“ಗಾಂಧಿಯವರು ತಮ್ಮ ಆರ್ಥಿಕ ನಿಲವುಗಳನ್ನು ಶೈಕ್ಷಣಿಕತಜ್ಞರ ಭಾಷೆಯಲ್ಲಿ ತಿಳಿಸದೆ, ಸಾಮಾನ್ಯಜನರ ಭಾಷೆಯಲ್ಲಿ ಹೇಳಿದರು. ಆದ್ದರಿಂದ ಇತರ ಆರ್ಥಿಕತಜ್ಞರು ಗಾಂಧಿಯವರನ್ನು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಎಂದು ಪರಿಗಣಿಸಲು ಸಾಧ್ಯವಾಗದೆ ಹೋಯಿತು.”
– ಇ. ಎಫ್. ಶುಮಾಕರ್, ಖ್ಯಾತ ಜರ್ಮನ್ ಅರ್ಥಶಾಸ್ತ್ರಜ್ಞ
ಗಾಂಧಿಯವರ ಆರ್ಥಿಕ ಚಿಂತನೆಗಳು ಅತ್ಯಂತ ವೈಶಿಷ್ಟ್ಯಪೂರ್ಣವಾದವು. ಈ ಚಿಂತನೆಗಳು ಅವರ ಸ್ವಂತ ಜೀವನದ ಅನುಭವದಿಂದ ಹಾಗೂ ಸ್ವದೇಶೀ ವಿಚಾರಗಳಿಂದ ಪ್ರೇರಿತವಾದವು. ಅವರ ಆರ್ಥಿಕ ಚಿಂತನೆಗಳ ಮೇಲೆ ಅನೇಕ ಚಾರಿತ್ರಿಕ ಪುರುಷ, ಸಮಕಾಲೀನ ನಾಯಕರು, ಪಾಶ್ಚಾತ್ಯ ಬರಹಗಾರರು, ಸಾಧು- ಸಂತರು, ಮಹಾಪುರುಷರು ಹಾಗೂ ಧಾರ್ಮಿಕ ಗ್ರಂಥಗಳು ತಮ್ಮದೇ ಆದ ಪ್ರಭಾವ ಬೀರಿರುವುದನ್ನು ನಾವು ಕಾಣಬಹುದು. ಇಲ್ಲಿ ಮೊದಲಿಗೆ ಈ ರೀತಿಯ ಪ್ರಭಾವಗಳ ಸೂಕ್ಷ್ಮಪರಿಚಯ ಮಾಡಿಕೊಳ್ಳುವುದು ಉಪಯುಕ್ತ.
ಬಾಲ್ಯದಲ್ಲಿ ಗಾಂಧಿಯವರು ಸತ್ಯಹರಿಶ್ಚಂದ್ರ ಮೊದಲಾದ ನಾಟಕಗಳಿಂದ, ಶ್ರೀರಾಮನ ಆದರ್ಶಗಳಿಂದ, ಶ್ರವಣಕುಮಾರನ ಮಾತಾ-ಪಿತೃಸೇವಾಭಾವದಿಂದ, ಮೀರಾಬಾಯಿಯವರ ಭಕ್ತಿಯಿಂದ, ಸಂತ ಕಬೀರ ಹಾಗೂ ಗುರುನಾನಕರ ಬೋಧನೆಗಳಿಂದ ಬಹಳಷ್ಟು ಪ್ರಭಾವಿತರಾಗಿದ್ದರು.
ಗಾಂಧಿಯವರ ಅರ್ಥಶಾಸ್ತ್ರದ ಬೇರುಗಳನ್ನು ಹುಡುಕಬೇಕಾದರೆ ಹಿಂದೂಸಂಸ್ಕೃತಿ ಮತ್ತು ಹಿಂದೂಧರ್ಮದ ಮೂಲಗಳನ್ನು ಅಧ್ಯಯನ ಮಾಡುವುದು ಅವಶ್ಯ. ಭಾರತೀಯ ಸಂಸ್ಕೃತಿ, ಪರಂಪರೆ, ತತ್ತ್ವಶಾಸ್ತ್ರ, ವಿಚಾರಧಾರೆ, ನೈತಿಕತತ್ತ್ವಗಳು, ಸನಾತನ ಹಿಂದೂಧರ್ಮ, ವೇದ-ಪುರಾಣಗಳು, ಉಪನಿಷತ್ತುಗಳು, ಹಾಗೂ ಭಗವದ್ಗೀತೆ ಅವರ ಮೇಲೆ ಅಪಾರವಾದ ಪರಿಣಾಮವನ್ನು ಬೀರಿದವು. ಅವರು ಭಗವದ್ಗೀತೆಯನ್ನು ದಾರಿದೀಪವಾಗಿ ಪರಿಗಣಿಸಿ ಅದನ್ನು ತಮ್ಮ ’ಆಧ್ಯಾತ್ಮಿಕ ನಿಘಂಟು’ ಎಂದು ಕರೆಯುತ್ತಿದ್ದರು. ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತಗಳ ಅಧ್ಯಯನವೂ ಅವರ ಚಿಂತನೆಗಳಿಗೆ ಹೊಸ ದಿಕ್ಕನ್ನು ಕೊಡಲು ಸಹಕಾರಿಯಾಯಿತು. ಬೈಬಲ್ಲಿನ ಹೊಸ ಒಡಂಬಡಿಕೆಯ (The New Testament) ಕೊನೆಯ ಭಾಗವಾದ ’ಗಿರಿಯ ಮೇಲಣ ಧರ್ಮೋಪದೇಶ’ (Sermon on the Mount) ಅವರ ಹೃದಯದ ಮೇಲೆ ಅಚ್ಚಳಿಯದ ಮುದ್ರೆಯನ್ನು ಒತ್ತಿತು.
ಅನೇಕ ಪಾಶ್ಚಿಮಾತ್ಯ ಬರಹಗಾರರು ಮತ್ತು ಆರ್ಥಿಕತಜ್ಞರು ಕೂಡ ತಮ್ಮ ವಿಚಾರಪ್ರಚೋದಕ ಬರಹಗಳಿಂದ ಗಾಂಧಿಯವರ ಮನದಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದ್ದರು. ಇಂಗ್ಲೆಂಡಿನ ಸಾಹಿತ್ಯ ದಿಗ್ಗಜ ಜಾನ್ ರಸ್ಕಿನ್ರವರ ‘Unto This Last’, ರಷಿಯನ್ ಬರಹಗಾರ ಟಾಲ್ಸ್ಟಾಯ್ರವರ ’ ‘The Kingdom of God is within you’, ಅಮೆರಿಕದ ದಾರ್ಶನಿಕ, ತತ್ತ್ವಜ್ಞಾನಿ ಮತ್ತು ಬರಹಗಾರ ಹೆನ್ರಿ ಡೇವಿಡ್ ಥೋರೋ ಅವರ ‘Civil Disobedience’ ಹಾಗೂ ‘Walden’; ಮತ್ತು ಸರ್ ಎಡ್ವಿನ್ ಆರ್ನಾಲ್ಡ್ ಅವರ ‘The Light of Asia’ – ಇತ್ಯಾದಿ ಕೃತಿಗಳು ಗಾಂಧಿಯವರ ಚಿಂತನೆಗಳ ಮೇಲೆ ಅಪಾರ ಪ್ರಭಾವವನ್ನು ಬೀರಿದವು. ಕ್ರೊಪೋಟ್ಕಿನ್ ಅವರ ಬರಹಗಳಿಂದ ’ಕೇಂದ್ರೀಕೃತ ಆರ್ಥಿಕಶಕ್ತಿ’ಯ ಬಗ್ಗೆ ಹೇಸಿಗೆಯ ಭಾವನೆ ಅವರಿಗೆ ಬೆಳೆದಿತ್ತು. ’ಮಾರ್ಕ್ಸಿಸಂ’ ಸಹ ಅವರ ಚಿಂತನೆಗಳನ್ನು ಪ್ರಭಾವಗೊಳಿಸಿತ್ತು.
ಹೊಸ ಆರ್ಥಿಕಚಿಂತನೆಗಳ ಮಂಡನೆ
ಭಾರತ ಸುಮಾರು ಒಂದುಸಾವಿರ ವರ್ಷಗಳ ಗುಲಾಮಗಿರಿಯನ್ನು ಅನುಭವಿಸಿದ್ದು ಇತಿಹಾಸ. ಅನೇಕ ಶತಮಾನಗಳ ವಿದೇಶೀ ಆಳ್ವಿಕೆಯಿಂದ ಬಳುವಳಿಯಾಗಿ ಬಂದ ಕಡುಬಡತನ, ನಿರುದ್ಯೋಗ, ಅಜ್ಞಾನ, ಆರ್ಥಿಕ ಹಿನ್ನಡೆ ಮತ್ತು ಇನ್ನಿತರ ಸಾಮಾಜಿಕ, ಆರ್ಥಿಕ ಕೆಡುಕುಗಳು ಮತ್ತು ಸವಾಲುಗಳನ್ನು ಅವರು ದೀರ್ಘವಾಗಿ ವಿಶ್ಲೇಷಣೆ ಮಾಡಿದರು. ಅನೇಕ ದಶಮಾನಗಳ ಬ್ರಿಟಿಷರ ವಸಾಹತುಶಾಹಿ ದಬ್ಬಾಳಿಕೆಯಿಂದ ಸತತವಾಗಿ ನಡೆದ ಆರ್ಥಿಕ ದಿವಾಳಿತನ, ಸಾಮಾಜಿಕ – ಧಾರ್ಮಿಕ ಮತ್ತು ರಾಜಕೀಯ ಶೋಷಣೆಗಳ ಕಾರಣ ಹಾಗೂ ಪರಿಣಾಮಗಳು, ಅದರಿಂದ ನಮ್ಮ ಆರ್ಥಿಕ ವ್ಯವಸ್ಥೆಯ ಮೇಲೆ ಆದ ದುಷ್ಪರಿಣಾಮಗಳ ಆಳವಾದ ಅಧ್ಯಯನ ಮಾಡಿ ಅವುಗಳ ಪರಿಹಾರಕ್ಕೆ ತಮ್ಮದೇ ಆದ ಹೊಸ ಆರ್ಥಿಕಚಿಂತನೆಗಳನ್ನು ದೇಶದ ಮುಂದೆ ಇಟ್ಟರು.
ಗಾಂಧೀಯ ಆರ್ಥಿಕ ವಿಚಾರಗಳು ಚರಿತ್ರೆಯಿಂದ ಕಲಿತ ಪಾಠ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ರೂಪಿತಗೊಂಡವಾಗಿವೆ. ದೇಶದ ಆರ್ಥಿಕಸಮಸ್ಯೆಗಳನ್ನು ಬಗೆಹರಿಸಲು ಪಾಶ್ಚಾತ್ಯ ರೀತಿಯ ಆರ್ಥಿಕಮಾದರಿಗಳಿಂದ ಹಾಗೂ ಬಂಡವಾಳ ಆರ್ಥಿಕಪದ್ಧತಿಯಿಂದ ಸಾಧ್ಯವಿಲ್ಲ ಎನ್ನುವ ಸ್ಪ? ನಿರ್ಧಾರಕ್ಕೆ ಅವರು ಬಂದಿದ್ದರು. ನಮ್ಮ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವುದು ಹಳ್ಳಿ ಮತ್ತು ಗುಡಿಕೈಗಾರಿಕೆಗಳ ಪುನರುದಯದಿಂದ ಮಾತ್ರ ಸಾಧ್ಯ ಎಂದು ಅವರು ಭಾವಿಸಿದ್ದರು. ಸತ್ಯ ಮತ್ತು ಅಹಿಂಸೆಯ ಆಧಾರದ ಮೇಲೆ ಆರ್ಥಿಕ ಬದಲಾವಣೆ ಮಾಡಬೇಕೆಂಬುದು ಅವರ ವಾದವಾಗಿತ್ತು. ಭಾರತದ ಆರ್ಥಿಕ ಪ್ರಗತಿ, ಅಭಿವೃದ್ಧಿ ಒಂದು ’ಭಾರತೀಯ ಆರ್ಥಿಕ ಮಾದರಿ’ಯ (Indian Economic Model) ಆಧಾರದಿಂದ ಮಾತ್ರ ಸಾಧ್ಯ ಎನ್ನುವ ತೀರ್ಮಾನ ಅವರದ್ದಾಗಿತ್ತು. ಈ ಹಿನ್ನೆಲೆಯಲ್ಲಿಯೇ ಗಾಂಧೀಯ ಅರ್ಥಶಾಸ್ತ್ರವನ್ನು ತಿಳಿದುಕೊಳ್ಳಬೇಕಾದದ್ದು ಅಗತ್ಯವಿದೆ. ಅವರು ತಮ್ಮ ಜೀವನದಲ್ಲಿ ಏನನ್ನು ಹೇಳಿದರು ಮತ್ತು ಮಾಡಿದರು ಎಂಬುದರ ಮೇಲೆ ಅವರ ಆರ್ಥಿಕ ತತ್ತ್ವಗಳನ್ನು ಅರ್ಥಮಾಡಿಕೊಳ್ಳಬೇಕೆಂದು ಪ್ರೊ. ಸಿ.ಎನ್. ವಕೀಲ್ ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕಾರಣದಿಂದಲೇ ಬಹಳಜನ ಪರಿಣತರು ಗಾಂಧಿಯವರು ಬದುಕಿದ ಬದುಕೇ ಒಂದು ಆರ್ಥಿಕ ಸಿದ್ಧಾಂತ ಎಂಬ ಅನುಭವಪೂರ್ಣ ಉದ್ಗಾರ ಮಾಡಿದ್ದಾರೆ.
‘ಗಾಂಧಿಯನ್ ಇಕನಾಮಿಕ್ಸ್’
ಆಂಗ್ಲಭಾಷೆಯಲ್ಲಿ ಮೊಟ್ಟಮೊದಲ ಬಾರಿಗೆ ’ಗಾಂಧಿಯನ್ ಇಕನಾಮಿಕ್ಸ್’ ಎಂಬ ಶೀರ್ಷಿಕೆಯನ್ನು ಕೊಟ್ಟವರು ಅವರ ಆತ್ಮೀಯ ಅನುಯಾಯಿ, ಲೆಕ್ಕಪತ್ರ ಹಾಗೂ ಆರ್ಥಿಕತಜ್ಞ ಜೆ.ಸಿ. ಕುಮಾರಪ್ಪನವರು. ’ಗಾಂಧೀಯ ಅರ್ಥಶಾಸ್ತ್ರ’ ಎನ್ನುವ ಪದಬಳಕೆಯನ್ನು ಡಾ| ಚಿದಾನಂದಮೂರ್ತಿಯವರ ಸಲಹೆಯ ಮೇರೆಗೆ ಡಾ| ಎಂ.ಎಚ್. ಮರುಳಸಿದ್ದಯ್ಯ ಅವರು ತಮ್ಮ ಕನ್ನಡ ಕೃತಿಯಲ್ಲಿ ತಂದರು.
ಗಾಂಧಿಯವರು ಆಡಂಸ್ಮಿತ್, ಮಾರ್ಷಲ್, ಹಾಗೂ ಲಾರ್ಡ್ ಕೀನ್ಸ್ರಂತೆ ಶೈಕ್ಷಣಿಕವೃತ್ತಿಯಲ್ಲಿ ಹೆಸರುಮಾಡಿದ ವೃತ್ತಿಪರ ಅರ್ಥಶಾಸ್ತ್ರಜ್ಞರಲ್ಲ. ಅವರು ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿಯನ್ನು ಪಡೆಯಲಿಲ್ಲ. ಅರ್ಥಶಾಸ್ತ್ರವನ್ನು ಎಂದೂ, ಎಲ್ಲೂ ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರಲ್ಲ; ಸ್ವತಃ ಅವರೇ ಓದಿ ಅದರಲ್ಲಿ ಪರಿಣತಿಯನ್ನೂ ಪಡೆಯಲಿಲ್ಲ. ಅರ್ಥಶಾಸ್ತ್ರದ ಮೂಲಭೂತ ತತ್ತ್ವಗಳ, ನಿಯಮಗಳ, ವಿಚಾರಗಳ ಮತ್ತು ಪರಿಕಲ್ಪನೆಗಳ ಬಗ್ಗೆ ವ್ಯವಸ್ಥಿತವಾಗಿ ಅಧ್ಯಯನ ಮಾಡಲಿಲ್ಲ. ತಮ್ಮನ್ನು ತಾವು ಒಬ್ಬ ಅರ್ಥಶಾಸ್ತ್ರಜ್ಞನೆಂದು ಎಂದೂ ಅವರು ಕರೆದುಕೊಳ್ಳಲಿಲ್ಲ; ಅಂಥ ಹಂಬಲವೂ ಅವರಿಗೆ ಇರಲಿಲ್ಲ.
ತಮ್ಮ ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಮಧ್ಯೆ ಅವರು ಆಡಂಸ್ಮಿತ್ ಬರೆದ ‘Wealth of Nations’ ಎಂಬ ಪುಸ್ತಕವನ್ನು ಸಾಂದರ್ಭಿಕವಾಗಿ ಓದಿದ್ದರು. ಜೊತೆಗೆ ಆರ್.ಸಿ. ದತ್ತರು ಬರೆದ ’ಭಾರತದಲ್ಲಿ ಬ್ರಿಟಿ?ರ ಆಡಳಿತದ ಇತಿಹಾಸ’ ಪುಸ್ತಕವನ್ನೂ ಓದಿದ್ದರು. ತಮ್ಮ ೭೫ನೇ ವಯಸ್ಸಿನಲ್ಲಿ ಕಾರ್ಲ್ ಮಾರ್ಕ್ಸ್ ಬರೆದ ‘Das Capital’ ಸಹ ಓದಿದ್ದರು.
ಆದರೆ, ಇತರ ಅರ್ಥಶಾಸ್ತ್ರಜ್ಞರಂತೆ ಗಾಂಧಿಯವರು ತಮ್ಮ ಆರ್ಥಿಕಚಿಂತನೆಗಳಲ್ಲಿ ಸಂಪ್ರದಾಯ ಪಂಥದ (Classical School), ನವ-ಸಂಪ್ರದಾಯ ಪಂಥದ (Neo-Classical School) ಮತ್ತು ಆಧುನಿಕ ಪಂಥದ (Modern School) ತರ್ಕಬದ್ಧ ಆರ್ಥಿಕ ವಿಚಾರಧಾರೆ ಹಾಗೂ ಆರ್ಥಿಕ ವಿಷಯಗಳನ್ನು ಪ್ರಸ್ತಾಪ ಮಾಡಲಿಲ್ಲ. ಪಾಶ್ಚಿಮಾತ್ಯ ರಾಷ್ಟ್ರಗಳ ಯಾವುದೇ ಆರ್ಥಿಕಚಿಂತಕರ ಪ್ರಭಾವಕ್ಕೆ ಒಳಗಾಗಲಿಲ್ಲ. ಅವರು ತಮ್ಮ ಚಿಂತನೆಗಳನ್ನು ಅರ್ಥಶಾಸ್ತ್ರಜ್ಞರು ಉಪಯೋಗಿಸುವ ತಾಂತ್ರಿಕಶಬ್ದಗಳ ಮೂಲಕ ಪ್ರಸ್ತುತಪಡಿಸಲೂ ಇಲ್ಲ. ಅವುಗಳನ್ನು ಯಾವುದೇ ಒಂದು ಆರ್ಥಿಕತತ್ತ್ವದ – ಉದಾ: ಅನುಭೋಗೀಯ ಸಿದ್ಧಾಂತ (Theory of Consumption) ಅಥವಾ ಉತ್ಪಾದನಾ ಸಿದ್ಧಾಂತ (Theory of Production) ಎಂಬ ತಲೆಬರಹದಲ್ಲಿ ವ್ಯಕ್ತಪಡಿಸಲಿಲ್ಲ. ಇತರ ಅರ್ಥಶಾಸ್ತ್ರಜ್ಞರಂತೆ ಯಾವುದೇ ವಿದ್ವತ್ಪೂರ್ಣ ಗ್ರಂಥದ ರಚನೆ ಮಾಡಲಿಲ್ಲ. ಕೀನ್ಸ್ ಮತ್ತು ಸ್ಯಾಮ್ಯುವಲ್ಸನ್ರವರಂತೆ ಔಪಚಾರಿಕ ಮತ್ತು ಸುಸಂಬದ್ಧವಾದ ರೀತಿಯಲ್ಲಿ ಆರ್ಥಿಕವಿಚಾರಗಳ ಮಂಡನೆ ಮಾಡಲಿಲ್ಲ, ಆರ್ಥಿಕ ಮೂಲತತ್ತ್ವಗಳ ಪ್ರತಿಪಾದನೆಯನ್ನೂ ಮಾಡಲಿಲ್ಲ. ಇಂದು ಅರ್ಥಶಾಸ್ತ್ರದ ಎಲ್ಲ ವಿದ್ಯಾರ್ಥಿಗಳು ಓದುವಂತೆ ಮಾರ್ಷಲ್ರವರ ಅರ್ಥಶಾಸ್ತ್ರ (Marshallian Economics) ಅಥವಾ ಕೀನ್ಸ್ರವರ ಅರ್ಥಶಾಸ್ತ್ರ (Keynesian Economics) ಎಂಬಂತೆ ಯಾವುದೇ ಒಂದು ವಿಶೇಷ ವಿಭಾಗದ ಬರಹವನ್ನು ಅವರು ದಾಖಲಿಸಲಿಲ್ಲ.
ಗಾಂಧಿಯವರು ಸಾಂಪ್ರದಾಯಿಕ ರೀತಿಯಲ್ಲಿ ಎಲ್ಲ ಅರ್ಥಶಾಸ್ತ್ರಜ್ಞರಂತೆ ಅರ್ಥಶಾಸ್ತ್ರದ ಅರ್ಥ, ವ್ಯಾಖ್ಯೆ, ಅಭ್ಯಾಸದ ವಿ?ಯ, ಅದರ ವ್ಯಾಪ್ತಿ, ಗುಣ, ಸ್ವರೂಪ ಹಾಗೂ ಪ್ರಾಮುಖ್ಯಗಳ ಬಗ್ಗೆ ವಿವರಣೆ ಕೊಟ್ಟಿಲ್ಲ. ಪ್ರಪಂಚದಾದ್ಯಂತ ಅರ್ಥಶಾಸ್ತ್ರದ ಎಲ್ಲ ವಿದ್ಯಾರ್ಥಿಗಳು ಸಾರ್ವತ್ರಿಕವಾಗಿ ಅಭ್ಯಾಸ ಮಾಡುವಂತಹ ಅರ್ಥಶಾಸ್ತ್ರದ ಮೂಲತತ್ತ್ವಗಳನ್ನಾಗಲಿ, ಸಿದ್ಧಾಂತಗಳನ್ನಾಗಲಿ ಅವರು ಬರೆಯಲಿಲ್ಲ. ಸಾಮಾನ್ಯ ಅರ್ಥಶಾಸ್ತ್ರದ ಪುಸ್ತಕಗಳಲ್ಲಿ ದಾಖಲೆಯಾಗಿರುವ ಯಾವುದೇ ನಿಯಮಬದ್ಧವಾದ ಆರ್ಥಿಕತತ್ತ್ವಗಳ ರೀತಿಯಲ್ಲಿ ಅವರು ತಮ್ಮ ಚಿಂತನೆಗಳನ್ನು ಮಂಡನೆ ಮಾಡಲಿಲ್ಲ. ಆರ್ಥಿಕತಜ್ಞರ ರೀತಿಯಲ್ಲಿ ವ್ಯವಸ್ಥಿತವಾಗಿ ಸುಸಂಗತವಾದ ರೀತಿಯಲ್ಲಿ ತಮ್ಮ ಆರ್ಥಿಕ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಲಿಲ್ಲ.
ಗಾಂಧಿಯವರ ಆರ್ಥಿಕವಿಚಾರಗಳು ನಮಗೆ ಎಲ್ಲೂ ಒಂದೇ ಕಡೆ ಸಿಗುವುದಿಲ್ಲ. ಬದಲಾಗಿ ಅವು ಅವರ ವಿವಿಧ ಭಾ?ಣಗಳಲ್ಲಿ, ಲೇಖನಗಳಲ್ಲಿ – ಉದಾಹರಣೆಗೆ ’ಯಂಗ್ ಇಂಡಿಯಾ’, ’ಹರಿಜನ’ ಮತ್ತು ’ಅಮೃತ ಬಜ಼ಾರ್ ಪತ್ರಿಕೆ’ಗಳಲ್ಲಿ ಹರಡಿಕೊಂಡಿವೆ. ಜೊತೆಗೆ ಅವುಗಳು ಅನೇಕ ಸಂದರ್ಭಗಳಲ್ಲಿ ಒಂದಕ್ಕೊಂದು ಪೂರಕವಾಗಿರದೆ ಬಿಡಿಬಿಡಿಯಾಗಿ ಹೇಳಲ್ಪಟ್ಟಿವೆ. ಹೀಗಾಗಿ ನಮಗೆ ಗಾಂಧಿಯವರ ಸಮಗ್ರ ಆರ್ಥಿಕವಿಚಾರಧಾರೆಯ ಪರಿಪೂರ್ಣ ಮತ್ತು ನಿರ್ದಿ? ಚಿತ್ರಣ ಒಂದೇ ಕಡೆ ದೊರೆಯುವುದಿಲ್ಲ ಅಥವಾ ’ಗಾಂಧೀಯ ಅರ್ಥಶಾಸ್ತ್ರ’ ಎಂದೂ ’ಗಾಂಧೀಯ ಆರ್ಥಿಕ ವಿಚಾರಧಾರೆ’ ಎಂದೂ ಕರೆಯುವ ಒಂದು ಗ್ರಂಥದ ರೂಪದಲ್ಲೂ ಕಾಣಲು ಸಾಧ್ಯವಿಲ್ಲ. ಆದರೂ ಸಹ ಈ ಎಲ್ಲ ಬಿಡಿಬಿಡಿಯಾದ ವಿಚಾರಗಳನ್ನು ಒಂದು ವ್ಯವಸ್ಥಿತರೂಪದಲ್ಲಿ ಜೋಡಿಸಿದರೆ ನಮಗೆ ಅತ್ಯುಪಯುಕ್ತವಾದ, ವ್ಯಾವಹಾರಿಕವಾದ ಆರ್ಥಿಕ ವಿಚಾರಧಾರೆಯನ್ನು ಪಡೆಯಲು ಸಾಧ್ಯವಿದೆ.
ಸನಾತನ ಸಿದ್ಧಾಂತಗಳ ಪುನರ್ನಿರೂಪಣೆ
ಗಾಂಧಿಯವರು ಪ್ರಚಲಿತವಿದ್ದ ಆರ್ಥಿಕ ನೀತಿ, ತತ್ತ್ವ, ಸಿದ್ಧಾಂತ, ನಿಯಮ ಹಾಗೂ ಅನೇಕ ಪಾರಿಭಾಷಿಕ ಶಬ್ದಗಳ ಬಗ್ಗೆ ತಮ್ಮದೇ ಆದ ವಿನೂತನ ವ್ಯಾಖ್ಯಾನ ಮತ್ತು ಅಭಿಪ್ರಾಯಗಳನ್ನು ಸ್ಪ?ವಾದ ಮಾತುಗಳಲ್ಲಿ ತಿಳಿಸಿದ್ದಾರೆ. ಅವುಗಳಿಗೆ ಹೊಸದಿಕ್ಕು, ದೃಷ್ಟಿಕೋನ, ಹಾಗೂ ಅರ್ಥಗಳನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಒಂದು ರೀತಿಯಲ್ಲಿ ನೋಡಿದರೆ ಅವರು ಯಾವುದೇ ಹೊಸ ತತ್ತ್ವಗಳ ಪ್ರತಿಪಾದನೆ ಮಾಡದೆ ಪುರಾತನ ಸಿದ್ಧಾಂತಗಳ ಪುನರ್ನಿರೂಪಣೆಯ ಕೆಲಸ ಮಾಡಿದ್ದಾರೆ ಎಂದು ಹೇಳಬಹುದು.
ಗಾಂಧಿಯವರ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಹಿನ್ನೆಲೆ ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರಿಗಿಂತ ವಿಭಿನ್ನವಾದುದು. ಆದಕಾರಣ ಅರ್ಥಶಾಸ್ತ್ರಕ್ಕೆ ಗಾಂಧಿಯವರ ಕೊಡುಗೆ ಬೇರೆಯವರದಕ್ಕಿಂತ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರ ಪ್ರಕಾರ ಅರ್ಥಶಾಸ್ತ್ರವು ಮನುಷ್ಯಜೀವನದ ಒಂದು ಭಾಗದ ಕಾರ್ಯಚಟುವಟಿಕೆಯ ಅಧ್ಯಯನ ಮಾತ್ರ. ಜನರು ಹೇಗೆ ಯಾವ ರೀತಿಯಲ್ಲಿ ಹಣ ಸಂಪಾದಿಸಿ ಅದರ ಮೂಲಕ ಅತಿಹೆಚ್ಚಿನ ಆರ್ಥಿಕಲಾಭ ಪಡೆದು ಸುಖೀಜೀವನದ ನಿರ್ವಹಣೆ ಮಾಡುತ್ತಾರೆ ಎಂಬುದನ್ನು ಅದು ತಿಳಿಸುತ್ತದೆ. ಆದರೆ ಗಾಂಧಿಯವರು ಜೀವನವನ್ನು ಭಿನ್ನ ಭಿನ್ನ ಭಾಗಗಳಾಗಿ ನೋಡದೆ ಪರಿಪೂರ್ಣದೃಷ್ಟಿಯಿಂದ ನೋಡಿದರು. ಅವರ ಪ್ರಕಾರ ಮನು?ಜೀವನವು ಎಲ್ಲವನ್ನೂ ಒಳಗೊಂಡಂತಹ ಸಮಗ್ರ ರೀತಿಯದು. ಆದ್ದರಿಂದ ಆರ್ಥಿಕಜೀವನವನ್ನು ನಮ್ಮ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಜೀವನದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಆ ರೀತಿಯ ಬೇರ್ಪಡಿಕೆ ಅಸಂಗತ ಮತ್ತು ಅತಾರ್ಕಿಕ. ಜೀವನದ ಯಾವುದೇ ಒಂದು ಭಾಗ ಉಳಿದ ಭಾಗಗಳಿಂದ ಹೊರತಾಗಿರಲು ಸಾಧ್ಯವಿಲ್ಲ. ಜೀವನದ ಒಂದು ಭಾಗದ ಅಭಿವೃದ್ಧಿಯು ಇನ್ನೊಂದು ಭಾಗದ ಅವಗಣನೆಯಿಂದ ಸಾಧ್ಯವಾಗುವುದಿಲ್ಲ ಎಂಬುದು ಅವರ ನಂಬಿಕೆ. ಆದಕಾರಣ ಜೀವನದ ಸರ್ವತೋಮುಖ ಬೆಳವಣಿಗೆ ಹಾಗೂ ಸರ್ವಾಂಗೀಣ ಏಳಿಗೆಗೆ ಅವರು ಮಹತ್ತ್ವ ನೀಡಿದರು
ಮಾನವಕ್ಷೇಮದ ಬಗೆಗೆ ತನಗೆ ಕಾಳಜಿ ಇದೆ ಎಂದು ಹೇಳಿಕೊಳ್ಳುವ ಬಹಳಷ್ಟು ಅರ್ಥಶಾಸ್ತ್ರಜ್ಞರು ತಮ್ಮ ವಿಶ್ಲೇಷಣೆಯಿಂದ ನೈತಿಕಮೌಲ್ಯಗಳನ್ನು ಹೊರಗಿಡುವುದರ ಮೂಲಕ ಮಾನವಕ್ಷೇಮದ ಹಾಗೂ ಕಲ್ಯಾಣದ ಪ್ರಧಾನ ವಸ್ತುವಿಶೇ?ತೆಯನ್ನೇ ಕೈಬಿಟ್ಟಿದ್ದಾರೆ. ಸಂಪ್ರದಾಯವಾದಿ ಗುಂಪಿಗೆ ಸೇರಿದ ಅರ್ಥಶಾಸ್ತ್ರಜ್ಞರಾದ ರಾಬಿನ್ಸ್, ಜೆ.ಎಸ್. ಮಿಲ್, ಸೀನಿಯರ್ ಮುಂತಾದವರ ಸ್ಪಷ್ಟ ಅಭಿಪ್ರಾಯಗಳನ್ನು ಸ್ಮರಣೆಮಾಡುವ ಆವಶ್ಯಕತೆ ಈ ಸಂದರ್ಭದಲ್ಲಿ ಅನಿವಾರ್ಯವಾಗುತ್ತದೆ. ಇವರು ಅರ್ಥಶಾಸ್ತ್ರವನ್ನು ಪರಿಶುದ್ಧವಾದ ವಾಸ್ತವಿಕ ವಿಜ್ಞಾನ (positive science) ಎಂದು ಪರಿಗಣಿಸಿದರು. ವಾಸ್ತವಿಕ ವಿಜ್ಞಾನ ಯಾವುದು ’ಹೇಗಿದೆ’ ಎಂದು ಮಾತ್ರ ತಿಳಿಸುತ್ತದೆಯೇ ಹೊರತು ಯಾವುದು ’ಹೇಗಿರಬೇಕು’ ಎಂಬುದನ್ನು ತಿಳಿಸುವುದಿಲ್ಲ. ಇದ್ದದ್ದನ್ನು ಇದ್ದ ಹಾಗೆ ತಿಳಿಸುವುದಷ್ಟೇ ವಾಸ್ತವಿಕ ವಿಜ್ಞಾನದ ಗುರಿ. ಅವರ ಪ್ರಕಾರ ’ಅರ್ಥಶಾಸ್ತ್ರವು ಕೇವಲ ಕಾರಣಗಳು ಮತ್ತು ಪರಿಣಾಮಗಳನ್ನು ತಿಳಿಸುವ ವಿಜ್ಞಾನ. ಆರ್ಥಿಕ ಸಂಗತಿಗಳ ಹಾಗೂ ಗುರಿಗಳ ಒಳಿತು-ಕೆಡುಕುಗಳ ಬಗೆಗೆ ವಿವರಿಸುವುದು ಅರ್ಥಶಾಸ್ತ್ರದ ಕೆಲಸವಲ್ಲ’ ಹಾಗೂ ಅವುಗಳ ಬಗೆಗೆ ತೀರ್ಮಾನ ಹೇಳುವುದು ಅರ್ಥಶಾಸ್ತ್ರದ ಜ್ಞಾನದ ವ್ಯಾಪ್ತಿಗೆ ಮೀರಿದ್ದು ಎನ್ನುವುದು ಅವರೆಲ್ಲರ ದೃಢ ಅಭಿಪ್ರಾಯವಾಗಿತ್ತು. ಅದು ಎಲ್ಲ ನೈತಿಕ ನೆಲೆಗಟ್ಟುಗಳಿಂದ ದೂರವಿರಬೇಕೆಂದು ಅವರು ವಿಶದೀಕರಿಸಿದ್ದರು. “ಅರ್ಥಶಾಸ್ತ್ರದ ಕೆಲಸ ವಿಷಯಗಳನ್ನು ಪರಿಶೋಧಿಸುವುದಷ್ಟೇ; ಅವುಗಳನ್ನು ಪ್ರತಿಪಾದಿಸುವುದಾಗಲಿ, ಖಂಡಿಸುವುದಾಗಲಿ ಅಲ್ಲ” ಎಂದು ರಾಬಿನ್ಸ್ ನುಡಿದಿದ್ದರು. ಅವರ ಅಭಿಮತದಂತೆ – “ಅರ್ಥಶಾಸ್ತ್ರಜ್ಞನು ಗುರಿಗಳಿಗೆ ಸಂಬಂಧಿಸಿದಂತೆ ತಟಸ್ಥನಾಗಿರಬೇಕು. ಅವನು ಗುರಿಗಳನ್ನು ಆಯ್ಕೆ ಮಾಡಬಾರದು. ಆದರೆ ಗುರಿಗಳನ್ನು ಸಾಧಿಸುವ ಸಾಧನಗಳನ್ನು ಮಾತ್ರ ವಿಶದಪಡಿಸಬೇಕು” ಎಂದು ವಾದಿಸಿದ್ದಾರೆ. ಸೀನಿಯರ್ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ – “ಅರ್ಥಶಾಸ್ತ್ರಜ್ಞನು ಕನಿಷ್ಠ ಒಂದು ಪದದ ಸಲಹೆಯನ್ನು ಕೂಡ ನೀಡಬಾರದು” ಎಂದು ಅಪ್ಪಣೆ ಕೊಡಿಸಿದ್ದಾನೆ.
ತದನಂತರದ ದಿನಗಳಲ್ಲಿ ಅರ್ಥಶಾಸ್ತ್ರಜ್ಞರಾದ ಹಾಟ್ರೆ, ಫ್ರೇಸರ್, ಪಾಲ್ಸ್ಟ್ರೀಟನ್ ಮುಂತಾದವರು “ಅರ್ಥಶಾಸ್ತ್ರ ಕೇವಲ ವಾಸ್ತವವಿಜ್ಞಾನ ಮಾತ್ರವಲ್ಲ, ಅದು ಮಾದರಿ ಅರ್ಥಶಾಸ್ತ್ರವೂ (Normative Science) ಹೌದು” ಎಂದು ಸ್ಪ?ನೆ ನೀಡಿದ್ದಾರೆ. “ಅರ್ಥಶಾಸ್ತ್ರಜ್ಞನ ಕೆಲಸ ಕೇವಲ ವಿಷಯ ಪರಿಶೋಧಿಸುವುದು ಮತ್ತು ತಿಳಿವಳಿಕೆ ಕೊಡುವುದು ಮಾತ್ರವಲ್ಲ; ಜೊತೆಗೆ ಅವುಗಳನ್ನು ಪ್ರತಿಪಾದನೆ ಮಾಡುವುದು ಮತ್ತು ಖಂಡನೆ ಮಾಡುವುದು” ಎಂದು ಹೇಳಿದ್ದಾರೆ. ಪಾಲ್ಸ್ಟ್ರೀಟನ್ ಅವರ ಅಭಿಪ್ರಾಯದಂತೆ “ಅರ್ಥಶಾಸ್ತ್ರಜ್ಞನ ವಿಶ್ಲೇಷಣೆ ಕೇವಲ ತಾಂತ್ರಿಕಸ್ವರೂಪದ ನಿರೂಪಣೆ ಆಗಿರುವುದಕ್ಕಿಂತ ಹೆಚ್ಚು ಫಲಪ್ರದವಾಗಬೇಕಾದರೆ, ಅವನು ನೈತಿಕ ನಿರ್ಧಾರಗಳನ್ನು ಕೈಗೊಳ್ಳಲು ಹಿಂಜರಿಯಬಾರದು. ವಿಷಯಗಳನ್ನು ವಿಶ್ಲೇಷಿಸಿ ಅವುಗಳ ಮೌಲ್ಯಗಳನ್ನು ನಿರ್ಧರಿಸುವುದೂ ಅರ್ಥಶಾಸ್ತ್ರಜ್ಞನ ಉದ್ದೇಶವಾಗಬೇಕು. ಅರ್ಥಶಾಸ್ತ್ರವು ಮೌಲ್ಯತೀರ್ಮಾನದ (Value Judgement) ಕೆಲಸವನ್ನೂ ಸಮರ್ಪಕವಾಗಿ ಮಾಡಬೇಕು.” (ಅರ್ಥಶಾಸ್ತ್ರದ ಎಲ್ಲಾ ಪುಸ್ತಕಗಳ ಪ್ರಾರಂಭಿಕ ವಿಷಯಗಳಲ್ಲಿ – whether economics is a positive science or a normative science – ಅರ್ಥಶಾಸ್ತ್ರ ಒಂದು ವಾಸ್ತವಿಕ ವಿಜ್ಞಾನವೊ ಅಥವಾ ಒಂದು ಮಾದರಿ ವಿಜ್ಞಾನವೊ ಎಂಬ ಜಿಜ್ಞಾಸೆ ಇರುತ್ತದೆ.)
ಅರ್ಥಶಾಸ್ತ್ರವು ಕೇವಲ ಆರ್ಥಿಕಸಮಸ್ಯೆಗಳ ಕಾರಣ ಮತ್ತು ಪರಿಣಾಮಗಳನ್ನು ಮಾತ್ರ ವಿಶ್ಲೇ?ಣೆ ಮಾಡಿ, ಅವುಗಳಿಗೆ ಯಾವೊಂದು ಸೂಕ್ತ ಪರಿಹಾರವನ್ನೂ ಸೂಚಿಸದಿದ್ದರೆ ಅದರಿಂದ ಸಮಾಜಕ್ಕೆ ಆಗುವ ಉಪಯೋಗವಾದರೂ ಏನು – ಎನ್ನುವ ಪ್ರಶ್ನೆಗೆ ಗಾಂಧಿಯವರು ತಮ್ಮ ಚಿಂತನೆಗಳಲ್ಲಿ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ.
ಧರ್ಮದ ಬುನಾದಿ
ಗಾಂಧಿಯವರು ಸಾಂಪ್ರದಾಯಿಕ ಅರ್ಥನೀತಿಯ ಸಿದ್ಧಾಂತಗಳಿಗೆ ಬದಲಾಗಿ, ಸಾಮಾಜಿಕ ಅರ್ಥನೀತಿಯನ್ನು ಧರ್ಮದ ಬುನಾದಿಯ ಮೇಲೆ ಕಟ್ಟಬೇಕೆಂದರು. ಅವರು ಧರ್ಮದಲ್ಲಿ (way of life) ಅರ್ಥಶಾಸ್ತ್ರವನ್ನು ಹುಡುಕಿದರು. ಧರ್ಮವು ವ್ಯಕ್ತಿಯ ಉನ್ನತಿಯನ್ನು ಸಮುದಾಯದ ಪುರೋಭಿವೃದ್ಧಿಯಲ್ಲಿ ಸಮೀಕರಿಸುತ್ತದೆ ಎಂದು ಅವರು ನಂಬಿದ್ದರು. ಅಧ್ಯಾತ್ಮ ಮತ್ತು ನೈತಿಕತೆಯ ಹಿನ್ನೆಲೆಯಲ್ಲಿ ಅವರು ತಮ್ಮ ಆರ್ಥಿಕಚಿಂತನೆಗಳನ್ನು ಪ್ರಕಟಪಡಿಸಿದರು.
ಗಾಂಧಿಯವರ ಅರ್ಥಶಾಸ್ತ್ರವು ನೀತಿಶಾಸ್ತ್ರ- ಆಧಾರಿತವಾಗಿದೆ. ಅವೆರಡರ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರಗಳನ್ನು ಪ್ರತ್ಯೇಕಿಸುವುದು ಅವರ ದೃಷ್ಟಿಯಲ್ಲಿ ಅಸಂಗತ ಅಭ್ಯಾಸ. ಈ ಎರಡನ್ನೂ ಪ್ರತ್ಯೇಕಿಸುವುದೆಂದರೆ ಶರೀರದಿಂದ ಪ್ರಾಣವನ್ನು ಬೇರ್ಪಡಿಸಿದ ಹಾಗೆ ಎಂದರು. ಯಾವ ಅರ್ಥಶಾಸ್ತ್ರ ಒಬ್ಬ ಮನುಷ್ಯನ ಅಥವಾ ಒಂದು ದೇಶದ ನೈತಿಕಮಟ್ಟವನ್ನು ಕಡಮೆ ಮಾಡುತ್ತದೆಯೋ ಅದು ಪಾಪಕರವಾದದ್ದು ಎಂದರು. ಮನುಷ್ಯನ ನೈತಿಕಮೌಲ್ಯಗಳನ್ನು ಯಾವುದು ಉಪೇಕ್ಷೆ ಮಾಡುತ್ತದೆಯೋ ಅದು ಅರ್ಥಶಾಸ್ತ್ರವೇ ಅಲ್ಲ ಎಂದು ನುಡಿದರು (’ಯಂಗ್ ಇಂಡಿಯಾ’, ಅಕ್ಟೋಬರ್ ೧೩, ೧೯೨೧). ಅವರ ಪ್ರಕಾರ ನಿಜವಾದ ಅರ್ಥಶಾಸ್ತ್ರವು ನೀತಿಶಾಸ್ತ್ರಕ್ಕೆ ವಿರುದ್ಧವಾಗಿರಲು ಸಾಧ್ಯವೇ ಇಲ್ಲ. ನೈತಿಕಮೌಲ್ಯಗಳಿಗೆ ಹೊರತಾದದ್ದು ಯಾವುದೂ ಗಾಂಧೀಯ ಅರ್ಥಶಾಸ್ತ್ರದಲ್ಲಿಲ್ಲ. ಅವೆರಡೂ ಒಂದಕ್ಕೊಂದು ಪೂರಕ. ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ. ಇದೇ ಗಾಂಧೀಯ ಅರ್ಥಶಾಸ್ತ್ರದ ಅತ್ಯಂತ ಮೂಲಭೂತವಾದ ಮತ್ತು ವ್ಯಾಪಕವಾದ ಗುಣಲಕ್ಷಣ. ನೈಜ ಅರ್ಥಶಾಸ್ತ್ರವು ಪರಮನೈತಿಕ ಮೌಲ್ಯಗಳಿಗೆ ಪೂರಕವಾಗಿರುತ್ತದೆ ಮತ್ತು ನೀತಿನಿ?ವಲ್ಲದ, ಧರ್ಮಬಾಹಿರವಾದ ಅರ್ಥಶಾಸ್ತ್ರವು ’ಪಾಶವೀ ಅರ್ಥಶಾಸ್ತ’ವಾಗುತ್ತದೆ ಎಂಬುದು ಗಾಂಧಿಯವರ ಅಚಲ ನಿಲವು.
ಗಾಂಧಿಯವರ ಪ್ರಕಾರ ನಿಜವಾದ ಅರ್ಥಶಾಸ್ತ್ರ ಐಹಿಕ/ಭೌತಿಕ ಹಾಗೂ ನೈತಿಕ ಪ್ರಗತಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ. ದೇಶದ ಆರ್ಥಿಕಸಂಪತ್ತನ್ನು ವೃದ್ಧಿಮಾಡುವುದರ ಜೊತೆಗೆ ನೈತಿಕಮೌಲ್ಯಗಳ ಅಭ್ಯುದಯ ಮತ್ತು ಸಾಮಾಜಿಕನ್ಯಾಯವನ್ನು ಒದಗಿಸುವುದರ ಕಡೆಗೆ ಅರ್ಥಶಾಸ್ತ್ರ ತನ್ನ ಗಮನವನ್ನು ಹರಿಸಬೇಕೆಂದರು ಅವರು (’ಹರಿಜನ’, ಅಕ್ಟೋಬರ್ ೯, ೧೯೩೭). ’ಯಾವ ಅರ್ಥಶಾಸ್ತ್ರವು ಧನಪಿಶಾಚಿಯ ಪೂಜೆ ಮಾಡಲು ಪ್ರೇರಣೆ ನೀಡುತ್ತದೆಯೋ ಮತ್ತು ಶಕ್ತಿವಂತನು ನಿಶ್ಶಕ್ತನ ಹೆಸರಿನಲ್ಲಿ ಹಣ ದೋಚಲು ಅವಕಾಶ ಮಾಡಿಕೊಡುತ್ತದೋ ಅದು ಬದುಕಿಗೆ ಸಾವನ್ನು ತಂದುಕೊಡುತ್ತದೆ ಮತ್ತು ಅಂತಹ ಅರ್ಥಶಾಸ್ತ್ರವನ್ನು ಮಂಕುಕವಿದ, ವಿ?ದಕರ ಅರ್ಥಶಾಸ್ತ್ರ ಎಂದು ನಾನು ಪರಿಗಣಿಸುತ್ತೇನೆ’ ಎಂದರು (’ಹರಿಜನ’, ಅಕ್ಟೋಬರ್ ೯, ೧೯೩೭). ನಿಜವಾದ ಅರ್ಥಶಾಸ್ತ್ರವು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು ಸಮಾನವಾಗಿ ಎಲ್ಲರ ಒಳಿತನ್ನು ಸಾಧಿಸುತ್ತದೆ. ಅತಿ ದುರ್ಬಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟು ಅವರಿಗೆ ಸಾರ್ಥಕ ಬದುಕನ್ನು ಕಟ್ಟಿಕೊಡಲು ಅದು ಸಮರ್ಥವಾಗಬೇಕು. ಓರ್ವ ವ್ಯಕ್ತಿಯ ಅಥವಾ ಒಂದು ರಾ?ದ ಹಿತವನ್ನು ಕಡೆಗಣಿಸುವ ಅರ್ಥಶಾಸ್ತ್ರವು ಅನೈತಿಕವಾದದ್ದು ಮತ್ತು ಪಾಪಪೂರಿತವಾದದ್ದು. ಉದ್ಯಮವೊಂದರ ಮೌಲ್ಯವನ್ನು ತಿಳಿಯಲು ಅದು ಶೇರುದಾರರಿಗೆ ಎಷ್ಟು ಲಾಭಾಂಶ ನೀಡುತ್ತದೆ ಎನ್ನುವುದಕ್ಕಿಂತಲೂ ಅದರಿಂದ ನಿರುದ್ಯೋಗಿಗಳ ದೇಹ ಮತ್ತು ಆತ್ಮ ಎಷ್ಟರಮಟ್ಟಿಗೆ ಘಾಸಿಗೊಂಡಿದೆ ಎನ್ನುವುದು ಮುಖ್ಯವಾಗುತ್ತದೆ – ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು.
ಯಾವುದೇ ದೇಶದ ಆರ್ಥಿಕ ಸಂವಿಧಾನ ಮತ್ತು ನೀತಿಗಳು ಆ ದೇಶದ ಸಾಮಾನ್ಯ ಜನರಿಗೆ ಕನಿ?ತಮ ಅನ್ನ, ವಸತಿ ಮತ್ತು ವಸ್ತ್ರಗಳನ್ನು ಕೊಡಲು ಸಮರ್ಥವಾಗಬೇಕು. ಪ್ರತಿಯೊಬ್ಬ ವ್ಯಕ್ತಿ ತಾನು ಕೆಲಸ ಮಾಡಿ ತನ್ನ ಜೀವನದ ಕನಿ? ಆವಶ್ಯಕತೆಗಳನ್ನು ಪೂರ್ಣಗೊಳಿಸಲು ಸಹಕಾರಿಯಾಗಿರಬೇಕು. ಸ್ವಾವಲಂಬಿಯಾಗಿ ದಿನನಿತ್ಯದ ಜೀವನನಿರ್ವಹಣೆ ಮಾಡಲು ಸಹಾಯ ಮಾಡುವಂತಿರಬೇಕು ಎಂಬುದು ಗಾಂಧಿಯವರ ಆಶಯವಾಗಿತ್ತು.
ಗಾಂಧಿಯವರ ಅಭಿಪ್ರಾಯದಂತೆ ಅರ್ಥಶಾಸ್ತ್ರದ ನಿಯಮಗಳೆಲ್ಲವೂ ಸರ್ವಕಾಲಕ್ಕೂ, ಸರ್ವದೇಶಗಳಿಗೂ ಸಮಾನವಾಗಿ ಅನ್ವಯಿಸುವ ಸೂತ್ರಗಳಲ್ಲ. ಅವರ ಚಿಂತನೆಯ ಪ್ರಕಾರ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿಶೇಷತೆಗಳಿವೆ. ಆಯಾಯಾ ದೇಶದ ಮಣ್ಣಿನಗುಣ, ಚಾರಿತ್ರಿಕ ಹಿನ್ನೆಲೆ, ಸಾಂಸ್ಕೃತಿಕ ವೈವಿಧ್ಯ, ಭೌಗೋಳಿಕ ವ್ಯತ್ಯಾಸಗಳು, ಸಾಮಾಜಿಕ ಪರಿಸ್ಥಿತಿ, ರಾಜಕೀಯ ಆಡಳಿತವ್ಯವಸ್ಥೆ, ಜನಸಾಮಾನ್ಯರ ನಿರೀಕ್ಷೆ, ಆರ್ಥಿಕ ಸಂಪನ್ಮೂಲಗಳ ದೊರಕುವಿಕೆ ಮತ್ತು ಆರ್ಥಿಕ ಸಾಧನಗಳನ್ನು ಅವಲಂಬಿಸಿ ಅರ್ಥಶಾಸ್ತ್ರದ ನೀತಿ ನಿಯಮಗಳನ್ನು ರೂಪಿಸಿ ಅನ್ವಯಿಸಬೇಕಾಗುತ್ತದೆ. ಒಂದು ದೇಶದಲ್ಲಿ ಫಲಪ್ರದವಾದ ನೀತಿ ಇನ್ನೊಂದು ದೇಶದಲ್ಲಿ ವಿಫಲವಾಗಬಹುದು. ಆದ್ದರಿಂದ ಆಯಾ ದೇಶಗಳ ಪರಿಸರವನ್ನು ಅಧ್ಯಯನ ಮಾಡಿ ಸೂಕ್ತ ನೀತಿ, ನಿರ್ಧಾರಗಳನ್ನು ಕೈಗೊಳ್ಳುವುದು ಅತ್ಯಂತ ಆವಶ್ಯಕ – ಎಂಬ ಖಚಿತ ಅಭಿಪ್ರಾಯವನ್ನು ಗಾಂಧಿ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ ಜನಶಕ್ತಿ ಕಡಮೆ ಇರುವ ಪಾಶ್ಚಾತ್ಯದೇಶಗಳ ಆರ್ಥಿಕವ್ಯವಸ್ಥೆಗೂ, ಜನಬಾಹುಳ್ಯವಿರುವ ಭಾರತದಂತಹ ದೇಶಗಳ ಆರ್ಥಿಕವ್ಯವಸ್ಥೆಗೂ ಬೇರೆಬೇರೆ ಉತ್ಪಾದನಾನಿಯಮ, ಉತ್ಪಾದನಾ ತಂತ್ರಗಳು ಹಾಗೂ ಪ್ರಕ್ರಿಯೆಗಳನ್ನು ಅನ್ವಯಿಸಬೇಕಾಗುತ್ತದೆ. ಶೀತವಲಯದ ದೇಶಗಳ ಜನರ ಉಡುಗೆ-ತೊಡುಗೆ, ತಿಂಡಿ ತಿನಿಸುಗಳೇ ಬೇರೆ; ಉಷ್ಣವಲಯದ ದೇಶಗಳ ಜನರ ಅನ್ನ, ವಸ್ತ್ರ, ವಸತಿಗಳೇ ಬೇರೆ. ಇಂಥ ಪ್ರಾಕೃತಿಕ, ಭೌಗೋಳಿಕ ಮುಂತಾದ ವೈವಿಧ್ಯಗಳಿಗೆ ಅನುಸಾರವಾಗಿ ಏನು, ಹೇಗೆ, ಎಲ್ಲಿ, ಯಾರಿಗೆ, ಎಷ್ಟು ಪ್ರಮಾಣದಲ್ಲಿ ಮತ್ತು ಯಾವ ಉತ್ಪಾದನಾತಂತ್ರಗಳನ್ನು ಉಪಯೋಗಿಸಿಕೊಂಡು ಉತ್ಪಾದಿಸಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ದೇಶಗಳಿಗೆ ಒಂದೇ ರೀತಿಯ ಉತ್ಪಾದನೆ ವಿತರಣೆ ಮತ್ತು ಅನುಭೋಗದ ನಿಯಮಗಳನ್ನು ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ. ಅದು ಅತಾರ್ಕಿಕವಾದುದು ಹಾಗೂ ಅಸಂಗತವಾದುದು ಎಂಬುದು ಗಾಂಧಿಯವರ ಅಭಿಮತವಾಗಿತ್ತು. ಆದರೆ ಅವರ ಅಭಿಪ್ರಾಯದಂತೆ ಸರ್ವದೇಶಗಳಿಗೂ, ಸರ್ವಕಾಲಕ್ಕೂ ಅನ್ವಯವಾಗಬೇಕಾದ ಒಂದು ಅಂಶವೆಂದರೆ ಅರ್ಥಶಾಸ್ತ್ರದ ನಿಯಮಗಳೂ, ಸಿದ್ಧಾಂತಗಳೂ ನೀತಿನಿಷ್ಠವಾಗಿರಬೇಕು ಹಾಗೂ ಧರ್ಮನಿಷ್ಠವಾಗಿರಬೇಕು ಎಂಬುದು. ಇದನ್ನು ಅವರು ತಮ್ಮ ಖಚಿತ ಅಭಿಪ್ರಾಯಗಳಲ್ಲಿ ತಿಳಿಸಿದ್ದಾರೆ
(ಮುಂದುವರಿಯುವುದು)