ಟಿ.ಎಸ್. (ತಲಕಾಡು ಶ್ರೀನಿವಾಸಯ್ಯ) ನಾಗಾಭರಣ ಅವರೊಂದಿಗಿನ ಸಂವಾದದ ಪೂರ್ಣಪಾಠದ ಕೊನೆಯ ಭಾಗ ಇಲ್ಲಿದೆ.
ಪ್ರಶ್ನೆ: ನಿಮ್ಮ ಚಿತ್ರಗಳಿಗೆ ಯಾವ ಬಗೆಯ ಸಂಗೀತವನ್ನು ನೀವು ಇಷ್ಟಪಡುತ್ತೀರಿ? ಸಂಗೀತ ಮತ್ತು ದೃಶ್ಯಗಳ ನಡುವಿನ ಸಂಬಂಧ ಹೇಗಿರಬೇಕು ಎಂದು ನೀವು ಅಪೇಕ್ಷೆ ಪಡುತ್ತೀರಿ?
ಉತ್ತರ: ನಾನು ಮೂಲತಃ ಸಂಗೀತವನ್ನು ಆಸ್ವಾದಿಸುವವನು ಮತ್ತು ಸಂಗೀತವನ್ನು ಕಲಿಯಲು ಹೊರಟವನು. ಸಂಗೀತ ನನ್ನ ಜೀವನದ ಅವಿಭಾಜ್ಯ ಅಂಗ. ಕಾರಣ ನನ್ನ ಬಾಲ್ಯ. ಮುಖ್ಯವಾಗಿ ನಾನು ಜಾನಪದೀಯ ಸಂಗೀತವನ್ನು ಕೇಳುತ್ತಾ ಬೆಳೆದವನು. ಬೆಂಗಳೂರಿಗೆ ಬಂದ ನಂತರವೂ ಕಾಳಿಂಗರಾಯರು ಮತ್ತು ಅಶ್ವತ್ಥ್ ಇವರ ಸಹವಾಸದಲ್ಲಿ ಸುಗಮ ಸಂಗೀತ, ಭಾವಗೀತೆ ನನ್ನನ್ನು ಆಕರ್ಷಿಸಿತು. ಅದೇ ಸಂದರ್ಭದಲ್ಲಿ ಶೇಷಾದ್ರಿ ಗವಾಯಿಗಳ ಶಿಷ್ಯನಾಗಿ ಸುಮಾರು ೨ ವರ್ಷ ಹಾರ್ಮೋನಿಯಂ ಕಲಿತೆ. ಹಾಗಾಗಿ ಶಾಸ್ತ್ರೀಯ ಸಂಗೀತದ ಉತ್ತರಾದಿ ಸಂಗೀತದ ಬಗೆಗೆ ನನಗೆ ಹೆಚ್ಚು ಒಲವು. ಈ ಎಲ್ಲ ಬೆಳವಣಿಗೆಗಳಿಂದಾಗಿ ನನಗೆ ಸಂಗೀತವಿಲ್ಲದೆ ಸಿನೆಮಾ ಇಲ್ಲ; ಸಂಗೀತವಿಲ್ಲದೆ ಮನುಷ್ಯನೇ ಇಲ್ಲ ಎಂದು ನಂಬಿದ್ದೇನೆ. ನನ್ನ ಪ್ರಕಾರ, ಪ್ರತಿಯೊಬ್ಬ ಜೀವಿಗೂ ಅದರಲ್ಲಿಯೂ ಮನುಷ್ಯ ಜೀವಿಗೆ ನಾದಪ್ರಿಯತೆ ಇರುತ್ತದೆ. ಅದು ಸಂಗೀತ ಅಂತಲ್ಲ. ಯಾವುದೇ ನಾದವಿರಬಹುದು. ಅದು ಕೇಳುವ, ಆಸ್ವಾದಿಸುವ ಅಥವಾ ತನ್ನನ್ನು ತಾನು ತಲ್ಲೀನಗೊಳಿಸಿಕೊಳ್ಳಲು ಬೇಕಾಗುವಂತಹ ಒಂದು ಕ್ರಿಯೆ. ಅದಿಲ್ಲದೇ ಅವನಿಗೆ ಇರಲು ಸಾಧ್ಯವೇ ಇಲ್ಲ. ’ಓಂ’ ಎನ್ನುವುದನ್ನು ಹಾಕಿ ಕುಳಿತುಕೊಳ್ಳುತ್ತೇವೆ. ಯಾಕೆ? ಸುಮ್ಮನೆ ಕುಳಿತುಕೊಳ್ಳಬಹುದಲ್ಲ. ಕಾರಣ ಆತ ಆ ನಾದದ ಜೊತೆಯಲ್ಲಿ ಆ ಕ್ಷಣವನ್ನು ಆಸ್ವಾದಿಸಲು ಬಳಸುತ್ತಾನೆ. ಈ ದೃಷ್ಟಿಯಲ್ಲಿ ನೋಡಿದಾಗ ಪ್ರತಿ ವ್ಯಕ್ತಿಗೂ ಅವನದೇ ಆದಂತಹ ಸಂಗೀತಪ್ರಜ್ಞೆ ಇರುತ್ತದೆ. ಕೆಲವರಲ್ಲಿ ಲಯಪ್ರಜ್ಞೆ ಇರುತ್ತದೆ. ಅವರು ನಡೆಯುವಾಗ, ಬಾಡಿ ಲಾಂಗ್ವೇಜ್ನಲ್ಲಿ ಲಯಪ್ರಜ್ಞೆ ಇರುತ್ತದೆ. ಅದು ಅವರಿಗೇ ಗೊತ್ತಿರುವುದಿಲ್ಲ. ರೂಢಿಗತವಾಗಿ ಅಥವಾ ಸಂಸ್ಕಾರದಿಂದ ಅದು ಬಂದಿರುತ್ತದೆ. ನನಗೆ ಇ?ವಿಲ್ಲ ಎಂದು ಆತ ಹೇಳಿದರೂ, ಆ ಹೇಳುವ ರೀತಿಯಲ್ಲಿಯೂ ಮ್ಯೂಸಿಕ್ ಇರುತ್ತದೆ. ಇದನ್ನು ನಾನು ಬಲವಾಗಿ ನಂಬಿರುವವನು. ಹೀಗಾಗಿ ಆರ್ಟ್ ಸಿನೆಮಾಗಳಿಗೆ ಸಂಗೀತ, ನೃತ್ಯ ಬಳಸಬಾರದು ಎಂಬ ನಿಲವಿಗೆ ಹೊರತಾಗಿಯೂ ನಾನು ಅದನ್ನು ಯಾಕೆ ಸಾಧನವಾಗಿ (tool) ಬಳಸಬಾರದು ಎಂದು ಯೋಚನೆ ಮಾಡಿದವನು. ಹೀಗಾಗಿ ನನ್ನೆಲ್ಲ ಸಿನೆಮಾಗಳಲ್ಲಿ ಸಂಗೀತ ಬಹಳ ಪ್ರಾಮುಖ್ಯವನ್ನು ಪಡೆದಿದೆ. ವಿವಿಧ ರೀತಿಯ ಪ್ರಯೋಗಗಳನ್ನೂ ನಾನು ಮಾಡಿದ್ದೇನೆ.
ಒಬ್ಬ ನಿರ್ದೇಶಕನಾಗಿ ಈ ಎಲ್ಲ ಪ್ರಯೋಗಗಳನ್ನು ಮಾಡಲು ನನಗೆ ಸಾಧ್ಯವಾಗಿದ್ದು, ನನ್ನ ಸಂಗೀತಪ್ರಜ್ಞೆಯ ಕಾರಣದಿಂದಲೇ. ಬೇರೆ ಬೇರೆ ಸಂಗೀತ ನಿರ್ದೇಶಕರು ಅವರು ಬೇರೆ ಕಡೆ ಸಾಧಿಸಲಾಗದುದನ್ನು ನನ್ನ ಜೊತೆ ಮಾಡಿದ್ದಾರೆ. ಸಿ. ಅಶ್ವತ್ಥ್ ಬೇರೆ ಯಾರಿಗೂ ಮ್ಯೂಸಿಕನ್ನೇ ಮಾಡಲಾಗಲಿಲ್ಲ, ಆದರೆ ನನಗೆ ೮ ಸಿನೆಮಾಗಳಲ್ಲಿ ಮಾಡಿದ್ದಾರೆ. ಹಂಸಲೇಖ ಅವರು ರವಿಚಂದ್ರನ್ ಜೊತೆ ಮಾಡಿರಬಹುದು, ಆದರೆ ಅದ್ಭುತ ಸಾಹಿತ್ಯವಿರುವ ಸಂಗೀತ ನೀಡಿದ್ದು ನನ್ನ ಸಿನೆಮಾ ’ಕಲ್ಲರಳಿ ಹೂವಾಗಿ’, ’ಆಕಸ್ಮಿಕ’ದಲ್ಲಿ. ಸಕ್ಸೆಸ್ ಕಾಣಲಾಗದ ವಿ. ಮನೋಹರ್ ’ಜನುಮದ ಜೋಡಿ’ಯಲ್ಲಿ ಸಕ್ಸೆಸ್ ಆದರು. ಯಾಕೆಂದರೆ ಅದರ ಇನ್ಪುಟ್ ನನ್ನದು. ನಾನು ಸಂಗೀತವನ್ನು ಒಂದು ಪಠ್ಯವಾಗಿ ತೆಗೆದುಕೊಂಡು ಕಲಿತುಕೊಂಡು ಬಂದವನಾದುದರಿಂದ ನನಗೆ ಆ ಇನ್ಪುಟ್ ನೀಡಲು ಸಾಧ್ಯವಾಗಿದೆ. ಈ ವಿಷಯಕ್ಕೆ, ಈ ಸನ್ನಿವೇಶಕ್ಕೆ ಇದು ಬೇಕೇ ಬೇಡವೇ ಎಂಬುದನ್ನು ಯೋಚನೆಮಾಡಿ ಬಳಸುತ್ತೇನೆ. ಬೇಕು ಎಂದರೆ ಅದಕ್ಕೆ ಅಗಾಧ ಇನ್ಪುಟ್ಗಳನ್ನು ನೀಡುತ್ತೇನೆ. ಹಂಸಲೇಖ ಅವರಿಗೆ ’ಆಗುಂಬೆಯ ಈ ಸಂಜೆಯ’ ಬರೆಯಲು ಕುವೆಂಪುರವರ ಎಲ್ಲ ಸೂರ್ಯೋದಯದ ಹಾಡುಗಳನ್ನು ಒಂದು ಕಡೆ ಜೋಡಿಸಿ ನೀಡಿದ್ದೇನೆ. ’ಈ ಎಲ್ಲವನ್ನೂ ಓದಿಕೊಳ್ಳಿ. ಆದರೆ ಇದಾಗಬಾರದು. ಇದಕ್ಕೆ ಹೊರತಾದ ಇನ್ನೊಂದೇನೋ ಬೇಕು’ ಎಂದು ಆ ಹಾಡನ್ನು ಬರೆಸಿದೆ. ಯಾವ ನಿರ್ದೇಶಕ ಈ ರೀತಿಯ ಇನ್ಪುಟ್ಗಳನ್ನು ಸಂಗೀತ ನಿರ್ದೇಶಕನಿಗೆ ಕೊಡುತ್ತಾನೆ? ’ಜನುಮದ ಜೋಡಿ’ಯಲ್ಲಿ ’ಮಣಿ ಮಣಿ’ ಎಂಬ ಒಂದು ಸಂದರ್ಭವನ್ನು ಹಾಡು ಮಾಡಬೇಕು ಎಂದು ಯಾಕೆ ನಿರ್ಧರಿಸಿದೆ? ಅವರ ಸಿನೆಮಾದಲ್ಲಿಯೇ ಯಾವುದೇ ಹಾಡು ಬರೆಯದ ಬರಗೂರು ರಾಮಚಂದ್ರಪ್ಪನವರಿಗೆ ಯಾಕೆ ಇದನ್ನು ಮಾಡಬೇಕೆನಿಸಿತು? ಯಾಕೆಂದರೆ ಇದನ್ನು ಹಾಡು ಮಾಡಬೇಕೆಂದವನು ನಾನು. ಈ ಇನ್ಪುಟ್ಗಳು ನನ್ನ ಸಿನೆಮಾದ ಅವಿಭಾಜ್ಯ ಅಂಗಗಳು (ಪಾರ್ಟ್ ಅಂಡ್ ಪಾರ್ಸೆಲ್ ಆಫ್ ಮೈ ಸಿನೆಮಾ). ಹೀಗಾಗಿ Music is
the vehicle of my Theater and Cinema.
ನಾವು ರಂಗಭೂಮಿಯಲ್ಲಿಯೂ ಸಂಗೀತವನ್ನು ಬಳಸುತ್ತೇವೆ. ರಂಗಗೀತೆಗಳ ಅದ್ಭುತವಾದ ವ್ಯವಸ್ಥೆ ನಮ್ಮ ’ಬೆನಕ’ದಲ್ಲಿ ಇದೆ. ಅಂದರೆ ನಮ್ಮೆಲ್ಲ ನಾಟಕಗಳೂ ’ಮ್ಯೂಸಿಕಲ್ ಫ್ರೇಮ್’ನಲ್ಲಿಯೇ ಬಂದವುಗಳು. ಅದಕ್ಕೆ ಮೂಲ ಕಾರಣ ಕಾರಂತರು. ಅವರೇ ನನಗೆ ರಂಗಸಂಗೀತದಲ್ಲಿ ಇನ್ಸ್ಪೈರ್ ಮಾಡಿದವರು. ಅವರು ನೀಡಿದ ಇನ್ಫುಟ್ಗಳನ್ನು ನಾನು ರಂಗಭೂಮಿಯಿಂದ ಸಿನೆಮಾಕ್ಕೆ, ಸಿನೆಮಾದಿಂದ ರಂಗಭೂಮಿಗೆ ತೆಗೆದುಕೊಂಡಿದ್ದೇನೆ, ಅಷ್ಟೆ.
ಎಲ್ಲ ರೀತಿಯ ಸಂಗೀತವೂ ನನಗಿಷ್ಟ. ಅವುಗಳನ್ನು ಬಳಸಿದ್ದೇನೆ. ನಾನು ಕಂಸಾಳೆಯನ್ನು ಬಳಸಿದ್ದೇನೆ, ಹಾಗಾದರೆ ನಾನು ಜಾನಪದ ಪ್ರಿಯನೇ? ಹೇಗೆ ಬಳಸಿದ್ದೇನೆ ಎನ್ನುವುದೂ ಮುಖ್ಯ. ಕಂಸಾಳೆಯನ್ನು ಸಿನೆಮಾಗಳಲ್ಲಿ ಮೊದಲು ಮತ್ತು ವ್ಯವಸ್ಥಿತವಾಗಿ ಬಳಸಿದವನು ನಾನು. ಅದುವರೆಗೂ ಕಂಸಾಲೆ ಯಾರಿಗೂ ತಿಳಿದಿರಲಿಲ್ಲವೇ? ತಿಳಿದಿದ್ದರೂ ಯಾಕೆ ಬಳಸಿಲ್ಲ? ಅನಂತರ ಬಳಸಿದವರಲ್ಲಿ ಯಾರಾದರೂ ಒಬ್ಬರು ಸರಿಯಾಗಿ (’ಜೋಗಿ’ಯಲ್ಲಿ ಇನ್ನೇನೋ ಮಾಡಿದ್ದಾರೆ) ಬಳಸಿದ್ದಾರೆಯೇ? ಅಂದರೆ ಹೇಗೆ ಅದನ್ನು ಆಸ್ವಾದಿಸುತ್ತೀರಿ, ಹೇಗೆ ಅದರ ಅನುಭವವನ್ನು ಸಿನೆಮಾಗಳಲ್ಲಿ ತರುತ್ತೀರಿ ಎನ್ನುವುದು ಬಹಳ ಮುಖ್ಯ. ಆಗ ಅದು ಸಿನೆಮಾದಲ್ಲಿ ಅದ್ಭುತವಾದ ಅನುಭವ ಕೊಡಲು ಸಾಧ್ಯ.
ಪ್ರ.: ಮಕ್ಕಳ ಚಿತ್ರ ಎಂದರೆ ಪ್ರಾಣಿ, ಪಕ್ಷಿಗಳ ಪಾತ್ರ, ಒಂದಿಷ್ಟು ಸಾಹಸ ಮತ್ತು ಹಾಸ್ಯವಿದ್ದರೆ ಸಾಕು ಎನ್ನುವ ಭಾವನೆಯನ್ನು ಬದಲಿಸಿದ್ದು ನಿಮ್ಮ ’ಚಿನ್ನಾರಿ ಮುತ್ತ’ ಚಲನಚಿತ್ರ. ಕಮರ್ಷಿಯಲ್ ಚಿತ್ರವಾಗಿಯೂ ಯಶಸ್ಸನ್ನು ಕಂಡ ಚಿತ್ರ ಅದು. ಆ ಪ್ರಯತ್ನವನ್ನು ಮತ್ತೇಕೆ ಮುಂದುವರಿಸಲಿಲ್ಲ
ಉತ್ತರ: ನಾನು ಯಾವಾಗಲೂ ಒಂದು ಪ್ರಯೋಗವನ್ನು ಒಂದೇ ಬಾರಿ ಮಾಡುವುದು. ’ಜನುಮದ ಜೋಡಿ’, ’ನಾಗಮಂಡಲ’ದಂತಹ ಸಿನೆಮಾವನ್ನು ಮತ್ತೆ ಮಾಡಲಿಲ್ಲ. ನನ್ನ ಕಲಿಕೆಯನ್ನು ವಿಸ್ತಾರ ಮಾಡಿಕೊಳ್ಳಬೇಕಾದರೆ ನಾನು ಮಾಡಿದ್ದನ್ನೇ ಮತ್ತೆ ಮಾಡಬಾರದು. ಒಂದು ಸಿನೆಮಾದ ನಂತರ ನಾನು ಬೇರೆ ರೀತಿಯಲ್ಲಿ ಯೋಚನೆ ಮಾಡಬೇಕೆಂದು ನನ್ನ ಯೋಚನಾಲಹರಿಯನ್ನು ಮತ್ತು ಓದುವುದನ್ನು ಬದಲಾಯಿಸಿಕೊಳ್ಳುತ್ತೇನೆ. ಅಲ್ಲಮ ಓದುವಾಗ ನಾನು ಇಡೀ ಶರಣಸಾಹಿತ್ಯದ ಒಟ್ಟಾರೆ ಇತಿಹಾಸದ ಜೊತೆಗೆ ಸಿಕ್ಕಿಹಾಕಿಕೊಂಡುಬಿಟ್ಟಿದ್ದೆ. ಅದು ಶಿವಪ್ರಕಾಶ್ ಬರೆದದ್ದಿರಲಿ, ಡಿ.ಆರ್. ನಾಗರಾಜ್ ಬರೆದದ್ದಿರಲಿ ಪ್ರತಿಯೊಂದೂ ನನಗೆ ಬೇಕಾಗಿತ್ತು. ’ಕಲ್ಲರಳಿ ಹೂವಾಗಿ’ಗೆ ಅದನ್ನಿಟ್ಟುಕೊಳ್ಳುವುದು ಬೇಕಾಗಿರಲಿಲ್ಲ. ಅದನ್ನೆಲ್ಲ ಪಕ್ಕಕ್ಕಿಟ್ಟು ಇನ್ನೊಂದೇನನ್ನೋ ಯೋಚನೆ ಮಾಡುತ್ತಿರುತ್ತೇನೆ.
ಸಾಮಾಜಿಕ ವಿಷಯಗಳಾದಾಗ ಅದರ ಚಿಂತನಾ ಲಹರಿಯೇ ಬೇರೆಯಾಗಿರುತ್ತದೆ. ಮಕ್ಕಳ ಸಿನೆಮಾ ಮಾಡಿದ್ದೂ ಹಾಗೆಯೇ. ಇವರೆಲ್ಲ ಹೀಗೆ ಮಾಡುತ್ತಾರೆ, ಏನಾದರೂ ಬೇರೆ ರೀತಿ ಮಾಡೋಣ. ಒಂದು ಕಥೆ ಕೊಡೋಣ. ಆದರೆ ಕಥೆ ಬರೀ ಕಥೆಯಲ್ಲ, ಹಾಡಲ್ಲಿ ಕೊಡೋಣ. ಹಾಡಿನ ಜೊತೆ ಕಥೆ ಹೇಳಬೇಕು ಎಂದುಕೊಂಡೆ. ಹಾಡುತ್ತಾ ಡ್ಯಾನ್ಸ್, ಹಾಡುತ್ತಾ ಕಳ್ಳತನ, ಹಾಡುತ್ತಾ ಆಟ ಆಡುತ್ತಾರೆಯೇ ಎಂದು ಟೀಕಿಸಬಹುದು. ಈ ಚಾಲೆಂಜನ್ನು ಫೇಸ್ಮಾಡಿದ್ದೇನೆ. ಇದರಿಂದ ಅದು ಡಿಫರೆಂಟ್ ಪ್ರಯೋಗವಾಯಿತು. ಅದಾದ ನಂತರ ೩ ಮಕ್ಕಳ ಸಿನೆಮಾಗಳನ್ನು ಮಾಡಿದ್ದೇನೆ – ’ಸೋಮ್ ಭಾಯ್’ (ಹಿಂದಿ, ಸಿರಿಯಲ್ ಆಗಿಯೂ ಪ್ರದರ್ಶನಗೊಂಡಿತ್ತು), ’ನಾವಿದ್ದೇವೆ ಎಚ್ಚರಿಕೆ’ (ನ್ಯಾಷನಲ್ ಅವಾರ್ಡ್ ಬಂತು), ’ಕಂಸಾಳೆ ಕೈಸಾಳೆ’ (ಕಂಸಾಳೆಯನ್ನು ಒಬ್ಬ ಹುಡುಗ ಹೇಗೆ ತನ್ನದಾಗಿಸಿಕೊಳ್ಳುತ್ತಾನೆ ಎನ್ನುವುದು) – ಇವೆಲ್ಲವೂ ಬೇರೆ ಬೇರೆ ರೀತಿಯ ಪ್ರಯೋಗಗಳು. ’ಚಿನ್ನಾರಿ ಮುತ್ತ’ ರೀತಿಯದಲ್ಲ.
ಮಕ್ಕಳ ಸಿನೆಮಾಗಳಲ್ಲೂ ನನ್ನ ಕ್ರಿಯಾಶೀಲತೆಯಿದೆ. ಅದಕ್ಕೆ ಮೂಲ ಕಾರಣ ನನ್ನ ಚಿಲ್ಡ್ರನ್ಸ್ ಥಿಯೇಟರ್. ನಾನು ’ಬೆನಕ ಮಕ್ಕಳ ನಾಟಕ ಶಿಬಿರ’ವನ್ನು ಸುಮಾರು ೨೬ ವರ್ಷಗಳ ಕಾಲ ಅಧ್ಯಕ್ಷನಾಗಿ ನಡೆಸಿದ್ದೇನೆ. ಪ್ರೇಮಾ ಕಾರಂತರು ಅದರ ನಿರ್ದೇಶಕಿ. ಹಾಗಾಗಿ ನನಗೆ ಚಿಲ್ಡ್ರನ್ಸ್ ಥಿಯೇಟರ್ ಎಂದರೇನು ಎನ್ನುವುದು ಗೊತ್ತಿದೆ. ಇದು ಮನರಂಜನೆಗಾಗಿ. ಆದರೆ ಈ ಚಿತ್ರವು ಮನರಂಜನೆಯ ಜೊತೆಜೊತೆಗೆ ಸುಂದರವಾಗಿ ಮಗುವಿಗೆ ಶಿಕ್ಷಣ ನೀಡುತ್ತದೆ. ಮಗುವಿದ್ದಾಗಿನಿಂದ ಈ ಸಂಭಾಷಣೆಗಳನ್ನು ಕೇಳುತ್ತಾ ದೊಡ್ಡವರಾದವರು ಎ? ಚೆನ್ನಾಗಿದೆ ಈ ಡೈಲಾಗ್ ಈವತ್ತೂ ನನಗೆ ಅನ್ವಯವಾಗುತ್ತಿದೆ ಅನಿಸುವಂತಹ ಸಿನೆಮಾಗಳಿರಬೇಕು. ಆ ದೃಷ್ಟಿಯಲ್ಲಿ ನನ್ನ ನಾಲ್ಕೂ ಸಿನೆಮಾಗಳು ಬೇರೆ ಬೇರೆ ಪ್ರಯೋಗಗಳು.
ಪ್ರ.: ಪರದೆಯ ಹಿಂದೆ ಕೆಲಸಮಾಡಿದ ನೀವು ನಟರಾಗಿ ರಂಗಭೂಮಿಯನ್ನು ಪ್ರವೇಶಿಸಿದವರು; ಅನಂತರ ಚಿತ್ರರಂಗಕ್ಕೆ, ನಿರ್ದೇಶನಕ್ಕೆ ಹೆಜ್ಜೆಯಿಟ್ಟವರು. ಈಗ ನಿಮ್ಮೊಳಗಿನ ನಟನ ಭಾವನೆಗಳೇನು
ಉತ್ತರ: ನನಗೆ ನಟನಾಗುವ ಆಸೆಗಳೇನಿರಲಿಲ್ಲ. ಆದರೆ ನಾನು ರಂಗಭೂಮಿಯಲ್ಲಿ ಯಾವಾಗಲೂ inevitable ನಟ. ಯಾರೋ ಬರಲಿಲ್ಲವಾ, ನಾಗಾಭರಣ ಇದ್ದಾನೆ ಎನ್ನುವ ಸ್ಥಿತಿಯಿತ್ತು. ಪರದೆಯ ಹಿಂದಿನ ಕೆಲಸ ಮಾಡುತ್ತಿದ್ದ ನನಗೆ ಎಲ್ಲರ ಸಂಭಾಷಣೆಗಳೂ ಕಂಠಸ್ಥವಾಗಿರುತ್ತಿದ್ದವು. ಪೂರ್ವಾಭ್ಯಾಸದ ಸಂದರ್ಭದಲ್ಲಿ ಯಾರಾದರೂ ಮಿಸ್ ಮಾಡುತ್ತಿದ್ದರೆ ಗುರುತಿಸಿ, ತಿದ್ದುವಷ್ಟರಮಟ್ಟಿಗೆ ನಾನು ಕಂಠಸ್ಥನಾಗಿರುತ್ತಿದ್ದೆ. ನಟರು ಇರುವುದಿಲ್ಲ ಎನ್ನುವುದು ತಿಳಿದಿದ್ದಾಗಲೂ ಕಾರಂತರು ನಾಗಾಭರಣ ಇದ್ದಾನೆ ಎಂಬ ಧೈರ್ಯದಲ್ಲಿ ಪ್ರದರ್ಶನಗಳನ್ನು ನಿಶ್ಚಯಿಸಿಬಿಡುವರು. ನೃತ್ಯ ಮಾಡಲು ಯಾರೂ ಬರದಿದ್ದಾಗ ನಾನು ಮಾಡುತ್ತಿದ್ದೆ. ಕೆಲವೊಮ್ಮೆ ನಾಟಕದ ಮುಖ್ಯಪಾತ್ರಗಳನ್ನೂ ನಿರ್ವಹಿಸಿದ್ದೆ – ಹಯವದನದಲ್ಲಿ ಭಾಗವತ, ಸಂಧ್ಯಾ, ಇತ್ಯಾದಿ. ಹೀಗೆ ನಾನೊಬ್ಬ inevitable actor; ಎಲ್ಲ ಕಡೆಯೂ ನಾನು ಸಲ್ಲುವವನಾಗಿದ್ದೆ.
ಸಿನೆಮಾ ಮಾಡಿದಾಗಲೂ ಅಷ್ಟೆ. ’ಕಾಡು’ ಸಿನೆಮಾದಲ್ಲಿ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದರೂ ಅಲ್ಲಿ ಆಕ್ಟ್ ಮಾಡಿದೆ. ’ಚೋಮನದುಡಿ’, ’ತಬ್ಬಲಿಯು ನೀನಾದೆ ಮಗನೆ’ – ಇವುಗಳಲ್ಲಿ ನಟನೆ ಮಾಡಿದೆ. ನೃತ್ಯಮಾಡಲು ಯಾರೂ ಬರಲಿಲ್ಲ ಎಂದಾಗ ನೃತ್ಯವನ್ನೂ ಮಾಡಿದ್ದಿದೆ. ಆದರೆ ನನಗೆ ಪರದೆಯ ಹಿಂದಿನ ಕೆಲಸವೇ ಬಹಳ ಇಷ್ಟ.
ಪ್ರ.: ನಿಮ್ಮದೇ ನಿರ್ದೇಶನದ ಸಿನೆಮಾಗಳಲ್ಲಿ ಅಭಿನಯಿಸದ ನೀವು ಬೇರೆ ನಿರ್ದೇಶಕರ ಸಿನೆಮಾಗಳಲ್ಲಿ ಅಭಿನಯಿಸಿದ್ದೀರಲ್ಲ, ಯಾಕೆ?
ಉತ್ತರ: ನಟನೆಗಿಂತ ನಿರ್ದೇಶನ ನನಗೆ ತುಂಬಾ ಇಷ್ಟ. ’ನಿನ್ನ ಸಿನೆಮಾದಲ್ಲಿ ನೀನು ಆಕ್ಟ್ ಮಾಡಬಹುದಲ್ಲಾ’ – ಎಂದು ಕೆಲವರು ನನ್ನನ್ನು ಕೇಳಿದರು. ನನ್ನ ಉತ್ತರ ಸ್ಪಷ್ಟವಾಗಿತ್ತು. ನನಗೆ ಅಭಿನಯಿಸಲು ಇಷ್ಟವಿಲ್ಲ. ನಿರ್ದೇಶಕನಾಗಿ ಎಲ್ಲ ಪಾತ್ರಗಳನ್ನೂ ಅನುಭವಿಸುತ್ತಾ ಮಾಡುತ್ತಿದ್ದೇನೆ, ತೋರಿಸುತ್ತಿದ್ದೇನೆ. ಇಲ್ಲಿ ಎಲ್ಲ ಪಾತ್ರಗಳನ್ನೂ ನಾನೇ ಮಾಡುತ್ತಿರಬೇಕಾದರೆ, ನಾನೇಕೆ ಒಂದೇ ಪಾತ್ರಕ್ಕೆ ಸಿಕ್ಕಿಹಾಕಿಕೊಳ್ಳಬೇಕು? ಹೀಗಾಗಿ ನಾನು ಒಂದು ಪಾತ್ರಕ್ಕೆ ಸೀಮಿತವಾಗಲಾರೆ ಎನ್ನುತ್ತಿದ್ದೆ.
ಆದರೆ ಬೇರೆಯವರು ನಿರ್ದೇಶಿಸಿರುವ ಚಿತ್ರಗಳಲ್ಲಿ ನಟನೆ ಮಾಡಿದ್ದೇನೆ. ಜಿ.ವಿ. ಅಯ್ಯರ್ ಮಾಡಿದ ’ಆದಿಶಂಕರ’ದಲ್ಲಿ; ಶಂಕರ್ನಾಗ್ ಮಾಡಿದ ’ಆಕ್ಸಿಡೆಂಟ್’ನಲ್ಲಿ ಅಭಿನಯಿಸಿದ್ದೆ. ನಿಜವಾಗಿ ’ಆಕ್ಸಿಡೆಂಟ್’ ಕಥೆ ನನ್ನದು. ನಾನು ಮಾಡಬೇಕೆಂದಿದ್ದೆ. ನಾನು ಮತ್ತು ಮೊಕಾಶಿ ಇಬ್ಬರೂ ಜೊತೆಗೂಡಿ ಸ್ಕ್ರಿಪ್ಟ್ ತಯಾರಿಸಿದ್ದೆವು. ನಾನಾಗ ’ಮಕ್ಕಳಿರಲವ್ವ ಮನೆತುಂಬ’ ಚಿತ್ರದ ನಿರ್ದೇಶನ ಮಾಡುತ್ತಿದ್ದೆ. ಶಂಕರ್ ಅದಕ್ಕೆ ನಿರ್ಮಾಪಕರು. ಒಂದು ದಿನ ಸೆಟ್ಗೆ ಬಂದ ಶಂಕರ್ ’ಆಕ್ಸಿಡೆಂಟ್’ ಸಿನಿಮಾದ ಸ್ಕ್ರಿಪ್ಟ್ ತೆಗೆದುಕೊಂಡು ಹೋದರು. ರಾತ್ರಿ ೧೨ ಗಂಟೆಗೆ ಫೋನ್ಮಾಡಿ ’ಈ ಸಿನೆಮಾ ನಾನು ಮಾಡಲೇಬೇಕು, ಪ್ಲೀಸ್’ ಎಂದು ಬೇಡಿಕೊಂಡರು. ನಿಮಗೊಂದು ಪಾತ್ರ ಕೊಡುತ್ತೇನೆ ಎಂದರು. ಸರಿ ಎಂದು ಬಿಟ್ಟುಕೊಟ್ಟೆ. ಈ ರೀತಿಯಲ್ಲಿ ೨ ಸಿನೆಮಾಗಳನ್ನು ಬಿಟ್ಟುಕೊಟ್ಟಿದ್ದೇನೆ. ’ಮಾಲ್ಗುಡಿ ಡೇಸ್’ ಕೂಡಾ ನನ್ನದೇ. ಇಂದಿಗೂ ದೂರದರ್ಶನದಲ್ಲಿ ಮೊದಲ ೪ ಸಂಚಿಕೆಗಳಲ್ಲಿ ‘Written by ಎಸ್. ನಾಗಾಭರಣ’ ಎಂದೇ ಪ್ರಸಾರ ಮಾಡುತ್ತಿದ್ದಾರೆ. ಅದು ಅನುಮತಿ ಪಡೆದಿದ್ದು ನನ್ನ ಹೆಸರಿನಲ್ಲಿ.
ಪ್ರ.: ’ಮೈಸೂರು ಮಲ್ಲಿಗೆ’ಯಂತೆ ಕನ್ನಡದ ಜನಪ್ರಿಯ ಸಾಹಿತ್ಯಕೃತಿಗಳನ್ನು ಚಿತ್ರರೂಪಕ್ಕೆ ತರುವ ಚಿಂತನೆ ಇದೆಯೇ? ಉದಾಹರಣೆಗೆ ’ಮೈಸೂರು ಮಲ್ಲಿಗೆ’ಯ ರೀತಿಯಲ್ಲೆ ಡಿ.ವಿ.ಜಿ.ಯವರ ’ಅಂತಃಪುರಗೀತೆ’ಯಲ್ಲಿ ವಿಭಿನ್ನ ಸಾಧ್ಯತೆಗಳಿವೆಯಲ್ಲವೆ?
ಉತ್ತರ: ’ಮೈಸೂರು ಮಲ್ಲಿಗೆ’ಯ ನಂತರ ತುರ್ತಾಗಿ ದ.ರಾ. ಬೇಂದ್ರೆ, ಜಿ.ಪಿ. ರಾಜರತ್ನಂ ಅವರ ಸಾಹಿತ್ಯಗಳನ್ನು ತರುವ ಪ್ರಯತ್ನ ಮಾಡಿದೆ. ಕಥೆ ಬರೆಯಿಸುವುದಕ್ಕೂ ಸಿದ್ಧತೆ ನಡೆಸಿದೆ. ಇಲ್ಲಿ ನಿರ್ಮಾಪಕರು ಬಹಳ ಮುಖ್ಯವಾಗುತ್ತಾರೆ. ಹರಿ ಖೋಡೆಯವರಂತಹ ಸ್ವಾತಂತ್ರ್ಯ ನೀಡುವವರು ಮತ್ತು ಚಾಲೆಂಜ್ನಿಂದ ’ಮಾಡಿರಿ’ ಎಂದು ಹೇಳುವಂತಹ ನಿರ್ಮಾಪಕ ಬೇಕಾಗಿದ್ದಾರೆ. ನಮ್ಮೆಲ್ಲ ನಿರ್ಮಾಪಕರು ನಾವೆಷ್ಟು ಹಣ ಹಾಕುತ್ತೇವೋ ಕನಿಷ್ಠ ಅಷ್ಟು ಬರಲೇಬೇಕು ಎಂಬ ಮನಃಸ್ಥಿತಿಯವರು. ಅವಾರ್ಡ್ ಸಿನೆಮಾಗಳಲ್ಲೂ ಇದೇ ಸ್ಕೀಮ್ ಚಾಲ್ತಿಯಲ್ಲಿದೆ. ’ಕನಿಷ್ಠ ಇಷ್ಟನ್ನು ಮಾಡಬೇಕು. ಅವಾರ್ಡ್ ಬಂದರೆ ಇಷ್ಟು ಬರುತ್ತೆ, ಅದರಿಂದ ನಾವು ಸೇಫ್’ ಎಂಬ ಚಿಂತನೆ ಇದೆ. ಯಾರೂ ದುಡ್ಡು ಕಳೆದುಕೊಂಡಾದರೂ ಸರಿ, ಒಂದು ಪ್ರಯೋಗ ಮಾಡೋಣ, ಕನ್ನಡಕ್ಕೊಂದು ಪ್ರಯೋಗವಾದರೂ ಆಗಲಿ ಎಂಬಂತಹ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನಾನು ಅಂದುಕೊಂಡ ೨-೩ ಪ್ರಾಜೆಕ್ಟ್ಗಳು ಆಗಲೇ ಇಲ್ಲ. ಅದಾದ ನಂತರ ನಾನು ಅದನ್ನು ಕೈಬಿಟ್ಟೆ.
ಕವನಗಳನ್ನಿಟ್ಟುಕೊಂಡು ಒಂದು ಸಿನೆಮಾವನ್ನು ಮಾಡಬಹುದೆಂಬುದನ್ನು ನಾನು ಈಗಾಗಲೇ ಮಾಡಿ ತೋರಿಸಿದ್ದೇನೆ. ಇಂತಹ ಪ್ರಯತ್ನವನ್ನು ಭಾರತದಲ್ಲಿ ಯಾವುದೇ ಭಾಷೆಯ ಚಿತ್ರರಂಗದವರು ಮಾಡಿಲ್ಲ. ಕೆಲವರು ತಿರುವಳ್ಳುವರ್, ಸರ್ವಜ್ಞರಂಥ ಕವಿಗಳ ಬಗ್ಗೆ ಮಾಡಿದ್ದಾರೆ. ಯಾಕೆಂದರೆ ಅಲ್ಲೊಂದು ಕಥೆ ಇದೆ, ಅವರ ವಚನಗಳು ಇವೆ. ಆದರೆ ಒಂದು ಕವನ ಸಂಕಲನದಿಂದ ಒಂದ? ಕವನಗಳನ್ನು ತೆಗೆದುಕೊಂಡು ಅವುಗಳನ್ನಿಟ್ಟುಕೊಂಡು ಒಂದು ಕಥೆ ಬರೆದು, ಕಥೆಯನ್ನು ಒಂದು ಸಿನೆಮಾ ಮಾಡಿದಂತಹ ಉದಾಹರಣೆ ಎಲ್ಲಿಯೂ ಇಲ್ಲ. ಅದನ್ನು ಮಾಡಿದ್ದು ಕನ್ನಡದವರು ಮಾತ್ರ. ಅದನ್ನು ಹೇಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ರೀತಿಯ ಪ್ರಯೋಗವನ್ನು ನಾನು ಈಗಾಗಲೇ ಮಾಡಿದ್ದೇನೆ, ಇನ್ನೇಕೆ ಮಾಡಬೇಕು ಎಂದು ಸುಮ್ಮನಾದೆ. ಮೊದಲನೆಯದಾಗಿ ನಿರ್ಮಾಪಕರು ಸಿಗುತ್ತಿಲ್ಲ.
ಈ ರೀತಿಯ ಸಿನೆಮಾಗಳನ್ನು ಬೇರೆಯವರು ಯಾಕೆ ಮಾಡುತ್ತಿಲ್ಲ? ನನ್ನದೇನೆಂದರೆ ’ನಾವೊಂದು ದಾರಿ ತೋರಿಸುತ್ತೇವೆ; ಪ್ರಯೋಗ ಮಾಡಿ ಸಫಲರಾಗಿ ಸಾಬೀತುಪಡಿಸುತ್ತೇವೆ; ಬೇರೆ ಇನ್ನೊಂದು ನಾಲ್ಕುಜನ ಈ ರೀತಿಯವುಗಳನ್ನು ಮಾಡಲು ಮುಂದೆಬರಬೇಕು. ಯಾಕೆ ಉಳಿದವರಿಗೆ ಈ ರೀತಿ ಮಾಡಬೇಕೆನಿಸುವುದಿಲ್ಲ?’ – ಎಂಬುದು ನನ್ನನ್ನು ಕಾಡುತ್ತಿರುವ ಪ್ರಶ್ನೆ.
ಪ್ರ.: ಇದೊಂದು ಕಾಲ್ಪನಿಕ ಪ್ರಶ್ನೆ: ಯಾರಾದರೊಬ್ಬ ನಿರ್ಮಾಪಕ ಹಣದ ಯಾವುದೇ ಮಿತಿಯನ್ನು ಹೇರದೆ, ಒಂದು ಅತ್ಯದ್ಭುತ ಚಿತ್ರವನ್ನು ನಿರ್ದೇಶಿಸಲು ಕೇಳಿಕೊಂಡರೆ ನೀವು ಮಾಡಿಕೊಡುವ ಸಿನೆಮಾ ಯಾವುದು?
ಉತ್ತರ: ಕೆಂಪೇಗೌಡರ ಮೇಲೆ ಕೆಲಸ ಮಾಡುತ್ತೇನೆ. ನನಗೆ ಒಂದು ಐತಿಹಾಸಿಕ ಸಿನೆಮಾ ಮಾಡಬೇಕು; ಆ ಐತಿಹಾಸಿಕ ಸಿನೆಮಾ ಕನ್ನಡದ ಎಲ್ಲ ಪರಿಭಾಷೆಯನ್ನು ಅದು ಅನಾವರಣಗೊಳಿಸಿಕೊಳ್ಳಬೇಕು, ಕಟ್ಟಿಕೊಡುವಂತಿರಬೇಕು ಎಂಬ ಆಸೆಯಿದೆ. ’ಐತಿಹಾಸಿಕ ಸಿನೆಮಾ ಎಂದರೆ ಹೀಗಿರಬೇಕು’ ಎಂಬಂತಿರಬೇಕು. ಅದೊಂದು ಪೂರ್ಣಪ್ರಮಾಣದ ಕನ್ನಡ ಸಿನೆಮಾ ಆಗಿ ಮೂಡಿಬರಬೇಕು. ’ರಣಧೀರ ಕಂಠೀರವ’, ’ಕಿತ್ತೂರು ಚೆನ್ನಮ್ಮ’ನಂತಹ ಸಿನೆಮಾಗಳಲ್ಲಿ ಸಾಕ? ತಾಪತ್ರಯಗಳಿದ್ದರೂ ಅದೊಂದು ಉತ್ತಮ ಪ್ರಯತ್ನ. ಅದಾದ ನಂತರದ ಯಾವ ಸಿನೆಮಾಗಳೂ ಐತಿಹಾಸಿಕತೆಯನ್ನು ಕಟ್ಟಿಕೊಡಲಿಲ್ಲ. ಇತ್ತ ಭಾಷೆಗೆ, ಸಂಸ್ಕೃತಿಗೆ, ಕನ್ನಡತನಕ್ಕೆ ಯಾವ ಕೊಡುಗೆಯನ್ನೂ ನೀಡಲಿಲ್ಲ. ಈ ಎಲ್ಲ ಕೊರತೆಗಳನ್ನು ನೀಗಿಸುವ ಐತಿಹಾಸಿಕ ಸಿನೆಮಾ ಮಾಡಬೇಕೆಂಬ ಆಸೆ ನನ್ನದು. ಈ ರೀತಿಯ ಸಾಕಷ್ಟು ಸಿನೆಮಾಗಳು ನನ್ನ ಬಳಿ ಇವೆ. ಶಾಂತಲಾ ಕುರಿತು ಈಗಾಗಲೇ ಕೆಲಸ ಮಾಡಿ ಇಟ್ಟಿದ್ದೇನೆ. ತರಾಸು, ಸಿ.ಕೆ. ನಾಗರಾಜರಾಯ, ದೇವುಡು ಅವರನ್ನು ಹಿಡಿದುಕೊಂಡರೆ ಬೇಕಾದಷ್ಟು ವಿಷಯಗಳು ಸಿಗುತ್ತವೆ. ನಮ್ಮ ಇತಿಹಾಸವನ್ನು ಸಾಹಿತ್ಯ ಹೇಗೆ ಕಟ್ಟಿಕೊಟ್ಟಿತು, ಆ ಸಾಹಿತ್ಯವನ್ನು ನಾವು ಈಗ ಸಿನೆಮಾ ಮೂಲಕ ಹೇಗೆ ಕಟ್ಟಿಕೊಡುತ್ತೇವೆ ಎಂಬುದು ಅ? ಮುಖ್ಯವಾದುದು. ಆ ರೀತಿಯ ಸಿನೆಮಾ ಮಾಡಬೇಕು. ಅದೊಂದು ಮಾದರಿ ಸಿನೆಮಾ ಆಗಿರಬೇಕು.
’ಬಾಹುಬಲಿ’ಯಂತಹ ಸಿನೆಮಾ ಅಲ್ಲ. ’ಬಾಹುಬಲಿ’ಯು ಇಡೀ ಕರ್ನಾಟಕವನ್ನು ಬಳಸಿಕೊಳ್ಳುತ್ತಿದೆ – ಸಾಹಿತ್ಯ, ಹೆಸರುಗಳು ಎಲ್ಲವೂ ಕನ್ನಡದ್ದು; ಯಾವುದೂ ಆಂಧ್ರದ್ದಲ್ಲ. ಆದರೆ ಯಾರೂ ಅದರ ಕುರಿತು ಯೋಚನೆಯನ್ನೇ ಮಾಡುವುದಿಲ್ಲ. ಯಾಕೆ ಹೀಗೆ ಆಗಿದ್ದಾರೆ ಎಂಬುದೇ ಯಕ್ಷಪ್ರಶ್ನೆ.
ಪ್ರ.: ನಿಮ್ಮ ಚಿತ್ರಗಳಿಗೆ ಎಂತಹ ಗುಣವಿಶೇಷತೆಗಳುಳ್ಳ ಛಾಯಾಗ್ರಾಹಕನನ್ನು ನೀವು ಬಯಸುತ್ತೀರಿ
ಉತ್ತರ: ತಂತ್ರಜ್ಞರು ಕಥಾಹಂದರದ ಮೇಲೆ ನಿರ್ಧಾರವಾಗುತ್ತಾರೆ. ಆಯಾ ಮೈಂಡ್ಸೆಟ್ ಮತ್ತು ಕಾಂಟ್ರಿಬ್ಯೂಟರಿ ಎಲಿಮೆಂಟ್ ಏನಿದೆ ಎನ್ನುವುದನ್ನು ನೋಡಿಕೊಂಡೇ ಆಯ್ಕೆ ಮಾಡುತ್ತೇನೆ. ’ಸಂತ ಶಿಶುನಾಳ’ ಮಾಡಬೇಕಾದರೆ ನನಗೆ ಎಸ್. ರಾಮಚಂದ್ರರೇ ಬೇಕು; ಅವರು ಸ್ಟಾರ್ಕ್ ರಿಯಾಲಿಟಿಗಳನ್ನು ಬಹಳ ಸುಂದರವಾಗಿ ಸೆರೆಹಿಡಿಯುತ್ತಾರೆ. ಇರುವಂತಹದಕ್ಕೆ ಇನ್ನೊಂದಿ? ರಿಯಾಲಿಟಿಯನ್ನು ಟಚ್ಮಾಡಿಸಿ ಬಹಳ ಸುಂದರವಾಗಿ ಕೊಡುತ್ತಾರೆ. ’ಮೈಸೂರು ಮಲ್ಲಿಗೆ’ಗೆ ಗೌರಿಶಂಕರ್ ಅವರೇ ಬೇಕು. ಯಾಕೆಂದರೆ ರೊಮಾಂಟಿಸೈಸ್ ಮಾಡಬೇಕು. ಅಲ್ಲಿ ಇಡೀ ಕಥೆಯ ಪೊಯೆಟಿಕ್ ಎಬಿಲಿಟಿ ಕಾಣುವುದು ರೊಮಾಂಟಿಸೈಷನನಿನಲ್ಲಿ. ಇದಕ್ಕೆ ಈ ರೊಮಾಂಟಿಕ್ ಅಪ್ರೋಚ್ ಇರುವಂತಹ ಕ್ಯಾಮರಾಮೆನ್ ಜೊತೆ ಕೆಲಸ ಮಾಡಬೇಕು. ಕೆಂದಾವರೆಗಳನ್ನು ನದಿಯಲ್ಲಿ ಬಿಟ್ಟರೆ ರಾಮಚಂದ್ರ ಅವರಿಗೆ ನದಿಯಲ್ಲಿ ಕೆಂದಾವರೆಗಳೇ ಹೋಗುತ್ತಿರುತ್ತೆ. ಗೌರಿಗೆ ಅಲ್ಲಿ ಚಮಕ್ ಫ್ಲಾಶ್ ಬರಬೇಕು, ನೀರಿನಲ್ಲಿ ಹೂಗಳ ಜೊತೆಗೆ ಒಂದು ಮಿಣುಕು ಕಾಣುತ್ತಿರಬೇಕು. ’ನಾಗಮಂಡಲ’ದಲ್ಲಿ ದೃಶ್ಯಸಂಯೋಜನೆ ಮಾಡಿದ ಭಾಸ್ಕರ್ ಅವರ ಅದೇ ಉತ್ಕೃಷ್ಟ ಲೈಟಿಂಗ್ಸ್ನ್ನು ನೀವು ಮತ್ತೆ ’ಅಲ್ಲಮ’ನಲ್ಲಿ ನೋಡುತ್ತೀರಿ. ’ನಾಗಮಂಡಲ’ಕ್ಕೆ ಬೇಕಾದ ಕ್ಯಾಮೆರಾಮನ್ ನಮಗೆ ’ಅಲ್ಲಮ’ನಿಗೆ ಬೇಕಾಗುತ್ತಾನೆ. ’ಕಲ್ಲರಳಿ ಹೂವಾಗಿ’ ಸಿನೆಮಾಕ್ಕೆ ಬೇಕಾದವನು ವೇಣು ಅಂತಹ ಕ್ಯಾಮೆರಾಮನ್. ವೇಣು ಎಲ್ಲವನ್ನೂ ವೈಭವೀಕರಿಸುತ್ತಾ ಹೋಗುವವರು. ಕಲ್ಲಲ್ಲಿ ಏನು ಮಾಡಬಹುದು? ಆದರೆ ವೇಣು ಕ್ಯಾಮೆರಾದಲ್ಲಿ ಅಂತಹದ್ದನ್ನು ಕಟ್ಟಿಕೊಟ್ಟಿದ್ದಾರೆ.
ಮ್ಯೂಸಿಕ್ ಡೈರೆಕ್ಟರ್ ಕೂಡಾ ಅಷ್ಟೆ. ಅಶ್ವತ್ಥ್ ಜೊತೆಗೆ ೮ ಸಿನೆಮಾ ಮಾಡಿದ್ದೇನೆ. ಚೆನ್ನಾಗಿತ್ತು, ಇಬ್ಬರ ಕಾಂಬಿನೇ?ನ್. ಆದರೆ ’ಆಕಸ್ಮಿಕ’ದಲ್ಲಿಲ್ಲ ಯಾಕೆ? ’ಜನುಮದ ಜೋಡಿ’ ಸಂದರ್ಭದಲ್ಲಿ ನನಗೆ ಅಶ್ವತ್ಥ್ ಗೊತ್ತಿರಲಿಲ್ಲವೇ? ಅದಕ್ಕೆ ಬೇರೆಯೇ ಕಾರಣವಿರುತ್ತದೆ.
ಪ್ರ.: ಚಿತ್ರಗಳಿಗೆ ಕಲಾವಿದರನ್ನು ಆಯ್ಕೆಮಾಡಿಕೊಳ್ಳುವಾಗ ನೀವು ಅನುಸರಿಸುವ ಮಾನದಂಡವೇನು
ಉತ್ತರ: ಕಲಾವಿದರ ಆಯ್ಕೆಗೆ ಮಾನದಂಡ ಎನ್ನುವುದಕ್ಕಿಂತ ಒಂದು ಕ್ಲಾರಿಟಿ ಇರುತ್ತದೆ. ಒಂದು ಸಾಮಾಜಿಕ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ ಎಂದಾಗ ನಾನು ಪಾತ್ರಗಳನ್ನು ಹೇಗೆ ನೋಡುತ್ತಿದ್ದೇನೆ, ನನಗೆ ಪಾತ್ರಗಳು ಯಾವ ರೀತಿ ಬೇಕು? ಇದು ಹೀಗೆಯೇ ಬೇಕು, ಹಾಗೆಯೇ ಬೇಕು ಎಂಬಂತೆ. ಈ ಕ್ಲಾರಿಟಿಯ ಮೇಲೆ ಕಲಾವಿದರನ್ನು ಆಯ್ಕೆ ಮಾಡುತ್ತೇನೆ.
ರಂಗಭೂಮಿಯಲ್ಲಿ ನಾನು ಮೊದಲು ಮಾಡುತ್ತಿದ್ದ ಕೆಲಸ ಇದನ್ನೇ. ಬ್ಯಾಕ್ ಸ್ಟೇಜ್ ಕೆಲಸ ಮಾಡುವಾಗ ನನಲ್ಲಿ ’ಯಾರು ಚೆನ್ನಾಗಿ ಕೆಲಸ ಮಾಡುತ್ತಾರೆ ಪಟ್ಟಿಮಾಡು’ ಎನ್ನುತ್ತಿದ್ದರು. ಆಗ ನನಗನಿಸುವುದು, ಚೆನ್ನಾಗಿ ಓದಿದರ? ಸಾಕೇ? ಉದಾಹರಣೆಗೆ ಭೀಮನ ಪಾತ್ರ ವಹಿಸುವವ ಚೆನ್ನಾಗಿ ಓದಿದರಷ್ಟೆ ಸಾಕೇ? ಅವನು ಭೀಮನಾಗಲು ಸೂಕ್ತವೇ? ಪಾತ್ರದ ಕಲ್ಪನೆ, ಪಾತ್ರದ ವ್ಯಕ್ತಿತ್ವ ರೂಪುಗೊಳ್ಳಬೇಕು, ಪಾತ್ರಪೋಷಣೆಯಾಗಬೇಕು. ಆಗ ಒಂದು ಕ್ಲಾರಿಟಿ ಸಿಗುತ್ತಾ ಹೋಗುತ್ತದೆ. ಆಗ ತನ್ನಿಂದತಾನೇ ಒಬ್ಬ ನಟ ಹುಟ್ಟಿಕೊಳ್ಳುತ್ತಾನೆ. ಕಣ್ಣಮುಂದೆ ಬರುತ್ತಾನೆ. ನಾನು ಯಾವ ನಟರನ್ನೂ ಅವರ ಸಾಮರ್ಥ್ಯ ಗೊತ್ತಿಲ್ಲದೆ ಕರೆಯಲಾರೆ. ಬಹಳ ಹೊಸಬನನ್ನು ಕರೆತರುವಾಗಲೂ, ’ನೀನು ಎಲ್ಲಿಂದ ಬಂದಿರುವೆ; ವರ್ಕ್ಶಾಪ್ನಿಂದಲೊ, ಥಿಯೇಟರ್ನಿಂದಲೊ?’ – ಎಂದು ಕೇಳುತ್ತೇನೆ. ಅವರಿಗೆ ತರಬೇತಿಯನ್ನೂ ನೀಡಿದ್ದೇನೆ. ’ನಾಗಮಂಡಲ’ದಲ್ಲಿ ಬಂದ ಹೊಸಬರಿಗೆ ತರಬೇತಿ ನೀಡಿ ಆಯ್ಕೆಮಾಡಿದ್ದೇನೆ.
ನಿರ್ದೇಶಕನ ಸಫಲತೆಯ ಶೇ. ೫೦ ಭಾಗ ಕಲಾವಿದರ ಆಯ್ಕೆಯ ಮೇಲೆ ನಿಂತಿರುತ್ತದೆ. ’ನಾಗಮಂಡಲ’ದಲ್ಲಿ ಪ್ರಕಾಶ್ ರೈ ಯಾಕೆ ಬೇಕು, ರವಿಚಂದ್ರನ್ ಆಗುತ್ತಿರಲಿಲ್ಲವೇ? ಇದಕ್ಕೆ ನನ್ನ ರಂಗಭೂಮಿಯ ಹಿನ್ನೆಲೆ ನನಗೆ ಸಹಾಯಕ್ಕೆ ಬಂದಿದೆ. ಅಭಿನಯಕಲೆಯಲ್ಲಿ ಬಹಳ ಮುಖ್ಯವಾಗುವುದು ರಂಗಭೂಮಿ. ಸಂಗೀತ, ಮೈಮ್ ಇವೆಲ್ಲವನ್ನೂ ಸಮ್ಮಿಳಿತಗೊಳಿಸುವುದು ರಂಗಭೂಮಿ. ರಂಗಭೂಮಿಯ ಒಂದು ಆಶಯವನ್ನಿಟ್ಟುಕೊಂಡು ಇನ್ನುಳಿದ ತಾಂತ್ರಿಕತೆ ಮುಂತಾದವುಗಳನ್ನು ಸಾಂಘಿಕವಾಗಿ ಬಳಸಿಕೊಳ್ಳುವುದು ಸಿನೆಮಾ. ಸಿನೆಮಾ ಬ್ರಹ್ಮರಾಕ್ಷಸ; ನಾಟಕ ರಾಕ್ಷಸ ಅಷ್ಟೆ.
ಪ್ರ.: ಇಂದು ಎಲ್ಲ ಅಭಿವ್ಯಕ್ತಿ ಮಾಧ್ಯಮಗಳು, ಕಲಾವಿದರು ಸಿದ್ಧಾಂತಗಳ ಮುಷ್ಟಿಯಲ್ಲಿದ್ದಂತೆ ತೋರಿಬರುತ್ತಿದೆ. ಈ ಬೆಳವಣಿಗೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕು?
ಉತ್ತರ: ಇಂದು ನೀನು ಬಲವೋ ಎಡವೋ ಕ್ಲೀಯರ್ ಕಟ್ ಡೀಮಾರ್ಕೇಶನ್ ಆಗುತ್ತಿದೆ. ಇದು ರಾಜಕೀಯವಾಗಿ ಪ್ರಾರಂಭವಾದದ್ದು; ಕಲಾವಿದರಿಗಲ್ಲ. ಆದರೆ ನಾನು ೧೯೭೦ರಿಂದ ಇದನ್ನು ಗಮನಿಸುತ್ತಿದ್ದೇನೆ. ಹೋರಾಟ ಚಳವಳಿಗಳನ್ನು ಮಾಡಲು ರಂಗಭೂಮಿ ಹೋರಾಟದ ಮುಖಭಾವ/ಮುಖವಾಡ; ರಂಗಭೂಮಿ ಹುಟ್ಟಿದ್ದೇ ಹೋರಾಟದ ಸ್ವರೂಪವಾಗಿ ಎಂದು ಹೇಳುವುದಿದೆ. ಆದರೆ ರಂಗಭೂಮಿ ಹುಟ್ಟಿದ್ದು ಹೋರಾಟದ ಸ್ವರೂಪವಾಗಿ ಅಲ್ಲ; ಅದು ಬದುಕಿನ ಸ್ವರೂಪವಾಗಿ ಎಂದು ನಾನು ಹೇಳುತ್ತೇನೆ. ಯಾಕೆಂದರೆ ಬದುಕುವುದಕ್ಕೆ ಏನು ಬೇಕೋ ಆ ಖುಷಿ, ಆ ಸಂತೋ?ವನ್ನು ರಂಗಭೂಮಿ ಅಥವಾ ಯಾವುದೇ ಪ್ರದರ್ಶಕ ಕಲೆ ಕೊಡುತ್ತಾ ಬಂದಿದೆ. ಅದರಲ್ಲಿ ಒಬ್ಬೊಬ್ಬರು ಒಂದೊಂದು ಕಲೆಯಲ್ಲಿ ನಿಸ್ಸೀಮರಾಗುತ್ತಾ ಹೋಗುತ್ತಾರೆ. ಒಬ್ಬ ತಮಟೆ ಹೊಡೆದಷ್ಟು ಮದ್ದಳೆ, ಮೃದಂಗ ಹೊಡೆಯಲಾಗದು. ಇವನು ಮೃದಂಗ ಹೊಡೆದ ಹಾಗೆ ಅವನು ತಮಟೆ ಹೊಡೆಯಲಾರ – ಇಷ್ಟು ವ್ಯತ್ಯಾಸ. ಆಯಾಯಾ ಕಲೆಯ ಬಗ್ಗೆ ಅವರು ನಿಷ್ಣಾತರು. ಆ ಕಲೆಯು ಹೇಗೆ ನಮ್ಮ ಬದುಕನ್ನು ಕಟ್ಟಿಕೊಡುತ್ತದೆ, ಬದುಕಿಗೊಂದು ಆಶಾಭಾವ ಕೊಡುತ್ತದೆ ಎನ್ನುವುದೇ ಅದರ ಜೀವಾಳ.
ಆದರೆ ಇತ್ತೀಚಿನ ರಾಜಕೀಯ ವಿದ್ಯಮಾನಗಳಿಂದಾಗಿ ಕಲೆಯಲ್ಲಿಯೂ ಸ್ಪಷ್ಟವಾದ ರಾಜಕೀಯ ಲೈನ್ ಒಂದು ನಿರ್ಮಾಣವಾಗುತ್ತಿದೆ. ನೀವು ಅದನ್ನು ಬೆಂಬಲಿಸಿದರೆ ನೀವು ಅದು; ಈ ಕಡೆ ಸಪೋರ್ಟ್ ಮಾಡಿದಿರೆ ನೀವು ಇದು – ಎಂದು. ಹೀಗೆ ನೀವು ಎಡಪಂಥೀಯರು, ಬಲಪಂಥೀಯರು ಎನ್ನುವುದು ಶುರುವಾಯಿತು. ನನ್ನ ಪ್ರಕಾರ ಕಲಾವಿದನಿಗೆ ಯಾವ ಪಂಥವೂ ಇಲ್ಲ, except
performance and making a human being. ಆದರೆ ಪ್ರತಿ ಹಂತದಲ್ಲಿಯೂ ಇಂದು ರಾಜಕೀಯ ಹಾಗೂ ರಾಜಕೀಯೇತರ ಎನ್ನುವುದು ಬಹಳ ಸ್ಪಷ್ಟವಾಗಿರುವುದರಿಂದ ನೀವು ಯಾವುದೋ ಒಂದು ಸಿದ್ಧಾಂತದ ಜೊತೆ ಗುರುತಿಸಿಕೊಳ್ಳದಿದ್ದಲ್ಲಿ ನೀವು ಅಸ್ತಿತ್ವದಲ್ಲೆ ಇಲ್ಲ ಎನ್ನುವಂಥ ವಾತಾವರಣ ನಿರ್ಮಾಣವಾಗಿದೆ. ಜೊತೆಗೆ ಇನ್ನೊಬ್ಬರನ್ನು ದ್ವೇಷಿಸುವುದೂ ಕೂಡಾ ಪ್ರಾರಂಭವಾಗಿದೆ.
ಪ್ರ.: ಇದನ್ನೇ ಮುಂದುವರಿಸಿ ಕೇಳುವುದಾದರೆ, ಇತ್ತೀಚೆಗೆ ಅಸಹಿಷ್ಣುತೆ ಇತ್ಯಾದಿ ಬಗೆಗೆ ಚರ್ಚೆ ಹೆಚ್ಚಾಗುತ್ತಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?
ಉತ್ತರ: ಅಸಹಿಷ್ಣುತೆಯ ಹೆಸರಿನಲ್ಲಿ ನಡೆದ ’ಅವಾರ್ಡ್ ವಾಪಸೀ’ ಘಟನೆಯ ಸಂದರ್ಭದಲ್ಲಿ ನಾನು ದಿಲ್ಲಿಗೆ ಹೋಗಿ ’ಅವಾರ್ಡ್ ವಾಪಸೀ ತಪ್ಪು’ ಎಂದು ಹೇಳಿ ಪ್ರತಿಭಟನೆಯಲ್ಲಿ ಸೇರಿಕೊಂಡೆ. ಆಗ ಇಲ್ಲಿನ ಕೆಲವು ಎಡಪಂಥೀಯರು ’ಇವನು ಅಲ್ಲಿಗೆ ಹೋಗಿದ್ದಾನೆ. ಇವನನ್ನು ಹತ್ತಿರ ಸೇರಿಸಬಾರದು’ ಎಂದು ಹೇಳಲು ಪ್ರಾರಂಭಿಸಿದರು. ಇಲ್ಲಿಗೆ ಬಂದ ನಂತರ ನಾನು ಹೇಳಿದೆ – ’ನಾನು ಎಡಬಲವೆನ್ನದೆ ಲಾಜಿಕಲ್ ಆಗಿ ಹೇಳುತ್ತಿದ್ದೇನೆ. ರಾಷ್ಟ್ರಪತಿ, ರಾಷ್ಟ್ರ ನೀಡಿದ ಈ ಅವಾರ್ಡ್ನ್ನು ವಾಪಸ್ ಕೊಡಲು ಇವರ್ಯಾರು? ಆ ಪ್ರಶಸ್ತಿಯನ್ನು ಇಡೀ ರಾಷ್ಟ್ರ ಕೊಟ್ಟಿರುವುದು, ರಾಷ್ಟ್ರಪತಿ ನೀಡಿರುವುದು. ಇಡೀ ರಾಷ್ಟ್ರ ನಿನ್ನನ್ನು ಅಲ್ಲಿ ನಿಲ್ಲಿಸಿದೆ. ಅಂತಹದ್ದರಲ್ಲಿ ವಾಪಸ್ ಕೊಡಲು ನೀನು ಯಾರು? ಕೊಡಲೇಬೇಕು ಅನ್ನುವುದಾದರೆ ಅದನ್ನು ರಾಷ್ಟ್ರಪತಿಗಳಿಗೆ, ರಾಷ್ಟ್ರಕ್ಕೆ ಕೊಡಬೇಕು; ಅದು ಬಿಟ್ಟು ತೆಗೆದುಕೊಂಡು ಹೋಗಿ ಯಾವುದೋ ಆಫೀಸ್ ಮುಂದೆ ಇಟ್ಟರೆ? ಅದರ ಜೊತೆಯೇ ಸಿಕ್ಕ ಸೈಟು, ಹಣ ಎಲ್ಲವನ್ನೂ ವಾಪಸ್ ಕೊಡಿ’ ಎಂದಾಗ ಅವರು ಮಾತನಾಡದೆ ವಾಪಸ್ ಹೋದರು.
ಇಂದು ಬಹಳ ನಿರ್ದಿಷ್ಟವಾಗಿ ಡೀಮಾರ್ಕೇಷನ್ಗೆ ಬಂದು ನಿಂತುಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ. ಇದು ಇಂದೂ ನಡೆಯುತ್ತಿದೆ; ಮುಂದೆಯೂ ನಡೆಯುತ್ತದೆ. ಕಾರಣ ಇದು ಭಾರತ, ನನ್ನ ಸಂಸ್ಕೃತಿ, ನನ್ನ ನಾಡು, ನನ್ನ ಭಾಷೆ, ನಾನು ಮತ್ತು ನನ್ನ ಜನ ಎಲ್ಲರೂ ಇದ್ದೇವೆ; ಈ ಜನರೆಲ್ಲರ ಜೊತೆ ನಾನಿದ್ದೇನೆ ಎನ್ನುವ ’ಒಂದು ರಾಷ್ಟ್ರ’ ಭಾವ ನಮ್ಮಲ್ಲಿ ಇಲ್ಲದಿರುವುದು. ಒಡೆದು ಆಳಿದ ಸಂಸ್ಕೃತಿಯೇ ೨೦೦-೩೦೦ ವರ್ಷಗಳಿಂದ ನಡೆದುಕೊಂಡು ಬಂದಿರುವುದೂ ಇದಕ್ಕೆ ಕಾರಣವಿರಬಹುದು.
ಪ್ರತಿ ಸಲ ಇವರನ್ನು ವಿಭಾಗಿಸಿದರೆ ನನ್ನ ಬೇಳೆ ಬೇಯುತ್ತದೆ ಎನ್ನುವ ಯೋಚನೆಯಿಂದ, ಸದಾ ’ವಿಭಜಿಸಿ ಆಳುವ’ ನೀತಿಯನ್ನು; ಕೇವಲ ರಾಷ್ಟ್ರ ವಿಭಜನೆಯಲ್ಲ; ಮನಸ್ಸುಗಳ ವಿಭಜನೆಯನ್ನೂ ಮಾಡುತ್ತಾ ಬಂದರು. ಈಗ, ಇದನ್ನು ಒಗ್ಗೂಡಿಸಬಾರದು, ಹೇಗಾದರೂ ಮಾಡಿ ಆ ವಿಭಜನೆಯನ್ನು ಹಾಗೆಯೇ ಉಳಿಸಬೇಕು ಎಂಬ ಸ್ಥಿತಿಗೆ ಬಂದು ನಿಂತಿದ್ದೇವೆ. ಇದು ಮುಂದುವರಿದುಕೊಂಡುಹೋದರೆ ಮಾತ್ರ ನಾವು ಕ್ಷೇಮವಾಗಿ ನಮ್ಮ ರಾಜಕೀಯ ಮಾಡಬಹುದು. ’ಎಲ್ಲಿ ಎಲ್ಲರೂ ಒಂದಾಗುತ್ತಾರೋ, ಇಡೀ ಭಾರತ ಒಂದಾಗಿಬಿಟ್ಟರೆ?’ ಎಂಬ ಆತಂಕ ಅವರನ್ನು ಕಾಡುತ್ತಿದೆ. ಇಡೀ ಭಾರತ ಒಂದಾದರೆ ಅದು ಇಡೀ ಪ್ರಪಂಚಕ್ಕೆ ಒಂದು ಮಾದರಿಯಾಗುತ್ತದೆ. ಆದರೆ ಅದನ್ನು ಆಗಲಾರದಂತೆ ನೋಡಿಕೊಳ್ಳುವುದೇ ಕರ್ತವ್ಯ ಎಂಬಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಅದು ಕಲೆಯ ಕ್ಷೇತ್ರದಲ್ಲಿಯೂ ಬಂದುಬಿಟ್ಟಿದೆ.
ಕಲೆಗೂ ಈಗ ಅದರದ್ದೇ ಆದಂತಹ ಸಿದ್ಧಾಂತಗಳನ್ನು ರೂಪಿಸಿರುವುದರಿಂದ ಆ ಸಿದ್ಧಾಂತಗಳಿದ್ದರೆ ಮಾತ್ರ ಆತ ಕಲಾವಿದ, ಶ್ರೇಷ್ಠ ವಿಮರ್ಶಕ, ಅದು ಶ್ರೇಷ್ಠ ಕೃತಿ ಎಂಬ ಮನ್ನಣೆ ದೊರೆಯುತ್ತದೆ. ಯಾವನೋ ಒಬ್ಬ ಭಿಕ್ಷೆ ಬೇಡುತ್ತಿರುವ ಮುದುಕನನ್ನು ಹಾಕಿದರೆ ಅದು ಶ್ರೇಷ್ಠ ಕೃತಿ. ಒಬ್ಬ ಯೋಗಿಯನ್ನು ದೇದೀಪ್ಯಮಾನವಾಗಿಟ್ಟರೆ, ಅದು ಶ್ರೇಷ್ಠ ಕೃತಿಯಲ್ಲ, ಅದು ಒಂದು ಕೃತಿಯಷ್ಟೆ. ಈ ರೀತಿಯ ವಿಭಾಗಗಳನ್ನು ಮಾಡಿಕೊಂಡಿದ್ದೇವೆ.
ಕಲಾಪ್ರಕಾರಗಳ ಸೈದ್ಧಾಂತಿಕ ನಿಲವುಗಳನ್ನೂ ಕೂಡಾ ಈಗ ಬದಲಿಸಬೇಕಾದ ಅಗತ್ಯವಿದೆ. ಯಾವ ರೀತಿ ಇತಿಹಾಸವನ್ನು ಮತ್ತೆ ಬರೆಯಲು ಹೊರಟಿದ್ದೇವೆಯೋ ಅದೇ ರೀತಿ ಕಲಾಪ್ರಕಾರಗಳ ಸೈದ್ಧಾಂತಿಕ ನಿಲವುಗಳನ್ನೂ ನಮ್ಮ ನಾಟ್ಯಶಾಸ್ತ್ರ ಮುಂತಾದವುಗಳ ಮೇಲೆ ಪುನರಪಿ ಕಟ್ಟಬೇಕಾಗಿದೆ. ಯಾವುದನ್ನು ಅವರು ಅಲ್ಲಗಳೆದರೋ ಅವರೂ ಅದನ್ನೇ ಅಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ಅವರಿಗೆ ಅರಿವು ಮೂಡಿಸಬೇಕಾಗಿದೆ. ಇದು ಬದಲಾಗುತ್ತದೆ. ಆಗಬೇಕು ಮತ್ತು ಆಗುತ್ತಿದೆ. ೫೦೦ ವರ್ಷಗಳಿಂದ ಅನುಸರಿಸಿದ್ದು. ಹೀಗಾಗಿ ನಿಧಾನವಾಗಿ ಬದಲಾಗುತ್ತದೆ.
ಪ್ರ.: ಇತ್ತೀಚೆಗಿನ ಯಶಸ್ವೀ ಚಿತ್ರಗಳೆನಿಸಿರುವ ’ಗೋಧಿಬಣ್ಣ’, ’ಯೂಟರ್ನ್’, ’ತಿಥಿ’ ಇತ್ಯಾದಿಗಳನ್ನು ಗಮನಿಸಿದರೆ ಪ್ರೇಕ್ಷಕನ ಒಲವು ’ಲಾಂಗು-ಮಚ್ಚು’ ಬಿಟ್ಟು ಸದಭಿರುಚಿಯ ಕಡೆಗೆ ಹರಿಯುತ್ತಿದೆ ಎಂದು ಅನಿಸುತ್ತಿದೆಯೇ?
ಉತ್ತರ: ನಾನು ಕನ್ನಡ ಚಿತ್ರರಂಗದ ಬಗೆಗೆ ಬಹಳ ನಂಬಿಕೆ ಭರವಸೆ ಇಟ್ಟುಕೊಂಡಿದ್ದೇನೆ. ಚಿತ್ರರಂಗ ಎನ್ನುವುದು ಒಂದು ಸರ್ಕಲ್ನಂತೆ. ಅದು ಸುಮ್ಮನೆ ಮೇಲೆ ಹೋಗುತ್ತದೆ; ಕೆಳಗೆ ಹೋಗುತ್ತದೆ. ಯಾವ ಯಾವ ಕಾಲಘಟ್ಟದಲ್ಲಿ ಏನೇನಾಗಬೇಕೋ ಅದು ಆಗುತ್ತಲೇ ಇರುತ್ತದೆ. ಒಂದು ಕಾಲದಲ್ಲಿ ಕಾದಂಬರಿ ಆಧಾರಿತ ಚಿತ್ರಗಳೇ ಓಡುವುದು, ಇನ್ನಾವುದೂ ಓಡುವುದೇ ಇಲ್ಲ ಎಂಬಂತಿತ್ತು. ಅದು ಮುರಿಯಿತು.
ಆ ದೃಷ್ಟಿಯಲ್ಲಿ ಈಗ ಸಾಹಿತ್ಯಿಕವಾಗಿ ನಾವೊಂದಿ? ಬದಲಾವಣೆಯನ್ನು ಕಾಣುತ್ತಿದ್ದೇವೆ.
ಕಥಾಹಂದರವನ್ನೇ ಕಂಟೆಂಟನ್ನೇ ಹೃದಯಭಾಗಕ್ಕೆ ತಂದು ನಿಲ್ಲಿಸಿಕೊಳ್ಳುವ ಕೆಲಸಗಳು ಆಗುತ್ತಿವೆ. ಆದರೆ ಈಗಲೂ ಸ್ವಂತ ಕಂಟೆಂಟ್ಗಳು ಕಡಮೆ. ಇದು ನನ್ನನ್ನು ಕಾಡುತ್ತಿರುವುದು. ಎಲ್ಲವೂ ಎರವಲು ಪಡೆದ ಕಂಟೆಂಟ್, ಸಿದ್ಧಾಂತಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಅದಾಗಬಾರದು. ಅಲ್ಲಿಯವುಗಳನ್ನೇ ನಕಲು ಮಾಡುವುದರಿಂದ ಕಂಟೆಂಟ್ನಲ್ಲೇನೂ ಬದಲಾಗುತ್ತಿಲ್ಲ; ಬದಲಾಗುತ್ತಿರುವುದು ವಿಧಾನ ಮಾತ್ರ. ಇದು ಆಗಬಾರದು. ನಮ್ಮದೇ ಆದಂತಹ ಕಂಟೆಂಟ್ಗಳ ಜೊತೆಗೆ ಬೆಳೆಯುವುದಿದೆಯಲ್ಲ ಅದನ್ನೇ ಕನ್ನಡತನ ಎನ್ನುವುದು. ಎಲ್ಲರೂ ಅದನ್ನು ಭಾಷೆ ಮಾತ್ರ ಎಂದುಕೊಂಡಿದ್ದಾರೆ. ಯಾವ ಭಾಷೆ ಮಾತನಾಡುತ್ತಾನೆ ಎನ್ನುವುದಷ್ಟೆ ಕನ್ನಡತನವಲ್ಲ.
ಈವತ್ತು ಕನ್ನಡ, ಇಂಗ್ಲಿಷ್ ಎಲ್ಲವೂ ಮಿಶ್ರಣವಾಗಿದೆ. ಅದನ್ನು ಹಾಗೆಯೇ ಮಾಡುತ್ತೇನೆ ಎನ್ನುವುದೂ ಅಲ್ಲ. ಎಲ್ಲ ಅವಾಚ್ಯ ಶಬ್ದಗಳನ್ನು ತುರುಕಿ ಮಾಡುವುದೂ ಅಲ್ಲ. ಮಾಧ್ಯಮಕ್ಕೆ ಅದರದ್ದೇ ಆದ ಒಂದು ಜವಾಬ್ದಾರಿಯಿರುತ್ತದೆ. ಭಾಷೆ ಮತ್ತು ಸಂಸ್ಕೃತಿಯನ್ನು ಸಾಹಿತ್ಯದ ಜೊತೆಗಿಡುವಾಗ ತುಂಬಾ ಚಿಂತನೆ ನಡೆಸಿ ಮಾಡಬೇಕು.
ಪ್ರ.: ಡಬ್ಬಿಂಗ್ ಎಂಬ ಭೂತದ ಭಯ ಕನ್ನಡ ಚಿತ್ರರಂಗವನ್ನು ಕಾಡುತ್ತಿದೆಯೇ? ಈ ಡಬ್ಬಿಂಗ್ಗೆ ಅವಕಾಶ ದೊರೆತಲ್ಲಿ ನಾವು ತೆರೆದುಕೊಳ್ಳಲು ಸಹಾಯವಾಗಬಹುದು ಎನಿಸುವುದಿಲ್ಲವೇ?
ಉತ್ತರ: ಇಲ್ಲ. ಡಬ್ಬಿಂಗ್ ಬರುವುದು ಬರದಿರುವುದರಿಂದ ಬೇರೆಬೇರೆ ಕಾರಣಗಳಿಂದ ಅನಾನುಕೂಲಗಳಿವೆ. ಚಾನೆಲ್ಗಳನ್ನು ಮಾಡಿಕೊಳ್ಳಿ. ಸಿನೆಮಾಗಳಿಗೆ ಬಂದು ಥಿಯೇಟರ್ಗೆ ಯಾಕೆ ಬರಬೇಕು? ಎಲ್ಲಿ ಬೇಕು; ಎಲ್ಲಿ ಬೇಡ ಎನ್ನುವುದರ ಅರಿವಿರಬೇಕು. ಶೈಕ್ಷಣಿಕ ಸಿನೆಮಾಗಳಲ್ಲಿ ಡಬ್ಬಿಂಗ್ ಬೇಕು. ವ್ಯಾಪಾರಕ್ಕೆ ಬಂದಾಗ ಡಬ್ಬಿಂಗ್ ಬೇಡ. ಆದರೆ ಇಂದು ಇದು ವ್ಯಾಪಾರವೇ ಶೈಕ್ಷಣಿಕವೇ ಎಂದು ನೋಡಿ ಕೊಳ್ಳುವವರಿಲ್ಲ. ಹೀಗಾಗಿ ಡಬ್ಬಿಂಗ್ ಸದ್ಯಕ್ಕೆ ಬೇಡ.
ಡಬ್ಬಿಂಗ್ ಇಲ್ಲದೆಯೇ ನಾವು ತೆರೆದುಕೊಂಡಿದ್ದೇವೆ. ಇತರ ಭಾಷೆಯ ಸಿನೆಮಾಗಳನ್ನು ನಾವು ನೋಡುತ್ತಿಲ್ಲವೇ? ಇಡೀ ಭಾರತದಲ್ಲಿ ಕರ್ನಾಟಕದಲ್ಲಿರುವವರಿಗೆ ಗೊತ್ತಿರುವಷ್ಟು ಭಾಷೆಗಳು ಬೇರೆ ಯಾರಿಗೂ ಗೊತ್ತಿಲ್ಲ. ಕಾರಣ, ಸಿನೆಮಾ. ತಮಿಳುನಾಡು ಅಥವಾ ಉತ್ತರಭಾರತಕ್ಕೆ ಹೋಗಿ. ಆತನಿಗೆ ಬೇರೆ ಭಾಷೆಯೇ ಬರುವುದಿಲ್ಲ. ಆದರೆ ಕರ್ನಾಟಕದ ಯಾವುದೇ ಮೂಲೆಯಲ್ಲಿರುವವನಿಗೆ ಕನಿಷ್ಠ ೫ ಭಾಷೆ ಬರುತ್ತದೆ. ಯಾಕೆಂದರೆ ಆತ ಸಿನೆಮಾ ನೋಡುತ್ತಿದ್ದಾನೆ. ಡಬ್ಬಿಂಗನ್ನು ಒಬ್ಬ ರಾಕ್ಷಸನನ್ನಾಗಿ ಕೂರಿಸಿದ್ದಾರಷ್ಟೆ. ಅದನ್ನು ಎಲ್ಲಿ ಬೇಕೋ ಅಲ್ಲಿ ಬಳಸಿಕೊಳ್ಳಬೇಕು ಎಂಬ ಪ್ರಜ್ಞೆ ಮೂಡಿದರೆ ಹಾಗೂ ಅದಕ್ಕೆ ತಕ್ಕಹಾಗೆ ವ್ಯಾಪಾರೀ ಮನೋಭಾವವೂ ಬೆಳೆದರೆ ಆಗ ಅದು ಸೂಕ್ತವೆನಿಸುತ್ತದೆ.
ಯಾವುದೋ ಕೆಟ್ಟ ಸಿನೆಮಾ ಡಬ್ಮಾಡಿ ನಮ್ಮ ಸಂಸ್ಕೃತಿ ಎಂದುಬಿಡುತ್ತಾರೆ. ಅದನ್ನು ನೋಡಲು ಬಿಡಬಹುದೇ? ಗ್ರಾಹಕನ ಇಷ್ಟ ಯಾವುದು ಅದನ್ನು ನಾವು ನೀಡುತ್ತೇವೆ ಎನ್ನಬಹುದು. ನೀವು ಒಬ್ಬ ವ್ಯಕ್ತಿಯನ್ನು ಗ್ರಾಹಕತನಕ್ಕೆ ತಂದು ನಿಲ್ಲಿಸುತ್ತೀದ್ದೀರಿ. ಸಂಸ್ಕೃತಿಯನ್ನು ಗ್ರಾಹಕತನಕ್ಕೆ ತಂದುಬಿಟ್ಟರೆ ಅದು ಸರಕಾಗುತ್ತದೆ. ಭಾರತೀಯ ಸಂಸ್ಕೃತಿ ಬೆಳೆದುಕೊಂಡು ಬಂದಿರುವುದೇ ಬದುಕಿನಲ್ಲಿರುವ ಜೀವನಕ್ರಮವನ್ನು ಅದು ಹೇಳುತ್ತಾ ಬಂದಿರುವುದರಿಂದ. ಅದರಲ್ಲಿ ವ್ಯಾಪಾರವಿರಲಿಲ್ಲ. ಆದರೆ ಈಗ ಇದೆ. ವ್ಯಾಪಾರವನ್ನು ಬೇರೆಯೇ ಆಗಿ ಇಟ್ಟಾಗ ಬದುಕು ನಡೆದುಕೊಂಡು ಹೋಗುತ್ತದೆ. ಹೀಗಾಗಿ ಡಬ್ಬಿಂಗ್ನ್ನು ವ್ಯಾಪಾರೀಕರಣ ಮಾಡಬೇಡಿ. ಅಗತ್ಯವೆನಿಸಿದರೆ ಶೈಕ್ಷಣಿಕವಾಗಿ ಬಳಸಿಕೊಳ್ಳಬಹುದು.
ಪ್ರ.: ಕನ್ನಡ ಚಿತ್ರರಂಗದಲ್ಲಿ ’ನಾಗಾಭರಣತನ’ದ ವಾರಸುದಾರನನ್ನು ಗುರುತಿಸಿದ್ದೀರಾ ಅಥವಾ ಬೆಳೆಸಿದ್ದೀರಾ?
ಉತ್ತರ: ನನ್ನ ಬಹಳ ಮಂದಿ ಶಿಷ್ಯರು ಇಂದು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಆಫೀಸ್ನಲ್ಲಿ ೭-೧೦ ವರ್ಷ ಕೆಲಸ ಮಾಡಿದ ಅನೇಕರು ಇಂದು ಚಿತ್ರರಂಗದಲ್ಲಿಯೂ ಟೆಲಿವಿಷನ್ನಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಾರಂಭದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ನನ್ನ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ನನ್ನ ಮೊತ್ತಮೊದಲ ಚಿತ್ರ ’ಗ್ರಹಣ’ಕ್ಕೆ ನಾಗತಿಹಳ್ಳಿ ಅವರೇ ಸಹಾಯಕ ನಿರ್ದೇಶಕರಾಗಿದ್ದರು. ಪಿ.ಎನ್. ಶೇಷಾದ್ರಿ ಅವರು ೭ ವರ್ಷ ನನ್ನ ಸಿನೆಮಾದಲ್ಲಿ ಕೆಲಸ ಮಾಡಿದ್ದರು. ಈಗ ’ರಾಮ ರಾಮರೇ’ ಮಾಡಿದ ಸತ್ಯಪ್ರಕಾಶ್ (೬ ವರ್ಷ), ಎಂ.ಕೆ. ಮಠ (೧೪ ವರ್ಷ) ’ಖೆಡ್ಡಾ’ ಮಾಡಿದ ಗಿರಿ, ಪ್ರದೀಪ್ ವರ್ಮ ಮುಂತಾದವರು ನನ್ನ ಸಿನೆಮಾಗಳಲ್ಲಿ ಕೆಲಸ ಮಾಡಿ ಅನುಭವ ಪಡೆದುಕೊಂಡವರು. ಪ್ರಾರಂಭದಿಂದ ನನ್ನ ಜೊತೆ, ನನ್ನ ಆಫೀಸ್ನಲ್ಲಿ ನನ್ನ ಸಿನೆಮಾಗಳಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ವ್ಯಕ್ತಿಯೂ ಆತನದ್ದೇ ಆದ ಅಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ.
ಪ್ರ.: ಪನ್ನಗ ಭರಣರಲ್ಲಿ ನಿಮ್ಮ ಭರವಸೆ-ಅಪೇಕ್ಷೆಗಳು ಏನೇನು?
ಉತ್ತರ: ಅವನೊಬ್ಬ ಒಳ್ಳೆಯ ಚಿತ್ರನಿರ್ದೇಶಕ; ಒಳ್ಳೆಯ ವ್ಯಕ್ತಿ ಕೂಡಾ. ಇಂದು ಕನ್ನಡದಲ್ಲಿ ಮನಸ್ಸುಗಳನ್ನು ಕಟ್ಟಿಕೊಡುವ ಸಿನೆಮಾಗಳು ಕಡಮೆಯಾಗುತ್ತಿವೆ. ಎಲ್ಲವೂ ಒಡೆಯುವ ಸಿನೆಮಾಗಳೇ ಬರುತ್ತಿವೆ. ಇವುಗಳು ರಿಯಾಲಿಟಿಯಲ್ಲಿದೆ ಎಂದು ಅದನ್ನೇ ತೋರಿಸುವುದು ಎಷ್ಟು ಸರಿ? ರಿಯಾಲಿಟಿಯಲ್ಲಿಲ್ಲದ ಮೌಲ್ಯಗಳನ್ನು ಕಂಡುಕೊಳ್ಳುವುದು ಹೇಗೆ? ಹೀಗೆ ಮಾಡಬಾರದು; ಈ ರೀತಿಯ ಬದುಕನ್ನು ಕಟ್ಟಬೇಕು ಎನ್ನುವಂತಹ ಚಿಂತನೆ ಆಗಬೇಕಾಗಿದೆ. ಮನಸ್ಸುಗಳನ್ನು ಕಟ್ಟಿಕೊಡುವ, ಒಂದು ಸಮಾಜವನ್ನು ಕಟ್ಟಿಕೊಡುವ, ಅದರ ಜೊತೆಗೆ ಒಳ್ಳೆಯ ಮನರಂಜನೆಯನ್ನು ನೀಡುವಂತಹ ಸದಭಿರುಚಿಯ ಸಿನೆಮಾಗಳ ರೂವಾರಿಗಳಾಗಬೇಕು.
’ರಾಮ ರಾಮಾರೇ’ ನೋಡಿದಾಗ ಖುಷಿಯಾಗುತ್ತದೆ; ಚೆನ್ನಾಗಿ ಮಾಡಿದ್ದಾನೆ. ಸಮಾಜಕ್ಕೇನು ಕಟ್ಟಿಕೊಡುತ್ತಿದ್ದೇವೆ ಎಂಬ ಮೌಲ್ಯಗಳಿರುವ ಸಿನೆಮಾಗಳು ಹೆಚ್ಚುಹೆಚ್ಚು ಬರಬೇಕು. ಸಿನೆಮಾ ಮಾತ್ರವಲ್ಲ ಇಡೀ ಕಲಾಮಾಧ್ಯಮ ಆ ರೀತಿಯಲ್ಲಿ ಕೆಲಸ ಮಾಡಬೇಕು. ವಿಭಜಿಸುವ ಕೆಲಸವನ್ನು ದಯವಿಟ್ಟು ಮಾಡಬೇಡಿ; ಒಂದುಗೂಡಿಸುವ ಕೆಲಸವನ್ನು ದಯವಿಟ್ಟು ಪ್ರಾರಂಭಿಸಿ – ಎಂಬುದೇ ನನ್ನ ಅಪೇಕ್ಷೆ.
ಪ್ರ.: ನಿಮ್ಮ ಏಳು-ಬೀಳುಗಳಲ್ಲಿ ಕುಟುಂಬವರ್ಗದ, ಸ್ನೇಹಿತರ ಸಹಕಾರ ಸ್ಪಂದನೆಯ ಬಗ್ಗೆ ವಿವರಿಸುವಿರಾ?
ಉತ್ತರ: ತುಂಬ ಪೂರ್ಣಪ್ರಮಾಣದಲ್ಲಿ ನನ್ನ ಜೊತೆ ಈ ಬದುಕಿನ ಎಲ್ಲ ಸ್ತರಗಳಲ್ಲಿ ನನ್ನ ಜೊತೆಯಲ್ಲಿರುವವರು ನನ್ನ ಮಡದಿ. ಅವರೂ ರಂಗಭೂಮಿಯಿಂದ ಬಂದವರು. ಹಾಗಾಗಿ ಮನೆಯಲ್ಲಿ ರಂಗಭೂಮಿಗೆ ಬೇಕಾದ ಎಲ್ಲ ರೀತಿಯ ಪೂರಕ ಅಂಶಗಳು ಇವೆ. ನಮ್ಮ ಮಕ್ಕಳೂ ರಂಗಭೂಮಿಯಲ್ಲಿ ಈ ರೀತಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಮಗ ಪನ್ನಗ ಈಗಲೂ ಸ್ಕ್ರೀನ್ ಹಿಡಿಯುವುದರಿಂದ ಹಿಡಿದು ಬಲರಾಮನ ಪಾತ್ರ ಮಾಡುವವರೆಗಿನ ಎಲ್ಲ ಕೆಲಸವನ್ನು ಮಾಡುತ್ತಿದ್ದಾನೆ. ಮಗಳೂ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದಾಳೆ.
ನಾವೆಲ್ಲರೂ ರಂಗಭೂಮಿಯನ್ನು, ಅದರಲ್ಲಿಯೂ ’ಬೆನಕ’ವನ್ನು ಎಷ್ಟು ಹಚ್ಚಿಕೊಂಡಿದ್ದೇವೆ ಎಂದರೆ ಬೆನಕ ನಮ್ಮ ಇನ್ನೊಂದು ಮನೆಯಿದ್ದಂತೆ. ನಮ್ಮ ಇಡೀ ಕುಟುಂಬ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಸಿನೆಮಾದ ಯಾವುದೇ ಕೆಲಸವಿರಲಿ, ಅದು ಬೇರೆಯ ನಿರ್ದೇಶಕರಾಗಿದ್ದರೂ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಮನೆಯವರು ಕಾಸ್ಟ್ಯೂಮ್ ನೋಡಿಕೊಂಡರೆ, ಮಗ ಅಸಿಸ್ಟೆಂಟ್ ಆಗಿ, ಕೆಲವೊಂದರಲ್ಲಿ ನಟನೆಯನ್ನೂ ಮಾಡುತ್ತಿದ್ದಾನೆ. ನಮ್ಮ ಇಡೀ ಕುಟುಂಬ ರಂಗಭೂಮಿಯಲ್ಲಿ ವಿವಿಧ ರೀತಿಯಲ್ಲಿ ತೊಡಗಿಕೊಂಡಿದೆ. ಈಗಿನ ವಾತಾವರಣ ಹೇಗಿದೆ ಎಂದರೆ ಕಡಮೆ ಬಂಡವಾಳದ ಸಿನೆಮಾ ಮಾಡಬೇಕಾದರೆ ಅದಕ್ಕೆ ಬೇರೆಯೇ ಮನಃಸ್ಥಿತಿ ಇರಬೇಕು ಎಂಬಂತಿದೆ. ಅಂತಹ ಸ್ಥಿತಿಯಿದೆ. ನಾವೆಲ್ಲ ಸೇರಿಕೊಂಡು ಒಂದು ಸಿನೆಮಾ ಮಾಡಬೇಕೆಂದರೆ ಆಗುತ್ತಿಲ್ಲ. ಅದನ್ನು ಮಾಡಲು ಹೊರಟರೂ ಇಂಡಸ್ಟ್ರಿ ಬಿಡುತ್ತಿಲ್ಲ.
೧೯೫೭ರ ಸುಮಾರಿಗೆ ಸಿಡಿದುಬಂದು ಪ್ಯಾರಲಲ್ ಸಿನೆಮಾ ಮಾಡಿದ ಕಾಲವಿತ್ತು; ಈಗ ಇನ್ನೊಂದು ಕಾಲ ಬಂದಿದೆ. ಈ ಎಲ್ಲ ದೊಡ್ಡ ದೊಡ್ಡ crowd ಸಿನೆಮಾಗಳಿಂದಾಚೆಗೆ ಒಂದು ಸಣ್ಣ ಬಜೆಟ್ನಲ್ಲಿಯೂ ಕ್ರಿಯೇಟಿವ್ ಸಿನೆಮಾಗಳು ಬರಬೇಕಾಗಿದೆ. ಕಾಲ ಕಾಯುತ್ತಿದೆ. ಆ ತರಹದಲ್ಲಿ ಒಂದಷ್ಟು ಹೊಸ ಹುಡುಗರು ಹೊಮ್ಮಬೇಕಾಗಿದೆ. ಆಗ ಎಲ್ಲರೂ ಹಿಂದಕ್ಕೆ ಹೋಗುತ್ತಾರೆ. ಈ ಕ್ರೇಜ್ ಪ್ರಾರಂಭವಾಗುತ್ತದೆ. ಈ ತರಹದಲ್ಲಿ ನನ್ನ ಬದುಕಿನಲ್ಲಿ ನನ್ನ ಮನೆಯವರ ಪಾತ್ರ ಮಹತ್ತ್ವದ್ದು. ನಮ್ಮ ಪಯಣ ಪ್ರಾರಂಭದಿಂದ ಇಲ್ಲಿಯವರೆಗೆ ಅವರಿಲ್ಲದೆ ನಾನಿಲ್ಲ; ನಾನಿಲ್ಲದೆ ಅವರಿಲ್ಲ ಎಂಬಂತೆ ನಮ್ಮ ಜೀವನ-ಕಲಾಜೀವನ ನಡೆದುಕೊಂಡು ಹೋಗುತ್ತಿದೆ. ಅವರಿಲ್ಲದೆ ನನಗೆ ಕ್ರಿಯೇಟಿವ್ ಆಗಿ ಯೋಚನೆ ಮಾಡಲು ಸಾಧ್ಯವೇ ಇಲ್ಲ. ನನ್ನ ಹೆಂಡತಿಯೇ ನನ್ನ ಶ್ರೇಷ್ಠ ವಿಮರ್ಶಕಿ. ನಾನು ಅಭಿನಯಿಸಿದರೂ ಹೇಗಿದೆ ನೋಡು ಎನ್ನುತ್ತೇನೆ; ನಾನು ಕೆಲಸ ಮಾಡಿದಾಗಲೂ ಏನಿದು ಸರಿಯೋ ತಪ್ಪೋ ಎಂದು ಅವರೊಂದಿಗೆ ಚರ್ಚಿಸಿ ಕೆಲಸ ಮಾಡುತ್ತೇನೆ. ನಾನು ಯಾವುದೇ ವಿಷಯ ತೆಗೆದುಕೊಳ್ಳುವ ಮೊದಲು ನಾವಿಬ್ಬರು ಆ ಕುರಿತು ಮಾತುಕತೆ ನಡೆಸುತ್ತೇವೆ. ನನ್ನ ಆಫೀಸ್ ಮನೆ ಎಲ್ಲ ಇಲ್ಲಿಯೇ ಆಗಿರುವುದರಿಂದ ನನ್ನ ಆಪ್ತರನ್ನೆಲ್ಲ ಇಲ್ಲಿಯೇ ಸೇರಿಸುತ್ತೇನೆ. ಲೈಬ್ರರಿಯಲ್ಲಿಯೇ ಕುಳಿತು ಎಲ್ಲರೂ ಕೆಲಸ ಮಾಡುತ್ತೇವೆ. ನನ್ನ ಸ್ನೇಹಿತರು ಮತ್ತು ಕುಟುಂಬ – ಅವರಿಲ್ಲದೇ ನಾನಿಲ್ಲ.
ಪ್ರ.: ಕನ್ನಡ ಚಿತ್ರರಂಗದ ಬೆಳವಣಿಗೆಗೆ ನಿಮ್ಮ ನೀಲನಕ್ಷೆ ಏನು?
ಉತ್ತರ: ಬಹಳ ಮುಖ್ಯವಾಗಿ ಕನ್ನಡದ ಮನಸ್ಸುಗಳು ಸಿನೆಮಾ ನೋಡುವಂತಹ ಕ್ರಮ ಬದಲಾಗಬೇಕು. ಸದಭಿರುಚಿಯ ಸಿನೆಮಾವನ್ನು ಸ್ವೀಕರಿಸುವ ಮನೋಭಾವ ಬೆಳೆಯಬೇಕು. ಅದು ಇಂದು ಇಲ್ಲ. ಕಡಮೆಯಾಗುತ್ತಿದೆ. ಕಾರಣ ಗೊತ್ತಿಲ್ಲ. ಇದಕ್ಕೆ ಒಂದು ರೀತಿಯ ನಿರಭಿಮಾನವೂ ಕಾರಣವಾಗಿರಬಹುದು. ಎಲ್ಲೋ ನೂರಕ್ಕೆ ಒಂದು ಸಿನೆಮಾ ಗೆದ್ದರೆ ಆಗುವುದಿಲ್ಲ; ನೂರಕ್ಕೆ ಇಪ್ಪತ್ತು ಸಿನೆಮಾವಾದರೂ ಗೆಲ್ಲುವಂತಾಗಬೇಕು. ಆಗ ನಿಜವಾಗಿಯೂ ಕನ್ನಡ ಚಿತ್ರರಂಗ ಉಳಿಯುತ್ತದೆ. ನಮ್ಮ ಅಕಾಡೆಮಿ, ಸರ್ಕಾರ ಈ ರೀತಿಯ ಪೂರಕವಾಗಿ ಯೋಚನೆ ಮಾಡಬೇಕು. ಏನು ಮಾಡಿದರೆ ಚಿತ್ರರಂಗದ ಪ್ರಗತಿಯಾಗುತ್ತದೆ ಎಂದು ಚಿಂತಿಸಬೇಕು. ಹಣ, ಸಬ್ಸಿಡಿ ನೀಡಿದರೆ ಚಿತ್ರರಂಗವನ್ನು ಬೆಂಬಲಿಸಿದಂತಾಗುವುದಿಲ್ಲ ಎಂಬುದನ್ನು ತಿಳಿಯಬೇಕು.
ಚಿತ್ರರಂಗದ ಎಲ್ಲ ವಿಭಾಗಗಳೂ ಸೇರಿ ೬ ತಿಂಗಳು ಅಥವಾ ೧ ವರ್ಷಗಳ ಶಿಕ್ಷಣ ನೀಡುವಂತಹ ಒಂದು ಕೋರ್ಸ್ ಪ್ರಾರಂಭಿಸಬೇಕು. ಕನ್ನಡಕ್ಕೆ ಅಂತಹ ಸಿನೆಮಾದ ಒಂದು ಪಕ್ಕಾ ಇನ್ಸ್ಟಿಟ್ಯೂಟ್ ತುರ್ತಾಗಿ ಬೇಕಾಗಿದೆ. ಇದನ್ನು ಅಕಾಡೆಮಿ ಮಾಡಬೇಕು. ಅದು ಹೇಗಿರಬೇಕೆಂದರೆ, ಒಬ್ಬ ಪ್ರೊಡಕ್ಷನ್ ಮ್ಯಾನೇಜರ್ ಬೇಕಾಗಿದ್ದಾನೆ ಎಂದರೆ, ತೆಗೆದುಕೊಳ್ಳಿ, ಆ ಇನ್ಸ್ಟಿಟ್ಯೂಟ್ನಲ್ಲಿ ಟ್ರೈನ್ ಆಗಿ ಬಂದಿದ್ದಾನೆ ಎಂದು ಹೇಳುವಂತಿರಬೇಕು. ಆ ರೀತಿಯ ಒಂದು ಸಂಪೂರ್ಣ ದೃಷ್ಟಿಯಿರುವಂತಹ ಒಂದು ಚಿತ್ರೋದ್ಯಮ ರೂಪುಗೊಳ್ಳಬೇಕು. ಅದಕ್ಕೆ ಒಂದು ಜಾಗ ಬೇಕಾಗಿದೆ. ಇಂದು ಒಂದು ಕಡೆ ಕ್ಯಾಮೆರಾ, ಇನ್ನೆಲ್ಲೋ ನಟರು, ಉಳಿದವುಗಳು ಇನ್ನೆಲ್ಲೋ ಎಂಬಂತೆ ಹರಿದು ಹಂಚಿಹೋಗಿದೆ.
ಮದ್ರಾಸ್(ಚೆನ್ನೈ)ನಲ್ಲಿ ಇಂಥ ಇನ್ಸ್ಟಿಟ್ಯೂಟ್ಗಳನ್ನು ಕಾಣಬಹುದು. ಕಲಿತುಬಂದವರು ಮತ್ತು ಕಲಿಯದೇ ಬಂದವರ ವ್ಯತ್ಯಾಸವೇನೆಂದರೆ – ಕಲಿತು ಬಂದವನು ಒಂದು ಶಿಸ್ತನ್ನು ಕಲಿತುಕೊಂಡಿರುತ್ತಾನೆ; ಜೊತೆಗೆ ಒಂದು ವಿಷನ್ ಇರುತ್ತದೆ. ಕಲಿಯದೇ ಬಂದವರಿಗೆ ನಾನೂ ಸಿನೆಮಾ ಮಾಡಬೇಕು; ನನ್ನ ಹೆಸರೂ ಬರಬೇಕು, ಅದಕ್ಕಾಗಿ ಬೇಗ ಏನನ್ನಾದರೂ ಮಾಡಿ ತೋರಿಸಬೇಕು ಎಂಬ ಉತ್ಸಾಹ ಇರುತ್ತದೆ. ಕೊನೆಗೆ, ಎರಡು ಸಿನೆಮಾ ಸೋತರೆ ಫುಟ್ಪಾತ್ಗೆ ಹೋಗುವಂತಹ ವಾತಾವರಣವಿದೆ.
ನಿರ್ದೇಶಕರಲ್ಲಿ ನಾನು ಕೇಳಿಕೊಳ್ಳುವುದು ಏನೆಂದರೆ ನಿಮ್ಮ ನಿಜವಾದ ಸಾಮರ್ಥ್ಯ ಗೊತ್ತಾಗುವುದು ೪ ಸಿನೆಮಾಗಳ ನಂತರವೇ. ಕನಿಷ್ಠ ೫ ಸಿನೆಮಾ ಆದ ನಂತರ ನಾನೊಬ್ಬ ನಿರ್ದೇಶಕನ ಬಗೆಗೆ ಮಾತನಾಡುತ್ತೇನೆ. ಹೀಗಾಗಿ ಸಿನೆಮಾ ಶಿಕ್ಷಣ ನೀಡುವಂತಹ ಒಂದು ವ್ಯವಸ್ಥೆ ರೂಪುಗೊಳ್ಳಬೇಕಾದ ಅಗತ್ಯವಿದೆ.
ನಮ್ಮಲ್ಲಿ ಎಲ್ಲದಕ್ಕೂ ಕಲಿಕೆಯಿದೆ. ಎರಡು ವಿಷಯಗಳಿಗೆ ಮಾತ್ರ ಇಲ್ಲ; ಒಂದು ಸಿನೆಮಾ, ಮತ್ತೊಂದು ರಾಜಕೀಯ. ಇವೆರಡೂ ಕಲಿಕೆಯ ಶಿಸ್ತಿಗೆ ಬರಬೇಕು. ಅವನು ಕಲಿತ ಎಂದಾಗ ಅವನು ಎಲ್ಲವನ್ನೂ ಗಳಿಸಿಕೊಂಡ ಎಂದಲ್ಲ. ಕನಿಷ್ಠ ಅವನಿಗೊಂದು ಮಾದರಿ ಸಿಗುತ್ತದಲ್ಲ.
ಈ ರೀತಿಯ ಯಾವುದೇ ಚಟುವಟಿಕೆಗಳನ್ನು ನಮ್ಮ ಕನ್ನಡ ಸಿನೆಮಾ ರಂಗ ಇದುವರೆಗೆ ಮಾಡಿಲ್ಲ. ಹಾಗಾಗಿ ನಮ್ಮ ಚಿತ್ರರಂಗ ’ಚಿತ್ರೋದ್ಯಮ’ವಾಗಿ ಬೆಳೆದಿಲ್ಲ. ನಾವು ಸುಮ್ಮನೆ ಇದನ್ನು ಒಂದು ಉದ್ಯಮ ಎಂದು ಕರೆಯುತ್ತಿದ್ದೇವ?. ಉದ್ಯಮದ ಯಾವ ಶಿಸ್ತುಗಳೂ ನಮ್ಮ ಸಿನೆಮಾರಂಗದಲ್ಲಿ ಮತ್ತು ಸಿನೆಮಾದವರಿಗೆ ಇಲ್ಲ. ಅಗ್ರಿಮೆಂಟ್ ಮಾಡಿಕೊಂಡ ಒಂದೇ ಒಂದು ಉದಾಹರಣೆಯಿಲ್ಲ. ಇಬ್ಬರು ನೀರಿನಲ್ಲಿ ಸತ್ತು ಹೋದರಲ್ಲ, ಅದಕ್ಕೆ ಯಾರು ಹೊಣೆಗಾರರು?
ಉದ್ಯಮಶೀಲತೆ ಬರಬೇಕಾದರೆ ಶೈಕ್ಷಣಿಕ ಶಿಸ್ತು ಇರಬೇಕು. ಅದನ್ನು ಅಳವಡಿಸಿಕೊಳ್ಳಬೇಕು. ಅದಕ್ಕೆ ತಕ್ಕ ಹಾಗೆ ಸರ್ಕಾರ ತನ್ನ ರೂಪರೇಖೆಗಳನ್ನು ಹಾಕಿಕೊಳ್ಳಬೇಕು. ಸುಮ್ಮನೆ ೧೨೦ ಸಿನೆಮಾಗಳಿಗೆ ಸಬ್ಸಿಡಿ ನೀಡಿದರೆ ಪ್ರಯೋಜನವಿಲ್ಲ. ರೈತರಿಗೇ ಸಬ್ಸಿಡಿ ಕೊಡದಿರುವಾಗ ಚಿತ್ರರಂಗಕ್ಕೆ ಸಬ್ಸಿಡಿ ಅಗತ್ಯವಿಲ್ಲ. ಬದಲಾಗಿ ಮೂಲಸೌಕರ್ಯ ಒದಗಿಸುವ ಕೆಲಸ ನಡೆಯಬೇಕಾಗಿದೆ. ಹೆಸರುಘಟ್ಟದಲ್ಲಿರುವ ಸ್ಟುಡಿಯೋ ಈವರೆಗೆ ಕಾಯಕಲ್ಪ ಕಾಣದೆ ದುಃಸ್ಥಿತಿಯಲ್ಲಿದೆ.
ಸಬ್ಸಿಡಿ ಕೊಡುವ ಬದಲು ಅಲ್ಲಿ ಫಿಲ್ಮ್ಸಿಟಿ ರೆಡಿ ಮಾಡಿದರೆ ಕನಿಷ್ಠ ೧೦ ಜನ ಅಲ್ಲಿ ಕೆಲಸ ಮಾಡುತ್ತಾರೆ. ಇಲ್ಲವಾದಲ್ಲಿ ಪ್ರತಿ ಸಲ ಹೊಸ ನಿರ್ಮಾಪಕ, ನಿರ್ದೇಶಕರು ಬರುತ್ತಾರೆ, ಹೋಗುತ್ತಾರೆ. ಇಂದು ಹೀರೋ ಹಿಂದೆ ಇರುವ ಕೆಲ ನಿರ್ಮಾಪಕರನ್ನು ಬಿಟ್ಟು ಯಾವ ನಿರ್ಮಾಪಕರೂ ೫-೬ ಸಿನೆಮಾ ಮಾಡಿದ ಉದಾಹರಣೆಯಿಲ್ಲ. ನಮ್ಮ ನಿರ್ದೇಶಕರ ಸಂಘದಲ್ಲಿಯೂ ೩೦೦-೪೦೦ ಸದಸ್ಯರಿದ್ದಾರೆ. ಎಲ್ಲರೂ ಸಕ್ರಿಯರೇ? ೩-೪ ವ?ದ ಹಿಂದೆ ಸಿನೆಮಾ ಮಾಡಿರುತ್ತಾರೆ; ಆಮೇಲೆ ನಿರ್ಮಾಪಕರಿಗಾಗಿ ಹುಡುಕುತ್ತಿದ್ದೇವೆ ಎನ್ನುತ್ತಿರುತ್ತಾರೆ. ಶೈಕ್ಷಣಿಕವಾಗಿ ಸಿನೆಮಾ ಬೆಳೆದರೆ ಸಿನೆಮಾ ಉದ್ಯಮವಾಗಿ ಬೆಳೆಯಲು ಸಾಧ್ಯ. ’ಶಿಕ್ಷಣದಲ್ಲಿ ಸಿನೆಮಾ, ಸಿನೆಮಾದಲ್ಲಿ ಶಿಕ್ಷಣ’ ಎಂಬುದೇ ನನ್ನ ಧ್ಯೆಯವಾಕ್ಯ. ನಾನು ಅಕಾಡೆಮಿಯಲ್ಲಿದ್ದಾಗ ಅಲ್ಲಿಯೂ ಇದನ್ನೇ ಹಾಕಿದ್ದೆ. ಅನಂತರ ಬಂದವರು ಅದನ್ನು ತೆಗೆಸಿಹಾಕಿದರು.
ಪ್ರ.: ಕೊನೆಯದಾಗಿ ಏನನ್ನು ಹೇಳಲು ಬಯಸುತ್ತೀರಿ?
ಉತ್ತರ: ಒಟ್ಟುಗೂಡಿಸುವ, ಇಡೀ ಜೀವನವನ್ನು ಕಟ್ಟುವಂತಹ ಸಿನೆಮಾವನ್ನು ಇಂದು ಬಹಳ ಕೀಳಾಗಿ ನೋಡುತ್ತಿದ್ದಾರೆ. ಇಂದಿನ ದೃಶ್ಯಮಾಧ್ಯಮಗಳು ತಮ್ಮ ಮೂಲಸಂಸ್ಕೃತಿಯನ್ನು ಕಳೆದುಕೊಂಡಿದೆ. ಮೂಲಸಂಸ್ಕೃತಿಗಳನ್ನು ಹಾಳುಮಾಡುವ? ಅವುಗಳು ಬೆಳೆದಿವೆ. ಹೀಗಾಗಿ ನಮ್ಮ ಮೂಲಸಂಸ್ಕೃತಿಗಳನ್ನು ಉಳಿಸಿಕೊಂಡು ದೃಶ್ಯಮಾಧ್ಯಮಗಳು ಕೆಲಸ ಮಾಡಬೇಕಾದರೆ ನಾವು ಶೈಕ್ಷಣಿಕವಾಗಿ ದೃಶ್ಯಮಾಧ್ಯಮದ ಅಭ್ಯಾಸ ಮಾಡುವಂತಾಗಬೇಕು.