ಜಾತಿನಿರಾಸಕ್ತ ಸಮಾಜದ ನಿರ್ಮಾಣ ಒಂದು ಆದರ್ಶ ಎಂದರೆ ತಪ್ಪಲ್ಲ. ಸ್ವತಂತ್ರ ಭಾರತ ಈ ದಿಕ್ಕಿನಲ್ಲಿ ಹೊರಟಿದ್ದರೆ ರಾಷ್ಟ್ರದ ಪ್ರಗತಿಗೆ ಅದು ಎಷ್ಟೊಂದು ಪೂರಕ ಆಗಬಹುದಿತ್ತು? ಕಳೆದ ೭೦ ವರ್ಷಗಳಲ್ಲಿ ಸಮಾಜ ಯಾವ ರೀತಿಯಲ್ಲಿ ಒಂದು ಮನೆಯವರಂತೆ ಇದ್ದು ನಮ್ಮದೊಂದು ಸೌಹಾರ್ದಯುತ ಸಮಾಜ ಆಗಬಹುದಿತ್ತು? ಇದಕ್ಕೆ ಹೋಲಿಸಿದರೆ ಕಳೆದ ಏಳು ದಶಕಗಳಲ್ಲಿ ಆಗಿರುವುದೇನು? ಜಾತಿ, ಮತ, ಜನಾಂಗ, ಸಮುದಾಯ, ಭಾಷೆ ಮುಂತಾಗಿ ಯಾವ್ಯಾವ ನೆಲೆಗಳಲ್ಲಿ ಸಮಾಜವನ್ನು ಒಡೆಯಬಹುದೋ ಅದೆಲ್ಲವನ್ನೂ ನಾವು ಮಾಡಿಮುಗಿಸಿದ್ದೇವೆ. ವಿಶೇಷವೆಂದರೆ, ಪ್ರಜಾಪ್ರಭುತ್ವಕ್ಕೆ ಶಕ್ತಿಯನ್ನು ತುಂಬುವ ಒಂದು ಪ್ರಮುಖ ಸಂದರ್ಭವಾದ ಚುನಾವಣೆಯ ವೇಳೆ ಈ ವಿಭಾಜಕ ಪ್ರವೃತ್ತಿಗಳು ಉತ್ತುಂಗಕ್ಕೇರುತ್ತವೆ; ಎಲ್ಲ ಕೊಳೆ-ಕಶ್ಮಲಗಳು ಮುಂದಕ್ಕೆ ರಾಚುತ್ತವೆ.
ನಾವು ಗಂಭೀರವಾಗಿ ಚಿಂತಿಸಬೇಕಾದ ಅಂಶವೆಂದರೆ, ರಾಜಕಾರಣಿಗಳೇ ಈ ವಿಭಾಜಕ ಶಕ್ತಿಯ ಮೂಲ. ದೇಶದ ಮತದಾರರ ನಡುವೆ ಅವರು ಆಂತರಿಕ ಒಡಕುಗಳನ್ನು ತಂದುಹಾಕುತ್ತಾರೆ; ಪ್ರಾದೇಶಿಕತೆ, ಮತ, ಜಾತಿ, ಭಾಷೆ ಇವೆಲ್ಲ ಆ ಸಂದರ್ಭದ ಅಸ್ತ್ರಗಳಾಗುತ್ತವೆ. ಚುನಾವಣೆ ಬಂತೆಂದರೆ ಅವುಗಳಿಗೆ ಎಲ್ಲಿಲ್ಲದ ಮಹತ್ತ್ವ ಬಂದುಬಿಡುತ್ತದೆ. ಯಾವುದೇ ನಾಚಿಕೆ ಇಲ್ಲದೆ ಜಾತಿ ರಾಜಕಾರಣದ ಆಟವನ್ನು ಆಡಲಾಗುತ್ತದೆ. ಸಾಮಾಜಿಕ ಇಂಜಿನಿಯರಿಂಗ್ ಎನ್ನುವ ದೊಡ್ಡ ಹೆಸರನ್ನು ನೀಡುವ ಮೂಲಕ ಆಟ ನಡೆಯುತ್ತದೆ ಎಂಬುದೇ ವಿಶೇಷ.
ಚುನಾವಣೆ ಬಂತೆಂದರೆ ಸಾಕು ಎಲ್ಲ ಪತ್ರಿಕೆಗಳೂ ಪ್ರತಿಯೊಂದು ಕ್ಷೇತ್ರದ ಜಾತಿವಾರು ಚಿತ್ರಣ ನೀಡುತ್ತವೆ; ಮತ್ತು ಅದರ ಆಧಾರದಿಂದ ಯಾರು ಗೆಲ್ಲಬಹುದೆನ್ನುವ ಭವಿಷ್ಯ ಹೇಳುತ್ತವೆ. ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಪ್ರಕಟಗೊಂಡ ಒಂದು ಸಮೀಕ್ಷೆಯಲ್ಲಿ ಎಂತಹ ವಿಲಕ್ಷಣ ಸಾಲುಗಳಿದ್ದವೆಂದರೆ ಅದು ನಮ್ಮ ಮಾಧ್ಯಮಗಳಲ್ಲಿ ತುಂಬಿದ ಮತ-ಜಾತಿಗಳ ಕೊಳಕಿನ ಪ್ರತೀಕವೂ ಆಗಿದೆ: “ಆರಾ ಮತ್ತು ವೈಶಾಲಿ ಜಿಲ್ಲೆಗಳಲ್ಲಿ ಕೇಸರಿ ಅಭ್ಯರ್ಥಿಗಳಿಗೆ ತೀರಾ ಹಿಂದುಳಿದ ಜಾತಿ ಮತ್ತು ದಲಿತರಿಂದ ಬೆಂಬಲ ಬರುತ್ತಿದೆ. ಮೇಲ್ಜಾತಿಯ ವೈಶ್ಯರು, ಪಾಸ್ವಾನ್ಗಳು ಮತ್ತು ಮುಶಾಹರ್ಗಳ ಬೆಂಬಲ ಅವರಿಗೆ ಇದ್ದೇ ಇದೆ; ಅದರ ಆಧಾರದಲ್ಲಿ ಇದನ್ನು ಗಟ್ಟಿಮಾಡಬಹುದು.” ಅಂದರೆ ಜಾತಿಗಳನ್ನು ಗುತ್ತಿಗೆಗೆ ಹಿಡಿದಂತೆ ಇರುತ್ತವೆ ಈ ಮಾತುಗಳು.
ಜಾತಿಯ ಬಿಸಿಚರ್ಚೆ
ಚುನಾವಣೆಯ ವೇಳೆ ವಿದ್ಯುನ್ಮಾನ ಮಾಧ್ಯಮವು ವಹಿಸುವ ಪಾತ್ರ ಇನ್ನೂ ಕೆಟ್ಟದಾಗಿರುತ್ತದೆ. ಪ್ರತಿಯೊಂದು ಗುಂಪುಚರ್ಚೆಯ ಗಮನ (ಫೋಕಸ್) ಶೇಕಡಾವಾರು ಜಾತಿ ಮತ್ತು ವಿವಿಧ ಜಾತಿಗಳ ಸಮೀಕರಣವೇ ಆಗಿರುತ್ತದೆ. ಅದರಲ್ಲಿ ಭಾಗವಹಿಸುವ ಸಮನ್ವಯಕಾರರು (ಆಂಕರ್ಗಳು) ಮತ್ತು ವಿಷಯ ಪರಿಣತರು (ಪ್ಯಾನೆಲಿಸ್ಟ್ಗಳು) ಸಮಾಜವನ್ನು ಒಡೆಯುವಂತಹ ಮಾತುಗಳನ್ನೇ ಆಡುತ್ತಿರುತ್ತಾರೆ; ’ಎಲ್ಲ ಒಕ್ಕಲಿಗರು ಎ – ಪಕ್ಷಕ್ಕೆ ಮತ ಹಾಕುತ್ತಾರೆ’; ಮುಸ್ಲಿಮರು ಬಿ ಪಾರ್ಟಿಗೆ ಮತ ಹಾಕುವುದಿಲ್ಲ’; ಎಲ್ಲ ದಲಿತರು ಸಿ ಪಕ್ಷದ ಜೊತೆಗಿದ್ದಾರೆ’; ’ಬ್ರಾಹ್ಮಣರು ಇ – ಪಕ್ಷದ ಮೇಲಿನ ತಮ್ಮ ನಿಷ್ಠೆಯನ್ನು ಬದಲಿಸುವುದಿಲ್ಲ’; ’ಲಿಂಗಾಯತರು ಎಫ್ ಪಕ್ಷದ ಜೊತೆಗಿರುತ್ತಾರೆ’; ’ಕುರುಬರ ಬೆಂಬಲ ಜಿ ಪಕ್ಷಕ್ಕೆ ಮುಂದುವರಿಯುತ್ತದೆ’ – ಇತ್ಯಾದಿ ಇತ್ಯಾದಿ. ಹಾಗಾದರೆ ಈ ದೇಶದ ಪ್ರಜೆಗಳಾಗಿ, ಭಾರತೀಯರಾಗಿ ಮತದಾನ ಮಾಡುವವರು ಯಾರು?
ಪತ್ರಿಕೆಗಳಲ್ಲಿ ಪ್ರಕಟಿಸುವ ಜನಾಭಿಪ್ರಾಯ ಸಂಗ್ರಹ ಸಮೀಕ್ಷೆಗಳನ್ನು ಕೂಡ ಅದೇ ರೀತಿಯಲ್ಲಿ ಮಾಡುತ್ತಾರೆ; ಅಲ್ಲಿ ಕೇಳುವ ಬಹುತೇಕ ಪ್ರಶ್ನೆಗಳು ಸಮಾಜವನ್ನು ಒಡೆಯುವ ರೀತಿಯಲ್ಲೇ ಇರುತ್ತವೆ. ಉದಾಹರಣೆಗೆ, ಈ ಸಲ ಮುಸ್ಲಿಮರ ವೋಟು ಒಡೆಯುತ್ತದೆಯೆ? ದಲಿತರಿಗೆ ಎಕ್ಸ್ ಪಕ್ಷದ ಜೊತೆ ಸಿಟ್ಟಿದೆಯೆ? ಒಕ್ಕಲಿಗರು ಈಗಲೂ ವೈ ಪಕ್ಷದ ಜೊತೆಗೆ ಇದ್ದಾರೆಯೆ? – ಇತ್ಯಾದಿ. ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಪರಿಶೀಲಿಸುವುದು ಕೂಡ ಜಾತಿವಾರಾಗಿಯೇ ನಡೆಯುತ್ತದೆ. ವಿವಿಧ ಜಾತಿಗಳ ವೋಟಿನ ಪಾಲಿನ ಪ್ರಕಾರ ಅದನ್ನು ನೋಡಿ ಸುದೀರ್ಘವಾಗಿ ವಿಶ್ಲೇಷಿಸಲಾಗುತ್ತದೆ. ಆ ಮೂಲಕ ಪಕ್ಷೀಯ ಭಾವನೆಗಳಿಗೆ ಪ್ರಚೋದನೆ ನೀಡುತ್ತಾರೆ.
ಹೆಚ್ಚಿನ ಟಿವಿ ಚಾನಲ್ಗಳು ಈಗ ಪ್ರಧಾನ ಸಮಯ(ಪ್ರೈಮ್ಟೈಮ್)ದಲ್ಲಿ ಗುಂಪುಚರ್ಚೆ ನಡೆಸುವುದನ್ನು ಸುಲಭದ ದಾರಿಯಾಗಿ ಮಾಡಿಕೊಂಡಂತಿದೆ; ವಿವಾದ ಸೃಷ್ಟಿಸುವುದಕ್ಕೆ ಇದು ಅನುಕೂಲ. ದೊಡ್ಡದೊಡ್ಡ ಮಾತು ಉರುಳಿಸುವವವರನ್ನು ಕರೆದು ಅವರಿಗೆ ಬೇಕಾಬಿಟ್ಟಿ ನಾಲಗೆ ಹರಿಬಿಡಲು ಅವಕಾಶ ಕಲ್ಪಿಸುತ್ತಾರೆ. ಭಾವನೆಗಳಿಗೆ ಪ್ರಚೋದನೆ ನೀಡುವ ವಿಷಯಗಳನ್ನು ಎತ್ತಿಕೊಂಡು ಮಾತುಬೆಳೆಸುತ್ತಾರೆ. ಜಾತಿ, ಮತ, ಭಾಷೆಗಿಂತ ಹೆಚ್ಚು ಭಾವನೆಗಳನ್ನು ಕೆರಳಿಸುವ ವಸ್ತು ಯಾವುದಿದೆ? ಎಲ್ಲ ಪಕ್ಷಗಳು ಲಜ್ಜೆಗಟ್ಟು ಜಾತಿ-ಮತಗಳ ಕಾರ್ಡ್ ಬಳಸುತ್ತವೆ. ಆದರೂ ಕೋಮುವಾದಿಗಳೆಂದು ಕರೆಯುವುದು ಮಾತ್ರ ಬೇರೆಯವರನ್ನು.
ಯಾವುದೇ ಒಂದು ದೇಶದ ಪ್ರಜಾಪ್ರಭುತ್ವವು ಪಕ್ವ ಎಂದಾದರೆ ಅಲ್ಲಿನ ಚುನಾವಣಾಸಮೀಕ್ಷೆಯಲ್ಲಿ ಆರ್ಥಿಕಪ್ರಗತಿ, ರಾ?ದ ಭದ್ರತೆ, ಅಭಿವೃದ್ಧಿಯ ಆಯಾಮಗಳು, ಉದ್ಯೋಗಾವಕಾಶ, ಶಿಕ್ಷಣಸವಲತ್ತು, ಆರೋಗ್ಯಸೇವೆಯಂತಹ ವಿ?ಯಗಳು ಆಧಾರವಾಗಬೇಕು. ಆದರೆ ನಮ್ಮಲ್ಲಿ ಅದು ನಡೆಯುತ್ತಿಲ್ಲ. ಬೇಸರದ ವಿಷಯವೆಂದರೆ, ದೇಶದ ಹಿತಕ್ಕೆ ಪರವಾದ ಎಲ್ಲ ವಿ?ಯಗಳನ್ನು ಅಲಕ್ಷಿಸಲಾಗುತ್ತಿದೆ; ಜಾತಿ ಮತ್ತು ಕೋಮು ನಿಷ್ಠೆಗಳೇ ಅಲ್ಲಿ ಮುಖ್ಯವಾಗುತ್ತಿವೆ.
ದೇಶಕ್ಕೆ ಸಾತಂತ್ರ್ಯ ಬಂದು ೭೦ ವರ್ಷಗಳಾಗುವ ಹೊತ್ತಿಗೆ ಪ್ರಾಂತೀಯ ಭಾವನೆಗಳಿಗೆ ಸಂಬಂಧಿಸಿ ನಾವು ಹೆಚ್ಚು ಆಳಕ್ಕೆ ಇಳಿಯುತ್ತಿದ್ದೇವೆ; ಈ ಪಿಡುಗು ಹೆಚ್ಚಲು ಚುನಾವಣೆಯೇ ಮೂಲಕಾರಣವಾಗುತ್ತಿದೆ. ಈ ವೈರಸ್ ಹಬ್ಬುವಲ್ಲಿ ಮಾಧ್ಯಮಗಳು ವೇಗವರ್ಧಕದ ಪಾತ್ರವನ್ನು ವಹಿಸುತ್ತಿವೆ. ಇಡೀ ವಾತಾವರಣ ಎಷ್ಟೊಂದು ವಿಷಪೂರಿತವಾಗುತ್ತಿದೆ ಎಂದರೆ ಜಾತಿಲೆಕ್ಕಾಚಾರಗಳೇ ಪ್ರಧಾನವಾಗುತ್ತಿವೆ. ದೇಶದ ರಾಜಕೀಯ ವ್ಯವಸ್ಥೆ ಮತ್ತು ಏಕತೆಯ ಮೇಲೆ ಮುಖ್ಯವಾಗಿ ಐದು ಅತ್ಯಂತ ಕೆಟ್ಟ ಪರಿಣಾಮಗಳು ಕಂಡುಬರುತ್ತಿವೆ. ಮೊದಲನೆಯದಾಗಿ, ಮತದಾರರನ್ನು ಸಂಕುಚಿತ ಪ್ರಾಂತೀಯ ಮಾನಸಿಕತೆಯಿಂದ ಮೇಲೆತ್ತುವ ಬದಲು ಮೇಲಿಂದ ಮೇಲೆ ಅದನ್ನು ನೆನಪಿಸಲಾಗುತ್ತದೆ; ಅವರ ಜಾತಿಗಳನ್ನು ನೆನಪಿಸಿ ಅದಕ್ಕೆ ನಿಷ್ಠರಾಗಿರುವಂತೆ ಪ್ರಚೋದಿಸಲಾಗುತ್ತದೆ. ಎರಡನೆಯದಾಗಿ ಮತದಾರರು ತಮ್ಮ ಜಾತಿಗಳ ನಾಯಕರಿಂದ ಉತ್ತರದಾಯಿತ್ವ(ಹೊಣೆಗಾರಿಕೆ) ವನ್ನು ಕೇಳದಿರುವ ರೀತಿಯಲ್ಲಿ ಅವರ ಬ್ರೈನ್ವಾಶ್ ಮಾಡಲಾಗುತ್ತದೆ.
ಮೂರನೆಯದಾಗಿ ಜಾತಿ ಆಧಾರಿತ ವೋಟ್ಬ್ಯಾಂಕಿನ ನಿರಂತರ ಬೆಂಬಲದ ಭರವಸೆ ಇರುವ ಕಾರಣ ಹೆಚ್ಚಿನ ರಾಜಕಾರಣಿಗಳು ತಮ್ಮ ಪಕ್ಷವನ್ನು ಕುಟುಂಬ ಉದ್ಯಮವಾಗಿ ಬದಲಾಯಿಸಿದ್ದಾರೆ. ನಾಲ್ಕನೆಯದಾಗಿ, ಜಾತಿರಾಜಕೀಯದ ಕಪಿಮುಷ್ಟಿ ಎಷ್ಟೊಂದು ಸರ್ವವ್ಯಾಪಿಯಾಗಿದೆ ಎಂದರೆ ಮುಕ್ತವಾಗಿ ಇರಬಯಸುವ ಪಕ್ಷಗಳು ಕೂಡ ಪ್ರತಿಕ್ಷೇತ್ರಕ್ಕೂ ಜಾತಿಲೆಕ್ಕಾಚಾರದಂತೆ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಹುಡುಕುತ್ತವೆ. ಕೊನೆಯದಾಗಿ, ಅತ್ಯಂತ ದುರದೃ?ಕರ ಅಂಶವೆಂದರೆ, ಅಭ್ಯರ್ಥಿಗಳ ಅರ್ಹತೆ, ಸಾಮರ್ಥ್ಯ ಹಾಗೂ ಪ್ರಾಮಾಣಿಕತೆಗಳನ್ನು ಕೇಳುವವರೇ ಇಲ್ಲವಾಗಿದೆ. ಜಾತಿಯೇ ಮುಖ್ಯವಾದ ಕಾರಣ, ದೇಶದಲ್ಲಿ ಪ್ರಶ್ನಾರ್ಹ ಚಾರಿತ್ರ್ಯ ಮತ್ತು ಕಳಪೆಗುಣಮಟ್ಟದ ನಾಯಕರು ರಾರಾಜಿಸುವಂತಾಗಿದೆ.
ಇಂದಿನ ಸ್ಥಿತಿ
ಸಂವಿಧಾನದ ೩೨೪ನೇ ವಿಧಿಯ ಪ್ರಕಾರ ಚುನಾವಣಾ ಆಯೋಗಕ್ಕೆ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಇದೆ. ಚುನಾವಣೆಯ ಮೇಲುಸ್ತುವಾರಿ, ನಿರ್ದೇಶನ ಮತ್ತು ನಿಯಂತ್ರಣದ ಜವಾಬ್ದಾರಿ ಅದರದ್ದಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಹಲವು ಸುಧಾರಣೆಗಳನ್ನು ತಂದು, ನಿಷ್ಪಕ್ಷವಾಗಿ ಕಾರ್ಯನಿರ್ವಹಿಸುವ ಮೂಲಕ ಆಯೋಗವು ದೇಶಕ್ಕೆ ಹೆಮ್ಮೆ ತಂದಿದೆ. ೧೯೭೧ರಿಂದ ದೇಶದಲ್ಲಿ ಎಲ್ಲ ಚುನಾವಣೆಗಳಿಗೆ ಮಾದರಿ ನೀತಿಸಂಹಿತೆಯು ಜಾರಿಯಾಗುತ್ತಿದೆ. ಮಾದರಿ ಸಂಹಿತೆಯಿಂದಾಗಿ ಎಲ್ಲರ ಮೇಲೆ ನೈತಿಕತೆಯ ಒತ್ತಡ ಬಂದಿದೆ.
ಈ ನಿಟ್ಟಿನಲ್ಲಿ ದೇಶದ ಜನಪ್ರಾತಿನಿಧ್ಯ ಕಾಯ್ದೆ – ೧೯೫೦ ಮತದಾರರ ಪಟ್ಟಿ ರಚನೆ ಹಾಗೂ ಪರಿಷ್ಕರಣೆಯ ಬಗ್ಗೆ ಹೇಳಿದರೆ, ಜನಪ್ರಾತಿನಿಧ್ಯ ಕಾಯ್ದೆ – ೧೯೫೧ ಮುಖ್ಯವಾಗಿ ಚುನಾವಣೆಯನ್ನು ನಡೆಸುವುದು ಮತ್ತು ಚುನಾವಣೋತ್ತರ ವಿವಾದಗಳ ಪರಿಹಾರದ ಕುರಿತು ಹೇಳುತ್ತದೆ. ೧೯೫೧ರ ಕಾಯ್ದೆಯ ೧೨೩ನೇ ಸೆಕ್ಷನ್ನಲ್ಲಿ ಅಭ್ಯರ್ಥಿಗಳ ಅನರ್ಹತೆಯ ವಿಷಯ ಕೂಡ ಇದೆ. ೧೯೫೧ರ ಕಾಯ್ದೆಯ ಸೆಕ್ಷನ್ ೧೨೩(೩) ರ ಪ್ರಕಾರ ಅಭ್ಯರ್ಥಿ, ಆತನ ಏಜೆಂಟ್, ಅಥವಾ ಅವರಿಬ್ಬರ ಸೂಚನೆಯ ಮೇರೆಗೆ ಯಾರಾದರೂ ಮತ, ಜಾತಿ, ಜನಾಂಗ, ಸಮುದಾಯ ಅಥವಾ ಭಾ?ಗಳ ಆಧಾರದಲ್ಲಿ ಮತಹಾಕಲು ಅಥವಾ ಹಾಕದಿರಲು ಸೂಚನೆ ನೀಡಿದರೆ ಅದು ಭ್ರ? ಕ್ರಮವೆನಿಸುತ್ತದೆ. ೧೨೩ (೩ಎ) ಪ್ರಕಾರ ದೇಶದ ನಾಗರಿಕರ ನಡುವೆ ಮತ, ಜನಾಂಗ, ಜಾತಿ, ಸಮುದಾಯ ಅಥವಾ ಭಾ?ಗಳ ಆಧಾರದಲ್ಲಿ ದ್ವೇ?ಭಾವನೆಯನ್ನು ಕೆರಳಿಸಿದರೂ ಅದು ಭ್ರಷ್ಟ ಕ್ರಮವೆನಿಸುತ್ತದೆ.
ಮೇಲಿನ ಅಂಶಗಳು ಪ್ರಭಾವಶಾಲಿಯಾಗಿರುವಂತೆ ಕಂಡರೂ ಅವು ಹೆಚ್ಚಿನ ಪರಿಣಾಮ ಬೀರಿಲ್ಲ; ಮೂರು ಕೊರತೆಗಳು ಅದಕ್ಕೆ ಕಾರಣವೆಂದು ಭಾವಿಸಲಾಗಿದೆ:
- ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಮಾತ್ರ ಇವು ಅನ್ವಯವಾಗುತ್ತವೆ; ಮಾದರಿ ನೀತಿಸಂಹಿತೆಯು ಜಾರಿಗೆ ಬರುವ ಮುನ್ನವೇ ಈ ಅನಿಷ್ಟಕಾರಿ ಪ್ರವೃತ್ತಿಗಳು ತಮ್ಮ ಕೆಲಸ ಮಾಡಿರುತ್ತವೆ.
- ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವಾಗ ಅದನ್ನು ತಡೆಯುವ ಅಥವಾ ಶಿಕ್ಷೆಯ ಕ್ರಮವನ್ನು ಕೈಗೊಳ್ಳುವಂತಿಲ್ಲ. ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಚುನಾವಣಾ ತಕರಾರು ಅರ್ಜಿಯ ಮೂಲಕ ಮಾತ್ರ ಅಕ್ರಮಗಳನ್ನು ಪ್ರಶ್ನಿಸಲು ಸಾಧ್ಯ; ಆದರೆ ಅಷ್ಟರೊಳಗೇ ತುಂಬಾ ಹಾನಿ ಆಗಿರುತ್ತದೆ.
- ಸೋತ ಅಭ್ಯರ್ಥಿಗಳ ವಿರುದ್ಧ ಕ್ರಮಕ್ಕೆ ಅವಕಾಶವಿಲ್ಲ; ಅಂದರೆ ಸೋತವರಿಂದ ಬಹಳಷ್ಟು ಅಕ್ರಮಗಳು ನಡೆದು ಚುನಾವಣಾ ವ್ಯವಸ್ಥೆಗೆ ಹಾನಿಯಾಗಿದ್ದರೂ ಅವರು ಶಿಕ್ಷೆಯಿಂದ ಪಾರಾಗುತ್ತಾರೆ.
ಸೆಕ್ಷನ್ ೧೨೫ರ ಅಧ್ಯಾಯ ೩ ಚುನಾವಣಾ ಅಕ್ರಮಗಳ ಶಿಕ್ಷೆಯ ಬಗ್ಗೆ ಹೇಳುತ್ತದೆ. ಮತ, ಜನಾಂಗ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದಲ್ಲಿ ನಾಗರಿಕರ ನಡುವೆ ದ್ವೇಷ ಹಬ್ಬುವವರಿಗೆ ಮೂರು ವರ್ಷಗಳವರೆಗೆ ಸೆರಮನೆವಾಸವನ್ನು ವಿಧಿಸಬಹುದು; ದಂಡ ವಿಧಿಸಬಹುದು ಅಥವಾ ಎರಡನ್ನೂ ವಿಧಿಸಬಹುದು. ಅದರೆ ನಮ್ಮ ದೇಶದಲ್ಲಿ ಮಾಮೂಲಾದಂತೆ ಕಾನೂನುಕ್ರಮಕ್ಕೆ ದೀರ್ಘಕಾಲ ತಗಲುವ ಕಾರಣ ಅದು ಪರಿಣಾಮ ಬೀರುತ್ತಿಲ್ಲ; ಜನ ಮರೆತ ಮೇಲೆ ಯಾವುದೋ ಶಿಕ್ಷೆ ಪ್ರಕಟವಾಗುತ್ತದೆ; ಎಷ್ಟು ಸಲ ಶಿಕ್ಷೆಯೇ ಇರುವುದಿಲ್ಲ.
ರಾಜಕೀಯ ಪಕ್ಷಗಳ ನೋಂದಣಿಯ ಅಧಿಕಾರವನ್ನು ಚುನಾವಣಾ ಆಯೋಗವು ಹೊಂದಿದೆ. ೧೯೫೧ರ ಕಾಯ್ದೆಯ ೨೯ಎ ಸೆಕ್ಷನ್ ಆಯೋಗಕ್ಕೆ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳನ್ನು ನೋಂದಾಯಿಸುವ ಅಧಿಕಾರವನ್ನು ನೀಡುತ್ತದೆ; ಆದರೆ ಆಯೋಗಕ್ಕೆ ನೋಂದಣಿಯನ್ನು ರದ್ದುಪಡಿಸುವ ಅಧಿಕಾರವಿಲ್ಲ. ಅದರಿಂದಾಗಿ ರಾಜಕೀಯ ಪಕ್ಷಗಳು ಜನರನ್ನು ಒಡೆಯುವಂತಹ ಕೆಲಸ ಮಾಡಿಯೂ ಶಿಕ್ಷೆಯಿಂದ ಪಾರಾಗುವ ಅವಕಾಶವನ್ನು ಪಡೆಯುತ್ತವೆ.
ಆಯೋಗಕ್ಕೆ ಜವಾಬ್ದಾರಿ ಇದೆ
೧೯೫೦ರ ಕಾಯ್ದೆಯ ೨೮ನೇ ಸೆಕ್ಷನ್ ಮತ್ತು ೧೯೫೧ರ ಕಾಯ್ದೆಯ ೧೬೯ನೇ ಸೆಕ್ಷನ್ಗಳ ಪ್ರಕಾರ ಕೇಂದ್ರಸರ್ಕಾರವು ಚುನಾವಣಾ ಆಯೋಗದ ಜೊತೆ ಚರ್ಚಿಸಿ, ಚುನಾವಣೆಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸುತ್ತದೆ. ಈ ನಡುವೆ ಆಯೋಗದ ಶಿಫಾರಸುಗಳನ್ನು ಕೇಂದ್ರಸರ್ಕಾರ ಒಪ್ಪಲೇಬೇಕೆಂದಿಲ್ಲ. ಬಹಳಷ್ಟು ಸಲ ರಚನೆಯಾದ ಅಥವಾ ತಿದ್ದುಪಡಿಯಾದ ನಿಯಮಗಳು ಚುನಾವಣಾ ಆಯೋಗದ ಶಿಫಾರಸಿಗೆ ಅನುಗುಣವಾಗಿ ಇರುವುದಿಲ್ಲ. ಆದರೆ ನಾವು ಒಂದು ಅಂಶವನ್ನು ಮರೆಯಬಾರದು; ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಹೆಚ್ಚುಹೆಚ್ಚು ಅಧಿಕಾರವನ್ನು ನೀಡುತ್ತಾ ಬಂದಿದೆ; ಇರುವ ಅಧಿಕಾರಗಳನ್ನು ದೃಢಪಡಿಸುತ್ತಲೇ ಇದೆ. ಒಂದು ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯ “ಕಾನೂನು ಮೌನವಿರುವಾಗ ಅಥವಾ ಚುನಾವಣೆಯ ವೇಳೆ ಪರಿಸ್ಥಿತಿಯ ನಿರ್ವಹಣೆಯಲ್ಲಿ ಅಸಮರ್ಥ ಇರುವಾಗ ಸಂವಿಧಾನದ ಪ್ರಕಾರ ಸೂಕ್ತನಿರ್ಧಾರ ಕೈಗೊಳ್ಳುವ ಅಧಿಕಾರ ಚುನಾವಣಾ ಆಯೋಗಕ್ಕಿದೆ” ಎಂದು ಹೇಳಿದೆ. ಅಂದರೆ ಜನರನ್ನು ಒಡೆಯುವ ವೋಟ್ಬ್ಯಾಂಕ್ ರಾಜಕೀಯದಿಂದ ಚುನಾವಣೆಯನ್ನು ಮುಕ್ತಗೊಳಿಸಲು ಬೇಕಾದ ಅಧಿಕಾರ ಆಯೋಗಕ್ಕಿದೆ ಎಂದು ಭಾವಿಸಲಡ್ಡಿಯಿಲ್ಲ.
ಈಗ ಮಾದರಿ ನೀತಿಸಂಹಿತೆಯು ಮುಖ್ಯವಾಗಿ ನಾಲ್ಕು ಅಂಶಗಳಿಗೆ ಸೀಮಿತವಾಗಿದೆ. ಅವುಗಳೆಂದರೆ: ಎ) ಅಧಿಕಾರದಲ್ಲಿ ಪಕ್ಷಕ್ಕೆ ಪ್ರಯೋಜನವಾಗುವಂತೆ ಸರ್ಕಾರವು ಹೊಸ ಯೋಜನೆ ಅಥವಾ ಕಾರ್ಯಕ್ರಮದ ಘೋಷಣೆಯನ್ನು ಮಾಡಬಾರದು; ಮತದಾರರಿಗೆ ಯಾವುದೇ ರಿಯಾಯಿತಿಯನ್ನು ತೋರಿಸುವುದು ಅಥವಾ ಆರ್ಥಿಕ ನೆರವು ನೀಡುವುದು ಸಲ್ಲದು. ಬಿ) ಚುನಾವಣೆಯ ಹೊಣೆ ಇರುವ ಅಧಿಕಾರಿಗಳನ್ನು ನೀತಿಸಂಹಿತೆಯು ಜಾರಿಗೆ ಬಂದ ಬಳಿಕ ವರ್ಗಾವಣೆ ಮಾಡುವುದು ಸಲ್ಲದು. ಸಿ) ಚುನಾವಣೆಗೆ ಸಂಬಂಧಿಸಿ ಸರ್ಕಾರಿಯಂತ್ರದ ದುರುಪಯೋಗ ಮಾಡಬಾರದು. ಡಿ) ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮಾರ್ಗದರ್ಶನಕ್ಕೆ ಸಂಬಂಧಿಸಿ ಹಲವು ವಿಧಿ-ನಿಷೇಧಗಳಿವೆ.
ಈ ನಡುವೆ ಗಮನಾರ್ಹವಾದ ಅಂಶವೆಂದರೆ, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಗೆ ಚುನಾವಣೆಗೆ ಸಂಬಂಧಿಸಿ ಮಾರ್ಗದರ್ಶಿ ಸೂತ್ರವಿಲ್ಲ. ಅವು ಮತ, ಜನಾಂಗ, ಜಾತಿ, ಸಮುದಾಯ ಹಾಗೂ ಭಾ? ಆಧಾರಿತ ದ್ವೇ?ವನ್ನು ಹಬ್ಬಿದರೆ ಅವುಗಳನ್ನು ತಕ್ಷಣ ತಡೆಯವುದು ಕ?ಸಾಧ್ಯ. ಕಾಸಿಗಾಗಿ ಸುದ್ದಿಗಳು ಪ್ರಾಮಾಣಿಕವಾದ ಚುನಾವಣಾ ಸಮೀಕ್ಷೆಯಂತೆ ಪ್ರಕಟವಾಗುತ್ತವೆ. ಅವು ತತ್ತ್ವರಹಿತ ಅಭ್ಯರ್ಥಿ ಮತ್ತು ಪಕ್ಷಗಳಿಗೆ ಅನುಕೂಲ ಮಾಡುತ್ತಾ ಹೋಗುತ್ತವೆ. ಅದರಿಂದ ಇಡೀ ವಾತಾವರಣ ಗಬ್ಬೆದ್ದು ಹೋಗುತ್ತದೆ.
ಆದ್ದರಿಂದ ಚುನಾವಣಾ ಆಯೋಗವು ಮಾದರಿ ನೀತಿಸಂಹಿತೆಯ ವ್ಯಾಪ್ತಿಯನ್ನು ವಿಸ್ತರಿಸುವ ತೀವ್ರ ಅಗತ್ಯ ಕಂಡುಬಂದಿದೆ. ಚುನಾವಣೆ ಘೋಷಣೆಯಾದ ಬಳಿಕ ಮಾಧ್ಯಮಗಳಿಗೆ ಕೆಲವೊಂದು ವಿಧಿನಿಷೇಧಗಳನ್ನು ಹೇರಬೇಕಾಗಿದೆ:
- ಮತ, ಜಾತಿ ಮುಂತಾದವುಗಳನ್ನು ಆಧರಿಸಿದ ಸಾರ್ವಜನಿಕ ಸಮೀಕ್ಷೆ, ಅಭಿಪ್ರಾಯ ಸಂಗ್ರಹಗಳ ಮೇಲೆ ನಿಷೇಧವನ್ನು ಹೇರಬೇಕು.
- ಒಂದು ಚುನಾವಣಾ (ಲೋಕಸಭೆ, ವಿಧಾನಸಭೆ) ಕ್ಷೇತ್ರದಲ್ಲಿ ಯಾವ್ಯಾವ ಜಾತಿಯ ಜನ ಎಷ್ಟಿದ್ದಾರೆ, ಅವರು ಯಾವ ರೀತಿಯಲ್ಲಿ ಮತ ಹಾಕಬಹುದು ಮುಂತಾದ ವಿವರಗಳಿರುವ ಲೇಖನಗಳು ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗಕೂಡದು.
- ಫಲಿತಾಂಶದ ಬಗೆಗಿನ ಭವಿಷ್ಯ ನುಡಿಯಲು ಪ್ರತಿಯೊಂದು ಕ್ಷೇತ್ರದ ’ಸಾಮಾಜಿಕ ಇಂಜಿನಿಯರಿಂಗ್’ ಅನ್ನು ಬಗೆದು ಹೇಳಲು ಟಿವಿ ಚಾನೆಲ್ಗಳಿಗೆ ಅವಕಾಶ ಸಲ್ಲದು.
ಚುನಾವಣಾ ಚಿಹ್ನೆ (ಮೀಸಲು ಮತ್ತು ನೀಡಿಕೆ) ಆದೇಶ ೧೯೬೮ರ ಪ್ರಕಾರ ಆಯೋಗಕ್ಕೆ ಯಾರಾದರೂ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಪಕ್ಷದ ಚಿಹ್ನೆಯನ್ನು ವಾಪಸು ಪಡೆಯುವ ಅಧಿಕಾರವಿದೆ; ಚಿಹ್ನೆ ಕೈತಪ್ಪಿದರೆ ಸಂಬಂಧಪಟ್ಟ ಪಕ್ಷಕ್ಕೆ ಕಾರ್ಯನಿರ್ವಹಿಸುವುದೇ ಅಸಾಧ್ಯವಾಗಿಬಿಡುತ್ತದೆ; ಆಯೋಗವು ಪ್ರಸ್ತುತ ಅಧಿಕಾರವನ್ನು ಸರಿಯಾಗಿ ಉಪಯೋಗಿಸಿ ಬಿಸಿಮುಟ್ಟಿಸಬೇಕು.
ಸುಧಾರಣೆಗೆ ಸಲಹೆ
ಒಟ್ಟಿನಲ್ಲಿ ಇಂದಿನ ವೋಟ್ಬ್ಯಾಂಕ್ ರಾಜಕೀಯದಿಂದಾಗಿ ದೇಶದ ಜನರ ನಡುವೆ ಒಗ್ಗಟ್ಟಿಗೆ ಭಂಗ ಬರುತ್ತಿದೆ; ಪೂರ್ವಗ್ರಹವಿಲ್ಲದೆ ಮತದಾನ ಮಾಡುವುದು ಅಸಾಧ್ಯವೆನಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ದೇಶದ ರಾಜಕಾರಣಿಗಳು ಬದಲಾಗುತ್ತಾರೆಂದು ನಿರೀಕ್ಷಿಸುವುದು ತಪ್ಪು. ಅವರಿಗೆ ಗುರಿ (ಚುನಾವಣೆಯಲ್ಲಿ ನಿಲ್ಲುವುದು) ಮುಖ್ಯವೇ ಹೊರತು ಮಾರ್ಗ(ನಿಯಮಬದ್ಧ ಕಾರ್ಯವಿಧಾನ) ವಲ್ಲ. ದೇಶವು ಉಳಿದು ಒಗ್ಗಟ್ಟಿನಲ್ಲಿ ಬೆಳೆಯಬೇಕಾದರೆ ಚುನಾವಣೆಗಳು ವಿಷಯ (issue) ಮತ್ತು ಸಾಧನೆ ಆಧಾರಿತ ಆಗಬೇಕು; ಜಾತಿಕಾರ್ಡಿನ ಬಳಕೆ ಸಲ್ಲದು. ಅದಕ್ಕಾಗಿ ತಪ್ಪು ಮಾಡುವ ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು. ತಪ್ಪೆಸಗಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ ಎಂಬುದು ಖಾತ್ರಿಯಾಗಬೇಕು; ಅವರ ರಾಜಕೀಯ ಭವಿ? ಕೊನೆಗೊಳ್ಳಬೇಕು.
೨೦೧೬ರ ಡಿಸೆಂಬರಿನಲ್ಲಿ ಚುನಾವಣಾ ಆಯೋಗವು ಪ್ರಸ್ತಾವಿತ ಚುನಾವಣಾ ಸುಧಾರಣೆಗಳ ಬಗ್ಗೆ ಒಂದು ಸಮಗ್ರ ಪತ್ರವನ್ನು ಸಿದ್ಧಪಡಿಸಿತು. ಅದನ್ನು ದೇಶದ ಜನತೆಯ ಗಮನಕ್ಕೂ ತರಲಾಗಿದೆ. ಆಯೋಗದ ಸಲಹೆಗಳಿಗೆ ಕೇಂದ್ರಸರ್ಕಾರ ಆದ? ಬೇಗ ಗಮನಕೊಡಬೇಕು. ಮುಖ್ಯವಾಗಿ ಚುನಾವಣೆಗೆ ಸಂಬಂಧಿಸಿದ ನಿಯಮಗಳು ರೂಪಿಸುವ ಅಧಿಕಾರವು ಚುನಾವಣಾ ಆಯೋಗದ್ದಾಗಿರಬೇಕು. ಕೇಂದ್ರಸರ್ಕಾರದ ಜೊತೆಗೆ ಆಯೋಗವು ವಿಚಾರವಿನಿಮಯ ನಡೆಸುವುದಕ್ಕೇನೂ ಅಭ್ಯಂತರವಿಲ್ಲ. ಮತ-ಜಾತಿಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿದ ಪಕ್ಷದ ನೋಂದಣಿಯನ್ನು ಅಮಾನತುಗೊಳಿಸುವ ಅಥವಾ ವಜಾ ಮಾಡುವ ಅಧಿಕಾರ ಆಯೋಗಕ್ಕಿರಬೇಕು. ಅದೇ ರೀತಿ ವಿಭಾಜಕ (ಪ್ರಾಂತೀಯ) ಭಾವನೆಗಳನ್ನು ಹಬ್ಬಿಸುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಿ ಚುನಾವಣಾ ಪ್ರಕ್ರಿಯೆಯಿಂದಲೇ ಹೊರಹಾಕಬೇಕು.
ಜಾತಿ, ಮತ, ಸಮುದಾಯಗಳ ಭೇದವಿಲ್ಲದೆ ಎಲ್ಲ ನಾಗರಿಕರಿಗೆ ಪ್ರವೇಶ ನೀಡುವ ಪಕ್ಷಗಳನ್ನು ಮಾತ್ರ ಆಯೋಗವು ನೋಂದಣಿ ಮಾಡಬೇಕು. ಸಂವಿಧಾನದ ನಿಯಮಗಳ ಪಾಲನೆ, ದೇಶದ ಸಾರ್ವಭೌಮತ್ವ, ಸಮಗ್ರತೆಗಳ ಬಗ್ಗೆ ಪಕ್ಷಗಳು ಪ್ರತಿಜ್ಞೆ ಕೈಗೊಳ್ಳಬೇಕು. ರಾಜಕೀಯ ಲಾಭಕ್ಕಾಗಿ ಜಾತೀಯತೆ, ಕೋಮುವಾದಗಳ ಮಾರ್ಗ ಹಿಡಿಯುವುದಿಲ್ಲವೆಂಬ ಘೋ?ಣೆಯನ್ನು ಸಲ್ಲಿಸಬೇಕು; ತಮ್ಮ ಉದ್ದೇಶಸಾಧನೆಯ ದಾರಿಯಲ್ಲಿ ಜಾತ್ಯತೀತತೆ ಮತ್ತು ತತ್ತ್ವಗಳಿಗೆ ಬದ್ಧರಾಗಿರುತ್ತೇವೆ ಎಂದು ಭರವಸೆ ನೀಡಬೇಕು.
ಏನಿದ್ದರೂ ಇಂದು ಜಾತಿಯ ಸುಳಿಗೆ ಸಿಕ್ಕಿರುವ ಚುನಾವಣೆ ವ್ಯವಸ್ಥೆಯನ್ನು ಅದರಿಂದ ಹೊರತರುವ ಸಾಮರ್ಥ್ಯ ಮತ್ತು ಅಧಿಕಾರಗಳಿರುವುದು ಚುನಾವಣಾ ಆಯೋಗಕ್ಕೆ ಮಾತ್ರ. ಆ ಸವಾಲನ್ನು ಅದು ತಡವಿಲ್ಲದೆ ಎತ್ತಿಕೊಳ್ಳಬೇಕು. ತಡಮಾಡಿದರೆ ದೇಶದ ಏಕತೆ, ಸಮಗ್ರತೆಗಳಿಗೇ ಅಪಾಯ ಎದುರಾದೀತು. ಈ ನಿಟ್ಟಿನಲ್ಲಿ ಕೇಂದ್ರಸರ್ಕಾರವು ಚುನಾವಣಾ ಆಯೋಗಕ್ಕೆ ಪೂರ್ತಿ ಬೆಂಬಲ ನೀಡಬೇಕು. (ಸಾಧಾರ)