ಕಡೆಗೂ ಸಂಜಯ ಲೀಲಾ ಬನ್ಸಾಲಿ ನಿರ್ಮಿತ ’ಪದ್ಮಾವತ್’ ಚಲನಚಿತ್ರ ಕಳೆದ ಜನವರಿ ೨೫ಕ್ಕೆ ಬಿಡುಗಡೆಯಾಗಿದೆ. ಅದರೊಡಗೂಡಿದ ಪ್ರತಿಭಟನೆಗಳೂ ಹಿಂಸಾಚಾರಗಳೂ ಸಭ್ಯಸಮಾಜಕ್ಕೆ ಕಲಂಕ ತರುವಂತಿವೆ. ಯಾವುದೇ ವಿಷಯವನ್ನೂ ವಿವಾದಗ್ರಸ್ತಗೊಳಿಸಬಹುದಾದ ಪರಿಸರ ಹರಡಿರುವುದಕ್ಕೆ ಈ ಪ್ರಸಂಗಕ್ಕಿಂತ ಅನ್ಯ ನಿದರ್ಶನ ಬೇಕಿಲ್ಲ. ಸಂಸ್ಕೃತಿಸಂರಕ್ಷಣೆಯ ಹೆಸರಿನಲ್ಲಿ ’ಕರ್ನೀಸೇನಾ’ದಿಂದ ಸಂಸ್ಕೃತಿವಿಧ್ವಂಸ ನಡೆದಿರುವುದು ದೊಡ್ಡ ವಿಪರ್ಯಾಸ. ಹರ್ಯಾಣಾದ ಗುರುಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಒಯ್ಯುತ್ತಿದ್ದ ಬಸ್ಸಿನ ಮೇಲೆ ’ಸಂಸ್ಕೃತಿಸಂರಕ್ಷಕರು’ ಕಲ್ಲುಗಳ ಮಳೆಗರೆದರು. ಚಲನಚಿತ್ರದ ಕಥಾವಿನ್ಯಾಸದಲ್ಲಿ ಇತಿಹಾಸವಿಕೃತಿ ಇದೆಯೆಂದು ಆರಂಭಗೊಂಡ ಪ್ರತಿರೋಧವು ಇಡೀ ಪಶ್ಚಿಮಭಾರತದಲ್ಲೂ ಉತ್ತರಭಾರತದಲ್ಲೂ ಕಾನೂನುವ್ಯವಸ್ಥೆ ಕುಸಿಯುವವರೆಗೆ ಸಾಗಿತು. ತಾವು ರಜಪೂತ ಪರಂಪರೆಯ ರಕ್ಷಕರೆಂದು ಸಾರುತ್ತಿರುವ ’ಕರ್ನೀಸೇನಾ’ ಪಡೆಯವರು ಆ ಭವ್ಯ ವಾರಸಿಕೆಯನ್ನು ಭಂಗಗೊಳಿಸುತ್ತಿದ್ದಾರೆಂದು ಹೇಳದೆ ವಿಧಿಯಿಲ್ಲ. ಒಂದುಕಡೆ ಗಣತಂತ್ರದಿವಸದ ಆಚರಣೆಯ ಸಂಭ್ರಮ ನಡೆದಿದ್ದಂತೆಯೆ ಬೇರೆಡೆಗಳಲ್ಲಿ ಸಂಸ್ಕೃತಿವಿಧ್ವಂಸಕ ವರ್ತನೆಗಳು ಹರಡಿದ್ದುದು ದುರಂತ.
ತಾವು ದೇವತಾಸಮಾನಳೆಂದು ಗಣಿಸಿರುವ ಪದ್ಮಾವತಿ(ಪದ್ಮಿನಿ)ಯ ಚಾರಿತ್ರವನ್ನು ಚಿತ್ರದಲ್ಲಿ ಹೀಗಳೆಯಲಾಗಿದೆ ಎನ್ನುತ್ತ ಚಿತ್ರದ ನಿರ್ಮಾಣ ಹಂತಗಳಲ್ಲಿಯೆ ’ಕರ್ನೀಸೇನೆ’ ವಿರೋಧವನ್ನು ಸಂಘಟಿಸಿತ್ತು; ಬನ್ಸಾಲಿಯವರ ಮೇಲೆ ಹಲ್ಲೆ ಮಾಡಲೂ ಯತ್ನಿಸಿತ್ತು. ಚಿತ್ರೀಕರಣದಲ್ಲಿ ಪದ್ಮಿನಿಯ ಗೌರವಕ್ಕೆ ಧಕ್ಕೆ ತಂದಿಲ್ಲ ಎಂಬ ಸ್ಪಷ್ಟೀಕರಣವನ್ನೂ ’ಸೇನೆ’ ಕೇಳಿಸಿಕೊಳ್ಳಲಿಲ್ಲ. ಇತಿಹಾಸದ ವಿಕೃತಿಯಾಗಿದೆಯೆಂದು ಹುಯಿಲಿಟ್ಟವರಾರೂ ದಾಖಲೆಗೊಂಡಿರುವ ಇತಿಹಾಸ ಏನಿದೆಯೆಂದು ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ. ಅದು ಹಾಗಿರಲಿ; ಚಿತ್ರವು ಬಿಡುಗಡೆಯೇ ಆಗದಿದ್ದಾಗ ಅದರಲ್ಲಿ ಇತಿಹಾಸವಿಕೃತಿಯಾಗಿದೆಯೆಂದು ಪ್ರತಿಭಟನಕಾರರು ಹೇಗೆ ತೀರ್ಮಾನಕ್ಕೆ ಬಂದರು? ಹೀಗೆ ಇಡೀ ಪ್ರಕರಣ ಆಭಾಸಗಳಿಂದ ತುಂಬಿದೆ. ಯಾವುದೇ ಆಧಾರ ನೀಡದೆ ’ಇದು ನಮ್ಮ ನಿಲವು’ ಎಂದು ಸಾರುವ ಪಡೆಗಳು ಅಂಥದೇ ಭಂಗಿಯನ್ನು ಇತರರು ತಳೆದಾಗ ಅಸಹಿಷ್ಣುತೆ ತೋರಬಹುದೆ
ಲಿಖಿತಚರಿತ್ರೆಯ ಅಥವಾ ಮೌಖಿಕ ಜಾನಪದೀಯದ ಕೆಲವು ಎಳೆಗಳನ್ನು ಬಳಸಿಕೊಂಡು ಚಲನಚಿತ್ರ ನಿರ್ಮಿಸುವುದಾಗಲಿ ಕಥೆಯನ್ನೊ ಕಾದಂಬರಿಯನ್ನೊ ರಚಿಸುವುದಾಗಲಿ ವಿರಳವಲ್ಲ. ಅದು ಎಂದಿನಿಂದಲೊ ನಡೆದಿದೆ. ಕರಾರುವಾಕ್ಕಾದ ಇತಿಹಾಸದ್ದೂ ಕಲಾಕೃತಿಗಳದೂ ಬೇರೆಬೇರೆ ಮಾಧ್ಯಮಗಳೆಂದೂ ಎಂದೂ ಒಂದರ ಮಾನದಂಡಗಳು ಇನ್ನೊಂದಕ್ಕೆ ಸಲ್ಲುವುದಿಲ್ಲವೆಂದೂ ಸಮಾಜ ಹಿಂದಿನಿಂದ ಸ್ವೀಕರಿಸಿದೆ. ಅದು ಸಹಜ ಕೂಡಾ. ಈ ವಾಸ್ತವಗಳನ್ನು ಮಾನ್ಯಮಾಡದಿದ್ದಲ್ಲಿ ಸಂಸ್ಕೃತಿಯ ಜೀವಂತಿಕೆ ಉಳಿಯಲಾರದು. ದೇಶವೆಲ್ಲ ಗೌರವಿಸುವ ವಾಲ್ಮೀಕಿರಾಮಾಯಣದಂತಹ ಕೃತಿಯನ್ನೂ ಜೈನಾದಿಗಳು ತಮ್ಮ ಪೌರಾಣಿಕ ಕಕ್ಷೆಗೆ ಅಳವಡಿಸಿಕೊಂಡು ಬೃಹತ್ ಕಾವ್ಯಗಳನ್ನು ರಚಿಸಿದಾಗ ಎಲ್ಲಿಯೂ ವಿಪ್ಲವಗಳಾಗಲಿಲ್ಲ. ಕಾಲ್ಪನಿಕತೆಯನ್ನೇ ಆಧಾರದ್ರವ್ಯವಾಗುಳ್ಳ ಕಲಾನಿರ್ಮಿತಿಗಳು ಸರ್ಕಾರೀ ಇಲಾಖೆಗಳ ವರದಿಗಳಂತಿರಲೆಂದು ನಿರೀಕ್ಷಿಸುವುದು ಬರ್ಬರತೆಯ?.
ಇಷ್ಟಾಗಿ ಪದ್ಮಾವತ್ ಎಂಬ ಐತಿಹಾಸಿಕವೋ ಕಾಲ್ಪನಿಕವೋ ಆದ ವ್ಯಕ್ತಿಯ ವಿಸ್ತೃತ ಚಿತ್ರಣ ಮೊತ್ತಮೊದಲಿಗೆ ದೊರೆಯುವುದು ಅಲ್ಲಾವುದ್ದೀನ್ ಖಿಲ್ಜಿ ಮೃತನಾಗಿ ಇನ್ನೂರು ವರ್ಷಗಳೇ ಕಳೆದ ಮೇಲೆ ಜಾಯಸೀ ಎಂಬ ಕವಿ ಬರೆದ ಕಾವ್ಯದಲ್ಲಿ. ಜಾನಪದೀಯ ವ್ಯಕ್ತಿಗಳಿಗೆ ನೈಜತೆಯನ್ನೋ ದೈವತ್ವವನ್ನೋ ಆರೋಪಿಸುವುದಕ್ಕೆ ಯಾರ ಆಕ್ಷೇಪಣೆಯೂ ಇರದು. ಆದರೆ ಅಂತಹ ದೃಗ್‌ಭಂಗಿಗಳನ್ನು ಪರಮಸತ್ಯಗಳೆಂದು ಲೋಕವೆಲ್ಲ ಕಡ್ಡಾಯವಾಗಿ ಅಂಗೀಕರಿಸಲಿ ಎಂದು ಆಗ್ರಹಿಸುವುದು ಹೇಗೆ ಸಂದೀತು?
ರಾಜಸ್ಥಾನವನ್ನು ಹೊರತುಪಡಿಸಿ ಎಲ್ಲೆಡೆ – ಪಾಕಿಸ್ತಾನದಲ್ಲಿ ಕೂಡಾ – ’ಪದ್ಮಾವತ್’ ಪ್ರಶಂಸೆಯನ್ನು ಗಳಿಸಿಕೊಂಡಿದೆ.
ಪ್ರತಿಭಟನಕಾರರಲ್ಲಿ ಸಂಸ್ಕೃತಿಪ್ರೇಮವಾಗಲಿ ಇತಿಹಾಸಪ್ರಜ್ಞೆಯಾಗಲಿ ಅಲ್ಲದ ಅನ್ಯೋದ್ದೇಶಗಳೇ ಕೆಲಸ ಮಾಡಿವೆಯೆಂಬುದು ಸ್ಪಷ್ಟವಿದೆ. ವಿವಾದಕ್ಕೆ ತೆರೆ ಎಳೆಯಲು ನ್ಯಾಯಾಲಯವೇ ಪ್ರವೇಶ ಮಾಡಬೇಕಾಗಿಬಂದದ್ದು ಒಳ್ಳೆಯ ಲಕ್ಷಣವಲ್ಲ. ವಿಕ್ಷಿಪ್ತವರ್ತನೆಯು ಇಡೀ ರಾಜ್ಯಾಂಗವನ್ನೇ ಬಂದಿಯಾಗಿಸಲು ಅವಕಾಶವಾಗಬಾರದು. ಇರುಸುಮುರುಸುಗಳಾದರೂ ಕಾನೂನನ್ನು ಎತ್ತಿಹಿಡಿದು ದಿಟ್ಟ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವೆನಿಸುವ ಸಂದರ್ಭಗಳು ಬರುತ್ತವೆ. ಬೀದಿಗದ್ದಲಗಳು ನಡೆದದ್ದು ಪಶ್ಚಿಮಭಾರತದ ಹಲವೆಡೆ ಮಾತ್ರ. ಧರ್ಮಪೀಠಾಧಿಪತಿಯೂ ಸ್ವಯಂ ರಜಪೂತರೂ ಆದವರು ಮುಖ್ಯಮಂತ್ರಿಯಾಗಿರುವ ಉತ್ತರಪ್ರದೇಶದಲ್ಲಿಯೂ ’ಪದ್ಮಾವತ್’ ಪ್ರದರ್ಶನಕ್ಕೆ ಯಾವುದೇ ಕಂಟಕ ಒದಗಲಿಲ್ಲ.
ಸಣ್ಣ ನೆವ ಸಿಕ್ಕಿದರೂ ಅದನ್ನು ಬಂಡವಾಳವಾಗಿಸಿಕೊಂಡು ಬೀದಿರಂಪಾಟ ನಡೆಸುವ ಪ್ರವೃತ್ತಿ ಅಂತ್ಯಗೊಳ್ಳಲೆಂದು ಆಶಿಸೋಣ.