ಸಾಹಿತಿಯಾದವನು ಸಮಾಜದ ದೈನಂದಿನ ಬೆಳವಣಿಗೆಗಳಿಗೆ ತಿಳಿದೋ ತಿಳಿಯದೆಯೋ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತಾನೆ. ಡಾ|| ಎಸ್.ಎಲ್. ಭೈರಪ್ಪನವರಂತಹ ಮಹೋನ್ನತ ಸಾಹಿತಿಗಳ ವಿಷಯದಲ್ಲಿ ಆ ಮಾತನ್ನು ಹೇಳುವುದೇ ಬೇಡ. ಮುಖ್ಯವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರಸ್ತ್ರೀವಾದ, ಅಂದರೆ ಹೆಣ್ಣು ಮಾಡುವುದೆಲ್ಲ ಸರಿ ಎಂಬ ಧೋರಣೆ ನಾಡಿನ ಶಾಸನಕರ್ತರ ತಲೆಗೆ ಹೊಕ್ಕು ಅಥವಾ ಯಾವುದೋ ರಾಜಕೀಯ ಉದ್ದೇಶದಿಂದ ಪೂರ್ತಿ ಮಹಿಳೆಯರ ಪರವಾದ ಅನೇಕ ಶಾಸನಗಳು ಬಂದವು. ಅದರಿಂದ ಸಮಾಜದ ಮೇಲೆ ಎಂತಹ ಪರಿಣಾಮವಾಗುತ್ತದೆ ಎನ್ನುವುದರ ಅದ್ಭುತ ಚಿತ್ರಣ ಭೈರಪ್ಪನವರ ೨೦೧೦ರಲ್ಲಿ ಹೊರಬಂದ ’ಕವಲು’ ಕಾದಂಬರಿಯಲ್ಲಿ ಸಿಗುತ್ತದೆ.
ಸಾಹಿತ್ಯವನ್ನು ಸಮಾಜದ ಕನ್ನಡಿ ಎಂದು ಬಣ್ಣಿಸಲಾಗುತ್ತದೆ. ಸಮಾಜದಲ್ಲಿ ಏನಿದೆಯೋ ಏನು ನಡೆಯುತ್ತಿದೆಯೋ ಅದು ಸಾಹಿತ್ಯದಲ್ಲಿ ತಪ್ಪದೆ ಪ್ರತಿಫಲನಗೊಳ್ಳುತ್ತದೆ. ಅತ್ಯಂತ ಸೂಕ್ಷ್ಮ ಪ್ರವೃತ್ತಿಯವನೂ ಸ್ಪಂದನಶೀಲನೂ ಆದ ಕವಿ ಅಥವಾ ಸಾಹಿತಿ ತನ್ನ ಸುತ್ತಲಿನ ಸಮಾಜದಲ್ಲಿ ಕಂಡುದಕ್ಕೆ ಮತ್ತು ಅನುಭವಿಸಿದ್ದಕ್ಕೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಇರುತ್ತಾನೆ. ಅವನೇನು ಕಂಡನೋ ಅದು ಹೇಗಿದೆಯೋ ಹಾಗೆಯೇ ಅವನ ಕೃತಿಯಲ್ಲಿ ಬರಬೇಕೆಂದಿಲ್ಲ. ಆದರೆ ಅದು ಬಂದೇ ಬರುತ್ತದೆಂಬುದು ಸತ್ಯ. ಅದೇ ರೀತಿ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ’ಕವಲು’ (ಪ್ರಕಟಣೆ – ೨೦೧೦). ಅದನ್ನು ಪುಸ್ತಕದ ಆರಂಭದಲ್ಲಿ ಬರುವ ಒಂದು ಮಾತು “ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ” ಎಂದು ವ್ಯಾಖ್ಯಾನಿಸುತ್ತದೆ. ಇದರಲ್ಲಿ ಕೃತಿಕಾರ ಎಸ್.ಎಲ್. ಭೈರಪ್ಪನವರು ಮುಖ್ಯವಾಗಿ ಉಗ್ರಸ್ತ್ರೀವಾದವು ಭಾರತೀಯ ಸಮಾಜದಲ್ಲಿ, ಅದರಲ್ಲೂ ಮುಖ್ಯವಾಗಿ ಭಾರತೀಯ ಕುಟುಂಬವ್ಯವಸ್ಥೆಯಲ್ಲಿ ತರುತ್ತಿರುವ ಬದಲಾವಣೆ, ಆ ಬದಲಾವಣೆಯ ಅಂಗವಾಗಿ ಈಚಿನ ವ?ಗಳಲ್ಲಿ ಬಂದ ಕಾನೂನುಗಳು ಮತ್ತು ಅವು ಜನಜೀವನದ ಮೇಲೆ ಬೀರುತ್ತಿರುವ ಪ್ರಭಾವಗಳನ್ನು ಶೋಧಿಸಿದ್ದಾರೆ. ಇಲ್ಲಿನ ಮಂಗಳಾ, ಇಳಾ, ಮಾಲಾ ಕೆರೂರ್, ಚಿತ್ರಾ ಹೊಸೂರ್ ಮೊದಲಾದ ಪ್ರಮುಖ ಪಾತ್ರಗಳು ಆ ವಿದ್ಯಮಾನವನ್ನು ಪ್ರತಿನಿಧಿಸುತ್ತವೆ.
ಪೊಲೀಸ್ಗೆ ಪತ್ನಿ ದೂರು
ಪತಿ ತನಗೆ ಹೊಡೆದನೆಂದು ಮಂಗಳೆ ಪೊಲೀಸರಿಗೆ ದೂರು ನೀಡಿದಾಗ ತಡವಿಲ್ಲದೆ ಅದು ’ಕೌಟುಂಬಿಕ ದೌರ್ಜನ್ಯ’ ಪ್ರಕರಣವಾಗಿ ದಾಖಲುಗೊಂಡು ಉದ್ಯಮಿಯಾದ ಪತಿ ಜಯಕುಮಾರ್ ಬಂಧನದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಠಾಣೆಯಲ್ಲಿ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರನನ್ನುದ್ದೇಶಿಸಿ ಹೀಗೆ ಗದರಿಸುತ್ತಾಳೆ: “ನೀನೂ ಮಾಡಿರ ಅಪರಾಧಕ್ಕೆ, ಏನು ನಿನ್ನ ಅಪರಾಧ? ಹೆಂಡತೀನ ಹೊಡಿಯೂದು ಅಂದರೆ ಏನಂತ ತಿಳಕೊಂಡೆ? ಡೊಮೆಸ್ಟಿಕ್ ವಯೊಲೆನ್ಸ್, ನಾನ್ ಬೈಲಬಲ್ ವಯೊಲೆನ್ಸ್. ಲಾಯರ್ ಅಂತ ಬಡಕೊಂಡೆಯಲ್ಲ; ಸುಪ್ರೀಂ ಕೋರ್ಟಿಗೆ ಹೋದರೂ ಬೈಲ್ ಸಿಕ್ಕಲ್ಲ.” ಅದು ಇಂದಿನ ಈ ಕಾನೂನುಗಳ ಸ್ವರೂಪ.
ಹೆಂಡತಿ ಆ ಮಟ್ಟಕ್ಕೆ ಹೋಗಬಹುದೆನ್ನುವ ಕಲ್ಪನೆಯೇ ಜಯಕುಮಾರ್ಗೆ ಇರಲಿಲ್ಲ. ಇ?ಕ್ಕೂ ಅವಳ ದಿನನಿತ್ಯದ ವರ್ತನೆಗೆ ಮತ್ತು ಈವತ್ತು ಆಡಿದ ಮಾತಿಗೆ ತಾನು ಕೊಟ್ಟ ಒಂದು ಪೆಟ್ಟು ತೀರಾ ಹಗುರವಾದ ಪ್ರತಿಕ್ರಿಯೆ ಎಂದು ಆತ ಯೋಚಿಸುತ್ತಾನೆ. ಆದರೆ ಯೋಚಿಸಿದ್ದ? ಬಂತು. ಪೊಲೀಸರಿಂದ ಬಿಡಿಸಿಕೊಂಡು ಒಮ್ಮೆ ಹೊರಬರುವುದಕ್ಕೇ ಸಾಕ? ಲಂಚ ಕೊಡಬೇಕಾಯಿತು.
ಮಂಗಳೆ ಜಯಕುಮಾರನ ಎರಡನೇ ಪತ್ನಿ. ಮೊದಲ ಪತ್ನಿ ಅಪಘಾತದಲ್ಲಿ ತೀರಿಹೋಗಿರುತ್ತಾಳೆ. ತನ್ನೊಂದಿಗೆ ಆಕೆ ಕಟ್ಟಿ ಬೆಳೆಸಿದ ಕಂಪೆನಿಯಲ್ಲಿ ಆಕೆಯೇ ನೇಮಿಸಿಕೊಂಡವಳು ಮಂಗಳೆ. ಪಿ.ಎ. ಆಗಿದ್ದ ಮಂಗಳೆ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಆಧುನಿಕ ಮನೋಭಾವದವಳಿರಬಹುದಾದರೂ ಆಕೆ ಈವತ್ತಿನ ಕಾನೂನುಗಳನ್ನು ಇಂಚಿಂಚು ಬಳಸಿಕೊಳ್ಳುವವಳು. ಮುಖ್ಯವಾಗಿ ಪುರು?ದ್ವೇಷಿಯಾದ ಸ್ತ್ರೀವಾದಿ ಎನ್ನುವ ಕಲ್ಪನೆ ಈತನಿಗಿಲ್ಲ. ’ಸ್ತ್ರೀವಿಮೋಚನೆಯ ೧೨ ಸೂತ್ರಗಳು’ ಎನ್ನುವ ಪುಸ್ತಕವನ್ನು ಆಕೆ ಓದುತ್ತಿದ್ದುದು ಇವನ ಗಮನಕ್ಕೆ ಬಂತು. ಅದನ್ನು ಪಡೆದುಕೊಂಡು ಓದಿದ. ಅದರ ನಾಲ್ಕನೇ ಅಧ್ಯಾಯ ’ಸ್ತ್ರೀ ವಿಮೋಚನೆ ಮತ್ತು ಲೈಂಗಿಕ ಸ್ವಾತಂತ್ರ್ಯ’ ಎಂಬುದರಲ್ಲಿ “ವಯಸ್ಕ ಗಂಡುಹೆಣ್ಣುಗಳು ಪರಸ್ಪರ ಇಚ್ಛೆ ಮತ್ತು ಸಮ್ಮತಿಗಳಿಂದ ದೈಹಿಕವಾಗಿ ಒಂದುಗೂಡುವುದರಲ್ಲಿ ಯಾವ ತಪ್ಪನ್ನೂ ಎಣಿಸಬಾರದು” ಮುಂತಾದ ವಿವರಗಳಿದ್ದವು. “ಒಬ್ಬ ಮಹಿಳೆಯನ್ನು ನಿನಗೆ ಅನುಭವ ಇತ್ತೆ, ಇರಲಿಲ್ಲವೆ, ಇದೆಯೆ – ಅಂತೆಲ್ಲ ಕೇಳುವುದು ಅಪಮಾನ ಮಾಡಿದ ಹಾಗೆ; ಕಾನೂನಿನ ಪ್ರಕಾರ ಅಪರಾಧ” ಎಂದಾಕೆ ಹೇಳುತ್ತಾಳೆ. “ಕನ್ಯತ್ವವು ಶೀಲದ ಅತಿಮುಖ್ಯ ಅಂಶ. ಅದನ್ನು ಜತನದಿಂದ ರಕ್ಷಿಸಿಕೊಂಡು ಶಾಸ್ತ್ರೋಕ್ತವಾಗಿ ವಿವಾಹವಾದ ಗಂಡನಿಗೆ ಒಪ್ಪಿಸಿಕೊಳ್ಳುವುದು ಅವಳ ಧರ್ಮದ ಅತಿಮುಖ್ಯ ಭಾಗ. ಅನಂತರ ಕೂಡ ಅವನನ್ನು ಮೀರಿ ದೇಹಸುಖವನ್ನು ಕಲ್ಪಿಸಿಕೊಳ್ಳುವುದೂ ಪರಮಪಾಪ ಎಂಬಂತಹ ಕಲ್ಪನೆಗಳನ್ನು ಬೇರುಸಹಿತ ಕಿತ್ತೊಗೆಯದೆ ಹೆಂಗಸಿಗೆ ವಿಮೋಚನೆ ಸಾಧ್ಯವಿಲ್ಲ” ಎನ್ನುವುದು ವಿಮೋಚನಾ ಚಳವಳಿಯ ಪ್ರಮುಖ ಅಂಶವಾಗಿದ್ದು ಮಂಗಳೆ ಆ ಚಳವಳಿಯಲ್ಲಿ ಭಾಗಿಯಾದವಳು.
ಮದುವೆಗಾಗಿ ಖೆಡ್ಡಾ
ಸಾಮೀಪ್ಯದಿಂದಾಗಿ ಜಯಕುಮಾರ್ಗೆ ಆಕೆಯಲ್ಲಿ ಆಕ?ಣೆಯೂ ಉಂಟಾಗುತ್ತದೆ. ಈತ ಕರೆದಂತೆ ಇವನ ಮನೆಗೂ ಬರುತ್ತಾಳೆ; ಇಬ್ಬರೂ ಕೂಡುತ್ತಾರೆ. ಸುರಕ್ಷತೆ ಕ್ರಮದ ಬಗ್ಗೆ ಈತ ಹೇಳಿದಾಗ ’ಏನೂ ಆಗುವುದಿಲ್ಲ’ ಎನ್ನುತ್ತಾಳೆ. ಆದರೆ ಗರ್ಭಿಣಿಯಾಗುತ್ತಾಳೆ. ಗರ್ಭ ತೆಗೆಯುವ ಬಗ್ಗೆ ಈತ ಹೇಳಿದಾಗ ಅದಕ್ಕೆ ನಿರಾಕರಿಸುತ್ತಾಳೆ; ಮತ್ತು ಅವಳ ಕಾನೂನಿನ ವರಸೆ ಆರಂಭವಾಗುತ್ತದೆ. “ನಮ್ಮಿಬ್ಬರ ಒಪ್ಪಿಗೆಯಿಂದ ಕೂಡಿದ್ದೇನೋ ನಿಜ. ಗರ್ಭವೂ ಕಟ್ಟಿರಬಹುದು. ಆದರೆ ಮದುವೆಯಾಗುವ ಮಾತು ನಮ್ಮಿಬ್ಬರಲ್ಲೂ ಆಗಿರಲಿಲ್ಲ. ವಯಸ್ಕರಾದ ಗಂಡುಹೆಣ್ಣುಗಳು ಪರಸ್ಪರ ಸಮ್ಮತಿಯಿಂದ ಮದುವೆಯ ಯಾವ ಬಂಧನವಾಗಲಿ ನಿರೀಕ್ಷೆಯಾಗಲಿ ಇಲ್ಲದೆ ಕೂಡುವ ಸ್ವಾತಂತ್ರ್ಯವಿದೆ. (ನೀನು ಕೊಟ್ಟ ಪುಸ್ತಕದಲ್ಲಿ ಆ ರೀತಿ ಇದೆ.) ನೀನು ಅಪ್ರಾಪ್ತವಯಸ್ಕ ಹುಡುಗಿ ಏನಲ್ಲ. ಕೂಡಿದ ಮೇಲೆ ಹೆಣ್ಣು ಗರ್ಭವತಿಯಾಗುವುದು ಪ್ರಕೃತಿಸಹಜ. ಏನೂ ಆಗಲ್ಲ ಅಂತ ನೀನೇ ಹೇಳಿದ್ದೆ. ಮದುವೆಗೆ ಒಳಗಾಗುಕ್ಕೆ ನಾನು ಸಿದ್ಧನಿಲ್ಲ. ಬಲವಂತ ಮಾಡುವುದು ಅನ್ಯಾಯ” ಎಂದು ಜಯಕುಮಾರ್ ತನ್ನ ವಾದವನ್ನು ಮಂಡಿಸಿದರೆ ಆಕೆ “ಯಾವುದೋ ಪುಸ್ತಕದಲ್ಲಿ ಏನೋ ಮುದ್ರಿಸಿದ್ದಾರೆ ಅಂತ ಅದು ನನ್ನ ಸಮ್ಮತಿ ಅಂತ ನಿನಗೆ ಬೇಕಾದ ರೀತಿ ಅರ್ಥ ಮಾಡ್ಕಂಡರೆ ನಾನು ಜವಾಬ್ದಾರಳಲ್ಲ. ನಿನ್ನ ನೌಕರಳು ಅನ್ನುವ ಅಧಿಕಾರವನ್ನು ದುರ್ಬಳಕೆ ಮಾಡಿ ನಿನ್ನ ಮನೆಗೆ ಕರಕೊಂಡು ಹೋದದ್ದು ಸರಿಯಾ? ಅದೂ ನಿನ್ನ ಬೆಡ್ರೂಮಿಗೆ, ನಿನ್ನ ಮಂಚಕ್ಕೆ. ಏನು ಇದರ ಅರ್ಥ? ಮದುವೆಯಾಗ್ತೀನಿ ಅನ್ನುವ ಅಂತರಾರ್ಥ ತಾನೆ? ಇಲ್ಲದಿದ್ದರೆ ಇಂತಹ ವಿವಾಹಪೂರ್ವ ಸಂಬಂಧಕ್ಕೆ ನಾನು ಖಂಡಿತ ಒಪ್ತಿರಲಿಲ್ಲ” ಎನ್ನುತ್ತಾಳೆ.
ತನ್ನ ಹಿಡಿತವನ್ನು ಮುಂದುವರಿಸಿ, “ಗರ್ಭವನ್ನು ಇಟ್ಟುಕೊಳ್ಳೋದೋ ತೆಗೆಸೋದೋ ಅನ್ನುವುದು ಸಂಪೂರ್ಣವಾಗಿ ಮಹಿಳೆಯ ತೀರ್ಮಾನಕ್ಕೆ ಬಿಡಬೇಕಾದ ವಿಷಯ. ಆ ಬಗೆಗೆ ಯಾರೂ ಅವಳನ್ನು ಒತ್ತಾಯಿಸುಕ್ಕೆ ಅವಕಾಶವಿಲ್ಲ. ಒಂದು ವಿಷಯ ಸ್ಪಷ್ಟವಾಗಿ ಅರ್ಥಮಾಡಿಕೊ. ದಂಪತಿಗಳಾಗಿ ಪರಸ್ಪರ ಸೌಹಾರ್ದದಿಂದ ಜೀವನ ಮಾಡಬೇಕಾದ ನಾವು ಕಾನೂನುಕ್ರಮಕ್ಕೆ ಒಳಪಡುವುದು ಸರಿಯಲ್ಲ” ಎಂದು ದಬಾಯಿಸುತ್ತಾಳೆ. ಇಲ್ಲಿ ಕಾಣುವ ಒಂದು ವ್ಯಂಗ್ಯವೆಂದರೆ “ತಾವು ದಂಪತಿಗಳಾಗಿ ಪರಸ್ಪರ ಸೌಹಾರ್ದದಿಂದ ಜೀವನ ಮಾಡಬೇಕು; ಕಾನೂನು ಕ್ರಮ ಹಿಡಿದು ಹೋಗಬಾರದು” ಎಂಬುದು ಆಕೆಗೆ ಗೊತ್ತು. ಆದರೆ ಆಕೆಯಂತೂ ಎಂದೂ ಆ ರೀತಿ ನಡೆದುಕೊಳ್ಳುವುದಿಲ್ಲ.
ಜಯಕುಮಾರ್ ವಕೀಲರ ಅಭಿಪ್ರಾಯ ಕೇಳಿದರೆ ಅದು ಪ್ರತಿಕೂಲವಾಗಿಯೇ ಇರುತ್ತದೆ. ಅವರು ಹೇಳುತ್ತಾರೆ: “ಇಂಥ ಯಾವ ವಿವಾದದಲ್ಲೂ ಕೋರ್ಟು ಹೆಂಗಸಿನ ಮಾತನ್ನು ನಂಬುತ್ತೆಯೇ ಹೊರತು ಗಂಡಸಿನ ಮಾತಿಗೆ ಬೆಲೆ ಕೊಡುಲ್ಲ. ಮದುವೆಯಾಗ್ತೀನಿ ಅಂತ ನಂಬಿಸಿ ಅವನು ಗರ್ಭಿಣಿ ಮಾಡಿದ ಅಂತ ಅವಳು ಹೇಳಿದರೆ ಕೋರ್ಟು ಅದನ್ನು ಅತ್ಯಾಚಾರ ಅಂತ ಪರಿಗಣಿಸಿ ಏಳು ವರ್ಷ ಸಜಾ ವಿಧಿಸಬಹುದು… ಇರುವ ಕಾನೂನನ್ನು ಬಳಸಿಕೊಂಡು ಸಾಧ್ಯವಿದ್ದಷ್ಟು ಗುಂಜಿಕೊಳ್ಳುವುದಷ್ಟೇ ಎಲ್ಲೆಲ್ಲಿಯೂ ನಡೆಯುವುದು. ಈ ವಿಷಯದಲ್ಲಿ ನ್ಯಾಯಾಧೀಶರಿಗೆ ಯಾವ ಸ್ವಾತಂತ್ರ್ಯವೂ ಇಲ್ಲ” ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ.
ದಿಢೀರ್ ಪ್ರತಿಭಟನೆ
ಗರ್ಭ ತೆಗೆಸುವುದಕ್ಕೆ ಹಣ ಕೊಡುತ್ತೇನೆಂದು ಜಯಕುಮಾರ್ ಹೇಳಿದಾಗ ಮಂಗಳೆ ಕಡೆಯಿಂದ ಪ್ರತಿಭಟನೆಗೆ ವ್ಯವಸ್ಥೆಯಾಗುತ್ತದೆ. ಇದ್ದಕ್ಕಿದ್ದಂತೆ ಒಂದು ಬೆಳಗ್ಗೆ ಹನ್ನೊಂದು ಗಂಟೆಯ ವೇಳೆ ಒಂದೆಡೆ ನಾಲ್ಕು ಜನ ಮಹಿಳೆಯರು ಈತನನ್ನು ನೋಡಬೇಕೆಂದು ಬಂದರೆ ಇನ್ನೊಂದೆಡೆ ಕಾಂಪೌಂಡ್ ಮುಖ್ಯದ್ವಾರದ ಹೊರಗೆ ಸುಮಾರು ನೂರು ಜನ ಹುಡುಗಿಯರು. ನಾಲ್ವರು ಮಹಿಳೆಯರಲ್ಲಿ ಸುಪ್ರೀಂಕೋರ್ಟ್ ಅಡ್ವೊಕೇಟ್ ಮಾಲಾ ಕೆರೂರ್ ಕೂಡ ಇದ್ದಾರೆ. ಪುಟ್ಟ ಪೀಠಿಕೆಯೊಂದಿಗೆ ಆಕೆ ಕಾನೂನಿನ ವರಸೆ ಹಾಕಿದರು: “ನಿಮ್ಮ ಉದ್ಯೋಗಿಯೊಬ್ಬರ ಜೊತೆ ನೀವು ಸ್ನೇಹ ಬೆಳೆಸಿ ಆಕೆ ಗರ್ಭಿಣಿಯಾಗಿರುವುದು, ನೀವು ಮಾತು ತಪ್ಪಿಸುತ್ತಿರುವುದು ನಮ್ಮ ಮಹಿಳಾ ಸಂಘಟನೆಯ ಗಮನಕ್ಕೆ ಬಂದಿದೆ. ಘ?ಣೆಗೆ ಅವಕಾಶ ಕೊಡದೆ ಯಾರಿಗೂ ಅನ್ಯಾಯವಾಗದಂತೆ ಬಗೆಹರಿಸುವುದು ನಮ್ಮ ಉದ್ದೇಶ. ಸುದ್ದಿ ತಿಳಿದು ನೂರು ಜನ ಕಾಲೇಜು ಹುಡುಗಿಯರು ಬಂದು ನಿಮ್ಮ ಗೇಟಿನ ಹೊರಗೆ ಘೇರಾಯಿಸಿದ್ದಾರೆ. ಹೆಣ್ಣುಮಕ್ಕಳು ಬಂದು ಘೇರಾವ್ ಮಾಡ್ತಿದ್ದಾರೆ ಅಂತ ತಿಳಿದರೆ ಕಾರ್ಮಿಕ ಮುಖಂಡರು ಒಂದು ಲಕ್ಷ ಜನರನ್ನು ತಂದು ಸುತ್ತುವರೆಸಬಹುದು. ಫ್ಯಾಕ್ಟರಿಯ ಕಾರ್ಮಿಕಳ ಮೇಲೆ ಅತ್ಯಾಚಾರವಾಗಿದೆ ಅಂತ ಮಹಿಳಾ ಕಾರ್ಮಿಕರೆಲ್ಲ ನುಗ್ಗಿ ಬರಬಹುದು. ಒಂದೇ ಘಟನೆಗೆ ನಾಲ್ಕಾರು ಬಗೆಯ ಕೇಸು ದಾಖಲಿಸಬಹುದು” ಎಂದು ಬೆದರಿಸಿದ ಆಕೆ, “ನಿಮ್ಮಿಂದ ಕಟ್ಟಿದ ಭ್ರೂಣವನ್ನು ಒಪ್ಪಿಕೊಳ್ಳಿ. ಕಂಪೆನಿಗೆ ಉತ್ತರಾಧಿಕಾರಿಯೂ ಹುಟ್ಟುತ್ತೆ” ಎಂದು ಪರಿಹಾರ ಸೂಚಿಸಿದರು. “ಏಳು ವ? ಸಜಾ ಆದರೆ ನೀವು ಕಟ್ಟಿದ ಈ ಕಂಪೆನಿಯ ಗತಿ ಏನು?” ಎಂದು ಪರಿಣಾಮವನ್ನು ನೆನಪಿಸಿ, “ಮಾಡೂದು ಮಾಡಿ ತಪ್ಪಿಸಿಕೊಳ್ಳುಕ್ಕೆ ಸುಳ್ಳು ಸೃಷ್ಟಿಸಬೇಡಿ; ಅವಳು ಹಾಗಂದಳು ಅನ್ನುಕ್ಕೆ ಏನು ಸಾಕ್ಷಿ? ಅವಳು ಭಾರತೀಯ ನಾರಿ. ಪರಂಪರೆಯಿಂದ ಬಂದ ಶೀಲವುಳ್ಳವಳು. ಅವಳನ್ನು ನೀವು ಮದುವೆಯಾಗಲೇಬೇಕಾಗುತ್ತೆ. ಸಾಯೂತನಕ ಕೂಡಿ ಬಾಳಬೇಕಾದವಳ ಜೊತೆ ಮನಸ್ಸನ್ನು ಯಾಕೆ ಕಹಿ ಮಾಡಿಕೊತ್ತೀರ?” ಎಂದು ಕೇಳುತ್ತಾರೆ; ಮತ್ತು “ಮಿಸ್ ಮಂಗಳಾ ಅವರ ಕೇಸನ್ನು, ನಾವು ಅಂದರೆ ಮಹಿಳಾ ಸಂಘಟನೆ ತಗೊಂಡಿದೆ. ಇದು ಕ್ರಿಮಿನಲ್ ಕೇಸ್ ಆಗುತ್ತೆ” ಎಂದು ಮಾತಿನಲ್ಲಿ ಕಟ್ಟಿಹಾಕಿ ಹೊರಟುಹೋಗುತ್ತಾರೆ. ರಿಜಿಸ್ತ್ರಿ ಮದುವೆಯಾಗಿ ಮಂಗಳೆ ಜಯಕುಮಾರ್ ಮನೆಗೆ ಸೇರಿಕೊಂಡಳು.
ವಿಕರ್ಷಣೆ ಆರಂಭ
ಮದುವೆಯಾಗಿ ಮನೆಗೆ ಕರೆತಂದ ಎರಡು ದಿನದಲ್ಲೇ ಜಯಕುಮಾರ್ಗೆ ಅವಳ ಸಹವಾಸದಿಂದ ದೂರವಿರುವ ಬಯಕೆ ಶುರುವಾಯಿತು. ಅದಕ್ಕೆ ಕಾರಣ ಹಲವು. ಈತನ ಉದ್ಯಮ ’ಜಯಂತಿ ಪ್ರೆಸಿಶೆನ್’ ಅನ್ನು ಕಟ್ಟಿಬೆಳೆಸುವಲ್ಲಿ ಮೊದಲ ಹೆಂಡತಿ ವೈಜಯಂತಿ ಪಾತ್ರ ದೊಡ್ಡದು. ಸಂಪ್ರದಾಯಸ್ಥೆ ಮತ್ತು ಕಾರ್ಯಕುಶಲೆಯಾದ ಆಕೆ ಪತಿಯ ಮನಸ್ಸನ್ನು ಪೂರ್ತಿ ಗೆದ್ದಿದ್ದಳು. ಕಂಪೆನಿಯಲ್ಲಿ ಹಾಕಿದ್ದ ವೈಜಯಂತಿಯ ದೊಡ್ಡ ಭಾವಚಿತ್ರಗಳನ್ನು ಮಂಗಳೆ ತೆಗೆಸಿದಳು. ಅಪಘಾತದಲ್ಲಿ ತಲೆಗೆ ಪೆಟ್ಟಾಗಿ ಮಾತು ಸೇರಿದಂತೆ ವೈಕಲ್ಯಕ್ಕೆ ಗುರಿಯಾದ ವೈಜಯಂತಿ ಮಗಳು ಪುಟ್ಟಕ್ಕನನ್ನು ಅಲಕ್ಷಿಸಿದಳು; ಕ್ರಮೇಣ ಮನೆಯಿಂದ ಹೊರಗೆ ಹಾಕಿಸುವುದಕ್ಕೂ ಯತ್ನಿಸಿದಳು. ತನ್ನದೇ ಪ್ರತ್ಯೇಕ ಕೋಣೆ ಮಾಡಿಕೊಂಡಳು. ಸಂಬಂಧ ಕ್ರಮೇಣ ಶು?ವಾಯಿತು. ಆದರೆ ಅವಳ ಪ್ರಕಾರ ತಪ್ಪು ಅವನದೇ.
ಮಂಗಳೆ ನೇರವಾಗಿ ಪ್ರಶ್ನಿಸುತ್ತಾಳೆ: “ಮದುವೆಗೆ ಮೊದಲು ಜೊತೆಗೂಡುಕ್ಕೆ ಅ?ಂಡು ಆಸ್ಥೆ ತೋರಿಸುತ್ತಿದ್ದೋನು ಮದುವೆಯಾದ ಮೇಲೆ ಯಾಕೆ ಆಸಕ್ತಿ ಕಳಕೊಂಡೆ? ಹೊಣೆ ಇಲ್ಲದ ಸಂಬಂಧವಿದ್ದಾಗ ಇದ್ದ ಉತ್ಸಾಹ ಮದುವೆಯಾದ ತಕ್ಷಣ ಯಾಕೆ ಇಂಗಿಹೋಯಿತು?” ಎಂದು ಆಕೆ ಕೇಳಿದಾಗ, ಇವನ ಮನಸ್ಸಿನಲ್ಲಿ ಬಹುದಿನಗಳಿಂದ ಸಂಚಿತವಾಗಿದ್ದ ಅಸಮಾಧಾನವೆಲ್ಲ ಹೊರಹೊಮ್ಮಿತು: “ನೋಂದಣಿಗೆ ಮೊದಲು ನನ್ನಲ್ಲಿ ಮುಕ್ತ ಇಚ್ಛೆ ಮತ್ತು ಭಯ ಹುಟ್ಟಿಸಿ ನೀನು ನನ್ನನ್ನು ನೋಂದಣಿಗೆ ಸಿಕ್ಕಿಸಿಕೊಂಡೆ. ಅಂದರೆ ಮುಕ್ತತೆ ಮುಕ್ತಾಯಗೊಂಡಿತು. ಆಮೇಲೆ ಮಾರ್ದವದ ನಡಾವಳಿಯಿಂದ ನನ್ನ ಮನಸ್ಸನ್ನು ಗೆಲ್ಲಲಿಲ್ಲ. ಮದುವೆಯಾದರೂ ವಿಧವೆಯ ಹಾಗೆ ಬರೀ ಹಣೆಯಲ್ಲಿರ್ತೀಯ. ವಯಸ್ಸಿನ ಅಂತರವನ್ನು ಮತ್ತು ನನ್ನ ಸ್ಥಾನಮಾನವನ್ನು ಲೆಕ್ಕಿಸದೆ ಗಂಡನಿಗೆ ಏಕವಚನ ಪ್ರಯೋಗ ನಡೆಸಿರುವಿ. ನಿನ್ನ ಉದ್ಯೋಗದಾತೆ, ಕಂಪೆನಿಯ ಸ್ಥಾಪಕಿ ಹೇಗಿದ್ದಳು? ಮುಖಕ್ಕೆ ಹೊಂದುವ ಕುಂಕುಮ, ಬಾಚಿ ಹೆಣೆದ ಜಡೆ, ಮುಡಿಯಲ್ಲಿ ಕಂಗೊಳಿಸುವ ಮಲ್ಲಿಗೆಹೂವು, ಕೊರಳನ್ನು ಬೆಳಗುವ ಮಾಂಗಲ್ಯದ ಸರ, ನೋಡಿದರೆ ಇವಳು ತನ್ನ ಆಯು?ದ ವರ್ಧಕಳು, ಆ ವರ್ಧನೆಗೆ ದೇವರನ್ನು ಪೂಜಿಸುವವಳು ಎನ್ನುವ ಅಭಯ ಹುಟ್ಟಿಸುವ ಪ್ರಸಾಧನ, ಪ್ರಸನ್ನತೆಗಳು. ಇಂಥ ಕ್ಷೇಮಭಾವದಲ್ಲಿ ತಾನೇ ಪುರು?ನ ಪುರು?ತ್ವ ವರ್ಧಿಸಿ ವಿಜೃಂಭಿಸೂದು? ಸೂತಕದಲ್ಲಿರುವ ಹೆಂಡತಿಯ ಹತ್ತಿರ ಯಾವ ಉತ್ತೇಜನವಾಗುತ್ತೆ?” ಎಂದು ಕೇಳುತ್ತಾನೆ.
ಅದಕ್ಕೆ ಮಂಗಳೆ “ಉದ್ಯೋಗದಾತೆ, ಕಂಪೆನಿಯ ಸ್ಥಾಪಕಿ (ಮೊದಲ ಪತ್ನಿ) ಎಂದೆಲ್ಲ ಹಳೆಯ ಸಂಬಂಧವನ್ನು ನಾನು ಒಪ್ಪಲ್ಲ. ಪತ್ನಿಯ ಈ ಸ್ಥಾನಕ್ಕೆ ಕಾನೂನಿನ ರಕ್ಷಣೆ ಇದೆ. ಹಣೆಯ ಕುಂಕುಮ, ತುರುಬಿನ ಹೂವುಗಳ ದಾಸ್ಯದ ಸಂಕೇತಗಳನ್ನು ನನ್ನ ಮೇಲೆ ಹೇರುವ ಪ್ರಯತ್ನ ಮಾಡಬೇಡ. ಈ ಸಂಕೇತಗಳನ್ನು ಪಾಲಿಸದಿದ್ದರೆ ದೇಹಸುಖವನ್ನು ನಿರಾಕರಿಸುವ ಬೆದರಿಕೆ ಹಾಕಿದ್ದೀಯ. ದಾಂಪತ್ಯದಲ್ಲಿ ದೇಹಸುಖವು ಪರಸ್ಪರ ಹಕ್ಕು ತಿಳಕ. ನೀನು ಗಂಡಸಿನ ಹಾಗೆ ನಡಕೊಬೇಕು” ಎಂದು ಸವಾಲೆಸೆದಳು.
ಗುರು ಇಳಾ ಮೇಡಂ
ಈ ವಿಷಯಗಳಲ್ಲಿ ಮಂಗಳೆಯ ಮೇಲೆ ಪ್ರಭಾವ ಬೀರಿದವಳು ಆಕೆ ಓದಿದ ವಿಶ್ವವಿದ್ಯಾಲಯದ ಇಂಗ್ಲಿ? ವಿಭಾಗದಲ್ಲೇ ಇದ್ದ ಡಾ| ಇಳಾ ಮೇಡಂ. ನಿಷ್ಠ ಮಹಿಳಾವಾದಿ (ಸ್ತ್ರೀವಾದಿ)ಯಾಗಿದ್ದ ಅವರು ಆ ಕುರಿತು ತುಂಬ ಓದುತ್ತಿದ್ದರು; ಪಾಠದ ಮಧ್ಯೆ ಕೂಡ ಮಹಿಳಾವಾದವನ್ನು ಮುಂದೆ ತರುತ್ತಿದ್ದರು. “ಪಶ್ಚಿಮದ ದೇಶಗಳಲ್ಲಿ ಹದಿನಾರು ವರ್ಷವಾಗುವ ತನಕ ದೇಹಸಂಬಂಧ ಮಾಡಬಾರದೆಂಬ ಕಟ್ಟು ಇದೆ; ಮತ್ತೆ ಅದು ಮಾಮೂಲು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಹದಿನಾರು ವ? ಅನ್ನುವುದು ವೈದ್ಯಶಾಸ್ತ್ರ, ಮನಶ್ಶಾಸ್ತ್ರ, ಸಮಾಜಶಾಸ್ತ್ರ ಮೊದಲಾದ ಎಲ್ಲ ವೈಜ್ಞಾನಿಕ ಮಾನಗಳಿಂದಲೂ ಅಳೆದು ನಿರ್ಧರಿಸಿ ಮಾಡಿರುವ ನ್ಯಾಯದ ನಿಯಮ. ಹದಿನಾರು ತುಂಬಿದವರು ದೇಹಸಂಪರ್ಕಕ್ಕೆ ಅರ್ಹರು… ಪಶ್ಚಿಮದಲ್ಲಿ ವಿವಾಹಿತ ತಾಯಿಗಿರುವ? ಗೌರವ ಅವಿವಾಹಿತ ತಾಯಿಗೂ ಉಂಟು. ಸಮಾಜ ಅದನ್ನು ಒಪ್ಪಿಕೊಂಡಿದೆ. ಸ್ತ್ರೀವಿಮೋಚನೆಯಲ್ಲಿ ಇದೊಂದು ಮುಖ್ಯವಾದ ಮೈಲಿಗಲ್ಲು” ಮುಂತಾದ ವಿಚಾರ ಹೊಂದಿರುವ ಇಳಾ ಇಂಗ್ಲೆಂಡಿನಲ್ಲಿ ಉನ್ನತ ಶಿಕ್ಷಣ ಪಡೆದವಳು.
ಹೆಂಗಸು ವಿಮೋಚಿತಳಾಗದೆ ಗಂಡಿಗೂ ಮುಕ್ತಿ ಇಲ್ಲ ಎನ್ನುವ ಇಳಾ ಮೇಡಂ ಅವರ ಪಾಠವನ್ನು ನಂಬಿದ ಮಂಗಳೆ ವಿದ್ಯಾರ್ಥಿ ದಿನಗಳಲ್ಲಿ ಪ್ರಭಾಕರ ಎನ್ನುವ ಸಹಪಾಠಿಯೊಂದಿಗೆ ಸಂಬಂಧವನ್ನು ಬೆಳೆಸಿದ್ದಳು. “ವಿಶ್ವವಿದ್ಯಾಲಯಕ್ಕೆ ರಜೆ ಇದ್ದಾಗ ನಾನು, ಪ್ರಭಾಕರ ಯಾವ ಅಡ್ಡಿ-ಆತಂಕಗಳೂ ಇಲ್ಲದೆ ನಾಲ್ಕಾರು ಗಂಟೆ ಬಾಗಿಲುಮುಚ್ಚಿ ಜೊತೆಯಲ್ಲಿರುತ್ತಿದ್ದೆವು” ಎಂದು ಆಕೆ ಒಮ್ಮೆ ಹೇಳಿಕೊಂಡಿದ್ದಳು. ಈಕೆ ಗರ್ಭಿಣಿಯಾದಾಗ ಪ್ರಭಾಕರ ತೆಗೆಸುವ ಪ್ರಸ್ತಾಪ ಮುಂದಿಟ್ಟ. ಇವಳಿಗೆ ಅದು ಗಂಡಸಿನ ಯಜಮಾನಿಕೆ ಎಂದು ಸಿಟ್ಟು ಬಂತು. ’ಕ್ಲೀನ್ ಮಾಡಿಸೋಣ’ ಎಂದು ಆತ ಹೇಳಿದಾಗ ’ಹಾಗಾದರೆ ಇದು ಡರ್ಟಿಯಾ?’ ಎನ್ನುವ ಪ್ರಶ್ನೆ ಅವಳಲ್ಲಿ ಮೊಳೆಯಿತು. ಖರ್ಚಿನ ಹಣ ತಂದ ಆತ ಉಪಾಯವಾಗಿ ಕ್ಲೀನ್ ಮಾಡಿಸಿಬಿಟ್ಟ. ಇವಳಿಗೆ ಅವನ ಮೇಲೆ ಕೆಲಕಾಲ ತಿರಸ್ಕಾರ ಬಂತು. ಕೆಲಕಾಲ ಮಾತ್ರ; ಏಕೆಂದರೆ ಜಯಕುಮಾರನನ್ನು ಮದುವೆಯಾಗುವಾಗ ಕೂಡ ಆಕೆಗೆ ಪ್ರಭಾಕರನೊಂದಿಗೆ ಸಂಬಂಧವಿತ್ತು; ಎಲ್ಲಿಯವರೆಗೆಂದರೆ ಹುಟ್ಟಿದ ಮಗು (ತೇಜು) ಇಬ್ಬರಲ್ಲಿ ಯಾರದ್ದೆನ್ನುವ ತನಕ ಸಂದೇಹ ಬೆಳೆದಿತ್ತು. ಕಾದಂಬರಿಯ ಕೊನೆಯ ಹೊತ್ತಿಗೆ ಅದಕ್ಕೆ ಇನ್ನಷ್ಟು ಒತ್ತು ಸಿಗುತ್ತದೆ.
“ನನಗೆ ಕೇಳಿದ್ದರೆ ಪ್ರಭಾಕರನ ಜೊತೆ ಮದುವೆ ಮಾಡಿಸುತ್ತಿದ್ದೆ. ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ಹಾಗೆ ಮಾಡುತ್ತಿದ್ದೆ” ಎಂದು ಇಳಾ ಮೇಡಂ ಹೇಳುತ್ತಾರೆ. “ಆಗ ಪ್ರೀತಿ ಇರುತ್ತದೆಯೆ?” ಎಂದು ಕೇಳಿದರೆ, “ಬೇರೆ ಹೆಂಗಸಿನ ಸಂಪರ್ಕವಿಲ್ಲದ ಹಾಗೆ ದಿಗ್ಭಂಧನ ವಿಧಿಸಿದರೆ ಸರಿಯಾಗುತ್ತದೆ” ಎಂದಾಕೆ ಉತ್ತರಿಸುತ್ತಾರೆ. “ಗಂಡಸಿಗೆ ಬುದ್ಧಿಕಲಿಸುವ ಸಾಕಷ್ಟು ಕಾನೂನುಗಳಿವೆ. ಅವುಗಳನ್ನು ಇನ್ನಷ್ಟು ಬಿಗಿಮಾಡುವ ಹೋರಾಟಗಳು ನಡೆಯುತ್ತಿವೆ” ಎಂದು ಇಳಾ ಸ್ಪಷ್ಟಪಡಿಸುತ್ತಾರೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಕೇಂದ್ರ ಸರ್ಕಾರ(೨೦೦೪-೧೪) ದ ಆರಂಭದ ವ?ಗಳನ್ನು ಪ್ರತಿನಿಧಿಸುತ್ತದೆಂದು ಗುರುತಿಸಬಹುದು. ಉಗ್ರಸ್ತ್ರೀವಾದಿಗಳ ಪ್ರಭಾವ, ಒತ್ತಡಗಳ ಮೇರೆಗೆ ಯುಪಿಎ ಸರ್ಕಾರ ಹಿಂದೂ ವಿವಾಹ ಕಾಯ್ದೆಗೆ ಹಲವು ತಿದ್ದುಪಡಿಗಳನ್ನು ತಂದು ಮಹಿಳೆಯರ ಪರವಾದ ಹಲವು ಅಂಶಗಳನ್ನು ಸೇರಿಸಿತು. ಇಲ್ಲಿನ ಸುಪ್ರೀಂಕೋರ್ಟ್ ಅಡ್ವೊಕೇಟ್ ಮಾಲಾ ಕೆರೂರ್ ಸುಪ್ರೀಂಕೋರ್ಟ್ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರನ್ನು ಹೋಲುತ್ತಾರೆನ್ನಬಹುದು.
ಮಹಿಳಾ ಸಮ್ಮೇಳನ
ಬೆಂಗಳೂರಿನಲ್ಲಿ ಮಹಿಳಾ ಜಾಗೃತಿ ರಾಷ್ಟ್ರೀಯ ಸಮ್ಮೇಳನ ನಡೆದಾಗ ಮಂಗಳೆ ಮಾಲಾ ಕೆರೂರ್ ಅವರಿಗೆ ಸಹಾಯಕಿಯಾಗಿ ಕೆಲಸ ಮಾಡುತ್ತಾಳೆ. ಸಮ್ಮೇಳನವನ್ನು ಏರ್ಪಡಿಸುವುದು ಮಾತ್ರವಲ್ಲ, ಇಡೀ ಕರ್ನಾಟಕದಲ್ಲಿ ಮಹಿಳೆಗೆ ಯಾವುದೇ ತೆರನಾದ ಅನ್ಯಾಯವಾದರೂ ಕಾನೂನು ಮೂಲಕ ಮತ್ತು ಸಾಮಾಜಿಕವಾಗಿ ಪ್ರತಿಭಟಿಸುವುದು, ಪೊಲೀಸರ ಮೇಲೆ ಒತ್ತಡ ಸೃಷ್ಟಿಸುವುದು, ಹೆಂಗಸರಲ್ಲಿ, ಅದರಲ್ಲೂ ವಿದ್ಯಾರ್ಥಿನಿಯರಲ್ಲಿ ಮಹಿಳಾ ಜಾಗೃತಿಯನ್ನು ಬಿತ್ತಿ ಬೆಳೆಸುವುದು, ಅವರನ್ನು ಸಂಘಟಿಸಿ ಹೋರಾಡುವ ಬಗೆಯನ್ನು ಕುರಿತು ತರಗತಿಗಳನ್ನು ಏರ್ಪಡಿಸುವುದು, ಯಾವುದೇ ಮಹಿಳೆ ಅಸಹಜವಾಗಿ ಸತ್ತರೆ ಗಂಡ ಅಥವಾ ಅವನ ಮನೆಯವರನ್ನು ಅದಕ್ಕೆ ಜವಾಬ್ದಾರರನ್ನಾಗಿಸುವಂತೆ ಚಳವಳಿ ಮಾಡಿಸುವುದು, ಅದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗುವಂತೆ ಮಾಡುವುದು – ಹೀಗೆ ಅವರ ಕೆಲಸ ಸಂಕೀರ್ಣವಾಗಿತ್ತು. ಈ ಚಟುವಟಿಕೆಗಳು ಅನಗತ್ಯ ಅಥವಾ ತಪ್ಪೆಂದು ಹೇಳಲಾಗದು. ಆದರೆ ಸ್ತ್ರೀವಾದಿ ನಾಯಕಿಯರು ಅದಕ್ಕಿಂತ ಮುಂದೆ ಹೋಗಿ ಸೌಹಾರ್ದದ ಬದಲು ಸಮಾನತೆಯ ಹೆಸರಿನಲ್ಲಿ ಪುರುಷದ್ವೇಷವನ್ನು ಮೈಗೂಡಿಸಿಕೊಂಡದ್ದು ಮತ್ತು ಶಾಶ್ವತವಾಗಿ ಇರಬೇಕಾದ ಕಾನೂನಿನಲ್ಲಿ ಬೇಡದ ಅಂಶಗಳನ್ನು ಸೇರಿಸಿದ್ದು ಸಮಸ್ಯೆಗೆ ಮೂಲವಾಯಿತು. ಅದಕ್ಕೊಂದು ಉದಾಹರಣೆ – ಪ್ರಸ್ತುತ ಮಹಿಳಾ ಜಾಗೃತಿ ಸಮ್ಮೇಳನವು ಅಂಗೀಕರಿಸಿದ ಒಂದು ನಿರ್ಣಯದಲ್ಲಿ “ಮದುವೆಯಾದ ಕ್ಷಣದಿಂದ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಸಮಸ್ತ ಆಸ್ತಿಯಲ್ಲೂ ಹೆಂಡತಿಗೆ ಅರ್ಧಪಾಲಿನ ಹಕ್ಕು ತನಗೆ ತಾನೆ ಬಂದುಬಿಡುವಂತೆ ದೇಶದ ಸಂಸತ್ತು ಕಾನೂನು ಮಾಡಬೇಕು” ಎಂದು ಆಗ್ರಹಿಸಿದ್ದು (ಯುಪಿಎ ಸರ್ಕಾರ ಈ ಕಾನೂನನ್ನು ಜಾರಿಗೆ ತಂದಿದೆ). ಸಮ್ಮೇಳನದ ಯಶಸ್ಸಿನಿಂದ ಪ್ರಭಾವಿತರಾದ ಫ್ರಾನ್ಸ್, ಸ್ವೀಡನ್ ಮತ್ತು ಜರ್ಮನಿಯ ಪ್ರತಿನಿಧಿಗಳು ಪ್ರಭಾವ ಬೀರಿ ಮಾಲಾ ಕೆರೂರನ್ನು ವಿಶ್ವ ಮಹಿಳಾ ಸಂಘಟನೆಯ ಭಾರತದ ಉಪಾಧ್ಯಕ್ಷೆಯನ್ನಾಗಿ ಮಾಡಿಬಿಟ್ಟರು. ಇಂದಿರಾ ಜೈಸಿಂಗ್ ಅವರು ಹಿಂದೂ ಸಮಾಜ ಮಹಿಳೆಗೆ ವಿರುದ್ಧವಾಗಿದೆ, ಆಕೆಯ ಇರುವಿಕೆಯೇ ಕ? ಎಂದು ವಿದೇಶಗಳಲ್ಲಿ ಅಪಪ್ರಚಾರ ಮಾಡುತ್ತಿದ್ದುದು, ಆಕೆಯ ಸ್ವಯಂಸೇವಾ ಸಂಸ್ಥೆಗೆ ಕೋಟಿಗಟ್ಟಲೆ ರೂ. ವಿದೇಶಿ ನೆರವು ಬರುತ್ತಿದ್ದುದು ಇಲ್ಲಿ ನೆನಪಾಗುತ್ತದೆ.
ಸ್ತ್ರೀ ಸಲಿಂಗ ಕಾಮ
ಸ್ತ್ರೀವಾದಿ ಹೋರಾಟದಲ್ಲಿರುವ ಮುಂಬಯಿಯ ಸರಾಫ್ ಮೇಡಂ ಎಂಬಾಕೆಯನ್ನು ಕೂಡ ’ಕವಲು’ ಚಿತ್ರಿಸುತ್ತದೆ. ಆಕೆ ಮಂಗಳೆಗೆ ಹೀಗೆ ಹೇಳುತ್ತಾಳೆ: “ಒಂದು ತಿಳಕ. ನಾವು ಸ್ತ್ರೀವಿಮೋಚನೇಲಿ ತೊಡಗಿರೋರು. ಮಹಿಳೆಯು ತುಂಬ ಲೈಟಾದ ವೈನ್ ಮಾತ್ರ ತಗೋಬೇಕು, ಸ್ಟ್ರಾಂಗ್ ಆದದ್ದೆಲ್ಲ ಮ್ಯಾಸ್ಕುಲೈನ್ಗಳಿಗೆ ಅನ್ನೂದನ್ನು ಒಪ್ಪಬಾರದು.
ಒಪ್ಪಿ ಅದರಂತೆ ನಡೆದರೆ ನಾವು ವೀಕ್ ಅಂತ ಒಪ್ಪಿಕೊಂಡಂತಾಗುತ್ತದೆ.” ಮುಂದುವರಿದು, “ಗಂಡುಹೆಣ್ಣುಗಳಿಗೆ ಸಹಜವಾಗಿ ಆಗಬೇಕಾದ ಇದನ್ನು ನಾವ್ಯಾರೂ ನೀತಿಯ ತಕ್ಕಡೀಲಿಟ್ಟು ತೂಗಬಾರದು ಅನ್ನುವುದು ವಿಮೋಚನೆಯ ಪ್ರಥಮ ನಿಯಮ. ಪ್ರಕೃತಿಸಹಜವಾದ ದೈಹಿಕ ಕಾಮನೆಯನ್ನು ಹತ್ತಿಕ್ಕಬಾರದು. ಆದರೆ ಅದಕ್ಕಾಗಿ ಹೆಂಗಸು ಗಂಡಸಿನ ಯಜಮಾನಿಕೆಗೆ ಒಳಗಾಗಬಾರದು. ಹೆಂಗಸು ಹೆಂಗಸರೇ ಪರಸ್ಪರಾವಲಂಬಿಗಳಾಗಬೇಕು. ಅದು ವಿಮೋಚನೆಯ ಅತ್ಯುಚ್ಚ ಮೆಟ್ಟಿಲು” ಎಂದು ಕೂಡ ಆಕೆ ವಿವರಿಸುತ್ತಾಳೆ; ಮತ್ತು ಮಂಗಳೆಯನ್ನು ಹೊಟೇಲಿನ ತನ್ನ ಕೋಣೆಗೆ ಕರೆದೊಯ್ದು ಸಲಿಂಗ ಕಾಮಕೂಟ ನಡೆಸುತ್ತಾಳೆ. ಆದರೆ ಮಂಗಳೆಗೆ ಅಂತಹ ಕೂಟದ ಬಗ್ಗೆ ಅಸಹ್ಯವ? ಬರುತ್ತದೆ. ಗಮನಿಸಬೇಕಾದ ಅಂಶವೆಂದರೆ, ಸರಾಫ್ ಮೇಡಂ ಒಂದು ಅಪವಾದವಲ್ಲ. ಸ್ತ್ರೀಸಲಿಂಗ ಕಾಮವು ವಿಮೋಚನೆಯ ಒಂದು ಮುಖವೆಂದು ಪಶ್ಚಿಮದ ಕೆಲವು ಸ್ತ್ರೀವಿಮೋಚನಾವಾದಿಗಳು ಬರೆದಿದ್ದಾರೆ.
“ಚಳವಳಿಯ ಹೆಂಗಸರ ಜೊತೆ ಸ್ನೇಹವಾಗಿರಬಹುದು. ವಿವೇಕಿಯಾದ ಗಂಡಸು ಎಂದೂ ಅಂಥವರನ್ನು ಮದುವೆಯಾಗುವುದಿಲ್ಲ” ಎಂದು ಆಪ್ತ ಗೆಳೆಯ ಪ್ರಭಾಕರ ಒಮ್ಮೆ ಹೇಳಿದನೆಂದು ಮಂಗಳೆಗೆ ಸಿಟ್ಟು ಬರುತ್ತದೆ; ಗಂಡಸು ಜಾತಿಯದ್ದು ಒಂದೇ ಹೀನಗುಣ ಎಂದು ಮನಸ್ಸಿನಲ್ಲಿ ಶಪಿಸುತ್ತಾಳೆ. ಆದರೆ ಪ್ರಭಾಕರ ಫೋನ್ ಮಾಡಿದಾಗ ಕರಗುತ್ತಾಳೆ. ಅದಕ್ಕೆ ಕಾದಂಬರಿಯಲ್ಲಿರುವ ಒಂದು ಸಮರ್ಥನೆ – “ಗಂಡುಹೆಣ್ಣು ಯಾರೊಡನೆ ಮೊದಲಬಾರಿಗೆ ಸಂಪೂರ್ಣ ಸಂತೋ?ವಾಗುವಂತೆ ಸಮಾಗಮ ಮಾಡ್ತಾರೆಯೋ ಅವರನ್ನು ಮರೆಯುವುದು ಜನ್ಮವಿಡೀ ಸಾಧ್ಯವಿಲ್ಲ” ಎಂಬುದಾಗಿ. ಪ್ರಭಾಕರ ಈಕೆಯ ಮನೆಗೇ ಬರುತ್ತಿರುತ್ತಾನೆ. ಕೇಳಿದಾಗ ಪ್ರಭಾಕರ ವಿಮೋಚನೆ- ಚಳವಳಿಯವರನ್ನು ಮದುವೆ ಆಗಬಾರದೆಂದು ತಾನು ಹೇಳಿಲ್ಲ ಎನ್ನುತ್ತಾನೆ; ಆದರೆ ಆತನ ನಡತೆಯಿಂದ ಅದು ಸಾಬೀತಾಗಿದೆ.
ಮಲಮಗಳಿಗೆ ಹಿಂಸೆ
ಇನ್ನೊಂದೆಡೆ ಮಂಗಳೆ ಮತ್ತು ಜಯಕುಮಾರನ ಸಂಬಂಧ ದೂರವಾಗುತ್ತಾ ಇರುತ್ತದೆ. ಮಲಮಗಳು ಪುಟ್ಟಕ್ಕನನ್ನು ಮಂಗಳೆ ತಿರಸ್ಕಾರದಿಂದ ಕಂಡಂತೆ ಜಯಕುಮಾರ ಅವಳಿಗೆ ಹೆಚ್ಚುಹೆಚ್ಚು ಸಮೀಪವಾಗುತ್ತಾನೆ. ಆಕೆಗೆ ಅದು ಅಗತ್ಯ ಕೂಡ. ಅಂತಹ ಹೊತ್ತಿನಲ್ಲಿ ಮಂಗಳೆ “ಪಾಠ ಹೇಳಿಕೊಡುವ ನೆಪದಲ್ಲಿ ಹದಿನಾರು ವ?ದ ಹುಡುಗಿಯ ಹೊಸ ಮೊಲೆ ನೋಡ್ತಾ ಕೂತಿದ್ದೀಯಾ… ಹದಿನಾರು ವ?ದ ಹುಡುಗೀನ ನೋಡ್ತಾ ತಬ್ಬಿಕಳಾದು, ತಲೆ ಸವರೂದು, ಮುದ್ದಿಸೂದು. ನನಗೆಲ್ಲ ಅರ್ಥವಾಗುತ್ತೆ, ಸೈಕಾಲಜಿ” ಎಂದು ಛೇಡಿಸುತ್ತಾಳೆ. ಆಗ ಜಯಕುಮಾರ್ ಹೆಂಡತಿಗೆ ಹೊಡೆಯಲು ಮುಂದಾಗುತ್ತಾನೆ. ಅವಳಾದರೋ “ಹೊಡೆಯೂದಿರಲಿ, ನಿನ್ನ ಕೈಯಲ್ಲಿ ಏನೂ ಹರಿಯಲ್ಲ. ನೀನು ಇಂಪೊಟೆಂಟ್, ನಪುಂಸಕ ಒಪ್ಪಿಕೊ” ಎಂದು ನಾಲಗೆ ಹರಿಬಿಡುತ್ತಾಳೆ. ಈತ ಕೈಎತ್ತಿ ಅವಳ ಎಡಕೆನ್ನೆಗೆ ಬಾರಿಸಿದ; ಅವಳು ಇವನ ಎಡಕೆನ್ನೆಗೆ ಹೊಡೆದಳು. ಇವನು ಅವಳ ಕೆನ್ನೆ, ಭುಜ, ಬೆನ್ನುಗಳಿಗೆ ಹೊಡೆದು ಬೀಳಿಸಿ, ಸೊಂಟಕ್ಕೆ ಒದ್ದ. ಅವಳು ಹೋ ಎಂದು ಬೊಬ್ಬೆಹೊಡೆದಳು. ಆಕೆ ಪೊಲೀಸರಿಗೆ ದೂರು ನೀಡಿದಾಗ ಜಯಕುಮಾರನ ಬಂಧನವಾಯಿತು; ಲಾಕಪ್ಪಿಗೆ ಹಾಕಿದರು. ತಕ್ಷಣ ಜಾಮೀನು ಸಿಗಲಿಲ್ಲ. ಪೊಲೀಸ್ ಅಧಿಕಾರಿಗೆ ಎರಡು ಲಕ್ಷ ತೆತ್ತು ಮನೆಗೆ ಬರಬೇಕಾಯಿತು.
ಜಯಕುಮಾರನಿಗೆ ವಿಚ್ಛೇದನದ ಯೋಚನೆ ಬರುತ್ತಿತ್ತು. ಆದರೆ ವಿಚ್ಛೇದನವನ್ನು ಕೇಳಿದರೆ ಹೊಡೆದದ್ದು ’ಕೌಟುಂಬಿಕ ದೌರ್ಜನ್ಯ’ವಾಗಿದ್ದು ಅದರಿಂದ ರಕ್ಷಣೆ ಪಡೆಯುವ ಅಧಿಕಾರ ಹೆಂಡತಿಗೆ ಇದೆ. ಆಕೆ ಹೀನ ಪ್ರಚೋದನೆ ಮಾಡಿದಳು ಎನ್ನುವುದು ಲೆಕ್ಕಕ್ಕೆ ಬರುವುದಿಲ್ಲ ಎಂಬ ಕಾನೂನಿನ ಕರಾಳ ತಿರುಚುವಿಕೆ ಕಾಣಿಸಿಕೊಳ್ಳುತ್ತಿತ್ತು. ಇವಳು ಪೊಲೀಸಿಗೆ ದೂರು ನೀಡಿದ್ದು ಮತ್ತು ಲಾಕಪ್ಪಿಗೆ ಹಾಕಿಸಿದ್ದಕ್ಕೆ ಯಾವ ದಾಖಲೆಯೂ ಇಲ್ಲ. ಮನಸ್ಸು ನ್ಯಾಯದ ವಿಕೃತಿಯ ಬಗೆಗೆ ಚಿಂತಿಸುತ್ತಾ ಹೋಯಿತು.
ಒತ್ತಾಯದ ಕೌನ್ಸೆಲಿಂಗ್
ಮಾಲಾ ಕೆರೂರ್ ಅವರೊಂದಿಗೆ ಮಾತನಾಡು ಎಂದು ಮಂಗಳೆ ಜಯಕುಮಾರ್ಗೆ ಸೂಚಿಸಿದರೆ, ಮಾಲಾ ಅವರ ಜೂನಿಯರ್ ಚಿತ್ರಾ ಹೊಸೂರ್ ಫೋನ್ ಮಾಡಿ, ಈ ಕೇಸನ್ನು ತಾನು ಡೀಲ್ ಮಾಡುತ್ತೇನೆ ಎಂದು ತಿಳಿಸುತ್ತಾರೆ; ಜೊತೆಗೆ ತನ್ನನ್ನು ಭೇಟಿ ಆಗದಿದ್ದರೆ ಕಾನೂನು ಬಿಗಿ ಆಗುತ್ತದೆ ಎನ್ನುವ ಎಚ್ಚರಿಕೆಯೂ ಇರುತ್ತದೆ. ಚಿತ್ರಾ ಅವರು ಜಯಕುಮಾರ್ ಬಳಿ ವಿ?ಯವನ್ನು ಪ್ರಸ್ತಾಪಿಸಿ, “ಲೈಂಗಿಕ ಸುಖ ನಿರಾಕರಣೆ ಮತ್ತು ಜೊತೆಯಲ್ಲಿ ಮಲಗದಿರುವುದು ಕೌಟುಂಬಿಕ ದೌರ್ಜನ್ಯ ಎನಿಸುತ್ತದೆ. ಕೌಟುಂಬಿಕ ದೌರ್ಜನ್ಯ ಕೇಸಿನ ಅಡಿಯಲ್ಲಿ ನೀವು ಈಗಾಗಲೆ ಒಮ್ಮೆ ಪೊಲೀಸ್ ಠಾಣೆಗೆ ಹೋಗಿಬಂದವರು. ಎರಡನೇ ಸಲ ನಿಮ್ಮ ಮೇಲೆ ದೂರುಕೊಟ್ಟರೆ ಸಜೆ ಆಗುವುದು ಖಂಡಿತ. ಆದ್ದರಿಂದ ನಿಮ್ಮ ಮಾನಸಿಕ ರೊಚ್ಚನ್ನು ಇಳಿಸಿಕೊಳ್ಳಲು ಕೌನ್ಸೆಲರ್ ಅನ್ನು ನೇಮಿಸಿಕೊಳ್ಳಿ” ಎಂದು ಸಲಹೆ ನೀಡುತ್ತಾರೆ. ಕೌನ್ಸೆಲರ್ ಬಳಿ ಹೋಗಲು ನಿರಾಕರಿಸಿದರೂ ಕೂಡ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ; ಯಾವುದನ್ನು ಬೇಕಾದರೂ ಕಾನೂನಿನ ವ್ಯಾಪ್ತಿಯಲ್ಲಿ ತರಬಹುದು ಎನ್ನುವ ಎಚ್ಚರಿಕೆಯನ್ನು ನೀಡುತ್ತಾರೆ. ಅಂದರೆ ಕಾನೂನು ಇಲ್ಲಿ ಶಯನಕೋಣೆಗೂ ಪ್ರವೇಶಿಸಿದ್ದನ್ನು ಗಮನಿಸಬಹುದು.
ಕೌನ್ಸೆಲರ್ ಇವರ ಅಭಿಪ್ರಾಯಗಳನ್ನು ಕೇಳಿದರೂ ತಪ್ಪೆಲ್ಲ ಪತಿಯದ್ದೇ ಎಂಬಂತೆ ದಾಖಲಾದುದನ್ನು ಪ್ರತ್ಯೇಕ ಹೇಳಬೇಕಿಲ್ಲ; ಆ ದಾಖಲೆ ಕೋರ್ಟಿಗೂ ಹೋಗುವ ಸಾಧ್ಯತೆ ಇತ್ತು. ಮೂರು ಬಾರಿ ಸಮಾಲೋಚನೆ ನಡೆಸಿದ ಕೌನ್ಸೆಲರ್ ಹೇಳಿದ್ದು “ನೀವು ವಿದ್ಯಾವಂತರು; ಸರಿಮಾಡಿಕೊಳ್ಳಿ” ಎಂದ?. ಅದಕ್ಕೆ ಜಯಕುಮಾರ್ ೧೫ ಸಾವಿರ ತೆರಬೇಕಾಯಿತು.
ಕಾನೂನಿನ ಸಲಹೆ ಮೇರೆಗೆ ಜೊತೆಯಾಗಿ ಮಲಗಿದರೂ ಜಯಕುಮಾರ್ ಕಣ್ಣೆದುರು ಪೊಲೀಸರೇ ಬಂದರು; ಉತ್ತೇಜನ ಸಾಧ್ಯವಾಗದಿದ್ದಾಗ ಆಕೆಯಿಂದ “ಬೇಕಂತ ಕಳ್ಳಾಟ ಆಡ್ತಿದಿಯೋ? ಅಥವಾ ನಿಜವಾಗಿಯೂ ನಪುಂಸಕನಾಗಿದಿಯೋ?” ಎನ್ನುವ ಪಾಟೀಸವಾಲ್ ಶೈಲಿಯ ಪ್ರಶ್ನೆಯನ್ನು ಕೇಳಬೇಕಾಯಿತು. ಅವಮಾನವಾಗಿ ಮಗಳು ಪುಟ್ಟಕ್ಕನ ರೂಮಿಗೆ ಹೋದ. ಪ್ರಭಾಕರ್ ಜೊತೆಗಿನ ಸಂಬಂಧ ನಿರಾತಂಕವಾಗಿದ್ದು ಆ ಬಗ್ಗೆ ಆಕೆ ಹೇಳುವುದು: “ಇದು ನಮ್ಮದೇ ಮನೆ. ನಮ್ಮದೇ ಶಯನಕೋಣೆ, ನಾವು ದಂಪತಿಗಳು ಎಂಬಂತಹ ಧೈರ್ಯದಿಂದ ತಲ್ಲೀನರಾಗುತ್ತಿದ್ದೆವು”. ಮಂಗಳೆಗೆ ಮತ್ತೆ ಒಂದು ಮಗು ಬೇಕೆನಿಸುತ್ತದೆ. ಪ್ರಭಾಕರನಿಂದ ಪಡೆಯೋಣವೆಂದರೆ ಜಯಕುಮಾರ ಮೈಮುಟ್ಟುವುದನ್ನೇ ಬಿಟ್ಟಿದ್ದಾನೆ. “ನನಗೆ ತಾಯ್ತನ ನಿರಾಕರಿಸಲೆಂದೇ ಹೀಗೆ ಮಾಡ್ತಿದಾನೆ. ಇದೂ ಒಂದು ಬಗೆಯ ಕೌಟುಂಬಿಕ ದೌರ್ಜನ್ಯ ಎಂದು ಕೇಸು ಹಾಕಲು ಬರುಲ್ಲವೆ? ಚಿತ್ರಾ ಮೇಡಂನ ಕೇಳಬೇಕು ಎಂದಾಕೆ ಯೋಚಿಸುತ್ತಾಳೆ.
`ಪುರುಷತ್ವ ಪರೀಕ್ಷೆ’
ಮಂಗಳೆಯ ಜೊತೆಗಿನ ಅನುಭವ ಜಯಕುಮಾರನನ್ನು ಬೇರೆಯೇ ಚಿಂತೆಗೆ ಹಚ್ಚಿತು. ೪೮ರ ವಯಸ್ಸಿನಲ್ಲೇ ತಾನು ನಿಜವಾಗಿಯೂ ನಪುಂಸಕನಾದೆನೇ ಎನ್ನುವ ಕೊರಗು ಉಂಟಾಗಿ ಆತ್ಮೀಯ ಗೆಳೆಯ ಶೇಖರಪ್ಪನಲ್ಲಿ ವಿ?ಯ ತಿಳಿಸಿದಾಗ ವ್ಯವಹಾರದ ನಿಮಿತ್ತ ದೆಹಲಿಗೆ ಹೋದಾಗ ಕಾಲ್ಗರ್ಲ್ ಸಹವಾಸ ಮಾಡುವಂತೆ ಸಲಹೆ ನೀಡಿದ. ಅದರಂತೆ ನಿರ್ದಿ? ಹೊಟೇಲಿಗೆ ಹೋಗಿ ಆ ಅನುಭವವನ್ನು ಪಡೆಯುತ್ತಾನೆ; ಅಲ್ಲಿಗೆ ಆ ಸಮಸ್ಯೆ ಅಂತ್ಯವಾಗಿ ಹೀಗೆ ಹೇಳಬಲ್ಲವನಾಗುತ್ತಾನೆ; “ಅವಳಿಂದ (ವೇಶ್ಯೆ) ಸತ್ತೇಹೋಗಿದ್ದ ಆತ್ಮವಿಶ್ವಾಸಕ್ಕೆ ಹೊಸ ಜೀವ ಬಂತು. ಯಾವ ಅಡ್ಡಿಯೂ ಇಲ್ಲದೆ, ಆತಂಕದ ನೆರಳೂ ಇಲ್ಲದೆ ನಾನು ಮತ್ತೆ ಪುರು?ನಾಗಿದ್ದೆ. ೨೪ರ ಯುವಕನಾಗಿದ್ದೆ, ಇವೆಲ್ಲವೂ ಅವಳ ಮಾಂತ್ರಿಕ ಶಕ್ತಿಯಿಂದ ಆಗಿತ್ತು. ಅನುಕಂಪ, ತಾನು ಶಕ್ತಳಾಗಿದ್ದರೂ ದುರ್ಬಲೆಯೆಂಬ, ರಕ್ಷಿಸುವ ಶಕ್ತಿಯಿದ್ದರೂ ರಕ್ಷಣೆಯನ್ನು ಬೇಡಿ ಧೈರ್ಯ-ಶೌರ್ಯ ವೃದ್ಧಿಸುವ ವಿನೀತಗುಣದಿಂದ ನನ್ನನ್ನು ಪರಿವರ್ತಿಸಿದ್ದಳು. ಊಟವನ್ನೂ ಅವಳೇ ಮಾಡಿಸಿದಳು.” ಇಲ್ಲಿ ಜಯಕುಮಾರ್ ಅನುಭವ ಮೊದಲ ಪತ್ನಿ ಜೊತೆಗಿನ ಅನುಭವಕ್ಕೆ ಹೋಲುವುದನ್ನು ಗಮನಿಸಬಹುದು.
ಇನ್ನೊಮ್ಮೆ ಆ ಹೊಟೇಲಿನಲ್ಲಿ ಓರ್ವ ಕ್ರೀಡಾಪಟು ಎದುರಾಗುತ್ತಾಳೆ. ಅಂದಿನ ಅನುಭವ ಕುರಿತು ಜಯಕುಮಾರ್, “ಗಂಡಸನ್ನು ಗೆಲ್ಲಿಸುವ ಸ್ನೇಹಶೀಲತೆಯು ಹೆಂಗಸಿನಲ್ಲಿದ್ದರೆ ಸೋಲಿನ ಸೊಲ್ಲೂ ಇರುವುದಿಲ್ಲ ಎಂಬ ನನ್ನ ಇತ್ತೀಚಿನ ತಿಳಿವು ಮತ್ತೊಮ್ಮೆ ನಿಜವಾಯಿತು. ಇವಳು ಕೇವಲ ಹಣಕ್ಕಾಗಿ ಕಾಡುವವಳಲ್ಲ. ಬೇಡ ಎನಿಸಿದರೆ ’ಸ್ಸಾರಿ’ ಎಂದು ಬಿಟ್ಟುಹೋಗುವವಳು. ಇವಳಂತೂ ಅದ್ಭುತ. ತನ್ನ ಸಮಕ್ಕೂ ನನ್ನನ್ನು ಕರೆದೊಯ್ಯುವ ಅಪ್ರತಿಮ ಆಟಗಾರ್ತಿ” ಎನ್ನುತ್ತಾನೆ. ಇನ್ನು ದಾಂಪತ್ಯದತ್ತ ತಿರುಗಿ “ಅವಳು ಧಿಕ್ಕರಿಸಿದಂತೆ ನಾನು ನಪುಂಸಕನಲ್ಲವೆಂಬುದನ್ನು ಹಲವುಬಾರಿ ಸಾಬೀತುಪಡಿಸಿಕೊಂಡಾಯಿತು. ಮಂಗಳೆಯ ಬಳಿ ಹೋಗಿ ಆಕ್ರಮಿಸಿ ಗೆದ್ದುಬಿಡಬೇಕೆನಿಸಿದರೂ ಮತ್ತೆ ಸೋಲುವುದು ಖಚಿತ ಎನಿಸುತ್ತಿತ್ತು.
ದಾಂಪತ್ಯಸುಖದಿಂದ ವಂಚಿತನಾಗಿ ಕಾಲ್ಗರ್ಲ್ಗಳ ಸಹವಾಸಕ್ಕೆ ಹೋದ ಜಯಕುಮಾರ್ಗೆ ದೆಹಲಿಯ ಹೊಟೇಲಿನಲ್ಲೊಂದು ಆಂಟಿ ಕ್ಲೈಮಾಕ್ಸ್ ಎದುರಾಯಿತು. ಕಾರಣವೇನೋ, ಉಳಿದುಕೊಂಡಿದ್ದ ಹೊಟೇಲ್ ಮೇಲೆ ಪೊಲೀಸರ ದಾಳಿ ನಡೆಯಿತು. ಒಂದೇ ಸಮಾಧಾನವೆಂದರೆ, ಇವರೊಂದಿಗೆ ಇನ್ನೂ
ಅನೇಕ ಜೋಡಿಗಳಿದ್ದವು. ಇಂತಹ ದಾಳಿ ನಡೆದ ಮೇಲೆ ಅಗತ್ಯವಾದ ಪ್ರಕ್ರಿಯೆಗಳೆಲ್ಲ ನಡೆಯಬೇಕಲ್ಲವೆ! ಮುಖ್ಯವಾಗಿ ಜಾಮೀನು ಪಡೆದು ಹೊರಗೆ ಬರುವುದು. ಅದಕ್ಕೆ ಕ?ವಾಯಿತು. ಅಲ್ಲೂ ಗಂಡಸು-ಹೆಂಗಸೆಂಬ ತಾರತಮ್ಯ! ಕಾನೂನಿಗೆ ಈಚೆಗೆ ತಂದ ತಿದ್ದುಪಡಿಗಳ ಫಲ.
ಅಲ್ಲೂ ತಾರತಮ್ಯ
ಸಿಕ್ಕಿಬಿದ್ದ ವೇಶ್ಯೆಯರ ಪರವಾಗಿ ಪ್ರತಿಭಟಿಸುವುದಕ್ಕೆ ಅಲ್ಲಿ ಮಹಿಳೆಯರ ದಂಡೇ ಇತ್ತು. ಪತ್ರಿಕೆಯಲ್ಲಿ ಆ ಬಗ್ಗೆ ಮೊದಲ ಪುಟದಲ್ಲೇ ದೊಡ್ಡ ಶೀರ್ಷಿಕೆಯೊಂದಿಗೆ ಸುದ್ದಿಯೊಂದು ಪ್ರಕಟವಾಗಿತ್ತು. “ನಿನ್ನೆ ಸಂಜೆಯೇ ರಾಜಧಾನಿಯ ಹಲವು ಮಹಿಳಾ ಸಂಘಟನೆಗಳು ಸಭೆ ಸೇರಿ ದಾಳಿಯ ವೇಳೆ ಒಂಬತ್ತು ಮಹಿಳೆಯರ ಮುಖವನ್ನು ಟಿವಿ ಕ್ಯಾಮರಾದಲ್ಲಿ ಸ್ಪ?ವಾಗಿ ತೋರಿಸಿರುವುದು, ಕೈಯಲ್ಲಿ ಮುಖ ಮುಚ್ಚಿಕೊಂಡಿದ್ದ ಶೋಷಿತ, ಅಮಾಯಕ ಮಹಿಳೆಯರ ಕೈಗಳನ್ನು ಮಹಿಳಾ ಕಾನ್ಸ್ಟೇಬಲ್ಗಳೇ ಕಿತ್ತು ಮುಖವನ್ನು ಕ್ಯಾಮರಾಗೆ ಒಡ್ಡಿದ್ದು, ಚಾನೆಲ್ನವರು ಆ ಮುಖಗಳನ್ನು ಸ್ಪ?ವಾಗಿ ತೋರಿಸಿದ್ದು, ಆ ಮಹಿಳೆಯರ ಮೇಲೆ ಹಣವುಳ್ಳ ಗಿರಾಕಿಗಳು ಮಾಡಿದ ಅಮಾನು? ದೌರ್ಜನ್ಯಕ್ಕಿಂತ ಹೆಚ್ಚಿನ ದೌರ್ಜನ್ಯವಾಗಿದೆ. ಅದಕ್ಕಾಗಿ ಕಾನ್ಸ್ಟೇಬಲ್ಗಳು ಮತ್ತು ಚಾನೆಲ್ನವರ ಮೇಲೆ ಮಹಿಳಾ ದೌರ್ಜನ್ಯದ ಅಡಿಯಲ್ಲಿ ಕೇಸು ದಾಖಲಿಸಬೇಕು. ಅಮಾಯಕ ಮಹಿಳೆಯರನ್ನು ಹೀನಕೃತ್ಯಕ್ಕೆ ಎಳೆದ ಈ ಗಂಡಸರನ್ನೂ ಮಹಿಳೆಯರನ್ನೂ ಒಂದೇ ತಕ್ಕಡಿಯಲ್ಲಿ ತೂಗುವ ಪೊಲೀಸರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ತಮ್ಮ ಮುಖಗಳು ದೇಶದಾದ್ಯಂತ ಪ್ರದರ್ಶನಗೊಂಡ ಮೇಲೆ ಈ ಮಹಿಳೆಯರು ಸಮಾಜದಲ್ಲಿ ಗೌರವದಿಂದ ತಲೆಎತ್ತಿ ನಡೆಯುವುದು ಹೇಗೆ?” ಎಂದು ಪ್ರಶ್ನಿಸಿ ಮರುದಿನ ಪೊಲೀಸ್ಠಾಣೆ ಎದುರು ಜಮಾಯಿಸಲು ’ಜಾಗೃತ ಮಹಿಳೆ’ಯರಿಗೆ ಕರೆ ನೀಡಲಾಗಿತ್ತು. ಕಾದಂಬರಿಕಾರರು ಇಲ್ಲಿ ತುಂಬಿರುವ ವ್ಯಂಗ್ಯವನ್ನು ಅರ್ಥೈಸಿಕೊಳ್ಳದಿದ್ದರೆ ನಮಗೇ ನಷ್ಟ!
ಅದರಂತೆ ಠಾಣೆಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಕಾಲೇಜು ಹುಡುಗಿಯರು ಮತ್ತು ಚಳವಳಿಯ ಕಾರ್ಯಕರ್ತೆಯರು ಭಾಗವಹಿಸಿದ್ದರು. ಕೋರ್ಟಿಗೆ ಒಯ್ಯುವಾಗ ಮಹಿಳಾ ಆಪಾದಿತೆಯರ ಮುಖಗಳನ್ನು ಮುಚ್ಚಿರಬೇಕು; ಅವರಿಗೆ ಜಾಮೀನು ನೀಡುವುದನ್ನು ಪೊಲೀಸರು ವಿರೋಧಿಸಬಾರದು ಎನ್ನುವ ಆಗ್ರಹಗಳನ್ನು ಮುಂದಿಡಲಾಯಿತು. ಜೊತೆಗೆ ಗಂಡಸು ಆಪಾದಿತರ ಮುಖವನ್ನು ಪೂರ್ತಿ ತೋರಿಸಬೇಕು. ಅವರಲ್ಲಿ ಯಾರಿಗೂ ಮುಖ ಮುಚ್ಚಿಕೊಳ್ಳುವ ಅವಕಾಶವನ್ನು ಕೊಡಕೂಡದು ಎಂಬ ಬೇಡಿಕೆಯನ್ನು ಕೂಡ ಮುಂದೆಮಾಡಿದರು. ಮಹಿಳಾ ಅರೋಪಿಗಳನ್ನು ಬೇರೆ ಕೋಣೆಯಲ್ಲಿ ವಿಚಾರಣೆ ಮಾಡಿದರು. ಅವರ ಪರವಾಗಿ ನಾಲ್ವರು ಪ್ರಸಿದ್ಧ ವಕೀಲೆಯರು ವಾದಿಸಿದರು. ಅವರಿಗೆ ಜಾಮೀನು ಕೊಡುವುದನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ವಿರೋಧಿಸಲಿಲ್ಲ; ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೋದರು.
ಆದರೆ ಪುರುಷ ಆಪಾದಿತರಿಗೆ ಜಾಮೀನಿನ ಭಾಗ್ಯವಿಲ್ಲ. (ಕೇಸು ಚಿಕ್ಕದಾದರೂ) ಇವರು ಪ್ರಭಾವಿಗಳು, ಸಾಕ್ಷ್ಯ ಬದಲಿಸುತ್ತಾರೆಂದು ಅದೇ ಪ್ರಾಸಿಕ್ಯೂಟರ್ ವಾದಿಸಿದರು. ಜಾಮೀನು ಕೊಡಲಿಲ್ಲ; ೧೫ ದಿನ ಪೊಲೀಸರ ವಶಕ್ಕೆ ಒಪ್ಪಿಸಿದರು. ಇವರ ವಿರುದ್ಧ ವಕೀಲೆಯರ ದಂಡೇ ಇತ್ತು. ಇವರ ಪರವಾಗಿ ವಾದ ಮಾಡಬಾರದೆಂದು ಇವರ ವಕೀಲರ ಮೇಲೆ ಒತ್ತಡ ಹಾಕುವುದು ಕೂಡ ನಡೆದಿತ್ತು.
ಜೈಲಿನಲ್ಲಿರಿಸಿದ್ದರಿಂದ ಇವರಿಗೆಲ್ಲ ಲಕ್ಷಗಟ್ಟಲೆ ಹಾನಿಯಾಗುತ್ತದೆಂದು ಇವರ ವಕೀಲರು ವಾದಿಸಿ ಜಾಮೀನು ಕೇಳಿದರೆ, ಆ ಕಡೆಯವರು ಅದನ್ನೇ ತಿರುಗಿಸಿ, ಲಕ್ಷಗಟ್ಟಲೆ ಹಾನಿಯಾಗಬೇಕಿದ್ದರೆ ಇವರು ಶಕ್ತಿಶಾಲಿಗಳೇ ಇರಬೇಕು. ಅಮಾಯಕ ಮಹಿಳೆಯರನ್ನು ತಮ್ಮ ಧೂರ್ತಜಾಲದಲ್ಲಿ ಸಿಕ್ಕಿಸಿಕೊಂಡು ಅಂತರರಾಜ್ಯ ಮಟ್ಟದಲ್ಲಿ ದಂಧೆ ನಡೆಸುವವರೆಂದು ವಾದಿಸಿದ ಕಾರಣ ಜಾಮೀನು ಸಿಗಲಿಲ್ಲ. ನ್ಯಾಯಾಂಗ ಬಂಧನವನ್ನು ವಿಸ್ತರಿಸುತ್ತಾ ಹೋದರು; ಜಾಮೀನು ಸಿಗುವಾಗ ೫೩ ದಿನ ಕಳೆದಿತ್ತು.
ಕಂಪೆನಿ ಮುಳುಗಿತ್ತು
ಅ?ರಲ್ಲಿ ಜಯಕುಮಾರ್ ಕಂಪೆನಿ ಮುಳುಗಿಹೋಗಿತ್ತು. ಕೆಲಸಗಾರರು ಬಿಟ್ಟು ಬೇರೆ ಕಂಪೆನಿಗಳಿಗೆ ಸೇರಿದರು. ಮಂಗಳೆ ಮಾತಿಗೆಳೆದು “ತಾನು ಸೂಳೆಯ ಹತ್ತಿರ ಹೋಗುತ್ತಾ ಹೆಂಡತಿಯನ್ನು ಹಸಿವಿನಲ್ಲಿ ಬಳಲಿಸುವುದು ಅಪರಾಧವನ್ನು ದ್ವಿಗುಣಗೊಳಿಸುತ್ತದೆ; ಹೆಂಡತಿಗೆ ದೇಹಸುಖ ನಿರಾಕರಣೆಯು ಕೌಟುಂಬಿಕ ದೌರ್ಜನ್ಯವಲ್ಲದೆ ಬೇರೇನೂ ಅಲ್ಲ” ಎನ್ನುತ್ತಾಳೆ; ಈ ಸಂದರ್ಭವನ್ನು ವಿಚ್ಛೇದನ ಕೇಳುವುದಕ್ಕೂ ಬಳಸಿಕೊಳ್ಳುತ್ತಾಳೆ; “ಈಗ ನಡೆದಿರುವುದೆಲ್ಲ ಅಸಹ್ಯಕರವಾಗಿದೆ. ಮಗು(ತೇಜು)ವಿನ ಪಾಲನೆ ನನ್ನದು, ಪೋ?ಣೆ ನಿನ್ನದು. ಜಗಳವಿಲ್ಲದೆ ಸ್ನೇಹಿತರಾಗಿ ಬೇರೆಯಾಗೋಣ” ಎಂದು ಸೂಚಿಸುತ್ತಾಳೆ. ವಕೀಲೆ ಚಿತ್ರಾ ಹೊಸೂರ್ ಅವರು ಆ ಕುರಿತು ಮಾತನಾಡಲು ಬರುತ್ತಾರೆ ಎಂದಾಗ ಜಯಕುಮಾರ್ ಅವರೇಕೆ ಎಂದು ಪ್ರಶ್ನಿಸುತ್ತಾನೆ. “ಕಾನೂನು ಪ್ರಕಾರ ನನ್ನ ಹಕ್ಕು ಏನೆಂದು ಬಿಡಿಸಿ ಹೇಳಲು ಲಾಯರ್ ಬೇಕು” ಎನ್ನುವ ತನ್ನ ಸಿದ್ಧ ಉತ್ತರವನ್ನಾಕೆ ನೀಡುತ್ತಾಳೆ.
ಜಯಕುಮಾರ್ ಜೈಲಿಗೆ ಹೋಗಿರುವ ಕಾರಣ ಇನ್ನು ಬೇರೆ ಕಡೆ ಉದ್ಯೋಗ ಸಿಗಲಾರದು. ಆದ್ದರಿಂದ ಹೆಂಡತಿಯ ಪಾಲನ್ನು ಒಮ್ಮೆಗೇ ನೀಡಬೇಕೆನ್ನುವ ಮಾತು ಬಂತು. ವಿಚ್ಛೇದನದ ಜೊತೆಗಿನ ಪಾಲು ಪತಿಯ ಮಟ್ಟಿಗೆ ಭೀಕರವೇ. ಮಂಗಳಾ ಗೃಹಿಣಿ, ಬೇರೆ ಆದಾಯ ಇಲ್ಲದಿರುವವರು, ಮನೆ ಅವರಿಗೆ. ಈಗ ಅವರು ಯಾವ ಮಟ್ಟದ ಜೀವನಸೌಕರ್ಯಕ್ಕೆ ಅಭ್ಯಸ್ತರಾಗಿದ್ದಾರೋ ಆ ಮಟ್ಟಕ್ಕೆ ತಕ್ಕಂತೆ ಮೊದಲು ಅವರಿಗೆ ತೆಗೆದಿಟ್ಟ ನಂತರ ನಾಲ್ಕು ಭಾಗ ಮಾಡಬೇಕು. ಅಂದರೆ ತಾಯಿಗೆ ಮತ್ತು ಮಗನಿಗೆ ಒಂದು ಕೋಟಿ ರೂ. ಕೊಡುವುದು; ಫ್ಯಾಕ್ಟರಿಯ ಜಾಗ ಐದು ವ?ಗಳ ಅನಂತರ ಅಪ್ಪ ಮತ್ತು ಮಗಳಿಗೆ ಸಿಗುವಂಥದು. ಉಳಿದುದರಲ್ಲಿ ನಾಲ್ಕು ಪಾಲು. ಕಂಪೆನಿಯ ಸಹಸಂಸ್ಥಾಪಕಿ ಮತ್ತು ಮನೆಯನ್ನು ಕಟ್ಟಿಸಿದ್ದ ವೈಜಯಂತಿಯ ಪರವಾಗಿ ಜಾಸ್ತಿ ಪಾಲು ನೀಡಬೇಕೆನ್ನುವ ಬೇಡಿಕೆಯನ್ನು ನ್ಯಾಯವಾದಿಗಳು ತಳ್ಳಿಹಾಕಿದರು. “ನನ್ನನ್ನು ನಿರ್ಗತಿಕನನ್ನಾಗಿ ಮಾಡಿ, ನನ್ನ ರಕ್ತ ಹೀರಿ ತಾನು ಮಾಡಿಕೊಂಡಿರುವ ಶೋಕಿಯನ್ನು ಮುಂದುವರಿಸುವ ಅವಳ ಹಕ್ಕನ್ನು ಮಾನ್ಯ ಕಾನೂನು ಮಾಡುತ್ತದೆ. ನನ್ನನ್ನು ಬೀದಿಪಾಲು ಮಾಡುವ ತನಕ ಅವಳಿಗೆ ಸಮಾಧಾನ ಆಗುವುದಿಲ್ಲ” ಎಂದು ಜಯಕುಮಾರನಿಗೆ ಅನ್ನಿಸಿತು. “ವಿಚ್ಛೇದನವಾಗಲಿ, ಬೇರೆ ಯಾವುದೇ ತಕರಾರು ಆಗಲಿ, ಕೋರ್ಟ್ ಹೆಂಗಸಿನ ಪರ ವಾಲುತ್ತದೆ ಎನ್ನುವ ಗ್ರಹಿಕೆಯಿಂದ ಕಾನೂನು ರೂಪಿಸಿದ್ದಾರೆ” ಎಂದು ವಕೀಲರೊಬ್ಬರು ಹೇಳಿದ್ದು ನಿಜವೆನಿಸಿತು.
ಮತ್ತೆ ಮಗುವಿನ ಆಶೆ
ವಿಚ್ಛೇದನ ದೊರೆಯುವ ಹೊತ್ತಿಗೆ ಮಂಗಳೆಗೆ ಪ್ರಭಾಕರ ತನ್ನನ್ನು ಮದುವೆಯಾಗಬೇಕು, ಇ? ವ? ಬೆಳೆದ ಪ್ರೇಮಕ್ಕೆ ಮದುವೆಯ ಮುದ್ರೆ ಒತ್ತಬೇಕು ಎನಿಸಿತು. ಜೊತೆಗೆ ಬಸುರಿ ಆಗುವ ಆಶೆಯೂ ಉಂಟಾಯಿತು. ಮದುವೆಯಾಗುವಂತೆ ಅವನನ್ನು ಕೇಳಿದಾಗ, “ನೀವು ಮಹಿಳೆಯರ ಉದ್ಧಾರ ಮಾಡ್ತೀವಿ ಅಂತ ಚಳವಳಿ ಮಾಡ್ತಿರುವವರೇ ಕಾನೂನು ಮಾಡ್ಸಿದೀರಿ. ದ್ವಿಪತ್ನಿತ್ವ ಮಹಾಪರಾಧ; ಅದಕ್ಕೆ ಏಳು ವ? ಸಜಾ. ನೌಕರಿಯಿಂದ ಡಿಸ್ಮಿಸ್. ನನ್ನ ಹೆಂಡತಿ ದಾಂಪತ್ಯದ್ರೋಹದ ಆಪಾದನೆ ತರ್ತಾಳೆ” ಎಂದ; ಮತ್ತು ಮಂಗಳೆಯ ಭೇಟಿಯನ್ನೇ ಕಡಮೆ ಮಾಡಿದ.
ದೆಹಲಿ ಹೊಟೇಲ್ ಕೇಸಿನಲ್ಲಿ ಜಯಕುಮಾರ್ಗೆ ಕೇವಲ ಮೂರು ತಿಂಗಳು ಶಿಕ್ಷೆಯಾಯಿತೆಂದು ಮಂಗಳೆಗೆ ಬೇಸರವಾಯಿತು. ಚಿತ್ರಾ ಹೊಸೂರ್ ಅವರಲ್ಲಿ ಹೇಳಿದರೆ ಆಕೆ, “ನ್ಯಾಯಾಲಯ ಇಮ್ಮಾರಲ್ ಟ್ರಾಫಿಕ್ ಮಾತ್ರ ನೋಡಿದೆ. ಹೆಂಡತಿ ಬಗೆಗಿನ ಕರ್ತವ್ಯ ನಿರಾಕರಣೆಯನ್ನು ನೋಡಿಲ್ಲ. ನಮ್ಮ ನ್ಯಾಯವ್ಯವಸ್ಥೆಯಲ್ಲೇ ತಪ್ಪಿದೆ. ಅದರ ವಿರುದ್ಧ ಹೋರಾಡಬೇಕು. ನೀವ್ಯಾಕೆ ಈಗ ಚಳವಳಿಯಲ್ಲಿ ಭಾಗವಹಿಸುತ್ತಿಲ್ಲ? ಇದು ನಿಮಗೊಬ್ಬರಿಗೆ ಆದ ಅನ್ಯಾಯವಲ್ಲ. ಮಹಿಳಾ ಕೋಟಿಗೆ ಆಗುತ್ತಿರುವ ಅಖಂಡ ಅನ್ಯಾಯದ ಒಂದು ಅಂಶ” ಎಂದು ಸ್ಪಷ್ಟಪಡಿಸಿದರು.
ಕೈತುಂಬ ಹಣ, ಸಂಪತ್ತುಗಳು ಬಂದರೂ ಮಂಗಳೆಗೆ ಸುಖ, ನೆಮ್ಮದಿಗಳು ಮರೀಚಿಕೆಯಾದವು. ಪುಟ್ಟ ಮಗನಿಂದ ತನ್ನ ತಂದೆ ಯಾರು ಎಂಬ ಬಗ್ಗೆ ಬಗೆಬಗೆಯ ಪ್ರಶ್ನೆಗಳು ಬಂದವು. ಸರೀಕ ಹುಡುಗರೊಂದಿಗೆ ಹೋಲಿಸಿಕೊಂಡು ತನ್ನ ತಂದೆ ಯಾರು ಎಂದು ಅವನು ಕೇಳುತ್ತಿದ್ದ. ಸಹಪಾಠಿಗಳೂ ಕೇಳುತ್ತಿದ್ದರು. “ಸ್ಕೂಲ್ಡೇಗೂ ತಂದೆ ಯಾಕೆ ಬರುವುದಿಲ್ಲ? ನಿನ್ನಪ್ಪ ನಿನಗೂ ಡೈವೋರ್ಸ್ ಕೊಟ್ಟಿದ್ದಾನಾ?” ಎಂದೆಲ್ಲ ಮಕ್ಕಳು ಕೇಳಿದರು. ಸಿಟ್ಟು ನೆತ್ತಿಗೇರಿ ಜಯಕುಮಾರನನ್ನು ಇನ್ನೊಮ್ಮೆ ತರಾಟೆಗೆ ತೆಗೆದುಕೊಳ್ಳಬೇಕು ಅನ್ನಿಸಿದರೂ, ಎಲ್ಲದಕ್ಕೂ ಚಿತ್ರಾ ಮೇಡಂ ಯಾಕೆ ತಾನೇ ನೇರವಾಗಿ ಕೇಳುತ್ತೇನೆ – ಎನ್ನುವ ನಿರ್ಧಾರಕ್ಕೆ ಬಂದಳು.
ಮಾತು ಮುಗಿದಿದೆ
ಆತನ ಮನೆಗೆ ಹೋಗಿ “ನಿನ್ನಲ್ಲಿ ಮಾತನಾಡುವುದಕ್ಕೆ ಬಂದಿದ್ದೇನೆ” ಎಂದಾಗ ಜಯಕುಮಾರ್, “ಮಾತೆಲ್ಲ ಕೋರ್ಟಿನಲ್ಲಿ ತೀರ್ಮಾನವಾಗಿದೆ, ಗೆಟ್ ಔಟ್” ಎಂದು ದಬಾಯಿಸಿದ. “ಇದು ನನ್ನ ಮಗುವಲ್ಲ” ಎಂದು ಆತ ಹೇಳಿದಾಗ ಆಕೆಗೆ ಕೋಪ ಏರುತ್ತದೆ.
“ನನ್ನನ್ನು ಮದುವೆಗೆ ಮುಂಚೆ ಸಿಕ್ಕಿಸಿಹಾಕುವ ಮುಂಚೆಯೇ ನಿನಗೊಬ್ಬ ಗೆಣೆಯ ಇದ್ದನಲ್ಲವೆ? ಆ ಸಂಬಂಧ ಅನಂತರವೂ ಮುಂದುವರಿಯಿತಲ್ಲವೆ? ನನಗೆ ಮಾಡಿರುವ ಮೋಸಕ್ಕೆ ಜೈಲು ಕಾಣಿಸ್ತೀನಿ. ನನ್ನ ಫ್ಯಾಕ್ಟರಿ ಗೇಟಿನ ಮುಂದೆ ನೂರು ಜನ ಹುಡುಗೀರನ್ನ ಕರಕೊಂಡು ಬಂದಿದ್ದರಲ್ಲ, ಮಾಲಾ ಕೆರೂರ್. ಅವರ ಆಫೀಸಿನ ಮುಂದೆ ನೂರು ಜನ ಗಂಡಸರನ್ನು ಕರೆತರ್ತಿನಿ ಅಂತ ಅವರಿಗೆ ಹೇಳು” ಎಂದು ಜಯಕುಮಾರ್ ಆಕ್ರೋಶವನ್ನು ಹೊರಹಾಕುತ್ತಾನೆ.
“ಮಗುವಿಗೆ ಎಮೋಶನಲ್ ಸಪೋರ್ಟ್ ನೀಡಬೇಕಲ್ಲವೆ?” ಎಂದು ಆಕೆ ಹೇಳುತ್ತಲೇ “ಅದು ನನ್ನ ಮಗು ಅಂತ ಮೊದಲು ಸಿದ್ಧವಾಗಬೇಕು. ಡಿಎನ್ಎ ಪರೀಕ್ಷೆಗೆ ಒಳಪಡಲು ನಾನು ಸಿದ್ಧ. ನೀನು, ನಿನ್ನ ಗೆಣೆಯ ಇಬ್ಬರ ಮೇಲೂ ಕ್ರಿಮಿನಲ್ ಕೇಸ್ ಹೂಡ್ತೀನಿ” ಎಂದು ಸವಾಲು ಹಾಕಿದ. ಪರೀಕ್ಷೆಯ ಬಗ್ಗೆ ಮಂಗಳೆಗೆ ಧೈರ್ಯ ಬರಲಿಲ್ಲ. ಪ್ರಭಾಕರ ಇದರಿಂದ ಪಾರಾಗುತ್ತಾನೆ. ತನ್ನ ಗತಿ? – ಎಂದು ಚಿಂತೆಯಾಯಿತು. “ನಿನಗೆ ಕೊಟ್ಟದ್ದನ್ನು ವಾಪಸು ತೆಗೆದುಕೊಳ್ಳಲು ಕ್ರಮ ಕೈಗೊಳ್ಳುವುದಿಲ್ಲ; ಗೆಟ್ ಔಟ್” ಎಂದು ಜಯಕುಮಾರ್ ಮಾತು ಮುಗಿಸುತ್ತಾನೆ. ಮರಳುವಾಗ “ಅವರು ನನ್ನ ಅಪ್ಪ ಅಲ್ಲವೇನಮ್ಮ?” ಎಂದು ಕೇಳಿದ ಮಗು ತೇಜುವಿಗೆ ಒಂದು ಏಟು ಕೊಡುವುದಲ್ಲದೆ ಮಂಗಳೆಯ ಬಳಿ ಬೇರೆ ಉತ್ತರವಿರಲಿಲ್ಲ.
ಕಷ್ಟ ಪರಿಹಾರ
ಇದಕ್ಕೆ ಹೋಲಿಸಿದರೆ ಕಾದಂಬರಿಯ ಕೊನೆಯ ಹೊತ್ತಿಗೆ ಜಯಕುಮಾರನ ಕಷ್ಟಗಳು ದೂರವಾಗಿ ನೆಮ್ಮದಿ ಇಣಕಿಹಾಕುತ್ತದೆ. ಸುಮಾರು ಮೂರು ದಶಕ ನಾಪತ್ತೆಯಾಗಿದ್ದ ಅಮ್ಮ ವಾಪಸು ಬಂದು ಇಡೀ ಮನೆಯಲ್ಲಿ ಸಂತೋ? ತುಂಬುತ್ತಾರೆ. ಹಿರಿಯ ಸೊಸೆ ಅವರ ಮೇಲೆ ವರದಕ್ಷಿಣೆ ಕೇಸು ಹೂಡಿದ್ದು, ’ನೀನು ಅಪ್ಪನ ಮನೆಯಿಂದ ಏನು ತಂದಿದ್ದೆ ಎಂದು ಅವಳಲ್ಲಿ ಕೇಳಿದ್ದು ಹೌದು’ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡ ಒಂದೇ ಕಾರಣದಿಂದ ಪ್ರಕರಣ ಬಿಗಿಯಾಗಿ ನ್ಯಾಯಾಧೀಶರು ಮೂರು ವರ್ಷ ಸಜೆ ವಿಧಿಸಿದರು. ಅದು ಮುಗಿದ ಮೇಲೆ ಮನೆಗೆ ಮರಳಲು ಮನಸ್ಸಾಗದೆ ತೀರ್ಥಯಾತ್ರೆ ಹೋಗಿ ಮಥುರಾದ ಒಂದು ವೃದ್ಧಾಶ್ರಮದಲ್ಲಿ ಮೇಲ್ವಿಚಾರಕಿಯಾಗಿ ವ?ಗಟ್ಟಲೆ ಅಲ್ಲಿ ಉಳಿದುಬಿಟ್ಟಿದ್ದರು. ಉದ್ಯೋಗನಿಮಿತ್ತ ಬ್ರೆಜಿಲ್ನಲ್ಲಿದ್ದ ಅಳಿಯನಿಗೆ ಅದೇ ಊರಿಗೆ ವರ್ಗವಾದಾಗ ಮಗಳು- ಅಳಿಯನಿಗೆ ಅಕಸ್ಮಾತ್ ಅವರ ಭೇಟಿ ಆಗಿತ್ತು. ಜೊತೆಗೆ ಪಾಶ್ಚಾತ್ಯ ಮಾದರಿಯ ಸಾಂಸಾರಿಕ ಜೀವನದಲ್ಲಿ ಸಿಲುಕಿ ಬದುಕು ಚಿಂದಿಚಿತ್ರಾನ್ನವಾಗಿದ್ದ ಸೋದರಳಿಯ ನಚಿಕೇತ ಕೂಡ ಬೆಂಗಳೂರಿಗೆ ವಾಪಸ್ಸಾಗಿದ್ದ. ಸಾಕ? ಸುಧಾರಿಸಿಕೊಂಡ ಮಗಳು ಪುಟ್ಟಕ್ಕ(ವತ್ಸಲೆ)ನನ್ನು ಸೋದರಳಿಯನೇ ಮದುವೆಯಾಗುತ್ತಾನೆ. ಅವನು ಪುಟ್ಟಕ್ಕನ ಹೆಸರಿನಲ್ಲಿ ಸ್ಥಾಪಿಸುವ ಕಂಪೆನಿಯಲ್ಲಿ ಸಿಇಓ ಆಗುವ ಮೂಲಕ ನಿಂತುಹೋಗಿದ್ದ ಜಯಕುಮಾರನ ಆದಾಯಮೂಲವು ಚಿಗುರಿಕೊಳ್ಳುತ್ತದೆ. ಪುಟ್ಟಕ್ಕನಿಗೆ ಮಗುವಾಗಿ ಮನೆಗೆ ಮೊಮ್ಮಗನೂ ಸೇರಿಕೊಳ್ಳುತ್ತಾನೆ.
ಕಾದಂಬರಿಯ ಇನ್ನೋರ್ವ ಉಗ್ರಸ್ತ್ರೀವಾದಿ ಇಳಾ ಮೇಡಂ ಅವರ ಕೌಟುಂಬಿಕ ಜೀವನ ಕೂಡ ಸಾಕ? ಏಳುಬೀಳುಗಳಿಗೆ ಗುರಿಯಾಗುತ್ತದೆ. ಆದರೆ ಅಲ್ಲಿ ಪತಿ ವಿನಯಚಂದ್ರ ಸ್ವಲ್ಪ ಎಚ್ಚರವಹಿಸಿದ ಕಾರಣ ಜಯಕುಮಾರನಂತಹ ಪ್ರಪಾತಕ್ಕೆ ಬೀಳುವುದಿಲ್ಲ. ಆತ ದೆಹಲಿಯಲ್ಲಿ ಮತ್ತು ಇಳಾ ಬೆಂಗಳೂರಿನಲ್ಲಿ ಇರುತ್ತಾರೆ. ಆತ ಕೇಳಿದ ಡೈವೋರ್ಸ್ ಕೊಡದೆ ಈಕೆ ವ?ಗಟ್ಟಲೆ ಸತಾಯಿಸುತ್ತಾಳೆ; ಕೊನೆಗೂ ಗೂಂಡಾಗಳ ಸಹಾಯ ಪಡೆದು ಬೆದರಿಸಿ ಪಡೆಯಬೇಕಾಗುತ್ತದೆ. ಮಗಳು ಆತನ ಪರವಾಗಿದ್ದುದೊಂದು ಅನುಕೂಲ.
ಭೈರಪ್ಪನವರ ಪ್ರಸ್ತುತ ಕಾದಂಬರಿ ಪ್ರಕಟವಾದಾಗ ಹಲವು ಸ್ತ್ರೀವಾದಿಗಳು ಕಾದಂಬರಿಯಲ್ಲಿ ಬರುವ ಸ್ತ್ರೀವಾದಿಗಳಂತೆಯೇ ಪ್ರತಿಭಟಿಸಿದರು; ಬಹಳ? ಉದಾತ್ತ ಸ್ತ್ರೀಪಾತ್ರಗಳನ್ನು ಕೆತ್ತಿದ ಭೈರಪ್ಪನವರು ಹೀಗೆ ಮಾಡಬಾರದಿತ್ತು ಎಂದರು. ಆದರೆ ಭೈರಪ್ಪನವರು ಅ? ಅಚಲವಾಗಿ ತಾನು ಕಂಡದ್ದನ್ನು ಬರೆದೆ ಎಂದರು. ಮತ್ತು ’ಗಂಡೊಂದು ಅಮೂಲ್ಯ ವಸ್ತು; ಅದರ ಬಗ್ಗೆ ಜತನ ಇರಲಿ’ ಎನ್ನುವ ಚಿಂತನಪ್ರಣಾಳಿಯೂ ಇದೆ ಎಂದು ನೆನಪಿಸಿದರು.
ಕಾನೂನು ಮತ್ತು ನ್ಯಾಯಗಳು ಒಂದೇ ಆಗಿರುವುದು ಅಸಾಧ್ಯವಿರಬಹುದು. ಆದರೆ ಅವುಗಳ ನಡುವಣ ಅಂತರ ಈ ಮಟ್ಟಕ್ಕೆ ಬೆಳೆಯಬಾರದಲ್ಲವೆ?