ಭಾರತದ ನಾಗರಿಕತೆ, ಇತಿಹಾಸ, ಅದರಲ್ಲೂ ಮುಖ್ಯವಾಗಿ ಋಗ್ವೇದದಂತಹ ಲಭ್ಯ ಪ್ರಾಚೀನ ಸಾಹಿತ್ಯದ ಕಾಲವು ಯೇಸುಕ್ರಿಸ್ತನ ಜನನಕಾಲದ ಸ್ವಲ್ಪ ಆಚೀಚೆ ಇರಬಹುದೇ ಹೊರತು, ಬಹಳಷ್ಟು ಹಿಂದೆ ಹೋಗುವಂತಿಲ್ಲ ಎಂಬ ಹಟಕ್ಕೆ ಬಿದ್ದ ಪಾಶ್ಚಾತ್ಯ, ವಿಶೇಷವಾಗಿ ಇಂಗ್ಲೆಂಡ್ಮೂಲದ ಇತಿಹಾಸಕಾರರು ಎಂತಹ ಆಭಾಸವನ್ನು ಸೃಷ್ಟಿಸಿದ್ದಾರೆಂದರೆ ಕ್ರಿಸ್ತಪೂರ್ವದ ಮೌರ್ಯಸಾಮ್ರಾಜ್ಯ, ಹಾಗೆಯೆ ಅದರ ಜೊತೆಗಿದ್ದ ಚಾಣಕ್ಯನ ಕಾಲ ಮತ್ತು ಋಗ್ವೇದದ ಕಾಲ ಎಡಬಲದಲ್ಲಿ ಇರುವಂತಾಗಿದೆ. ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಕಾಣುವ ಸಂಸ್ಕೃತಿ-ನಾಗರಿಕತೆಗಳು ಎಷ್ಟು ಮುಂದುವರಿದಂಥವು ಮತ್ತು ಋಗ್ವೇದದಲ್ಲಿ ಕಾಣುವ ಜನಜೀವನ, ಅವರ ನಂಬಿಕೆಗಳು, ಆರಾಧನಾಕ್ರಮ ಮುಂತಾದವು ಎಷ್ಟೊಂದು ಪ್ರಾಚೀನ ಇರಬಹುದೆಂಬ ಕಲ್ಪನೆ ಆ ಸ್ವಯಂಮಾನ್ಯ ಇತಿಹಾಸಕಾರರಿಗೆ ಬರುವುದೇ ಇಲ್ಲ; ಇರಲಿ. ಋಗ್ವೇದ, ಇತರ ವೇದಗಳು, ಉಪನಿಷತ್ತುಗಳು, ಬ್ರಾಹ್ಮಣಗಳು ಏನನ್ನು ಹೇಳುತ್ತವೆ? ಎಂತಹ ಜೀವನವನ್ನು ಚಿತ್ರಿಸುತ್ತವೆ? ಆ ಮುಗ್ಧ ಜೀವನದಲ್ಲಿ ಗೋವಿನ ಪಾತ್ರವೇನು ಮತ್ತು ಎಷ್ಟು? – ಮುಂತಾದ ಅಂಶಗಳನ್ನು ಗೋವಧೆ ಪ್ರತಿಬಂಧಕದಂತಹ ಕಾನೂನಿನ ಪ್ರಸ್ತಾವ ಆಗಿರುವ ಈ ಸಂದರ್ಭದಲ್ಲಿ ಚರ್ಚಿಸುವುದು ಅರ್ಥಪೂರ್ಣವಾಗಬಹುದು.
ಋಕ್ಸಂಹಿತೆಯ ಒಂದು ಸೂಕ್ತ (x-೮೭-೧೬) ಹೀಗಿದೆ :
(ಯಾವ ರಾಕ್ಷಸನು ಪುರುಷಸಂಬಂಧಿ ಮಾಂಸದಿಂದಲೂ, ಕುದುರೆ ಮೊದಲಾದ ಪ್ರಾಣಿಗಳ
ಮಾಂಸದಿಂದಲೂ, ವಧಿಸಲ್ಪಡಬಾರದ ಗೋವಿನ ಮಾಂಸದಿಂದಲೂ ಹೊಟ್ಟೆಯನ್ನು ತುಂಬಿಸಿಕೊಳ್ಳುವನೋ, ಗೋಕ್ಷೀರವನ್ನು ಅಪಹರಿಸುವನೋ ಅಂಥವರ ತಲೆಗಳನ್ನು
ಹೇ ಅಗ್ನಿದೇವ! ನಿನ್ನ ಜ್ವಾಲೆಗಳಿಂದ ಸುಟ್ಟು ನಾಶಮಾಡು.)
ಇಲ್ಲಿ ಗೋವಿಗೂ ವಾಕ್ತತ್ತ್ವಕ್ಕೂ ನಿಕಟಸಂಬಂಧವನ್ನು ಹೇಳಿದೆ. ದೇವಪೂಜೆಗೆ ಗೋವು ಸಹಕರಿಸುವಂಥದ್ದು. ಗೋವನ್ನು ಹಿಂಸಿಸುವ ಮಾತಿರಲಿ; ಸೇವೆ ಮಾಡದೇ ಅದನ್ನು
ಉಪೇಕ್ಷಿಸುವವನು ಹಾಗೂ ಗೋಸಂಬಂಧ ಇಲ್ಲದವನನ್ನು ಅಲ್ಪಬುದ್ಧಿ (ದಭ್ರಚೇತಾಃ), ದಡ್ಡ ಎಂದು ಕರೆದಿದ್ದಾರೆ. ಗೋವಿಲ್ಲದೆ ಯಜ್ಞಯಾಗಾದಿಗಳಾಗಲಿ ದೈನಂದಿನ ಜೀವನವಾಗಲಿ ನಡೆಯುವಂತಿಲ್ಲ; ಗೋವಿಲ್ಲದವನ ಮನೆ ಹಾಳು ಎನ್ನುವವರೆಗೆ ಜಮದಗ್ನಿ ಋಷಿಗಳ ಮಾತಿನ ಅರ್ಥ ಚಾಚಿಕೊಳ್ಳುತ್ತದೆ.
ನಿರುಕ್ತದಲ್ಲಿ ಗೋವು
ವೇದಾರ್ಥಸಂಬಂಧಿಯಾದ ನಿರುಕ್ತವನ್ನು ರಚಿಸಿದ ಯಾಸ್ಕರ ಪ್ರಕಾರ ಗೋನಾಮವು ಪೃಥ್ವಿಯ ಸುಪ್ರಸಿದ್ಧ ೨೧ ವೈದಿಕ ನಾಮಗಳಲ್ಲಿ ಒಂದು. ಅವರ ಪ್ರಕಾರ ಈ ಪದದ ವ್ಯಾಖ್ಯೆ ಯದ್ದೂರಂ ಗತಾ ಭವತಿ | ಯಚ್ಚಾಸ್ಯಾಂ ಭೂತಾನಿ ಗಚ್ಛಂತಿ – ಅಂದರೆ ಬಹಳ ದೂರದವರೆಗೆ ವ್ಯಾಪಿಸಿರುವುದು ಅಥವಾ ಸಕಲ ಭೂತರಾಶಿಗಳೂ ಇದರ ಮೇಲೆ ಸಂಚಾರ ಮಾಡುತ್ತವೆ ಎಂಬುದಾಗಿ. ಮುಂದೆ ಅವರೇ ಅಥಾಪಿ ಪಶೂನಾಮೇವ ಭವತಿ ಏತಸ್ಮಾದೇವ ಎಂದಿದ್ದಾರೆ; ಅಂದರೆ ಪಶುವಿಶೇಷಕ್ಕೂ ಇದೇ ಕಾರಣದಿಂದ ಗೋಶಬ್ದವು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿರುಕ್ತದಲ್ಲಿ ಯಾಸ್ಕರು ಒಂಬತ್ತು ವೇದೋಕ್ತ ಗೋನಾಮಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಅವುಗಳೆಂದರೆ
– ಅಘ್ನ್ಯಾ, ಉಸ್ರಾ, ಉಸ್ರಿಯಾ, ಅಹೀ, ಮಹೀ, ಅದಿತಿ, ಇಲಾ, ಜಗತೀ ಹಾಗೂ ಶಕ್ವರೀ ಎಂಬುದಾಗಿ
ಪ್ರೊ| ನಾರಾಯಣಾಚಾರ್ಯರು ವಿವರಿಸುತ್ತಾರೆ. ಅಘ್ನ್ಯಾ ಎಂದರೆ ಕೊಲ್ಲಲ್ಪಡದ ಪ್ರಾಣಿ ಅಥವಾ ದುರ್ಭಿಕ್ಷವನ್ನು ನಿವಾರಿಸುವ ಪ್ರಾಣಿ. ಉತ್ತಮವಾದ ಹಾಲು, ಬೆಣ್ಣೆ, ತುಪ್ಪ ಎಂಬ ಭೋಗಸಾಧನಗಳು ಇದರಲ್ಲಿ ಇವೆ. ಆದುದರಿಂದ ಉಸ್ರಾ (ಉತ್ಸ್ರಾ). ಮಹ್ಯತೇ ಇತಿ ಮಹೀ – ಅಂದರೆ ಸರ್ವದೇವತಾಸ್ವರೂಪಳಾಗಿ ದೇವತೆಗಳಿಂದಲೂ ಪೂಜಿಸಲ್ಪಡುವವಳು ಎಂಬುದಾಗಿ. ನ ದ್ಯತಿ ಇತಿ ಅದಿತಿಃ – ಅಂದರೆ ಕ್ಷಯರಹಿತಳು, ನಾಶರಹಿತಳು ಎಂದರ್ಥ.
ಇನ್ನು ಈಡ್ಯತೇ ಇತಿ ಇಳಾ (ಇಲಾ) – ಅಂದರೆ ಸ್ತುತಿಸಲ್ಪಡುವವಳು ಎಂದರ್ಥ. ಹಾಗೆಯೇ ಗೋಶಬ್ದಕ್ಕೆ ಪರ್ಯಾಯವಾಗಿ ಧೇನು ಎನ್ನುವ ಶಬ್ದ ಕೂಡ ಇದ್ದು, ಅದನ್ನು ಧಯತೇಸೌ ವತ್ಸೇನ ಇತಿ, ತರ್ಪಯತ್ಯಸೌ ಪಯಸಾ (ಕರುವಿನಿಂದ ಇವಳ ಹಾಲು ಹೀರಲ್ಪಡುತ್ತದೆ, ಈಕೆ ಹಾಲನ್ನು ಕೊಟ್ಟು ತೃಪ್ತಿಪಡಿಸುತ್ತಾಳೆ) ಎಂದು ಅರ್ಥೈಸಲಾಗಿದೆ.
ಇನ್ನೊಂದು ವಿಶೇಷವೆಂದರೆ ಈ ಶಬ್ದಗಳು ಪಶುವಾದ ಗೋವಿಗೂ ಅದು ಸಂಕೇತಿಸುವ ಜ್ಞಾನಗೋವಿಗೂ ಏಕಕಾಲಕೆ ಹೊಂದುತ್ತವೆ. ಇದು ಸಾಂಕೇತಿಕವಾಗಿ ವೇದವಾಕ್ಕಿಗೂ ಅನ್ವಯವಾಗುತ್ತದೆಂದು, ವಾಗೇಷಾ ಮಾಧ್ಯಮಿಕಾ ಧರ್ಮಧುಕ್ ಇತಿ ಯಾಜ್ಞಿಕಾಃ ಎಂಬುದಾಗಿ ಸ್ಪಷ್ಟವಾಗಿಯೇ ಹೇಳಿದ್ದಾರೆ. ಋಕ್ಸಂಹಿತೆಯ ಒಂದು ಮಂತ್ರ(ii೩-೧೯) ದ ಅರ್ಥ ಹೀಗಿದೆ : ಉತ್ತಮವಾದ ಹಾಲನ್ನು ಕೊಡುವ ಈ ಕಾಮಧೇನುವನ್ನು ನಾನು ಸ್ತೋತ್ರದಿಂದ ಆಹ್ವಾನಿಸುತ್ತೇನೆ.
ಉತ್ತಮವಾದ ಹಸ್ತವುಳ್ಳ ನಮ್ಮ ಅಧ್ವರ್ಯುವು ಈ ಗೋವಿನಿಂದ ಹಾಲನ್ನು ಕರೆಯುತ್ತಾನೆ. ಹೀಗೆ ಶ್ರೇಷ್ಠವಾದ ಯಜ್ಞಾರ್ಹವಾದ ಈ ಹಾಲನ್ನು ಭಗವಂತನಾದ ಸವಿತೃವು ಅನುಗ್ರಹಿಸಲಿ. ಈ ಸವಿತೃವಿನ ಪ್ರವರ್ಗ್ಯವು ಉಜ್ಜ್ವಲವಾಗಿದೆ. ಆದುದರಿಂದ ವಿಶೇಷ ರೀತಿಯಿಂದಲೇ ನಾನು ಧೇನುವನ್ನು
ಆಹ್ವಾನಿಸುತ್ತೇನೆ.
ಗೋರಥಯಾತ್ರೆ
ರಾಜನಿಗೆ ಪಟ್ಟಾಭಿಷೇಕ ಆಗುವಾಗ ಹದಿನಾರು ಗೋವುಗಳು ಎಳೆಯುವ ರಥದಲ್ಲಿ ಆಸೀನನಾಗಿ ಪುರಪ್ರದಕ್ಷಿಣೆಯನ್ನು ಮಾಡಿ ಅನಂತರ ಸಿಂಹಾಸನವನ್ನು ಏರಬೇಕೆಂಬ ಪದ್ಧತಿಯನ್ನು ಧರ್ಮರಾಯನು ಪಾಲಿಸಿದನೆನ್ನುವ ವಿವರವು ಮಹಾಭಾರತದ ಶಾಂತಿಪರ್ವದಲ್ಲಿ ಬರುತ್ತದೆ. ಆ ಎರಡು ಶ್ಲೋಕಗಳಿಗೆ
ವ್ಯಾಖ್ಯಾನ ಮಾಡಿದ ನೀಲಕಂಠದೀಕ್ಷಿತರು ಋಗ್ವೇದದ ಕೆಳಗಿನ ಮಂತ್ರವನ್ನು ಉದಾಹರಿಸಿದ್ದಾರೆ (x-೬೮-೨):
ಸಂ ಗೋಭಿರಾಂಗಿರಸೋ ನಕ್ಷಮಾಣೋ
ಭಗ ಇವೇದರ್ಯಮಣಂ ನಿನಾಯ|
ಜನೋ ಮಿತ್ರೋ ನ ದಂಪತೀ ಅನಕ್ತಿ
ಬೃಹಸ್ಪತೇ ವಾಜಯಾಶೂರಿವಾಜೌ||
(ಲೋಕದಲ್ಲಿ ಸ್ನೇಹಿತನು ತನ್ನ ಮಿತ್ರನಿಗೆ ಶ್ರೇಯಸ್ಸಾಗಲೆಂದೂ, ತಮ್ಮಲ್ಲಿ ಅನ್ಯೋನ್ಯ ಸಂಬಂಧವಾಗಲೆಂದೂ ಬಂಧುಜನರಿಂದ ಅವನಿಗೆ ಹೇಗೆ ವಿವಾಹ ಮಾಡಿಸುವರೋ ಹಾಗೆಯೇ ಪುರೋಹಿತನು ನಗರಗತವಾದ ಐಶ್ವರ್ಯಲಕ್ಷ್ಮಿಯನ್ನು ರಾಜನಿಗೆ ವಿವಾಹ ಮಾಡಿಸಿ, ಗೋರಥದಿಂದ ನಗರಪ್ರವೇಶ ಮಾಡಿಸಬೇಕೆಂದೂ ಶ್ರುತಿಯ ಆದೇಶವಿದೆ.) ಹಿಂದೆ ಆಂಗಿರಸಪುತ್ರನಾದ ಬೃಹಸ್ಪತಿಯು ಅರ್ಯಮನೆಂಬ ದೇವತೆಯನ್ನು ಹೀಗೆಯೇ ಗೋರಥದಲ್ಲಿ ಕೂಡಿಸಿ ಅವನಿಗೆ ಪಟ್ಟಾಭಿಷೇಕ ಮಾಡಿದನೆಂದೂ ಇದು ಮಿತ್ರನು ದಂಪತಿಗಳನ್ನು ಒಟ್ಟು
ಸೇರಿಸಿದಂತೆ ಎಂದೂ ಶ್ರುತಿಯ ತಾತ್ಪರ್ಯ.
ಪಂಚಗವ್ಯಗಳ ಮಹಿಮೆ
ಗೋವಿನಿಂದ ಉತ್ಪನ್ನವಾದ ವಸ್ತುಗಳೇ ಪಂಚಗವ್ಯಗಳು. ತೈತ್ತಿರೀಯಬ್ರಾಹ್ಮಣದಲ್ಲಿ (i೪೮) ಶ್ರುತಿಯು ಎಲ್ಲರನ್ನೂ ಪಾವನ ಮಾಡುವಳೆಂದೂ, ಇದನ್ನು ಅಧ್ಯಯನ ಮಾಡಿದವನಿಗೆ ಸರಸ್ವತೀಸ್ವರೂಪಿಣಿಯಾದ ಶ್ರುತಿಯು ಒಳ್ಳೆಯ ಹಾಲು ಕೊಡುವ ಧೇನುವಾಗುವಳೆಂದೂ (ಸುದುಘಾ ಹಿ
ಪಯಸ್ವತೀ) ಸಾಧಕನು ತನಗೆ ಬೇಕಾದ ಹಾಲು, ತುಪ್ಪ, ಮಧು, ಉದಕಗಳನ್ನು ಇವಳಿಂದ ಪಡೆಯಬಹುದೆಂದೂ, ಇಹಪರ ಲೋಕಗಳನ್ನು ಪಡೆಯಬಹುದೆಂದೂ ಇಂತಹ ಗೋವಿನ
ಪಾವನವಾದ ಸಹಸ್ರ ಧಾರಾ ರೂಪವಾದ ಹಾಲಿನಿಂದ ದೇವತೆಗಳೂ ತಮ್ಮನ್ನು ಪವಿತ್ರ ಮಾಡಿಕೊಳ್ಳುತ್ತಿದ್ದಾರೆಂದೂ (ಯೇನ ದೇವಾಃ ಪವಿತ್ರೇಣ ಆತ್ಮಾನಂ ಪುನತೇ ಸದಾ,
ತೇನ ಸಹಸ್ರಧಾರೇಣ) ಇಂತಹ ಕ್ಷೀರಪಾನದಿಂದ ನಾವೂ ಬ್ರಹ್ಮವಿದರಾಗೋಣ ಎಂದೂ ಪ್ರಾರ್ಥನೆಯಿದೆ.
ಶತಪಥಬ್ರಾಹ್ಮಣದಲ್ಲಿ ಮೊಸರು, ತುಪ್ಪ ಮತ್ತು ಜೇನುಗಳು ಕ್ರಮವಾಗಿ ಪೃಥ್ವಿ, ಅಂತರಿಕ್ಷ ಮತ್ತು
ದ್ಯುಲೋಕಗಳ ಸಾರಗಳೆಂದು ಹೇಳಿದೆ. ಇವು ಭೂಃ ಭುವಃ ಸುವಃ ಎಂದು ಮೂರು ವ್ಯಾಹೃತಿಗಳಿಂದ ಸಂಕೇತಿಸಲ್ಪಡುವ ಪ್ರಜ್ಞೆಯ, ಅನುಭವದ ಲೋಕತ್ರಯಗಳಾಗಿವೆ. ಹೀಗೆ ಗೋವುಗಳ ಕೊಡುಗೆಯಾದ ಗವ್ಯರೂಪವಾದ ಹವಿಸ್ಸನ್ನು ಯಜ್ಞದಲ್ಲಿ ಅರ್ಪಿಸುವ ಕಾರ್ಯ ದೇವತೆಗಳನ್ನು ಶಕ್ತಿವರ್ಧಕರನ್ನಾಗಿ ಮಾಡುವುದಲ್ಲದೆ ಲೋಕಕ್ಕೂ ಕ್ಷೇಮಕರ. ಅಲ್ಲದೆ ಲೋಕಸೃಷ್ಟಿಗೂ ಈ ಗವ್ಯಗಳೇ ಸಾಧಕ ಎಂಬ
ಅರ್ಥವನ್ನು ಶ್ರುತಿಸ್ಮೃತಿಗಳಲ್ಲಿ ಹೇರಳವಾಗಿ ವಿವರಿಸಿದೆ. ಅದಕ್ಕಾಗಿಯೇ ಅಗ್ನಿದೇವನಿಗೆ ಮಾಡುವ ಪ್ರಾರ್ಥನೆಗಳಲ್ಲಿ ಮುಖ್ಯವಾಗಿ ಹೇ ಅಗ್ನೇ, ನಾವು ಅರ್ಪಿಸಿದ ಘೃತವನ್ನು ನೀನು ಪಾನ ಮಾಡಿ, ರುಚಿಕರ ಗವ್ಯವಾದ ಮಧುವನ್ನು ಸೇವಿಸಿ ತಂದೆಯು ಮಗನನ್ನು ಕಾಪಾಡುವಂತೆ ಇವನನ್ನು (ಈ ಬ್ರಹ್ಮಚಾರಿಯನ್ನು) ರಕ್ಷಿಸು (ಘೃತಂ ಪೀತ್ವಾ ಮಧು ಚಾರು ಗವ್ಯಂ ಪಿತೇವ ಪುತ್ರಮಭಿರಕ್ಷತಾದಿಮಂ) ಎಂದು ಪ್ರಾರ್ಥಿಸಲಾಗಿದೆ.
ಋಷಿಗಳ ಹುಟ್ಟು
ತೈತ್ತಿರೀಯ ಆರಣ್ಯಕ(ii ೯)ದಲ್ಲಿ ಋಷಿಗಳು ಹೇಗೆ ಉಂಟಾದರೆಂಬ ವಿಷಯಕ್ಕೆ ಒಂದು ವಿವರಣೆ ಇದೆ.
ಹುಟ್ಟು ಸಾವಿಲ್ಲದ ಗೋವುಗಳು ತಪಸ್ಸನ್ನು ಮಾಡಿದಾಗ ಬ್ರಹ್ಮದೇವನು ಅವುಗಳಿಗೆ ಸರ್ವತೋಮುಖವಾದ ದೃಷ್ಟಿಯನ್ನು ಅನುಗ್ರಹಿಸಿದನು. ಅವೇ ಋಷಿಗಳಾದವು. ಇದೇ ಋಷಿಗಳ ಋಷಿತ್ವ ಎಂದಿದೆ. ಯಜ್ಞಕಾಮರಾದ ಮುಂದಿನ ಋಷಿಗಳು ವೇದಮಯಿಯಾದ ಈ ಗೋವನ್ನು
ಉಪಾಸನೆ ಮಾಡಿದಾಗ ಋಗ್ವೇದವನ್ನು ಅಧ್ಯಯನ ಮಾಡಿದವನು ಹಾಲಿನ ನದಿಯ ದಡದಲ್ಲಿಯೂ,
ಯಜುರ್ವೇದಾಧ್ಯಾಯಿಯು ತುಪ್ಪದ ನದಿಯ ದಡದಲ್ಲಿಯೂ, ಸಾಮವೇದಾಧ್ಯಾಯಿಯು ಸೋಮರಸಪ್ರವಾಹದ ದಡದಲ್ಲಿಯೂ, ಅಥರ್ವವೇದಾಧ್ಯಾಯಿಯು ಜೇನಿನ ನದಿಯ
ದಡದಲ್ಲಿಯೂ ಇದ್ದು ತಮ್ಮ ಪಿತೃಗಳಿಗೆ ಸ್ವಧಾಕಾರದಿಂದ ತೃಪ್ತಿಯನ್ನು ಉಂಟುಮಾಡುವರು. ತೃಪ್ತರಾದ ದೇವತೆಗಳು ಅವರಿಗೆ ಆಯುಷ್ಯ, ತೇಜಸ್ಸು, ವರ್ಚಸ್ಸು, ಐಶ್ವರ್ಯ, ಯಶಸ್ಸು, ಬ್ರಹ್ಮವರ್ಚಸ್ಸು, ಆಹಾರ ಸಮೃದ್ಧಿಗಳನ್ನು ಕೊಟ್ಟು ತೃಪ್ತಿಪಡಿಸುವರು – ಎಂದು ಹೇಳಿದೆ.
ಧರ್ಮಕ್ಕೆ ವಿರುದ್ಧವಲ್ಲದ ಅರ್ಥವು ಹಾಲಾಗಿಯೂ, ಕಾಮವು ಮೊಸರಾಗಿಯೂ, ಧರ್ಮವೇ ಬೆಣ್ಣೆಯಾಗಿಯೂ, ಮೋಕ್ಷವು ತುಪ್ಪವಾಗಿಯೂ, ಬ್ರಹ್ಮಜ್ಞಾನಕ್ಕೆ ಸಂಕೇತವಾಗಿಯೂ ವೇದಗಳಲ್ಲಿ ಹಲವೆಡೆ ಬಂದಿದೆ ಎಂದು ಉಲ್ಲೇಖಿಸುವ ಪ್ರೊ| ಕೆ.ಎಸ್. ನಾರಾಯಣಾಚಾರ್ಯರು, ಇಂತಹ ಗವ್ಯಗಳನ್ನು ಅನುಗ್ರಹಿಸುವ ಜ್ಞಾನಸ್ವರೂಪಿಣಿಯೂ, ಲೋಕಮಾತೆಯೂ, ವಾಕ್ಸ್ವರೂಪಿಣಿಯೂ ಆದ
ಕಾಮಧೇನುವು ಅನಂತಮಹಿಮಳಾದ ಅದಿತಿಯಾಗಿದ್ದು, ಅವಳಿಗೆ ಎಂದೆಂದೂ ರೋಗಸಂಬಂಧವೇ ಇಲ್ಲ; ಅವಳನ್ನು ಕೊಲ್ಲತಕ್ಕದ್ದಲ್ಲವೆಂದು ವೇದವೇ ಆದೇಶ ನೀಡಿದೆ (ಮಾ ಗಾಂ ಅನಾಗಾಂ ಅದಿತಿಂ ವಧಿಷ್ಠ) ಎಂದು ಉಲ್ಲೇಖಿಸುತ್ತಾರೆ. ಭಾರತೀಯ ಸಂಸ್ಕೃತಿಯ ಉನ್ನತಿ ಅವನತಿಗಳು ಗೋವಿನ
ಉನ್ನತಿ ಅವನತಿಗಳನ್ನು ಆಶ್ರಯಿಸಿವೆ ಎಂದೂ ಹೇಳುತ್ತಾರೆ. ಅಂತಹ ಒಂದು ಕಾಲಘಟ್ಟದಲ್ಲಿ ನಾವಿಂದು ಬಂದು ನಿಂತಿದ್ದೇವಲ್ಲವೆ?
ಅಧುನಿಕ ಯುಗದ ಜನತೆಗೆ ಗೋವಿನ ಮಹತ್ವದ ಬಗ್ಗೆ ತಿಳಿಯಲು ನಿಮ್ಮ ಪರಿಶ್ರಮ ಅಪಾರವಾದದ್ದು
ಶ್ರೀ ಪಾಂಡವಾಸ್ ಫೌಂಡೇಷನ್ ರವರ ಭಾರತೀಯ ಗೋ ಉದ್ಯಾನವನ ಮತ್ತು ಗೋ ವಿಜ್ಞಾನ ಕೇಂದ್ರ ದ ವತಿಯಿಂದ ನಿಮಗೆ ಅನಂತ ಅನಂತ ಧನ್ಯವಾದಗಳು
ಕೇವಲ ₹ 1000 /- (5 ವರ್ಷಕ್ಕೆ) & 1 ವರ್ಷಕ್ಕೆ – ₹ 220 /-
ಬ್ಯಾಂಕ್ ಖಾತೆ ಮೂಲಕಚಂದಾದಾರರಾಗಿ
ಕೆಳಗೆ ಸೂಚಿಸಲಾದ ಬ್ಯಾಂಕ್ ಖಾತೆಗೆ ಚಂದಾಹಣವನ್ನು (ವಾರ್ಷಿಕ ಚಂದಾ ಕೇವಲ ರೂ. 220/- ಮಾತ್ರ) NEFT/RTGS ಮೂಲಕ ಪಾವತಿಸಿ.
ಬ್ಯಾಂಕ್ ಹೆಸರು: HDFC Bank Ltd, ಕಾವೇರಿ ಭವನ ಶಾಖೆ, ಬೆಂಗಳೂರು
ಖಾತೆದಾರರ ಹೆಸರು : UTTHANA TRUST
IFSC CODE: HDFC0000509
A/C No: 50100283886338
ನಿಮ್ಮಿಂದ ಚಂದಾ ಹಣವನ್ನು ಸಂಗ್ರಹಿಸಿದ ನಂತರ ನಿಮ್ಮ ಉತ್ಥಾನವನ್ನು ನಿಮ್ಮ ವಿಳಾಸಕ್ಕೆ POST ಮೂಲಕ ಕಳಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ನಿಮ್ಮಆಯ್ಕೆಯ ಯಾವುದೇ ಪುಸ್ತಕದ ಕುರಿತು ಪುಸ್ತಕವಿಮರ್ಶೆ ಬರೆದು ಕಳುಹಿಸಿ. ಆಯ್ಕೆಯಾದ ವಿಮರ್ಶೆಗೆ ಸೂಕ್ತ ಸಂಭಾವನೆ ಇದೆ ಇಮೇಲ್: [email protected]
ಅಧುನಿಕ ಯುಗದ ಜನತೆಗೆ ಗೋವಿನ ಮಹತ್ವದ ಬಗ್ಗೆ ತಿಳಿಯಲು ನಿಮ್ಮ ಪರಿಶ್ರಮ ಅಪಾರವಾದದ್ದು
ಶ್ರೀ ಪಾಂಡವಾಸ್ ಫೌಂಡೇಷನ್ ರವರ ಭಾರತೀಯ ಗೋ ಉದ್ಯಾನವನ ಮತ್ತು ಗೋ ವಿಜ್ಞಾನ ಕೇಂದ್ರ ದ ವತಿಯಿಂದ ನಿಮಗೆ ಅನಂತ ಅನಂತ ಧನ್ಯವಾದಗಳು