ಕಾಳಿದಾಸನ ಮೇಘದೂತ (ಮೇಘಸಂದೇಶ) ಕಾವ್ಯವು ಸಂಸ್ಕೃತಸಾಹಿತ್ಯದಲ್ಲಿಯೇ ಅನನ್ಯವಾದುದು. ಎಷ್ಟುಮಟ್ಟಿಗೆ ಎಂದರೆ ಹತ್ತಾರು ’-ದೂತ’ ಅಥವಾ ’-ಸಂದೇಶ’ ಕಾವ್ಯಗಳ ಪರಂಪರೆಗೇ ಅದು ನಾಂದಿಯಾಯಿತು. ಭಾರತದ ಎಲ್ಲ ಭಾಷೆಗಳ ಸಾಹಿತ್ಯದ ಮೇಲೂ ಅದು ಗಾಢ ಪ್ರಭಾವವನ್ನು ಬೀರಿದೆ. ಪ್ರತಿ ಭಾಷೆಯಲ್ಲಿಯೂ ಮೇಘಸಂದೇಶದ ಹಲವು ಅನುವಾದಗಳು ಪ್ರಕಾಶಗೊಂಡಿವೆ, ಈಗಲೂ ಬರುತ್ತಿವೆ. ದ.ರಾ. ಬೇಂದ್ರೆ, ಎಸ್.ವಿ. ಪರಮೇಶ್ವರಭಟ್ಟ ಮೊದಲಾದವರ ಅನುವಾದಗಳು ಹಲವು ದಶಕಗಳಷ್ಟು ಹಿಂದೆಯೇ ಬಂದಿದ್ದರೆ ಅ.ರಾ. ಮಿತ್ರ ಅವರ ಹೊಸದೊಂದು ಅನುವಾದ ಈಗ್ಗೆ ನಾಲ್ಕೈದು ವರ್ಷ ಹಿಂದೆಯಷ್ಟೇ ಹೊರಬಂದಿದೆ. ನೇರ ಪದ್ಯಾನುವಾದ ಗದ್ಯಾನುವಾದಗಳಲ್ಲದೆ ಹೊಸ್ತೋಟ ಮಂಜುನಾಥ ಭಾಗವತರೂ ವಿದ್ವಾನ್ ಉಮಾಕಾಂತಭಟ್ಟರೂ ಯಕ್ಷಗಾನ ಮಾಧ್ಯಮಕ್ಕೂ ಮೇಘದೂತವನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಮೇಘದೂತದ ಅನುಕರಣವಾದ ’ಧೂಮದೂತ’ ಎಂಬ ವಿಡಂಬನಕಾವ್ಯವೂ ಶತಾವಧಾನಿ ಡಾ. ರಾ. ಗಣೇಶ್ ಅವರಿಂದ ರಚಿತವಾಗಿದೆ. ಹೀಗೆ ಇ?ಂದು ಅನುಕೃತಿಗಳಿಗೆ ಕಾರಣವಾಗಿರುವ ಕಾವ್ಯ ಬಹುಶಃ ಇನ್ನೊಂದಿಲ್ಲ. ಅನೇಕ ತಲೆಮಾರುಗಳು ಕಳೆದ ಮೇಲೂ ಇಷ್ಟು ಲೋಕಪ್ರಿಯತೆಯನ್ನು ಉಳಿಸಿಕೊಂಡು ಹೊಸಹೊಸ ಅನುಸಂಧಾನಗಳಿಗೆ ಪ್ರೇರಕವಾಗಿರುವ ಕೃತಿ ಇನ್ನೊಂದಿರುವುದು ಸಂದೇಹಾಸ್ಪದ.
ಈ ವಿಶಾಲ ಪ್ರಾಚುರ್ಯದ ಹಿನ್ನೆಲೆಯಲ್ಲಿ ವಿದುಷಿ ಶೈಲಜಾ ಹೆಗಡೆ ಅವರು ’ಕಾಳಿದಾಸನ ಮೇಘದೂತ ಮತ್ತು ಕನ್ನಡ ರೂಪಾಂತರಗಳು’ ವಿ?ಯವನ್ನು ಕುರಿತು ಸಮಗ್ರ ಪರಾಮರ್ಶನೆ ನಡೆಸಿರುವುದು ಶ್ಲಾಘನೀಯವಾಗಿದೆ. ಈ ಸಂಪ್ರಬಂಧಕ್ಕಾಗಿ ಅವರಿಗೆ ಎಂ.ಫಿಲ್ ಪದವಿಯೂ ಪ್ರಾಪ್ತವಾಗಿದೆ. ಶೈಲಜಾ ಹೆಗಡೆ ವಿದ್ವತ್ತಿಗೆ ಹೆಸರಾದ ಮನೆತನದವರು. ವಿದ್ವಾಂಸರಾಗಿಯೂ ತಾಳಮದ್ದಲೆ ಅರ್ಥಧಾರಿಗಳಾಗಿಯೂ ಖ್ಯಾತರಾಗಿದ್ದ ಕೆರೆಕೈ ಕೃಷ್ಣಭಟ್ಟರು ಇವರ ತೀರ್ಥರೂಪರು. ಗಣ್ಯ ಸಂಸ್ಕೃತ ವಿದ್ವಾಂಸ ಉಮಾಕಾಂತಭಟ್ಟರು (ಇವರೂ ಖ್ಯಾತ ಅರ್ಥಧಾರಿಗಳೇ) ಶೈಲಜಾ ಅವರ ಅಗ್ರಜರು. ಸಂಸ್ಕೃತ ವಿದ್ವತ್ತಿನ ಪರಿಸರದಲ್ಲಿಯೇ ಬೆಳೆದವರೂ ಸ್ವಭಾವತಃ ಅಧ್ಯಯನಶೀಲರೂ ಆದ ಶೈಲಜಾ ಹೆಗಡೆ ಮೇಘದೂತದ ಅನುಕೃತಿಗಳ ತೌಲನಿಕ ಪರಾಮರ್ಶನೆ ಮಾಡಲು ಬೇಕಾದ ಬೌದ್ಧಿಕ ಪ್ರತಿಪತ್ತಿಯನ್ನು ಉಳ್ಳವರು. ಆದುದರಿಂದ ಇವರ ಶೋಧದ ಫಲವಾಗಿ ಒಂದು ಶ್ರೇ?ಮಟ್ಟದ ವಿಮರ್ಶನಕೃತಿ ಕನ್ನಡಕ್ಕೆ ಲಭಿಸಿದೆ.
ಕೃತಿಯ ಉಪೋದ್ಘಾತಭಾಗದಲ್ಲಿ ಲೇಖಕರು ತಾವು ಬಳಸಿರುವ ಆಕರಗಳು, ಕಾಳಿದಾಸನ ದೇಶಕಾಲಾದಿ ಲಬ್ಧ ವಿವರಗಳು, ಮೇಘದೂತದ ವಸ್ತು, ಪ್ರಕೃತಿವರ್ಣನೆಗಳು, ಶೈಲಿ, ಅಲಂಕಾರಗಳು ಮೊದಲಾದ ಆಧಾರಸಂಗತಿಗಳ ಅವಲೋಕನವನ್ನು ನೀಡಿದ್ದಾರೆ. ಪ್ರಸ್ತುತ ಕೃತಿಯ ಪ್ರಮುಖಭಾಗಗಳೆಂದರೆ ನಾಲ್ಕು ಮತ್ತು ಐದನೇ ಅಧ್ಯಾಯಗಳು. ’ಕವಿ, ಕೃತಿ ಮತ್ತು ಛಂದಸ್ಸುಗಳು’ ಎಂಬ (ನಾಲ್ಕನೇ) ಅಧ್ಯಾಯದಲ್ಲಿ ದ.ರಾ. ಬೇಂದ್ರೆ, ಅ.ರಾ. ಮಿತ್ರ, ಸಾಲಿ ರಾಮಚಂದ್ರರಾಯ, ಕಮಕೋಡು ನರಸಿಂಹಶಾಸ್ತ್ರಿ, ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿ, ಭೀಮಸೇನ ಶರ್ಮಾ, ಅಗ್ರಹಾರ ನಾ. ಶರ್ಮಾ, ಪಿ. ಬಸವಣ್ಣ, ಗಣಪತಿ ಮೊಳೆಯಾರ, ಎಸ್.ವಿ. ಪರಮೇಶ್ವರಭಟ್ಟ – ಇವಲ್ಲದೆ ಕಾಳಿದಾಸ ಕಾವ್ಯದ ಅನುಕೃತಿಯಾದ ಮಂಡಿಕಲ್ ರಾಮಶಾಸ್ತ್ರಿಗಳ ’ಮೇಘ ಪ್ರತಿಸಂದೇಶ’ – ಇವುಗಳ ರಚನಾಶಿಲ್ಪಗಳ ಗೋ?ರೆ ನೋಟವನ್ನು ನೀಡಿದ್ದಾರೆ. ಪಿ. ಬಸವಣ್ಣ, ಅಗ್ರಹಾರ ನಾ. ಶರ್ಮಾ – ಇವರು ವಾರ್ಧಕ ಷಟ್ಪದಿ ಬಳಸಿದ್ದರೆ, ಭೀಮಸೇನ ಶರ್ಮಾ, ಅ.ರಾ. ಮಿತ್ರ – ಇವರು ಭಾಮಿನಿ ಷಟ್ಪದಿಯನ್ನು ಬಳಸಿದ್ದಾರೆ. ಗಣಪತಿ ಮೊಳೆಯಾರ ಅವರು ವಾರ್ಧಕ ಷಟ್ಪದಿಯನ್ನೂ ಮೂಲದ ಛಂದಸ್ಸೇ ಆದ ಮಂದಾಕ್ರಾಂತವನ್ನೂ ಬಳಸಿದ್ದಾರೆ. ಬೇಂದ್ರೆಯವರು ೨೪ ಮಾತ್ರೆಗಳ ಹೊಸ ರಗಳೆಯನ್ನು ಅತ್ಯಂತ ಲಾಲಿತ್ಯಪೂರ್ಣವಾಗಿ ಬಳಸಿದ್ದಾರೆ. ಎಸ್.ವಿ. ಪರಮೇಶ್ವರಭಟ್ಟರು ೨೦-೧೫, ೨೦-೧೫ ಮಾತ್ರೆಗಳ ವಿನ್ಯಾಸವನ್ನು ಬಳಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳೂ ಸಾಲಿ ರಾಮಚಂದ್ರರಾಯರೂ ಕಷ್ಟಸಾಧ್ಯವಾದ ಕುಸುಮಷಟ್ಪದಿಯನ್ನು ಬಳಸಿದ್ದಾರೆ. ಇವಲ್ಲದೆ ೧೮ ಮಾತ್ರೆಗಳ ಹೊಸರಗಳೆಯನ್ನು ಬಳಸಿರುವ ಗೋಪಾಲಕೃಷ್ಣ ಪಾಲೆಪ್ಪಾಡಿ ಅವರ ಅನುಕೃತಿಯೂ ಲಭ್ಯವಿದೆ. ಈ ಛಂದಸ್ಸುಗಳ ವಿನ್ಯಾಸಗಳನ್ನು ಲೇಖಕರು ನಾಲ್ಕನೇ ಅಧ್ಯಾಯದ ಅಂತ್ಯದಲ್ಲಿ ನೀಡಿದ್ದಾರೆ. ಎಲ್ಲ ಅನುವಾದಗಳಲ್ಲಿಯೂ ಪ್ರಾಸ-ಅನುಪ್ರಾಸಗಳ ಔಚಿತ್ಯಪೂರ್ಣ ಪ್ರಯೋಗವಿದೆ. ಛಂದೋವೈವಿಧ್ಯದಿಂದಾಗಿ ಕನ್ನಡ ಅನುಕೃತಿಗಳಲ್ಲಿ ಒಂದೊಂದಕ್ಕೂ ಅದರದೇ ಆದ ಸೊಬಗು, ಸೊಗಡು ಇರುವುದು ಅನುಭವಕ್ಕೆ ಬರುತ್ತದೆ. ವಾರ್ಧಕ, ಮಂದಾಕ್ರಾಂತ – ಎರಡರಲ್ಲಿಯೂ ಗಣಪತಿ ಮೊಳೆಯಾರರು ಅನುವಾದವನ್ನು ನಿವೇಶಗೊಳಿಸಿರುವುದನ್ನು ಒಂದು ಅನನ್ಯ ಸಾಧನೆಯೆಂದು ಹೇಳಬೇಕು.
ಐದನೆಯದಾದ ’ತೌಲನಿಕ ಸಮೀಕ್ಷೆ’ ಅಧ್ಯಾಯದಲ್ಲಿ ಯಾವುದೇ ಪದ್ಯಾನುವಾದದಲ್ಲಿ ಏರ್ಪಡುವ ಸೌಂದರ್ಯಾಂಶಗಳನ್ನು ಪ್ರಸ್ತಾವಿಸುತ್ತ ಲೇಖಕರು “[ಅನುವಾದದಲ್ಲಿ ಓದುಗನಿಗೆ] ತಾನು ಮೂಲಕೃತಿಯನ್ನೇ ಓದುತ್ತಿದ್ದೇನೆಂಬ ಭಾವನೆ ಬರಬೇಕು … ಒಂದು ಸ್ವೋಪಜ್ಞ ಕೃತಿ ಬೀರುವ ಪರಿಣಾಮವನ್ನೇ ಈ ಕಾವ್ಯ ಬೀರಬೇಕು” ಎಂಬ ಮ್ಯಾಥ್ಯೂ ಆರ್ನಾಲ್ಡನ ಉಕ್ತಿಯನ್ನು ಉದ್ಧರಿಸಿದ್ದಾರೆ. ಈ ಲಕ್ಷ್ಯಕ್ಕೆ ಮೇಘದೂತದ ನಾಲ್ಕಾರು ಕನ್ನಡ ಅನುಕೃತಿಗಳು ಹತ್ತಿರ ಬಂದಿವೆ ಎಂಬುದು ಓದುಗರ ಅನುಭವವಾಗಿದೆ. “ಸೃಜನಶೀಲ ಅನುವಾದಸಾಮರ್ಥ್ಯವು ಒಂದು ಕೊಡುಗೆ. ಅದು ಸಾಹಿತ್ಯವನ್ನು ಮೀರಿದ ಶಕ್ತಿ” ಎಂದು ಸೂತ್ರಿಸಿರುವ ತೀ.ನಂ.ಶ್ರೀ. ಅವರು ಅದಕ್ಕೆ ನಿದರ್ಶನವಾಗಿ ಕೊಟ್ಟಿರುವುದು
’ಗೌರೀವೃಕ್ಷಭೃಕುಟಿ ರಚನಾಂ…’ ಮೇಘದೂತ ಪದ್ಯದ ಬೇಂದ್ರೆಯವರ ಅನುವಾದವನ್ನು:
ಗೌರಿ ಮುರಿವಳಬ್ಬಬ್ಬ ಹುಬ್ಬ – ಏನೇನಕ್ಕು ನೊರೆಗಳಿಂದ |
ಜಗ್ಗುತಿಹಳು ಶಿವಜಡೆಯ ಚಂದ್ರಮಣಿ ಕೈಯ ತೆರೆಗಳಿಂದ ||
“ಮೂಲದಲ್ಲಿಯೇ ಎಲ್ಲರೂ ಓದುವುದು ಅಸಾಧ್ಯ. ಆದ್ದರಿಂದ ಅವುಗಳನ್ನು ಚೆನ್ನಾಗಿ ಭಾಷಾಂತರ ಮಾಡಿಕೊಡುವ ವಿದ್ವಾಂಸರ ಉಪಕಾರ ದೊಡ್ಡದು. ಭಾಷಾಂತರವು ತೃಪ್ತಿಕರವಾಗಿದ್ದಲ್ಲಿ ಮೂಲವನ್ನು ನಾವು ಓದಲಿಲ್ಲವಲ್ಲಾ ಎಂದು ಚಿಂತಿಸುವ ಕಾರಣವಿಲ್ಲ” – ಎಂಬ ಡಾ. ಕೆ. ಕೃಷ್ಣಮೂರ್ತಿಯವರ ಅನುಭವೋಕ್ತಿಯೂ ಆರ್ನಾಲ್ಡನ ಮಾತಿಗೆ ಪೂರಕವಾಗಿದೆ.
ಹೀಗಿರುವಾಗ ಅತ್ಯಂತ ಹೆಚ್ಚಿನ ಭಾಷಾನುವಾದಗಳನ್ನು ಹೊಂದಿರುವ ಗ್ರಂಥಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದೆಯೆಂದು ಶೈಲಜಾ ಹೆಗಡೆ ಅವರು ಗುರುತಿಸುವ ಮೇಘದೂತ ಕಾವ್ಯವು ಕನ್ನಡದಲ್ಲಿಯೂ ಹತ್ತಾರು ಅನುವಾದಕರನ್ನು ಆಕರ್ಷಿಸಿರುವುದು ಸ್ವಾಭಾವಿಕವಾಗಿದೆ. ವಿವಿಧ ಅನುವಾದಗಳ ಪ್ರತ್ಯೇಕ ಸೌಂದರ್ಯಗಳನ್ನು ಗಮನಕ್ಕೆ ತರುವ ದೃಷ್ಟಿಯಿಂದ ಶೈಲಜಾ ಹೆಗಡೆ ಅವರು ಮೇಘದೂತದ ಆರಂಭದ ಪದ್ಯಗಳನ್ನು ಬೇರೆಬೇರೆ ಅನುವಾದಕರು ಹೇಗೆ ತರ್ಜುಮೆ ಮಾಡಿದ್ದಾರೆಂದು ಪ್ರದರ್ಶಿಸುವುದರ ಜೊತೆಯಲ್ಲಿ ಮರಾಠಿ ಭಾಷೆಯ ಪದ್ಯಾನುವಾದಗಳನ್ನೂ ನೀಡಿರುವುದು ಪ್ರಶಂಸನೀಯವಾಗಿದೆ.
ಮೂಲದಲ್ಲಿಯ ’ಕನಕವಲಯಭ್ರಂಶರಿಕ್ತ- ಪ್ರಕೋಷ್ಟಃ’, ’ದೂರಬಂಧುರ್ಗತೋಹಂ’, ’ವಿದ್ಯುದ್ಧಾಮಸ್ಫುರಿತಚಕಿತೈಃ’, ’ಹಿತ್ವಾ ಹಾಲಾಮಭಿಮತರಸಾಂ’, ’ತನ್ವೀ ಶ್ಯಾಮಾ ಶಿಖರಿದಶನಾ’, ಮೊದಲಾದ ಹಲವಾರು ಪದಗುಂಫನಗಳ ಹೆಚ್ಚಿನ ಅರ್ಥಸೂಕ್ಷ್ಮತೆಗಳನ್ನು ವಿವಿಧ ತರ್ಜುಮೆಕಾರರು ಪ್ರಕಾಶಪಡಿಸಿರುವುದನ್ನು ಶೈಲಜಾ ಹೆಗಡೆ ವಿವರವಾಗಿ ವರ್ಣಿಸಿದ್ದಾರೆ.
ಪದ್ಯಾನುವಾದಗಳ ಅನೇಕ ಪಂಕ್ತಿಗಳು ಸ್ವತಂತ್ರ ಸೂಕ್ತಿಗಳಾಗಿ ಬಳಕೆಗೊಳ್ಳಬಹುದಾದ ಸಾಧ್ಯತೆಯನ್ನು ಪಡೆದಿವೆ. ಉದಾಹರಣೆಗೆ :
ಕಸ್ಯಾತ್ಯಂತಂ ಸುಖಮುಪನತಂ
ದುಃಖಮೇಕಾಂತತೋವಾ |
ನೀಚೈರ್ಗಚ್ಛತ್ಯುಪರಿ ಚ ದಶಾ ಚಕ್ರನೇಮಿಕ್ರಮೇಣ ||
– ಈ ಪ್ರಸಿದ್ಧ ಪಂಕ್ತಿಯ ಕನ್ನಡ ಅನುಕೃತಿಗಳು ಹೀಗಿವೆ:
ಬಾಳಿನುದ್ದಕುವಿಹುದು ಸುಖದುಃಖಗಳ್ ಜಗದಿ |
ಗಾಲಿಯರಗಳ ತೆರದಿ ಕೆಳಗಿಳಿದು ಮತ್ತೆ
ಮೇಲೇರ್ವುದುಂ ಸಹಜಮಲ್ತೆ ||
(ಪಿ. ಬಸವಣ್ಣ)
ಒಂದಾದ ಮೇಲೊಂದು ಸುಖದುಃಖಗಳು ಬಂದು
ಚಕ್ರನೇಮಿಕ್ರಮದೆ ಪೊರಳುತಿಹವು ||
(ಎಸ್.ವಿ. ಪರಮೇಶ್ವರಭಟ್ಟ)
ಯಾರು ಬರಿಯ ಸುಖ, ಬರಿಯ ದುಃಖ ಪಟ್ಟವರು
ಲೋಕದಲ್ಲಿ?
ದೆಸೆಯೂ ಕೆಳಗೆ ಮೇಲಾಗಿ ತಿರುಗುವುದು
ಏಕಚಕ್ರದಲ್ಲಿ |
(ದ.ರಾ. ಬೇಂದ್ರೆ)
ಓರಂತಾರಂ ಪುದುಗಿದಪುದತ್ಯಂತ ದುಃಖಂ ಸುಖಂ
ಮೇಣ್
ಕೀಳುಂ ಮೇಲುಂ ದೆಸೆಯ ತಿರುಗುತ್ತಿರ್ಪುದೈ
ಗಾಲಿಸುತ್ತೋಲ್ ||
(ಗಣಪತಿ ಮೊಳೆಯಾರ)
ಸೊಗವನೊಂದನೆ ವೆತೆಯನೊಂದನೆ
ಮೊಗೆದು ಕುಡಿದವರುಂಟೆ ಮೇಲ-
ಕ್ಕೊಗೆಯುತುರುಳ್ಪವು ಚಕ್ರದರಗಳು ಬಾಳ
ಪರಿಯಂತೆ ||
(ಅ.ರಾ. ಮಿತ್ರ)
ಇಂತಹ ಹಲವಾರು ಉಕ್ತಿಗಳ ಉದ್ದಿ?ರ್ಥದ ಸೂಕ್ಷ್ಮ ವ್ಯಾಖ್ಯೆಗಳನ್ನು ಲೇಖಕರು ಅಲ್ಲಲ್ಲಿ ನೀಡಿದ್ದಾರೆ.
ಹೀಗೆ ಶ್ರೇಷ್ಠ ಕಾವ್ಯದ ಅನುವಾದಗಳನ್ನು ತುಲನೆ ಮಾಡುವುದರ ಮೂಲಕ ಸಾಮಾನ್ಯ ಓದುಗರಿಗೆ ದುರ್ಲಭವಾದ ನವುರಾದ ಸ್ವಾರಸ್ಯಗಳಿಗೆ ಗಮನ ಸೆಳೆದು ಶೈಲಜಾ ಹೆಗಡೆ ಅವರು ಮಾಡಿರುವ ಸಾಹಿತ್ಯಸೇವೆ ಮೇಲ್ಮಟ್ಟದ್ದಾಗಿದೆ. ಗ್ರಂಥವು ಒಳಗೊಂಡಿರುವ ಪ್ರತಿ ವಿವರವೂ ಅಧಿಕೃತ ರೀತಿಯದಾಗಿರುವುದೂ ಇಡೀ ಸಂಪ್ರಬಂಧದ ವ್ಯವಸ್ಥಿತತೆಯೂ ಬರಹದ ಸ್ಪಷ್ಟತೆಯೂ ಈ ಗ್ರಂಥವನ್ನು ಅನನ್ಯವಾಗಿಸಿವೆ. ಕಾವ್ಯಸಾಹಿತ್ಯಾಸಕ್ತರಿಗೆ ಇದು ಒಂದು ಶ್ರೇಷ್ಠ ಉಪಾಯನವಾಗಿದೆ. ಇದಕ್ಕಾಗಿ ಶೈಲಜಾ ಹೆಗಡೆ ಅವರು ಅಭಿನಂದನಾರ್ಹರಾಗಿದ್ದಾರೆ.