ಹೌದು…ಅಮೆರಿಕೆಯಲ್ಲಿ ಎಲ್ಲಾ ಎಲ್ಲಾ ಎಲ್ಲಾ ಇವೆ; ಆದರೆ ಭಾರತೀಯರಾದ ನಮ್ಮ ಗಂಗಾಳ ಊಟದ ಸುಖ , ಬಿದಿರಬುಟ್ಟಿಯ ಕೊಂತೀರೊಟ್ಟಿ, ಕೂಡುಕುಟುಂಬದ ಪ್ರೀತಿ , ಸಮಾಜ ಜಂಗಮದ ಸಮಸ್ತರೊಂದಿಗೆ ಒಡನಾಟ , ಯವ್ವಾ-ಯಕ್ಕಾ-ಯಣ್ಣಾ-ಕಾಕಾ-ಮಾವಾ-ಚಿಗಪ್ಪಾ-ದೊಡ್ಡಪ್ಪಾ-ದೊಡ್ಡಮ್ಮಾ ಮುಂತಾದ ಕಳ್ಳಬಳ್ಳಿಯ ಮಾತುಗಳು , ಸಾಂಸ್ಕೃತಿಕ ತೇರು , ಪಾಲ್ಕಿ-ಜಾತ್ರಿ , ಪುರಾಣ-ಕೀರ್ತನ-ಪುಣ್ಯಕಥೆಗಳ ಸುಖ ಅಲ್ಲಿ ಇಲ್ಲ ಇಲ್ಲ ಇಲ್ಲ!
ಕರ್ನಾಟಕದ ಊಟಕ್ಕೂ ಅಮೆರಿಕೆಯ ಊಟಕ್ಕೂ ಪುಡಿಕಾಸು-ಪುಂಡೀಪಲ್ಲೇದ ಸಂಬಂಧವೂ ಇಲ್ಲ!
ಕನ್ನಡದ ಎಲ್ಲ ಊಟಗಳೂ ಅಡುಗೀಮನೆಯ ಒಲೀತಗ್ಗಿನಿಂದ ಬರುತ್ತವೆ; ಅಮೆರಿಕೆಯ ಆಹಾರಗಳೆಲ್ಲವೂ ಫ್ಯಾಕ್ಟರಿಗಳ ಸಾವಿರ-ಲಕ್ಷ ಫುಡ್ ಪ್ರಾಡಕ್ಟ್ಸ್ ಡಬ್ಬಿಗಳಿಂದ ದಾಳಿಯಿಟ್ಟು ಬರುತ್ತವೆ!
ನಮ್ಮ ಉಪ್ಪು, ಉಪ್ಪಿನಕಾಯಿ, ನಿಂಬೀಹಣ್ಣು, ಮೆಣಸಿಂಡಿ, ಸಾವಿರಗಟ್ಲೆ ಚಟ್ನಿ, ಪಲ್ಲೆ, ಬೆಲ್ಲ, ಬ್ಯಾಳಿ, ಜೀರಿಗಿ, ಹಿಂಗು, ಸಾಸಿವೆ ಇವೆಲ್ಲಾ ಈಗ ಅಲ್ಲಿ ಫ್ಯಾಕ್ಟರಿಯ ಬ್ರಹ್ಮಾಂಡ ರಾಕ್ಷಸನ ಹೊಟ್ಟೆಯಿಂದಲೇ ಬರುತ್ತವೆ ಅಂದರೆ ನೀವು ನಂಬುತ್ತೀರಾ? ಓಹ್! ನಂಬಲೇಬೇಕು! ಇದು ಅಮೆರಿಕೆಯಲ್ಲಿ ಸತ್ಯ! ಇಂಡಿಯಾದಲ್ಲಿ ಮಿಥ್ಯ!
ಇದೀಗ ಕರ್ನಾಟಕಕ್ಕೆ ಫಾಸ್ಟ್ಫುಡ್ ಎಂಟ್ರೀ ಕೊಟ್ಟಿದೆ. ಆದರೆ ಅಮೆರಿಕೆಯದ್ದು ಫಾಸ್ಟೆಸ್ಟ್ ಫುಡ್ ಕಲ್ಚರ್!
ಢುಂಢುಂ ಢಿಮಿಕ್ಯಾ ಬ್ರೆಡ್ಡಿನಲ್ಲಿ [ಹಾಟ್ಡಾಗ್ ಬ್ರೆಡ್ಡು] ಅದರ ಹೊಟ್ಟೆ ಕೊಯ್ದು; ಅದರಲ್ಲಿ ನೂರು-ಸಾವಿರ-ಲಕ್ಷ ನಮೂನೆಯ ಫ್ಯಾಕ್ಟರಿಯ ಪಡಿಪದಾರ್ಥಗಳನ್ನೆಲ್ಲಾ ಪದರು-ಪದರಾಗಿ ತುಂಬಿ; ಅದನ್ನು ’ಗ್ರಿಲ್’ ಒಲೆಯಲ್ಲಿ ಇಟ್ಟರೆ ಒಂದು ಮಿನಿಟಿನಲ್ಲಿ ನಿಮಗೆ ಇಚ್ಛಾವತ್ ಬಿಸಿಬಿಸಿ ಊಟ ರೆಡಿ. ಆದ್ದರಿಂದ ಅವಸರದ ದೇಶ ಅಮೆರಿಕೆಯಲ್ಲಿ ಓಡುತ್ತಲೇ; ಒಂದು ಕೈಯಲ್ಲಿ ’ಹಾಟ್ಡಾಗ್ ಬ್ರೆಡ್ಡು’; ಇನ್ನೊಂದು ಕೈಯಲ್ಲಿ ಟಂಬ್ರೆಲಾ ಗಾತ್ರದ ಹಣ್ಣಿನ ರಸದ ಬಾಟಲು ಹಿಡಿದು ಓಡುತ್ತಲೇ ತಿಂದುಂಡು ಮುಗಿಸುತ್ತಾರೆ.
ಬೆಂಗಳೂರಲ್ಲಿ ರೋಡಿನ ಪಕ್ಕದ ಜನರ ಕಾಲ್ದಾರಿಗಳ ಮೇಲೂ ದ್ವಿಚಕ್ರವಾಹನಗಳು ಕಾರುಗಳು ಏರಿ ಹಾರಿ ತೂರಿ ಹೋಗುತ್ತವೆ. ಆದರೆ ಅಮೆರಿಕೆಯ ದಾರಿಯ ಪಕ್ಕದ ಕಾಲ್ದಾರಿಗಳೆಂದರೆ ಹಸಿರು-ಹೂವಿನಿಂದ ಎಷ್ಟು ಸುಂದರ ಇರುತ್ತವೆಯೆಂದರೆ; ನಮ್ಮ ವರ್ಣರಂಜಿತ ಸಿನೆಮಾಗಳ ನಾಯಕಿನಟಿಯ ಬೈತಲೆಗಿಂತಲೂ ಭೇಸಿ. ಆ ಕಾಲ್ದಾರಿಗಳ ಅಕ್ಕಪಕ್ಕದಲ್ಲಿ ಕೋಟಿಕೋಟಿ ಸಂಖ್ಯೆಯ ಗುಲಾಬಿಗಳು – ಫಲಪು?ಗಳು ಕೊಡ ತುಂಬಿ ನಿಂತಿರುತ್ತವೆ. ಆ ಹಣ್ಣು-ಹೂಗಳನ್ನು ಒಬ್ಬರೂ ಕೈಯಿಂದ ಕೂಡಾ ಮುಟ್ಟುವುದಿಲ್ಲ. ದಾರಿಯಂತೂ ನುಣುಪೋ ನುಣುಪು. ಹೀಗಾಗಿ ಅಮೆರಿಕೆಯ ಯಾವ ಊರಿನ ಯಾವ ದಾರಿ ನೋಡಿದರೂ ಅಲ್ಲಿ ಗಂಧರ್ವಲೋಕದಿಂದ ದಾರಿತಪ್ಪಿ ಬಂದ ಅಪ್ಸರೆಯೊಬ್ಬಳು ಈ ಢುಮಿಕ್ಯಾ ಬ್ರೆಡ್ಡು ತಿನ್ನುತ್ತ; ಚಡ್ಡಿಯ ಮೇಲೆ ಓಡುತ್ತಿರುವ ದೃಶ್ಯ ಗ್ಯಾರಂಟಿ!
ಕೇಳಿರಿ ಕಥೆಯಾ
ಹಾಂ! ಈ ಢುಂಢುಂ ಢುಮಿಕ್ಯಾ ಬ್ರೆಡ್ಡಿನ ಕಥೆ ಕೇಳಿರಿ. ಇವೆಲ್ಲಾ ಫ್ಯಾಕ್ಟರಿಯಿಂದಲೇ ಬಂದ ಪಡಿಪದಾರ್ಥಗಳು. ಈ ’ಹಾಟ್ಡಾಗ್’ ಬ್ರೆಡ್ಡನ್ನು ಹರಿತವಾದ ಚಾಕುವಿನಿಂದ ಉದ್ದುದ್ದ ಸೀಳು ಸೀಳಿ; ಅದರಲ್ಲಿ ತುಂಬಬಾರದ ಜಗತ್ತನ್ನೆಲ್ಲ ತುಂಬುತ್ತಾರೆ. ಮಾಂಸಾಹಾರಿಗಳಂತೂ ಮಾಂಸ-ಮೀನ-ತತ್ತಿಗಳ ಉತ್ಪಾದನೆಯ ಎಲ್ಲಾ ವಗ್ಗರಣೆ-ಬಗ್ಗರಣೆಯ ದಿನಸಿಗಳನ್ನು ಫ್ಯಾಕ್ಟರಿಯ ಪ್ರೊಡಕ್ಟ್ಸ್ ಬಾಟಲುಗಳಿಂದಲೇ ತುಂಬಿ; ತಿನ್ನುತ್ತ ಸಾಗುತ್ತಾರೆ.
ನಮ್ಮ ಗಂಗಾಳ – ಮಣಿ – ಅಡ್ಡುಣಿಗಿ – ತಂಬಿಗಿಗಳ ಕಾಲ ಹೋತು; ಓಡುತ್ತ ಉಣ್ಣುವ ಕಾಲ ಬಂತು.
ಅಮೆರಿಕೆಯಲ್ಲಿ ಏನೇ ಮಾಡಿದರೂ ಅದರಲ್ಲಿ ಅಪ್ಪಟ ಕಾಯಕನಿ?, ಅಚ್ಚುಕಟ್ಟುತನ, ತನ್ಮಯತೆ ಪ್ರಶ್ನಾತೀತ. ನಾವು ಮನೆಯನ್ನು ಸ್ವಚ್ಛ ಇಟ್ಟಂತೆ ಅವರು ಊರನ್ನೂ ಸ್ವಚ್ಛ ಇಡುತ್ತಾರೆ. ಸ್ವಚ್ಛತೆ-ಶುದ್ಧತೆಗಳೇ ಅವರ ದೇವರಮನೆ ಅಂತ ಧೈರ್ಯವಾಗಿ ಹೇಳಬಹುದು.
ಮಾಂಸಾಹಾರಿಗಳೊಂದಿಗೆ ಅಮೆರಿಕೆಯಲ್ಲಿ ನಿಮಗೆ ’ವೀಗನ್’ಗಳೂ ಸಿಗುತ್ತಾರೆ. ವೀಗನ್ ಅಂದರೆ ಸಂಪೂರ್ಣ ಶಾಖಾಹಾರಿಗಳು. ಅಮೆರಿಕೆಯಲ್ಲಿ ಈ ವೀಗನ್ಗಳ ಅಂಗಡಿ, ಫ್ಯಾಕ್ಟರಿ, ಪತ್ರಿಕೆಗಳು, ಪುಸ್ತಕಸಾಹಿತ್ಯ, ಅಸೋಸಿಯೇಶನ್ಸ್, ಮೀಟಿಂಗ್, ಕಾನ್ಫರನ್ಸ್ ಇರುತ್ತವೆ. “ವೀಗನ್ ಅಂದರೆ ಅದು ಧರ್ಮ ಅಲ್ಲ; ವೀಗನ್ ಅಂದರೆ ಅದು ಜೀವನಶೈಲಿ” – ಅಂತ ನಮ್ಮ ಸೊಸೆ ಜಸ್ಸೀಕಾ ಹೇಳುತ್ತಾಳೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಎಂಕಾಮ್, ಸಿಎ ಆದ ಅವಳು, ಅವಳ ತಾಯಿ, ಅವಳ ಸಹೋದರಿಯರು, ಅವರ ಮಕ್ಕಳು ಎಲ್ಲರೂ ಕಟ್ಟುನಿಟ್ಟಿನ ವೀಗನ್ಗಳು.
ಹಾಂ! ಒಂದು ಮಾತು ನೀವು ಅವಶ್ಯ ತಿಳಿದಿರಲೇಬೇಕು. ಏನೆಂದರೆ ನಮ್ಮ ಶಾಖಾ ಆಹಾರಕ್ಕೂ ಅಮೆರಿಕೆಯ ವೀಗನ್ ಆಹಾರಕ್ಕೂ ಸ್ಪ? ಅಂತರವಿದೆ. ಅಮೆರಿಕೆಯ ಈ ವೀಗನ್ನರು ಹಾಲು-ಮೊಸರು-ಬೆಣ್ಣೆ-ತುಪ್ಪ ತಿನ್ನುವುದಿಲ್ಲ. ಏಕೆಂದರೆ ಅವೆಲ್ಲ ಮಾಂಸಜನ್ಯ ಪದಾರ್ಥಗಳು; ಹಾಗಂತ ಅವರ ನಂಬಿಕೆ. ಆದರೆ ಅವರು ಹಾಲಿನ ಬದಲು ಸೋಯಾಬೀನ್ ಹಾಲು, ಕೋಕೋನಟ್ ಹಾಲು, ಗೋಡಂಬಿ ಹಾಲು; ಸೇಂಗಾದಿಂದ ತಯಾರಿಸಿದ ಬೆಣ್ಣೆ, ವನಸ್ಪತಿ ತುಪ್ಪ ಸೇವಿಸುತ್ತಾರೆ. ಹುಂ…. ಇನ್ನೂ ಮಜಾ…. ವೀಗನ್ ಆದ ನಮ್ಮ ಸೊಸೆ ರೇಶಿಮೆ ಸೀರೆ ಉಡುವುದಿಲ್ಲ; ಅದು ರೇಶಿಮೆ ಹುಳ ಕೊಂದು ತಯಾರಾಗಿರುತ್ತದೆ; ಕಾಲಲ್ಲಿ ಚರ್ಮ ಚಪ್ಪಲಿ ತೊಡುವುದಿಲ್ಲ; ಅಲ್ಲಿಯೂ ಪ್ರಾಣಿವಧೆ ಇರುತ್ತದೆ. ಜೇನುತುಪ್ಪ ಸೇವಿಸುವುದಿಲ್ಲ: ಕಾರಣ ಅಲ್ಲಿ ಜೇನುಹುಳಗಳ ನಾಶ ಆಗಿರುತ್ತದೆ. ಅವಳು ಕರ್ನಾಟಕಕ್ಕೆ ಬಂದರೆ ನುಗ್ಗೆಸಾರು, ಮಾವಿನ ಶೀಕರಣಿ ಬಹಳ ಇಷ್ಟ ಪಡುತ್ತಾಳೆ. ನಮ್ಮ ಮನೆಯ ಸಾರಿನ ನುಗ್ಗೆಹೋಳು ಎಲ್ಲಾ ಅವಳಿಗೇ ಬೇಕು.
ಫ್ಯಾಕ್ಟರಿ ಗಾಳಕ್ಕೆ ಸಿಕ್ಕರೆ ಕೇಳ್ರಿ; ದೇವರ ಮೇಲೆ ಕೈಯಿಟ್ಟು ಆಣೆಮಾಡಿ ಹೇಳಬೇಕೆಂದರೆ; ಕರ್ನಾಟಕದ ಜನರ ಊಟದ ಸುಖ ಅಮೆರಿಕೆ-ಇಂಗ್ಲಂಡ್-ಹಾಲೆಂಡ್-ಮೆಕ್ಸಿಕೋ-ಯೂರೋಪ್ ದೇಶಗಳಲ್ಲಿ ಖಂಡಿತಾ ಇಲ್ಲ. ಈ ಮುಂದುವರಿದ ರಾ?ಗಳೆಲ್ಲ ಫ್ಯಾಕ್ಟರಿಯ ಊಟದ ತಯಾರಿ ಪ್ರೊಡಕ್ಟ್ಸ್ಗಳಿಗೆ ತಮ್ಮನ್ನು ಮಾರಿಕೊಂಡುಬಿಟ್ಟಿದ್ದಾರೆ. ಖಾರ, ಚಟ್ನಿ, ಸಾಂಬಾರ, ಉಪ್ಪಿಟ್ಟು, ಅವಲಕ್ಕಿ ಎಲ್ಲಾ ಈ ಡಬ್ಬಿಗಳ ಸೃಷ್ಟಿ. ಅಬ್ಬಾ…. ನನಗೆ ಹೀಗೂ ಅನಿಸುತ್ತದೆ; ನಾಳೆ ನಮ್ಮ ಜೋಳದ ರೊಟ್ಟಿ, ಪುಂಡಿಪಲ್ಲೆ ಇವರ ಫ್ಯಾಕ್ಟರಿಯ ಗಾಳಕ್ಕೆ ಸಿಕ್ಕರೆ! ಅವರು ಅದೇ ಜೋಳದರೊಟ್ಟಿ- ಪುಂಡೀಪಲ್ಲೆಗಳನ್ನು ಫ್ಯಾಕ್ಟರಿಯಲ್ಲಿ ಮರುಪ್ರೊಡ್ಯೂಸ್ ಮಾಡಿ, ಸೀಲ್ ಮಾಡಿ; ’ಜೋಳೆಂಡೋ’, ’ಪುಂಡೋಪಾಂಡೋ’ ಅಂತ ನಮಗೇ ಮಾರುತ್ತಾರೆ! ಈಗಾಗಲೇ ನಮ್ಮ ಬೆಲ್ಲ, ಬ್ಯಾಳಿ, ಹಪ್ಪಳ, ಉಪ್ಪಿನಕಾಯಿ, ಹುಳಿ, ಖಾರ, ಕರಿಂಡಿ, ಚಟ್ನಿಗಳೆಲ್ಲ ಅವರ ಫ್ಯಾಕ್ಟರಿಗಳಲ್ಲಿ ಪ್ರೊಸೆಸ್ ಆಗಿ, ಸೀಲ್ಡ್ ಡಬ್ಬದಲ್ಲಿ ಯರ್ರಾಬಿರ್ರಿ ಸಿಗುತ್ತವೆ. ಈ ಡಬ್ಬಗಳ ಪಡಿಪದಾರ್ಥಗಳನ್ನೇ ಅವರು ಹಾಟ್ಡಾಗ್ ಢುಮಿಕ್ಯಾ ಬ್ರೆಡ್ಡಿನಲ್ಲಿ ತುಂಬಿ-ತುರುಕಿ ತಿನ್ನುವುದೇ ಊಟ ಅಂತ ತಿಳಿದಿದ್ದಾರೆ. ಆದರೆ ನಮ್ಮ ಭಾರತೀಯರಿಗೆ ಅವರು “ನೀವು ಸ್ಪೈಸೀ ಈಟರ್ಸ್” ಅಂತ ಅಂಜುತ್ತಾರೆ. ಆದರೆ ಈ ಹಾಟ್ಡಾಗ್ ಬ್ರೆಡ್ಡಿನಲ್ಲೂ ಅವರು ಅವರವರ ರುಚಿಗನುಸಾರವಾಗಿ ಸ್ಪೈಸೀ ಪದಾರ್ಥ ತುಂಬಿಕೊಡುತ್ತಾರೆ. ಎ?ಸಲ ಈ ಹಾಟ್ಡಾಗ್ ಬ್ರೆಡ್ಡುಗಳನ್ನು ತಿಂದು ನಾವೂ ಹಾಹೂ ಅಂದದ್ದೂ ಇದೆ!
ಈ ಹಾಟ್ಡಾಗ್ ಬ್ರೆಡ್ಡಿನ ಕಥೆ ಕೇಳಿರಿ. ಹಾಟ್ಡಾಗ್ ಅಂದರೆ ಅದರಲ್ಲಿ ಡಾಗನ್ನೆ ಹಾಕಿ ಮಾಡುತ್ತಾರೋ ಅಂತ ಮೊದಮೊದಲು ಅಂಜಿದ್ದೆ. ಇದು ಅವರ ಪ್ರಾಣಿಗಳ ಮೇಲಿನ ಅಪ್ಪಟ ಪ್ರೀತಿ. ನಾಯಿ, ಬೆಕ್ಕುಗಳಿಗೆ ಮನು?ರಿಗಿಂತ ಹೆಚ್ಚಿಗೆ ಖರ್ಚು ಮಾಡುತ್ತಾರೆ. ನಮ್ಮಂತೆಯೆ ಅವುಗಳಿಗೆ ಆಹಾರ, ವಿಹಾರ, ವಿಶ್ರಾಂತಿ, ಮೆಡಿಕಲ್ ಚೆಕಪ್, ಡೈಟಿಂಗ್ ಎಲ್ಲಾ ಉಂಟು. ಈ ಹಿಡಿಂಬೆ ಬ್ರೆಡ್ಡುಗಳನ್ನು ಅತ್ಯುತ್ತಮ ಮೈದಾ, ಗೋಧಿ ಇತ್ಯಾದಿ ಹಿಟ್ಟುಗಳಿಂದ ತಯಾರಿಸುತ್ತಾರೆ. ಈ ಬ್ರೆಡ್ಡುಗಳೂ ಸೀಲ್ಡ್ ಪ್ಯಾಕ್ನಲ್ಲೇ ಬರುತ್ತವೆ. ಹೀಗಾಗಿ ಅಡಲ್ಟ್ರೇಶನ್ನಿನ ಸುಡುಗಾಡು ಸಿದ್ದನಮಠದ ಭಯ ಇಲ್ಲ. ಈ ಬ್ರೆಡ್ಡುಗಳನ್ನು ಮೊದಲು ಗ್ರಿಲ್ಒಲೆಯ ಮೇಲೆ ಇಟ್ಟು ಬಿಸಿಮಾಡುತ್ತಾರೆ. ಈ ಒಲೆಗಳು ಪೋರ್ಟೆಬಲ್ ಕೂಡ ಸಿಗುತ್ತವೆ. ವಾರಾಂತ್ಯದಲ್ಲಿ ಆರ್ಯಾಣ-ಪರ್ಯಾಣ ಅಂತ ಅಡವೀ ಸುತ್ತಿ ಅಲ್ಲೀಕೇರಿ ಮಾಡುವುದು ಅಮೆರಿಕೆಯ ಹುಡುಗ- ಹುಡುಗಿಯರ ಹೌಸೀ. ಈ ಹಗುರವಾದ ಗ್ರಿಲ್ ಒಲೆಗಳನ್ನು ತಮ್ಮೊಂದಿಗೆ ಎಲ್ಲಿಗೆ ಬೇಕೋ ಅಲ್ಲಿಗೆ, ಅಲ್ಲೀಕೇರಿ ಸ್ಪಾಟಿಗೆ ಒಯ್ಯುತ್ತಾರೆ. ಇಂಥ ಗ್ರಿಲ್ಒಲೆಗಳಲ್ಲಿ ಬಿಸಿಮಾಡಿದ ಬ್ರೆಡ್ಡುಗಳನ್ನು ಹರಿತವಾದ ಚಾಕುಗಳಿಂದ ಉದ್ದುದ್ದ ಹೆಚ್ಚಿ ಕೊರಕಲು ಮಾಡುತ್ತಾರೆ. ಅದರ ಹೊಟ್ಟೆಯಲ್ಲಿ ಕಡುಬಿಗೆ ಹೂರಣ ತುಂಬಿದಂತೆ; ಬೇಯಿಸಿ ಬಿಸಿಮಾಡಿದ ಸಾಸೇಜ್ ಮಾಂಸ ಅಥವಾ ಸಾಸೇಜ್ ವ್ಹೆಜಿಟೆಬಲ್, ಟೊಮ್ಯಾಟೊ ಕೆಚಪ್, ’ಮಸ್ಟರ್ಡ್ ಪೇಸ್ಟ್’ ಆಯಿಲ್, ತತ್ತಿ-ಬೆಣ್ಣೆಗಳಿಂದ ಕೂಡಿದ ’ಮೆಯೋನೇಜ್ ಚೀಜ್’, ಸೌತೆಕಾಯಿ ಉಪ್ಪಿನಕಾಯಿ ತರಹದ ’ರೆಲಿಶ್’, ಕ್ಯಾಬೀಜನ್ನೇ ಉಪ್ಪಿನಕಾಯಿ ತರಹ ಪರಿವರ್ತಿಸಿದ ’ಸಾವರ್ ಕ್ರೌಟ್’, ಗೊಂಜಾಳದ ಕಾರ್ನ್ಕಾಬ್; ಮೇಲೆ ಬಾಯಾಡಿಸಲು ಹಪ್ಪಳದಂಥ ’ಸೀಸಾಲ್ಡ್’ ಮತ್ತು ’ವೆನೇಗರ್’ ಇವೆಲ್ಲವನ್ನೂ ಕೂಡಿಸಿ ತಿನ್ನುತ್ತ, ಮೇಲೆ ನಾವು ಸಾರು ಕುಡಿದಂತೆ ಬೀರ್ ಮತ್ತು ಸಾಫ್ಟ್ಡ್ರಿಂಕ್ಸ್ ಕುಡಿಯುತ್ತಾರೆ. ಮಾಂಸಾಹಾರಿಗಳಲ್ಲದವರು ಈ ಹಾಟ್ಡಾಗ್ ಬ್ರೆಡ್ಡಿನಲ್ಲಿ ಶಾಖಾಹಾರದ ಫ್ಯಾಕ್ಟರಿಯಿಂದ ಪ್ರೊಸೆಸ್ ಆದ ನೂರಾರು ತರಹದ ರೆಡಿಪೇಸ್ಟ್ಗಳನ್ನು ಸೇರಿಸುತ್ತಾರೆ. ನಮ್ಮ ಕೈಯಲ್ಲೇ ಇದೊಂದು ದೆವ್ವದ ಅವ್ವನ
ಊಟ! ಊಟದ ಆಟ!
ಊಟ ಅಂದರೆ ಚಕ್ಕಂಬಕ್ಕಳು ಕುಂತು ಬಕ್ಕಳಾಗಿ ಭುಂಜಿಸುವ ನಮ್ಮ ಅಲ್ಲೀಕೇರಿಯ ಊಟ ಎತ್ತ? ಅವರ ಫ್ಯಾಕ್ಟರಿ ಯಂತ್ರೋತ್ಪನ್ನಗಳನ್ನೇ ಕಚಪಿಚಿ ತಿನ್ನುವ ಯಾಂತ್ರಿಕ ಪಿಕನಿಕ್ ಎತ್ತ! ಹುಬ್ಬಳ್ಳಿ ತಿಮ್ಮಸಾಗರ ಗುಡಿಗೆ ೭೦ ವ?ಗಳ ಹಿಂದೆ ಅಲ್ಲೀಕೇರಿಗೆ ಹೋದಾಗ ಹುಬ್ಬಳ್ಳಿ ಮಹಿಳೆಯರು ಬಳ್ಳಿಗೈ ಕಟ್ಟಿ… “ಗುಜ ಗುಜ ಮಾಪುರ ಗುಜಾರಿಗೋ ಗುಜಾರ ಮಾಪುರ ಗುಜಾರಿಗೋ….” ಅಂತ ಹಾಡಿ ಕುಣಿದ ಆ ದೃಶ್ಯ ಇಂದಿಗೂ ಮರೆಯಲಾರೆ!
ಓ ಹೌದು…. ಅಮೆರಿಕೆಯಲ್ಲಿ ಎಲ್ಲಾ ಎಲ್ಲಾ ಎಲ್ಲಾ ಇವೆ; ಆದರೆ ಭಾರತೀಯರಾದ ನಮ್ಮ ಗಂಗಾಳ ಊಟದ ಸುಖ, ಬಿದಿರಬುಟ್ಟಿಯ ಕೊಂತೀರೊಟ್ಟಿ, ಕೂಡುಕುಟುಂಬದ ಪ್ರೀತಿ, ಸಮಾಜ ಜಂಗಮದ ಸಮಸ್ತರೊಂದಿಗೆ ಒಡನಾಟ, ಯವ್ವಾ- ಯಕ್ಕಾ-ಯಣ್ಣಾ-ಕಾಕಾ-ಮಾವಾ-ಚಿಗಪ್ಪಾ-ದೊಡ್ಡಪ್ಪಾ-ದೊಡ್ಡಮ್ಮಾ ಮುಂತಾದ ಕಳ್ಳಬಳ್ಳಿಯ ಮಾತುಗಳು, ಸಾಂಸ್ಕೃತಿಕ ತೇರು-ಪಾಲ್ಕಿ-ಜಾತ್ರಿ, ಪುರಾಣ-ಕೀರ್ತನ- ಪುಣ್ಯಕಥೆಗಳ ಸುಖ ಅಲ್ಲಿ ಇಲ್ಲ ಇಲ್ಲ ಇಲ್ಲ!
ಓ ಅಮೆರಿಕವು ಇಂದು ಭಾರತದಿಂದ ಕಲಿಯುವುದು ಬಹಳ ಬಹಳ ಇದೆ! ಆದರೆ ಭಾರತದವರೇ ಇಂದು ಅಮೆರಿಕೆಯ ಬದುಕಿಗೆ ಶರಣಾಗಿರುವುದು ಎಂಥಾ ದುರಂತ! ಶಿಶುನಾಳ ಶರೀಫ…. “ಅಲ್ಲೀಕೇರಿಗೆ ಹೋಗೂನು ಬರ್ತಿರೇನ್ರೇ…. ಬಾರದಿದ್ರ ಇಲ್ಲೇ ಇರತೀರೇನ್ರೆ….” ಅಂತ ಹಾಡಿದ್ದು ಹೇಗೆ ಮರೆಯಲಿ?