“ಗಾಂಧಿಯವರು ತಮ್ಮ ಆರ್ಥಿಕ ನಿಲವುಗಳನ್ನು ಶೈಕ್ಷಣಿಕತಜ್ಞರ ಭಾಷೆಯಲ್ಲಿ ತಿಳಿಸದೆ, ಸಾಮಾನ್ಯಜನರ ಭಾಷೆಯಲ್ಲಿ ಹೇಳಿದರು. ಆದ್ದರಿಂದ ಇತರ ಆರ್ಥಿಕತಜ್ಞರು ಗಾಂಧಿಯವರನ್ನು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಎಂದು ಪರಿಗಣಿಸಲು ಸಾಧ್ಯವಾಗದೆ ಹೋಯಿತು.”
– ಇ.ಎಫ್. ಶುಮಾಕರ್, ಖ್ಯಾತ ಜರ್ಮನ್ ಅರ್ಥಶಾಸ್ತ್ರಜ್ಞ
ಗಾಂಧೀಯ ಅರ್ಥಶಾಸ್ತ್ರದ ಮೂಲತತ್ತ್ವಗಳು ನಾಲ್ಕು: ಸತ್ಯ, ಅಹಿಂಸೆ, ಪ್ರೀತಿ ಮತ್ತು ಅಪರಿಗ್ರಹ. ಮೊದಲ ಮೂರು ತತ್ತ್ವಗಳ ಸಾಮಾನ್ಯ ಅರ್ಥ ನಮ್ಮೆಲ್ಲರಿಗೂ ತಿಳಿದಂತಹದೇ ಆಗಿದೆ. ನಾಲ್ಕನೆಯ ಮೌಲಿಕ ತತ್ತ್ವವಾದ ಅಪರಿಗ್ರಹದ ಬಗ್ಗೆ ಸ್ವಲ್ಪ ವಿವರವಾಗಿ ತಿಳಿಯುವ ಅಗತ್ಯವಿದೆ. ಅವರ ದೃಷ್ಟಿಯಲ್ಲಿ ಸತ್ಯ ಮತ್ತು ಅಹಿಂಸೆ ಬೆಟ್ಟಕ್ಕಿಂತ ಹಳೆಯದಾದಂಥವು. ಈ ಎರಡು ತತ್ತ್ವಗಳ ಸಂಗಮದ ಆಧಾರದ ಮೇಲೆ ಅಪರಿಗ್ರಹ ಪರಿಕಲ್ಪನೆಯನ್ನು ಅವರು ಬೆಳೆಸಿದರು. ಈ ಸಿದ್ಧಾಂತ ಅವರ ಇನ್ನಿತರ ತತ್ತ್ವಗಳಾದ ಅಸ್ತೇಯ, ಶೋಷಣಾಮುಕ್ತತೆ ಮತ್ತು ಧರ್ಮದರ್ಶಿತ್ವ ಇವುಗಳಿಗೆ ಬಹಳ ಹತ್ತಿರವಾಗಿದೆ ಮತ್ತು ಅವುಗಳ ಜೊತೆಗೆ ಘನಿಷ್ಠ ಸಂಬಂಧ ಹೊಂದಿದೆ. ಹೀಗಾಗಿ ಅಪರಿಗ್ರಹ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ತ್ವವಿದೆ. ಅಪರಿಗ್ರಹ ಮತ್ತು ಅಸ್ತೇಯ ಪದಗಳು ಸಂಸ್ಕೃತಜನ್ಯವಾದವು.
ಪರಿಕಲ್ಪನೆ ಮತ್ತು ವ್ಯಾಖ್ಯಾನ
ಗಾಂಧಿಯವರ ದೃಷ್ಟಿಯಲ್ಲಿ ವ್ಯಕ್ತಿಗತವಾಗಿ ಒಂದು ಪರಿವಾರದ ಒಟ್ಟು ಆಸ್ತಿಯನ್ನು ಎರಡು ಭಾಗವಾಗಿ ವಿಂಗಡಿಸಬಹುದು – ಸಾಮಾಜಿಕವಾಗಿ ಅಗತ್ಯವಾದ ಆಸ್ತಿ ಮತ್ತು ಅಧಿಕವಾಗಿರುವ ಆಸ್ತಿ. ಮೊದಲ ಭಾಗದಲ್ಲಿ ಒಂದು ಪರಿವಾರ ಆರ್ಥಿಕವಾಗಿ ನೆಮ್ಮದಿ ಹಾಗೂ ಸುಖೀ ಜೀವನ ನಡೆಸಲು ಬೇಕಾದ ಅಗತ್ಯ ಪ್ರಮಾಣದ ’ಅನುಭೋಗ ವಸ್ತುಗಳ’ (Consumption goods) ಮತ್ತು ’ಉತ್ಪಾದಕ ವಸ್ತುಗಳ’ (Producers’ goods) ಒಟ್ಟು ಮೊತ್ತ ಸೇರಿದೆ. ಹಣದ ರೂಪದಲ್ಲಿ ಹೇಳುವುದಾದರೆ ಈ ಅಗತ್ಯ ಅನುಭೋಗ ಮತ್ತು ಉತ್ಪಾದಕ ವಸ್ತುಗಳನ್ನು ಕೊಂಡುಕೊಳ್ಳಲು ಬೇಕಾದ ಪರಿವಾರದ ಒಟ್ಟು ಆದಾಯ ಮತ್ತು ಸಂಪತ್ತಿನ ಮೊತ್ತ. ಈ ಅಗತ್ಯ ಸಂಪತ್ತಿನ ಒಡೆತನಕ್ಕೆ ’ಪರಿಗ್ರಹ’ ಎನ್ನುವರು. ಪರಿವಾರದ ಅಗತ್ಯಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಉತ್ಪತ್ತಿಯಾದ ಆದಾಯ ಮತ್ತು ಸಂಪತ್ತಿನ ಭಾಗವನ್ನು ’ಅಧಿಕ ಆಸ್ತಿ’ ಎನ್ನುವರು.
ಮನುಷ್ಯನ ದಿನನಿತ್ಯದ ಅಗತ್ಯ ಆವಶ್ಯಕತೆಗಳನ್ನು ಪೂರೈಸಲು ಬೇಕಾದ ವಿವಿಧ ರೀತಿಯ ಸರಕುಗಳು, ವಸ್ತುಗಳು ಮತ್ತು ಆಸ್ತಿ ಇತ್ಯಾದಿಗಳನ್ನು ಬಿಟ್ಟು ಅಗತ್ಯಕ್ಕೂ ಮಿಕ್ಕಿ ಹೆಚ್ಚಿನ ಪ್ರಮಾಣದಲ್ಲಿರುವ ಈ ಎಲ್ಲ ಸಂಗತಿಗಳನ್ನು ಇಚ್ಛಾಪೂರ್ವಕವಾಗಿ ತ್ಯಜಿಸುವ ಪ್ರಕ್ರಿಯೆಗೆ ’ಅಪರಿಗ್ರಹ’ ಎನ್ನುತ್ತೇವೆ. ಸಂಕ್ಷಿಪ್ತವಾಗಿ ಅಪರಿಗ್ರಹ ಎಂದರೆ ಲೋಭ ಲಾಲಸೆಗಳ ತ್ಯಾಗ. ಅರ್ಥಾತ್ ಅಧಿಕ ಆಸ್ತಿಯನ್ನು ಸ್ವಂತ ಉಪಯೋಗಕ್ಕೆ ಬಳಸದೆ ಅದನ್ನು ಸಮಾಜದ ಇತರ ಬಂಧುಗಳಿಗೆ ವಿನಿಯೋಗಿಸುವ ಕ್ರಿಯೆ, ಕ್ರಮಕ್ಕೆ ಅಪರಿಗ್ರಹ ಎಂದು ಹೇಳುತ್ತೇವೆ.
ಗಾಂಧಿಯವರ ಕಲ್ಪನೆಯ ಪ್ರಕಾರ, ಯಾವುದೇ ಆರ್ಥಿಕ ವ್ಯವಸ್ಥೆಗಳಲ್ಲಾದರೂ ಜನರಿಗೆ ಅಗತ್ಯವಾದ ಸರಕು ಮತ್ತು ಸೇವೆಗಳು ಅವಶ್ಯಪ್ರಮಾಣದಲ್ಲಿ ಸಿಗಬೇಕು ಮತ್ತು ಅದರ ನ್ಯಾಯೋಚಿತವಾದ ವಿತರಣೆ ಅಥವಾ ಹಂಚಿಕೆಯಾಗಬೇಕು. ಅಭಾವದಲ್ಲಿರುವ ವಸ್ತುಗಳನ್ನು ಆರ್ಥಿಕವಾಗಿ ಬಲಿ?ರಾದವರು ಸಂಚಯಿಸಿ ತುಂಬಿಟ್ಟುಕೊಂಡರೆ ಕೋಟ್ಯಂತರ ಜನರಿಗೆ ಏನೂ ಸಿಕ್ಕದ ಹಾಗೆ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮಗೆ ಅಗತ್ಯವಾದ?ನ್ನು ಮಾತ್ರ ಇಟ್ಟುಕೊಂಡು, ಮಿಕ್ಕಿದ್ದನ್ನು ಸಮಾಜದಲ್ಲಿ ಹಂಚಿಕೆಯಾಗುವಂತೆ ನೋಡಿಕೊಂಡರೆ ವಿರಳವಾದ ವಸ್ತುಗಳ ನ್ಯಾಯೋಚಿತ ಹಂಚಿಕೆ ಸಾಧ್ಯವಾಗುತ್ತದೆ. ಇದ್ದುದನ್ನು ಎಲ್ಲರೂ ಹಂಚಿಕೊಳ್ಳುವ ಹೊಸ ಅರ್ಥವ್ಯವಸ್ಥೆ ರೂಪಗೊಂಡರೆ ಆಗ ಆರ್ಥಿಕ ಸಂಘರ್ಷಗಳು ಇಲ್ಲವಾಗುತ್ತವೆ.
ಮೇಲ್ಪಂಕ್ತಿ
ವಿವಿಧರೀತಿಯ ವಸ್ತುಗಳ ಮತ್ತು ಸ್ವತ್ತಿನ ಮೇಲೆ ಮನು? ತನ್ನ ಒಡೆತನ ಸಾಧಿಸಲು ಮತ್ತು ಇನ್ನೊಬ್ಬರಿಂದ ಸ್ವತ್ತನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ಹಿಂಸೆಯ ಸಹಜ ಉಪಯೋಗವಾಗುವುದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಅಗತ್ಯಗಳನ್ನು ಇಚ್ಛಾಪೂರ್ವಕವಾಗಿ ಆದಷ್ಟು ಕಡಮೆ ಮಾಡಿಕೊಳ್ಳಬೇಕೆಂದು ಗಾಂಧಿಯವರು ಸ್ಪ?ವಾಗಿ ಹೇಳುತ್ತಾರೆ. ಈ ವಿಷಯವನ್ನು ಅವರು ಕೇವಲ ಭಾಷಣ ಮಾಡದೆ ತಮ್ಮ ಜೀವನದಲ್ಲಿ ಪ್ರತ್ಯಕ್ಷ ಕಾರ್ಯಗತಗೊಳಿಸಿ ಇತರರಿಗೆ ಮೇಲ್ಪಂಕ್ತಿ ಹಾಕಿದರು. ತಮ್ಮ ಬಳಿ ಕೇವಲ ಅಗತ್ಯವಾದ ಕೆಲವು ಜೊತೆ ವಸ್ತ್ರಗಳು, ಒಂದು ಗಡಿಯಾರ, ಊರುಗೋಲು ಮತ್ತು ಅಗತ್ಯ ಪಾತ್ರೆಗಳನ್ನು ಮಾತ್ರ ಇಟ್ಟುಕೊಂಡಿದ್ದರು. ತಮ್ಮಂತೆ ಈ ತತ್ತ್ವವನ್ನು ಎಲ್ಲರೂ, ಅದರಲ್ಲೂ ಶ್ರೀಮಂತರು ಮತ್ತು ಉದ್ಯೋಗಪತಿಗಳೂ ಕೈಗಾರಿಕೋದ್ಯಮಿಗಳೂ ಪಾಲಿಸಬೇಕೆಂದು ಅವರು ಆಗ್ರಹಿಸುತ್ತಿದ್ದರು.
ಅವರ ಅಭಿಪ್ರಾಯದಲ್ಲಿ ಒಬ್ಬ ’ಸತ್ಯಾಗ್ರಹಿ’ ನ್ಯಾಯದ ಹಿಂಬಾಲಕ. ಅವನು ಯಾವಾಗಲೂ ಯಾವುದನ್ನೂ ಕೂಡಿಡದೆ ಅಪರಿಗ್ರಹತತ್ತ್ವದ ಪಾಲನೆ ಮಾಡಬೇಕು. ನಮಗೆ ಅಗತ್ಯವಲ್ಲದ ಯಾವುದೇ ವಸ್ತುಗಳನ್ನು ನಾವು ಶೇಖರಿಸಿ ಇಡಬಾರದು. ವ್ಯವಸಾಯಕ್ಕೆ ಅಗತ್ಯವಾಗಿ ಉಪಯೋಗಿಸುವ ಜಾನುವಾರುಗಳು ಮತ್ತು ಇತರ ಸಾಮಗ್ರಿಗಳನ್ನು ಇಟ್ಟುಕೊಳ್ಳಬಹುದು. ಎಲ್ಲಿ ನಿರಂತರ ಕ್ಷಾಮವಿದೆಯೋ ಅಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಡಬಹುದು. ಆದರೆ ಈ ಸಂದರ್ಭಗಳಲ್ಲಿ ಜಾನುವಾರುಗಳ ಮತ್ತು ಆಹಾರ ಪದಾರ್ಥಗಳ ಆವಶ್ಯಕತೆ ಇದೆಯೇ ಎನ್ನುವ ಪ್ರಶ್ನೆಯನ್ನು ನಾವು ನಮಗೇ ಹಾಕಿಕೊಳ್ಳಬೇಕು (Excerpt from a letter to Maganlal Gandhi, 15-3-1915, reproduced in Gandhi 1968, p.113).
ಅಪರಿಗ್ರಹವು ಅಸ್ತೇಯತತ್ತ್ವದ ಒಂದು ಭಾಗ. ಯಾವ ರೀತಿ ಮನು?ನು ಇತರರಿಗೆ ವಂಚನೆ ಮಾಡಬಾರದೋ ಅದೇ ರೀತಿ ನಮಗೆ ಅಗತ್ಯವಿಲ್ಲದಿರುವುದನ್ನು ನಾವು ನಮ್ಮ ಬಳಿ ಇಟ್ಟುಕೊಳ್ಳಬಾರದು. ಅನಗತ್ಯವಾದ ಆಹಾರ, ಬಟ್ಟೆ, ಪೀಠೋಪಕರಣಗಳನ್ನು ಹೊಂದಿದ್ದರೆ ಆಗ ಅಪರಿಗ್ರಹತತ್ತ್ವದ ಉಲ್ಲಂಘನೆಯಾಗುತ್ತದೆ. ಉದಾಹರಣೆಗೆ ಒಂದು ಕುರ್ಚಿಯನ್ನು ಉಪಯೋಗಿಸದೆ ಹಾಗೇ ಅದನ್ನು ನಿಷ್ಕ್ರಿಯವಾಗಿ ಇಟ್ಟಿರಬಾರದು. ಈ ತತ್ತ್ವವನ್ನು ಪಾಲಿಸಿದಾಗ ನಾವು ನಮ್ಮ ಜೀವನವನ್ನು ಸರಳೀಕರಿಸುವತ್ತ ಪ್ರಗತಿಯನ್ನು ಸಾಧಿಸುತ್ತೇವೆ (M.K. Gandhi 1959, p. 113).
ಅನಗತ್ಯ, ಅನಾವಶ್ಯಕ ವಸ್ತುಗಳ ಅನುಭೋಗದಿಂದ ಮನು?ನ ತಣಿಸಲಾಗದ ಆಸೆಗಳನ್ನು ಮತ್ತಷ್ಟು ವೃದ್ಧಿಸುವಂತೆ ಮಾಡುವ ಒಂದು ಪ್ರಭಾವೀ ಚಳವಳಿ ಆಧುನಿಕ ಸಮಾಜದಲ್ಲಿ ನಡೆಯುತ್ತಿದೆ. ಅಂತಹ ಮಾದರಿಯ ಅನುಭೋಗ ಮುಂದುವರಿದ ಶ್ರೀಮಂತರಾ?ಗಳ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಿರತೆಗೆ ಸಹಾಯಕ ಎನ್ನಬಹುದು. ಈ ಚಿಂತನೆ ಕೇವಲ ಆರ್ಥಿಕವಾದದ ಮೇಲೆ ನಿಂತಿದೆ. ಗಾಂಧಿಯವರಿಗೆ ಇದು ಕೇವಲ ಆರ್ಥಿಕ ವಿಷಯವಾಗಿರದೆ ನೈತಿಕ ವಿಷಯವೂ ಆಗಿತ್ತು. ಅವರ ಪ್ರಕಾರ ಅರ್ಥಶಾಸ್ತ್ರ ಮತ್ತು ನೈತಿಕಶಾಸ್ತ್ರಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಆದಕಾರಣ ಅವರ ದೃಷ್ಟಿಯಲ್ಲಿ ಮನುಷ್ಯನ ಅಗತ್ಯಗಳನ್ನು ಪೂರೈಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುವ ವಸ್ತುಗಳನ್ನು ಯಾರಾದರೂ ಹೊಂದಿದ್ದರೆ ಅದು ಕಳ್ಳತನದಿಂದ ಪಡೆದಂತೆ; ಅದು ಅನೈತಿಕ.
ಪರಿಪೂರ್ಣ ಅಪರಿಗ್ರಹ ಒಂದು ಆದರ್ಶಸ್ಥಿತಿ. ಅದು ಕಾರ್ಯಗತವಾಗುವುದು ಕ?ಸಾಧ್ಯ. ಏಕೆಂದರೆ ಅದನ್ನು ಕಾರ್ಯಗತಮಾಡಲು ಸಂಪೂರ್ಣ ತ್ಯಜಿಸುವಿಕೆ ಅಗತ್ಯ. ವ್ಯಾವಹಾರಿಕವಾಗಿ ಇದು ಸಾಧ್ಯವಿಲ್ಲ ಎಂದು ಅವರು ಅರಿತಿದ್ದರು. ಹಾಗೆಂದು ನಾವು ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಮತ್ತು ಅದರ ವ್ಯಾಖ್ಯೆಯನ್ನು ಬದಲಿಸಲೂ ಸಾಧ್ಯವಿಲ್ಲ. ಹಾಗೇನಾದರೂ ಮಾಡಿದರೆ ನಾವು ನಾವಿಕನಿಲ್ಲದ ದೋಣಿಯಲ್ಲಿ ಪ್ರಯಾಣ ಮಾಡಿದಂತಾಗುತ್ತದೆ. ಆದ್ದರಿಂದ ಆದರ್ಶಸ್ಥಿತಿಯನ್ನು ಮುಟ್ಟಲು ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಹೇಗೆಂದರೆ ಮನು?ನು ಹಂತಹಂತವಾಗಿ ತನ್ನ ಆಸೆಗಳನ್ನು ಕಡಮೆ ಮಾಡಿಕೊಳ್ಳಬೇಕು. ಆದಕಾರಣ ಗಾಂಧಿಯವರ ಆರ್ಥಿಕ ಕಲ್ಯಾಣದಲ್ಲಿ ’ಕನಿ?ತಮ ನಡವಳಿಕೆಯು’ ’ಗರಿ?ತಮ ನಡವಳಿಕೆ’ಗಿಂತ ಹೆಚ್ಚಿನ ಮಹತ್ತ್ವ ಪಡೆಯುತ್ತದೆ (Welfare criteria in Gandhian Economics by A.M. Huq, pp. 576-584).
ಪರಿಪೂರ್ಣ ಅಪರಿಗ್ರಹ ಒಂದು ಆದರ್ಶಸ್ಥಿತಿ. ಅದು ಕಾರ್ಯಗತವಾಗುವುದು ಕ?ಸಾಧ್ಯ. ಏಕೆಂದರೆ ಅದನ್ನು ಕಾರ್ಯಗತಮಾಡಲು ಸಂಪೂರ್ಣ ತ್ಯಜಿಸುವಿಕೆ ಅಗತ್ಯ. ವ್ಯಾವಹಾರಿಕವಾಗಿ ಇದು ಸಾಧ್ಯವಿಲ್ಲ ಎಂದು ಅವರು ಅರಿತಿದ್ದರು. ಹಾಗೆಂದು ನಾವು ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಮತ್ತು ಅದರ ವ್ಯಾಖ್ಯೆಯನ್ನು ಬದಲಿಸಲೂ ಸಾಧ್ಯವಿಲ್ಲ.
ಹಣ ಕೇವಲ ಒಂದು ಲೋಹದ ರೂಪದಲ್ಲಿ ನಮ್ಮ ಬಳಿ ಇದ್ದರೆ ತಪ್ಪಿಲ್ಲ. ಅದರ ಒಳಿತು, ಕೆಡುಕುಗಳು ಅದರ ಉಪಯೋಗದ ಮೇಲೆ ನಿಂತಿವೆ. ಈ ಹಿನ್ನೆಲೆಯಲ್ಲಿ ನಾವು ಅಪರಿಗ್ರಹದ ಕಲ್ಪನೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಗಾಂಧಿಯವರು ತಿಳಿಸಿದರು.
ಸ್ವಇಚ್ಛೆಯಿಂದ ಶ್ರೀಮಂತರು ತಮ್ಮ ಸಂಪತ್ತನ್ನು ತ್ಯಜಿಸಿದರೆ ಪ್ರಪಂಚ ಏನನ್ನೂ ಕಳೆದುಕೊಳ್ಳುವುದಿಲ್ಲ. ಬದಲಿಗೆ ಅಪರಿಗ್ರಹದ ಪರಿಣಾಮವಾಗಿ ಒಂದು ಹೊಸ ಶಕ್ತಿಯ ಉದಯವಾಗಿ ಅದರಿಂದ ಜಗತ್ತಿಗೆ ಲಾಭವೇ ಆಗುತ್ತದೆ. ಈ ತತ್ತ್ವವನ್ನು ಅನುಸರಿಸುವ ಯಾವ ಒಬ್ಬ ವ್ಯಕ್ತಿಯೂ ಸಹ ಯಾಂತ್ರಿಕವಾಗಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಯಾರ ಹೃದಯದಲ್ಲಿ ಸ್ವಪ್ರೇರಣೆಯಿಂದ ಅಪರಿಗ್ರಹ ಕಲ್ಪನೆ ಜಾಗೃತವಾಗಿ ಕಾರ್ಯಶೀಲವಾಗುತ್ತದೋ ಅವರಿಗೆ ಅದರ ಶ್ರೇಯಸ್ಸು ಸೇರಬೇಕು. (೩೦-೪-೧೯೨೬, ಹಸಮಜೀ ಹೀರಜೀ ಅವರಿಗೆ ಸಾಬರಮತಿ ಆಶ್ರಮದಿಂದ ಬರೆದ ಪತ್ರ).
ನೈತಿಕಪ್ರಜ್ಞೆಯ ಮಹತ್ತ್ವ
ಇಚ್ಛಾಪೂರ್ವಕವಾಗಿ ಆಸೆಗಳನ್ನು ಕಡಮೆ ಮಾಡುವ ಮೂಲಕ ಗಾಂಧಿಯವರು ಅಪರಿಗ್ರಹ ಸಿದ್ಧಾಂತವನ್ನು ಸಕಾರಾತ್ಮಕ ಕ್ರಿಯೆಯಾಗಿ ಪರಿವರ್ತಿಸಿದರು. ಪ್ರತಿಯೊಬ್ಬರೂ ಸಹ ತಮಗೆ ಅವಶ್ಯವಾದ?ನ್ನು ಮಾತ್ರ ಇಟ್ಟುಕೊಂಡು ಹೆಚ್ಚುವರಿಯನ್ನು ಇತರ ಬಂಧುಗಳ ಕಲ್ಯಾಣಕ್ಕಾಗಿ ಉಪಯೋಗಿಸಬೇಕು. ಆಗ ಅದು ಅಹಿಂಸೆಯ ಮೂಲಕ ಆದಾಯ ಹಂಚಿಕೆಯಲ್ಲಿ ಅಸಮತೋಲನವನ್ನು ಮತ್ತು ಸಂಪತ್ತಿನ ದುರ್ವಿತರಣೆಯನ್ನು ಕಡಮೆ ಮಾಡುವ ಅಪೇಕ್ಷಣೀಯ ಕ್ರಮವಾಗುತ್ತದೆ.
ಸಮಸ್ಯೆಯನ್ನು ಬಗೆಹರಿಸುವ ಇನ್ನಿತರ ಕ್ರಮಗಳ ಮತ್ತು ವಿಧಾನಗಳ ಬಗ್ಗೆ ಅವರಿಗೆ ಅರಿವಿತ್ತು. ಆದರೆ ಅವುಗಳನ್ನು ಗಾಂಧಿಯವರು ಸಮರ್ಥಿಸಲಿಲ್ಲ. ಏಕೆಂದರೆ ಆ ಎಲ್ಲ ವಿಧಾನಗಳು ಅಹಿಂಸೆ ಮತ್ತು ಅಸ್ತೇಯ ತತ್ತ್ವಕ್ಕೆ ವ್ಯತಿರಿಕ್ತವಾಗಿವೆ ಮತ್ತು ಸರ್ಕಾರದ ಬಲಾತ್ಕಾರದ ಶಕ್ತಿಯ ಪ್ರತೀಕವಾಗಿವೆ. ಆದ್ದರಿಂದ ಗಾಂಧಿಯವರು ಆದಾಯ ಮತ್ತು ಸಂಪತ್ತಿನ ವಿತರಣೆಯಲ್ಲಿ ಮೂಲಭೂತ ಪರಿವರ್ತನೆ ತರುವಲ್ಲಿ ವ್ಯಕ್ತಿಯ ನೈತಿಕಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಯತ್ನಕ್ಕೆ ಹೆಚ್ಚಿನ ಮಹತ್ತ್ವ ನೀಡುತ್ತಾರೆ.
ಗಾಂಧಿಯವರ ಅಪರಿಗ್ರಹತತ್ತ್ವ ಅವರ ಆದರ್ಶ ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಇನ್ನೊಂದು ಮುಖ್ಯವಾದ ಇಂಗಿತಾರ್ಥವನ್ನು ಒಳಗೊಂಡಿದೆ. ಈ ಒಂದು ಸಿದ್ಧಾಂತ ವಿಶಾಲಾರ್ಥದಲ್ಲಿ ಎಲ್ಲೆಡೆ ಕಾರ್ಯಗತವಾದರೆ ’ಬೇಡಿಕೆ’ಗೆ ಬದಲು ’ಅಗತ್ಯತೆ’ಯ ಅನುಸಾರವಾಗಿ ಉತ್ಪಾದನಾ ಪದ್ಧತಿಯಲ್ಲಿ ಮಾರ್ಪಾಟಾಗುವುದು. ಅಗತ್ಯತೆ ಸಹಜವಾಗಿರುವ ಕಾರಣ ಬೇಡಿಕೆಯನ್ನು ಸೃಷ್ಟಿಸಿದಂತೆ ಅದನ್ನು ಸೃಷ್ಟಿಸುವ ಅಗತ್ಯವಿಲ್ಲ. ಪ್ರತಿಯೊಂದು ಸಮಾಜದಲ್ಲೂ ಬಡವ-ಶ್ರೀಮಂತ ಭೇದವಿಲ್ಲದೆ ಬೃಹತ್ ಪ್ರಮಾಣದಲ್ಲಿ ಗುರಿಮುಟ್ಟಲಾಗದಂತಹ ಸಾಮಾಜಿಕ ಆವಶ್ಯಕತೆಗಳಿವೆ. ಆದ ಕಾರಣ ಸಾಮಾನ್ಯಜನರ ಆರ್ಥಿಕ ಅಗತ್ಯಗಳನ್ನು ಪೂರೈಸುವಂತಹ ಉತ್ಪಾದನಾ ಪದ್ಧತಿ ಜಾರಿಯಾದರೆ ಅದು ಆರ್ಥಿಕ ಬೆಳವಣಿಗೆಗೆ ಮತ್ತು ಉದ್ಯೋಗ ಸೃಷ್ಟಿಮಾಡಲು ಸಕಾರಾತ್ಮಕ ಪರಿಣಾಮ ಬೀರುತ್ತದೆ. “ಗಾಂಧಿಯವರ ಕರೆಯಂತೆ ಬೇಡಿಕೆಯನ್ನು ಕಡಿತಗೊಳಿಸಿ ಅಪರಿಗ್ರಹತತ್ತ್ವದ ಅನುಸರಣೆಯಾದರೆ ಶೀಘ್ರ ಆರ್ಥಿಕಪ್ರಗತಿ ಮತ್ತು ಉದ್ಯೋಗಸೃಷ್ಟಿಗೆ ಸಹಕಾರಿಯಾಗುತ್ತದೆ. ವ್ಯಕ್ತಿಯ ಲಾಭದ ಗಳಿಕೆಯ ಪ್ರಮಾಣ ಕಡಮೆಯಾಗಿ ಸಾಮೂಹಿಕ ಪ್ರಯತ್ನದ ಮೂಲಕ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ” ಎಂದು ಗಾಂಧೀಯ ಅರ್ಥಶಾಸ್ತ್ರಜ್ಞರೊಬ್ಬರು ಈ ಸಂದರ್ಭದಲ್ಲಿ ಹೇಳಿದ್ದಿದೆ (Gandhi To-day, 1978, p. 105).
ಗಾಂಧಿಯವರು ಸೂಚಿಸಿದ ಅಪರಿಗ್ರಹ ಸಿದ್ಧಾಂತದ ಮೂಲಕ ಆರ್ಥಿಕ ಪ್ರಗತಿ ಮತ್ತು ಉದ್ಯೋಗದ ಹೆಚ್ಚಳದ ಪರಿಣಾಮ ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಲ್ಲಿ ಮೂಲಭೂತ ಪರಿವರ್ತನೆ ಆಗದ ಹೊರತು ಸಾಧ್ಯವಿಲ್ಲ. ಅವರ ದೃಷ್ಟಿಯಲ್ಲಿ ಆರ್ಥಿಕ ನಿರ್ಧಾರ ಕೈಗೊಳ್ಳುವಿಕೆಯ ವಿಕೇಂದ್ರೀಕರಣ ಮತ್ತು ಆರ್ಥಿಕ ಸ್ವಯಂ ಆಡಳಿತದ ಘಟಕವಾಗಿ ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನದ ಮೂಲಕ ಮೂಲಭೂತ ಬದಲಾವಣೆ ಆಗಬೇಕಾಗಿದೆ. ನಾವು ಅರ್ಥಮಾಡಿಕೊಳ್ಳಬೇಕಾದ ಬಹಳ ಮುಖ್ಯ ಅಂಶವೆಂದರೆ ಗಾಂಧೀಯ ಆರ್ಥಿಕ ತತ್ತ್ವಗಳು ಗಾಂಧೀಯ ಆರ್ಥಿಕ ವ್ಯವಸ್ಥೆಯಲ್ಲಿ ಮಾತ್ರ ಕಾರ್ಯಗತ ಆಗಬಹುದಾಗಿದೆ. ಈ ತತ್ತ್ವಗಳನ್ನು ಬೇರೆ ಇನ್ನಾವುದೇ ತೀವ್ರ ಬದಲಾವಣೆಗೆ ಒಳಪಟ್ಟ ಆರ್ಥಿಕ ವ್ಯವಸ್ಥೆಯ ಮೇಲೆ ಹೇರಲು ಸಾಧ್ಯವಿಲ್ಲ.
ಅಪರಿಗ್ರಹ ತತ್ತ್ವದ ತಾತ್ತ್ವಿಕ ಬೇರುಗಳು
ಅಪರಿಗ್ರಹ ಸಿದ್ಧಾಂತದ ತಿರುಳು ಅರ್ಥಶಾಸ್ತ್ರದ ಪರಿಧಿಯ ಹೊರಗಿದೆ. ಗಾಂಧಿಯವರಿಗೆ ಸಮಗ್ರವಾಗಿ ಪರಿಚಯವಿದ್ದ ನಮ್ಮ ಪುರಾತನ ಭಾರತೀಯ ತತ್ತ್ವಜ್ಞಾನದ ಪರಂಪರೆಗೆ ಸೇರಿದ ಸಿದ್ಧಾಂತ ಈ ಅಪರಿಗ್ರಹ. ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಇದೇ ತತ್ತ್ವಜ್ಞಾನ ಪರಂಪರೆಗೆ ಸೇರಿದ ’ಅರ್ಥ’ ಅಂದರೆ ಭೌತಿಕ ವಸ್ತುಗಳ ಒಡೆತನ ಚತುರ್ವಿಧ ಪುರುಷಾರ್ಥಗಳಲ್ಲಿ ಒಂದಾಗಿರುವುದು (Philosophies of India, 1951, p. 35). ಭಾರತೀಯ ತತ್ತ್ವಜ್ಞಾನದಲ್ಲಿ ಭೌತಿಕ ವಸ್ತುಗಳ ಒಡೆತನ ದಿನನಿತ್ಯದ ಜೀವನ ನಿರ್ವಹಣೆಗೆ ಅಂದರೆ ಮನೆಯನ್ನು ನಡೆಸಲು, ಸಂಸಾರ ಬೆಳೆಸಲು ಮತ್ತು ವಿವಿಧ ರೀತಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಕರ್ತವ್ಯ ಮತ್ತು ಋಣಸಂದಾಯಕ್ಕೆ ಅತ್ಯಂತ ಅಗತ್ಯ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ’ಅರ್ಥ’ ಎನ್ನುವ ಪದದಲ್ಲಿ ತುಷ್ಟಿಗುಣದ ವಿವಿಧಾರ್ಥಗಳು ತುಂಬಿವೆ. ಒಬ್ಬ ಮನುಷ್ಯ ತನ್ನ ಹೊಟ್ಟೆಯನ್ನು ತುಂಬಿಸಿಕೊಂಡರೆ ಅದರಿಂದ ಅವನು ಸ್ವಲ್ಪಮಟ್ಟಿನ ತುಷ್ಟಿಯ (ಸಂತೋಷ)ನ್ನು ಪಡೆಯುತ್ತಾನೆ. ಅವನು ತನ್ನ ಸಂಸಾರದ ಹೊಟ್ಟೆ ತುಂಬಿಸಿದರೆ ಹೆಚ್ಚಿನ ಪ್ರಮಾಣದ ತುಷ್ಟಿಯನ್ನು ಪಡೆಯುತ್ತಾನೆ. ತನ್ನ ಮನೆಯಿಂದ ಹೊರಗಿರುವ ಒಬ್ಬ ಅಪರಿಚಿತ ಹಸಿದ ವ್ಯಕ್ತಿಗೆ ಅನ್ನ ನೀಡಿದರೆ ಇನ್ನೂ ಹೆಚ್ಚಿನ ಸಂತೋ? ಪಡೆಯುವನು. ಅರ್ಥಶಾಸ್ತ್ರದಲ್ಲಿ ಗುಣಾತ್ಮಕ ರೀತಿಯ ತುಷ್ಟಿಗುಣವನ್ನು ಸಂಖ್ಯಾಸೂಚಕ ವಿಧಾನದಲ್ಲಿ (Cardinal Utility Analysis) ಅಳೆಯಲಾಗುತ್ತದೆ. ಪರ್ಯಾಯ ವಿಧಾನವಾದ ’ಔದಾಸೀನ್ಯ ರೇಖಾ ವಿಶ್ಲೇಷಣೆ’ (Indifference Curve Analysis or Ordinal Utility Analysis)ಯಲ್ಲಿ ಸ್ಥಾನಸೂಚಕ ಆಧಾರದ ಮೇಲೆ ತುಷ್ಟಿಯನ್ನು ವ್ಯಕ್ತಪಡಿಸುತ್ತೇವೆ. ಈ ಎರಡೂ ವಿಧಾನಗಳು ವಿಭಿನ್ನ ರೀತಿಯಲ್ಲಿ ತುಷ್ಟಿಗುಣದ ವಿಶ್ಲೇಷಣೆಯನ್ನು ಮಾಡುತ್ತವೆ.
’ಬಹುವರ್ಗ ತುಷ್ಟಿಗುಣ’ (Multiorder utility) ಪದ್ಧತಿಯ ಕಲ್ಪನೆ ’ಅರ್ಥ’ ಮತ್ತು ’ಅಪರಿಗ್ರಹ’ದ ನಡುವಣ ಘರ್ಷಯನ್ನು ತೆಗೆದುಬಿಡುತ್ತದೆ. ಭೌತಿಕವಸ್ತುಗಳ ಒಡೆತನ ಇರಬಾರದು ಎಂಬ ನಿರ್ಬಂಧ ಎಲ್ಲೂ ಇಲ್ಲ. ಅನುಭೋಗಿ ಅತಿ ಅಗತ್ಯ ಪ್ರಮಾಣದ ತುಷ್ಟಿಗುಣ(ಸಂತೋಷ)ವನ್ನು ಜೀವನಾವಶ್ಯಕ ಸರಕು ಮತ್ತು ಸೇವೆಗಳಿಂದ ಪಡೆಯಬೇಕು. ಇತರ ವಸ್ತುಗಳ ಅನಗತ್ಯ ಪ್ರಮಾಣದ ಸಂಗ್ರಹಣೆ ಮತ್ತು ಅದರ ಬಗೆಗಿನ ವ್ಯಾಮೋಹ ಬಿಡಬೇಕು. ಇಲ್ಲಿ ಪ್ರಮುಖವಾದ ವಿಷಯವೆಂದರೆ ವಿವಿಧ ರೀತಿಯ ವಸ್ತುಗಳ ಒಡೆತನ ಬೇಕೇ ಬೇಡವೇ ಎಂಬುದಲ್ಲ. ಯಾವ ಪ್ರಮಾಣದಲ್ಲಿ ವಸ್ತುಗಳನ್ನು ಸಂಗ್ರಹಿಸುವುದು, ತನ್ನ ಸ್ವಂತ ಉಪಯೋಗಕ್ಕೆ ಯಾವ ರೀತಿಯ ಮಿತಿಗಳನ್ನು ಹಾಕಿಕೊಳ್ಳುವುದು ಮತ್ತು ಅಧಿಕ ಪ್ರಮಾಣದ ವಸ್ತುಗಳನ್ನು ಯಾವರೀತಿ ಸದ್ಬಳಕೆ ಮಾಡಬೇಕೆಂಬುದು ಇಲ್ಲಿ ಮುಖ್ಯವಾದ ಪ್ರಶ್ನೆ. ಈ ದೃಷ್ಟಿಯಲ್ಲಿ ಯೋಚಿಸಿದಾಗ ಅಪರಿಗ್ರಹತತ್ತ್ವ ಅತ್ಯಂತ ಸಕಾರಾತ್ಮಕವಾಗಿ ಕಾಣುತ್ತದೆ. ಗ್ರಹಿಕೆಯಲ್ಲಿ ನಕಾರಾತ್ಮಕವಾಗಿ ಕಂಡರೂ ಅದು ಸಾರಾಂಶದಲ್ಲಿ ಅಲ್ಲ. ಅಪರಿಗ್ರಹ ಸಿದ್ಧಾಂತ ಭಾರತೀಯ ತತ್ತ್ವಜ್ಞಾನದ ಒಂದು ಅತ್ಯುತ್ತಮ ಉದಾಹರಣೆ. ಮನು? ಹೇಗೆ ಭೌತಿಕಸಂಪತ್ತನ್ನು ಗಳಿಸಿ ಶೇಖರಿಸಿಕೊಂಡು ಜೊತೆಗೆ ಅದರ ಬಗ್ಗೆ ವ್ಯಾಮೋಹವನ್ನು ಬೆಳೆಸಿಕೊಳ್ಳದೆ ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಮತ್ತು ಅಗತ್ಯ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದನ್ನು ಅದು ನಮಗೆ ತಿಳಿಸುತ್ತದೆ. “ನನ್ನ ಪಾಲು ಎಂದು ತಿಳಿದ ಆವಶ್ಯಕ ವಸ್ತುಗಳನ್ನು ಮಾತ್ರ ನಾವು ಸ್ವೀಕರಿಸಬೇಕು. ಇನ್ನಿತರ ವಸ್ತುಗಳು ಬೇರೆ ಯಾರಿಗೆ ಸೇರಬೇಕೆಂದು ನಮಗೆ ತಿಳಿದಿರುವಾಗ ಅಂತಹ ವಸ್ತುಗಳನ್ನು ನಾವು ಸ್ವೀಕರಿಸಬಾರದು” ಎಂದು ಈಶೋಪನಿಷತ್ತು ತಿಳಿಸುತ್ತದೆ(Isopanishad,
translation by Swami Prabhupada, Iscon 1966, p. 14). ಈಶೋಪನಿಷತ್ತಿನಲ್ಲಿ ಇನ್ನೊಂದೆಡೆ ಒಬ್ಬ ವ್ಯಕ್ತಿ ತನ್ನ ಸಂಪತ್ತನ್ನು ತನ್ನ ಸ್ವಂತಕ್ಕೆ ಉಪಯೋಗಿಸಿದಾಗ ಬರುವ ಆನಂದಕ್ಕಿಂತ ಇನ್ನೂ ಹೆಚ್ಚಿನ ಆನಂದ ಸಿಗುವ ಘಟ್ಟವನ್ನು ತಿಳಿಸಿದೆ: “ಭೋಗಿಸುವುದರಲ್ಲಿ ಅಲ್ಲ, ತ್ಯಜಿಸುವಿಕೆಯಲ್ಲಿ ಆನಂದವನ್ನು ಕಾಣು”, “ಇನ್ನೊಬ್ಬರ ಸಂಪತ್ತಿಗೆ ಆಸೆ ಪಡಬೇಡ” (The Book of Wisdom
by Swami Rama, 1972, p. 25). ಭಗವದ್ಗೀತೆಯಲ್ಲಿ ಇದೇ ವಿಷಯವನ್ನು ಇನ್ನಷ್ಟು ತೀಕ್ಷ್ಣವಾಗಿ ವಿಮರ್ಶೆ ಮಾಡಲಾಗಿದೆ: “ಮನುಷ್ಯ ತನ್ನ ಹಸಿವನ್ನು ನೀಗಿಸಲು ಅಗತ್ಯವಾದದ್ದನ್ನು ಮಾತ್ರ ಪಡೆಯಬೇಕು. ಯಾರು ಅಗತ್ಯಕ್ಕಿಂತ ಹೆಚ್ಚಿನದನ್ನು ಪಡೆಯುತ್ತಾರೋ ಅವರು ಕಳ್ಳರ ಹಾಗೆ. ಆದ್ದರಿಂದ ಅವರನ್ನು ಶಿಕ್ಷಿಸಬೇಕು (Srimad Bhagavadgeetha, translation, vol. II, by N. Raghunathan, 1946, p. 641).
ಅನೇಕ ದಶಕಗಳ ನಂತರ ಇದೇ ರೀತಿಯ ಕಲ್ಪನೆಯನ್ನು ಬಲವಾಗಿ ಜೆ. ಪ್ರೌಧನ್ ಎಂಬವರು ’ಆಸ್ತಿ ಎಂದರೇನು’ (What is Property) ಎಂಬ ತಮ್ಮ ಪ್ರಸಿದ್ಧ ಪುಸ್ತಕದಲ್ಲಿ ಪ್ರಸ್ತುತಪಡಿಸಿದ್ದಾರೆ.
ಗಾಂಧಿಯವರು ಅಪರಿಗ್ರಹಸಿದ್ಧಾಂತವನ್ನು ಸದಾಕಾಲ ಪ್ರವಹಿಸುವ ಭಾರತೀಯ ತತ್ತ್ವಜ್ಞಾನದಿಂದ ಪಡೆದರು ಎಂಬುದನ್ನು ಯಾವುದೇ ರೀತಿಯ ಅನುಮಾನವಿಲ್ಲದೆ ಹೇಳಬಹುದು. “ಭಗವದ್ಗೀತೆಯ ಖಚಿತ ಮಾರ್ಗದರ್ಶನದಿಂದ ’ಅಪರಿಗ್ರಹ ಮತ್ತು ಸಮಭಾವ’ ಎನ್ನುವ ಎರಡು ಪದಗಳು ನನ್ನನ್ನು ಬಿಗಿಯಾಗಿ ಬಂಧಿಸಿದವು. ಗೀತೆಯ ಪಾಠದಿಂದ ’ಧರ್ಮದರ್ಶಿತ್ವ’ ಪದದ ನಿಜವಾದ ಧ್ವನಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಅದರ ಪ್ರಕಾರ ಯಾರು ಮುಕ್ತಿಯನ್ನು ಪಡೆಯಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿರುತ್ತಾರೋ ಅವರು ತಮ್ಮ ಆಸ್ತಿಯ ಒಡೆತನದ ಮೇಲಿನ ಹಿಡಿತದ ಒಂದು ಬಿಂದುವೂ ನನಗೆ ಸೇರಿದ್ದಲ್ಲ ಎನ್ನುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ನನಗೆ ಅರ್ಥವಾಯಿತು” ಎಂದು ಹೇಳುತ್ತಾರೆ (M.K. Gandhi, 1966, p. 198).
ಭಾರತೀಯ ತತ್ತ್ವಜ್ಞಾನದ ಒಂದು ಅತ್ಯುತ್ತಮ ಉದಾಹರಣೆ. ಮನುಷ್ಯ ಹೇಗೆ ಭೌತಿಕಸಂಪತ್ತನ್ನು ಗಳಿಸಿ ಶೇಖರಿಸಿಕೊಂಡು ಜೊತೆಗೆ ಅದರ ಬಗ್ಗೆ ವ್ಯಾಮೋಹವನ್ನು ಬೆಳೆಸಿಕೊಳ್ಳದೆ ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಮತ್ತು ಅಗತ್ಯ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದನ್ನು ಅದು ನಮಗೆ ತಿಳಿಸುತ್ತದೆ.
ಸಂಗ್ರಹಶೀಲ ಸಮಾಜ
ಗಾಂಧಿಯವರ ’ಸಂಪತ್ತನ್ನು ತ್ಯಜಿಸು’ ಎನ್ನುವ ಪರಿಕಲ್ಪನೆ ’ಸಂಪತ್ತನ್ನು ಸಂಗ್ರಹಿಸು’ ಎನ್ನುವ ಆಧುನಿಕ ಸಮಾಜದ ಚಿಂತನೆಗೆ ವಿರುದ್ಧವಾಗುವುದಿಲ್ಲವೆ? – ಎನ್ನುವ ಪ್ರಶ್ನೆಯನ್ನು R.H. Tawney ಅವರು ತಮ್ಮ ಆಧುನಿಕ ಸಮಾಜದ ಮಾದರಿಯಾದ ’ಸಂಗ್ರಹಿಸುವ ಸಮಾಜ’ದಲ್ಲಿ ಎತ್ತಿದ್ದಾರೆ. ಅವರ ಮಾತುಗಳಲ್ಲಿ ಹೇಳುವುದಾದರೆ ಕೆಲವು ವಿಪರೀತ ತುರ್ತು ಸಂದರ್ಭಗಳನ್ನು ಬಿಟ್ಟು ಆರ್ಥಿಕಸಮಾಜ ಮಾನವನ ’ಆರ್ಥಿಕಹಕ್ಕು’ಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಯಾವ ಸಮಾಜದಲ್ಲಿ ಸಾರ್ವಜನಿಕ ಸಂಘಸಂಸ್ಥೆಗಳ ರೀತಿನೀತಿ, ನಡವಳಿಕೆ, ಗುಣಮಟ್ಟ, ಅವುಗಳ ಕಾರ್ಯನೀತಿ ಮತ್ತು ರಾಜಕೀಯ ಚಿಂತನೆಗಳು ಸಾರ್ವಜನಿಕ ಸೇವೆಯನ್ನು ಮಾಡಲು ಇಟ್ಟುಕೊಂಡ ಉದ್ದೇಶಗಳ ಈಡೇರಿಕೆಯನ್ನು ಪೂರ್ತಿಗೊಳಿಸುವ ಬದಲು, ಯಾವುದು ತಮ್ಮ ಸ್ವಂತ ವ್ಯಕ್ತಿಗತ ಉದ್ದೇಶಗಳನ್ನು ಪೂರೈಸುವ ಅವಕಾಶಗಳು ಸಿಗುತ್ತವೆಯೋ ಅವುಗಳನ್ನು ಬಳಸಿಕೊಳ್ಳುತ್ತಾರೋ. ಅಂತಹ ಸಮಾಜವನ್ನು ’ಸಂಗ್ರಹಶೀಲ ಸಮಾಜ’ ಎಂದು ಕರೆಯುತ್ತೇವೆ. ಏಕೆಂದರೆ ಅವರ ಸಂಪೂರ್ಣ ಉದ್ದೇಶ ತಮ್ಮ ಸ್ವಂತ ಸಂಪತ್ತನ್ನು ಶೇಖರಿಸುವಂಥದ್ದಾಗಿದೆ (The Acquisitive Society, by R.H. Tawney, 1921, p. 29).
ಸಂಗ್ರಹಶೀಲ ಸಮಾಜದ ಮುಖ್ಯ ಉದ್ದೇಶ ಆದ? ಸಂಪತ್ತನ್ನು ಶೇಖರಿಸಿ ತನ್ಮೂಲಕ ಇಂದಿನ ಅನುಭೋಗ ಮತ್ತು ಭವಿಷ್ಯದ ಅನುಭೋಗಕ್ಕೆ ಬೇಕಾದ ಸರಕುಸೇವೆಗಳನ್ನು ಭದ್ರಗೊಳಿಸುವುದು. ಸಕಾರಾತ್ಮಕ ದೃಷ್ಟಿಯಿಂದ ನೋಡಿದರೆ ಈ ಉದ್ದೇಶ ಪೂರ್ತಿಗಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ, ತಂತ್ರಜ್ಞಾನ ಬೆಳವಣಿಗೆ ಮಾಡುವ, ಸಂಪನ್ಮೂಲಗಳ ಸದುಪಯೋಗ ಮಾಡುವ, ಆರ್ಥಿಕ ಸಮೃದ್ಧಿ ಮತ್ತು ಹೇರಳವಾದ ಸರಕು ಮತ್ತು ಸೇವೆಗಳ ಉತ್ಪಾದನೆ ಮಾಡುವ ವ್ಯವಸ್ಥೆಗೆ ಸಹಕಾರಿಯಾಗಿದೆ. ನಕಾರಾತ್ಮಕ ದೃಷ್ಟಿಯಿಂದ ನೋಡಿದರೆ ಇದೇ ಸಮಾಜದ ಅನೇಕ ರೀತಿಯ ಒತ್ತಡಗಳಿಗೆ ಮತ್ತು ಪ್ರಯಾಸಕ್ಕೆ ಕಾರಣವಾಗಿದೆ. ಜೊತೆಗೆ ಪೂರ್ಣಪ್ರಮಾಣದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ನೈತಿಕ ಅವನತಿಯ ಸೂಚನೆಯೂ ಕಂಡುಬರುತ್ತಿದೆ. ಈ ಎಲ್ಲ ಪರಿಣಾಮಗಳು ಕೇವಲ ಆಕಸ್ಮಿಕವಾಗಿ, ತಪ್ಪು ವ್ಯವಸ್ಥೆಯಿಂದ ಬರುವುದರ ಬದಲಿಗೆ ಸಹಜವಾಗಿ ಈ ಸಂಗ್ರಹಶೀಲ ತತ್ತ್ವದಿಂದ ಬಂದಿದೆ (Ibid. p.33).
ಸಂಗ್ರಹಶೀಲ ಸಂಚಯಿತ ಸಮಾಜದ ಮುಖ್ಯ ಕಲ್ಪನೆಯ ಪ್ರಕಾರ ಮಾನವರಿಗೆ ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದನ್ನು ಬಿಟ್ಟು ಬೇರಾವುದೇ ಉದ್ದೇಶಗಳಿಲ್ಲ. ಕಾನೂನು/ಕಾಯಿದೆಗಳಿಲ್ಲ. ತಾವು ಯಾವುದನ್ನು ಸರಿ ಎಂದು ಯೋಚಿಸುತ್ತಾರೆಯೋ ಅದನ್ನು ಬಿಟ್ಟು ಇನ್ನಾವುದರ ಚಿಂತೆಯೂ ಅವರಿಗೆ ಇಲ್ಲ. ಈ ರೀತಿ ಸಂಗ್ರಹಶೀಲ ಸಮಾಜವು ಎಲ್ಲ ರೀತಿಯ ನೈತಿಕಮೌಲ್ಯಗಳನ್ನು ಬಿಟ್ಟು ವ್ಯಕ್ತಿಗಳನ್ನು ಕೇವಲ ವ್ಯವಹಾರಿಕತೆಯದ ಕೇಂದ್ರಬಿಂದುಗಳನ್ನಾಗಿ ಮಾಡುತ್ತಿದೆ. ಮನುಷ್ಯನ ಉದ್ಯಮಶೀಲತೆ, ಯಾವುದಕ್ಕೂ ಹೇಸದ ದುರಾಸೆ, ಧನದಾಹ ಇತ್ಯಾದಿಗಳಿಂದ ಎಲ್ಲವನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಯಥೋಚಿತವಾಗಿ ಬದಲಾವಣೆ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಸರಿಯಾದ ಮತ್ತು ಅನ್ಯಾಯ ಮಾರ್ಗದಲ್ಲಿ ಗಳಿಸಿದ ಸಂಪತ್ತು ಯಾವುದು, ಕಳ್ಳತನದಿಂದ ಮತ್ತು ಸ್ವಂತ ದುಡಿಮೆಯ ಫಲದಿಂದ ಗಳಿಸಿದ ಸಂಪತ್ತು ಯಾವುದು, ಪರಾವಲಂಬಿಯಾಗಿ ಸೋಮಾರಿತನದ ಬದುಕಿನಿಂದ ಮತ್ತು ಕ?ಪಡದೆ ಇನ್ನೊಬ್ಬರಿಂದ ಬಿಟ್ಟಿಯಾಗಿ ಪಡೆದ ಸಂಪತ್ತು ಯಾವುದು ಎಂಬುದರ ಭೇದವನ್ನರಿಯುವ ಶಕ್ತಿಯೇ ಮನು?ನಿಂದ ದೂರವಾಗುತ್ತಿದೆ. ಏಕೆಂದರೆ ಅವರು ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಕೇವಲ ಒಂದೇ ಮಾನದಂಡದಿಂದ (ಹಣಗಳಿಕೆ) ಅಳೆಯುತ್ತಿದ್ದಾರೆ.
ಸಿದ್ಧಾಂತ ಪ್ರತಿಪಾದನೆ
ಆಧುನಿಕ ಸಂಗ್ರಹಶೀಲ ಸಮಾಜದಲ್ಲಿ ಮಾನವನು ನಿರಂತರವಾಗಿ ಹಣವನ್ನು ಶೇಖರಿಸಿ ತನ್ಮೂಲಕ ತನ್ನ ಆಸೆಗಳನ್ನು ವರ್ಧಿಸುವಂತೆ ಮಾಡುವ ಈ ಸ್ವಾರ್ಥೀ ಪ್ರಕ್ರಿಯೆ ಸಹಜವಾಗಿ ನಡೆಯುತ್ತಿರುವುದನ್ನು ಗಾಂಧಿಯವರು ಅರಿತಿದ್ದರು. ಈ ಪರಿಸ್ಥಿತಿಯಿಂದ ಆಧುನಿಕ ಸಮಾಜ ಹೊರಬರಲು ಸಾಧ್ಯವೇ ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು. ಹಿಂಸೆಯ ಮೂಲಕ ಸಮಾಜದ ಪುನರ್ ನಿರ್ಮಾಣ ಮತ್ತೆ ಆಗಬಹುದೇ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸುತ್ತಿದ್ದರು. ಪರ್ಯಾಯವಾಗಿ ಅಹಿಂಸೆಯ ತತ್ತ್ವದ ಆಧಾರದ ಮೇಲೆ ಅವರು ಸಮಾಜದ ಪುನರ್ನಿರ್ಮಿತಿಗೆ ಕೆಲವು ಸಿದ್ಧಾಂತಗಳನ್ನು ಪ್ರತಿಪಾದಿಸಿದರು. ಈ ಹಿನ್ನೆಲೆಯಲ್ಲಿ ಅಪರಿಗ್ರಹಸಿದ್ಧಾಂತವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅಪರಿಗ್ರಹಸಿದ್ಧಾಂತ ಒಂದು ಸವಾಲು ಮತ್ತು ಪ್ರತಿಕ್ರಿಯೆಯಾಗಿದೆ. ಇದು ಒಂದು ಸವಾಲು ಏಕೆಂದರೆ ಈ ತತ್ತ್ವ ಸಮಾಜದಲ್ಲಿ ವ್ಯಕ್ತಿಗಳ ಪರಿವರ್ತನೆಯ ಮೂಲಕ ಆಮೂಲಾಗ್ರ ಬದಲಾವಣೆಯನ್ನು ತರುತ್ತದೆ. ಇದು ಒಂದು ಪ್ರತಿಕ್ರಿಯೆ ಏಕೆಂದರೆ ಈ ತತ್ತ್ವವು ಆಧುನಿಕ ಸಮಾಜದಲ್ಲಿನ ನೈತಿಕ ಪ್ರಗತಿ, ತಾಂತ್ರಿಕ ಹಾಗೂ ಭೌತಿಕ ಪ್ರಗತಿಯಲ್ಲಿನ ಅಂತರದ ಶೂನ್ಯವನ್ನು ತುಂಬುವ ಮಾರ್ಗವನ್ನು ಸೂಚಿಸುತ್ತದೆ – ಅದುವೆ ಸಾಮಾಜಿಕ ಪುನರುತ್ಥಾನ.
(ಮುಂದುವರಿಯುವುದು)