನೆ. ಇಂತಹ ಒಂದು ಸಿನೆಮಾ ಮಾಡಬೇಕಾದರೆ ಇಂದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದು ಕಷ್ಟ. ಕೇವಲ ತಾಂತ್ರಿಕತೆಯಿಂದಲೇ ಒಂದು ಸಿನೆಮಾ ಓಡಿಸುತ್ತೇನೆ ಎಂದರೆ ಅದು ಕ್ಷಣಿಕವಾಗಿರುತ್ತದೆ, ಆ ಕ್ಷಣದಲ್ಲಿ ಅದು ಚೆನ್ನಾಗಿ ಕಾಣಬಹುದು. ಅನಂತರ ಅದು ಉಳಿಯುವುದಿಲ್ಲ. ನಿಜವಾಗಿಯೂ ಉಳಿಯುವುದು ಕಂಟೆಂಟ್ ಮಾತ್ರ. ಅದು ಎಷ್ಟು ಚೆನ್ನಾಗಿ ಉಳಿಯುತ್ತದೆಯೆಂದರೆ ಅದು ನಮ್ಮನ್ನು ತಿದ್ದುತ್ತದೆ. ಒಂದು ವ್ಯಕ್ತಿತ್ವವನ್ನು ರೂಪಿಸುತ್ತದೆ. ಇದಕ್ಕೆ ಟೆಕ್ನಾಲಜಿಯ ಅವಲಂಬನೆಯಿಲ್ಲ. ತಾಂತ್ರಿಕತೆಯಿಂದ ಚೆನ್ನಾಗಿ ಕಾಣುತ್ತದೆ; ಆಹಾ ಎನಿಸುತ್ತದೆ. ಅದರ ನಂತರ ಇನ್ನೇನೂ ಉಳಿಯುವುದಿಲ್ಲ.
ಇನ್ನು ಈ ಟೆಕ್ನಾಲಜಿ ಮನಸ್ಸನ್ನು ಕಟ್ಟಿಕೊಡುವ ಕೆಲಸಗಳಿಗೆ ಬಳಕೆಯಾಗುತ್ತಿಲ್ಲ; ಮನಸ್ಸುಗಳನ್ನು ಛಿದ್ರಿಸುವಂತಹ ಕೆಲಸಗಳಿಗೆ ಉಪಯೋಗವಾಗುತ್ತಿದೆ. ಕ್ರೌರ್ಯ, ಹಿಂಸೆ, ಲೈಂಗಿಕತೆ – ಇವುಗಳನ್ನು ಹೆಚ್ಚುಹೆಚ್ಚು ಹೇಳುವಂತಹ ಟೆಕ್ನಾಲಜಿಯನ್ನು ನಾವು ಕಾಣುತ್ತಿದ್ದೇವೆ. ಅದು ಎಷ್ಟರಮಟ್ಟಿಗಿದೆ ಎಂದರೆ, ಆನಿಮೇಷನ್ ಚಿತ್ರಗಳಲ್ಲಿ ಮಕ್ಕಳಿಗೆ ಕೂಡಾ ಅವುಗಳನ್ನೇ ತೋರಿಸಲಾಗುತ್ತಿದೆ. ಮಕ್ಕಳ ಮನಸ್ಸಿನ ಮೇಲೂ ಇನ್ನೊಬ್ಬನಿಗೆ ಹೊಡೆದರೆ ಮಾತ್ರ ದೊಡ್ಡವನು ಎನ್ನುವ ಅಭಿಪ್ರಾಯ ಬರುವಂತೆ ತೋರಿಸಲಾಗುತ್ತಿದೆ. ಬಲಶಾಲಿಯಾಗಬೇಕು ಎಂದು ತೋರಿಸಲಾಗುತ್ತಿದೆ. ಟೆಕ್ನಾಲಜಿ ’ಶಕ್ತಿ ಇರುವವನಿಗೆ ಮಾತ್ರ ಉಪಯೋಗ, ಇತರರಿಗಿಲ್ಲ’ ಎನ್ನುವುದನ್ನು ಬಿಂಬಿಸುತ್ತಿದೆ, ಸೃಷ್ಟಿಮಾಡುತ್ತಿದೆ. ಎಲ್ಲರಿಗೂ ಅನುಕೂಲವಾಗುವಂತಾಗಬೇಕು ಎಂಬುದನ್ನು ಬಿಂಬಿಸಲು ಕಥೆಗೆ ಮಾತ್ರ ಸಾಧ್ಯ; ಎಲ್ಲಿ ಕುಳಿತುಕೊಂಡು ಕಥೆ ಹೇಳಿದರೂ ಕಥೆ ಕಥೆಯೇ.
ಪ್ರ. ಒಂದು ಅರ್ಥಪೂರ್ಣ ಚಲನಚಿತ್ರ ನಿರ್ಮಿಸುವುದು ಒಂದೆಡೆಯಾದರೆ, ಅದಕ್ಕೆ ವೀಕ್ಷಕರನ್ನು ಕರೆತರುವುದು ಮತ್ತೊಂದೆಡೆ. ಅನೇಕ ಒಳ್ಳೆಯ ಚಿತ್ರಗಳು ಟಾಕೀಸಿನಲ್ಲಿ ಸೋಲುತ್ತಿವೆ ಎಂಬ ಹಿನ್ನೆಲೆಯಲ್ಲಿ ಈ ಪ್ರಶ್ನೆ. ಸದಭಿರುಚಿಯ ಚಿತ್ರಗಳನ್ನು ವೀಕ್ಷಿಸಬೇಕೆಂಬ ಹಂಬಲವನ್ನು ಜನರಲ್ಲಿ ತರುವುದು ಹೇಗೆ? ನೀವೇನಾದರೂ ಆ ರೀತಿಯ ಪ್ರಯತ್ನಗಳನ್ನು ಮಾಡಿದ್ದೀರಾ?
ಉತ್ತರ: ನನ್ನ ಎಲ್ಲ ಸಿನೆಮಾಗಳೂ ಸದಭಿರುಚಿಯ ಸಿನೆಮಾಗಳು. ನೀವು ಒಪ್ಪಿ ಒಪ್ಪಿಕೊಳ್ಳದೆ ಇರಿ, ಈ ’ಬ್ರಿಡ್ಜ್ ಸಿನೆಮಾ’ ಯೋಚನೆಯನ್ನು ಕನ್ನಡದಲ್ಲಿ ತಂದದ್ದೇ ನಾನು. ಈ ಕಡೆ ’ಆರ್ಟ್ ಸಿನೆಮಾ’, ’ಅವಾರ್ಡ್ ಸಿನೆಮಾ’, ’ಕಡಮೆ ಬಂಡವಾಳದ ಸಿನೆಮಾ’ ಮುಂತಾದ ಹಣೆಪಟ್ಟಿಗಳನ್ನು ಹಾಕಿಕೊಂಡು ನಮ್ಮ ಸಿನೆಮಾಗಳು ndividual perspective, ’ಜನರಿಗಾಗಿ ಸಿನೆಮಾ ಅಲ್ಲ; ನನಗಾಗಿ ಸಿನೆಮಾ’ ಅನ್ನುವ ತರಹದಲ್ಲಿ ಒಂದು ಗ್ರೂಪ್ ಬೆಳೆದುಬಂದಿದೆ. ಈ ಆರ್ಟ್ ಸಿನೆಮಾ ಮಾಡುವುದೇ ಆವಾರ್ಡ್ಗೋಸ್ಕರ. ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಜನರಿಗಾಗಿ ಸಿನೆಮಾ. ಅವನು ಏನು ಕೇಳುತ್ತಾನೆ ಅದನ್ನು ಕೊಡುತ್ತೇವೆ – ಅವನು ಸೆಕ್ಸ್ ಕೇಳುತ್ತಾನೆ, ಕೊಡುತ್ತೇವೆ; ಕ್ರೈಮ್ ಕೇಳುತ್ತಾನೆ, ಕೊಡುತ್ತೇವೆ – ಎಂಬ ವರ್ಗ. ’ಅವನು ನೋಡುತ್ತಿದ್ದಾನಲ್ಲ! ಮಚ್ಚು ಲಾಂಗು ನೋಡುತ್ತಿದ್ದಾನೆ. ನೀವೇಕೆ ಗುರುಗುಟ್ಟುತ್ತೀರಾ?’ – ಎಂಬ ವರ್ಗ. ಈ ಎರಡೂ ಒಂದಕ್ಕೊಂದು ಸಂಬಂಧವಿಲ್ಲವೆನ್ನುವಂತೆ ಎರಡೂ ಎರಡು ಹಳಿಗಳಲ್ಲಿ ಹೋಗುತ್ತಿವೆ. ಈ ಎರಡರ ಮಧ್ಯದಲ್ಲಿ ’ಬ್ರಿಡ್ಜ್ ಸಿನೆಮಾ’ಗಳಾಗಿ ಬಂದಿದ್ದು ನನ್ನ ಸಿನೆಮಾ. ಇದು ನನ್ನದೇ ಪ್ರಯತ್ನ.
ನನ್ನ ಸಿನೆಮಾಗಳಲ್ಲಿ ಕಲಾತ್ಮಕತೆಯ ಹೃದಯವನ್ನು ವ್ಯಾಪಾರಿಯ ಮುಖವಾಡದ ಜೊತೆ ಕೊಡುತ್ತಿದ್ದೇನೆ. ಅದೇ ’ಬ್ರಿಡ್ಜ್ ಸಿನೆಮಾ’ವಾಗಿ ಬಂದಿದ್ದು. ಸದಭಿರುಚಿಯನ್ನು ಈ ಬ್ರಿಡ್ಜ್ ಸಿನೆಮಾಗಳೇ ಉಳಿಸಿದ್ದು. ಈ ಬ್ರಿಡ್ಜ್ ಸಿನೆಮಾಗಳು ಹೇಗೆ ಕಂಟೆಂಟ್ ಮೇಲೆ ಓರಿಯೆಂಟ್ ಆಗುತ್ತಿತ್ತೋ ಹಾಗೆಯೇ ಟೆಕ್ನಾಲಜಿಯನ್ನೂ ಬಳಸಿಕೊಳ್ಳುತ್ತಿತ್ತು. ಮತ್ತು ವ್ಯಾಪಾರೀಕರಣವನ್ನೂ ಬೆಳೆಸುತ್ತಿತ್ತು. ನನ್ನ ಎಲ್ಲ ಸಿನೆಮಾಗಳನ್ನು ಗಮನಿಸಿದರೆ ೨೫ ವಾರ, ೨ ವರ್ಷ ಪ್ರದರ್ಶನ ಕಂಡ ಸಿನೆಮಾಗಳೂ ಇವೆ.
ವ್ಯಾಪಾರೀ ಸಿನೆಮಾಗಳನ್ನು ನಿರ್ಮಿಸುವ ಕಮರ್ಷಿಯಲ್ ಡೈರೆಕ್ಟರ್ಗಳ ಗುಂಪಿನಲ್ಲಿಯೂ ನಾಗಾಭರಣ ಸಲ್ಲುತ್ತಾನೆ. ನನ್ನ ’ಜನುಮದ ಜೋಡಿ’, ’ನಾಗಮಂಡಲ’, ’ಮೈಸೂರುಮಲ್ಲಿಗೆ’, ’ಚಿನ್ನಾರಿ ಮುತ್ತ, ’ಸಂತ ಶಿಶುನಾಳ’, ’ಆಸ್ಫೋಟ’ – ದುಡ್ಡು ಮಾಡಿದೆ. ನನ್ನ ೩೫ ಸಿನೆಮಾಗಳಲ್ಲಿ ೨೨ ಸಿನೆಮಾಗಳು ಸಕ್ಸೆಸ್ಫುಲ್ ಸಿನೆಮಾಗಳು. ೮ ಸಿನೆಮಾಗಳು ಸರಾಸರಿಯಲ್ಲಿದ್ದರೆ, ಇನ್ನು ೫ ಸಿನೆಮಾಗಳು ಫ್ಲಾಪ್. ಹೀಗೆ ಲೆಕ್ಕಹಾಕಿದರೆ ನಾನು ಸಕ್ಸೆಸ್ಫುಲ್ ರೇಟ್ನಲ್ಲಿ ಇರಬೇಕಲ್ಲವೇ? ವ್ಯಾಪಾರೀ ಮನೋಭಾವದ ನಿರ್ಮಾಪಕರು, ಇವನಿಗೆ ದುಡ್ಡುಹಾಕಿದರೆ ಬರುತ್ತದೆ ಎಂದು ಹೇಳಬೇಕಲ್ಲ? ಕಮರ್ಷಿಯಲ್ ನಿರ್ದೇಶಕ ಎಂದು ಕರೆಯಬೇಕಲ್ಲವೇ? ಆದರೆ ಅವರು ಹೇಳಲ್ಲ. ಯಾಕೆಂದರೆ ಅವರಿಗೆ ಭಯ. ಸಿನೆಮಾದಲ್ಲಿ ಸಾಹಸ (ಫೈಟ್), ಹಾಡು ಎಲ್ಲವನ್ನೂ ಹಾಕುತ್ತಾನೆ, ಎಲ್ಲವೂ ಇರುತ್ತದೆ. ಆದರೆ ಬೇರೆ ತರಹದಲ್ಲಿರುತ್ತದಲ್ಲಾ ಎಂದು.
ಹಾಗೆಯೇ ಇಲ್ಲಿ ಆರ್ಟ್ ಸಿನೆಮಾದವರು. ಏನಿವನು? ಬಲವಾದ ಕಂಟೆಂಟ್ನ್ನು ಇಟ್ಟುಕೊಳ್ಳುತ್ತಾನೆ, ನಾವ್ಯಾರೂ ಮಾಡದ ’ಮೈಸೂರು ಮಲ್ಲಿಗೆ’ಯಂತಹ ಕಂಟೆಂಟ್ನ್ನು ಬಳಸುತ್ತಾನೆ. ಹಾಡು, ನೃತ್ಯ ಎಲ್ಲವನ್ನೂ ಬಳಸುತ್ತಾನೆ. ಆಕ್ಷನ್ ಬಳಸುತ್ತಾನೆ, ಥ್ರಿಲ್ ಇರುತ್ತದೆ. ಕಮರ್ಷಿಯಲ್ ಆಗಿ ಯೋಚನೆ ಮಾಡಲ್ಲ. ಆದರೂ ಕಲಾತ್ಮಕವಾಗಿರುತ್ತದೆ. ಎಲ್ಲಿ ನ್ಯಾಷನಲ್ ಅವಾರ್ಡ್ಗಳೆಲ್ಲ ಬಂದುಬಿಡುತ್ತದೋ ಎಂಬ ಭಯ. ಹೀಗಾಗಿ ಅವರಿಗೆ, ನನ್ನನ್ನು ಪೂರ್ಣ ಪ್ರಮಾಣದ ಕಲಾತ್ಮಕ ನಿರ್ದೇಶಕ ಎನ್ನಲು ಭಯ.
ಒಟ್ಟಿನಲ್ಲಿ ನಾನು ಅವರಿಬ್ಬರಿಗೂ ಸಲ್ಲದ, ಆದರೆ ಅಲ್ಲಿಯೂ ಸಲ್ಲುವ, ಇಲ್ಲಿಯೂ ಸಲ್ಲುವ ಅವರಿಬ್ಬರೂ ಒಪ್ಪಿಕೊಳ್ಳದ ಒಬ್ಬ ಬ್ರಿಡ್ಜ್ ಸಿನೆಮಾ ಮಾಡುತ್ತಿರುವವನು. ಒಂದು ಮಧ್ಯಮಮಾರ್ಗವನ್ನು ಆಯ್ದುಕೊಂಡಿದ್ದೇನೆ. ಇದು ಬೇರೆ ಯಾವ ನಿರ್ದೇಶಕನಿಗೂ ಈವರೆಗೆ ಕೈಗೆ ಹತ್ತಿಲ್ಲ. ನೀವು ಕಾಸರವಳ್ಳಿ, ಶೇಷಾದ್ರಿ ಎಲ್ಲರನ್ನೂ ಇಟ್ಟುಕೊಂಡು ನೋಡಬಹುದು. ಅವರು ಕಮರ್ಷಿಯಲ್ ಆಗಿ ಎಷ್ಟು ಸಕ್ಸೆಸ್ ಆಗಿದ್ದಾರೆ ಎಂದರೆ, ಇಲ್ಲ. ಕಮರ್ಷಿಯಲ್ ಎಂದರೆ ದುಡ್ಡು ಮಾಡಿದ್ದಾರಾ ಎಂದೇ? ಅವರು ದುಡ್ಡು ಬೇರೆ ರೀತಿ ಮಾಡಿರಬಹುದು – ಅವರಿಗೆ ಅವಾರ್ಡ್, ಸಬ್ಸಿಡಿಗಳು ಬಂದಿರಬಹುದು. ಆದರೆ ಥಿಯೇಟರ್ನಲ್ಲಿ ಓಡಿಲ್ಲ. ಇನ್ನು ಥಿಯೇಟರ್ನಲ್ಲಿ ಓಡಿರುವ ಸೂಪರ್ಹಿಟ್ ಸಿನೆಮಾಗಳ ಪಕ್ಕದಲ್ಲಿಟ್ಟು ನೋಡಿದರೂ ನನ್ನದು ಅವರೆಲ್ಲರನ್ನೂ ಮೀರಿಸಿದ ದಾಖಲೆ ಮಾಡಿದೆ.
’ಜನುಮದ ಜೋಡಿ’ ದಾಖಲೆಯನ್ನು ’ಮುಂಗಾರು ಮಳೆ’ಯವರೆಗೂ ಯಾರೂ ಮಾಡಿಲ್ಲ. ’ಮುಂಗಾರು ಮಳೆ’ಯೂ ಆ ಸಾಧನೆ ಮಾಡಿಲ್ಲ, ಸುಮ್ಮನೆ ಅವರು ಹೇಳಿಕೊಳ್ಳುತ್ತಿದ್ದಾರಷ್ಟೆ. ’ಜನುಮದ ಜೋಡಿ’ ಆ ಕಾಲದಲ್ಲಿ ೧೧ ಕೋಟಿ ಕಲೆಕ್ಷನ್ ಮಾಡಿದೆ. ಜೊತೆಗೆ ೨ ವರ್ಷಗಳ ಕಾಲ ಸತತವಾಗಿ ೨೫ ಚಿತ್ರಮಂದಿರಗಳಲ್ಲಿ ಓಡಿದೆ. ’ಮುಂಗಾರು ಮಳೆ’ ಒಂದು ವರ್ಷವೂ ಓಡಿಲ್ಲ. ಆ ರೀತಿಯ ದಾಖಲೆಗಳನ್ನು ಅದು ನಿರ್ಮಿಸಿಬಿಟ್ಟಿದೆ. ಹೀಗಾಗಿ ವ್ಯಾಪಾರೀ ಮನೋಭಾವದ ಯಾವುದೇ ನಿರ್ದೇಶಕನ ಸಾಲಿನಲ್ಲಿ ಲೆಕ್ಕಹಾಕಿದರೆ ಅದರಲ್ಲಿಯೂ ನಾನಿದ್ದೇನೆ. ಈ ಅಹಂನಲ್ಲಿ ನಾನು ಯಾಕೆ ಹೇಳುತ್ತಿದ್ದೇನೆಂದರೆ, ಇದನ್ನು ಈವರೆಗೆ ಯಾರೂ ಗುರುತಿಸಿಲ್ಲ, ನೊಟೀಸ್ ಮಾಡಿಲ್ಲ; ಮಾಡಲಾರರು. ಇದಕ್ಕೆ ಎಲ್ಲಿ ನಾಗಾಭರಣನನ್ನು ಗ್ರೇಟ್ ಎನ್ನಬೇಕೋ ಎಂಬ ಕಾರಣವಿರಬಹುದು. ಆದರೆ ನಾನು ಅವರಿಬ್ಬರನ್ನು ಸರಿಗಟ್ಟಿದ ನನ್ನದೇ ಮಾರ್ಗವನ್ನು ನಿರ್ಮಿಸಿಕೊಂಡಿದ್ದೇನೆ. ಈ ಮಾರ್ಗವನ್ನು ಎಷ್ಟು ಜನ ಅನುಸರಿಸುತ್ತಿದ್ದಾರೆ? ಈಗೀಗ ನಿರ್ದೇಶನಕ್ಕೆ ಬರುತ್ತಿರುವ ಒಂದಷ್ಟು ಹೊಸ ಹುಡುಗರು ಮೂರ್ನಾಲ್ಕು ಮಂದಿ ಈ ಮಾರ್ಗವನ್ನು ಅನುಸರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ನನ್ನದೇ ಆದಂತಹ ಮಾರ್ಗವೊಂದನ್ನು ಕನ್ನಡ ಚಿತ್ರರಂಗಕ್ಕೆ ರೂಪಿಸಿಕೊಟ್ಟಿದ್ದು ನಾನು. ಪುಟ್ಟಣ್ಣ, ಪಂತುಲು ಅಲ್ಲ. ಚಿತ್ರರಂಗದಲ್ಲಿ ಪುಟ್ಟಣ್ಣ ಒಂದು ನಾವೆಲ್ ಹಿಡಿದು ಏನು ಮಾಡಬೇಕೋ ಅದನ್ನು ಮಾಡಿದರು. ಅದರಿಂದಾಚೆಗೆ ಅವರು ಹೋಗಲೇ ಇಲ್ಲ. ಅವರ ಒಂದೇ ಒಂದು ಸಿನೆಮಾಕ್ಕೆ ನ್ಯಾಷನಲ್ ಆವಾರ್ಡ್ ಬಂದಿರುವುದು. ನನಗೆ ೧೦ (’ಅಲ್ಲಮ’ ಸೇರಿ) ರಾಷ್ಟ್ರೀಯ ಪುರಸ್ಕಾರಗಳು ಬಂದಿವೆ. ೧೩ ರಾಜ್ಯ ಪ್ರಶಸ್ತಿಗಳಿವೆ. ಜೊತೆಗೆ ೮ ಸೂಪರ್ಹಿಟ್ ಸಿನೆಮಾಗಳಿವೆ. ಮಕ್ಕಳ ಸಿನೆಮಾದಲ್ಲಿಯೂ ಒಂದು ಸೂಪರ್ಹಿಟ್ ಸಿನೆಮಾ ಇದೆ. ನಮ್ಮ ಪತ್ರಿಕಾರಂಗವೂ ಇದನ್ನು ಹೈಲೈಟ್ ಮಾಡಿಲ್ಲ. ಇದಕ್ಕೆ ಅವರವರದ್ದೇ ಆದ ಕಾರಣಗಳಿರಬಹುದು. ಇಂದು ಯಾವ ರಾಜಕೀಯವನ್ನೂ ಮೀರಿದ ರಾಜಕೀಯ ಕಲಾರಂಗದಲ್ಲಿದೆ. ಅದು ಜಾತಿ, ವರ್ಗ, ವರ್ಣ ಮಟ್ಟದಲ್ಲಿ ನಡೆಯುವುದನ್ನು ಕಾಣಬಹುದು. ಕಲಾವಿದ ಜಾತ್ಯತೀತನಾಗಿರುತ್ತಾನೆ ಎಂದು ಮೊದಲಿತ್ತು. ಈಗಿನ ಕಾಲಮಾನದಲ್ಲಿ ಅದು ಇಲ್ಲ.
(ಮುಂದುವರಿಯುವುದು)
ಮುಂದಿನ ಭಾಗ ಇಲ್ಲಿ ಓದಬಹುದು