ಬೌದ್ಧ ವಾಙ್ಮಯದಲ್ಲಿ ಗೌತಮಬುದ್ಧನ ಜೀವನಚರಿತ್ರೆಯನ್ನು ನಿರೂಪಿಸಿರುವ ಹಲವು ಕೃತಿಗಳು ಇವೆ. ತ್ರಿಪಿಟಕಗಳಲ್ಲಿ ಬುದ್ಧನ ಜೀವನವನ್ನು ಕುರಿತ ಹಲವು ವಿವರಗಳು ಬಂದಿವೆ. ಅವುಗಳ ಆಧಾರದ ಮೇಲೆ ರಚಿತವಾಗಿರುವವು ಆಮೇಲಿನ ಕಾಲದಲ್ಲಿ ಬಂದ ವ್ಯವಸ್ಥಿತ ಜೀವನಚರಿತ್ರೆಗಳು. ಅವುಗಳಲ್ಲಿ ಅಶ್ವಘೋಷರಚಿತ ‘ಬುದ್ಧಚರಿತ’ ಕಾವ್ಯವು ಶುದ್ಧ ಸಂಸ್ಕೃತ ಭಾಷೆಯಲ್ಲಿದ್ದರೆ ‘ಲಲಿತವಿಸ್ತರ’ ಮತ್ತು ‘ಮಹಾವಸ್ತು’ ಕೃತಿಗಳು ಮಿಶ್ರಸಂಸ್ಕೃತದಲ್ಲಿಯೂ ‘ನಿದಾನಕಥಾ’ ಕೃತಿಯು ಪಾಲಿಭಾಷೆಯಲ್ಲಿಯೂ ಇವೆ. ಇವಲ್ಲದೆ ಚೀನೀ ತರ್ಜುಮೆಯಲ್ಲಿ ಮಾತ್ರ ದೊರೆತಿರುವ ‘ಅಭಿನಿಷ್ಕ್ರಮಣಸುತ್ತ’ ಎಂಬ ಕೃತಿಯೂ ಉಂಟು. ಅಶ್ವಘೋಷನ ರಚನೆಯು ಸಂಸ್ಕೃತ ಕಾವ್ಯಮರ್ಯಾದೆಯಲ್ಲಿರುವ ಉತ್ತಮ ಕಾವ್ಯವಾಗಿದ್ದು ಸಂಸ್ಕೃತ ಸಾಹಿತ್ಯಕ್ಷೇತ್ರದಲ್ಲಿ ವಿಶೇಷ ಆದರಣೆ ಪಡೆದುಕೊಂಡಿದೆ. ಈ ಶ್ರೇಷ್ಠ ಕಾವ್ಯವು ಕಾಲಿದಾಸನ ಕಾಲಕ್ಕಿಂತ ನಿಶ್ಚಿತವಾಗಿ ಹಿಂದಿನದು; ಹೀಗೆ ಅದು ಸಂಸ್ಕೃತದ ಮೊದಮೊದಲ ಮೇಲ್ಮಟ್ಟದ ಸ್ವತಂತ್ರ ಕಾವ್ಯಗಳಲ್ಲಿ ಒಂದೆಂಬ ಮಹತಿಯೂ ಅದಕ್ಕೆ ಇದೆ. ಅದು ಉದ್ದೇಶದಲ್ಲಿಯೆ ಕಾವ್ಯವಾಗಿರುವುದರಿಂದ ಅಲ್ಲಿ ವರ್ಣನೆಗಳಿಗೆ ಪ್ರಾಧಾನ್ಯವಿದೆ. ’ಮಹಾವಸ್ತು’ ಕೃತಿಯು ಜಾತಕಸಾಹಿತ್ಯ (ಎಂದರೆ ಬುದ್ಧನ ಪೂರ್ವಜನ್ಮಗಳ ಕಥನಗಳು), ’ಸುತ್ತಪಿಟಕ’ ಮೊದಲಾದ ಆಕರಗಳಲ್ಲಿ ಲಬ್ಧವಿರುವ ಬುದ್ಧಜೀವನದ ವಿವರಗಳ ಉಪಯುಕ್ತ ಸಂಕಲನವಾಗಿದೆ. ’ನಿದಾನಕಥಾ’ ಪಾಲಿಭಾಷೆಯಲ್ಲಿರುವ ಏಕೈಕ ಬುದ್ಧಚರಿತೆಯಾಗಿದ್ದು ಅದರಲ್ಲಿಯೂ ಜಾತಕಕಥೆಗಳಿಗೆ ಪ್ರಾಧಾನ್ಯ ನೀಡಲಾಗಿದೆ. ’ಲಲಿತವಿಸ್ತರ’ ಕೃತಿಯು ಅದಕ್ಕೆ ಹಿಂದಿನ ಸಂಸ್ಕೃತ ಮತ್ತು ಪಾಲಿ ಆಕರಗಳ ಸಾಮಗ್ರಿಯನ್ನೆಲ್ಲ ಬಳಸಿಕೊಂಡು ಉತ್ತಮ ಸಾಹಿತ್ಯಗುಣವನ್ನು ಹೊಂದಿದ ರಚನೆಯಾಗಿದೆ. ಈ ಸ್ವರೂಪದಿಂದಾಗಿ ಈವರೆಗೆ ಲಬ್ಧವಿರುವ ಬುದ್ಧಚರಿತೆಗಳಲ್ಲೆಲ್ಲ ವ್ಯವಸ್ಥಿತವಾದುದೆಂಬ ಹಿರಿಮೆಗೆ ಅದು ಪಾತ್ರವಾಗಿದೆ. ಇದು ಪಾಲಿ ಅಥವಾ ಪ್ರಾಕೃತದಲ್ಲಿಲ್ಲದೆ ಸಂಸ್ಕೃತಭಾಷೆಯಲ್ಲಿ ರಚನೆಗೊಂಡಿರುವುದೂ ಇದರ ಪ್ರಾಚುರ್ಯಕ್ಕೆ ಕಾರಣವಾಗಿರಬಹುದು.
ವಿಶಾಲ ಖ್ಯಾತಿ ಪಡೆದ ಎಡ್ವಿನ್ ಆರ್ನಾಲ್ಡ್ ಮಹನೀಯನ ’ಲೈಟ್ ಆಫ್ ಏಷಿಯಾ’ ಇಂಗ್ಲಿಷ್ ಕಾವ್ಯವು ಬಹುಮಟ್ಟಿಗೆ ’ಲಲಿತವಿಸ್ತರ’ ಕಾವ್ಯವನ್ನು ಆಧಾರವಾಗಿ ಇರಿಸಿಕೊಂಡಿದೆ. ಆಗ್ನೇಯ ಏಷ್ಯಾದ ಬೋರೋಬುದೂರಿನ ಸ್ತೂಪದ ವಸ್ತುಗಳು ’ಲಲಿತವಿಸ್ತರ’ ಕೃತಿಯಲ್ಲಿ ಲಬ್ಧವಿರುವ ವಿವರಗಳನ್ನು ಆಧರಿಸಿವೆ ಎಂಬ ಊಹೆಗೆ ಅವಕಾಶವಿದೆ.
‘ಲಲಿತವಿಸ್ತರ’ ಕೃತಿಯ ಕರ್ತೃ ಯಾರೆಂಬುದರ ಸುಳುಹುಗಳಾವುವೂ ಲಭ್ಯವಿಲ್ಲ. ಆದರೆ ಬಹುಕರ್ತೃಕವಲ್ಲವೆಂದೂ ಒಬ್ಬನೇ ಕವಿಯು ರಚಿಸಿದುದೆಂದೂ ಕೃತಿಯ ಅವಲೋಕನದಿಂದ ಭಾವನೆಯುಂಟಾಗುತ್ತದೆ. ಕೃತಿಯ ರಚನೆಯ ಕಾಲವೂ ಅನಿರ್ಣೀತವೇ ಆಗಿದೆ. ಕ್ರಿಸ್ತಶಕಾರಂಭದ ಸುಮಾರಿನಲ್ಲಿಯೋ ಕ್ರಿಸ್ತಪೂರ್ವ ೩ನೇ ಅಥವಾ ೨ನೇ ಶತಾಬ್ದದಲ್ಲಿಯೋ ರಚಿತವಾಗಿರಬೇಕೆಂದ? ಊಹಿಸಬಹುದು.
‘ಲಲಿತವಿಸ್ತರ’ ಗ್ರಂಥದಲ್ಲಿ ಇಪ್ಪತ್ತೇಳು ’ಪರಿವರ್ತ’(ಅಧ್ಯಾಯ)ಗಳಿವೆ. ಇವು ಬುದ್ಧನ ಜೀವನಚರಿತ್ರ ನಿರೂಪಣೆಗಷ್ಟೇ ಸೀಮಿತವಾಗಿಲ್ಲ.
ಲಲಿತವಿಸ್ತರ
(ಗೌತಮಬುದ್ಧನ ಜೀವನಗಾಥೆ).
ಅನುವಾದ, ಸಂಸ್ಕೃತದಿಂದ ತೆಲುಗಿಗೆ:
ತಿರುಮಲ ರಾಮಚಂದ್ರ, ಬುಲುಸು ವೆಂಕಟರಮಣಯ್ಯ.
ತೆಲುಗಿನಿಂದ ಕನ್ನಡಕ್ಕೆ: ಡಾ|| ಆರ್. ಶೇಷಶಾಸ್ತ್ರಿ.
ಪ್ರಕಾಶಕರು: ದಿವ್ಯ ಪ್ರಕಾಶನ, 5/1, ನಾಗಪ್ಪ ಬೀದಿ, ಶೇಷಾದ್ರಿಪುರ,
ಬೆಂಗಳೂರು – 560 020
ಮೊ: 9449446328
ಪುಟಗಳು: (ಕ್ರೌನ್ ಚತುರ್ಥ) 410
ಬೆಲೆ : ರೂ. 1200/-
ಪ್ರಕಟಣೆ: 2017
ಆ ಯುಗದ ಸಾಮಾಜಿಕ ಜೀವನ, ಆಸ್ಥಾನ- ಸಂರಚನೆಗಳು, ಭೌಗೋಲಿಕ ವಿವರಗಳು, ಆಚಾರ ವ್ಯವಹಾರಗಳು, ಬುದ್ಧನ ಜೀವನದ ಆರಂಭದ ಘಟ್ಟಗಳು ಮೊದಲಾದ ವಿಪುಲ ಪೂರಕ ಮಾಹಿತಿಗಳು ಈ ಕೃತಿಯಲ್ಲಿ ಇವೆ. ಹದಿನೈದನೇ ಪರಿವರ್ತದಿಂದ ಆಚೆಗೆ ಅರಮನೆಯಿಂದ ಬುದ್ಧನ ನಿಷ್ಕ್ರಮಣ, ಪರಿವ್ರಜನ, ಬೋಧಿಮಾರ್ಗಜ್ಞಾನಪ್ರಾಪ್ತಿ, ಮಾರಧ?ಣ, ಬೋಧಿಧರ್ಮಪ್ರಸಾರ, ಧರ್ಮಚಕ್ರಪ್ರವರ್ತನ ಇತ್ಯಾದಿ ವಿಷಯಗಳ ವರ್ಣನೆಗಳು ಇವೆ. ಬುದ್ಧನಿಗೇ ಅರಿವಿಲ್ಲದಂತೆ ದೇವತೆಗಳು ಅವನಲ್ಲಿ ಧರ್ಮಾಭಿಮುಖತೆಯ ಚೋದನೆಯನ್ನು ಉಂಟುಮಾಡುವುದು ಮೊದಲಾದ ಪೌರಾಣಿಕರೀತಿಯ ಕಥನಗಳೂ ವಿಪುಲವಾಗಿವೆ. (ಈ ಕೃತಿಗೆ ’ಮಹಾನಿದಾನ’ ಮತ್ತು ’ಲಲಿತವಿಸ್ತರಪುರಾಣ’ ಎಂಬ ಹೆಸರುಗಳೂ ಇವೆ.) ಬೋಧಿಸತ್ತ್ವನು ’ತುಷಿತ’ ಎಂಬ ಸ್ವರ್ಗದಲ್ಲಿ ವಿಹರಿಸುತ್ತಿದ್ದಾಗ ಭೂಲೋಕವಾಸಿಗಳಿಗೆ ದುಃಖನಿವಾರಣೆಯ ದಾರಿಯನ್ನು ತೋರಿಸಬೇಕೆಂಬ ಅನುಕಂಪಾತಿಶಯ ಉಂಟಾಗಿ ಭೂಲೋಕದಲ್ಲಿ ಅವತರಿಸಲು ನಿಶ್ಚಯಿಸಿದಾಗಿನಿಂದ (ಮೊದಲನೇ) ಧರ್ಮಚಕ್ರಪ್ರವರ್ತನ ಮಾಡಿದವರೆಗಿನದು ಸ್ಥೂಲವಾಗಿ ’ಲಲಿತವಿಸ್ತರ’ದ ವಸ್ತು. ಆದರೆ (ಆ ಕಾಲದಲ್ಲಿ ಬೌದ್ಧಸಾಹಿತ್ಯ ಇನ್ನೂ ಬೆಳೆದಿರದ ಕಾರಣದಿಂದ) ಕೃತಿಯನ್ನು ಒಂದು ವಿಶಾಲ ಕೋಶವನ್ನಾಗಿಸುವ ದೃಷ್ಟಿಯಿಂದ ರಾಜಧರ್ಮೀಯ, ಸಾಮಾಜಿಕ, ಭೌಗೋಲಿಕ, ಪೌರಾಣಿಕ ಇತ್ಯಾದಿ ಪೂರಕ ಮಾಹಿತಿಗಳನ್ನು ಗ್ರಂಥಕಾರನು ಸೇರಿಸುತ್ತ ಹೋಗಿರಬಹುದು ಎನಿಸುತ್ತದೆ. ಹೀಗೆ ಗ್ರಂಥದ ಹೆಸರು ‘ವಿಸ್ತರ’ ಎಂಬ ಮಾತನ್ನೂ ಒಳಗೊಂಡಿರುವುದು ಔಚಿತ್ಯಪೂರ್ಣವಾಗಿದೆ. ಪಾರಂಪರಿಕ ಗಣಿತಶಾಸ್ತ್ರ, ಜ್ಯೌತಿಷ್ಯ ಮೊದಲಾದ ಜ್ಞಾನಾಂಗಗಳ ಪ್ರಸ್ತಾವಗಳಲ್ಲದೆ ಪೌರಾಣಿಕ ಆಖ್ಯಾನಗಳೂ ನೀತಿಬೋಧಕ ಕಥೆಗಳೂ ಸೇರಿರುವುದು ಗ್ರಂಥಕ್ಕೆ ಹೆಚ್ಚಿನ ಆಸ್ವಾದನೀಯತೆಯನ್ನು ತಂದುಕೊಟ್ಟಿದೆ.
ಇಷ್ಟೊಂದು ವೈಶಿಷ್ಟ್ಯಗಳು ಇದ್ದರೂ ಈ ಮಹತ್ತ್ವಪೂರ್ಣ ಕೃತಿಯು ಅನ್ಯ ಭಾಷೆಗಳಿಗೆ ಅನುವಾದಗೊಂಡದ್ದು ೧೯ನೇ ಶತಮಾನದ ಅಂತ್ಯದಷ್ಟು ಈಚೆಗೆ ಎಂಬುದು ಆಶ್ಚರ್ಯಕರ. ಭಾರತದ ದೇಶೀಯ ಭಾಷೆಗಳ ವಿಷಯ ಹಾಗಿರಲಿ; ‘ಲಲಿತವಿಸ್ತರ’ದ ಮೊತ್ತಮೊದಲ ಸಮಗ್ರ ಇಂಗ್ಲಿಷ್ ಅನುವಾದ ಪ್ರಕಟಗೊಂಡದ್ದು ೨೦೦೧ರಷ್ಟು ಇತ್ತೀಚೆಗೆ (ಅನುವಾದಕರು ಜಾದವಪುರ ವಿಶ್ವವಿದ್ಯಾಲಯದ ಡಾ|| ಶ್ರೀಮತಿ ಬಿಜಯ ಗೋಸ್ವಾಮಿ; ಪ್ರಕಾಶಕರು ಕೋಲ್ಕತಾ ಏಷಿಯಾಟಿಕ್ ಸೊಸೈಟಿ) ಈಗ್ಗೆ ೫೫ ವರ್ಷ ಹಿಂದೆ (೧೯೬೨). ಸಂಸ್ಕೃತ-ತೆಲುಗು ಭಾಷೆಗಳಲ್ಲಿ ಅಸಾಮಾನ್ಯ ಪ್ರಭುತ್ವ ಪಡೆದಿದ್ದ ತಿರುಮಲ ರಾಮಚಂದ್ರ ಮತ್ತು ಬುಲುಸು ವೆಂಕಟರಮಣಯ್ಯ – ಈ ಇಬ್ಬರು ಮಹನೀಯರು ಶ್ರಮಪೂರ್ವಕ ಸಿದ್ಧಪಡಿಸಿ ಹೊರತಂದ ತೆಲುಗು ಅನುವಾದವು ನಮಗೆ ತಿಳಿದಂತೆ ಈ ಕೃತಿಯ ದೇಶಭಾಷೆಯೊಂದರ ಮೊದಲ ಅನುವಾದ. ಆ ಅನುವಾದವನ್ನು ಆಕರವಾಗಿರಿಸಿಕೊಂಡು ಖ್ಯಾತ ವಿದ್ವಾಂಸ ಅನಂತಪುರವಾಸಿಗಳಾದ ಡಾ|| ಆರ್. ಶೇಷಶಾಸ್ತ್ರಿ ಅವರು ಕನ್ನಡಕ್ಕೆ ಮಾಡಿರುವ ಅನುವಾದವು ಬೆಂಗಳೂರಿನ ದಿವ್ಯ ಪ್ರಕಾಶನದ ಮೂಲಕ ಪ್ರಕಾಶನಗೊಂಡು ಈಗ ಕನ್ನಡ ಓದುಗರ ಕೈಸೇರಿರುವುದು ಸಂಭ್ರಮಾರ್ಹವಾಗಿದೆ. ಹಸ್ತಪ್ರತಿಶಾಸ್ತ್ರ ಪರಿಣತರಾಗಿಯೂ ಸಂಶೋಧಕರಾಗಿಯೂ ಪತ್ರಕರ್ತರಾಗಿಯೂ ಪ್ರಸಿದ್ಧರಾಗಿದ್ದವರು ತಿರುಮಲ ರಾಮಚಂದ್ರ. ವ್ಯಾಕರಣ-ಅಲಂಕಾರ ಶಾಸ್ತ್ರಗಳೂ ಸೇರಿದಂತೆ ಹಲವು ಶಾಸ್ತ್ರಗಳಲ್ಲಿ ಪ್ರಾವೀಣ್ಯವಿದ್ದ ಬುಲುಸು ವೆಂಕಟರಮಣಯ್ಯ ಬೌದ್ಧವಾಙ್ಮಯವೂ ಸೇರಿದಂತೆ ಹತ್ತಾರು ವಿಷಯಗಳ ಬಗೆಗೆ ಸುಮಾರು ೧೫೦ರಷ್ಟು ಶ್ರೇಷ್ಠ ಗ್ರಂಥಗಳನ್ನು ರಚಿಸಿದ್ದವರು.
’ಲಲಿತವಿಸ್ತರ’ ತೆಲುಗು ತರ್ಜುಮೆಯನ್ನು ಕನ್ನಡಕ್ಕೆ ಅನುವಾದ ಮಾಡಿರುವವರು ಈ ಹಿಂದೆಯೆ ಹಲವು ಶ್ರೇ?ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ತಂದಿತ್ತಿರುವ ಡಾ|| ಆರ್. ಶೇ?ಶಾಸ್ತ್ರಿ. ತಿರುಮಲ ರಾಮಚಂದ್ರ ಅವರ ಆತ್ಮಕಥೆ ’ಹಂಪಿಯಿಂದ ಹರಪ್ಪವರೆಗೆ’, ಪೊತ್ತೂರಿ ವೆಂಕಟೇಶ್ವರರಾವು ಅವರ ’ಪಾರಮಾರ್ಥಿಕ ಪದಕೋಶ’ (ಬಿ.ಎನ್. ಶ್ರೀನಿವಾಸ್ ಅವರೊಡನೆ ಅನುವಾದ), ’ಕಲಾಪೂರ್ಣೋದಯ’ (ಡಾ|| ಸದಾನಂದಂ ಅವರೊಡನೆ ಅನುವಾದ) ಮೊದಲಾದ ತೆಲುಗಿನ ಪಥದರ್ಶಕ ಕೃತಿಗಳ ಉತ್ಕೃಷ್ಟ ಅನುವಾದಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವ ಡಾ|| ಆರ್. ಶೇಷಶಾಸ್ತ್ರಿಗಳ ’ಲಲಿತವಿಸ್ತರ’ ಅನುವಾದ ಈಚಿನ ವರ್ಷಗಳಲ್ಲಿ ಹೊರಬಂದಿರುವ ಒಂದು ಮಹತ್ತ್ವದ ಕೃತಿಯಾಗಿದೆ. ಇಂಗ್ಲಿ? ಮಾತೃಕೆಯಲ್ಲಿ ಸಾಕ? ಅರ್ಥಸ್ಫುಟತೆ ಇರದಿದ್ದ ಹತ್ತಾರು ಶಬ್ದಪ್ರಯೋಗಗಳನ್ನು ತೆಲುಗು ಅನುವಾದಕರು ಸ್ಪಷ್ಟೀಕರಿಸಿ ಉಪಕರಿಸಿರುವುದೂ ತೆಲುಗುಮೂಲವನ್ನು ಆಧರಿಸಿದ ಈ ಕನ್ನಡ ಅನುವಾದದ ಉಪಯುಕ್ತತೆಯನ್ನು ಹೆಚ್ಚಿಸಿದೆ.
ಹೀಗೆ ಮೂವರು ಉಚ್ಚಕೋಟಿಯ ವಿದ್ವಾಂಸರ ಕಠಿಣಪರಿಶ್ರಮದ ಫಲವಾಗಿ ಬೌದ್ಧಮತೇತಿಹಾಸದ ದೃಷ್ಟಿಯಿಂದಲೂ ಸಾಹಿತ್ಯೇತಿಹಾಸದ ದೃಷ್ಟಿಯಿಂದಲೂ ಮಹತ್ತ್ವದ್ದಾಗಿರುವ ’ಲಲಿತವಿಸ್ತರ’ ಪ್ರಾಚೀನ ಕೃತಿಯು ಈಗ ಕನ್ನಡ ಓದುಗರಿಗೆ ಲಬ್ಧವಾಗಿರುವುದು ಸಂತೋಷದಾಯಕ.
ದೊಡ್ಡ ಆಕಾರದ (ಕ್ರೌನ್ ಚತುರ್ಥ) ೩೫೦ಕ್ಕೂ ಹೆಚ್ಚು ಪುಟಗಳಲ್ಲಿ ಸುಂದರವಾಗಿ ಇದು ಮುದ್ರಣಗೊಂಡಿದೆ. ಬುದ್ಧನ ಜೀವನದ ಮತ್ತು ಧರ್ಮಪ್ರವರ್ತನದ ಪ್ರಸಂಗಗಳನ್ನು ’ಲಲಿತವಿಸ್ತರ’ ಗ್ರಂಥಲಬ್ಧ ವಿವರಗಳನ್ನನುಕರಿಸಿ ಬೋರೋಬುದೂರಿನ ಸ್ತೂಪದಲ್ಲಿ ಮಾಡಿರುವ ಕೆತ್ತನೆಗಳಲ್ಲಿ ಆಯ್ದ ೧೨೦ ಶಿಲ್ಪಗಳ ಚಿತ್ರಗಳನ್ನು ತ್ರಿವರ್ಣವಿನ್ಯಾಸದಲ್ಲಿ ಸಂದರ್ಭಸೂಚನೆಗಳೊಡನೆ ಮುದ್ರಿಸಿರುವುದು ಸ್ತುತ್ಯವಾಗಿದೆ. ಸಾಮಾನ್ಯ ಓದುಗರು, ಇತಿಹಾಸಾಸಕ್ತರು, ಸಂಶೋಧಕರು ಎಲ್ಲ ವರ್ಗಗಳವರ ಪಾಲಿಗೆ ಈ ಗ್ರಂಥವು ದೊಡ್ಡ ನಿಧಿಯಾಗಿದೆ. ವಿಸ್ತಾರವೂ ಜಟಿಲವೂ ಆದ ಈ ಕೃತಿಯನ್ನು ಆಕರ್ಷಕವಾಗಿ ಮತ್ತು ಅಧ್ಯಯನಕ್ಕೆ ಆವಶ್ಯವಾದ ಪ್ರಸ್ತಾವನಾದಿ ಪರಿಕರಗಳೊಡನೆ ಕನ್ನಡ ಓದುಗರಿಗೆ ಲಭ್ಯವಾಗಿಸಿರುವ ’ದಿವ್ಯ ಪ್ರಕಾಶನ’ಕ್ಕೆ ವಂದನೆ ಸಲ್ಲುತ್ತದೆ.