ನೀವು ನಂಬಲಿಕ್ಕಿಲ್ಲ, ಈ ’ಜನಪ್ರಿಯ’ ಉಪಾಧಿಯನ್ನು ನೆಚ್ಚಿಕೊಂಡಿದ್ದರಿಂದಾಗಿ ನನ್ನ ಮಾನ ಮೂರಾಬಟ್ಟೆಯಾಗಿಹೋಯ್ತು; ಅದೂ ನನ್ನಾಕೆಯ ಮುಂದೆ.
ಕಾರ್ಯಕ್ರಮವೊಂದಕ್ಕೆ ಉಪನ್ಯಾಸನೀಡಲು ಬರಬೇಕೆಂದು ಅಪರಿಚಿತ ತರುಣರೀರ್ವರು ಎಂಟುದಿನ ಮುಂಚಿತವಾಗಿಯೆ ಆಗ್ರಹಿಸಿ ಹೋಗಿದ್ದರು. ಅದಾದ ಮೂರುದಿನಕ್ಕೆ ಅಂಚೆಯಲ್ಲಿ ಬಂದಿತ್ತು ಆಮಂತ್ರಣಪತ್ರಿಕೆ. ಕೆಟ್ಟ ಕುತೂಹಲದಿಂದ, ಆಮಂತ್ರಣಪತ್ರಿಕೆಯಲ್ಲಿ ನನ್ನ ಹೆಸರಿಗಾಗಿ ಕಣ್ಣೋಡಿಸಿದ್ದೆ, ಮಾಮೂಲಾಗಿ. ಆಶ್ಚರ್ಯ… ನನ್ನ ಹೆಸರಿನೊಂದಿಗೆ ’ಜನಪ್ರಿಯ ಹಾಸ್ಯಸಾಹಿತಿ’ ಎಂಬ ಉಪಾಧಿ ರಾರಾಜಿಸುತ್ತಿದೆ! ಸಾಹಿತಿಗಳಿಗೂ ಈ ಉಪಾಧಿ ತಗಲಿಹಾಕಿದ್ದಾರಲ್ಲ? ಅದು ಹೇಗೊ ಈ ’ಜನಪ್ರಿಯ’ ಎಂಬ ನಾಲ್ಕುವರೆ ಅಕ್ಷರದ ಮಾಯಾಂಗನೆ ತಲೆಗೇರಿಬಿಟ್ಟಿದ್ದಳು! ಅವಳದೆ ಗುಂಗಿನಲ್ಲಿ ಭಾವದಲೆಗಳು ತೇಲಿ ಬಂದಿದ್ದವು… ಆವಾಗಿನ ನನ್ನ ಲಹರಿ ಹೇಗಿತ್ತೆಂದರೆ…
* * *
ಈ ’ಜನಪ್ರಿಯ’ ಎಂಬ ವಿಶೇಷಣ ಕೇವಲ ’ಭಾಮಜ’(ಭಾರೀ ಮಹತ್ತ್ವದ ಜನ)ರಿಗೆ, ಸಿನೆಮಾ ತಾರೆಯರಿಗೆ ಮಾತ್ರ ಮೀಸಲಾದದ್ದು ಎಂಬುದು ನನ್ನ ಪೂರ್ವಗ್ರಹ ನಂಬಿಕೆಯಾಗಿತ್ತು. ನನ್ನಂತಹ ಸಾಹಿತಿಗೂ ಕಂಪೆನಿ ಕೊಡುತ್ತಿದೆಯಲ್ಲ ಎಂದು ಸಹಜವಾಗಿ ಪುಳಕಿತಗೊಂಡಿದ್ದೆ. ಜನಪ್ರಿಯ ಕವಿ, ಜನಪ್ರಿಯ ಕಥೆಗಾರರು ಹುಟ್ಟಿಕೊಂಡಲ್ಲಿ ಆಶ್ಚರ್ಯಪಡಬೇಕಿಲ್ಲ ಎಂದೆನಿಸಿತ್ತು. ಅದು ಇನ್ನಷ್ಟು ಚಾಚಿಕೊಂಡಲ್ಲಿ, ಅದರ ತೆಕ್ಕೆಗೆ ವಿಮರ್ಶಕರೂ ಸೇರಿಕೊಂಡಾರು! (ಈ ವಿಮರ್ಶಕ ಎಂಬ ಜಾತಿ, ಅದು ಹೇಗೆ ತನ್ನ ’ಜನಪ್ರಿಯತೆ’ಯನ್ನು ಉಳಿಸಿಕೊಳ್ಳಬಹುದು? – ಎಂಬುದು ತಲೆ ತುರಿಸಿಕೊಳ್ಳುವಂತೆ ಮಾಡಿತ್ತು.)
ಆದರೆ ಈ ’ಜನಪ್ರಿಯರು’ ಎಷ್ಟು ಜನರಿಗೆ ಪ್ರಿಯರು? ಯಾವಾವ ಕಾರಣಗಳಿಗಾಗಿ ಪ್ರಿಯರು? – ಎಂದೆಲ್ಲ ಪ್ರಶ್ನೆಗಳಿಗೆ ನಾವಾರೂ ತಲೆಕೆಡಿಸಿಕೊಂಡಿಲ್ಲ. ಇರುವ ಒಂದೇ ಜಗತ್ತಿಗೆ ನಮ್ಮಲ್ಲಿ ಅದೆಷ್ಟು ಜಗದ್ಗುರುಗಳು ಇಲ್ಲವೆ?
ಕೆಲವೊಂದಿಷ್ಟು ಜನರ ಹೆಸರಿನ ಹಿಂದೆ ’ಖ್ಯಾತ’ ಎಂಬ ಉಪಾಧಿ ಇರುವದಿಲ್ಲವೆ! ಉದಾ: ’ಖ್ಯಾತ ಪತ್ರಕರ್ತ’, ’ಖ್ಯಾತ ವಿಜ್ಞಾನಿ’ ಇತ್ಯಾದಿ ಇತ್ಯಾದಿ. ಆದರೆ ಇವರೆ? ’ಖ್ಯಾತ’ರು ಎಂಬುದೆ ಅರ್ಥವಾಗದ ಸಂಗತಿ. ಒಂದುವೇಳೆ ಅವರು ಅ?ಂದು ಖ್ಯಾತರಾಗಿದ್ದರೆ, ಈ ಉಪಾಧಿಯೇ ಅನಗತ್ಯ. ಯಾಕೆಂದರೆ, ಅಂಥವರ ಕೀರ್ತಿ ಅದಾಗಲೆ ಎಲ್ಲೆಡೆ ಕಂಪು ಬೀರಿರುತ್ತದೆಯಲ್ಲ! ಇನ್ನು ಆ ಪರಿ ನಾಮಧೇಯರಲ್ಲದವರಿಗೆ ’ಖ್ಯಾತ’ರೆಂದು ಕರೆಯುವುದರ ಹಿಂದಿರುವ ವ್ಯಾವಹಾರಿಕ ಹುನ್ನಾರಗಳು ಇಲ್ಲಿ ಅಪ್ರಸ್ತುತ. ಇಂಥ ಉಪಾಧಿಗಳನ್ನು ಧಾರಾಳವಾಗಿ ಬಳಸಿ ತಮ್ಮ ಕಾರ್ಯ ಸಿದ್ಧಿಸಿಕೊಳ್ಳುವ ’ಜಾಣ’ರು ಏನು ಕಮ್ಮಿ ಅಂತೀರಾ! ಹಾಗೆಯೇ ಈ ’ಜನಪ್ರಿಯ’ ಅಂಬೋ ಉಪಾಧಿ ಕೂಡಾ ’ಅರ್ಥ’ಪೂರ್ಣವಾಗಿರಲ್ಲಿಕ್ಕಿಲ್ಲ ಎಂಬ ಲೆಕ್ಕಾಚಾರದಲ್ಲಿದ್ದೆ, ಮೊದಮೊದಲು.
ಹೆಚ್ಚುಗಾರಿಕೆ
ಎಲ್ಲ ಉಪಾಧಿಗಳಲ್ಲಿ ’ಜನಪ್ರಿಯ’ ಎಂಬುದೆ ಹೆಚ್ಚು ಜನಪ್ರಿಯತೆ ಗಳಿಸಿರುವ ಉಪಾಧಿ. ಯಾವುದೇ ಜನಹಿತ ಕಾರ್ಯ ಮಾಡದ, ಜನಪರ ಆಂದೋಲನಗಳಲ್ಲಿ ತೊಡಗಿಸಿಕೊಳ್ಳದ, ’ದಂತಗೋಪುರದ ದೊರೆ’ಗಳಿಗೂ ಈ ’ಜನಪ್ರಿಯ’ ಉಪಾಧಿಯ ತಲುಬು!
ಶ್ರೀ, ಶ್ರೀಮಾನ್, ಮಾನ್ಯ, ಸಂಮಾನ್ಯ, ಸಹೃದಯಿ, ಶರಣಜೀವಿ, ಸಹಕಾರಿ ಬಂಧು, ಬಡವರ ಭಾಗ್ಯದೇವತೆ, ದಾನಶೂರ, ಪ್ರಗತಿಪರ, ದಲಿತ, ಬಂಡಾಯ, ಸಮಾಜವಾದಿ, ಸ್ತ್ರೀವಾದಿ, ಸಮನ್ವಯವಾದಿ, ಕಲಾಭೂಷಣ, ಸಾಹಿತ್ಯ ವಲ್ಲಭ, ಕರುಣಾಮಯಿ, ನಟಭಯಂಕರ, ಪುರಾಣ ಕೇಸರಿ, ಕೊಡುಗೈ ದೊರೆ… ಹೀಗೆ ಲೆಕ್ಕಕ್ಕೆ ಸಿಗದ? ಉಪಾಧಿಗಳು. ಆದರೂ ಈ ’ಜನಪ್ರಿಯ’ಕ್ಕೆ ಇರುವ? ಬೇಡಿಕೆ ಅವೆಲ್ಲವುಗಳಿಗೆ ಖಂಡಿತವಾಗಿಯೂ ಇಲ್ಲ. ಹಾಗಂತ ನಂಬಿದ್ದೆ.
’ನಿಮ್ಮ ಜನಪ್ರಿಯ ನಟ ಅಭಿನಯಿಸಿರುವ ’……’ ಎಂಬ ಜನಪ್ರಿಯ ಸಿನೆಮಾ, ನಿಮ್ಮ ಜನಪ್ರಿಯ ಥಿಯೇಟರಿನಲ್ಲಿ, ಜನಪ್ರಿಯ ಎಂಟನೆಯ ದಿನದಲ್ಲಿ ಪ್ರದರ್ಶಿತಗೊಳ್ಳುತ್ತಿರುವದನ್ನು ಸಾರುವಂಥ ಜಾಹೀರಾತುಗಳನ್ನು ಕಂಡು ಖುಷಿಪಟ್ಟವನು ನಾನು.
ಕೊನರುವ ಕೋಡುಗಳು
ಈ ಉಪಾಧಿಗಳ ಖದರು ಅಂಥದ್ದು! ನಾವು ಗಳಿಸಿದ ಪದವಿಗಳು ಪದಪುಂಜಗಳಾಗಿ ಆಮಂತ್ರಣಪತ್ರಿಕೆ ಲಗ್ನಪತ್ರಿಕೆಗಳಲ್ಲಿ, ನಮ್ಮ ಲೆಟರ್ಹೆಡ್ ವಿಸಿಟಿಂಗ್- ಕಾರ್ಡ್ಗಳಲ್ಲಿ, ಮನೆಯ ಹೆಬ್ಬಾಗಿಲಿಗೆ ಜೋತುಬಿಟ್ಟ ನಮ್ಮದೇ ನಾಮಫಲಕದಲ್ಲಿ ನಮ್ಮ ಹೆಸರಿನ ಹಿಂದೆ- ಮುಂದೆಲ್ಲ ಉಪಾಧಿಗಳಾಗಿ ಅಂಟಿಕೊಂಡಿದ್ದರೆ ಅದರ ರಂಗೇ ಬೇರೆ. ಉಪಾಧಿ-ಉಪಾಂತ್ಯಗಳೆಂಬ ಮುಂಗಾರು-ಹಿಂಗಾರು ಮಳೆಯಿಂದಾಗಿ, ತಲೆಗೆ ಕೋಡುಗಳೆರಡು ಕೊನರಿರುತ್ತವೆ. ಜೀವಕಳೆಯಿಂದ ಲಕಲಕಿಸುತ್ತಿರುತ್ತದೆ.
ನನ್ನ ಪರಿಚಯದವರ ಮನೆಯಲ್ಲಿ ಇಬ್ಬರು ಡಾಕ್ಟರ್ಗಳಿದ್ದಾರೆ. ಅವರಿಬ್ಬರನ್ನು ’ಡಾ. ಸೂಜಿ’ ಮತ್ತು ’ಡಾ. ಪೆನ್ನು’ ಉಪಾಧಿಗಳೊಂದಿಗೆ ಗುರುತಿಸಲಾಗುತ್ತದೆ. ವೈದ್ಯನಾಗಿರುವ ಹಿರಿಯ ಮಗ ಡಾ. ಸೂಜಿ; ಇನ್ನು ಸಾಹಿತ್ಯದಲ್ಲಿ ಡಾಕ್ಟರೇಟ್ ಮಾಡಿರುವ ಕಿರಿಯ ಮಗ ಡಾ. ಪೆನ್ನು.
’ಡಾಕ್ಟರು ಇದ್ದಾರೇನ್ರಿ ಮನೆಯಲ್ಲಿ’ ಎಂದು ಯಾರಾದರೂ ವಿಚಾರಿಸುತ್ತ ಬಂದರೆ –
’ಎಂಥ ಡಾಕ್ಟರ್ ಬೇಕಾಗಿತ್ತಪಾ; ಏನು ಸೂಜಿ ಡಾಕ್ಟರೊ, ಇಲ್ಲಾ ಪೆನ್ನಿನ ಡಾಕ್ಟರೊ?’ – ಮನೆಯ ಯಜಮಾನ ಕೇಳುತ್ತಿದ್ದರು.
ಪಾಪ, ಬಂದವರಿಗೆ ತಬ್ಬಿಬ್ಬು. ಅನಂತರ ಯಜಮಾನರೆ ಉಪಾಧಿಗಳ ಮರ್ಮ ಭೇದಿಸುತ್ತಿದ್ದರು.
ಮುಂದೆ ಅದೇ ವ್ಯಕ್ತಿ ಎರಡನೆಯ ಸಲ ಮನೆಗೆ ಬಂದಾಗ, ತಾನಾಗಿಯೆ ಕೇಳುತ್ತಾನೆ: ’ಡಾ. ಸೂಜಿ ಇದ್ದಾರೇನ್ರಿ?’
ಮೂರಾಬಟ್ಟೆ
’ಏಕಮೂರ್ತಿ ತ್ರಯೋಭಾಗ’ ಎನ್ನುವದಿಲ್ಲವೆ ಹಾಗೆ, ಈ ಹಿಂದೆ ನಮ್ಮಲ್ಲಿ – ’ಶ್ರೀ ರಾಜಮಾನ್ಯ ರಾಜಶ್ರೀ’ (ಶ್ರೀ ರಾ. ರಾ.) ಎಂಬ ತ್ರಯೋಪಾಧಿಗಳನ್ನು ಹೊಂದಿದ್ದ ’ಭಾಮಜ’ರಿದ್ದರು. ಬ್ರಿಟಿ?ರು ದಯಪಾಲಿಸುತ್ತಿದ್ದ ರಾವ್ಬಹಾದುರ್, ರಾವ್ಸಾಹೇಬ್, ಸರ್ದಾರ್, ಸರ್ಗಳೆಂಬ ಉಪಾಧಿಗಳಂತೆ ’ಶ್ರೀರಾರಾ’ನೂ ಔಟ್ಡೇಟೆಡ್.
ಆದರೆ ನೀವು ನಂಬಲಿಕ್ಕಿಲ್ಲ, ಈ ’ಜನಪ್ರಿಯ’ ಉಪಾಧಿಯನ್ನು ನೆಚ್ಚಿಕೊಂಡಿದ್ದರಿಂದಾಗಿ ನನ್ನ ಮಾನ ಮೂರಾಬಟ್ಟೆಯಾಗಿಹೋಯ್ತು. ಅದೂ ನನ್ನಾಕೆಯ ಮುಂದೆ.
ಅಂದು, ’ಜನಪ್ರಿಯ ಹಾಸ್ಯಸಾಹಿತಿ’ ಎಂಬ ನಯನಸುಂದರ ಉಪಾಧಿಯೊಳಗೆ ಮಿಂಚುತ್ತಿದ್ದ ನಾನು ಕಾರ್ಯಕ್ರಮಕ್ಕೆ ಸ್ವಕುಟುಂಬ ಸಮೇತ ಹೋದೆ. ನನಗಿರುವ ಜನಪ್ರಿಯತೆಯನ್ನು ಈಕೆಯೂ ಕಣ್ಣಾರೆ ಕಾಣಲಿ, ಇನ್ನು ಮುಂದಾದರೂ ನನ್ನನ್ನೂ, ನನ್ನ ಸಾಹಿತ್ಯಸೇವೆಯನ್ನೂ ಕೆಕ್ಕರುಗಣ್ಣಿನಿಂದ ನೋಡದಿರಲಿ – ಎಂಬ ಒಳಾಶೆ ನನ್ನದು.
ಸಭಾಂಗಣ ಕಿಕ್ಕಿರಿದು ತುಂಬಿತ್ತು. ಅಬ್ಬಬ್ಬಾ! ನನಗಿರುವ ಜನಪ್ರಿಯತಯೆ… ಉಬ್ಬಿಹೋದೆ. ಕಾರ್ಯಕ್ರಮ ಸುರುವಾಯಿತು. ಪ್ರಾರಂಭಿಕ ’ಕರ್ಮ’ಗಳಾದ ಸ್ವಾಗತಗೀತೆ, ಸ್ವಾಗತಭಾ?ಣ, ಪರಿಚಯ, ಮಾಲಾರ್ಪಣೆಗಳು ನಡೆಯುತ್ತಿರುವಾಗಲೆಲ್ಲ, ಸಭಿಕ ಮಹಾನುಭಾವರಿಂದ ಚಪ್ಪಾಳೆ, ಸಿಳ್ಳೆಗಳು. ’ಜಲ್ದೀ ಮುಗಸ್ರೀ… ಜಲ್ದೀ ಮುಗಸ್ರಲ್ಯಾ…’ ಕೂಗು. ’ಓಹೋ, ನನ್ನ ಭಾ?ಣ ಕೇಳಲು ಬಂದಿರುವ ಅಭಿಮಾನಿ ದೇವರುಗಳು ಇವ್ರೆಲ್ಲಾ’ ಮನಸ್ಸು ಹಕ್ಕಿಯಾಗಿ ಹಾಡತೊಡಗಿತ್ತು.
’ಸರ್, ತಾವು ಒಂದೆರಡು ಮಾತು ಹೇಳಬೇಕು’ ಸಂಘಟಕರು ಈ ಜನಪ್ರಿಯ ಸಾಹಿತಿಗೆ ವಿನಂತಿಸಿದರು. ಠೀವಿಯಿಂದ ಎದ್ದು, ಮೈಕ್ ಮುಂದೆ ಬಂದು,
“ನನ್ನ ಅಭಿಮಾನಿಗಳೆ, ತಾವು ನನ್ನ ಮೇಲಿಟ್ಟಿರುವ ಈ ಅಭಿಮಾನಕ್ಕೆ….” ಇನ್ನೂ ವಾಕ್ಯ ಪೂರ್ತಿಗೊಳಿಸಿರಲಿಲ್ಲ,
’ಏ ಏ ಮಾರಾಯಾ…! ಸಾಕುಮಾಡೊ. ನಿನ್ನ ಬೊಗಳೆ ಪುರಾಣಾ?’ ಸುನಾಮಿ ತೆರದಿ ವಾಗ್ಬಾಣ ಎದೆಗೇ ಬಡಿದಿತ್ತು.
“ಪ್ಲೀಜ್ ತಡಕೊಳ್ರೀ, ಐದೇ ಐದ್ ನಿಮಿ?ದೊಳಗ ಭಾ?ಣಾ ಮುಗಸ್ತೀನಿ…” ಕೈಮುಗಿದೆ.
’ಯಾರಿಗೆ ಬೇಕೊ ನಿನ್ನ ಸುಡಗಾಡ ಭಾಷಣಾ…’ ಜೋರಾಗಿ ಅರ್ಭಟಿಸುತ್ತ ವೇದಿಕೆ ಏರಿದ ಧಡಿಯನೊಬ್ಬ, ಮೈಕ್ ಕಿತ್ತುಕೊಂಡು ’ಫಿಲಂ ಸಾಂಗ್ಸ್ ಪ್ರೊಗ್ರಾಮ್ ಅಂತ ನಮ್ಮ ಕಡಿಂದ ಐದೈದ ನೂರ ರೂಪಾಯಿ ಚಂದಾ ತಗೊಂಡೀರಿ…. ಈಗಿಂದೀಗ ಪ್ರೊಗ್ರಾಂ ಸುರು ಮಾಡಿದೀರಿ ಭೇ?ತು. ಇರ್ಲಿಕ್ಕಂದ್ರ ಒಬ್ಬೊಬ್ಬರ ಹೆಡಕಾನೆ ಮುರಿತೀನಿ’ ಸಿನೆಮಾ ವಿಲನ್ ಥರಾ ಘರ್ಜಿಸಿದ.
ಅಷ್ಟರಲ್ಲೆ ಪ್ರೇಕ್ಷಕ ಗಣಗಳಿಂದ ಎದ್ದುಬಂದ ಗಣನಾಯಕನೊಬ್ಬ ಅನಾಮತ್ತಾಗಿ ನನ್ನನ್ನೆತ್ತಿಕೊಂಡು ಕೆಳಗಿಳಿಸಿದ್ದ. ನನಗೆ ಮರೆಯಲಾರದ ಅವಮಾನ, ಅದೂ ಹೆಂಡತಿಯ ಮುಂದೆ!
ಜನಪ್ರಿಯತೆ ಅಂಬೋದು ಉಪದ್ರವಿ ಎಂಬುದು ಮನದಟ್ಟಾಗಿತ್ತು.
ಈಕೆ ಆಗಾಗ ಲೇವಡಿ ಮಾಡುತ್ತಿರುತ್ತಾಳೆ – ’ಜನಪ್ರಿಯ ಹಾಸ್ಯಸಾಹಿತಿಯ ಜನಪ್ರಿಯ ಹೆಂಡತಿ ನಾನು’ ಎಂದು!