
ಮನುಷ್ಯನ ಬಾಳಿಗೊಂದು ಧ್ಯೇಯ ಇರಬೇಕು. ಗುರಿಯಿಲ್ಲದ ಬದುಕು ಚುಕ್ಕಾಣಿಯಿಲ್ಲದ ನಾವೆಯಂತೆ. ಪ್ರವಾಹದಲ್ಲಿ ಕೊಚ್ಚಿಹೋಗುವ ತರಗೆಲೆಯಂತೆ. ನದಿಗೆ ತನ್ನ ಮೂಲಸೆಲೆಯಾದ ಸಮುದ್ರವನ್ನು ಸೇರುವುದೇ ಗುರಿ. ಅದೇ ನದಿಯಲ್ಲಿ ತೇಲಿಹೋಗುವ ಯಾವ ವಸ್ತುವಿಗೂ ಗುರಿ ಎಂಬುದಿಲ್ಲ. ನದಿ ತನ್ನನ್ನು ಎಲ್ಲಿಗೆ ಕರೆದೊಯ್ಯುತ್ತದೆಯೋ ಅಲ್ಲಿಗೆ ಹೋಗುತ್ತದೆಯೇ ವಿನಾ, ತಾನು ಬಯಸಿದ ಗುರಿಯನ್ನು ಸೇರುವುದಿಲ್ಲ. ಆದ್ದರಿಂದ ನಮ್ಮ ಗುರಿ ಯಾವುದು, ಗುರಿ ಸೇರಲು ದಾರಿ ಯಾವುದು ಎಂಬುದನ್ನು ಮೊದಲು ನಿಶ್ಚಯಿಸಬೇಕು. ಗುರಿ ಸೇರುವ ಪ್ರಯತ್ನವನ್ನು ಸಾಧನೆ ಎನ್ನುತ್ತಾರೆ. ಗುರಿಯಿಲ್ಲದ ಪ್ರಯತ್ನವನ್ನು, ಕೃತ್ಯವನ್ನು ಸಾಧನೆ ಎನ್ನಲಾಗುವುದಿಲ್ಲ. ಅದೊಂದು ಕತ್ತಲೆಕೋಣೆಯಲ್ಲಿ ಇಲ್ಲದ ಕಪ್ಪುಬೆಕ್ಕನ್ನು ಹುಡುಕಿದ ವ್ಯರ್ಥ ಪ್ರಯತ್ನದಂತೆ.
ಗುರಿಯೇ ಇಲ್ಲದಿದ್ದರೆ, ದಾರಿಯೇ ಗೊತ್ತಿಲ್ಲದಿದ್ದರೆ ಅಂತಹ ಬದುಕಿನಲ್ಲಿ ಸ್ವಾರಸ್ಯವೂ ಇರುವುದಿಲ್ಲ, ಸಾರ್ಥಕತೆಯೂ ಇರುವುದಿಲ್ಲ. ಭಗವಂತ ಪ್ರತಿಯೊಬ್ಬನನ್ನೂ ಒಂದೊಂದು ಉದ್ದೇಶವಿಟ್ಟು ಸೃಷ್ಟಿಸುತ್ತಾನೆ. ಉದ್ದೇಶವನ್ನು ಅರಿತು ಅದಕ್ಕೆ ತಕ್ಕಂತೆ ಬದುಕುವುದರಲ್ಲೆ ನಮ್ಮ ಸಾಧನೆಯ ಸಾರ್ಥಕತೆ ಅಡಗಿದೆ.
ಗುರಿ ತಲಪದಿದ್ದರೂ ನಮ್ಮ ಸಾಧನೆಯಿಂದ ನಾವೆಂದೂ ವಿಮುಖರಾಗಬಾರದು. ಎಲ್ಲರೂ ಗುರಿ ಮುಟ್ಟುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೆ ಪ್ರಯತ್ನವನ್ನಂತೂ ಮಾಡಲೇಬೇಕು. ಯಾಕೆಂದರೆ ಗುರಿ ಸೇರದಿದ್ದರೂ, ಗುರಿಯ ದಾರಿಯಲ್ಲಿ ಜೀವನ ಸವೆಸಿದ ತೃಪ್ತಿಯಾದರೂ ಸಾಧಕನಿಗೆ ಸಿಗುತ್ತದೆ. ಈ ಬಗ್ಗೆ ಡಿ.ವಿ.ಜಿ. ತಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಹೇಳಿದ್ದಾರೆ –
ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು |
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ?||
ಮುಟ್ಟಿ ನೋಡವನ ಮೈಕಟ್ಟು ಕಬ್ಬಿಣ ಗಟ್ಟಿ |
ಗಟ್ಟಿತನ ಗರಡಿ ಫಲ – ಮಂಕುತಿಮ್ಮ ||
(ಕಗ್ಗ – ೫೮೮)
ನಾವು ನಮ್ಮ ಸಾಧನೆಗಳೆಲ್ಲವನ್ನು ನಿರಂತರ ಮಾಡುತ್ತಿರಬೇಕು. ಒಬ್ಬ ಜಟ್ಟಿ ಕುಸ್ತಿ ಮಾಡುವಾಗ ಗೆಲ್ಲದಿದ್ದರೆ ಅವನು ಅಷ್ಟು ದಿನ ಮಾಡಿದ ಗರಡಿ ಕಸರತ್ತು, ಪಟ್ಟು ವರಸೆಗಳೆಲ್ಲ ಏನೇನು ಉಪಯೋಗವಿಲ್ಲ ಎಂದು ಎನ್ನಲಾದೀತೇನು? ಅವುಗಳ ಪರಿಣಾಮಗಳನ್ನು ಕಾಣಬೇಕೆಂದರೆ ಅವನ ಮೈ ಮುಟ್ಟಿ ನೋಡು. ಅದು ಕಬ್ಬಿಣದಂತೆ ಗಟ್ಟಿಯಾಗಿದೆ. ಈ ಗಟ್ಟಿತನವು ಗರಡಿಯ ಫಲ. ಆದುದರಿಂದ ಜೀವನದಲ್ಲಿ ಸಾಧನೆಯ ಪಥವನ್ನು ಬಿಡಬೇಡ.
ಅನಂತ ಅವಕಾಶ
ಸಾಧನೆಗೆ ಕೊನೆ ಎಂಬುದಿಲ್ಲ. ಒಂದು ಗುರಿ ತಲಪಿದರೆ, ಅಲ್ಲಿಂದ ಇನ್ನೊಂದು ಗುರಿಯನ್ನು ನಿಶ್ಚಯಿಸಿ ಆ ಪಥದಲ್ಲಿ ಸಾಗಬೇಕು. ಈ ದೃಷ್ಟಿಯಲ್ಲಿಯೇ ರಾಷ್ಟ್ರಕವಿ ಕುವೆಂಪುರವರು – “ಎಲ್ಲಿಯೂ ಇಲ್ಲದಿರು, ಮನೆಯನೆಂದೂ ಕಟ್ಟದಿರು, ಕೊನೆಯನೆಂದು ಮುಟ್ಟದಿರು” ಎಂಬುದಾಗಿ ಹಾಡಿದ್ದಾರೆ. ಬ್ರಹ್ಮಾಂಡವೂ ನಿರಂತರ ವಿಸ್ತಾರಗೊಳ್ಳುವಂತೆ, ಆತ್ಮ ಮನುಷ್ಯಸಾಧನೆಯ ಕ್ಷಿತಿಜಗಳು ನಿರಂತರ ವಿಸ್ತಾರಗೊಳ್ಳುತ್ತಲೆ ಇರಬೇಕು. ಸಮೀಪದ ನಕ್ಷತ್ರಗಳನ್ನು ಕಂಡವರು ದೂರದ ನಕ್ಷತ್ರಗಳೂ ಇವೆಯೆನ್ನುವ ತಿಳಿವಳಿಕೆಯನ್ನು ಇರಿಸಿಕೊಂಡಿರಬೇಕು. ನಾವು ನಿಂತಿರುವುದೇ ಜಗತ್ತಿನ ತುದಿ ಅಲ್ಲ. ನಮ್ಮ ಆಚೆಗೂ ಜಗತ್ತಿದೆ ಎಂಬ ಸತ್ಯವನ್ನು ಮನಗಾಣಬೇಕು.
ಅಮೆರಿಕದ ತಿಮೋತಿ ಫೆರ್ರಿಸ್ ಎಂಬ ಸಾಧಕನ ವಿಶೇಷತೆ ಏನೆಂದರೆ ಆತನಿಗೆ ಏನು ಅನ್ನಿಸುತ್ತದೆಯೋ ಅದನ್ನು ಸಾಧಿಸುತ್ತಾನೆ. ಒಂದು ದಿನ ಆತನಿಗೆ ಟ್ಯಾಂಗೋ ಡ್ಯಾನ್ಸರ್ ಆಗಬೇಕು ಅನ್ನಿಸಿತು, ಕಲಿಯಲಾರಂಭಿಸಿದ. ಅದೆಂಥ ಪರಿಣತಿ ಸಾಧಿಸಿದನೆಂದರೆ ಗಿನ್ನಿಸ್ ಪುಸ್ತಕದಲ್ಲಿ ದಾಖಲಾದ. ಒಂದು ದಿನ ಆತನಿಗೆ ವಿದೇಶೀ ಭಾಷೆಗಳನ್ನು ಕಲಿಯಬೇಕೆಂಬ ಆಸೆ ಉಂಟಾಯಿತು. ಚೀನಿ, ಜಪಾನಿ, ಜರ್ಮನ್, ಸ್ಪ್ಯಾನಿಶ್ ಭಾಷೆ ಕಲಿತ. ಚೈನೀಸ್ ಕಿಕ್ಬಾಕ್ಸಿಂಗ್ ಕಲಿಯಬೇಕೆನಿಸಿತು. ತಾಲೀಮು ಮಾಡಲಾರಂಭಿಸಿದ. ಕಲಿಕೆ ಆರಂಭಶೂರತ್ವಕ್ಕೆ ಮೀಸಲಾಗಿರಲಿಲ್ಲ. ಕಿಕ್ಬಾಕ್ಸಿಂಗ್ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದ. ಕೇಜ್ ಫೈಟರ್ ಆಗಬೇಕೆನಿತು. ನಾಲ್ಕು ಬಾರಿ ವಿಶ್ವಚಾಂಪಿಯನ್ ಆದ. ಶಾರ್ಕ್ಮೀನಿನ ಜತೆ ಈಜಬೇಕೆಸಿತು, ಈಜಿ ಬಂದ. ತೈವಾನ್ನಲ್ಲಿ ಎಂಟಿವಿ ಬ್ರೇಕ್ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚೀನಾ ಹಾಗೂ ಹಾಂಗ್ಕಾಂಗ್ನಲ್ಲಿ ಟಿ.ವಿ. ಧಾರಾವಾಹಿಗಳಲ್ಲಿ ನಾಯಕನಾಗಿ ನಟಿಸಿದ. ಥಾಯಲೆಂಡ್ನಲ್ಲಿ ಕೆಲವು ಟಿ.ವಿ. ಕಾರ್ಯಕ್ರಮಗಳನ್ನು ಆಂಕರ್ ಮಾಡಿದ. ಮೂವತ್ತಕ್ಕೂ ಅಧಿಕ ವಿಶ್ವದಾಖಲೆಯ ವೀರನಾದ. ಅಥ್ಲೆಟಿಕ್ ಪಟುಗಳಿಗೆ ಸಲಹೆಗಾರನಾಗಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯಕ್ಕೆ ಹೋಗಿ ಅತಿಥಿ ಉಪನ್ಯಾಸಕನಾಗಿ ಪಾಠಮಾಡಿದ. ಹೊಸ ಉದ್ಯಮ ಆರಂಭಿಸಿ, ಬೆಳೆಸಿ ಹಣ ಮಾಡುವುದು ಹೇಗೆಂದು ಕಾರ್ಯಾಗಾರ ಏರ್ಪಡಿಸಿದ. ಈ ಮಧ್ಯೆ ‘The 4 hour work week’ ಎಂಬ ಪುಸ್ತಕ ಸಹಿತ ಹನ್ನೆರಡು ಪುಸ್ತಕಗಳನ್ನು ಬರೆದ.
ತಾಯಿಗರ್ಭದಿಂದ ಆರು ವಾರಗಳ ಮೊದಲೇ ಜನಿಸಿದ ಫೆರ್ರಿಸ್ ಬದುಕಿ ಉಳಿಯಲಾರ ಎಂದು ವೈದ್ಯರು ಹೇಳಿದ್ದರು. ಜಗತ್ತಿಗೆ ಅವಸರವಾಗಿ ಬಂದ ಫೆರ್ರಿಸ್ ಇಷ್ಟೆಲ್ಲ ಸಾಧನೆಯನ್ನು ಇಪ್ಪತ್ತೊಂದು ವರ್ಷಗಳಲ್ಲಿ ಸಾಧಿಸಿದ ಎಂದರೆ ಆಶ್ಚರ್ಯವಾಗುತ್ತದೆ. ಇವೆಲ್ಲದರ ಬಳಿಕವೂ ಸಾಧನೆಗೆ ಆತ ವಿರಾಮ ಕೊಡಲಿಲ್ಲ. ೪೦ರ ಹರೆಯದಲ್ಲೂ ಸಾಧನೆಯ ಪಥದಲ್ಲಿ ಸಾಗುತ್ತಿದ್ದಾನೆ.
ಕೇವಲ ಹುಟ್ಟು, ಬೆಳವಣಿಗೆ, ಸಾವೇ ಜೀವನವಲ್ಲ. ಜೀವನವೆಂಬುದು ಅದಕ್ಕಿಂತ ಮಿಗಿಲಾದದ್ದು. ಹೆಚ್ಚಿನವರ ಬದುಕು ಹುಟ್ಟು, ಬೆಳವಣಿಗೆ, ಸಾವಿನಲ್ಲೆ ಅಂತ್ಯವಾಗುತ್ತದೆ. ಅಂತಹ ನಿಸ್ಸಾರ ಬದುಕಿಗೆ ಅಪವಾದವಾಗಬೇಕಾದರೆ ಸಮಾಜಕ್ಕೆ ಉಪಯೋಗವಾಗುವ ಸಾಧನೆ ಮಾಡಬೇಕು. ಸಾಧನೆಯನ್ನು ಇಡೀ ಪ್ರಪಂಚ ಗುರುತಿಸಬೇಕೆಂದೇನಿಲ್ಲ. ಕುಗ್ರಾಮದ ನಾಲ್ಕು ಜನರು ಗುರುತಿಸಿದರೂ ಸಾಕು. ಸೂರ್ಯ ಮುಳುಗಿದ ಮೇಲೆ ಒಂದು ಹಣತೆ ಸ್ವಲ್ಪ ಬೆಳಕು ಕೊಡುತ್ತದೆ, ಸೂರ್ಯ ಇಡೀ ಜಗತ್ತಿಗೆ ಬೆಳಕು ಕೊಟ್ಟಂತೆ ಹಣತೆ ಪ್ರಪಂಚವನ್ನೆಲ್ಲ ಬೆಳಗಿಸದೆ ಇರಬಹುದು. ಆದರೆ ನಾಲ್ಕು ಜನರಿಗೆ ಬೆಳಕು ಕೊಡುವ ಹಣತೆಯ ಸಾಧನೆ ಏನೂ ಕಡಮೆಯದಲ್ಲ.
ಪ್ರೇರಣಾದಾಯಿ
`ನನ್ನೊಬ್ಬನಿಂದ ಏನಾದೀತು? ಸಮಾಜದ ಅಪಾರ ಸಮಸ್ಯೆಯನ್ನು ನಾನೊಬ್ಬನೆ ನಿವಾರಿಸುವುದೆಂದರೆ ತಲೆ ಗಟ್ಟಿ ಇದೆಯೆಂದು ಬಂಡೆಗೆ ಚಚ್ಚಿದಂತೆ’ ಎಂದು ಭಾವಿಸುವವರೆ ಹೆಚ್ಚು. ಆದರೆ ಒಬೊಬ್ಬನಿಂದಲೇ ಸಮಸ್ಯೆಗಳು ನಿವಾರಣೆಯಾದ ಅನೇಕ ಉದಾಹರಣೆಗಳಿವೆ. ಜಗತ್ತಿನ ಎಲ್ಲ ಸಮಸ್ಯೆಗಳ ನಿವಾರಣೆಗೆ ನಾವು ಕೈಹಾಕಬೇಕಾಗಿಲ್ಲ. ಯಾವುದಾದರೂ ಒಂದು ಸಮಸ್ಯೆಯನ್ನು ನಮ್ಮ ಸತತ ಪ್ರಯತ್ನದಿಂದ ನಿವಾರಿಸಿದರೂ ಅದೇ ಒಂದು ದೊಡ್ಡ ಸಾಧನೆ. ಲೋಕಕ್ಕೆ ಮಾಡಿದ ಸಣ್ಣ ಸಹಾಯವೂ ಸಮಾಜದಲ್ಲಿ ಬಹುದೊಡ್ಡ ಸಾಧನೆಗೆ ಪ್ರೇರಣೆಯಾಗಬಹುದು.
ಸಾಧನೆಯ ನಿಜವಾದ ಕಲ್ಪನೆ ಗೊತ್ತಿಲ್ಲದಿದ್ದರೆ ಅದರಲ್ಲೂ ವಿಕೃತಿ ತಲೆದೋರುತ್ತದೆ. ಈವತ್ತು ಇಡ್ಲಿ ತಿನ್ನುವ ಸ್ಪರ್ಧೆ, ಮೆಣಸು ತಿನ್ನುವ ಸ್ಪರ್ಧೆ, ಗಟ್ಟಿಯಾಗಿ ಕಿರುಚುವ ಸ್ಪರ್ಧೆ, ಹೆಚ್ಚುಹೊತ್ತು ಮುತ್ತುಕೊಡುವ ಸ್ಪರ್ಧೆ ಮುಂತಾದ ಹುಚ್ಚು ಸ್ಪರ್ಧೆಗಳನ್ನು ಗಿನ್ನಿಸ್ ದಾಖಲೆಗಾಗಿ ನಡೆಸುತ್ತಾರೆ. ಒಬ್ಬ ೧೦೦ ಇಡ್ಲಿ ತಿಂದು ಅಥವಾ ೧೦೦ ಮೆಣಸು ತಿಂದು ದಾಖಲೆ ಮಾಡಿದರೆ ಅದನ್ನು ಸಾಧನೆಯೆಂದು ಪರಿಗಣಿಸಲಾಗುವುದಿಲ್ಲ; ಅದರಿಂದ ಸಮಾಜಕ್ಕೆ ಉಪಯೋಗವೂ ಇಲ್ಲ, ಪ್ರೇರಣೆಯೂ ಇಲ್ಲ.
ಸುಮಾರು ೧೭೦ ವರ್ಷಗಳ ಹಿಂದೆ, ಈಗ ಉತ್ತರಪ್ರದೇಶ ಆಗಿರುವ ಆ ನಾಡಿನಾದ್ಯಂತ ಅನಾವೃಷ್ಟಿಯಿಂದ ಭಾರೀ ಕ್ಷಾಮ ಕಾಣಿಸಿಕೊಂಡಿತು. ನಿರಂತರ ಹರಿಯುವ ಎರಡು ನದಿಗಳಾದ ಗಂಗಾ ಯಮುನಾ ಅಲ್ಲಿ ಇದ್ದರೂ, ಜನರು ನಿರ್ಗತಿಕರಾದರು.
ಆಗ ಬ್ರಿಟಿಷ್ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕೋರ್ಟ್ನೆ ಎಂಬಾತನಿಗೆ ಜನರ ಬವಣೆಯನ್ನು ಕಂಡು ತಳಮಳವೆನಿಸಿತು. ಜನರ ಬಳಿಗೆ ಹೋಗಿ, “ನೀವು ಗಂಗಾನದಿಯಿಂದ ನೀರಾವರಿ ಪ್ರಯೋಜನ ಮಾಡಿಕೊಳ್ಳಬಾರದೇಕೆ?” ಎಂದು ಕೇಳಿದ. ಗಂಗಾ ನದಿ ಎಂಬ ಹೆಸರು ಕಿವಿಯ ಮೇಲೆ ಬಿದ್ದೊಡನೆಯೇ ಅಲ್ಲಿಯ ರೈತರು, “ಛೇ ಅದಾಗದು, ಆ ನೀರನ್ನು ನಾವು ನೀರಾವರಿಗೆ ತೆಗೆದುಕೊಂಡರೆ ಗಂಗಾಮಾತೆ ಅಪವಿತ್ರಳಾಗುತ್ತಾಳೆ” ಎಂದರು.
ಜನರ ಮೂಢನಂಬಿಕೆಯನ್ನು ಸರಿಪಡಿಸಲಾಗದೆ ಹಿಂದೂ ಸಂಪ್ರದಾಯದ ಕೇಂದ್ರವೆನಿಸಿದ ಹರಿದ್ವಾರಕ್ಕೆ ಹೋದ. ಅಲ್ಲಿಯ ಮಹಾಂತರಿಗೆ ದೀರ್ಘದಂಡಪ್ರಣಾಮ ಮಾಡಿದ. ಒಬ್ಬ ಇಂಗ್ಲಿಷ್ ಮನುಷ್ಯ ತಮಗೆ ಉದ್ದಂಡ ನಮಸ್ಕಾರ ಮಾಡಿದುದನ್ನು ಕಂಡು ಆ ಮಹಾಂತರು ಸಂಪ್ರೀತರಾದರು. “ಬೇಟಾ, ನಿನ್ನ ಇಚ್ಛೆ ಪೂರ್ಣಗೊಳ್ಳಲಿ” – ಎಂದು ಆಶೀರ್ವಾದ ಮಾಡಿದರು.
ತಕ್ಷಣವೇ ಅವನು ಅವರಿಗೆ “ಇಲ್ಲ, ಇಲ್ಲ, ನನ್ನ ಇಚ್ಛೆ ಪೂರ್ಣಗೊಳ್ಳಲಾರದು” ಎಂದನು. “ಅದೇಕೆ?” ಎಂದು ಮಹಾಂತರು ಕೇಳಿದರು. “ಏಕೆಂದರೆ ಗಂಗಾಮಾತೆಯನ್ನು ನೀರಾವರಿ ಕೆಲಸಕ್ಕೆಂದು ಒಯ್ಯಬೇಕೆಂದಿದ್ದೇನೆ” ಎಂದು ಉತ್ತರಿಸಿದ.
“ಛೇ, ಛೇ, ಅದು ಆಗದು” ಎಂದು ಅವರು ಅವನ ಬೇಡಿಕೆಯನ್ನು ತಳ್ಳಿಹಾಕಿದರು. ಆಗ ಕೋರ್ಟ್ನೆ, “ಗುರುಜೀ ನೀವು ಇದೇ ಈಗ ನನ್ನ ಇಚ್ಛೆ ಪೂರ್ಣಗೊಳ್ಳಲಿ ಎಂದು ಆಶೀರ್ವದಿಸಿದ್ದೀರಿ. ನೀವು ಕೊಟ್ಟ ಮಾತನ್ನು ತಳ್ಳಿಹಾಕಿ ತಿರುಗಿ ಬೀಳಬೇಕೆನ್ನುತ್ತೀರೇನು?” ಎಂದು ಕೇಳಿದ. ಅವನ ಮಾತನ್ನು ಕೇಳಿ ಮಹಾಂತರು ತಬ್ಬಿಬ್ಬಾದರು. ಏನು ಹೇಳಬೇಕು ಎನ್ನುವುದು ಅವರಿಗೆ ತೋಚದಂತಾಯಿತು. ನಿರುಪಾಯರಾಗಿ “ನೀನು ಗಂಗಾಮಾತೆಯನ್ನು ತೆಗೆದುಕೊಂಡು ಹೋಗಬಹುದು. ಆದರೆ….” ಎಂದು ಅವರು ತಮ್ಮ ಮಾತನ್ನು ಅರ್ಧಕ್ಕೇ ನಿಲ್ಲಿಸಿದರು.
“ಆದರೆ…. ಹಾಗೆಂದರೇನು ಗುರೂಜೀ?” ಎಂದು ಕೇಳಿದ.
ಅವನಿಗೆ ಮಾಡಿದ ಆಶೀರ್ವಾದದಲ್ಲಿ ತಪ್ಪಬಾರದು ಮತ್ತು ಅವನು ಗಂಗಾಮಾತೆಯನ್ನು ಒಯ್ಯಬಾರದು, ಅಂಥ ಒಂದು ಗಡುಚಿನ ಕೆಲಸವನ್ನು ಮಹಾಂತರು ಹೇಳಿದರು. “ನೀನು ಕಾಲಲ್ಲಿ ಮುಳ್ಳಿನ ಹಾವುಗೆ ಧರಿಸಿ, ಹರಿದ್ವಾರದಿಂದ ಹೃಷಿಕೇಶದವರೆಗೆ ಒಂದು ಮಡಿಪಂಚೆ ಉಟ್ಟುಕೊಂಡು ನಡೆಯುತ್ತ ಹೋಗಬೇಕು. ನೀನು ಈ ಪಂಥ ಪೂರೈಸಿದರೆ ಗಂಗಾಮಾತೆ ನಿನ್ನವಳೇ” ಎಂಬುದಾಗಿ ತಿಳಿಸಿದರು.
ಇಂಗ್ಲಿ? ಮನು?ನಿಂದ ತಾವು ಹೇಳಿದ ಕರಾರನ್ನು ಪೂರೈಸುವುದು ಅಸಾಧ್ಯವೆಂದು ಮಹಾಂತರು ಭಾವಿಸಿದ್ದರು. ಆದರೆ, ಅವನು ಸಂಕಲ್ಪ ತೊಟ್ಟು ಮುಳ್ಳು ಹಾವುಗೆ ಮೆಟ್ಟಿಕೊಂಡು ಹರಿದ್ವಾರದಿಂದ ಹೃಷಿಕೇಶದವರೆಗಿನ ದಾರಿಯನ್ನು ನಡೆದೇ ಬಿಟ್ಟ. ಅವನ ಎರಡೂ ಪಾದಗಳಿಂದ ರಕ್ತ ಚಿಮ್ಮುತ್ತಿತ್ತು. ಅವನ ಈ ಸಾಹಸವನ್ನು ಮೆಚ್ಚಿಕೊಳ್ಳದೇ ಮಹಾಂತರಿಗೆ ಬೇರೆ ದಾರಿಯೇ ಇರಲಿಲ್ಲ.
ಮಹಾಂತರಿಂದ ಅನುಮತಿ ಪಡೆದುಕೊಂಡ ಮಾತ್ರಕ್ಕೆ ಗಂಗಾನದಿಯ ನೀರು ಹೊಲಗಳಿಗೆ ಹರಿದು ಬಂದೀತೆ? ನೀರನ್ನು ನಿಯಂತ್ರಿಸಲು ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟಬೇಕು. ಅದಕ್ಕೆಲ್ಲ ಹಣ ಬೇಕು, ಜನ ಬೇಕು. ಅವನಿಗೆ ತನ್ನ ದಾರಿ ಸುಲಭವಲ್ಲ ಎಂದು ತೋರಿತು. ಆದರೆ ಅವನು ತನ್ನಿಂದ ಆಗದು ಎಂದು ಕೈಕೊಡವಿ ಕುಳಿತುಕೊಳ್ಳುವ ವ್ಯಕ್ತಿ ಅಲ್ಲ. ಈಸ್ಟ್ ಇಂಡಿಯಾ ಕಂಪೆನಿ ಮುಖ್ಯಸ್ಥರ ಮನವೊಲಿಸಬೇಕೆಂದು ಇಂಗ್ಲೆಂಡಿಗೆ ಹೋದ. ಅಲ್ಲಿ ನಿರ್ದೇಶಕ ಮಂಡಳಿಯ ಜನರೊಂದಿಗೆ ಐದು ವರ್ಷಗಳ ಕಾಲ ವಾದಮಾಡಿ ಅವರನ್ನು ಒಪ್ಪಿಸಿದ. ಒಂದು ದೊಡ್ಡ ಕೆಲಸಮಾಡುವ ಸಂತೋಷವನ್ನು ತುಂಬಿಕೊಂಡು ಭಾರತಕ್ಕೆ ಮರಳಿದ.
ಗಂಗಾ ಕಾಲುವೆಯ ಕೆಲಸ ಆರಂಭಿಸುವುದಕ್ಕೋಸ್ಕರ ತರಬೇತಿಕೇಂದ್ರ ತೆರೆದು ಅಲ್ಲಿ ಕೆಲಸಗಾರರನ್ನು ಸಿದ್ಧಗೊಳಿಸಿದ. ಅವನು ನಿರ್ಮಿಸಿದ ನೀರಾವರಿ ಕೌತುಕವನ್ನು ಈಗಲೂ ನೋಡಬಹುದು.
ಉತ್ತರಪ್ರದೇಶದ ಜನರು ಅದರ ಫಲಭೋಗವನ್ನು ಇಂದಿಗೂ ಅನುಭವಿಸುತ್ತಿದ್ದಾರೆ.
ರೂಡಕೀ ವಿಶ್ವವಿದ್ಯಾಲಯದ ಆವರಣದಲ್ಲಿ ಕಲಿಯುಗದ ಭಗೀರಥ ಕೋರ್ಟ್ನೆ ಸಾಹೇಬನ ಪುತ್ಥಳಿ ಇದೆ. ಒಬ್ಬ ಮನುಷ್ಯ ಏನನ್ನಾದರೂ ಸಾಧಿಸಬಲ್ಲ ಎಂಬುದನ್ನು ತೋರಿಸಿಕೊಡಲು ಅವನು ಸಾಕ್ಷಿಯಾಗಿ ಅಲ್ಲಿ ಕುಳಿತಿದ್ದಾನೆ. ಅವನು ಸೋಲಲಿಲ್ಲ. ಆತನ ಸಾಧನೆ ಸೋಲು ಎಂಬ ಪದವನ್ನೇ ಸೋಲಿಸಿತು!
ವಿಕೃತ ರೂಪ
ಸಾಧನೆಯ ನಿಜವಾದ ಕಲ್ಪನೆ ಗೊತ್ತಿಲ್ಲದಿದ್ದರೆ ಅದರಲ್ಲೂ ವಿಕೃತಿ ತಲೆದೋರುತ್ತದೆ. ಈವತ್ತು ಇಡ್ಲಿ ತಿನ್ನುವ ಸ್ಪರ್ಧೆ, ಮೆಣಸು ತಿನ್ನುವ ಸ್ಪರ್ಧೆ, ಗಟ್ಟಿಯಾಗಿ ಕಿರುಚುವ ಸ್ಪರ್ಧೆ, ಹೆಚ್ಚುಹೊತ್ತು ಮುತ್ತುಕೊಡುವ ಸ್ಪರ್ಧೆ ಮುಂತಾದ ಹುಚ್ಚು ಸ್ಪರ್ಧೆಗಳನ್ನು ಗಿನ್ನಿಸ್ ದಾಖಲೆಗಾಗಿ ನಡೆಸುತ್ತಾರೆ. ಒಬ್ಬ ೧೦೦ ಇಡ್ಲಿ ತಿಂದು ಅಥವಾ ೧೦೦ ಮೆಣಸು ತಿಂದು ದಾಖಲೆ ಮಾಡಿದರೆ ಅದನ್ನು ಸಾಧನೆಯೆಂದು ಪರಿಗಣಿಸಲಾಗುವುದಿಲ್ಲ; ಅದರಿಂದ ಸಮಾಜಕ್ಕೆ ಉಪಯೋಗವೂ ಇಲ್ಲ, ಪ್ರೇರಣೆಯೂ ಇಲ್ಲ. ಹೆಚ್ಚೆಂದರೆ ಇಡ್ಲಿ ಮೆಣಸು ತಿಂದವನಿಗೆ ವಾಂತಿ, ಭೇದಿ ಆರಂಭವಾಗಿ ಆತನ ಆರೋಗ್ಯ ಕೆಡಬಹುದು.
ಒಡಿಶಾದಲ್ಲಿ ಒಬ್ಬ ಸಾಧಕನಿದ್ದ, ಆತ ತನ್ನ ಸಾಧನೆಯನ್ನು ಮನೆಯಲ್ಲೇ ಕೂತು ಮೌನವಾಗಿ ಸಾಧಿಸುತ್ತಿದ್ದ. ಅಪರೂಪಕ್ಕೆ ಮನೆಬಿಟ್ಟು ಹೊರಬರುತ್ತಿದ್ದ. ಆತ ಮನೆಬಿಟ್ಟು ಹೊರಬರುವಾಗ ಊರ ಜನರೆಲ್ಲರು ಅವನ ಮನೆ ಮುಂದೆ ಸೇರುತ್ತಿದ್ದರು. ಭಯಭಕ್ತಿಯಿಂದ ವಂದಿಸುತ್ತಿದ್ದರು. ಆತ ಮನೆಯ ಹಿತ್ತಿಲಿಗೆ ಬಂದು ಯಾವುದಾದರೂ ಕೆಂಪು ಗುಲಾಬಿಯನ್ನು ಮುಟ್ಟಿದರೆ ಅದು ಬಿಳಿ ಗುಲಾಬಿಯಾಗುತ್ತಿತ್ತು. ಬಿಳಿಗುಲಾಬಿಯನ್ನು ಮುಟ್ಟಿದರೆ ಅದು ಹಳದಿಯಾಗುತ್ತಿತ್ತು. ಇಷ್ಟನ್ನು ಮಾಡಿ ಆತ ಪುನಃ ಮನೆಯೊಳಗೆ ಸೇರುತ್ತಿದ್ದ. ಜನರೆಲ್ಲ ಆತನಲ್ಲಿ ಅಪಾರವಾದ ಆಧ್ಯಾತ್ಮಿಕ ಶಕ್ತಿಯಿದೆ ಎಂದು ನಂಬುತ್ತಿದ್ದರು.
ಈ ವಿದ್ಯೆಯನ್ನು ತಿಳಿಯಬೇಕೆಂದು ಕನ್ನಡದ ಪ್ರಸಿದ್ಧ ಸಾಹಿತಿ ಸತ್ಯಕಾಮ ಮನೆಗೆ ಹೋದರು. ಆ ಸಾಧಕ ಸಾಧನೆಯ ಒಳಮರ್ಮವನ್ನು ಸತ್ಯಕಾಮನಿಗೆ ತಿಳಿಸಲೆ ಇಲ್ಲ. ಆದರೆ ಸತ್ಯಕಾಮ ಛಲವಾದಿ. ಯಾವುದಾದರೂ ಕಲಿಯಬೇಕೆಂದು ಹೊರಟರೆ ಅದನ್ನು ಎಷ್ಟು ಕಷ್ಟಪಟ್ಟಾದರೂ ಕಲಿಯುತ್ತಿದ್ದರು. ನೀವು ಈ ವಿದ್ಯೆಯನ್ನು ನನಗೆ ಕಲಿಸದಿದ್ದರೆ ನಿಮ್ಮ ಮನೆ ಬಿಟ್ಟು ಹೋಗುವುದಿಲ್ಲ ಎಂಬುದಾಗಿ ಅಲ್ಲಿಯೇ ಝಂಡಾಹೂಡಿದರು. ಹಲವು ದಿನಗಳಾಯಿತು. ಸಾಧಕ ಸಾಧನೆಯ ಬಗ್ಗೆ ತಿಳಿಸಲಿಲ್ಲ, ಸತ್ಯಕಾಮ ಮನೆಬಿಟ್ಟು ಹೋಗಲಿಲ್ಲ. ಕೊನೆಗೆ ಸತ್ಯಕಾಮರ ಛಲಕ್ಕೆ ಆ ಸಾಧಕ ಮನಸೋತು ಹೇಳಿದ; “ನೋಡು, ಈ ಹೂಗಳ ಬಣ್ಣ ಬದಲಾಯಿಸುವ ನನ್ನದೇನು ಸಾಧನೆ ಇದೆಯೋ ಅದೊಂದು ನಿಜವಾದ ಸಾಧನೆಯೇ ಅಲ್ಲ. ಹೂವಿನ ಬಣ್ಣ ಬದಲಾಯಿಸುವುದರಿಂದ ಯಾರಿಗೇನಾದರೂ ಉಪಯೋಗವಿದೆಯೇ? ನಾನು ಆಧ್ಯಾತ್ಮಿಕ ಸಾಧನೆ ಮಾಡುವಾಗ ಈ ಶಕ್ತಿ ನನ್ನಲ್ಲಿ ಬಂದುಬಿಟ್ಟಿದೆ. ಜನ ಇದನ್ನು ನೋಡಿ ನಾನೊಬ್ಬ ಬಹುದೊಡ್ಡ ಸಾಧಕ ಎಂದು ಭಾವಿಸಿದ್ದಾರೆ. ಅದರಿಂದ ನನ್ನ ಆಧ್ಯಾತ್ಮಿಕ ಸಾಧನೆ ಇಲ್ಲಿಗೇ ಸ್ಥಗಿತವಾಯಿತು. ಹೂವಿನ ಬಣ್ಣ ಬದಲಾಯಿಸುವ ಚಮತ್ಕಾರದಿಂದ ನನ್ನ ಜೀವನವೆಲ್ಲ ವ್ಯರ್ಥವಾಯಿತು. ನೀನು ಇದಕ್ಕೋಸ್ಕರ ನಿನ್ನ ಜೀವನವನ್ನೆಲ್ಲ ವ್ಯರ್ಥಗೊಳಿಸಿಕೊಳ್ಳಬೇಡ. ದಯವಿಟ್ಟು ಇಲ್ಲಿಂದ ಹೊರಟುಹೋಗು.”
ಮೌಲ್ಯ ನಿರ್ಧಾರ
ವಿದ್ಯಾರ್ಥಿಯೊಬ್ಬನಿಗೆ “ಅವಮಾನ ಮತ್ತು ಸಾಧನೆಗೆ ವ್ಯತ್ಯಾಸವೇನು?” ಎಂಬುದಾಗಿ ಉಪಾಧ್ಯಾಯರು ಕೇಳಿದರು.
“ಪ್ರಶ್ನೆಪತ್ರಿಕೆ ಓದಿ ವಿದ್ಯಾರ್ಥಿ ಅತ್ತರೆ ಅದು ಅವನಿಗೆ ಅವಮಾನ. ಅವನ ಉತ್ತರ ಪತ್ರಿಕೆ ನೋಡಿ ಪರೀಕ್ಷಕರು ಅತ್ತರೆ ಅದು ಅವನ ಸಾಧನೆ!” ಎಂಬುದಾಗಿ ವಿದ್ಯಾರ್ಥಿ ಉತ್ತರಿಸಿದ.
ಇನ್ನೊಬ್ಬರ ಮುಖದಲ್ಲಿ ನಗು ತರಿಸುವುದನ್ನು ಸಾಧನೆಯೆಂದು ಪರಿಗಣಿಸಬಹುದು. ಆದರೆ ಇನ್ನೊಬ್ಬರ ಮುಖದಲ್ಲಿ ಅಳು ತರಿಸುವುದು ಯಾವತ್ತೂ ಸಾಧನೆಯಲ್ಲ. ಆದರೆ ಇಂದು ಅಳಿಸುವುದೇ ನಮ್ಮ ಸಾಧನೆ ಎಂದುಕೊಂಡಂತೆ ಹೋರಾಟ ಮಾಡಲು ಭಯೋತ್ಪಾದಕರು ಹೊರಟಿದ್ದಾರೆ. ದೇವರ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಎಷ್ಟು ಜನರ ಕಾಯವನ್ನೆ ಅಳಿಸಿ, ಅವರ ಬಂಧುಗಳ ಮುಖದಲ್ಲಿ ಸದಾ ಅಳುವನ್ನು ತರಿಸುವುದನ್ನೆ ದೊಡ್ಡ ಸಾಧನೆ ಎಂದು ತಿಳಿಯುವವರಷ್ಟು ಮೂರ್ಖರು, ಹುಚ್ಚರು ಈ ಜಗತ್ತಿನಲ್ಲಿ ಬೇರೆ ಯಾರೂ ಇರಲಿಕ್ಕಿಲ್ಲ. ಸಾಧನೆ ಎಂಬುದು ಯಾವತ್ತೂ ರಚನಾತ್ಮಕವಾಗಿರಬೇಕೆ ವಿನಾ, ವಿಧ್ವಂಸಕವಾಗಬಾರದು. ಸಾಧನೆ ಯಾವತ್ತೂ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾಗಿರಬೇಕು. ಅದು ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿರಬೇಕು.
ಕೆಲವು ವರ್ಷಗಳ ಹಿಂದೆ ’ಜಾಗ್’ ಎಂಬ ಫ್ರೆಂಚ್ ಪತ್ರಿಕೆಯಲ್ಲಿ ಜಿನ್ಗಿಯಾನೊ ಎಂಬ ಲೇಖಕ ಸತ್ಯಕಥೆಯೊಂದನ್ನು ಬರೆದಿದ್ದಾನೆ.
೧೯೧೩ರಲ್ಲಿ ಫ್ರಾನ್ಸ್ ದೇಶದ ಆಲ್ಪ್ಸ್ ಪರ್ವತಪ್ರದೇಶದಲ್ಲಿ ಭೀಕರ ಬರಗಾಲ ಬಂತು. ಊರ ಜನರೆಲ್ಲರು ಬರಗಾಲದ ಬೇಗೆಯನ್ನು ತಾಳಲಾರದೆ ವಲಸೆಹೋದರು. ಅಲ್ಲಿಯ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಪತ್ರಕರ್ತ ಜಿನ್ಗಿಯಾನೊ ಆ ಪ್ರದೇಶಕ್ಕೆ ಬಂದ. ಬರಿ ಕಾಲ್ನಡಿಗೆಯಲ್ಲೆ ತಿರುಗಾಡಿದ. ಆ ಸಮಯದಲ್ಲಿ ಆತನಿಗೆ ತುಂಬಾ ಬಾಯಾರಿಕೆಯಾಯಿತು. ಸುತ್ತಮುತ್ತ ಜನರು ಕಾಣುತ್ತಿಲ್ಲ. ಕೊನೆಗೆ ದೂರದ ಬೆಟ್ಟದಲ್ಲಿ ಒಂದು ಗುಡಿಸಲು ಕಾಣಿಸಿತು.
ಗುಡಿಸಲಿನ ಹತ್ತಿರ ಹೋಗಿ ನೋಡಿದಾಗ ಅಲ್ಲೊಬ್ಬ ಕುರಿ ಕಾಯುವವನಿದ್ದ. ಆತನೊಂದಿಗೆ ಇದ್ದದ್ದು ಕುರಿ ಮಾತ್ರ. ದಿನವಿಡೀ ಮೌನವಾಗಿರುತ್ತಿದ್ದ. ಆತನಲ್ಲಿ ಬಾಯಾರಿಕೆಗೆ ನೀರನ್ನು ಕೇಳಿ ಕುಡಿದ. ಆಗಲೂ ಕುರುಬ ಮಾತನಾಡಲಿಲ. ಆತನ ಹತ್ತಿರ ಗೋಣಿಚೀಲ ಇತ್ತು. ಅದರಲ್ಲಿ ಓಕ್ ಮರದ ಬೀಜ ಇತ್ತು. ಆತ ಅದನ್ನು ಬಿಸಿಲಿಗೆ ಒಣಗಿಸುತ್ತಿದ್ದ. ಆತನ ಬಳಿ ಒಂದು ರಬ್ಬರ್ ಚೀಲ, ಅದರ ತುಂಬಾ ನೀರಿತ್ತು.
ದಿನನಿತ್ಯವೂ ಬೆಳಗ್ಗೆ ಎದ್ದು ಬೋಳಾಗಿದ್ದ ಪರ್ವತದಲ್ಲಿ ಸುಮಾರು ಇಪ್ಪತ್ತು ಕಡೆ ಓಕ್ ಮರದ ಬೀಜವನ್ನು ನೆಡುತ್ತಿದ್ದ. ತದನಂತರ ತಾನು ಪರ್ವತದ ಕೆಳಗಿನಿಂದ ತಂದಿದ್ದ ಚೀಲದಲ್ಲಿದ್ದ ನೀರನ್ನು ಬೀಜಕ್ಕೆ ದಿನನಿತ್ಯ ಹಾಕುತ್ತಿದ್ದ. ಹೀಗೆ ನಿರಂತರವಾಗಿ ಈ ಕೆಲಸವನ್ನು ೩೦ ವರ್ಷಗಳವರೆಗೆ ಮಾಡಿದ.
ಆ ಕುರಿ ಕಾಯುವವನ ಹೆಸರು ಎಲ್ಜಿಯಟ್ ಮೊಫಿಯಾ. ಆತ ಮಾಡುವ ಕೆಲಸದ ಬಗ್ಗೆ ಪತ್ರಕರ್ತ ವಿಚಾರಿಸಿದಾಗ – “ನೋಡಿ ಇಂದು ಈ ಪ್ರದೇಶ ಬರಗಾಲದಿಂದ ಬರಡಾಗಿದೆ. ನಾನು ದಿನನಿತ್ಯ ೩೦ ಮರದ ಬೀಜವನ್ನು ಬಿತ್ತುತ್ತೇನೆ. ಇದರಲ್ಲಿ ೧೦ ಮೊಳಕೆಯೊಡೆದು ಗಿಡವಾಗುತ್ತದೆ. ಅದರಲ್ಲಿ ೫ ಮರವಾಗಿ ಬೆಳೆಯುತ್ತದೆ. ಇದರಿಂದ ಇನ್ನು ಇಪ್ಪತ್ತು ವ?ಗಳಲ್ಲಿ ಈ ಪ್ರದೇಶವೆಲ್ಲ ಕಾಡಿನಿಂದ ಆವೃತವಾಗಿ ಬರಗಾಲವೆಲ್ಲ ಮಾಯವಾಗುತ್ತದೆ. ಅದಕ್ಕೋಸ್ಕರ ನಾನು ಈ ಕೆಲಸ ಮಾಡುತ್ತಿದ್ದೇನೆ” ಎಂದು ಉತ್ತರಿಸಿದ.
ಪತ್ರಕರ್ತ ಸುಮಾರು ೩೦ ವರ್ಷದ ನಂತರ ಆ ಸ್ಥಳಕ್ಕೆ ಭೇಟಿಕೊಟ್ಟ. ಆಲ್ಪ್ಸ್ ಪರ್ವತಶ್ರೇಣಿಯೆಲ್ಲ ಕಾಡಿನಿಂದ ಆವೃತವಾಗಿತ್ತು. ಆದರೆ ಕುರುಬ ಕಂಡುಬರಲಿಲ್ಲ. ಪರ್ವತದ ಇನ್ನೊಂದು ಬದಿಯ ಬುಡದಲ್ಲಿ ಆತನಿದ್ದ. ಆತನಿಗೆ ವಯಸ್ಸಾಗಿತ್ತು, ಬದಲಾಗಿದ್ದ. ಅದೇ ರೀತಿ ಆತನ ಸಾಧನೆಯಿಂದ, ತಪಸ್ಸಿನಿಂದ ಆ ಪ್ರದೇಶವೂ ಬದಲಾಗಿತ್ತು. ಈವತ್ತು ಆಲ್ಪ್ಸ್ ಪರ್ವತಶ್ರೇಣಿ ಜಗತ್ತಿನ ಪ್ರಸಿದ್ಧ ಕಾಡುಗಳಲ್ಲಿ ಒಂದಾಗಿದೆ. ಕುರುಬನ ನಿಃಸ್ವಾರ್ಥ ಸಾಧನೆಯಿಂದ ಇದು ಸಾಧ್ಯವಾಯಿತು.
ಪರೀಕ್ಷಾ ಪಥ
ನಾವು ಗುರಿಯನ್ನು ತಲಪಲು ಸಾಧನೆಯ ಪಥದಲ್ಲಿದ್ದಾಗ ಹಲವಾರು ಕಷ್ಟ- ನಷ್ಟಗಳು, ವಿಘ್ನ-ವಿಡ್ಡೂರಗಳು, ಆಸೆ-ಆಮಿಷಗಳು ಎದುರಾಗುತ್ತವೆ. ಆದರೆ ಇದನ್ನೆಲ್ಲ ದಾಟಿದರೆ ಮಾತ್ರ ನಿಜವಾದ ಸಾಧಕರಾಗುತ್ತೇವೆ. ’ಮಾಡಬಲ್ಲವರು ಮಾಡುತ್ತಾರೆ. ಮಾಡಲರಿಯದವರು ಹೇಳುತ್ತಾರೆ’ ಎನ್ನುವುದು ಬರ್ನಾಡ್ ಷಾ ಅವರ ಒಂದು ಪ್ರಖ್ಯಾತ ಮಾತು.
ರಾಮಾಯಣದ ಒಂದು ಪ್ರಸಂಗ. ಸೀತೆಯನ್ನು ಹುಡುಕಲೆಂದು ಹನುಮ ಲಂಕೆಗೆ ಹಾರಿದ್ದಾನೆ. ನೂರುಯೋಜನ ಹಾರಲು ತಕ್ಕಂತೆ ಅವನ ಶರೀರ ಪ್ರಚಂಡವಾಗಿ ಬೆಳೆದಿದೆ. ರಾಮ, ರಾಮ ಎಂದು ಜಪಿಸುತ್ತಾ ಕಾರ್ಯ ಸಾಧಿಸುವ ಛಲದಿಂದ ಹೊರಟ.
ಹಾದಿಯಲ್ಲಿ ಸಮುದ್ರದೊಳಗಿಂದ ಪರ್ವತವೊಂದು ಮೇಲೆ ಬಂದಿತು. “ತಮ್ಮ, ನಿನ್ನ ತಂದೆ ಮತ್ತು ನಾನು ಗೆಳೆಯರು. ನನ್ನ ಹೆಸರು ಮೈನಾಕ. ನಿನ್ನ ತಂದೆ ನನ್ನ ರಕ್ಷಕ. ಈಗ ನೀನು ದೊಡ್ಡ ಕಾರ್ಯಕ್ಕೆ ಹೊರಟಿರುವೆ. ಬಾ ನನ್ನ ಮೇಲೆ ಸ್ವಲ್ಪ ಕುಳಿತುಕೊಂಡು ವಿಶ್ರಾಂತಿ ಪಡೆ” ಎಂದು ಪ್ರೀತಿಯಿಂದ ಕರೆಯಿತು. ಕಾರ್ಯಸಾಧಕನಿಗೆ ವಿಶ್ರಾಂತಿಯ ಚಿಂತೆಯೆಲ್ಲಿ? ಹನುಮಂತ ನಯವಾಗಿ ಅದನ್ನು ತಿರಸ್ಕರಿಸಿದ. “ನಿಮ್ಮ ಕರೆಗೆ ನಾನು ಕೃತಜ್ಞ. ನೀವು ಹಿರಿಯರು, ನಿಮ್ಮ ಮಾತನ್ನು ಉಲ್ಲಂಘಿಸಬಾರದು. ಆದರೆ ಕಾರ್ಯದಲ್ಲಿ ತಡೆ ಆಗಬಾರದಷ್ಟು. ಆದ್ದರಿಂದ ಕ್ಷಮಿಸಿ” ಎನ್ನುತ್ತ ಮೈನಾಕದ ತಲೆಸವರಿ ಪ್ರೀತಿ ತೋರಿಸಿ ಮುಂದೆ ಹೋದ.
ಸ್ವಲ್ಪ ದೂರದಲ್ಲಿ ನಾಗಮಾತೆ ಸುರಸೆ ಅವನನ್ನು ತಡೆದಳು. “ಈ ದಾರಿಯಲ್ಲಿ ಹೋಗುವ ಎಲ್ಲ ಪ್ರಾಣಿಗಳೂ ನನ್ನ ಬಾಯಲ್ಲಿ ಹೊಕ್ಕು ಹೋಗಬೇಕು ಎಂಬ ವರ ನನಗಿದೆ. ನಿನ್ನನ್ನು ನಾನು ನುಂಗುವೆ” ಎಂದಳು. “ನುಂಗು ನೋಡೋಣ” ಎಂದು ಹನುಮಂತ ಶರೀರವನ್ನು ಬೆಳೆಸುತ್ತಾ ಹೋದ. ಅವಳಿಗೂ ಹಟ. ಅವಳೂ ಬಾಯಿ ಅಗಲ ಮಾಡಿದಳು. ಹೀಗೆ ಸ್ಪರ್ಧೆ ನಡೆಯಿತು. ಇದ್ದಕ್ಕಿದ್ದಂತೆ ಹನುಮಂತ ತನ್ನ ಶರೀರವನ್ನು ಸೂಕ್ಷ್ಮಮಾಡಿಕೊಂಡು ಸುರಸೆಯ ಬಾಯೊಳಗೆ ಹೋಗಿ ಅವಳು ಬಾಯಿ ಮುಚ್ಚುವಷ್ಟರಲ್ಲಿ ಹೊರ ಬಂದು “ದೇವತೆಗಳ ಮಾತು ನಡೆಸಿರುವೆ” ಎಂದು ಅವಳಿಗೆ ನಮಸ್ಕರಿಸಿ ಮುಂದೆ ಹೋದ. ಅವಳೂ ಅವನನ್ನು ಆಶೀರ್ವದಿಸಿದಳು.
ಇದಾದ ಮೇಲೆ ಇನ್ನೊಂದು ವಿಪತ್ತು ಬಂತು. ನೆರಳಿನಿಂದಲೇ ವಸ್ತುವನ್ನು ಹಿಡಿಯುವ ರಾಕ್ಷಸಿ ಸಿಂಹಿಕಾ. ಇವನನ್ನು ತಡೆದು ನುಂಗಲೆತ್ನಿಸಿದಳು. ಮತ್ತೆ ಹನುಮಂತನ ಚಾತುರ್ಯ ಮಿಂಚಿತು. ಶರೀರವನ್ನು ಬೃಹತ್ತಾಗಿ ಬೆಳೆಸಿದ, ರಾಕ್ಷಸಿಯೂ ಬೆಳೆದು ನಿಂತಳು. ಇಬ್ಬರೂ ಹೀಗೆ ಬೆಳೆಯುತ್ತಿರುವಾಗ ಹನುಮಂತನು ಏಕಾಏಕಿ ಸೂಕ್ಷ್ಮಾಕಾರ ತಾಳಿ ಅವಳ ಹೊಟ್ಟೆಯೊಳಕ್ಕೆ ಪ್ರವೇಶಿಸಿ ಅಲ್ಲಿ ಬೆಳೆಯಲಾರಂಭಿಸಿದ. ಸಿಂಹಿಕಾ ಕೂಡಲೇ ಚಿಕ್ಕದಾಗಲು ಆರಂಭಿಸಿದಳು. ಅವಳ ಶರೀರ ಚಿಕ್ಕದಾದ ಹಾಗೆ ಹನುಮಂತನ ಶರೀರ ದೊಡ್ಡದಾಗುತ್ತಿದೆ. ಪರಿಣಾಮವಾಗಿ ಕೊನೆಗೆ ಸಿಂಹಿಕೆಯ ಶರೀರವನ್ನು ಭೇದಿಸಿಕೊಂಡು ಹನುಮಂತ ಹೊರಬಂದ. ಸಿಂಹಿಕಾ ನಾಶವಾದಳು. ಹೀಗೆ ಬುದ್ಧಿ, ಶಕ್ತಿ, ಚತುರತೆಯಿಂದ ಆಕರ್ಷಣೆ, ಅಡಚಣೆಗಳನ್ನು ದಾಟಿ ಹನುಮಂತ ಲಂಕೆಯನ್ನು ಮುಟ್ಟಿ ಸೀತಾಮಾತೆಯನ್ನು ಹುಡುಕಿ ರಾಮನಿಗೆ ಸುದ್ದಿ ಮುಟ್ಟಿಸಿದ. ಬಹುದೊಡ್ಡ ಸಾಧಕನೆನಿಸಿದ.
ಸಾಧನೆಗೆ ಸಾಧನದ ಕೊರತೆ, ಬಡತನ, ಅಂಗವಿಕಲತೆ, ವಿದ್ಯೆ, ವಯಸ್ಸು ಇವಾವುದೂ ಅಡ್ಡಿಯಾಗುವುದಿಲ್ಲ. ’ಮನಸ್ಸಿದ್ದರೆ ಮಾರ್ಗ’ ಎಂಬ ಮಾತಿನಂತೆ, ನಮ್ಮ ಕರ್ತೃತ್ವಶಕ್ತಿ ಜಾಗೃತವಾದಾಗ, ಕ್ರಿಯಾಶೀಲವಾದಾಗ ಸಾಧನೆಯನ್ನು ಯಾವ ಅಡ್ಡಿಆತಂಕಗಳಿಂದಲೂ ನಿಲ್ಲಿಸಲಿಕ್ಕಾಗುವುದಿಲ್ಲ. ನಮಗೆ ಬಂದ ಕಷ್ಟಕ್ಕಾಗಿ ಮರುಗದೆ, ನಮ್ಮಲ್ಲಿರುವ ಯಾವುದೋ ಒಂದು ಕೊರತೆಗಾಗಿ ಕೊರಗುತ್ತ ಕೂರದೆ, ಮನಸ್ಸನ್ನು ನರಕವಾಗಿಸಿಕೊಳ್ಳದೆ, ಮಹತ್ತರ ಸಾಧನೆಗೈದವರ ಪರಂಪರೆಯೇ ನಮ್ಮ ಮುಂದಿದೆ.
ಶ್ರೇಷ್ಠಕವಿ ಮಿಲ್ಟನ್ ಕುರುಡ, ಕವಿ ಭೈರನ್ ಕಿವುಡ. ನೆಪೋಲಿಯನ್ ಚರ್ಮವ್ಯಾಧಿ ಪೀಡಿತನಾಗಿದ್ದ. ಜೂಲಿಯಸ್ ಸೀಸರ್ ಮೂರ್ಛೆರೋಗಗ್ರಸ್ಥನಾಗಿದ್ದ. ಪಾಶ್ಚಾತ್ಯ ಸಂಗೀತ ಸಾಮ್ರಾಟ ಬಿಥೋವಾನ್ ಕಿವುಡ. ಮಹಾವಾಗ್ಮಿ ಡಿಮೋಸ್ತನೀಸ್ ಮಾತಾಡುವಾಗ ಮೊದಲು ಉಗ್ಗುತ್ತಿದ್ದ. ಒಲಿಂಪಿಕ್ ಕ್ರೀಡೆಯಲ್ಲಿ ಮೂರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡ ವಿಲ್ಮಾ ರುಡಾಲ್ಫ್ ಪೋಲಿಯೋದಿಂದ ಬಳಲುತ್ತಿದ್ದಳು. ಕುರುಡರ ಬಾಳಿಗೆ ಬೆಳಕಾದ ಹೆಲನ್ ಕೆಲರ್ ಸ್ವತಃ ಕುರುಡಿಯಾಗಿದ್ದಳು. ಇವರೆಲ್ಲರೂ ತಮ್ಮ ದೌರ್ಬಲ್ಯದಿಂದ ಕೊರಗುತ್ತಾ ಬಾಳನ್ನು ಹಾಳುಗೆಡವಿಕೊಂಡವರಲ್ಲ. ಬದಲಿಗೆ ಅವರವರ ಕ್ಷೇತ್ರದಲ್ಲಿ ಅದ್ವಿತೀಯವಾದ ಸಾಧನೆಗೈದವರು. ಇಂತಹವರೆಲ್ಲರ ಬದುಕು ನಮಗೆ ಮಾದರಿಯಾಗಬೇಕು.
Good