ಸಮನ್ವಯವೇ ಭಾರತದ, ಭಾರತೀಯರ ವಿಶೇಷ. ಬಹುಬಗೆಯ ವಿಭಿನ್ನತೆಗಳನ್ನು ನಾವು ಮರೆಯುತ್ತೇವೆ. ಏಕನಿಷ್ಠೆಯ ದೇಶಪ್ರೇಮಕ್ಕೆ ತುಡಿಯುತ್ತೇವೆ. ಅದುವೇ ನಮಗೆ ಅತಿಸಹಜ. ಯಾಕೆಂದರೆ ನಮ್ಮೆಲ್ಲ ಕವಿಹೃದಯಗಳಲ್ಲಿ, ನಾಗರಿಕ ಚೇತನಗಳಲ್ಲಿ ಮಿಡಿಯವುದು ಒಂದೇ ’ಭಾರತದ ಆತ್ಮ’.
ನಾವು ಸಣ್ಣವರಾಗಿದ್ದಾಗ ಆಕಾಶವಾಣಿಯಿಂದ ಸೊಗಸಾದ ದೇಶಭಕ್ತಿಗೀತೆಗಳು ಆಗಿಂದಾಗ ಪ್ರಸಾರವಾಗುತ್ತಿದ್ದವು. ಎಷ್ಟೊಂದು ರಮ್ಯ ರಮಣೀಯ ಆ ಹಾಡುಗಳು! ಅಂತರಾಳದಲ್ಲಿ ಒಂದು ದಿವ್ಯಸ್ಫೂರ್ತಿಯನ್ನು ಉಕ್ಕಿಸಿಬಿಡುವ ಕಾಂತಿಯುತ ಪದಪುಂಜಗಳು. ಪುಳಕದಿಂದ ಎದೆಯುಬ್ಬಿಸುವ ಸಂಗೀತಧಾಟಿ. ಎಳೆಯರಾದ ನಾವು ಈ ಹಾಡುಗಳನ್ನೆಲ್ಲ ಕಂಠಪಾಠ ಮಾಡಿದ್ದೇ ಮಾಡಿದ್ದು; ಎಲ್ಲೆಡೆ ಸಡಗರದಿಂದ ಹಾಡಿದ್ದೇ ಹಾಡಿದ್ದು! ಶಾಲೆಯ ಕಲಾಪಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ, ಅಷ್ಟೇಕೆ, ಅಮ್ಮನೊಂದಿಗೆ ಅರಿಶಿನ-ಕುಂಕುಮಕ್ಕೆ ಹೋದಾಗ ಅಲ್ಲಿ ಹೆಂಗಳೆಯರ ಪೂಜಾಸಂದರ್ಭಗಳಲ್ಲೂ ನಮ್ಮ ದೇಶಭಕ್ತಿಯ ಪ್ರದರ್ಶನ! ಸೇರಿರುತ್ತಿದ್ದ ಎಲ್ಲರ ಮೊಗದ ಮೇಲೂ ಭಾವೈಕ್ಯತೆಯ ಒಂದು ಮೆಲು ಮಂದಹಾಸ.
ಆ ಸಂದರ್ಭದಲ್ಲಿ ’ಭಾರತೀಯರು ನಾವು ಎಂದೆಂದೂ ಒಂದೇ!’ ಅನ್ನುವ ಸುಂದರವಾದ ಹಾಡಂತೂ ತುಂಬಾ ಜನಪ್ರಿಯವಾಗಿತ್ತು. ಎಲ್ಲರ ನಾಲಿಗೆಗಳ ಮೇಲೆ ಕುಣಿದಾಡುತ್ತಿತ್ತು. ಈ ಹಾಡಿನ ಕೆಲವು ಮನೋಜ್ಞವಾದ ಸಾಲುಗಳು ಈಗಲೂ ನೆನಪಿನಲ್ಲಿವೆ –
ನೂರು ಮತ ನಮಗಿರಲಿ
ನೂರು ಮಾತಾಗಿರಲಿ
ನಾಡಿನ ಜನಮನ ನಾವೆಲ್ಲ ಒಂದೆ
ನಾಡರಕ್ಷಣೆಗಾಗಿ ನಡೆಯುವೆವು ಮುಂದೆ ||
ನಮ್ಮ ಕನ್ನಡಕವಿಗಳು ಎಷ್ಟೊಂದು ಉದಾತ್ತವಾಗಿ ಆಲೋಚಿಸಬಲ್ಲರು ಎನ್ನುವುದಕ್ಕೆ ಇಂಥ ಕವಿತೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಮಕ್ಕಳಿಗೆ ಹೇಗೋ ಉಪಾಧ್ಯಾಯರಿಗೂ ಹಾಗೆಯೇ ಈ ಹಾಡು ಬಲುಪ್ರಿಯವಾಗಿತ್ತು. ಈ ಗೀತೆಯನ್ನು ಸಮೂಹನೃತ್ಯಕ್ಕೆ ಅಳವಡಿಸಿ, ನಮಗೆ ಹೇಳಿಕೊಟ್ಟು ಶಾಲಾ ವಾರ್ಷಿಕೋತ್ಸವದಲ್ಲಿ ಮಾಡಿಸುತ್ತಿದ್ದರು. ವಿವಿಧ ರಾಜ್ಯಗಳ ಬಣ್ಣಬಣ್ಣದ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟು ಉಲ್ಲಾಸದಿಂದ ಮಕ್ಕಳು ಕುಣಿಯುತ್ತಿದ್ದರೆ ಗುರುಗಳ ಮತ್ತು ಹೆತ್ತವರ ಆನಂದಕ್ಕೆ ಎಣೆಯೇ ಇಲ್ಲ.
ಕೆಲವು ವರ್ಷಗಳ ಹಿಂದೆ ನಾನು ಅನುಭವಿಸಿದ ಒಂದು ದೇಶಪ್ರೇಮದ ಸಂತೋಷವನ್ನು ನಿಮಗೆ ಹೇಳಬೇಕು. ಉತ್ತರಭಾರತದ ಪ್ರವಾಸವನ್ನು ಮುಗಿಸಿಕೊಂಡು ನಮ್ಮೂರಿಗೆ ಹಿಂತಿರುಗಿ ಬರುವಾಗ, ಟ್ರೇನಿನಲ್ಲಿ ಕಾಲೇಜುಮಕ್ಕಳ ಗುಂಪೊಂದು ಭೇಟಿಯಾಯಿತು. ಹದಿಹರೆಯದವರ ಉಲ್ಲಾಸವನ್ನು ಕೇಳುವುದೇನು? ಆಕಾಶವೇ ಅವರ ಗುರಿ. ಇಡಿಯ ಭುಮಿಯ ಹಾಸೇ ಅವರ ನೆಲೆ. ಅವರೆಲ್ಲ ನಮ್ಮ ಸುತ್ತ ಕೂತು ಹಾಡಿದ್ದೇ ಹಾಡಿದ್ದು! ಸಂಗೀತದ ಸದ್ಗುಣವೇ ಹಾಗಲ್ಲವೇ? ಹೇಳುವವರಿಗೂ ಕೇಳುವವರಿಗೂ ಸಮಾನ ಆನಂದ! ಈ ಹಾಡುಗುಂಪಿನ ನಾಯಕಿ ಸುಪ್ರಭಾ ಅನ್ನುವ ಮುದ್ದು ಹುಡುಗಿ. ಅವಳ ನಿರ್ದೇಶನದಲ್ಲಿ ಈ ಗುಂಪು ದೆಹಲಿಯಲ್ಲಿ ಹಾಡಿದ ದೇಶಭಕ್ತಿಗೀತೆಗೆ ಅಂತರ ರಾಜ್ಯಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿತಂತೆ. ಕೇಳುತ್ತಿದಂತೆ ಮೈನವಿರೇಳಿಸುವ ಪುಳಕದ ಹಾಡು ಅದು. ಅದನ್ನು ರಚಿಸಿದ ಕವಿಯ ಹೆಸರು ಅವರಾರಿಗೂ ಗೊತ್ತಿರಲಿಲ್ಲ. ಆದರೇನು? ಕವಿಗಿಂತ ದೊಡ್ಡದು ಅವನು
ರಚಿಸಿದ ಕವನ. ಆ ದೇಶಭಕ್ತಿಗೀತೆಯ ಕೆಲವು ಸಾಲುಗಳು ಇಲ್ಲಿವೆ ನೋಡಿ –
“ಉಠೋ ಹಿಂದ್ ಕೀ ವೀರ್ ಸಪೂತೋ..
ಮಾನೇ ತುಹ್ಮೇ ಪುಕಾರಾ ಹೈ!
ಖಲಿಸ್ತಾನ್ ಕ್ಯೋ ಮಾಂಗ್ ರಹೇ ಹೋ?
ಹಿಂದುಸ್ತಾನ್ ತುಮ್ಹಾರಾ ಹೈ!
ಕಾಶಮೀರ್ ಕ್ಯೋ ಮಾಂಗ್ ರಹೇ ಹೋ? ಸಾರಾದೇಶ್ ತುಮ್ಹಾರಾ ಹೈ!
ಆವಾಜ ದೋ…ಹಮ್ ಏಕ್ ಹೈ!
ಹಿಂದೂನೆಲದ ವೀರಮಕ್ಕಳೇ..ಏದ್ದೇಳಿ.
ತಾಯಿ ನಿಮ್ಮನ್ನು ಕರೆದಿದ್ದಾಳೆ.
ಖಲಿಸ್ತಾನವನ್ನು ಯಾಕೆ ಕೇಳುತ್ತೀರಿ?
ಕಾಶ್ಮೀರ ಮಾತ್ರ ಯಾಕೆ ಬೇಕು?
ಇಡೀ ದೇಶವೇ ನಿಮ್ಮದಾಗಿದೆ!
ಏಳಿ.. ದನಿಯೆತ್ತಿ ಹಾಡಿ.. “ನಾವೆಲ್ಲ ಒಂದೇ..”
ನಮ್ಮ ದೇಶದಲ್ಲಿ ಮನುಷ್ಯನೊಬ್ಬ ನಿರ್ಮಿಸಿಕೊಳ್ಳಬಹುದಾದ ಎಲ್ಲ ಸಮಸ್ಯೆಗಳು, ಬಗೆಬಗೆಯ ಮಾಲಿನ್ಯಗಳು ತುಂಬಿಹೋಗಿರುವುದು ಸತ್ಯ. ಆದರೂ, ಇದ್ದರೂ, ನಮ್ಮ ರಾ?ಗೀತೆಯನ್ನು ಕೇಳುತ್ತಿದ್ದಂತೆ ಅದಾವುದೋ ಮಾರ್ದವತೆ, ದೇಶಪ್ರೇಮದ ಪುಳಕ, ಎಲ್ಲ ಭಾರತೀಯರ ಹೃದಯಗಳನ್ನು ಮೀಟಿಬಿಡುತ್ತವೆ.
ಈ ಭಾವ, ಈ ಪರವಶತೆ, ವರ್ಣನಾತೀತ. “ಸಾರೇ ಜಹಾಂಸೇ ಅಚ್ಛಾ.. ಹಿಂದೂಸ್ತಾನ ಹಮಾರಾ..” ಎಂಬಂಥ ಹೆಮ್ಮೆಯ ಹಾಡುಗಳು ಅಲೆಯಲೆಯಾಗಿ ತೇಲಿಬಂದಾಗ ಅದೆಷ್ಟು ಮಂದಿ ಭಾವುಕರಾಗಿ ಕಂಬನಿ ಮಿಡಿಯುತ್ತಾರೆ.
ನಮ್ಮ ದೇಶಭಕ್ತಿಗೀತೆಗಳಲ್ಲಿ ಪದೇಪದೇ ಬರುವ ಭಾವೈಕ್ಯತೆ ಅನ್ನುವ ಪರಿಕಲ್ಪನೆ ಬಹಳ ದೊಡ್ಡದು. ವಿಭಿನ್ನ ಭಾವಗಳು ಒಂದೇ ಆಗುವುದು, ಅನೇಕತೆಗಳಲ್ಲಿ ಏಕತೆ ಮೂಡುವುದು.. ಇದೇ ಅಲ್ಲವೇ ಸಮಗ್ರ ರಾಷ್ಟ್ರಪ್ರಜ್ಞೆ.
ಭಾರತೀಯತೆ ಅಥವಾ ಭಾರತೀಯಪ್ರಜ್ಞೆ ನಮ್ಮೆಲ್ಲರಲ್ಲಿ ಸಹಜವಾಗಿ ಅಂತರ್ಗತವಾಗಿದೆ. ದೇಶದ ಯಾವುದೇ ಮೂಲೆಯ ಉನ್ನತ ವ್ಯಕ್ತಿತ್ವವನ್ನು ಅಥವಾ ಸತ್ತ್ವವನ್ನು ನಾವು ಗೌರವಿಸುತ್ತೇವೆ. ಉದಾಹರಣೆಗೆ, ಮರ್ಯಾದಾ ಪುರು?ತ್ತಮ ಎಂದು ನಾವನೇಕರು ಅಭಿಮಾನಿಸುವ ಶ್ರೀರಾಮನನ್ನೇ ನೆನೆದುಕೊಳ್ಳೋಣ. ಅವನೇನು ನಮ್ಮ ಊರಿನವನೇ? ನಮ್ಮ ಭಾಷೆಯವನೇ? ನಾವವನನ್ನು ನೋಡಿದ್ದೇವೆಯೇ? ಏನೂ ಇಲ್ಲ. ದೂರದ ಅಯೋಧ್ಯೆಯಲ್ಲಿ ಹುಟ್ಟಿ ಬೆಳೆದವನು ಅವನು. ಆದರೂ ವಾಲ್ಮೀಕಿ ಕವಿ ಹೃದಯಸ್ಪರ್ಶಿಯಾಗಿ ಬಣ್ಣಿಸುವ ರಾಮನ ಸದ್ಗುಣಗಳು ಇಡೀ ದೇಶಕ್ಕೆ ಪ್ರಿಯವಾದವು. ಅವನ ಸ್ನೇಹಶೀಲತೆ, ವಚನಬದ್ಧತೆ, ಪರಾಕ್ರಮ, ವಿನಯ, ವಿವೇಚನೆ ಇವೆಲ್ಲ ಅನುಕರಣೀಯ ಗುಣಗಳಾದವು. ಯಾಕೆಂದರೆ ಈ ಎಲ್ಲ ಗುಣಗಳು ನಮ್ಮ ಮನಸ್ಸು ಬಯಸುವ ಮಾನವೀಯತೆ; ಬದುಕುವ, ಬದುಕಿಸುವ ಉದಾತ್ತತೆ. ಈ ಕಾರಣಕ್ಕಾಗಿ ರಾಮನ ಕತೆಗಳು ಇಂದಿಗೂ ಎಲ್ಲ ಭಾರತೀಯ ಭಾಷೆಗಳಲ್ಲಿ ವರ್ಣರಂಜಿತವಾಗಿ ನಿರೂಪಿತವಾಗುತ್ತಲೇ ಇವೆ.
ರಾಮಾಯಣವನ್ನು ಒಂದು ರಸಕಾವ್ಯವಾಗಿ ಚಿತ್ರಿಸಿರುವ ಕವಿ ವಾಲ್ಮೀಕಿ, ಯಾವ ದೇವಲೋಕವನ್ನೂ ಕಂಡವರಲ್ಲ. ಸಂಬಂಧಗಳನ್ನು ಮತ್ತು ಅವುಗಳ ಮಹತ್ತ್ವವನ್ನು ಮನುಷ್ಯ ನೆಲೆಯಲ್ಲಿಯೇ ಕಂಡವರು. ಹಾಗೆಯೇ ಅವುಗಳನ್ನು ಬಿತ್ತರಿಸಿದವರು ಕೂಡ. ಎಲ್ಲಿಯ ರಾಮ? ಎಲ್ಲಿಯ ಕನ್ನಡಕುಲಪುಂಗವ ಹನುಮ? “ಇನ್ನು ಮೇಲೆ ನೀನೂ ನನ್ನ ತಮ್ಮಂದಿರಲ್ಲಿ ಒಬ್ಬ.” ಎಂದು ರಾಮ ಹನುಮಂತನನ್ನು ತೋಳುಚಾಚಿ ಅಪ್ಪಿಕೊಳ್ಳುತ್ತಾನೆ. ರಾಮನ ಇಂಥ ಪ್ರೀತಿಗೆ ಮರುಳಾಗಿ ಮಾರುತಿ ತನ್ನೊಡೆಯ ಸುಗ್ರೀವನನ್ನೇ ತ್ಯಜಿಸಿ, ರಾಮನನ್ನೇ ಆತುಕೊಂಡುಬಿಡುತ್ತಾನೆ. ಈ ರೀತಿಯ ಸ್ನೇಹಸಜ್ಜನಿಕೆ ಪ್ರೀತಿ ಎಲ್ಲವೂ ಮನುಷ್ಯ ಮೌಲ್ಯಗಳೇ. ಯಾವುದೇ ದೈವತ್ವವನ್ನು ಆರೋಪಿಸಬೇಕಾಗಿಲ್ಲ.
ಇನ್ನು ದಾರ್ಶನಿಕ ಶ್ರೀಕೃಷ್ಣನ ವಿಷಯವೂ ಹಾಗೆಯೇ. ಆತನ ದಕ್ಷರಾಜಕಾರಣ, ಎಲ್ಲರನ್ನೂ ಸೆಳೆದಪ್ಪುವ ಮಾನವಪ್ರೀತಿ, ಅಸಹಾಯರಿಗೆ ತೋರುವ ಅಂತಃಕರಣ ಇವೆಲ್ಲವುಗಳಿಂದ ಜನಮನದಲ್ಲಿ ಆತ ಸ್ಥಾನವನ್ನು ಪಡೆದುಕೊಂಡ. ಆತ ಬೋಧಿಸಿದ ಭಗವದ್ಗೀತೆ ರಾಷ್ಟಮಾನ್ಯವೇ ಆಯಿತು. ಆದರೆ ಅದರಲ್ಲಿರುವ ಮನಸ್ಸನ್ನು ಎತ್ತಿಕಟ್ಟುವಂಥ, ಬಾಳಿಗೆ ಭರವಸೆ ತುಂಬುವಂಥ ಮಾತುಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು. ಆಯ್ಕೆ ಅವರವರಿಗೆ ಬಿಟ್ಟಿದ್ದು. ಶ್ರೀಕೃಷ್ಣ ಒಬ್ಬ ಭಾರತೀಯ, ಭಾರತವಾಸಿಗಳ ಹೆಮ್ಮೆ. ಆತನ ವ್ಯಕ್ತಿತ್ವ ಮುಖ್ಯವಾಗುತ್ತದೆಯೇ ಹೊರತು ಆತ ಬಾಳಿ ಬದುಕಿದ ಪ್ರದೇಶವಾಗಲಿ, ಆತನ ಭಾ?ಯಾಗಲೀ ಗಮನಕ್ಕೆ ಬರುವುದಿಲ್ಲ. ಪಾಂಡವರ ಕತೆಯನ್ನು ಬಿತ್ತರಿಸುವ ಕಾವ್ಯದ ಹೆಸರು ಕೂಡ ’ಭಾರತ’ ಎನ್ನುವುದು ಗಮನಾರ್ಹ.
ಭಾರತ ಮತ್ತು ಭಾರತೀಯತೆಯ ಮಾತು ಬಂದಾಗಲೆಲ್ಲ ನೆನಪಾಗುವ, ನೆನಪಾಗಲೇಬೇಕಾದ ಮಹನೀಯ ಸ್ವಾಮಿವಿವೇಕಾನಂದ. ಹೆಸರಿಗೆ ಇವರು ಸಂನ್ಯಾಸಿ. ಆದರೆ ಸಮಗ್ರ ಭಾರತದ ಪ್ರಗತಿ-ಅಭ್ಯದಯಗಳ ಕಾಳಜಿಗಳನ್ನೇ ಒಡಲಲ್ಲಿ ತುಂಬಿಕೊಂಡ ಲೋಕಸಂಸಾರಿ ಇವರು. ಅದೆಂಥ ಪ್ರಖರ ಮತ್ತು ಪಾಮಾಣಿಕ ದೇಶಭಕ್ತಿ ವಿವೇಕಾನಂದರದು! ವಿದ್ಯಾವಂತರೂ ಬುದ್ಧಿವಂತರೂ ಆದ ಈ ಧೀರತರುಣ ತಮ್ಮ ವರ್ಚಸ್ಸಿನಿಂದ ಒಂದು ವೈಭವದ ಜೀವನವನ್ನೇ ನಡೆಸಿಬಿಡಬಹುದಾಗಿತ್ತು. ಆದರೆ ಪರಾಧೀನರಾಗಿದ್ದ ಭಾರತೀಯರ ಬಡತನ, ಅಜ್ಞಾನ-ಅಸಹಾಯಕತೆಗಳು ಅವg ಮನಸ್ಸನ್ನೇ ಕರಗಿಸಿಬಿಟ್ಟಿತು. “ನನ್ನ ಭಾರತ!ನನ್ನ ಭಾರತ!” ಎಂದು ಜೀವನವಿಡೀ ಮರುಗಿದರು. ಭಾರತೀಯರನ್ನು ಮೇಲೆತ್ತುವ, ಸಮಸ್ಯೆಗಳನ್ನು ನಿವಾರಿಸುವ, ಪ್ರಾಮಾಣಿಕ ಪ್ರಯತ್ನಗಳಲ್ಲಿ ಕಡೆಯವರೆಗೂ ತೊಡಗಿಸಿಕೊಂಡರು. ಈ ಧೀಮಂತಜೀವ ಕೂಡ ಒಂದು ವಿಶ್ವಚೇತನ. ಒಂದು ನಾಡಿಗೆ ಅಥವಾ ಒಂದೇ ಸ್ಥಳಕ್ಕೆ ಅವರೆಂದೂ ಸೀಮಿತವಾಗಿರಲಿಲ್ಲ. ಸಮಗ್ರ ಮಾನವೀಯತೆಯ ಒಟ್ಟು ಸಾರೋದ್ಧಾರ ಈ ಹೃದಯವಂತನ ಗುರಿಯಾಗಿತ್ತು.
ಈ ತರುಣ ಸಂನ್ಯಾಸಿ ಮೂರುದಿವಸ ನಿರಂತರ ಕೂತು ತಪಸ್ಸು ಮಾಡಿದ ಕನ್ಯಾಕುಮಾರಿಯ ಬಂಡೆಗಲ್ಲನ್ನು ನೋಡಿದಾಗಲೆಲ್ಲ ಮನಸ್ಸು ಆರ್ದ್ರವಾಗುತ್ತದೆ. ಎಂಥ ನಿರ್ಜನಪ್ರದೇಶವನ್ನು ಅವರು ಆಯ್ದುಕೊಂಡರು! ಅದೆಂಥ ಧೀರತನದಿಂದ ಈಜಿಕೊಂಡು ಹೋಗಿ, ತಮ್ಮ ತಪಸ್ಸಿನ ಜಾಗವನ್ನು ತಲಪಿದರು! ಇಷ್ಟಕ್ಕೂ ಈ ಮಹಾನುಭಾವನ ತಪಸ್ಸಿನ ಗುರಿಯಾದರೂ ಏನು? ’ನನ್ನ ಭಾರತದ ಉದ್ಧಾರ ಹೇಗೆ… ಎಂದು? – ಇದು ಅವರ ತಪಸ್ಸಿನ ವಿಷಯವಾಗಿತ್ತು.
ಮೂರು ದಿವಸಗಳ ಸತತ ತಪಸ್ಸಿನ ಬಳಿಕ ಸ್ವಾಮಿ ವಿವೇಕಾನಂದರಿಗೆ ಸತ್ಯವೊಂದರ ಸಾಕ್ಷಾತ್ಕಾರವಾಯಿತು. “ಇಂದಿನ ನಮ್ಮೆಲ್ಲ ದುರಂತಗಳ ಮೂಲ. ನಮ್ಮೆಲ್ಲರ ಸ್ವಾಭಿಮಾನ ಶೂನ್ಯತೆ.” ಧಿಗ್ಗನೆ ಮೇಲೆದ್ದರು ಈ ಧೀರ ಸಂನ್ಯಾಸಿ. ಆ ಘಳಿಗೆಯಿಂದಲೇ ಭಾರತೀಯರಲ್ಲಿ ಜೀವನೋತ್ಸಾಹವನ್ನೂ, ಆತ್ಮವಿಶ್ವಾಸವನ್ನೂ ಎತ್ತಿಕಟ್ಟುವ ಸರ್ವಪ್ರಯತ್ನಗಳಲ್ಲಿ ಕಾಯಾವಾಚಾಮನಸಾ ಅವರು ತೊಡಗಿಸಿಕೊಂಡರು. “ಏಳಿ… ಏದ್ದೇಳಿ…ಗುರಿ ಮುಟ್ಟುವವರೆಗೂ ಮುನ್ನುಗ್ಗುತ್ತಿರಿ” ಎಂದು ಸಿಂಹವಾಣಿಯಿಂದ ಕರೆಕೊಟ್ಟರು. ಇಂದು ಕೂಡ ನಮ್ಮ ಅನೇಕ ಯುವಕ-ಯುವತಿಯರಿಗೆ ಇದು ಧ್ಯೇಯವಾಕ್ಯವಾಗಿದೆ.
ಭಾರತದ ಈ ಹೆಮ್ಮೆಯ ಪುತ್ರನನ್ನು ಭಾರತೀಯರು ಎಂದೂ ಮರೆಯಲಿಲ್ಲ. “ಈತ ಒಬ್ಬ ಬಂಗಾಳಿ.. ರಾಮಕೃಷ್ಣರ ಶಿಷ್ಯ ನಮ್ಮ ಭಾಷಿಗನೂ ಅಲ್ಲ” ಎಂದೆಲ್ಲ ಭೇದ ಎಣಿಸಲಿಲ್ಲ. ಈ ವಿಶ್ವಮಾನವ ಒಬ್ಬ ಅಪ್ಪಟ ಭಾರತೀಯ, ಎಲ್ಲ ಸಂಕುಚಿತಗಳನ್ನು ಮೀರಿದ ಅತ್ಯುನ್ನತ ವ್ಯಕ್ತಿ ಎಂದೇ ಭಾವಿಸಿದರು, ಗೌರವಿಸಿದರು.
ನಮ್ಮೆಲ್ಲರ ಭಾರತೀಯತೆ ಮಿಗಿಲಾಗಿ ಎದ್ದು ತೋರುವುದು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳು ಏರ್ಪಡುವ ಸಂದರ್ಭಗಳಲ್ಲಿ. ಪ್ರತಿಯೊಬ್ಬ ಭಾರತೀಯನೂ ನಮ್ಮ ದೇಶವೇ ಆಟವನ್ನು ಗೆಲ್ಲಬೇಕು; ವಿಶ್ವವಿಖ್ಯಾತವಾಗಬೇಕು ಎಂದು ಮನಸಾರೆ ಆಶಿಸುತ್ತಾನೆ. ಒಂದುವೇಳೆ ಎಲ್ಲೋ ಆಟ ನಡೆಯುತ್ತಿದೆ; ಯಾಕೋ ಏನೋ ಭಾರತದ ಆಟಗಾರರು ಸ್ವಲ್ಪ ಹಿಂದೆ ಬಿದ್ದಂತಿದೆ ಎನ್ನಿ. ಕೇಳುವುದೇನು ಯುವಜನರ ಆತಂಕವನ್ನು? “ಏನಪ್ಪಾ, ನಮ್ಮವರು ಈವತ್ತು ಗೆಲ್ತಾರೆ ತಾನೆ..?” ಒದ್ದಾಡಿಬಿಡುತ್ತಾರೆ!
ಇಷ್ಟಕ್ಕೂ ಈ ನಮ್ಮವರು ಯಾರು? ತಂಡದಲ್ಲಿ ಇರುವುದು ಹರಿಯಾಣದ ಹುಡುಗ, ಮತ್ತೊಬ್ಬ ಮಹಾರಾಷ್ಟ್ರದವ, ಒಂದಿಬ್ಬರು ಪಂಜಾಬಿನವರು, ಕರ್ನಾಟಕದವರು. ಆದರೂ ಇದೀಗ ಎಲ್ಲರೂ ಒಂದೇ ಮನೆಯವರಾಗಿ ನಮ್ಮವರಾಗಿ ಬಿಟ್ಟರು! ಯಾಕೆಂದರೆ ಇವರೆಲ್ಲರೂ ಭಾರತೀಯರು. ಅಖಂಡವಾಗಿ ಭಾರತವನ್ನು ಪ್ರತಿನಿಧಿಸುವವರು. ಆದ್ದರಿಂದ ಗೆಲ್ಲಲೇ ಬೇಕು.
ಕೆಲವು ವರ್ಷಗಳ ಹಿಂದೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಆಕಾಶವಾಣಿಯು ಪ್ರಸಾರ ಮಾಡಿದ ’ಬಹುಭಾಷೆ ಕವಿಸಮ್ಮೇಳನ’ ಕಾರ್ಯಕ್ರಮವನ್ನು ನಿರೂಪಿಸುವ ಜವಾಬ್ದಾರಿ ನನ್ನದಾಗಿತ್ತು. ನನಗೆ ತುಂಬ ಸಂತೋ? ತಂದ ಕಾರ್ಯಕ್ರಮ ಇದು. “ಭಾರತೀಯರು ನಾವು ಎಂದೆಂದು ಒಂದೇ| ಭಾವೈಕ್ಯದಲಿ ಕೂಡಿ ನಡೆಯುವೆವು ಮುಂದೆ ||” ಎನ್ನುವ ಸೊಲ್ಲಿನ ನಿಜವಾದ ಅರ್ಥ ಈ ಸಂದರ್ಭದಲ್ಲಿ ಸ್ಫುಟವಾಯಿತು. ದೇಶದ ಬೇರೆಬೇರೆ ಭಾಗಗಳ ಬೇರೆಬೇರೆ ಭಾ?ಗಳ ಇಪ್ಪತ್ತೆರಡು ಮಂದಿ ಕವಿಗಳು ಭಾರತದ ಹಿರಿಮೆಯನ್ನು ಸಾರುವ ಕವನಗಳನ್ನು ಓದಿದಾಗ ನನಗನ್ನಿಸಿದ್ದು, ಭಾ? ಮಾತ್ರ ಬೇರೆ; ಆದರೆ ಭಾವವೊಂದೇ. ಎಲ್ಲ ಕವಿಗಳೂ ತಮ್ಮ ತಾಯ್ನಾಡಿನ ಚೆಲುವನ್ನು, ತಮ್ಮತಮ್ಮ ದೇಶಪ್ರೇಮವನ್ನು, ಭಾವೈಕ್ಯತೆಯ ಸೌಹಾರ್ದವನ್ನು, ಒಂದೇ ರೀತಿ ಮೈಯುಬ್ಬಿಸಿ ಬಣ್ಣಿಸಿದ್ದರು. “ಇದು ನನ್ನ ದೇಶ..ನನ್ನ ಭಾರತ!” ಎಂದು ಕೊರಳೆತ್ತಿ ಹಾಡುವಾಗ ತೆಲುಗುಕವಿಯ ಕಂಠವೂ ಗದ್ಗದವಾಗಿತ್ತು; ಮಣಿಪುರಿ ಕವಯಿತ್ರಿಯ ಗಂಟಲೂ ತುಂಬಿ ಬಂದಿತ್ತು.
ಈ ಇಂಥ ಸಮನ್ವಯವೇ ಭಾರತದ, ಭಾರತೀಯರ ವಿಶೇಷ. ಬಹುಬಗೆಯ ವಿಭಿನ್ನತೆಗಳನ್ನು ನಾವು ಮರೆಯುತ್ತೇವೆ. ಏಕನಿಷ್ಠೆಯ ದೇಶಪ್ರೇಮಕ್ಕೆ ತುಡಿಯುತ್ತೇವೆ. ಅದುವೇ ನಮಗೆ ಅತಿಸಹಜ. ಯಾಕೆಂದರೆ ನಮ್ಮೆಲ್ಲ ಕವಿಹೃದಯಗಳಲ್ಲಿ, ನಾಗರಿಕ ಚೇತನಗಳಲ್ಲಿ ಮಿಡಿಯವುದು ಒಂದೇ ’ಭಾರತದ ಆತ್ಮ’.
ತಮ್ಮ ನಾದಮಯ ಉಸಿರುಗಳಿಂದ ನಮ್ಮೆಲ್ಲರ ಹೃದಯಗಳಲ್ಲಿ ಆರ್ದ್ರಭಾವಗಳನ್ನು ತುಂಬಿಸಿಬಿಡುತ್ತಿದ್ದ ನಾದಯೋಗಿ, ಶಹನಾಯ್ ಮಾಂತ್ರಿಕ ಬಿಸ್ಮಿಲ್ಲಾಖಾನರಿಗೆ ಪಾಕಿಸ್ತಾನದವರು ಒಮ್ಮೆ ಹೇಳಿದರಂತೆ –
“ಉಸ್ತಾದ್ಜೀ, ನೀವು ನಮ್ಮವರು. ನಮ್ಮ ದೇಶಕ್ಕೆ ಬಂದು ನೆಲೆಯಾಗಿ ಬಿಡಿ. ನೀವು ಬಯಸುವ ಎಲ್ಲ ಅತ್ಯುತ್ತಮ ಸೌಲಭ್ಯಗಳನ್ನು ಮಾಡಿಕೊಡುತ್ತೇವೆ. ಬಯಸುವ? ಸಂಪತ್ತನ್ನು ಕೊಡುತ್ತೇವೆ.”
ಭಾರತರತ್ನ ಬಿಸ್ಮಿಲ್ಲಾ ಖಾನರು ಮುಗುಳ್ನಗುತ್ತಾ ಅಂದರಂತೆ – “ಅದೆಲ್ಲ ಸರಿಯಪ್ಪ.. ನೀವು ಏನೆಲ್ಲ ಕೊಡಬಹುದು. ಆದರೆ ನನ್ನ ಶ್ರುತಿಪೆಟ್ಟಿಗೆಯನ್ನು ಕೊಡಲಾರಿರಲ್ಲ?”
“ಅದೇಕೆ? ಇ?ಲ್ಲ ಕೊಡುವ ನಾವು ನಿಮಗೊಂದು ಶ್ರುತಿಪಟ್ಟಿಗೆ ಕೊಡಲಾರೆವೆ? ಎಂಥದ್ದು ಬೇಕು ಹೇಳಿ?”
ದಿವ್ಯ ಮಂದಹಾಸವನ್ನು ಬೀರುತ್ತಾ ಉಸ್ತಾದರು ಉಲಿದರಂತೆ – “ಗಂಗಾನದಿಯೇ ನನ್ನ ಶ್ರುತಿಪೆಟ್ಟಿಗೆ. ಹೇಳಿ, ತಂದುಕೊಡಬಲ್ಲಿರಾ? ಅ? ಅಲ್ಲ, ನನ್ನ ಉಸಿರಿಗೆ ಬಲವನ್ನೂ, ಚೆಲುವನ್ನೂ ಕೊಟ್ಟಿರುವುದು ನಾನು ವಾಸಿಸುವ ಈ ನನ್ನ ತಾಯ್ನಾಡು. ಇದನ್ನು ಬಿಟ್ಟು ನಾನೆಲ್ಲೂ ಹೋಗಲಾರೆ.”
ಅತ್ಯುನ್ನತ ಭಾರತೀಯತೆಗೆ ಇದಕ್ಕಿಂತ ಸುಂದರ ಉದಾಹರಣೆ ಬೇಕೆ?